ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೇವಾ ತೀರ್ಥದಲ್ಲಿ ‘ಪ್ರಗತಿ’ (ಸಕ್ರಿಯ ಆಡಳಿತ ಮತ್ತು ಸಕಾಲಿಕ ಅನುಷ್ಠಾನ) ವೇದಿಕೆಯ 55ನೇ ಸಭೆಯ ಅಧ್ಯಕ್ಷತೆ ವಹಿಸಿದರು. ಇದು ಐಸಿಟಿ ಆಧಾರಿತ, ಬಹು-ಮಾದರಿಯ ವೇದಿಕೆಯಾಗಿದ್ದು, ಅನುಷ್ಠಾನದ ಅಡೆತಡೆಗಳನ್ನು ನಿವಾರಿಸಲು ಮತ್ತು ಯೋಜನೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ವಿತರಣೆಯನ್ನು ಸುಧಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಗ್ಗೂಡಿಸುತ್ತದೆ.
ಸಭೆಯಲ್ಲಿ ಪ್ರಧಾನಮಂತ್ರಿ ಅವರು ರಸ್ತೆ, ವಿದ್ಯುತ್, ಕಲ್ಲಿದ್ದಲು ಮತ್ತು ರೈಲ್ವೆ ವಲಯಗಳಲ್ಲಿ 78,000 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದ ಐದು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದರು. ಇದರೊಂದಿಗೆ ‘ಉನ್ನತೀಕರಿಸಿದ ಐಟಿಐಗಳ ಮೂಲಕ ಪ್ರಧಾನಮಂತ್ರಿ ಕೌಶಲ್ಯ ಮತ್ತು ಉದ್ಯೋಗಾರ್ಹತೆ ಪರಿವರ್ತನೆ’ (ಪಿಎಂ-ಸೇತು) ಯೋಜನೆಯ ಅನುಷ್ಠಾನ ಸೇರಿದಂತೆ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ವ್ಯವಸ್ಥೆಯನ್ನೂ ಅವರು ಪರಿಶೀಲಿಸಿದರು.
ಮೂಲಸೌಕರ್ಯ ಯೋಜನೆಗಳಲ್ಲಿನ ವಿಳಂಬವು ಕೇವಲ ವೆಚ್ಚ ಹೆಚ್ಚಳಕ್ಕೆ ಮಾತ್ರ ಸೀಮಿತವಾಗದೆ, ನಾಗರಿಕರು, ಉದ್ಯಮಗಳು ಮತ್ತು ಆರ್ಥಿಕತೆಗೆ ತಲುಪಬೇಕಾದ ಪ್ರಯೋಜನಗಳನ್ನು ಮುಂದೂಡುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸಂಬಂಧಪಟ್ಟ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳು ಸ್ಪಷ್ಟ ಜವಾಬ್ದಾರಿ ಮತ್ತು ವಾಸ್ತವಿಕ ಕಾಲಮಿತಿಯೊಂದಿಗೆ ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಅವರು ಕರೆ ನೀಡಿದರು. ಸಕಾಲಿಕ ಅನುಷ್ಠಾನದ ಜೊತೆಗೆ ಉನ್ನತ ಗುಣಮಟ್ಟದ ನಿರ್ಮಾಣವನ್ನು ಕಾಯ್ದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ರಸ್ತೆ ಯೋಜನೆಗಳನ್ನು ಪರಿಶೀಲಿಸಿದ ಪ್ರಧಾನಮಂತ್ರಿ, ಅವುಗಳ ತ್ವರಿತ ಅನುಷ್ಠಾನಕ್ಕೆ ಕರೆ ನೀಡಿದರು ಮತ್ತು ವೆಚ್ಚಕ್ಕಿಂತ ಫಲಿತಾಂಶದ ಮೇಲೆ ಗಮನಹರಿಸುವ ಅಗತ್ಯವನ್ನು ಪುನರುಚ್ಚರಿಸಿದರು. ಕಲ್ಲಿದ್ದಲು ಯೋಜನೆಯನ್ನು ಪರಿಶೀಲಿಸುವಾಗ, ಯೋಜನೆಯ ಸಕಾಲಿಕ ಅನುಷ್ಠಾನದ ಜೊತೆಜೊತೆಗೆ ಪುನರ್ವಸತಿ ಮತ್ತು ಸ್ಥಳಾಂತರ ಪ್ರಕ್ರಿಯೆಯನ್ನು ಸಮಯೋಚಿತವಾಗಿ ಮತ್ತು ಗೌರವಯುತವಾಗಿ ಕೈಗೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ವಿದ್ಯುತ್ ಯೋಜನೆಯನ್ನು ಪರಿಶೀಲಿಸಿದ ಪ್ರಧಾನಮಂತ್ರಿಗಳು, ವಿಕೇಂದ್ರೀಕೃತ ಸೌರ ಮತ್ತು ಪವನ ವಿದ್ಯುತ್ ಯೋಜನೆಗಳಿಗೆ ನವೀನ ಮಾದರಿಗಳನ್ನು ಅನ್ವೇಷಿಸುವಂತೆ ಸಲಹೆ ನೀಡಿದರು. ಸ್ಥಳೀಯ ಸಂಪನ್ಮೂಲಗಳ ಲಭ್ಯತೆ ಮತ್ತು ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಸಾಧ್ಯವಿರುವಲ್ಲೆಲ್ಲಾ ಇಂತಹ ಯೋಜನೆಗಳನ್ನು ಬಳಕೆಯ ಕೇಂದ್ರಗಳಿಗೆ ಹತ್ತಿರದಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಅವರು ಒತ್ತಿ ಹೇಳಿದರು. ಈ ಪ್ರಯತ್ನಗಳು ವಿಶ್ವಾಸಾರ್ಹ ಮತ್ತು ಕೈಗೆಟುಕುವ ವಿದ್ಯುತ್ ಲಭ್ಯತೆಯನ್ನು ಸುಧಾರಿಸಲು ಹಾಗೂ ಪ್ರಸರಣ ಮೂಲಸೌಕರ್ಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನೆರವಾಗಬೇಕು ಎಂದರು.
