Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ಮಯೋಗಿ ಸಾಧನ ಸಪ್ತಾಹವನ್ನು ಉದ್ದೇಶಿಸಿ ಮಾತನಾಡಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ಮಯೋಗಿ ಸಾಧನ ಸಪ್ತಾಹವನ್ನು ಉದ್ದೇಶಿಸಿ ಮಾತನಾಡಿದರು


ಸಾಮರ್ಥ್ಯ ನಿರ್ಮಾಣ ಆಯೋಗದ (CBC) ಸ್ಥಾಪನಾ ದಿನದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಕರ್ಮಯೋಗಿ ಸಾಧನ ಸಪ್ತಾಹವನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಕರ್ಮಯೋಗಿ ಸಾಧನ ಸಪ್ತಾಹವನ್ನು ಉದ್ದೇಶಿಸಿ ಮಾತನಾಡಿ, ಭಾಗವಹಿಸಿದವರಿಗೆಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಈ ಕಾರ್ಯಕ್ರಮವನ್ನು ಸಾಮರ್ಥ್ಯ ನಿರ್ಮಾಣ ಆಯೋಗದ (CBC) ಸ್ಥಾಪನಾ ದಿನದ ಅಂಗವಾಗಿ ಆಯೋಜಿಸಲಾಗಿದೆ.

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಸಾರ್ವಜನಿಕ ಸೇವೆಯು ಸಮಕಾಲೀನವಾಗಿರಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ತ್ವರಿತವಾಗಿ ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಗಳ ಜೊತೆಗೇ, ಭಾರತವು ವೇಗವಾಗಿ ಮುನ್ನಡೆಯುತ್ತಿದ್ದು, ತನ್ನ ಆಡಳಿತ ಯಂತ್ರೋಪಕರಣಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು. “21ನೇ ಶತಮಾನದಲ್ಲಿ ನಮ್ಮ ಸಾರ್ವಜನಿಕ ಸೇವೆಯು ಸುಸಂಬದ್ಧ ಮತ್ತು ಸ್ಪಂದನಶೀಲವಾಗಿ ಉಳಿಯುವಂತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನದ ಮಹತ್ವದ ಕೊಂಡಿಯೇ ಕರ್ಮಯೋಗಿ ಸಾಧನ ಸಪ್ತಾಹ” ಎಂದು ಶ್ರೀ ಮೋದಿ ಅವರು ಹೇಳಿದರು.

