ಪಿಎಂಇಂಡಿಯಾ
ಸ್ಲೋವಾಕ್ ಗಣರಾಜ್ಯದ ಪ್ರಧಾನ ಮಂತ್ರಿಗಳಾದ ಘನತೆವೆತ್ತ ರಾಬರ್ಟ್ ಫಿಕೊ ಅವರ ಆಹ್ವಾನದ ಮೇರೆಗೆ, ಭಾರತ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ನರೇಂದ್ರ ಮೋದಿ ಅವರು ಜೂನ್ 15, 2026 ರಂದು ಸ್ಲೋವಾಕ್ ಗಣರಾಜ್ಯಕ್ಕೆ ಅಧಿಕೃತ ಭೇಟಿ ನೀಡಿದರು.
1993ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಭಾರತೀಯ ಪ್ರಧಾನಿಯೊಬ್ಬರು ಸ್ಲೋವಾಕಿಯಾಕ್ಕೆ ನೀಡಿದ ಮೊದಲ ಭೇಟಿ ಇದಾಗಿದ್ದು, ಇದು ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸುತ್ತದೆ ಮತ್ತು ಎರಡೂ ರಾಷ್ಟ್ರಗಳ ನಡುವಿನ ಶಾಶ್ವತ ಸ್ನೇಹದಲ್ಲಿ ಹೊಸ ಹಾದಿಯನ್ನು ರೂಪಿಸುತ್ತದೆ. 1993ರಲ್ಲಿ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದಾಗಿನಿಂದ, ಭಾರತ ಮತ್ತು ಸ್ಲೋವಾಕಿಯಾ ನಂಬಿಕೆ, ಸಮಾನತೆ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಸಾಂಪ್ರದಾಯಿಕ ಸ್ನೇಹ ಮತ್ತು ಬಹುಮುಖಿ ಸಹಕಾರವನ್ನು ಅಭಿವೃದ್ಧಿಪಡಿಸಿವೆ.
ಈ ಭೇಟಿಯ ಐತಿಹಾಸಿಕ ಸ್ವರೂಪ ಮತ್ತು ದ್ವಿಪಕ್ಷೀಯ ಸಹಕಾರವನ್ನು ಗಾಢಗೊಳಿಸುವ ಹಂಚಿಕೆಯ ಬದ್ಧತೆಯ ಆಧಾರದ ಮೇಲೆ, ಭಾರತ ಗಣರಾಜ್ಯದ ಪ್ರಧಾನ ಮಂತ್ರಿ ಮತ್ತು ಸ್ಲೋವಾಕ್ ಗಣರಾಜ್ಯದ ಪ್ರಧಾನ ಮಂತ್ರಿಗಳು ಭಾರತ ಗಣರಾಜ್ಯ ಮತ್ತು ಸ್ಲೋವಾಕ್ ಗಣರಾಜ್ಯದ ನಡುವಿನ ಸಂಬಂಧವನ್ನು ಸಮಗ್ರ ಪಾಲುದಾರಿಕೆಯಾಗಿ ಉನ್ನತೀಕರಿಸಲು ಒಪ್ಪಿಕೊಂಡರು. ಸಮಗ್ರ ಪಾಲುದಾರಿಕೆಯು ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವುದು, ಅಸ್ತಿತ್ವದಲ್ಲಿರುವ ಸಹಕಾರ ಕಾರ್ಯವಿಧಾನಗಳನ್ನು ಬಲಪಡಿಸುವುದು ಮತ್ತು ದ್ವಿಪಕ್ಷೀಯವಾಗಿ ಹಾಗು ಬಹುಪಕ್ಷೀಯವಾಗಿ ಸಹಕಾರವನ್ನು ಗಾಢವಾಗಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ.
ಇಂಡೋ-ಪೆಸಿಫಿಕ್ನ ಬೆಳೆಯುತ್ತಿರುವ ಭೌಗೋಳಿಕ ರಾಜಕೀಯ, ಆರ್ಥಿಕ ಮತ್ತು ತಾಂತ್ರಿಕ ಪ್ರಾಮುಖ್ಯತೆಯನ್ನು ಪರಿಗಣಿಸಿದ ಇಬ್ಬರೂ ನಾಯಕರು, ಪರಸ್ಪರ ಪ್ರಯೋಜನಕಾರಿ ಸಹಕಾರ, ಪ್ರಾದೇಶಿಕ ಸಂಪರ್ಕ, ಮುಕ್ತ ಅಂತರರಾಷ್ಟ್ರೀಯ ವ್ಯಾಪಾರ, ಸಂಚಾರದ ಸ್ವಾತಂತ್ರ್ಯ, ವಿವಾದಗಳ ಶಾಂತಿಯುತ ಪರಿಹಾರ ಮತ್ತು ನಿಯಮ-ಆಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಬೆಂಬಲಿಸುವಲ್ಲಿ ಭಾರತ ಮತ್ತು ಸ್ಲೋವಾಕಿಯಾ ನಡುವಿನ ಬಲವಾದ ಪಾಲುದಾರಿಕೆಯ ಮೌಲ್ಯವನ್ನು ಅಂಗೀಕರಿಸಿದರು.
