ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ನೇಪಾಳದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಬಾಲೇಂದ್ರ ಶಾ ಅವರು ನವೆಂಬರ್ 22-23, 2026 ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಅವರೊಂದಿಗೆ ಉನ್ನತ ಮಟ್ಟದ ಅಧಿಕೃತ ನಿಯೋಗವೂ ಆಗಮಿಸಿತ್ತು. ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಮಂತ್ರಿ ಬಾಲೇಂದ್ರ ಶಾ ಅವರ ಮೊದಲ ಭಾರತ ಭೇಟಿ ಇದಾಗಿದೆ.
ಪ್ರಧಾನಮಂತ್ರಿ ಶಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅವರು ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರಧಾನಮಂತ್ರಿ ಶಾ ಅವರು ಗೌರವಾನ್ವಿತ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರೂ ಸಹ ಪ್ರಧಾನಮಂತ್ರಿ ಶಾ ಅವರನ್ನು ಭೇಟಿಯಾದರು.
ಪ್ರಧಾನಮಂತ್ರಿ ಮೋದಿ ಅವರು ನೇಪಾಳ ಪ್ರಧಾನಮಂತ್ರಿ ಶಾ ಅವರೊಂದಿಗೆ ಮಾತುಕತೆ ನಡೆಸಿದರು ಮತ್ತು ಅವರ ಗೌರವಾರ್ಥ ಭೋಜನಕೂಟವನ್ನು ಆಯೋಜಿಸಿದ್ದರು. ಉಭಯ ನಾಯಕರ ನಡುವಿನ ಚರ್ಚೆಗಳಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಮುಖ ಕ್ಷೇತ್ರಗಳು, ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ವಿಷಯಗಳು ಹಾಗೂ ಜಾಗತಿಕ ಬೆಳವಣಿಗೆಗಳು ಸೇರಿದ್ದವು.
ನೇಪಾಳದಲ್ಲಿ ಭಾರಿ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾದ ವಿನಾಶಕಾರಿ ರಸುವಾ-ಭೋಟೆಕೋಶಿ ಪ್ರವಾಹದ ಬಳಿಕ ಭಾರತ ನೀಡಿದ ಮಾನವೀಯ ಹಾಗೂ ತಾಂತ್ರಿಕ ನೆರವು ಹಾಗೂ ಒತ್ತಾಸೆಯನ್ನು ಪ್ರಧಾನಮಂತ್ರಿ ಶಾ ಅವರು ಕೃತಜ್ಞತೆಯಿಂದ ಸ್ಮರಿಸಿದರು.
ಆಪ್ತ ಮಿತ್ರ ಮತ್ತು ನೆರೆಯ ರಾಷ್ಟ್ರವಾಗಿ ನೇಪಾಳದ ಅಭಿವೃದ್ಧಿ ಪಯಣಕ್ಕೆ ಭಾರತದ ಅಚಲ ಬೆಂಬಲವನ್ನು ಪ್ರಧಾನಮಂತ್ರಿ ಶ್ರೀ ಮೋದಿ ಅವರು ಪುನರುಚ್ಚರಿಸಿದರು. ಭಾರತವು ನೇಪಾಳಕ್ಕೆ 15,000 ಕೋಟಿ ಭಾರತೀಯ ರೂಪಾಯಿಗಳ (24,000 ಕೋಟಿ ನೇಪಾಳಿ ರೂಪಾಯಿ) ಅಭಿವೃದ್ಧಿ ನೆರವನ್ನು ವಿಸ್ತರಿಸಲಿದೆ. ಇದರಲ್ಲಿ ನೇಪಾಳದ ವಿಪತ್ತು ನಂತರದ ಪುನರ್ನಿರ್ಮಾಣ ಮತ್ತು ಹೊಸ ಮೂಲಸೌಕರ್ಯ ಯೋಜನೆಗಳಿಗಾಗಿ 3,500 ಕೋಟಿ ಭಾರತೀಯ ರೂಪಾಯಿಗಳ (5,600 ಕೋಟಿ ನೇಪಾಳಿ ರೂಪಾಯಿ) ನೆರವು ಹಾಗೂ ಇಂಧನ ವಲಯದ ಯೋಜನೆಗಳಿಗಾಗಿ 11,500 ಕೋಟಿ ಭಾರತೀಯ ರೂಪಾಯಿಗಳ (18,400 ಕೋಟಿ ನೇಪಾಳಿ ರೂಪಾಯಿ) ಮೌಲ್ಯದ ಸಾಲ ಸೌಲಭ್ಯ ಸೇರಿದೆ. ನಿರ್ದಿಷ್ಟ ಯೋಜನೆಗಳು ಹಾಗೂ ಅಭಿವೃದ್ಧಿ ನೆರವು ಒದಗಿಸುವ ವಿಧಾನಗಳನ್ನು ಪರಸ್ಪರ ಸಮಾಲೋಚನೆಗಳ ಮೂಲಕ ಅಂತಿಮಗೊಳಿಸಲಾಗುವುದು.
