ಪಿಎಂಇಂಡಿಯಾ
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ,
ಸೆಪ್ಟೆಂಬರ್ ತಿಂಗಳಲ್ಲಿ “ಮನದ ಮಾತಿನ” ಮೂಲಕ ಮತ್ತೊಮ್ಮೆ ನಿಮ್ಮನ್ನು ಭೇಟಿ ಮಾಡುವ ಅವಕಾಶ ಲಭಿಸಿದೆ. ದೇಶದ ಸಮಸ್ತ ಜನರನ್ನು ನಾನು ಸ್ವಾಗತಿಸುತ್ತೇನೆ. “ಮನದ ಮಾತು” ನಲ್ಲಿ, ನಮ್ಮ ನಾಗರಿಕರ ಸಕಾರಾತ್ಮಕ ಪ್ರಯತ್ನಗಳಿಗೆ ನಾವು ವೇದಿಕೆಯನ್ನು ಒದಗಿಸುತ್ತೇವೆ. ನಾವು ದೇಶದ ಸಾಧನೆಗಳನ್ನು ಚರ್ಚಿಸುತ್ತೇವೆ. ಒಂದು ದಿನದ ನಂತರ ಭಾರತದ ಅಂತಹ ಒಂದು ಮಹತ್ವದ ಐತಿಹಾಸಿಕ ಸಾಧನೆಗೆ 10 ವರ್ಷಗಳು ತುಂಬಲಿವೆ. ಆ ಸಾಧನೆ ಯಾವುದೆಂದರೆ “ಸರ್ಜಿಕಲ್ ಸ್ಟ್ರೈಕ್”. ಹತ್ತು ವರ್ಷಗಳ ಹಿಂದೆ, ಸೆಪ್ಟೆಂಬರ್ 28-29, 2016 ರಂದು, ಭಾರತೀಯ ಸೇನೆಯು ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಗಡಿ ನಿಯಂತ್ರಣ ರೇಖೆಯನ್ನು ದಾಟಿ ನಮ್ಮ ಧೀರ ಸೈನಿಕರು ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಂಡ ರೀತಿಯನ್ನು ನೋಡಿ ಜಗತ್ತು ಆಶ್ಚರ್ಯಚಕಿತಗೊಂಡಿತ್ತು. ಭಾರತದ ಭಯೋತ್ಪಾದನಾ ವಿರೋಧಿ ನೀತಿಯ ಹೊಸ ಉದಾಹರಣೆಯನ್ನು ಇಡೀ ಜಗತ್ತಿಗೆ ಧೈರ್ಯದಿಂದ ಸರ್ಜಿಕಲ್ ಸ್ಟ್ರೈಕ್ ಮೂಲಕ ಸಾರಿ ಹೇಳಲಾಯಿತು. ಭಯೋತ್ಪಾದಕ ದಾಳಿಯಿಂದಾಗಿ ಭಾರತ ಅನುಭವಿಸಿದ ಸುದೀರ್ಘ ಕಾಲದ ನೋವಿಗೆ “ಸರ್ಜಿಕಲ್ ಸ್ಟ್ರೈಕ್” ನಮ್ಮ ನಿರ್ಣಾಯಕ ಪ್ರತಿಕ್ರಿಯೆಯಾಗಿತ್ತು. ಕಳೆದ ದಶಕದಲ್ಲಿ, ಬಾಲಾಕೋಟ್ ವೈಮಾನಿಕ ದಾಳಿಯಿಂದ ಆಪರೇಷನ್ ಸಿಂಧೂರ್ ವರೆಗೆ, ಭಯೋತ್ಪಾದಕರು ಭಾರತದತ್ತ ದೃಷ್ಟಿ ಹಾಯಿಸುವ ಧೈರ್ಯ ಮಾಡಿದರೆ, ಅವರಿಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ಭಾರತ ಪದೇ ಪದೇ ಸ್ಪಷ್ಟ ಸಂದೇಶವನ್ನು ನೀಡಲಾಗಿದೆ.
ಸ್ನೇಹಿತರೇ,
ಭಾರತವನ್ನು ದೀರ್ಘಕಾಲದಿಂದಲೂ ಭಯೋತ್ಪಾದಕ ದಾಳಿಗಳು ತೀವ್ರವಾಗಿ ಕಾಡಿವೆ. ಒಂದು ಕಾಲದಲ್ಲಿ ದೇಶದಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆಯುವುದು ಸಾಮಾನ್ಯ ಎಂಬಂತಾಗಿತ್ತು. ಇದೇ ಸೆಪ್ಟೆಂಬರ್ ತಿಂಗಳಲ್ಲಿ, ಅಂದರೆ 2008ರ ಸೆಪ್ಟೆಂಬರ್ 13ರಂದು ದೆಹಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ ಅನೇಕ ನಿರಪರಾಧಿಗಳು ಪ್ರಾಣ ಕಳೆದುಕೊಂಡಿದ್ದರು. ಇದಾದ ಕೆಲವೇ ವಾರಗಳ ಬಳಿಕ ಮುಂಬೈನಲ್ಲಿ 26/11ರ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಸ್ನೇಹಿತರೇ, ಹಿಂದೆಯೂ ಪ್ರತಿ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿಬರುತ್ತಲೇ ಇದ್ದವು. ಆದರೆ, ಈ ಬೇಡಿಕೆಗಳತ್ತ ಅಷ್ಟಾಗಿ ಗಮನಹರಿಸಲಾಗುತ್ತಿರಲಿಲ್ಲ. ಕಾಲ ಕಳೆದಂತೆ ಪರಿಸ್ಥಿತಿ ತಣ್ಣಗಾಗಬಹುದೆಂಬ ನಿರೀಕ್ಷೆಯಲ್ಲಿ ಕಾಯಲಾಗುತ್ತಿತ್ತು. ಆದರೆ, ಇಂದು ಭಾರತ ಭಯೋತ್ಪಾದನೆಯ ವಿರುದ್ಧ Zero-tolerance Policy ಯೊಂದಿಗೆ ಮುನ್ನಡೆಯುತ್ತಿದೆ. ಅಲ್ಲದೆ ಇಂದು ಅದರ ಪರಿಣಾಮಗಳನ್ನೂ ನಾವೀಗ ನೋಡುತ್ತಿದ್ದೇವೆ. ಸ್ನೇಹಿತರೇ, 9/11ರ ಭಯೋತ್ಪಾದಕ ದಾಳಿಗೂ ಈ ವರ್ಷ 25 ವರ್ಷಗಳು ಪೂರ್ಣಗೊಳ್ಳುತ್ತಿವೆ. ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ಆ ಭೀಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ನಿರಪರಾಧಿಗಳ ಪೈಕಿ, ಅತಿ ಹೆಚ್ಚಿನ ಸಂಖ್ಯೆಯವರು ಅಮೆರಿಕನ್ನರ ನಂತರ ಭಾರತೀಯರೇ ಆಗಿದ್ದರು. 2014ರಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಾನು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಈ ನಿರಪರಾಧ ನಾಗರಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲು ನ್ಯೂಯಾರ್ಕ್‌ಗೆ ತೆರಳಿದ್ದೆ ಎಂಬುದು ನನಗೆ ನೆನಪಿದೆ. ಇಂದು ಮತ್ತೊಮ್ಮೆ, ಭಾರತದ ಕೋಟ್ಯಂತರ ನಾಗರಿಕರ ಪರವಾಗಿ, ಆ ಭೀಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ,
ಇತ್ತೀಚಿನ ದಿನಗಳಲ್ಲಿ ದೇಶದ ಒಂದು ಬಹುದೊಡ್ಡ ಚಿತ್ರಣ ರೂಪುಗೊಳ್ಳುತ್ತಿದೆ. ಈ ಚಿತ್ರಣದಲ್ಲಿ ನೀವೂ ಇದ್ದೀರಿ, ನಿಮ್ಮ ಕುಟುಂಬವೂ ಇದೆ, ನಿಮ್ಮ ನೆರೆ ಹೊರೆಯವರೂ ಇದ್ದಾರೆ. ನಾನು ಭಾರತದ ಜನಗಣತಿಯ ಕುರಿತು ಮಾತನಾಡುತ್ತಿದ್ದೇನೆ. ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಗಣತಿಯ ಮೊದಲ ಹಂತದ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈಗಾಗಲೇ 32 ಕೋಟಿಗೂ ಹೆಚ್ಚು ಕುಟುಂಬಗಳ ಮಾಹಿತಿಯನ್ನು ದಾಖಲಿಸಲಾಗಿದೆ. ಈ ಮಧ್ಯೆ ಲಡಾಖ್, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಉತ್ತರಾಖಂಡದ ದುರ್ಗಮ ಹಾಗೂ ಹಿಮಾವೃತ ಪ್ರದೇಶಗಳಲ್ಲಿಯೂ ಜನಗಣತಿಯ ಕಾರ್ಯ ಮುಂದುವರಿದಿದೆ. ಅಲ್ಲಿ ಹಲವು ಪ್ರೇರಣಾದಾಯಕ ಅನುಭವಗಳು ನಮ್ಮ ಮುಂದೆ ಬಂದಿವೆ. ಉತ್ತರಾಖಂಡದಲ್ಲಿ ಜನಗಣತಿಯ ಕಾರ್ಯವು ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಿಂದ ಆರಂಭವಾಯಿತು. ಮಾಣಾವನ್ನು ದೇಶದ ಮೊದಲ ಗ್ರಾಮ ಎಂದು ಕರೆಯಲಾಗುತ್ತದೆ. ಮಾಣಾದಲ್ಲಿ 83 ವರ್ಷದ ಪೂರ್ಣಿಮಾ ರಾವತ್ ಅವರಿಂದಲೇ ಜನಗಣತಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಉತ್ತರಕಾಶಿಯ ಬಗೋರಿ ಗ್ರಾಮದಲ್ಲಿ Homestay ನಡೆಸುತ್ತಿರುವ ಹರದೇವ್ ಸಿಂಗ್ ರಾಣಾ ಅವರು ಡಿಜಿಟಲ್ ಮಾಧ್ಯಮದ ಮೂಲಕ ತಮ್ಮ ಮಾಹಿತಿಯನ್ನು ಸ್ವತಃ ದಾಖಲಿಸಿಕೊಂಡರು.
