Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಅಖಿಲ ಭಾರತ ಜೆಮ್ಸ್ ಮತ್ತು ಜ್ಯುಯೆಲರಿ ಟ್ರೇಡ್ ಫೆಡರೇಷನ್ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ

‘ಅಖಿಲ ಭಾರತ ಜೆಮ್ಸ್ ಮತ್ತು ಜ್ಯುಯೆಲರಿ ಟ್ರೇಡ್ ಫೆಡರೇಷನ್ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ


ನಾನು ಎಲ್ಲಿಗೆ ಬಂದಿದ್ದೇನೆಂದು ನನಗೆ ಗೊತ್ತು. ಏಕೆಂದರೆ ನೀವು ಬಹಳಷ್ಟು ಸರ್ಕಾರಗಳನ್ನು ಬಗ್ಗುವಂತೆ ಮಾಡಿದ ಜನರಾಗಿದ್ದೀರಿ. ಒಳ್ಳೆಯ ಸರ್ಕಾರಗಳು ಇಟ್ಟ ಹೆಜ್ಜೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ಜನರು ನೀವು. ಆದರೆ ಎಲ್ಲಿ ಯುದ್ಧವಿರುತ್ತದೊ, ಅಲ್ಲಿ ತಲೆ ತಗ್ಗಿಸಬೇಕಾಗುತ್ತದೆ. ನಾವು ಯುದ್ಧ ಮಾಡಲು ಹೊರಟಿರಲಿಲ್ಲ, ನಿಮ್ಮನ್ನು ಗೆಲ್ಲುವುದಕ್ಕೆಂದು ಹೊರಟಿದ್ದೆವು. ನಾವು ನಿಮ್ಮನ್ನು ಗೆದ್ದಿದ್ದೇವೆ ಮತ್ತು ನೀವು ಸಹ ನಮ್ಮ ಮೇಲೆ ಗೆಲವು ಸಾಧಿಸಿದ್ದೀರಿ ಎಂದು ನನಗೆ ಸಂತೋಷವಾಗಿದೆ.
ನೋಡಿ, ಸುಂಕದ ಸಂದರ್ಭ ಹಿಂದೆ ಸಹ ಬಂದಿತ್ತು ಮತ್ತು ನೀವು ಸುಂಟರಗಾಳಿ ಎಬ್ಬಿಸಿ ಸರ್ಕಾರಗಳನ್ನು ನಡುಗಿಸಿದಿರಿ. ಪ್ರತಿಯೊಬ್ಬ ಲೋಕಸಭಾ ಸದಸ್ಯ ನಿಮ್ಮ ಗ್ರಾಹಕರಾಗಿರುತ್ತಾರೆ. ಹಾಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಲು ಯಾವುದೇ ನಿಯೋಗವನ್ನು ಕಳಿಸುವ ಅವಶ್ಯಕತೆ ಇಲ್ಲ. ಕೇವಲ ಲೋಕಸಭಾ ಸದಸ್ಯರ ಬಳಿ ತೆರಳಿದಿರಿ. ಅವರ ಜೊತೆ ನಿಮ್ಮದು ದಿನನಿತ್ಯದ ಸಂಬಂಧವಾಗಿದೆ. ಆದರೆ ಅದರಿಂದ ಏನಾಯಿತು? ಸರ್ಕಾರಗಳು ಹೆದರಿದವು, ತೆರಿಗೆಯ ಪ್ರಸ್ತಾಪವನ್ನು ಹಿಂತೆಗೆದುಕೊಂಡೆವು. ಕೊನೆಗೆ ವಿಷಯ ಇದ್ದಲ್ಲೇ ಉಳಿಯಿತು. ಕೆಲವೊಮ್ಮೆ ಕೆಲವು ಸಂಗತಿಗಳು ದೀರ್ಘ ಕಾಲದವರೆಗೆ ಒಳ್ಳೆಯ ಕೆಲಸವನ್ನೂ ಮಾಡಬಲ್ಲದು ಎಂದು ನನಗೆ ಅರ್ಥವಾಗುತ್ತದೆ. ಈ ಬಜೆಟ್ ನ ಅಬಕಾರಿ ತೆರಿಗೆಯು ಮೊದಲ ಬಾರಿಗೆ ಸರ್ಕಾರವೆಂದರೆ ಏನು ಎಂದು ನಿಮಗೆ ಅರ್ಥ ಮಾಡಿಸಿತು. ಏಕೆಂದರೆ ನಿಮಗೆ ಸರ್ಕಾರ ಗೊತ್ತಿರಲಿಲ್ಲ, ಕೇವಲ ಸುಂಕದ ಅಧಿಕಾರಿಗಳು ಮಾತ್ರ ಗೊತ್ತಿದ್ದರು. ತಪ್ಪು ಆಗುವುದೇ ಅಲ್ಲಿಂದ. ಆದಾಯ ತೆರಿಗೆ ಅಧಿಕಾರಿಯನ್ನು ಭೇಟಿಯಾದರೆ ಸಾಕು, ಅಲ್ಲಿಗೆ ಕೆಲಸ ಮುಗಿಯಿತು ಎಂದು ನೀವು ಅಂದುಕೊಂಡಿದ್ದೀರಿ. ಅದರ ಈಗ ಸರ್ಕಾರವು ಬದಲಾಗಿದೆ.
