Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೇಪಾಳದ ಪ್ರಧಾನಮಂತ್ರಿ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

ನೇಪಾಳದ ಪ್ರಧಾನಮಂತ್ರಿ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ


ಗೌರವಾನ್ವಿತ ಪ್ರಧಾನಮಂತ್ರಿ ಬಲೇಂದ್ರ ಶಾ ಜಿ,

ಉಭಯ ದೇಶಗಳ ಪ್ರತಿನಿಧಿಗಳೆ,

ಮಾಧ್ಯಮ ಮಿತ್ರರೆ,

ನಮಸ್ಕಾರ!

ನೇಪಾಳದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಭಾರತಕ್ಕೆ ತಮ್ಮ ಮೊದಲ ದ್ವಿಪಕ್ಷೀಯ ಭೇಟಿ ನೀಡಿರುವ ಗೌರವಾನ್ವಿತ ಶ್ರೀ ಬಲೇಂದ್ರ ಶಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಲು ನನಗೆ ಅಪಾರ ಸಂತೋಷವಾಗುತ್ತಿದೆ.

ಕೆಲವು ತಿಂಗಳ ಹಿಂದೆ, ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಮಂತ್ರಿಯಾಗಿ ಅವರು ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿದಾಗ, ಅವರ ದೂರದೃಷ್ಟಿ ಮತ್ತು ಆಲೋಚನಾ ಶಕ್ತಿಯ ಸ್ಪಷ್ಟ ಮುನ್ನೋಟ ನಮಗೆ ಸಿಕ್ಕಿತ್ತು. ಇಂದು, ಕಳೆದ ಕೆಲವು ಗಂಟೆಗಳಲ್ಲಿ ನಡೆದ ನಮ್ಮ ಮಾತುಕತೆ ಸಂದರ್ಭದಲ್ಲಿ, ನೇಪಾಳದ ಭವಿಷ್ಯ ಕುರಿತು ಹಾಗೂ ಭಾರತ-ನೇಪಾಳ ಸಂಬಂಧಗಳ ಬಗ್ಗೆ ಅವರಿಗಿರುವ ಸ್ಪಷ್ಟ ದೃಷ್ಟಿಕೋನ ಮತ್ತು ದೃಢವಾದ ಬದ್ಧತೆಯನ್ನು ನಾನು ಕಂಡುಕೊಂಡೆ.

ಈ ವರ್ಷ ನೇಪಾಳದ ಜನರು ಅವರಿಗೆ ನೀಡಿರುವ ಐತಿಹಾಸಿಕ ಜನಾದೇಶವು, ಆ ದೇಶದ ಯುವ ಪೀಳಿಗೆಯ ಆಕಾಂಕ್ಷೆಗಳು ಮತ್ತು ಭರವಸೆಗಳನ್ನು ಪ್ರತಿಬಿಂಬಿಸುತ್ತಿದೆ.

ಒಂದು ಬಲಿಷ್ಠ ಮತ್ತು ಸಮೃದ್ಧ ರಾಷ್ಟ್ರವಾಗಿ ರೂಪುಗೊಳ್ಳುವ ನೇಪಾಳದ ಪಯಣದಲ್ಲಿ ಭಾರತವು ಯಾವಾಗಲೂ ಬದ್ಧತೆಯುಳ್ಳ ಪಾಲುದಾರನಾಗಿ ನಿಂತಿದೆ. ಇದೇ ಮನೋಭಾವದಿಂದ, ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ಇಂದು ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದೇವೆ.