ಅತ್ಯಧಿಕ ಪರಿಣಾಮದ ಸಮುದಾಯ ಅಭಿವೃದ್ಧಿ ಯೋಜನೆಗಳು (ಎಚ್ಐಸಿಡಿಪಿ) ಸೇರಿದಂತೆ ನೇಪಾಳದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಭಾರತ ಸರ್ಕಾರದ ನೆರವಿನೊಂದಿಗೆ ನೇಪಾಳದಲ್ಲಿ ನಿರ್ಮಾಣವಾಗುತ್ತಿರುವ ʻರಾಷ್ಟ್ರೀಯ ಪೊಲೀಸ್ ಅಕಾಡೆಮಿʼ ಕಾಮಗಾರಿಯ ಪ್ರಗತಿಯನ್ನು ಅವರು ಪರಿಶೀಲಿಸಿದರು. ಭಾರತದ ಅನುದಾನ ನೆರವಿನೊಂದಿಗೆ ಚಿತ್ವಾನ್ನಲ್ಲಿ ʻಕೃಷಿ-ಕೈಗಾರಿಕಾ ಪಾರ್ಕ್ʼ ಸ್ಥಾಪಿಸುವ ಘೋಷಣೆಯನ್ನು ಉಭಯ ನಾಯಕರು ಸ್ವಾಗತಿಸಿದರು.
ಉಭಯ ನಾಯಕರು “ವಿಕಸಿತ ಭಾರತ ಮತ್ತು ಸಮುನ್ನತ ನೇಪಾಳ” ಎಂಬ ಜಂಟಿ ದೂರದೃಷ್ಟಿ ನಿರ್ಣಯವನ್ನು ಅಳವಡಿಸಿಕೊಂಡರು. ಈ ಜಂಟಿ ದೂರದೃಷ್ಟಿ ನಿರ್ಣಯದ ಹೇಳಿಕೆಯು ಭಾರತ ಮತ್ತು ನೇಪಾಳದ ನಡುವಿನ ಮಹತ್ವಾಕಾಂಕ್ಷೆಯ ಮತ್ತು ಭವಿಷ್ಯ-ಆಧಾರಿತ ಪಾಲುದಾರಿಕೆಗೆ ಮಾರ್ಗಸೂಚಿಯನ್ನು ಒದಗಿಸುತ್ತದೆ. ಇದು ಆರ್ಥಿಕ ಮತ್ತು ಅಭಿವೃದ್ಧಿ ಪಾಲುದಾರಿಕೆ, ಸಂಪರ್ಕ, ಇಂಧನ ಮತ್ತು ಜಲ ಸಂಪನ್ಮೂಲಗಳು ಹಾಗೂ ಜನರ ನಡುವಿನ ಬಾಂಧವ್ಯದಂತಹ ಸಾಂಪ್ರದಾಯಿಕವಾಗಿ ಬಲಿಷ್ಠವಾಗಿರುವ ದ್ವಿಪಕ್ಷೀಯ ಸಹಕಾರ ಕ್ಷೇತ್ರಗಳನ್ನು ಮತ್ತಷ್ಟು ಸಶಕ್ತಗೊಳಿಸುವ ಉಪಕ್ರಮಗಳನ್ನು ಒಳಗೊಂಡಿದೆ. ಜೊತೆಗೆ, ಹವಾಮಾನ ಸದೃಢತೆ, ವಿಪತ್ತು ತಗ್ಗಿಸುವಿಕೆ ಮತ್ತು ನಿರ್ವಹಣೆ, ಕ್ರೀಡೆ, ಸ್ಟಾರ್ಟ್-ಅಪ್ಗಳು, ಡಿಜಿಟಲ್ ಸೇವೆಗಳು, ಬಾಹ್ಯಾಕಾಶ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಹೊಸ ಸಮನ್ವಯತೆಯನ್ನು ಇದು ಒಳಗೊಂಡಿದೆ.
