Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ-2026 ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ-2026 ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ


ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಸಚಿವರಾದ ಡಾ. ಜಿತೇಂದ್ರ ಸಿಂಗ್ ಜಿ, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಸೂದ್ ಜಿ, ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳೆ, ಇತರೆ ಗಣ್ಯ ಅತಿಥಿಗಳೆ ಹಾಗೂ ಇಲ್ಲಿ ಉಪಸ್ಥಿತರಿರುವ ಎಲ್ಲರಿಗೂ ನಮಸ್ಕಾರ.

ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸೇರಿದ ಅಪಾರ ಸಂಖ್ಯೆಯ ಪ್ರತಿನಿಧಿಗಳು ಇಲ್ಲಿ ನೆರೆದಿದ್ದಾರೆ. ನಮ್ಮ ಯುವ ನಾವಿನ್ಯಕಾರರು ಇಲ್ಲಿದ್ದಾರೆ. ಇಲ್ಲಿಗೆ ಬರುವ ಮೊದಲು, ನಾನು ಕೆಲವು ಸ್ಟಾರ್ಟಪ್ ಸಂಸ್ಥಾಪಕರೊಂದಿಗೆ ಸಂವಾದ ನಡೆಸಿದೆ. ಭಾರತದ ಯುವ ಜನರು ಎಷ್ಟು ವಿಶಾಲವಾಗಿ ಯೋಚಿಸುತ್ತಿದ್ದಾರೆ, ಎಂತಹ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದಾರೆ ಎಂಬುದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.

ಸ್ನೇಹಿತರೆ,

ನಾನು ಕಳೆದ ಬಾರಿಯೂ ಈ ಸಮಾವೇಶದಲ್ಲಿ ಭಾಗವಹಿಸಿದ್ದೆ. ಈ ಬಾರಿ ನಾವು ‘ಉದಯೋನ್ಮುಖ ವಿಜ್ಞಾನ ಮತ್ತು ತಂತ್ರಜ್ಞಾನ’ ವಿಷಯದ ಕುರಿತು ಚರ್ಚಿಸುತ್ತಿದ್ದೇವೆ. ದಶಕಗಳ ಹಿಂದೆ, ಭಾರತದ ಮಟ್ಟಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಎಂದರೆ ಕೇವಲ ಇತರರನ್ನು ಹಿಂಬಾಲಿಸುವುದು ಅಥವಾ ಅವರ ಹಂತವನ್ನು ತಲುಪಲು ಪ್ರಯತ್ನಿಸುವುದಷ್ಟೇ ಆಗಿತ್ತು. ಜಗತ್ತಿನಲ್ಲಿ ಏನಾದರೂ ಹೊಸ ಆವಿಷ್ಕಾರವಾದರೆ, ಆ ತಂತ್ರಜ್ಞಾನ ನಮ್ಮನ್ನು ತಲುಪಲು ಕೆಲವು ವರ್ಷಗಳೇ ಬೇಕಾಗುತ್ತಿದ್ದವು. ನಾವು ಅದನ್ನು ಅಳವಡಿಸಿಕೊಳ್ಳುತ್ತಿದ್ದೆವು, ಅದರಲ್ಲಿ ಸಣ್ಣಪುಟ್ಟ ಸುಧಾರಣೆಗಳನ್ನು ಮಾಡಿ ಮುಂದುವರಿಯುತ್ತಿದ್ದೆವು. ಆದರೆ ಇಂದು 21ನೇ ಶತಮಾನದ ಭಾರತವು ಹೊಸ ಮನಸ್ಥಿತಿ ಮತ್ತು ಹೊಸ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಿದೆ. ಈಗ ನಮ್ಮ ಗುರಿ ಏನೆಂದರೆ, ಭಾರತಕ್ಕಾಗಿ ಹಾಗೂ ಇಡೀ ಜಗತ್ತಿಗಾಗಿ, ಇಂದಿನ ಮತ್ತು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಹೊಸ ತಂತ್ರಜ್ಞಾನಗಳನ್ನು ಸೃಷ್ಟಿಸುವುದಾಗಿದೆ. ಅವುಗಳ ದಿಕ್ಕು ನಿರ್ಧರಿಸುವುದು ಮತ್ತು ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಾವು ಇದಕ್ಕೆ ಒಂದು ಉತ್ತಮ ಉದಾಹರಣೆ ಕಂಡೆವು. ಜಗತ್ತಿನ ಅನೇಕ ದೇಶಗಳು ಲಸಿಕೆಗಳ ಲಭ್ಯತೆಗಾಗಿ ಪರದಾಡುತ್ತಿದ್ದಾಗ, ಭಾರತವು ತನ್ನದೇ ಆದ ಲಸಿಕೆಯನ್ನು ಅಭಿವೃದ್ಧಿಪಡಿಸಿತು, ಬೃಹತ್ ಪ್ರಮಾಣದಲ್ಲಿ ಲಸಿಕಾ ಅಭಿಯಾನ ನಡೆಸಿತು, ಇತರೆ ರಾಷ್ಟ್ರಗಳಿಗೂ ಲಸಿಕೆಗಳನ್ನು ಪೂರೈಸಿತು. ಇದೇ 21ನೇ ಶತಮಾನದ ಭಾರತದ ಆತ್ಮವಿಶ್ವಾಸ. ನಾವು ನಮ್ಮ ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲುಪಿದೆವು. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದೆವು, ಅಲ್ಲಿಗೆ ಈ ಹಿಂದೆ ಯಾರೂ ಹೋಗಿರಲಿಲ್ಲ. ಇದೇ ಕಾರಣಕ್ಕಾಗಿ ನಾನು ದೃಢವಾಗಿ ನಂಬುತ್ತೇನೆ. ಭಾರತವು ಭವಿಷ್ಯದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು, ಧೈರ್ಯದಿಂದ ಹೊಸ ಆವಿಷ್ಕಾರಗಳನ್ನು ಮಾಡಬೇ, ಇಂತಹ ತಂತ್ರಜ್ಞಾನಗಳ ಸೃಷ್ಟಿಯಲ್ಲಿ ಜಗತ್ತಿಗೇ ನಾಯಕತ್ವ ವಹಿಸಬೇಕು.

