Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಸ್ಟೇಟ್ ಬ್ಯಾಂಕ್ ನ ಸಹವರ್ತಿ ಬ್ಯಾಂಕ್ ಗಳ ವಿಲೀನಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಹವರ್ತಿ ಬ್ಯಾಂಕ್ ಗಳಾದ ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್ ಅನ್ನು ತನ್ನ ವಶ ಮಾಡಿಕೊಳ್ಳಲು ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಅನುಮೋದನೆ ನೀಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಸಹವರ್ತಿ ಬ್ಯಾಂಕ್) ಕಾಯಿದೆ 1959 ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಕಾಯಿದೆ 1956 ಹಿಂಪಡೆಯಲು ಮಸೂದೆಯೊಂದನ್ನು ಮಂಡಿಸಲೂ ಸಂಪುಟ ತನ್ನ ಅನುಮೋದನೆ ನೀಡಿದೆ.

ಈ ವಿಲೀನದ ಪರಿಣಾಮವಾಗಿ, ಹೆಚ್ಚಿನ ಕಾರ್ಯನಿರ್ವಹಣಾ ಸಾಮರ್ಥ್ಯ ಮತ್ತು ವೆಚ್ಚನಿಧಿಯ ಇಳಿಕೆಯ ಸಂಯೋಜನೆಯಿಂದ ಸಂಚಯಿತ ಉಳಿತಾಯ ಮೊದಲ ವರ್ಷ ಸುಮಾರು 1000 ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಈ ಸಹವರ್ತಿ ಬ್ಯಾಂಕ್ ಗಳ ಹಾಲಿ ಗ್ರಾಹಕರು ಎಸ್.ಬಿ.ಐ.ನ ಜಾಗತಿಕ ಜಾಲದ ಸೌಲಭ್ಯದ ಲಾಭ ಪಡೆಯಲಿದ್ದಾರೆ. ಈ ವಿಲೀನವು ಹಣ ಹರಿವಿನ ಬಗ್ಗೆ ಆರು ಬ್ಯಾಂಕ್ ಗಳಿಂದ ಪ್ರತ್ಯೇಕ ನಿಗಾದ ಬದಲು ಗಮನಾರ್ಹ ನಿಗಾ ಮತ್ತು ನಿಯಂತ್ರಣದ ಮೂಲಕ ಉನ್ನತ ಮೌಲ್ಯದ ಸಾಲದ ಅಪಾಯದ ತಡೆಗೆ ಉತ್ತಮ ಕಾರ್ಯ ನಿರ್ವಹಣೆಗೂ ಕಾರಣವಾಗುತ್ತದೆ.

ಭಾರತೀಯ ಸ್ಟೇಟ್ ಬ್ಯಾಂಕ್ ಕಾಯಿದೆ 1955ರ ಸೆಕ್ಷನ್ 35ರ ಅಡಿಯಲ್ಲಿನ ಈ ವಿಲೀನ ಬಲವಾದ ವಿಲೀನ ಈಕ್ವಿಟಿಯ ಸೃಷ್ಟಿಗೂ ಕಾರಣವಾಗುತ್ತದೆ. ಇದು ಸಹವರ್ತಿ ಬ್ಯಾಂಕ್ ಗಳು ಎದುರಿಸುತ್ತಿರುವ ಭೌಗೋಳಿಕ ಸಾಂದ್ರತೆಯ ಅಪಾಯವನ್ನೂ ತಗ್ಗಿಸುತ್ತದೆ. ಇದು ಸುಧಾರಿತ ಕಾರ್ಯ ನಿರ್ವಹಣಾ ಸಾಮರ್ಥ್ಯವನ್ನು ಮತ್ತು ಆರ್ಥಿಕತೆಯ ಅಳತೆಗೋಲನ್ನು ಸೃಷ್ಟಿಸುತ್ತದೆ. ಇದರ ಫಲವಾಗಿ ಸುಧಾರಿತ ಅಪಾಯದ ನಿರ್ವಹಣೆ ಮತ್ತು ಏಕೀಕೃತ ಖಜಾನೆ ಕಾರ್ಯಾಚರಣೆಯನ್ನೂ ರೂಪುಗೊಳ್ಳುತ್ತದೆ.

ಸಾರ್ವಜನಿಕ ವಲಯದ ಬ್ಯಾಂಕ್ ಗಳ ಘನೀಕರಣದ ಮೂಲಕ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಸ್ಟೇಟ್ ಬ್ಯಾಂಕ್ ನ ಸಹವರ್ತಿ ಬ್ಯಾಂಕ್ ಗಳ ವಶ ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ಸರ್ಕಾರದ ಇಂದ್ರಧನುಷ್ ಕ್ರಿಯಾ ಯೋಜನೆಯನ್ನು ಕಾರ್ಯಗತಗೊಳಿಸುವುದಾಗಿದೆ ಮತ್ತು ಇದು ಬ್ಯಾಂಕಿಂಗ್ ವಲಯವನ್ನು ಬಲಪಡಿಸುವ ಮತ್ತು ಅದರ ಸಾಮರ್ಥ್ಯವನ್ನು ಸುಧಾರಿಸುವ ಹಾಗೂ ಲಾಭದತ್ತ ಕೊಂಡೊಯ್ಯುವುದೆಂದು ನಿರೀಕ್ಷಿಸಲಾಗಿದೆ.

***