Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾಗರ ನೇತೃತ್ವದ ಅಭಿವೃದ್ಧಿಗೆ ಸರ್ಕಾರದ ಒತ್ತು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಕಂಪನಿಗಳ ಕಾಯಿದೆ 2013ರ ಅಡಿಯಲ್ಲಿ ಸಾಗರಮಾಲಾ ಡೆವಲೆಪ್ಮೆಂಟ್ ಕಂಪನಿ (ಎಸ್.ಡಿ.ಸಿ.) ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ. ಎಸ್.ಡಿ.ಸಿ.ಯು ಶಿಪ್ಪಿಂಗ್ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುತ್ತದೆ. ವಿಶೇಷ ಉದ್ದೇಶದ ವಾಹಕ (ಎಸ್.ಪಿ.ವಿ.)ಗೆ ಇದು ಈಕ್ವಿಟಿ ಬೆಂಬಲ ನೀಡುತ್ತದೆ ಮತ್ತು ಸಾಗರಮಾಲಾ ಕಾರ್ಯಕ್ರಮದ ಅಡಿ ಉಳಿದ ಯೋಜನೆಗಳಿಗೆ ಆರ್ಥಿಕ ಬೆಂಬಲ ನೀಡಲಿದೆ. ಎಸ್.ಡಿ.ಸಿ.ಯನ್ನು ಕಂಪನಿಗಳ ಕಾಯಿದೆ 2013ರ ಅಡಿಯಲ್ಲಿ 1000 ಕೋಟಿ ರೂಪಾಯಿಗಳ ಆರಂಭಿಕ ಅಧಿಕೃತ ಶೇರು ಬಂಡವಾಳ ಮತ್ತು 90 ಕೋಟಿ ರೂಪಾಯಿಗಳ ಸಬ್ ಸ್ಕ್ರೈಬ್ಡ್ ಶೇರು ಬಂಡವಾಳದೊಂದಿಗೆ ಸ್ಥಾಪಿಸಲಾಗುತ್ತದೆ.

ಗುರುತಿಸಲಾದ ಯೋಜನೆಗಳ ಜಾರಿಯನ್ನು ಸೂಕ್ತ ಬಂದರುಗಳು, ರಾಜ್ಯ ಸರ್ಕಾರಗಳು/ಸಾಗರ ಮಂಡಳಿಗಳು, ಕೇಂದ್ರ ಸಚಿವಾಲಯಗಳು ಪ್ರಮುಖವಾಗಿ ಖಾಸಗಿಯಾಗಿ ಇಲ್ಲವೇ ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳುತ್ತವೆ, ಬಂದರು/ರಾಜ್ಯ/ಕೇಂದ್ರ ಸಚಿವಾಲಯಗಳ ಗವಾಕ್ಷಿ ಸ್ಥಾಪಿಸುವ ವಿಶೇಷ ಉದ್ದೇಶದ ವಾಹನ(ಎಸ್.ಪಿ.ವಿ.)ಕ್ಕೆ ಈಕ್ವಿಟಿ ಬೆಂಬಲ ಒದಗಿಸುತ್ತವೆ. ಮತ್ತು/ ಅಥವಾ ಉಳಿದವುಗಳಿಗೆ ಯಾವುದೇ ಇತರ ಮಾರ್ಗ/ರೀತಿಯಲ್ಲಿ ಆರ್ಥಿಕ ಬೆಂಬಲ ನೀಡಲಾಗುವುದಿಲ್ಲ.
