Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರ ಪ್ರದೇಶದ ಲಕ್ನೋದಲ್ಲಿ ಕೌಶಲ್ಯಾಭಿವೃದ್ಧಿ ಘಟಿಕೋತ್ಸವ (ಕೌಶಲ್ ದೀಕ್ಷಾಂತ್) ಸಮಾರೋಪ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಉತ್ತರ ಪ್ರದೇಶದ ಲಕ್ನೋದಲ್ಲಿ ಕೌಶಲ್ಯಾಭಿವೃದ್ಧಿ ಘಟಿಕೋತ್ಸವ (ಕೌಶಲ್ ದೀಕ್ಷಾಂತ್) ಸಮಾರೋಪ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ


ಉತ್ತರ ಪ್ರದೇಶದ ಚೈತನ್ಯಶಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಹಿರಿಯ ಸಹೋದ್ಯೋಗಿ, ಇದೇ ಸಂಸದೀಯ ಕ್ಷೇತ್ರದ ಪ್ರತಿನಿಧಿ ಶ್ರೀ ರಾಜನಾಥ್ ಸಿಂಗ್ ಜಿ, ಶ್ರೀ ಜಯಂತ್ ಚೌಧರಿ ಜಿ, ಸಂಸತ್ತಿನ  ನನ್ನ ಸಹೋದ್ಯೋಗಿ ಪಂಕಜ್ ಚೌಧರಿ ಜಿ, ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಜಿ ಮತ್ತು ಬ್ರಜೇಶ್ ಪಾಠಕ್ ಜಿ, ಇತರೆ ಜನಪ್ರತಿನಿಧಿಗಳೆ ಮತ್ತು ನನ್ನ ಯುವ ಸ್ನೇಹಿತರೆ,

ನಮ್ಮ ಸ್ನೇಹಿತ ಜಯಂತ್ ಚೌಧರಿ ಜಿ ಇಂತಹ ಪ್ರಮುಖ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಲಕ್ನೋ ಆಯ್ಕೆ ಮಾಡಿಕೊಂಡಿರುವುದು ನನಗೆ ಸಂತೋಷ ತಂದಿದೆ. ನೀವು ಈಗಾಗಲೇ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದೀರಿ, ಆದರೆ ನಾನು ಏಕೆ ಸಂತೋಷವಾಗಿದ್ದೇನೆ ಎಂದು ಇನ್ನೂ ಹೇಳಿಲ್ಲ. ಉತ್ತರ ಪ್ರದೇಶದ ಸಂಸದನಾಗಿ, ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಆಗಮಿಸಿರುವ ನನ್ನ ಯುವ ಸ್ನೇಹಿತರನ್ನು ಸ್ವಾಗತಿಸುವ ಅವಕಾಶ ನನಗೆ ಸಿಕ್ಕಿರುವುದು ಹೆಮ್ಮೆಯ ಮತ್ತು ಸೌಭಾಗ್ಯದ ವಿಷಯವಾಗಿದೆ.

ಸ್ನೇಹಿತರೆ,

ಇಂದು ನೀವು ನಿಮ್ಮ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು ತಲುಪಿದ್ದೀರಿ. ಈಗ ನೀವು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯೊಂದಿಗೆ ನೇರವಾಗಿ ಸಂಪರ್ಕ ಹೊಂದಲಿದ್ದೀರಿ. ಇಂದಿನ ದಿನ ನನಗೂ ಸಹ ಅತ್ಯಂತ ಮಹತ್ವದ್ದಾಗಿದೆ. ಇಂದು ಬೆಳಗ್ಗೆ ನಾನು ದೆಹಲಿಯಿಂದ ಬಂಗಾಳಕ್ಕೆ ತೆರಳಿದ್ದೆ, ಅಲ್ಲಿ ಐಐಟಿ ಒಂದರಲ್ಲಿ ನನ್ನ ದಿನದ ಮೊದಲ ಕಾರ್ಯಕ್ರಮವಿತ್ತು. ದೇಶದ ಮೊದಲ ಐಐಟಿ ಖರಗ್‌ಪುರದಲ್ಲಿ ಸ್ಥಾಪನೆಯಾಯಿತು, ಅದು ತನ್ನ 75ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಐಐಟಿ ವಿದ್ಯಾರ್ಥಿಗಳನ್ನು ಭೇಟಿಯಾಗಲು ನಾನು ಯಾವ ಉತ್ಸಾಹ, ಕನಸುಗಳು, ಭರವಸೆಗಳು ಮತ್ತು ಆಕಾಂಕ್ಷೆಗಳೊಂದಿಗೆ ಹೋಗಿದ್ದೆನೋ, ಅದೇ ಉತ್ಸಾಹ ಮತ್ತು ಹುರುಪಿನೊಂದಿಗೆ ಈಗ ನಾನು ಐಟಿಐ ವಿದ್ಯಾರ್ಥಿಗಳನ್ನು ಭೇಟಿಯಾಗಲು ಬಂದಿದ್ದೇನೆ. ಐಐಟಿ ಆಗಲಿ ಅಥವಾ ಐಟಿಐ ಆಗಲಿ, ನನ್ನ ಪಾಲಿಗೆ ಇವೆರಡೂ ದೇಶದ ಸಂಪತ್ತು, ರಾಷ್ಟ್ರದ ಶಕ್ತಿ ಮತ್ತು ಭಾರತದ ಭವಿಷ್ಯವೇ ಆಗಿವೆ. ಐಟಿಐಗಳಲ್ಲಿ ಕಲಿಯುವಾಗ ನೀವು ಪಡೆದ ಕೌಶಲ್ಯ ಮತ್ತು ಪರಿಣತಿಯು ‘ವಿಕಸಿತ ಭಾರತ’ಕ್ಕೆ ಒಂದು ದೊಡ್ಡ ಶಕ್ತಿಯ ಮೂಲವಾಗಿದೆ. ಈ ‘ವಿಕಸಿತ ಭಾರತ’ವು ನಿಮ್ಮ ಕೈಗಳಿಂದ ಮತ್ತು ನಿಮ್ಮ ಕೌಶಲ್ಯಗಳಿಂದಲೇ ನಿರ್ಮಾಣವಾಗಲಿದೆ. ಯಾವುದೇ ರಾಷ್ಟ್ರವು ತನ್ನ ಯುವಜನರ ಕೌಶಲ್ಯಗಳ ಮೂಲಕವೇ ಪ್ರಗತಿ ಸಾಧಿಸುತ್ತದೆ. ನಮ್ಮ ದೇಶವು ಯಾವಾಗಲೂ ಕೌಶಲ್ಯ ಮತ್ತು ಕರಕುಶಲತೆಯನ್ನು ಗೌರವಿಸುತ್ತಾ ಬಂದಿದೆ. ಲಕ್ನೋವನ್ನೇ ನೋಡಿ, ಇಲ್ಲಿ ಎಷ್ಟು ಅದ್ಭುತವಾದ ‘ಚಿಕಾನ್’ ಕಸೂತಿ ಕೆಲಸ ನಡೆಯುತ್ತದೆ! ದೀರ್ಘಕಾಲದವರೆಗೆ, ಇಂತಹ ಕೌಶಲ್ಯಗಳ ಮೂಲಕವೇ ಭಾರತವು ಜಗತ್ತಿನಾದ್ಯಂತ ಗುರುತಿಸಲ್ಪಟ್ಟಿತ್ತು. ಅತ್ಯಂತ ನುಣ್ಣನೆಯ ಮಸ್ಲಿನ್ ಬಟ್ಟೆ, ಬನಾರಸ್ ಮತ್ತು ಕಾಂಚೀಪುರದ ರೇಷ್ಮೆ, ಕಾಶ್ಮೀರದ ಪಶ್ಮಿನಾ, ನಮ್ಮ ಹತ್ತಿ ಬಟ್ಟೆಗಳು, ಕಲಂಕಾರಿ ಕಲೆ, ವಿಶ್ವದ ಅತ್ಯುತ್ತಮ ಕತ್ತಿಗಳನ್ನು ತಯಾರಿಸಲು ಬಳಸಲಾಗುತ್ತಿದ್ದ ಉಕ್ಕು, ಕಂಚು ಮತ್ತು ಪಂಚಲೋಹದ ಶಿಲ್ಪಗಳು, ಹೀಗೆ ನೂರಾರು ಅಸಂಖ್ಯಾತ ಕಲೆಗಳು ಮತ್ತು ಕರಕುಶಲ ವಸ್ತುಗಳು ನಮ್ಮಲ್ಲಿವೆ. ಬಹುಶಃ ಯಾರೊಬ್ಬರೂ ಇವೆಲ್ಲವನ್ನೂ ಒಂದೇ ಕಡೆ ಪಟ್ಟಿ ಮಾಡಲು ಸಾಧ್ಯವಿಲ್ಲ. ಇವು ಒಂದು ಕಾಲದಲ್ಲಿ ನಮ್ಮ ಸಮಾಜದ ಆಧಾರಸ್ತಂಭಗಳಾಗಿದ್ದವು.