ಸ್ನೇಹಿತರೆ,

ಭಾರತ ಮತ್ತು ನೇಪಾಳ ನಡುವಿನ ಸಂಬಂಧವು ಕೇವಲ ನೆರೆಹೊರೆಯ ಸಂಬಂಧವಷ್ಟೇ ಅಲ್ಲ, ಇದು ಗಾಢವಾದ ಬಾಂಧವ್ಯ ಮತ್ತು ದೃಢವಾದ ನಂಬಿಕೆಯ ಬೇರುಗಳನ್ನು ಹೊಂದಿದೆ. ನಮ್ಮ ಸಂತೋಷಗಳು ಮತ್ತು ಸವಾಲುಗಳು ಎರಡೂ ಹಂಚಿಕೆಯಾಗಿವೆ. ನಾವು ಪರಸ್ಪರರ ಪ್ರಗತಿಯಲ್ಲಿ ಪಾಲುದಾರರಾಗಿದ್ದೇವೆ, ಕಷ್ಟದ ಸಮಯದಲ್ಲಿ ಪರಸ್ಪರರಿಗೆ ಬೆಂಬಲ ನೀಡುವ ಶಕ್ತಿಯಾಗಿದ್ದೇವೆ.

ಆಗಸ್ಟ್‌ನಲ್ಲಿ ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹದಿಂದಾಗಿ ಉಂಟಾದ ಜೀವಹಾನಿ  ಕುರಿತು ನಾವು ನಮ್ಮ ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ. ನೇಪಾಳದ ಪುನರ್ನಿರ್ಮಾಣ ಮತ್ತು ದೀರ್ಘಕಾಲೀನ ಅಭಿವೃದ್ಧಿಯನ್ನು ಬೆಂಬಲಿಸಲು, 24,000 ಕೋಟಿ ನೇಪಾಳಿ ರೂಪಾಯಿ ಮೌಲ್ಯದ ‘ಅಭಿವೃದ್ಧಿ ಸಹಕಾರ ಪ್ಯಾಕೇಜ್’ ಅನ್ನು ನಾವು ಇಂದು ಘೋಷಿಸುತ್ತಿದ್ದೇವೆ.

ಬಾಧಿತ ಕುಟುಂಬಗಳ ಜೀವನವು ಸಹಜ ಸ್ಥಿತಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳುವುದು, ಹೊಸ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಭವಿಷ್ಯದ ವಿಪತ್ತುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ನೇಪಾಳದ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವುದು ನಮ್ಮ ಸಂಕಲ್ಪವಾಗಿದೆ.

ಸ್ನೇಹಿತರೆ,

ಭಾರತ ಮತ್ತು ನೇಪಾಳ ನಡುವಿನ ಸಂಬಂಧವು ಹಂಚಿಕೆಯ ಇತಿಹಾಸ, ನಂಬಿಕೆ, ಸಂಸ್ಕೃತಿ ಮತ್ತು ಜನರ ನಡುವಿನ ಗಾಢವಾದ ಬಾಂಧವ್ಯದ ಎಳೆಗಳಿಂದ ಹೆಣೆಯಲ್ಪಟ್ಟಿದೆ. ಭಗವಾನ್ ರಾಮ ಮತ್ತು ಸೀತಾ ಮಾತೆ ನಮ್ಮ ಹಂಚಿಕೆಯ ನಾಗರಿಕತೆ ಮತ್ತು ನಂಬಿಕೆಯ ಶಾಶ್ವತ ಸಂಕೇತಗಳಾಗಿದ್ದಾರೆ.

2018ರಲ್ಲಿ ಜನಕಪುರದ ಪವಿತ್ರ ಭೂಮಿಯಲ್ಲಿ ನಾನು ಹೀಗೆ ಹೇಳಿದ್ದೆ: “ನೇಪಾಳವಿಲ್ಲದೆ ನಮ್ಮ ತೀರ್ಥಯಾತ್ರೆಗಳು ಅಪೂರ್ಣ, ನೇಪಾಳವಿಲ್ಲದೆ ನಮ್ಮ ಭಗವಾನ್ ರಾಮ ಕೂಡ ಅಪೂರ್ಣ.”