ಎಸ್.ಡಿ.ಸಿ. ಬಂದರು – ನೈತೃತ್ವದ ಅಭಿವೃದ್ಧಿ ಯೋಜನೆಗಳನ್ನು ಗುರುತಿಸುತ್ತದೆ ಮತ್ತು ಅಭಿವೃದ್ಧಿ ಮತ್ತು ವಿನ್ಯಾಸದ ವಿಷಯದಲ್ಲಿ ಎಸ್.ಪಿ.ವಿ. ಯೋಜನೆಗಳಿಗೆ ನೆರವಾಗುತ್ತದೆ, ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಹರಾಜು ಪ್ರಕ್ರಿಯೆ ನಡೆಸುತ್ತದೆ, ಬಹು ರಾಜ್ಯಗಳ/ಪ್ರದೇಶಗಳಲ್ಲಿನ ಹೊರತಾಗಿ ಕಾರ್ಯತಂತ್ರಾತ್ಮಕ ಯೋಜನೆಗಳಿಗೆ ಸೂಕ್ತವಾದ ಅಪಾಯ ನಿರ್ವಹಣಾ ಕ್ರಮಗಳನ್ನು ಒದಗಿಸುತ್ತದೆ ಮತ್ತು ಅಗತ್ಯವಾದ ಅನುಮೋದನೆ ಮತ್ತು ಪರವಾನಗಿಗಳನ್ನು ದೊರಕಿಸಿಕೊಡುತ್ತದೆ.

ಗುರುತಿಸಲಾದ ಯೋಜನೆಗಳನ್ನು ಬಹು ಸಂಸ್ಥೆಗಳು ಕೈಗೆತ್ತಿಕೊಳ್ಳುವುದರಿಂದ, ಪ್ರಸಕ್ತ ಗುರುತಿಸಲಾಗುವ ಯೋಜನೆಗಳಿಗೆ ಮತ್ತು ಮಾಸ್ಟರ್ ಯೋಜನೆಯಿಂದ ಅಥವಾ ಮೂಲಗಳಿಂದ ಹೊರಹೊಮ್ಮುವ ಇತರ ಯೋಜನೆಗಳ ಸಹಯೋಗ ಮತ್ತು ಉಸ್ತುವಾರಿಗೆ ಎಸ್.ಡಿ.ಸಿ. ನೋಡಲ್ ಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತದೆ.
ಎನ್.ಪಿ.ಪಿ. ಭಾಗವಾಗಿ ಗುರುತಿಸಲಾದ ಕರಾವಳಿ ಆರ್ಥಿಕ ವಲಯ (ಸಿ.ಇ.ಝಡ್)ಕ್ಕೆ ಸವಿವರವಾದ ಮಾಸ್ಟರ್ ಪ್ಲಾನ್ ಸಿದ್ಧತೆಯ ಕಾರ್ಯವನ್ನು ಎಸ್.ಡಿ.ಸಿ. ಕೈಗೆತ್ತಿಕೊಳ್ಳುತ್ತದೆ ಮತ್ತು ಭಾರತೀಯ ಕರಾವಳಿ ವಲಯದ ಸಮಗ್ರ ಅಭಿವೃದ್ಧಿಯ ಖಾತ್ರಿಗೆ ಚೌಕಟ್ಟು ಒದಗಿಸುತ್ತದೆ.
ಸಾಗರಮಾಲಾ ಕಾರ್ಯಕ್ರಮದ ಕರಾವಳಿ ಸಮುದಾಯದ ಅಭಿವೃದ್ಧಿ ಉದ್ದೇಶದ ಭಾಗವಾಗಿ ಹಡಗು ಸಚಿವಾಲಯವು ಹಲವು ಉಪಕ್ರಮ/ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಇವುಗಳಲ್ಲಿ ಉಲ್ಲೇಖಿಸಬಹುದಾದ್ದು ಎಂದರೆ ಕರಾವಳಿ ಸಮುದಾಯ ಕೌಶಲ ಯೋಜನೆ ಮತ್ತು ಕರಾವಳಿ ಮೀನುಗಾರಿಕೆ ವಲಯದ ಅಭಿವೃದ್ಧಿ.