ಸ್ನೇಹಿತರೆ,

ಹಿಂದೆ ನಮ್ಮ ಸಾಮಾಜಿಕ ವ್ಯವಸ್ಥೆಯೇ ಕೌಶಲಗಳನ್ನು ಆಧರಿಸಿ ರೂಪುಗೊಂಡಿತ್ತು. ನನ್ನ ಹುಟ್ಟು ಗುಜರಾತ್‌ನಲ್ಲಿ ಆಯಿತು, ಅಲ್ಲಿನ ಒಂದು ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಗುಜರಾತ್‌ನಲ್ಲಿ ‘ವಸ್ವಾಯ’ ಎಂಬ ಪದವಿದೆ. ಈ ಸಂಪ್ರದಾಯದ ಪ್ರಕಾರ, ಒಂದು ಗ್ರಾಮ ಸ್ಥಾಪನೆಯಾದಾಗ, ಆ ಗ್ರಾಮದ ಜೀವನಕ್ಕೆ ಆಧಾರವಾಗಬಲ್ಲ ಕೌಶಲವುಳ್ಳ ಜನರು ಅಲ್ಲಿ ಬಂದು ನೆಲೆಸುತ್ತಿದ್ದರು. ಆಗ ಮಾತ್ರ ಒಂದು ಗ್ರಾಮವು ನಿಜವಾದ ಅರ್ಥದಲ್ಲಿ ಅಸ್ತಿತ್ವಕ್ಕೆ ಬರಲು ಸಾಧ್ಯವಿತ್ತು. ಇವರ ಕೌಶಲಗಳು ಎಷ್ಟು ಅತ್ಯಗತ್ಯವಾಗಿದ್ದವೆಂದರೆ, ಇವರಿಲ್ಲದೆ ಗ್ರಾಮ ಜೀವನ ಊಹಿಸಿಕೊಳ್ಳುವುದು ಕೂಡ ಅಸಾಧ್ಯವಾಗಿತ್ತು.

ಸ್ನೇಹಿತರೆ,

ಪ್ರಾಚೀನ ಕಾಲದಿಂದಲೂ ದೇಶದ ಪ್ರತಿಯೊಂದು ಭಾಗದಲ್ಲೂ ಇಂತಹದೇ ವ್ಯವಸ್ಥೆಗಳು ಅಸ್ತಿತ್ವದಲ್ಲಿದ್ದವು. ಆದರೆ ದುರದೃಷ್ಟವಶಾತ್, ಕಾಲಕ್ರಮೇಣ ಈ ವ್ಯವಸ್ಥೆಯು ತನ್ನ ಮಹತ್ವ ಕಳೆದುಕೊಂಡಿತು. ನಾನು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ, ನನ್ನ ಮುಂದೆ ಒಂದು ಪ್ರಶ್ನೆ ಉದ್ಭವಿಸಿತ್ತು. ನಮ್ಮ ಜೀವನವನ್ನು ಅತ್ಯಂತ ಕಷ್ಟಕರವಾಗಿಸಬಲ್ಲ, ಅಂತಹ ಯಾವೆಲ್ಲಾ ಕೌಶಲಗಳು ಇರಬಹುದು? ನಾನು ನನ್ನ ಅಧಿಕಾರಿಗಳಿಗೆ ಈ ಜವಾಬ್ದಾರಿ ನೀಡಿದೆ, ಅವರು ಸುಮಾರು 30-35 ವರ್ಗಗಳ ಪಟ್ಟಿ ತಂದರು. ನಾನು ಅವರಿಗೆ, “ಈ ರೀತಿ ಯೋಚಿಸಬೇಡಿ” ಎಂದು ಹೇಳಿ, ಬೇರೊಂದು ವಿಧಾನ ಸೂಚಿಸಿದೆ. “ಒಬ್ಬ ವ್ಯಕ್ತಿ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ, ಹಾಗೂ ಹುಟ್ಟಿನಿಂದ ಸಾವಿನವರೆಗೆ – ಒಬ್ಬ ವ್ಯಕ್ತಿಗೆ, ಒಂದು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಯಾವ ರೀತಿಯ ಸೇವೆಗಳ ಅಗತ್ಯವಿರುತ್ತದೆ? ಯಾವ ಸೇವೆಗಳು ಅತ್ಯಂತ ಅವಶ್ಯಕವಾಗಿವೆ?” ಎಂದು ಯೋಚಿಸಲು ಹೇಳಿದೆ. ತಮ್ಮ ಸ್ವಂತ ಅನುಭವ ಆಧರಿಸಿ ಪಟ್ಟಿ ತಯಾರಿಸಲು ಅವರಿಗೆ ತಿಳಿಸಿದೆ. ಮೊದಲು ಅವರು ಕೇವಲ 30-35 ವರ್ಗಗಳನ್ನು ಗುರುತಿಸಿದ್ದರು. ಆದರೆ ಒಂದು ವಾರ ಆಳವಾಗಿ ಯೋಚಿಸಿದ ನಂತರ, ಅವರು ಸುಮಾರು 1 ಸಾವಿರ ವೃತ್ತಿಗಳ ಪಟ್ಟಿಯೊಂದಿಗೆ ಮರಳಿದರು! ಹೂಗುಚ್ಛಗಳನ್ನು ತಯಾರಿಸುವವರು, ಆಟಿಕೆಗಳನ್ನು ಮಾಡುವವರು, ಮೆಹಂದಿ ಹಾಕುವವರು ಹೀಗೆ ಅಸಂಖ್ಯಾತ ಸೇವೆಗಳನ್ನು ಒದಗಿಸುವವರ ಅಗತ್ಯ ನಮಗಿದೆ ಎಂಬುದು ಅವರಿಗೆ ಅರಿವಾಯಿತು. ಇಂತಹ ಕೌಶಲಗಳು ಮತ್ತು ಕರಕುಶಲತೆಗಳೇ ನಮ್ಮ ಸಮಾಜವನ್ನು ಮುನ್ನಡೆಸುತ್ತಿದ್ದವು. ನಾನು ಅಧಿಕಾರಿಗಳಿಗೆ ಇದರ ಮೇಲೆ ಗಮನ ಹರಿಸಲು ಹೇಳಿದೆ. ಇದು ಮುಂದೆ ಗುಜರಾತ್‌ನಲ್ಲಿ ಆಧುನಿಕ ‘ಕೌಶಲ ಅಭಿವೃದ್ಧಿ ಪರಿಸರ ವ್ಯವಸ್ಥೆ’ ನಿರ್ಮಾಣವಾಗಲು ಕಾರಣವಾಯಿತು.