 
ಮೊದಲ ಬಾರಿಗೆ ಸರ್ಕಾರವೆಂದರೆ ಏನೆಂದು ನಿಮಗೆ ಗೊತ್ತಾಯಿತು. ಸರ್ಕಾರಕ್ಕೆ ಸಹ ಮೊದಲ ಬಾರಿಗೆ ಈ ವ್ಯವಹಾರದಲ್ಲಿ ಅದೆಷ್ಟು ಸೂಕ್ಷ್ಮತೆಗಳಿವೆ, ಅದೆಷ್ಟು ತೊಂದರೆಗಳಿವೆ ಎಂದು ಅರ್ಥವಾಯಿತು. ಅಧಿಕಾರಿಗಳೊಂದಿಗೆ ಮಾತನಾಡುವಾಗ ನಾನು ಈ ವಿಷಯ ಉದ್ಯಮದವರ ಕಡೆಯಿಂದ ಬಂದಿದೆಯೆಲ್ಲ, ಮೊದಲೆಲ್ಲ ಇದರ ಕಡೆ ಗಮನವಿರಲಿಲ್ಲವೇ ಎಂದು ಕೇಳುತ್ತಿದ್ದೆ. ಅಧಿಕಾರಿಗಳು ಇಲ್ಲ ಸಾಹೇಬರೆ, ಯಾವತ್ತೂ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳುತ್ತಿದ್ದರು. ಅಂದರೆ ಇಷ್ಟು ವಿಶಾಲ ಕ್ಷೇತ್ರದ ಕಡೆ ಗಮನವೇ ಹರಿಸಿರಲಿಲ್ಲ. ಇದು ನಮ್ಮ ಸರ್ಕಾರವು ಈ ಉದ್ಯಮದತ್ತ ಕಣ್ಣು ಹಾಯಿಸುವುದಕ್ಕೆ ಸಾಕಷ್ಟಾಯಿತು. ಆದ್ದರಿಂದ ಈ ಸಲ ತೆರಿಗೆಯ ನಿರ್ಧಾರ ತೆಗೆದುಕೊಂಡಿದ್ದು ಸರಿಯಾಗಿಯೇ ಇದೆ, ‘ನಿಮಗೆ ಸ್ವಲ್ಪ ಖರ್ಚಾಗಿರಬಹುದಷ್ಟೆ.’
 
ಜಾಹಿರಾತುಗಳನ್ನು ಕೊಡಬೇಕಾಗಿರಬಹುದು, ಹೋರಾಟ ಮಾಡಬೇಕಾಗಿ ಬಂದಿರಬಹುದು, ಪ್ರತಿಕೃತಿಗಳನ್ನು ಸುಡಲು ಪೆಟ್ರೋಲ್ ತರಬೇಕಾಗಿರಬಹುದು, ಹೀಗೆ ಬಹಳಷ್ಟು ಮಾಡಬೇಕಾಗಿರಬಹುದು. ಆದರೆ ಇಷ್ಟು ಖರ್ಚು ಮಾಡಿದ ನಂತರವೂ ಸರ್ಕಾರ ಮತ್ತು ನಿಮ್ಮ ನಡುವೆ ಗಾಢವಾದ ಸಂವಾದಗಳು ನಡೆದವು. ಇದು ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ನಿಮಗೂ ನಿಮ್ಮ ಮಾತನ್ನು ನಿಮ್ಮದೇ ರೀತಿಯಲ್ಲಿ ಪ್ರಸ್ತುತಪಡಿಸುವ ಸಂಪೂರ್ಣ ಹಕ್ಕು ಇದೆ ಮತ್ತು ಸರ್ಕಾರಕ್ಕೆ ತನ್ನ ಮಾತನ್ನು ಅರ್ಥ ಮಾಡಿಸಲು ಅತ್ಯಧಿಕ ಪ್ರಯತ್ನ ಪಡುವ ಹೊಣೆಗಾರಿಕೆ ಇದೆ. ನಮ್ಮ ಸರ್ಕಾರವು ಮೊದಲ ಸಲವೇ ಹೆದರಿಕೊಂಡಿದ್ದರೆ, ಲೋಕಸಭಾ ಸದಸ್ಯರ ಮಾತನ್ನು ಕೇಳಿದ್ದರೆ ಮುಂದೆ ಯಾವಾಗಲೋ 25-30-40 ವರ್ಷ ಕಳೆದ ನಂತರ ಆಗ ಬರುವ ಸರ್ಕಾರಕ್ಕೆ ನಿಮ್ಮ ನೆನಪಾಗುತ್ತಿತ್ತು. ಮತ್ತೆ 1%-2% ಎಂದು ನಡೆದುಕೊಂಡು ಹೋಗುತ್ತಿತ್ತು. ಸಮಸ್ಯೆಗೆ ಪರಿಹಾರವೇ ದೊರಕುತ್ತಿರಲಿಲ್ಲ.
 
ಮೋದಿ ತಲೆಬಾಗುವುದಿಲ್ಲ, ಮೋದಿ ಅಚಲರಾಗಿದ್ದರೆ, ಮೋದಿ ಹೀಗಲ್ಲ ಎಂದು ನಿಮಗೆ ಅನಿಸುತ್ತಿರಬಹುದು. ಪ್ರಶ್ನೆ ಮೋದಿಯದಲ್ಲ, ಪ್ರಶ್ನೆ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಾಗಿದೆ. ಆದ್ದರಿಂದ ನಾವು ಸಮಿತಿಯನ್ನು ರಚಿಸಿದೆವು. ಸಮಿತಿಯಲ್ಲಿ ನಿಮ್ಮ ಜನರಿದ್ದರು. ನಿಮಗೆ ಪ್ರತಿಯೊಂದು ಮಗ್ಗಲನ್ನು ವಿವರಿಸುವ ಪ್ರಯತ್ನ ಮಾಡಲಾಯಿತು. ಈ ಕಾರಣದಿಂದಾಗಿ ಭವಿಷ್ಯದಲ್ಲೂ ಸರ್ಕಾರಗಳು ಯಾವುದೇ ನಿರ್ಣಯಗಳನ್ನು ತೆಗೆದುಕೊಂಡರೂ ಅವೆಲ್ಲವೂ ಒಟ್ಟಾರೆಯಾಗಿ ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಗಾಗಿ ಒಂದು ಬಹು ದೊಡ್ಡ ಪಾತ್ರ ವಹಿಸಲಿವೆ ಎಂಬ ವಿಶ್ವಾಸ ನನಗಿದೆ.
