ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, (i) ಒಡಿಶಾ ರಾಜ್ಯದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಮಾರ್ಪಾಡು ಮಾಡಲು ಸಂವಿಧಾನದ (ಪರಿಶಿಷ್ಟ ಜಾತಿ) ಆದೇಶ, 1950ಕ್ಕೆ ಮತ್ತು (ii) ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿಯ ಹೆಸರನ್ನು ಆದೇಶದಲ್ಲಿ ಪುದುಚೇರಿ ಎಂದು ಬದಲಾವಣೆ ಮಾಡಲು ಸಂವಿಧಾನದ (ಪಾಂಡಿಚೆರಿ)ಪರಿಶಿಷ್ಟ ಜಾತಿ ಆದೇಶ, 1964 ಆದೇಶಕ್ಕೆ ತಿದ್ದುಪಡಿ ಮಾಡಲು ತನ್ನ ಅನುಮೋದನೆ ನೀಡಿದೆ. ಈ ಮಸೂದೆಗಳು ಮೇಲಿನ ಬದಲಾವಣೆಗಳನ್ನು ಒಳಗೊಂಡಿದ್ದು, ಸಂವಿಧಾನದ (ಪರಿಶಿಷ್ಟ ಜಾತಿ) ಆದೆಶ (ತಿದ್ದುಪಡಿ) ಮಸೂದೆ 2017 ಎಂಬ ಹೆಸರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.
ಸೌಲಗಿರಿ, ಸ್ವಾಲಗಿರಿ ಜಾತಿಗಳು ಅನುಮೋದಿತ ವಿಧಾನಗಳ ರೀತ್ಯ, ಒಡಿಶಾದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ ಎಸ್.ಐ. ಸಂಖ್ಯೆ 79 ಸಬಾಕಿಯಾ ಜಾತಿಯ ಸಮಾನಾರ್ಥಕವಾಗಿ ಸೇರ್ಪಡೆ ಮಾಡಲು ಅರ್ಹವಾಗಿರುತ್ತವೆ. ಇನ್ನು ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿಯ ಹೆಸರನ್ನು ಪುದುಚೇರಿ ಎಂದು ಪಾಂಡಿಚೇರಿ (ಹೆಸರು ಬದಲಾವಣೆ) ಕಾಯಿದೆ 2006ರಂತೆ 01.10.2006 ರಿಂದ ಜಾರಿಗೆ ಬರುವಂತೆ ಬದಲಾಯಿಸಲಾಗಿದೆ. ಆ ಪ್ರಕಾರವಾಗಿ ಸಂವಿಧಾನದ (ಪಾಂಡಿಚೆರಿ) ಪರಿಶಿಷ್ಟ ಜಾತಿಗಳ ಆದೇಶ 1964ಕ್ಕೆ ಒಂದು ತಿದ್ದುಪಡಿಯ ಅಗತ್ಯವಿದೆ.
ಸರ್ಕಾರವು 1999ರಲ್ಲಿ ಈ ವಿಧಿವಿಧಾನಗಳಿಗೆ ಅನುಮೋದನೆ ನೀಡಿತ್ತು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಮಾರ್ಪಾಡುಗಳನ್ನು ಮಾಡುವ ಪ್ರಸ್ತಾಪ ಪರಿಗಣಿಸಲು 2002ರಲ್ಲಿ ತಿದ್ದುಪಡಿ ಆಗಿತ್ತು, ಅನುಮೋದಿತ ವಿಧಿವಿಧಾನಗಳಂತೆ ಸಂಬಂಧಿತ ಸಂವಿಧಾನದ ಆದೇಶಗಳ ಶಾಸನಕ್ಕೆ ತಿದ್ದುಪಡಿಗಳನ್ನು ಸಂಬಂಧಿತ ರಾಜ್ಯಗಳ /ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ಪ್ರಸ್ತಾಪದ ಆಧಾರದ ಮೇಲೆ ಪ್ರಸ್ತಾಪಿಸಲಾಗುತ್ತದೆ, ಅವು ಭಾರತದ ರಿಜಿಸ್ಟ್ರಾರ್ ಜನರಲ್ (ಆರ್.ಜಿ.ಐ.) ಮತ್ತು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ (ಎನ್.ಸಿ.ಎಸ್.ಸಿ.)ಗೆ ಒಪ್ಪಿತವಾಗಬೇಕು.