2024ರಲ್ಲಿ ಅಯೋಧ್ಯೆಯಲ್ಲಿ ಬಾಲರಾಮನ ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭ ನಡೆಯಿತು. ಈ ಐತಿಹಾಸಿಕ ಸಂದರ್ಭವು ನಮ್ಮ ಹಂಚಿಕೆಯ ನಂಬಿಕೆಗೆ ಹೊಸ ಚೈತನ್ಯ ತುಂಬಿತು. ಅಂದಿನಿಂದ, ಲಕ್ಷಾಂತರ ಭಕ್ತರು ಬಾಲ ರಾಮನ ಆಶೀರ್ವಾದ ಪಡೆಯಲು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಕೇವಲ 2025ರಲ್ಲೇ ಭಾರತ ಮತ್ತು ವಿಶ್ವಾದ್ಯಂತದ ಸುಮಾರು 300 ದಶಲಕ್ಷ (30 ಕೋಟಿ) ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ.

ಇಂದು ‘ಸರಯು-ಕಮಲಾ ಎಕ್ಸ್‌ಪ್ರೆಸ್’ ರೈಲು ಸೇವೆ ಆರಂಭಿಸುವ ಮೂಲಕ, ನಾವು ಈ ಪವಿತ್ರ ಬಂಧಕ್ಕೆ ಹೊಸ ಆಯಾಮ ನೀಡುತ್ತಿದ್ದೇವೆ. ಇದು ಅಯೋಧ್ಯೆಗೆ ಭೇಟಿ ನೀಡುವ ಭಕ್ತರಿಗೆ ಜನಕಪುರಕ್ಕೆ ಪ್ರಯಾಣಿಸಲು ಮತ್ತು ಸೀತಾ ಮಾತೆಯ ಆಶೀರ್ವಾದ ಪಡೆಯಲು ಸುಲಭವಾಗಿಸುತ್ತದೆ.

ಅಲ್ಲದೆ, ಲುಂಬಿನಿ ಮತ್ತು ಬೋಧಗಯಾ ಸೇರಿದಂತೆ ಎರಡೂ ದೇಶಗಳಲ್ಲಿರುವ ಪವಿತ್ರ ಬೌದ್ಧ ತಾಣಗಳ ನಡುವೆ, ಹಾಗೆಯೇ ಶಿವ-ಶಕ್ತಿ ಮತ್ತು ಬುದ್ಧನಿಗೆ ಸಂಬಂಧಿಸಿದ ಇತರೆ ತಾಣಗಳ ನಡುವೆ ಸಂಪರ್ಕ ಹೆಚ್ಚಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.

ಸ್ನೇಹಿತರೆ,

ಇಂದು ನಾವು ಉತ್ತರಾಖಂಡ ಮತ್ತು ನೇಪಾಳದ ನಡುವೆ ಧಾರ್ಚುಲಾ ರಸ್ತೆ ಸೇತುವೆ ಉದ್ಘಾಟಿಸಿದ್ದೇವೆ, ಬನ್ಬಾಸಾದಲ್ಲಿ ‘ಇಂಟಿಗ್ರೇಟೆಡ್ ಚೆಕ್ ಪೋಸ್ಟ್'(ಸಂಯೋಜಿತ ತಪಾಸಣಾ ಕೇಂದ್ರ) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ನೇಪಾಳದ ಕಡೆ ಇರುವ ದೋಧಾರಾ-ಚಂದನಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನ ಅಭಿವೃದ್ಧಿ ಕಾರ್ಯವನ್ನೂ ನಾವು ತ್ವರಿತಗೊಳಿಸುತ್ತೇವೆ. ಈ ಉಪಕ್ರಮಗಳು ಉತ್ತರಾಖಂಡ ಮತ್ತು ನೇಪಾಳದ ನಡುವೆ ವ್ಯಾಪಾರ ಮತ್ತು ಜನರ ಓಡಾಟವನ್ನು ಸುಗಮಗೊಳಿಸುತ್ತವೆ.

