ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಬಿಹಾರದ ವೈಶಾಲಿಯಲ್ಲಿ ಸುಮಾರು ರೂ. 34,470 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ಮಾಡಿ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಸಾರ್ವಜನಿಕ ನಂಬಿಕೆಯ ಮಹತ್ವದ ಹಬ್ಬ ಛಾತ್ ಇತ್ತೀಚೆಗೆ ಮುಕ್ತಾಯಗೊಂಡಿದ್ದು, ಆ ಅವಧಿಯಲ್ಲಿ ತಾಯಂದಿರು ಮತ್ತು ಸಹೋದರಿಯರು ತಮ್ಮ ಕುಟುಂಬ, ಸಮಾಜ ಮತ್ತು ಜಗತ್ತಿನ ಕಲ್ಯಾಣಕ್ಕಾಗಿ ಪ್ರಾರ್ಥಿಸಲು ಕಠಿಣ ನಿರ್ಜಲ ಉಪವಾಸವನ್ನು ಆಚರಿಸುತ್ತಿದ್ದರು ಎಂದು ಹೇಳಿದರು. “ಈಗ, ಛಾತಿ ಮಯ್ಯಾ ಆಶೀರ್ವಾದದಿಂದ, ನಾವು ಇಲ್ಲಿ ಅಭಿವೃದ್ಧಿ ಹಬ್ಬವನ್ನು ಆಚರಿಸುತ್ತಿದ್ದೇವೆ,” ಎಂದು ಶ್ರೀ ಮೋದಿ ಹೇಳಿದರು.
ಬಿಹಾರದ ಅಭಿವೃದ್ಧಿ ಪ್ರಯಾಣವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಮಂತ್ರದೊಂದಿಗೆ ಪ್ರಜಾಸತ್ತಾತ್ಮಕ ಶಕ್ತಿಯನ್ನು ಸಾರ್ವಜನಿಕ ಕಲ್ಯಾಣದ ಮಾಧ್ಯಮವಾಗಿ ಪರಿವರ್ತಿಸಿದೆ ಎಂದು ಒತ್ತಿಹೇಳಿದ ಪ್ರಧಾನಿ, ಪ್ರಜಾಸತ್ತಾತ್ಮಕತೆಯ ಮಹಾನ್ ಭೂಮಿ ವೈಶಾಲಿಯನ್ನು ಸರ್ಕಾರದ ಪ್ರಸ್ತುತ ಅವಧಿಯ ಒಂದು ವರ್ಷ ಪೂರ್ಣಗೊಳಿಸುವ ಸಂದರ್ಭದಲ್ಲಿ ಸೂಕ್ತವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ವೈಶಾಲಿ ಮತ್ತು ಬಿಹಾರದ ನೆಲಕ್ಕೆ ತಲೆಬಾಗುತ್ತಾ, ಈ ಮೈಲಿಗಲ್ಲು ಸಾಧನೆಯಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು
ಬಿಹಾರವು ಸುಮಾರು ಮೂವತ್ತು ವರ್ಷಗಳ ಹಿಂದೆ ಹೇಗೆ ಹೊಸ ಭರವಸೆ ಮತ್ತು ನಂಬಿಕೆಯ ಮಾರ್ಗವನ್ನು ಆರಿಸಿಕೊಂಡಿತು ಎಂಬುದನ್ನು ಸ್ಮರಿಸಿದ ಅವರು, ಗೌರವಾನ್ವಿತ ನಿತೀಶ್ ಕುಮಾರ್ ಅವರ ದೀರ್ಘ ಮುಖ್ಯಮಂತ್ರಿತ್ವದ ಕಾಲದಲ್ಲಿ ಉತ್ತಮ ಆಡಳಿತದ ಹೊಸ ಭರವಸೆಗೆ ಪರಿವರ್ತಿತವಾಗಿದೆ, ಈಗ ಅವರ ಆಶೀರ್ವಾದದಿಂದ ಸಾಮ್ರಾಟ್ ಚೌಧರಿ ಅವರಿಂದ ಮುಂದುವರೆಸಲ್ಪಡುತ್ತಿದೆ ಎಂದರು. ಸಾವಿರಾರು ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು, ಇದರಲ್ಲಿ ನಿತೀಶ್ ಕುಮಾರ್ ಅವರ ಗೌರವಾರ್ಥ ಮಾತೆ ಗಂಗಾ ಮೇಲೆ ಆರು ಲೇನ್ ದರ್ಗಾ-ಬಿದುಪುರ ಕೇಬಲ್ ಸೇತು ‘ನಿತೀಶ್ ಸೇತು’ ಸಮರ್ಪಣೆಯೂ ಸೇರಿದೆ. ಸೇತುವೆ ಪಟ್ನಾ ಮತ್ತು ವೈಶಾಲಿ ನಡುವಿನ ದೂರ ಮತ್ತು ಕಷ್ಟಗಳನ್ನು ಕಡಿಮೆ ಮಾಡುತ್ತದೆ. ಬೆಳೆಗಳು, ಹಣ್ಣುಗಳು, ತರಕಾರಿಗಳು, ಹಾಲು ಹಾಗು ಮೊಸರನ್ನು ಪ್ರಮುಖ ಮಾರುಕಟ್ಟೆಗಳಿಗೆ ಸಾಗಿಸುವುದನ್ನು ಸುಲಭವಾಗಿಸುತ್ತದೆ ಎಂಬ ಅಂಶದತ್ತ ಬೆಟ್ಟು ಮಾಡಿದರು. ಇದರ ಸಾಮಾಜಿಕ ಪರಿಣಾಮವನ್ನು ಅವರು ಒತ್ತಿಹೇಳಿದರು. “ಇಲ್ಲಿ ಯುವಜನರಿಗೆ ಶಿಕ್ಷಣ ಮತ್ತು ವೃದ್ಧರಿಗೆ ಆರೋಗ್ಯ ಸೇವೆಗಳ ಸುಲಭ ಪ್ರವೇಶ ಸಿಗುತ್ತದೆ” ಎಂದೂ ಶ್ರೀ ಮೋದಿ ನುಡಿದರು.
ಬಿಹಾರದಾದ್ಯಂತ ಆಧುನಿಕ ರಸ್ತೆ ಜಾಲದ ವೇಗವಾದ ವಿಸ್ತರಣೆಯನ್ನು ಮುಖ್ಯವಾಗಿ ಉಲ್ಲೇಖಿಸಿದ ಅವರು , ಔರಂಗಾಬಾದ್-ಚೋರ್ಡಾಹಾ ಆರು ಲೇನ್ ಹೆದ್ದಾರಿ ಉದ್ಘಾಟನೆ ಮತ್ತು ಇನ್ನೂ ಹಲವಾರು ಹೆದ್ದಾರಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಿರುವುದನ್ನೂ ಉಲ್ಲೇಖಿಸಿದರು. “ಈ ಯೋಜನೆಗಳಿಗೆ ನೂರಾರು ಕೋಟಿ ರೂಪಾಯಿ ಖರ್ಚಾಗಲಿದೆ” ಎಂದೂ ಪ್ರಧಾನಮಂತ್ರಿ ಮೋದಿ ಹೇಳಿದರು.
ರಸ್ತೆ ಜಾಲದ ಜೊತೆಗೆ, ಬಿಹಾರದ ಇಂಧನ ಶಕ್ತಿ ಮತ್ತು ನಗರಾಭಿವೃದ್ಧಿ ಭೂದೃಶ್ಯವು ಬಕ್ಸರ್ ಥರ್ಮಲ್ ಪವರ್ ಪ್ಲಾಂಟ್ ನಿರ್ಮಾಣ, ಪಿರ್ಪೇಂಟಿ ಥರ್ಮಲ್ ಪವರ್ ಪ್ಲಾಂಟ್ ನ ಪ್ರಸರಣ ವ್ಯವಸ್ಥೆಯ ಶಿಲಾನ್ಯಾಸ ಮತ್ತು ಫುಲ್ವಾರಿಯಾ ಡ್ಯಾಂನಲ್ಲಿ ಸೌರಶಕ್ತಿ ಸ್ಥಾವರದಂತಹ ಪ್ರಮುಖ ಉಪಕ್ರಮಗಳ ಮೂಲಕ ವೇಗವಾಗಿ ಬದಲಾಗುತ್ತಿರುವುದನ್ನು ಗಮನಿಸಿದ, ಪ್ರಧಾನಮಂತ್ರಿ ರಾಜ್ಯದ ಭೂತಕಾಲವನ್ನು ವರ್ತಮಾನದೊಂದಿಗೆ ಹೋಲಿಸಿದರು. “ಒಂದು ಕಾಲದಲ್ಲಿ ಬಿಹಾರದ ಸಾವಿರಾರು ಹಳ್ಳಿಗಳಿಗೆ ವಿದ್ಯುತ್ ತಲುಪಿರಲಿಲ್ಲ; ಇಂದು ಬಿಹಾರ ವಿದ್ಯುತ್ ಉತ್ಪಾದನೆಯ ಪ್ರಮುಖ ಕೇಂದ್ರವಾಗುತ್ತಿದೆ” ಎಂಬುದರತ್ತ ಶ್ರೀ ಮೋದಿ ಬೆಟ್ಟು ಮಾಡಿದರು.