ಭಾರತೀಯ ಸಂವಿಧಾನವುಪರಿಶಿಷ್ಟ ಜಾತಿಯ ಸದಸ್ಯರಿಗೆ ಕೆಲವು ಸೌಲಭ್ಯಗಳು/ ರಿಯಾಯಿತಿಗಳನ್ನು ಒದಗಿಸುತ್ತದೆ, ಇದು ಭಾರತೀಯ ಸಂವಿಧಾನದ ಅನುಚ್ಛೇಧ 341 ನಿಬಂಧನೆಗಳ ಅಡಿಯಲ್ಲಿ ಅಧಿಸೂಚಿತವಾಗಿರುತ್ತದೆ. ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಯ ಪ್ರಥಮ ಪಟ್ಟಿಗೆ ಸಂಬಂಧಿತ ರಾಜ್ಯಗಳೊಂದಿಗೆ ಸಮಾಲೋಚಿಸಿದ ತರುವಾಯ ರಾಷ್ಟ್ರಪತಿಗಳ ಆದೇಶದ ಮೇರೆಗೆ ಅಧಿಸೂಚನೆ ಹೊರಡಿಸಬೇಕು, ತರುವಾಯ ಪರಿಶಿಷ್ಟ ಜಾತಿಗಳ ಪಟ್ಟಿಗೆ ಯಾವುದೇ ಸೇರ್ಪಡೆ ಅಥವಾ ಬೇರ್ಪಡೆಯನ್ನು ಅನುಚ್ಛೇದ 341ರ (2) ಉಪಖಂಡದ ಅಡಿಯಲ್ಲಿ ಸಂಸತ್ತಿನ ಶಾಸನದ ಮೂಲಕ ಜಾರಿಗೆ ತರಬಹುದು.
ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗಳನ್ನು ನಿರ್ದಿಷ್ಟಪಡಿಸಲು 1950ರಿಂದ 1978ರವರೆಗೆ ಇಂಥ ಆರು ರಾಷ್ಟ್ರಪತಿಗಳ ಆದೇಶವು ಹೊರಬಿದ್ದಿದೆ. ಈ ಆದೇಶಗಳಿಗೆ 1956ರಿಂದ 2016ರ ಅವಧಿಯಲ್ಲಿ ಸಂವಿಧಾನದ ಅನುಚ್ಛೇದ 341(2) ಕಾಲಕಾಲಕ್ಕೆ ಸಂಸತ್ತಿನ ಶಾಸನಗಳ ರೀತ್ಯ ತಿದ್ದುಪಡಿ ಮಾಡಲಾಗಿದೆ.
ಮಸೂದೆಯು ಶಾಸನವಾಗಿ ಪರಿವರ್ತನೆಯಾದ ತರುವಾಯ, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರ್ಪಡೆಯಾದ ಸಮುದಾಯದ ಸದಸ್ಯರು, ಹಾಲಿ ಇರುವ ಯೋಜನೆಗಳ ಅಡಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ. ಇಂಥ ಪ್ರಮುಖ ಯೋಜನೆಗಳಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ, ರಾಜೀವ್ ಗಾಂಧಿ ರಾಷ್ಟ್ರೀಯ ಫೆಲೋಷಿಪ್, ಉನ್ನತ ವರ್ಗದ ಶಿಕ್ಷಣ, ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ ರಿಯಾಯಿತಿಯ ಸಾಲ ಸೌಲಭ್ಯ, ಪರಿಶಿಷ್ಟ ಜಾತಿಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್ ಗಳ ಸೌಲಭ್ಯ ಇತ್ಯಾದಿ ಸೇರಿವೆ. ಇದರ ಜೊತೆಗೆ ಅವರು ಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ಉದ್ಯೋಗದ ಮೀಸಲು ಸೌಲಭ್ಯಕ್ಕೂ ಅರ್ಹರಾಗುತ್ತಾರೆ.