ಸ್ನೇಹಿತರೇ,
ಜನಗಣತಿ ಎಂಬುದು ನಮ್ಮೆಲ್ಲರ ರಾಷ್ಟ್ರೀಯ ಕರ್ತವ್ಯವಾಗಿದೆ. ಜನಗಣತಿಗಾಗಿ ನಿಮ್ಮ ಸಮಯವನ್ನು ಕಡ್ಡಾಯವಾಗಿ ಮೀಸಲಿಡಿ ಎಂದು ಆಗಸ್ಟ್ 15ರಂದು ನಾನು ದೇಶವಾಸಿಗಳಿಗೆ ಮನವಿ ಮಾಡಿದ್ದೆ. ಜನಗಣತಿಗಾಗಿ ಸ್ವಯಂ ತಮ್ಮ ಮಾಹಿತಿಯನ್ನು ದಾಖಲಿಸುವ ಈ ಸೌಲಭ್ಯ ಅತ್ಯಂತ ಸುಲಭವಾಗಿದೆ. ನಿಮ್ಮ ಮೊಬೈಲ್ ಮೂಲಕವೇ ನೀವು ನಿಮ್ಮ ಮತ್ತು ನಿಮ್ಮ ಕುಟುಂಬದ ಮಾಹಿತಿಯನ್ನು ದಾಖಲಿಸಬಹುದು. ಈ ಸೌಲಭ್ಯ ಹಿಂದಿ ಸೇರಿದಂತೆ 16 ಭಾಷೆಗಳಲ್ಲಿ ಲಭ್ಯವಿದೆ. ಸ್ನೇಹಿತರೇ, ಇದಕ್ಕಾಗಿ ನೀವು ಜನಗಣತಿಯ ಆನ್‌ಲೈನ್ ಪೋರ್ಟಲ್‌ಗೆ ಹೋಗಬೇಕು. ಪೋರ್ಟಲ್‌ನಲ್ಲಿರುವ se.census.gov.in ಗೆ ತೆರಳಿ, ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಮಾಡಿ. ಬಳಿಕ ನಿಮ್ಮ ಸ್ಥಳದ ವಿವರಗಳನ್ನು ನಮೂದಿಸಿ, ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಿ ಮತ್ತು Submit ಮಾಡಿ. ಈ ಸಂಪೂರ್ಣ ಪ್ರಕ್ರಿಯೆಗೆ ಸುಮಾರು 15ರಿಂದ 20 ನಿಮಿಷಗಳ ಸಮಯ ಬೇಕಾಗುತ್ತದೆ. ಇದಕ್ಕಾಗಿ ಯಾವುದೇ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಅಗತ್ಯವಿಲ್ಲ. ನೀವು ಮಾಹಿತಿಯನ್ನು ಸಲ್ಲಿಸಿದ ಬಳಿಕ ನಿಮಗೆ ಒಂದು ವಿಶೇಷ ಐಡಿ ದೊರೆಯುತ್ತದೆ. ಗಣತಿ ಮಾಡುವ ಸಿಬ್ಬಂದಿ ನಿಮ್ಮ ಮನೆಗೆ ಭೇಟಿ ನೀಡಿದಾಗ, ಅವರಿಗೆ ಈ ಐಡಿಯನ್ನು ತಿಳಿಸಬಹುದು. ನೀವು ನೀಡಿರುವ ಮಾಹಿತಿಯನ್ನು ಪರಿಶೀಲಿಸಿ ದೃಢಪಡಿಸಿದ ಬಳಿಕ ಅದು ಜನಗಣತಿಯ ಭಾಗವಾಗುತ್ತದೆ. ಸ್ನೇಹಿತರೇ, ಇದುವರೆಗೆ 2 ಕೋಟಿ 60 ಲಕ್ಷಕ್ಕೂ ಹೆಚ್ಚು ಜನರು ಮೊಬೈಲ್ ಮೂಲಕ ಜನಗಣತಿ ಪೋರ್ಟಲ್‌ನಲ್ಲಿ ತಮ್ಮ ಮಾಹಿತಿಯನ್ನು ದಾಖಲಿಸಿ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿದ್ದಾರೆ. ನಿಮ್ಮದೂ ಸ್ವಲ್ಪ ಸಮಯ ಇದಕ್ಕಾಗಿ ಖರ್ಚಾಗುತ್ತದೆ. ಆದರೆ, ದೇಶದ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಕಾರ್ಯವಾಗಿದೆ. ಏಕೆಂದರೆ, ನಿಮ್ಮ ಸರಿಯಾದ ಮಾಹಿತಿ ಮತ್ತು ನಿಮ್ಮ ಕುಟುಂಬದ ಸರಿಯಾದ ಮಾಹಿತಿಯೇ ದೇಶದ ಭವಿಷ್ಯದ ನಿಖರ ಚಿತ್ರಣವನ್ನು ರೂಪಿಸಲು ನೆರವಾಗುತ್ತದೆ.
ನನ್ನ ಪ್ರಿಯ ದೇಶವಾಸಿಗಳೇ,
ಇಂದು ಸೆಪ್ಟೆಂಬರ್ 27, ಈ ದಿನಾಂಕವು ವಿಶೇಷ ಕಾರಣಕ್ಕಾಗಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಇಂದು ಸಂಸ್ಕೃತಿ, ಸಮಾಜ ಮತ್ತು ರಾಷ್ಟ್ರಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿರಿಸಿದ್ದ ಮಹಾನ್ ವ್ಯಕ್ತಿಯೊಬ್ಬರ ಜನ್ಮ ಶತಾಬ್ದಿ. ವಿಶ್ವ ಹಿಂದೂ ಪರಿಷತ್‌ನ ಮಾಜಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ದಿವಂಗತ, ಪೂಜ್ಯ ಅಶೋಕ್ ಸಿಂಘಾಲ್ ಅವರ ಕುರಿತು ನಾನು ಮಾತನಾಡುತ್ತಿರುವೆ. 1926ರ ಸೆಪ್ಟೆಂಬರ್ 27ರಂದು ಇದೇ ದಿನ ಅವರು ಆಗ್ರಾದಲ್ಲಿ ಜನಿಸಿದರು. ಅವರು ಸಮಾಜದಲ್ಲಿದ್ದುಕೊಂಡೇ ತಪಸ್ವಿ ಜೀವನ ನಡೆಸಿದರು. ರಾಮ ಜನ್ಮಭೂಮಿ ಚಳುವಳಿಗೆ ಅವರ ನಿರ್ದೇಶನ ಮತ್ತು ಶಕ್ತಿಯ ಫಲವೇ ಇಂದು ಅಯೋಧ್ಯೆಯಲ್ಲಿ ನಾವು ಭವ್ಯ ರಾಮಮಂದಿರವನ್ನು ಸಾಕ್ಷಾತ್ ಕಾಣುವಂತಾಗಿದೆ. ನನ್ನ ಪಾಲಿಗೆ ಇದು ಅತ್ಯಂತ ದೊಡ್ಡ ಸೌಭಾಗ್ಯ. ಅವರ ಜೀವನವನ್ನು ಹತ್ತಿರದಿಂದ ನೋಡುವ ಅವಕಾಶ ಮಾತ್ರವಲ್ಲದೆ, ಅವರೊಂದಿಗೆ ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುವ ಅವಕಾಶವೂ ನನಗೆ ಲಭಿಸಿತ್ತು. ನಾನು ರಾಮಮಂದಿರದ ಪ್ರಾಣಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾಗಲೂ ಅಶೋಕ್ ಅವರ ನೆನಪು ಪದೇ ಪದೇ ಕಾಡುವುದು ಸಹಜವಾಗಿತ್ತು. ಸ್ನೇಹಿತರೇ, ಅಶೋಕ್ ಅವರ ಕುರಿತು ಚರ್ಚೆಯಾಗದ ಇಂತಹ ಅನೇಕ ಸಂಗತಿಗಳಿವೆ. ರಾಮಮಂದಿರ ಆಂದೋಲನದ ಜೊತೆ ಜೊತೆಗೆ ಅವರು ಸಾಮಾಜಿಕ ಭೇದಭಾವ ಮತ್ತು ಅಸಮಾನತೆಯ ವಿರುದ್ಧವೂ ದೊಡ್ಡ ಹೋರಾಟ ನಡೆಸಿದ್ದರು. ಅವರು ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರು. ಅವರ ತಂದೆ ನಾಗರಿಕ ಸೇವಾ ಅಧಿಕಾರಿಯಾಗಿದ್ದರು. ಅವರ ಸಹೋದರ-ಸಹೋದರಿಯರಲ್ಲಿಯೂ ಬಹುತೇಕರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಸ್ವತಃ ಅಶೋಕ್ ಅವರು ಕೂಡ IIT BHU ನಲ್ಲಿ ಪದವಿ ಪಡೆದಿದ್ದರು. ಆದರೆ, ಇಷ್ಟೆಲ್ಲಾ ಸೌಲಭ್ಯಗಳು ಮತ್ತು ಅವಕಾಶಗಳಿದ್ದರೂ ಅವರು ತಮ್ಮ ಜೀವನವನ್ನು ಸಮಾಜ ಮತ್ತು ಸಂಸ್ಕೃತಿಯ ಸೇವೆಗೆ ಮುಡಿಪಾಗಿರಿಸಿದ್ದರು. ಇದೇ ಮಹಾನ್ ವ್ಯಕ್ತಿಗಳ ಹೆಗ್ಗುರುತಾಗಿರುತ್ತದೆ. ಇಂದು ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ, ಅವರ ಕೋಟ್ಯಂತರ ಅಭಿಮಾನಿಗಳ ಪರವಾಗಿ ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ನನ್ನ ಪರವಾಗಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ,
