Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಐಶ್ ಭಾಗ್ ರಾಮಲೀಲಾ ಮೈದಾನ ಲಕ್ನೋ ದಲ್ಲಿ ದಸರಾ ಮಹೋತ್ಸವಕ್ಕೆ ನೆರೆದ ಜನರನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಯವರು ಮಾಡಿದ ಭಾಷಣ .11-ಅಕ್ಟೋಬರ್ -2016

ಐಶ್ ಭಾಗ್ ರಾಮಲೀಲಾ ಮೈದಾನ ಲಕ್ನೋ ದಲ್ಲಿ ದಸರಾ ಮಹೋತ್ಸವಕ್ಕೆ ನೆರೆದ ಜನರನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಯವರು ಮಾಡಿದ ಭಾಷಣ .11-ಅಕ್ಟೋಬರ್ -2016

ಐಶ್ ಭಾಗ್ ರಾಮಲೀಲಾ ಮೈದಾನ ಲಕ್ನೋ ದಲ್ಲಿ ದಸರಾ ಮಹೋತ್ಸವಕ್ಕೆ ನೆರೆದ ಜನರನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಯವರು ಮಾಡಿದ ಭಾಷಣ .11-ಅಕ್ಟೋಬರ್ -2016


ಜೈ ಶ್ರೀರಾಮ್, ವಿಶಾಲ ಸಂಖ್ಯೆಯಲ್ಲಿ ಆಗಮಿಸಿರುವ ಪ್ರೀತಿಯ ಸೋದರ ಸೋದರಿಯರೆ.

ನಿಮ್ಮೆಲ್ಲರಿಗೂ ವಿಜಯದಶಮಿಯ ಅನೇಕಾನೇಕ ಶುಭಾಶಯಗಳು, ಇಂದು ನನಗೆ ಅತಿ ಪ್ರಾಚೀನ ಸಮಾರೋಹ ರಾಮಲೀಲಾದಲ್ಲಿ ಭಾಗಿಯಾಗುವ ಸೌಭಾಗ್ಯ ದೊರಕಿದೆ. ಹಿಂದುಸ್ಥಾನದ ಭೂಮಿಯ ಈ ಭೂಭಾಗವು ನಮಗೆ ಎರಡು ಪಿತೃಸಮಾನ ಜೀವಗಳನ್ನು ಕೊಟ್ಟಿದೆ. ಒಬ್ಬರು ಪ್ರಭು ರಾಮ್ ಮತ್ತು ಇನ್ನೊಬ್ಬರು ಶ್ರೀಕೃಷ್ಣ. ಈ ಭೂಮಿಯಿಂದಲೇ ಸಿಕ್ಕಿದ್ದಾರೆ. ಇಂತಹ ಭೂಮಿ ಮೇಲೆ ವಿಜಯದಶಮಿಯ ಹಬ್ಬದ ದಿನ ಬಂದು ನಮಿಸುವುದು, ಜೀವನದಲ್ಲಿ ಇದಕ್ಕಿಂತ ಸೌಭಾಗ್ಯ ಬೇರೆ ಯಾವುದು ಆಗಲು ಸಾಧ್ಯ?

ವಿಜಯದಶಮಿಯ ಹಬ್ಬವು ಸುಳ್ಳಿನ ಮೇಲೆ ಸತ್ಯದ ವಿಜಯದ ಹಬ್ಬವಾಗಿದೆ. ಅತ್ಯಾಚಾರವನ್ನು ಪರಾಜಿತಗೊಳಿಸುವ ಹಬ್ಬವಾಗಿದೆ. ನಾವು ರಾವಣನನ್ನು ಪ್ರತಿ ವರ್ಷ ಸುಡುತ್ತೇವೆ. ಕಡೆಗೆ ಇದರಿಂದ ನಾವು ಯಾವ ಪಾಠ ಕಲಿಯಬೇಕು? ರಾವಣನಿಗೆ ಬೆಂಕಿ ಹಚ್ಚುವಾಗ ನಾವು ಕೂಡ ನಮ್ಮೊಳಗಿನ ನಮ್ಮ ಸಾಮಾಜಿಕ ನಿರ್ಮಾಣ, ನಮ್ಮ ರಾಷ್ಟ್ರದ ಜೀವನದಲ್ಲಿ ಯಾವ್ಯಾವ ಕೆಡುಕುಗಳಿವೆಯೋ ಅವೆಲ್ಲವನ್ನೂ ಹೀಗೆ ನಾಶಗೊಳಿಸುತ್ತೇವೆ ಎಂಬ ಒಂದು ಸಂಕಲ್ಪವನ್ನು ಮಾಡಬೇಕು. ಪ್ರತಿ ವರ್ಷ ರಾವಣನನ್ನು ಸುಡುವಾಗ ನಮ್ಮಲ್ಲಿನ ದೋಷಗಳನ್ನು ನಾಶ ಮಾಡುವ ಸಂಕಲ್ಪವನ್ನು ಶಕ್ತಿಯುತವಾಗಿ ಮಾಡಿಕೊಳ್ಳಬೇಕು. ವಿಜಯದಶಮಿಯ ದಿನ ನಾವು ಎಷ್ಟು ಕೆಡುಕುಗಳನ್ನು ನಾಶ ಮಾಡಿದ್ದೇವೆಂಬ ಲೆಕ್ಕ ಪತ್ರ ಇಡಬೇಕು.

