ನಮಸ್ಕಾರ!
ಗಣ್ಯರೆ, ಜಗತ್ತಿನ ಎಲ್ಲೆಡೆಯಿಂದ ಆಗಮಿಸಿರುವ ಪ್ರತಿನಿಧಿಗಳೆ, ಉದ್ಯಮ ಮತ್ತು ಕೈಗಾರಿಕಾ ರಂಗದ ದಿಗ್ಗಜರೆ, ನೀತಿ ನಿರೂಪಕರೆ ಮತ್ತು ನನ್ನ ಸ್ನೇಹಿತರೆ.
ನಿಮ್ಮೆಲ್ಲರನ್ನೂ ಭಾರತಕ್ಕೆ ಆತ್ಮೀಯ ಸ್ವಾಗತ ನೀಡುತ್ತೇನೆ. ಸ್ವಲ್ಪ ಸಮಯದ ಹಿಂದಷ್ಟೇ, ಶ್ರೀಯುತರಾದ ಬ್ಲೂಮ್ಬರ್ಗ್ ಅವರು ಇಲ್ಲಿ ತಮ್ಮ ವಿಚಾರಧಾರೆಗಳನ್ನು ಹಂಚಿಕೊಂಡರು. ತಮ್ಮ 30 ವರ್ಷಗಳ ಸುದೀರ್ಘ ಪಯಣ ನೆನಪಿಸಿಕೊಂಡ ಅವರು, ನನ್ನನ್ನು ತಮ್ಮ ಸ್ನೇಹಿತರೆಂದು ಕರೆದರು. ವಯಸ್ಸಿನಲ್ಲಿ ಅವರು ನನಗಿಂತ ಹಿರಿಯರು, ತಮ್ಮ ವೃತ್ತಿಜೀವನದಲ್ಲಿ ಅವರು ಅತ್ಯಂತ ಯಶಸ್ವಿ ವ್ಯಕ್ತಿಯಾಗಿದ್ದಾರೆ. ಅವರು ಕೇವಲ ಯಶಸ್ವಿ ವ್ಯಕ್ತಿಯಷ್ಟೇ ಅಲ್ಲ, ಬದಲಾಗಿ ತಮ್ಮ ಕೆಲಸದ ಬಗ್ಗೆ ಅಪಾರ ಬದ್ಧತೆ ಹೊಂದಿರುವವರು. ಭಾರತದ ಬಗ್ಗೆ ಅವರಿಗಿರುವ ಪ್ರೀತಿ-ಆಸ್ಥೆಯನ್ನು ನಾನು ಬಹಳ ಹತ್ತಿರದಿಂದ ಕಂಡಿದ್ದೇನೆ. ಹಾಗಾಗಿ, ವೈಯಕ್ತಿಕವಾಗಿ ನಾನು ಅವರನ್ನು ಯಾವಾಗಲೂ ಗೌರವಿಸುತ್ತೇನೆ, ಅವರ ಬಗ್ಗೆ ಅಪಾರ ಮೆಚ್ಚುಗೆ ಹೊಂದಿದ್ದೇನೆ. ಇಂದಿಗೂ ಸಹ ಭಾರತದ ಮೇಲಿನ ಅವರ ಪ್ರೀತಿ ಮತ್ತು ಜಾಗತಿಕ ವೇದಿಕೆಗಳಲ್ಲಿ ಭಾರತ ಕುರಿತ ಅವರ ಸಕಾರಾತ್ಮಕ ಭಾವನೆಗಳು ನಿರಂತರವಾಗಿ ಸಕಾರಾತ್ಮಕ ಶಕ್ತಿಯ ಸೆಲೆಯಾಗಿದೆ. ಇದಕ್ಕಾಗಿ, ನಾನು ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರತಿ ವರ್ಷವೂ ಈ ವೇದಿಕೆಯು ವಿಶ್ವದ ಅತ್ಯುತ್ತಮ ಚಿಂತಕರನ್ನು ಒಂದೆಡೆ ಸೇರಿಸುತ್ತದೆ. ಇಲ್ಲಿ ಆರ್ಥಿಕತೆ, ತಂತ್ರಜ್ಞಾನ, ಇಂಧನ ಮತ್ತು ಜಾಗತಿಕ ವಿದ್ಯಮಾನಗಳ ಕುರಿತು ಚರ್ಚೆಗಳು ನಡೆಯುತ್ತವೆ. ಈ ಬಾರಿ, ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮವು ಭಾರತದಲ್ಲಿ ನಡೆಯುತ್ತಿದೆ. ಈ ನಿರ್ಧಾರಕ್ಕಾಗಿ ನಾನು ಶ್ರೀ ಬ್ಲೂಮ್ಬರ್ಗ್ ಮತ್ತು ಅವರ ಸಂಪೂರ್ಣ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನೀವು ಸೂಕ್ತ ಸಮಯದಲ್ಲಿ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದೀರಿ.
ಸ್ನೇಹಿತರೆ,
ಈ ವರ್ಷದ ಬ್ಲೂಮ್ಬರ್ಗ್ ಆರ್ಥಿಕ ವೇದಿಕೆಯು ವಿಶ್ವಾದ್ಯಂತ ಉದಯಿಸುತ್ತಿರುವ ಹೊಸ ಶಕ್ತಿಗಳ ಮೇಲೆ ಗಮನ ಹರಿಸಿದೆ. ಪ್ರತಿಯೊಂದು ಯುಗವೂ ತನ್ನದೇ ಆದ ಅಧಿಕಾರ ಮೂಲಗಳನ್ನು ಮತ್ತು ಅಧಿಕಾರ ವ್ಯಾಖ್ಯಾನವನ್ನು ಹೊಂದಿದೆ.. ಆದರೆ 21ನೇ ಶತಮಾನದಲ್ಲಿ, ವಿಶೇಷವಾಗಿ ಈ 3ನೇ ದಶಕದಲ್ಲಿ, ಒಂದು ದೊಡ್ಡ ಪರಿವರ್ತನೆ ನಡೆಯುತ್ತಿದೆ. ಇಂದು, ತಂತ್ರಜ್ಞಾನವೇ ಶಕ್ತಿ, ದತ್ತಾಂಶವೇ ಶಕ್ತಿ, ಜ್ಞಾನವೇ ಶಕ್ತಿ ಮತ್ತು ನಾವೀನ್ಯತೆಯೇ ಶಕ್ತಿಯಾಗಿದೆ.