ನಾವು ಈ ವರ್ಷವನ್ನು ರಾಷ್ಟ್ರೀಯ ಹೆಮ್ಮೆಯ ಸಂಕೇತವಾದ ‘ಸೋಮನಾಥ ಸ್ವಾಭಿಮಾನ ಪರ್ವ’ದ ಭವ್ಯ ಆಚರಣೆಯೊಂದಿಗೆ ಪ್ರಾರಂಭಿಸಿದೆವು. ಸಾವಿರ ವರ್ಷಗಳ ಹಿಂದೆ, ಅಂದರೆ 1026ರಲ್ಲಿ, ಮೊದಲ ಬಾರಿಗೆ, ಮೊಹಮ್ಮದ್ ಗಜ್ನಿ ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿದ್ದನು. ಆದರೆ, ಸೋಮನಾಥವನ್ನು ಧ್ವಂಸಗೊಳಿಸುವ ಮೂಲಕ ಭಾರತದ ಅಸ್ಮಿತೆಯನ್ನು ಅಳಿಸಿಹಾಕಲು ಬಂದವರ ಅಸ್ತಿತ್ವವೇ ಇಂದು ಇಲ್ಲವಾಗಿದೆ. ಆದರೆ, ಸೋಮನಾಥ ದೇವಾಲಯ ಮಾತ್ರ ವಿಶಾಲ ಸಾಗರದ ದಡದಲ್ಲಿ ತನ್ನ ಭವ್ಯತೆಯೊಂದಿಗೆ ನಿಂತು, ಭಾರತಕ್ಕೆ ಅಮರತ್ವದ ಆಶೀರ್ವಾದವನ್ನು ನೀಡುತ್ತಿದೆ. ಆದ್ದರಿಂದಲೇ ನಾವು ಈ ವರ್ಷ ‘ಸೋಮನಾಥ ಸ್ವಾಭಿಮಾನ ಪರ್ವ’ವನ್ನು ಅತ್ಯಂತ ಹೆಮ್ಮೆಯಿಂದ ಆಚರಿಸಿದೆವು. ಸ್ನೇಹಿತರೇ, ಇಂದು ‘ಮನದ ಮಾತು’ನಲ್ಲಿ ನಾನು ಮತ್ತೆ ಈ ವಿಚಾರವನ್ನು ಏಕೆ ಪ್ರಸ್ತಾಪಿಸುತ್ತಿದ್ದೇನೆ ಎಂಬುದಕ್ಕೂ ಒಂದು ವಿಶೇಷ ಕಾರಣವಿದೆ. 1026ರಲ್ಲಿ ಗಜ್ನಿ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದಾಗ, ಅದೇ ವರ್ಷ ಗುಜರಾತ್‌ನ ಮೋಢೇರಾದಲ್ಲಿರುವ ಪ್ರಸಿದ್ಧ ಸೂರ್ಯ ದೇವಾಲಯದ ಮೇಲೆಯೂ ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಲಾಗಿತ್ತು. ಅಂದರೆ, ಮೋಢೇರಾ ಸೂರ್ಯ ದೇವಾಲಯದ ಧ್ವಂಸಕ್ಕೂ ಈ ವರ್ಷ ಒಂದು ಸಾವಿರ ವರ್ಷಗಳು ಪೂರ್ಣಗೊಳ್ಳುತ್ತಿವೆ. ವಿಶೇಷವೆಂದರೆ, ಆ ಸಂದರ್ಭದಲ್ಲಿ ಈ ದೇವಾಲಯ ನಿರ್ಮಾಣಗೊಂಡು ಕೇವಲ ಒಂದು ವರ್ಷವಷ್ಟೇ ಆಗಿತ್ತು. 1025ರಲ್ಲಿ ರಾಜ ಭೀಮದೇವರು ಈ ದೇವಾಲಯವನ್ನು ನಿರ್ಮಿಸಿದ್ದರು. ಸ್ನೇಹಿತರೇ, ಆ ಕಾಲಘಟ್ಟದ ಕುರಿತು ಒಮ್ಮೆ ಯೋಚಿಸಿ. ಇಂತಹ ದೊಡ್ಡ ಆಕ್ರಮಣ ನಡೆದಾಗ, ಸೋಮನಾಥ ದೇವಾಲಯದಂತಹ ಮಹತ್ವದ ಶ್ರದ್ಧಾಕೇಂದ್ರ ಧ್ವಂಸಗೊಂಡಾಗ, ಜೊತೆಗೆ ಹಲವು ಸ್ಥಳಗಳ ಮೇಲೆಯೂ ದಾಳಿಗಳು ನಡೆದಾಗ, ಯಾವುದೇ ಸಮಾಜ ಅಥವಾ ಆಡಳಿತದ ಮನೋಬಲ ಕುಗ್ಗುವ ಸಾಧ್ಯತೆಯಿತ್ತು. ಆದರೆ, ಮೊದಲ ರಾಜ ಭೀಮದೇವ ಅವರು ಗಜ್ನಿಯ ಆಕ್ರಮಣವನ್ನು ಎದುರಿಸಿದ್ದಷ್ಟೇ ಅಲ್ಲ, ಕೆಲವೇ ಸಮಯದಲ್ಲಿ ಮೋಢೇರಾ ಸೂರ್ಯ ದೇವಾಲಯವನ್ನು ಪುನರ್‌ನಿರ್ಮಿಸುವ ಕಾರ್ಯವನ್ನೂ ಕೈಗೊಂಡರು. ಇಂತಹ ದೃಢಸಂಕಲ್ಪವೇ ಸೋಮನಾಥ ದೇವಾಲಯ ಪದೇಪದೇ ಧ್ವಂಸಗೊಂಡರೂ ಮತ್ತೆ ಮತ್ತೆ ಪುನರ್‌ನಿರ್ಮಾಣಗೊಳ್ಳುಲು ಕಾರಣವಾಯಿತು.
ಸ್ನೇಹಿತರೆ,
ಮೋಢೇರಾ ಸೂರ್ಯ ದೇವಾಲಯದ ಮೇಲಿನ ದಾಳಿಗಳು ನಂತರದ ಕಾಲಘಟ್ಟದಲ್ಲಿಯೂ ನಿಂತಿರಲಿಲ್ಲ. ಬಳಿಕ ಅಲಾವುದ್ದೀನ್ ಖಿಲ್ಜಿಯೂ ಈ ಅದ್ಭುತ ವಾಸ್ತುಶಿಲ್ಪದ ದೇವಾಲಯದ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಿದ್ದ. ಆದರೆ, ಸ್ನೇಹಿತರೆ, ಭಾರತೀಯರಾದ ನಾವು ಸೂರ್ಯನನ್ನು ಕೇವಲ ವಾಸ್ತುಶಿಲ್ಪ ಅಥವಾ ದೇವಾಲಯಗಳ ರೂಪದಲ್ಲಿ ಮಾತ್ರ ಆರಾಧಿಸುವುದಿಲ್ಲ. ಬೆಳಕು, ಶಕ್ತಿ, ವಿಜ್ಞಾನ ಮತ್ತು ನಿರಂತರತೆಯ ಸ್ಫೂರ್ತಿ – ನಮ್ಮ ಸೂರ್ಯೋಪಾಸನೆಯ ಮತ್ತೊಂದು ಅರ್ಥವಾಗಿದೆ. ಅದಕ್ಕಾಗಿಯೇ ಇಂದು ಮೋಢೇರಾ ಕೇವಲ ಸೂರ್ಯ ದೇವಾಲಯಕ್ಕೆ ಮಾತ್ರ ಜನಪರೀಯವಾಗಿಲ್ಲ,. ಗುಜರಾತ್‌ನ ಈ ಗ್ರಾಮ ದೇಶದ ಮೊದಲ ‘ಸೂರ್ಯ ಗ್ರಾಮ’ – Solar Village ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಮೋಢೇರಾ ಇಂದು ಸಂಪೂರ್ಣವಾಗಿ ಸೌರಶಕ್ತಿಯನ್ನಾಧರಿಸಿ ಕಾರ್ಯನಿರ್ವಹಿಸುತ್ತಿದ್ದು, ದೇಶಕ್ಕೆ ಸುಸ್ಥಿರ ಅಭಿವೃದ್ಧಿಯ ಒಂದು ಮಾದರಿಯನ್ನು ಪ್ರಸ್ತುತಪಡಿಸಿದೆ. ಮೋಢೇರಾದಲ್ಲಿ ಪ್ರವಾಸಿಗರಿಗಾಗಿ ಹಲವಾರು ಆಕರ್ಷಣೆಗಳು ಮತ್ತು ಸೌಲಭ್ಯಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಜನವರಿಯಲ್ಲಿ ಮಕರ ಸಂಕ್ರಾಂತಿಯ ಬಳಿಕ ಮೋಢೇರಾ ನೃತ್ಯ ಮಹೋತ್ಸವವನ್ನು ಆಯೋಜಿಸಲಾಗುತ್ತದೆ. ಈ ಮಹೋತ್ಸವದಲ್ಲಿ ಭಾರತದ ವಿವಿಧ ಸಾಂಸ್ಕೃತಿಕ ಹಾಗೂ ಶಾಸ್ತ್ರೀಯ ನೃತ್ಯ ಪ್ರಕಾರಗಳ ಅದ್ಭುತ ಪ್ರದರ್ಶನಗಳು ನಡೆಯುತ್ತವೆ. ನೀವೆಲ್ಲರೂ ಕೂಡಾ ಮೋಢೇರಾಕ್ಕೆ ಒಮ್ಮೆಯಾದರೂ ಭೇಟಿ ನೀಡಿ, ಭಾರತದ ಈ ಹೆಮ್ಮೆಯ ಪರಂಪರೆಯ ದರ್ಶನ ಪಡೆಯಿರಿ ಎಂದು ನಾನು ಬಯಸುತ್ತೇನೆ.
ಸ್ನೇಹಿತರೆ,
ಭೂತಕಾಲದೊಂದಿಗಿನ ನಮ್ಮ ನಂಟು ಇಂದಿಗೂ ಜೀವಂತವಾಗಿದೆ. ಈ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿರುವವರ ಸಮರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮವೇ ಇದಕ್ಕೆ ಕಾರಣ. ತಮಿಳುನಾಡಿನ ತಿರುಚಿರಾಪಳ್ಳಿಯ ಮನಪ್ಪಾರೈನಲ್ಲಿ ಇಂತಹದ್ದೇ ಒಂದು ವಿಶಿಷ್ಟ ಪ್ರಯತ್ನ ನಡೆಯುತ್ತಿದೆ. ಅಲ್ಲಿನ ಕಾಲೇಜೊಂದರ ತಮಿಳು ಅಧ್ಯಯನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎ. ಸೆಲ್ವರಾಜು ಅವರು ಈ ಪ್ರಯತ್ನವನ್ನು ಮುಂದುವರಿಸುತ್ತಿದ್ದಾರೆ. ಒಂದು ಉಪನ್ಯಾಸದ ಸಂದರ್ಭದಲ್ಲಿ ತಮ್ಮ ವಿದ್ಯಾರ್ಥಿಯೊಬ್ಬರಿಂದ ಅವರಿಗೆ ಕೆಲವು ಪ್ರಾಚೀನ ಪ್ರತಿಮೆಗಳ ಕುರಿತು ಮಾಹಿತಿ ದೊರೆಯಿತು. ಈ ಕುರಿತು ಚರ್ಚಿಸಿದ ಬಳಿಕ ಅವರು ಸ್ಥಳ ಪರಿಶೀಲನೆಗೆ ತೆರಳಲು ಯೋಜಿಸಿದರು. ಈ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ವಿವಿಧ ಸ್ಥಳಗಳಲ್ಲಿ ಹಲವು ಪ್ರಾಚೀನ ಪ್ರತಿಮೆಗಳು ಹಾಗೂ ಪುರಾತನ ದೇವಾಲಯಗಳು ಅವರ ಗಮನಕ್ಕೆ ಬಂದವು. ಭೂತಕಾಲದೊಂದಿಗೆ ಬೆಸೆಯುವ ನಿಟ್ಟಿನಲ್ಲಿ ಇದೊಂದು ಆಸಕ್ತಿದಾಯಕ ಪ್ರಯತ್ನವಾಗಿದೆ. ಇಂತಹ ಪ್ರಯತ್ನಗಳ ಮೂಲಕ ನಮ್ಮ ಪರಂಪರೆಯನ್ನು ಇನ್ನಷ್ಟು ಉತ್ತಮವಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ದೇಶದ ಇತರ ಭಾಗಗಳಲ್ಲಿಯೂ ಇಂತಹ ಪ್ರಯತ್ನಗಳನ್ನು ಕೈಗೊಳ್ಳಬಹುದು. ಇವು ನಮ್ಮ ಇತಿಹಾಸವನ್ನು ಹತ್ತಿರದಿಂದ ನೋಡುವುದಷ್ಟೇ ಅಲ್ಲದೆ, ಅದನ್ನು ಆಳವಾಗಿ ತಿಳಿದುಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ಅವಕಾಶವನ್ನೂ ಕಲ್ಪಿಸುತ್ತವೆ.