ಇಬ್ಬರೂ ನಾಯಕರು ನಿಯಮಿತ ಉನ್ನತ ಮಟ್ಟದ ವಿನಿಮಯ ಮತ್ತು ನಿರಂತರ ರಾಜಕೀಯ ಸಂವಾದದ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಎಲ್ಲಾ ಹಂತಗಳಲ್ಲಿ ನಿಯೋಗಗಳ ವಿನಿಮಯವನ್ನು ಹೆಚ್ಚಿಸಲು ಒಪ್ಪಿಕೊಂಡರು. ಹೆಚ್ಚಿನ ಪರಸ್ಪರ ತಿಳುವಳಿಕೆ ಮತ್ತು ಶಾಸಕಾಂಗ ಅನುಭವಗಳು ಮತ್ತು ಉತ್ತಮ ಅಭ್ಯಾಸಗಳ ಹಂಚಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಂಸದೀಯ ವಿನಿಮಯ, ಸಂಪರ್ಕಗಳು ಮತ್ತು ಸಹಕಾರವನ್ನು ಹೆಚ್ಚಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ವಿಶ್ವಸಂಸ್ಥೆಯನ್ನು ಕೇಂದ್ರವಾಗಿಟ್ಟುಕೊಂಡು ಬಹುಪಕ್ಷೀಯತೆಗೆ ಮತ್ತು ನಿಯಮ ಆಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಗೆ ತಮ್ಮ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು, ಅದೇ ಸಮಯದಲ್ಲಿ ವಿಶ್ವಸಂಸ್ಥೆ, ವಿಶೇಷವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳ ಸಮಗ್ರ ಸುಧಾರಣೆಗಳನ್ನು ಬೆಂಬಲಿಸಿದರು, ಅವುಗಳನ್ನು ಹೆಚ್ಚು ಪ್ರಾತಿನಿಧಿಕ, ಒಳಗೊಳ್ಳುವ, ಪರಿಣಾಮಕಾರಿ ಮತ್ತು ಸಮಕಾಲೀನ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ಪ್ರತಿಬಿಂಬಿಸುವಂತೆ ಮಾಡುವುದಕ್ಕೆ ಅವರು ಬೆಂಬಲ ವ್ಯಕ್ತಪಡಿಸಿದರು. ಖಾಯಂ ಮತ್ತು ಖಾಯಂ ಅಲ್ಲದ ವರ್ಗಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸುವ ತುರ್ತು ಅಗತ್ಯವನ್ನು ನಾಯಕರು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ, ಸುಧಾರಿತ ಮತ್ತು ವಿಸ್ತೃತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಸ್ಲೋವಾಕಿಯಾದ ನಿರಂತರ ಬೆಂಬಲವನ್ನು ಭಾರತ ಶ್ಲಾಘಿಸಿತು. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ತಮ್ಮ ಅಭ್ಯರ್ಥಿಗಳ ಕುರಿತು ಸಮಾಲೋಚನೆ ಮತ್ತು ಸಮನ್ವಯವನ್ನು ಮುಂದುವರಿಸಲು ಮತ್ತು ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ವೇದಿಕೆಗಳಲ್ಲಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ನಿಕಟವಾಗಿ ಸಹಕರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಜಾಗತಿಕ ಶಸ್ತ್ರಾಸ್ತ್ರ ಪ್ರಸರಣ ರಹಿತ ವಾಸ್ತುಶಿಲ್ಪವನ್ನು (ನಿಶಃಸ್ತ್ರೀಕರಣ ವ್ಯವಸ್ಥೆ) ಎತ್ತಿಹಿಡಿಯುವ ಮಹತ್ವವನ್ನು ಇಬ್ಬರೂ ನಾಯಕರು ಚರ್ಚಿಸಿದರು. ಪರಮಾಣು ಪೂರೈಕೆದಾರರ ಗುಂಪಿನ ಭಾರತದ ಸದಸ್ಯತ್ವಕ್ಕೆ ಸ್ಲೋವಾಕಿಯಾ ತನ್ನ ರಚನಾತ್ಮಕ ಧೋರಣೆಯನ್ನು ಪುನರುಚ್ಚರಿಸಿತು.
ಸಂಪರ್ಕ, ಸುಸ್ಥಿರ ಆರ್ಥಿಕ ಬೆಳವಣಿಗೆ ಮತ್ತು ಪ್ರಾದೇಶಿಕ ಏಕೀಕರಣವನ್ನು ಉತ್ತೇಜಿಸುವ ಪರಸ್ಪರ ಸಂಪರ್ಕಿತ ಮತ್ತು ಪರಸ್ಪರ ಪ್ರಯೋಜನಕಾರಿ ಮೂಲಸೌಕರ್ಯ ಯೋಜನೆಗಳನ್ನು ಒಳಗೊಂಡಂತೆ ಸ್ಲಾವ್ಕೋವ್ 3, ವೈಸೆಗ್ರಾಡ್ 4 ಮತ್ತು 3 ಸೀಸ್ ಇನಿಶಿಯೇಟಿವ್ನಂತಹ ಪ್ರಾದೇಶಿಕ ಗುಂಪುಗಳೊಂದಿಗೆ ಸಹಕಾರದ ಅಭಿವೃದ್ಧಿಯನ್ನು ಬೆಂಬಲಿಸಲು ನಾಯಕರು ಒಪ್ಪಿಕೊಂಡರು. ಅಂತರರಾಷ್ಟ್ರೀಯ ಕಾನೂನು, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವವನ್ನು ಆಧರಿಸಿದ ಸ್ವತಂತ್ರ, ಮುಕ್ತ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ಗೆ ಎರಡೂ ಕಡೆಯವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು, ಇದರಲ್ಲಿ ವಿಶ್ವಸಂಸ್ಥೆಯ ಸಮುದ್ರ ಕಾನೂನಿನ ಸಮಾವೇಶವೂ ಸೇರಿದೆ.
ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾದ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಬಲಪಡಿಸುವ ಮಹತ್ವವನ್ನು ನಾಯಕರು ಒತ್ತಿ ಹೇಳಿದರು. ರಕ್ಷಣಾ ತಂತ್ರಜ್ಞಾನಗಳು, ಸಾಮರ್ಥ್ಯ ವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ರಕ್ಷಣಾ ಕೈಗಾರಿಕಾ ಸಹಕಾರ ಸೇರಿದಂತೆ ವರ್ಧಿತ ಸಹಯೋಗಕ್ಕಾಗಿ ಅವಕಾಶಗಳನ್ನು ಅನ್ವೇಷಿಸಲು ಆಯಾ ರಕ್ಷಣಾ ಅಧಿಕಾರಿಗಳ ನಡುವೆ ನಿಯಮಿತ ಸಮಾಲೋಚನೆ ಮತ್ತು ವಿನಿಮಯವನ್ನು ಪ್ರೋತ್ಸಾಹಿಸಲು ಅವರು ಒಪ್ಪಿಕೊಂಡರು. ಈ ಸಂದರ್ಭದಲ್ಲಿ, ರಕ್ಷಣಾ ವಲಯದಲ್ಲಿ ಪರಸ್ಪರ ಪ್ರಯೋಜನಕಾರಿ ಪಾಲುದಾರಿಕೆಗಳನ್ನು ಬೆಳೆಸುವ ಎರಡೂ ಕಡೆಯವರ ನಡುವಿನ ರಕ್ಷಣಾ ಸಹಕಾರದ ಕುರಿತಾದ ಉದ್ದೇಶ ಪತ್ರಕ್ಕೆ ಸಹಿ ಹಾಕುವುದನ್ನು ನಾಯಕರು ಸ್ವಾಗತಿಸಿದರು.
ವಿಪತ್ತು ಅಪಾಯ ಕಡಿತ ಮತ್ತು ಸ್ಥಿತಿಸ್ಥಾಪಕತ್ವ ನಿರ್ಮಾಣದಲ್ಲಿ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚುತ್ತಿರುವ ಮಹತ್ವವನ್ನು ನಾಯಕರು ಗುರುತಿಸಿದರು ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ, ಸಾಮರ್ಥ್ಯ ವೃದ್ಧಿ, ಜ್ಞಾನ ಹಂಚಿಕೆ ಹಾಗು ಸಾಂಸ್ಥಿಕ ಸಹಕಾರದ ಕ್ಷೇತ್ರಗಳಲ್ಲಿ ಸಹಯೋಗವನ್ನು ಹೆಚ್ಚಿಸಲು ಒಪ್ಪಿಕೊಂಡರು.
ನಿರ್ಣಾಯಕ ಮಾಹಿತಿ ಮೂಲಸೌಕರ್ಯದ ರಕ್ಷಣೆ ಮತ್ತು ಸೈಬರ್ ಅಪರಾಧ ತಡೆಗಟ್ಟುವಿಕೆ ಹಾಗು ಎದುರಿಸುವಲ್ಲಿ ಸಹಕಾರವನ್ನು ಬಲಪಡಿಸಲು ನಾಯಕರು ಒಪ್ಪಿಕೊಂಡರು, ಅದೇ ಸಮಯದಲ್ಲಿ ಮುಕ್ತ, ಸುರಕ್ಷಿತ, ಪ್ರವೇಶಿಸಬಹುದಾದ, ಸ್ಥಿರ, ಪರಸ್ಪರ ಕಾರ್ಯನಿರ್ವಹಿಸಬಹುದಾದ, ಸ್ಥಿತಿಸ್ಥಾಪಕ ಮತ್ತು ಶಾಂತಿಯುತ ಡಿಜಿಟಲ್ ಅವಕಾಶವನ್ನು ಉತ್ತೇಜಿಸಿದರು. ಕ್ರಿಪ್ಟೋಗ್ರಫಿಗೆ ಉದಯೋನ್ಮುಖ ಕ್ವಾಂಟಮ್ ಅಪಾಯ/ಬೆದರಿಕೆಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳನ್ನು ರಕ್ಷಿಸುವಲ್ಲಿ ಪರಸ್ಪರ ಬೆಂಬಲಿಸುವ ಬದ್ಧತೆಯನ್ನು ನಾಯಕರು ವ್ಯಕ್ತಪಡಿಸಿದರು, ಇದರಲ್ಲಿ ಪೋಸ್ಟ್-ಕ್ವಾಂಟಮ್ ಭದ್ರತಾ ಪರಿವರ್ತನೆಗಳಿಗೆ ಸಿದ್ಧತೆಯೂ ಸೇರಿದೆ. ಈ ಸಂದರ್ಭದಲ್ಲಿ, ನಿರ್ಣಾಯಕ ಮೂಲಸೌಕರ್ಯ ರಕ್ಷಣೆ ಮತ್ತು ಪೋಸ್ಟ್ಕ್ವಾಂಟಮ್ ಕ್ರಿಪ್ಟೋಗ್ರಫಿ ಕ್ಷೇತ್ರದಲ್ಲಿ ಸಹಿ ಹಾಕಲಾದ ಸಹಕಾರ ಒಡಂಬಡಿಕೆ ಅಂತಹ ಸಹಕಾರವನ್ನು ಮತ್ತಷ್ಟು ಸುಗಮಗೊಳಿಸುತ್ತದೆ ಎಂದು ಅವರು ಗಮನಿಸಿದರು.
ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳನ್ನು ಇಬ್ಬರೂ ನಾಯಕರು ಒಕ್ಕೊರಲಿನಿಂದ ಖಂಡಿಸಿದರು ಮತ್ತು ಏಪ್ರಿಲ್ 22, 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದರು. ಭಯೋತ್ಪಾದನೆ ನಿಗ್ರಹದ ಕುರಿತು ಜಂಟಿ ಕಾರ್ಯಕಾರಿ ಗುಂಪನ್ನು ಸ್ಥಾಪಿಸಲು ಅವರು ಒಪ್ಪಿಕೊಂಡರು. ಭಯೋತ್ಪಾದನೆಯನ್ನು ಸಮಗ್ರ ಮತ್ತು ನಿರಂತರ ರೀತಿಯಲ್ಲಿ ಎದುರಿಸಲು ಸಂಘಟಿತ ಅಂತರರಾಷ್ಟ್ರೀಯ ಪ್ರಯತ್ನಗಳಿಗೆ ಅವರು ಕರೆ ನೀಡಿದರು. ವಿಶ್ವಸಂಸ್ಥೆಯ ಚೌಕಟ್ಟಿನೊಳಗೆ ಸೇರಿದಂತೆ ಭಯೋತ್ಪಾದನೆ ನಿಗ್ರಹದಲ್ಲಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ 1267 ನಿರ್ಬಂಧಗಳ ಸಮಿತಿಯಿಂದ ಗೊತ್ತುಪಡಿಸಿದವರು ಸೇರಿದಂತೆ ಭಯೋತ್ಪಾದಕರು ಮತ್ತು ಭಯೋತ್ಪಾದಕ ಘಟಕಗಳು ಹಾಗೂ ಅವರ ಅಂಗಸಂಸ್ಥೆಗಳು, ಪ್ರಾಕ್ಸಿಗಳು, ಪ್ರಾಯೋಜಕರು, ಹಣಕಾಸುದಾರರು ಮತ್ತು ಬೆಂಬಲಿಗರ ವಿರುದ್ಧ ಬಲವಾದ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಕರೆ ನೀಡಿದರು. ಭಯೋತ್ಪಾದಕ ಕೃತ್ಯಗಳ ಅಪರಾಧಿಗಳು, ಸಂಘಟಕರು ಮತ್ತು ಪ್ರಾಯೋಜಕರನ್ನು ಹೊಣೆಗಾರರನ್ನಾಗಿ ಮಾಡುವ ಮಹತ್ವವನ್ನು ಅವರು ಮತ್ತಷ್ಟು ಒತ್ತಿ ಹೇಳಿದರು ಮತ್ತು ವಿಶ್ವಸಂಸ್ಥೆಯ ಚೌಕಟ್ಟಿನೊಳಗೆ ಅಂತರರಾಷ್ಟ್ರೀಯ ಭಯೋತ್ಪಾದನೆಯ ಸಮಗ್ರ ಸಮಾವೇಶ (CCIT) ದ ತ್ವರಿತ ಅಂತಿಮಗೊಳಿಸುವಿಕೆ ಮತ್ತು ಅಂಗೀಕಾರಕ್ಕಾಗಿ ನಿಕಟವಾಗಿ ಕೆಲಸ ಮಾಡಲು ಒಪ್ಪಿಕೊಂಡರು.
ಜನವರಿ 2026ರಲ್ಲಿ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ ಮತ್ತು ಹೊಸ ಜಂಟಿ ಭಾರತ-ಇಯು ಸಮಗ್ರ ಕಾರ್ಯತಂತ್ರದ ಕಾರ್ಯಸೂಚಿಯ ಕುರಿತಾದ ಮಾತುಕತೆಗಳ ಅಂತಿಮಗೊಳಿಸುವಿಕೆಯನ್ನು ಸ್ವಾಗತಿಸಿದ ಇಬ್ಬರೂ ನಾಯಕರು, ಎಫ್.ಟಿ.ಎ. ವ್ಯಾಪಾರ ಮತ್ತು ಹೂಡಿಕೆಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ಗಮನಿಸಿದರು ಮತ್ತು ನಿರ್ಣಾಯಕ ಮೌಲ್ಯ ಸರಪಳಿಗಳನ್ನು ವೈವಿಧ್ಯಗೊಳಿಸುವ ಮೂಲಕ ಹಾಗು ಹೊಸ ಮಾರುಕಟ್ಟೆಗಳನ್ನು ತೆರೆಯುವ ಮೂಲಕ ವ್ಯಾಪಾರ ಮತ್ತು ಹೂಡಿಕೆ ಸಹಕಾರದ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಅದರ ತ್ವರಿತ ಅಂಕಿತ ಮತ್ತು ಸಕಾಲಿಕ ಅನುಷ್ಠಾನಕ್ಕೆ ಕರೆ ನೀಡಿದರು.
ಎರಡೂ ದೇಶಗಳ ನಡುವಿನ ಆರ್ಥಿಕ ಸಹಕಾರದ ಹೆಚ್ಚಿನ ಸಂಭಾವ್ಯ ಕ್ಷೇತ್ರಗಳನ್ನು ಗುರುತಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಭಾರತ-ಸ್ಲೋವಾಕಿಯಾ ಜಂಟಿ ಆರ್ಥಿಕ ಸಮಿತಿಯ ಪಾತ್ರವನ್ನು ಮತ್ತಷ್ಟು ಬಲಪಡಿಸಲು ನಾಯಕರು ಒಪ್ಪಿಕೊಂಡರು. ಸ್ಲೋವಾಕಿಯಾದ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಕೈಗಾರಿಕಾ ಪರಿಸರ ವ್ಯವಸ್ಥೆ ಮತ್ತು ಭಾರತದ ಪ್ರಮಾಣ, ನಾವೀನ್ಯತೆ ಪರಿಸರ ವ್ಯವಸ್ಥೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಳಸಿಕೊಂಡು, ಹೆಚ್ಚಿನ ಮೌಲ್ಯವರ್ಧಿತ ಸಹಯೋಗದ ಮೇಲೆ ನಿರ್ದಿಷ್ಟ ಗಮನ ಹರಿಸಿ, ಆಟೋಮೋಟಿವ್, ಎಲೆಕ್ಟ್ರಾನಿಕ್ಸ್ ಮತ್ತು ಇತರ ಮುಂದುವರಿದ ಉತ್ಪಾದನಾ ಕೈಗಾರಿಕೆಗಳಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ವ್ಯಾಪಾರ ಮತ್ತು ದ್ವಿಮುಖ ಹೂಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಮಾರ್ಗಗಳನ್ನು ಅನ್ವೇಷಿಸಲು ಅವರು ಬದ್ಧತೆ ವ್ಯಕ್ತಪಡಿಸಿದರು.