ಸಂಪರ್ಕವೃದ್ಧಿ ಮತ್ತು ದ್ವಿಪಕ್ಷೀಯ ಆರ್ಥಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯೊಂದಿಗೆ ನಾಗರಿಕ ವಿಮಾನಯಾನ ವಿಷಯಗಳ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ನಾಯಕರು ಗಮನಿಸಿದರು. ಪ್ರಸ್ತುತ ಏಕಮುಖವಾಗಿರುವ ʻಬಿ345ʼ ಕಠ್ಮಂಡು-ಭೈರಹವಾ-ಲಕ್ನೋ ಮಾರ್ಗವನ್ನು ದ್ವಿಮುಖಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡವು. ಈ ನಿಟ್ಟಿನಲ್ಲಿ ಕಾರ್ಯವಿಧಾನಗಳನ್ನು ಅಂತಿಮಗೊಳಿಸಲು ಮತ್ತು ಪ್ರಸ್ತುತ ಚರ್ಚೆಯಲ್ಲಿರುವ ಉಭಯ ಕಡೆಯ ಇತರ ನಾಗರಿಕ ವಿಮಾನಯಾನ ಪ್ರಸ್ತಾವನೆಗಳನ್ನು ಪರಿಹರಿಸಲು ತಾಂತ್ರಿಕ ಸಮಾಲೋಚನೆಗಳನ್ನು ನಡೆಸಲಾಗುವುದು.
ʻದೀನದಯಾಳ್ ಬಂದರುʼ (ಕಾಂಡ್ಲಾ, ಗುಜರಾತ್) ಮೂಲಕ ನೇಪಾಳದ ಸಾಗಣೆ ವ್ಯಾಪಾರಕ್ಕಾಗಿ ಹೊಸ ಸಂಪರ್ಕ ಮಾರ್ಗವನ್ನು ಪ್ರಧಾನಮಂತ್ರಿ ಮೋದಿ ಅವರು ಘೋಷಿಸಿದರು. ಇದಲ್ಲದೆ, ಅಗತ್ಯ ಮೂಲಸೌಕರ್ಯ ಸಿದ್ಧವಾದ ನಂತರ ʻಪಾರಾದೀಪ್ʼ ಬಂದರಿಗೆ (ಒಡಿಶಾ) ಸಹ ಪ್ರವೇಶವನ್ನು ಕಲ್ಪಿಸಲಾಗುವುದು.
