Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐಐಟಿ ಖರಗ್ಪುರದ ಪ್ಲಾಟಿನಂ ಮಹೋತ್ಸವದ ಆಚರಣೆಗಳಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಐಐಟಿ ಖರಗ್ಪುರದ ಪ್ಲಾಟಿನಂ ಮಹೋತ್ಸವದ ಆಚರಣೆಗಳಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳದ ಐಐಟಿ ಖರಗ್ಪುರದ ಪ್ಲಾಟಿನಂ ಮಹೋತ್ಸವದ  ಆಚರಣೆಗಳಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ‌ ಮಾತನಾಡಿದ ಪ್ರಧಾನಮಂತ್ರಿ, ತಮ್ಮ ಮುಂದೆ ಭಾರತದ ಭೂತಕಾಲ, ವರ್ತಮಾನ ಮತ್ತು ಭವಿಷ್ಯದೊಂದಿಗೆ ಸಂಪರ್ಕ ಹೊಂದಿರುವ ಪ್ರತಿಭಾವಂತ, ಮಹತ್ವಾಕಾಂಕ್ಷಿ ತಲೆಮಾರಿನವರು ಸಂಸ್ಥೆಯ 75 ವರ್ಷದ ಪ್ರಯಾಣವನ್ನು ಆಚರಿಸಲು ಮತ್ತು ಅದರ ಪರಂಪರೆಯನ್ನು ಗೌರವಿಸಲು ಸೇರಿಕೊಂಡಿದ್ದಾರೆ ಎಂದು ಹೇಳಿದರು.  ಐಐಟಿ ಖರಗ್ಪುರವು 75 ವರ್ಷಗಳಲ್ಲಿ ನಿರ್ಮಿಸಿದ ಅನೇಕ ಮೈಲಿಗಲ್ಲುಗಳನ್ನು ಪ್ರಮುಖವಾಗಿ ಉಲ್ಲೇಖ ಮಾಡಿದ ಅವರು ಈ ಯುಗದಲ್ಲಿ ಭಾರತವು ಎತ್ತಿನ ಗಾಡಿಗಳಿಂದ ಬುಲೆಟ್ ರೈಲುಗಳಿಗೆ, ಅಂಚೆ ಪತ್ರಗಳಿಂದ ಸಾಮಾಜಿಕ ಮಾಧ್ಯಮ ಸಂದೇಶಗಳಿಗೆ ವ್ಯಾಪಕ ಪರಿವರ್ತನೆಗಳನ್ನು ಕಂಡಿದೆ, ದೇಶದ ಮೊದಲ ಐಐಟಿಯಾಗಿ, ಈ ಸಂಸ್ಥೆ ಈ ಬದಲಾವಣೆಗಳ ಪ್ರತಿಯೊಂದು ಹಂತದಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ ಎಂದು ಒತ್ತಿಹೇಳಿದರು. “ನಾನು ಇಲ್ಲಿ ಇರುವ ಎಲ್ಲಾ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಸಂಪೂರ್ಣ ಸಿಬ್ಬಂದಿಗೆ ಮತ್ತು ಐಐಟಿ ಖರಗ್ಪುರದ ಎಲ್ಲಾ ಪೂರ್ವ/ಹಿರಿಯ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ,” ಎಂದು ಶ್ರೀ ಮೋದಿ ಹೇಳಿದರು.