ಹಸಿರು ಇಂಧನ ಪರಿವರ್ತನೆಗಾಗಿ ತಂತ್ರಜ್ಞಾನಗಳ ವಿನಿಮಯ ಮತ್ತು ಸ್ವಚ್ಛ, ವಿಶ್ವಾಸಾರ್ಹ ಹಾಗು ಸ್ಥಿತಿಸ್ಥಾಪಕ ಇಂಧನ ವ್ಯವಸ್ಥೆಗಳನ್ನು ಉತ್ತೇಜಿಸುವ ಮೂಲಕ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಪರಮಾಣು ಶಕ್ತಿ ಮತ್ತು ಭೂಶಾಖದ ಶಕ್ತಿ ಸೇರಿದಂತೆ ಇಂಧನ ಮೂಲಗಳ ವೈವಿಧ್ಯೀಕರಣದ ಮೂಲಕ ಇಂಧನ ಭದ್ರತೆ, ಸುಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವ ಉದ್ದೇಶದಿಂದ ಇಂಧನ ವಲಯದಲ್ಲಿ ಸಹಕಾರವನ್ನು ಹೆಚ್ಚಿಸಲು ನಾಯಕರು ಒಪ್ಪಿಕೊಂಡರು. ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆ, ಪರಿಣತಿಯ ವಿನಿಮಯ ಮತ್ತು ಸಾಮರ್ಥ್ಯವರ್ಧನೆ ಉಪಕ್ರಮಗಳ ಮೂಲಕ ಸಹಯೋಗವನ್ನು ಗಾಢಗೊಳಿಸುವ ಉದ್ದೇಶವನ್ನು ಅವರು ವ್ಯಕ್ತಪಡಿಸಿದರು.
ಜಲ ಸಂಪನ್ಮೂಲಗಳ ದಕ್ಷ ಮತ್ತು ಸುಸ್ಥಿರ ನಿರ್ವಹಣೆ ಮತ್ತು ಅಣೆಕಟ್ಟು ಸುರಕ್ಷತೆಯಲ್ಲಿ ಪರಿಣತಿ ಮತ್ತು ಉತ್ತಮ ಅಭ್ಯಾಸಗಳ ಹಂಚಿಕೆ ಸೇರಿದಂತೆ ಹವಾಮಾನಶಾಸ್ತ್ರ ಮತ್ತು ಜಲವಿಜ್ಞಾನ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ನಾಯಕರು ಒಪ್ಪಿಕೊಂಡರು. ಮೂಲಗಳಲ್ಲಿ ಸುಸ್ಥಿರತೆ, ಗ್ರಾಮೀಣ ಕುಡಿಯುವ ನೀರಿನ ಗುಣಮಟ್ಟದ ಮೇಲ್ವಿಚಾರಣೆ, ನೀರಿನ ಸಂಸ್ಕರಣಾ ತಂತ್ರಜ್ಞಾನಗಳು, ಸಾಮರ್ಥ್ಯ ವೃದ್ಧಿ ಮತ್ತು ಸಮುದಾಯ ಭಾಗವಹಿಸುವಿಕೆಯಂತಹ ಕ್ಷೇತ್ರಗಳಲ್ಲಿ ಸಹಯೋಗವನ್ನು ಉತ್ತೇಜಿಸುವ ಉದ್ದೇಶವನ್ನು ಅವರು ವ್ಯಕ್ತಪಡಿಸಿದರು ಮತ್ತು ನೀರಿನ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸುರಕ್ಷಿತ ಕುಡಿಯುವ ನೀರಿಗೆ ಸುಸ್ಥಿರ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಹವಾಮಾನ-ನಿರೋಧಕ (ಸ್ಥಿತಿಸ್ಥಾಪಕತ್ವದ) ಗ್ರಾಮೀಣ ಕುಡಿಯುವ ನೀರಿನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮಹತ್ವವನ್ನು ಒತ್ತಿ ಹೇಳಿದರು.
