Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರ ಪ್ರದೇಶದ ನೊಯಿಡಾದಲ್ಲಿ ‘ಸ್ಟ್ಯಾಂಡಪ್ ಇಂಡಿಯಾ’ ಕಾರ್ಯಕ್ರಮವನ್ನು ಆರಂಭಿಸಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ

ಉತ್ತರ ಪ್ರದೇಶದ ನೊಯಿಡಾದಲ್ಲಿ ‘ಸ್ಟ್ಯಾಂಡಪ್ ಇಂಡಿಯಾ’ ಕಾರ್ಯಕ್ರಮವನ್ನು ಆರಂಭಿಸಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ


ಅಧಿಕ ಸಂಖ್ಯೆಯಲ್ಲಿ ಆಗಮಿಸಿರುವ ನನ್ನ ಪ್ರೀತಿಯ ಸೋದರ ಮತ್ತು ಸೋದರಿಯರೆ,

ಇಂದು ಶ್ರೀ ಬಾಬು ಜಗಜೀವನ ರಾಂ ಅವರ ಜನ್ಮ ದಿನಾಚರಣೆ. ಅವರು ದೇಶಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಜನ್ಮ ದಿನವನ್ನು ಸಮತಾ ದಿವಸ ಎಂಬ ಹೆಸರಿನಲ್ಲಿ ಸ್ಮರಿಸಿಕೊಳ್ಳಲಾಗುತ್ತದೆ. ದಲಿತ ಕುಟುಂಬದಲ್ಲಿ ಹುಟ್ಟಿದ ಅವರು ದೇಶದ ಗೌರವವನ್ನು ಹೆಚ್ಚಿಸುವಲ್ಲಿ ಶ್ರಮ ವಹಿಸಿದರು. ತಮ್ಮ ಸಾಮಾಜಿಕ ಸ್ಥಿತಿಗಳು ತಮಗೆ ಅಡ್ಡಿಯಾಗುವುದಕ್ಕೆ ಅವರು ಎಂದೂ ಬಿಡಲಿಲ್ಲ. ಇಂತಹ ಮಹಾನ್ ವ್ಯಕ್ತಿ ಬಾಬು ಜಗಜೀವನ್ ರಾಂ ಅವರ ಜನ್ಮ ಜಯಂತಿಯಂದು ಭಾರತ ಸರ್ಕಾರವು – ‘ಸ್ಟ್ಯಾಂಡಪ್ ಇಂಡಿಯಾ’ ಕಾರ್ಯಕ್ರಮವನ್ನು ಆರಂಭಿಸುತ್ತಿದೆ.

ಬಾಬು ಜಗಜೀವನ್ ರಾಂ ಅವರು ಯಾವಾಗಲೂ ಮೆರಿಟ್ ಅಂದರೆ ಅರ್ಹತೆಯನ್ನು ಪ್ರತಿಪಾದಿಸುತ್ತಿದ್ದರು. ವಿದ್ಯಾರ್ಥಿ ವೇತನವನ್ನು ಸಹ ಅವರು ಅರ್ಹತೆಯ ಆಧಾರದ ಮೇಲೆ ತೆಗೆದುಕೊಳ್ಳಬೇಕೆಂದು ಪ್ರತಿಪಾದಿಸುತ್ತಿದ್ದರು. ಅರ್ಹತೆ ಇಲ್ಲದೆಯೇ ದೊರಕುತ್ತಿದ್ದ ವಿದ್ಯಾರ್ಥಿ ವೇತನವನ್ನು ತೆಗೆದುಕೊಳ್ಳಲು ಅವರು ನಿರಾಕರಿಸುತ್ತಿದ್ದರು‌ ಭಾರತವು ಮೊದಲ ಕೃಷಿ ಕ್ರಾಂತಿ ಅಂದರೆ ಹಸಿರು ಕ್ರಾಂತಿಯನ್ನು ಆರಂಭಿಸಿದ ಸಂದರ್ಭದಲ್ಲಿ ಬಾಬು ಜಗಜೀವನ್ ರಾಂ ಅವರು ನಮ್ಮ ದೇಶದ ಕೃಷಿ ಮಂತ್ರಿಯಾಗಿದ್ದರು ಎಂದು ಕೆಲವೇ ಜನರಿಗೆ ನೆನಪಿರಬಹುದು. 1971ರ ಯುದ್ಧದ ಸಂದರ್ಭದಲ್ಲಿ ಭಾರತವು ವಿಜಯ ಗಳಿಸಿದ ಸಂದರ್ಭದಲ್ಲಿ ಬಾಬು ಜಗಜೀವನ್ ರಾಂ ಅವರು ಭಾರತದ ರಕ್ಷಣಾ ಮಂತ್ರಿಯಾಗಿದ್ದರು ಎಂದು ಸಹ ಕೆಲವೇ ಜನರಿಗೆ ಗೊತ್ತಿರಬಹುದು. ಆದರೆ ನಮ್ಮ ದೇಶದಲ್ಲಿ ಈ ರೀತಿಯ ಸೇವೆಗಳನ್ನು, ಇಂತಹ ಮಹಾಪುರುಷರ ಕೊಡುಗೆಯನ್ನು ಹೆಚ್ಚುಕಡಿಮೆ ಇತಿಹಾಸದಲ್ಲಿ ಮರೆಯಲಾಗಿದೆ. ರಾಜಕೀಯ ವಿಚಾರಧಾರೆಗಳು ಏನೇ ಇರಲಿ, ಪಕ್ಷ ಯಾವುದೇ ಆಗಿರಲಿ, ದೇಶಕ್ಕಾಗಿ ದುಡಿದ, ದೇಶಕ್ಕಾಗಿ ಮಡಿದ ವ್ಯಕ್ತಿಗಳು ಯಾವತ್ತೂ ಗೌರವಾರ್ಹರು, ನಮ್ಮೆಲ್ಲರಿಗೂ ಆದರ್ಶಪ್ರಾಯರು, ಪ್ರೇರಕರು ಎಂಬುದು ನಮ್ಮ ಅಭಿಪ್ರಾಯವಾಗಿದೆ.

ಬಾಬು ಜಗಜೀವನ್ ರಾಂ ಅವರ ಜನ್ಮ ಜಯಂತಿಯಂದು ಈ ಹಿಂದೆ ಬಹುಶಃ ಯಾವುದೇ ಕೇಂದ್ರ ಸರ್ಕಾರವು ಹೊಸ ಕಾರ್ಯಕ್ರಮವನ್ನು ಆರಂಭಿಸಿದ್ದು ನನಗೆ ನೆನಪಿಲ್ಲ. ಈ ದಿನದಂದು ಇಂತಹ ವಿಶೇಷ ಯೋಜನೆ ಆರಂಭಿಸುತ್ತಿರುವುದು ನಮಗೆ ಗೌರವ ಮತ್ತು ಹೆಮ್ಮೆಯ ವಿಷಯವಾಗಿದೆ. ನಮ್ಮ ಆದಿವಾಸಿ ಸೋದರ ಸೋದರಿಯರು, ನಮ್ಮ ದಲಿತ ಸೋದರ ಸೋದರಿಯರು ಎಲ್ಲಿಯವರೆಗೆ ಉದ್ಯೋಗದ ನಿರೀಕ್ಷೆಯಲ್ಲಿ ಕಾಯಬೇಕು, ಸರ್ಕಾರವು ಸಹ ಎಷ್ಟು ಜನರಿಗೆ ಉದ್ಯೋಗ ನೀಡಲು ಸಾಧ್ಯ? ಇದೇ ಸ್ಥಿತಿ ಮುಂದುವರಿದರೆ ಸಮಾಜದ ದಲಿತರು, ಪೀಡಿತರು, ಶೋಷಿತರು, ವಂಚಿತ ಸೋದರರ ಗತಿ ಏನಾಗಬೇಕು, ಆ ಯುವಜನರ ಗತಿ ಏನಾಗಬೇಕು? ಹೀಗೆ ಯೋಚಿಸಿ ಈ ಯೋಜನೆಯನ್ನು ಆರಂಭಿಸಲಾಗಿದೆ‌. ದೇವರು ನಮಗೆ ನೀಡಿರುವ ಶಕ್ತಿ, ಸಾಮರ್ಥ್ಯ, ಬುದ್ಧಿ, ಕೌಶಲಗಳನ್ನು ನನ್ನ ಈ ದಲಿತ ಕುಟುಂಬಗಳಿಗೂ ನೀಡಿದ್ದಾನೆ, ನನ್ನ ಆದಿವಾಸಿ ಕುಟುಂಬಗಳಿಗೂ ನೀಡಿದ್ದಾನೆ ಎಂಬುದು ನನ್ನ ವಿಶ್ವಾಸವಾಗಿದೆ. ಆದರೆ ನಮಗೆ ಸಿಕ್ಕ ಅವಕಾಶಗಳು ಅವರಿಗೆ ಸಿಗಲಿಲ್ಲ. ಅವಕಾಶ ದೊರೆತರೆ ನಾವು ಏನಾದರೂ ಸಾಧಿಸಿ ತೋರಿಸುತ್ತೇವೆ, ಅದೇ ರೀತಿ ನನ್ನ ದಲಿತ ಮತ್ತು ಆದಿವಾಸಿ ಸೋದರ ಸೋದರಿಯರಿಗೂ ಅವಕಾಶ ಸಿಕ್ಕರೆ ಅವರೂ ಉತ್ತಮ ಕೆಲಸಗಳನ್ನು ಮಾಡಬಲ್ಲರು. ದೇಶಕ್ಕೆ ಹೆಚ್ಚು ಕೊಡುಗೆ ನೀಡಬಲ್ಲರು.

