ಪಿಎಂಇಂಡಿಯಾ
ಸೈಪ್ರಸ್ ನ ಘನತೆವೆತ್ತ ಅಧ್ಯಕ್ಷರೇ,
ಗೌರವಾನ್ವಿತ ಗಣ್ಯರೇ
ಮಾಧ್ಯಮದ ಮಿತ್ರರೇ,
ಘನತೆವೆತ್ತರೇ ನಿಮ್ಮ ಪ್ರಥಮ ಭಾರತ ಭೇಟಿಯ ಸಂದರ್ಭದಲ್ಲಿ ನಿಮ್ಮನ್ನು ಸ್ವಾಗತಿಸಲು ಹರ್ಷಿತನಾಗಿದ್ದೇನೆ. ಪ್ರತಿಯೊಬ್ಬ ಸೈಪ್ರಸ್ ಅಧ್ಯಕ್ಷರ ಹೃದಯದಲ್ಲೂ ಭಾರತದ ಬಗ್ಗೆ ವಿಶೇಷ ಸ್ಥಾಪನವಿದೆ. ಬಹುತೇಕ ಅವರೆಲ್ಲರೂ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತದ ಬಲವಾದ ಬೆಂಬಲಿಗ ಹಾಗೂ ಶ್ರೇಷ್ಠ ಗೆಳೆಯನನ್ನು ಸ್ವಾಗತಿಸುವುದು ನನಗೆ ಸಂದ ಗೌರವ. ಸೈಪ್ರಸ್ ಮತ್ತು ಭಾರತ ಎರಡೂ ಪುರಾತನ ನಾಗರಿಕತೆಯ ಶ್ರೀಮಂತಿಕೆಯನ್ನು ಹಂಚಿಕೊಂಡಿವೆ ಮತ್ತು ಸಹಸ್ರಮಾನಗಳಿಂದ ನಮ್ಮ ನಾಗರಿಕತೆ ಪರಸ್ಪರರ ಮೇಲೆ ಪ್ರಭಾವಬೀರಿದೆ. ಆಧುನಿಕ ಕಾಲದಲ್ಲಿ ನಮ್ಮ ಬಾಂಧವ್ಯ ಸ್ವಾತಂತ್ರ್ಯಪೂರ್ವಕ್ಕೆಹೋಗುತ್ತದೆ, ಆಗ ನಮ್ಮ ಪೂರ್ವಜರು ಸೈಪ್ರಸ್ ನ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಿದ್ದರು. ಮತ್ತು ಸೈಪ್ರಸ್ ಕೂಡ ಸದಾ ಭಾರತದೊಂದಿಗೆ ಆದರ ಮತ್ತು ಗೆಳೆತನ ಹೊಂದಿದೆ. ಭಾರತ ಎಲ್ಲ ಗಂಭೀರ ವಿಷಯಗಳಲ್ಲಿ ಸೈಪ್ರಸ್ ನೊಂದಿಗೆ ನಿಂತಿದೆ. 1974ರಲ್ಲಿ ಸೈಪ್ರಸ್ ಗಣರಾಜ್ಯದ ಸಾರ್ವಭೌಮತೆ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆ ವಿಷಯದಲ್ಲಿ ಭಾರತ ದೃಢ ನಿಲುವು ತೆಗೆದುಕೊಂಡಿತ್ತು. ಸೈಪ್ರಸ್ ನಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಭಾರತ ಯೋಧರ ಕೊಡುಗೆ ನೀಡಿತ್ತು. ಭಾರತದ ಮೂರೂ ಪಡೆಗಳ ಕಮಾಂಡರ್ ಗಳು ಈ ಸಾಮರ್ಥ್ಯದಲ್ಲಿ ಸೇವೆ ಸಲ್ಲಿಸಿದ್ದರು. ಮತ್ತು ಅವರೆಲ್ಲರನ್ನೂ ಸೈಪ್ರಸ್ ನಲ್ಲಿ ಹೆಮ್ಮೆಯಿಂದ ಸ್ಮರಿಸಲಾಗುತ್ತದೆ ಎಂಬುದನ್ನು ತಿಳಿದು ನನಗೆ ಹೃದಯ ತುಂಬಿ ಬಂತು.
