Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರ ಪ್ರದೇಶದಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ನೆರವೇರಿಸಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣದ ಇಂಗ್ಲೀಷ್ ಅವತರಣಿಕೆ


ಮಹಿಳೆಯರೇ ಮತ್ತು ಮಹನೀಯರೇ
 
ಶಿವ ದೇವರ ಅತ್ಯಂತ ಪ್ರೀತಿಯ ತಿಂಗಳು ಶ್ರಾವಣ ಬಂದಿದೆ. ದೇಶದ ವಿವಿಧೆಡೆಯಿಂದ ಶಿವ ದೇವರ ಭಕ್ತರು ತಮ್ಮ ಕಮಂಡಲಗಳೊಂದಿಗೆ ಹೊರಟಿದ್ದಾರೆ. ಇದು ಹಬ್ಬಗಳ ಆರಂಭವನ್ನು ಸೂಚಿಸುವ ಕಾಲ ಮತ್ತು ಇದು ದಿವಾಲಿ ಸಂಭ್ರಮದೊಂದಿಗೆ ಮುಕ್ತಾಯವಾಗುತ್ತದೆ.
 
ಸ್ನೇಹಿತರೇ,
 
ಹಬ್ಬಗಳಲ್ಲದೆ ಇಡೀಯ ದೇಶದ ಬಹುಭಾಗ ಈಗ  ಭಾರೀ ಮಳೆಯನ್ನು ಪಡೆಯುತ್ತಿದೆ. ಉತ್ತಮ ಮುಂಗಾರು ಕೃಷಿಗೆ  ಮತ್ತು ಬಲಿಷ್ಟ ಆರ್ಥಿಕತೆಗೆ ಆಶೀರ್ವಾದ ಇದ್ದಂತೆ, ಆದರೆ ದೇಶದ ಕೆಲವು ಭಾಗಗಳಲ್ಲಿ ಈ ಭಾರೀ ಮಳೆ ಜನರಿಗೆ ಸಂಕಷ್ಟಗಳನ್ನು ಉಂಟು ಮಾಡಿದೆ. ಸರಕಾರ ಇದರ ಬಗ್ಗೆ ಚಿಂತಿತವಾಗಿದೆ ಮತ್ತು ಯುದ್ದೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸರಕಾರವು , ರಾಜ್ಯ ಸರಕಾರಗಳ ಜೊತೆಗೂಡಿ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ಸರ್ವ ಪ್ರಯತ್ನಗಳನ್ನೂ ಕೈಗೊಂಡಿದೆ.
 
ಸ್ನೇಹಿತರೇ,
 
ಸಂವೇದನಾಶೀಲ ಸರಕಾರವಾಗಿ ಸಾಮಾನ್ಯ ಜನರ ಜೀವನವನ್ನು ಸರಳಗೊಳಿಸುವುದು ಮತ್ತು ಅಡೆತಡೆ ಇಲ್ಲದಂತೆ ಮಾಡುವುದು ನಮ್ಮ ಪ್ರಾಥಮಿಕ ಆದ್ಯತೆ ಎಂಬುದಾಗಿ ನಾನು ಭಾವಿಸುತ್ತೇನೆ. ಇದು ನಮ್ಮ ಏಕೈಕ ಗುರಿ. ನಾವು ಕಳೆದ ನಾಲ್ಕು ವರ್ಷಗಳಿಂದ ಈ ಉದ್ದೇಶದೊಂದಿಗೆ ಮುಂದುವರಿಯುತ್ತಿದ್ದೇವೆ. ಇಂದು ಲಕ್ನೋದ ಈ ಸಭಾಂಗಣದಲ್ಲಿ ಸೇರಿರುವ ಜನಸಮೂಹ ಈ ಸಾಹಸದ ಭಾಗ. ನಗರ ಜೀವನವನ್ನು ಸ್ಮಾರ್ಟ್ ಮಾಡುವ ಮತ್ತು ಸೌಲಭ್ಯಗಳನ್ನು ಒದಗಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ  ನಿನ್ನೆ ನನಗೆ ಲಭಿಸಿತ್ತು. ಉತ್ತರಪ್ರದೇಶದ ನಗರಗಳಿಗೆ ಸಂಬಂಧಿಸಿ ಹಲವು ಯೋಜನೆಗಳಿಗೆ ಶಿಲಾನ್ಯಾಸ ಮಾಡುವ ಮತ್ತು ವಸತಿ ರಹಿತ ನನ್ನ ಸಹೋದರ ಮತ್ತು ಸಹೋದರಿಯರಿಗೆ ಮನೆಗಳ ಬೀಗದ ಕೈಯನ್ನು ಹಸ್ತಾಂತರಿಸುವ ಅವಕಾಶವೂ ಲಭಿಸಿತು. ಇಂದು ನಾವು ಉತ್ತರಪ್ರದೇಶದ ಮೂಲೆ ಮೂಲೆಗಳಲ್ಲಿ ಪರಿವರ್ತನೆಯನ್ನು ತರುವ ನಿರ್ಧಾರದೊಂದಿಗೆ ಮುಂದುವರಿಯುತ್ತಿರುವುದಕ್ಕೆ ನನಗೆ ಸಂತೋಷವಿದೆ.
 
ಸ್ನೇಹಿತರೇ,
 
ಕಳೆದ ಐದು ತಿಂಗಳಲ್ಲಿ ನಾನು ಲಕ್ನೋದಲ್ಲಿ ನನ್ನ ಉದ್ಯಮಿ ಮಿತ್ರರನ್ನು ಭೇಟಿಯಾಗುತ್ತಿರುವುದು ಇದು ಎರಡನೇ ಬಾರಿ. ಈ ಮೊದಲು ನಾನು ಫೆಬ್ರವರಿಯಲ್ಲಿ ಉತ್ತರಪ್ರದೇಶ ಹೂಡಿಕೆದಾರರ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದೆ. ಆ ಸಮಾವೇಶದಲ್ಲಿ 4.25 ಲಕ್ಷ  ಕೋ. ರೂ.ಗಳಿಗೂ ಅಧಿಕ ಹೂಡಿಕೆಯನ್ನು ಉತ್ತರಪ್ರದೇಶದಲ್ಲಿ ಮಾಡುವ ಬಗ್ಗೆ ಪ್ರಸ್ತಾವನೆಗಳು ಬಂದಿವೆ ಎಂದು ನನಗೆ ತಿಳಿಸಲಾಗಿತ್ತು. ಆ ಪ್ರಸ್ತಾವನೆಯ ನಿರ್ಧಾರಗಳನ್ನು ವಾಸ್ತವಕ್ಕೆ ತರಲು ಪ್ರಮುಖ ಹೆಜ್ಜೆಯನ್ನಿಟ್ಟಿರುವುದಕ್ಕೆ ನನಗೆ ಸಂತೋಷವಿದೆ.
 
ಸತೀಶ್ ಜೀ ಅವರು 60,000 ಕೋ.ರೂ. ದೊಡ್ದ ಮೊತ್ತವಲ್ಲ ಎಂದು ಯಾಕೆ ಹಿಂಜರಿಕೆಯಿಂದ ಹೇಳುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅವರ ಪ್ರಾಮಾಣಿಕ ಮತ್ತು ವಿನೀತ ಭಾವನೆ ಮತ್ತು ಪ್ರಜ್ಞಾಪೂರ್ವಕವಾದ ಧ್ವನಿ 60 ಸಾವಿರ ಕೋಟಿಗಳನ್ನು ಸಣ್ಣ ಮೊತ್ತ ಎನ್ನುತ್ತಿದೆ. ನಾನು ಬಹಳ ಧೀರ್ಘ ಕಾಲ ಮುಖ್ಯಮಂತ್ರಿಯಾಗಿದ್ದೆ ಮತ್ತು ಕೈಗಾರಿಕಾ ಚಟುವಟಿಕೆಗಳುಳ್ಳ ರಾಜ್ಯಕ್ಕೆ ನಾನು ಸೇರಿದವನಾಗಿದ್ದೆ. 60,000 ಕೋ.ರೂ. ಸಣ್ಣ ಮೊತ್ತದ ಹಣವೇನಲ್ಲ. ಅದು ದೊಡ್ಡ ಮೊತ್ತ !. ನೀವೇನು ಸಾಧಿಸಿದ್ದೀರಿ ಎಂಬ ಬಗ್ಗೆ ನಿಮಗೆ ಅರಿವಿಲ್ಲ.!.
 
