Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ 2026 ಅನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ 2026 ಅನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಭಾರತ ಮಂಟಪದಲ್ಲಿ ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ 2026 ನ್ನು ಉದ್ಘಾಟಿಸಿದರು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನವೋದ್ಯಮ ಸಂಸ್ಥಾಪಕರೊಂದಿಗೆ ಉತ್ಸಾಹಭರಿತ ಸಂವಾದದ ನಂತರ ತಮ್ಮ ಉತ್ಸಾಹವನ್ನು ಹಂಚಿಕೊಂಡರು. ರಾಷ್ಟ್ರದ ಯುವಜನರ ವಿಸ್ತಾರವಾದ ದೂರದೃಷ್ಟಿ ಮತ್ತು ದಿಟ್ಟ ದೃಢನಿಶ್ಚಯವನ್ನು ಅವರು ಶ್ಲಾಘಿಸಿದರು. “ಭಾರತದ ಯುವಜನರು ಯೋಚಿಸುತ್ತಿರುವ ಪ್ರಮಾಣ ಮತ್ತು ಅವರು ಮುಂದುವರಿಯುತ್ತಿರುವಲ್ಲಿ ತೋರುವ  ಆತ್ಮವಿಶ್ವಾಸವು ಉತ್ತೇಜನಕಾರಿಯಾಗಿದೆ” ಎಂದು ಶ್ರೀ ಮೋದಿ ಹೇಳಿದರು.

ಸಮಾವೇಶದ ಹಿಂದಿನ ಆವೃತ್ತಿಯಲ್ಲಿ ತಾವು ಭಾಗವಹಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಕಳೆದ ದಶಕಗಳಲ್ಲಿ ಭಾರತವು ಅನುಸರಿಸುತ್ತಿದ್ದ ಮಾದರಿಯನ್ನು ತುಲನೆ ಮಾಡಿದರು. ಹಿಂದೆ   ವಿದೇಶಿ ಆವಿಷ್ಕಾರಗಳನ್ನು ವರ್ಷಗಳ ನಂತರ ಅಳವಡಿಸಿಕೊಳ್ಳುವ ಅಥವಾ ಮಾರ್ಪಡಿಸುವ ಮೂಲಕ  ಅವುಗಳನ್ನು ಭಾರತ ಬಳಕೆ ಮಾಡುತ್ತಿತ್ತು. ಆದರೆ 21 ನೇ ಶತಮಾನದ ಭಾರತದ ಹೊಸ ಮನಸ್ಥಿತಿಯೊಂದಿಗೆ ನವೀನ ಮೂಲ ತಂತ್ರಜ್ಞಾನಗಳನ್ನು ನಿರ್ಮಿಸುವ, ಜಾಗತಿಕ ದಿಕ್ಕುಗಳನ್ನು ನಿಗದಿಪಡಿಸುವ ಮತ್ತು ವಿಶ್ವಾದ್ಯಂತ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ತನ್ನ ಮೊದಲ ಪ್ರಯತ್ನದಲ್ಲಿ ಮಂಗಳ ಗ್ರಹವನ್ನು ತಲುಪಲು ಮತ್ತು ಹಿಂದೆ ತಲುಪಲಾಗದಿದ್ದ  ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವುದರ ಜೊತೆಗೆ ತನ್ನ ಜನಸಂಖ್ಯೆಗೆ ಲಸಿಕೆ ಹಾಕಲು ಮತ್ತು ಇತರ ರಾಷ್ಟ್ರಗಳಿಗೆ ಪೂರೈಸಲು ರಾಷ್ಟ್ರವು ಸ್ಥಳೀಯ ಕೋವಿಡ್-19 ಲಸಿಕೆಗಳನ್ನು ಹೇಗೆ ಅಭಿವೃದ್ಧಿಪಡಿಸಿದೆ ಎಂಬುದನ್ನು ಉಲ್ಲೇಖಿಸಿದ ಅವರು, ದೇಶಕ್ಕಾಗಿರುವ ದಿಟ್ಟ ತಾಂತ್ರಿಕ ಚಿಂತನಾ ದೃಷ್ಟಿಕೋನವನ್ನು ವಿವರಿಸಿದರು. ಭಾರತವು ಭವಿಷ್ಯದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು, ಧೈರ್ಯದಿಂದ ಆವಿಷ್ಕಾರ ಮಾಡಬೇಕು ಮತ್ತು ಅವುಗಳನ್ನು ರಚಿಸುವಲ್ಲಿ ಜಗತ್ತನ್ನು ಮುನ್ನಡೆಸಬೇಕು” ಎಂದು ಪ್ರಧಾನಮಂತ್ರಿ ಮೋದಿ ಪ್ರತಿಪಾದಿಸಿದರು.