ಘನತೆವೆತ್ತರೆ,
ಸೈಪ್ರಸ್ ಸಮಸ್ಯೆಯನ್ನು ಪರಿಹರಿಸಲು ನಿಮ್ಮ ಉಪಕ್ರಮದ ಅರಿವು ನನಗಿದೆ. ನೀವು ಶಾಂತಿ, ಅಭಿವೃದ್ಧಿ ಮತ್ತು ಭದ್ರತೆಯ ಹೊಸ ಶಕೆಯನ್ನು ತರಲು ಮುಂದಡಿಯ ಪ್ರಯತ್ನ ಮಾಡುತ್ತಿದ್ದೀರಿ. ಕೇವಲ ಸೈಪ್ರಸ್ ಗಾಗಿ ಮಾತ್ರವಲ್ಲ, ಆದರ ಜತೆಗೆ ಇಡೀ ವಲಯಕ್ಕೆ ಪ್ರಯತ್ನಶೀಲರಾಗಿದ್ದೀರಿ. ನಿಮ್ಮ ಈ ಪ್ರಯತ್ನದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ನಿಮ್ಮ ನಾಯಕತ್ವದಲ್ಲಿ ಸೈಪ್ರಸ್ ಇತ್ತೀಚಿನ ಹಣಕಾಸಿನ ಮತ್ತು ಬ್ಯಾಂಕ್ ಸವಾಲುಗಳಿಂದ ಯಶಸ್ವಿಯಾಗಿ ಹೊರಬಂದಿದೆ. 2016ರಲ್ಲಿ ಯುರೋ ವಲಯದಲ್ಲಿ ಅತಿ ಹೆಚ್ಚಿನ ವೃದ್ಧಿದರವನ್ನು ದಾಖಲಿಸಿದೆ. ಘನತೆವೆತ್ತರೆ ಈ ಬಿಕ್ಕಟ್ಟಿನಿಂದ ನಿಮ್ಮ ದೇಶವನ್ನು ಹೊರತರುವ ನಿಮ್ಮ ದೃಷ್ಟಿಕೋನ ಮತ್ತು ನಾಯಕತ್ವ ಮತ್ತು ಆರ್ಥಿಕ ಪ್ರಗತಿಯ ಪಥದಲ್ಲಿ ಸಾಗುವುದನ್ನು ನಾವು ಶ್ಲಾಘಿಸುತ್ತೇವೆ.
ಸ್ನೇಹಿತರೆ,
ಇಂದು ನಾನು ಮತ್ತು ಅಧ್ಯಕ್ಷರು ವಿವರವಾದ ಚರ್ಚೆ ನಡೆಸಿದ್ದೇವೆ. ನಮ್ಮ ಮಾತುಕತೆಯಲ್ಲಿ ಪೂರ್ಣ ಶ್ರೇಣಿಯ ದ್ವಿಪಕ್ಷೀಯ ಬಾಂಧವ್ಯವೂ ಸೇರಿತ್ತು. ನಾವು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಮಹತ್ವದ ವಿಚಾರಗಳ ಬಗ್ಗೆಯೂ ಚರ್ಚಿಸಿದ್ದೇವೆ. ಸೈಪ್ರಸ್ ಮತ್ತು ಭಾರತ ಆಪ್ತವಾದ ಆರ್ಥಿಕ ಬಾಂಧವ್ಯವವನ್ನೂ ಹೊಂದಿವೆ. ಸೈಪ್ರಸ್ ಭಾರತದಲ್ಲಿ 8ನೇ ದೊಡ್ಡ ಹೂಡಿಕೆಯ ರಾಷ್ಟ್ರವಾಗಿದೆ. ಕಳೆದ ವರ್ಷ ನಮ್ಮ ಬಂಡವಾಳ ಮತ್ತು ಹೂಡಿಕೆಯ ಸಂಪರ್ಕಗಳನ್ನು ಉತ್ತೇಜಿಸಲು ನಾವು ದ್ವಿ ತೆರಿಗೆ ತಪ್ಪಿಸುವ ಒಪ್ಪಂದವನ್ನು ಪರಿಷ್ಕರಿಸಿದ್ದೇವೆ. ಅಧ್ಯಕ್ಷರು ಹಾಗೂ ನಾನು ಸೈಪ್ರಸ್ ನ ಉದ್ದಿಮೆದಾರರಿಗೆ ಭಾರತದಲ್ಲಿ ಅದ್ಭುತ ಹೂಡಿಕೆಯ ಅವಕಾಶ ನೀಡಲು ಒಪ್ಪಿದ್ದೇವೆ. ನಮ್ಮ ಎರಡೂ ರಾಷ್ಟ್ರಗಳ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳು ನಮ್ಮ ಸರ್ಕಾರ ಆರಂಭಿಸಿರುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗ ಮೂಲಕ ಆಕರ್ಷಕ ಪಾಲುದಾರಿಕೆಯನ್ನು ರೂಪಿಸಬಹುದಾಗಿದೆ. ಸೈಪ್ರಸ್ ನ ಸುಂದರ ಭೂರಮೆ ಮತ್ತು ‘ಇನ್ಕ್ರೆಡಿಬಲ್ ಇಂಡಿಯಾ’ದ ವಿಶಾಲ ದಿಗಂತಗಳು ನಮ್ಮ ಎರಡೂ ದೇಶಗಳಲ್ಲಿ ಪ್ರವಾಸೋದ್ಯಮ ಉತ್ತೇಜನದ ಮೂಲಗಳಾಗಿವೆ.