ಈಗ ಬಹುಶಃ ಆ ಕಾಲದ ರಾವಣನ ರೂಪ ಇರುವುದಿಲ್ಲ. ಈಗ ಬಹುಶಃ ಆ ಕಾಲದ ಹಾಗೆ ರಾಮ ಮತ್ತು ರಾವಣರ ಯುದ್ಧವೂ ಆಗುವುದಿಲ್ಲ. ಆದರೆ ನಮ್ಮೊಳಗೆ ಅಂತರದ್ವಂದ್ವಗಳ ಒಂದು ಕ್ರಿಯೆ ನಿರಂತರವಾಗಿ ನಡದಿರುತ್ತೆ. ಆದ್ದರಿಂದ ನಮ್ಮೊಳಗೆ ಕೂಡ ಈ ದಶಹರಾ ಶಬ್ದದ ಒಂದು ಸಂದೇಶವಿದೆ. ಏನೆಂದರೆ ನಾವು ನಮ್ಮ ಒಳಗಿನ ಹತ್ತು ಕೊರತೆಗಳನ್ನು ನೀಗಿ, ಅವುಗಳನ್ನು ಕೊನೆಗಾಣಿಸಿ ಎಂಬುದು. ದಾಸ್ ಹರಾ – ಹತ್ತನ್ನು ಸೋಲಿಸಿ. ಜೀವನದಲ್ಲಿ ಪತನಕ್ಕೆ ಕಾರಣವಾಗುವ ಎಷ್ಟೆಷ್ಟು ವಿಷಯಗಳಿವೆ, ಅವುಗಳ ಮೇಲೆ ವಿಜಯ ಸಾಧಿಸದೆ ಜೀವನ ಎಂದೂ ಸಫಲವಾಗುವುದಿಲ್ಲ. ಆದರೆ ಪ್ರತಿಯೊಬ್ಬನಿಗೂ ಇಂತಹ ಕೆಡುಕುಗಳನ್ನು ಸಮಾಪ್ತಿಗೊಳಿಸುವುದಕ್ಕೆ ಪ್ರಯತ್ನ ಮಾಡುವ ಸಾಮರ್ಥ್ಯ ದೇವರು ಕೊಟ್ಟಿದ್ದಾನೆ. ಇದರಲ್ಲಿ ಸಮಾಜದ ಸಂಬಂಧವಾಗಿ, ವ್ಯಕ್ತಿಯ ಸಂಬಂಧವಾಗಿ, ರಾಷ್ಟ್ರದ ಸಂಬಂಧವಾಗಿ, ನಮ್ಮೊಳಗೆ ವಿಚಾರಗಳ ರೂಪದಲ್ಲಿ, ಆಚರಣೆಗಳ ರೂಪದಲ್ಲಿ, ಗೋಜಲುಗಳ ರೂಪದಲ್ಲಿ., ಕೆಟ್ಟ ವಿಚಾರಗಳ ರೂಪದಲ್ಲಿ ಯಾವ ರಾವಣ ನೆಲೆಯೂರುತ್ತಿದ್ದಾನೋ ಅವನನ್ನು ನಾವುಗಳು ನಾಶ ಮಾಡಿಯೇ ಈ ರಾಷ್ಟ್ರವನ್ನು ಗೌರವಶಾಲಿಯಾಗಿ ಮಾಡಬೇಕು.