ಆದರೆ ಸ್ನೇಹಿತರೆ,
ಅಧಿಕಾರ ಯಾರ ಬಳಿಯಿದೆ ಎಂಬುದು ನಿಜವಾದ ಪ್ರಶ್ನೆಯಲ್ಲ. ಬದಲಾಗಿ, ಆ ಅಧಿಕಾರವನ್ನು ಹೇಗೆ ಬಳಸಲಾಗುತ್ತಿದೆ ಎಂಬುದು ಮುಖ್ಯ ಪ್ರಶ್ನೆ. ತಂತ್ರಜ್ಞಾನವು ಕೇವಲ ಕೆಲವರನ್ನು ಮಾತ್ರ ಮುನ್ನಡೆಸುತ್ತದೆಯೇ? ಅಥವಾ ಲಕ್ಷಾಂತರ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆಯೇ? ಜ್ಞಾನವು ಕೇವಲ ಆಯ್ದ ಕೆಲವರ ಶಕ್ತಿಯಾಗಿ ಉಳಿಯುತ್ತದೆಯೇ? ಅಥವಾ ಅದು ಎಲ್ಲರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆಯೇ? ಇಲ್ಲಿಂದಲೇ ಒಂದು ಹೊಸ ಆಲೋಚನೆ ಉದಯಿಸುತ್ತದೆ. ಆ ಆಲೋಚನೆಯೆಂದರೆ, ಸಬಲೀಕರಣಗೊಳಿಸುವ ಶಕ್ತಿ. ನಿಯಂತ್ರಿಸುವ ಶಕ್ತಿಯನ್ನು ಮೀರಿ, ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿಯಿದೆ. ಸ್ಪರ್ಧಿಸುವ ಶಕ್ತಿಯನ್ನು ಮೀರಿ, ಸಹಕರಿಸುವ ಶಕ್ತಿಯಿದೆ. ಯಶಸ್ವಿಯಾಗುವ ಶಕ್ತಿಯನ್ನು ಮೀರಿ, ಇತರರು ಯಶಸ್ವಿಯಾಗಲು ಸಹಾಯ ಮಾಡುವ ಶಕ್ತಿಯಿದೆ. ಆದ್ದರಿಂದ, ಇಂದು ನಾನು ಇಲ್ಲಿಗೆ ಬಂದಿರುವ ದೃಷ್ಟಿಕೋನವಿದು: ಸಬಲೀಕರಣಗೊಳಿಸುವ ಶಕ್ತಿ.
ಸ್ನೇಹಿತರೆ,
ಈ ಆಲೋಚನೆಯು ಭಾರತಕ್ಕೆ ಹೊಸದೇನಲ್ಲ. ನಮ್ಮ ಸಂಪ್ರದಾಯದಲ್ಲಿ ಹೀಗೆ ಹೇಳಲಾಗಿದೆ: “ವಿದ್ಯಾ ವಿವಾದಾಯ ಧನಂ ಮದಾಯ, ಶಕ್ತಿಃ ಪರೇಷಾಂ ಪರಿಪೀಡನಾಯ; ಖಲಸ್ಯ ಸಾಧೋಃ ವಿಪರೀತಮ್ ಏತತ್, ಜ್ಞಾನಾಯ ದಾನಾಯ ಚ ರಕ್ಷಣಾಯ.” ಇದರ ಸಾರಾಂಶವೇನೆಂದರೆ, ಜ್ಞಾನ, ಸಂಪತ್ತು ಅಥವಾ ಅಧಿಕಾರ ಹೊಂದಿರುವವರು ಅದನ್ನು ಹೇಗೆ ಬಳಸುತ್ತಾರೆ ಎಂಬುದು ಮುಖ್ಯ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅಧಿಕಾರದ ನಿಜವಾದ ಮೌಲ್ಯವು ಅದರ ಉದ್ದೇಶದಲ್ಲಿದೆ. ಇಂದಿನ ಜಗತ್ತಿನಲ್ಲಿ ಈ ತತ್ವವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.
ಸ್ನೇಹಿತರೆ,
ಸಬಲೀಕರಣಗೊಳಿಸುವ ಶಕ್ತಿಯ ಈ ಮಾನವೀಯ ಮನೋಭಾವವು ಕೇವಲ ಇತರರಿಗೆ ಬೋಧಿಸಬೇಕಾದ ಪಾಠವಲ್ಲ. ಇದು ಸಾವಿರಾರು ವರ್ಷಗಳಿಂದ ನಮ್ಮ ಸಂಪ್ರದಾಯಗಳು ನಮಗೆ ಕಲಿಸಿರುವ ವಿಷಯವಾಗಿದೆ. ಭಾರತದಲ್ಲಿ, ನಮ್ಮ ಆಡಳಿತ ಮತ್ತು ಕೆಲಸದ ಸಂಸ್ಕೃತಿಯಲ್ಲಿ ಇದನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಇದನ್ನು ಸಾಬೀತುಪಡಿಸಿದ್ದೇವೆ. ಆದ್ದರಿಂದ, ಭಾರತದ ಉದಾಹರಣೆಗಳ ಮೂಲಕವೇ ನಾನು ನನ್ನ ಮಾತುಗಳನ್ನು ಮುಂದುವರಿಸುತ್ತೇನೆ.
ಸ್ನೇಹಿತರೆ,
ನಿಮಗೆಲ್ಲರಿಗೂ ತಿಳಿದಿರುವಂತೆ, ಭಾರತವು ಪ್ರಜಾಪ್ರಭುತ್ವದ ತಾಯಿ. ಭಾರತವು ನೂರಕ್ಕೂ ಹೆಚ್ಚು ಭಾಷೆಗಳನ್ನು, ಸುಮಾರು 80 ಸಾವಿರ ನೋಂದಾಯಿತ ಪತ್ರಿಕೆಗಳು ಮತ್ತು ಪ್ರಕಟಣೆಗಳನ್ನು ಹಾಗೂ ಸಾವಿರಕ್ಕೂ ಹೆಚ್ಚು ಉಪಗ್ರಹ ಟೆಲಿವಿಷನ್ ವಾಹಿನಿಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಭಾರತದಲ್ಲಿ 50 ಕೋಟಿಗೂ ಹೆಚ್ಚು ಯೂಟ್ಯೂಬ್ ಬಳಕೆದಾರರು ಮತ್ತು 50 ಕೋಟಿಗೂ ಹೆಚ್ಚು ಇನ್ಸ್ಟಾಗ್ರಾಮ್ ಬಳಕೆದಾರರಿದ್ದಾರೆ. ನಮ್ಮ ದೇಶದಲ್ಲಿ ಜನರು ವಿವಿಧ ವಿಷಯಗಳ ಕುರಿತು ಮುಕ್ತವಾಗಿ ಚರ್ಚಿಸುತ್ತಾರೆ, ನಾಗರಿಕರು ವೈವಿಧ್ಯಮಯ ದೃಷ್ಟಿಕೋನಗಳ ಬಗ್ಗೆ ಸಮಾಲೋಚನೆ ನಡೆಸುತ್ತಾರೆ. ಪ್ರಸ್ತುತ ಕಾಲಘಟ್ಟದಲ್ಲಿ, ಇದಕ್ಕೆ ಅನುವು ಮಾಡಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಂಶವೆಂದರೆ ‘ಡಿಜಿಟಲ್ ಶಕ್ತಿ’.