ಹೊಸ ರೈಲು ಮಾರ್ಗಗಳು, ಸೇತುವೆಗಳು, ಸಮಗ್ರ ತಪಾಸಣಾ ಕೇಂದ್ರಗಳು (ಐಸಿಪಿ) ಮತ್ತು ಪೆಟ್ರೋಲಿಯಂ ಪೈಪ್ಲೈನ್ಗಳ ಸ್ಥಾಪನೆಯ ಮೂಲಕ ಗಡಿಯಾಚೆಗಿನ ಸಂಪರ್ಕವನ್ನು ಸುಧಾರಿಸುವ ಮತ್ತು ಗಡಿ ಮೂಲಸೌಕರ್ಯವನ್ನು ಹೆಚ್ಚಿಸುವ ಮಹತ್ವವನ್ನು ಉಭಯ ನಾಯಕರು ಒತ್ತಿ ಹೇಳಿದರು.
ಉಭಯ ಪ್ರಧಾನಮಂತ್ರಿಗಳು ಅಯೋಧ್ಯೆ ಮತ್ತು ಜನಕ್ಪುರ ನಡುವಿನ ‘ಸರಯೂ-ಕಮಲಾ ಎಕ್ಸ್ಪ್ರೆಸ್’ ರೈಲು ಸೇವೆಗೆ ಹಸಿರು ನಿಶಾನೆ ತೋರಿದರು. ಈ ರೈಲು ಸೇವೆಯು ಸಂಪರ್ಕವನ್ನು ಸುಧಾರಿಸುವುದಲ್ಲದೆ, ʻರಾಮಾಯಣ ಸರ್ಕ್ಯೂಟ್ʼ ಉದ್ದಕ್ಕೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಜೊತೆಗೆ ಭಾರತ ಮತ್ತು ನೇಪಾಳದ ನಡುವಿನ ನಾಗರಿಕತೆಯ ಬಾಂಧವ್ಯವನ್ನು ಬಲಪಡಿಸಲಿದೆ. ಬೌದ್ಧ ಮತ್ತು ಶಿವ-ಶಕ್ತಿ ಧಾರ್ಮಿಕ ಪ್ರವಾಸೋದ್ಯಮ ಸರ್ಕ್ಯೂಟ್ಗಳನ್ನು ಅಭಿವೃದ್ಧಿಪಡಿಸಲು ಇದೇ ರೀತಿಯ ಸಂಪರ್ಕಗಳನ್ನು ಅನ್ವೇಷಿಸಲು ನಾಯಕರು ಸಹಮತ ವ್ಯಕ್ತಪಡಿಸಿದರು.
ಪ್ರಸ್ತಾವಿತ ʻರಕ್ಸೌಲ್-ಕಠ್ಮಂಡುʼ ವಿದ್ಯುದ್ದೀಕೃತ ಬ್ರಾಡ್-ಗೇಜ್ ರೈಲು ಮಾರ್ಗದ ಕ್ಷೇತ್ರ ಸ್ಥಳ ಸಮೀಕ್ಷೆ ಅಂತಿಮಗೊಂಡಿರುವುದನ್ನು ಉಭಯ ನಾಯಕರು ಘೋಷಿಸಿದರು ಮತ್ತು ನೇಪಾಳದಲ್ಲಿ ಪೂರ್ವ-ಪಶ್ಚಿಮ ರೈಲ್ವೆ ಅಭಿವೃದ್ಧಿಯಲ್ಲಿ ಉಭಯ ಪಕ್ಷಗಳು ಸಹಕರಿಸಲಿವೆ ಎಂದು ತಿಳಿಸಿದರು.
ಉಭಯ ನಾಯಕರು ಬನ್ಬಸಾದಲ್ಲಿ ಹೊಸ ಸಮಗ್ರ ತಪಾಸಣಾ ಕೇಂದ್ರಕ್ಕೆ (ಐಸಿಪಿ) ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಭೈರಹವಾ, ಸುನೌಲಿ ಮತ್ತು ದೋಧಾರಾ-ಚಾಂದನಿಯಲ್ಲಿ ನಿರ್ಮಾಣವಾಗುತ್ತಿರುವ ʻಐಸಿಪಿʼಗಳ ಪ್ರಗತಿಯನ್ನು ಸ್ವಾಗತಿಸಿದರು. ಭಾರತ ಮತ್ತು ನೇಪಾಳದ ನಡುವೆ ಈಗಾಗಲೇ ಮೂರು ʻಐಸಿಪಿʼಗಳು ಕಾರ್ಯನಿರ್ವಹಿಸುತ್ತಿವೆ.