ನಗರ ಸಾರಿಗೆಯನ್ನು ಅನುಕೂಲಕರಗೊಳಿಸಲು ಇಂದು 100 ಆಧುನಿಕ ಪಿ.ಎಂ. ಇ-ಬಸ್ ಗಳಿಗ್ ಹಸಿರು ನಿಶಾನೆ ತೋರಲಾಗಿದೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸಾವಿರಾರು ಬಡ ಕುಟುಂಬಗಳಿಗೆ ಪಕ್ಕಾ ಮನೆಗಳ ಕೀಲಿಗಳನ್ನು ಹಸ್ತಾಂತರಿಸುವುದರತ್ತ ಬೆಟ್ಟು ಮಾಡಿದ ಪ್ರಧಾನಮಂತ್ರಿ ಪ್ರಗತಿಯನ್ನು ಸ್ವಾಗತಿಸಿದರು. “ನಾನು ಬಿಹಾರದ ಜನರನ್ನು ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅಭಿನಂದಿಸುತ್ತೇನೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.
ಬಿಹಾರದ ದೀರ್ಘ ಪರಿವರ್ತನೆಯ ಪ್ರಯಾಣವನ್ನು ಪ್ರತಿಬಿಂಬಿಸಿದ ಪ್ರಧಾನಮಂತ್ರಿ, ಇಂದು ಗಮನವು ಹೂಡಿಕೆ ಅಂಕಿಅಂಶಗಳು, ಅಪರಾಧಿಗಳ ವಿರುದ್ಧ ಕ್ರಮ ಮತ್ತು ರಾಜ್ಯಾದ್ಯಾಂತ ಆರೋಗ್ಯಕರ ಅಭಿವೃದ್ಧಿ ಸ್ಪರ್ಧೆಯ ಮೇಲೆ ಇದೆ ಎಂದು ಹೇಳಿದರು. “ಉತ್ತರ ಬಿಹಾರ, ನಲಂದಾ-ಗಯಾಜಿ, ಶಹಾಬಾದ್-ಕೈಮೂರ್ ಅಥವಾ ರಾಜಧಾನಿ ಪಟ್ನಾ ಆಗಿರಲಿ, ಪ್ರತಿಯೊಂದು ಪ್ರದೇಶದಲ್ಲಿಯೂ ಹೊಸ ಅಭಿವೃದ್ಧಿ ಗಾಥೆ ಬರೆಯಲಾಗುತ್ತಿದೆ” ಎಂದು ಶ್ರೀ ಮೋದಿ ಹೇಳಿದರು.
ಪ್ರಸ್ತುತ ಸರ್ಕಾರದ ಅಡಿಯಲ್ಲಿ ಕಳೆದ ವರ್ಷದ ಸಾಧನೆಗಳನ್ನು ಬಿಹಾರದ ವೇಗದ ಪ್ರಗತಿಗೆ ಸಾಕ್ಷಿಯಾಗಿ ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು ಎರಡು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಹೂಡಿಕೆ ಒಪ್ಪಂದಗಳು, ಗಯಾಜಿಯಲ್ಲಿ 6,000 ಕೋಟಿ ರೂಪಾಯಿಯ ಉಕ್ಕು ಯೋಜನೆಯ ಪ್ರಾರಂಭ, ಮುಚ್ಚಿದ ಸಕ್ಕರೆ ಕಾರ್ಖಾನೆಗಳನ್ನು ಪುನರುಜ್ಜೀವನಗೊಳಿಸಲು ಹೊಸ ಸಕ್ಕರೆ ಪ್ರೋತ್ಸಾಹ ನೀತಿ, ರೈತರಿಗೆ ಪ್ರತಿಯೊಂದು ಹೊಲಕ್ಕೂ ನೀರು ಪೂರೈಸಲು 11,000 ಹೊಸ ಕೊಳವೆ ಬಾವಿ (ಟ್ಯೂಬ್ ವೆಲ್ )ಗಳ ನಿರ್ಮಾಣ ಯೋಜನೆ, ನೀರಾವರಿಗೆ 12 ಗಂಟೆಗಳ ವಿದ್ಯುತ್ ಖಚಿತಪಡಿಸುವ ಐತಿಹಾಸಿಕ ನಿರ್ಧಾರ, ಒಂದು ವರ್ಷದಲ್ಲಿ 200ಕ್ಕೂ ಹೆಚ್ಚು ಹೊಸ ಪದವಿ ಕಾಲೇಜುಗಳ ಉದ್ಘಾಟನೆ ಮತ್ತು ಹೆಣ್ಣುಮಕ್ಕಳಿಗಾಗಿ ಮಾ ಸೀತಾ ಮಹಿಳಾ ವಿಶ್ವವಿದ್ಯಾಲಯದ ಅನುಮೋದನೆಗಳನ್ನು ಪಟ್ಟಿ ಮಾಡಿದರು. “ಬಿಹಾರದ ಅಭಿವೃದ್ಧಿಯ ಈ ಪಟ್ಟಿ ತುಂಬಾ ಉದ್ದವಾಗಿದೆ, ಇದನ್ನು ಯಾವುದೇ ಹಂತದಿಂದ ವಿವರಿಸಲಾಗದು, ಬಿಹಾರದ ಅಭಿವೃದ್ಧಿಯನ್ನು ಇಲ್ಲಿ ಬರುವ ಮೂಲಕವೇ ಅನುಭವಿಸಬಹುದು” ಎಂದು ಪ್ರಧಾನಿ ಮೋದಿ ಹೇಳಿದರು.
ಸ್ಪಷ್ಟ ಉದ್ದೇಶವು ದೃಗೋಚರ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ತಮ್ಮ ಸರ್ಕಾರವು 12 ವರ್ಷಗಳಲ್ಲಿ 50 ಕೋಟಿ ಜನರನ್ನು ಬಡತನದಿಂದ ಹೊರತೆಗೆದಿದೆ ಎಂಬುದರತ್ತ ಗಮನ ಸೆಳೆದರು. “ಇದು ಸರ್ಕಾರದ ಇಚ್ಛಾಶಕ್ತಿಯ ಫಲಿತಾಂಶ ಮತ್ತು ಇದು ಬಡವರ ಕಲ್ಯಾಣಕ್ಕಾಗಿ ಸರ್ಕಾರದ ಯೋಜನೆಗಳ ಫಲಿತಾಂಶ,” ಎಂದು ಶ್ರೀ ಮೋದಿ ಹೇಳಿದರು.
ಭಾರತವು ಬಡತನದ ವಿರುದ್ಧ ಹೋರಾಟವನ್ನು ಗೆಲ್ಲುತ್ತಿದೆ ಎಂದು ವಿವರಿಸಿ, 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳ ಮೂಲಕ ಕೋಟ್ಯಂತರ ಹಿಂದುಳಿದ ನಾಗರಿಕರ ಜೀವನ ಸುಲಭತೆ ಮತ್ತು ಸೌಲಭ್ಯಗಳನ್ನು ಒದಗಿಸಲು ಪ್ರಾಶಸ್ತ್ಯ ನೀಡಲಾಗುತ್ತಿದೆ, ಕೋಟ್ಯಂತರ ಕುಟುಂಬಗಳಿಗೆ ಭದ್ರತೆಯ ಭಾವನೆ ನೀಡುವ ಪಕ್ಕಾ ಮನೆಗಳು, ದುಬಾರಿ ಆರೋಗ್ಯ ಸೇವೆಗಳ ಭಾರವನ್ನು ಕಡಿಮೆ ಮಾಡುವ ಉಚಿತ ವೈದ್ಯಕೀಯ ಚಿಕಿತ್ಸೆ ಖಚಿತಪಡಿಸುವುದು, ಮತ್ತು ಶೌಚಾಲಯಗಳು, ವಿದ್ಯುತ್ ಮತ್ತು ನೀರು ಗೌರವಯುತ ಜೀವನವನ್ನು ಖಚಿತಪಡಿಸುತ್ತಿವೆ ಎಂದು ವಿವರಿಸಿ, ಈ ಪರಿವರ್ತನೆಯನ್ನು ಪ್ರಮುಖವಾಗಿ ಉಲ್ಲೇಖಿಸಿದರು. “ಇದರಿಂದ, ಬಡವರಲ್ಲಿಯೂ ಆತ್ಮವಿಶ್ವಾಸ ಹುಟ್ಟಿಕೊಂಡಿದ್ದು, ಅವರು ಬಡತನವನ್ನು ಸೋಲಿಸುವ ಮೂಲಕ ಮುಂದುವರೆದಿದ್ದಾರೆ” ಎಂದು ಪ್ರಧಾನಮಂತ್ರಿ ಮೋದಿ ನುಡಿದರು.