ಸ್ನೇಹಿತರೆ,
ಸುಮಾರು 12 ಅಥವಾ 13 ವರ್ಷಗಳ ಹಿಂದೆ, ಭಾರತದಲ್ಲಿ ಮೊಬೈಲ್ ಫೋನ್ಗಳು ಮತ್ತು ಇಂಟರ್ನೆಟ್ನ ಲಭ್ಯತೆಯೇ ಒಂದು ರೀತಿಯ ಅಧಿಕಾರವಾಗಿತ್ತು. ಯಾರ ಬಳಿ ಇವುಗಳ ಲಭ್ಯತೆ ಇತ್ತೋ, ಅವರ ಬಳಿ ಮಾಹಿತಿ, ಜ್ಞಾನ ಮತ್ತು ಅವಕಾಶಗಳೂ ಇದ್ದವು. 2014ರ ನಂತರ ಭಾರತದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ, ನಮಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಾಗ, ಮೊಬೈಲ್ ಡೇಟಾವನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಭಾರತವು ಹೆಚ್ಚಿನ ಒತ್ತು ನೀಡಿತು. ಇದರ ಪರಿಣಾಮವಾಗಿ, ಇಂದು ಸಣ್ಣ ಪಟ್ಟಣವೊಂದರ ವಿದ್ಯಾರ್ಥಿಯು ಡಿಜಿಟಲ್ ಕಲಿಕೆ ಮಾಡಲು ಸಾಧ್ಯವಾಗಿದೆ. ಹಳ್ಳಿಯ ಸಣ್ಣ ಅಂಗಡಿ ವರ್ತಕರು ಹೊಸ ಗ್ರಾಹಕರನ್ನು ತಲುಪಲು ಸಾಧ್ಯವಾಗಿದೆ. ಯುವಕರು ಆನ್ಲೈನ್ ಕೋರ್ಸ್ಗಳಿಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಭಾರತದಲ್ಲಿನ ಸಂಪರ್ಕ ವ್ಯವಸ್ಥೆಯು ಕೇವಲ ಜನರನ್ನು ಮಾತ್ರವಲ್ಲ, ಅವಕಾಶಗಳನ್ನೂ ಪರಸ್ಪರ ಸಂಪರ್ಕಿಸಿದೆ. ಇದೇ ನಿಜವಾದ ‘ಸಬಲೀಕರಣದ ಶಕ್ತಿ’.
ಸ್ನೇಹಿತರೆ,
ವಿದೇಶದಿಂದ ಆಗಮಿಸಿರುವ ಅತಿಥಿಗಳಿಗೆ, ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ಅನುಭವಿಸುವಂತೆ ನಾನು ಉತ್ತೇಜಿಸುತ್ತೇನೆ. ನಮ್ಮ ದೇಶದಲ್ಲಿ, ಬೀದಿಬದಿಯ ವ್ಯಾಪಾರಿ ಮತ್ತು ದೊಡ್ಡ ಕಾರು ಶೋರೂಮ್ನ ಕಾರ್ಯಾಚರಣೆ ಪ್ರಮಾಣಗಳು ಸಂಪೂರ್ಣವಾಗಿ ಭಿನ್ನವಾಗಿರಬಹುದು, ಆದರೆ ಅವರಿಬ್ಬರೂ ಒಂದೇ ರೀತಿಯ ಡಿಜಿಟಲ್ ಪಾವತಿ ವ್ಯವಸ್ಥೆ ಬಳಸುತ್ತಾರೆ. ಇದೇ ಎಲ್ಲರನ್ನೂ ಒಳಗೊಳ್ಳುವ ತಂತ್ರಜ್ಞಾನ ಶಕ್ತಿಯಾಗಿದೆ.
ಸ್ನೇಹಿತರೆ,
ಭಾರತವು ಹೊಂದಿರುವ ಸಾಮರ್ಥ್ಯಗಳನ್ನು ಕೇವಲ ನಮ್ಮ ಗಡಿಯೊಳಗೆ ಮಾತ್ರ ಸೀಮಿತವಾಗಿರಿಸಿಕೊಳ್ಳುವುದರಲ್ಲಿ ನಮಗೆ ನಂಬಿಕೆಯಿಲ್ಲ. ನಾವು ಅವುಗಳನ್ನು ನಿರಂತರವಾಗಿ ‘ಗ್ಲೋಬಲ್ ಸೌತ್'(ಅಭಿವೃದ್ಧಿಶೀಲ ರಾಷ್ಟ್ರಗಳು) ಮತ್ತು ನಮ್ಮ ಪಾಲುದಾರ ದೇಶಗಳೊಂದಿಗೆ ಹಂಚಿಕೊಳ್ಳುತ್ತೇವೆ. ಇತರೆ ರಾಷ್ಟ್ರಗಳು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಡಿಜಿಟಲ್ ವ್ಯವಸ್ಥೆ ಅಭಿವೃದ್ಧಿಪಡಿಸಲು ಸಾಧ್ಯವಾಗುವಂತೆ ನಾವು ನಮ್ಮ ‘ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ’ದ ಅನುಭವವನ್ನು ಅವರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಕೋವಿಡ್ ಅವಧಿಯಲ್ಲಿ ನಾವು ‘ಕೋವಿನ್’ ವೇದಿಕೆ ಅಭಿವೃದ್ಧಿಪಡಿಸಿದ್ದೆವು, ಅದು ಮುಕ್ತ ಮೂಲ(‘ಓಪನ್ ಸೋರ್ಸ್’)ವಾಗಿತ್ತು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಭಾರತದ ಸಾಮರ್ಥ್ಯಗಳು ಇತರೆ ದೇಶಗಳಿಗೂ ಹೊಸ ಸಾಧ್ಯತೆಗಳ ಬಾಗಿಲು ತೆರೆಯುವಂತೆ ಮಾಡುವುದು ನಮ್ಮ ನಿರಂತರ ಪ್ರಯತ್ನವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಶಕ್ತಿಯು ಮನುಕುಲವನ್ನು ಸಬಲೀಕರಣಗೊಳಿಸುವಂತಿರಬೇಕು.
ಸ್ನೇಹಿತರೆ,
ನಾವೀನ್ಯತೆಯ ಶಕ್ತಿಯೂ ಇದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಒಂದು ಕಲ್ಪನೆಯನ್ನು ಉತ್ಪನ್ನವಾಗಿ ಪರಿವರ್ತಿಸುವುದು ಮತ್ತು ಸಮಸ್ಯೆಯನ್ನು ಪರಿಹಾರವಾಗಿ ಬದಲಾಯಿಸುವುದು ಸ್ವತಃ ಒಂದು ಅಪಾರ ಸಾಮರ್ಥ್ಯವಾಗಿದೆ. ಆದರೆ ಅಂತಹ ಅವಕಾಶಗಳು ಸಮಾಜದ ಹೆಚ್ಚಿನ ಜನರನ್ನು ತಲುಪಿದಾಗ, ಅಧಿಕಾರದ ಸಮತೋಲನವು ಹೆಚ್ಚು ನ್ಯಾಯಯುತವಾಗುತ್ತದೆ, ಅದರ ಪ್ರಭಾವವು ಹಲವು ಪಟ್ಟು ಹೆಚ್ಚಾಗುತ್ತದೆ. ಭಾರತದ ಸ್ಟಾರ್ಟಪ್(ನವೋದ್ಯಮ) ಪ್ರಯಾಣವು ಈ ಪರಿವರ್ತನೆಗೆ ಒಂದು ಉದಾಹರಣೆಯಾಗಿದೆ. 2014ಕ್ಕೂ ಮೊದಲು, ಭಾರತದಲ್ಲಿ ಕೇವಲ ಕೆಲವು ನೂರು ಸ್ಟಾರ್ಟಪ್ಗಳಿದ್ದವು. ಇಂದು ದೇಶದಲ್ಲಿ 2,50,000ಕ್ಕೂ ಹೆಚ್ಚು ಸ್ಟಾರ್ಟಪ್ಗಳಿವೆ. ಈ ಸ್ಟಾರ್ಟಪ್ಗಳಲ್ಲಿ ಸುಮಾರು ಅರ್ಧದಷ್ಟು ಸಣ್ಣ ನಗರಗಳು ಮತ್ತು ಪಟ್ಟಣಗಳಿಂದ ಬಂದಿವೆ. ಶೇಕಡ 45ಕ್ಕಿಂತ ಹೆಚ್ಚು ಸ್ಟಾರ್ಟಪ್ಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕರು ಅಥವಾ ಪಾಲುದಾರರು ಇದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವೀನ್ಯತೆಯ ಅವಕಾಶಗಳು ಹೆಚ್ಚಿನ ಜನರನ್ನು ತಲುಪುತ್ತಿವೆ, ಹೊಸ ಪ್ರತಿಭೆಗಳು ಹೊರಹೊಮ್ಮುತ್ತಿವೆ, ಹೊಸ ಪರಿಹಾರಗಳು ಸೃಷ್ಟಿಯಾಗುತ್ತಿವೆ.