ಸ್ನೇಹಿತರೆ,

ಶೂನ್ಯದ ಆವಿಷ್ಕಾರದಿಂದ ಹಿಡಿದು ಸಂಖ್ಯಾ ವ್ಯವಸ್ಥೆ ಮತ್ತು ಖಗೋಳಶಾಸ್ತ್ರದವರೆಗೆ, ಭಾರತದ ಸಂಪ್ರದಾಯವು ಯಾವಾಗಲೂ ಜ್ಞಾನ ಮತ್ತು ಆವಿಷ್ಕಾರಗಳಿಂದ ಕೂಡಿದೆ. ಇಂದು ನಾವು ಈ ವೈಜ್ಞಾನಿಕ ಪರಂಪರೆಯನ್ನು ಆಧುನಿಕ ತಂತ್ರಜ್ಞಾನಗಳು ಮತ್ತು ನವೀಕೃತ ವಿಶ್ವಾಸದೊಂದಿಗೆ ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ. ಕಳೆದ ವರ್ಷದ ಕೆಲವು ಉದಾಹರಣೆಗಳು ಈ ಪರಿವರ್ತನೆಯನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಅಕ್ಟೋಬರ್ 30ರಂದು ರಾಷ್ಟ್ರವು ಡಾ. ಹೋಮಿ ಜಹಾಂಗೀರ್ ಬಾಬಾ ಅವರ ಜನ್ಮ ವಾರ್ಷಿಕೋತ್ಸವ ಆಚರಿಸಲಿದೆ. ಆದ್ದರಿಂದ, ನಾನು ಪರಮಾಣು ಶಕ್ತಿಯೊಂದಿಗೆ ಮಾತು ಪ್ರಾರಂಭಿಸುತ್ತೇನೆ.

ಸ್ನೇಹಿತರೆ,

ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ನಮಗೆ ದೊಡ್ಡ ಪ್ರಮಾಣದಲ್ಲಿ ಪರಮಾಣು ಶಕ್ತಿಯ ಅಗತ್ಯವಿರುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಪರಮಾಣು ಇಂಧನಕ್ಕಾಗಿ ಆಮದಿನ ಮೇಲಿನ ಅವಲಂಬನೆಯು ನಮ್ಮ ಇಂಧನ ಭದ್ರತೆಗೆ ಒಂದು ಸವಾಲಾಗಿದೆ. ಆದ್ದರಿಂದ, ಭಾರತವು ತನ್ನ ಫಾಸ್ಟ್ ಬ್ರೀಡರ್ ರಿಯಾಕ್ಟರ್ ತಂತ್ರಜ್ಞಾನವನ್ನು ವೇಗವಾಗಿ ಮುಂದುವರಿಸುತ್ತಿದೆ. ಕೆಲವೇ ತಿಂಗಳುಗಳ ಹಿಂದೆ  ದೇಶದ 500 ಮೆಗಾವ್ಯಾಟ್ ಮೂಲಮಾದರಿಯ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಮೊದಲ ನಿರ್ಣಾಯಕ ಮಟ್ಟವನ್ನು ಸಾಧಿಸಿತು. ಪರಮಾಣು ಇಂಧನ ಕ್ಷೇತ್ರದಲ್ಲಿ ನಮ್ಮ ದೀರ್ಘಕಾಲೀನ ಸಾಮರ್ಥ್ಯಗಳನ್ನು ಬಲಪಡಿಸುವತ್ತ ಇದು ಅತ್ಯಂತ ಮಹತ್ವದ ಮತ್ತು ಪ್ರಮುಖ ಹೆಜ್ಜೆಯಾಗಿದೆ.