ಸಮಾಜದ ಕಟ್ಟಕಡೆಯಲ್ಲಿ ಇರುವ ವ್ಯಕ್ತಿಗೆ ಸಹ ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರುವುದಕ್ಕೆ ಸೂಕ್ತ ಅವಕಾಶ ಸಿಗಬೇಕು. ಅವರು ಯಾರದೋ ಕೃಪೆಯಲ್ಲಿ ಬದುಕು ನಡೆಸುವಂತಹ ಸ್ಥಿತಿ ಬರಬಾರದು. ಅವರು ತಮ್ಮ ಸಾಮರ್ಥ್ಯದಿಂದ, ಪರಿಶ್ರಮದಿಂದ ಸಾಹಸ ಮಾಡಲು ತಯಾರಾದರೆ ಅವರಿಗೆ ಸರಿಯಾದ ವೇದಿಕೆ ಸಿಗಬೇಕು. ಅವರಲ್ಲಿ ಬುದ್ಧಿ ಇದೆ, ಸಾಮರ್ಥ್ಯವಿದೆ. ಅವರಿಗೆ ಸ್ವಲ್ಪ ಅನುಕೂಲ ಮಾಡಿಕೊಟ್ಟರೆ ಒಂದು ಹೊಸ, ಭವ್ಯ ಕನಸನ್ನು ಸಾಕಾರಗೊಳಿಸುವತ್ತ ತಮ್ಮ ಬದುಕನ್ನು ಮುನ್ನಡೆಸಬಲ್ಲರು. ಇದೇ ವಿಚಾರದೊಂದಿಗೆ ಈ ಸ್ಟ್ಯಾಂಡಪ್ ಇಂಡಿಯಾದ ಪರಿಕಲ್ಪನೆ ಮೂಡಿತು.

ಆಗಸ್ಟ್ 15ರಂದು ಕೆಂಪು ಕೋಟೆಯ ಮೇಲೆ ನಿಂತು ನಾನು ‘ಸ್ಟ್ಯಾಂಡಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ’ ಎಂದು ಘೋಷಣೆ ಮಾಡಿದ್ದೆ. ಈ ಯೋಜನೆಯ ಅಡಿಯಲ್ಲಿ ಭಾರತದ ಪ್ರತಿಯೊಂದು ಬ್ಯಾಂಕಿನ ಶಾಖೆಯು ತನ್ನ ಕ್ಷೇತ್ರದಲ್ಲಿ ಒಬ್ಬ ದಲಿತ ವ್ಯಕ್ತಿಗೆ ಅಥವಾ ಆದಿವಾಸಿಗೆ ಸಾಲ ಸೌಲಭ್ಯ ಒದಗಿಸಬೇಕು. ಅಲ್ಲಿ ದಲಿತರ ಕಾಲೋನಿ ಇಲ್ಲದಿದ್ದರೆ ಒಬ್ಬ ಆದಿವಾಸಿಗೆ ಮತ್ತು ಒಬ್ಬ ಮಹಿಳೆ ಸೇರಿ ಇಬ್ಬರಿಗೆ ಈ ಸೌಲಭ್ಯ ಕೊಡಬೇಕು ಎಂದು ಆಗಸ್ಟ್ 15ರಂದು ಕೆಂಪು ಕೋಟೆಯಲ್ಲಿ ಘೋಷಿಸಲಾಗಿತ್ತು. ಇಂದು ದೇಶದಲ್ಲಿ ಒಂದೂ ಕಾಲು ಲಕ್ಷ ಬ್ಯಾಂಕ್ ಗಳಿವೆ. ಒಂದು ಲಕ್ಷಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಈ ಶಾಖೆಗಳು ಹಬ್ಬಿವೆ‌. ಸಾಮಾನ್ಯವಾಗಿ ಯಾವುದೋ ಉದ್ಯೋಗ ಅಥವಾ ವ್ಯಾಪಾರವು ದೊಡ್ಡ ಪಟ್ಟಣಗಳಲ್ಲಿ ಆರಂಭವಾಗಿ ಅಲ್ಲಿಯೇ ವೃದ್ಧಿ ಕಾಣುತ್ತದೆ. ನಮ್ಮ ಈ ಯೋಜನೆಯಲ್ಲಿ ಒಂದೂ ಕಾಲು ಲಕ್ಷ ಬ್ಯಾಂಕ್ ಶಾಖೆಗಳಿಂದ ಒಂದೂ ಕಾಲು ಲಕ್ಷ ಸ್ಥಳಗಳಲ್ಲಿ ಒಂದಲ್ಲ ಒಂದು ವ್ಯವಹಾರ ಶುರುವಾಗುತ್ತದೆ. ಅಂದರೆ ದಲಿತ ಅಥವಾ ಆದಿವಾಸಿಯಲ್ಲಿ ಒಬ್ಬರು ಮತ್ತು ಒಬ್ಬ ಮಹಿಳೆ ಸೇರಿ ಒಟ್ಟು ಎರಡೂವರೆ ಲಕ್ಷ ಜನರು ಎರಡೂವರೆ ಲಕ್ಷ ವ್ಯವಹಾರಗಳನ್ನು ಆರಂಭಿಸುತ್ತಾರೆ. ಅಭಿವೃದ್ಧಿಯಾಗಿರುವ ಅಥವಾ ಅಭಿವೃದ್ಧಿ ಹೊಂದಿಲ್ಲದ ಜಿಲ್ಲೆ ಅಥವಾ ನಿರ್ದಿಷ್ಟ ಸ್ಥಳ ಎಂದಲ್ಲ. ಪ್ರತಿಯೊಂದು ಶಾಖೆಯು ಅದು ಎಲ್ಲೇ ಇರಲಿ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ನಿಮ್ಮ ಶಾಖೆ ಇರುವ ಕ್ಷೇತ್ರದಲ್ಲಿ ಒಬ್ಬ ದಲಿತ ಅಥವಾ ಆದಿವಾಸಿಯನ್ನು ಮತ್ತು ಒಬ್ಬ ಮಹಿಳೆ ಸೇರಿ ಒಟ್ಟು ಇಬ್ಬರಿಗೆ ಈ ಯೋಜನೆಯಡಿ ಸಾಲ ಸೌಲಭ್ಯ ನೀಡಬೇಕು. ಅವರಿಗೆ ಹೊಸ ಸ್ವಂತ ಉದ್ಯೋಗ, ಹೊಸ ವ್ಯವಹಾರ ನಡೆಸುವುದಕ್ಕೆ ನೆರವಾಗಬೇಕು.

