ಶಾಂಘೈ ಸಹಕಾರ ಸಂಘಟನೆ(ಎಸ್ಸಿಒ)ಯ ಮಹಾ ಕಾರ್ಯದರ್ಶಿಗಳೆ, ಭಾರತದ ಸಂಸ್ಕೃತಿ ಸಚಿವರೆ, ಭಾರತ ಸರ್ಕಾರದ ಇತರೆ ಸಚಿವರೆ, ಎಲ್ಲಾ ಸಚಿವರೆ, ರಾಯಭಾರಿಗಳೆ, ದೂತವಾಸ ಅಧಿಕಾರಿಗಳೆ, ಗಣ್ಯರೆ, ವಿದ್ವಾಂಸರೆ, ಕಲಾವಿದರೆ, ಎಸ್ಸಿಒ ರಾಷ್ಟ್ರಗಳಿಂದ ಆಗಮಿಸಿರುವ ಗೌರವಾನ್ವಿತ ಅತಿಥಿಗಳೆ ಹಾಗೂ ಇಲ್ಲಿ ಉಪಸ್ಥಿತರಿರುವ ಎಲ್ಲ ಮಹನೀಯರೆ ಮತ್ತು ಮಹಿಳೆಯರೆ.
ಇದು ಚೊಚ್ಚಲ ‘ಎಸ್ಸಿಒ ನಾಗರಿಕ ಸಂವಾದ ವೇದಿಕೆ’ ಆಗಿದೆ. ಭಾರತಕ್ಕೆ ಆಗಮಿಸಿರುವ ಎಲ್ಲಾ ಅತಿಥಿಗಳನ್ನು ನಾನು ಸ್ವಾಗತಿಸುತ್ತೇನೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ವಿಶ್ವಾದ್ಯಂತ ಯುದ್ಧ ಮತ್ತು ಅಶಾಂತಿ ಕುರಿತಾದ ಚರ್ಚೆಗಳು ಪ್ರಬಲವಾಗಿರುವ ಇಂದಿನ ಸಂದರ್ಭದಲ್ಲಿ, ನಾವು ಭಾರತದಲ್ಲಿ ನಾಗರಿಕ ಸಂಬಂಧಗಳ ಕುರಿತು ಸಂವಾದ ನಡೆಸುತ್ತಿದ್ದೇವೆ. ಇದು ವಿಶೇಷವಾಗಿ ಮಹತ್ವದ್ದಾಗಿದೆ, ಏಕೆಂದರೆ ಸಾಂಸ್ಕೃತಿಕ ಸಂಪರ್ಕವು ಜಾಗತಿಕ ಶಾಂತಿಗೆ ಅತ್ಯಂತ ಬಲವಾದ ಭರವಸೆಯಾಗಿದೆ. ಆದ್ದರಿಂದ, ಇಂದಿನ ಈ ಕಾರ್ಯಕ್ರಮದ ಮಹತ್ವ ಇನ್ನಷ್ಟು ಹೆಚ್ಚಾಗಿದೆ.
ಸ್ನೇಹಿತರೆ,
ಕೆಲವೇ ತಿಂಗಳ ಹಿಂದೆ, ಶಾಂಘೈ ಸಹಕಾರ ಸಂಘಟನೆಯು ತನ್ನ ಸ್ಥಾಪನೆಯ 25 ವರ್ಷಗಳನ್ನು ಪೂರೈಸಿದೆ. ಕಳೆದ ವರ್ಷಗಳಲ್ಲಿ ಈ ಸಂಘಟನೆಯು ಭದ್ರತೆ, ಆರ್ಥಿಕತೆ ಮತ್ತು ಸಂಪರ್ಕ ವ್ಯವಸ್ಥೆಗಳ ಕ್ಷೇತ್ರಗಳಲ್ಲಿ ಸಹಕಾರವನ್ನು ಗಣನೀಯವಾಗಿ ವಿಸ್ತರಿಸಿದೆ. ಇಂತಹ ಸಂದರ್ಭದಲ್ಲಿ, ಸಾಂಸ್ಕೃತಿಕ ಮತ್ತು ನಾಗರಿಕತೆ ಆಧಾರಿತ ಸಹಕಾರವು ವಿವಿಧ ದೇಶಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುತ್ತದೆ. ಈ ವೇದಿಕೆಯು ಹೊಸ ಆಲೋಚನೆಗಳನ್ನು ಹುಟ್ಟು ಹಾಕುತ್ತದೆ, ಸಾಂಸ್ಕೃತಿಕ ಸಹಕಾರಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ, ನಮ್ಮ ಹಂಚಿಕೆಯ ನಾಗರಿಕತೆಯ ಅನುಭವಗಳು ಜಗತ್ತನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬ ದೃಢ ನಂಬಿಕೆ ನನಗಿದೆ.