ನಾನು ಈ ಸಮಿತಿಗೆ ಆಭಾರಿಯಾಗಿದ್ದೇನೆ. ಏಕೆಂದರೆ ಲೋಕಮಾನ್ಯ ತಿಲಕರು ಗಣೇಶೋತ್ಸವವನ್ನು ಸಾರ್ವಜನಿಕ ಉತ್ಸವವಾಗಿ ಮಾಡಿ ಸಾಮಾಜಿಕ ಚೈತನ್ಯವನ್ನು ಜಾಗೃತ ಗೊಳಿಸಲು ಅವಕಾಶ ಕಲ್ಪಿಸಿ ಪರಿವರ್ತನೆ ತಂದರು. ನೀವು ಕೂಡ ಈ ರಾಮಲೀಲಾ ವೇದಿಕೆಯನ್ನು ಕೇವಲ ಪೂರ್ವ ಕಾಲದ ವಿಷಯಗಳನ್ನು ಭಕ್ತಿಭಾವದಿಂದ ಸ್ಮರಿಸುವುದಕ್ಕಷ್ಟೇ ಸೀಮಿತಗೊಳಿಸಿಲ್ಲ. ಒಂದು ಕುತೂಹಲಭರಿತ ಹೊಸ ಪೀಳಿಗೆಯು ನೋಡುವುದಕ್ಕೆ ಬರಲಿ, ಕಲಾವಿದರಿಗೆ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಮಾಡಿಲ್ಲ, ನೀವು ಪ್ರತಿ ರಾಮಲೀಲಾ ಸಮಯದಲ್ಲಿ ಸಮಾಜದಲ್ಲಿ ಯಾವ ಕೆಡುಕುಗಳಿವೆಯೋ, ಯಾವುದಾದರೂ ಕೆಡುಕುಗಳು ಇವೆಯೋ ಅಥವಾ ಸಮಾಜದಲ್ಲಿ ಯಾವುದಾದರೂ ಒಳಿತುಗಳು ಕಾಣಸಿಗುತ್ತದೆಯೋ ಆ ಒಳಿತುಗಳನ್ನು ಹುರಿದುಂಬಿಸುತ್ತಾ ಆ ಒಳಿತಿನ ಮೇಲೆ ಕೇಂದ್ರೀಕರಿಸುತ್ತಾ ಈ ರಾಮಲೀಲಾ ವೇದಿಕೆಯ ಪರಂಪರೆಯನ್ನು ಸ್ಥಿರವಾಗಿ ನಿಲ್ಲಿಸಿದ್ದೀರಿ. ನಾನು ಇದನ್ನು ಅದ್ಭುತವೆಂದು ಭಾವಿಸುತ್ತೇನೆ. ಇಡೀ ದೇಶದ ಜನತೆ ಪ್ರೇರಣೆ ಪಡೆಯುವಂತಹ ಕೆಲಸ ಈ ರಾಮಲೀಲಾ ಮೂಲಕ ನಡೆಯುತ್ತದೆ. ಆ ರಾಮಾಯಣದ ಪಾತ್ರಗಳ ಮೂಲಕ ಕೂಡ ನಾವು ಆಧುನಿಕ ಜೀವನಕ್ಕೆ ಸಂದೇಶ ಕೊಡಬಹುದು, ಆ ಸಾಮರ್ಥ್ಯವಿದೆ ಅದರಲ್ಲಿ! ಸಾವಿರಾರು ವರ್ಷಗಳಿಂದ ನಮ್ಮಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ತಲುಪಿಸಲು ಇದೇ ಎಲ್ಲಕ್ಕಿಂತ ದೊಡ್ಡ ವ್ಯವಸ್ಥೆಯಾಗಿರುವುದು ಈ ದೇಶದ ವಿಶೇಷತೆ. ಕಥೆಗಳ ಮೂಲಕ, ಕಲೆಯ ಮೂಲಕ ನಾವು ಈ ಪರಂಪರೆಯನ್ನು ಜೀವಂತವಾಗಿ ಇಟ್ಟಿದ್ದೇವೆ. ಇದು ಒಂದು ಸಮಾಜದ ಜೀವನದಲ್ಲಿ ಮಹತ್ವ ಉಳ್ಳದ್ದಾಗಿದೆ.

ಈ ಸಲ ವೇದಿಕೆಯ ವಿಷಯ ಆತಂಕವಾದ. ಆತಂಕವಾದವು ಮಾನವೀಯತೆಯ ವೈರಿ, ಪ್ರಭು ರಾಮ ಮಾನವತೆಯನ್ನು ಪ್ರತಿನಿಧಿಸುತ್ತಾರೆ, ಮಾನವೀಯತೆಯ ಆದರ್ಶಗಳನ್ನು ಪ್ರತಿನಿಧಿಸುತ್ತಾರೆ. ಮರ್ಯಾದೆಗಳ ಗೆರೆಗಳನ್ನು ಗುರುತಿಸುತ್ತಾರೆ. ವಿವೇಕ, ತ್ಯಾಗ, ತಪಸ್ಸುಗಳ ಒಂದು ಉದಾಹರಣೆಯನ್ನು ನಮ್ಮ ನಡುವೆ ಬಿಟ್ಟು ಹೋಗಿದ್ದಾರೆ. ಆತಂಕವಾದದ ವಿರುದ್ಧ ಎಲ್ಲರಿಗಿಂತ ಮೊದಲು ಯಾರು ಹೋರಾಡಿದ್ದರು? ಯಾರಾದರೂ ಸೈನಿಕನಾಗಿದ್ದನಾ ಏನು? ಯಾರಾದರೂ ನಾಯಕನಾಗಿದ್ದನಾ .. ಏನು? ಆತಂಕವಾದದ ವಿರುದ್ಧ ಎಲ್ಲರಿಗಿಂತ ಮೊದಲು ಯಾರಾದರೂ ಹೋರಾಡಿದ್ದರೆಂದರೆ ಅದು ಜಟಾಯು ಎಂಬುದಕ್ಕೆ ರಾಮಾಯಣ ಸಾಕ್ಷಿಯಾಗಿದೆ. ಓರ್ವ ನಾರಿಯ ಮರ್ಯಾದೆಗೋಸ್ಕರ ರಾವಣನಂತಹ ಸಾಮರ್ಥ್ಯ ವುಳ್ಳ ಬಲಶಾಲಿಯ ವಿರುದ್ಧ ಯುದ್ಧ ಮಾಡುತ್ತಾ ಇದ್ದ, ಹೋರಾಡುತ್ತಾ ಇದ್ದ. ಇವತ್ತಿಗೂ ಅಭಯದ ಸಂದೇಶ ಯಾರಾದರೂ ಕೊಡುತ್ತಾರೆಂದರೆ ಅದು ಜಟಾಯು. ಆದ್ದರಿಂದ ನಾವು ನೂರಿಪ್ಪತ್ತೈದು ಕೋಟಿ ದೇಶವಾಸಿಗಳು ಒಗ್ಗಟ್ಟಾಗಿ ಆತಂಕವಾದಿಗಳ ಪ್ರತಿಯೊಂದು ಚಟುವಟಿಕೆಯ ಮೇಲೆ ಗಮನ ಇಟ್ಟರೆ, ಜಾಗೃತರಾಗಿದ್ದರೆ ಆತಂಕವಾದಿಗಳು ಜಯಗಳಿಸುವುದು ಬಹಳ ಕಷ್ಟವಾಗುತ್ತದೆ.