 
ಜೀತೂ ಅವರು ಈಗ ತಾನೇ ಹೇಳಿದಂತೆ ಫೆಬ್ರವರಿ 28ಕ್ಕೆ ಬಜೆಟ್ ಬಂದಿತು. ಮಾರ್ಚ್ 3ರಂದು ನೀವು ಬಂದು ಮೋದಿಯನ್ನು ಭೇಟಿಯಾದಿರಿ. ಆಗ ನೀವು ಹೇಳಿದ್ದೇನೆಂದರೆ ಹಿಂದೆ ಯಾರನ್ನೂ ಭೇಟಿಯಾಗಲು ಆಗುತ್ತಿರಲಿಲ್ಲ. ನೋಡಿ, ಸರ್ಕಾರ ನಿಮ್ಮದು, ಇದರ ಬಾಗಿಲುಗಳು ಸದಾಕಾಲಕ್ಕೂ ತೆರೆದಿವೆ. ನಿಮ್ಮ ಮಾತನ್ನು ಸಿಟ್ಟಿನಿಂದ ಹೇಳುವ ಅಧಿಕಾರವೂ ನಿಮಗಿದೆ. ಏಕೆಂದರೆ ಸರ್ಕಾರವು ಸಂವಾದ ನಡೆಸದಿದ್ದರೆ, ಸಂವಾದ ನಡೆಸದಿದ್ದರೆ ಸಮಸ್ಯೆಗೆ ಪರಿಹಾರವೇ ದೊರಕುವುದಿಲ್ಲ, ಈಗ ತೆರಿಗೆಯೂ ಜಾರಿಯಾಗಿದೆ ಮತ್ತು ಸಮಸ್ಯೆಗೆ ಪರಿಹಾರವೂ ಸಿಕ್ಕಿರುವುದು ಒಳ್ಳೆಯದೇ ಆಗಿದೆ. ತೆರಿಗೆಯ ವಿಷಯದಲ್ಲಿ ನಿಮ್ಮ ಅನುಭವ ಹಳೆಯದು, ಹಾಗಾಗಿ ನೀವು ಹೆದರುವುದು ಸಹಜವೇ ಆಗಿದೆ. ಆದರೆ ಬದಲಾದ ಸ್ಥಿತಿಯಲ್ಲಿ ನಿಯಮಗಳ ಜೊತೆ ಸಾಗುವುದರಲ್ಲಿ ಅದೆಷ್ಟು ಆನಂದವಿದೆ ಎಂದು ನಿಮಗೂ ಖುಷಿಯಾಗಬಹುದು. ರಾತ್ರಿ ಗಾಢ ನಿದ್ದೆ ಬರುತ್ತದೆ. ಈ ಭಯದ ವಾತಾವರಣವನ್ನು ನಾವು ಕೊನೆಗಾಣಿಸಿದ್ದೇವೆ.
 
ಮಧ್ಯದಲ್ಲಿ ಒಮ್ಮೆ ನಾನು ಅಧಿಕಾರಿಗಳ ಸಭೆ ಕರೆದಿದ್ದೆ. ಆಗಲೂ ನಾನು ನಮ್ಮ ನಾಗರಿಕರನ್ನು ದೇಶದ ನಿರ್ಮಾಣದ ಪಾಲುದಾರರೆಂದು ಭಾವಿಸಿ, ತೆರಿಗೆ ಕಟ್ಟುವವರನ್ನು ನಾವು ಕಳ್ಳರೆಂದು ಭಾವಿಸಬಾರದು ಎಂದು ಅವರಿಗೆ ಹೇಳಿದ್ದೆ. ಇದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ. ಆದರೆ ಇಲ್ಲಿ ಏನೇನು ನಡೆಯುತ್ತದೆ ಎಂದು ನಿಮಗೂ ಅರ್ಥವಾಗಿದೆ ಎಂಬ ಮಾತು ನಿಜ. ಒಳ್ಳೆಯವರು ಜೈಲಿಗೆ ಹೋಗಬೇಕಾಗಿ ಬಂದದ್ದು ನನಗೆ ನೆನಪಿದೆ. ಈ ಸರ್ಕಾರವು ಇದನ್ನು ಆರಂಭಿಸಿಲ್ಲ. ನಾನು ಹೇಳುತ್ತಿರುವುದು ಹಳೆಯ ಮಾತು. ನಮ್ಮಲ್ಲೂ ಕೆಲವರಿದ್ದಾರೆ, ಅವರಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಆದರೆ ಪ್ರವೀಣ್ ಅವರು ಸೂರತ್ ನ ಉದಾಹರಣೆ ನೀಡಿದಂತೆ ಇದು ಅವಶ್ಯಕವಾಗಿದೆ. ಒಂದು ಕಾಲದಲ್ಲಿ ಸೂರತ್ ನಲ್ಲಿ ಸಹ ಇದೇ ರೀತಿ ಇತ್ತು. ಆದರೆ ಅವರು ಸಹ ಎಲ್ಲ ಕಾನೂನು, ನಿಯಮಗಳನ್ನು ಪಾಲಿಸುತ್ತಾ ಆಧುನಿಕತೆಗೆ ತೆರೆದುಕೊಂಡರು. ಈ ಕಾರಣದಿಂದಾಗಿ ಅವರು ಇಂದು ಜಗತ್ತಿನ ಜೊತೆ ಉತ್ತಮ ವ್ಯವಹಾರ ನಡೆಸುತ್ತಿದ್ದಾರೆ. ನೀವು ಸಹ ಇದನ್ನು ಮಾಡಬಹುದು. ನಿಮ್ಮ ಜೊತೆಗೆ ನಾನಿದ್ದೇನೆ.
ವಿಶ್ವದಲ್ಲಿ ಆಭರಣಗಳ ಮಾರುಕಟ್ಟೆ ಅದೆಷ್ಟು ದೊಡ್ಡದಾಗಿದೆ, ಅದರ ಬೆಳವಣಿಗೆ ಅದೆಷ್ಟಿದೆ ಎಂದರೆ ಅವರಿಗೆ ಹೋಲಿಸಿದರೆ ನಾವು ಬಹಳ ಹಿಂದಿದ್ದೇವೆ. ವಿಶ್ವದಲ್ಲಿ ಅತ್ಯಧಿಕ ಬೇಡಿಕೆ ಇದೆ, ಇದನ್ನು ಪೂರೈಸುವ ಶಕ್ತಿ ನಮಗಿದೆ. ಆದರೆ ನಮಗೆ ಹೋಲಿಸಿಕೊಳ್ಳಲೂ ಆಗುತ್ತಿಲ್ಲ. ಇಡೀ ವಿಶ್ವದಲ್ಲಿ ಕರಕುಶಲ ಆಭರಣಗಳಿಗೆ  ದೊಡ್ಡ ಮಾರುಕಟ್ಟೆ ಇದೆ. ನಾನು ಸರಿಯಾಗಿ ಹೇಳುತ್ತಿದ್ದೇನಲ್ಲವೆ? ಚಿಂತೆ ಮಾಡಬೇಡಿ, ನಾನು ನಿಮ್ಮ ವ್ಯವಹಾರಕ್ಕೆ ಬರುವುದಿಲ್ಲ.