ಸ್ನೇಹಿತರೆ,

ಇದು ಇಂಧನ ಭದ್ರತೆಯಾಗಿರಲಿ ಅಥವಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯಾಗಿರಲಿ, ಭಾರತದ ಗುರಿಯು ತನ್ನದೇ ಆದ ಅಗತ್ಯಗಳನ್ನು ಪೂರೈಸುವುದಕ್ಕೆ ಸೀಮಿತವಾಗದೆ, ನಿರ್ಣಾಯಕ ತಂತ್ರಜ್ಞಾನಗಳಲ್ಲಿ ನಮ್ಮ ಶಕ್ತಿಯನ್ನು ವಿಸ್ತರಿಸುವುದು ನಮ್ಮ ಉದ್ದೇಶವಾಗಿದೆ. ಈ ವರ್ಷ ಭಾರತವು ಬಾಹ್ಯಾಕಾಶ ವಲಯದಲ್ಲೂ ಹೊಸ ಮೈಲಿಗಲ್ಲುಗಳನ್ನು ಸಾಧಿಸಿದೆ. ಭಾರತೀಯ ಬಾಹ್ಯಾಕಾಶ ನವೋದ್ಯಮವು ತನ್ನ ಮೊದಲ ಪ್ರಯತ್ನದಲ್ಲೇ ಮೇಡ್ ಇನ್ ಇಂಡಿಯಾ ರಾಕೆಟ್ ಬಳಸಿ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ. ಭಾರತವು ಉಪಗ್ರಹ ಡಾಕಿಂಗ್ ಸಾಮರ್ಥ್ಯವನ್ನು ಸಹ ಸಾಧಿಸಿದೆ. ಇಂದು ಅನೇಕ ಭಾರತೀಯ ನವೋದ್ಯಮಗಳು ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸ ಪರಿಹಾರಗಳನ್ನು ತರುತ್ತಿವೆ. ಬಾಹ್ಯಾಕಾಶ ವಲಯದಲ್ಲಿ ಯುವ ವಿಜ್ಞಾನಿಗಳು ಮತ್ತು ಉದ್ಯಮಿಗಳ ಭಾಗವಹಿಸುವಿಕೆ ಗಮನಾರ್ಹವಾಗಿ ಹೆಚ್ಚುತ್ತಿದೆ.

ಸ್ನೇಹಿತರೆ,

ವಿವಿಧ ಕ್ಷೇತ್ರಗಳಲ್ಲಿ ಭಾರತ ಮಾಡುತ್ತಿರುವ ಸಾಧನೆಗಳ ವ್ಯಾಪ್ತಿ ಅಭೂತಪೂರ್ವವಾಗಿದೆ. ಈ ವರ್ಷ, ಭಾರತವು ಎಐ ಇಂಪ್ಯಾಕ್ಟ್ ಶೃಂಗಸಭೆ ಆಯೋಜಿಸಿತು, ತನ್ನದೇ ಆದ ಎಐ ಮಾದರಿಯನ್ನು ಪ್ರಾರಂಭಿಸಿತು. ಭಾರತದಲ್ಲಿ ತಯಾರಾದ ಚಿಪ್‌ಗಳ ಮೊದಲ ಸಾಗಣೆಗಳು ಈಗ ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಪ್ರಾರಂಭಿಸಿವೆ. ಬ್ಯಾಟರಿ ಸಂಗ್ರಹಣೆ ಕ್ಷೇತ್ರದಲ್ಲೂ ಭಾರತದೊಳಗೆ ಲಭ್ಯವಿರುವ ಕಚ್ಚಾ ವಸ್ತುಗಳ ಆಧಾರದ ಮೇಲೆ ಸಾಮರ್ಥ್ಯ ವೃದ್ಧಿಯ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ.

ಸ್ನೇಹಿತರೆ,

ಪರಮಾಣು ಶಕ್ತಿಯಿಂದ ಬಾಹ್ಯಾಕಾಶದವರೆಗೆ, ಕೃತಕ ಬುದ್ಧಿಮತ್ತೆಯಿಂದ ಸೆಮಿಕಂಡಕ್ಟರ್‌ವರೆಗೆ, ಈ ವಲಯಗಳ ಅಗತ್ಯಗಳು ಭಿನ್ನವಾಗಿವೆ. ಆದರೆ ಇವೆಲ್ಲವೂ ಒಂದೇ ಸಂದೇಶ ಸಾರುತ್ತವೆ. ಭಾರತವು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ತನ್ನ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಎರಡನ್ನೂ ಬಲಪಡಿಸುತ್ತಿದೆ. ಭಾರತವು ಮತ್ತೊಂದು ವಿಶೇಷ ಸಾಮರ್ಥ್ಯವನ್ನೂ ಹೊಂದಿದೆ. ಬೃಹತ್ ಪ್ರಮಾಣದಲ್ಲಿ ಪರಿಹಾರಗಳನ್ನು ಒದಗಿಸುವುದು. ಭಾರತದಲ್ಲಿ ಒಂದು ಪರಿಹಾರವು ಯಶಸ್ವಿಯಾದಾಗ, ಅದು ವಿಶ್ವಾದ್ಯಂತ ಅನೇಕ ದೇಶಗಳ ಸಮಸ್ಯೆಗಳನ್ನು ಪರಿಹರಿಸಲು ದಾರಿಗಳನ್ನು ಸೃಷ್ಟಿಸುತ್ತದೆ. ನಮ್ಮ ‘ಡಿಜಿಟಲ್ ಸ್ಟಾಕ್’ ಇದಕ್ಕೆ ಒಂದು ಅದ್ಭುತ ಉದಾಹರಣೆ. ನಮ್ಮ 5ಜಿ ತಂತ್ರಜ್ಞಾನವು ಮತ್ತೊಂದು ಉದಾಹರಣೆಯಾಗಿದೆ. ಭಾರತವು ಬೃಹತ್ ಪ್ರಮಾಣದಲ್ಲಿ ಜನರನ್ನು ತಲುಪಬಲ್ಲ ಸುರಕ್ಷಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವತ್ತ ಸಾಗುತ್ತಿದೆ.