ಶೂನ್ಯದ ಆವಿಷ್ಕಾರದಿಂದ ಹಿಡಿದು ಖಗೋಳಶಾಸ್ತ್ರದವರೆಗಿನ ಭಾರತದ ಶ್ರೀಮಂತ ಆವಿಷ್ಕಾರದ ಪರಂಪರೆಯನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ದೇಶವು ಈ ವೈಜ್ಞಾನಿಕ ಪರಂಪರೆಯನ್ನು ಆಧುನಿಕ ತಂತ್ರಜ್ಞಾನ ಮತ್ತು ಹೊಸ ವಿಶ್ವಾಸದೊಂದಿಗೆ ಮುನ್ನಡೆಸುತ್ತಿದೆ ಎಂದು ಹೇಳಿದರು. ಕಳೆದ ಒಂದು ವರ್ಷದಲ್ಲಿ ಹಲವಾರು ಮೈಲಿಗಲ್ಲುಗಳು ಸ್ಥಾಪನೆಯಾಗಿವೆ ಎಂದರು. ಅಕ್ಟೋಬರ್ 30 ರಂದು ರಾಷ್ಟ್ರವು ಡಾ. ಹೋಮಿ ಜಹಾಂಗೀರ್ ಭಾಭಾ ಅವರ ಜನ್ಮದಿನವನ್ನು ಆಚರಿಸಲು ಸಜ್ಜಾಗಿರುವುದರಿಂದ, ಅವರು ಪರಮಾಣು ಕ್ಷೇತ್ರದಲ್ಲಿ ಇತ್ತೀಚಿನ ಪ್ರಗತಿಯ ವಿವರಗಳನ್ನು ನೀಡತೊಡಗಿದರು. “ಆದ್ದರಿಂದ, ನಾವು ಪರಮಾಣು ಶಕ್ತಿಯೊಂದಿಗೆ ಪ್ರಾರಂಭಿಸೋಣ” ಎಂದು ಶ್ರೀ ಮೋದಿ ಹೇಳಿದರು.

ವಿಕಸಿತ ಭಾರತವನ್ನು ನಿರ್ಮಿಸಲು ಬೃಹತ್ ಪರಮಾಣು ಶಕ್ತಿ ಸಾಮರ್ಥ್ಯದ ಅಗತ್ಯವಿದೆ ಮತ್ತು ಆಮದು ಮಾಡಿದ ಪರಮಾಣು ಇಂಧನದ ಮೇಲಿನ ಅವಲಂಬನೆಯು ಇಂಧನ ಭದ್ರತೆಗೆ ಸವಾಲನ್ನು ಒಡ್ಡುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ರಾಷ್ಟ್ರವು ತನ್ನ ಫಾಸ್ಟ್ ಬ್ರೀಡರ್ ರಿಯಾಕ್ಟರ್ ತಂತ್ರಜ್ಞಾನವನ್ನು ವೇಗವಾಗಿ ಮುನ್ನಡೆಸುತ್ತಿದೆ ಎಂಬುದರತ್ತ ಗಮನಸೆಳೆದರು. ಕೆಲವು ತಿಂಗಳ ಹಿಂದೆ, ದೇಶೀಯ 500 ಮೆಗಾವ್ಯಾಟ್ ಮೂಲಮಾದರಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಯಶಸ್ವಿಯಾಗಿ ಮೊದಲ ಕ್ರಿಟಿಕಲಿಟಿಯನ್ನು ಸಾಧಿಸಿದೆ ಎಂದು ಅವರು ಒತ್ತಿ ಹೇಳಿದರು. “ಪರಮಾಣು ಶಕ್ತಿ ಕ್ಷೇತ್ರದಲ್ಲಿ ನಮ್ಮ ದೀರ್ಘಕಾಲೀನ ಸಾಮರ್ಥ್ಯಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಭಾರತದ ಮಹತ್ವಾಕಾಂಕ್ಷೆಯು ದೇಶೀಯ ಇಂಧನ ಭದ್ರತೆ ಮತ್ತು ತಾಂತ್ರಿಕ ಸ್ವಾವಲಂಬನೆಯನ್ನು ಮೀರಿ ನಿರ್ಣಾಯಕ ತಂತ್ರಜ್ಞಾನಗಳಾದ್ಯಂತ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವವರೆಗೆ ಪಸರಿಸಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಮೇಡ್-ಇನ್-ಇಂಡಿಯಾ ರಾಕೆಟ್ ಬಳಸಿ ತನ್ನ ಮೊದಲ ಪ್ರಯತ್ನದಲ್ಲಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದು ಮತ್ತು ಉಪಗ್ರಹ ಡಾಕಿಂಗ್ ಸಾಮರ್ಥ್ಯವನ್ನು ದೇಶವು ಕರಗತ ಮಾಡಿಕೊಳ್ಳುವುದು ಸೇರಿದಂತೆ ಈ ವರ್ಷದ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ಸಾಧನೆಗಳನ್ನು ಎತ್ತಿ ತೋರಿಸಿದರು. ಯುವ ವಿಜ್ಞಾನಿಗಳು ಮತ್ತು ಉದ್ಯಮಿಗಳ ಭಾಗವಹಿಸುವಿಕೆಯ ಜೊತೆಗೆ ಹಲವಾರು ದೇಶೀಯ ನವೋದ್ಯಮಗಳು ನವೀನ ಬಾಹ್ಯಾಕಾಶ ವಿಜ್ಞಾನ ಪರಿಹಾರಗಳನ್ನು ಪರಿಚಯಿಸುತ್ತಿವೆ ಎಂದು ಅವರು ಹೇಳಿದರು. “ನಿರ್ಣಾಯಕ ತಂತ್ರಜ್ಞಾನಗಳಲ್ಲಿ ನಮ್ಮ ಶಕ್ತಿಯನ್ನು ವಿಸ್ತರಿಸುವುದು ನಮ್ಮ ಗುರಿಯಾಗಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಭಾರತದ ಬಹು-ವಲಯ ಸಾಧನೆಗಳ ಸಂಪೂರ್ಣ ವಿಸ್ತಾರವನ್ನು ಅಭೂತಪೂರ್ವ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಈ ವರ್ಷ ದೇಶವು ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಆಯೋಜಿಸಿದೆ, ತನ್ನದೇ ಆದ ಎಐ ಮಾದರಿಯನ್ನು ಪ್ರಾರಂಭಿಸಿದೆ ಮತ್ತು ಭಾರತ ನಿರ್ಮಿತ ಸೆಮಿಕಂಡಕ್ಟರ್ ಚಿಪ್ಗಳನ್ನು ಜಗತ್ತಿಗೆ ರವಾನಿಸಲು ಪ್ರಾರಂಭಿಸಿದೆ ಎಂದು ಹೇಳಿದರು. ದೇಶೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳನ್ನು ಬಳಸಿ ಬ್ಯಾಟರಿ ಶೇಖರಣಾ ಸಾಮರ್ಥ್ಯವನ್ನು ರಾಷ್ಟ್ರವು ಸಕ್ರಿಯವಾಗಿ ನಿರ್ಮಿಸುತ್ತಿದೆ ಎಂಬುದರತ್ತಲೂ ಅವರು ಗಮನಸೆಳೆದರು. “ಭಾರತವು ಯಶಸ್ಸನ್ನು ಸಾಧಿಸುತ್ತಿರುವ ವೈವಿಧ್ಯಮಯ ಕ್ಷೇತ್ರಗಳು ಅಭೂತಪೂರ್ವವಾಗಿವೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಪರಮಾಣು ಮತ್ತು ಬಾಹ್ಯಾಕಾಶದಿಂದ ಹಿಡಿದು ಕೃತಕ ಬುದ್ಧಿಮತ್ತೆ ಮತ್ತು ಸೆಮಿಕಂಡಕ್ಟರ್ ಗಳವರೆಗಿನ ಕ್ಷೇತ್ರಗಳು ವಿಭಿನ್ನ ಅವಶ್ಯಕತೆಗಳನ್ನು ಹೊಂದಿದ್ದರೂ, ಅವು ಒಟ್ಟಾಗಿ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತದ ಹೆಚ್ಚುತ್ತಿರುವ ಶಕ್ತಿ ಮತ್ತು ವಿಶ್ವಾಸವನ್ನು ಸಂಕೇತಿಸುತ್ತವೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಈ ದೇಶೀಯ ಪ್ರಗತಿಯು ಜಾಗತಿಕ ಸವಾಲುಗಳನ್ನು ಪರಿಹರಿಸಲು ‘ದೊಡ್ಡ ಪ್ರಮಾಣದಲ್ಲಿ ಪರಿಹಾರ’ವನ್ನು ತಲುಪಿಸುವ ರಾಷ್ಟ್ರದ ವಿಶಿಷ್ಟ ಸಾಮರ್ಥ್ಯವಾಗಿದೆ ಎಂಬುದನ್ನು ಒತ್ತಿ ಹೇಳಿದರು. ಡಿಜಿಟಲ್ ಸ್ಟ್ಯಾಕ್ ಮತ್ತು ದೇಶೀಯ 5ಜಿ ತಂತ್ರಜ್ಞಾನದ ಯಶಸ್ಸನ್ನು ಉಲ್ಲೇಖಿಸಿದ ಅವರು, ಸುರಕ್ಷಿತ, ಜನಸಂಖ್ಯಾ ಪ್ರಮಾಣದ ವೇದಿಕೆಗಳನ್ನು ನಿರ್ಮಿಸಲು ನಡೆಯುತ್ತಿರುವ ಅಭಿಯಾನದತ್ತಲೂ ಗಮನ ಸೆಳೆದರು. “ದೊಡ್ಡ ಪ್ರಮಾಣದಲ್ಲಿ ಜನರನ್ನು ತಲುಪಬಲ್ಲ ಸುರಕ್ಷಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಭಾರತವು ಮುಂದುವರಿಯುತ್ತಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಸ್ತ್ರಗಳಾಗಿ ನೋಡುವ ಐತಿಹಾಸಿಕ ಪ್ರವೃತ್ತಿಯನ್ನು ಮಾನವೀಯತೆಯ ಸೇವೆಗಾಗಿ ಅವುಗಳನ್ನು ಬಳಸುವ ಭಾರತದ ತತ್ವದೊಂದಿಗೆ ತುಲನೆ ಮಾಡಿದ ಪ್ರಧಾನಮಂತ್ರಿಯವರು, ಸಾಮಾನ್ಯ ಜೀವನವನ್ನು ಸುಧಾರಿಸಲು, ಬೃಹತ್ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಆರೋಗ್ಯ, ಕೃಷಿ, ಶಿಕ್ಷಣ, ಉದ್ಯೋಗ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಪರಿಹಾರಗಳು ಪ್ರಯೋಗಾಲಯದಿಂದ ಹೊರಬರುವುದರಲ್ಲಿ ನಿಜವಾದ ವೈಜ್ಞಾನಿಕ ಯಶಸ್ಸು ಅಡಗಿದೆ ಎಂದು ಹೇಳಿದರು. ಭಾರತೀಯ ನವೋದ್ಯಮಗಳು ಈ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿವೆ ಎಂದು ತೃಪ್ತಿ ವ್ಯಕ್ತಪಡಿಸಿದ ಅವರು, ಮೆದುಳಿನ ಚಟುವಟಿಕೆ ಅರಿಯಲು ಧರಿಸಬಹುದಾದ ಇಇಜಿ ತಂತ್ರಜ್ಞಾನ, ಸ್ಥಳೀಯ ವೈರ್ಲೆಸ್ ಮತ್ತು ಉಪಗ್ರಹ ಸಂವಹನಗಳು, ವಿಶೇಷ ಪೌಷ್ಠಿಕಾಂಶದ ಉತ್ಪನ್ನಗಳು, ಹೊಸ ಅರೆವಾಹಕ ತಂತ್ರಜ್ಞಾನಗಳು ಮತ್ತು ಉಕ್ಕನ್ನು ಪ್ರತ್ಯೇಕಿಸುವಾಗ ಉಳಿಯುವ ಕೈಗಾರಿಕಾ ಉಪ ಉತ್ಪನ್ನವಾದ ಸ್ಟೀಲ್ ಸ್ಲ್ಯಾಗ್ ನಂತಹ ಕೈಗಾರಿಕಾ ತ್ಯಾಜ್ಯವನ್ನು ಬಳಸಿಕೊಳ್ಳಲು ಕೆಲಸ ಮಾಡುವ ಸ್ಟಾರ್ಟ್ಅಪ್ಗಳು ಮತ್ತು ದೇಶೀಯ ಸಂಸ್ಥೆಗಳನ್ನು ಉಲ್ಲೇಖಿಸಿದರು. “ವಿಜ್ಞಾನವು ಪ್ರಯೋಗಾಲಯದಿಂದ ಹೊರಬಂದಾಗ ಮತ್ತು ಸಾಮಾನ್ಯ ನಾಗರಿಕರ ಜೀವನವನ್ನು ಉತ್ತಮಗೊಳಿಸಿದಾಗ ಅದರ ನಿಜವಾದ ಯಶಸ್ಸು ಅನಾವರಣಗೊಳ್ಳುತ್ತದೆ ” ಎಂದು ಪ್ರಧಾನಮಂತ್ರಿ ಮೋದಿ ಪ್ರತಿಪಾದಿಸಿದರು.