ಸ್ನೇಹಿತರೆ,
ಈ ಕ್ಷಣದಲ್ಲಿ ನಾವೆಲ್ಲರೂ ದೆಹಲಿಯ ‘ಪುರಾಣ ಕಿಲ್ಲಾ'(ಹಳೆಯ ಕೋಟೆ)ದಲ್ಲಿ ಇದ್ದೇವೆ. ಈ ಪುರಾಣ ಕಿಲ್ಲಾ ಭಾರತದ ಒಂದು ಅಸಾಧಾರಣ ಸಾಂಸ್ಕೃತಿಕ ಪರಂಪರೆಯಾಗಿದೆ. ಇದರ ಇತಿಹಾಸವು, ಅದರೊಂದಿಗೆ ತಳುಕು ಹಾಕಿಕೊಂಡಿರುವ ಕಥೆಗಳಷ್ಟೇ ಆಕರ್ಷಕವಾಗಿದೆ. ಬಹುಶಃ ನೀವು ಈಗಾಗಲೇ ಇದರ ಬಗ್ಗೆ ಓದಿರಬಹುದು ಅಥವಾ ಕೇಳಿರಬಹುದು. ವಿದ್ವಾಂಸರ ಪ್ರಕಾರ, ಈ ಕೋಟೆಯ ಇತಿಹಾಸವು ಸಾವಿರಾರು ವರ್ಷಗಳ ಹಿಂದೆ, ಮಹಾಭಾರತದ ಕಾಲದಷ್ಟು ಹಿಂದಿನದ್ದಾಗಿದೆ. ಇಂತಹ ಪ್ರಾಚೀನ ತಾಣದಲ್ಲಿ ನಡೆದ ಭವ್ಯ ಸಾಂಸ್ಕೃತಿಕ ಪ್ರದರ್ಶನಗಳು, ವೈದಿಕ ಮಂತ್ರಗಳ ಉತ್ಸಾಹಭರಿತ ಪಠಣ, ಬೌದ್ಧ ದರ್ಶನದ ಪ್ರಸ್ತುತಿಗಳು ಮತ್ತು ಹನುಮಂತನ ಪಯಣದ ನಿರೂಪಣೆಗಳು – ಇವೆಲ್ಲವೂ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಲ್ಲದೆ, ಮನುಕುಲಕ್ಕೆ ಪ್ರೀತಿ ಮತ್ತು ಏಕತೆಯ ಸಂದೇಶವನ್ನೂ ಸಾರಿದವು.
ಈ ಭಾವನೆಗಳು, ಈ ಆಲೋಚನೆಗಳು ಮತ್ತು ಈ ಬೋಧನೆಗಳು ಅತ್ಯಂತ ಪ್ರಾಚೀನವಾದವು ಮತ್ತು ಸಾರ್ವತ್ರಿಕವಾದವು. ಭೌಗೋಳಿಕ ಹಾಗೂ ರಾಜಕೀಯ ಗಡಿಗಳನ್ನು ಮೀರಿ ಇವು ನಮ್ಮನ್ನು ಸಹಜವಾಗಿಯೇ ಪರಸ್ಪರ ಬೆಸೆಯುತ್ತಿವೆ. ಈ ಶೃಂಗಸಭೆಯ ಉದ್ದೇಶವೂ ಇದೇ ಆಗಿದೆ, ಇದು ಇಂದಿನ ಕಾಲದ ಅಗತ್ಯವೂ ಹೌದು. ನೀವೆಲ್ಲರೂ ಈ ಕಾರ್ಯಕ್ರಮವನ್ನು ಆನಂದಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ಇದನ್ನು ಐತಿಹಾಸಿಕವಾಗಿಸುವ ಮೂಲಕ, ನೀವು ಒಂದು ಹೊಸ ಸಂಪ್ರದಾಯಕ್ಕೆ ಅಡಿಪಾಯ ಹಾಕಲಿದ್ದೀರಿ. ಭವಿಷ್ಯದ ಪೀಳಿಗೆಯು ನಿಮ್ಮೆಲ್ಲರನ್ನೂ ನೆನಪಿಸಿಕೊಳ್ಳುವಂತಹ ಸಂಪ್ರದಾಯವಿದು.