ಕೆಲವು ಕ್ಯಾಂಪಸ್ ಜೀವನದ ನೆನಪುಗಳು ಶಾಶ್ವತವಾಗಿ ಉಳಿಯುತ್ತವೆ ಎಂಬುದನ್ನು  ನೆನಪಿಸಿಕೊಂಡ ಪ್ರಧಾನಮಂತ್ರಿ, ದಶಕಗಳ ನಂತರವೂ ಚೆಡಿ’ಸ್ ನಲ್ಲಿ ಚಹಾ ಕುಡಿಯುವ ಚರ್ಚೆಗಳನ್ನು ಅನೇಕ ಹಳೆಯ ವಿದ್ಯಾರ್ಥಿಗಳು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಇತರ ಸಂಸ್ಥೆಗಳ ಹಾಸ್ಟೆಲ್ ಗಳಿಗಿಂತ ಭಿನ್ನವಾಗಿ, ಐಐಟಿ ಖರಗ್ಪುರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಆಳವಾಗಿ ಹೆಮ್ಮೆಪಡುವ ಹಾಲ್ ಗಳಿವೆ ಎಂದು ಹೇಳಿದರು. ಇತ್ತೀಚಿನ ದೀಪಾವಳಿ ಆಚರಣೆಗಳನ್ನು ಉಲ್ಲೇಖಿಸಿ, ಐಐಟಿ ಖರಗ್ಪುರದಲ್ಲಿ ದೀಪಾವಳಿ ಉತ್ಸಾಹವು ವಿಶಿಷ್ಟವಾಗಿದೆ ಎಂದು ಅವರು ನುಡಿದರಲ್ಲದೆ ಅದರ ದೀಪ ಕಾಂತಿ ತನ್ನದೇ ಆದ ಆಕರ್ಷಣೆಯನ್ನು ಹೊಂದಿದ್ದು, ವಿವಿಧ ಹಾಲ್ ಗಳ ಸ್ಪರ್ಧೆಯಿಂದ ಇನ್ನಷ್ಟು ವಿಶೇಷವಾಗಿದೆ ಎಂದರು. “ಈ ಸ್ಪರ್ಧೆಯಲ್ಲಿ ಯಾವ ಹಾಲ್ ಗೆದ್ದಿದೆ?” ಎಂದು ಪ್ರಧಾನಮಂತ್ರಿ ಮೋದಿ ಕೇಳಿದರು.

ಬಂಗಾಳವು ಆಲೋಚನೆಗಳು ಬಲಗೊಂಡು ರಾಷ್ಟ್ರೀಯ ಚಳವಳಿಗಳು ಹುಟ್ಟಿದ ಭೂಮಿ ಎಂದು ಉಲ್ಲೇಖಿಸಿ, ಐಐಟಿ ಖರಗ್ಪುರವು ಸ್ವಾತಂತ್ರ್ಯ ಹೋರಾಟಗಾರರ ಹಳೆಯ ಬಂಧನ ಶಿಬಿರದ ಸ್ಥಳದಲ್ಲಿದೆ ಎಂಬುದರತ್ತಲೂ‌ ಗಮನ ಸೆಳೆದರು. ಇದು ದಶಕಗಳ ಹಿಂದೆ ಸ್ವಶಾಸನ /ಸ್ವಾತಂತ್ರ್ಯ ಬಯಸಿದ ಮತ್ತು ಭಾರತವನ್ನು ಅತ್ಯುನ್ನತ ಶಿಖರದಲ್ಲಿ ನೋಡಲು ಬಯಸಿದ ಭಾರತೀಯರ ಅಜೇಯ ಧೈರ್ಯವನ್ನು ಸಾಕ್ಷೀಕರಿಸಿತು. ಇಂದು ಅದೇ ಕ್ಯಾಂಪಸ್ ಯುವಜನರನ್ನು ಸಿದ್ಧಪಡಿಸುತ್ತಿದೆ, ಅವರ ನವೀನತೆ ಮತ್ತು ಆಲೋಚನೆಗಳು ಭಾರತವನ್ನು ಸ್ವಾವಲಂಬಿಯಾಗಿಸಲು ಶಕ್ತಿಯಾಗುತ್ತಿವೆ ಎಂದು ಹೇಳಿದರು. ಅವರು ಸ್ವಶಾಸನ ಮತ್ತು ಸ್ವಾತಂತ್ರ್ಯದ ಕನಸಿನ ಹಳೆಯ ಆಶಯವನ್ನು ಇಂದಿನ ಸ್ವಾವಲಂಬನೆ ಮತ್ತು ಭವಿಷ್ಯ ನಿರ್ಮಾಣದ ಅವಕಾಶದೊಂದಿಗೆ ಹೋಲಿಸಿದರು. “ಆಕಾಂಕ್ಷೆಯಿಂದ ಸ್ವಾವಲಂಬನೆಗೆ ಈ ಪ್ರಯಾಣವೇ ವಿಕಸಿತ ಭಾರತ ನಿರ್ಮಾಣದ ನಿಜವಾದ ಶಕ್ತಿ,” ಎಂದು ಶ್ರೀ ಮೋದಿ ದೃಢಪಡಿಸಿದರು.