ಸ್ನೇಹಿತರೆ,
ಆಡಳಿತದಲ್ಲಿ ಅಧಿಕಾರದ ಉದ್ದೇಶದ ಮೇಲಿನ ಈ ಗಮನವು ಅಷ್ಟೇ ಮುಖ್ಯವಾಗಿದೆ. ಸರ್ಕಾರದ ಬಳಿ ಅಧಿಕಾರವಿದೆ, ಆದರೆ ನಾಗರಿಕರನ್ನು ವ್ಯವಸ್ಥೆಯ ಮೇಲೆ ಅವಲಂಬಿತರನ್ನಾಗಿಸುವುದು ಅದರ ಉದ್ದೇಶವಾಗಬಾರದು. ಬದಲಾಗಿ, ನಾಗರಿಕರು ಸಮರ್ಥರಾಗುವಂತೆ ಮತ್ತು ಸಬಲರಾಗುವಂತೆ ಮಾಡುವುದೇ ಅದರ ಗುರಿಯಾಗಿರಬೇಕು. ಭಾರತವು ಇದೇ ಹಾದಿಯಲ್ಲಿ ಸಾಗುತ್ತಿದೆ. ಈ ಹಾದಿಯನ್ನು ಅನುಸರಿಸಿ, ಭಾರತವು ಕಳೆದ ದಶಕದಲ್ಲಿ 25 ಕೋಟಿ(250 ಮಿಲಿಯನ್) ಜನರನ್ನು ಬಡತನದಿಂದ ಹೊರತಂದಿದೆ. ಈ ಸಂಖ್ಯೆಯು ವಿಶ್ವದ ಹಲವಾರು ದೇಶಗಳ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿದೆ.
ಸ್ನೇಹಿತರೆ,
ನೀವು “ಜನ್ ಧನ್ ಯೋಜನೆ, ಆಧಾರ್ ಮತ್ತು ಮೊಬೈಲ್ ಸಂಪರ್ಕದ ತ್ರಿಕೂಟ”(JAM Trinity) ಮತ್ತು ‘ನೇರ ಲಾಭ ವರ್ಗಾವಣೆ’ ಬಗ್ಗೆ ಕೇಳಿರಬಹುದು. ತಂತ್ರಜ್ಞಾನ ಬಳಸಿಕೊಂಡು ನಾವು ಅಂತಹ ಒಂದು ವ್ಯವಸ್ಥೆ ರೂಪಿಸಿದ್ದೇವೆ, ಇದರ ಮೂಲಕ ಸರ್ಕಾರದ ನೆರವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲುಪುತ್ತದೆ. ಇದು ಭ್ರಷ್ಟಾಚಾರವನ್ನು ಕಡಿಮೆ ಮಾಡಿದೆ, ನಾಗರಿಕರಿಗೆ ಅನುಕೂಲ ಹೆಚ್ಚಿಸಿದೆ, ಸರ್ಕಾರ ಹಾಗೂ ಜನರ ನಡುವೆ ನೇರ ಸಂಪರ್ಕ ಕಲ್ಪಿಸಿದೆ.
ಸ್ನೇಹಿತರೆ,
‘ಸಬಲೀಕರಣಕ್ಕಾಗಿ ಅಧಿಕಾರ’ ಎಂಬ ಇದೇ ತತ್ವವು ಭಾರತದ ಜಾಗತಿಕ ಪಾತ್ರದಲ್ಲೂ ಎದ್ದು ಕಾಣುತ್ತದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಲಸಿಕೆ ಉತ್ಪಾದನಾ ಸಾಮರ್ಥ್ಯವು ಅತ್ಯಂತ ನಿರ್ಣಾಯಕವಾಗಿತ್ತು. ಆ ಸಮಯದಲ್ಲಿ ಉದ್ಭವಿಸಿದ ಪ್ರಶ್ನೆಯೆಂದರೆ, ಈ ಸಾಮರ್ಥ್ಯದ ಪ್ರಯೋಜನಗಳು ಕೇವಲ ಕೆಲವೇ ದೇಶಗಳಿಗೆ ಸೀಮಿತವಾಗಿರುತ್ತವೆಯೇ ಅಥವಾ ಅಂತಹ ಸೌಲಭ್ಯಗಳು ಮತ್ತು ಸಾಮರ್ಥ್ಯಗಳಿಲ್ಲದ ರಾಷ್ಟ್ರಗಳು ಹಾಗೂ ಜನರಿಗೂ ಲಸಿಕೆಗಳು ತಲುಪುತ್ತವೆಯೇ ಎಂಬುದು. ಭಾರತವು ಮನುಕುಲವನ್ನು ಸಬಲೀಕರಣಗೊಳಿಸುವ ಮಾರ್ಗ ಆರಿಸಿಕೊಂಡಿತು. ನಾವು 100ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಗಳನ್ನು ಪೂರೈಸಿದೆವು. ನಮ್ಮ ಉತ್ಪಾದನಾ ಸಾಮರ್ಥ್ಯವು ಇತರೆ ರಾಷ್ಟ್ರಗಳಿಗೂ ನೆರವಿನ ಮೂಲವಾಯಿತು. ನಾನು ನಿಮಗೆ ಮತ್ತೊಂದು ಆಸಕ್ತಿದಾಯಕ ಉದಾಹರಣೆ ನೀಡುತ್ತೇನೆ. ಕೆಲವು ತಿಂಗಳ ಹಿಂದೆ ಭಾರತವು ‘ಎಐ ಇಂಪ್ಯಾಕ್ಟ್ ಶೃಂಗಸಭೆ’ ಆಯೋಜಿಸಿತ್ತು. ಶ್ರೀ ಬ್ಲೂಮ್ಬರ್ಗ್ ಅವರು ಆ ಶೃಂಗಸಭೆಯ ಬಗ್ಗೆ ಅತ್ಯಂತ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಲ್ಲಿ ನಾವು ಮನುವಕುಲಕ್ಕಾಗಿ ಎಐ(ಕೃತಕ ಬುದ್ಧಿಮತ್ತೆ) ಬಳಕೆಯ ಬಗ್ಗೆ ಮಾತ್ರವಲ್ಲದೆ, ಪ್ರಾಣಿಗಳಿಗೂ ಎಐನಿಂದ ಹೇಗೆ ಪ್ರಯೋಜನವಾಗಬಹುದು ಎಂಬುದರ ಕುರಿತು ಚರ್ಚಿಸಿದೆವು. ಇಲ್ಲಿ ಉಪಸ್ಥಿತರಿರುವ ನಂದನ್ ಅವರು, ಇದನ್ನು ಹೇಗೆ ಸಾಧಿಸಲಾಯಿತು ಎಂಬುದರ ಕುರಿತು ನಂತರ ಹೆಚ್ಚಿನ ಮಾಹಿತಿ ಹಂಚಿಕೊಳ್ಳಬಲ್ಲರು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಭಾರತವು ಎಷ್ಟು ಹೆಚ್ಚು ಸಮರ್ಥ ಮತ್ತು ಬಲಶಾಲಿಯಾಗುತ್ತದೆಯೋ, ಅಷ್ಟು ಹೆಚ್ಚು ಅದು ಮನುವಕುಲಕ್ಕೆ ಮತ್ತು ಜಗತ್ತಿಗೆ ಪ್ರಯೋಜನಕಾರಿಯಾಗುತ್ತದೆ.