 
ಗುಜರಾತಿನಲ್ಲಿದ್ದಾಗ ಆಭರಣ ತಯಾರಕರನ್ನು ನಾನು ಸತತವಾಗಿ ಭೇಟಿಯಾಗುತ್ತಿದ್ದೆ. ಆಭರಣ ತಯಾರಿಕೆಯ ಕೌಶಲ ಅಭಿವೃದ್ಧಿಯ  ಸಂಸ್ಥೆಯನ್ನು ಆರಂಭಿಸಿದೆ. ಏಕೆಂದರೆ ಅದಕ್ಕೆ ಬಹಳ ಶಕ್ತಿ ಇದೆ ಎಂದು ನನಗೆ ಗೊತ್ತಿತ್ತು. ನಮ್ಮಲ್ಲಿ ಕರಕುಶಲ ಆಭರಣ ತಯಾರಿಕೆಯಲ್ಲಿ ಗುರುಶಿಷ್ಯರ ಸಂಬಂಧವವಿದೆ. ಗುರುಶಿಷ್ಯ ಪರಂಪರೆ ಇರುವ ಕ್ಷೇತ್ರಗಳು ಕೆಲವೇ ಇವೆ, ಅವುಗಳಲ್ಲಿ ಆಭರಣ ತಯಾರಿಕೆಯೂ ಒಂದು. ಅಕ್ಕಸಾಲಿಗರ ಹತ್ತಿರ ಕೆಲಸ ಮಾಡಬೇಕಾಗುತ್ತದೆ, ಭಟ್ಟಿ ಸುಡುತ್ತಾ ನಿಧಾನವಾಗಿ ಅಕ್ಕಸಾಲಿಗನಾಗುತ್ತಾನೆ. ಅಲ್ಲಿ ಗುರುಶಿಷ್ಯ ಪರಂಪರೆ ಇದೆ ಮತ್ತು ಈ ಕಾರಣಕ್ಕೆ ಕೆಲವು ಒಳ್ಳೆಯದೂ ಆಯಿತು ಮತ್ತು ಕೆಲವು ಅಡಚಣೆಗಳೂ ಬಂದವು. ಗುರುವಿಗೆ ಎಷ್ಟು ಗೊತ್ತಿರುತ್ತಿತ್ತೊ, ಶಿಷ್ಯ ಸಹ ಅಷ್ಟೇ ಕಲಿಯುತ್ತಿದ್ದ. ಅಲ್ಲಿಗೆ ಒಂದು ಪೀಳಿಗೆ ಕಳೆಯಿತು. ಹೊಸದನ್ನು ಮಾಡುವುದು, ಹೊಸದನ್ನು ಕಂಡು ಹಿಡಿಯುವುದು, ಹೊಸ ಪ್ರಯೋಗ ಮಾಡುವುದೆಲ್ಲ ಬಹಳ ಕಡಿಮೆ ಇತ್ತು. ಈ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ನಾವು ಹಿಂದೆ ಬಿದ್ದೆವು. ನಮ್ಮ ಬಳಿ ಸಾವಿರಾರು ವರ್ಷಗಳ ಪರಂಪರೆ ಇದೆ. ಈ ಕ್ಷೇತ್ರವು ಸಾವಿರಾರು ವರ್ಷಗಳ ಪರಂಪರೆ ಹೊಂದಿದೆ. ಚಿನ್ನ ತೆಗೆಯುವುದು ಹೇಗೆ ಎಂಬ ವಿಷಯ ನಮ್ಮ ವೇದ ಕಾಲದ ಗ್ರಂಥಗಳಲ್ಲಿ ಉಲ್ಲೇಖವಾಗಿದೆ ಎಂದರೆ ಇದನ್ನು ಮಾಡುತ್ತಿದ್ದವರು ಈ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದವರು ನಮ್ಮ ಪೂರ್ವಜರಾಗಿದ್ದರು.
 
ಇಷ್ಟು ದೊಡ್ಡ ಪರಂಪರೆಯೇ ಇದೆ. ಆದರೆ ವಿಶ್ವದಲ್ಲಿ ನಮ್ಮ ಆಟಾಟೋಪ ಏನೇನೂ ಇಲ್ಲ. ಈ ಸವಾಲನ್ನು ನಾವು ಸ್ವೀಕರಿಸಬೇಕು. ನಾವು ಹೊಸ ಹೊಸ ವಿನ್ಯಾಸಗಳನ್ನು ಪ್ರಸ್ತುತ ಪಡಿಸಬೇಕು, ಗುಣಮಟ್ಟದ ಉತ್ಪನ್ನವನ್ನು ಕೊಡಬೇಕು. ಗುಣಮಟ್ಟದ ಉತ್ಪನ್ನವೆಂದರೆ ಇಲ್ಲಿ ಶೂನ್ಯ ನ್ಯೂನತೆ (zero defect) ಇರಬೇಕು. ಉತ್ಪನ್ನವು ಈಗ ಸುಸ್ಥಿರವಾಗಿರುವ (sustainable) ಅವಶ್ಯಕತೆ ಇದೆ. ಇಲ್ಲದಿದ್ದರೆ ಮಾರುಕಟ್ಟೆಗೆ ಬರುವ ಉತ್ಪನ್ನವು ಥಳಕುಬಳುಕಾಗಿ ಕಾಣುತ್ತದೆ, ಆದರೆ ಕೆಲವು ತಿಂಗಳಲ್ಲೇ ಅದಕ್ಕೆ ಹೊಸದೊಂದು ಟ್ಯಾಗ್ ಅಳವಡಿಸುತ್ತಾರೆ, ಅದೇನೆಂದು ನಾನು ಹೇಳಲು ಬಯಸುವುದಿಲ್ಲ. ಇದು ಭಾರತದ್ದು, ಕಣ್ಣು ಮುಚ್ಚಿ ತೆಗೆದುಕೋ, ಉತ್ತಮವಾಗಿದೆ ಎಂದು ಹೇಳುವಂತೆ ಇರಬೇಕು. ಇಲ್ಲಿ ಉದ್ಯಮಗಳಾಗುತ್ತವೆ, ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಮೇಕ್ ಇನ್ ಇಂಡಿಯಾ ವಿಷಯದಲ್ಲಿ ಹೇಳುವಷ್ಟು ಈ ಕ್ಷೇತ್ರದಲ್ಲಿ ಬೆಳವಣಿಗೆ ಸಾಲದು. ಈ ಬ್ರಾಂಡ್ ತೆಗೆದುಕೋ ‘ಮೇಕ್ ಇನ್ ಇಂಡಿಯಾ’ ಎಂದರೆ ಕಣ್ಣು ಮುಚ್ಚಿ ಖರೀದಿಸಬಹುದು ಎಂದು ಈಗ ವಿಶ್ವಕ್ಕೆ ಗೊತ್ತಾಗಿದೆ. ಈ ಆಭರಣ ಕ್ಷೇತ್ರದಲ್ಲೂ ಇದಾಗಬೇಕು.