ಧಾರ್ಚುಲಾ (ಭಾರತ) ಮತ್ತು ದಾರ್ಚುಲಾ (ನೇಪಾಳ) ನಡುವಿನ ಹೊಸ ಗಡಿಯಾಚೆಗಿನ ಮೋಟಾರು ಸೇತುವೆಯನ್ನು ನಾಯಕರು ಉದ್ಘಾಟಿಸಿದರು. ಇದು ಪಶ್ಚಿಮ ನೇಪಾಳ ಮತ್ತು ಭಾರತದ ನಡುವಿನ ನೇರ ಸಂಪರ್ಕವನ್ನು ಸುಧಾರಿಸಲು ನೆರವಾಗಲಿದೆ.
ಗಡಿ ಕಂಬಗಳ ನಿರ್ವಹಣೆ ಮತ್ತು ದುರಸ್ತಿಗೆ ಸಂಬಂಧಿಸಿದ ಜಂಟಿ ಕ್ಷೇತ್ರ ಕಾರ್ಯದ ಪ್ರಗತಿಯ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಬಾಕಿ ಇರುವ ಗಡಿ ಸಮಸ್ಯೆಗಳ ಕುರಿತು ಕೆಲಸ ಮಾಡುವಂತೆ ವಿದೇಶಾಂಗ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದರು.
ಭಾರತ ಮತ್ತು ನೇಪಾಳದ ನಡುವಿನ ಗಡಿಯಾಚೆಗಿನ ಪೆಟ್ರೋಲಿಯಂ ಮೂಲಸೌಕರ್ಯದ ವಿಸ್ತರಣೆಯ ಭಾಗವಾಗಿ, ನಾಯಕರು ಮೋತಿಹಾರಿ-ಅಮ್ಲೇಖ್ಗಂಜ್ ಪೈಪ್ಲೈನ್ನ 2ನೇ ಹಂತವನ್ನು ನೇಪಾಳದ ಜನತೆಗೆ ಸಮರ್ಪಿಸಿದರು. ಉಭಯ ನಾಯಕರು ನೇಪಾಳದ ಝಾಪಾದಲ್ಲಿ ಪೆಟ್ರೋಲಿಯಂ ಟರ್ಮಿನಲ್ ಅಭಿವೃದ್ಧಿಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಸಿಲಿಗುರಿ ಮತ್ತು ಝಾಪಾ ನಡುವಿನ ಪೆಟ್ರೋಲಿಯಂ ಪೈಪ್ಲೈನ್ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸುವ ಮಹತ್ವವನ್ನು ಒತ್ತಿ ಹೇಳಿದರು. ಭಾರತ ಮತ್ತು ನೇಪಾಳದ ನಡುವೆ ಅನಿಲ ಪೈಪ್ಲೈನ್ಗಳ ನಿರ್ಮಾಣದಲ್ಲಿ ಸಹಕಾರವನ್ನು ಅನ್ವೇಷಿಸಲು ಉಭಯ ನಾಯಕರು ಸಹಮತಿಸಿದರು.