ಸ್ನೇಹಿತರೆ,

ಭಾರತದ ಈ ಕೌಶಲ ವ್ಯವಸ್ಥೆ ನಾಶವಾಗಲು ಮತ್ತೊಂದು ಕಾರಣವೂ ಇದೆ. ನಮ್ಮ ದೇಶಕ್ಕೆ ಆಕ್ರಮಣಕಾರರು ಬಂದಾಗ, ಭಾರತವು ಜಗತ್ತಿನ ಮೆಚ್ಚುಗೆಗೆ ಪಾತ್ರವಾದ ಮತ್ತು ಅನೇಕರ ಅಸೂಯೆಗೆ ಕಾರಣವಾಗಿದ್ದ ಒಂದು ಸುವರ್ಣ ನಾಗರಿಕತೆಯಾಗಿತ್ತು. ಆ ಆಕ್ರಮಣಕಾರರು ಏನು ಮಾಡಿದರು? ಅವರು ಮೊದಲು ದಾಳಿ ನಡೆಸಿದ್ದು ನಮ್ಮ ಕೌಶಲಗಳು ಮತ್ತು ಕರಕುಶಲತೆಯ ಮೇಲೆ. ನಮ್ಮ ಕುಶಲಕರ್ಮಿಗಳು ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಸಿದ್ಧಪಡಿಸಿದಾಗ, ಅವರ ಹೆಬ್ಬೆರಳುಗಳನ್ನೇ ಕತ್ತರಿಸಲಾಗುತ್ತಿತ್ತು ಎಂಬ ಇತಿಹಾಸವನ್ನು ನೀವೆಲ್ಲರೂ ಓದಿರಬಹುದು. ಏಕೆ? ಏಕೆಂದರೆ, ಭಾರತದ ಸಮೃದ್ಧಿ ಮತ್ತು ಶ್ರೇಷ್ಠತೆಯು ಜನರ ಕೈಗಳಲ್ಲಿರುವ ಕೌಶಲಗಳಿಂದಲೇ ಬಂದಿದೆ ಎಂಬುದು ಆ ಆಕ್ರಮಣಕಾರರಿಗೆ ತಿಳಿದಿತ್ತು. ಆ ಕೌಶಲಗಳನ್ನು ನಾಶಪಡಿಸಿದರೆ, ಭಾರತವನ್ನೇ ದುರ್ಬಲಗೊಳಿಸಬಹುದು ಎಂಬುದು ಅವರಿಗೆ ಅರಿವಿತ್ತು. ನಂತರ ಬ್ರಿಟಿಷರು ಬಂದರು. ಅವರ ವಿಧಾನಗಳು ಹೆಚ್ಚು ವ್ಯವಸ್ಥಿತವಾಗಿದ್ದವು. ಮೆಕಾಲೆ ಶಿಕ್ಷಣ ಪದ್ಧತಿಯ ಮೂಲಕ, ಅವರು ಅಂತಹ ಒಂದು ಮಾದರಿಯನ್ನು ಹೇರಿದರು. ಇದರಲ್ಲಿ ನಮ್ಮ ಕೌಶಲ ಆಧಾರಿತ ಪರಂಪರೆಗಳು ಕೇವಲ ಕಾಗದದ ಮೇಲಿನ ಗುಮಾಸ್ತರನ್ನು ಸೃಷ್ಟಿಸುವ ಮಟ್ಟಕ್ಕೆ ಇಳಿದವು. ಗುಮಾಸ್ತರನ್ನು ಸೃಷ್ಟಿಸುವುದನ್ನೇ ಗುರಿಯಾಗಿಸಿಕೊಂಡ ಒಂದು ಸಂಪೂರ್ಣ ವ್ಯವಸ್ಥೆಯೇ ರೂಪುಗೊಂಡಿತು. ಬ್ರಿಟಿಷರು ಭಾರತದ ಕೌಶಲಗಳನ್ನು ನಾಶಪಡಿಸಿ, ತಮ್ಮದೇ ಆದ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿಕೊಂಡರು. ಅವರು ನಮ್ಮ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಉತ್ಪಾದನಾ ವಲಯವನ್ನು ವಿಸ್ತರಿಸಿದರು. ಕಾಲಕ್ರಮೇಣ, ಕಾಗದದ ಕೆಲಸ ಮಾಡುವ ಗುಮಾಸ್ತರಾಗುವುದನ್ನೇ ಪ್ರತಿಷ್ಠಿತ ವಿಷಯವೆಂದು ಪರಿಗಣಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಇಂದಿಗೂ ಸಹ ಒಂದು ಮಗು ಐಟಿಐ ಸೇರಿದರೆ, ಅನೇಕ ಪೋಷಕರು ಅದನ್ನು ತಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಬಳಿ ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ, ಬದಲಾಗಿ ಅದನ್ನು ಮುಚ್ಚಿಡುತ್ತಾರೆ. ಮಗು ವಿಶ್ವವಿದ್ಯಾಲಯಕ್ಕೋ ಅಥವಾ ಕಾಲೇಜಿಗೋ ಹೋಗುತ್ತಿಲ್ಲ ಎಂಬ ಕಾರಣಕ್ಕೆ ಅವರಿಗೆ ಮುಜುಗರವಾಗುತ್ತದೆ. ಮಗು ನೀಲಿ ಬಣ್ಣದ ಕೆಲಸದ ಉಡುಪು ಧರಿಸಿ, ತನ್ನ ಕೈಗಳಿಂದ ಕೆಲಸ ಮಾಡುತ್ತಿರುತ್ತದೆ. ಈ ಮನಸ್ಥಿತಿಯು ಕಾಲಕ್ರಮೇಣ ಬೆಳೆದುಬಂದಿದೆ. ಇದನ್ನು ಬದಲಾಯಿಸಬೇಕೆಂದು ನಾನು ದೃಢ ನಿರ್ಧಾರ ಮಾಡಿದ್ದೇನೆ. ಐಐಟಿ ಪದವೀಧರರಿಗೆ ನೀಡುವ ಗೌರವವನ್ನೇ ನನ್ನ ಐಟಿಐ ವಿದ್ಯಾರ್ಥಿಗಳಿಗೂ ನೀಡಬೇಕು. ಅತ್ಯಂತ ದೊಡ್ಡ ಕಂಪನಿಯಲ್ಲೇ ಆಗಲಿ, ಪದವಿ ಮತ್ತು ಪ್ರಮಾಣಪತ್ರಗಳನ್ನು ಹಿಡಿದುಕೊಂಡು ಓಡಾಡುವವರು ಬಹುಶಃ ಇಬ್ಬರು ಅಥವಾ ಮೂವರು ಇರಬಹುದು. ಆದರೆ ಆ ಕಂಪನಿಯು ಸುಗಮವಾಗಿ ನಡೆಯುತ್ತಿದೆಯೆಂದರೆ, ಅದಕ್ಕೆ ಕಾರಣ ಅಲ್ಲಿರುವ 200-300ರಷ್ಟು ಐಟಿಐ ತರಬೇತಿ ಪಡೆದ ಕಾರ್ಮಿಕರೇ ಆಗಿದ್ದಾರೆ.