ಕೈಗೆತ್ತಿಕೊಳ್ಳಲಾಗುವ ಕೌಶಲ ವರ್ಧನೆ ಯೋಜನೆಗಳಲ್ಲಿ ಕರಾವಳಿ ಜಿಲ್ಲೆಗಳ ಕೌಶಲದ ಅಂತರದ ವಿಶ್ಲೇಷಣೆ, ಬಂದರು ಮತ್ತು ಕರಾವಳಿ ವಲಯದ ಅಧ್ಯಯನ /ಉನ್ನತ ತಂತ್ರಜ್ಞಾನದ ಕೌಶಲ ತರಬೇತಿ, ಹಡಗು ಒಡೆಯುವುದು ಮತ್ತು ದುರಸ್ತಿ ವಲಯದಲ್ಲಿ ಸುರಕ್ಷತೆಯ ತರಬೇತಿ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ್ ಕೌಶಲ ಯೋಜನೆ (ಡಿಡಿಯು –ಜಿಕೆವೈ) ಭಾಗವಾಗಿ ಕರಾವಳಿ ಜಿಲ್ಲೆಗಳಲ್ಲಿ ಕೌಶಲ್ಯ ತರಬೇತಿ ಮತ್ತು ಕರಾವಳಿ ಮೀನುಗಾರರ ಕೌಶಲ ಅಭಿವೃದ್ಧಿ ಯೋಜನೆಗಳೂ ಸೇರಿವೆ.

ಹಡಗು ಸಚಿವಾಲಯವು ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ (ಕೃಷಿ ಸಚಿವಾಲಯ) ಇಲಾಖೆಗಳ ಸಹಯೋಗದಲ್ಲಿ ಆಯ್ದ ಮೀನುಗಾರಿಕೆ ಬಂದರು ಯೋಜನೆಗಳಿಗೆ ಸಾಗರಮಾಲಾ ಕಾರ್ಯಕ್ರಮದಡಿ ಭಾಗಶಃ ಹಣಕಾಸು ನೆರವು ಒದಗಿಸುತ್ತದೆ. ಈ ಮಧ್ಯೆ ಗುರುತಿಸಲಾದ ಯೋಜನೆಗಳಲ್ಲಿ ಮುಕ್ತಾಯದ ಹಂತದಲ್ಲಿರುವ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತದೆ. ಹಡಗು ಸಚಿವಾಲಯವು ಅಸ್ತಿತ್ವದಲ್ಲಿರುವ ಕೇಂದ್ರ / ರಾಜ್ಯ ಸರ್ಕಾರದ ಯೋಜನೆಗಳೊಂದಿಗೆ ಕರಾವಳಿ ಸಮುದಾಯ ಅಭಿವೃದ್ಧಿ ಯೋಜನೆಯನ್ನೂ ಸಿದ್ಧಪಡಿಸುತ್ತಿದೆ.
ಎಸ್.ಡಿ.ಸಿ.ಗೆ ವಹಿಸಲಾಗಿರುವ ಮಹತ್ವದ ಕಾರ್ಯದಲ್ಲಿ ಕರಾವಳಿ ಸಮುದಾಯ ಅಭಿವೃದ್ಧಿ ಯೋಜನೆ ನಿರ್ವಹಣೆ ಮತ್ತು ಸಾಗರ ಮಾಲಾ ಕಾರ್ಯಕ್ರಮದಡಿ ಗುರುತಿಸಲಾಗಿರುವ ಕರಾವಳಿ ಸಮುದಾಯ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಹೂಡಿಕೆ ನೆರವು ಒದಗಿಸುವುದೂ ಒಂದಾಗಿದೆ. ಈ ಯೋಜನೆಗಳು ನಾವಿನ್ಯ ಸ್ವರೂಪದ್ದಾಗಿದ್ದು, ಸ್ಥಳೀಯ ವಿಚಾರಗಳನ್ನೂ ಒಳಗೊಂಡು ನಿರ್ದಿಷ್ಟ ಕಾಲಮಿತಿಯದ್ದಾಗಿರುತ್ತದೆ.

