Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಕ್ಟೋಬರ್ 8ರಂದು ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ನ (ಐಎಂಸಿ) 10ನೇ ಆವೃತ್ತಿಯನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಅಕ್ಟೋಬರ್ 8ರಂದು ಬೆಳಗ್ಗೆ 10 ಗಂಟೆಗೆ ನವದೆಹಲಿಯ ಯಶೋಭೂಮಿಯಲ್ಲಿ ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ನ (ಐಎಂಸಿ) 10ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನು ಉದ್ದೇಶಿಸಿ ಭಾಷಣ ಮಾತನಾಡಲಿದ್ದಾರೆ.

ದೂರಸಂಪರ್ಕ ಇಲಾಖೆ (ಡಿಒಟಿ) ಮತ್ತು ʻಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾʼ(ಸಿಒಎಐ) ಜಂಟಿಯಾಗಿ ಆಯೋಜಿಸಿರುವ ಈ ಕಾರ್ಯಕ್ರಮವು ಅಕ್ಟೋಬರ್ 7ರಿಂದ 10 ರವರೆಗೆ ನಡೆಯಲಿದೆ. “ಗಡಿಗಳಿಲ್ಲದ ಪ್ರಮಾಣ” ಎಂಬ ʻಐಎಂಸಿ-2026ʼ ಧ್ಯೇಯವಾಕ್ಯವು ಡಿಜಿಟಲ್ ನಾವೀನ್ಯತೆ, ಮುಂದಿನ ಪೀಳಿಗೆಯ ಸಂಪರ್ಕ ಮತ್ತು ತಂತ್ರಜ್ಞಾನ ನೇತೃತ್ವದ ಬೆಳವಣಿಗೆಯಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ.

ಐಎಂಸಿ 2026 ರ ನಾಲ್ಕು ಪ್ರಮುಖ ಸ್ತಂಭಗಳೆಂದರೆ – ಸೃಷ್ಟಿ: ಭವಿಷ್ಯವನ್ನು ನಿರ್ಮಿಸುವುದು; ಸಂವರ್ಧನೆ: ಬೆಳವಣಿಗೆಗೆ ಉತ್ತೇಜನ; ಸಶಕ್ತ: ಅವಕಾಶಗಳನ್ನು ವಿಸ್ತರಿಸುವುದು; ಮತ್ತು ಸುರಕ್ಷೆ: ನಂಬಿಕೆಯನ್ನು ಬಲಪಡಿಸುವುದು. ಇದು ನಾವೀನ್ಯತೆ ಮತ್ತು ಮುಂದಿನ ಪೀಳಿಗೆಯ ಡಿಜಿಟಲ್ ಮೂಲಸೌಕರ್ಯ, ತಂತ್ರಜ್ಞಾನ ಆಧಾರಿತ ಆರ್ಥಿಕ ಬೆಳವಣಿಗೆ, ಎಲ್ಲರನ್ನೂ ಒಳಗೊಂಡ ಡಿಜಿಟಲ್ ಪ್ರವೇಶ ಹಾಗೂ ಸುರಕ್ಷಿತ ಮತ್ತು ಸದೃಢ ಡಿಜಿಟಲ್ ಪರಿಸರ ವ್ಯವಸ್ಥೆಗಳ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಡಿಜಿಟಲ್ ಪರಿಸರ ವ್ಯವಸ್ಥೆಯಾದ್ಯಂತ ಉದಯೋನ್ಮುಖ ಅವಕಾಶಗಳನ್ನು ಅನ್ವೇಷಿಸಲು ʻಐಎಂಸಿ-2026ʼ ಜಾಗತಿಕ ತಂತ್ರಜ್ಞಾನ ನಾಯಕರು, ನೀತಿ ನಿರೂಪಕರು, ಉದ್ಯಮ ತಜ್ಞರು, ನವೋದ್ಯಮಗಳು, ಹೂಡಿಕೆದಾರರು ಮತ್ತು ನಾವಿನ್ಯಕಾರರನ್ನು ಒಟ್ಟುಗೂಡಿಸುತ್ತದೆ.

2026ರ ಆವೃತ್ತಿಯು 5ಜಿ ಮತ್ತು 6ಜಿ, ಮುಂದಿನ ಪೀಳಿಗೆಯ ಎಐ ಸಂಪರ್ಕಜಾಲಗಳು, ಸೆಮಿಕಂಡಕ್ಟರ್‌ಗಳು, ಭೂಮಂಡಲೇತರ ಸಂಪರ್ಕಜಾಲಗಳು, ಸೈಬರ್ ಭದ್ರತೆ, ಕ್ವಾಂಟಮ್ ಸಂವಹನ, ಎಂಟರ್ಪ್ರೈಸ್ ಟ್ರಾನ್ಫಾರ್‌ಮೇಷನ್‌, ಆವರ್ತನ ಆರ್ಥಿಕತೆ ಮತ್ತು ʻಇಎಸ್‌ಜಿʼ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಸೇರಿದಂತೆ ಒಂಬತ್ತು ಸ್ಥಾಪಿತ ಮೂಲ ವಲಯಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮವು ನಾಲ್ಕು ಹೊಸ ಕ್ಷೇತ್ರಗಳಿಗೆ ತನ್ನ ವಲಯ ಗಮನವನ್ನು ವಿಸ್ತರಿಸುತ್ತದೆ, ಅವುಗಳೆಂದರೆ – ಸ್ಮಾರ್ಟ್ ಚಲನಶೀಲತೆ, ಕ್ರೀಡಾಂಗಣದ ಅನುಭವಗಳು, ಕೈಗಾರಿಕಾ ರೊಬೊಟಿಕ್ಸ್ ಮತ್ತು ಸಾರಿಗೆ ತಂತ್ರಜ್ಞಾನ.

ʻಐಎಂಸಿ-2026ʼ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ದೇಶಗಳಿಂದ 1.5 ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದರಲ್ಲಿ 500ಕ್ಕೂ ಹೆಚ್ಚು ಪಾಲುದಾರರು ಮತ್ತು ಪ್ರದರ್ಶಕರು, 600ಕ್ಕೂ ಅಧಿಕ ನವೋದ್ಯಮಗಳೂ ಮತ್ತು 900ಕ್ಕೂ ಅಧಿಕ ಚಿಂತಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು 2,000ಕ್ಕೂ ಹೆಚ್ಚು ತಂತ್ರಜ್ಞಾನ ಬಳಕೆಯ ಪ್ರಕರಣಗಳು ಮತ್ತು 120ಕ್ಕೂ ಹೆಚ್ಚು ಅಧಿವೇಶನಗಳನ್ನು ಒಳಗೊಂಡಿರಲಿದೆ.

 

*****