ಈಗ 30-40 ವರ್ಷಗಳ ಹಿಂದೆ ಭಾರತವು ಆತಂಕವಾದದ ಕಾರಣದಿಂದ ನಮಗೆ ಆಗುತ್ತಿರುವ ತೊಂದರೆಗಳ ಚರ್ಚೆ ಮಾಡುತ್ತಿದ್ದಾಗ ನಮ್ಮ ಮಾತುಗಳು ವಿಶ್ವದ ಗಂಟಲಿನೊಳಗೆ ಇಳಿಯುತ್ತಿರಲಿಲ್ಲ. 92-93ರ ಘಟನೆ ನನಗೆ ನೆನಪಿದೆ, ನಾನು ಅಮೆರಿಕಾದ ರಾಜ್ಯ ಇಲಾಖೆಯ ರಾಜ್ಯ ಕಾರ್ಯದರ್ಶಿಯವರ ಜೊತೆ ಮಾತನಾಡುತ್ತಿದ್ದಾಗ ನಾನು ಆತಂಕವಾದದ ಚರ್ಚೆ ಮಾಡುತ್ತಿದ್ದೆ. ಆಗ ಅವರು ನನಗೆ ಇದು ನಿಮ್ಮ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದು ಹೇಳುತ್ತಿದ್ದರು. ನಾನು ಅವರಿಗೆ ಇದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಲ್ಲ, ಆತಂಕವಾದ ಬೇರೆ ಏನೋ ಆಗಿದೆ ಎಂದು ತಿಳಿಹೇಳುತ್ತಿದ್ದೆ, ಆದರೆ ಅದು ಅವರ ಗಂಟಲಿನಲ್ಲಿ ಇಳಿಯುತ್ತಿರಲಿಲ್ಲ. ಆದರೆ 26/11ರ ನಂತರ ಆತಂಕವಾದ ಎಷ್ಟು ಭಯಂಕರವಾಗಿದೆ ಎನ್ನುವುದು ಇಡೀ ಪ್ರಪಂಚದ ಗಂಟಲಿನೊಳಗೆ ಇಳಿದಿದೆ. ಯಾರಾದರೂ ತಾವು ಆತಂಕವಾದದಿಂದ ಬಿಡುಗಡೆ ಪಡೆದಿದ್ದೇವೆ ಎಂದುಕೊಂಡರೆ ಇಂತಹ ತಪ್ಪು ಕಲ್ಪನೆಯಲ್ಲಿರಬೇಡಿ, ಆತಂಕವಾದಕ್ಕೆ ಯಾವ ಗಡಿಯೂ ಇಲ್ಲ. ಆತಂಕವಾದಕ್ಕೆ ಯಾವ ಮರ್ಯಾದೆಯೂ ಇಲ್ಲ, ಅದು ಎಲ್ಲಿಗೆ ಬೇಕಾದರೂ ಹೋಗಿ ಯಾವುದೇ ಮಾನವಧರ್ಮದ ವಸ್ತುಗಳನ್ನು ನಾಶ ಮಾಡುವುದಕ್ಕೆ ಸಿದ್ಧವಾಗಿದೆ. ಆದ್ದರಿಂದ ವಿಶ್ವದ ಮಾನವತಾವಾದಿ ಶಕ್ತಿಗಳು ಆತಂಕವಾದದ ವಿರುದ್ಧ ಒಗ್ಗಟ್ಟಾಗುವುದು ಅನಿವಾರ್ಯವಾಗಿದೆ, ಆತಂಕವಾದ ಹುಟ್ಟಿಸುವವರನ್ನು ಬೇರು ಸಹಿತ ನಿರ್ಮೂಲ ಮಾಡುವ ಅಗತ್ಯ ಹುಟ್ಟಿದೆ. ಆತಂಕವಾದಕ್ಕೆ ರಕ್ಷಣೆ ಕೊಡುವ, ಆತಂಕವಾದಕ್ಕೆ ಸಹಾಯ ಮಾಡುವವರನ್ನು ಈಗ ಕ್ಷಮಿಸಲು ಸಾಧ್ಯವಿಲ್ಲ. ಇಡೀ ವಿಶ್ವವೇ ನಾಶವಾಗುತ್ತಿದೆ. ಎರಡು ದಿನಗಳಿಂದ ನಾವು ಟಿ.ವಿ.ಯಲ್ಲಿ ಸಿರಿಯಾದ ಒಂದು ಚಿಕ್ಕ ಹುಡುಗಿಯ ಚಿತ್ರವನ್ನು ನೋಡುತ್ತಿದ್ದೇವೆ. ಕಣ್ಣುಗಳಲ್ಲಿ ಕಣ್ಣೀರು ತುಂಬಿ ಬರುತ್ತದೆ. ಯಾವ ರೀತಿಯಲ್ಲಿ ನಿರ್ದೋಷಿಗಳ ಜೀವಗಳನ್ನು ತೆಗೆಯಲಾಗುತ್ತಿದೆ. ಇಂದು ನಾವು ರಾವಣನನ್ನು ವಧಿಸಿ ಅವನನ್ನು ಸುಡುತ್ತಿರುವಾಗ ಇಡೀ ವಿಶ್ವವು, ಭಾರತ ಮಾತ್ರವಲ್ಲ, ಕೇವಲ ನಾನು ಮತ್ತು ನೀವು ಅಲ್ಲ, ಇಡೀ ವಿಶ್ವದ ಮಾನವತಾವಾದಿ ಶಕ್ತಿಗಳು ಆತಂಕವಾದದ ವಿರುದ್ಧ ಒಂದಾಗಿ ಯುದ್ಧವನ್ನು ಮಾಡಲೇಬೇಕಾಗಿದೆ. ಆತಂಕವಾದವನ್ನು ನಾಶಗೊಳಿಸದಿದ್ದರೆ ಮಾನವೀಯತೆಯ ರಕ್ಷಣೆಯು ಸಾಧ್ಯವಿಲ್ಲ.