ನನ್ನ ಪ್ರಿಯ ದೇಶವಾಸಿಗಳೇ,
ಇನ್ನು ಕೆಲವೇ ದಿನಗಳಲ್ಲಿ ಅಕ್ಟೋಬರ್ 2ರಂದು ಪೂಜ್ಯ ಬಾಪೂಜಿ ಅವರ ಜಯಂತಿಯಿದೆ. ಬಾಪೂಜಿ ಅವರು ನಮಗೆ ಜೀವನದ ಹಲವು ಮೌಲ್ಯಗಳನ್ನು ನೀಡಿದ್ದಾರೆ. ಅವುಗಳಲ್ಲಿ ಸ್ವಚ್ಛತೆಯೂ ಒಂದಾಗಿದೆ. ನಾವು ನಮ್ಮ ಸುತ್ತಮುತ್ತ ಸ್ವಚ್ಛತೆಗೆ ಸಂಬಂಧಿಸಿದ ಹಲವು ಪ್ರಯತ್ನಗಳನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಇಂತಹ ಪ್ರಯತ್ನಗಳು ನಮಗೆ ಸ್ಫೂರ್ತಿ ನೀಡುವುದರ ಜೊತೆಗೆ ಉತ್ಸಾಹವನ್ನೂ ಹೆಚ್ಚಿಸುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಇಂತಹ ಚಿತ್ರಗಳು, ವಿಡಿಯೋಗಳು ಹಾಗೂ ರೀಲ್ಸ್‌ಗಳು ಪದೇಪದೇ ನಮ್ಮ ಗಮನ ಸೆಳೆಯುತ್ತವೆ. ಇತ್ತೀಚಿನ ದಿನಗಳಲ್ಲಿ ನಾನು ಇಂತಹ ಹಲವು ಪ್ರಯತ್ನಗಳನ್ನು ಗಮನಿಸಿದ್ದೇನೆ. ಮಧ್ಯಪ್ರದೇಶದಲ್ಲಿ ಕೆಲವು ಯುವಕರು ನದಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಣ್ಣ ಪ್ರಯತ್ನಕ್ಕೆ ಇಡೀ ಸಮಾಜವೇ ಕೈಜೋಡಿಸುತ್ತಿದೆ. ಅದೇ ರೀತಿ, ಆಂಧ್ರಪ್ರದೇಶದಲ್ಲಿ ಯುವಕರು ಹಳೆಯ ಬಾವಿಗಳು ಮತ್ತು ಮೆಟ್ಟಿಲು ಬಾವಿಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಇದರಿಂದ ನಮ್ಮ ಪ್ರಾಚೀನ ಪರಂಪರೆಯ ತಾಣಗಳನ್ನು ಮತ್ತೆ ಸಂರಕ್ಷಿಸಿ ಸುಂದರಗೊಳಿಸುವ ಕೆಲಸವೂ ಆಗುತ್ತಿದೆ. ಮುಂಬೈನಲ್ಲಿ ಕೆಲವು ಯುವಕರು ಸಮುದ್ರ ತೀರಗಳನ್ನು ಸ್ವಚ್ಛವಾಗಿಡುವ ಅಭಿಯಾನಕ್ಕೆ ಮುಂದಾಗಿದ್ದಾರೆ. ಪ್ರತಿ ವಾರ ಒಂದಲ್ಲ ಒಂದು ಕಡಲತೀರದಲ್ಲಿ ನೂರಾರು ಯುವ ಸ್ನೇಹಿತರು ಒಗ್ಗೂಡಿ, ಸ್ವಚ್ಛತೆಯ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ದೆಹಲಿಯಲ್ಲಿ ಮಕ್ಕಳು ಮತ್ತು ಯುವಕರು ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ವಿಲೇವಾರಿ ಮಾಡುವಂತೆ ಹಾಗೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಯುವ ವಿದ್ಯಾರ್ಥಿಗಳು ಸ್ಥಳೀಯ ಜನರೊಂದಿಗೆ ಬೆರೆತು ಪ್ರವಾಸಿ ತಾಣಗಳು ಹಾಗೂ ಮಾರುಕಟ್ಟೆ ಪ್ರದೇಶಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ನೇಹಿತರೆ, ಈ ಎಲ್ಲಾ ಪ್ರಯತ್ನಗಳಲ್ಲಿ ಒಂದು ವಿಷಯ ಸಹಜವಾಗಿಯೇ ಗೋಚರಿಸುತ್ತದೆ. ಎಲ್ಲೋ ಒಬ್ಬ ವ್ಯಕ್ತಿ ಆರಂಭಿಸಿದ ಪ್ರಯತ್ನಕ್ಕೆ ಮತ್ತಷ್ಟು ಜನರು ಕೈಜೋಡಿಸುತ್ತಾರೆ. ಹೀಗೆ ಅಭಿಯಾನ ಮುಂದುವರಿಯುತ್ತಾ, ದೊಡ್ಡ ಜನಾಂದೋಲನವಾಗಿ ರೂಪುಗೊಳ್ಳುತ್ತದೆ. ಇದೇ ಜನರ ಪಾಲುದಾರಿಕೆಯಾಗಿದೆ. ಬಾಪೂಜಿಗೆ ನಾವು ಸಲ್ಲಿಸಬಹುದಾದ ಅತ್ಯಂತ ಸುಂದರ ಶ್ರದ್ಧಾಂಜಲಿಯೂ ಸ್ವಚ್ಛತೆಯೇ ಆಗಿದೆ.
ನನ್ನ ಪ್ರಿಯ ದೇಶವಾಸಿಗಳೇ,
ನಾವು ಪರಿಸರವನ್ನು ರಕ್ಷಿಸಿದಾಗ, ಕೇವಲ ಮರಗಳು, ಸಸ್ಯಗಳು ಅಥವಾ ವನ್ಯಜೀವಿಗಳನ್ನು ಮಾತ್ರ ಸಂರಕ್ಷಿಸುವುದಿಲ್ಲ, ಹೊರತಾಗಿ, ಆ ಸಂಪೂರ್ಣ ಜೀವಗಳ ಪರಿಸರ ವ್ಯವಸ್ಥೆಯನ್ನೇ ಬಲಪಡಿಸುತ್ತೇವೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಇಂತಹ ಉಪಕ್ರಮಗಳು ಇದೇ ಭಾವನೆಯನ್ನು ಅತ್ಯಂತ ಸುಂದರವಾಗಿ ಪ್ರಸ್ತುತಪಡಿಸುತ್ತಿವೆ
ಸ್ನೇಹಿತರೆ,
ಅಸ್ಸಾಂನಲ್ಲಿ ಸೋನಾಯಿ ರೂಪಾಯಿ ವನ್ಯಜೀವಿ ಅಭಯಾರಣ್ಯವಿದೆ. ಇಲ್ಲಿ ಆನೆಗಳು ವಾಸಿಸುತ್ತಿದ್ದ ಕಾಲವೊಂದಿತ್ತು. ಆದರೆ ಕಾಲಕ್ರಮೇಣ ಅರಣ್ಯ ಪ್ರದೇಶದಲ್ಲಿ, ಮಾನವನ ಹಸ್ತಕ್ಷೇಪ ಹೆಚ್ಚಾಗತೊಡಗಿತು ಮತ್ತು ಇದರಿಂದಾಗಿ ಆನೆಗಳು ಈ ಪ್ರದೇಶದಿಂದ ದೂರ ಸಾಗಿದವು. ಮೂರು ವರ್ಷಗಳ ಹಿಂದೆ ಈ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಯಿತು ಮತ್ತು ಈಗ ಇದರ ಅದ್ಭುತ ಫಲಿತಾಂಶ ಗೋಚರವಾಗುತ್ತಿದೆ. ಆನೆಗಳು ಇಲ್ಲಿಗೆ ಮರಳಿ ಬಂದಿವೆ. ಯಾವ ಪ್ರದೇಶದಲ್ಲಿ ವರ್ಷಗಳಿಂದ ಅವುಗಳ ಚಲನ-ವಲನ ಇರಲಿಲ್ಲವೋ, ಅಲ್ಲಿ ಇಂದು ಪುನಃ ಆನೆಗಳ ಹಿಂಡು ಕಾಣಿಸಿಕೊಳ್ಳುತ್ತಿವೆ. ಸ್ನೇಹಿತರೆ, ಅಸ್ಸಾಂನಲ್ಲಿಯೇ ಮತ್ತೊಂದು ಸುಂದರ ಪ್ರಯತ್ನ ನಡೆದಿದೆ. ಅದೆಂದರೆ ಬಹಳ ಚಿಕ್ಕ ಪ್ರಾಣಿ ಎನಿಸಿದ ಪಿಗ್ಮಿ ಹಂದಿಯನ್ನು ರಕ್ಷಿಸುವ ಪ್ರಯತ್ನವಾಗಿದೆ. ಒಂದು ಕಾಲದಲ್ಲಿ ಇದರ ಅಸ್ತಿತ್ವವೇ ಅಪಾಯಕ್ಕೆ ಸಿಲುಕಿತ್ತು. ಆಗ ಕೇವಲ 6 ಪಿಗ್ಮಿ ಹಂದಿಗಳೊಂದಿಗೆ ಒಂದು ಸಂರಕ್ಷಣಾ ಕಾರ್ಯಕ್ರಮ ಆರಂಭಿಸಲಾಯಿತು, ನಂತರ ಅವುಗಳನ್ನು ಪುನಃ ಕಾಡಿನಲ್ಲಿ ಬಿಡಲಾಯಿತು. ಅವುಗಳು ವಾಸ ಮಾಡಲು ಹುಲ್ಲುಗಾವಲುಗಳನ್ನು ಕೂಡಾ ಅಭಿವೃದ್ಧಿಪಡಿಸಲಾಯಿತು. ಇಂದು ಈ ಕಾರ್ಯಕ್ರಮದಿಂದಾಗಿ ಪಿಗ್ಮಿ ಹಂದಿಗಳ ಸಂಖ್ಯೆ 190ಕ್ಕೂ ಅಧಿಕವಾಗಿದೆ.