 
ಈ ಶ್ರೇಯಸ್ಸು ದೊರಕಲು ಆವಿಷ್ಕಾರಗಳು ಬಹಳ ಅವಶ್ಯಕವಾಗಿದೆ, ಬಹಳ ಅವಶ್ಯಕವಾಗಿದೆ. ಆವಿಷ್ಕಾರ ಮಾಡಲು ಒಂದು ಒಳ್ಳೆಯ ವಾತಾವರಣ ಸೃಷ್ಟಿಸಬೇಕಾಗುತ್ತದೆ. ಸರ್ಕಾರವು ‘ಕೌಶಲ ಅಭಿವೃದ್ಧಿ ಮಿಷನ್’ ನಡೆಸುತ್ತಿದೆ. ರತ್ನಾಭರಣಗಳ ಜನರು ಕೌಶಲ ಅಭಿವೃದ್ಧಿಯ ಕಾರ್ಯದಲ್ಲಿ ಪಾಲುದಾರರಾಗಬೇಕು ಎಂದು ನಾನು ಬಯಸುತ್ತೇನೆ. ನಾವು ಪಠ್ಯಕ್ರಮವನ್ನು ರತ್ನಾಭರಣಗಳ ವ್ಯಾಪಾರಿಗಳ ದೃಷ್ಟಿಕೋನಕ್ಕೆ ಅನುಗುಣವಾಗಿ ತಯಾರಿಸಬೇಕು. ಸರ್ಕಾರದಲ್ಲಿ ಕುಳಿತಿರುವ ಜನರು ಇದರಲ್ಲಿ ತಮ್ಮ ದೃಷ್ಟಿಕೋನವನ್ನು ಮತ್ತಷ್ಟು ಸ್ಪಷ್ಟವಾಗಿಸಿಕೊಳ್ಳಬೇಕು ಮತ್ತು ಇದು ಸಮಯದ ಬೇಡಿಕೆಯಾಗಿದೆ, ಹೀಗಾಗಬೇಕು ಎಂದು ಅವರು ಅರಿತುಕೊಳ್ಳಬೇಕೆಂದು ನಾನು ಭಾವಿಸುತ್ತೇನೆ. ನೀವು ವಿಶ್ವವಿದ್ಯಾಲಯದ ಕುರಿತು ಮಾತಾಡುವುದಾದರೆ ಈಗಾಗಲೇ ಬರೋಡಾದಲ್ಲಿ Skill.University ಇದೆ. ರತ್ನಾಭರಣ ವ್ಯಾಪಾರಿಗಳು ಅವರ ಜೊತೆ ಸೇರಿ, ಅವರ ಜೊತೆ ನಿಮಗೆ ಹೇಗೋ ಬೇಕೊ ಹಾಗೆ ನಿಮ್ಮ ಪಠ್ಯಕ್ರಮ ಅಳವಡಿಸಿಕೊಳ್ಳುವಂತೆ ಮಾಡಿ. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಪೂರ್ಣ ಸೌಲಭ್ಯಗಳು ಸಿಗುತ್ತವೆ. ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ತಂತ್ರಜ್ಞಾನ ಉನ್ನತೀಕರಣ, ಈ ಎರಡು ವಿಷಯಗಳಲ್ಲಿ ನನ್ನ ಸಹಮತವಿದೆ. ನೋಡಿ, ಸೂರತ್ ನಲ್ಲಿ ವಜ್ರ ಕತ್ತರಿಸುವ ಉದ್ಯಮವು ವಿಶ್ವದಲ್ಲೇ ತನ್ನ ಹಿಡಿತವನ್ನು ಸಾಧಿಸಿದೆ ಎಂದರೆ ಅದಕ್ಕೆ ಕಾರಣ ಅವರು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಹಿಂದೆ ಬೀಳುವುದಿಲ್ಲ. ಅವರು ಪ್ರತಿ ಸಲ ಹೊಸದು ಬಂದಾಗ ಅದನ್ನು ಅಳವಡಿಸಿಕೊಳ್ಳುತ್ತಾರೆ. ವಜ್ರ ಕತ್ತರಿಸುವಾಗ ತೊಂದರೆಯಾಗುತ್ತಿದೆ ಎಂದಾಗ ಯಾರೋ ಲೇಸರ್ ತಂತ್ರಜ್ಞಾನದಿಂದ ವಜ್ರ ಕತ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸಿದರು. ತಕ್ಷಣ ಅವರು ಅದನ್ನು ಅಳವಡಿಸಿಕೊಂಡರು. ನಮ್ಮದೇ ನೆಲದಲ್ಲಿ ಈ ತಂತ್ರಜ್ಞಾನ ಅಭಿವೃದ್ಧಿಯಾಯಿತು. ಇದಕ್ಕೆ ಸ್ವೀಕೃತಿ ದೊರಕಿತು. ನಾವು ಮನಸ್ಸು ಮಾಡಿದರೆ ಈ ಎಲ್ಲ ಕೆಲಸ ಮಾಡಬಲ್ಲೆವು ಎಂಬುದು ನನ್ನ ಮಾತಿನ ಅರ್ಥ. 