ಇಂದು ಉದ್ಯೋಗದ ಅನ್ವೇಷಣೆಯಲ್ಲಿ ಇರುವವರೇ ನಾಳೆ ಉದ್ಯೋಗ ನಿರ್ಮಿಸುವವರಾಗುತ್ತಾರೆ ಎಂಬುದನ್ನು ನೀವು ಕಲ್ಪನೆ ಮಾಡಿಕೊಳ್ಳಬಹುದು. ಇಂದು ಉದ್ಯೋಗ ಹುಡುಕುವ ವ್ಯಕ್ತಿ ನಾಳೆ ಉದ್ಯೋಗ ಕೊಡುವವನಾಗುತ್ತಾನೆ. ಇಂತಹ ಎರಡೂವರೆ ಲಕ್ಷ ಯೂನಿಟ್ ಗಳು ಆರಂಭವಾದ ನಂತರ ಒಬ್ಬ ವ್ಯಕ್ತಿ ಒಬ್ಬರಿಗೆ ಉದ್ಯೋಗ ನೀಡಬಹುದು, ಮತ್ತೊಬ್ಬ ವ್ಯಕ್ತಿ ಇಬ್ಬರಿಗೆ ನೀಡಬಹುದು, ಮಗದೊಬ್ಬ ವ್ಯಕ್ತಿ ಐದು ಜನರಿಗೆ ನೀಡಬಹುದು. ನಮ್ಮ ದೇಶದ ಯುವಜನತೆಗೆ ಉದ್ಯೋಗದ ಒಂದು ಹೊಸ ಅವಕಾಶ ದೊರಕುತ್ತದೆ.

‘ಮುದ್ರಾ’ ಯೋಜನೆ ಮತ್ತು ‘ಸ್ಟ್ಯಾಂಡಪ್’ ಯೋಜನೆಯಲ್ಲಿ ಒಂದು ಬಹಳ ದೊಡ್ಡ ವ್ಯತ್ಯಾಸವಿದೆ. ಮುದ್ರಾ ಯೋಜನೆಯಲ್ಲೂ ಯಾವುದೇ ಶ್ಯೂರಿಟಿ ಇಲ್ಲದೆ ಒಬ್ಬ ಸಣ್ಣ ವ್ಯಾಪಾರಿ ಅಥವಾ ಸಣ್ಣ ಉದ್ಯಮ ನಡೆಸುತ್ತಿರುವಾತ ಜೀವನದಲ್ಲಿ ಮುಂದೆ ಬರುವ ಸಲುವಾಗಿ ಬ್ಯಾಂಕ್ ನಿಂದ ಸಾಲ ಪಡೆಯಬಹುದು. ಚಹಾ ಮಾರುವ, ಕಡಲೆ ಮಾರುವ, ಧೋಬಿ, ಕ್ಷೌರಿಕರು, ಸಣ್ಣಪುಟ್ಟ ವ್ಯಕ್ತಿಗಳು ಬಡ್ಡಿಗೆ ಹಣ ಕೊಡುವವರಿಂದ ಸಾಲ ಪಡೆಯಬೇಕಾಗುತ್ತದೆ. ಶ್ರೀಮಂತ ಜನರು ಅವರನ್ನು ಲೂಟಿ ಮಾಡುತ್ತಾರೆ. ಒಂದು ಸಲ ಹೀಗೆ ಬಡ್ಡಿಗೆ ಹಣ ಪಡೆದರೆ ಅವರು ಸಾಲದ ಸುಳಿಗೆ ಸಿಲುಕಿ ಅದರಿಂದ ಹೊರ ಬರುವುದೇ ಇಲ್ಲ‌. ಜೀವನಪರ್ಯಂತ ಸಾಲಗಾರರಾಗಿಯೇ ಉಳಿಯುತ್ತಾರೆ. ನಮ್ಮ ದೇಶದಲ್ಲಿ ಆರು ಕೋಟಿಗಿಂತ ಹೆಚ್ಚು ಜನರು ಇಂತಹ ಒಂದಲ್ಲಾ ಒಂದು ಉದ್ಯೋಗ ಮಾಡುತ್ತಾ ದೇಶದ ಆರ್ಥಿಕತೆಯನ್ನು ಮುನ್ನಡೆಸುತ್ತಾರೆ. ಸಣ್ಣ ಸಣ್ಣ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರಲ್ಲಿ ಒಬ್ಬರಿಗೆ ಐದು ಸಾವಿರ ರೂಪಾಯಿಗಳ ಅವಶ್ಯಕತೆ ಬೀಳುತ್ತದೆ, ಮತ್ತೊಬ್ಬರಿಗೆ ಹತ್ತು ಸಾವಿರ ರೂಪಾಯಿಗಳ ಅಗತ್ಯ ಉಂಟಾಗುತ್ತದೆ, ಇನ್ನೊಬ್ಬರಿಗೆ ಐವತ್ತು ಸಾವಿರ ರೂಪಾಯಿಗಳು ಬೇಕಾಗುತ್ತದೆ. ಬ್ಯಾಂಕ್ ಗಳ ಬಾಗಿಲುಗಳು ಅವರ ಪಾಲಿಗೆ ಮುಚ್ಚಿದ್ದವು. ಇವರು ಅದೆಷ್ಟು ಬಡವರೆಂದರೆ ಇವರಿಗೆ ಯಾರೂ ಸಾಲದ ಭದ್ರತೆ ಕೊಡುತ್ತಿರಲಿಲ್ಲ. ನಮ್ಮ ಮುದ್ರಾ ಯೋಜನೆಯ ಅಡಿಯಲ್ಲಿ ಯಾವುದೇ ಭದ್ರತೆ ಇಲ್ಲದೆ ಇಂತಹ ಜನರಿಗೆ ಸಾಲ ಮಂಜೂರು ಮಾಡಿಸಲಾಯಿತು. ಈಗಷ್ಟೇ ಶ್ರೀ ಅರುಣ್ ಜೇಟ್ಲಿ ಅವರು ಹೇಳಿದಂತೆ ನಮ್ಮ ಗುರಿ ಒಂದೂ ಕಾಲು ಕೋಟಿಗಿಂತಲೂ ಕಡಿಮೆ ಇತ್ತು. ಆದರೆ ನಾವು ಗುರಿ ಮೀರಿದ ಸಾಧನೆ ಮಾಡಿ ಸುಮಾರು ಮೂರೂ ಕಾಲು ಕೋಟಿ ಜನರಿಗೆ ಸಾಲ ಕೊಡಿಸಿದ್ದೇವೆ. ಈಗ ಅವರು ತಮ್ಮ ವ್ಯವಹಾರ ನಡೆಸುತ್ತಿದ್ದಾರೆ. ತಮ್ಮ ವ್ಯವಹಾರವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಸಾಲದ ಸುಳಿಯಿಂದ ಪಾರಾಗಿದ್ದಾರೆ. ಮುದ್ರಾ ಯೋಜನೆಯಲ್ಲಿ 10 ಲಕ್ಷದವರೆಗೆ ಸಾಲ ದೊರಕುತ್ತದೆ.