ನಾನು ಇಲ್ಲಿರುವ ಅಧಿಕಾರಿಗಳನ್ನು ಅಭಿನಂದಿಸಬಯಸುತ್ತೇನೆ. ನೀವೇನು ಮಾಡಿದ್ದೀರೋ ಅದು ಕಲ್ಪನೆಗೂ ಮೀರಿದ್ದು. ಬಂಡವಾಳ ಹೂಡಿಕೆ ಸಂಧರ್ಭದಲ್ಲಿ ಒದಗುವ ತೊಂದರೆಗಳ ಬಗ್ಗೆ ನನಗೆ ಗೊತ್ತಿದೆ. ನ್ಯಾಯಾಲಯದಲ್ಲಿ ಬರೇ ಒಂದು ಅರ್ಜಿ ಕಾಮಗಾರಿಯನ್ನು 2-3 ವರ್ಷ ತಡೆ ಹಿಡಿಯುತ್ತದೆ. ಪರಿಸರವಾದಿಗಳು ಇದರಲ್ಲಿ ಭಾಗಿಯಾದರೆ , ಅವರು ಅದರ ಮೇಲೆ ಕುಳಿತುಕೊಂಡು ಕಾಮಗಾರಿ ತಡೆಯುತ್ತಾರೆ ಮತ್ತು ಅದು ಮಾಧ್ಯಮಗಳನ್ನು ತಲುಪಿದರೆ, ಸತೀಶ ಜೀ ಅವರೇ ಸರಕಾರ ಕೂಡಾ ಯೋಜನೆಗಳ ನಿರ್ವಹಣೆಯಲ್ಲಿ ನಲುಗುತ್ತದೆ; ಯಾಕೆಂದರೆ ವಿರೋಧಿಗಳು ಅತ್ಯಂತ ಯೋಜನಾಬದ್ದವಾಗಿ ತಮ್ಮ ಆಟವನ್ನು ಸಂಯೋಜಿಸಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ , 5 ತಿಂಗಳಲ್ಲಿ ಇಂತಹ ತೊಂದರೆಗಳನ್ನು ನಿವಾರಿಸಿ ಮತ್ತು 60ಸಾವಿರ ಕೋಟಿಯನ್ನು ಹೂಡಿಕೆ ಮಾಡುವುದು ನಿಜವಾಗಿಯೂ ಅಸಾಮಾನ್ಯ  ಸಾಧನೆ!. ನಾನು ಈ ಎಲ್ಲಾ ಸಂಗತಿಗಳನ್ನು ಯಾಕೆ ಹೇಳುತ್ತೇನೆ ಎಂದರೆ , ನಾನು ಅವುಗಳನ್ನು ಎದುರಿಸಿದ್ದೇನೆ ಮತ್ತು ಅನುಭವಿಸಿದ್ದೇನೆ. ಅವಶ್ಯ ಇದ್ದಲ್ಲೆಲ್ಲ ತಮ್ಮ ಭೂಮಿ ಬಿಟ್ಟುಕೊಟ್ಟ ರೈತರನ್ನು ನಾನು ಅಭಿನಂದಿಸುತ್ತೇನೆ.  ಸರಕಾರದ ಅತ್ಯಂತ ಕಿರಿಯ ಸಿಬ್ಬಂದಿಗಳು ಮತ್ತು ಪಟ್ವಾರಿಗಳು ಎಲ್ಲಾ ತೊಂದರೆಗಳನ್ನು  ನಿವಾರಿಸಿರಬಹುದು. ಆದುದರಿಂದ ಈ ಹೂಡಿಕೆ ಮಾಡಲು ಸಾಧ್ಯವಾಗಿದೆ. ದೇಶವನ್ನು ಪ್ರಧಾನ ಮಂತ್ರಿ ಇಲ್ಲವೇ ಪಟ್ವಾರಿಗಳಿಂದ ನಡೆಸಬಹುದು. ಆದುದರಿಂದ ಯಶಸ್ವೀ ನಾಯಕತ್ವದಿಂದ  , ಮುಖ್ಯಮಂತ್ರಿಗಳಿಂದ ಹಿಡಿದು ಪಟ್ವಾರಿಗಳ ತನಕ  ಇಡೀಯ ತಂಡವೂ ಇದೇ ರೀತಿ ಒಂದೇ ದಿಕ್ಕಿನಲ್ಲಿ ಕಿರು ಅವಧಿಯಲ್ಲಿ ಚಿಂತಿಸಿ ಸಾಧಿಸುವುದು ಸಾಧ್ಯವಿದೆ.
 
ಎರಡನೇಯದಾಗಿ , ನೀವು ಎಲ್ಲವನ್ನೂ ಏಕ ವ್ಯಕ್ತಿಯ ಅಶಯದಂತೆ ನಡೆಯಲು ಬಿಟ್ಟಿಲ್ಲ ಎಂಬುದೂ ನನಗೆ ಹರ್ಷದ ಸಂಗತಿ. ನೀವು ಬೇರೆ ಬೇರೆ ವಲಯಗಳಿಗೆ ಸಂಬಂಧಿಸಿ ನೀತಿಗಳನ್ನು ರೂಪಿಸಿದಿರಿ.  ಮತ್ತು ಪ್ರತೀಯೊಂದನ್ನು ಪಾರದರ್ಶಕವಾಗಿ ನಿಭಾಯಿಸಿದಿರಿ. ಯಾರೊಬ್ಬರು ಕೂಡಾ ಇದನ್ನು ಆನ್ ಲೈನ್ ನಲ್ಲಿ ನೋಡಿ ಆ ನಿರ್ದಿಷ್ಟ ವ್ಯಕ್ತಿ ಆಯಾ ನೀತಿಯ ಚೌಕಟ್ಟಿನೊಳಗೆ ಬರುತ್ತಾನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಇದು ನೀತಿ ಆಧಾರಿತವಾಗಿ ನಡೆಯುವ ರಾಜ್ಯ ವ್ಯವಸ್ಥೆ. ಇದು ಉತ್ತರ ಪ್ರದೇಶದ ಒಂದು ಅತಿ ದೊಡ್ಡ ಸಾಧನೆ. ಆದುದರಿಂದ ನಿಮ್ಮೆಲ್ಲರಿಗೂ ನನ್ನ ಒಂದು ವಿನಂತಿ ಏನೆಂದರೆ , ದಯವಿಟ್ಟು ಈ 60,000 ಕೋ.ರೂ.ಗಳನ್ನು ಸಣ್ಣ ಮೊತ್ತ ಎಂದು ಪರಿಗಣಿಸಬೇಡಿ. ಅದು ಒಂದು ಅಸಾಮಾನ್ಯ ಸಾಧನೆ!. ನಾನು ಈ ಕ್ಷೇತ್ರದಲ್ಲಿ ಬಹಳ ಧೀರ್ಘಾವಧಿ ಕೆಲಸ ಮಾಡಿರುವುದರಿಂದ , ಇದಕ್ಕೆ ಎಂತಹ ಕಠಿಣ ಪ್ರಯತ್ನ ಬೇಕು ಎಂಬುದು ನನಗೆ ಗೊತ್ತಿದೆ. ಈ ನಿಟ್ಟಿನಲ್ಲಿ ಆರಂಭಿಕ ಕ್ರಮಗಳನ್ನು ಕೈಗೊಂಡು ಅದನ್ನು ನಿರಂತರ ಅನುಸರಿಸಿಕೊಂಡು ಹೋಗುವವರು ಬೇಕು. ಅವರು ಟೀಕೆಗಳನ್ನು ಎದುರಿಸಬೇಕು. ಆದರೆ ಆವರು ರಾಜ್ಯಕ್ಕೆ ಬದ್ದರಾಗಿದ್ದರೆ , ಹೊಸ ಹಾದಿಗಳು ತಾವಾಗಿಯೇ ತೆರೆದುಕೊಳ್ಳುತ್ತವೆ.
 
ಇಲ್ಲಿ ಸಂತೋಷ ಅನುಭವಿಸಲು ಎರಡು ಕಾರಣಗಳಿವೆ. ನೋಡಿ ಸೈಕಲ್ಲಿನ ಟ್ಯೂಬುಗಳಿಗೆ ನಿರ್ದಿಷ್ಟ ಬಿಂದುವಿನವರೆಗೆ ಸಾಕಷ್ಟು ಗಾಳಿ ಹಾಕಿದರೆ ಅದು ಚಲಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಟ್ಯೂಬಿನ ಒಂದು ಮೂಲೆಯಲ್ಲಿ ಗಾಳಿಯ ಗುಳ್ಳೆ ಇರುತ್ತದೆ . ಮೀಟರ್ ಒಳಭಾಗದಲ್ಲಿ ಸರಿಯಾದ ಪ್ರಮಾಣದಲ್ಲಿ ಗಾಳಿ ಇದೆ ಎಂದು ತೋರಿಸಿದರೂ , ಆ ಗಾಳಿಯ ಗುಳ್ಳೆ ಸೈಕಲಿಗೆ ಮುಂದುವರಿಯಲು ಅಡ್ಡಿಯುಂಟು ಮಾಡುತ್ತದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಸಮಗ್ರ ಅಭಿವೃದ್ದಿ ಮತ್ತು ರಾಜ್ಯದ ಎಲ್ಲಾ ವಲಯಗಳಲ್ಲಿ ಸಮತೂಕದ ಅಭಿವೃದ್ದಿಗೆ ಆದ್ಯತೆ ನೀಡಿರುವುದು ನನಗೆ ಸಂತೋಷ ತಂದಿದೆ. ಇಲ್ಲಿ ಸಮತೂಕದ ಅಭಿವೃದ್ದಿ ಅಗತ್ಯವಿದೆ. ನೊಯ್ಡಾ ಮತ್ತು ಗಾಜಿಯಾಬಾದ್ ಗಳ ಅಭಿವೃದ್ದಿಯಿಂದಲೇ ರಾಜ್ಯ ಪ್ರಗತಿ ಹೊಂದಬಹುದಾದರೂ ಉತ್ತರಪ್ರದೇಶದ ಆವಶ್ಯಕತೆಗಳನ್ನು ಆ ರೀತಿಯಲ್ಲಿ ಈಡೇರಿಸಿಕೊಳ್ಳಲಾಗದು. ಈ ಸಂಗತಿಗಳನ್ನೆಲ್ಲ ಸಾಧಿಸಿದ ಬಗೆ ಮತ್ತು ಈ ನಿಟ್ಟಿನಲ್ಲಿ ಕೈಗೊಂಡ ಉಪಕ್ರಮಗಳ ಬಗ್ಗೆ , ಮತ್ತು ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡ  ಬಗೆ ನನ್ನನ್ನು ಹರ್ಷಚಿತ್ತನನ್ನಾಗಿಸಿದೆ. ಮತ್ತು ಅದು ಶ್ಲ್ಯಾಘನಾರ್ಹವಾಗಿದೆ !.
 