ಭಾರತ-ನೇಪಾಳ ವಿದ್ಯುತ್ ವಲಯದ ಸಹಕಾರದ ಜಂಟಿ ದೃಷ್ಟಿಕೋನ ದಾಖಲೆ ಮತ್ತು ದೀರ್ಘಕಾಲೀನ ವಿದ್ಯುತ್ ವ್ಯಾಪಾರ ಒಪ್ಪಂದಕ್ಕೆ ಅನುಗುಣವಾಗಿ, ಜಲವಿದ್ಯುತ್ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಪ್ರಗತಿಯ ಬಗ್ಗೆ ಉಭಯ ಪಕ್ಷಗಳು ತೃಪ್ತಿ ವ್ಯಕ್ತಪಡಿಸಿದವು. ನೇಪಾಳದ ಜಲವಿದ್ಯುತ್ ಕ್ಷೇತ್ರದಲ್ಲಿ ಭಾರತೀಯ ಕಂಪನಿಗಳ ಸಕ್ರಿಯ ತೊಡಗಿಸಿಕೊಳ್ಳುವಿಕೆಯನ್ನು ಉಭಯ ನಾಯಕರು ಸ್ವಾಗತಿಸಿದರು. ನೇಪಾಳದಲ್ಲಿ ಭಾರತೀಯ ಕಂಪನಿಗಳು ಅಭಿವೃದ್ಧಿಪಡಿಸುತ್ತಿರುವ ವಿವಿಧ ಜಲವಿದ್ಯುತ್ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಒಪ್ಪಿದರು. ಈ ಸಂದರ್ಭದಲ್ಲಿ, ಉಭಯ ನಾಯಕರು 669 ಮೆಗಾವ್ಯಾಟ್ ಸಾಮರ್ಥ್ಯದ ʻಲೋವರ್ ಅರುಣ್ ಜಲವಿದ್ಯುತ್ ಯೋಜನೆʼಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ʻಪಂಚೇಶ್ವರ ವಿವಿಧೋದ್ದೇಶ ಯೋಜನೆʼಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ತ್ವರಿತವಾಗಿ ಅಂತಿಮಗೊಳಿಸಲು ಮತ್ತು ಯೋಜನೆಯ ಅನುಷ್ಠಾನದ ಕಾಮಗಾರಿಯನ್ನು ಪ್ರಾರಂಭಿಸಲು ʻಪಂಚೇಶ್ವರ ಅಭಿವೃದ್ಧಿ ಪ್ರಾಧಿಕಾರʼ ಮತ್ತು ʻಜಲ ಸಂಪನ್ಮೂಲಗಳ ಜಂಟಿ ಸಮಿತಿʼಗೆ ಉಭಯ ನಾಯಕರು ನಿರ್ದೇಶನ ನೀಡಿದರು. ಪರಸ್ಪರ ಲಾಭಕ್ಕಾಗಿ ಜಲ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಮತ್ತು ಪ್ರವಾಹದ ಪರಿಣಾಮವನ್ನು ತಗ್ಗಿಸಲು ʻಸಪ್ತಕೋಶಿ ʼಮತ್ತು ʻಸುಂಕೋಶಿ ವಿವಿಧೋದ್ದೇಶ ಯೋಜನೆʼಗಳ ʻಡಿಪಿಆರ್ʼ ಕೆಲಸವನ್ನು ವೇಗಗೊಳಿಸುವ ಅಗತ್ಯವನ್ನು ಸಹ ಉಭಯ ನಾಯಕರು ಒಪ್ಪಿಕೊಂಡರು.
ಇನರುವಾ (ನೇಪಾಳ) – ನ್ಯೂ ಪೂರ್ಣಿಯಾ (ಭಾರತ) ಮತ್ತು ದೋದೋಧಾರಾ (ನೇಪಾಳ) – ಬರೇಲಿ (ಭಾರತ) ನಡುವಿನ ಎರಡು ಉನ್ನತ ಸಾಮರ್ಥ್ಯದ ಗಡಿಯಾಚೆಗಿನ ವಿದ್ಯುತ್ ಪ್ರಸರಣ ಮಾರ್ಗಗಳಿಗಾಗಿ ಜಂಟಿ ಉದ್ಯಮಗಳ (ಜೆವಿ) ರಚನೆಗೆ ಸಂಬಂಧಿಸಿದ ಪ್ರಗತಿಯ ಬಗ್ಗೆ ಉಭಯ ದೇಶಗಳು ತೃಪ್ತಿ ವ್ಯಕ್ತಪಡಿಸಿದವು.