ಸ್ಟ್ಯಾಂಡಪ್ ಯೋಜನೆಯು ದಲಿತ ಕುಟುಂಬದವರಿಗಾಗಿ, ಆದಿವಾಸಿ ಕುಟುಂಬದವರಿಗಾಗಿ ಇರುವ ಯೋಜನೆಯಾಗಿದೆ. ಈ ಯೋಜನೆಯಡಿ ಬ್ಯಾಂಕ್ ಗಳು ಹತ್ತು ಲಕ್ಷ ದಿಂದ ಹಿಡಿದು ಒಂದು ಕೋಟಿ ರೂಪಾಯಿಯವರೆಗೆ ಸಾಲ ನೀಡುತ್ತವೆ. ಇದರಿಂದ ಭಾರತದಲ್ಲಿ ಒಟ್ಟು ಎರಡೂವರೆ ಲಕ್ಷ ಜಾಗಗಳಲ್ಲಿ ಯಾವುದಾದರೂ ಹೊಸ ಉದ್ಯಮ ಆರಂಭಿಸಬಹುದು. ಬ್ಯಾಂಕ್ ಗಳು ತಮ್ಮ ಪ್ರತಿ ಶಾಖೆಗಳಲ್ಲೂ ಈ ರೀತಿಯ ಸಾಲ ಮಂಜೂರಾತಿ ಮಾಡಬೇಕು. ಉತ್ತರ ಪ್ರದೇಶದಲ್ಲಿ ಮಾತ್ರ, ದೆಹಲಿಯಲ್ಲಿ ಮಾತ್ರ, ಜೈಪುರದಲ್ಲಿ ಮಾತ್ರ, ಮುಂಬಯಿ, ಅಹಮದಾಬಾದ್ ನಲ್ಲಿ ಮಾತ್ರ ಸಾಲ ಮಂಜೂರು ಮಾಡುತ್ತೇವೆ ಎನ್ನುವಂತಿಲ್ಲ. ಸಣ್ಣ ಸಣ್ಣ ಹಳ್ಳಿಗಳಲ್ಲೂ ಉದ್ಯಮ ಸ್ಥಾಪಿಸಬೇಕು. ನಮ್ಮ ದೇಶವನ್ನು ಮುನ್ನಡೆಸಬೇಕು. ಬ್ಯಾಂಕ್ ಗಳು ಎಷ್ಟು ಶಾಖೆಗಳಿವೆಯೋ ಅಷ್ಟೂ ಶಾಖೆಗಳಲ್ಲಿ ಸಾಲ ಮಂಜೂರು ಮಾಡಬೇಕು. ನೂರು ಶಾಖೆಗಳಿದ್ದರೂ ಕೆಲವೇ ಕಡೆ ಇನ್ನೂರು ಜನರಿಗೆ ಸಾಲ ಕೊಡುವುದಲ್ಲ, ಪ್ರತಿಯೊಂದು ಶಾಖೆಯೂ ಈ ಯೋಜನೆಯಡಿ ಸಾಲ ನೀಡಬೇಕು. ನೂರು ಶಾಖೆಗಳಿದ್ದರೆ ಆ ಎಲ್ಲ ಶಾಖೆಗಳಲ್ಲೂ ಈ ಸೌಲಭ್ಯ ಒದಗಿಸಬೇಕು. ಇದರಿಂದ ಹಿಂದುಳಿದ ಪ್ರದೇಶಗಳಲ್ಲೂ ಅಭಿವೃದ್ಧಿಯಾಗುವಂತೆ ಈ ಯೋಜನೆಯನ್ನು ಮಾಡಲಾಗಿದೆ.

ಸಾಮಾನ್ಯ ಕುಟುಂಬದ ಜನರನ್ನು ಈ ಯೋಜನೆಯ ಫಲಾನುಭವಿಗಳಾಗಿ ಮಾಡಿರುವುದನ್ನು ನೀವು ಈಗ ನೋಡಿದಿರಿ. ಇದಕ್ಕಾಗಿ ನಾನು ಸೋದರ ಮಿಲಿಂದ್ ಅವರನ್ನು ಅಭಿನಂದಿಸುತ್ತೇನೆ. ಏಕೆಂದರೆ ಅವರು ದಲಿತ ಯುವಕರಲ್ಲಿ ಒಂದು ಹೊಸ ಚೈತನ್ಯವನ್ನು ತುಂಬಿದ್ದಾರೆ. ಅವರು ಸ್ವತಃ ಉದ್ಯಮಿಯಾಗಿದ್ದರೂ ದಲಿತ ಯುವಕರಿಗೆ ಆತ್ಮಗೌರವದಿಂದ ಬದುಕುವುದಕ್ಕೆ, ತಮ್ಮ ಕಾಲ ಮೇಲೆ ನಿಲ್ಲುವುದಕ್ಕೆ ನೆರವಾಗಿ ದೇಶದ ಪ್ರಗತಿಗೆ ಕೊಡುಗೆ ನೀಡುವವರಾಗುಬೇಕು ಎಂದು ಬಯಸುತ್ತಾರೆ. ದಲಿತ ಮಹಿಳೆಯರಿಗೂ ಅವರು ಒಂದು ಸಂಘಟನೆ ಮಾಡಿರುವುದನ್ನು ಕಂಡು ನಾನು ಅಚ್ಚರಿಗೊಂಡೆ. 300 ದಲಿತ ಮಹಿಳಾ ಉದ್ಯಮಿಗಳು ಲಕ್ಷ, ಕೋಟಿಗಳ ವ್ಯವಹಾರ ಮಾಡುತ್ತಿದ್ದಾರೆ. ಅವರಲ್ಲಿ ಸಾಮರ್ಥ್ಯವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಮಾಡಿದರೆ ದೇಶದ ಪ್ರಗತಿಯನ್ನು ಎತ್ತರಕ್ಕೆ ಹೇಗೆ ಕೊಂಡೊಯ್ಯಬಹುದು ಎನ್ನುವುದಕ್ಕೆ ನಾವು ಉತ್ತಮ ಉದಾಹರಣೆಗಳನ್ನು ಕೊಡಬಹುದು. ವೈಯಕ್ತಿಕವಾಗಿ ಹೇಳುವುದಾದರೆ ಇಂದಿನ ಕಾರ್ಯಕ್ರಮವನ್ನು ನಾನು ಉತ್ತಮದಲ್ಲಿ ಉತ್ತಮ ಎಂದು ಭಾವಿಸುತ್ತೇನೆ. ಏಕೆಂದರೆ ನನ್ನ ದಲಿತ ಸೋದರರೆ, ನನ್ನ ಆದಿವಾಸಿ ಸೋದರರ ಜೀವನದಲ್ಲಿ ಬರಲಿರುವ ಬದಲಾವಣೆಯಿಂದ ಸಮಾಜದಲ್ಲಿ ಅವರು ಗೌರವದಿಂದ ಬದುಕಬಹುದು ಮತ್ತು ಹೊಸ ಪೀಳಿಗೆಗೆ ಉದ್ಯೋಗ ಕೊಡುವ ಸಾಮರ್ಥ್ಯ ಅವರಿಗೆ ಬರುತ್ತದೆ. ಸಮಾಜದಲ್ಲಿ ಒಂದು ದೊಡ್ಡ ಬದಲಾವಣೆ ತರುವುದಕ್ಕೆ ಕಾರಣವಾಗುವ ಇಂತಹ ಯೋಜನೆಗಳು ಬೇಕು.