ಕೆಲವರು ಇದನ್ನು ಶಿಲಾನ್ಯಾಸ ಕಾರ್ಯಕ್ರಮ ಎಂದು ವಿವರಿಸುತ್ತಾರೆ. ಸಾಂಪ್ರದಾಯಿಕವಾಗಿ ಇದು ಶಿಲಾನ್ಯಾಸ ಕಾರ್ಯಕ್ರಮ, ಆದರೆ ನಾನಿದನ್ನು ದಾಖಲೆ ಸೃಷ್ಟಿಸುವ, ದಾಖಲೆ ಮುರಿಯುವ ಕಾರ್ಯಕ್ರಮ ಎಂದು ಕರೆಯುತ್ತೇನೆ. ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ, ಹಿಂದಿನ ಕೆಲಸದ ವ್ಯವಸ್ಥೆಯಲ್ಲಿ ಅತ್ಯಲ್ಪ ಕಾಲದಲ್ಲಿ ಬದಲಾವಣೆಗಳನ್ನು ತರಲಾಗಿದೆ. ಉತ್ತರ ಪ್ರದೇಶದಲ್ಲಿ ಹಿಂದೆ ಇಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಯಾರೊಬ್ಬರೂ ಎದ್ದು ನಿಂತು ಹೇಳಲಾಗದಂತಹ ಸ್ಥಿತಿ ಬಂದಿದೆ. ಇವೆಲ್ಲ ಉತರ ಪ್ರದೇಶ ಆಡಳಿತ ವ್ಯವಸ್ಥೆಗೆ ಸಂಪೂರ್ಣ  ಹೊಸತು. ಯೋಗೀಜೀ ಅವರ ನಾಯಕತ್ವದ ಸರಕಾರ ಹೂಡಿಕೆದಾರರ ಜೊತೆ ಸದಾ ಸಂಪರ್ಕದಲ್ಲಿದ್ದು , ಪೂರಕ ವಾತಾವರಣವನ್ನು ರೂಪಿಸಿ ಹೂಡಿಕೆಯ ಆಶಯವನ್ನು ಬಂಡವಾಳ ಹೂಡಿಕೆಯನ್ನಾಗಿ  ಪರಿವರ್ತಿಸಿರುವುದು ನನಗೆ ಹರ್ಷದ ಸಂಗತಿಯಾಗಿದೆ. ಆನ್ ಲೈನ್ ಶೋಧಕ ವ್ಯವಸ್ಥೆ ಅಥವಾ ಅನುಮತಿಗಾಗಿ ನಿವೇಶ ಬಂಧುವಿನಂತಹ ಏಕ ಗವಾಕ್ಷ ವ್ಯವಸ್ಥೆ ಬದಲಾದ ಕೆಲಸದ ಸಂಸ್ಕೃತಿಯನ್ನು ಮಾತ್ರವೇ ತೋರಿಸುವುದಲ್ಲ, ಅದು ಉತ್ತರ ಪ್ರದೇಶದಲ್ಲಿ ವ್ಯಾಪಾರೋದ್ಯಮ ನಡೆಸುವುದಕ್ಕೆ ಸೂಕ್ತ ವಾತಾವರಣ ಇರುವುದನ್ನೂ ತೋರಿಸಿಕೊಡುತ್ತದೆ. ಉತ್ತರ ಪ್ರದೇಶದಲ್ಲಿ ಹೂಡಿಕೆ ಎನ್ನುವುದು ಒಂದು ದೊಡ್ಡ ಅನಾಹುತಕಾರಿ ಸವಾಲು ಎಂದು ಪರಿಗಣಿತವಾದ  ಕಾಲವಿತ್ತು. ಆ ಸವಾಲುಗಳೆಲ್ಲ ಈಗ ಅವಕಾಶಗಳಾಗಿ ಬದಲಾಗಿವೆ. ಈ ಅವಕಾಶಗಳು ಉದ್ಯೋಗಗಳಾಗಿ, ವ್ಯಾಪಾರೋದ್ಯಮ, ಉತ್ತಮ ರಸ್ತೆಗಳು, ಸಾಕಷ್ಟು ವಿದ್ಯುತ್, ಉತ್ತಮ ವರ್ತಮಾನ ಮತ್ತು ಭವ್ಯ ಭವಿತವ್ಯಗಳ ರೂಪದಲ್ಲಿ ಉತ್ತರ ಪ್ರದೇಶದ ಜನರಲ್ಲಿ ಬೆಳೆಯುತ್ತಿರುವ ಭರವಸೆಯನ್ನು ಪ್ರತಿಬಿಂಬಿಸುತ್ತವೆ. ಮತ್ತು ರಾಜ್ಯದ ಅಭಿವೃದ್ದಿ ಹಾಗು ಬೆಳವಣಿಗೆಯನ್ನು ಪ್ರತಿನಿಧಿಸುತ್ತವೆ. ನೀವು ಮುಂದೆ ಸಾಗುತ್ತಿರುವ ವೇಗವನ್ನು ನೋಡಿದರೆ, ಉತ್ತರ ಪ್ರದೇಶವು ಶೀಘ್ರವೇ ಟ್ರಿಲಿಯನ್ ಡಾಲರ್ ಆರ್ಥಿಕತೆಯ ಮಿತಿಯನ್ನು  ದಾಟಲಿದೆ ಎಂಬ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ. ನಾನು ನನ್ನ ಕೈಗಾರಿಕೋದ್ಯಮಿ ಮಿತ್ರರಿಗೆ ಅವರ ಬದ್ದತೆಗಾಗಿ ಅಭಿನಂದಿಸುತ್ತೇನೆ ಮತ್ತು ನಿಮ್ಮೆಲ್ಲರಿಗೆ  ನನ್ನ ಶುಭ ಹಾರೈಕೆಗಳಿವೆ.
 
ನಾವು ಕೈಗಾರಿಕೋದ್ಯಮಿಗಳ ಜೊತೆಯಲ್ಲಿ ನಿಲ್ಲಲು ಹಿಂಜರಿಯುವುದಿಲ್ಲ. ನಿಮಗೆ ಗೊತ್ತಿರಬೇಕು , ಕೆಲವರು ಕೈಗಾರಿಕೋದ್ಯಮಿಗಳ ಜೊತೆಯಲ್ಲಿ ಒಂದು ಛಾಯಾ ಚಿತ್ರ ತೆಗೆದುಕೊಳ್ಳುವುದಕ್ಕಾಗಿ ನಿಲ್ಲಲೂ ಹಿಂಜರಿಯುತ್ತಾರೆ. ಆದರೆ ಅವರ ಮನೆಗೆ ಹೋಗದ ಮತ್ತು ಅವರಿಗೆ ಸಾಷ್ಟಾಂಗವೆಸಗದ ಒಬ್ಬೇ ಒಬ್ಬ ಕೈಗಾರಿಕೋದ್ಯಮಿ ಇರಲಾರ. ಅಮರ್ ಸಿಂಗ್ ಜೀ ಇಲ್ಲಿ ಹಾಜರಿದ್ದಾರೆ. ಅವರು ಇಡೀಯ ಚರಿತ್ರೆ ಬಹಿರಂಗ ಮಾಡಬಲ್ಲರು. ಇವೆಲ್ಲದರ ನಡುವೆ ನಿಮ್ಮ ಉದ್ದೇಶಗಳು ಒಳ್ಳೆಯವಾಗಿದ್ದರೆ ಮತ್ತು ಪ್ರಾಮಾಣಿಕವಾದವುಗಳಾಗಿದ್ದರೆ ಯಾರೊಬ್ಬರ ಪಕ್ಕದಲ್ಲಿ ನಿಲ್ಲುವುದು ಅಪಾರ್ಥಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಮಹಾತ್ಮಾ ಗಾಂಧೀಜಿ ಅವರಂತಹ ಶುದ್ದ ಆತ್ಮ ಬಿರ್ಲಾ ಜೀ ಅವರಲ್ಲಿಗೆ ಹೋಗಿ ಅವರ ಜೊತೆ ನಿಲ್ಲಲು ಹಿಂಜರಿಯುತ್ತಿರಲಿಲ್ಲ. ಅವರ ಉದ್ದೇಶಗಳು ಶುದ್ದವಾಗಿದ್ದುದರಿಂದ ಅವರು ಬಿರ್ಲಾ ಜೀ ಅವರ ಪಕ್ಕದಲ್ಲಿ ನಿಲ್ಲಲು ಎಂದೆಂದೂ ಹಿಂಜರಿಯಲಿಲ್ಲ. ಸಾರ್ವಜನಿಕವಾಗಿ ಭೇಟಿಯನ್ನು ತಪ್ಪಿಸಿಕೊಂಡು ಆದರೆ ಬೆನ್ನ ಹಿಂದೆ ಎಲ್ಲವನ್ನೂ ಮಾಡುವವರು ಮಾತ್ರ ಸದಾ ಕಾಲವೂ ಹಿಂಜರಿಕೆ ತೋರ್ಪಡಿಸುತ್ತಲೇ ಇರುತ್ತಾರೆ. ಓರ್ವ ರೈತನ, ಕರಕುಶಲಗಾರನ , ಬ್ಯಾಂಕರ್, ಫೈನಾನ್ಸರ್, ಸರಕಾರಿ ನೌಕರ ಮತ್ತು ಕಾರ್ಮಿಕರ ಕಠಿಣ ದುಡಿಮೆ ದೇಶ ಕಟ್ಟುವಲ್ಲಿ ವಿಶಿಷ್ಟ ಪಾತ್ರವನ್ನು ವಹಿಸುತ್ತದೆ. ಕೈಗಾರಿಕೋದ್ಯಮಿಯ ಕಠಿಣ ದುಡಿಮೆ ಕೂಡಾ ಈ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅವರನ್ನು ಕಳ್ಳರೆಂಬಂತೆ ಹಣೆಪಟ್ಟಿ ಅವಮಾನ ಮಾಡುವುದು ಅತ್ಯಂತ ಅಸಮರ್ಥನೀಯ ಸಂಗತಿ. ಅವ್ಯವಹಾರ , ತಪ್ಪು ಕೆಲಸಗಳನ್ನು ಮಾಡುವವರನ್ನು ದೇಶದಿಂದ ಹೊರದಬ್ಬುವುದು ಅಥವಾ ಅವರನ್ನು ಬಂದೀಖಾನೆಯಲ್ಲಿ ಅಡ್ಡಾಡುವಂತೆ ಮಾಡುವುದು ಖಂಡಿತ. ಈ ಮೊದಲು ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿರಲಿಲ್ಲ, ಯಾಕೆಂದರೆ ಪ್ರತೀಯೊಬ್ಬರ ಬೆನ್ನ ಹಿಂದೆ ಪ್ರತೀಯೊಂದೂ ನಡೆಯುತ್ತಿತ್ತು. ಯಾರು ಯಾರೊಂದಿಗಿದ್ದಾರೆ ಎಂಬುದು ಚೆನ್ನಾಗಿ ಗೊತ್ತಿರುವ ಸಂಗತಿಯಾಗಿತ್ತು !.
 