ಆದ್ದರಿಂದ, ಸ್ನೇಹಿತರೆ,

ನಮ್ಮ ಸಾಮಾಜಿಕ ಜೀವನದಲ್ಲಿ ಮಾನಸಿಕ ಪರಿವರ್ತನೆಯ ಅಗತ್ಯ ಬಹಳಷ್ಟಿದೆ. ಜಯಂತ್ ಚೌಧರಿ ಜಿ ಮತ್ತು ಈ ಉಪಕ್ರಮದೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಅಧಿಕಾರಿಗಳನ್ನು ನಾನು ಅಭಿನಂದಿಸುತ್ತೇನೆ. ಇಂದು ಪ್ರಮಾಣಪತ್ರಗಳನ್ನು ಸ್ವೀಕರಿಸಲು ಬಂದಿದ್ದ ಯುವಕ-ಯುವತಿಯರನ್ನು ನಾನು ಗಮನಿಸುತ್ತಿದ್ದೆ. ಅವರ ಶೈಲಿ ಮತ್ತು ಉಡುಪನ್ನು ನಾನು ನೋಡಿದೆ. ವಿಶ್ವವಿದ್ಯಾಲಯಗಳ ಘಟಿಕೋತ್ಸವಗಳಲ್ಲಿ ಕಂಡುಬರದಂತಹ ಹೆಮ್ಮೆ ಮತ್ತು ಘನತೆಯನ್ನು ನನ್ನ ಐಟಿಐ ವಿದ್ಯಾರ್ಥಿಗಳಲ್ಲಿ ನಾನು ಕಾಣುತ್ತಿದ್ದೇನೆ. ಈ ಆತ್ಮವಿಶ್ವಾಸ, ಈ ಹೆಮ್ಮೆ – ಇದೊಂದು ವಿಶೇಷ ಸಂಗತಿ. ಭಾರತದ ಪ್ರಧಾನ ಮಂತ್ರಿ ಆದವರು ಬಂಗಾಳದ ಕಾರ್ಯಕ್ರಮವೊಂದರಿಂದ ನೇರವಾಗಿ ಲಕ್ನೋಗೆ ಬಂದು, ಇಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಹೆಮ್ಮೆಯಿಂದ ಪ್ರಮಾಣಪತ್ರಗಳನ್ನು ಪ್ರದಾನ ಮಾಡುತ್ತಿದ್ದಾರೆ.