ಇಂದು ಅಂತಾರಾಷ್ಟ್ರೀಯ ಸಹಕಾರ ಮತ್ತು ಜನರ ನಡುವಿನ ಸಂಪರ್ಕದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಮ್ಮ ಪೂರ್ವಜರು ಶತಮಾನಗಳ ಕಾಲ ಪೋಷಿಸಿ, ಶ್ರೀಮಂತಗೊಳಿಸಿದ ದೃಷ್ಟಿಕೋನವಿದು. ಸುಮಾರು 5 ಸಾವಿರ ವರ್ಷಗಳ ಹಿಂದೆಯೇ, ಸಿಂಧೂ ಕಣಿವೆ ನಾಗರಿಕತೆ ಮತ್ತು ಮೆಸೊಪೊಟೊಮಿಯಾದ ನಡುವೆ ವ್ಯಾಪಾರ ಸಂಬಂಧಗಳಿದ್ದವು. ನಂತರ, ಇತರೆ ವ್ಯಾಪಾರ ಮಾರ್ಗಗಳು ಈ ಸಂಪರ್ಕವನ್ನು ಇನ್ನಷ್ಟು ವಿಸ್ತರಿಸಿದವು. ಭಾರತ, ಚೀನಾ, ಮಧ್ಯ ಏಷ್ಯಾ ಮತ್ತು ಯುರೇಷಿಯಾದ ಅನೇಕ ಪ್ರದೇಶಗಳು ಈ ಪ್ರಾಚೀನ ವ್ಯಾಪಾರ ಜಾಲಗಳ ಮೂಲಕ ಪರಸ್ಪರ ಸಂಪರ್ಕಗೊಂಡಿದ್ದವು. ಈ ಮಾರ್ಗಗಳಲ್ಲಿ ಕೇವಲ ವ್ಯಾಪಾರಿಗಳು ಮಾತ್ರವಲ್ಲದೆ, ವಿದ್ವಾಂಸರು, ಪ್ರವಾಸಿಗರು ಮತ್ತು ಬೌದ್ಧ ಸನ್ಯಾಸಿಗಳು ಸಹ ಸಂಚರಿಸುತ್ತಿದ್ದರು. ಇಂತಹ ಪ್ರಯಾಣಗಳು ಆಲೋಚನೆಗಳು, ಭಾಷೆಗಳು ಮತ್ತು ಸಂಪ್ರದಾಯಗಳ ವಿನಿಮಯಕ್ಕೆ ದಾರಿ ಮಾಡಿಕೊಟ್ಟವು. ಗಾಂಧಾರ ಮತ್ತು ಮಧ್ಯ ಏಷ್ಯಾದ ಮೂಲಕ, ಬೌದ್ಧ ಗ್ರಂಥಗಳಲ್ಲಿನ ಆಲೋಚನೆಗಳು ಚೀನಾವನ್ನು ತಲುಪಿದವು. ಕುಚಾ ಮತ್ತು ದುನ್ಹುವಾಂಗ್ನಂತಹ ಸ್ಥಳಗಳು ಈ ಸಾಂಸ್ಕೃತಿಕ ವಿನಿಮಯದ ಪ್ರಮುಖ ಕೇಂದ್ರಗಳಾದವು. ಫಾಕ್ಸಿಯನ್, ಕ್ಸುವಾನ್ಜಾಂಗ್ ಮತ್ತು ಯಿಜಿಂಗ್ ರಂತಹ ವಿದ್ವಾಂಸರು ಚೀನಾದಿಂದ ಭಾರತಕ್ಕೆ ಬಂದರು. ಅವರು ಭಾರತದ ಜ್ಞಾನ ಪರಂಪರೆಗಳನ್ನು ಅಧ್ಯಯನ ಮಾಡಿ, ಅವುಗಳನ್ನು ತಮ್ಮ ತಾಯ್ನಾಡಿಗೆ ಕೊಂಡೊಯ್ದರು. ನಳಂದಾದಂತಹ ವಿಶ್ವವಿದ್ಯಾಲಯಗಳು ಈ ಜ್ಞಾನ ವಿನಿಮಯದ ಕೇಂದ್ರಗಳಾದವು. ಮಧ್ಯ ಏಷ್ಯಾದ ಕುಚಾದಲ್ಲಿ ಜನಿಸಿದ ಕುಮಾರಜೀವನಂತಹ ವಿದ್ವಾಂಸರು ಬೌದ್ಧ ಗ್ರಂಥಗಳನ್ನು ಚೈನೀಸ್ ಭಾಷೆಗೆ ಅನುವಾದಿಸಿದರು. ಹೀಗೆ, ಮನುಕುಲ ಮತ್ತು ನಾಗರಿಕತೆಯು ನಿರಂತರವಾಗಿ ವಿಕಸನಗೊಂಡವು ಮತ್ತು ಶ್ರೀಮಂತಗೊಂಡವು. ಸಾಮ್ರಾಜ್ಯಗಳು ಬಹುಶಃ ಪ್ರಪಂಚದ ನಕ್ಷೆಯನ್ನು ಬದಲಿಸಿರಬಹುದು, ಆದರೆ ನಾಗರಿಕತೆಗಳ ನಡುವಿನ ಸಂವಾದಗಳು ಜಗತ್ತಿನ ಆಲೋಚನಾ ಕ್ರಮವನ್ನೇ ಬದಲಿಸಿದವು, ಬೌದ್ಧಿಕ ಸಮೃದ್ಧಿಯನ್ನು ಬಲಪಡಿಸಿದವು ಎಂದು ನಾನು ನಂಬುತ್ತೇನೆ. ಆದ್ದರಿಂದ, ‘ಎಸ್ಸಿಒ ನಾಗರಿಕ ಶೃಂಗಸಭೆ’ಯು ಕೇವಲ ಒಂದು ಸಾಂಪ್ರದಾಯಿಕ ವೇದಿಕೆಯಲ್ಲ, ಇದು ಜಗತ್ತಿಗೆ ಹೊಸ ದಿಕ್ಕು ತೋರಿಸುವ ವೇದಿಕೆಯಾಗಬಲ್ಲದು.