‘ಐಟಿಐ’ ವ್ಯವಸ್ಥೆ ಮತ್ತು ‘ಪಿಎಂ-ಸೇತು’ ಅನುಷ್ಠಾನವನ್ನು ಪರಿಶೀಲಿಸಿದ ಪ್ರಧಾನಿ, ‘ಪಿಎಂ-ಸೇತು’ ಅಡಿಯಲ್ಲಿ ‘ಐಟಿಐ’ಗಳನ್ನು ಬಲಪಡಿಸಲು ಮತ್ತು ಕೈಗಾರಿಕಾ ಸಹಭಾಗಿತ್ವವನ್ನು ಹೆಚ್ಚಿಸಲು ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳು ನಾಯಕತ್ವ ವಹಿಸುವಂತೆ ಕರೆ ನೀಡಿದರು. ಕೈಗಾರಿಕೆಗಳು ‘ಐಟಿಐ’ಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು, ಅವುಗಳ ಉನ್ನತೀಕರಣಕ್ಕೆ ಕೊಡುಗೆ ನೀಡಲು ಮತ್ತು ಪ್ರಸ್ತುತ ಹಾಗೂ ಭವಿಷ್ಯದ ಮಾನವಶಕ್ತಿಯ ಅಗತ್ಯಗಳಿಗೆ ತಕ್ಕಂತೆ ತರಬೇತಿಯನ್ನು ರೂಪಿಸಲು ಇದು ಸೂಕ್ತ ಸಮಯ ಎಂದು ಅವರು ಒತ್ತಿ ಹೇಳಿದರು. ಈ ಪಾಲುದಾರಿಕೆಗಳನ್ನು ಯುವಕರಿಗೆ ಉತ್ತಮ ತರಬೇತಿ ಮತ್ತು ಉದ್ಯೋಗಾವಕಾಶಗಳಾಗಿ ಪರಿವರ್ತಿಸಲು ರಾಜ್ಯಗಳು, ‘ಐಟಿಐ’ಗಳು ಮತ್ತು ಕೈಗಾರಿಕೆಗಳ ನಡುವೆ ನಿಕಟ ಸಹಕಾರ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್ಯು) ತಮ್ಮ ಭವಿಷ್ಯದ ಮಾನವಶಕ್ತಿಯ ಅಗತ್ಯಗಳನ್ನು ಮೌಲ್ಯಮಾಪನ ಮಾಡಬೇಕು ಮತ್ತು ಸಂಬಂಧಿತ ವೃತ್ತಿಗಳಲ್ಲಿ ತರಬೇತಿ ಹಾಗೂ ನೇಮಕಾತಿಗಾಗಿ ‘ಐಟಿಐ’ಗಳೊಂದಿಗೆ ಸಂಪರ್ಕವನ್ನು ಬಲಪಡಿಸಬೇಕು ಎಂದು ಪ್ರಧಾನಮಂತ್ರಿಗಳು ಕರೆ ನೀಡಿದರು. ಪ್ರಾಯೋಗಿಕ ತರಬೇತಿ ಮತ್ತು ಅಪ್ರೆಂಟಿಸ್ಶಿಪ್ಗಳನ್ನು ಬೆಂಬಲಿಸಲು ಹಾಗೂ ತರಬೇತಿ ಪಡೆದ ಐಟಿಐ ಪದವೀಧರರ ನೇಮಕಾತಿಗೆ ಹೆಚ್ಚಿನ ಗಮನ ನೀಡಲು ಅವರು ಸಾರ್ವಜನಿಕ ವಲಯದ ಉದ್ಯಮಗಳನ್ನು ಪ್ರೋತ್ಸಾಹಿಸಿದರು. ಇಂತಹ ಸಹಭಾಗಿತ್ವವು ವಿದ್ಯಾರ್ಥಿಗಳಿಗೆ ಕೈಗಾರಿಕಾ ಅನುಭವವನ್ನು ಒದಗಿಸುತ್ತದೆ ಮತ್ತು ‘ಪಿಎಸ್ಯು’ಗಳಿಗೆ ತಮ್ಮ ಕಾರ್ಯಾಚರಣೆಯ ಅಗತ್ಯಗಳಿಗೆ ತಕ್ಕಂತಹ ಕೌಶಲ್ಯಯುತ ಮಾನವಶಕ್ತಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ ಎಂದರು.