ಸೋದರ ಸೋದರಿಯರೆ, ಸಮಾಜದೊಳಗೆ ನಮ್ಮಲ್ಲಿ ಏನೇನು ಕೆಡುಕುಗಳಿವೆ ಅವುಗಳನ್ನು ಕೂಡಾ ನಾವು ನಾಶ ಮಾಡಬೇಕು. ವಿಜಯದಶಮಿಯಿಂದ ನಾವು ಈ ಪ್ರೇರಣೆಯನ್ನು ಪಡೆಯಬೇಕು. ರಾವಣ ರೂಪದ ಆ ಮಾತುಗಳು ಚಿಕ್ಕದಾಗಿರಬಹುದು ಆದರೆ ಅದು ಒಂದು ರೀತಿಯಲ್ಲಿ ರಾವಣ ರೂಪವೇ ಆಗಿದೆ. ದುರಾಚಾರ, ಭ್ರಷ್ಟಾಚಾರ ನಮ್ಮ ಸಮಾಜವನ್ನು ನಾಶ ಮಾಡುವ ಇವು ರಾವಣನಲ್ಲದೆ ಮತ್ತೇನು? ಇದನ್ನು ಮುಗಿಸಲು ನಾವು ದೇಶದ ನಾಗರಿಕರು ಸಂಕಲ್ಪಬದ್ದರಾಗಬೇಕು.

ಕೊಳಕು ಕೂಡಾ ರಾವಣನ ಒಂದು ಸಣ್ಣ ರೂಪವೇ. ಈ ಕೊಳಕು ನಮ್ಮ ಬಡ ಮಕ್ಕಳ ಜೀವಗಳನ್ನು ತೆಗೆದುಕೊಳ್ಳುತ್ತಿದೆ. ಕಾಯಿಲೆ ಬಡ ಕುಟುಂಬಗಳನ್ನು ನಾಶ ಮಾಡುತ್ತದೆ. ನಾವು ಕೊಳಕಿನಿಂದ ಮುಕ್ತಿ ಪಡೆದರೆ, ಕೊಳಕು ರೂಪದ ರಾವಣನಿಂದ ಮುಕ್ತಿ ಪಡೆದರೆ, ದೇಶದ ಕೋಟಿ-ಕೋಟಿ ಕುಟುಂಬಗಳನ್ನು ಅಲ್ಪಾಯುವಿನಲ್ಲೇ ಮೃತ್ಯುವಶವಾಗುವುದು ಹಾಗೂ ಕಾಯಿಲೆಗಳಿಗೆ ಬಲಿಯಾಗುವುದರಿಂದ ರಕ್ಷಿಸಬಹುದು, ಅನಕ್ಷರತೆ, ಕುರುಡು ನಂಬಿಕೆಗಳಂತೂ ನಮ್ಮ ಸಮಾಜವನ್ನು ಹಾಳು ಮಾಡುವ ದೋಷಗಳು. ಅವುಗಳಿಂದ ಮುಕ್ತಿ ಪಡೆಯಲು ನಾವು ಸಂಕಲ್ಪ ಮಾಡಬೇಕು.

