Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಳಸಲು ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ ಯುನಿಟ್ ಗಳ ದಾಸ್ತಾನಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಳಸಲು ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟ್) ಯುನಿಟ್ ಗಳ ದಾಸ್ತಾನಿಗೆ  ಮತ್ತು ಈ ಕೆಳಗಿನ ಅಂಶಗಳಿಗೆ ತನ್ನ ಅನುಮೋದನೆ ನೀಡಿದೆ.

  1. a) 16,15,000 ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯುನಿಟ್ ಗಳನ್ನು 2017-18ನೇ ಮತ್ತು 2018-19ನೇ ಸಾಲಿನಲ್ಲಿ ಮೆ. ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ, ಹೈದ್ರಾಬಾದ್ ನಿಂದ ಪ್ರತಿ ಯೂನಿಟ್ ಗೆ ಅಂದಾಜು ರೂ. 19,650 ರೂಪಾಯಿಗಳಂತೆ ಮತ್ತು ಒಟ್ಟು ಅಂದಾಜು ವೆಚ್ಚ 3173.47 ಕೋಟಿ ರೂಪಾಯಿಗಳಿಗೆ (ತೆರಿಗೆ ಮತ್ತು ಅನ್ವಯಿಸುವ ಸಾಗಣೆ ಶುಲ್ಕ ಹೊರತುಪಡಿಸಿ) ಖರೀದಿಸಲು;
    b)  ಮೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಮೆ. ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಜೊತೆ ಚೌಕಾಸಿ ನಡೆಸಿ ಪ್ರತಿ ಯುನಿಟ್ ನ ದರವನ್ನು ತ್ವರಿತವಾಗಿ ಆಖೈರುಗೊಳಿಸುವಂತೆದರ ಮಾತುಕತೆ ಸಮಿತಿಗೆ ನಿರ್ದೇಶನ ನೀಡಲು;
  2. c)  2017-18ನೇ ಸಾಲಿನಲ್ಲಿ ಇವಿಎಂಗಳು (ನಿಯಂತ್ರಣ ಘಟಕಗಳು ಮತ್ತು ಬ್ಯಾಲೆಟ್ ಯುನಿಟ್ ಗಳು) ಮತ್ತು ವಿವಿಪ್ಯಾಟ್ ಯುನಿಟ್ ಗಳನ್ನು ಖರೀದಿಸಲು ಹಣಕಾಸು ನೀಡಿಕೆಗೆ ಅವಕಾಶ ಕಲ್ಪಿಸಲು ಪೂರಕ/ಪರಿಷ್ಕೃತ ಅಂದಾಜಿನಂತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ 1600 ಕೋಟಿ ರೂಪಾಯಿಯಷ್ಟು ಹಂಚಿಕೆ ಮಾಡಲು, ಉತ್ಪಾದಕರಿಗೆ ಮೇಲೆ ಹೇಳಿದ ಮೊತ್ತದ ಶೇಕಡ 40ರಷ್ಟನ್ನು ಮುಂಗಡವಾಗಿ ನೀಡಲು ಮತ್ತು ಉಳಿಕೆ ಮೊತ್ತವನ್ನು 2018-19ನೇ ಸಾಲಿನಲ್ಲಿ ಅಗತ್ಯಕ್ಕೆ ಅನುಗುಣವಾಗಿ ಮಾಡಲು; ಮತ್ತು
    d)  ಎರಡೂ ಉತ್ಪಾದನಾ ಸಂಸ್ಥೆಗಳಿಗೆ ಅವುಗಳ ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಚುನಾವಣಾ ಆಯೋಗ ಬೇಡಿಕೆ ಸಲ್ಲಿಸಲು, ಈ ಮೂಲಕ 2018ರ ಸೆಪ್ಟೆಂಬರ್ ಒಳಗಾಗಿ ಎಲ್ಲ ವಿವಿಪ್ಯಾಟ್ ಯುನಿಟ್ ಗಳನ್ನು ದಾಸ್ತಾನು ಮಾಡಲು.