ಆದುದರಿಂದ , ದೇಶವನ್ನು ಮುಂದೆ ಕೊಂಡೊಯ್ಯಲು ಪ್ರತೀಯೊಬ್ಬರ ಸಹಕಾರವೂ ಬೇಕು. 125 ಕೋಟಿ ಭಾರತೀಯರಿಗೆ ಗೌರವ ಕೊಡುವುದು ಪ್ರತೀಯೊಬ್ಬ ಭಾರತೀಯನ ಕರ್ತವ್ಯ. ಇಂದು ಆರಂಭಿಸಲಾದ ಯೋಜನೆಗಳು 2 ಲಕ್ಷಕ್ಕೂ ಅಧಿಕ ಯುವಕರಿಗೆ ಉದ್ಯೋಗ ಕೊಡುತ್ತವೆ ಮತ್ತು ಇಲ್ಲಿ ಸ್ಥಾಪನೆಯಾಗುವ ಕಾರ್ಖಾನೆಗಳು ಸ್ಥಳೀಯರಿಗೆ ಉದ್ಯೋಗ ನೀಡುತ್ತವೆ. ರೈತ ಇರಲಿ, ಕಾರ್ಮಿಕ ಇರಲಿ ಅಥವಾ ಯುವಕನಿರಲಿ , ಪ್ರತೀಯೊಬ್ಬರಿಗೂ ಲಾಭವಾಗುತ್ತದೆ.
 
ಸ್ನೇಹಿತರೇ,
 
ನಾನು ಉತ್ತರ ಪ್ರದೇಶದ  22 ಕೋಟಿ ಜನತೆಗೆ ಅವರ ಪ್ರೀತಿಯನ್ನು ಬಡ್ಡಿಯೊಂದಿಗೆ ಮರಳಿ ಕೊಡುತ್ತೇನೆ ಎಂಬುದಾಗಿ ಹೇಳಿದ್ದೆ. ಆ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಈ ಯೋಜನೆಗಳ ಆರಂಭ ಒಂದು ನಿರ್ಣಾಯಕ ಹಂತ. ಈ ಯೋಜನೆಗಳು ಉತ್ತರ ಪ್ರದೇಶದಲ್ಲಿಯ ಹಣಕಾಸು ಮತ್ತು ಕೈಗಾರಿಕಾ ಅಸಮತೋಲನವನ್ನು ನಿವಾರಣೆ ಮಾಡಲು ಸಹಾಯ ಮಾಡಲಿವೆ. ಇವು ರಾಜ್ಯದ ಕೆಲವೇ ಕೆಲವು ವಲಯಗಳಿಗೆ ಸೀಮಿತವಾಗಿಲ್ಲ. ಇವುಗಳು ನೊಯ್ಡಾ , ಗ್ರೇಟರ್ ನೊಯ್ಡಾ, ಮೀರತ್, ಮುಜಾಫರ್ ನಗರ್ , ಝಾನ್ಸಿ, ಹರ್ದೋಯಿ, ಅಮೇಥಿ, ರಾಯ್ ಬರೇಲಿ, ಜೌನ್ ಪುರ್ , ಮಿರ್ಜಾಪುರ, ಮತ್ತು ಗೋರಖಪುರಗಳಲ್ಲಿ ವಿಸ್ತರಣೆಯಾಗಲಿವೆ. ಈ ಯೋಜನೆಗಳು ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳಿಗೆ ಭಾರೀ ಬೆಂಬಲ ಒದಗಿಸಲಿವೆ. ಉತ್ತರ ಪ್ರದೇಶದಲ್ಲಿ ಅತ್ಯಂತ ವೇಗದ ಅಂತರ್ಜಾಲ ವ್ಯವಸ್ಥೆ ಅಥವಾ ಮಾಹಿತಿ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ, ಅಥವಾ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ಉತ್ತರ ಪ್ರದೇಶದ ಬೆಳವಣಿಗೆ, ಅಭಿವೃದ್ದಿಗೆ ಹೊಸ ವೇಗ ಮತ್ತು ದಿಕ್ಕು ತೋರಿಸಲಿದೆ ಜೊತೆಗೆ ಯುವಜನತೆಗೆ ಹೊಸ ಅವಕಾಶಗಳನ್ನು ಒದಗಿಸಲಿದೆ. ಇದು ಸರಕಾರದ ವ್ಯಾಪಕ ಯೋಜನೆಯ ಒಂದು ಭಾಗ. ಡಿಜಿಟಲೀಕರಣದೊಂದಿಗೆ ಜನಸಾಮಾನ್ಯರ ಜೀವನವನ್ನು ಸುಲಭಗೊಳಿಸುವ ಸರಕಾರದ ಯೋಜನೆಯ ಅಂಗ. ನಾವು ಯಾವುದೇ ಪಕ್ಷಪಾತರಹಿತವಾದ ಮತ್ತು ಅದಕ್ಕೆ ಅವಕಾಶ ನೀಡದಂತಹ ವ್ಯವಸ್ಥೆಯನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ. ಈ ಪ್ರಕ್ರಿಯೆ ವೇಗ ಮತ್ತು ಸೂಕ್ಷ್ಮತ್ವವನ್ನು ತೋರಿಸುವಂತಿರಬೇಕು. ಶ್ರೀಮಂತರು ಮತ್ತು ಬಡವರ ನಡುವೆ, ಉನ್ನತ ವರ್ಗದವರು ಮತ್ತು ಕೆಳವರ್ಗದವರ ನಡುವೆ ಯಾವುದೇ ಭೇಧ ಭಾವ ಅಲ್ಲಿ  ಇರಬಾರದು. ಅಲ್ಲಿ ಎಲ್ಲರಿಗೂ ಏಕರೂಪವಾದ ಅನುಕೂಲತೆಗಳು ಇರಬೇಕು-’ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವಂತೆ.
 
ಸ್ನೇಹಿತರೇ,
 
ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಸೇವೆಗಳ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. 3 ಲಕ್ಷಕ್ಕೂ ಅಧಿಕ ಸಾಮಾನ್ಯ ಸೇವಾ ಕೇಂದ್ರಗಳು ನಮ್ಮ ಗ್ರಾಮಗಳಲ್ಲಿಯ ಗ್ರಾಮೀಣ ಜೀವನವನ್ನು ಪರಿವರ್ತನೆ ಮಾಡಿವೆ. ಟಿಕೇಟ್ ಕಾಯ್ದಿರಿಸುವಿಕೆ, ಟೆಲಿಮೆಡಿಸಿನ್, ಜನ ಔಷಧಿ, ಆಧಾರ್, ವಿದ್ಯುತ್ ಮತ್ತು ದೂರವಾಣಿ ಬಿಲ್ ಇತ್ಯಾದಿ ಪಾವತಿಗಾಗಿ ಗ್ರಾಮಸ್ಥರು ಸರಕಾರಿ ಕಚೇರಿಗಳಿಗೆ ಓಡಾಡಬೇಕಾದ ಅನಿವಾರ್ಯತೆ ಇಲ್ಲ. ಗ್ರಾಮಗಳಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳು, ಉಚಿತ ವೈ-ಫೈ ಹಾಟ್ ಸ್ಪಾಟ್ ಮತ್ತು ಅಗ್ಗದ ಅಂತರ್ಜಾಲ  ಬಡವರು ಮತ್ತು ಮಧ್ಯಮ ವರ್ಗದವರ ಜೀವನವನ್ನು ಸುಲಭಗೊಳಿಸಿವೆ.
 
ಸ್ನೇಹಿತರೇ,
 
ಹಲವಾರು ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ನಮ್ಮ ಶಕ್ತಿಯಾಗಿದೆ. ಇಂದು ಐ.ಟಿ. ರಫ್ತು ವಲಯ ದಾಖಲೆ ಮಟ್ಟದಲ್ಲಿದೆ. 40 ಲಕ್ಷಕ್ಕೂ ಅಧಿಕ ಮಂದಿ ಈ ಕೈಗಾರಿಕಾ ಕ್ಷೇತ್ರದಲ್ಲಿದ್ದಾರೆ. ಆದರೆ ಈ ಶಕ್ತಿ ದೇಶದ ದೊಡ್ದ ನಗರಗಳಿಗೆ  ಮತ್ತು ಮೆಟ್ರೋಗಳಿಗೆ ಸೀಮಿತವಾಗಿದೆ. ನಮ್ಮ ಸರಕಾರವು ಈ ಶಕ್ತಿಯನ್ನು ಸಣ್ಣ ಪಟ್ಟಣಗಳು ಮತ್ತು ನಗರಗಳತ್ತ ಹಾಗು ಗ್ರಾಮಗಳತ್ತ ದೂಡುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದೆ.
 
