Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಮುಖ ಮೂಲಸೌಕರ್ಯ ವಲಯದ ನಿರ್ವಹಣೆಯ ಪರಾಮರ್ಶೆ ನಡೆಸಿದ ಪ್ರಧಾನಿ

ಪ್ರಮುಖ ಮೂಲಸೌಕರ್ಯ ವಲಯದ ನಿರ್ವಹಣೆಯ ಪರಾಮರ್ಶೆ ನಡೆಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಸೋಮವಾರ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುಚ್ಛಕ್ತಿ, ನವೀಕರಿಸಬಹುದಾದ ಇಂಧನ ಹಾಗೂ ವಸತಿ ಸೇರಿದಂತೆ ಪ್ರಮುಖ ಮೂಲಸೌಕರ್ಯ ವಲಯದ ಪ್ರಗತಿ ಪರಿಶೀಲನೆ ನಡೆಸಿದರು. ಏಪ್ರಿಲ್ ಕೊನೆಯ ವಾರ ಸಂಪರ್ಕ ಸಂಬಂಧಿತ ಮೂಲಸೌಕರ್ಯ ವಲಯದ ಪರಾಮರ್ಶೆಯ ನಂತರ ನಡೆದ ಈ ಪರಾಮರ್ಶೆ ಸಭೆ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ಸಭೆಯಲ್ಲಿ ಪಿ.ಎಂ.ಓ. ಮತ್ತು ನೀತಿ ಆಯೋಗ ಹಾಗೂ ಭಾರತ ಸರ್ಕಾರದ ಎಲ್ಲ ಮೂಲಸೌಕರ್ಯ ಸಚಿವಾಲಯಗಳ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.

ನೀತಿ ಆಯೋಗದ ಸಿಇಓ ಪ್ರಾತ್ಯಕ್ಷಿಕೆ ಪ್ರದರ್ಶಿಸಿದ ಸಂದರ್ಭದಲ್ಲಿ, ನವೀಕರಿಸಬಹುದಾದ ಇಂಧನ ಉತ್ಪಾದನೆ, ಕೈಗೆಟಕುವ ದರದ ಮತ್ತು ಗ್ರಾಮೀಣ ವಸತಿ, ಎಲ್.ಇ.ಡಿ. ಬಲ್ಬ್ ಸೇರಿದಂತೆ ಹಲವು ವಲಯಗಳಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದ ಈವರೆಗೆ 1.98 ಕೋಟಿ ಬಿ.ಪಿ.ಎಲ್. ಕುಟುಂಬಗಳಿಗೆ ಲಾಭವಾಗಿದೆ. ಪ್ರಾಥಮಿಕ ಇಂಧನ ಮಿಶ್ರಣಕ್ಕೆ ಅನಿಲದ ಕೊಡುಗೆ ಶೇ.8ರಷ್ಟು ಹೆಚ್ಚಳವಾಗಿದೆ. 81 ನಗರಗಳನ್ನು ಅನಿಲ ವಿತರಣೆ ಜಾಲದೊಳಗೆ ತರಲಾಗಿದೆ ಎಂದು ತಿಳಿಸಲಾಯಿತು.

ಪ್ರಧಾನಮಂತ್ರಿಯವರು ಎಥೆನಾಲ್ ಮಿಶ್ರಣ ಮತ್ತು ಕಾರ್ಯವಿಧಾನದ ವಿಕಸನದಂಥ ಪ್ರಕ್ರಿಯೆಗಳಿಂದ ರೈತರಿಗೆ ಹೆಚ್ಚಿನ ಲಾಭ ಒದಗಿಸುವಂತೆ ಕರೆ ನೀಡಿದರು. 2ನೇ ಪೀಳಿಗೆಯ ಜೈವಿಕ ಎಥೆನಾಲ್ ಶುದ್ಧೀಕರಣ ಘಟಕಗಳ ಸ್ಥಾಪನೆಯನ್ನು ಚುರುಕುಗೊಳಿಸಿ, ಕೃಷಿ ತ್ಯಾಜ್ಯವನ್ನು ಈ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