ಹೊಸದಾಗಿ ಸ್ವತಂತ್ರ ಭಾರತದಲ್ಲಿ ಮೊದಲ ಸಾಮಾನ್ಯ ಚುನಾವಣೆ ನಡೆಯುವ ಮೊದಲು ಐಐಟಿ ಖರಗ್ಪುರ ಸ್ಥಾಪನೆಯಾದಾಗಿನಿಂದ ಅದರ ಬೆಳವಣಿಗೆಯ ಪ್ರಯಾಣವನ್ನು ಗುರುತಿಸಿದ ಪ್ರಧಾನಿಯವರು ಆಗ ರಾಷ್ಟ್ರಕ್ಕೆ ಕೈಗಾರಿಕೆ ಮತ್ತು ಮೂಲಸೌಕರ್ಯಕ್ಕಾಗಿ ಎಂಜಿನಿಯರ್ ಗಳ ಅಗತ್ಯವಿತ್ತು, ಭಾರತದ ವೈಜ್ಞಾನಿಕ ಸಾಮರ್ಥ್ಯಗಳು ಹೆಚ್ಚಾದಂತೆ, ಅದರ ಪದವೀಧರರು ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ಕಾರ್ಯಕ್ರಮಗಳನ್ನು ಮುಂದುವರೆಸಿದರು ಮತ್ತು ನಂತರ ಭಾರತದ ಸಾಫ್ಟ್ ವೇರ್ ಉದ್ಯಮವನ್ನು ಬಲಪಡಿಸಿ, ಮಾಹಿತಿ ತಂತ್ರಜ್ಞಾನ ಯುಗ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಜಾಗತಿಕ ಕಂಪನಿಗಳನ್ನು ಮುನ್ನಡೆಸಿದರು ಎಂದು ಹೇಳಿದರು. ಸಂಸ್ಥೆ ಪ್ರತಿಯೊಂದು ಕಾಲಘಟ್ಟದಲ್ಲಿಯೂ ತನ್ನ ರಾಷ್ಟ್ರ ನಿರ್ಮಾಣ ಜವಾಬ್ದಾರಿಯನ್ನು ನಿರಂತರವಾಗಿ ಪೂರೈಸುತ್ತ ಮುಂದುವರಿದಿದೆ ಮತ್ತು 75 ವರ್ಷಗಳ ಅನುಭವವು ಭಾರತ ವಿಕಸಿತ ಭಾರತದತ್ತ ಸಾಗುತ್ತಿರುವಾಗ ರಾಷ್ಟ್ರದ ಅಭಿವೃದ್ಧಿ ಮತ್ತು ನಾವೀನ್ಯತೆಯ ವಿವರಣೆಗಳಲ್ಲಿ  ಪ್ರಮುಖ ಪಾತ್ರ ವಹಿಸುವುದಾಗಿ ಒತ್ತಿಹೇಳಿದರು.ಹಾಗು  ವಿದ್ಯಾರ್ಥಿಗಳ ಮೇಲೆ ಸಂಪೂರ್ಣ ನಂಬಿಕೆ ವ್ಯಕ್ತಪಡಿಸಿದರು. “ಇಂದಿನ ಆಕಾಂಕ್ಷಿ ಭಾರತದ ಕನಸುಗಳನ್ನು ಸಾಕಾರಗೊಳಿಸಲು ನೀವು ಯಾವುದೇ ಅವಕಾಶವನ್ನು ಕೈ ಬಿಡುವುದಿಲ್ಲ ಎಂದು ನಾನು ವಿಶ್ವಾಸ ಹೊಂದಿದ್ದೇನೆ,” ಎಂದು ಪ್ರಧಾನಮಂತ್ರಿ ಮೋದಿ ದೃಢಪಡಿಸಿದರು.