ಸ್ನೇಹಿತರೇ,
 
ಸರಕಾರದಲ್ಲಿ ಏಕಾಂಗಿಯಾಗಿ ಚಿಂತಿಸುವ ಸಂಪ್ರದಾಯ ಈಗ ಹೋಗಿದೆ. ವಿಳಂಬ ಮಾಡುವ ಧೋರಣೆಗೆ ಅಂಕುಶ ಹಾಕಿ ಪರಿಹಾರ ಮತ್ತು ಅವುಗಳ ಸಂಯೋಜನೆಯನ್ನು ಉತ್ತೇಜಿಸಲಾಗುತ್ತಿದೆ. ಸರಕಾರಿ ಯೋಜನೆಗಳು ಮತ್ತು ಕ್ರಮಗಳಲ್ಲಿ ನೇರ ಸಂಪರ್ಕ ಏರ್ಪಡಿಸಲಾಗಿದೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಮತ್ತು ಮೇಕ್ ಇನ್ ಇಂಡಿಯಾ ಆಂದೋಲನಗಳು ಇದಕ್ಕೆ ಅತ್ಯುತ್ತಮ ದೃಷ್ಟಾಂತಗಳು. ಮೊಬೈಲ್ ಫೋನುಗಳ ಇಳಿಯುತ್ತಿರುವ ಬೆಲೆಗೆ ಡಿಜಿಟಲ್ ವರ್ಗಾವಣೆ ಹೆಚ್ಚುತ್ತಿರುವುದು ಒಂದು ಕಾರಣ. ಭಾರತದಲ್ಲಿ ಮೊಬೈಲ್ ಫೋನುಗಳನ್ನು ಹೆಚ್ಚು ವೇಗದಲ್ಲಿ ಉತ್ಪಾದಿಸುತ್ತಿರುವುದರಿಂದ  ಈಚಿನ ದಿನಗಳಲ್ಲಿ ಮೊಬೈಲ್ ಫೋನುಗಳ ಬೆಲೆ ಇಳಿಕೆಯಾಗುತ್ತಿದೆ. ಇಂದು ದೇಶ ವಿಶ್ವಕ್ಕೆ ಮೊಬೈಲ್ ಫೋನುಗಳನ್ನು ಉತ್ಪಾದಿಸುವ ತಾಣವಾಗುತ್ತಿದೆ. ನಾವು ವಿಶ್ವದಲ್ಲಿ ಮೊಬೈಲ್ ಉತ್ಪಾದಕ ರಾಷ್ಟ್ರಗಳಲ್ಲಿ ಎರಡನೆಯ ಸ್ಥಾನದಲ್ಲಿದ್ದೇವೆ. ಮತ್ತು ಈ ಮೊಬೈಲ್ ಉತ್ಪಾದನಾ ಕ್ರಾಂತಿಯಲ್ಲಿ ಉತ್ತರ ಪ್ರದೇಶ ಮುಂಚೂಣಿಯಲ್ಲಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಪ್ರಸ್ತುತ ಉತ್ತರ ಪ್ರದೇಶ 50ಕ್ಕೂ ಅಧಿಕ ಮೊಬೈಲ್ ತಯಾರಕ ಕಾರ್ಖಾನೆಗಳನ್ನು ಹೊಂದಿದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಅತ್ಯಂತ ದೊಡ್ದ ಉತ್ಪಾದನಾ ಘಟಕವನ್ನು ಆರಂಭಿಸಲಾಗಿದೆ. ಇಂದು ಚಾಲನೆ ನೀಡಲಾದ ಕಾರ್ಖಾನೆಗಳಲ್ಲಿ ಮೊಬೈಲ್ ತಯಾರಕಾ ಕಾರ್ಖಾನೆಗಳು ಸೇರಿವೆ.
 
ಸ್ನೇಹಿತರೇ,
 
ಇಂದಿನ ಪರಿಸರವನ್ನು ನಿರ್ಮಾಣ ಮಾಡಲು ಕಳೆದ ನಾಲ್ಕು ವರ್ಷಗಳಿಂದ ಸರಕಾರ ಹಲವಾರು ನಿರ್ಧಾರಗಳನ್ನು ಕೈಗೊಂಡಿದೆ. ವಿದೇಶೀ ನೇರ ಹೂಡಿಕೆ, ಉತ್ಪಾದಕರಿಗೆ ಪ್ರೋತ್ಸಾಹ ಧನ, ಅಥವಾ ಪ್ರಕ್ರಿಯೆಗಳ ಸರಳೀಕರಣದಂತಹ ನಿರ್ಧಾರಗಳು ಇದರಲ್ಲಿ ಸೇರಿವೆ. ಇವೆಲ್ಲ ಕೈಗಾರಿಕೆಗಳಿಗೆ ಅನುಕೂಲಕರ ಪರಿಸರವನ್ನು ನಿರ್ಮಾಣ ಮಾಡಿವೆ. ಹಲವಾರು ವರ್ಷಗಳಿಂದ ಜಿ.ಎಸ್.ಟಿ. ತಡೆಹಿಡಿಯಲ್ಪಟ್ಟಿತ್ತು. ಅದು ಈಗ ಭಾರತವನ್ನು  ತೆರಿಗೆ ಜಾಲದಿಂದ ವಿಮೋಚನೆಗೊಳಿಸಿದೆ. ಕೈಗಾರಿಕಾ ಕ್ಷೇತ್ರ ಇದರಿಂದ ಗರಿಷ್ಟ ಲಾಭ ಪಡೆದಿದೆ.
 
ಕಳೆದ ಕೆಲವು ವರ್ಷಗಳಿಂದ , ದೇಶದಲ್ಲಿ ಉತ್ಪಾದನಾ ಚಟುವಟಿಕೆಯನ್ನು ಪ್ರೋತ್ಸಾಹಿಸಲು ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಖರೀದಿಯಲ್ಲಿ ಮೇಕ್ ಇನ್ ಇಂಡಿಯಾಕ್ಕೆ ಆದ್ಯತೆ ನೀಡುವ ಮೂಲಕ ಸರಕಾರವು ದೇಶೀಯ ಮೂಲಗಳಿಂದಲೇ ಸರಕು ಮತ್ತು ಸೇವೆಗಳನ್ನು ಖರೀದಿಸುವಂತೆ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಸೂಚನೆ ನೀಡಿದೆ. ಮೇಕ್ ಇನ್ ಇಂಡಿಯಾವನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದು ಸಣ್ಣ ಕೈಗಾರಿಕೆಗಳಿಗೂ ಅನುಕೂಲ ಮಾಡಿಕೊಡುತ್ತಿದೆ. ಕಳೆದ ಒಂದು ವರ್ಷದಲ್ಲಿ ಮಾಡಲಾದ ಬದಲಾವಣೆಗಳಿಂದ ಉತ್ತರ ಪ್ರದೇಶ ಎರಡು ಬಾರಿ ಲಾಭ ಪಡೆದಿದೆ. ನೀತಿಗಳ ರಚನೆ  ಮತ್ತು ಅಪರಾಧ ಕೃತ್ಯಗಳ ನಿಯಂತ್ರಣಕ್ಕಾಗಿ ಯೋಗಿ ಜೀ ಅವರ ಸರಕಾರ ಕೈಗೊಂಡ ಕ್ರಮಗಳು ಉತ್ತರ ಪ್ರದೇಶಕ್ಕೆ ವರದಾನವಾಗಿವೆ. ಸ್ನೇಹಿತರೇ, ಬಿ.ಜೆ.ಪಿ.ಸರಕಾರವು ’ಸಮಗ್ರ ದೃಷ್ಟಿ , ಒಳಗೊಳ್ಳುವ ಕ್ರಮ’ಗಳ ಧೋರಣೆಯ ಮೂಲಕ ಕಾರ್ಯಾಚರಿಸುತ್ತಿದೆ.
 
ನಾನು ಈ ವೇದಿಕೆಯಿಂದ ಕೈಗಾರಿಕೋದ್ಯಮಿಗಳಿಗೆ ಮತ್ತೆ ಭರವಸೆ ನೀಡಲು ಬಯಸುತ್ತೇನೆ. ಇದು ನನಗೆ ಈ  ಓಟದ ಆರಂಭ ಮಾತ್ರ .ಸಾಗುವ ದಾರಿ ಬಹಳ ದೂರವಿದೆ. ಮತ್ತು ಅಲ್ಲಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕಾದ ಅಗತ್ಯವಿದೆ. ನೀವು ದೇಶ ಕಟ್ಟುವ ನಿಟ್ಟಿನಲ್ಲಿ ಪ್ರಮುಖವಾದ ಘಟಕಗಳು. ಮತ್ತು ನಿಮ್ಮ ನಿರ್ಧಾರಗಳು ದೇಶದ ಕೋಟ್ಯಾಂತರ ಯುವಜನತೆಯ ಆಶೋತ್ತರಗಳಿಗೆ ಜೋಡಣೆಗೊಂಡಿರುತ್ತವೆ. ಈ ಕನಸುಗಳನ್ನು ಈಡೇರಿಸಲು ಭವಿಷ್ಯದಲ್ಲಿ ಬಲಿಷ್ಟವಾದ ನಿರ್ಧಾರಗಳನ್ನು ಕೈಗೊಳ್ಳುವ ಇರಾದೆ ಮತ್ತು ಶಕ್ತಿ ನಮ್ಮಲ್ಲಿದೆ.
 