ಸ್ನೇಹಿತರೆ,
ಜ್ಞಾನವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿದಾಗ, ಅದನ್ನು ವ್ಯಕ್ತಪಡಿಸುವ ವಿಧಾನ ಬದಲಾಗಬಹುದು, ಆದರೆ ಅದರ ಪ್ರಭಾವ ಮತ್ತು ಪಾತ್ರ ಬದಲಾಗುವುದಿಲ್ಲ. ಜ್ಞಾನವು ಯಾವುದೇ ರೂಪ ಪಡೆದರೂ, ಅದು ಬೆಳಕು ಚೆಲ್ಲುತ್ತದೆ. ಇದಕ್ಕೆ ಭಾರತದ ‘ಪಂಚತಂತ್ರ’ ಒಂದು ಪ್ರಮುಖ ಉದಾಹರಣೆ. ಇದರ ಕಥೆಗಳು ಪರ್ಷಿಯನ್ ಭಾಷೆಗೆ ಮತ್ತು ನಂತರ ಅರೇಬಿಕ್ ಭಾಷೆಗೆ ತಲುಪಿದವು. ‘ಕಲೀಲಾ ವಾ ದಿಮ್ನಾ’ ರೂಪದಲ್ಲಿ ಈ ಕಥೆಗಳು ಹೊಸ ಸ್ವರೂಪ ಪಡೆದುಕೊಂಡು, ತಲೆಮಾರುಗಳ ಉದ್ದಕ್ಕೂ ಅಮರವಾದವು. ಅದೇ ರೀತಿ, ರಾಮಾಯಣವು ಭಾರತದಿಂದ ಆಗ್ನೇಯ ಏಷ್ಯಾಕ್ಕೆ ಪ್ರಯಾಣಿಸಿದಾಗ, ಅದು ಅಲ್ಲಿಯೂ ಇದೇ ಆದರ್ಶಗಳನ್ನು ಬಲಪಡಿಸಿತು. ಕಾಂಬೋಡಿಯಾದಲ್ಲಿ ರಾಮಾಯಣವು ‘ರೀಮ್ಕರ್’ ಎಂಬ ರೂಪ ಪಡೆದುಕೊಂಡು, ಅಲ್ಲಿನ ಸ್ಥಳೀಯ ಸಂಸ್ಕೃತಿ, ಪ್ರದರ್ಶನ ಕಲೆಗಳು ಮತ್ತು ಸಾಹಿತ್ಯದಲ್ಲಿ ತನ್ನದೇ ಆದ ಸ್ಥಾನ ಕಂಡುಕೊಂಡಿತು.
ಸ್ನೇಹಿತರೆ,
ಈ ಸಾಂಸ್ಕೃತಿಕ ವಿನಿಮಯವು ವಿಜ್ಞಾನ ಮತ್ತು ಗಣಿತ ಕ್ಷೇತ್ರಗಳಲ್ಲೂ ಅಷ್ಟೇ ಮಹತ್ವದ್ದಾಗಿದೆ. ಭಾರತದ ಶ್ರೇಷ್ಠ ಗಣಿತಜ್ಞ ಬ್ರಹ್ಮಗುಪ್ತನ ಆಲೋಚನೆಗಳು ಬಾಗ್ದಾದ್ ತಲುಪಿದವು. ಅಲ್ಲಿ, ಅಲ್-ಖ್ವಾರಿಜ್ಮಿ ಅವರಂತಹ ವಿದ್ವಾಂಸರು ಗಣಿತ ಜ್ಞಾನವನ್ನು ಮುನ್ನಡೆಸುವಲ್ಲಿ ಮಹತ್ತರವಾದ ಕೊಡುಗೆ ನೀಡಿದರು.