ಸ್ನೇಹಿತರೆ,

ವಸಾಹತುಶಾಹಿ ಮನಸ್ಥಿತಿಯು ಸ್ವಾತಂತ್ರ್ಯ ಬಂದ ನಂತರವೂ ದೇಶದಲ್ಲಿ ಇದರಿಂದ ಸಂಪೂರ್ಣವಾಗಿ ಹೊರಬರಲಿಲ್ಲ. ಸ್ವಾತಂತ್ರ್ಯದ ನಂತರವೂ ಕಚೇರಿ ಕೆಲಸಗಳಿಗೆ(ಕ್ಲರಿಕಲ್ ಉದ್ಯೋಗಗಳಿಗೆ) ಹೆಚ್ಚಿನ ಆದ್ಯತೆ ನೀಡಲಾಯಿತು, ಪರಿಣಾಮವಾಗಿ ಕೌಶಲ್ಯಗಳು ಕ್ರಮೇಣ ಹಿನ್ನೆಲೆಗೆ ಸರಿದವು. ಒಮ್ಮೆ ನಾನು ದಾದಾ ಧರ್ಮಾಧಿಕಾರಿ ಅವರ ಪುಸ್ತಕವೊಂದನ್ನು ಓದಿದೆ. ಸ್ನಾತಕೋತ್ತರ ಪದವೀಧರನೊಬ್ಬ ಉದ್ಯೋಗಕ್ಕಾಗಿ ಅವರನ್ನು ಸಂಪರ್ಕಿಸಿ, ಕೆಲಸ ಹುಡುಕಿಕೊಡುವಂತೆ ಕೇಳಿಕೊಂಡ. ದಾದಾ ಧರ್ಮಾಧಿಕಾರಿ ಅವರು, “ನಿನಗೆ ಏನು ಮಾಡಲು ಬರುತ್ತದೆ?” ಎಂದು ಕೇಳಿದರು. ಅದಕ್ಕೆ ಆ ವ್ಯಕ್ತಿ, “ನಾನು ಸ್ನಾತಕೋತ್ತರ ಪದವೀಧರ” ಎಂದು ಉತ್ತರಿಸಿದ. ದಾದಾ ಜಿ ಮತ್ತೆ, “ಆದರೆ ನಿನಗೆ ವಾಸ್ತವವಾಗಿ ಏನು ಮಾಡಲು ಬರುತ್ತದೆ?” ಎಂದು ಕೇಳಿದರು. ಆ ಯುವಕ, “ನನ್ನ ಬಳಿ ಚಿನ್ನದ ಪದಕವಿದೆ, ಪ್ರಮಾಣಪತ್ರಗಳಿವೆ. ನಾನು ಸ್ನಾತಕೋತ್ತರ ಪದವೀಧರ” ಎಂದು ಹೇಳಿದ. ದಾದಾ ಜಿ ಮತ್ತೆ, “ನಿನಗೆ ವಾಹನ ಚಲಾಯಿಸಲು ಬರುತ್ತದೆಯೇ?” ಎಂದು ಕೇಳಿದರು. “ಇಲ್ಲ.” “ಅಡುಗೆ ಮಾಡಲು ಬರುತ್ತದೆಯೇ?” “ಇಲ್ಲ.” “ಹಾಗಾದರೆ ನಿನಗೆ ಏನು ಮಾಡಲು ಬರುತ್ತದೆ?” ಎಂದು ಕೇಳಿದಾಗ, ಆ ಯುವಕ ತಾನು ಸ್ನಾತಕೋತ್ತರ ಪದವೀಧರನೆಂಬುದನ್ನೇ ಮತ್ತೆ ಮತ್ತೆ ಹೇಳುತ್ತಿದ್ದ. ಒಂದು ಕಾಲವಿತ್ತು, ಆಗ ಕೇವಲ ಕಾಗದದ ಪ್ರಮಾಣಪತ್ರಗಳಿಗೆ ಮಾತ್ರ ಮೌಲ್ಯವಿತ್ತು. ಆದರೆ ಕಾಲ ಬದಲಾಗುತ್ತಿದೆ, ಇಂದು ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನೀವು ಗಮನಿಸಿರಬಹುದು. 2023ರಲ್ಲಿ ಸಂಸತ್ತಿನಲ್ಲಿ, ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಮೂಲಕ ಜನರು ಸಮೃದ್ಧರಾಗಬಹುದು ಎಂದು ನಾನು ಸಲಹೆ ನೀಡಿದ್ದೆ ಎಂದು ಜನರು ಈಗ ಹೇಳುತ್ತಿದ್ದಾರೆ. ಆಗ ಜನರು ನನ್ನನ್ನು ನೋಡಿ ಅಪಹಾಸ್ಯ ಮಾಡಿದ್ದರು. ಆದರೆ, ಹೂಡಿಕೆ ಮಾಡಿದವರು ಗಮನಾರ್ಹ ಲಾಭ ಪಡೆದಿದ್ದಾರೆ ಎಂಬುದನ್ನು ಇತಿಹಾಸ ಸಾಬೀತುಪಡಿಸಿದೆ. ಒಂದು ವರ್ಷದ ಹಿಂದೆ ನಾನು ಇನ್ನೊಂದು ವಿಷಯ ಹೇಳಿದ್ದೆ. ಅಗತ್ಯ ಇಲ್ಲದಿದ್ದರೆ, ಒಂದು ವರ್ಷದವರೆಗೆ ಚಿನ್ನ ಖರೀದಿಸದಂತೆ ನಾನು ದೇಶದ ಜನರಿಗೆ ಮನವಿ ಮಾಡಿದ್ದೆ. ನನಗೆ ಸಂತೋಷವಾಗುತ್ತಿದೆ, ಏಕೆಂದರೆ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಷ್ಟ್ರಕ್ಕಾಗಿ ಒಂದು ಹೊತ್ತಿನ ಊಟ ತ್ಯಜಿಸುವಂತೆ ಕೋರಿದಾಗ ಜನರು ಅದನ್ನು ಪಾಲಿಸಿದಂತೆಯೇ, ಈಗಲೂ ನಮ್ಮ ನಾಗರಿಕರು ನನ್ನ ಮಾತಿಗೆ ಸ್ಪಂದಿಸಿದ್ದಾರೆ. ಈ ರಾಷ್ಟ್ರದ ಸ್ವಭಾವವೇ ಇಂತಹದ್ದು. ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿ, ಜನರು ಚಿನ್ನ ಕಡಿಮೆ ಖರೀದಿಸಬೇಕೆಂದು ವಿನಂತಿಸಿದಾಗ, ಅವರು ಹಾಗೆಯೇ ಮಾಡಿದರು. ಪರಿಣಾಮವಾಗಿ ಚಿನ್ನದ ಬೆಲೆಗಳು ಇಳಿದವು. ಇಂದು ಜನರು ನನ್ನ ಸಲಹೆ ಪಾಲಿಸಿದ್ದರಿಂದ ಹಣ ಉಳಿಸಲು ಸಾಧ್ಯವಾಯಿತು ಎಂದು ಹೇಳುತ್ತಾರೆ. ಇಂದು ನಾನು ಇನ್ನೊಂದು ವಿಷಯ ಹೇಳಬಯಸುತ್ತೇನೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ. ಕಾಲ ಬದಲಾಗುತ್ತಿದೆ, ಕೇವಲ ಕಾಗದದ ಪ್ರಮಾಣಪತ್ರಗಳನ್ನು ಹಿಡಿದುಕೊಂಡು, ಕೋಟ್, ಪ್ಯಾಂಟ್ ಮತ್ತು ಟೈ ಧರಿಸಿದವರಿಗಿಂತ ಹೆಚ್ಚಾಗಿ, ಕೌಶಲ್ಯ ಮತ್ತು ನೈಪುಣ್ಯತೆ ಹೊಂದಿರುವ ಜನರಿಗೆ ಬೇಡಿಕೆ ಹೆಚ್ಚಾಗಲಿದೆ. ನಿಜವಾದ ಕೌಶಲ್ಯ ಹೊಂದಿರುವವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ನಾನು ಸೌದಿ ಅರೇಬಿಯಾ, ದುಬೈ, ಅಬುಧಾಬಿ, ಕತಾರ್ ಅಥವಾ ಕುವೈತ್‌ಗೆ ಭೇಟಿ ನೀಡಿದಾಗಲೆಲ್ಲಾ, ಅಲ್ಲಿನ ರಾಜಮನೆತನದವರು ನನಗೆ ಒಂದು ವಿಷಯ ಹೇಳುತ್ತಾರೆ. ಅಲ್ಲಿ ಕಾಣುವ ಭವ್ಯವಾದ ಆಧುನಿಕ ನಗರಗಳು ಕೇವಲ ಅವರ ಹಣದಿಂದ ಮಾತ್ರವಲ್ಲ, ಬದಲಾಗಿ ಭಾರತೀಯ ಕಾರ್ಮಿಕರ ಕಠಿಣ ಪರಿಶ್ರಮ ಮತ್ತು ಕೌಶಲ್ಯದಿಂದ ನಿರ್ಮಿಸಲ್ಪಟ್ಟಿವೆ ಎಂದು ಅವರು ಹೇಳುತ್ತಾರೆ. ದುಬೈನ ವೈಭವ, ಅಬುಧಾಬಿಯ ಹೊಳೆಯುವ ನಗರ ದೃಶ್ಯಗಳು ಮತ್ತು ಸೌದಿ ಅರೇಬಿಯಾದ ಅಭಿವೃದ್ಧಿ – ಇವೆಲ್ಲವೂ ಭಾರತೀಯ ಕುಶಲಕರ್ಮಿಗಳ ಕೌಶಲ್ಯ ಮತ್ತು ಶ್ರಮದ ಫಲಿತಾಂಶಗಳಾಗಿವೆ. ಪ್ರತಿಯೊಂದು ರಾಜಮನೆತನವೂ ಭಾರತದ ಮಾನವ ಪ್ರತಿಭೆಯನ್ನು ಶ್ಲಾಘಿಸುತ್ತಿದೆ. ಇಂದು, ನಮ್ಮೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುವ ವಿಶ್ವಾದ್ಯಂತದ ಸರ್ಕಾರಗಳು, ಪ್ರತಿ ವರ್ಷ ತಮಗೆ 90,000, 1,50,000 ಅಥವಾ 1,00,000 ಜನರ ಅಗತ್ಯವಿದೆ ಎಂದು ಪದೇಪದೆ ಹೇಳುತ್ತಿವೆ. ಇಡೀ ಜಗತ್ತು ಭಾರತೀಯ ಪ್ರತಿಭೆಯನ್ನು ಬಯಸುತ್ತಿದೆ. ಅವರು ಕೇವಲ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದವರನ್ನಷ್ಟೇ ಅಲ್ಲ, ಐಟಿಐಗಳಿಂದ ಹೊರಬರುವವರನ್ನೂ ಕೇಳುತ್ತಿದ್ದಾರೆ. ಕೌಶಲ್ಯ ಮತ್ತು ಪರಿಣತಿ ಹೊಂದಿರುವವರಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ಅದಕ್ಕಾಗಿಯೇ ನಾನು ಹೇಳುತ್ತೇನೆ, ಸ್ನೇಹಿತರೆ, ಮುಂದಿನ 20 ವರ್ಷಗಳು… (ಇದು ಆ ಚಲನಚಿತ್ರದ ಬಗ್ಗೆ ಅಲ್ಲ)… ಮುಂದಿನ 20 ವರ್ಷಗಳು ‘ವಿಕಸಿತ ಭಾರತ’ಕ್ಕೆ ಸೇರಿವೆ.