ನೇಪಾಳಕ್ಕೆ ಭಾರತದ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿ ಬೆಂಬಲದ ವಿಸ್ತರಣೆಯಾಗಿ, ಭಾರತವು ನೇಪಾಳದಲ್ಲಿ ʻವಿದೇಶಿ ಐಐಟಿʼ ಕ್ಯಾಂಪಸ್ ಸ್ಥಾಪಿಸಲು ಉಭಯ ನಾಯಕರು ಒಪ್ಪಿಕೊಂಡರು. ಇದು ನೇಪಾಳದ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ ಮತ್ತು ಉದ್ಯೋಗ ಸೃಷ್ಟಿಗೂ ಉತ್ತೇಜನ ನೀಡಲಿದೆ. ನವೋದ್ಯಮಗಳು ಮತ್ತು ಡಿಜಿಟಲ್ ಹಾಗೂ ಹಣಕಾಸು ಸಂಪರ್ಕ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತು ನೇಪಾಳದ ನಡುವಿನ ವಿಸ್ತರಿಸುತ್ತಿರುವ ಸಹಕಾರವನ್ನು ಉಭಯ ನಾಯಕರು ಸ್ವಾಗತಿಸಿದರು.
ಒಂದು ದೇಶದ ಜನರು ಇನ್ನೊಂದು ದೇಶದಲ್ಲಿ ವಾಸಿಸುತ್ತಿರುವಾಗ ಬ್ಯಾಂಕಿಂಗ್ ಮತ್ತು ಟೆಲಿಕಾಂ ಸೇರಿದಂತೆ ವಿವಿಧ ಸೇವೆಗಳಿಗೆ ಸುಗಮ ಪ್ರವೇಶವನ್ನು ಪರಸ್ಪರ ಕಲ್ಪಿಸಿಕೊಡುವ ಅಗತ್ಯವನ್ನು ಉಭಯ ನಾಯಕರು ಒಪ್ಪಿಕೊಂಡರು.
ಭೇಟಿಯ ಸಂದರ್ಭದಲ್ಲಿ ಉಭಯ ಪಕ್ಷಗಳ ನಡುವೆ ಈ ಕೆಳಗಿನ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು:
i. ಭಾರತದ ಗುಜರಾತ್ನ ಗಾಂಧಿನಗರದಲ್ಲಿರುವ ʻರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯʼ ಮತ್ತು ನೇಪಾಳ ʻಪೊಲೀಸ್ನ ಅಪರಾಧ ತನಿಖಾ ಇಲಾಖೆʼ ನಡುವೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗಕ್ಕಾಗಿ ಒಪ್ಪಂದ.
ii. ʻಭಾರತದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲʼಯ (ಆರ್ಆರ್ಯು) ಮತ್ತು ನೇಪಾಳದ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (ಎನ್ಪಿಎ) ನಡುವಿನ ಒಡಂಬಡಿಕೆ.
iii. ನೇಪಾಳದ ನಾಗರಿಕ ಸೇವಾ ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮಕ್ಕಾಗಿ ಭಾರತ ಸರ್ಕಾರದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ʻರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರʼ (ಎನ್ಸಿಜಿಜಿ) ಮತ್ತು ನೇಪಾಳ ಸರ್ಕಾರದ ಫೆಡರಲ್ ವ್ಯವಹಾರಗಳು ಮತ್ತು ಸಾಮಾನ್ಯ ಆಡಳಿತ ಸಚಿವಾಲಯದ ʻನೇಪಾಳ ಆಡಳಿತ ಸಿಬ್ಬಂದಿ ಕಾಲೇಜುʼ ನಡುವಿನ ಒಡಂಬಡಿಕೆ.
iv. ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಸರ್ಕಾರ ಮತ್ತು ನೇಪಾಳ ಸರ್ಕಾರದ ನಡುವಿನ ಒಡಂಬಡಿಕೆ.