ಸ್ನೇಹಿತರೇ,
ಪ್ರಕೃತಿಯೊಂದಿಗಿನ ನಮ್ಮ ಅನುಬಂಧ ಕೇವಲ ಅದನ್ನು ಸಂರಕ್ಷಿಸುವುದಕ್ಕೆ ಮಾತ್ರಾ ಸೀಮಿತವಾಗಿಲ್ಲ. ಹಲವುಬಾರಿ ನಾವು ಪ್ರಕೃತಿಯನ್ನು ರಕ್ಷಿಸಿದಾಗ, ಅದೇ ಪ್ರಕೃತಿ ನಮ್ಮ ಜೀವನದ ಆಧಾರವಾಗುತ್ತದೆ. ಪಶ್ಚಿಮ ಬಂಗಾಳದ ಸುಂದರಬನ್ ನಲ್ಲಿ ಕೆಲವು ಮಹಿಳೆಯರು ಇದೇ ಬಾಂಧವ್ಯಗಳ ಪ್ರೇರಣಾದಾಯಕ ಉದಾಹರಣೆಯೊಂದನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಝಾರ್ಕಾಲಿಯಾ ಈ ಮಹಿಳೆಯರು, ಮ್ಯಾಂಗ್ರೂವ್ ಕಾಡುಗಳನ್ನು ಬೆಳೆಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ತಮ್ಮ ಪತಿಯನ್ನು ಹುಲಿ ದಾಳಿಯಲ್ಲಿ ಕಳೆದುಕೊಂಡ ಮಹಿಳೆಯರಾಗಿದ್ದಾರೆ. ಪತಿಯನ್ನು ಕಳೆದುಕೊಂಡ ನಂತರ ಇವರಿಗೆ ಸುಂದರಬನದಿಂದಲೇ ಜೀವನೋಪಾಯಕ್ಕೆ ಆಧಾರ ದೊರೆಯಿತು. ಅವರು ಬೆಳೆಸಿದ ಮ್ಯಾನ್ ಗ್ರೂವ್ ಕಾಡುಗಳು ಗ್ರಾಮಗಳಿಗೆ ಇಂದು ನೈಸರ್ಗಿಕ ಸುರಕ್ಷಾ ಕವಚವಾಗುತ್ತಿವೆ, ಮತ್ತು ಇವುಗಳನ್ನು ನೆಡುವ ಮೂಲಕ ಈ ಮಹಿಳೆಯರಿಗೆ ಆದಾಯವೂ ದೊರೆಯುತ್ತಿದೆ. ಸ್ನೇಹಿತರೇ, ನಾವು ಪರಿಸರವನ್ನು ಸಂರಕ್ಷಿಸೋಣ,ಪ್ರಕೃತಿಯ ಸಮತೋಲನವನ್ನು ಗೌರವಿಸೋಣ ಮತ್ತು ಅದರ ವೈವಿಧ್ಯತೆಯನ್ನು ಕಾಪಾಡೋಣ. ಇಂತಹ ನಮ್ಮ ಪ್ರತಿಯೊಂದು ಪ್ರಯತ್ನವೂ ಭವಿಷ್ಯದ ಪೀಳಿಗೆಗಳೆಡೆಗೆ ನಮ್ಮ ಜವಾಬ್ದಾರಿಯಾಗಿದೆ.
ನನ್ನ ಪ್ರೀತಿಯ ದೇಶ ಬಾಂಧವರೇ,
ಇತ್ತೀಚೆಗೆ ದೇಶದ ಲಕ್ಷಾಂತರ ಯುವಜನರು ಮಾದಕ ಪದಾರ್ಥಗಳ ವಿರುದ್ಧ, ಡ್ರಗ್ಸ್ ವಿರುದ್ಧ, ಒಂದು ಮಹತ್ವದ ಸಂಕಲ್ಪ ಕೈಗೊಂಡಿದ್ದಾರೆ. ಯುವಜನತೆ ತಾವು ಮಾದಕ ವ್ಯಸನಗಳಿಂದ ದೂರವಿರುವುದಾಗಿ ಶಪಥ ತೊಟ್ಟಿದ್ದಾರೆ ಮತ್ತು ಈ ಸಂದೇಶವನ್ನು ಇತರರಿಗೂ ತಲುಪಿಸುವ ಹೊಣೆಗಾರಿಕೆಯನ್ನೂ ಹೊತ್ತಿದ್ದಾರೆ – ಇವೆಲ್ಲವೂ ನಡೆಯುತ್ತಿರುವುದು ‘ನಶೆ ಮುಕ್ತ ಯುವ ಅಭಿಯಾನದ’ ಅಡಿಯಲ್ಲಿ. ಈ ಅಭಿಯಾನ 100 ವಾರಗಳವರೆಗೆ ನಡೆಯಲಿದೆ. ಇದರಲ್ಲಿ ಮೈ ಭಾರತ್ ನ ಸ್ವಯಂಸೇವಕರು ತೊಡಗಿಸಿಕೊಂಡಿದ್ದಾರೆ. ಎನ್ ಎಸ್ ಎಸ್ ನಲ್ಲಿ ತೊಡಗಿಕೊಂಡಿರುವ ನಮ್ಮ ಯುವ ಜನತೆಯೂ ಇದರ ಭಾಗವಾಗಿದ್ದಾರೆ, ಶಾಲೆ-ಕಾಲೇಜ್ ಮತ್ತು ವಿಶ್ವವಿದ್ಯಾಲಯಗಳು ಕೂಡಾ ಜೊತೆಗೂಡಲು ಮುಂದೆ ಬಂದಿವೆ, ಮತ್ತು ಅನೇಕ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ಕೂಡಾ ಇದರಲ್ಲಿ ಕೈಜೋಡಿಸಿವೆ. ಕಳೆದ ಕೆಲವು ದಿನಗಳಲ್ಲಿ ದೇಶಾದ್ಯಂತ ಸಾವಿರಾರು ಸಂಕಲ್ಪ ಸಮಾರಂಭಗಳು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆದಿವೆ. ಸ್ನೇಹಿತರೇ, ಈ ಅಭಿಯಾನದಲ್ಲಿ ನನಗೆ ವಿಶೇಷವಾಗಿ ಇಷ್ಟವಾದ ಒಂದು ವಿಷಯವೆಂದರೆ ‘ಮಾದಕ ವ್ಯಸನ ಮುಕ್ತಿಯ ಸಂದೇಶ’. ನಮ್ಮ ಯುವಕರು ಸ್ವತಃ ತಮ್ಮದೇ ಭಾಷೆಯಲ್ಲಿ, ತಮ್ಮದೇ ರೀತಿಯಲ್ಲಿ ಈ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ನಾನು ‘ಮನ್ ಕಿ ಬಾತ್’ ನಲ್ಲಿ ಕೂಡಾ ತಮ್ಮ ಸೃಜನಾತ್ಮಕತೆಯ ಮೂಲಕ ಈ ಅಭಿಯಾನದಲ್ಲಿ ಕೈಜೋಡಿಸಬೇಕೆಂದು ಯುವ ಸ್ನೇಹಿತರಲ್ಲಿ ಮನವಿ ಮಾಡಿದ್ದೆ ಮತ್ತು ಸಾವಿರಾರು ಯುವಜನರು ನನ್ನ ಈ ಕರೆಗೆ ಸ್ಪಂದಿಸಿ ಮುಂದೆ ಬಂದಿರುವುದು ನನಗೆ ಬಹಳ ಸಂತಸ ತಂದಿದೆ. MY Bharat ನಲ್ಲಿ ಆ್ಯಂಥಮ್ ರಚನೆ, ಘೋಷವಾಕ್ಯ ಬರವಣಿಗೆ ಮತ್ತು ಬೀದಿ ನಾಟಕ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅದೇ ರೀತಿ, ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಯುವಕರು ‘#ನಶಾ ಮುಕ್ತ ಯುವ’ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ತಮ್ಮ ಸೃಜನಾತ್ಮಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂದರೆ, ಸಂದೇಶವೂ ಯುವಕರದ್ದೇ, ಮಾಧ್ಯಮವೂ ಯುವಕರದ್ದೇ ಮತ್ತು ಈ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಶಕ್ತಿಯೂ ಯುವಕರದ್ದೇ. ಮುಂಬರುವ ದಿನಗಳಲ್ಲಿ ಈ ಅಭಿಯಾನದ ಅಡಿಯಲ್ಲಿ ಆರೋಗ್ಯ ತಪಾಸಣೆ ಮತ್ತು ಧ್ಯಾನ ಶಿಬಿರಗಳಂತಹ ಚಟುವಟಿಕೆಗಳನ್ನೂ ಆಯೋಜಿಸಲಾಗುವುದು.
ಸ್ನೇಹಿತರೆ,
ಶೀಘ್ರದಲ್ಲೇ, ನಮ್ಮ ಹಲವು ಹಬ್ಬಗಳು ಮತ್ತು ಉತ್ಸವಗಳು ಕೂಡ ಬರಲಿವೆ. ಈ ಬಾರಿ ಹಬ್ಬಗಳ ಸಂಭ್ರಮದ ನಡುವೆ ನಮ್ಮ ಸುತ್ತಮುತ್ತಲಿನ ಪರಿಸರವನ್ನೂ ಗಮನಿಸೋಣ. ಯಾರಾದರೂ ಯುವಕರು ಯಾವುದಾದರೂ ದುರಭ್ಯಾಸದ ಕಡೆಗೆ ಸಾಗುತ್ತಿರುವುದು ಕಂಡುಬಂದರೆ, ಅವರೊಂದಿಗೆ ಮಾತನಾಡಿ. ಯಾರಾದರೂ ಮಾದಕ ವ್ಯಸನದಿಂದ ಹೊರಬರಲು ಪ್ರಯತ್ನಿಸುತ್ತಿದ್ದರೆ, ಅವರಿಗೆ ಬೆಂಬಲ ನೀಡಿ. ‘ಮಾದಕ ವ್ಯಸನ ಮುಕ್ತ ಯುವಜನತೆ – ಅಭಿವೃದ್ಧಿ ಹೊಂದಿದ ಭಾರತ’ ಎಂಬ ಸಂಕಲ್ಪವನ್ನು ನಾವೆಲ್ಲರೂ ಒಗ್ಗಟ್ಟಾಗಿ ಮುಂದಕ್ಕೆ ಕೊಂಡೊಯ್ಯೋಣ.