ಸರ್ಕಾರದ ಈ ನಿರ್ಧಾರವು, ಭಾರತದ ಚುನಾವಣಾ ಆಯೋಗಕ್ಕೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ಮತಗಟ್ಟೆಗಳಲ್ಲೂ ವಿವಿಪ್ಯಾಟ್ ಯಂತ್ರಗಳನ್ನು ಅಳವಡಿಸಲು ಅವಕಾಶ ನೀಡುತ್ತದೆ. ಇದು ಮತದಾರರ ತೃಪ್ತಿಗೆ ಪಾರದರ್ಶಕತೆಯ ಹೆಚ್ಚುವರಿ ಪದರವಾಗಿ ಕೆಲಸ ಮಾಡುತ್ತದೆ, ಮತದಾರರ ಮನದಲ್ಲಿ ಯಾವುದೇ ರೀತಿಯ  ಶಂಕೆಗಳನ್ನು ನಿವಾರಿಸುತ್ತದೆ, ಇದು ಮತದಾರ ಸ್ನೇಹಿಯಾಗಿದೆ ಮತ್ತು ಇವಿಎಂಗಳ ದೃಢತೆಯನ್ನು ಕಾಪಾಡುತ್ತದೆ. ಇದು 2013ರ ಅಕ್ಟೋಬರ್ 8ರಂದು ಘನತೆವೆತ್ತ ಸರ್ವೋನ್ನತ ನ್ಯಾಯಾಲಯ ನೀಡಿದ ನಿರ್ದೇಶನದ ಅನುಸರಣೆಯ ಫಲಿತಾಂಶವೂ ಆಗಲಿದೆ.
ಹಿನ್ನೆಲೆ:
ಭಾರತದ ಚುನಾವಣಾ ಆಯೋಗ 2010ರ ಅಕ್ಟೋಬರ್ 4ರಂದು ನಡೆಸಿದ್ದ ಸಭೆಯಲ್ಲಿ ರಾಜಕೀಯ ಪಕ್ಷಗಳು, ಮತದಾರರ ತೃಪ್ತಿಗಾಗಿ ಹೆಚ್ಚುವರಿ ಪಾರದರ್ಶಕತೆಯ ಪದರವಾಗಿ ವೋಟರ್ ವೆರಿಫೈಯಬಲ್ ಪೇಪರ್ ಟ್ರಯಲ್ ಅಳವಡಿಸುವಂತೆ ಸಲಹೆ ಮಾಡಿದ್ದವು. ಅದಕ್ಕೆ ಅನುಗುಣವಾಗಿ ಚುನಾವಣೆ ನಡೆಸುವ ನಿಯಮ 1961ಕ್ಕೆ ದಿನಾಂಕ 2013ರ ಆಗಸ್ಟ್ 14ರಂದು ಅಧಿಸೂಚನೆ ಹೊರಡಿಸುವ ಮೂಲಕ ವಿವಿಪ್ಯಾಟ್ ಸೌಲಭ್ಯ ಅಳವಡಿಕೆಗೆ ಅವಕಾಶ ಮಾಡಿಕೊಳ್ಳಲಾಗಿತ್ತು. ಆ ಬಳಿಕ, 20,300 ವಿವಿಪ್ಯಾಟ್ ಯುನಿಟ್ ಗಳನ್ನು 2013ರಲ್ಲಿ ಭಾರತದ ಚುನಾವಣಾ ಆಯೋಗ ಖರೀದಿಸಿತ್ತು. ಆ ನಂತರ ಈ ಯುನಿಟ್ ಗಳನ್ನು ಆಯ್ದ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ನಿಯೋಜಿಸಲಾಗುತ್ತಿತ್ತು. ತರುವಾಯ 67,000 ಹೆಚ್ಚುವರಿ ಯುನಿಟ್ ಗಳಿಗೆ 2015ರಲ್ಲಿ ಬೇಡಿಕೆ ಸಲ್ಲಿಸಲಾಗಿತ್ತು. ಆ ಪೈಕಿ 33500 ಯುನಿಟ್ ಗಳನ್ನು ಉತ್ಪಾದಕರು ಪೂರೈಕೆ ಮಾಡಿದ್ದರು. ಚುನಾವಣಾ ಆಯೋಗಕ್ಕೆ ಯಾವಾಗ ಅವಶ್ಯಕತೆ ಇದೆಯೋ ಆಗ ಕೇಂದ್ರ ಸರ್ಕಾರ ಮೇಲೆ ತಿಳಿಸಲಾದ ಸಂಖ್ಯೆಯ  ವಿವಿ ಪ್ಯಾಟ್ ಯುನಿಟ್ ಗಳ ಖರೀದಿಗೆ ಅಗತ್ಯ ಹಣ ಪೂರೈಕೆ ಮಾಡಲಿದೆ.