ಸ್ನೇಹಿತರೆ,
ವಾಸ್ತುಶಿಲ್ಪ ಮತ್ತು ಸಂಗೀತ ಕ್ಷೇತ್ರಗಳಲ್ಲೂ ಇಂತಹ ಹಂಚಿಕೆಯ ಪ್ರಯಾಣದ ಅನೇಕ ಉದಾಹರಣೆಗಳನ್ನು ನಾವು ಕಾಣಬಹುದು. ಮಧ್ಯ ಏಷ್ಯಾದ ‘ಮಕಾಮ್’ ಸಂಪ್ರದಾಯಗಳು ಮತ್ತು ಭಾರತದ ‘ರಾಗ’ ಸಂಪ್ರದಾಯಗಳ ನಡುವೆ ಆಳವಾದ ಸಾಂಸ್ಕೃತಿಕ ನಂಟಿದೆ. ಸೂಫಿ ವಿಚಾರಗಳು ಮತ್ತು ಸಂಗೀತ ಪರಂಪರೆಗಳು ಭಾರತದಲ್ಲಿ ‘ಕವ್ವಾಲಿ’ಯ ಬೆಳವಣಿಗೆಯನ್ನು ಶ್ರೀಮಂತಗೊಳಿಸಿದವು. ಮಧ್ಯ ಏಷ್ಯಾದ ಸಮರ್ಕಂಡ್ ಮತ್ತು ಹೆರಾತ್ಗಳಲ್ಲಿನ ಉದ್ಯಾನ ಸಂಪ್ರದಾಯಗಳು, ಭಾರತದ ‘ಚಾರ್ಬಾಗ್’ ಶೈಲಿಯ ಮೇಲೆ ಪ್ರಭಾವ ಬೀರಿದವು. ಇಂದಿಗೂ ಇಂತಹ ವಿನಿಮಯಗಳು ಮುಕ್ತವಾಗಿ ಮುಂದುವರಿಯಲು, ಈ ಶೃಂಗಸಭೆ ಮತ್ತು ಇಂತಹ ಉಪಕ್ರಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಸ್ನೇಹಿತರೆ,
ಇಂದು, ನಮಗೆ ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳಿವೆ. 21ನೇ ಶತಮಾನದ ತಂತ್ರಜ್ಞಾನವು ವಿಶ್ವಾದ್ಯಂತ ಸಾಂಸ್ಕೃತಿಕ ಸಂಪರ್ಕಕ್ಕಾಗಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದೆ. ನಮ್ಮ ಪೂರ್ವಜರು ಒಂದು ಕಾಲದಲ್ಲಿ ತಿಂಗಳುಗಟ್ಟಲೆ ಪ್ರಯಾಣಿಸಬೇಕಾಗಿದ್ದ ಮಾರ್ಗಗಳು, ಇಂದು ಅದೇ ದೇಶಗಳ ಜನರನ್ನು ಕೇವಲ ಕೆಲವೇ ಸೆಕೆಂಡುಗಳಲ್ಲಿ ಪರಸ್ಪರ ಸಂಪರ್ಕಿಸುತ್ತಿವೆ. ಡಿಜಿಟಲ್ ವೇದಿಕೆಗಳು ಜ್ಞಾನ ಹಂಚಿಕೆ, ಸಾಂಸ್ಕೃತಿಕ ವಿನಿಮಯ ಮತ್ತು ಅಂತಾರಾಷ್ಟ್ರೀಯ ಸಹಯೋಗವನ್ನು ಹಿಂದೆಂದಿಗಿಂತಲೂ ಸುಲಭಗೊಳಿಸಿವೆ. ಎಸ್ಸಿಒ (ಸದಸ್ಯ ರಾಷ್ಟ್ರಗಳು ಈ ಹೊಸ ಅವಕಾಶಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು.
ಸ್ನೇಹಿತರೆ,
ಇಂದು ನಿಮ್ಮೆಲ್ಲಾ ಗಣ್ಯ ಅತಿಥಿಗಳ ಮುಂದೆ ಈ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ನೀಡಲು ನಾನು ಬಯಸುತ್ತೇನೆ. ನಮ್ಮ ದೇಶಗಳ ವಸ್ತುಸಂಗ್ರಹಾಲಯಗಳು, ಗ್ರಂಥಾಲಯಗಳು ಮತ್ತು ದಾಖಲೆ ಭಂಡಾರಗಳಲ್ಲಿ ಸಾವಿರಾರು ವರ್ಷಗಳಿಂದ ಸಂಗ್ರಹವಾದ ಅಮೂಲ್ಯವಾದ ಪರಂಪರೆಯನ್ನು ಸಂರಕ್ಷಿಸಿ ಇಡಲಾಗಿದೆ. ಪ್ರಾಚೀನ ಹಸ್ತಪ್ರತಿಗಳು, ಅಪರೂಪದ ಗ್ರಂಥಗಳು, ಐತಿಹಾಸಿಕ ದಾಖಲೆಗಳು ಮತ್ತು ಕಲಾಕೃತಿಗಳು ನಮ್ಮ ನಡುವಿನ ಸಾಮಾನ್ಯ ಸಂಪರ್ಕಗಳ ಅನೇಕ ಆಯಾಮಗಳನ್ನು ಅನಾವರಣಗೊಳಿಸುತ್ತವೆ. ಈ ಪರಂಪರೆಯನ್ನು ಯುವ ಪೀಳಿಗೆಗೆ ತಲುಪಿಸಲು ತಂತ್ರಜ್ಞಾನವು ಇಂದು ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತಿದೆ. ಪ್ರಾಚೀನ ಗ್ರಂಥಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಅನುವಾದಿಸುವ ಕಾರ್ಯದಲ್ಲಿ ನಾವು ಸಹಕರಿಸಬಹುದು. ಜಂಟಿ ಸಂಶೋಧನಾ ಯೋಜನೆಗಳ ಮೂಲಕ, ನಮ್ಮ ಹಂಚಿಕೆಯ ಇತಿಹಾಸದ ಹೊಸ ಆಯಾಮಗಳನ್ನು ನಾವು ಜಗತ್ತಿನ ಮುಂದೆ ತರಬಹುದು. ಇದು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಯುವಕರಿಗೂ ಮತ್ತೊಂದು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಸ್ನೇಹಿತರೆ,
ನಮ್ಮ ಅನೇಕ ಶ್ರೇಷ್ಠ ಸಾಹಿತ್ಯ ಕೃತಿಗಳು ಇನ್ನೂ ಕೆಲವೇ ಕೆಲವು ಭಾಷೆಗಳಲ್ಲಿ ಮಾತ್ರ ಲಭ್ಯವಿವೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ಇಂತಹ ಕೃತಿಗಳ ಅನುವಾದ ಪ್ರಕ್ರಿಯೆಯನ್ನು ಗಣನೀಯವಾಗಿ ವೇಗಗೊಳಿಸಬಹುದು. ಇಂದು ನಮ್ಮ ಬಳಿ ಹಿಂದೆಂದಿಗಿಂತಲೂ ಹೆಚ್ಚು ಸಾಧನಗಳು ಲಭ್ಯವಿವೆ, ನಾವು ಅವುಗಳ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು.