ನನ್ನ ಪ್ರೀತಿಯ ದೇಶವಾಸಿಗಳೇ,
ಈ ಬಾರಿ ಕೆಂಪು ಕೋಟೆಯಿಂದ ನಾನು, ಕ್ರೀಡೆಗಳಿಗಾಗಿ ಪ್ರತಿಭಾ ಶೋಧದ ಅಭಿಯಾನವನ್ನು ಘೋಷಿಸಿದ್ದೇನೆ. ಭಾರತ ಸತತವಾಗಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡುತ್ತಿರಬೇಕೆಂದರೆ ಗ್ರಾಮಗಳು ಮತ್ತು ಪಟ್ಟಣಗಳನ್ನು ತಲುಪಿ ಕ್ರೀಡಾ ಪ್ರತಿಭೆಗಳನ್ನು ಅನ್ವೇಷಿಸುವುದು ಅಗತ್ಯವೆನಿಸುತ್ತದೆ. ಅದೇರೀತಿ ಇಂತಹ ಕೆಲಸಕ್ಕಾಗಿಯೇ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಅನೇಕರಿದ್ದಾರೆ. ಅವರ ಒಂದೇ ಹವ್ಯಾಸವೆಂದರೆ ಪ್ರತಿಭೆಯನ್ನು ಅನ್ವೇಷಿಸುವುದು ಮತ್ತು ಅವುಗಳನ್ನು ಬೆಳೆಸುವುದು. ನಮ್ಮ ಪಂಜಾಬ್ ನಲ್ಲಿ ರಾಜಿಂದರ್ ಸಿಂಗ್ ಅವರು ಇಂತಹದ್ದೆ ಕೆಲಸವನ್ನು ಮಾಡುತ್ತಿದ್ದಾರೆ. ರಾಜಿಂದರ್ ಅವರ ಹೆಸರಿನೊಂದಿಗೆ ಸೀನಿಯರ್ ಕೂಡಾ ಸೇರ್ಪಡೆಯಾಗಿದೆ. ಇವರು 1980 ರ ಒಲಿಂಪಿಕ್ ನಲ್ಲಿ ಹಾಕಿಯಲ್ಲಿ ಚಿನ್ನದ ಪದಕ ಗಳಿಸಿದ ತಂಡದ ಭಾಗವಾಗಿದ್ದರು. 1982 ರ ವಿಶ್ವ ಕಪ್ ನಲ್ಲಿ ಗಮನ ಸೆಳೆದಿದ್ದರು. 2001 ರಲ್ಲಿ ಭಾರತ ಪ್ರಥಮ ಬಾರಿಗೆ ಪುರುಷರ ಜ್ಯೂನಿಯರ್ ವಿಶ್ವ ಕಪ್ ತನ್ನದಾಗಿಸಿಕೊಂಡಿತ್ತು. ಅದೇ ರೀತಿ 2003 ರಲ್ಲಿ ದೇಶವು ಸೀನಿಯರ್ ಏಷ್ಯಾ ಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ಎರಡೂ ಪಂದ್ಯಾವಳಿಯಲ್ಲಿ ಇವರು ಕೋಚ್ ನ ಪಾತ್ರ ನಿರ್ವಹಿಸಿದ್ದರು. ಈಗ ಇವರು ರೌಂಡ್ ಗ್ಲಾಸ್ ಹಾಕಿ ಅಕಾಡೆಮಿಯ ಮೂಲಕ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ತಮ್ಮ ಹವ್ಯಾಸವನ್ನು ಮುಂದುವರಿಸಿದ್ದಾರೆ. ಇವರ ಪ್ರಯತ್ನಗಳಿಂದ ಗ್ರಾಮಗಳಲ್ಲಿ ಹೊಸ ಹಾಕಿ ಮೈದಾನಗಳನ್ನು ನಿರ್ಮಿಸಲಾಗುತ್ತಿದೆ. ರಾಜಿಂದರ್ ಸಿಂಗ್ ಅವರ ಗಮನ ಸಂಪೂರ್ಣ ಸ್ಪಷ್ಟವಾಗಿದೆ. ಉತ್ತಮ ಕೋಚಿಂಗ್ ಸೌಲಭ್ಯಗಳು ಕಡಿಮೆ ಇರುವ ಗ್ರಾಗಳಲ್ಲಿನ ಮಕ್ಕಳನ್ನು ಗುರುತಿಸುವುದು ಇವರ ಉದ್ದೇಶವಾಗಿದೆ. ಇಂತಹ ಪ್ರಯತ್ನಗಳಿಂದ ಅನೇಕ ಕ್ರೀಡಾಳುಗಳು ಭಾರತದ ಜ್ಯೂನಿಯರ್ ಮತ್ತು ಸೀನಿಯರ್ ಮಟ್ಟದಲ್ಲಿ ತಮ್ಮ ಸ್ಥಾನ ಕಂಡುಕೊಳ್ಳುತ್ತಿದ್ದಾರೆ. ರಾಜಿಂದರ್ ಸಿಂಗ್ ಅವರ ಈ ಸಮರ್ಪಣಾ ಭಾವನೆಯನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ.
ನನ್ನ ಪ್ರೀತಿಯ ದೇಶವಾಸಿಗಳೇ,
ನೆಲ್ಲಿಕಾಯಿ ನಮ್ಮೆಲ್ಲರಿಗೂ ಬಹಳ ಪರಿಚಿತವಾದದ್ದು. ಬಹುತೇಕ ಮನೆಗಳಲ್ಲಿ ನೆಲ್ಲಿಕಾಯಿಯಿಂದ ತಯಾರಿಸಿದ ಉಪ್ಪಿನಕಾಯಿ ಮತ್ತು ಮೊರಬ್ಬಾ ಬಳಸಲಾಗುತ್ತದೆ. ಅನೇಕರ ನೆಲ್ಲಿಕಾಯಿಯ ರಸವನ್ನು ಇಷ್ಟಪಡುತ್ತಾರೆ ಮತ್ತು ಚಳಿಗಾಲದಲ್ಲಿ ಚ್ಯವನಪ್ರಾಶ್ ನಮ್ಮ ದೈನಂದಿನ ಬದುಕಿನ ಒಂದು ಪ್ರಮುಖ ಭಾಗವಾಗಿರುತ್ತದೆ. ನಮ್ಮ ಹಿರಿಯರು ಅನೇಕ ತಲೆಮಾರುಗಳಿಂದ ನೆಲ್ಲಿಕಾಯಿಯ ಗುಣಗಳ ಬಗ್ಗೆ ಹೇಳುತ್ತಾ ಬಂದಿದ್ದಾರೆ. ಸ್ನೇಹಿತರೇ, ಇದೇ ನೆಲ್ಲಿಕಾಯಿ ಇಂದು ಉತ್ತರ ಪ್ರದೇಶದ ಪ್ರತಾಪ್ ಗಢ್ ನಲ್ಲಿ ಹೊಸ ಸಾಧ್ಯತೆಗಳಿಗೆ ಮಾರ್ಗವಾಗುತ್ತಿದೆ. ಪ್ರತಾಪ್ ಗಢ್ ಮತ್ತು ನೆಲ್ಲಿಕಾಯಿಯ ನಡುವಿನ ಸಂಬಂಧ ಬಹಳ ಹಳೆಯದ್ದು. ಹಲವಾರು ತಲೆಮಾರುಗಳಿಂದ ಇಲ್ಲಿನ ರೈತರು ನೆಲ್ಲಿಕಾಯಿ ಕೃಷಿ ಮಾಡುತ್ತಾ ಬಂದಿದ್ದಾರೆ. ಪ್ರತಾಪ್ ಗಢ್ ಗೆ ನೆಲ್ಲಿಕಾಯಿ ಒಂದು ಬಲಿಷ್ಠ ಗುರುತನ್ನು ನೀಡಿದೆ. ಈಗ ಇದೇ ಹಳೆಯ ಗುರುತು ಇಲ್ಲಿನ ರೈತರಿಗೆ ಮತ್ತು ಮಹಿಳೆಯರಿದೆ ಹೊಸ ಅವಕಾಶಗಳನ್ನು ತಂದುಕೊಡುತ್ತಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಅಂದರೆ ODOP ಮೂಲಕ ಇಲ್ಲಿ ನೆಲ್ಲಿಕಾಯಿಗೆ ಸಂಬಂಧಿಸಿದ ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ದೊರೆತಿದೆ. ಇಂದು ಪ್ರತಾಪ್ ಗಢ್ ನಲ್ಲಿ ನೆಲ್ಲಿಕಾಯಿ ಸಂಸ್ಕರಣೆಗೆ ಸಂಬಂಧಿಸಿದ ಸುಮಾರು 100 ಘಟಕಗಳು ಕೆಲಸ ಮಾಡುತ್ತಿದ್ದು, ಇದರಲ್ಲಿ ಸ್ವ ಸಹಾಯ ಗುಂಪುಗಳಿಗೆ ಸೇರಿದ ಮಹಿಳೆಯರು ಕೂಡಾ ದೊಡ್ಡ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಅಂತಹದ್ದೇ ಒಂದು ಗುಂಪು – ದೇವಗಢ್ ಕಮಾಸೀ ಗ್ರಾಮದ್ದಾಗಿದೆ. ಸಾವಿತ್ರೀ ಫುಲೆ ಸ್ವ ಸಹಾಯ ಗುಂಪಿಗೆ ಸೇರಿದ ಮಹಿಳೆಯರು ನೆಲ್ಲಿಕಾಯಿಯಿಂದ ಕ್ಯಾಂಡಿ, ಮೊರಬ್ಬಾ ಮತ್ತು ರಸ (ಜ್ಯೂಸ್) ತಯಾರಿಸುತ್ತಿದ್ದಾರೆ. ODOP ಅಡಿಯಲ್ಲಿ, ಹೊಸ ಮಾರುಕಟ್ಟೆಗಳಿಗೆ ಪ್ರವೇಶ ಹೆಚ್ಚಿದ ಕಾರಣ ಇವರ ಆದಾಯದಲ್ಲಿ ಕೂಡಾ ಹೆಚ್ಚಳ ಕಂಡುಬಂದಿದೆ. ಇದೇ ರೀತಿ ಒಂದು ಗ್ರಾಮದಲ್ಲಿ ವಿಂಧ್ಯವಾಸಿನ ಸ್ವ ಸಹಾಯ ಗುಂಪು ಇದೆ. ಈ ಗುಂಪಿನ ಮಹಿಳೆಯರು ನೆಲ್ಲಿಕಾಯಿಯಿಂದ ಉಪ್ಪಿನಕಾಯಿ, ಜೀರ್ಣಕ್ರಿಯೆಗೆ ಸಹಾಯವಾಗುವ ಪುಡಿ ಇತ್ಯಾದಿ ಪದಾರ್ಥಗಳನ್ನು ತಯಾರಿಸುತ್ತಿದ್ದಾರೆ. ಈ ಮಹಿಳೆಯರಿಗೆ ಸಂಸ್ಕರಣೆಗಾಗಿ ಯಂತ್ರಗಳು ದೊರೆತಿವೆ, ಸಾಲ ಸೌಲಭ್ಯ ದೊರೆತಿದೆ. ಸ್ಥಳೀಯ ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವ ಅವಕಾಶವೂ ದೊರೆತಿದೆ ಮತ್ತು ನೋಡ ನೋಡುತ್ತಿದ್ದಂತೆಯೇ ಅವರ ಆದಾಯದಲ್ಲಿ ಸಾಕಷ್ಟು ಹೆಚ್ಚಳವಾಗಿದೆ.