ಮೂಲಸೌಕರ್ಯಗಳಿಗೆ ಸಂಬಂಧಿಸಿದ ನಮ್ಮ ಪ್ರಮುಖ ಯೋಜನೆಗಳು ಪೂರ್ಣಗೊಳ್ಳುತ್ತಿದ್ದಂತೆ , ಹೂಡಿಕೆ ಹಿಂತೆಗೆತ ಸುಲಭವಾಗಲಿದೆ. ಸಾಗಾಟದ ಮೇಲಣ ಖರ್ಚು ವಿಶೇಷವಾಗಿ ಕಡಿಮೆಯಾಗಲಿದೆ. ಹೊಸ ತಲೆಮಾರಿನ ಮೂಲಸೌಕರ್ಯ ಸಾರ್ವಜನಿಕರಿಗೆ ಮಾತ್ರವಲ್ಲ ಕೈಗಾರಿಕಾ ವಲಯಕ್ಕೂ ಲಾಭ ತರಲಿದೆ.
 
ಸ್ನೇಹಿತರೇ,
 
ಮಾಹಿತಿ ತಂತ್ರಜ್ಞಾನ , ಬಳಕೆದಾರ ಇಲೆಕ್ಟ್ರಾನಿಕ್ಸ್ ಮತ್ತು ಇಲೆಕ್ತ್ರಾನಿಕ್ಸ್ ಉತ್ಪಾದನೆ ಕ್ಷೇತ್ರಗಳಿಗೆ ಸಂಬಂಧಿಸಿ ಉತ್ತರ ಪ್ರದೇಶದಲ್ಲಿ ಬಹಳಷ್ಟು ಅವಕಾಶ ಸಾಧ್ಯತೆಗಳಿವೆ. ಸದ್ಯೋಭವಿಷ್ಯದಲ್ಲಿ ಹೊಸ ಮೂಲ ಸೌಕರ್ಯಗಳಿಂದಾಗಿ ಸಣ್ಣ ಮತ್ತು ಕಿರು ಕೈಗಾರಿಕೋದ್ಯಮ ವಲಯ ಲಾಭ ಪಡೆಯಲಿದೆ. ಪ್ರಸಕ್ತ ನಗದು ಆಧಾರಿತ ವ್ಯವಹಾರ ವರ್ಗಾವಣೆ ಮಾಡುತ್ತಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಡಿಜಿಟಲ್ ವರ್ಗಾವಣೆಯತ್ತ ಹೊರಳಿಕೊಳ್ಳಬೇಕು ಎಂದು ನಾನು ಅವುಗಳಿಗೆ ಮನವಿ ಮಾಡುತ್ತೇನೆ.
 
ಸ್ನೇಹಿತರೇ,
 
125 ಕೋಟಿ ಜನರ ಕನಸುಗಳನ್ನು ನನಸು ಮಾಡಲು ನಿರಂತರ ಪ್ರಯತ್ನ  ಮತ್ತು ಸಹ್ಯ ಅಭಿವೃದ್ದಿಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಸಹ್ಯ ಅಭಿವೃದ್ದಿಯಲ್ಲಿ ವಿದ್ಯುತ್ ಮೂಲ ಸೌಕರ್ಯ ಪ್ರಮುಖ ಅಂಶ. ನಿರಂತರ ವಿದ್ಯುತ್ ಕೈಗೆಟಕುವ ದರದಲ್ಲಿ ಲಭ್ಯ ಇರುವುದು ಜನತೆಯ ಅತ್ಯಂತ ಆಗತ್ಯ ಆವಶ್ಯಕತೆಯಾಗಿದೆ. ವಿದ್ಯುತ್ ಕೃಷಿ ಮತ್ತು ಕೈಗಾರಿಕೆಗಳಿಗೂ ಅಷ್ಟೇ ಅವಶ್ಯ. ಆದುದರಿಂದ ವಿದ್ಯುತ್ ಈ ಸರಕಾರದ ಆದ್ಯತೆಯ ವಿಷಯ. ಇಂದು ದೇಶವು ಸಾಂಪ್ರದಾಯಿಕ ವಿದ್ಯುತ್ತಿನಿಂದ ಹಸಿರು ಇಂಧನದತ್ತ ಹೊರಳುತ್ತಿದೆ. ಸರಕಾರವು ಸೌರ ವಿದ್ಯುತ್ತಿಗೆ ಹೆಚ್ಚು ಆದ್ಯತೆ ಕೊಡುತ್ತಿದೆ. ಅಂತಾರಾಷ್ಟ್ರೀಯ ಸೌರ ಮಿತ್ರಕೂಟ ಸ್ಥಾಪನೆ ನಿಟ್ಟಿನಲ್ಲಿ ನಮ್ಮ ಉಪಕ್ರಮಗಳು ವಿಶ್ವದಾದ್ಯಂತ ಗುರುತಿಸಲ್ಪಟ್ಟಿವೆ. ಉತ್ತರ ಪ್ರದೇಶವು ಸೌರ ವಿದ್ಯುತ್ತಿನ  ತಾಣವಾಗಲಿದೆ. ಕೆಲವು ತಿಂಗಳ ಹಿಂದೆ ಮಿರ್ಜಾಪುರದಲ್ಲಿ ಬೃಹತ್ ಸೌರ ವಿದ್ಯುತ್ ಘಟಕವನ್ನು ಉದ್ಘಾಟಿಸಲಾಗಿದೆ. ಇಂದು , ಇನ್ನೊಂದು ಘಟಕಕ್ಕೆ ಶಿಲಾನ್ಯಾಸ ಮಾಡಲಾಗಿದೆ.
 
ಸಹೋದರರೇ ಮತ್ತು ಸಹೋದರಿಯರೇ,
 
ಇಂದು ಸೌರ ತಂತ್ರಜ್ಞಾನಕ್ಕೆ ಮತ್ತು ಸೌರ ಪಂಪುಗಳಿಗೆ ಭಾರತದಲ್ಲಿ ಮಾತ್ರವಲ್ಲ ಆಫ್ರಿಕಾ ಮತ್ತು ಇತರ ಅಭಿವೃದ್ದಿಶೀಲ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ನಾನು ನನ್ನ ಎಲ್ಲಾ ಕೈಗಾರಿಕೋದ್ಯಮಿ ಮಿತ್ರರಿಗೆ ಮನವಿ ಮಾಡುವುದೇನೆಂದರೆ , ತಾವೆಲ್ಲರೂ ಭಾರತದ ಸ್ವಚ್ಚ ಮತ್ತು ಹಸಿರು ಇಂಧನ ವಲಯದಲ್ಲಿ ಮಾಡಿರುವ ವಿಶಿಷ್ಟ ಪರಿಸರವನ್ನು ಉತ್ತಮವಾಗಿ ಬಳಸಿಕೊಳ್ಳಲು ಮುಂದೆ ಬರಬೇಕು ಎಂಬುದಾಗಿ.
 
ಸ್ನೇಹಿತರೇ,
 
ವಿದ್ಯುತ್ ಉತ್ಪಾದನೆಯಿಂದ ಹಿಡಿದು ಪ್ರತೀ ಮನೆಗೂ ಅದರ ವಿತರಣೆ ಅಭೂತಪೂರ್ವ ರೀತಿಯಲ್ಲಿ ನಡೆಯುತ್ತಿದೆ. ನಮ್ಮ ಇಂಧನ ಕೊರತೆ ನಾಲ್ಕು ವರ್ಷಗಳಲ್ಲಿ ಶೇಖಡಾ 4.2 ರಿಂದ ಶೇಖಡಾ 1 ಕ್ಕಿಂತ ಕೆಳಗಿಳಿದಿದೆ. ಒಂದು ಕಾಲದಲ್ಲಿ ಹಗರಣಕ್ಕೆ ಕಾರಣವಾಗಿದ್ದ ಕಲ್ಲಿದ್ದಲು ಇಂದು ದಾಖಲೆ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ. ಇಂದು ವಿದ್ಯುತ್ ಗ್ರಿಡ್ ಗಳು ಕಲ್ಲಿದ್ದಲು ಕೊರತೆಯಿಂದ ವಿಫಲವಾಗುವ ಪರಿಸ್ಥಿತಿ ಇಲ್ಲ.
 
ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯುತ್ ಕ್ಷೇತ್ರದಲ್ಲಿ ತಂದಿರುವ ಸುಧಾರಣೆಗಳು ದೇಶದ ಜನರ ಹಣವನ್ನು ಉಳಿಸಿವೆ.
 
ಉದಯ್ ಯೋಜನೆ ಕಂಪೆನಿಗಳ ಹರಡುವಿಕೆಗೆ ಹೊಸ ಜೀವದಾನ ಮಾಡಿದೆ. ಉಜಾಲಾ ಯೋಜನೆಯಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಎಲ್.ಇ.ಡಿ. ಬಲ್ಬುಗಳ ಅಳವಡಿಕೆಯ ಫಲ ವಿದ್ಯುತ್ ಬಿಲ್ ಗಳಲ್ಲಿ ಇಳಿಕೆಯಾಗಿದೆ, ವಾರ್ಷಿಕ 50 ಸಾವಿರ ಕೋಟಿ ರೂಪಾಯಿಯಷ್ಟು ಹಣ ವಿಶೇಷವಾಗಿ ಮಧ್ಯಮವರ್ಗದ ಜನರಿಗೆ ಮತ್ತು ಬೀದಿ ದೀಪಗಳಿಗಾಗಿ ಪಾವತಿ ಮಾಡುವ ನಗರಪಾಲಿಕೆಗಳಿಗೆ ಉಳಿತಾಯವಾಗಿದೆ. ಮೋದಿ 50,000 ಕೋ.ರೂ.ಗಳ ರಿಯಾಯತಿ ಘೋಷಿಸಿದ್ದರೆ ಅದು ಮುಖಪುಟ ಶೀರ್ಷಿಕೆಯ ಸುದ್ದಿಯಾಗುತ್ತಿತ್ತು. ಜನರೂ ಪ್ರಭಾವಿತರಾಗುತ್ತಿದ್ದರು.ಆದರೆ ನಾವು ಜನರಿಗೆ 50 ಸಾವಿರ ಕೋಟಿ ರೂ.ಗಳನ್ನು ಉಳಿತಾಯ ಮಾಡುವ ಯೋಜನೆಯನ್ನು ರೂಪಿಸಿದೆವು !. ದೇಶವು ಸರಿಯಾದ ಅಭಿವೃದ್ದಿಗೆ ಸಹಾಯ ಮಾಡುವ ಆಶಯಗಳೊಂದಿಗೆ ಕೆಲಸ ಮಾಡುತ್ತಿದೆ ಮತ್ತು ಪರಿವರ್ತನೆಗೆ ಒಳಪಡುತ್ತಿದೆ.
 