ಸ್ನೇಹಿತರೆ,
ಅಧಿಕಾರವೆಂದರೆ ಕೇವಲ ಮುಂದೆ ಸಾಗುವ ಸಾಮರ್ಥ್ಯವಲ್ಲ. ಅದು ಇತರರನ್ನು ಮುಂದೆ ಸಾಗುವಂತೆ ಸಬಲೀಕರಣಗೊಳಿಸುವ ಸಾಮರ್ಥ್ಯವೂ ಹೌದು. ಸ್ಪರ್ಧೆಯು ಮುಖ್ಯವೆಂದು ಭಾರತ ನಂಬುತ್ತದೆ, ಆದರೆ ಸಹಾನುಭೂತಿಯೂ ಅಷ್ಟೇ ಮುಖ್ಯ. ನಾವೀನ್ಯತೆಯೂ ಅತ್ಯಗತ್ಯ, ಆದರೆ ಅದರ ಪ್ರಯೋಜನಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಬೇಕು. ರಾಷ್ಟ್ರೀಯ ಬಲವು ಅಗತ್ಯ, ಆದರೆ ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿಯೂ ನಾವು ಕೊಡುಗೆ ನೀಡಬೇಕು. ಹವಾಮಾನ ಬದಲಾವಣೆ, ಜಲ ನಿರ್ವಹಣೆ, ಸಾರ್ವಜನಿಕ ಆರೋಗ್ಯ ಅಥವಾ ಉದಯೋನ್ಮುಖ ತಂತ್ರಜ್ಞಾನಗಳ ಜವಾಬ್ದಾರಿಯುತ ಬಳಕೆ – ಹೀಗೆ ಯಾವುದಾದರೂ ಆಗಿರಲಿ, ಪರಿಹಾರಗಳನ್ನು ಒದಗಿಸುವ ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯಗಳು ಜಗತ್ತಿಗೆ ಅಗತ್ಯವಾಗಿವೆ.
ಸ್ನೇಹಿತರೆ,
ನಾನು ನಿಮಗೆ ಮತ್ತೊಂದು ಉದಾಹರಣೆ ನೀಡುತ್ತೇನೆ. ಪ್ಯಾರಿಸ್ ಒಪ್ಪಂದದ ಅಡಿ, ಹವಾಮಾನ ಬದಲಾವಣೆ ಎದುರಿಸಲು ಭಾರತವು ಪ್ರಮುಖ ಬದ್ಧತೆಯನ್ನು ವ್ಯಕ್ತಪಡಿಸಿತು. 2030ರ ವೇಳೆಗೆ ನಮ್ಮ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶೇಕಡ 40ರಷ್ಟನ್ನು ಉರವಲು-ಇಂಧನವಲ್ಲದ ಮೂಲಗಳಿಂದ ಪಡೆಯುವ ಗುರಿಯನ್ನು ನಾವು 2015ರಲ್ಲಿ ಹೊಂದಿದ್ದೆವು. ಭಾರತವು ಈ ಮೈಲಿಗಲ್ಲನ್ನು ನಿಗದಿತ ಸಮಯಕ್ಕಿಂತ 9 ವರ್ಷಗಳ ಮುಂಚಿತವಾಗಿಯೇ, ಅಂದರೆ 2021ರ ನವೆಂಬರ್ನಲ್ಲೇ ತಲುಪಿತು. ಹೀಗೆ ಮಾಡಿದ ಮೊದಲ ಜಿ-20 ರಾಷ್ಟ್ರ ಭಾರತವಾಯಿತು. ಇದು ಕೇವಲ ಒಂದು ಬದ್ಧತೆಯನ್ನು ಪೂರೈಸುವ ವಿಷಯವಾಗಿರಲಿಲ್ಲ; ಬದಲಾಗಿ, ಇದು ಭಾರತದ ವಿಕಸನಗೊಳ್ಳುತ್ತಿರುವ ಇಂಧನ ಪಯಣದ ಪ್ರತಿಬಿಂಬವೂ ಆಗಿತ್ತು.
ಸ್ನೇಹಿತರೆ,
2014ರಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವು ಸುಮಾರು 75 ಗಿಗಾವ್ಯಾಟ್ನಷ್ಟಿತ್ತು. ಇಂದು ಅದು ಸುಮಾರು 300 ಗಿಗಾವ್ಯಾಟ್ಗೆ ತಲುಪಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಸುಮಾರು 4 ಪಟ್ಟು ಹೆಚ್ಚಿನ ಸಾಮರ್ಥ್ಯ ಸೇರಿಸಿದ್ದೇವೆ.
ಸ್ನೇಹಿತರೆ,
ಭಾರತದಲ್ಲಿ ನಡೆಯುತ್ತಿರುವ ಈ ಇಂಧನ ಪರಿವರ್ತನೆಯು ಹೊಸ ಅವಕಾಶಗಳನ್ನೂ ಸೃಷ್ಟಿಸುತ್ತಿದೆ. ಇಂದು ನಮ್ಮಲ್ಲಿ ‘ಪಿಎಂ ಸೂರ್ಯ ಘರ್’ ಮತ್ತು ‘ಪಿಎಂ-ಕುಸುಮ್’ನಂತಹ ಯೋಜನೆಗಳಿವೆ. ಒಂದು ಯೋಜನೆಯು ಮನೆಗಳಿಗೆ ಸೌರಶಕ್ತಿಯ ಸಂಪರ್ಕ ಕಲ್ಪಿಸುತ್ತಿದ್ದರೆ, ಇನ್ನೊಂದು ಯೋಜನೆಯು ರೈತರಿಗೆ ಸೌರಶಕ್ತಿ ಉತ್ಪಾದಿಸಲು ಮತ್ತು ಅದರ ಬಳಕೆಯ ಮೂಲಕ ತಮ್ಮ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಅನುವು ಮಾಡಿಕೊಡುತ್ತಿದೆ. ಈ 2 ಯೋಜನೆಗಳ ಮೂಲಕ ಭಾರತವು 30 ಗಿಗಾವ್ಯಾಟ್ಗಿಂತಲೂ ಹೆಚ್ಚು ಸೌರಶಕ್ತಿ ಸಾಮರ್ಥ್ಯ ಸಾಧಿಸಿದೆ. ಇವು ವಾರ್ಷಿಕವಾಗಿ 30 ದಶಲಕ್ಷ ಟನ್ಗಳಿಗಿಂತ ಹೆಚ್ಚು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತವೆ ಎಂದು ಅಂದಾಜಿಸಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸೌರಶಕ್ತಿಯು ಪ್ರಕೃತಿ ರಕ್ಷಿಸುವ ಸಾಧನವಾಗುವ ಜತೆಗೆ, ಜನರನ್ನು ಸಬಲೀಕರಣಗೊಳಿಸುವ ಸಾಧನವಾಗಿಯೂ ಹೊರಹೊಮ್ಮುತ್ತಿದೆ.