ಸ್ನೇಹಿತರೆ,
ಸಾಂಸ್ಕೃತಿಕ ವಿನಿಮಯಕ್ಕಾಗಿ ಇನ್ನೂ ಅನೇಕ ಅವಕಾಶಗಳಿವೆ, ಅವುಗಳತ್ತ ನಾವು ಗಮನ ಹರಿಸಬೇಕಿದೆ. ಉದಾಹರಣೆಗೆ, ನಮ್ಮ ದೇಶಗಳಲ್ಲಿರುವ ವಸ್ತುಸಂಗ್ರಹಾಲಯಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಜಂಟಿ ಪ್ರದರ್ಶನಗಳನ್ನು ಆಯೋಜಿಸಬಹುದು. ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ವಿದ್ವಾಂಸರು ಹಾಗೂ ಸಂಶೋಧಕರಿಗಾಗಿ ವಿನಿಮಯ ಕಾರ್ಯಕ್ರಮಗಳನ್ನು ಉತ್ತೇಜಿಸಬಹುದು. ಸಾಂಸ್ಕೃತಿಕ ಪ್ರವಾಸೋದ್ಯಮವೂ ಸಹ ನಮ್ಮ ನಡುವಿನ ಸಹಕಾರದ ಒಂದು ಪ್ರಮುಖ ಕ್ಷೇತ್ರವಾಗಬಲ್ಲದು. ‘ಸಿಲ್ಕ್ ರೂಟ್’ ಮತ್ತು ಬೌದ್ಧ ಪರಂಪರೆಗೆ ಸಂಬಂಧಿಸಿದ ಅನೇಕ ಐತಿಹಾಸಿಕ ತಾಣಗಳು ನಮ್ಮ ದೇಶಗಳಲ್ಲಿವೆ. ಇವುಗಳನ್ನು ‘ಪಾರಂಪರಿಕ ಜಾಲಗಳು’ ಮತ್ತು ಸಾಂಸ್ಕೃತಿಕ ಮಾರ್ಗಗಳ ಮೂಲಕ ಸಂಪರ್ಕಿಸುವ ಸಾಧ್ಯತೆಗಳನ್ನು ನಾವು ಪರಿಶೀಲಿಸಬಹುದು. ಅದೇ ರೀತಿ, ಜಂಟಿ ಸಾಂಸ್ಕೃತಿಕ ಉತ್ಸವಗಳು ಮತ್ತು ಕಲಾವಿದರ ವಿನಿಮಯ ಕಾರ್ಯಕ್ರಮಗಳು ನಮ್ಮ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಸ ಪ್ರೇಕ್ಷಕರಿಗೆ ಪರಿಚಯಿಸಬಲ್ಲವು. ಇಂತಹ ಪ್ರಯತ್ನಗಳು ನಮ್ಮ ನಾಗರಿಕರಿಗೆ ಪರಸ್ಪರರ ಸಂಸ್ಕೃತಿಗಳನ್ನು ಇನ್ನಷ್ಟು ಹತ್ತಿರದಿಂದ ಅರ್ಥ ಮಾಡಿಕೊಳ್ಳಲು ಉತ್ತಮ ಅವಕಾಶಗಳನ್ನು ಒದಗಿಸುತ್ತವೆ ಎಂದು ನಾನು ನಂಬುತ್ತೇನೆ.