ಇಂದಿನ ಆಡಳಿತದ ಮಾರ್ಗದರ್ಶಿ ತತ್ವಶಾಸ್ತ್ರವನ್ನು ವಿವರಿಸಿದ ಪ್ರಧಾನಮಂತ್ರಿಗಳು, ಆಡಳಿತವನ್ನು ಮುನ್ನಡೆಸುವ ಮೂಲ ಮಂತ್ರ “ನಾಗರಿಕ ದೇವೋ ಭವ” ಅಂದರೆ ನಾಗರಿಕನನ್ನು ಸರ್ವೋಚ್ಚ ಎಂದು ಪರಿಗಣಿಸುವುದು ಎಂದು ತಿಳಿಸಿದರು. ಸಾರ್ವಜನಿಕ ಸೇವೆಯನ್ನು ಹೆಚ್ಚು ಸಮರ್ಥ ಮತ್ತು ನಾಗರಿಕರ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿ ರೂಪಿಸಲಾಗುತ್ತಿದೆ ಎಂಬುದನ್ನು ಒತ್ತಿ ಹೇಳಿದರು. “ಆಡಳಿತಕ್ಕೆ ನಿಜವಾದ ನಾಗರಿಕ-ಕೇಂದ್ರಿತ ರೂಪ ನೀಡುವ ಮೂಲಕ ಅದಕ್ಕೆ ಹೊಸ ಗುರುತನ್ನು ನೀಡಲಾಗುತ್ತಿದೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಸಾಮರ್ಥ್ಯ ನಿರ್ಮಾಣ ಆಯೋಗದ ಪ್ರಾರಂಭದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಸ್ವಾತಂತ್ರ್ಯದ ನಂತರ ಅನೇಕ ಸಂಸ್ಥೆಗಳು ವಿಭಿನ್ನ ಗಮನಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೂ, ಪ್ರತಿಯೊಬ್ಬ ಸರ್ಕಾರಿ ನೌಕರರ ಸಾಮರ್ಥ್ಯ ವೃದ್ಧಿಗೆ ಮೀಸಲಾದ ಸಂಸ್ಥೆಯ ಅಗತ್ಯ ಸ್ಪಷ್ಟವಾಗಿ ಕಂಡುಬಂದಿತ್ತು ಎಂದು ತಿಳಿಸಿದರು. “ಈ ಚಿಂತನೆಯೇ ಸಾಮರ್ಥ್ಯ ನಿರ್ಮಾಣ ಆಯೋಗಕ್ಕೆ ನಾಂದಿ ಹಾಡಿತು, ಇದು ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬ ಕರ್ಮಯೋಗಿಯನ್ನು ಸಶಕ್ತಗೊಳಿಸುವತ್ತ ಗಮನ ಕೇಂದ್ರೀಕರಿಸಿದೆ” ಎಂದು ಅವರು ಹೇಳಿದರು. CBC ಯ ಸ್ಥಾಪನಾ ದಿನದ ಸಂದರ್ಭದಲ್ಲಿ ಅಭಿನಂದಿಸಿ, iGOT ಮಿಷನ್ ಕರ್ಮಯೋಗಿಯ ಯಶಸ್ವಿ ಪಾತ್ರವನ್ನು ಗುರುತಿಸಿದ ಶ್ರೀ ಮೋದಿ ಅವರು, ಈ ಪ್ರಯತ್ನಗಳು ಆಧುನಿಕ, ಸಮರ್ಥ, ಸಮರ್ಪಿತ ಮತ್ತು ಸಂವೇದನಾಶೀಲ ಕರ್ಮಯೋಗಿಗಳ ತಂಡವನ್ನು ನಿರ್ಮಿಸಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಉಪಕ್ರಮವನ್ನು ವಿಕಸಿತ ಭಾರತದ ವಿಶಾಲ ದೃಷ್ಟಿಕೋನದೊಂದಿಗೆ ಜೋಡಿಸಿದ ಪ್ರಧಾನಮಂತ್ರಿಯವರು, ಸೇವಾ ತೀರ್ಥ ಉದ್ಘಾಟನೆ ಸಮಾರಂಭದಲ್ಲಿ ತಮ್ಮ ಇತ್ತೀಚಿನ ಭಾಷಣವನ್ನು ನೆನಪಿಸಿಕೊಂಡು, ತ್ವರಿತ ಆರ್ಥಿಕ ಬೆಳವಣಿಗೆ, ಆಧುನಿಕ ಮೂಲಸೌಕರ್ಯ, ತಂತ್ರಜ್ಞಾನ ಅಳವಡಿಕೆ ಮತ್ತು ದೊಡ್ಡ ಕೌಶಲ್ಯಯುಕ್ತ ಕಾರ್ಯಪಡೆಯ ಅಗತ್ಯವಿರುವದರ ಕುರಿತು ಮತ್ತೊಮ್ಮೆ ಪುನರುಚ್ಚರಿಸಿದರು. ಈ ಗುರಿಗಳನ್ನು ಸಾಧಿಸುವಲ್ಲಿ ಸಾರ್ವಜನಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸೇವಕರ ಪಾತ್ರ ನಿರ್ಣಾಯಕ ಎಂದು ಒತ್ತಿ ಹೇಳಿದರು. “ಇಂದಿನ ಭಾರತವು ಆಳವಾದ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದು, ಪ್ರತಿಯೊಬ್ಬ ನಾಗರಿಕರಿಗೂ ಕನಸುಗಳು ಮತ್ತು ಗುರಿಗಳಿವೆ ಮತ್ತು ಅವುಗಳನ್ನು ಈಡೇರಿಸಲು ಗರಿಷ್ಠ ಬೆಂಬಲ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು.