ಎಸ್.ಡಿ.ಸಿ. ಯೋಜನೆಯ ಅಗತ್ಯಕ್ಕೆ ಅನುಗುಣವಾಗಿ/ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಹಣಕಾಸು ಸಂಸ್ಥೆಗಲು ಮತ್ತು ಭಾರತ ಸರ್ಕಾರ ಒದಗಿಸುವ ಸಂಪನ್ಮೂಲವೂ ಒಳಗೊಂಡಂತೆ ಸಾಲ/ಶೇರು ಮೂಲಕ ನಿಧಿ (ದೀರ್ಘಕಾಲೀನ ಬಂಡವಾಳವಾಗಿ) ಸಂಗ್ರಹಿಸುತ್ತದೆ. ಯೋಜನೆಯ ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಪಾಲುದಾರಿಕೆಯನ್ನು ಹೆಚ್ಚಿಸುವ ಗುರಿಯನ್ನೂ ಎಸ್.ಡಿ.ಸಿ. ಹೊಂದಿದೆ.
ಹಿನ್ನೆಲೆ:

ಭಾರತದಲ್ಲಿ ಬಂದರು ನೇತೃತ್ವದ ಅಭಿವೃದ್ಧಿಯ ಸಾಧನೆಯ ಮಹತ್ವದ ಗುರಿಯೊಂದಿಗೆ ಸಾಗರಮಾಲಾ ಕಾರ್ಯಕ್ರಮವನ್ನು 2015ರ ಮಾರ್ಚ್ 25ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ಅನುಮೋದನೆಯೊಂದಿಗೆ ಆರಂಭಿಸಲಾಗಿದೆ. 7500 ಕಿಲೋ ಮೀಟರ್ ಉದ್ದದ ಭಾರತದ ಕರಾವಳಿಯ ಪೂರ್ಣ ಸಾಮರ್ಥ್ಯವನ್ನು ಮತ್ತು 14500 ಕಿಮೀ ಸಾಗರ ಮಾರ್ಗದ ಸಂಚಾರ ಹಾಗೂ ಪ್ರಮುಖ ಅಂತಾರಾಷ್ಟ್ರೀಯ ಕಡಲ ವ್ಯಾಪಾರ ಮಾರ್ಗಗಳ ಕಾರ್ಯತಂತ್ರಾತ್ಮಕ ತಾಣಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು, ಸರ್ಕಾರ ಮಹತ್ವಾಕಾಂಕ್ಷೆಯ ಸಾಗರಮಾಲಾ ಕಾರ್ಯಕ್ರಮವನ್ನು ಹಾಕಿಕೊಂಡಿದ್ದು, ಇದಕ್ಕೆ ಸಂಪುಟವು 25.03.2015ರಲ್ಲಿ ತನ್ನ ಅನುಮೋದನೆ ನೀಡಿದೆ.
ಕಾರ್ಯಕ್ರಮದ ಭಾಗವಾಗಿ ಕರಾವಳಿ ಮತ್ತು ಸಾಗರ ವಲಯದ ಸಮಗ್ರ ಅಭಿವೃದ್ಧಿಗಾಗಿ ರಾಷ್ಟ್ರೀಯ ದೃಷ್ಟಿಕೋನದ ಯೋಜನೆ (ಎನ್.ಪಿ.ಪಿ.) ರೂಪಿಸಲಾಗಿದೆ. ಎನ್.ಪಿ.ಪಿ.ಯು ಬಂದರು ಆಧುನೀಕರಣ ಮತ್ತು ಹೊಸ ಬಂದರು ಅಭಿವೃದ್ಧಿ, ಬಂದರು ಸಂಪರ್ಕ ಹೆಚ್ಚಳ, ಬಂದರು ಆಧಾರಿತ ಕೈಗಾರಿಕೀಕರಣ ಮತ್ತು ಕರಾವಳಿ ಸಮುದಾಯ ಅಭಿವೃದ್ದಿಗೆ 150ಕ್ಕೂ ಹೆಚ್ಚು ಯೋಜನೆಗಳನ್ನು ಗುರುತಿಸಿದೆ.