ಸ್ನೇಹಿತರೆ,

ವಿಜ್ಞಾನ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಅದನ್ನು ಒಂದು ಆಯುಧವನ್ನಾಗಿ ನೋಡುವ ಪ್ರವೃತ್ತಿ ಯಾವಾಗಲೂ ಒಂದು ಸವಾಲಾಗಿ ಉಳಿದಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಆದರೆ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಮನುಕುಲದ ಸೇವೆಗಾಗಿ ಇರುವ ಸಾಧನಗಳು ಎಂದು ಭಾರತ ನಂಬುತ್ತದೆ. ವಿಜ್ಞಾನದ ನಿಜವಾದ ಯಶಸ್ಸು ಸಿಗುವುದು ಅದು ಪ್ರಯೋಗಾಲಯದಿಂದ ಹೊರಬಂದು, ಸಾಮಾನ್ಯ ನಾಗರಿಕರ ಜೀವನವನ್ನು ಪ್ರವೇಶಿಸಿ, ಅವರ ಬದುಕನ್ನು ಸುಧಾರಿಸಿದಾಗ ಮಾತ್ರ. ‘ಪ್ರಯೋಗಾಲಯದಿಂದ ವಾಸ್ತವ ಜಗತ್ತಿಗೆ’ ತಲುಪುವ ಈ ತಂತ್ರಜ್ಞಾನದ ಯಶಸ್ಸು, ಅದು ಎಷ್ಟು ಮುಂದುವರಿದಿದೆ ಎಂಬುದರ ಮೇಲೆ ಮಾತ್ರ ನಿರ್ಧಾರವಾಗುವುದಿಲ್ಲ. ಅದರ ನಿಜವಾದ ಶಕ್ತಿಯಿರುವುದು ಅದು ಎಷ್ಟು ದೊಡ್ಡ ಸಮಸ್ಯೆಯನ್ನು ಪರಿಹರಿಸುತ್ತದೆ, ಎಷ್ಟು ಜನರ ಜೀವನವನ್ನು ಬದಲಾಯಿಸುತ್ತದೆ ಎಂಬುದರಲ್ಲಿದೆ. ಆದ್ದರಿಂದ, ನಮಗೆ ‘ಉದಯೋನ್ಮುಖ ವಿಜ್ಞಾನ ಮತ್ತು ತಂತ್ರಜ್ಞಾನ’ ಎಂದರೆ ಆರೋಗ್ಯ ಸೇವೆಯನ್ನು ಬಲಪಡಿಸುವ, ಕೃಷಿ ವಲಯವನ್ನು ಪರಿವರ್ತಿಸುವ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ಹಾಗೂ ವಿಪತ್ತು ನಿರ್ವಹಣೆಗೆ ಸಹಾಯ ಮಾಡುವ ಪರಿಹಾರಗಳಾಗಿವೆ. ಭಾರತದ ಸ್ಟಾರ್ಟಪ್ ಕ್ರಾಂತಿಯು ಇಂತಹ ವಿಷಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ನನಗೆ ಸಂತೋಷ ತಂದಿದೆ. ಒಂದು ಸ್ಟಾರ್ಟಪ್, ಮೆದುಳಿನ ಚಟುವಟಿಕೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ‘ವೇರಬಲ್ ಇಇಜಿ’ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದೆ. ಭಾರತೀಯ ಕಂಪನಿಗಳು ಸ್ವದೇಶಿ ವೈರ್‌ಲೆಸ್ ಮತ್ತು ಉಪಗ್ರಹ ಸಂವಹನ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿವೆ. ಪೋಷಣೆ ಕ್ಷೇತ್ರದಲ್ಲಿ ವಿಶೇಷ ಆಹಾರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತೀಯ ಕಂಪನಿಗಳು ಸೆಮಿಕಂಡಕ್ಟರ್ ವಲಯದಲ್ಲಿ ಹೊಸ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡುತ್ತಿವೆ. ಉಕ್ಕಿನ ಉತ್ಪಾದನೆಯ ತ್ಯಾಜ್ಯದಂತಹ ಕೈಗಾರಿಕಾ ತ್ಯಾಜ್ಯಗಳನ್ನು ಬಳಸಿಕೊಳ್ಳುವ ಪರಿಹಾರಗಳನ್ನು ಕೂಡ ನಮ್ಮ ದೇಶದಲ್ಲಿ ಅನ್ವೇಷಿಸಲಾಗುತ್ತಿದೆ.