ಸ್ನೇಹಿತರೆ,
ಇಂದು ನಾವು ಮುನ್ನಡೆಸುತ್ತಿರುವ ಈ ನಾಗರಿಕ ಸಂವಾದವನ್ನು ಮುಂದಿನ ದಶಕಗಳಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಯುವ ಜನರ ಮೇಲಿದೆ. ಇಂದಿನ ಯುವ ಪೀಳಿಗೆಯು ತಂತ್ರಜ್ಞಾನದ ಮೂಲಕ ಪರಸ್ಪರ ಸಂಪರ್ಕ ಹೊಂದಿದೆ, ಜಗತ್ತನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಬಯಸುತ್ತದೆ. ನಮ್ಮ ಯುವ ಜನರು ಪರಸ್ಪರರ ಭಾಷೆಗಳು, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗಳೊಂದಿಗೆ ಬೆರೆಯಲು ನಾವು ಹೆಚ್ಚಿನ ಅವಕಾಶಗಳನ್ನು ಒದಗಿಸಿಕೊಡಬೇಕು. ನಮ್ಮ ಯುವ ಕಲಾವಿದರು, ಬರಹಗಾರರು ಮತ್ತು ಚಲನಚಿತ್ರ ನಿರ್ಮಾಪಕರು ಡಿಜಿಟಲ್ ಮಾಧ್ಯಮ ಹಾಗೂ ಇತರ ಸೃಜನಶೀಲ ವೇದಿಕೆಗಳ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬಲ್ಲರು. ಈ ಪ್ರಯತ್ನಗಳಲ್ಲಿ ಸ್ಥಳೀಯ ಕಲಾವಿದರು ಮತ್ತು ಕುಶಲಕರ್ಮಿಗಳನ್ನು ಕೂಡ ನಾವು ಸೇರಿಸಿಕೊಳ್ಳಬೇಕು.
ಸ್ನೇಹಿತರೆ,
ಭಾರತದಲ್ಲಿ ನಾವು ಯಾವುದೇ ಪ್ರಾರ್ಥನೆ ಅಥವಾ ಧಾರ್ಮಿಕ ವಿಧಿ ನೆರವೇರಿಸಿದಾಗಲೂ, “ಎಲ್ಲಾ ಜೀವಿಗಳಲ್ಲೂ ಸದ್ಭಾವನೆ ಇರಲಿ, ಜಗತ್ತು ಕಲ್ಯಾಣ ಹೊಂದಲಿ” ಎಂದು ಪ್ರಾರ್ಥಿಸುವ ಮೂಲಕ ಅದನ್ನು ಮುಕ್ತಾಯಗೊಳಿಸುತ್ತೇವೆ. ಏಕೆಂದರೆ, ನಮ್ಮ ಸಂಸ್ಕೃತಿಯು ನಮಗೆ ‘ವಸುಧೈವ ಕುಟುಂಬಕಮ್’ ಎಂಬ ಆದರ್ಶ ಕಲಿಸಿದೆ. ಅಂದರೆ ಇಡೀ ಜಗತ್ತೇ ಒಂದು ಕುಟುಂಬ. ಆದ್ದರಿಂದ, ನಮ್ಮ ಸ್ವಂತ ಕಲ್ಯಾಣದ ಆಶಯವು ಜಗತ್ತಿನ ಕಲ್ಯಾಣದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಜಾಗತಿಕ ಕಲ್ಯಾಣಕ್ಕೆ ಪರಸ್ಪರ ಸಾಮರಸ್ಯವೇ ಅಡಿಪಾಯ ಎಂದು ನಾವು ಪರಿಗಣಿಸುತ್ತೇವೆ.
ಸ್ನೇಹಿತರೆ,
ಪರಸ್ಪರ ಸಾಮರಸ್ಯಕ್ಕೆ ಅತ್ಯಂತ ಅಗತ್ಯವಾದ ಅಂಶವೆಂದರೆ ಪರಸ್ಪರ ನಂಬಿಕೆ. ನಮ್ಮ ನಡುವೆ ಏನೋ ಒಂದು ಸಾಮಾನ್ಯ ಸಂಗತಿ ಇದೆ ಎಂದು ನಮಗೆ ಅನ್ನಿಸಿದಾಗ ಈ ಪರಸ್ಪರ ನಂಬಿಕೆ ಬೆಳೆಯುತ್ತದೆ. ಆದ್ದರಿಂದ, ಇಂದು ನಮ್ಮ ನಡುವೆ ಇರುವ ಆ ಸಾಮಾನ್ಯ ಅಂಶಗಳ ಮೇಲೆ ಗಮನ ಹರಿಸುವ ಅಗತ್ಯವಿದೆ. ಭಾರತದ ಅನುಭವದಿಂದ ನಾನು ಹೇಳಬಲ್ಲೆನೆಂದರೆ, ನಾವು ಇಂತಹ ವಿಶಾಲ ದೃಷ್ಟಿಕೋನ ಅಳವಡಿಸಿಕೊಂಡಾಗ, ನಮ್ಮ ವೈವಿಧ್ಯತೆಯೇ ನಮ್ಮ ಏಕತೆಗೆ ಬುನಾದಿಯಾಗುತ್ತದೆ. ಇದೇ ಕಾರಣಕ್ಕಾಗಿ, ಅನೇಕ ಭಾಷೆಗಳು, ಜೀವನಶೈಲಿಗಳು ಮತ್ತು ಸಂಪ್ರದಾಯಗಳಿದ್ದರೂ, ಭಾರತದಲ್ಲಿ ನಾವೆಲ್ಲರೂ ಆಳವಾಗಿ ಒಂದಕ್ಕೊಂದು ಬೆಸೆದುಕೊಂಡಿದ್ದೇವೆ. ಭಾರತದಲ್ಲಿ ನಾವು ವೈವಿಧ್ಯತೆಯನ್ನು ಸ್ವೀಕರಿಸುತ್ತೇವೆ, ವೈವಿಧ್ಯತೆಯನ್ನು ಸಂಭ್ರಮಿಸುತ್ತೇವೆ. ಈ ಸ್ಫೂರ್ತಿಯನ್ನು ನಾವು ನಮ್ಮ ವೇದಗಳಿಂದ ಪಡೆದಿದ್ದೇವೆ. ಈ ಕಾರ್ಯಕ್ರಮದ ಆರಂಭದಲ್ಲಿ ನಾವು ಆ ವೇದಗಳ ಪಠಣ ಕೇಳಿದೆವು.