ಸ್ನೇಹಿತರೇ,
ನಮ್ಮ ದೇಶದ ಪ್ರತಿಯೊಂದು ಪ್ರದೇಶದಲ್ಲೂ ಏನಾದರೊಂದು ವಿಶೇಷತೆ ಖಂಡಿತವಾಗಿಯೂ ಇದೆ. ಒಂದು ಕಡೆ ವಿಶೇಷವಾದ ಹಣ್ಣಿದ್ದರೆ, ಮತ್ತೊಂದೆಡೆ ಸಾಂಪ್ರದಾಯಿಕ ಕಲೆ ಇದೆ, ಮತ್ತೊಂದೆಡೆ ವಿಶಿಷ್ಠವಾದ ಕೌಶಲ್ಯವಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಇವುಗಳ ವಿಶೇಷತೆಗಳನ್ನು ಮುನ್ನೆಲೆಗೆ ತರುವ ಒಂದು ಅಭಿಯಾನವಾಗಿದೆ. ನಮ್ಮ ಗ್ರಾಮಗಳು ಮತ್ತು ಸಣ್ಣ ನಗರಗಳ ಗುರುತು ಕೇವಲ ಸ್ಥಳೀಯ ಮಾರುಕಟ್ಟೆಗಳಿಗೆ ಮಾತ್ರಾ ಸೀಮಿತವಾಗಬಾರದು ಎಂಬುದೇ ನಮ್ಮ ಪ್ರಯತ್ನವಾಗಿದೆ. ಅವು ದೇಶ ಮತ್ತು ಇತರ ಭಾಗಗಳವರೆಗೂ ತಲುಪಬೇಕು ಮತ್ತು ವಿಶ್ವದ ಮಾರುಕಟ್ಟೆಗಳವರೆಗೂ ತಲುಪಬೇಕು. ಇದರಿಂದ Vocal for Local ಅಭಿಯಾನಕ್ಕೆ ಕೂಡಾ ಉತ್ತೇಜನ ದೊರೆಯುತ್ತದೆ. ಈ ದೇಶವನ್ನು ಸ್ವಾವಲಂಬಿಯಾಗಿಸಲು ಪ್ರೇರಣೆ ದೊರೆಯುತ್ತದೆ. ಮುಂಬರಲಿರುವ ಹಬ್ಬಗಳಲ್ಲಿ ಕೂಡಾ ನಾವು ವೋಕಲ್ ಫಾರ್ ಲೋಕಲ್ ಮಂತ್ರವನ್ನು ಮರೆಯಲೇಬಾರದು.
ನನ್ನ ಪ್ರೀತಿಯ ದೇಶವಾಸಿಗಳೇ,
ಈ ಸೆಪ್ಟೆಂಬರ್ ತಿಂಗಳನ್ನು ಅಪೌಷ್ಠಿಕತೆಯ ವಿರುದ್ಧದ ಹೋರಾಟಕ್ಕೆ ಸಮರ್ಪಿಸಲಾಗಿದೆ. ಪೋಷಣ್ ಮಾಸದಲ್ಲಿ, ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ ಜನರು ಮತ್ತು ಸಂಸ್ಥೆಗಳು ಈ ಮಹತ್ವದ ಕಾರ್ಯಕ್ಕಾಗಿ ಒಂದುಗೂಡುತ್ತವೆ. ಅಪೌಷ್ಠಿಕತೆಯನ್ನು ಎದುರಿಸುವುದಕ್ಕಾಗಿ ಈ ವರ್ಷ ಅನೇಕ ಪ್ರಶಂಶನೀಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಛತ್ತೀಸ್ ಗಡ್ ನಲ್ಲಿ ‘ಪ್ರತಿ ಮನೆಯಲ್ಲಿ ನುಗ್ಗೇ – ಮನೆ ಮನೆಯಲ್ಲೂ ನುಗ್ಗೆ’ ಎಂಬ ಹೆಸರಿನ ಅಭಿಯಾನ ಆರಂಭಿಸಲಾಗಿದೆ. ಇದರಲ್ಲಿ ಜನರಿಗೆ ಪೌಷ್ಠಿಕಾಂಶಯುಕ್ತ ಮುನಗಾ ಅಂದರೆ ನುಗ್ಗೆ ಸೊಪ್ಪನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕೆಂದು ಪ್ರೋತ್ಸಾಹಿಸಲಾಗುತ್ತಿದೆ. ಗುಜರಾತ್ ನಲ್ಲಿ ಕೂಡಾ ವಾಂಗೀ ಸ್ಪರ್ಧೆ ಅಂದರೆ
ಸಿರಿಧಾನ್ಯಗಳಿಂದ ತಯಾರಿಸಲಾದ ವ್ಯಂಜನಗಳ ಸ್ಪರ್ಧೆ ಆರಂಭಿಸಲಾಗಿದೆ. ಈ ಉಪಕ್ರಮದ ಮೂಲಕ ಕಡಿಮೆ ಬೆಲೆಯ ಮತ್ತು ಪೌಷ್ಠಿಕ ಸ್ಥಳೀಯ ಆಹಾರಕ್ಕೆ ಉತ್ತೇಜನ ನೀಡಲಾಗುತ್ತಿದೆ. ಇಲ್ಲಿಯವರೆಗೂ ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯ ಜನರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಮಹಾರಾಷ್ಟ್ರ ಕೂಡಾ ಈ ನಿಟ್ಟಿನಲ್ಲಿ ಶ್ಲಾಘನೀಯ ಪ್ರಯತ್ನ ಮಾಡುತ್ತಿದೆ. ಅಲ್ಲಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಮತ್ತು ಮಕ್ಕಳ ಪೋಷಕರು ಜಾಗೃತಿ ಅಭಿಯಾನದಲ್ಲಿ ಕೈಜೋಡಿಸುತ್ತಿದ್ದಾರೆ. ಮಿಜೋರಂನಲ್ಲಿ ಕೂಡಾ, ಈ ವರ್ಷ ಜನರು ಒಂದುಗೂಡಿ ಪೌಷ್ಠಿಕ ವಾಟಿಕಾಗಳ (ತೋಟಗಳ) ಆರೈಕೆಗಾಗಿ ಒಂದು ಅಭಿಯಾನ ಆರಂಭಿಸಿದ್ದಾರೆ. ಇದು ಮಿಜೋ ಸಮಾಜದ ‘ತಲೋ–ಮಡ್–ಯನಾ’ ಎಂಬ ಪರಂಪರೆಗೆ ಅನುಗುಣವಾಗಿದೆ. ಇದರ ಅರ್ಥ ‘ನಿಸ್ವಾರ್ಥ ಸೇವೆ ಸಲ್ಲಿಸುವುದು ಮತ್ತು ಇತರರಿಗೆ ಸಹಾಯ ಮಾಡಲು ಸದಾ ಮುಂದೆ ಇರುವುದು’ ಎಂದಾಗಿದೆ. ಇಂತಹ ಪ್ರಯತ್ನಗಳು ನಿಜಕ್ಕೂ ಅತ್ಯಂತ ಶ್ಲಾಘನೀಯವಾಗಿವೆ. ಇಂತಹ ಉಪಕ್ರಮಗಳ ಭಾಗವಾಗಿರುವ ಅಂಗನವಾಡಿ ಕೇಂದ್ರಗಳಿಗೆ ಸಂಬಂಧಿಸಿದ ಎಲ್ಲರ ಬಗ್ಗೆಯೂ ನನಗೆ ಅತ್ಯಂತ ಹೆಮ್ಮೆ ಇದೆ. ಈ ಅಂಗನವಾಡಿ ಕೇಂದ್ರ ಈಗ ‘ಪೋಷಣ್ tracker’ ನಿಂದ ಡಿಜಿಟಲ್ ರೂಪದಲ್ಲಿ ಸೇರ್ಪಡೆಯೊಗಿದೆ. ಸರಿಸುಮಾರು 9 ಕೋಟಿ ಫಲಾನುಭವಿಗಳಲ್ಲಿ ಇದರಲ್ಲಿ ನೋಂದಾಯಿತರಾಗಿದ್ದಾರೆ. ಇಂದರಿಂದಾಗಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಸ್ತನ್ಯಪಾನ ಮಾಡಿಸುವ ತಾಯಂದಿರ ಉತ್ತಮ ಆರೈಕೆ ಸಾಧ್ಯವಾಗಿದೆ. ಅಪೌಷ್ಠಿಕತೆಯ ವಿರುದ್ಧದ ಈ ಹೋರಾಟವನ್ನು ನಾವು ಇದೇ ರೀತಿ ಮುಂದುವರಿಸಿಕೊಂಡು ಹೋಗಬೇಕು. ನಮ್ಮ ಸಮಾಜವನ್ನು ಅಪೌಷ್ಠಿಕತೆಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಬೇಕು.