ಸ್ನೇಹಿತರೆ,

ಕೆಲವು ದಿನಗಳ ಹಿಂದೆ, ನನಗೆ ಚೆನ್ನೈಗೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಆ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಅಲ್ಲಿ, ನಾನು ಐಐಟಿ ಮದ್ರಾಸ್‌ನಲ್ಲಿ ಅತ್ಯಾಧುನಿಕ ‘ಬ್ರೈನ್ ಸೆಂಟರ್’ ಉದ್ಘಾಟಿಸಿದೆ. ಈ ಕೇಂದ್ರವು ಮೆದುಳಿನ ಇಮೇಜಿಂಗ್ ತಂತ್ರಜ್ಞಾನ ವೇದಿಕೆಯೊಂದನ್ನು ಅಭಿವೃದ್ಧಿಪಡಿಸಿದ್ದು, ಇದು ಇಡೀ ಜಗತ್ತಿಗೇ ಮಾದರಿಯಾಗಿದೆ. ಈ ಮೆದುಳು ಕೇಂದ್ರವು ಮಾನವ ಮೆದುಳಿನ ಹೈ-ರೆಸಲ್ಯೂಶನ್ ಡಿಜಿಟಲ್ 3ಡಿ ಚಿತ್ರಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ. ಈ ಯೋಜನೆಯ ಯಶಸ್ಸು, ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಗಳ ಅನೇಕ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ‘ಸಮಾಜಕ್ಕಾಗಿ ವಿಜ್ಞಾನ, ಪರಿವರ್ತನೆಗಾಗಿ ತಂತ್ರಜ್ಞಾನ’ – ಇದೇ ನಮ್ಮ ವೈಜ್ಞಾನಿಕ ಪ್ರಗತಿಯ ಮಾನದಂಡವಾಗಬೇಕು. ಭಾರತವು ಈ ಮಾನದಂಡವನ್ನು ಗಮನದಲ್ಲಿಟ್ಟುಕೊಂಡೇ ಮುನ್ನಡೆಯುತ್ತಿದೆ.

ಸ್ನೇಹಿತರೆ,

ಯಾವುದೇ ದೇಶದ ತಂತ್ರಜ್ಞಾನ ಮತ್ತು ತಂತ್ರಜ್ಞಾನ ಸೃಷ್ಟಿಸುವ ಸಾಮರ್ಥ್ಯವು ಅದರ ಸಂಶೋಧನೆಯ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಸಂಶೋಧನೆಯು ಒಂದು ರಾಷ್ಟ್ರಕ್ಕೆ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ನಿರ್ಣಾಯಕ ತಂತ್ರಜ್ಞಾನಗಳ ವಿಷಯದಲ್ಲಿ ಸ್ವಾವಲಂಬಿಯಾಗಲು ಶಕ್ತಿ ನೀಡುತ್ತದೆ. ಅದಕ್ಕಾಗಿಯೇ ನಾನು ‘ಜೈ ವಿಜ್ಞಾನ್, ಜೈ ಅನುಸಂಧಾನ'(ವಿಜ್ಞಾನಕ್ಕೆ ಜಯವಾಗಲಿ, ಸಂಶೋಧನೆಗೆ ಜಯವಾಗಲಿ) ಎಂದು ಹೇಳಿದ್ದೇನೆ! ‘ವಿಕಸಿತ ಭಾರತ’ದ ಗುರಿ ತಲುಪಲು, ನಾವು ನಮ್ಮ ಸಂಶೋಧನಾ ವಲಯವನ್ನು ನಿರಂತರವಾಗಿ ಬಲಪಡಿಸುತ್ತಿದ್ದೇವೆ. ಇದೇ ಸಂಕಲ್ಪದೊಂದಿಗೆ, ‘ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ’ದ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಲಾಗುತ್ತಿದೆ. ಕಳೆದ ವರ್ಷ ಇದೇ ವೇದಿಕೆಯಲ್ಲಿ, ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗಾಗಿ 1 ಲಕ್ಷ ಕೋಟಿ ರೂಪಾಯಿ ಮೀಸಲಿಡುವುದಾಗಿ ನಾವು ಘೋಷಿಸಿದ್ದೆವು. ಇಂದು ಅದರ ಫಲಿತಾಂಶಗಳು ಗೋಚರಿಸತೊಡಗಿವೆ. ಕಳೆದ ಒಂದು ವರ್ಷದಲ್ಲಿ ಪ್ರಯೋಗಾಲಯದಿಂದ ಮಾರುಕಟ್ಟೆಗೆ ಬರಲು ಸಿದ್ಧವಾಗಿರುವ ತಂತ್ರಜ್ಞಾನಗಳಿಗಾಗಿ ಸುಮಾರು 12 ಸಾವಿರ ಕೋಟಿ ರೂಪಾಯಿಗಳನ್ನು ಈಗಾಗಲೇ ಒದಗಿಸಲಾಗಿದೆ. ಈ ಪ್ರಯತ್ನದಲ್ಲಿ ಖಾಸಗಿ ಹೂಡಿಕೆದಾರರೂ ಸಮಾನವಾಗಿ ಪಾಲ್ಗೊಳ್ಳುತ್ತಿದ್ದಾರೆ. ಸರ್ಕಾರದ 12 ಸಾವಿರ ಕೋಟಿ ರೂಪಾಯಿಗಳ ಬದ್ಧತೆಯ ಜತೆಗೆ, ಖಾಸಗಿ ವಲಯವೂ 12 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ. ಅಂದರೆ, ಕೇವಲ 1 ವರ್ಷದ ಅವಧಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಒಟ್ಟು 24 ಸಾವಿರ ಕೋಟಿ ರೂಪಾಯಿಗಳ ಹೊಸ ಹೂಡಿಕೆ ಅಥವಾ ಬದ್ಧತೆಯನ್ನು ಖಚಿತಪಡಿಸಲಾಗಿದೆ.