ಸ್ನೇಹಿತರೆ,
ನಮ್ಮ ವೇದಗಳು ಹೀಗೆ ಹೇಳುತ್ತವೆ: “ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಮ್” – ಅಂದರೆ, ನಾವೆಲ್ಲರೂ ಒಟ್ಟಾಗಿ ಸಾಗೋಣ, ಪರಸ್ಪರ ಸಂವಾದ ನಡೆಸೋಣ ಮತ್ತು ನಮ್ಮ ಆಲೋಚನೆಗಳಲ್ಲಿ ಸಾಮರಸ್ಯವಿರಲಿ. ಇದೇ ಮನೋಭಾವದೊಂದಿಗೆ, ‘ಎಸ್ಸಿಒ ನಾಗರಿಕ ಸಂವಾದ ವೇದಿಕೆ’ಯ ಚೊಚ್ಚಲ ಆವೃತ್ತಿಗಾಗಿ ನಾನು ನಿಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದು ಮೊದಲನೆಯದಾಗಿರುವುದರಿಂದ, ಇದಕ್ಕೆ ವಿಶೇಷ ಮಹತ್ವವಿದೆ. ನಿಮ್ಮ ಚರ್ಚೆಗಳು ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಯಲಿ ಎಂದು ನಾನು ಶುಭ ಹಾರೈಸುತ್ತೇನೆ.
ತುಂಬು ಧನ್ಯವಾದಗಳು.
ನಮಸ್ಕಾರ.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
Speaking at the SCO Civilisational Dialogue Forum in Delhi. https://t.co/RzZCS5bjnd
— Narendra Modi (@narendramodi) November 20, 2026
साम्राज्यों ने दुनिया के नक्शे जरूर बदले हैं, लेकिन civilisational dialogues ने दुनिया के विचार बदले हैं, उन्हें समृद्ध किया है। इसीलिए, SCO civilisational summit केवल एक ceremonial platform नहीं है। ये विश्व को दिशा देने का एक मंच बन सकता है: PM @narendramodi
— PMO India (@PMOIndia) November 20, 2026
21वीं सदी की Technology ने दुनिया में Cultural Connectivity की नई संभावनाएं पैदा की हैं। जिन रास्तों पर कभी हमारे पूर्वजों को महीनों यात्रा करनी पड़ती थी, आज उन्हीं देशों के लोग कुछ ही सेकंड में एक-दूसरे से जुड़ सकते हैं। Digital Platforms ने Knowledge Sharing, Cultural Exchange और International Collaboration को पहले से आसान बना दिया है। SCO के देशों को इन नई संभावनाओं का पूरा लाभ उठाना चाहिए: PM @narendramodi
— PMO India (@PMOIndia) November 20, 2026
हमारे देशों के Museums, Libraries और Archives में हजारों वर्षों की अनमोल विरासत सुरक्षित है। प्राचीन Manuscripts, दुर्लभ ग्रंथ, ऐतिहासिक दस्तावेज और कलाकृतियां हमारे जुड़ाव के अनेक पहलुओं को सामने लाती हैं। आज Technology की मदद से इस विरासत को नई पीढ़ी तक पहुंचाने के बहुत अच्छे अवसर बने हैं। हम प्राचीन ग्रंथों के Digitisation और Translation में सहयोग कर सकते हैं। Joint Research Projects के माध्यम से हम अपने साझा इतिहास के नए पहलुओं को सामने ला सकते हैं। इससे दुनिया के किसी भी हिस्से में बैठा एक युवा, दूसरे देश की Cultural Heritage को कहीं बेहतर तरीके से समझ सकेगा: PM @narendramodi at the SCO Civilisational Dialogue Forum
— PMO India (@PMOIndia) November 20, 2026
हमारी संस्कृति ने हमें ‘वसुधैव कुटुंबकम्’ की सीख दी है। यानी, ये पूरा विश्व ही हमारा परिवार है। इसलिए, हमारे यहाँ अपने कल्याण की इच्छा विश्व कल्याण के भाव में ही रची बसी है। हम आपसी सद्भाव को ही global wellbeing का base मानते हैं: PM @narendramodi
— PMO India (@PMOIndia) November 20, 2026