ಆಡಳಿತವು ನಾಗರಿಕರ ಜೀವನ ಸರಳತೆ ಮತ್ತು ಜೀವನ ಗುಣಮಟ್ಟ ಸುಧಾರಣೆಗೆ ಮಾನದಂಡವಾಗಬೇಕು ಎಂದು ಹೇಳಿದ ಪ್ರಧಾನಮಂತ್ರಿಯವರು, ಸಾರ್ವಜನಿಕ ಸೇವಕರು ಪ್ರತಿದಿನ ಹೊಸದನ್ನು ಕಲಿತು ನಿಜವಾದ ಕರ್ಮಯೋಗಿ ಮನೋಭಾವದಲ್ಲಿ ತಮ್ಮನ್ನು ತಾವು ರೂಪಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. “ನಾಗರಿಕರ ಜೀವನ ಗುಣಮಟ್ಟ ದಿನದಿಂದ ದಿನಕ್ಕೆ ಸುಧಾರಿಸುವಂತೆ ನಮ್ಮ ಆಡಳಿತ ಖಾತ್ರಿಪಡಿಸಬೇಕು ಇದೇ ನಮ್ಮ ನಿಜವಾದ ಮಾನದಂಡ” ಎಂದು ಶ್ರೀ ಮೋದಿ ಅವರು  ಪ್ರತಿಪಾದಿಸಿದರು.

ಆಡಳಿತ ಸಂಸ್ಕೃತಿಯಲ್ಲಿ ಮೂಲಭೂತ ಬದಲಾವಣೆಗೆ ಕರೆ ನೀಡಿದ ಪ್ರಧಾನಮಂತ್ರಿ, ಹಳೆಯ ವ್ಯವಸ್ಥೆಯಲ್ಲಿ ‘ಅಧಿಕಾರಿ’ ಆಗಿರುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು, ಆದರೆ ಇಂದು ದೇಶದ ಗಮನ ಕರ್ತವ್ಯದ ಮನೋಭಾವದ ಮೇಲೆ ದೃಢವಾಗಿ ನೆಲೆಗೊಂಡಿದೆ ಎಂದು ಸ್ಪಷ್ಟಪಡಿಸಿದರು. ಸಂವಿಧಾನವು ಕರ್ತವ್ಯಗಳ ನಿರ್ವಹಣೆಯ ಮೂಲಕವೇ ಹಕ್ಕುಗಳನ್ನು ನೀಡುತ್ತದೆ ಎಂದು ಅವರು ನೆನಪಿಸಿದರು. ” ಪ್ರತಿಯೊಂದು ನಿರ್ಧಾರಕ್ಕೂ ಮುನ್ನ, ನಮ್ಮ ಕರ್ತವ್ಯ ಏನನ್ನು ಬಯಸುತ್ತದೆ ಎಂದು ಯೋಚಿಸಿದಾಗ, ನಮ್ಮ ನಿರ್ಧಾರಗಳ ಪ್ರಭಾವವು ತನ್ನಕ್ಕಷ್ಟು ತಾನೇ ಹಲವು ಪಟ್ಟು ಹೆಚ್ಚಾಗುತ್ತದೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಸಾರ್ವಜನಿಕ ಸೇವಕರು ತಮ್ಮ ಪ್ರಸ್ತುತ ಕಾರ್ಯವನ್ನು ಭವಿಷ್ಯದ ವಿಶಾಲ ದೃಷ್ಟಿಕೋನದಲ್ಲಿ ನೋಡಬೇಕು ಎಂದು ಒತ್ತಾಯಿಸಿದ ಅವರು, ತಮ್ಮ ವೈಯಕ್ತಿಕ ನಿರ್ಧಾರಗಳು ಲಕ್ಷಾಂತರ ಜನರ ಜೀವನವನ್ನು ಹೇಗೆ ಬದಲಾಯಿಸಬಹುದು ಮತ್ತು ವೈಯಕ್ತಿಕ ರೂಪಾಂತರವು ಸಾಂಸ್ಥಿಕ ರೂಪಾಂತರಕ್ಕೆ ಹೇಗೆ ಎಡೆ ಮಾಡಿಕೊಡಬಹುದು ಎಂದು ನಿರಂತರವಾಗಿ ಚಿಂತಿಸಬೇಕು ಎಂದು ಆಗ್ರಹಿಸಿದರು. ವೈಯಕ್ತಿಕ ಅನುಭವದಿಂದ ಉಲ್ಲೇಖಿಸಿದ ಪ್ರಧಾನಮಂತ್ರಿ, ಇಂತಹ ಪರಿವರ್ತನಾಶೀಲ ಕಾರ್ಯಕ್ಕೆ ಅಪಾರ ಶಕ್ತಿ ಬೇಕಾಗುತ್ತದೆ ಎಂಬ ವಿಷಯವನ್ನು ಗಮನಿಸಿದರು. “ಈ ಶಕ್ತಿಯು ನಿಸ್ವಾರ್ಥ ಸೇವೆಯ ಮನೋಭಾವದಿಂದ ಮಾತ್ರ ಬರಲು ಸಾಧ್ಯ” ಎಂದು ಅವರು ಹೇಳಿದರು.