ಕೈಗಾರಿಕಾ ಕ್ಲಸ್ಟರ್ಗಳು ಮತ್ತು ಪ್ರತ್ಯೇಕ ವಲಯಗಳ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯಾಭಿವೃದ್ಧಿಯನ್ನು ಆಯೋಜಿಸಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಪ್ರತಿ ಪ್ರದೇಶದಲ್ಲಿರುವ ಅಸ್ತಿತ್ವದಲ್ಲಿರುವ ಕೈಗಾರಿಕೆಗಳು ಮತ್ತು ಮುಂಬರುವ ಹೂಡಿಕೆಗಳಿಗೆ ತಕ್ಕಂತೆ ಐಟಿಐ ಕೋರ್ಸ್ಗಳು, ಪಠ್ಯಕ್ರಮ ಮತ್ತು ತರಬೇತಿ ಸಾಮರ್ಥ್ಯವನ್ನು ರೂಪಿಸುವಂತೆ ಅವರು ಕರೆ ನೀಡಿದರು.
ಮನೆಯ ಸಮೀಪವೇ ಉದ್ಯೋಗಾವಕಾಶಗಳ ಲಭ್ಯತೆಯನ್ನು ಸುಧಾರಿಸುವಲ್ಲಿ ಸ್ಥಳೀಯವಾಗಿ ಪ್ರಸ್ತುತವಾದ ಕೌಶಲ್ಯಾಭಿವೃದ್ಧಿಯ ಸಾಮರ್ಥ್ಯವನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು. ಐಟಿಐಗಳು ಮತ್ತು ಸ್ಥಳೀಯ ಉದ್ಯೋಗದಾತರ ನಡುವಿನ ಬಲವಾದ ಸಂಪರ್ಕವು ಮನೆಯ ಸಮೀಪವೇ ಉದ್ಯೋಗಾವಕಾಶಗಳನ್ನು ವಿಸ್ತರಿಸಬಹುದು ಮತ್ತು ಅನಿವಾರ್ಯ ವಲಸೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು; ಜೊತೆಗೆ ಯುವಕರು ತಮ್ಮದೇ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ ಎಂದು ಅವರು ಗಮನ ಸೆಳೆದರು.
ಐಟಿಐ ಶಿಕ್ಷಣಕ್ಕಾಗಿ ಪ್ರಧಾನಮಂತ್ರಿ ಅವರು ‘ತರಗತಿ–ಕಂಪನಿ–ವೃತ್ತಿ’ (3ಸಿ) ವಿಧಾನವನ್ನು ಪ್ರತಿಪಾದಿಸಿದರು. ಇದು ತರಗತಿಯ ಕಲಿಕೆಯನ್ನು ಕೈಗಾರಿಕೆಯಲ್ಲಿನ ಪ್ರಾಯೋಗಿಕ ಅನುಭವದೊಂದಿಗೆ ಜೋಡಿಸಿ, ನಂತರ ಉದ್ಯೋಗ ಮತ್ತು ವೃತ್ತಿ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ವಿದ್ಯಾರ್ಥಿಗಳಿಗೆ ಸೂಕ್ತ ತಾಂತ್ರಿಕ ಜ್ಞಾನ, ನೈಜ ಕೆಲಸದ ವಾತಾವರಣದ ಪರಿಚಯ ಮತ್ತು ತರಬೇತಿಯಿಂದ ಉದ್ಯೋಗದೆಡೆಗೆ ಸ್ಪಷ್ಟ ಮಾರ್ಗವನ್ನು ಒದಗಿಸಲು ಐಟಿಐಗಳು ಮತ್ತು ಕೈಗಾರಿಕೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಒತ್ತಿ ಹೇಳಿದರು.
*****
Projects worth over Rs. 78000 crore reviewed in today’s PRAGATI session. Sectors covered are roads, railways, power and coal. And, there was an extensive review of the ITI ecosystem in India and implementation of PM-SETU. Skill development is among our Top priorities! https://t.co/MTEVe3EFRG
— Narendra Modi (@narendramodi) November 25, 2026