ಇಲ್ಲಿ ನಾವು ಒಂದು ಕಡೆ ವಿಜಯದಶಮಿಯ ಹಬ್ಬ ಆಚರಿಸುತ್ತಿದ್ದೇವೆ. ಇದೇ ಸಮಯದಲ್ಲಿ ಇಡೀ ಪ್ರಪಂಚವು ಹೆಣ್ಣುಮಗುವಿನ ದಿನ ಆಚರಿಸುತ್ತಿದೆ. ಇಂದು ಹೆಣ್ಣುಮಗುವಿನ ದಿನ ನನ್ನನ್ನು ನಾನೇ ಕೇಳಿಕೊಳ್ಳ್ಳಲು ಇಷ್ಟಪಡುತ್ತೇನೆ. ಏನೆಂದರೆ ಸೀತಾ ಮಾತೆಯ ಮೇಲೆ ಅತ್ಯಾಚಾರ ಮಾಡಿದ ರಾವಣನನ್ನು ನಾವು ಪ್ರತಿ ವರ್ಷವು ಸುಡುತ್ತೇವೆಂಬ ಸಂಕಲ್ಪ ಮಾಡಿದ್ದಾಗಿದೆ ಮತ್ತು ಪೀಳಿಗೆಗಳು ಜೀವಂತವಾಗಿರುವವರೆಗೆ ರಾವಣನನ್ನು ಸುಡುತ್ತಲೇ ಇರುತ್ತಾರೆ. ಏಕೆಂದರೆ ಆತ ಸೀತಾಮಾತೆಯನ್ನು ಅಪಹರಿಸಿದ್ದ, ಆದರೆ ನಾವು ಇಡೀ ವಿಶ್ವವು ಹೆಣ್ಣುಮಗುವಿನ ದಿನ ಆಚರಿಸುತ್ತಿರುವಾಗ ಮಗ ಮತ್ತು ಮಗಳಲ್ಲಿ ಭೇದಭಾವ ಮಾಡಿ ತಾಯಿಯ ಗರ್ಭದಲ್ಲಿ ಎಷ್ಟೊಂದು ಸೀತಾಮಾತೆಯರನ್ನು ಮೃತ್ಯುವಿನ ವಶಕ್ಕೆ ಒಪ್ಪಿಸುತ್ತೇವಲ್ಲ, ನಮ್ಮೊಳಗಿರುವ ರಾವಣನನ್ನು ಯಾರು ನಾಶ ಮಾಡುತ್ತಾರೆ? ಇಂದಿಗೂ ಈ 21 ನೇ ಶತಮಾನದಲ್ಲೂ ತಾಯಿಯ ಗರ್ಭದಲ್ಲಿ ಹೆಣ್ಣು ಮಕ್ಕಳನ್ನು ಸಾಯಿಸಲಾಗುತ್ತೆಯೇ? ಅರೆ, ಒಬ್ಬ ಸೀತಾಗಾಗಿ ಜಟಾಯು ಬಲಿಯಾಗುತ್ತಾನೆಂದರೆ ನಮ್ಮ ಮನೆಗಳಲ್ಲಿ ಹುಟ್ಟುವ ಸೀತಾಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಮನೆಯಲ್ಲಿ ಮಗ ಹುಟ್ಟಿದಾಗ ಎಷ್ಟು ಸ್ವಾಗತ ಸನ್ಮಾನಗಳಾಗುತ್ತವೆಯೋ ಮಗಳು ಹುಟ್ಟಿದಾಗ ಅದ್ದಕ್ಕಿಂತಲೂ ಹೆಚ್ಚು ಸ್ವಾಗತ ಸನ್ಮಾನಗಳಾಗಬೇಕೆನ್ನುವ ಸ್ವಭಾವ ನಮ್ಮದಾಗಬೇಕು.