ಪಾಲುದಾರಿಕೆಯ ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭವಾಗಿ ಸಂಪರ್ಕವನ್ನು ಗುರುತಿಸಿದ ಎರಡೂ ಕಡೆಯವರು, ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಆಟೋಮೋಟಿವ್ ಮತ್ತು ರೈಲ್ವೆ ವಲಯಗಳಲ್ಲಿ ಜಂಟಿ ಉದ್ಯಮಗಳು, ತಂತ್ರಜ್ಞಾನ ವರ್ಗಾವಣೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಮಹತ್ವವನ್ನು ಒತ್ತಿ ಹೇಳಿದರು. ಮಧ್ಯ ಯುರೋಪಿಯನ್ ಸಾರಿಗೆ ಕೇಂದ್ರವಾಗಿ ಸ್ಲೋವಾಕಿಯಾದ ಸ್ಥಾನದ ಸಾಮರ್ಥ್ಯ ಮತ್ತು ವ್ಯಾಪಾರ, ಹೂಡಿಕೆ ಮತ್ತು ಸಂಪರ್ಕವನ್ನು ಹೆಚ್ಚಿಸಲು ಭಾರತದ ದೊಡ್ಡ ಪ್ರಮಾಣದ ಉತ್ಪಾದನಾ ಸಾಮರ್ಥ್ಯಗಳನ್ನು ಅವರು ಪರಾಂಬರಿಸಿದರು. ಬೆಳೆಯುತ್ತಿರುವ ಆರ್ಥಿಕ, ವ್ಯವಹಾರ ಮತ್ತು ಜನರಿಂದ ಜನರಿಗೆ ವಿನಿಮಯವನ್ನು ಸುಗಮಗೊಳಿಸಲು ಭಾರತ ಮತ್ತು ಸ್ಲೋವಾಕಿಯಾ ನಡುವೆ ನೇರ ವಾಯು ಸಂಪರ್ಕವನ್ನು ಅನ್ವೇಷಿಸಲು ಅವರು ಪ್ರೋತ್ಸಾಹಿಸಿದರು.
ಸ್ಲೋವಾಕ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಪೀಟರ್ ಪೆಲ್ಲೆಗ್ರಿನಿ ಅವರು ಭಾಗವಹಿಸಿದ್ದ ದೆಹಲಿಯಲ್ಲಿ ನಡೆದ ಎ.ಐ. ಇಂಪ್ಯಾಕ್ಟ್ ಶೃಂಗಸಭೆ 2026ರ ಯಶಸ್ವಿ ಫಲಿತಾಂಶಗಳನ್ನು ಇಬ್ಬರೂ ನಾಯಕರು ಶ್ಲಾಘಿಸಿದರು. ಡಿಜಿಟಲ್ ಡೊಮೇನ್ನಲ್ಲಿ ಸಹಕಾರವನ್ನು ಆಳಗೊಳಿಸಲು ರಚನಾತ್ಮಕ ಚೌಕಟ್ಟನ್ನು ಒದಗಿಸುವ ಡಿಜಿಟಲ್ ತಂತ್ರಜ್ಞಾನಗಳ ಕುರಿತಾದ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು. ನಾವೀನ್ಯತೆ-ನೇತೃತ್ವದ ಬೆಳವಣಿಗೆ ಮತ್ತು ಪರಸ್ಪರ ಪ್ರಯೋಜನಕಾರಿ ಪಾಲುದಾರಿಕೆಗಳನ್ನು ಬೆಳೆಸುವ ದೃಷ್ಟಿಯಿಂದ ಕೃತಕ ಬುದ್ಧಿಮತ್ತೆ, ಅರೆವಾಹಕಗಳು, ಸ್ಟಾರ್ಟ್-ಅಪ್ಗಳು, ನಾವೀನ್ಯತೆ ಪರಿಸರ ವ್ಯವಸ್ಥೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ತಂತ್ರಜ್ಞಾನ ಕಂಪನಿಗಳಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ಅವರು ಒಪ್ಪಿಕೊಂಡರು. 5ಜಿ ಬಳಕೆಯ ಪ್ರಕರಣಗಳು, 6ಜಿ ಸ್ತಿರೀಕರಣ/ಪ್ರಮಾಣೀಕರಣ, ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮತ್ತು ಮೆಷಿನ್-ಟು-ಮೆಷಿನ್ (M2M) ಅಪ್ಲಿಕೇಶನ್ಗಳು ಸೇರಿದಂತೆ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಉಪಗ್ರಹ ತಂತ್ರಜ್ಞಾನ ಮತ್ತು ಅದರ ಅನ್ವಯಿಕೆಗಳ ಕ್ಷೇತ್ರದಲ್ಲಿ ತಮ್ಮ ತಮ್ಮ ಬಾಹ್ಯಾಕಾಶ ಪರಿಸರ ವ್ಯವಸ್ಥೆಗಳ ನಡುವಿನ ಸಹಕಾರವನ್ನು ಬಲಪಡಿಸುವ ಅವಕಾಶಗಳನ್ನು ಅನ್ವೇಷಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಮುಂದುವರಿದ ಬಾಹ್ಯಾಕಾಶ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ನಾವೀನ್ಯತೆಗಳನ್ನು ಉತ್ತೇಜಿಸಲು ವೈಜ್ಞಾನಿಕ ಮತ್ತು ಸಂಶೋಧನಾ ಸಂಸ್ಥೆಗಳು ಹಾಗೂ ಉದ್ಯಮದ ಪಾಲುದಾರರ ನಡುವೆ ವಿನಿಮಯವನ್ನು ಬೆಳೆಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.
ಔಷಧೀಯ ಸಂಶೋಧನೆ ಮತ್ತು ಅಭಿವೃದ್ಧಿ, ಡಿಜಿಟಲ್ ಆರೋಗ್ಯ ಪರಿಹಾರಗಳು ಮತ್ತು ಆರೋಗ್ಯಕ್ಕಾಗಿ ಮಾನವ ಸಂಪನ್ಮೂಲಗಳ ಬಲವರ್ಧನೆಗೆ ನಿರ್ದಿಷ್ಟವಾಗಿ ಒತ್ತು ನೀಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ನಿಯಮಿತ ಸಂವಾದವನ್ನು ನಿರ್ವಹಿಸುವ ಮತ್ತು ಸಹಕಾರವನ್ನು ಆಳಗೊಳಿಸುವ ಅಗತ್ಯವನ್ನು ನಾಯಕರು ಎತ್ತಿ ತೋರಿಸಿದರು. ಸಾರ್ವಜನಿಕ ಆರೋಗ್ಯ ನಿರ್ವಹಣೆಯಲ್ಲಿ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮತ್ತು ಆಯಾ ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ ಹೆಚ್ಚು ಸ್ಥಿತಿಸ್ಥಾಪಕ, ಪರಿಣಾಮಕಾರಿ ಮತ್ತು ರೋಗಿ ಕೇಂದ್ರಿತ ಆರೋಗ್ಯ ವ್ಯವಸ್ಥೆಗಳನ್ನು ನಿರ್ಮಿಸಲು ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಪ್ರಾಮುಖ್ಯತೆಯನ್ನು ಎರಡೂ ಕಡೆಯವರು ಒತ್ತಿ ಹೇಳಿದರು.