ಇಂದು ಮತ್ತೊಂದು ಕಾರ್ಯಕ್ರಮವನ್ನು ಸಹ ಇದರ ಜೊತೆಗೆ ಸೇರಿಸಲಾಗಿದೆ. ನನ್ನ ಸ್ಟ್ಯಾಂಡಪ್ ಇಂಡಿಯಾ ಪ್ರಮುಖ ಕಾರ್ಯಕ್ರಮವಾಗಿದೆಯಾದರೂ ಇ-ರಿಕ್ಷಾ ತಯಾರಿಸುವ ಕ್ಷೇತ್ರದಲ್ಲಿ ನಮ್ಮ ಶ್ರೀ ಮಹೇಶ್ ಶರ್ಮ ಅವರು ಎಷ್ಟೋ ದಿನಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಸಹ ಇದರ ಜೊತೆಗೆ ಸೇರಿಸುವಂತೆ ಅವರು ಕೇಳಿಕೊಂಡರು. ಅದಕ್ಕೆ ನಾನು ಖಂಡಿತಾ ಆಗಲಿ ಎಂದು ಒಪ್ಪಿದೆ. ನನಗೆ ಈಗಷ್ಟೇ ರಿಕ್ಷಾ ಓಡಿಸುವ ಕುಟುಂಬದವರ ಜೊತೆಗೆ ಚಹಾದ ಜೊತೆ ಚರ್ಚೆ ಮಾಡುವ ಅವಕಾಶ ಸಿಕ್ಕಿತು. ನಾನು ಅವರ ಮಾತುಗಳನ್ನು ಕೇಳುತ್ತಿದ್ದೆ. ಅವರು ಮೊದಲು ರಿಕ್ಷಾಗಳನ್ನು ಬಾಡಿಗೆಗೆ ತೆಗೆದುಕೊಂಡು ಓಡಿಸುತ್ತಿದ್ದರು. ದಿನವಿಡೀ ಶ್ರಮ ವಹಿಸಿ ದುಡಿದು ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು. ಆದರೆ ಅವರು ದುಡಿದ ಬಹುತೇಕ ಹಣ ರಿಕ್ಷಾದ ಬಾಡಿಗೆಗೆ ಹೋಗುತ್ತಿತ್ತು. ಅವರ ಜೇಬಿಗೆ ಸಿಗುತ್ತಿದ್ದುದು ಬಹಳ ಕಡಿಮೆ ಹಣ. ಅವರು ಅದೆಷ್ಟು ಶ್ರಮ ಪಡಬೇಕಿತ್ತೆಂದರೆ ಒಂದು ವಯಸ್ಸಾದ ನಂತರ ಅವರಿಗೆ ಹೆಚ್ಚು ಕೆಲಸ ಮಾಡಲು ಆಗುತ್ತಿರಲಿಲ್ಲ. ಗ್ರಾಹಕರು ಇದ್ದರೂ ಅವರಿಗೆ ರಿಕ್ಷಾ ಎಳೆಯುವ ಶಕ್ತಿ ಇರುತ್ತಿರಲಿಲ್ಲ. ಇದೇ ಅವಸ್ಥೆಯಲ್ಲಿ ಅವರು ತಮ್ಮ ಬದುಕು ಸವೆಸುತ್ತಿದ್ದರು.

ಭಾರತ ಸರ್ಕಾರವು ಒಂದು ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಲ್ಲಿ ನನ್ನ ಸ್ನೇಹಿತ ಶ್ರೀ ಬ್ರಿಜೇಶ್ ಇದರ ಕೆಲಸವನ್ನು ಬಹಳ ಚೆನ್ನಾಗಿ ನಿಭಾಯಿಸುತ್ತಾರೆ. ಐದು ಸಾವಿರಕ್ಕಿಂತ ಹೆಚ್ಚು ಅಂದರೆ ಸುಮಾರು ೫೧೦೦

ಇ-ರಿಕ್ಷಾಗಳನ್ನು ನೀಡುವ ಕಾರ್ಯಕ್ರಮ ಇಂದು ನೆರವೇರುತ್ತಿದೆ. ಈಗ ಇವರೆಲ್ಲ ಇ-ರಿಕ್ಷಾದ ಮಾಲೀಕರಾಗುತ್ತಾರೆ. ನಿನ್ನೆಯವರೆಗೂ ಇವರು ಬಾಡಿಗೆಯ ರಿಕ್ಷಾಗಳಿಂದ ಜೀವನ ಸಾಗಿಸುತ್ತಿದ್ದರು. ದಿನದ ಸಂಪಾದನೆಯಲ್ಲಿ ಸ್ವಲ್ಪ ಹಣ ಹಾಕಿ ಅವರು ರಿಕ್ಷಾದ ಮಾಲೀಕರಾಗುವಂತಹ ಯೋಜನೆ ಇದಾಗಿದೆ. ಮತ್ತೊಂದು ಮುಖ್ಯ ವಿಷಯವೆಂದರೆ ಇದು ಇ-ರಿಕ್ಷಾ ಆಗಿರುವುದರಿಂದ ಮೊದಲು ಆಗುತ್ತಿದ್ದ ಅಧಿಕ ದೈಹಿಕ ಶ್ರಮ ಕಡಿಮೆಯಾಗುತ್ತದೆ. ಒಂದು ದಿನಕ್ಕೆ ಹೆಚ್ಚು ಸಲ ಗಾಡಿ ಓಡಿಸಬಹುದು, ಹೆಚ್ಚು ಕೆಲಸ ಮಾಡಬಹುದು.

ಇಂದು ಒಂದು ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಅದೇ ಓಲಾ. ಮೊಬೈಲ್ ಫೋನ್ ನಲ್ಲಿ ಓಲಾದ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಅದರ ಮೇಲೆ ಒಂದು ಕ್ಲಿಕ್ ಮಾಡಿದರೆ ಹತ್ತಿರದಲ್ಲಿರುವ ಈ

ಇ-ರಿಕ್ಷಾದವರು ನಿಂತಿದ್ದರೆ ಅವರಿಗೆ ಮೊಬೈಲ್ ಫೋನ್ ನಲ್ಲಿ ಸಂದೇಶ ಬರುತ್ತದೆ. ಆಗ ಅವರು ಗ್ರಾಹಕರು ಇರುವ ಜಾಗಕ್ಕೆ ಎರಡು, ಮೂರು, ನಾಲ್ಕು ನಿಮಿಷಗಳಲ್ಲೇ ತಮ್ಮ ಇ-ರಿಕ್ಷಾದಲ್ಲಿ ಧಾವಿಸಿ ಅವರು ಹೇಳಿದ ಜಾಗಕ್ಕೆ ಅವರನ್ನು ತಲುಪಿಸುತ್ತಾರೆ. ನಾನು ಈಗ ತಾನೇ ಇ-ರಿಕ್ಷಾದಲ್ಲಿ ಕುಳಿತುಕೊಂಡು ಬಂದೆ. ಈ ಆ್ಯಪ್ ಬಳಸಿ ರಿಕ್ಷಾದವರನ್ನು ಕರೆಸಿಕೊಂಡೆ ಮತ್ತು ಅದರಲ್ಲಿ ಜನಧನ್ ಖಾತೆ ಇದ್ದರೆ, ರುಪೇ ಕಾರ್ಡ್ ಇದ್ದರೆ ನಿಮ್ಮ ಮೊಬೈಲ್ ಫೋನ್ ನಿಂದಲೇ ನಿಮ್ಮ ಐದು, ಏಳು, ಹತ್ತು ರೂಪಾಯಿ ಅಥವಾ ಬಾಡಿಗೆ ಎಷ್ಟಾಯಿತೊ ಅಷ್ಟನ್ನು ನಿಮ್ಮ ಮೊಬೈಲ್ ನಿಂದಲೇ ಆರಾಮವಾಗಿ ಪಾವತಿಸಬಹುದು. ಮೊದಲು ನಾಲ್ಕು ಜನ ಕೈ ಎತ್ತಿ ಆಟೊ ರಿಕ್ಷಾದವರು ನಿಮ್ಮ ಕಡೆ ನೋಡಿ ನಿಲ್ಲಿಸುವಂತೆ ಮಾಡಬೇಕಾಗಿತ್ತು. ಈಗ ನೀವು ನಿಮ್ಮ ಮೊಬೈಲ್ ಫೋನ್ ನಿಂದ ಆಟೊ ರಿಕ್ಷಾ, ಇ-ರಿಕ್ಷಾ ಕರೆಸಿಕೊಳ್ಳಬಹುದು. ಅದರಲ್ಲಿ ಕುಳಿತು ನೀವು ಹೋಗಬೇಕಾದ ಕಡೆ ಹೋಗಬಹುದು. ಈ ವ್ಯವಸ್ಥೆಯಿಂದಾಗಿ ರಿಕ್ಷಾದವರು ಸಹ ಗ್ರಾಹಕರನ್ನು ಆ ಕಡೆ ಈ ಕಡೆ ನೋಡುತ್ತಾ ಹುಡುಕುವುದು ತಪ್ಪುತ್ತದೆ. ಯಾರಾದರೂ ಸಿಗುತ್ತಾರೆ, ಯಾರಾದರೂ ಸಿಗುತ್ತಾರೆ ಎಂದು ಕಾಯುವ ಅಗತ್ಯವಿಲ್ಲ. ರಿಕ್ಷಾದವರು ಒಂದು ಕಡೆ ನಿಂತಿದ್ದರೆ ಸಾಕು. ಮೊಬೈಲ್ ಫೋನ್ ನಲ್ಲಿ ಸಂದೇಶ ಬರುತ್ತಿದ್ದಂತೆಯೇ ಅವರು ಗ್ರಾಹಕರಿರುವ ಕಡೆ ಧಾವಿಸುತ್ತಾರೆ, ಅವರು ಹೇಳಿದ ಜಾಗಕ್ಕೆ ಕರೆದುಕೊಂಡು ಹೋಗುತ್ತಾರೆ.