ಅದೇ ಸಮಯದಲ್ಲಿ, ಬಿಹಾರ, ಉತ್ತರ ಪ್ರದೇಶ ಮತ್ತು ಭಾರತದ ಇತರೆ ರಾಜ್ಯಗಳೊಂದಿಗೆ ನೇಪಾಳವನ್ನು ಸಂಪರ್ಕಿಸುವ ರಸ್ತೆ, ರೈಲು ಮತ್ತು ಗಡಿ ಸಂಪರ್ಕ ಯೋಜನೆಗಳನ್ನು ನಾವು ವೇಗಗೊಳಿಸುತ್ತೇವೆ. ನೇಪಾಳದ ಸಾರಿಗೆ ವ್ಯಾಪಾರವನ್ನು ಇನ್ನಷ್ಟು ಸುಗಮಗೊಳಿಸಲು, ನಾವು ಕಾಂಡ್ಲಾ ಮತ್ತು ಪಾರಾದೀಪ್ ಬಂದರುಗಳಿಗೆ ಪ್ರವೇಶಾವಕಾಶ ಒದಗಿಸುತ್ತೇವೆ. ಉತ್ತಮ ವ್ಯಾಪಾರ, ಸಂಪರ್ಕ ಮತ್ತು ಹೂಡಿಕೆಯ ಕಡೆಗಿನ ಈ ಎಲ್ಲಾ ಪ್ರಯತ್ನಗಳು ನೇಪಾಳದ ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ನೀಡುತ್ತವೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ನೇಪಾಳದ ನದಿಗಳಲ್ಲಿ ಸ್ವಚ್ಛ ಇಂಧನ ಉತ್ಪಾದನೆಗೆ ಅಪಾರ ಸಾಮರ್ಥ್ಯವಿದೆ. ಭಾರತದ ವಿಶಾಲವಾದ ಇಂಧನ ಮಾರುಕಟ್ಟೆಯು ಈ ಸಾಮರ್ಥ್ಯವನ್ನು ನೇಪಾಳದ ಆರ್ಥಿಕ ಸಮೃದ್ಧಿಯ ಬಲಿಷ್ಠ ಅಡಿಪಾಯವಾಗಿ ಪರಿವರ್ತಿಸಬಲ್ಲದು.

ಇಂದು ‘ಲೋವರ್ ಅರುಣ್ ಜಲವಿದ್ಯುತ್ ಯೋಜನೆ’ಗೆ ಶಂಕುಸ್ಥಾಪನೆ ನೆರವೇರಿಸಿರುವುದು ಮತ್ತು ‘ಅರುಣ್-3’ ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ನಮ್ಮ ಬದ್ಧತೆಯು, ಈ ದೂರದೃಷ್ಟಿಯ ಒಂದು ಅವಿಭಾಜ್ಯ ಅಂಗವಾಗಿದೆ.

ಸ್ನೇಹಿತರೆ,

ಹಲವು ವರ್ಷಗಳಿಂದ, ಭಾರತವು ನೇಪಾಳಕ್ಕೆ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಇತರೆ ಅಗತ್ಯ ವಸ್ತುಗಳನ್ನು ಪೂರೈಸುವ ವಿಶ್ವಾಸಾರ್ಹ ಪಾಲುದಾರನಾಗಿದೆ. ನಮ್ಮ ‘ನೆರೆಹೊರೆಗೆ ಮೊದಲ ಆದ್ಯತೆ’ ನೀತಿಯ ಆಶಯಕ್ಕೆ ಅನುಗುಣವಾಗಿ, ಈ ವರ್ಷ ತೈಲ ಪೂರೈಕೆಗೆ ಸಂಬಂಧಿಸಿದ ಗಂಭೀರ ಸವಾಲುಗಳಿದ್ದರೂ ಸಹ, ನಾವು ನೇಪಾಳಕ್ಕೆ ಇಂಧನ, ರಸಗೊಬ್ಬರಗಳು ಮತ್ತು ಇತರೆ ಅಗತ್ಯ ವಸ್ತುಗಳ ಪೂರೈಕೆ ನಿರಂತರವಾಗಿ ಮುಂದುವರಿಯುವಂತೆ ನೋಡಿಕೊಂಡಿದ್ದೇವೆ.