 
ಭಾರತದಲ್ಲಿ ಚಿನ್ನವು ಸಾಮಾಜಿಕ ಪ್ರತಿಷ್ಠೆಯೊಂದಿಗೆ ಸೇರಿದೆ. ಈ ಕಾರಣದಿಂದಾಗಿ ಮನೆಯಲ್ಲಿ ಚಿನ್ನ ಇರಬಹುದು, ಒಡವೆ ಇರಬಹುದು. ವರ್ಷಕ್ಕೆ ನಾಲ್ಕೈದು ಸಲವಷ್ಟೇ ಧರಿಸುವ ಸಂದರ್ಭಗಳು ಬರುತ್ತವೆ. ಹಾಗಾಗಿ ಚಿನ್ನವು dead moneyಯ ರೂಪದಲ್ಲಿ ಉಳಿದು ಬಿಟ್ಟಿರುತ್ತದೆ. ಅದನ್ನು ಯಾವುದಾದರೂ ರೀತಿಯಲ್ಲಿ ದೇಶದ ಪ್ರಗತಿಯೊಂದಿಗೆ ಜೋಡಿಸಬೇಕೆಂದು ನಾವು ಒಂದು ಯೋಜನೆಯನ್ನು ಮಾಡಿದೆವು. ನೀವು ಸಹ ನಿಮ್ಮ ಗ್ರಾಹಕರಿಗೆ ಏನೂ ಹೋಗುವುದಿಲ್ಲ, ಚಿನ್ನವನ್ನು ಈ ಸ್ಕೀಂನಲ್ಲಿ ತೊಡಗಿಸಿ ಎಂದು ಉತ್ತೇಜಿಸಬಹುದು. ಅವಶ್ಯಕತೆ ಬಿದ್ದಾಗ ಅದನ್ನು ತರಬಹುದು. ಇದರಿಂದ ದೇಶದ ಆರ್ಥಿಕತೆಗೆ ಬಲ ಬರುತ್ತದೆ. ಇದರಲ್ಲಿ ನಮ್ಮ ಜನರು ಕಾಣಿಕೆ ನೀಡಬೇಕು. ಸೌಕರ್ಯಗಳನ್ನೂ ಒದಗಿಸಬೇಕಾಗುತ್ತದೆ, ಎಲ್ಲೇ ಆದರೂ ಸರಿ ಒದಗಿಸಬೇಕು. ಇದು ಅತ್ಯಧಿಕ ಜನರಿಗೆ ಉದ್ಯೋಗಗಳನ್ನು ನೀಡುವ ಕ್ಷೇತ್ರವಾಗಿದೆ, ಈಗಲೂ ಬೇಡಿಕೆ ಇರುವ ಕ್ಷೇತ್ರವಾಗಿದ್ದು ಅದರ ಸಾಮರ್ಥ್ಯಕ್ಕಿಂತ ನಾವು ಬಹಳ ಹಿಂದಿದ್ದೇವೆ. ಆದರೆ ನಮ್ಮ ದೇಶೀಯ ಮಾರುಕಟ್ಟೆ ಇಷ್ಟು ವಿಸ್ತಾರವಾಗಿದ್ದು ನಮಗೆ ಹೊಸತನ್ನು ಮಾಡಲು ಮನಸ್ಸಾಗುತ್ತಿಲ್ಲ ನಮ್ಮ ದೊಡ್ಡ ಸಮಸ್ಯೆಯೆಂದರೆ ದೇಶೀಯ ಮಾರುಕಟ್ಟೆ ಬಹಳ ದೊಡ್ಡದಾಗಿರುವುದು. ದೇಶದಲ್ಲಿ ನೂರಾ ಇಪ್ಪತ್ತೈದು ಕೋಟಿ ಜನರಿದ್ದಾರೆ, ವರ್ಷಕ್ಕೆ ಎರಡು ಕೋಟಿಗಳಾದರೂ ಮದುವೆಗಳಾಗುತ್ತವೆ, ಹಾಗಾಗಿ ನಿಮಗೆ ಬೇಕಾದಷ್ಟು ಸಿಗುತ್ತದೆ. ಹೀಗಿರುವಾಗ ಜಾಗತಿಕ ಮಾರುಕಟ್ಟೆಯತ್ತ ನೋಡಲು ನಿಮಗೆ ಮನಸ್ಸಾಗುತ್ತಿಲ್ಲ. ನೀವು ದೇಶೀಯ ಮಾರುಕಟ್ಟೆಯ ಪರಿಮಿತಿಯಿಂದ ಹೊರಗೆ ಬರುವವರೆಗೆ ಇದನ್ನು ಮಾಡಲು ಆಗುವುದಿಲ್ಲ. ದೇಶೀಯ ಮಾರುಕಟ್ಟೆ ಬಹಳ ದೊಡ್ಡದಾಗಿದೆ ಎನ್ನುವುದೇನೋ ನಿಜ, ಅದರ ಬೇಡಿಕೆ ಸಹ ಬಹುಶಃ ನಿಮಗೆ ಪೂರೈಸಲು ಆಗುತ್ತಿಲ್ಲ ಎನ್ನುವುದೇನೋ ಸರಿ. ಆದರೆ ನೀವು ವಿಶ್ವ ಮಾರುಕಟ್ಟೆಯತ್ತ ನೋಡಿದರೆ ಬಹುಶಃ ದೇಶೀಯ ಮಾರುಕಟ್ಟೆಯನ್ನು ಉತ್ಪನ್ನದ ರೂಪದಲ್ಲಿ ಬಳಸಿಕೊಳ್ಳಬಹುದು. ಯಾವುದೇ ಸಮಸ್ಯೆ ಬರುವುದಿಲ್ಲ ಮತ್ತು ಅದಕ್ಕಾಗಿ ಏನು ಅವಶ್ಯಕತೆ ಇದೆ ಎಂದು ಯೋಚಿಸಬೇಕು.