ಇದು ಬ್ಯಾಟರಿ ಚಾಲಿತ ರಿಕ್ಷಾ ಆಗಿರುವುದರಿಂದ ಗ್ರಾಹಕರನ್ನು ಕರೆದುಕೊಂಡು ಬರಲು ಇಂಧನದ ಖರ್ಚು ಬೀಳುತ್ತದೆ ಎನ್ನುವಂತಿಲ್ಲ. ಈಗ ನೀಡಲಾಗಿರುವ 5100 ಇ-ರಿಕ್ಷಾಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಿಕೊಳ್ಳುವುದಕ್ಕೆ ಎನರ್ಜಿ ಬ್ಯಾಂಕ್ ಗಳನ್ನು ಸಹ ಅಳವಡಿಸಲಾಗಿದೆ. ಅಲ್ಲಿ ಸೌರಶಕ್ತಿಯಿಂದ ಬ್ಯಾಟರಿ ಚಾರ್ಜ್ ಆಗುತ್ತದೆ. ನಿಮ್ಮ ಇ-ರಿಕ್ಷಾದ ಬ್ಯಾಟರಿ ಕಡಿಮೆಯಾದರೆ ನೀವು ಅಲ್ಲಿಗೆ ಹೋಗಿ ನಿಮ್ಮ ಬ್ಯಾಟರಿ ಬಿಟ್ಟು ಬೇರೊಂದು ಬ್ಯಾಟರಿ ತೆಗೆದುಕೊಂಡು ಹೋಗಿ. ಚಾರ್ಜ್ ಮಾಡಿಸಲು ಹಣ ಕೊಟ್ಟು ದಿನವಿಡೀ ರಿಕ್ಷಾ ಓಡಿಸಿ. ಇದರಿಂದಾಗಿ ಸೌರಶಕ್ತಿಯಿಂದ ಬ್ಯಾಟರಿ ಚಾರ್ಜ್ ಮಾಡುವ ನೂರಾರು ಅಂಗಡಿಗಳನ್ನು ತೆರೆಯುವ ಅವಕಾಶ ನೂರಾರು ಜನರಿಗೆ ಸಿಗುತ್ತದೆ. ಈಗಾಗಲೇ ಸ್ವಂತ ರಿಕ್ಷಾ ಹೊಂದಿರುವವರನ್ನು ಬಿಟ್ಟು ಬಾಡಿಗೆಗೆ ತೆಗೆದುಕೊಂಡು ರಿಕ್ಷಾ ಓಡಿಸುತ್ತಿದ್ದವರಿಗೆ ಮಾತ್ರ ಇ-ರಿಕ್ಷಾದ ಮಾಲೀಕರಾಗುವ ಅವಕಾಶ ನೀಡಲಾಗಿದೆ. ಕೇವಲ ಚಾಲಕನಾಗಿ ರಿಕ್ಷಾ ನಡೆಸುತ್ತಿದ್ದವರು ಅಂದರೆ ಬಡವರನ್ನು ಇ-ರಿಕ್ಷಾದ ಮಾಲೀಕರನ್ನಾಗಿ ಮಾಡುವ ಯೋಜನೆ ಇದಾಗಿದೆ. ಬಡವರು, ನೊಂದವರು, ಶೋಷಿತರು ತಮ್ಮ ಕಾಲ ಮೇಲೆ ನಿಲ್ಲುವ ಸಾಮರ್ಥ್ಯ ಹೊಂದುವಂತೆ ಮಾಡುವ ದಿಸೆಯಲ್ಲಿ ನಮ್ಮ ಈ ಎಲ್ಲ ಯೋಜನೆಗಳು ಇಂದು ಕಾರ್ಯಾರಂಭ ಮಾಡುತ್ತಿದೆ. ಇದರ ಪರಿಣಾಮವಾಗಿ ಇಂದು ಇಲ್ಲಿ 5100 ಇ-ರಿಕ್ಷಾಗಳು ಬಡ ಕುಟುಂಬದವರ ಕೈಗೆ ಸಿಗುತ್ತಿದೆ. ಇವುಗಳನ್ನು ಹಸ್ತಾಂತರಿಸುವಾಗ ನಾನು ಅವರ ಮುಖವನ್ನೇ ನೋಡುತ್ತಿದ್ದೆ‌. ಕೂಡಲೇ ಅವರು ನಮಗೆ ಎಲ್ಲ ರೀತಿಯ ತರಬೇತಿ ನೀಡಲಾಗಿದೆ ಎಂದು ಹೇಳಿದರು. ಗಾಡಿಯಲ್ಲಿ ಏನಾದರೂ ತೊಂದರೆಯಾದರೆ ಕೆಲವೊಂದನ್ನು ನಾವೇ ರಿಪೇರಿ ಮಾಡಿಕೊಳ್ಳುವುದು ಹೇಗೆಂದು ಕಲಿಸಿದ್ದಾರೆ, ಇ-ರಿಕ್ಷಾ ಚಾಲನೆ ಮಾಡುವುದನ್ನು ಕಲಿಸಿದ್ದಾರೆ, ಬ್ಯಾಂಕ್ ಗಳ ಜತೆ ವ್ಯವಹಾರ ಮಾಡುವುದು ಹೇಗೆಂದು ಕಲಿಸಿದ್ದಾರೆ ಎಂದು ತಮಗೆ ಎಲ್ಲ ಗೊತ್ತಿದೆ ಎಂಬುದನ್ನು ತಿಳಿಸಿದರು. ಆ್ಯಪ್ ಮೂಲಕ ಯಾವುದಾದರೂ ಸಂದೇಶ ಬಂದರೆ ಹೋಗುವುದು ಹೇಗೆ ಎಂದು ಸಹ ನಮಗೆ ಕಲಿಸಲಾಗಿದೆ ಎಂದು ಹೇಳಿದರು. ಅಂದರೆ ಒಂದು ರೀತಿಯಲ್ಲಿ ಸಂಪೂರ್ಣ ಕೌಶಲ ಅಭಿವೃದ್ಧಿಯನ್ನು ಇವರು ಕಲಿತಂತಾಗಿದೆ. ಈ ಇ-ರಿಕ್ಷಾ ಯೋಜನೆಯಿಂದ ಎರಡು ರೀತಿಯ ಪ್ರಯೋಜನಗಳು ಆಗುತ್ತಿವೆ. ಇಂದು ಇಡೀ ಜಗತ್ತು ಹವಾಮಾನ ಬದಲಾವಣೆಯಿಂದಾಗಿ ಚಿಂತೆಗೊಳಗಾಗಿದೆ. ನಾವು ವಿದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಕೋಟಿ ಕೋಟಿ ರೂಪಾಯಿಗಳು ಇದೊಂದಕ್ಕೇ ಹೋಗುತ್ತಿದೆ. ಈಗ ತೈಲ ಉಳಿತಾಯವೂ ಆಗುತ್ತದೆ. ಏಕೆಂದರೆ

ಇ-ರಿಕ್ಷಾಗಳು ಸೂರ್ಯನ ಶಾಖದಿಂದ ಚಾರ್ಜ್ ಆಗುವ ಬ್ಯಾಟರಿಗಳನ್ನು ಅಳವಡಿಸಿಕೊಂಡು ಓಡುತ್ತವೆ. ಇದರಿಂದ ಹೊಗೆಯೂ ಬರುವುದಿಲ್ಲ. ಹಾಗಾಗಿ ಪರಿಸರದ ಸಮಸ್ಯೆ ಆಗುವುದಿಲ್ಲ. ಈ ಕಾರಣದಿಂದಾಗಿ ಸಾಮಾನ್ಯ ಜನರ ಆರೋಗ್ಯದ ಮೇಲೂ ಒಳ್ಳೆಯ ಪರಿಣಾಮವಾಗುತ್ತದೆ. ಜಾಗತಿಕ ತಾಪಮಾನ ಏರಿಕೆಯು ಚಿಂತೆಗೆ ಕಾರಣವಾಗಿದೆ. ಅದಕ್ಕೆ ಪರಿಹಾರ ಕಾರ್ಯವೂ ನಿಮ್ಮ ನಗರದಲ್ಲಿ ಆರಂಭವಾಗುತ್ತಿದೆ.