ತಂತ್ರಜ್ಞಾನದ ನಿರ್ಣಾಯಕ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಕಳೆದ ಹನ್ನೊಂದು ವರ್ಷಗಳಲ್ಲಿ ಆಡಳಿತ, ಸೇವಾ ವಿತರಣೆ ಮತ್ತು ಆರ್ಥಿಕತೆ ಸೇರಿದಂತೆ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ತಂತ್ರಜ್ಞಾನವು ಆಳವಾಗಿ ಬೇರೂರಿರುವುದನ್ನು ಎತ್ತಿ ತೋರಿಸಿದರು. ಕೃತಕ ಬುದ್ಧಿಮತ್ತೆಯ ಆಗಮನದೊಂದಿಗೆ ಈ ಬದಲಾವಣೆಗಳು ಇನ್ನಷ್ಟು ವೇಗ ಪಡೆಯಲಿವೆ ಎಂದು ಅವರು ತಿಳಿಸಿದರು. “ತಂತ್ರಜ್ಞಾನ ಮತ್ತು ದತ್ತಾಂಶದ ಬಗ್ಗೆ ಆಳವಾದ ತಿಳುವಳಿಕೆ ಹೊಂದಿರುವವರೇ, ಒಬ್ಬ ಉತ್ತಮ ಆಡಳಿತಗಾರ, ಉತ್ತಮ ಸಾರ್ವಜನಿಕ ಸೇವಕನಾಗಿರುತ್ತಾನೆ, ಇದು ನಿರ್ಧಾರ ತೆಗೆದುಕೊಳ್ಳುವಿಕೆಯ ಮೂಲ ಆಧಾರವಾಗಿರುತ್ತದೆ” ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಸಾಧನ ಸಪ್ತಾಹದ ಸಂದರ್ಭದಲ್ಲಿ AI ಯಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ನಿರಂತರ ಕಲಿಕೆಯು ಪ್ರಮುಖ ಗಮನದ ಕ್ಷೇತ್ರವಾಗಲಿದೆ ಎಂಬ ಆಶಾಭಾವನೆ ಅವರು ವ್ಯಕ್ತಪಡಿಸಿದರು.