ಸ್ನೇಹಿತರೆ,
ಅಧಿಕಾರಕ್ಕಾಗಿ ನಡೆಯುತ್ತಿರುವ ಈ ಜಾಗತಿಕ ಸ್ಪರ್ಧೆಯಲ್ಲಿ, ಭಾರತವು ವಿಭಿನ್ನ ಮನಸ್ಥಿತಿಯೊಂದಿಗೆ ಮುನ್ನಡೆಯುತ್ತಿದೆ. ಈ ದಶಕವೇ ಅದಕ್ಕೆ ಸಾಕ್ಷಿಯಾಗಿದೆ.
ಸ್ನೇಹಿತರೆ,
21ನೇ ಶತಮಾನದ ಈ ದಶಕವು ಅಭೂತಪೂರ್ವ ಜಾಗತಿಕ ಸವಾಲುಗಳನ್ನು ತಂದಿದೆ. ಕಳೆದ 6 ವರ್ಷಗಳನ್ನು ಅವಲೋಕಿಸಿದರೆ, ನಾವು ಜಾಗತಿಕ ಸಾಂಕ್ರಾಮಿಕ ರೋಗ ಕಂಡಿದ್ದೇವೆ. ನಂತರ ವಿವಿಧ ಪ್ರದೇಶಗಳಲ್ಲಿ ಯುದ್ಧಗಳು ಭುಗಿಲೆದ್ದವು. ಅಷ್ಟೇ ಅಲ್ಲದೆ ವ್ಯಾಪಾರ, ಪ್ರಮುಖ ಖನಿಜಗಳು ಮತ್ತು ಇಂಧನ ಪೂರೈಕೆಯಲ್ಲಿ ವ್ಯತ್ಯಯಗಳು ಉಂಟಾದವು. ಒಂದು ಬಿಕ್ಕಟ್ಟಿನಿಂದ ಹೊರಬರುವಷ್ಟರಲ್ಲಿಯೇ ಮತ್ತೊಂದು ಬಿಕ್ಕಟ್ಟು ಎದುರಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಹಿಂದೆ ಜಗತ್ತನ್ನು ಬೆಸೆಯುತ್ತಿದ್ದ ಅಂಶಗಳನ್ನೇ ಈಗ ಅಸ್ತ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಪೂರೈಕೆ ಸರಪಳಿಗಳು, ಇಂಧನ, ಖನಿಜಗಳು, ಪಾವತಿ ವ್ಯವಸ್ಥೆಗಳು ಮತ್ತು ತಂತ್ರಜ್ಞಾನಗಳು ಹೆಚ್ಚಾಗಿ ಒತ್ತಡ ಹೇರುವ ಮತ್ತು ಪ್ರಾಬಲ್ಯ ಸಾಧಿಸುವ ಸಾಧನಗಳಾಗಿ ಬದಲಾಗುತ್ತಿವೆ. ಕಳೆದ ದಶಕಗಳಲ್ಲಿ ಜಾಗತೀಕರಣದ ಮೂಲಕ ಸೃಷ್ಟಿಯಾದ ಮಾರ್ಗಗಳು ಅನೇಕ ಸಂದರ್ಭಗಳಲ್ಲಿ ಈಗ ಅಡೆತಡೆಗಳ ತಾಣಗಳಾಗಿ ಪರಿಣಮಿಸಿವೆ. ಇವೆಲ್ಲದರ ನಡುವೆ ಕೃತಕ ಬುದ್ಧಿಮತ್ತೆಯು ಪ್ರತಿಯೊಂದು ವಲಯದ ಕಾರ್ಯನಿರ್ವಹಣಾ ವಿಧಾನವನ್ನೇ ಬದಲಾಯಿಸುತ್ತಿದೆ. ಅದೇ ಸಮಯದಲ್ಲಿ, ಅನೇಕ ದೇಶಗಳು ವಯಸ್ಸಾಗುತ್ತಿರುವ ಜನಸಂಖ್ಯೆಗೆ ಸಂಬಂಧಿಸಿದ ವೇಗವಾಗಿ ಬೆಳೆಯುತ್ತಿರುವ ಸವಾಲುಗಳನ್ನು ಎದುರಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ, ಜಗತ್ತು ಒಂದು ಮೂಲಭೂತ ಪ್ರಶ್ನೆಯನ್ನು ಎದುರಿಸುತ್ತಿದೆ: ಅದುವೇ ‘ನಂಬಿಕೆ’. ಅಗತ್ಯದ ಸಮಯದಲ್ಲಿ ಪೂರೈಕೆಗಳು ಮುಂದುವರಿಯುತ್ತವೆ ಎಂಬ ನಂಬಿಕೆ; ನೀಡಿದ ಭರವಸೆಗಳನ್ನು ಈಡೇರಿಸಲಾಗುತ್ತದೆ ಎಂಬ ನಂಬಿಕೆ; ಬಿಕ್ಕಟ್ಟಿನ ಕ್ಷಣಗಳಲ್ಲಿ ಪಾಲುದಾರ ದೇಶವು ಬೆಂಬಲಕ್ಕೆ ನಿಲ್ಲುತ್ತದೆ ಎಂಬ ನಂಬಿಕೆ. ಇಲ್ಲಿಯೇ ಭಾರತವು ವಿಭಿನ್ನ ದೃಷ್ಟಿಕೋನ ಹಾಗೂ ವಿಭಿನ್ನ ಚಿಂತನೆಯೊಂದಿಗೆ ನಿಮ್ಮ ಮುಂದೆ ನಿಂತಿದೆ.
ಸ್ನೇಹಿತರೆ,
21ನೇ ಶತಮಾನದಲ್ಲಿ ಭಾರತದ ಪ್ರಗತಿಯು ಎಲ್ಲರೊಂದಿಗೆ ಸೇರಿ ಮುನ್ನಡೆಯುವ ಮತ್ತು ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ಕಥೆಯಾಗಿದೆ. ಜಗತ್ತಿಗೆ ಕೈಗೆಟುಕುವ ದರದ ಔಷಧಿಗಳ ಅಗತ್ಯವಿದ್ದಾಗ, ಪ್ರತಿ 5 ಜೆನೆರಿಕ್ ಔಷಧಿಗಳಲ್ಲಿ ಒಂದು ಭಾರತದಿಂದಲೇ ಬರುತ್ತದೆ. ಡಿಜಿಟಲ್ ಗುರುತು ಮತ್ತು ಪಾವತಿ ವ್ಯವಸ್ಥೆಗಳಿಗೆ ಪರಿಹಾರಗಳು ಬೇಕಾದಾಗ, ಜಗತ್ತು ಭಾರತದಲ್ಲಿ ಅಭಿವೃದ್ಧಿಪಡಿಸಿದ ಮಾದರಿಗಳತ್ತ ನೋಡುತ್ತದೆ. ಜಗತ್ತಿಗೆ ಪ್ರತಿಭೆಯ ಅಗತ್ಯವಿದ್ದಾಗ, ಅದು ಭಾರತದ ಕೌಶಲ್ಯಪೂರ್ಣ ಯುವಜನತೆಯ ಮೇಲೆ ನಂಬಿಕೆ ಇಡುತ್ತದೆ. ಇಂದು ಭಾರತವು 2,000ಕ್ಕೂ ಹೆಚ್ಚು ‘ಜಾಗತಿಕ ಸಾಮರ್ಥ್ಯ ಕೇಂದ್ರ’ಗಳ ತಾಣವಾಗಿದ್ದು, ಇವು ವಿಶ್ವಾದ್ಯಂತದ ಕಂಪನಿಗಳಿಗೆ ಸೇವೆಗಳನ್ನು ಒದಗಿಸುತ್ತಿವೆ.