ಹಣಕಾಸು ಸಚಿವರಾದ ಶ್ರೀ ಅರುಣ್ ಜೇಟ್ಲಿ ಅವರನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ನಮ್ಮ ದೇಶದಲ್ಲಿ ಹಣಕಾಸು ಸಚಿವಾಲಯವೆಂದರೆ ಕಛೇರಿ, ಫೈಲ್ ಗಳು, ಬಿಲ್ ಪಾಸು ಮಾಡುವುದು ಅಥವಾ ಮಾಡದಿರುವುದು, ಇದಕ್ಕಿಂತ ಹಿಂದೆ – ಮುಂದೆ ಗೊತ್ತಿರಲಿಲ್ಲ. ಹೆಚ್ಚೆಂದರೆ ಹಣಕಾಸು ಸಚಿವಾಲಯಕ್ಕೆ ಶೇರು ಮಾರುಕಟ್ಟೆಯವರು ಬರುತ್ತಾರೆ, ದೊಡ್ಡ ಉದ್ಯಮಿಗಳು ಬರುತ್ತಾರೆ ಎಂದಷ್ಟೇ ಗೊತ್ತಿತ್ತು. ಆದರೆ ಮೊದಲ ಬಾರಿಗೆ ಹಣಕಾಸು ಸಚಿವಾಲಯವು ಜನರ ನಡುವೆ ಬಂದಿರುವುದನ್ನು ನೀವು ನೋಡಿದ್ದೀರಿ.

ಸೋದರ ಸೋದರಿಯರೆ ಒಮ್ಮೆ ಜನಧನ್ ಯೋಜನೆ, ಮತ್ತೊಮ್ಮೆ ಜೀವನ ವಿಮೆ ಯೋಜನೆ, ಮಗದೊಮ್ಮೆ ಜೀವನ ಜ್ಯೋತಿ ಯೋಜನೆ, ಮುದ್ರಾ ಯೋಜನೆ, ಸ್ಟ್ಯಾಂಡಪ್ ಯೋಜನೆ, ರುಪೇ ಕಾರ್ಡ್ ಯೋಜನೆ, ಹೀಗೆ ಹಣಕಾಸು ಸಚಿವಾಲಯವು ಬಡಜನರ ಜೊತೆಗೆ ಇರುವುದು 21ನೆಯ ಶತಮಾನದ ಮೊದಲ ಘಟನೆ ಎನ್ನಬಹುದು‌. ಒಂದೊಂದು ಇಲಾಖೆಯನ್ನು ಬಡವರ ಕೆಲಸಕ್ಕಾಗಿ, ಬಡವರ ಕಲ್ಯಾಣಕ್ಕಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ‌.

ನಮ್ಮ ದೇಶದಲ್ಲಿ ಬಡವರ ಹೆಸರಿನಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾಯಿತು. ಆದರೆ ಸ್ವಾತಂತ್ರ್ಯ ಬಂದು 70 ವರ್ಷಗಳಾಗುತ್ತಿದ್ದರೂ ಈ ದೇಶದ ಶೇಕಡಾ 40 ಜನರಿಗೆ ಬ್ಯಾಂಕ್ ನ ಬಾಗಿಲು ನೋಡುವ ಸೌಭಾಗ್ಯ ಇದುವರೆಗೂ ಬಂದಿರಲಿಲ್ಲ ಎಂಬುದನ್ನು ನಾನು ದುಃಖದಿಂದ ಹೇಳಬೇಕಾಗಿದೆ. ಕಳೆದ ಸಲ ಆಗಸ್ಟ್ 15ರಂದು ದೇಶದ ಎಲ್ಲ ನಾಗರಿಕರೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡಲು ಬ್ಯಾಂಕ್ ಗಳಿಗೆ ಹೇಳಿದ್ದೆ. ಕೆಲವೇ ದಿನಗಳ ಒಳಗೆ ಬ್ಯಾಂಕ್ ಸಿಬ್ಬಂದಿ ಮನೆಮನೆಗೂ ಹೋಗಿ ಕೆಲಸದ ಅವಧಿ ಮುಗಿದ ನಂತರವೂ, ಶನಿವಾರ, ಭಾನುವಾರಗಳಂದು ಸಹ ಕೆಲಸ ಮಾಡಿದರು. ದೇಶದ ಬಡಜನರು ಬ್ಯಾಂಕ್ ಖಾತೆ ತೆರೆಯುವಂತೆ ಮಾಡಿದರು. ಇದಕ್ಕಾಗಿ ನಾನು ಸಾರ್ವಜನಿಕವಾಗಿ ಬ್ಯಾಂಕ್ ಗಳ ಎಲ್ಲ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ, ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಶೂನ್ಯ ಉಳಿತಾಯದೊಂದಿಗೆ ಬ್ಯಾಂಕ್ ಖಾತೆ ತೆರೆಯಬಹುದು ಎಂದು ನಾವು ಹೇಳಿದ್ದೆವು. ನಿಮಗೆ ಒಂದು ರೂಪಾಯಿಯ ಖರ್ಚೂ ಆಗುವುದಿಲ್ಲ. ಕೇವಲ ನೀವು ಖಾತೆ ತೆರೆಯಿರಿ. ನೀವು ಒಂದು ರೂಪಾಯಿಯನ್ನೂ ಹಾಕಬೇಕಿಲ್ಲ ಎಂದು ನಾವು ಬಡಜನರಿಗೆ ಹೇಳಿದ್ದೆವು. ಆದರೆ ನನ್ನ ದೇಶದ ಬಡವರ ಶ್ರೀಮಂತಿಕೆ ನೋಡಿ, ಹಾಗೆಯೇ ಸಿರಿವಂತರ ಬಡತನವನ್ನು ನಮ್ಮ ದೇಶವು ನೋಡಿದೆ. ಬ್ಯಾಂಕ್ ಗಳಿಂದ ಹಣವನ್ನು ತೆಗೆದುಕೊಂಡು ಓಡಿಹೋಗುವುದು ಹೇಗೆ ಎಂಬ ದಾರಿಯನ್ನು ಕೆಲ ಜನರು ಹುಡುಕುತ್ತಿದ್ದಾರೆ. ಆದರೆ ಬ್ಯಾಂಕ್ ಖಾತೆಯನ್ನು ಶೂನ್ಯ ಉಳಿತಾಯದೊಂದಿಗೆ ತೆರೆಯಿರಿ ಎಂದು ಹೇಳಿದ ಒಬ್ಬ ಬಡವನ ಪ್ರಾಮಾಣಿಕತೆ ಹೇಗಿದೆ, ಆತನ ಹೃದಯ ಶ್ರೀಮಂತಿಕೆ ಹೇಗಿದೆಯೆಂದರೆ ಆತ ಪ್ರಧಾನ ಮಂತ್ರಿ ಶ್ರೀ ಮೋದಿ ಅವರೆ ನಾವು ಹೀಗಂತೂ ಮಾಡುವುದಿಲ್ಲ, ನಾವು ಸ್ವಲ್ಪ ಕೊಡಲು ಬಯಸುತ್ತೇವೆ ಎಂದು ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿಯಲ್ಲಿ ಬಡವರು ಬ್ಯಾಂಕ್ ಖಾತೆ ತೆರೆದಾಗ ತಮ್ಮ ಕೈಲಾದಷ್ಟು ಐವತ್ತು, ನೂರು, ಇನ್ನೂರು ರೂಪಾಯಿಗಳನ್ನು ಖಾತೆಗೆ ಹಾಕಿದರು. ಆ ಹಣವೇ ಒಟ್ಟು ಸೇರಿ 35 ಕೋಟಿಗಿಂತಲೂ ಹೆಚ್ಚಾಯಿತು . ಇದು ನನ್ನ ದೇಶದ ಬಡಜನರ ಶ್ರೀಮಂತಿಕೆಯಾಗಿದೆ. ಇದನ್ನು ನೋಡಿದಾಗ ಸರ್ಕಾರವು ಸಹ ಈ ಬಡಜನರಿಗಾಗಿ ಏನಾದರೂ ಮಾಡಬೇಕೆಂದು ಮನಸ್ಸು ಮಾಡುತ್ತದೆ. ಈ ದೃಷ್ಟಿಯಿಂದ ನಾನು ಕೆಲಸ ಮಾಡುತ್ತಿದ್ದೇನೆ. ದೇಶದ ಬಡಜನರು ದೇಶದ ಪ್ರಗತಿ ಯಾತ್ರೆಯಲ್ಲಿ ನಿಶ್ಚಯವಾಗಿ ಪಾಲುಗೊಂಡಾಗ ದೇಶವು ಮುಂದೆ ಬರುತ್ತದೆ ಎಂದು ನಾನು ನಂಬುತ್ತೇನೆ.