ಈ ಸಲದ ಒಲಿಂಪಿಕ್ಸ್ ನೋಡಿ, ನಮ್ಮ ದೇಶದ ಹೆಸರನ್ನು ಹೆಣ್ಣುಮಗಳು ಪ್ರಕಾಶಿಸಿದರು. ಈ ಮಗ -ಮಗಳು ಎಂಬ ಭೇದಭಾವ ನಮ್ಮಲ್ಲಿ ರಾವಣರೂಪೀ ಮನಃಸ್ಥಿತಿಯ ಅಂಶವಾಗಿದೆ. ವಿದ್ಯಾವಂತನಾಗಿರಲಿ, ಅವಿದ್ಯಾವಂತನಾಗಿರಲಿ, ಬಡವನಾಗಿರಲಿ, ಶ್ರೀಮಂತನಾಗಿರಲಿ, ಪಟ್ಟಣಿಗನಾಗಿರಲಿ, ಗ್ರಾಮಸ್ಥನಾಗಿರಲಿ, ಹಿಂದೂವಾಗಿರಲಿ, ಮುಸಲ್ಮಾನನಾಗಿರಲಿ, ಸಿಖ್ ಆಗಿರಲಿ, ಕ್ರ್ರಿಶ್ಚಿಯನ್ ಆಗಿರಲಿ, ಬೌದ್ಧನಾಗಿರಲಿ, ಯಾವುದೇ ಸಂಪ್ರದಾಯದವನಾಗಿರಲಿ ಯಾವುದೇ ರೀತಿಯ ಆರ್ಥಿಕ ಪರಿಸ್ಥಿತಿಯವರಾಗಿರಲಿ, ಯಾವುದೇ ಸಾಮಾಜಿಕ ಪರಿಸ್ಥಿತಿಯವರಾಗಿರಲಿ ಹೆಣ್ಣುಮಕ್ಕಳು ಸಮಾನರಾಗಿರಬೇಕು, ಮಹಿಳೆಯರ ಹಕ್ಕು ಸಮಾನವಾಗಿರಬೇಕು, ಯಾವುದೇ ಸಂಪ್ರದಾಯಕ್ಕೆ ಸೇರಿದವರಾಗಿದ್ದರೂ ಮಹಿಳೆಯರಿಗೆ ಈ 21ನೇ ಶತಮಾನದಲ್ಲಿ ನ್ಯಾಯ ಸಿಗಬೇಕು, ಯಾವುದೇ ಸಮಾಜಕ್ಕೆ ಸೇರಿದವರಾಗಿರಲಿ ಮಹಿಳೆಯರನ್ನು ಗೌರವಿಸುವ ಈ ಯುಗವನ್ನು ನಾವು ಸ್ವೀಕರಿಸಬೇಕು, ಹೆಣ್ಣುಮಕ್ಕಳಿಗೆ ಗೌರವವನ್ನು ಕೊಡಬೇಕು. ಹೆಣ್ಣುಮಕ್ಕಳನ್ನು ರಕ್ಷಿಸಬೇಕು, ನಮ್ಮೊಳಗೆ ಯಾವುದು ರಾವಣನ ರೂಪದಲ್ಲಿ ಹರಡಿಕೊಂಡಿದೆಯೋ ಅದರಿಂದ ಈ ದೇಶಕ್ಕೆ ನಾವು ಮುಕ್ತಿಯನ್ನು ಕೊಡಿಸಬೇಕು, ಆದ್ದರಿಂದ ಲಕ್ಷ್ಮಣನ ನಗರಕ್ಕೆ ಬಂದಾಗ ಗೋಸ್ವಾಮಿ ತುಲಸೀದಾಸರ ಭೂಮಿಗೂ ಬಂದಿದ್ದೇನೆ. ಶ್ರೀಕೃಷ್ಣನ ಜೀವನದಲ್ಲೂ ಯುದ್ಧ ಇತ್ತು, ಶ್ರೀರಾಮನ ಜೀವನದಲ್ಲೂ ಯುದ್ಧ ಇತ್ತು. ಆದರೆ ನಾವು ಯುದ್ಧದಿಂದ ಬುದ್ಧನ ಕಡೆಗೆ ಹೋಗುತ್ತೇವೆ. ಅಂತಹ ಜನರು ನಾವು. ಸಮಯದ ಕಟ್ಟುಪಾಡುಗಳಿಂದ ಪರಿಸ್ಥಿತಿಯ ಅಗತ್ಯಗಳಿಂದಾಗಿ ಯುದ್ಧವು ಆಗಾಗ ಅನಿವಾರ್ಯವಾಗುತ್ತದೆ. ಆದರೆ ನಮ್ಮೀ ಭೂಮಿಯ ಮಾರ್ಗ ಯುದ್ಧವಲ್ಲ, ಈ ಭೂಮಿಯ ಮಾರ್ಗ ಬುದ್ಧನದಾಗಿದೆ, ಈ ದೇಶ, ಈ ದೇಶವು ಯುದ್ಧಭೂಮಿಯಲ್ಲ ಗೀತವನ್ನು ಹೇಳಿದ ಸುದರ್ಶನ ಚಕ್ರಧಾರಿ ಮೋಹನನನ್ನು ಯುಗಪುರುಷ ಎಂದು ಮಾನ್ಯ ಮಾಡಿದೆ. ಇದೇ ದೇಶ ಚರಖಾಧಾರಿ ಮೋಹನರನ್ನು, ಯಾರು ಅಹಿಂಸೆಯ ಸಂದೇಶವನ್ನು ನೀಡಿದರೋ ಅವರನ್ನು ಯುಗಪುರುಷನೆಂದು ಮಾನ್ಯ ಮಾಡಿದೆ,. ಇದು ಈ ದೇಶದ ವಿಶೇಷತೆಯಾಗಿದೆ, ಅಂದರೆ ನಾವು ತಕ್ಕಡಿಯ ಎರಡು ತಟ್ಟೆಗಳನ್ನು ಸಮತೋಲ ಮಾಡುತ್ತಾ ನಡೆಯುವಂತಹ ಜನ. ಆದ್ದರಿಂದ ನಾವು ಯುದ್ಧಕ್ಕಿಂತ ಬುದ್ಧನ ಯಾತ್ರೆ ಮಾಡುವ ಜನ. ನಾವು ನಮ್ಮೊಳಗಿನ ರಾವಣನನ್ನು ನಾಶ ಮಾಡುವ ಸಂಕಲ್ಪ ಮಾಡುವ ಜನ. ನಮ್ಮ ದೇಶವನ್ನು ಸುಜಲಾಂ ಸುಫಲಾಂ ಮಾಡುವ ಸಂಕಲ್ಪ ಮಾಡಿ ಹೊರಟಿರುವ ಜನ.