ಸ್ನೇಹಿತರೆ,
ಜಗತ್ತಿಗೆ ಒಂದು ದೃಢವಾದ ಆಧಾರಸ್ತಂಭದ ಅಗತ್ಯವಿದ್ದಾಗಲೆಲ್ಲಾ, ಭಾರತವು ತನ್ನ ಜವಾಬ್ದಾರಿಯನ್ನು ಅರಿತು ಬೆಂಬಲದ ಹಸ್ತ ಚಾಚುತ್ತದೆ ಎಂಬುದು ಸ್ಪಷ್ಟವಾಗಿದೆ. ನಾವು ಯಾರೊಬ್ಬರ ಹಿತಕ್ಕೆ ಧಕ್ಕೆ ತರುವ ಮೂಲಕ ಬೆಳೆಯುವುದಿಲ್ಲ. ನಾವು ಜಗತ್ತಿನೊಂದಿಗೆ ಮತ್ತು ಜಗತ್ತಿಗಾಗಿ ಬೆಳೆಯುತ್ತೇವೆ.
ಮತ್ತು ಸ್ನೇಹಿತರೆ,
ಭಾರತವು ತಾನು ಮಾಡುವ ಕೆಲಸಕ್ಕಾಗಿ ಯಾವುದೇ ಶ್ರೇಯಸ್ಸನ್ನು ಬಯಸುವುದಿಲ್ಲ. ಭಾರತವು ಜಗತ್ತಿಗೆ “ಶೂನ್ಯ” ನೀಡಿದೆ ಎಂಬುದನ್ನು ಇಡೀ ಜಗತ್ತು ಹೆಮ್ಮೆಯಿಂದ ಹೇಳುತ್ತದೆ. ಈ ಶೂನ್ಯವು ಎಲ್ಲಾ ಮಾನವತೆಗೆ ಪ್ರಯೋಜನ ನೀಡಿದೆ. ಆದರೂ ಭಾರತವು ಪ್ರತಿಯಾಗಿ ರಾಜಧನವನ್ನು ಎಂದಿಗೂ ಕೇಳಲಿಲ್ಲ. ಇಂದಿಗೂ, ಭಾರತವು ಅದೇ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತದೆ. ಸಮಕಾಲೀನ ಸವಾಲುಗಳನ್ನು ಎದುರಿಸಲು ನಾವು ನೀಡುವ ವಿಚಾರಗಳು ಸಹ ಈ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಇತಿಹಾಸದುದ್ದಕ್ಕೂ, ಅನೇಕ ಜಾಗತಿಕ ಸಂಸ್ಥೆಗಳನ್ನು ರಚಿಸಲಾಗಿದೆ, ಪ್ರತಿಯೊಂದೂ ತನ್ನದೇ ಆದ ಹಿತಾಸಕ್ತಿಗಳನ್ನು ಪೂರೈಸುತ್ತದೆ. ನಾವು ಸ್ಥಾಪಿಸಿರುವ ಸಂಸ್ಥೆಗಳನ್ನು ಪರಿಗಣಿಸಿ ಮತ್ತು ಅವುಗಳನ್ನು ಪ್ರಪಂಚದ ಬೇರೆಡೆ ಹೊರಹೊಮ್ಮಿರುವ ಸಂಸ್ಥೆಗಳೊಂದಿಗೆ ಹೋಲಿಕೆ ಮಾಡಿ. ನಾವು ಏನು ಕೊಡುಗೆ ನೀಡಿದ್ದೇವೆ? ಅಂತಾರಾಷ್ಟ್ರೀಯ ಸೌರ ಒಕ್ಕೂಟ. ನಾವು ಏನು ಕೊಡುಗೆ ನೀಡಿದ್ದೇವೆ? ವಿಪತ್ತು ಚೇತರಿಕೆಯ ಮೂಲಸೌಕರ್ಯ ಒಕ್ಕೂಟ. ನಾವು ಏನು ಕೊಡುಗೆ ನೀಡಿದ್ದೇವೆ? ಬಿಗ್ ಕ್ಯಾಟ್ ಅಲೈಯನ್ಸ್, ಗ್ಲೋಬಲ್ ಬಯೋಫ್ಯೂಯಲ್ ಅಲೈಯನ್ಸ್, ಇಂಡಿಯಾ-ಮಧ್ಯಪ್ರಾಚ್ಯ-ಯುರೋಪ್ ಎಕನಾಮಿಕ್ ಕಾರಿಡಾರ್ ಮತ್ತು ಮಿಷನ್ ಲೈಫ್, ಪರಿಸರಕ್ಕಾಗಿ ಜೀವನಶೈಲಿ. ಇವೆಲ್ಲವೂ ಎಲ್ಲರಿಗೂ ಪ್ರಯೋಜನ ನೀಡುವ ಮತ್ತು ಎಲ್ಲಾ ಜೀವಗಳ ಯೋಗಕ್ಷೇಮಕ್ಕೆ ಕೊಡುಗೆ ನೀಡುವ ಉಪಕ್ರಮಗಳಾಗಿವೆ.
ಸ್ನೇಹಿತರೆ,
ಭಾರತವು ಮುಂದಿಟ್ಟಿರುವ ವಿಚಾರಗಳು ನಿಮ್ಮ ಮುಂದೆಯೇ ಇವೆ. ಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್ನ ದೃಷ್ಟಿಕೋನ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಮೇಲಿನ ನಂಬಿಕೆ. ಒಂದು ಭೂಮಿ, ಒಂದು ಆರೋಗ್ಯದ ದೃಷ್ಟಿಕೋನ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತವು ಸಂಪರ್ಕ ಸಾಧಿಸುವುದು ಮತ್ತು ಒಟ್ಟಿಗೆ ಬರುವುದಕ್ಕೆ ಒತ್ತು ನೀಡುತ್ತದೆ. ಇದರಲ್ಲಿಯೂ ಸಹ, ಶಕ್ತಿಯನ್ನು ಇತರರನ್ನು ಸಬಲೀಕರಣಗೊಳಿಸಲು ಬಳಸಲಾಗುತ್ತದೆ.