ಸ್ನೇಹಿತರೆ,

ಭಾರತದ ಸಂಶೋಧನಾ ಪರಿಸರ ವ್ಯವಸ್ಥೆಯು ನಿರಂತರವಾಗಿ ವಿಸ್ತರಿಸುತ್ತಿದೆ. ಪೇಟೆಂಟ್ ಅರ್ಜಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 10 ವರ್ಷಗಳ ಹಿಂದೆ, ಒಂದು ವರ್ಷದಲ್ಲಿ ಸಲ್ಲಿಕೆಯಾಗುತ್ತಿದ್ದ ಪೇಟೆಂಟ್ ಅರ್ಜಿಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆಯಿತ್ತು. ಕಳೆದ ವರ್ಷ, ಈ ಸಂಖ್ಯೆಯು ಸುಮಾರು ಒಂದೂವರೆ ಲಕ್ಷಕ್ಕೆ ಏರಿದೆ. ಈ ಅಂಕಿಅಂಶಗಳು ಕೇವಲ ಸಂಖ್ಯೆಗಳ ಹೆಚ್ಚಳವನ್ನು ಮಾತ್ರ ಸೂಚಿಸುವುದಿಲ್ಲ. ಬದಲಾಗಿ, ಭಾರತದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯು ಒಂದು ಪ್ರಬಲ ಸಂಸ್ಕೃತಿಯಾಗಿ ಹೊರಹೊಮ್ಮುತ್ತಿರುವ ಪರಿವರ್ತನೆಯನ್ನು ಇವು ಪ್ರತಿಬಿಂಬಿಸುತ್ತಿವೆ.

ಸ್ನೇಹಿತರೆ,

21ನೇ ಶತಮಾನದ ಈ 2ನೇ ಭಾಗದಲ್ಲಿ ಮತ್ತೊಂದು ಪ್ರಶ್ನೆಯು ಅತ್ಯಂತ ಮಹತ್ವದ್ದಾಗಿದೆ. ಕೃತಕ ಬುದ್ಧಿಮತ್ತೆ ಯುಗದಲ್ಲಿ, ವೈಜ್ಞಾನಿಕ ನಿರ್ಣಯ ಸಾಮರ್ಥ್ಯವು ಹೇಗೆ ವಿಕಸನಗೊಳ್ಳುತ್ತದೆ? ನಮ್ಮ ಪ್ರಯೋಗಾಲಯಗಳನ್ನು ಮುನ್ನಡೆಸುತ್ತಿರುವ ವಿಜ್ಞಾನಿಗಳು ದಶಕಗಳ ಅನುಭವದ ಮೂಲಕ ತಮ್ಮ ಪರಿಣತಿಯನ್ನು ಬೆಳೆಸಿಕೊಂಡಿದ್ದಾರೆ. ಈ ವೇದಿಕೆಯಲ್ಲಿಯೂ ಅನೇಕ ಗಣ್ಯ ವಿಜ್ಞಾನಿಗಳು ಮತ್ತು ನೊಬೆಲ್ ಪ್ರಶಸ್ತಿ ವಿಜೇತರು ಉಪಸ್ಥಿತರಿದ್ದಾರೆ. ಸಣ್ಣ ಸಮಸ್ಯೆಗಳನ್ನು ಪರಿಹರಿಸುವ ಮೂಲಕ, ಪ್ರಯೋಗಗಳನ್ನು ನಡೆಸುವ ಮೂಲಕ ಮತ್ತು ವೈಫಲ್ಯಗಳಿಂದ ಕಲಿಯುವ ಮೂಲಕ ಅವರು ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ವಿಜ್ಞಾನಿಯೊಬ್ಬರು ಕೇವಲ ಲಭ್ಯವಿರುವ ಮಾಹಿತಿಯನ್ನು ಪುನರಾವರ್ತಿಸುವುದಿಲ್ಲ.  ಬದಲಾಗಿ, ಅವರು ಸ್ಥಾಪಿತ ಮಾದರಿಗಳನ್ನು ಪ್ರಶ್ನಿಸುತ್ತಾರೆ. ಅವರು ಪರಿಹಾರಗಳನ್ನು ಹೊಸ ದೃಷ್ಟಿಕೋನಗಳಿಂದ ಪರಿಶೀಲಿಸುತ್ತಾರೆ, ಇತರರ ಗಮನಕ್ಕೆ ಬಾರದ ಅಂಶಗಳನ್ನು ಗುರುತಿಸುತ್ತಾರೆ. ಈ ಪ್ರಕ್ರಿಯೆಯ ಮೂಲಕವೇ ವೈಜ್ಞಾನಿಕ ನಿರ್ಣಯ ಸಾಮರ್ಥ್ಯವು ರೂಪುಗೊಳ್ಳುತ್ತದೆ. ಆದರೆ ಇಂದು ಎಐ ಯುಗದಲ್ಲಿ ನಮ್ಮ ಮುಂದೆ ಒಂದು ಹೊಸ ಸವಾಲು ಎದುರಾಗಿದೆ. ಎಐ ಅನೇಕ ದಿನನಿತ್ಯದ ಕಾರ್ಯಗಳನ್ನು ಅತ್ಯಂತ ವೇಗವಾಗಿ ಪೂರೈಸಬಲ್ಲದು. ಇದು ಸಂಶೋಧನಾ ಉತ್ಪಾದಕತೆ ಹೆಚ್ಚಿಸಬಹುದು. ಆದರೆ, ಎಐ ನಮ್ಮ ವೈಜ್ಞಾನಿಕ ಚಿಂತನೆ ಮತ್ತು ಸ್ವತಂತ್ರ ನಿರ್ಣಯ ಸಾಮರ್ಥ್ಯವನ್ನು ಸೀಮಿತಗೊಳಿಸದಂತೆ, ಬದಲಾಗಿ ಅವುಗಳನ್ನು ಇನ್ನಷ್ಟು ಶ್ರೀಮಂತಗೊಳಿಸುವಂತೆ ನಾವು ನೋಡಿಕೊಳ್ಳಬೇಕು. ಎಐ ಮೂಲಕ ಉಳಿತಾಯವಾದ ಸಮಯವನ್ನು ಹೆಚ್ಚು ಸವಾಲಿನ ಸಮಸ್ಯೆಗಳನ್ನು ಪರಿಹರಿಸಲು, ಹೊಸ ಪ್ರಯೋಗಗಳನ್ನು ನಡೆಸಲು ಮತ್ತು ಹೊಸ ಆಲೋಚನೆಗಳನ್ನು ಪರೀಕ್ಷಿಸಲು ಬಳಸಿಕೊಳ್ಳಬೇಕು. ಎಐ ತ್ವರಿತವಾಗಿ ಉತ್ತರಗಳನ್ನು ನೀಡಬಲ್ಲದು, ಆದರೆ ಆ ಉತ್ತರಗಳ ಸತ್ಯಾಸತ್ಯತೆ ಪರಿಶೀಲಿಸುವ ಜವಾಬ್ದಾರಿ ವಿಜ್ಞಾನಿಯ ಮೇಲೆಯೇ ಇರಬೇಕು.