ಸ್ನೇಹಿತರೆ,
ಭಾರತ ಮತ್ತು ಸೈಪ್ರಸ್ ಎರಡೂ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ ಶೀಘ್ರ ಸುಧಾರಣೆ ತರಬೇಕೆಂಬ ಸಮಾನ ಉದ್ದೇಶವನ್ನು ಹೊಂದಿವೆ. ನಾವಿಬ್ಬರೂ ಸುಧಾರಿತ ಭದ್ರತಾ ಮಂಡಳಿ, ವಿಶ್ವ ಹೇಗೆದೆಯೋ ಅದರ ಪ್ರತಿಬಿಂಬವಾಗಬೇಕೇ ಹೊರತು ಹಿಂದೆ ಹೇಗಿತ್ತೋ ಹಾಗಲ್ಲ, ಇಂದು ವಿಶ್ವ ಎದುರಿಸುತ್ತಿರುವ ಸಂಕೀರ್ಣ ಸವಾಲುಗಳ ಶ್ರೇಣಿಯನ್ನು ಎದುರಿಸುವುದು ಅಗತ್ಯವಾಗಿದೆ. ಘನತೆವೆತ್ತರೇ, ಈ ನಿಟ್ಟಿನಲ್ಲಿ ನಾನು ವಿಶ್ವಸಂಸ್ಥೆಯ ವಿಸ್ತರಿತ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ನಿಮ್ಮ ಬೆಂಬಲವನ್ನು ಆತ್ಮೀಯವಾಗಿ ಅಭಿನಂದಿಸುತ್ತೇನೆ. ನಾನು ಮತ್ತು ಅಧ್ಯಕ್ಷರು ಇತರ ಅಂತರ ಸರ್ಕಾರೀಯ ಸಂಸ್ಥೆಗಳು ಮತ್ತು ಆಡಳಿತದಲ್ಲಿ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ಚರ್ಚಿಸಿದ್ದೇವೆ.
ಸ್ನೇಹಿತರೆ,
ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಭಯೋತ್ಪಾದನೆ ಒಡ್ಡಿರುವ ಬೆದರಿಕೆಯನ್ನು ಹತ್ತಿಕ್ಕಲು ಸೈಪ್ರಸ್ ತನ್ನ ಸ್ಥಳ ನೀಡಿದೆ. ಭಾರತವು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಸೆಣಸುತ್ತಿದೆ. ನಮ್ಮ ವಲಯದಲ್ಲಿ ಹಿಂಸಾಚಾರದ ಈ ಕಾರ್ಖಾನೆಗಳಿಗೆ ಆಶ್ರಯ ನೀಡುತ್ತಿರುವ, ಬೆಂಬಲ ನೀಡುತ್ತಿರುವ, ಭಯೋತ್ಪಾದನೆ ಹುಟ್ಟು ಹಾಕುತ್ತಿರುವ ದೇಶಗಳ ವಿರುದ್ಧ ನಿರ್ಣಾಯಕವಾಗಿ ಎಲ್ಲ ದೇಶಗಳೂ ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವನ್ನೂ ನಾವು ಒಪ್ಪಿಕೊಂಡಿದ್ದೇವೆ. ಅಧ್ಯಕ್ಷರು ಮತ್ತು ನಾನು ಅಂತಾರಾಷ್ಟ್ರೀಯ ಭಯೋತ್ಪಾದನೆಯ ಹತ್ತಿಕ್ಕುವ ಕುರಿತಂತೆ ಅತಿ ಶೀಘ್ರ ಸಮಗ್ರ ಒಪ್ಪಂದಕ್ಕೆ ಜಾಗತಿಕ ಸಮಗ್ರ ಕಾನೂನು ಚೌಕಟ್ಟು ಸೃಷ್ಟಿಸುವ ಅಗತ್ಯದ ಕುರಿತೂ ಚರ್ಚಿಸಿದ್ದೇವೆ.
ಘನತೆವೆತ್ತರೇ,
ನಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗುವ ಬಲವಾದ ಬದ್ಧತೆಯನ್ನು ನಾನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಇಂದು ನಾವು ನಡೆಸಿದ ಚರ್ಚೆ ಮತ್ತು ಕೈಗೊಂಡ ನಿರ್ಣಯಗಳು ನಮ್ಮ ಪಾಲುದಾರಿಕೆಗೆ ಹೊಸ ದಿಕ್ಕು ನೀಡಿ ಮತ್ತು ಆಳಗೊಳಿಸುತ್ತವೆ ಎಂಬ ವಿಶ್ವಾಸ ನನಗಿದೆ. ನಾನು ಮತ್ತೊಮ್ಮೆ ನಿಮ್ಮನ್ನು ಭಾರತಕ್ಕೆ ಸ್ವಾಗತಿಸುತ್ತೇನೆ ಮತ್ತು ಫಲಪ್ರದ ಮತ್ತು ಉತ್ಪಾದಕ ವಾಸ್ತವ್ಯವನ್ನು ಹಾರೈಸುತ್ತೇನೆ.
ಧನ್ಯವಾದಗಳು.
ತುಂಬಾ ತುಂಬಾ ಧನ್ಯವಾದಗಳು
AKT/NT
PM @narendramodi and President @AnastasiadesCY held talks in New Delhi. Both leaders discussed strengthening India-Cyprus ties. pic.twitter.com/fOBsUx37Cq
— PMO India (@PMOIndia) April 28, 2017