ಇಂದು ನೀವು ಪ್ರಶಂಸೆಯ ಸುರಿಮಳೆಗೈದಿದ್ದೀರಿ, ಆದರೆ ನಾಳೆ ಪತ್ರಿಕೆಯಲ್ಲಿ ಏನೂ ಪ್ರಕಟವಾಗುವುದಿಲ್ಲ. ಏನಾದರೂ ಅದು ಇದು ಮಾತನಾಡಿದರೆ ಸ್ವಲ್ಪ ಪ್ರಕಟವಾಗುತ್ತದೆ. ನಾವು ಇದನ್ನು ಅವಕಾಶದ ರೂಪದಲ್ಲಿ ಬದಲಿಸಿಕೊಳ್ಳಬೇಕು. ಎಷ್ಟು ಸಾಧ್ಯವೋ ಅಷ್ಟು ಮುನ್ನಡೆಯಬೇಕು. ಪ್ರವೀಣ್ ಅವರು ಹೇಳಿದಂತೆ ಕಪ್ಪು ಹಣದಿಂದ ಮುಕ್ತಿ ಹೊಂದಬೇಕು. ಆ ಸಮಯದಲ್ಲಿ ಸ್ವಲ್ಪ ಚಪ್ಪಾಳೆ ಮಾತ್ರ ಕೇಳಿಸಿತು. ನಾನು ನಿಜವನ್ನು ಹೇಳುತ್ತೇನೆ ಮತ್ತು ನಿಮ್ಮ ಮೂಲಕ ದೇಶದ ಜನರಿಗೂ ನಾವು ಈ ಹೊರೆಯನ್ನು ಏಕೆ ಹೊತ್ತುಕೊಂಡಿದ್ದೇವೆ ಎಂದು ಹೇಳಲು ಬಯಸುತ್ತೇನೆ. ನೆಮ್ಮದಿಯಿಂದ ನಿದ್ರೆ ಮಾಡಬೇಕು, ನಿದ್ರೆ ಬರುವುದಕ್ಕಿಂತ ಜೀವನದಲ್ಲಿ ದೊಡ್ಡ ಆನಂದ ಬೇರಾವುದಿದೆ? ಈ ಆದಾಯ ತೆರಿಗೆ ಅಧಿಕಾರಿಗಳಿಗೆ ಹೆದರುವುದೇಕೆ? ಈ ಸರ್ಕಾರದ ಭಯವೇಕೆ? ಈ ಸ್ಥಿತಿಯಿಂದ ಹೊರಗೆ ಬರಲು ಸೆಪ್ಟೆಂಬರ್ 30ಕ್ಕೆ ಮೊದಲು ಆದಾಯ ಘೋಷಿಸಿಕೊಳ್ಳವುದು ಎಲ್ಲಕ್ಕಿಂತ ದೊಡ್ಡ ಉಪಾಯವಾಗಿದೆ. ಸೆಪ್ಟೆಂಬರ್ 30ರ ನಂತರ ಯಾರದಾದರೂ ನಿದ್ರೆ ಹಾಳಾಗಲಿ ಎಂದು ನಾನು ಇಚ್ಛಿಸುವುದಿಲ್ಲ. ದೇಶದ ನೂರಾ ಇಪ್ಪತ್ತೈದು ಕೋಟಿ ಜನರು ನೆಮ್ಮದಿಯಿಂದ ನಿದ್ರೆ ಮಾಡಬೇಕೆಂದು ನಾನು ಬಯಸುತ್ತೇನೆ. ಸೆಪ್ಟೆಂಬರ್ 30ರೊಳಗೆ ಮಾಡಬೇಕಾದ್ದನ್ನು ಮಾಡದಿರುವ ಪಾಪವನ್ನು ನಾನು ಮಾಡುವುದಿಲ್ಲ. ಆದ್ದರಿಂದ ನಾನು ನಿಮಗೆ ಆಹ್ವಾನ ನೀಡುತ್ತಿದ್ದೇನೆ. ನಿಮ್ಮ ಜೊತೆ ಇರುವವರಿಗೆ ಹೇಳಿ, ಏಕೆಂದರೆ ಅವರು ಎಲ್ಲರಿಗಿಂತ ನಿಮ್ಮೊಂದಿಗೆ ಹೆಚ್ಚು ಗಾಢವಾಗಿರುತ್ತಾರೆ.
 
ಈ ಅಸೋಸಿಯೇಷನ್ ನ ಸದಸ್ಯರಾದ ನೀವು ಮುಕ್ತವಾಗಿ ಎಲ್ಲ ವಿಷಯಗಳನ್ನು ತಿಳಿಸಿದಿರಿ. ಇಲ್ಲದಿದ್ದರೆ ಸರ್ಕಾರಕ್ಕೆ ಯಾರೂ ಹೇಳುತ್ತಿರಲಿಲ್ಲ. ಲಾಹಿರಿ ಸಮಿತಿಯನ್ನು ರಚಿಸಿದಾಗ ನಿಮ್ಮ ಸದಸ್ಯರು ಭೇಟಿಯಾಗಿ ಸಾಹೇಬರೆ, ಹಿಂದೆ ನಮ್ಮ ಜನರು ಗುಂಪುಗುಂಪಾಗಿ ಹಣ ತೆಗೆದುಕೊಂಡು ಬರುತ್ತಿದ್ದರು ಎಂದು ಹೇಳುತ್ತಿದ್ದರು. ನಮನ್ನು ಎಲ್ಲಿಗೆ ಹಾಕುತ್ತೀರಿ? ನೀವು ಸಾಕಷ್ಟು ಸತ್ಯವನ್ನು ನುಡಿದಿರಿ. ಇದರರ್ಥ ನೀವು ಅವರೆಲ್ಲರನ್ನೂ ಬಲ್ಲಿರಿ, ನೀವು ನನ್ನ ಸಂದೇಶವನ್ನು ಅವರಿಗೆ ತಲಪಿಸುತ್ತೀರಲ್ಲವೆ? ಏಕೆಂದರೆ ಇದು ನಿಮ್ಮದೇ ಕ್ಷೇತ್ರವಾಗಿದೆ. ಇಲ್ಲಿ ನಿಮಗೆ ಎಲ್ಲಕ್ಕಿಂತ ಹೆಚ್ಚು ಅನುಕೂಲವಿದೆ. ಇದರ ನಂತರ ಜಮೀನು ಉಳ್ಳವರು, ಅದರ ನಂತರ ಕಟ್ಟಡ ನಿರ್ಮಾಣದ ಪ್ರಪಂಚ ಬರುತ್ತದೆ. ನೀವು ಎಲ್ಲಕ್ಕಿಂತ ಮುಂದಿದ್ದೀರಿ. ನೀವು ನನಗೆ ನೆರವಾದರೆ ದೇಶಕ್ಕೆ ನೆರವಾಗುತ್ತದೆ.