v. ದಕ್ಷಿಣ ಏಷ್ಯಾ ಉಪಗ್ರಹದ ಬಳಕೆಗಾಗಿ ಉಪಗ್ರಹ ಸಂವಹನ (ಸ್ಯಾಟ್ಕಾಮ್) ಜಾಲವನ್ನು ಸ್ಥಾಪಿಸಲು ಭಾರತ ಸರ್ಕಾರದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು ನೇಪಾಳ ಸರ್ಕಾರದ ಮಾಹಿತಿ ಮತ್ತು ಸಂವಹನ ಸಚಿವಾಲಯದ (ಎಂಒಐಸಿ) ನಡುವಿನ ಒಡಂಬಡಿಕೆ.
vi. ಸುಸ್ಥಿರ ನಗರ ಅಭಿವೃದ್ಧಿ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಭಾರತ ಸರ್ಕಾರ ಮತ್ತು ನೇಪಾಳ ಸರ್ಕಾರದ ನಡುವೆ ಒಡಂಬಡಿಕೆ.
vii. ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ನೇಪಾಳ ಸರ್ಕಾರದ ಆರೋಗ್ಯ ಮತ್ತು ಆಹಾರ ಸುರಕ್ಷತೆ ಸಚಿವಾಲಯದ ನಡುವಿನ ಒಡಂಬಡಿಕೆ.
viii. ಪಶುಸಂಗೋಪನೆ ಮತ್ತು ಮೀನುಗಾರಿಕೆ ಅಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಸರ್ಕಾರ ಮತ್ತು ನೇಪಾಳ ಸರ್ಕಾರದ ನಡುವಿನ ಒಡಂಬಡಿಕೆ.
ನೇಪಾಳದ ಪ್ರಧಾನಮಂತ್ರಿ ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಭಾರತದ ಪ್ರಧಾನಮಂತ್ರಿಗೆ ಕೃತಜ್ಞತೆ ಸಲ್ಲಿಸಿದರು; ಮತ್ತು ನೇಪಾಳಕ್ಕೆ ಭೇಟಿ ನೀಡುವಂತೆ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಿದರು. ಭಾರತದ ಪ್ರಧಾನಮಂತ್ರಿ ಈ ಆಹ್ವಾನವನ್ನು ಸ್ವೀಕರಿಸಿದ್ದು, ಭೇಟಿಯ ಅಧಿಕೃತ ದಿನಾಂಕಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಅಂತಿಮಗೊಳಿಸಲಾಗುವುದು.
ಭಾರತ-ನೇಪಾಳ ಪಾಲುದಾರಿಕೆಯು ಎಲ್ಲಾ ಹಂತಗಳಲ್ಲಿ ಆಳವಾದ ನಂಬಿಕೆ, ಸ್ನೇಹ, ಪರಸ್ಪರ ಗೌರವ ಮತ್ತು ತಿಳಿವಳಿಕೆಯ ಮೇಲೆ ನಿರ್ಮಿತವಾಗಿದೆ. ಇದು ಜನರ ನಡುವಿನ ಬಲವಾದ ಸಂಪರ್ಕಗಳು ಹಾಗೂ ನಿಕಟ ಆರ್ಥಿಕ ಮತ್ತು ಅಭಿವೃದ್ಧಿ ಸಹಕಾರದಿಂದ ಮತ್ತಷ್ಟು ಬಲಗೊಂಡಿದೆ. ಈ ಭೇಟಿಯು ಉಭಯ ದೇಶಗಳ ನಡುವಿನ ನಿಯಮಿತ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯವನ್ನು ಮತ್ತು ಅದನ್ನು ಮತ್ತಷ್ಟು ಮುನ್ನಡೆಸುವ ಉಭಯ ದೇಶಗಳ ಬದ್ಧತೆಯನ್ನು ಪುನರುಚ್ಚರಿಸಿದೆ.
*****