ಆಳವಾದ ಶೈಕ್ಷಣಿಕ ಮತ್ತು ವೈಜ್ಞಾನಿಕ ವಿನಿಮಯವನ್ನು ಉತ್ತೇಜಿಸುವ ಸಲುವಾಗಿ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಸಂಶೋಧಕರ ಹೆಚ್ಚಿನ ಚಲನಶೀಲತೆಯನ್ನು ಉತ್ತೇಜಿಸಲು, ಸ್ಟೆಮ್ (STEM) ಮತ್ತು ಮಾನವಿಕ ವಿಭಾಗಗಳಿಗೆ ನಿರ್ದಿಷ್ಟವಾಗಿ ಒತ್ತು ನೀಡಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಎರಡೂ ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳು ಮತ್ತು ಸಹಯೋಗಗಳನ್ನು ಅವರು ಗಮನಿಸಿದರು ಮತ್ತು ಅವುಗಳ ಮತ್ತಷ್ಟು ವಿಸ್ತರಣೆ ಮತ್ತು ವೈವಿಧ್ಯೀಕರಣವನ್ನು ಪ್ರೋತ್ಸಾಹಿಸಿದರು. ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಆಯಾ ಶಿಕ್ಷಣ ಸಚಿವಾಲಯಗಳ ನಡುವಿನ ತಿಳುವಳಿಕೆ ಒಪ್ಪಂದದ ತೀರ್ಮಾನವನ್ನು ಎರಡೂ ಕಡೆಯವರು ಸ್ವಾಗತಿಸಿದರು, ಇದು ಶೈಕ್ಷಣಿಕ ಸಂಪರ್ಕಗಳನ್ನು ಬಲಪಡಿಸಲು ಮತ್ತು ದೀರ್ಘಕಾಲೀನ ಸಾಂಸ್ಥಿಕ ಪಾಲುದಾರಿಕೆಗಳನ್ನು ಬೆಳೆಸಲು ರಚನಾತ್ಮಕ ಚೌಕಟ್ಟನ್ನು ಒದಗಿಸುತ್ತದೆ.
ಭಾರತ ಮತ್ತು ಸ್ಲೋವಾಕಿಯಾದ ಜನರ ನಡುವಿನ ಸ್ನೇಹ ಸಂಬಂಧಗಳನ್ನು ಬಲಪಡಿಸುವ ಮತ್ತು ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಾಂಸ್ಕೃತಿಕ ವಿನಿಮಯ, ಪ್ರವಾಸೋದ್ಯಮ ಮತ್ತು ಜನರಿಂದ ಜನರ ಸಂಪರ್ಕಗಳನ್ನು ಮತ್ತಷ್ಟು ಉತ್ತೇಜಿಸಲು ನಾಯಕರು ಒಪ್ಪಿಕೊಂಡರು. ಕಲಾವಿದರು ಮತ್ತು ಸಾಂಸ್ಕೃತಿಕ ತಂಡಗಳ ನಿಯಮಿತ ವಿನಿಮಯ, ಪ್ರದರ್ಶನಗಳ ಸಂಘಟನೆ ಮತ್ತು ಉತ್ಸವಗಳಲ್ಲಿ ಭಾಗವಹಿಸುವಿಕೆ ಹಾಗೂ ಎರಡೂ ದಿಕ್ಕುಗಳಲ್ಲಿ ಹೆಚ್ಚಿನ ಪ್ರವಾಸೋದ್ಯಮ ಹರಿವನ್ನು ಉತ್ತೇಜಿಸುವ ಮೂಲಕ ಸಾಂಸ್ಕೃತಿಕ ಸಹಕಾರವನ್ನು ವಿಸ್ತರಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಚಲನಚಿತ್ರ ಮತ್ತು ಮಾಧ್ಯಮ ನಿರ್ಮಾಣದಲ್ಲಿ ಸಹಯೋಗಕ್ಕಾಗಿ ರಚನಾತ್ಮಕ ಚೌಕಟ್ಟನ್ನು ಒದಗಿಸುವ ಮತ್ತು ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಆಡಿಯೋ-ವಿಶುವಲ್ ಸೃಷ್ಟಿ ಕುರಿತ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದನ್ನು ನಾಯಕರು ಸ್ವಾಗತಿಸಿದರು.