ಪ್ರಸ್ತುತ ಸರ್ಕಾರದ ಕಠಿಣ ಪರಿಶ್ರಮವು ಬಿಹಾರದ ಬಡತನ ವಿರೋಧಿ ಅಭಿಯಾನದಲ್ಲಿ ಪ್ರಮುಖ ಕೊಡುಗೆ ನೀಡಿರುವುದನ್ನು ಉಲ್ಲೇಖ ಮಾಡಿ, ಕೇಂದ್ರ ಯೋಜನೆಗಳನ್ನು ರಾಜ್ಯ ಸರ್ಕಾರ ಮನೆಮನೆ ಬಾಗಿಲಿಗೆ ಕೊಂಡೊಯ್ದು ಜಾರಿಗೆ ತಂದಿದ್ದು, ಬಿಹಾರದ 43 ಲಕ್ಷ ಕುಟುಂಬಗಳಿಗೆ ಪಕ್ಕಾ ಮನೆಗಳು ದೊರಕಿವೆ, ಆಗಸ್ಟ್ ನಲ್ಲಿ ಇನ್ನೂ 11 ಲಕ್ಷ ಮಂಜೂರಾದವು, ಸುಮಾರು 75 ಲಕ್ಷ ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸಾವಿರಾರು ಕೋಟಿ ಪಡೆದಿದ್ದಾರೆ ಮತ್ತು ಸ್ವಸಹಾಯ ಗುಂಪುಗಳಿಗೆ ಬೆಂಬಲವು 50 ಲಕ್ಷ ಗ್ರಾಮೀಣ ಮಹಿಳೆಯರನ್ನು ಲಕ್ಷಪತಿ ದಿದಿಗಳಾಗಿ ಸಬಲಗೊಳಿಸಿದೆ ಎಂದು ಹೇಳಿದರು. “ಇಂತಹ ಪ್ರಯತ್ನಗಳ ಫಲವಾಗಿ
ಇಂದು ಬಿಹಾರದ ಕೋಟ್ಯಂತರ ಜನರು ಬಡತನದಿಂದ ಹೊರಬಂದಿದ್ದಾರೆ ಮತ್ತು ದೇಶವೂ ಈ ಯಶಸ್ಸನ್ನು ಸಾಧಿಸಿದೆ” ಎಂದು ಶ್ರೀ ಮೋದಿ ಹೇಳಿದರು.
ಬಿಹಾರದ ಅಪೂರ್ವ ಅಭಿವೃದ್ಧಿ ಪ್ರಯಾಣಕ್ಕೆ ಶುಭಾಶಯಗಳನ್ನು ತಿಳಿಸಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಎಲ್ಲಾ ಮೈತ್ರಿ ಸಹಭಾಗಿಗಳ ನಡುವೆ ನಿರಂತರ ಸಹಯೋಗದ ವೇಗ ಅಗತ್ಯ ಎಂದರು. “ಈಗ ನಾವು ನಿಲ್ಲಬಾರದು ಅಥವಾ ದಣಿಯಬಾರದು, ಮತ್ತು ನಾವು ಎಲ್ಲರೂ ಸಮರ್ಪಕ, ಸಮೃದ್ಧ ಮತ್ತು ಸ್ವಾವಲಂಬಿ ಬಿಹಾರವನ್ನು ನಿರ್ಮಿಸಲು ನಿರಂತರವಾಗಿ ಒಟ್ಟಾಗಿ ಕೆಲಸ ಮಾಡಬೇಕು” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.
*****
We are building a Bihar that is stronger, more prosperous and full of opportunities. https://t.co/vvTCLn7Y8o
— Narendra Modi (@narendramodi) November 21, 2026
गंगा मैया पर बने दरगाह-बिदुपुर छह-लेन केबल ब्रिज को जनता के लिए समर्पित किया गया है। इस आधुनिक ब्रिज का नाम आदरणीय नीतीश जी के सम्मान में...‘नीतीश सेतु’ रखा गया है: PM @narendramodi in Vaishali, Bihar
— PMO India (@PMOIndia) November 21, 2026
हमने करोड़ों गरीबों के जीवन को आसान बनाने, उन्हें सुविधाएं देने को प्राथमिकता दी है: PM @narendramodi in Vaishali, Bihar
— PMO India (@PMOIndia) November 21, 2026