 
 
ಸ್ನೇಹಿತರೇ,
 
ಇಂದು ವಿದ್ಯುತ್ ಸುಲಭವಾಗಿ ದೊರೆಯುತ್ತಿದೆ. ವಿಶ್ವ ಬ್ಯಾಂಕಿನ ಸುಲಭದಲ್ಲಿ ವಿದ್ಯುತ್ ದೊರೆಯುವ ರಾಷ್ಟ್ರಗಳ ಶ್ರೇಯಾಂಕದಲ್ಲಿ ಭಾರತದ ಸ್ಥಾನ ಮಾನ 82ಕ್ಕೇರಿದೆ. ಅಲ್ಲಿ ಇಂತಹ ಶ್ಲ್ಯಾಘನಾರ್ಹ ಸುಧಾರಣೆಯಾಗಿದೆ !. ಇಂದು ಪ್ರತೀ ಗ್ರಾಮಕ್ಕೂ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ನಾವು ದೇಶದ ಪ್ರತೀಯೊಂದೂ ಗ್ರಾಮವನ್ನು ವಿದ್ಯುದ್ದೀಕರಿಸುವ ಗುರಿಯನ್ನು ಮುಂದಿನ ವರ್ಷದ ಮಾರ್ಚ್  ತಿಂಗಳೊಳಗೆ ಸಾಧಿಸಲು ಪ್ರಕ್ರಿಯೆಗಳನ್ನು ತ್ವರಿತಗೊಳಿಸಲಾಗಿದೆ. .
 
ಕೆಲವರು ನಮ್ಮನ್ನು ಟೀಕಿಸಲು ಕಾರಣಗಳನ್ನು ಹುಡುಕುತ್ತಲೇ ಇರುತ್ತಾರೆ. ನಾವೇನಾದರೂ ಮಾಡಿದ್ದೇವೆ ಎಂದು ಹೇಳಿದರೆ, ಅವರು ಇಲ್ಲ, ಅದನ್ನು ಮಾಡಿಲ್ಲ ಎನ್ನುತ್ತಾರೆ. ನನ್ನ ಟೀಕಾಕಾರರಿಗೆ ನಾನು ಹೇಳಬಯಸುತ್ತೇನೆ ಏನೆಂದರೆ ಮೋದಿಯನ್ನು  ಖಂಡಿಸಲು, ಟೀಕಿಸಲು ಕಾರಣಗಳನ್ನು ಹುಡುಕುವುದಿದ್ದರೆ , ಅಲ್ಲಿ 70 ವರ್ಷಗಳಿಂದ ಬಾಕಿಯಾದ ಯೋಜನೆಗಳಿವೆ. ನೀವು ವಸ್ತು ಸ್ಥಿತಿಯ ಬಗ್ಗೆ ನೋಡುವುದಿದ್ದರೆ ಕೆಲವು ಸಂಗತಿಗಳು ಕಳೆದ 70 ವರ್ಷಗಳಿಂದ ಬಾಕಿಯಾಗಿ ಉಳಿದಿರುವ ವಸ್ತುಸ್ಥಿತಿ ಖಂಡಿತವಾಗಿಯೂ ನಿಮಗೆದುರಾಗುತ್ತದೆ. ಒಳ್ಳೆಯದು, ನಾವು ದೇಶಕ್ಕೆ ಅನಿರ್ಬಂಧಿತ, ನಿರಂತರ  ವಿದ್ಯುತ್ ಪೂರೈಸುವ ಗುರಿ ಸಾಧಿಸಲು ಪ್ರಯತ್ನಿಸುತ್ತಿದ್ದೇವೆ. ಆದುದರಿಂದ , ವಿದ್ಯುತ್ ಸಾಗಾಟದ ಜಾಲವನ್ನು ಬಲಪಡಿಸಲಾಗುತ್ತಿದೆ.
 
ಇಂದು ಉದ್ಘಾಟಿಸಿದ ಘಟಂಪುರ್-ಹಾಪೂರ್ ಸಾಗಾಟ ಮಾರ್ಗ ಅದೇ ಯೋಜನೆಯ ಭಾಗ. ಹಿಂದಿನ ಸರಕಾರಗಳ ಅವಧಿಯಲ್ಲಿ ಅಸ್ತವ್ಯಸ್ತಗೊಂಡಿದ್ದ ಸಾಗಾಟ ವ್ಯವಸ್ಥೆಯನ್ನು ಮರುಸ್ಥಾಪಿಸಲು ಯೋಗೀ ಜೀ ಸರಕಾರವನ್ನು ಉತ್ತೇಜಿಸಲಾಗುತ್ತಿದೆ. ಉತ್ತರ ಪ್ರದೇಶದ ಲಕ್ನೋದಿಂದ ಬಹಳ ಧೀರ್ಘ ಅವಧಿಯಿಂದ ಸಂಸತ್ ಸದಸ್ಯರು ಆಯ್ಕೆಯಾಗುತ್ತಿದ್ದಾರೆ. ನಮ್ಮ ಗೌರವಾನ್ವಿತ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಜೀ ಆಗಾಗ ಹೇಳುತ್ತಿರುತ್ತಾರೆ, ಸಮೃದ್ದ, ಸಾಮರ್ಥ್ಯ ಶೀಲ, ಮತ್ತು ಸೂಕ್ಷ್ಮ ಸಂವೇದಿ ಹಾಗು ಶ್ರೀಮಂತರು ಹಾಗು ಬಡವರ ನಡುವೆ ಯಾವುದೇ ಅಂತರ ಇಲ್ಲದ , ಕಾರ್ಮಿಕರು ಮತ್ತು ಬಂಡವಾಳಶಾಹಿಗಳು ಆಥವಾ ಆಡಳಿತಗಾರರು ಮತ್ತು ನಾಗರಿಕರ ನಡುವೆ ಅಂತರರಹಿತ ಭಾರತವನ್ನು ತಾವು ಕಾಣಬೇಕಾಗಿದೆ ಎಂಬುದಾಗಿ. 
 
ಅಟಲ್ ಜೀ ಇದರ ಬಗ್ಗೆ ಕನಸು ಕಂಡಿದ್ದರು ಮಾತ್ರವಲ್ಲ, ಅದನ್ನು ಸಾಧಿಸಲು ಅತ್ಯಂತ ಸ್ಪಷ್ಟವಾದ ದಾರಿಯನ್ನೂ ರೂಪಿಸಿದ್ದರು. ಅವರೊಮ್ಮೆ ಹೇಳಿದ್ದರು-ರಸ್ತೆಗಳೆಂದರೆ ಕೈಯ ರೇಖೆಗಳು ಎಂದು. ಈ ಚಿಂತನೆಯ ಫಲವಾಗಿ , ಅವರು ಮೂಲಸೌಕರ್ಯಗಳತ್ತ ಆದ್ಯತೆ ನೀಡಿದರು. ಆ ಚಿಂತನೆಯನ್ನು 21 ನೇ ಶತಮಾನದ ಆವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹಂತಕ್ಕೆ ಅನುಗುಣವಾಗಿ ಮುಂದುವರೆಸಿಕೊಂಡು ಹೋಗಲು ಬಹಳ ಶ್ರಮಪಡುತ್ತಿದ್ದೇವೆ.
 