ಇಂದು ‘ಮೋತಿಹಾರಿ-ಅಮ್ಲೇಖ್‌ಗುಂಜ್ ಪೈಪ್‌ಲೈನ್’ನ 2ನೇ ಹಂತದ ಉದ್ಘಾಟನೆ ಮತ್ತು ‘ಝಾಪಾ ಪೆಟ್ರೋಲಿಯಂ ಟರ್ಮಿನಲ್’ಗೆ ಶಂಕುಸ್ಥಾಪನೆ ನೆರವೇರಿಸಿರಿವುದು ಈ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುತ್ತದೆ.

ಸ್ನೇಹಿತರೆ,

ನೇಪಾಳದ ಯುವ ಪೀಳಿಗೆಯು ಪ್ರತಿಭೆ, ಶಕ್ತಿ ಮತ್ತು ಉನ್ನತ ಆಕಾಂಕ್ಷೆಗಳಿಂದ ತುಂಬಿದೆ. ಅವರ ಕನಸುಗಳನ್ನು ನನಸಾಗಿಸಲು ಭಾರತವು ಬದ್ಧತೆಯುಳ್ಳ ಪಾಲುದಾರನಾಗಿರಲು ಬಯಸುತ್ತದೆ.

ಈ ಬದ್ಧತೆಯನ್ನು ಕಾರ್ಯರೂಪಕ್ಕೆ ತರಲು, ನಾವು ನೇಪಾಳದಲ್ಲಿ ‘ಸ್ಟಾರ್ಟಪ್ ಇನ್ ಕ್ಯುಬೇಟರ್’, ‘ಇನ್ನೋವೇಶನ್ ಹಬ್'(ನಾವೀನ್ಯತಾ ಕೇಂದ್ರ) ಮತ್ತು ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ಕ್ಯಾಂಪಸ್ ಒಂದನ್ನು ಸ್ಥಾಪಿಸುತ್ತೇವೆ.

ಭಾರತದಲ್ಲಿ ನೇಪಾಳಿ ವಿದ್ಯಾರ್ಥಿಗಳಿಗಾಗಿ ಕಾನೂನು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿವೇತನ ಅವಕಾಶಗಳನ್ನು ನಾವು ವಿಸ್ತರಿಸುತ್ತೇವೆ. ಅಲ್ಲದೆ, ನೇಪಾಳದಲ್ಲಿ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಉತ್ತೇಜಿಸಲು ‘ಕೃಷಿ-ಕೈಗಾರಿಕಾ ಉದ್ಯಾನವನ’ ಅಭಿವೃದ್ಧಿಪಡಿಸಲು ಸಹ ನಾವು ಸಹಕಾರ ನೀಡುತ್ತೇವೆ.

ಸ್ನೇಹಿತರೆ,

ರಾಮಾಯಣ ಕಥೆಯು ಚಲನಚಿತ್ರಗಳು ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಯುವ ಪೀಳಿಗೆಯನ್ನು ಹಾಗೂ ವಿಶ್ವಾದ್ಯಂತದ ಪ್ರೇಕ್ಷಕರನ್ನು ತಲುಪುತ್ತಿದೆ. ಭಾರತ ಮತ್ತು ನೇಪಾಳದ ಯುವ ಸೃಷ್ಟಿಕರ್ತರು ಒಟ್ಟಾಗಿ ಕೆಲಸ ಮಾಡಿ, ಹೊಸ ಹಾಗೂ ನವೀನ ಮಾಧ್ಯಮಗಳ ಮೂಲಕ ನಮ್ಮ ಜಂಟಿ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಬೇಕೆಂದು ನಾವು ಬಯಸುತ್ತೇವೆ. ಈ ನಿಟ್ಟಿನಲ್ಲಿ, ಮುಂದಿನ ‘ವೇವ್ಸ್’ ಶೃಂಗಸಭೆಗೆ ನೇಪಾಳದಿಂದ ಆಗಮಿಸುವ ಬೃಹತ್ ನಿಯೋಗವನ್ನು ನಾವು ಸ್ವಾಗತಿಸುತ್ತೇವೆ.