ನುರಿತ ವೃತ್ತಿಪರರ ಕ್ರಮಬದ್ಧ, ಸುರಕ್ಷಿತ ಮತ್ತು ಕಾನೂನುಬದ್ಧ ಚಲನಶೀಲತೆಗೆ ನಾಯಕರು ಬೆಂಬಲ ವ್ಯಕ್ತಪಡಿಸಿದರು. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಜನವರಿ 2026ರಲ್ಲಿ ಒಪ್ಪಿಕೊಂಡ ಚಲನಶೀಲತೆಯ ಕುರಿತಾದ ಸಮಗ್ರ ಚೌಕಟ್ಟಿನ ಸಹಕಾರವನ್ನು ಅವರು ಗಮನಿಸಿದರು. ಭಾರತ ಮತ್ತು ಸ್ಲೋವಾಕಿಯಾದ ಸಂಬಂಧಿತ ಅಧಿಕಾರಿಗಳ ನಡುವೆ ಚಲನಶೀಲತೆಯನ್ನು ಸುಗಮಗೊಳಿಸಲು ಮತ್ತು ಮಾಹಿತಿ ವಿನಿಮಯವನ್ನು ಉತ್ತೇಜಿಸಲು ಕಾರ್ಮಿಕ ವಲಸೆ ಕ್ಷೇತ್ರದಲ್ಲಿ ಸಹಕಾರದ ಕುರಿತಾದ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದನ್ನು ಅವರು ಸ್ವಾಗತಿಸಿದರು. ಭಾರತ ಮತ್ತು ಸ್ಲೋವಾಕಿಯಾ ನಡುವೆ ಚಲನಶೀಲತೆಯಲ್ಲಿ ತೊಡಗಿರುವ ಕೆಲಸ ಮಾಡುವ ವೃತ್ತಿಪರರ ಕಲ್ಯಾಣ ಮತ್ತು ಸಾಮಾಜಿಕ ರಕ್ಷಣೆಯನ್ನು ರಕ್ಷಿಸಲು ಕೊಡುಗೆ ನೀಡುವ ಸಾಮಾಜಿಕ ಭದ್ರತಾ ಒಪ್ಪಂದವನ್ನು ತ್ವರಿತವಾಗಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಎರಡೂ ಕಡೆಯವರು ಒಪ್ಪಿಕೊಂಡರು.
ಜನರ ಚಲನೆ ಮತ್ತು ಜನರಿಂದ ಜನರಿಗೆ ಸಂಬಂಧಗಳು ವಿಸ್ತರಿಸುತ್ತಿರುವುದರಿಂದ, ಕಾನ್ಸುಲರ್ ವಿಷಯಗಳಲ್ಲಿ ಸಹಕಾರವು ಎರಡೂ ದೇಶಗಳಿಗೆ ನಿರಂತರ ಆಸಕ್ತಿಯ ಕ್ಷೇತ್ರವಾಗಿ ಉಳಿದಿದೆ ಎಂದು ನಾಯಕರು ಗಮನಿಸಿದರು. ಈ ಸಂದರ್ಭದಲ್ಲಿ, ಕಾನ್ಸುಲರ್ ವಿಷಯಗಳಲ್ಲಿ ಸಹಕಾರವನ್ನು ಸುಗಮಗೊಳಿಸಲು ಆಯಾ ಕಾನ್ಸುಲರ್ ಅಧಿಕಾರಿಗಳ ನಡುವೆ ನಿಯಮಿತ ಕಾನ್ಸುಲರ್ ಸಮಾಲೋಚನೆಗಳಿಗೆ ಒಂದು ಕಾರ್ಯವಿಧಾನವನ್ನು ಸ್ಥಾಪಿಸಲು ಅವರು ಒಪ್ಪಿಕೊಂಡರು.
ಸಮಗ್ರ ಪಾಲುದಾರಿಕೆಯ ಅನುಷ್ಠಾನವನ್ನು ಸೂಕ್ತ ಕ್ರಿಯಾತ್ಮಕ ಮಟ್ಟದಲ್ಲಿ ನಿಯಮಿತವಾಗಿ ಪರಿಶೀಲಿಸಲು ನಾಯಕರು ಒಪ್ಪಿಕೊಂಡರು.
ಈ ಭೇಟಿಯು ಭಾರತ-ಸ್ಲೋವಾಕಿಯಾ ಸಂಬಂಧವನ್ನು ಪರಿವರ್ತಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಪರಸ್ಪರ ತೊಡಗಿಸಿಕೊಳ್ಳುವ ಹೊಸ ಹಂತಕ್ಕೆ ಕೊಂಡೊಯ್ಯಲು ಬದ್ಧವಾಗಿದೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು.
ಎಂ.ಇ.ಎ. ಜಾಲತಾಣದಲ್ಲಿ (ವೆಬ್ಸೈಟ್ನಲ್ಲಿ) ಲಭ್ಯವಿರುವ ಘೋಷಣೆಗಳು ಮತ್ತು ಸಹಿ ಮಾಡಿದ ಒಪ್ಪಂದಗಳನ್ನು ಪ್ರಧಾನಮಂತ್ರಿ ಸ್ವಾಗತಿಸಿದರು.
ಪ್ರಧಾನಮಂತ್ರಿ ಮೋದಿ ಅವರು ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಫಿಕೊ ಮತ್ತು ಸ್ಲೋವಾಕಿಯಾದ ಜನರಿಗೆ ಧನ್ಯವಾದ ಅರ್ಪಿಸಿದರು. ಉನ್ನತ ಮಟ್ಟದ ವಿನಿಮಯದ ವೇಗವನ್ನು ಕಾಯ್ದುಕೊಳ್ಳಲು ಇಬ್ಬರೂ ನಾಯಕರು ಒಪ್ಪಿಕೊಂಡರು.
*****
We view technology as a key pillar of the India-Slovakia partnership. The MoU on digital technology will open many new areas of cooperation. We will also work closely in AI and space. pic.twitter.com/DiSARinHrw
— Narendra Modi (@narendramodi) June 15, 2026
Held an excellent meeting with Prime Minister Fico. This is indeed a very special moment for the India-Slovakia friendship.
— Narendra Modi (@narendramodi) June 15, 2026
Considering the strong potential of our ties, we have elevated our relations to a Comprehensive Partnership.
Our talks covered cooperation in sectors… pic.twitter.com/MEBIcKhyps