13,000ಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯುತ್ ಒದಗಿಸುವ ಮೂಲಕ ಗ್ರಾಮೀಣ ವಿದ್ಯುದ್ದೀಕರಣ ಕಾರ್ಯಕ್ರಮ ವೇಗವಾಗಿ ಸಾಗುತ್ತಿದ್ದು, 1000 ದಿನಗಳಲ್ಲಿ 18,452 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಸರಿದಾರಿಯಲ್ಲಿ ಸಾಗಿದೆ. ಸುಮಾರು 22 ಲಕ್ಷ ಗ್ರಾಮೀಣ ಬಿಪಿಎಲ್ ಕುಟುಂಬಗಳಿಗೆ 2016-17ನೇ ಸಾಲಿನಲ್ಲಿ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಸುಮಾರು 40 ಕೋಟಿ ಎಲ್.ಇ.ಡಿ. ಬಲ್ಬ್ ಗಳನ್ನು ಇದೇ ಅವಧಿಯಲ್ಲಿ ಪೂರೈಸಲಾಗಿದೆ. ಒಟ್ಟು ಅಂತರ ಪ್ರಾದೇಶಿಕ ಸರಬರಾಜು ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, 2014ರ ಮೇಯಿಂದ 2017ರ ಏಪ್ರಿಲ್ ವರೆಗೆ 41 ಗಿಗಾ ವ್ಯಾಟ್ ಸರಬರಾಜು ಸಾಮರ್ಥ್ಯ ಸೇರ್ಪಡೆ ಮಾಡಲಾಗಿದೆ.
ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವು ಕಳೆದ ವಿತ್ತೀಯ ವರ್ಷದಲ್ಲಿ ಶೇ.24.5ರಷ್ಟು ಹೆಚ್ಚಳದೊಂದಿಗೆ 57 ಗಿಗಾ ವ್ಯಾಟ್ ಮೀರಿದೆ. 17ರ ಆರ್ಥಿಕ ವರ್ಷದಲ್ಲಿ ಸೌರ ಇಂಧನ ಸಾಮರಥ್ಯ ಸೇರ್ಪಡೆ ಹಿಂದೆಂದಿಗಿಂತಲೂ ಶೇ.81ರಷ್ಟು ಹೆಚ್ಚಾಗಿದೆ. ಸೌರ ಮತ್ತು ಪವನ ವಿದ್ಯುತ್ ಗೆ ಗ್ರಿಡ್ ಆದ್ಯತೆ ಸಾಧಿಸಿದ್ದು, ಅದರ ದರ ಪ್ರತಿ ಗಂಟೆಗೆ ಪ್ರತಿ ಕಿಲೋ ವ್ಯಾಟ್ ಗೆ 4 ರೂಪಾಯಿಗಿಂತ ಕಡಿಮೆ ಇದೆ. ಕೆಲವು ಮಾದರಿ ಸೌರ ನಗರಗಳ ಸ್ಥಾಪನೆ ಮಾಡಿ, ಅಲ್ಲಿ ಸಂಪೂರ್ಣವಾಗಿ ಸೌರ ವಿದ್ಯುತ್ ಮೂಲಕವೇ ಅಗತ್ಯ ಪೂರೈಸುವಂತೆ ಪ್ರಧಾನಮಂತ್ರಿಯವರು ಕರೆ ನೀಡಿದರು. ಅದೇ ರೀತಿಯಲ್ಲಿ ಕೆಲವು ಪ್ರದೇಶಗಳನ್ನು ಸೀಮೆಎಣ್ಣೆ ಮುಕ್ತ ಮಾಡಲು ಪ್ರಯತ್ನಿಸುವಂತೆ ತಿಳಿಸಿದರು.

ಉದ್ಯೋಗ ಸೃಷ್ಟಿಗಾಗಿ ಮತ್ತು ನವೀಕರಿಸಬಹುದಾದ ಇಂಧನದ ಗರಿಷ್ಠ ಲಾಭ ಪಡೆದುಕೊಳ್ಳಲು ಸೌರ ಉಪಕರಣಗಳ ಉತ್ಪಾದನೆಗೆ ಆದ್ಯತೆ ನೀಡುವಂತೆ ಪ್ರಧಾನಿ ಪ್ರತಿಪಾದಿಸಿದರು.

ಪ್ರಧಾನಮಂತ್ರಿ ವಸತಿ ಯೋಜನೆ ಅಡಿ, ಗ್ರಾಮೀಣ ಪ್ರದೇಶದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಲಾಗಿದೆ. ಯೋಜನೆಯ ಪ್ರಗತಿಯನ್ನು ಗಮನಿಸಲು ಐಟಿ ಮತ್ತು ಬಾಹ್ಯಾಕಾಶ ಆಧಾರಿತ ಆನ್ವಯಿಕಗಳನ್ನು ಬಳಸಿಕೊಳ್ಳಲಾಗುತ್ತಿದೆ. 32 ಲಕ್ಷಕ್ಕೂ ಹೆಚ್ಚು ಮನೆಗಳನ್ನು 17ನೇ ಹಣಕಾಸು ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪೂರ್ಣಗೊಳಿಸಲಾಗಿದೆ. ಈ ಯೋಜನೆಯಲ್ಲಿ ತೊಡಗಿಕೊಂಡಿರುವ ಗ್ರಾಮೀಣ ಮೇಸ್ಟ್ರಿಗಳಿಗೆ ಕೌಶಲ ಮತ್ತು ತರಬೇತಿ ನೀಡಿರುವ ಕುರಿತು ಪ್ರಧಾನಿ ವಿಚಾರಿಸಿದರು.

ವಿವಿಧ ಯೋಜನೆಗಳಿಗೆ ಸಮಗ್ರ ದೃಷ್ಟಿಕೋನ ಅಂದರೆ, ವಿದ್ಯುದೀಕರಣ, ಐಟಿ ಜಾಲ ಮತ್ತು ವಸತಿ ಇರಬೇಕೆಂದ ಪ್ರಧಾನಿಯವರು, 100 ಕಳಪೆ ನಿರ್ವಹಣೆಯ ಜಿಲ್ಲೆಗಳ ಪ್ರತಿ ಪ್ರಕರಣಕ್ಕೆ ಗಮನ ಹರಿಸುವಂತೆ ಸೂಚಿಸಿದರು. ಮುಂದಿನ ಪರಾಮರ್ಶೆ ಜಿಲ್ಲಾ ಮಟ್ಟದ ಸಮಸ್ಯೆಗಳ ಪರಿಶೀಲನೆಗೆ ಗಮನ ಹರಿಸಬೇಕು ಎಂದು ನಿರ್ದೇಶಿಸಿದರು, ಹೀಗಾದಾಗ ಕಳಪೆ ನಿರ್ವಹಣೆಯ ಜಿಲ್ಲೆಗಳ ಬಗ್ಗೆ ಉತ್ತಮ ನಿಗಾ ವಹಿಸಬಹುದು ಎಂದರು.

**

AKT/NT