ದೇಶದ ಅತ್ಯಂತ ಉದ್ದದ ಎಕ್ಸ್ ಪ್ರೆಸ್ ಹೆದ್ದಾರಿ, ಪೂರ್ವಾಂಚಲ ಎಕ್ಸ್ ಪ್ರೆಸ್ ಹೆದ್ದಾರಿ, ಮತ್ತು ಬುಂದೇಲ್ ಖಂಡದಲ್ಲಿ ರಕ್ಷಣಾ ಕೈಗಾರಿಕಾ ಕಾರಿಡಾರ್ ಗಳಂತಹ ಯೋಜನೆಗಳನ್ನು ತ್ವರಿತಗತಿಯಿಂದ ಪೂರ್ಣಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ.   ಸ್ನೇಹಿತರೇ, ವಿಶ್ವದಲ್ಲಿರುವ ಅತ್ಯುತ್ತಮ ವಿಧಾನಗಳು ನಮ್ಮ ಯುವಕರಿಗೆ ಮತ್ತು 125 ಕೋಟಿ ಜನರಿಗೆ ಲಭ್ಯವಾಗುವಂತೆ ಮಾಡಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಸರಕಾರ ಮಾಡುತ್ತಿದೆ. ಕೋಟ್ಯಾಂತರ ಜನರ ಕನಸುಗಳನ್ನು ನನಸು ಮಾಡುವುದು ಮತ್ತು ಜನ ಸಹಭಾಗಿತ್ವದಲ್ಲಿ ನವ ಭಾರತ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ. ಉತ್ತರ ಪ್ರದೇಶ ಮತ್ತು ದೇಶಕ್ಕಾಗಿ ನೀವು ಮಾಡುತ್ತಿರುವ ಪ್ರತಿಯೊಂದು ಕೆಲಸಕ್ಕಾಗಿ ನಾನು ನಿಮ್ಮೆಲ್ಲರಿಗೂ ಹೃದಯಾಂತರಾಳದಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಒಂದೆರಡು ತಿಂಗಳ ಹಿಂದೆ ನಾನು ಮುಂಬಯಿಗೆ ಹೋಗಿದ್ದೆ ಮತ್ತು ಕೈಗಾರಿಕೋದ್ಯಮಿಗಳನ್ನು  ಆಹ್ವಾನಿಸಿದ್ದೆ. ಸಾಮಾನ್ಯವಾಗಿ ಜನರು ಅವರನ್ನು ಆಹ್ವಾನಿಸುತ್ತಾರೆ ಆದರೆ ಯಾವುದನ್ನೂ ಹೇಳುವ ಧೈರ್ಯ ಮಾಡುವುದಿಲ್ಲ. ನಾನು ಅವರಿಗೆ ಪ್ರದರ್ಶಿಕೆಯೊಂದನ್ನು ತೋರಿಸಿ, ಅದರ ಮೂಲಕ ಅವರೆಲ್ಲರೂ ದೊಡ್ಡ ವ್ಯಾಪಾರೋದ್ಯಮಗಳೊಂದಿಗೆ  ಶ್ರೀಮಂತರಾಗಿದ್ದರೂ ಮತ್ತು ಸಮೃದ್ದಿ ಹೊಂದಿದ್ದರೂ, ಭಾರತದ ಕೃಷಿ ಕ್ಷೇತ್ರದಲ್ಲಿ ಕಾರ್ಪೋರೇಟ್ ಹೂಡಿಕೆ ಬರೇ 1% ಆಗಿರುವುದನ್ನು ಹೇಳಿದೆ. ವಿಶ್ವದ ದೇಶಗಳಲ್ಲಿ ಇದು ಅತ್ಯಂತ ಕನಿಷ್ಟ ಪ್ರಮಾಣ. ಕೃಷಿ ಕ್ಷೇತ್ರದಲ್ಲಿ ಕಾರ್ಪೋರೇಟ್ ಜಗತ್ತು ಹೇಗೆ ಕೃಷಿ ವಲಯದಲ್ಲಿ ಹೂಡಿಕೆ ಮಾಡಬಹುದು ಎಂಬ ಬಗ್ಗೆ ಯೋಜನೆ ಮಾಡಲು ನಾನು ಅರ್ಧ ದಿನ ವಿನಿಯೋಗಿಸಿದೆ. ಈ 1% ಹೂಡಿಕೆಯಲ್ಲೂ  ಕೂಡಾ ಟ್ರಾಕ್ಟರ್ ತಯಾರಕರು ಮತ್ತು ಯೂರಿಯಾ ತಯಾರಕರ ಪಾಲು ಹೆಚ್ಚಿದೆ.  ಪ್ರತೀ ರೈತರಿಗೆ ಹೇಗೆ ಸಹಾಯ ಮಾಡಬಹುದು, ಹೇಗೆ ಮೌಲ್ಯ ವರ್ಧನೆ ಮಾಡಬಹುದು,  ಅಥವಾ ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣ ತರಬಹುದು ಎಂಬ ಬಗ್ಗೆ ಯೋಜನೆಗಳನ್ನು ರೂಪಿಸಿ ಎಂದು ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿದ್ದೆ. ದಾಸ್ತಾನುಗಾರಗಳು, ಶೀತಲ ಗೃಹಗಳು, ಪ್ಯಾಕೇಜಿಂಗ್ ಇತ್ಯಾದಿ ಸಂಗತಿಗಳು ರೈತರಿಗೆ ಹೆಚ್ಚು ಲಾಭದಾಯಕವಾಗಬಲ್ಲವು. ನಾನು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿದ್ದೇನೆ. ಇದಕ್ಕಾಗಿ ಅವರು ಮೆದುಳು ಬಗೆಯುವಂತಹ ತಂಡವನ್ನು ರಚಿಸಿಕೊಂಡು ವಿವಿಧ ಕ್ಷೇತ್ರಗಳ ಬಗ್ಗೆ ಚರ್ಚಿಸಬಹುದು ಎಂದು ಹೇಳಿದ್ದೇನೆ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಕಾರ್ಪೋರೇಟ್ ಹೂಡಿಕೆ ಹೋಗುತ್ತಿದ್ದಂತೆ , ಹೆಚ್ಚು ಹೆಚ್ಚು ಉತ್ಪಾದಿಸಲು ರೈತನ ಸಾಮರ್ಥ್ಯ ವೃದ್ದಿಯಾಗುತ್ತದೆ. ಕೆಲವೊಮ್ಮೆ ಫಸಲಿನ ಬಹುಭಾಗ ಹಾಳಾಗುತ್ತದೆ. ಸ್ವಲ್ಪ ಸಮಯದ ಹಿಂದೆ ಸೂರೀ ಜೀ ಅವರು ದೇಶದಲ್ಲಿ ಬೆಳೆಯುತ್ತಿರುವ ಹಣ್ಣಿನ ತಿರುಳುಗಳಿಂದ ಹಣ್ಣಿನ ರಸಗಳನ್ನು ತಯಾರಿಸಬಹುದೆಂದು ಹೇಳುತ್ತಿದ್ದರು. ಇಂತಹ ನಿರ್ಧಾರಾತ್ಮಕ ಕ್ರಮಗಳು ದೇಶದ ರೈತರಿಗೆ ಹೆಚ್ಚಿನ ಲಾಭ ತಂದುಕೊಡಬಲ್ಲವು. ಈ ರಸಗಳ ಬಳಕೆದಾರ ಕೂಡಾ ಶಕ್ತಿವಂತನಾಗಬಲ್ಲ. ಬಲಿಷ್ಟ ನಾಗರಿಕ ಬಲಿಷ್ಟ ದೇಶವನ್ನು ಪ್ರತಿನಿಧಿಸುತ್ತಾನೆ.
 
ಸಂಕ್ಷೇಪಿಸಿ ಹೇಳುವುದಾದರೆ , ನಾನು ಕೈಗಾರಿಕೆಗಳನ್ನು ಗ್ರಾಮ ಜೀವನದ ಜೊತೆ ಬೆಸೆಯಲು ಇಚ್ಚಿಸುತ್ತೇನೆ. ಈ ಸಣ್ಣ ಸಂಗತಿಗಳನ್ನು ಗ್ರಾಮ ಜೀವನದಲ್ಲಿ ಹೇಗೆ ಅಳವಡಿಸಬಹುದು ಎಂಬ ಬಗ್ಗೆ ನಾವೀಗ ಚಿಂತಿಸಬೇಕಾಗಿದೆ.ಇದು ಮುಂದಿನ ದಿನಗಳಲ್ಲಿ ಬಹಳ ಪ್ರಮುಖವಾಗಲಿದೆ ಮತ್ತು ಇದಕ್ಕೆ ನಾನು ಹೆಚ್ಚು ಆದ್ಯತೆ ಕೊಡುತ್ತಿದ್ದೇನೆ. ಇದರ  ಫಲಿತಾಂಶಗಳು ಸದ್ಯವೇ ಬರಬಹುದು ಎಂಬ ನಂಬಿಕೆ ನನ್ನದಾಗಿದೆ. 60 ಸಾವಿರ ಕೋಟಿ ರೂ. ಯೋಜನೆಯನ್ನು ನಾವು ಕಾರ್ಯರೂಪಕ್ಕೆ ತರುತ್ತಿರುವಂತೆ, ಇತರ 50 ಸಾವಿರ ಕೋಟಿ ರೂ.ಮೊತ್ತದ  ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಯೋಗೀಜೀ ಅವರು ಹೇಳುತ್ತಿದ್ದರು. ಇದು ನಿಜವಾಗಿಯೂ ಬಹಳ ದೊಡ್ಡ ಸಾಧನೆ ಎಂದು ನಾನು ನಂಬುತ್ತೇನೆ. ನಾನು  ನಿಮ್ಮ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
 
ಎಲ್ಲರಿಗೂ ಧನ್ಯವಾದಗಳು !. ಎಲ್ಲಕ್ಕಿಂತ ಮಿಗಿಲಾಗಿ ಉತ್ತರ ಪ್ರದೇಶದ ಸಂಸತ್ ಸದಸ್ಯನಾಗಿ, ರಾಜ್ಯದ ಅಭಿವೃದ್ದಿಯನ್ನು ತಿಳಿದುಕೊಳ್ಳುವುದು ನನಗೆ ಸಂತೋಷದ ವಿಷಯ. ಇದು ಉತ್ತರ ಪ್ರದೇಶದ ಜನರ ವಿಷಯದಲ್ಲಿ  ನನ್ನ ಜವಾಬ್ದಾರಿ ಕೂಡಾ ಮತ್ತು ಜನರಿಗೂ ನನ್ನ ಮೇಲೆ ಹಕ್ಕಿದೆ. ಆದುದರಿಂದ , ನಾನು ಉತ್ತರ ಪ್ರದೇಶಕ್ಕೆ ಎರಡು ಬಾರಿ, 5 ಬಾರಿ ಅಥವಾ 15 ಬಾರಿಯೂ ಭೇಟಿ ನೀಡಬಹುದು, ನಾನಿರುವುದು ನಿಮಗಾಗಿ ಮತ್ತು ನಿಮ್ಮ ಸೇವೆಗಾಗಿ.
 
ತುಂಬಾ ಧನ್ಯವಾದಗಳು.