ಚೆನ್ನೈನ ಐಐಟಿ ಮದ್ರಾಸ್ನಲ್ಲಿ ತಮ್ಮ ಇತ್ತೀಚಿನ ಅನುಭವವನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಆಧುನಿಕ ಮೆದುಳಿನ ಕೇಂದ್ರವನ್ನು ಉದ್ಘಾಟಿಸಿದ್ದನ್ನು ಸ್ಮರಿಸಿದರು, ಇದು ಮಾನವ ಮೆದುಳಿನ ಹೆಚ್ಚಿನ ರೆಸಲ್ಯೂಶನ್ ಡಿಜಿಟಲ್ 3ಡಿ ಚಿತ್ರಗಳನ್ನು ಅಭಿವೃದ್ಧಿಪಡಿಸಲು ಮತ್ತು ಸಂಕೀರ್ಣ ನರವೈಜ್ಞಾನಿಕ ಕಾಯಿಲೆಗಳನ್ನು ಗುರುತಿಸಲು ಜಾಗತಿಕವಾಗಿ ಅತ್ಯುತ್ತಮ ಮೆದುಳಿನ ಇಮೇಜಿಂಗ್ ತಂತ್ರಜ್ಞಾನ ವೇದಿಕೆಯನ್ನು ರಚಿಸಿದೆ. ‘ಸಮಾಜಕ್ಕಾಗಿ ವಿಜ್ಞಾನ’ ಮತ್ತು ‘ಪರಿವರ್ತನೆಗಾಗಿ ತಂತ್ರಜ್ಞಾನ’ ವೈಜ್ಞಾನಿಕ ಪ್ರಗತಿಗೆ ಅಂತಿಮ ಮಾನದಂಡವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಘೋಷಿಸಿದರು. ಈ ಮಾನದಂಡದ ಮೇಲೆ ತನ್ನನ್ನು ತಾನು ಪರೀಕ್ಷಿಸಿಕೊಳ್ಳುವ ಮೂಲಕ ಭಾರತವು ಮುಂದುವರಿಯುತ್ತಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ರಾಷ್ಟ್ರದ ತಂತ್ರಜ್ಞಾನ ಸೃಷ್ಟಿ ಸಾಮರ್ಥ್ಯ ಮತ್ತು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆಯು ದೃಢವಾದ ಸಂಶೋಧನೆಯ ಮೇಲೆ ಅವಲಂಬಿತವಾಗಿದೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಜೈ ವಿಜ್ಞಾನ್, ಜೈ ಅನುಸಂಧಾನ್ ಎಂಬ ತಮ್ಮ ಘೋಷಣೆಯ ಹಿಂದಿನ ಸ್ಫೂರ್ತಿಯನ್ನು ಒತ್ತಿ ಹೇಳಿದರು. ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ತ್ವರಿತ ವೇಗವನ್ನು ಉಲ್ಲೇಖಿಸಿದರು ಮತ್ತು ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗಾಗಿ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸುವ ಬಗ್ಗೆ ಕಳೆದ ವರ್ಷ ಇದೇ ವೇದಿಕೆಯಲ್ಲಿ ಮಾಡಿದ ಪ್ರತಿಜ್ಞೆಯನ್ನು ನೆನಪಿಸಿಕೊಂಡರು. ಕಳೆದ ವರ್ಷದಲ್ಲಿ, ಮಾರುಕಟ್ಟೆಗೆ ಸಿದ್ಧವಾದ ಲ್ಯಾಬ್ ತಂತ್ರಜ್ಞಾನಗಳಿಗಾಗಿ ಸರ್ಕಾರವು 12,000 ಕೋಟಿ ರೂಪಾಯಿಗಳ ಬದ್ಧತೆಯನ್ನು ಮಾಡಿದ್ದು,  ಖಾಸಗಿ ಹೂಡಿಕೆದಾರರಿಂದ 12,000 ಕೋಟಿ ರೂಪಾಯಿಗಳನ್ನು ಸಮಾನವಾಗಿ ಹೊಂದಿಸಲಾಗಿದೆ ಎಂದು  ಒತ್ತಿ ಹೇಳಿದರು. “ಅಂದರೆ, ಕೇವಲ ಒಂದು ವರ್ಷದಲ್ಲಿ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಒಟ್ಟು 24 ಸಾವಿರ ಕೋಟಿ ರೂಪಾಯಿಗಳ ಹೊಸ ಬದ್ಧತೆಯನ್ನು ಮಾಡಲಾಗಿದೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ದೇಶೀಯ ಸಂಶೋಧನಾ ಪರಿಸರ ವ್ಯವಸ್ಥೆಯ ಸ್ಥಿರವಾದ ನಿರಂತರ  ವಿಸ್ತರಣೆಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಕಳೆದ ದಶಕದಲ್ಲಿ ಬೌದ್ಧಿಕ ಆಸ್ತಿ ಸೃಷ್ಟಿಯಲ್ಲಿ ಆಗಿರುವ ಭಾರೀ ಪ್ರಮಾಣದ  ಏರಿಕೆಯತ್ತ ಗಮನಸೆಳೆದರು. ವಾರ್ಷಿಕ ಪೇಟೆಂಟ್ ಸಲ್ಲಿಕೆಗಳು ಹತ್ತು ವರ್ಷಗಳ ಹಿಂದೆ 50,000 ಕ್ಕಿಂತ ಕಡಿಮೆ ಇದ್ದದ್ದು ಕಳೆದ ವರ್ಷ ಸುಮಾರು 1.5 ಲಕ್ಷಕ್ಕೆ ಏರಿವೆ, ಇದು ಕೇವಲ ಸಂಖ್ಯೆಗಳನ್ನು ಮೀರಿ ಆಳವಾದ ರಚನಾತ್ಮಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. “ಇವು ಸಂಶೋಧನೆ ಮತ್ತು ನಾವೀನ್ಯತೆಯು ಭಾರತದಲ್ಲಿ ಬಲವಾದ ಸಂಸ್ಕೃತಿಯಾಗುತ್ತಿರುವ ಬದಲಾವಣೆಯ ಸಂಕೇತವಾಗಿದೆ” ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

21ನೇ ಶತಮಾನದ ಎರಡನೇ ಭಾಗದ ಕಾಲು ಶತಮಾನದ ಅವಧಿಯಲ್ಲಿ ಕೃತಕ ಬುದ್ಧಿಮತ್ತೆ ಯುಗದಲ್ಲಿ ವೈಜ್ಞಾನಿಕ ತೀರ್ಪು ಹೇಗೆ ವಿಕಸನಗೊಳ್ಳುತ್ತದೆ ಎಂಬುದರ ಕುರಿತು ಪ್ರಮುಖ ಪ್ರಶ್ನೆಯನ್ನು ಮುಂದಿಟ್ಟ ಪ್ರಧಾನಮಂತ್ರಿಯವರು, ಪ್ರಮುಖ ಪ್ರಯೋಗಾಲಯ ವಿಜ್ಞಾನಿಗಳು ಮತ್ತು ವೇದಿಕೆಯಲ್ಲಿರುವ ನೊಬೆಲ್ ಪ್ರಶಸ್ತಿ ವಿಜೇತರು ಸಣ್ಣ ಸಮಸ್ಯೆಗಳನ್ನು ಪರಿಹರಿಸುವುದು, ಪ್ರಯೋಗ ಮಾಡುವುದು, ವೈಫಲ್ಯಗಳಿಂದ ಕಲಿಯುವುದು, ಸ್ಥಾಪಿತ ಮಾದರಿಗಳನ್ನು ಪ್ರಶ್ನಿಸುವುದು ಮತ್ತು ಕಡೆಗಣಿಸಲ್ಪಟ್ಟ ವಿವರಗಳನ್ನು ಗುರುತಿಸುವ ಮೂಲಕ ತಮ್ಮ ಕುಶಲತೆಯನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು. ಉತ್ಪಾದಕತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆಯು ದೈನಂದಿನ ಕಾರ್ಯಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಬಹುದಾದರೂ, ಅದು ಸ್ವತಂತ್ರ ಚಿಂತನೆಯನ್ನು ನಿರ್ಬಂಧಿಸುವ ಬದಲು ಶ್ರೀಮಂತಗೊಳಿಸಬೇಕು, ಅದು ಉಳಿಸಿದ ಸಮಯವನ್ನು ಸಂಶೋಧಕರಿಗೆ ಕಠಿಣ ಸಮಸ್ಯೆಗಳು, ಹೊಸ ಪ್ರಯೋಗಗಳು ಮತ್ತು ಕಲ್ಪನೆಯ ಮೌಲ್ಯೀಕರಣಕ್ಕಾಗಿ  ಬಳಸಲು ಅನುವು ಮಾಡಿಕೊಡುತ್ತದೆ ಎಂದರು. “ಕೃತಕ ಬುದ್ಧಿಮತ್ತೆ ನಮಗೆ ತ್ವರಿತವಾಗಿ ಉತ್ತರಗಳನ್ನು ನೀಡಬಲ್ಲದು, ಆದರೆ ಉತ್ತರದ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಜವಾಬ್ದಾರಿ ಮಾತ್ರ ವಿಜ್ಞಾನಿಯ ಮೇಲಿರುತ್ತದೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಸೆಮಿಕಂಡಕ್ಟರ್ ಗಳು, ಕ್ವಾಂಟಮ್ ತಂತ್ರಜ್ಞಾನಗಳು, ಜೈವಿಕ ತಂತ್ರಜ್ಞಾನ, ಸುಧಾರಿತ ಆಧುನಿಕ ವಸ್ತುಗಳು, ರೊಬೊಟಿಕ್ಸ್, ಬಾಹ್ಯಾಕಾಶ, ಶುದ್ಧ ಇಂಧನ ಮತ್ತು ಮುಂದಿನ ಪೀಳಿಗೆಯ ಸಂವಹನಗಳನ್ನು ವ್ಯಾಪಿಸಿದಂತೆ ಅವುಗಳಿಗೆ ಪ್ರತ್ಯೇಕವಾಗಿ ಮೀಸಲಾದ ರಾಷ್ಟ್ರೀಯ ಅಭಿಯಾನಗಳ ಮೂಲಕ ಭವಿಷ್ಯವನ್ನು ರೂಪಿಸುವ ಕ್ಷೇತ್ರಗಳಾಗಿ  ನಿರಂತರ ಸಿದ್ಧಪಡಿಸುವಂತೆ ವಿಜ್ಞಾನಿಗಳು ಮತ್ತು ಸಂಸ್ಥೆಗಳನ್ನು ಆಗ್ರಹಿಸಿದ  ಪ್ರಧಾನಮಂತ್ರಿಯವರು, ಇದರಿಂದ ಭಾರತದಿಂದ ಹೊಸ ಪ್ರಗತಿಗಳು ಹೊರಹೊಮ್ಮುತ್ತವೆ, ಕೃತಕ ಬುದ್ಧಿಮತ್ತೆ, ಸಂಶ್ಲೇಷಿತ ಜೀವಶಾಸ್ತ್ರ ಮತ್ತು ಸ್ವಾಯತ್ತ ವ್ಯವಸ್ಥೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದರು. ಹಣಕಾಸು ಜಾಲಗಳು ಮತ್ತು ರಾಷ್ಟ್ರೀಯ ಭದ್ರತೆಗೆ ಉದಯೋನ್ಮುಖ ಎಐ-ಯುಗದ ಸೈಬರ್ ಭದ್ರತೆಯ ಬೆದರಿಕೆಗಳ ಬಗ್ಗೆ ಎಚ್ಚರಿಕೆ ನೀಡಿದ ಅವರು, ರಾಷ್ಟ್ರೀಯ ವ್ಯವಸ್ಥೆಗಳನ್ನು ರಕ್ಷಿಸುವ ಮತ್ತು ಮಾನವೀಯತೆಗೆ ಸೇವೆ ಸಲ್ಲಿಸುವ ಕೃತಕ ಬುದ್ಧಿಮತ್ತೆ ಆಧಾರಿತ ಮತ್ತು ಕ್ವಾಂಟಮ್ ಭದ್ರತಾ ಪರಿಹಾರಗಳನ್ನು ಅಭಿವೃದ್ಧಿಪಡಿಸುವಂತೆ ಕರೆ ನೀಡಿದರು. “ಭಾರತವನ್ನು ಸಶಕ್ತಗೊಳಿಸುವ ಮತ್ತು ಮಾನವೀಯತೆಯ ಸಮಸ್ಯೆಗಳನ್ನು ಪರಿಹರಿಸಲು ಕೊಡುಗೆ ನೀಡುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ಸಮಾವೇಶದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಂಶೋಧಕರು, ಉದ್ಯಮದ ನಾಯಕರು, ಸ್ಟಾರ್ಟ್ಅಪ್ ಸಂಸ್ಥಾಪಕರು ಮತ್ತು ವಿದ್ಯಾರ್ಥಿಗಳು ಯಾವ ತಂತ್ರಜ್ಞಾನ, ಮೂಲಮಾದರಿ, ಪೈಲಟ್ ಪ್ರಾಜೆಕ್ಟ್ ಅಥವಾ ಉತ್ಪನ್ನವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತಾರೆ ಎಂಬುದನ್ನು ಗುರುತಿಸಲು ಮೂರು ವರ್ಷಗಳ  ಗುರಿಯನ್ನು ನಿಗದಿಪಡಿಸುವಂತೆ ಕರೆ ನೀಡಿದ ಪ್ರಧಾನಮಂತ್ರಿಯವರು, ವಿಕಸಿತ ಭಾರತವನ್ನು ನಿರ್ಮಿಸುವ ಮತ್ತು ಭಾರತವನ್ನು ಪರಿಹಾರಗಳ ಜಾಗತಿಕ ಕೇಂದ್ರವನ್ನಾಗಿ ಮಾಡುವ ಆವಿಷ್ಕಾರಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು. ಸ್ಪಷ್ಟ ಫಲಿತಾಂಶಗಳನ್ನು ನೀಡಲು ಇಲ್ಲಿರುವವರು  ಚರ್ಚೆಗಳನ್ನು ಮೀರಿ ಸಾಗಬೇಕು ಎಂದು ಅವರು ಒತ್ತಿ ಹೇಳಿದರು. “ಈ ಸಮಾವೇಶವು ಕೇವಲ ವಿಚಾರಗಳ ವಿನಿಮಯಕ್ಕೆ ಸೀಮಿತವಾಗಬಾರದು; ಇದು ಅಳೆಯಬಹುದಾದ ಫಲಿತಾಂಶಗಳಿಗೆ ವೇದಿಕೆಯಾಗಲಿ” ಎಂದು ಪ್ರಧಾನಮಂತ್ರಿ ಮೋದಿ ಆಶಯ ವ್ಯಕ್ತಪಡಿಸಿದರು.

ಪ್ರತಿಭೆ ಮತ್ತು ಸಂಕಲ್ಪದಿಂದ ಆಶೀರ್ವದಿಸಲ್ಪಟ್ಟ ವಿಶ್ವದ ಅತ್ಯಂತ ಕಿರಿಯ ರಾಷ್ಟ್ರ ಎಂಬ ಭಾರತದ ಸ್ಥಾನಮಾನವನ್ನು ಉಲ್ಲೇಖಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಉದಯೋನ್ಮುಖ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕೇವಲ ಭಾಗವಹಿಸುವುದಕ್ಕೆ ಬದಲು ಸಕ್ರಿಯವಾಗಿ ಮುನ್ನಡೆಸುವ ಪೀಳಿಗೆಯನ್ನು ಪೋಷಿಸುವ ಅಗತ್ಯವನ್ನು ಒತ್ತಿ ಹೇಳಿದರು. ‘ನಾವು ಅದನ್ನು ಮಾಡುತ್ತೇವೆ’ ಎಂಬ ಸಾಮೂಹಿಕ ಮನೋಭಾವ ಮತ್ತು ದೃಢನಿಶ್ಚಯವನ್ನು ಪ್ರಚೋದಿಸಿದ ಅವರು, ಸಮಾವೇಶದ ಯಶಸ್ಸಿಗೆ ಶುಭ ಹಾರೈಸಿದರು. “ಉದಯೋನ್ಮುಖ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾಗವಹಿಸುವುದರ ಜೊತೆಗೆ, ಅದನ್ನು ಮುನ್ನಡೆಸುವ ಪೀಳಿಗೆಯನ್ನು ನಾವು ಸಿದ್ಧಪಡಿಸಬೇಕಾಗಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

 

*****