ಯಾರೇ ಒಬ್ಬರ ಸಾಮರ್ಥ್ಯವನ್ನು ಅಡಚಣೆಗಳನ್ನು ಎದುರಿಸುವ ಧೈರ್ಯದಿಂದ ನಿರ್ಧರಿಸಲಾಗುತ್ತದೆಯೇ ಹೊರತು ಅವರು ತೃಪ್ತಿಯಿಂದ ಹಿಂದೆ ಕುಳಿತುಕೊಳ್ಳುವ ಮನಸ್ಥಿತಿಯಿಂದಲ್ಲ‌ ಎಂದು ವಿವರಿಸಿದ ಪ್ರಧಾನಮಂತ್ರಿ, ಜನರು ತಮ್ಮ ಸ್ವಂತ ಚಿಂತನೆಗೆ ಮಿತಿಗಳನ್ನು ಹಾಕುತ್ತಾರೆ, ಇದನ್ನು ‘ಲಿಮಿಟಿಂಗ್ ನಂಬಿಕೆಗಳು’ ಎಂದು ಕರೆಯುತ್ತಾರೆ, ಇದು ಅವರ ಕನಸುಗಳು, ಪ್ರತಿಭೆ ಮತ್ತು ದೇಶದ ಸಾಮರ್ಥ್ಯವನ್ನು ನಿರ್ಬಂಧಿಸುತ್ತದೆ, ಇದರಿಂದ ಅವರು ಸ್ವತಃ ಏನು ಸಾಧ್ಯ ಮತ್ತು ಏನು ಸಾಧ್ಯವಿಲ್ಲ ಎಂದು ನಿರ್ಧರಿಸುತ್ತಾರೆ. “ನಾವು ನಮ್ಮ ಚಿಂತನೆಯ ಮಿತಿಯನ್ನು ಇಡೀ  ಜಗತ್ತಿನ ವ್ಯಾಪ್ತಿಯ  ಮಿತಿಯಾಗಿ ಪರಿಗಣಿಸುತ್ತೇವೆ,” ಎಂದು ಶ್ರೀ ಮೋದಿ  ಹೇಳಿದರು

ರಾಷ್ಟ್ರಗಳು ಕೂಡ ತಮ್ಮ ಸಾಮರ್ಥ್ಯಗಳನ್ನು ಗುರುತಿಸುವುದು ತಮ್ಮ ಚಿಂತನೆಯ ಮಿತಿಗಳನ್ನು ಮುರಿದಾಗ ಮಾತ್ರ ಎಂದು ಭಾರತ ಇತ್ತೀಚಿನ ವರ್ಷಗಳಲ್ಲಿ ತೋರಿಸಿದೆ ಎಂದು ಪ್ರಧಾನಿ ಹೇಳಿದರು. “ಭಾರತ ಧೈರ್ಯವಾಗಿ ಹೇಳಿತು: ಮಿತಿಗಳನ್ನು ಮುರಿದು, ಸಾಧ್ಯತೆಗಳನ್ನು ಅನಾವರಣ (ಅನ್ಲಾಕ್) ಮಾಡಿ,” ಎಂಬುದಾಗಿ‌ ಪ್ರಧಾನಮಂತ್ರಿ ಮೋದಿ ಹೇಳಿದರು.

ಕಳೆದ 12 ವರ್ಷಗಳಲ್ಲಿ ಸರ್ಕಾರ ಬಡವರನ್ನು ಬಲಪಡಿಸಿ ಸಬಲೀಕರಿಸುವ ಮೂಲಕ ಮತ್ತು ಅವರ ಜೀವನ ಸುಲಭತೆಗಾಗಿ ಯೋಜನೆಗಳನ್ನು ಪ್ರಾರಂಭಿಸುವ ಮೂಲಕ ಆ ಮನೋಭಾವವನ್ನು ಬದಲಾಯಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು, ಇದರ ಫಲಿತಾಂಶಗಳು ಇಂದು ಕಾಣಿಸುತ್ತಿವೆ. ಇತ್ತೀಚಿನ ವಿಶ್ವ ಬ್ಯಾಂಕ್ ವರದಿಯನ್ನು ಉಲ್ಲೇಖಿಸಿ, ಭಾರತದಲ್ಲಿ ಕೇವಲ 12 ರಿಂದ 13 ವರ್ಷಗಳಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಅದು ಹೇಳಿದೆ, ಅದು ಈ ಸಾಧನೆಯ ಮಹತ್ವ ಎಂದವರು ಒತ್ತಿ ಹೇಳಿದರು. “ಇದು ಸಣ್ಣ ಬದಲಾವಣೆ ಅಲ್ಲ; ಇದು ಆ ಮನೋಭಾವದ ಫಲಿತಾಂಶ, ಅದು ಹೇಳುತ್ತದೆ: ಮಿತಿಗಳನ್ನು ಮುರಿಯಿರಿ,” ಎಂದು ಪ್ರಧಾನಮಂತ್ರಿ ಮೋದಿ ನುಡಿದರು.

ಸೆಮಿಕಂಡಕ್ಟರ್ ಮಿಷನ್ ಅನ್ನು ಮತ್ತೊಂದು ಉದಾಹರಣೆಯಾಗಿ ನೀಡುತ್ತಾ, ಇತರ ದೇಶಗಳು 50 ವರ್ಷಗಳಿಂದ ಸೆಮಿಕಂಡಕ್ಟರ್ ಗಳನ್ನು ತಯಾರಿಸುತ್ತಿದ್ದಾಗ ಅದರ ಅಗತ್ಯವೇನು ಮತ್ತು ಭಾರತ ಈಗ ಏನು ಸಾಧಿಸಬಹುದು ಎಂಬ ಪ್ರಶ್ನೆಗಳು ಬಂದವು ಎಂಬುದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. “ಆದ್ದರಿಂದ, ನಾನು ಸೆಮಿಕಂಡಕ್ಟರ್ ಮಿಷನ್ ಬಗ್ಗೆ ಮಾತನಾಡಿದಾಗ, ಈಗ ತಡವಾಗಿದೆ ಎಂದು ಹೇಳಲಾಯಿತು,” ಎಂದು ಶ್ರೀ ಮೋದಿ ಹೇಳಿದರು.

ತಾವು ದೃಢವಾಗಿ ದೃಢನಿಶ್ಚಯದಿಂದ ಇದ್ದು, ಹಿಂದೆ ವಿಳಂಬವಾಗಿದ್ದ ಕಾರಣ ಭಾರತ ಇನ್ನೂ ಕೈಕಟ್ಟಿಕೊಂಡು ಕುಳಿತುಕೊಳ್ಳಬೇಕೇ ಎಂದು ಪ್ರಶ್ನಿಸಿಕೊಂಡೆ  ಎಂದು ಹೇಳಿದ ಪ್ರಧಾನಮಂತ್ರಿ, ಅಧಿಕಾರಿಗಳನ್ನು ವೈಯಕ್ತಿಕವಾಗಿ ಒಟ್ಟುಗೂಡಿಸಿ ಯೋಜನೆಗಳನ್ನು ರೂಪಿಸುವ ಮೂಲಕ ಆರಂಭ ಮಾಡಿದ್ದನ್ನು ನೆನಪಿಸಿಕೊಂಡರು. ನಾಲ್ಕು ವರ್ಷಗಳೊಳಗೆ ದೇಶಾದ್ಯಾಂತ ಅನೇಕ ಸೆಮಿಕಂಡಕ್ಟರ್ ಸೌಲಭ್ಯಗಳು ಆರಂಭವಾಗಿವೆ, ಭಾರತ ಚಿಪ್ ಗಳನ್ನು ರಫ್ತು ಮಾಡತೊಡಗಿದೆ, ಮತ್ತು ಐಐಟಿ ಖರಗ್ಪುರದ ಮಾಜಿ/ಹಿಂದಿನ  ವಿದ್ಯಾರ್ಥಿಗಳು ಈ ಸೌಲಭ್ಯಗಳಲ್ಲಿ ಅನೇಕವನ್ನು ಮುನ್ನಡೆಸಿ ಜಾರಿಗೆ ತರುತ್ತಿದ್ದಾರೆ ಎಂದು ಅವರು ಹೇಳಿದರು. “ಆದರೆ ಯೋಚಿಸಿ, ನಾವು ಅಲ್ಲಿ ಕೆಲಸ ಮಾಡಲಾಗಿದೆ ಮತ್ತು ಈಗ ಏಕೆ ಸೆಮಿಕಂಡಕ್ಟರ್ ಗಳನ್ನು ತಯಾರಿಸಬೇಕು ಎಂಬುದನ್ನು ಒಪ್ಪಿಕೊಂಡಿದ್ದರೆ, ಏನೂ ಆಗುತ್ತಿರಲಿಲ್ಲ,” ಎಂದು ಪ್ರಧಾನಿ ಮೋದಿ ಹೇಳಿದರು.