ಅಲ್ಲದೆ, ನೇಪಾಳದಲ್ಲಿ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಕ್ರೀಡಾಪಟುಗಳಿಗೆ ತರಬೇತಿ ನೀಡುವ ವಿಷಯದಲ್ಲಿ, ವಿಶೇಷವಾಗಿ ಕ್ರಿಕೆಟ್ ಕ್ಷೇತ್ರದಲ್ಲಿ, ನಮ್ಮ ಸಹಕಾರವನ್ನು ನಾವು ಇನ್ನಷ್ಟು ಬಲಪಡಿಸುತ್ತೇವೆ.

ಗೌರವಾನ್ವಿತರೆ,

ನಮ್ಮ ಜಂಟಿ ಭವಿಷ್ಯಕ್ಕಾಗಿ ಹೊಸ ಹಾದಿ ರೂಪಿಸಲು, ಇಂದು ನಾವು ‘ಜಂಟಿ ಮುನ್ನೋಟ ದಾಖಲೆ’ಯನ್ನು ಅನಾವರಣಗೊಳಿಸುತ್ತಿದ್ದೇವೆ. ಇದು ‘ವಿಕಸಿತ ಭಾರತ’ ಮತ್ತು ‘ಸಮುನ್ನತ ನೇಪಾಳ'(ಅಭಿವೃದ್ಧಿ ಹೊಂದಿದ ನೇಪಾಳ) ಕುರಿತಾದ ನಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ನೀಲನಕ್ಷೆಯಾಗಿ ಕಾರ್ಯ ನಿರ್ವಹಿಸುತ್ತದೆ.

ನಮ್ಮ ಮುಂದೆ ಸ್ಪಷ್ಟ ಗುರಿಗಳಿವೆ, ಪರಸ್ಪರ ನಂಬಿಕೆಯಿದೆ ಮತ್ತು ಅವುಗಳನ್ನು ಸಾಧಿಸುವ ಸಾಮರ್ಥ್ಯವೂ ಇದೆ. ಎಲ್ಲಕ್ಕಿಂತ ಮಿಗಿಲಾಗಿ, ನಮ್ಮೊಂದಿಗೆ ಸೀತಾ ಮಾತೆ, ಭಗವಾನ್ ರಾಮ ಮತ್ತು ಭಗವಾನ್ ಬುದ್ಧನ ಆಶೀರ್ವಾದವಿದೆ.

ಇದೇ ಸ್ಫೂರ್ತಿಯೊಂದಿಗೆ ಮುನ್ನಡೆದು, ನಮ್ಮ ಜಂಟಿ ದೃಷ್ಟಿಕೋನವನ್ನು ನೈಜ ಸಾಧನೆಗಳನ್ನಾಗಿ ಪರಿವರ್ತಿಸುತ್ತೇವೆ, ಭಾರತ-ನೇಪಾಳ ಸಂಬಂಧದಲ್ಲಿ ಒಟ್ಟಾಗಿ ಒಂದು ಹೊಸ ಸುವರ್ಣ ಅಧ್ಯಾಯ ಬರೆಯುತ್ತೇವೆ ಎಂಬ ವಿಶ್ವಾಸ ನನಗಿದೆ.

ಭಾರತ-ನೇಪಾಳ ಸ್ನೇಹ ಸಂಬಂಧ ಚಿರಕಾಲ ಉಳಿಯಲಿ!

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****