ಸ್ನೇಹಿತರೆ,

ನಾವು ನಮ್ಮ ವಿಜ್ಞಾನಿಗಳನ್ನು ಮತ್ತು ಸಂಸ್ಥೆಗಳನ್ನು ಕೇವಲ ಇಂದಿನ ಅಗತ್ಯಗಳಿಗಷ್ಟೇ ಅಲ್ಲದೆ, ಭವಿಷ್ಯದ ಸವಾಲುಗಳನ್ನು ಎದುರಿಸಲು ಕೂಡ ಸಿದ್ಧಪಡಿಸುವುದನ್ನು ಮುಂದುವರಿಸಬೇಕು. ಸೆಮಿಕಂಡಕ್ಟರ್‌ಗಳು, ಕ್ವಾಂಟಮ್ ತಂತ್ರಜ್ಞಾನಗಳು, ಜೈವಿಕ ತಂತ್ರಜ್ಞಾನ, ಸುಧಾರಿತ ವಸ್ತುಗಳು, ರೊಬೊಟಿಕ್ಸ್, ಬಾಹ್ಯಾಕಾಶ, ಸ್ವಚ್ಛ ಇಂಧನ ಮತ್ತು ಮುಂದಿನ ಪೀಳಿಗೆಯ ಸಂವಹನ ವ್ಯವಸ್ಥೆಗಳು ಭವಿಷ್ಯವನ್ನು ರೂಪಿಸುವ ಕ್ಷೇತ್ರಗಳಾಗಿವೆ. ಭಾರತವು ಈ ಎಲ್ಲಾ ಕ್ಷೇತ್ರಗಳಲ್ಲಿ ಬಲವಾದ ವೈಜ್ಞಾನಿಕ ಅಡಿಪಾಯವನ್ನು ನಿರ್ಮಿಸುತ್ತಿದೆ. ಇದಕ್ಕಾಗಿ ಹಲವಾರು ರಾಷ್ಟ್ರೀಯ ಅಭಿಯಾನಗಳನ್ನು ಕೂಡ ಪ್ರಾರಂಭಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳು ಭಾರತದಿಂದಲೇ ಹೊರಹೊಮ್ಮಬೇಕೆಂಬುದು ನಮ್ಮ ಗುರಿಯಾಗಿದೆ. ನಮ್ಮ ಜವಾಬ್ದಾರಿಯು ಕೇವಲ ನಾವೀನ್ಯತೆಗೆ ಮಾತ್ರ ಸೀಮಿತವಾಗಿಲ್ಲ. ಎಐ ಆಗಿರಲಿ, ಸಿಂಥೆಟಿಕ್ ಬಯಾಲಜಿ ಆಗಿರಲಿ ಅಥವಾ ಸ್ವಾಯತ್ತ ವ್ಯವಸ್ಥೆಗಳೇ ಆಗಿರಲಿ, ಇವುಗಳ ವಿಷಯದಲ್ಲಿ ಸುರಕ್ಷತೆ ಮತ್ತು ಭದ್ರತೆಗೆ ನಾವು ಆದ್ಯತೆ ನೀಡಲೇಬೇಕು. ಕೃತಕ ಬುದ್ಧಿಮತ್ತೆಯ ಯುಗದಲ್ಲಿ, ಸೈಬರ್ ಸುರಕ್ಷತೆಯ ಕ್ಷೇತ್ರದಲ್ಲಿ ಹೊಸ ಸವಾಲುಗಳು ಮತ್ತು ಹೊಸ ಬೆದರಿಕೆಗಳು ಉದ್ಭವಿಸುತ್ತಿವೆ. ನಮ್ಮ ಆರ್ಥಿಕ ಜಾಲಗಳಿಂದ ಹಿಡಿದು ರಾಷ್ಟ್ರೀಯ ಭದ್ರತಾ ವ್ಯವಸ್ಥೆಗಳವರೆಗೆ, ಎಲ್ಲರೂ ಈ ಸವಾಲನ್ನು ಎದುರಿಸುತ್ತಿದ್ದಾರೆ. ಆದ್ದರಿಂದ, ಇಂತಹ ಬೆದರಿಕೆಗಳಿಂದ ದೇಶದ ವ್ಯವಸ್ಥೆಗಳನ್ನು ರಕ್ಷಿಸಬಲ್ಲ, ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳು ಮತ್ತು ಕ್ವಾಂಟಮ್ ಭದ್ರತಾ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ. ಭಾರತವನ್ನು ಬಲಪಡಿಸುವ ಹಾಗೂ ಮನುಕುಲ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದೇ ನಮ್ಮ ಗುರಿಯಾಗಿದೆ.