ವಿವಿಪ್ಯಾಟ್ ಯಂತ್ರವು ಬ್ಯಾಲೆಟ್ ಯಂತ್ರಕ್ಕೆ ಜೋಡಿಸಿದ ಪ್ರಿಂಟರ್ ನಂತೆ ಕಾರ್ಯ ನಿರ್ವಹಿಸಲಿದೆ ಮತ್ತು ಅದನ್ನು ಮತಗಟ್ಟೆಯ ವಿಭಾಗದೊಳಗೆ ಅಳವಡಿಸಲಾಗುತ್ತದೆ. ಯಾವಾಗ ಮತದಾರನು ತನ್ನ ಆಯ್ಕೆಯ ಅಭ್ಯರ್ಥಿಯ ಮುಂದಿನ ಗುಂಡಿಯನ್ನು ಒತ್ತುತ್ತಾನೋ, ಆಗ ವಿವಿಪ್ಯಾಟ್ ಯುನಿಟ್ ಒಂದು ಕಾಗದದ ಚೀಟಿಯನ್ನು ತಯಾರಿಸುತ್ತದೆ, ಇದಕ್ಕೆ ಮತಪತ್ರದ ಚೀಟಿ (ಬ್ಯಾಲೆಟ್ ಸ್ಲಿಪ್) ಎಂದು ಕರೆಯಲಾಗುತ್ತದೆ. ಈ ಚೀಟಿಯು ಮತದಾರ ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರು, ಕ್ರಮ ಸಂಖ್ಯೆ ಮತ್ತು ಚಿಹ್ನೆಯನ್ನು ಒಳಗೊಂಡಿರುತ್ತದೆ. ಈ ಮತಚೀಟಿಯನ್ನು ಮತದಾರರ ಪರದೆಯಿರುವ ಕಿಟಕಿಯಲ್ಲಿ ವೀಕ್ಷಿಸಬಹುದು. ಅದು ಅಲ್ಲಿ 7 ಸೆಕೆಂಡುಗಳ ಕಾಲ ಇರುತ್ತದೆ. ನಂತರ ಅದು ಯಾಂತ್ರಿಕವಾಗಿ ಕತ್ತರಿಸಿ ಮುಚ್ಚಿದ ಪೆಟ್ಟಿಗೆ ಸೇರುತ್ತದೆ. ಈ ಪ್ರಕ್ರಿಯೆಯಲ್ಲಿ ಈ ಚೀಟಿ ಮತದಾರನ ಕೈ ಸೇರುವುದೂ ಇಲ್ಲ, ಬೇರೆ ಯಾರೂ ಇದನ್ನು ನೋಡಲು ಸಾಧ್ಯವಿಲ್ಲ.
ಎಲ್ಲ ಮತಗಟ್ಟೆಗಳಲ್ಲೂ ವಿವಿಪ್ಯಾಟ್ ಬಳಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಿ ಡಾ. ಸುಬ್ರಹ್ಮಣ್ಯಸ್ವಾಮಿ ಅವರು ಸಿವಿಲ್ ಅಪೀಲ್ ಸಂಖ್ಯೆ 9093/2013ನ್ನು ಸಲ್ಲಿಸಿದ್ದರು.
ಈ ಅರ್ಜಿಯಲ್ಲಿ ವಿದ್ಯುನ್ಮಾನ ಮತಯಂತ್ರಗಳು ವಿಶ್ವಾಸಾರ್ಹವಲ್ಲ ಮತ್ತು ಮತದಾರ ತಾನು ಆಯ್ಕೆ ಮಾಡಿದ ವ್ಯಕ್ತಿಗೇ ತನ್ನ ಮತ ಚಲಾವಣೆ ಆಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವಂಥ ಒಂದು ವ್ಯವಸ್ಥೆ ಇರಬೇಕು ಎಂದು ಕೋರಿದ್ದರು. ಈ ಸಿವಿಲ್ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ವಿವಿಪ್ಯಾಟ್ ಅಳವಡಿಕೆಗೆ ತನ್ನ ಆಕ್ಷೇಪಣೆ ಏನೂ ಇಲ್ಲ ಎಂದು ತಿಳಿಸಿತ್ತು. ಈ ಹಿನ್ನಲೆಯಲ್ಲಿ 2013ರ ಅಕ್ಟೋಬರ್ 8ರಂದು ಸರ್ವೋನ್ನತ ನ್ಯಾಯಾಲಯವು ಹಂತ ಹಂತವಾಗಿ ವಿವಿಪ್ಯಾಟ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಮತ್ತು ಅವಶ್ಯಕತೆ ಇರುವಷ್ಟು ಸಂಖ್ಯೆಯ ವಿವಿಪ್ಯಾಟ್ ಯುನಿಟ್ ದಾಸ್ತಾನಿಗಾಗಿ  ಅಗತ್ಯವಾದ ಹಣಕಾಸಿನ ನೆರವನ್ನು ಕೇಂದ್ರ ಸರ್ಕಾರ ಒದಗಿಸಬೇಕು ಎಂದೂ ನಿರ್ದೇಶನ ನೀಡಿತ್ತು.
                                                                   ***
AKT/VBA/SH