ಸ್ನೇಹಿತರೆ,
ಅನಿಶ್ಚಯದಿಂದ ಕೂಡಿದ ಜಗತ್ತಿನಲ್ಲಿ ಭಾರತವು ವಿಶ್ವಾಸಾರ್ಹತೆ ಮತ್ತು ಸ್ಥಿರತೆಯ ಭರವಸೆ ನೀಡುತ್ತದೆ. ಈ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ, ಭಾರತದ ಬೆಳವಣಿಗೆ ದರವು ಶೇಕಡ 7.8ರಷ್ಟಿತ್ತು. ಈ ಬೆಳವಣಿಗೆಯು ಒಂದು ಬಲವಾದ ಅಡಿಪಾಯದ ಮೇಲೆ ನಿಂತಿದೆ. 12-13 ವರ್ಷಗಳ ಹಿಂದೆ, ಭಾರತದ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇಕಡ 4ಕ್ಕಿಂತ ಹೆಚ್ಚಿತ್ತು. ಕಳೆದ ವರ್ಷ ಅದು ಸುಮಾರು ಅರ್ಧದಷ್ಟು ಕಡಿಮೆಯಾಗಿ ಶೇಕಡ 0.61 ರಷ್ಟಿತ್ತು. ಇಂದು ನಮ್ಮ ವಿದೇಶಿ ವಿನಿಮಯ ಸಂಗ್ರಹ ನಿಧಿಯು 700 ಶತಕೋಟಿ ಡಾಲರ್ಗಳನ್ನು ಮೀರಿದೆ. ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯು ಹಲವು ದಶಕಗಳಲ್ಲೇ ಅತ್ಯಂತ ಬಲಿಷ್ಠ ಸ್ಥಿತಿಯಲ್ಲಿದೆ.
ಸ್ನೇಹಿತರೆ,
ಈ ಬಲದಿಂದಲೇ ಭಾರತದ ಸಾರ್ವಭೌಮ ರೇಟಿಂಗ್ಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇಂದು, ಭಾರತದ ಆತ್ಮವಿಶ್ವಾಸವು ಅಭೂತಪೂರ್ವ ಮಟ್ಟದಲ್ಲಿದೆ. ನಾವು ಸ್ಪಷ್ಟ ನೀತಿ ನಿರ್ದೇಶನದೊಂದಿಗೆ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದೇವೆ. ಜಿಎಸ್ಟಿ ಮೂಲಕ, ನಾವು ತೆರಿಗೆಗಳ ಸಂಕೀರ್ಣ ಜಾಲವನ್ನು ರಾಷ್ಟ್ರೀಯ ಮಾರುಕಟ್ಟೆಯಾಗಿ ಪರಿವರ್ತಿಸಿದ್ದೇವೆ. ನಾವು ದಿವಾಳಿತನ ಮತ್ತು ಋಣಬಾಧೆ ಕಾನೂನು ಜಾರಿಗೆ ತಂದಿದ್ದೇವೆ. 29 ಕಾರ್ಮಿಕ ಕಾನೂನುಗಳನ್ನು ಈಗ 4 ಸರಳ ಕಾರ್ಮಿಕ ಸಂಹಿತೆಗಳಾಗಿ ಕ್ರೋಢೀಕರಿಸಲಾಗಿದೆ. ವ್ಯವಹಾರಕ್ಕೆ ಸಂಬಂಧಿಸಿದ ನೂರಾರು ಸಣ್ಣ ಅಪರಾಧಗಳನ್ನು ಅಪರಾಧ ಮುಕ್ತ ಪಟ್ಟಿಗೆ ಸೇರಿಸಲಾಗಿದೆ. ನಾವು ಅಲ್ಲಿಗೇ ನಿಲ್ಲದೆ, ಭಾರತದ ಸುಧಾರಣಾ ವೇಗವು ಅತ್ಯಂತ ವೇಗವಾಗಿ ಮುಂದುವರಿಯುತ್ತಿದೆ. ನಮಗೆ ಸುಧಾರಣೆಗಳು ಕೇವಲ ಅನಿವಾರ್ಯತೆಯಲ್ಲ, ಸುಧಾರಣೆಗಳು ನಮ್ಮ ದೃಢ ನಂಬಿಕೆಯಾಗಿವೆ.
ಸ್ನೇಹಿತರೆ,
ಸಾವಿರಾರು ವರ್ಷಗಳ ಹಿಂದೆ, ನಮ್ಮ ವೇದಗಳು ನಮಗೆ ಒಂದು ಮಂತ್ರ ನೀಡಿದ್ದವು: “ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಮ್”. ಇಂದು ನಾವೆಲ್ಲರೂ ಆ ಮಂತ್ರವನ್ನು ಪುನರುಚ್ಚರಿಸೋ. ನಾವೆಲ್ಲರೂ ಒಟ್ಟಾಗಿ ನಡೆಯೋಣ. ಒಟ್ಟಾಗಿ ಸಂವಾದ ನಡೆಸೋಣ. ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಏಕೆಂದರೆ, ನಾವು ಒಟ್ಟಾಗಿ ನಡೆದಾಗ ನಮ್ಮ ಶಕ್ತಿ ಹೆಚ್ಚುತ್ತದೆ. ಸಂವಾದದ ಮೂಲಕ ನಮ್ಮ ತಿಳಿವಳಿಕೆ ಗಾಢವಾಗುತ್ತದೆ. ಪರಸ್ಪರರನ್ನು ಅರ್ಥ ಮಾಡಿಕೊಳ್ಳುವ ಮೂಲಕ, ನಾವು ದೊಡ್ಡ ಸವಾಲುಗಳನ್ನು ಒಟ್ಟಾಗಿ ಬಗೆಹರಿಸಬಹುದು. ಇದೇ ಸಬಲೀಕರಣದ ಶಕ್ತಿ ಪರಿಕಲ್ಪನೆಯ ಸಾರವಾಗಿದೆ. ಇದರರ್ಥ ನಮ್ಮ ಶಕ್ತಿಯನ್ನು ಕೇವಲ ನಮ್ಮ ಸ್ವಂತ ಪ್ರಗತಿಗಷ್ಟೇ ಸೀಮಿತಗೊಳಿಸದೆ, ಇತರರಿಗೂ ಹೊಸ ಅವಕಾಶಗಳನ್ನು ಸೃಷ್ಟಿಸಲು ಅದನ್ನು ಬಳಸುವುದು. ಈ ಭಾವನೆಯನ್ನು ಮುನ್ನಡೆಸುವಲ್ಲಿ ‘ಬ್ಲೂಮ್ಬರ್ಗ್ ಆರ್ಥಿಕ ವೇದಿಕೆ’ಯು ಒಂದು ಪ್ರಮುಖ ಕಾರ್ಯಸ್ಥಳವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ನನ್ನ ಶುಭಾಶಯಗಳು.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
Speaking at the Bloomberg New Economy Forum. https://t.co/H91kiKqNQ8
— Narendra Modi (@narendramodi) October 13, 2026
Power to Empower. https://t.co/v5e5lmNPwE
— PMO India (@PMOIndia) October 13, 2026
Our constant endeavour is to ensure that India's capabilities open new doors of opportunity for other countries as well. https://t.co/5ZG0kaHqsd
— PMO India (@PMOIndia) October 13, 2026
India's progress is rooted in collective growth and shared opportunities. https://t.co/XBuAJIBUF0
— PMO India (@PMOIndia) October 13, 2026
India's progress is rooted in collective growth and shared opportunities. https://t.co/XBuAJIBUF0
— PMO India (@PMOIndia) October 13, 2026
In a world full of uncertainties, India offers reliability and stability. https://t.co/C0vQm99y9J
— PMO India (@PMOIndia) October 13, 2026
For us, reforms are not a compulsion. They are a conviction. https://t.co/ZJF2CrRT2E
— PMO India (@PMOIndia) October 13, 2026