ಸ್ನೇಹಿತರೆ,

ಈ ಸಮಾವೇಶದಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬ ಸಂಶೋಧಕರು, ಉದ್ಯಮ ನಾಯಕರು, ಸ್ಟಾರ್ಟಪ್ ಸಂಸ್ಥಾಪಕರು ಮತ್ತು ಯುವ ವಿದ್ಯಾರ್ಥಿಗಳಿಗೆ, ತಮಗಾಗಿ ಒಂದು ನಿರ್ದಿಷ್ಟ ಗುರಿ  ನಿಗದಿಪಡಿಸಿಕೊಳ್ಳುವಂತೆ ನಾನು ಕರೆ ನೀಡುತ್ತೇನೆ. ಮುಂದಿನ 3 ವರ್ಷಗಳಲ್ಲಿ ಯಾವ ತಂತ್ರಜ್ಞಾನ, ಮಾದರಿ (ಪ್ರೊಟೊಟೈಪ್), ಪ್ರಾಯೋಗಿಕ ಯೋಜನೆ ಅಥವಾ ಉತ್ಪನ್ನವನ್ನು ಅಭಿವೃದ್ಧಿಪಡಿಸಲು ಅವರು ಕೊಡುಗೆ ನೀಡಲಿದ್ದಾರೆ? ‘ಅಭಿವೃದ್ಧಿ ಹೊಂದಿದ ಭಾರತ’ ನಿರ್ಮಾಣಕ್ಕೆ ಪೂರಕವಾಗುವಂತಹ ಆವಿಷ್ಕಾರಗಳನ್ನು ನಾವು ರೂಪಿಸೋಣ. ಜಾಗತಿಕ ಪರಿಹಾರಗಳಿಗೆ ಭಾರತವನ್ನು ಕೇಂದ್ರಬಿಂದುವನ್ನಾಗಿಸುವಂತಹ ಆವಿಷ್ಕಾರಗಳನ್ನು ನಾವು ಸೃಷ್ಟಿಸೋಣ. ಆದ್ದರಿಂದ, ಈ ಸಮಾವೇಶವು ಕೇವಲ ವಿಚಾರ ವಿನಿಮಯಕ್ಕೆ ಮಾತ್ರ ಸೀಮಿತವಾಗಬಾರದು ಎಂಬುದು ನನ್ನ ಆಶಯ. ಇದು ಸ್ಪಷ್ಟ ಮತ್ತು ಅಳೆಯಬಹುದಾದ ಫಲಿತಾಂಶಗಳನ್ನು ನೀಡುವ ವೇದಿಕೆಯಾಗಬೇಕು.

ಸ್ನೇಹಿತರೆ,

ಇಂದು ಭಾರತವು ವಿಶ್ವದ ಅತ್ಯಂತ ಹೆಚ್ಚಿನ ಯುವ ಸಮೂಹ ಹೊಂದಿರುವ ರಾಷ್ಟ್ರವಾಗಿದೆ. ನಮ್ಮಲ್ಲಿ ಪ್ರತಿಭೆಗಳಿವೆ, ಹೊಸದನ್ನು ಸೃಷ್ಟಿಸುವ ದೃಢ ಸಂಕಲ್ಪವಿದೆ. ನಾವು ಅಂತಹ ಒಂದು ಪೀಳಿಗೆಯನ್ನು ರೂಪಿಸಬೇಕು. ಅದು ಉದಯೋನ್ಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೇವಲ ಭಾಗವಹಿಸುವುದಷ್ಟೇ ಅಲ್ಲ, ಬದಲಾಗಿ ಆ ಕ್ಷೇತ್ರವನ್ನು ಮುನ್ನಡೆಸಬೇಕು. ನಮ್ಮ ಮನೋಭಾವ ಹೀಗಿರಲಿ: “ನಾವು ಇದನ್ನು ಸಾಧಿಸುತ್ತೇವೆ. ನಾವು ಇದನ್ನು ಖಂಡಿತವಾಗಿಯೂ ಮಾಡುತ್ತೇವೆ.” ನಮ್ಮ ಆತ್ಮವಿಶ್ವಾಸ ಹೀಗಿರಲಿ: “ನಾವು ಇದನ್ನು ಸಾಧಿಸುತ್ತೇವೆ.” ಈ ಸಮಾವೇಶವು ಯಶಸ್ವಿಯಾಗಲಿ ಎಂದು ಮತ್ತೊಮ್ಮೆ ನಾನು ಶುಭ ಹಾರೈಸುತ್ತೇನೆ.

ಧನ್ಯವಾದಗಳು!

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ, ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****