ನಮ್ಮ ದೇಶದ ಎಲ್ಲ ಯೋಜನೆಗಳು ಬಡವರು ದೇಶದ ಪ್ರಗತಿ ಯಾತ್ರೆಯಲ್ಲಿ ಪಾಲುಗೊಳ್ಳುವಂತೆ ಮಾಡುವ ಒಂದು ರಣನೀತಿಯ ಅಡಿಯಲ್ಲಿ ಸಾಗುತ್ತಿದೆ. ಒಂದಾದ ನಂತರ ಒಂದು ಯೋಜನೆಯನ್ನು ಆರಂಭಿಸುತ್ತಾ ಮೊದಲ ಯೋಜನೆಯನ್ನು ಎರಡನೆಯ ಯೋಜನೆಯೊಂದಿಗೆ ಜೋಡಿಸಲಾಗುತ್ತದೆ. ಈವರೆಗೆ ಯಾರೂ ಯೋಚಿಸಿರದಂತಹ, ಯಾರೂ ಪ್ರವೇಶಿಸ ದಂತಹ ಕ್ಷೇತ್ರಕ್ಕೆ ಪ್ರವೇಶಿಸುವ ದಿಕ್ಕಿನಲ್ಲಿ ನಾವು ಪ್ರಯತ್ನ ಪಡುತ್ತಿದ್ದೇವೆ. ಈ ಎಲ್ಲ ಯೋಜನೆಗಳ ಅಡಿಯಲ್ಲಿ ಯಾರೂ ಮುಟ್ಟದ ಒಂದು ಆರ್ಥಿಕ ಕ್ಷೇತ್ರವನ್ನು ಮುಟ್ಟಿದ್ದೇವೆ.

ನಾನು ಮತ್ತೊಮ್ಮೆ ಹಣಕಾಸು ಇಲಾಖೆಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇವರು ದೇಶದ ಬಡವರಿಗಾಗಿ ಒಂದಾದ ನಂತರ ಒಂದರಂತೆ ಯೋಜನೆಗಳನ್ನು ಆರಂಭಿಸುತ್ತಾ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.ಹಾಗಾಗಿ ಇವರು ಬಹಳ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಇಂದು ಇ-ರಿಕ್ಷಾ ಕುಟುಂಬದ ಕೆಲವರನ್ನು ಭೇಟಿಯಾಗಿ ಅವರ ಜೊತೆ ಕುಳಿತಿದ್ದಾಗ ನಾನು ಒಂದು ಮಾತು ಹೇಳಿದೆ. ಆದರೆ ಉಳಿದವರು ಅಲ್ಲಿರಲಿಲ್ಲ. ನಾನು ಅವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಇ-ರಿಕ್ಷಾದವರು ನನ್ನ ಒಂದು ಮಾತನ್ನು ನಡೆಸಿಕೊಡುತ್ತೀರಲ್ಲವೇ? ನಡೆಸಿಕೊಡುತ್ತೀರಾ? ಖಂಡಿತವಾಗಿ? ನಿಮ್ಮ ಮಕ್ಕಳನ್ನು ಓದಿಸುತ್ತೇವೆ ಎಂದು ನೀವು ನನಗೆ ಮಾತು ಕೊಡಿ. ರಾಜಕಾರಣಿಗಳು ನಿಮ್ಮ ಹತ್ತಿರ ವೋಟು ಕೇಳಲು ಬರುತ್ತಿರಬಹುದು, ಆದರೆ ನಾನು ನಿಮ್ಮ ಮಕ್ಕಳ ಶಿಕ್ಷಣದ ಭಿಕ್ಷೆ ಬೇಡಲು ಬಂದಿದ್ದೇನೆ.ಅದರಲ್ಲೂ ನಿಮ್ಮ ಹೆಣ್ಣು ಮಕ್ಕಳಿಗೆ ಖಂಡಿತವಾಗಿ ಶಿಕ್ಷಣ ಕೊಡಿಸಿ. ಕೆಲವೇ ವರ್ಷಗಳಲ್ಲಿ ನೀವು ಇ-ರಿಕ್ಷಾ ಸಹ ಓಡಿಸುವ ಅಗತ್ಯ ಬೀಳುವುದಿಲ್ಲ. ನಿಮ್ಮ ಮಕ್ಕಳು ನಿಮ್ಮ ಕುಟುಂಬವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಿರುತ್ತಾರೆ.ಆದ್ದರಿಂದ ಸರ್ಕಾರದ ಯೋಜನೆಗಳ ಪ್ರಯೋಜನ ನಿಮ್ಮ ಮಕ್ಕಳಿಗೆ ಎಲ್ಲಕ್ಕಿಂತ ಮೊದಲು ಸಿಗಬೇಕು,ಅದೂ ಶಿಕ್ಷಣದ ರೂಪದಲ್ಲಿ ಸಿಗಬೇಕು. ನಿಮ್ಮ ಜೀವನ ಬದಲಾಗುವುದನ್ನು ,ಭಾರತದ ಭವಿಷ್ಯ ಭವ್ಯವಾಗುವುದನ್ನು ನೀವು ನೋಡುವಿರಿ.ಆದ್ದರಿಂದ ನಾನು ಇ-ರಿಕ್ಷಾದವರಿಗೆ ಸಹ ಶುಭಾಶಯಗಳನ್ನು ಕೋರುತ್ತೇನೆ.ನನ್ನ ದಲಿತ ಕುಟುಂಬದವರಿಗೆ ಇಂದಿನಿಂದ ಸ್ಟ್ಯಾಂಡಪ್ ಯೋಜನೆಯಡಿ ಒಂದೂ ಕಾಲು ಲಕ್ಷ ಬ್ಯಾಂಕ್ ಶಾಖೆಗಳ ಮೂಲಕ ಸಾಲ ದೊರಕುತ್ತದೆ. ನನ್ನ ಯುವಜನರು ಮುಂದೆ ಬಂದು ಈ ಸದವಕಾಶವನ್ನು ಉಪಯೋಗಿಸಿಕೊಳ್ಳಿ.ಸಮಾಜದಲ್ಲಿ ಉನ್ನತ ಸ್ತರದ ಉದ್ಯಮಿ,ವ್ಯಾಪಾರಿ,ಸಾಹಸಿಗಳಾಗಿ ಮುಂದೆ ಬನ್ನಿ. ದೇಶವು ಸಹ ನಿಮಗೆ ಹೊಸ ರೀತಿಯಲ್ಲಿ ನೆರವಾಗುತ್ತದೆ ಎನ್ನುವ ಅಪೇಕ್ಷೆಯೊಂದಿಗೆ ನಿಮ್ಮೆಲ್ಲರಿಗೆ ಬಹಳ ಧನ್ಯವಾದಗಳನ್ನು ಅರ್ಪಿಸುತ್ತೇನೆ.