ಸ್ನೇಹಿತರೆ,

21ನೇ ಶತಮಾನದಲ್ಲಿ ಭಾರತವು ಕೌಶಲ್ಯಗಳಿಗೆ ಗೌರವ ನೀಡುವ ಮೂಲಕವೇ ಮುನ್ನಡೆಯಲು ಸಾಧ್ಯ. ಆದ್ದರಿಂದ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಸರ್ಕಾರವು ‘ಶ್ರಮೇವ ಜಯತೆ'(ಶ್ರಮವೇ ಜಯಶೀಲವಾಗಲಿ) ಎಂಬ ಸ್ಫೂರ್ತಿಯಿಂದ ಹಲವಾರು ಕ್ರಮಗಳನ್ನು ಕೈಗೊಂಡಿದೆ. ನಾವು ‘ಕೌಶಲ್ಯ ಅಭಿವೃದ್ಧಿ ಸಚಿವಾಲಯ’ವನ್ನು ಪ್ರತ್ಯೇಕವಾಗಿ ರಚಿಸುವ ಮೂಲಕ ಇದನ್ನು ಪ್ರಾರಂಭಿಸಿದೆವು. ಹಿಂದೆ, ಘಟಿಕೋತ್ಸವಗಳು ಕೇವಲ ಕಾಲೇಜು ಮತ್ತು ವಿಶ್ವವಿದ್ಯಾಲಯದ ಪದವೀಧರರಿಗೆ ಮಾತ್ರ ಸೀಮಿತವಾಗಿದ್ದವು. ಆಗ ಜನರು ವಿಶೇಷ ಟೋಪಿಗಳು ಮತ್ತು ಗೌನ್‌ಗಳನ್ನು ಧರಿಸುತ್ತಿದ್ದರು. ನಾನು ‘ಬೇಡ’ ಎಂದೆ. ಒಂದು ವೇಳೆ ಭವ್ಯವಾದ ಘಟಿಕೋತ್ಸವಗಳು ನಡೆಯುವುದೇ ಆದರೆ, ಅವು ನನ್ನ ಐಟಿಐ ವಿದ್ಯಾರ್ಥಿಗಳಿಗೂ ಇರಬೇಕು ಎಂದು ನಾನು ಹೇಳಿದೆ. ಭಾರತದ ಭವಿಷ್ಯವನ್ನು ನಾನು ಅವರ ಬೆರಳುಗಳಲ್ಲಿ ಕಾಣುತ್ತೇನೆ. ಭಾರತದ ಶಕ್ತಿಯನ್ನು ನಾನು ಅವರ ಕೌಶಲ್ಯಗಳಲ್ಲಿ ಕಾಣುತ್ತೇನೆ. ನಾವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದಾಗ, ಕೌಶಲ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆವು.

ಸ್ನೇಹಿತರೆ,

ಇಂದಿನ ಆಧುನಿಕ ಯುಗದಲ್ಲಿ, ಕೃತಕ ಬುದ್ಧಿಮತ್ತೆಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎಐ ಹೀಗೆ ಮಾಡುತ್ತದೆ, ಹಾಗೆ ಮಾಡುತ್ತದೆ. ಅದು ಒಬ್ಬರ ಉದ್ಯೋಗ ಕಸಿದುಕೊಳ್ಳುತ್ತದೆ, ಇನ್ನೊಬ್ಬರ ಜೀವನೋಪಾಯವನ್ನೇ ಕಿತ್ತುಕೊಳ್ಳುತ್ತದೆ ಎಂದೆಲ್ಲಾ ಜನರು ಹೇಳುತ್ತಾರೆ. ಆದರೆ, ಒಂದು ವಿಷಯವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಿ: ಕೌಶಲ್ಯವುಳ್ಳ ವ್ಯಕ್ತಿಯ ಜೀವನೋಪಾಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಕೋವಿಡ್ ಸಂದರ್ಭದಲ್ಲಿ ಪರಿಸ್ಥಿತಿ ಎಷ್ಟು ಕಠಿಣವಾಗಿತ್ತು ಎಂಬುದನ್ನು ನಾವು ಕಂಡಿದ್ದೇವೆ. ಜನರು ಅಸಹಾಯಕರಾಗಿದ್ದರು. ಸಮಾಜವು ಯಾರ ಸೇವೆಗಳ ಮೇಲೆ ಅವಲಂಬಿತವಾಗಿತ್ತೋ, ಅಂಥವರು ಸಾವಿನ ಭಯದಿಂದ ತಮ್ಮ ಹಳ್ಳಿಗಳಿಗೆ ಮರಳಿದರು. ಆಗ ಜನರಿಗೆ ಅರಿವಾಯಿತು – ತಮ್ಮ ಬಳಿ ಎಷ್ಟೇ ಸಂಪತ್ತಿದ್ದರೂ, ಕೌಶಲ್ಯವುಳ್ಳ ಮಾನವ ಸಂಪನ್ಮೂಲವಿಲ್ಲದೆ ಜೀವನ ನಡೆಸುವುದು ಅಸಾಧ್ಯ ಎಂದು. ಆ ಕಠಿಣ ಸಮಯದಲ್ಲಿ, ಜೀವನದ ಅನೇಕ ಆಯಾಮಗಳನ್ನು ಉಳಿಸಿ ಮುನ್ನಡೆಸಿದ್ದು ಇದೇ ಕೌಶಲ್ಯವುಳ್ಳ ಕಾರ್ಮಿಕರು.

ಸ್ನೇಹಿತರೆ,

ನೀವು ಒಂದು ಕೌಶಲ್ಯ ಕಲಿತಾಗ, ನೀವು ಕೇವಲ ಯಂತ್ರಗಳೊಂದಿಗೆ ಕೆಲಸ ಮಾಡುತ್ತಿರುವುದಿಲ್ಲ. ಬದಲಾಗಿ, ನೀವು ಜನರ ಜೀವನ ಸುಲಭಗೊಳಿಸುತ್ತಿದ್ದೀರಿ, ರಾಷ್ಟ್ರದ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೀರಿ. ಒಂದು ಕಾಲದಲ್ಲಿ ಭಾರತವು ಮೊಬೈಲ್ ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇಂದು ಭಾರತದ ಪುತ್ರ ಪುತ್ರಿಯರೇ ಆ ಫೋನ್‌ಗಳನ್ನು ತಯಾರಿಸುತ್ತಿದ್ದಾರೆ. ಭಾರತದಲ್ಲಿ ತಯಾರಾದ ಮೊಬೈಲ್ ಫೋನ್‌ಗಳು ವಿಶ್ವಾದ್ಯಂತದ ವಿವಿಧ ದೇಶಗಳಿಗೆ ರವಾನೆಯಾಗುತ್ತಿವೆ. ನಿಮ್ಮ ಕಾರಣದಿಂದಲೇ ಭಾರತದ ಉತ್ಪಾದನಾ ಸಾಮರ್ಥ್ಯವು ಹೆಚ್ಚುತ್ತಿದೆ. ಇದೇ ಕಾರಣಕ್ಕಾಗಿ, ಇಂದು ಐಟಿಐ ಸಂಸ್ಥೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. 2014ರಿಂದ ನಮ್ಮ ಸರ್ಕಾರವು ಕಳೆದ 1 ದಶಕದಲ್ಲಿ ಸುಮಾರು 5,000 ಹೊಸ ಐಟಿಐಗಳನ್ನು ಸ್ಥಾಪಿಸಿದೆ. ಐಟಿಐಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 5 ಲಕ್ಷಕ್ಕಿಂತ ಹೆಚ್ಚಾಗಿದೆ. ಇವರಲ್ಲಿ, ಹೆಣ್ಣು ಮಕ್ಕಳ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ.