ಸ್ನೇಹಿತರೆ,
ನಾವೆಲ್ಲರೂ ಈ ತಿಂಗಳು ಪೂರ್ತಿ ಸಂಪೂರ್ಣ ಶ್ರದ್ಧೆ, ಭಕ್ತಿ ಹಾಗೂ ಉತ್ಸಾಹದಿಂದ ಗಣೇಶನ ಹಬ್ಬವನ್ನು ಆಚರಿಸಿದ್ದೇವೆ. ದೇಶಾದ್ಯಂತ ಭಕ್ತಿಭಾವದಿಂದ ಗಣಪತಿ ದೇವನನ್ನು ಸ್ವಾಗತಿಸಲಾಯಿತು. ಈ ಪವಿತ್ರ ಸಂದರ್ಭವು ಇಡೀ ವಾತಾವರಣವನ್ನು ಉತ್ಸಾಹ ಮತ್ತು ಸಂಭ್ರಮದಿಂದ ತುಂಬಿಸುತ್ತದೆ. ಸ್ನೇಹಿತರೇ, ವಿಘ್ನವಿನಾಶಕನಾದ ಶ್ರೀ ಗಣೇಶ ದೇವರು ಜ್ಞಾನ, ಬುದ್ಧಿವಂತಿಕೆ ಮತ್ತು ಶುಭ ಕಾರ್ಯಗಳ ಆರಂಭದ ಪ್ರತೀಕ ಎನಿಸಿದ್ದಾರೆ. ಆತನ ಮೇಲೆ ಅಪಾರ ಭಕ್ತಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ, ಇತರ ದೇಶಗಳಲ್ಲಿಯೂ ಇದೆ. ಉದಾಹರಣೆಗೆ, ಶ್ರೀಮಾನ್ ಪಂಥೌನ್ ಥೀರಖಾನೋನ್ ಅವರನ್ನೇ ತೆಗೆದುಕೊಳ್ಳಿ. ಅವರು ಮೂಲತಃ ಥೈಲ್ಯಾಂಡ್ ದೇಶದವರು. ಅಲ್ಲಿ ಶ್ರೀ ಗಣೇಶ ದೇವರನ್ನು ‘ಫ್ರಾ ಫಿಕಾನೆತ್’ ಎಂಬ ಹೆಸರಿನಲ್ಲಿ, ರೂಪದಲ್ಲಿ ಪೂಜಿಸಲಾಗುತ್ತದೆ. ಆತ 19 ವರ್ಷ ವಯಸ್ಸಿನವರಾಗಿದ್ದಾಗ, ಅವರ ತಂದೆಯವರು ಅವರಿಗೆ ಶ್ರೀ ಗಣೇಶ ಭಗವಾನ್ ನ ಒಂದು ಛಾಯಾಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು. ಇದರಿಂದಲೇ ಅವರಲ್ಲಿ ಒಂದು ಅದ್ಭುತ ಭಕ್ತಿಭಾವ ಜಾಗೃತಗೊಂಡಿತು. ಅವರು ಭಗವಾನ್ ಶ್ರೀ ಗಣೇಶನಿಗೆ ಸಂಬಂಧಿಸಿದ ಸಂಪ್ರದಾಯಗಳ ಅಧ್ಯಯನದಲ್ಲಿ ನಾಲ್ಕು ದಶಕಗಳಿಗಿಂತಲೂ ಅಧಿಕ ಸಮಯ ಕಳೆದಿದ್ದಾರೆ. ಅವರು ಭಾರತ ಮತ್ತು ನೇಪಾಳ ಸೇರಿದಂತ ಏಷ್ಯಾದ ಅನೇಕ ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಮಹಾರಾಷ್ಟ್ರದೊಂದಿಗೆ ಅವರಿಗೆ ವಿಶೇಷ ನಂಟಿದೆ. ಅಷ್ಟವಿನಾಯಕ ಸಂಪ್ರದಾಯದ ಬಗ್ಗೆ ಅರಿತುಕೊಂಡ ನಂತರ ಅವರು ಹಲವು ಬಾರಿ ಇಲ್ಲಿಗೆ ಬಂದಿದ್ದಾರೆ. ಅವರ ಪ್ರಯತ್ನಗಳಿಂದ ಥೈಲ್ಯಾಂಡ್ ನ ಭಕ್ತಾದಿಗಳಲ್ಲಿ ಕೂಡಾ ಅಷ್ಟವಿನಾಯಕ ಯಾತ್ರೆ ಜನಪ್ರಿಯವಾಗಿದೆ. 2002 ರಲ್ಲಿ ಅವರು ಉತ್ತರ ಥೈಲ್ಯಾಂಡ್ ನ ಚಿಯಾಂಗ್ ಮಾಯ್ ನಲ್ಲಿ ಗಣೇಶ್ ಹಿಮಾಲ್ ಮ್ಯೂಸಿಯಂ ಸ್ಥಾಪಿಸಿದರು. ಇಂದು ಇದರಲ್ಲಿ 10 ಸಾವಿರಕ್ಕೂ ಅಧಿಕ ಗಣೇಶನ ಮೂರ್ತಿಗಳಿವೆ. ಭಾರತಕ್ಕೆ ಬರಲು ಸಾಧ್ಯವಾಗದ ಭಕ್ತರಿಗಾಗಿ, ಮ್ಯೂಸಿಯಂನಲ್ಲಿ ಅಷ್ಟವಿನಾಯಕನ ಪ್ರತಿಮೆಗಳು ಕೂಡಾ ಇವೆ. ಇಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಭಗವಾನ್ ಗಣೇಶನ ಪೂಜೆ-ಅರ್ಚನೆ ನಡೆಸಲಾಗುತ್ತದೆ. ಗಣಪತಿಗೆ ಸಂಬಂಧಿಸಿದ ವಿಶೇಷ ಸಂದರ್ಭಗಳಲ್ಲಿ ಕೂಡಾ ಇಲ್ಲಿ ಪೂಜಾ ವಿಧಾನಗಳು ನೆರವೇರುತ್ತವೆ. ಭಾರತದ ಆಧ್ಯಾತ್ಮಿಕ ಶ್ರದ್ಧೆ, ಕಲೆ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳು ಬೇರೆ ದೇಶಗಳಲ್ಲಿ ಕೂಡಾ ಯಾವರೀತಿ ಜನಪ್ರಿಯವಾಗುತ್ತವೆ ಎಂಬುದನ್ನು ಇದು ಸಾರಿ ಹೇಳುತ್ತದೆ. ನಮ್ಮೆಲ್ಲರ ಮೇಲೆ ಗಣೇಶ ದೇವನ ಆಶೀರ್ವಾದ ಸದಾಕಾರ ಇರಲಿ ಎಂಬುದೇ ನನ್ನ ಹಾರೈಕೆಯಾಗಿದೆ.
ಸ್ನೇಹಿತರೇ,
‘ಮನದ ಮಾತಿನ’ ಪ್ರತಿಯೊಂದು ಸಂಚಿಕೆಯ ನಂತರ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ನನಗೆ ನಿಮ್ಮ ಸಂದೇಶ ದೊರೆಯುತ್ತಲಿರುತ್ತದೆ. ನೀವು ಇದೇ ರೀತಿ ಪ್ರೇರಣಾದಾಯಕ ವಿಷಯಗಳನ್ನು ನನಗೆ ಕಳುಹಿಸುತ್ತಿರಿ. ನಿಮ್ಮ ಸುತ್ತಮುತ್ತಲೂ ನಡೆಯುವ ಇಂತಹ ಪ್ರಯತ್ನಗಳ ಬಗ್ಗೆ ನೀವು ಪ್ರಶಂಸಿಸಿದಾಗ, ಅವರ ಉತ್ಸಾಹ ಮತ್ತಷ್ಟು ಹೆಚ್ಚಾಗುತ್ತದೆ. ‘ಮನ್ ಕಿ ಬಾತ್’ ಮೂಲಕ ಅವರ ಬಗ್ಗೆ ಅರಿತು ದೇಶದ ಮತ್ತೊಂದು ಭಾಗದ ಜನರು ಕೂಡಾ ಸ್ಫೂರ್ತಿ ಪಡೆಯುತ್ತಾರೆ. ಈ ಯಾತ್ರೆ ಇದೇ ರೀತಿ ನಿಮ್ಮ ಸಹಕಾರದಿಂದ ಸತತವಾಗಿ ಮುಂದುವರಿಯುತ್ತಿರಲಿ. ಮುಂಬರಲಿರುವ ಹಬ್ಬಗಳನ್ನು ನೀವು ನಿಮ್ಮ ಕುಟುಂಬದರೊಡನೆ, ಸ್ನೇಹಿತರೊಂದಿಗೆ, ಸಂಪೂರ್ಣ ಸಂತೋಷ ಹಾಗೂ ಉಲ್ಲಾಸದಿಂದ ಆಚರಿಸಿ. ನಿಮ್ಮೆಲ್ಲರಿಗೂ ಮತ್ತೊಮ್ಮೆ ಹಾರ್ದಿಕ ಶುಭಹಾರೈಕೆಗಳು.
ಅನೇಕಾನೇಕ ಧನ್ಯವಾದ.
ನಮಸ್ಕಾರ.
*****
Do listen to this month's #MannKiBaat as we discuss a range of subjects. https://t.co/uNlANtGly7
— Narendra Modi (@narendramodi) September 27, 2026
India has made it clear that terrorism will be met with a strong and decisive response.#MannKiBaat pic.twitter.com/xwDUFCAGZs
— PMO India (@PMOIndia) September 27, 2026
The Census is a national responsibility and every citizen has a role to play.#MannKiBaat pic.twitter.com/DikrJ8RimG
— PMO India (@PMOIndia) September 27, 2026
Tributes to Shri Ashok Singhal Ji on his birth centenary. His lifelong dedication to society and the nation continues to inspire generations.#MannKiBaat pic.twitter.com/rWa6GJaNyL
— PMO India (@PMOIndia) September 27, 2026
From the historic Sun Temple to becoming a solar village, Modhera beautifully connects our rich heritage with a sustainable future.#MannKiBaat pic.twitter.com/QAY9ynzcwI
— PMO India (@PMOIndia) September 27, 2026
Tamil Nadu's A. Selvaraju Ji's efforts are helping people discover ancient idols and temples. Such initiatives help us connect with and better understand our heritage.#MannKiBaat pic.twitter.com/gMUU959cih
— PMO India (@PMOIndia) September 27, 2026
Nature conservation is bringing positive change in Assam.#MannKiBaat pic.twitter.com/Xmi5Ft1ncy
— PMO India (@PMOIndia) September 27, 2026
In the Sundarbans, women are planting mangroves that protect villages and support their livelihoods. pic.twitter.com/1Hyh0nX8PM
— PMO India (@PMOIndia) September 27, 2026
India's youth are coming together against drugs. Through the Nasha Mukt Yuva Abhiyan, they are spreading awareness through creative campaigns and activities.#MannKiBaat pic.twitter.com/iL0Rqd5MR3
— PMO India (@PMOIndia) September 27, 2026
Rajinder Singh Senior Ji is helping discover and train young hockey talent. His efforts are giving children in villages better opportunities to pursue the sport.#MannKiBaat pic.twitter.com/xZmiA246mW
— PMO India (@PMOIndia) September 27, 2026
Pratapgarh's famous Amla is creating new opportunities for farmers and women working in Self-Help Groups.#MannKiBaat pic.twitter.com/iVggcTUp5q
— PMO India (@PMOIndia) September 27, 2026
Across India, people are coming together to promote better nutrition and support healthier communities.#MannKiBaat pic.twitter.com/pmiG3ueyo6
— PMO India (@PMOIndia) September 27, 2026
Bhagwan Shri Ganesh's devotion goes beyond India... In Thailand, the Ganesh Himal Museum has over 10,000 Ganesh idols, reflecting the deep cultural ties shared between the two countries.#MannKiBaat pic.twitter.com/RSSGBGqwYB
— PMO India (@PMOIndia) September 27, 2026