ಸಂವಾದ ನಡೆಸುವುದರಿಂದ ಆಗುವ ವ್ಯತ್ಯಾಸವೇನು ಎಂದು ನೀವು ನೋಡಿದಿರಿ. ನಾವು ಸುಲಭವಾಗಿ ನಮ್ಮ ಕಷ್ಟಗಳನ್ನು ಹೇಳಿಕೊಳ್ಳಬಹುದು. ಪ್ರವೀಣ್ ಅವರೇ, ನೀವು ಈಗ ಬಹಳ ಸಣ್ಣದನ್ನು ಕೇಳುತ್ತಿದ್ದೀರಿ. ಈ ಕ್ಷೇತ್ರಕ್ಕೆ ಒಂದು department, ಒಂದು ಇಲಾಖೆಯನ್ನು ನೀವು ಕೇಳುತ್ತಿದ್ದೀರಿ. ಅರೆ! ಪೂರ್ತಿ ಪ್ರಧಾನ ಮಂತ್ರಿಯನ್ನೇ ಇರಿಸಿಕೊಳ್ಳಿ. ನೋಡಿ, ದೇಶದ ಪ್ರಗತಿಗೆ ಮೇಕ್ ಇನ್ ಇಂಡಿಯಾಗೆ ಮತ್ತು ಜಾಗತಿಕ ಮಟ್ಟದಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಿಸಲು ಈ ಸರ್ಕಾರವು ಯಾವಾಗಲೂ ನಿಮ್ಮ ಜೊತೆಗಿದೆ, ಸ್ವತಃ ಪ್ರಧಾನ ಮಂತ್ರಿಯೇ ನಿಮ್ಮ ಜೊತೆಗಿದ್ದಾರೆ. ಆದ್ದರಿಂದ ಸಣ್ಣ ಇಲಾಖೆಗಳಲ್ಲಿ ಸಿಲುಕಿಕೊಳ್ಳಬೇಡಿ, ನಾನೇ ಸ್ವತಃ ನಿಮಗಾಗಿ ಇದ್ದೇನೆ. ಆದರೆ ಹಿಂದೆ ಮಾಡುತ್ತಿದ್ದ ಹಳೆಯದನ್ನು ನೀವು ಬಿಡಿ. ಬಹಳಷ್ಟಾಗಿದೆ, ಈಗ ಅದರ ಅಗತ್ಯವೇನಿದೆ? ಈಗ ಒಂದು ನಿಯಮವನ್ನು ಮಾಡಿದ್ದೇವೆ, ಹೊಸ ವ್ಯವಸ್ಥೆಯನ್ನು ರೂಪಿಸಿದ್ದೇವೆ ಮತ್ತು ಒಳ್ಳೆಯದಕ್ಕಾಗಿ ರೂಪಿಸಿದ್ದೇವೆ, ದೇಶದ ಪ್ರಗತಿಗಾಗಿ ಇದನ್ನು ಮಾಡಿದ್ದೇವೆ. ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯೋಣ.
 
ನೀವು ನನಗೆ ನೀಡಿದ ಸ್ವಾಗತಕ್ಕಾಗಿ, ಗೌರವಕ್ಕಾಗಿ ನಾನು ಬಹಳ ಬಹಳ ಆಭಾರಿಯಾಗಿದ್ದೇನೆ. ಯಾರಿಗಾದರೂ ತೊಂದರೆಯಾಗಲಿ ಎಂದು ನಾವು ಯೋಚಿಸುವುದೇ ಇಲ್ಲ ಎಂದು ನಾನು ವಿಶ್ವಾಸ ನೀಡುತ್ತೇನೆ. ನೀವು ಸರ್ಕಾರದ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಮತ್ತು ಈ ಒಪ್ಪಿಗೆಗೆ ಮೂಲ ಕಾರಣ ನಂಬಿಕೆ. ಬಹುಶಃ ಈ ಸರ್ಕಾರದ ಮೇಲೆ ನಿಮಗೆ ಭರವಸೆ ಇರದಿದ್ದರೆ ಇಂದು ಸಹ ಪ್ರತಿಕೃತಿ ಸುಡುತ್ತಾ ಇರುತ್ತಿದ್ದಿರಿ, ಕೆಲಸ ಆಗುತ್ತಿರಲಿಲ್ಲ. ಆದರೆ ನಿಮಗೆ ಸರ್ಕಾರದ ಮೇಲೆ ನಂಬಿಕೆ ಇದೆ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಎಲ್ಲಕ್ಕಿಂತ ದೊಡ್ಡ ಬಂಡವಾಳವಾಗುತ್ತದೆ. ಜನತೆಗೆ ಆಡಳಿತದ ಕುರಿತು, ಆಡಳಿತಕ್ಕೆ ಜನರ ಕುರಿತ ವಿಶ್ವಾಸವೇ ನಮ್ಮನ್ನು ಜೋಡಿಸುತ್ತದೆ ಮತ್ತು ನಾವು ಏನನ್ನಾದರೂ ಮಾಡುವುದಕ್ಕಾಗಿಯೇ ಒಂದಾಗುತ್ತೇವೆ. ನಮ್ಮ ದೇಶಕ್ಕಾಗಿ ಬಹಳಷ್ಟು ಮಾಡುವ ಸಂಕಲ್ಪದೊಂದಿಗೆ ಇಲ್ಲಿಂದ ಹೋಗುತ್ತೇನೆ ಎಂಬ ವಿಶ್ವಾಸವಿದೆ. ಬಹಳ ಬಹಳ ಧನ್ಯವಾದಗಳು.
###