ಸ್ನೇಹಿತರೆ,

ಐಟಿಐಗಳಲ್ಲಿ ತರಬೇತಿಯ ಗುಣಮಟ್ಟ, ಬೋಧಕ ಸಿಬ್ಬಂದಿ ಮತ್ತು ಮೂಲಸೌಕರ್ಯಗಳು ನಮಗೆ ಅತ್ಯಂತ ಪ್ರಮುಖ ಆದ್ಯತೆಗಳಾಗಿವೆ. ಹಿಂದೆ, ಐಟಿಐ ಜಾಲವು ಹಿಂದುಳಿದಿತ್ತು. ಕೌಶಲ್ಯ ಮತ್ತು ವೃತ್ತಿಪರ ಶಿಕ್ಷಣದ ಹೆಸರಿನಲ್ಲಿ ಹಳೆಯ ಕೋರ್ಸ್‌ಗಳನ್ನೇ ಕಲಿಸಲಾಗುತ್ತಿತ್ತು. ಆದರೆ ಇಂದು ಐಟಿಐಗಳಲ್ಲಿ 30ಕ್ಕೂ ಹೆಚ್ಚು ಆಧುನಿಕ ಕಾಲದ ವೃತ್ತಿಪರ ಕೋರ್ಸ್‌ಗಳನ್ನು ಕಲಿಸಲಾಗುತ್ತಿದೆ. ‘ಜೆನ್ ಜಿ’ ಪ್ರತಿನಿಧಿಗಳು ಉಲ್ಲೇಖಿಸಿದಂತೆ, ಈಗ ಏರೋನಾಟಿಕಲ್ ಸ್ಟ್ರಕ್ಚರ್ಸ್, ಎಐ ಅಸಿಸ್ಟೆಂಟ್ಸ್, ಸೈಬರ್ ಸೆಕ್ಯುರಿಟಿ ಅಸಿಸ್ಟೆಂಟ್ಸ್, ಡ್ರೋನ್ ತಂತ್ರಜ್ಞರು, ಗ್ರೀನ್ ಹೈಡ್ರೋಜನ್ ತಂತ್ರಜ್ಞರು, ಕೈಗಾರಿಕಾ ರೊಬೊಟಿಕ್ಸ್, ಎಲೆಕ್ಟ್ರಿಕ್ ವಾಹನಗಳು, ಅನಿಮೇಷನ್ ಮತ್ತು ಸ್ಪೆಷಲ್ ಎಫೆಕ್ಟ್ಸ್, ಸೆಮಿಕಂಡಕ್ಟರ್ ತಂತ್ರಜ್ಞರು ಮುಂತಾದ ಕೋರ್ಸ್‌ಗಳನ್ನು ಸೇರಿಸಲಾಗಿದೆ. ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡೇ ಈ ಎಲ್ಲಾ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಆಸ್ಪತ್ರೆ ಎಷ್ಟೇ ದೊಡ್ಡದಾಗಿರಲಿ ಮತ್ತು ವೈದ್ಯರು ಎಷ್ಟೇ ಉನ್ನತ ಶಿಕ್ಷಣ ಪಡೆದಿದ್ದರೂ, ಯಂತ್ರಗಳನ್ನು ನಿರ್ವಹಿಸಲು ಐಟಿಐ ತರಬೇತಿ ಪಡೆದ ತಂತ್ರಜ್ಞರು ಇಲ್ಲದಿದ್ದರೆ, ಒಬ್ಬ ರೋಗಿಯನ್ನು ಕೂಡ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಇದೇ ನಿಮ್ಮಲ್ಲಿರುವ ಶಕ್ತಿ. ನಿಮ್ಮ ಈ ಶಕ್ತಿಯನ್ನು ನಿಮಗೆ ಅರಿವು ಮಾಡಿಕೊಡಲು ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಸಾಮರ್ಥ್ಯವನ್ನು ಗೌರವಿಸಲು ನಾನು ಬಂದಿದ್ದೇನೆ. ಏಕೆಂದರೆ, ಭವಿಷ್ಯದಲ್ಲಿ ಐಟಿಐಗಳು ಒಂದು ಸುವರ್ಣ ಅಧ್ಯಾಯ ಬರೆಯಲಿವೆ ಎಂಬುದು ನನಗೆ ತಿಳಿದಿದೆ.

ಮತ್ತು ಸ್ನೇಹಿತರೆ,

ಇದೆಲ್ಲವನ್ನೂ ಕೇವಲ ಭಾರತದ ಅಗತ್ಯಗಳಿಗಾಗಿ ಮಾತ್ರವಲ್ಲದೆ, ಇಡೀ ವಿಶ್ವದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತಿದೆ. ಭಾರತವು ಒಂದಲ್ಲ ಒಂದು ದೇಶದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುವುದನ್ನು ಅಥವಾ ಮುಕ್ತ ವ್ಯಾಪಾರ ಒಪ್ಪಂದಗಳ ಬಗ್ಗೆ ಚರ್ಚಿಸುತ್ತಿರುವುದನ್ನು ನೀವು ಪ್ರತಿದಿನ ಕೇಳುತ್ತಲೇ ಇರುತ್ತೀರಿ. ಇವೆಲ್ಲವೂ ನಿಮ್ಮಂತಹ ಯುವ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ.

ಸ್ನೇಹಿತರೆ,

ಐಟಿಐ ಪಠ್ಯಕ್ರಮವನ್ನು ಪರಿವರ್ತಿಸುವುದು, ಯಂತ್ರೋಪಕರಣಗಳನ್ನು ಉನ್ನತೀಕರಿಸುವುದು, ತರಬೇತುದಾರರು ಹೊಸ ತಂತ್ರಜ್ಞಾನಗಳನ್ನು ಕಲಿಯುವುದನ್ನು ಖಚಿತಪಡಿಸಿಕೊಳ್ಳುವುದು ಹಾಗೂ ತರಬೇತಿ ಮತ್ತು ಉದ್ಯಮದ ನಡುವೆ ನೇರ ಸಂಪರ್ಕ ಕಲ್ಪಿಸುವುದು ನಮ್ಮ ಪ್ರಯತ್ನವಾಗಿದೆ. ಇದಕ್ಕಾಗಿಯೇ ‘ಪಿಎಂ ಸೇತು’ ಯೋಜನೆಯ ಮೂಲಕ 60,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಇದು ನಿಮ್ಮಂತಹ ಯುವ ಜನರಿಗೆಲ್ಲರಿಗೂ ಹೆಚ್ಚಿನ ಪ್ರಯೋಜನ ನೀಡಲಿದೆ.