ಇಂತಹ ಸಮಯದಲ್ಲಿ ಅತಿ ಪ್ರಾಚೀನ ಕಾಲದಲ್ಲಿ ರಾಮಲೀಲಾದ ರಂಗಮಂಟಪ ಇರುತ್ತಿದ್ದ ಕಡೆ ಅನೇಕ ಪೀಳಿಗೆಗಳ ಬಾಲಕರು ಒಮ್ಮೆ ರಾಮ ಮತ್ತು ಲಕ್ಷ್ಮಣನ ರೂಪದಲ್ಲಿ, ಮಾತೆ ಸೀತೆಯ ರೂಪದಲ್ಲಿ ಓಡಾಡಿರಬಹುದು. ಇದೇ ಸ್ಥಾನದಲ್ಲಿ ಅವರ ಪಾದದ ಧೂಳು ಬಿದ್ದಿರಬಹುದು. ಆ ಕ್ಷಣದಲ್ಲಿ ಅವರು ಮನುಷ್ಯರಾಗಿರುವುದಿಲ್ಲ: ಅವರು ಭಕ್ತಿಯಲ್ಲಿ ಲೀನರಾಗಿದ್ದಿರಬಹುದು, ಅವರು ಪಾತ್ರವಾಗಿ ಇರುತ್ತಿರಲಿಲ್ಲ. ಅವರು ಪರಮಾತ್ಮನ ರೂಪವಾಗಿರುತ್ತಾರೆ. ಜಾತಿವಾದವೆ ಆಗಿರಲಿ, ವಂಶ ವಾದವೆ ಆಗಿರಲಿ ಮೇಲು ಕೀಳು ಎಂಬ ಅನಿಷ್ಟ ವಿಷಯವೇ ಆಗಿರಲಿ, ಸಂಪ್ರದಾಯವಾದದ ಹುಚ್ಚೇ ಆಗಿರಲಿ ಈ ಎಲ್ಲಾ ಕೆಟ್ಟ ವಿಷಯಗಳು ಒಂದಲ್ಲ ಒಂದು ರೂಪದಲ್ಲಿ ಹರಡಿ ಬಿದ್ದಿರುವ ರಾವಣನ ರೂಪಗಳು. ಇದೇ ವೇದಿಕೆಯ ಮೇಲೆ ಬಂದು ಇವತ್ತು ಈ ಎಲ್ಲಾ ರಾವಣರನ್ನು ನಾಶಮಾಡಬೇಕು, ಇವುಗಳಿಂದ ಬಿಡುಗಡೆ ಪಡೆಯುವುದು, ಇವುಗಳನ್ನು ನಾಶ ಮಾಡುವುದು, ಒಂದೇ ಆತ್ಮದ ಹಿಂದುಸ್ತಾನ, ಒಂದೇ ಇಚ್ಛೆಯ ಹಿಂದುಸ್ತಾನ, ಸಮರಸದ ಹಿಂದುಸ್ತಾನ, ಈ ಕನಸನ್ನು ಸಾಕಾರಗೊಳಿಸುವ ಸಂಕಲ್ಪ ಮಾಡಿ ಈ ವಿಜಯದಶಮಿಯ ಪವಿತ್ರ ಹಬ್ಬದಂದು ನಾವು ಪ್ರಭು ರಾಮಜಿಯ ಆಶೀರ್ವಾದ ಸದಾ ಇರಲಿ, ಮಾನವೀಯತೆಯ ಮಾರ್ಗದಲ್ಲಿ ಸಾಗಲು ನಮಗೆ ಶಕ್ತಿ ಬರಲಿ, ಬುದ್ಧನ ಮಾರ್ಗ ನಮ್ಮ ಕಡೆಯ ಮಾರ್ಗವಾಗಲಿ ಎಂದು ಹಾರೈಸೋಣ.

ಈ ಒಂದು ಅಪೇಕ್ಷೆಯ ಜೊತೆಗೆ ನಿಮ್ಮೆಲ್ಲರಿಗೂ ವಿಜಯದಶಮಿಯ ಅನೇಕ ಶುಭಾಶಯಗಳು, ನನ್ನ ಜೊತೆ ಸೇರಿ ಪೂರ್ಣ ಶಕ್ತಿಯಿಂದ ಹೇಳಿ, ಜಯ ಶ್ರೀರಾಮ. ಧ್ವನಿ ದೂರದೂರದವರೆಗೂ ಹೋಗಬೇಕು, ಜಯ ಶ್ರೀರಾಮ, ಜಯ ಶ್ರೀರಾಮ, ಜಯ ಜಯ ಶ್ರೀರಾಮ, ಜಯಜಯ ಶ್ರೀರಾಮ.