ಭಾರತದ ಒಕ್ಕೂಟ ರಚನೆಯತ್ತ ಗಮನ ಸೆಳೆದ ಪ್ರಧಾನಮಂತ್ರಿ, ದೇಶದ ಯಶಸ್ಸು ಅದರ ಎಲ್ಲಾ ರಾಜ್ಯಗಳ ಸಾಮೂಹಿಕ ಯಶಸ್ಸಾಗಿದೆ ಎಂದು ಒತ್ತಿ ಹೇಳಿದರು. ಮುಂದುವರಿದ ರಾಜ್ಯ, ಹಿಂದುಳಿದ ರಾಜ್ಯ, BIMARU ರಾಜ್ಯ ಎಂಬ ದಶಕಗಳಷ್ಟು ಹಳೆಯದಾದ ವರ್ಗೀಕರಣಗಳು ನಿರ್ಮೂಲನೆಯಾಗುತ್ತಿವೆ ಮತ್ತು ಏಕರೂಪದ ಪ್ರಯತ್ನದ ತೀವ್ರತೆಯ ಮೂಲಕ ರಾಜ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕು ಎಂದು ಅವರು ಹೇಳಿದರು. “ನಾವು ಅಡೆತಡೆಗಳನ್ನು ಮೀರಿ, ಉತ್ತಮ ಸಮನ್ವಯ, ಸಾಮಾನ್ಯ ತಿಳುವಳಿಕೆ ಮತ್ತು ಸಮಗ್ರ ಸರ್ಕಾರದ ವಿಧಾನದೊಂದಿಗೆ ಮುನ್ನಡೆಯಬೇಕು ಆಗ ಮಾತ್ರ ಪ್ರತಿಯೊಂದು ಯೋಜನೆಯು ಯಶಸ್ವಿಯಾಗುತ್ತದೆ ” ಎಂದು ಪ್ರಧಾನಮಂತ್ರಿ ಮೋದಿ ದೃಢಪಡಿಸಿದರು.

ತಮ್ಮ ಸಮಾರೋಪ ಭಾಷಣದಲ್ಲಿ, ಸಾಮಾನ್ಯ ಪ್ರಜೆಗಳಿಗೆ ಸ್ಥಳೀಯ ಸರ್ಕಾರಿ ಕಚೇರಿಯೇ ಇಡೀ ಸರ್ಕಾರದ ಮುಖವಾಗಿರುತ್ತದೆ ಎಂದು ಪ್ರಧಾನಮಂತ್ರಿ ಸಾರ್ವಜನಿಕ ಸೇವಕರಿಗೆ ನೆನಪಿಸಿದರು. ಅಧಿಕಾರಿಗಳ ಕಾರ್ಯಶೈಲಿ ಮತ್ತು ನಡವಳಿಕೆಯು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ನೇರವಾಗಿ ಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು. “ನಾವು ಏನು ಮಾಡಿದರೂ, ಯಾವ ಹಂತದಲ್ಲಿ ಮಾಡಿದರೂ, ಆ ನಂಬಿಕೆಯನ್ನು ಕಾಪಾಡಿಕೊಳ್ಳಬೇಕು. ಇದು ನಮ್ಮ ಪ್ರಜಾಪ್ರಭುತ್ವದ ಅಡಿಪಾಯ” ಎಂದು ಶ್ರೀ ಮೋದಿ ತಿಳಿಸಿದರು. ಅವರು ಮತ್ತೊಮ್ಮೆ ಸಾಮರ್ಥ್ಯ ನಿರ್ಮಾಣ ಆಯೋಗವನ್ನು ಅಭಿನಂದಿಸಿ, ಕರ್ಮಯೋಗಿ ಸಾಧನ ಸಪ್ತಾಹವು ವಿಕಸಿತ ಭಾರತದ ಕಡೆಗಿನ ಭಾರತದ ಪ್ರಯಾಣದಲ್ಲಿ ಮಹತ್ವದ ಅಧ್ಯಾಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 

*****