ಬಾಹ್ಯಾಕಾಶ ಕ್ಷೇತ್ರವನ್ನು ಮತ್ತೊಂದು ಬಲವಾದ ಉದಾಹರಣೆಯಾಗಿ ಉಲ್ಲೇಖಿಸಿದ ಪ್ರಧಾನಿ, ಭಾರತದ ಬಾಹ್ಯಾಕಾಶ ಪರಿಸರ ವ್ಯವಸ್ಥೆ ಹಿಂದೆ ಇಸ್ರೋ ಗೆ ಮಾತ್ರ ಸೀಮಿತವಾಗಿತ್ತು, ಅಲ್ಲಿ ಪ್ರವೇಶ ಬಹುಮಟ್ಟಿಗೆ ನಿರ್ಬಂಧಿತವಾಗಿತ್ತು ಮತ್ತು ಪ್ರತಿಯೊಂದು ಪ್ರಾರಂಭ ಅಥವಾ ಮಿಷನ್ ತನ್ನದೇ ಆದ ವಿಶಿಷ್ಟ ವ್ಯವಸ್ಥೆಯನ್ನು ಅನುಸರಿಸುತ್ತಿತ್ತು, ಇದರಿಂದ ಸಂಸ್ಥೆಯ ಹೊರಗಿನ ಯುವ ಪ್ರತಿಭೆಗಳಿಗೆ  ಅವಕಾಶಗಳು ಕಡಿಮೆ ಇದ್ದವು ಎಂದು ಹೇಳಿದರು. ಯುವ ನಾವಿನ್ಯಕಾರರು ಅವಕಾಶ ಪಡೆಯಬೇಕು ಎಂದು ಸಚಿವಾಲಯಕ್ಕೆ ತಾವು ಹೇಳಿದ್ದನ್ನು  ಮತ್ತು ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ಯುವಜನರಿಗೆ ತೆರೆದುದನ್ನು ನೆನಪಿಸಿಕೊಂಡ ಅವರು , ಐಐಟಿ ಖರಗ್ಪುರದ ಮಾಜಿ ವಿದ್ಯಾರ್ಥಿ ಪವನ್ ಸ್ಕೈರೂಟ್ ಏರೋಸ್ಪೇಸ್ ನಿರ್ಮಿಸಿ ಭಾರತಕ್ಕೆ ಮೊದಲ ಖಾಸಗಿ ರಾಕೆಟ್ ಉಡಾವಣೆಯ ಹೆಮ್ಮೆ ನೀಡಿದ್ದಾರೆ ಎಂಬುದನ್ನು  ಪ್ರಮುಖವಾಗಿ ಉಲ್ಲೇಖಿಸಿದರು. ಅನೇಕ ಬಾಹ್ಯಾಕಾಶ ಸ್ಟಾರ್ಟಪ್ಗಳು ಇಂದು ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ವೇಗಗೊಳಿಸುತ್ತಿವೆ ಮತ್ತು ಅಸಾಧ್ಯವೆಂದು ತೋರುವುದನ್ನು ವಾಸ್ತವವಾಗಿ ಪರಿವರ್ತಿಸುತ್ತಿವೆ. “ನಿಮ್ಮ ಹಳೆಯ ವಿದ್ಯಾರ್ಥಿಗಳು ಇದನ್ನು ಸಾಧ್ಯವಾಗಿಸಲು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ,” ಎಂದು ಶ್ರೀ ಮೋದಿ ದೃಢಪಡಿಸಿದರು.

ಮುಂದಿನ ಎರಡು ದಶಕಗಳು ವಿದ್ಯಾರ್ಥಿಗಳ ಜೀವನದ ಅತ್ಯಂತ ಉತ್ಪಾದಕ ವರ್ಷಗಳಾಗಿದ್ದು,ಮತ್ತು ಅವು ಭಾರತದ ಅಭಿವೃದ್ಧಿಯ ಅತ್ಯಂತ ನಿರ್ಣಾಯಕ ವರ್ಷಗಳಾಗಿರುವುದರಿಂದ ದೇಶವು ವಿದ್ಯಾರ್ಥಿಗಳಿಂದ ಮಹತ್ವದ ನಿರೀಕ್ಷೆಗಳನ್ನು ಹೊಂದಿದೆ ಎಂದು ಪ್ರಧಾನಿ ಒತ್ತಿಹೇಳಿದರಲ್ಲದೆ, 2047 ರೊಳಗೆ ಅವರಲ್ಲಿ ಹಲವರು ನಾಯಕತ್ವ ಸ್ಥಾನಗಳಲ್ಲಿ ಇರಲಿದ್ದಾರೆ, ಅವರ ಪ್ರತಿಯೊಂದು ಯಶಸ್ಸು ರಾಷ್ಟ್ರಕ್ಕೆ ಅತ್ಯಂತ ಮುಖ್ಯವಾಗಿದೆ ಎಂದೂ  ಹೇಳಿದರು. ಅವರು ಸದಾ ತಾವು ಯಾವ ರಾಷ್ಟ್ರೀಯ ಸವಾಲನ್ನು ಪರಿಹರಿಸಲು ಕೊಡುಗೆ ನೀಡಲು ಇಚ್ಛಿಸುತ್ತಿದ್ದೇವೆ ಎಂಬುದನ್ನು ತಮಗೆ ತಾವೇ   ಪ್ರಶ್ನಿಸಿಕೊಳ್ಳುತ್ತಿರಬೇಕು ಎಂದು ಮನವಿ ಮಾಡಿದ   ಪ್ರಧಾನ ಮಂತ್ರಿ  ರಾಷ್ಟ್ರ ಮೊದಲು ಎಂಬ ತಮ್ಮ ಮಂತ್ರವನ್ನು ನೆನಪಿಸಿಕೊಳ್ಳುವಂತೆಯೂ ಹೇಳಿದರು. “ನೀವು ಈ ಮನೋಭಾವದೊಂದಿಗೆ ಮುಂದುವರಿದರೆ, ಖಂಡಿತವಾಗಿಯೂ ಇದು ನಿಮಗೂ ಹೊಸ ಅವಕಾಶಗಳನ್ನು ತರಲಿದೆ ಮತ್ತು ದೇಶಕ್ಕೂ ಬಹಳ ಲಾಭವಾಗುತ್ತದೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಕಳೆದ 75 ವರ್ಷಗಳಲ್ಲಿ ಅವರ ಅದ್ಭುತ ಕಾರ್ಯವನ್ನು ಪ್ರಶಂಸಿಸಿ, ಸಂಸ್ಥೆಯ 100ನೇ  ವರ್ಷದ ಕಾರ್ಯಕ್ರಮಗಳನ್ನು ವಿಕಸಿತ ಭಾರತದಲ್ಲಿ ಆಚರಿಸುವ ದೃಢ ನಿರ್ಧಾರದಿಂದ ಮುಂದುವರಿಯಲು ಪ್ರೇರೇಪಿಸಿದ, ಪ್ರಧಾನಮಂತ್ರಿ ಸ್ವಾಮಿ ವಿವೇಕಾನಂದರ ಏಳಿ, ಜಾಗೃತವಾಗಿರಿ, ಗುರಿ ತಲುಪುವವರೆಗೆ ನಿಲ್ಲ ಬೇಡಿ’. ಎಂಬ ಮಾತುಗಳನ್ನು ಉಲ್ಲೇಖಿಸಿ ತಮ್ಮ ಭಾಷಣವನ್ನು  ಮುಕ್ತಾಯಗೊಳಿಸಿದರು.

 

*****