ಸ್ನೇಹಿತರೆ,

ಭಾರತವು ವೇಗವಾಗಿ ಬೆಳೆಯುತ್ತಿರುವಂತೆ, ಕೌಶಲ್ಯಯುತ ಕಾರ್ಮಿಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಕಳೆದ 12-13 ವರ್ಷಗಳಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ನೀವು ಈಗಾಗಲೇ ಕೇಳಿರಬಹುದು. ಇದೊಂದು ಐತಿಹಾಸಿಕ ಸಾಧನೆಯಾಗಿದೆ. ನನ್ನ ದೃಷ್ಟಿಯಲ್ಲಿ, ಸ್ವಾತಂತ್ರ್ಯಾನಂತರ ಭಾರತದ ಅತ್ಯಂತ ದೊಡ್ಡ ಸಾಧನೆಗಳಲ್ಲಿ ಒಂದೆಂದರೆ, ಈ 50 ಕೋಟಿ ಜನರು ಬಡತನದಿಂದ ಹೊರಬಂದಿರುವುದು. ‘ವಿಕಸಿತ ಭಾರತ’ದ ಹಾದಿಯು ಈ ಸಾಧನೆಯ ಮೂಲಕವೇ ಸಾಗುತ್ತದೆ. ಸರ್ಕಾರವು ಸೌಲಭ್ಯಗಳನ್ನು ಒದಗಿಸಿತು, ಬಡವರನ್ನು ಸಬಲೀಕರಣಗೊಳಿಸಿತು, ಅವರು ಬಡತನದಿಂದ ಮೇಲೆ ಬರಬಲ್ಲರು ಎಂಬ ಆತ್ಮವಿಶ್ವಾಸವನ್ನು ಅವರಲ್ಲಿ ತುಂಬಿತು. ಈ ಬೃಹತ್ ಅಭಿಯಾನದಲ್ಲಿ, ಕೌಶಲ್ಯಯುತ ಕಾರ್ಮಿಕರಿಗೆ ಲಕ್ಷಾಂತರ ಅವಕಾಶಗಳು ಸೃಷ್ಟಿಯಾದವು. ಬಡ ಕುಟುಂಬಗಳಿಗಾಗಿ 4 ಕೋಟಿ ಮನೆಗಳನ್ನು ನಿರ್ಮಿಸಿದಾಗ, ಎಲೆಕ್ಟ್ರಿಷಿಯನ್‌ಗಳು ಮತ್ತು ಬಡಗಿಗಳಿಗೆ ಉದ್ಯೋಗ ಸಿಕ್ಕಿತು. ಪೈಪ್‌ಲೈನ್‌ಗಳನ್ನು ಅಳವಡಿಸಿದಾಗ ಮತ್ತು ಹಳ್ಳಿಗಳಿಗೆ ಮೊದಲ ಬಾರಿಗೆ ವಿದ್ಯುತ್ ತಲುಪಿದಾಗ, ನಿಮ್ಮಂತಹ ಯುವ ಜನರೇ ಆ ಉಪಕ್ರಮಗಳನ್ನು ಯಶಸ್ವಿಗೊಳಿಸಿದರು.

ಸ್ನೇಹಿತರೆ,

ಇಂದು ಅನೇಕ ಹೊಸ ವಲಯಗಳಲ್ಲಿ ವಿವಿಧ ಕೌಶಲ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನಾನೊಂದು ಉದಾಹರಣೆ ನೀಡುತ್ತೇನೆ. ಕೆಲವು ತಿಂಗಳ ಹಿಂದೆ, ಪಶ್ಚಿಮ ಏಷ್ಯಾದಲ್ಲಿ ಯುದ್ಧ ಪ್ರಾರಂಭವಾದಾಗ, ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಎಲ್‌ಪಿಜಿ ಲಭ್ಯತೆಯ ಬಗ್ಗೆ ಪ್ರಶ್ನೆಗಳು ಎದ್ದವು. ಅನಿಶ್ಚಯದ ಕಾರ್ಮೋಡಗಳು ಕವಿದವು. ಭಯವನ್ನು ಹರಡಲು ಇಷ್ಟಪಡುವವರು ಉತ್ಸುಕರಾದರು. ಅನಿಲವೇ ಸಿಗುವುದಿಲ್ಲ, ಒಲೆಗಳು ಉರಿಯುವುದಿಲ್ಲ, ಜನರು ಹಸಿವಿನಿಂದ ಬಳಲುತ್ತಾರೆ, ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲುಗಳು ನಿರ್ಮಾಣವಾಗುತ್ತವೆ ಎಂದು ಅವರು ಹೇಳತೊಡಗಿದರು. ಹಳೆಯ ಪತ್ರಿಕಾ ವರದಿಗಳನ್ನು ನೋಡಿದರೆ, ಆಗ ಏನೆಲ್ಲಾ ಭವಿಷ್ಯ ನುಡಿಯಲಾಗಿತ್ತು ಎಂಬುದು ನಿಮಗೆ ತಿಳಿಯುತ್ತದೆ. ಆದರೆ, ಅಂತಹದ್ದೇನೂ ಸಂಭವಿಸಲಿಲ್ಲ. ಅದೇ ಸಮಯದಲ್ಲಿ, ‘ಸ್ಟ್ರೈಟ್ ಆಫ್ ಹೋರ್ಮುಜ್’ ಬಿಕ್ಕಟ್ಟು ಉದ್ಭವಿಸಿದಾಗ, ನಾವು ಸುಮ್ಮನೆ ಕೈಕಟ್ಟಿ ಕೂರಲು ಸಾಧ್ಯವಿರಲಿಲ್ಲ. ನಾವು ಕ್ರಮ ಕೈಗೊಳ್ಳಲೇಬೇಕಿತ್ತು. ನಗರ ಪ್ರದೇಶಗಳಲ್ಲಿ ಪ್ರತಿದಿನ ಕನಿಷ್ಠ 1 ಲಕ್ಷ ಪಿಎನ್‌ಜಿ ಗ್ಯಾಸ್ ಸಂಪರ್ಕ ಒದಗಿಸಬೇಕೆಂದು ಸರ್ಕಾರ ನಿರ್ಧರಿಸಿತು. ಭವಿಷ್ಯದಲ್ಲಿ ಯಾವುದೇ ವ್ಯತ್ಯಯಗಳು ಎದುರಾದರೂ ಅದನ್ನು ಎದುರಿಸಲು, ಪೈಪ್‌ಲೈನ್‌ಗಳ ಮೂಲಕ ಮನೆಗಳಿಗೆ ಅನಿಲ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸಿದೆವು. ಪ್ರತಿದಿನ 1 ಲಕ್ಷ ಸಂಪರ್ಕಗಳನ್ನು ಒದಗಿಸುವುದು ನನ್ನ ಗುರಿಯಾಗಿದ್ದರಿಂದ, ನಾನೇ ಖುದ್ದಾಗಿ ಈ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಿದೆ. ಆದರೆ, ನಾನು ಪರಿಶೀಲನಾ ಸಭೆಗಳನ್ನು ನಡೆಸಿದಾಗಲೆಲ್ಲಾ, ಸಂಪರ್ಕಗಳ ಸಂಖ್ಯೆ ಕೇವಲ 15 ಸಾವಿರ, 20 ಸಾವಿರ, 22 ಸಾವಿರ ಅಥವಾ 23 ಸಾವಿರದಷ್ಟೇ ಇರುತ್ತಿತ್ತು. ನಮಗೆ ಒಂದು ಲಕ್ಷದ ಗುರಿ ತಲುಪಲು ಸಾಧ್ಯವಾಗಲಿಲ್ಲ. ಸರ್ಕಾರ ಹಣ ಖರ್ಚು ಮಾಡಲು ಸಿದ್ಧವಿತ್ತು. ಆಗ ನನಗೆ ಸಿಕ್ಕ ಉತ್ತರವೇನು ಗೊತ್ತೇ? ಅಧಿಕಾರಿಗಳು, “ನಾವು ಎಲ್ಲವನ್ನೂ ಮಾಡಿದೆವು, ಆದರೆ ನಮಗೆ ಸಾಕಷ್ಟು ಪ್ಲಂಬರ್‌ಗಳು ಸಿಗಲಿಲ್ಲ” ಎಂದು ಹೇಳಿದರು. ಪ್ಲಂಬರ್‌ಗಳ ಕೊರತೆಯಿತ್ತು. ನಿಮ್ಮ ಸಾಮರ್ಥ್ಯವನ್ನು ಒಮ್ಮೆ ಯೋಚಿಸಿ ನೋಡಿ. ದೇಶವು ಪ್ಲಂಬರ್‌ಗಳಿಗಾಗಿ ತೀವ್ರ ಹುಡುಕಾಡುತ್ತಿತ್ತು. ಇದರರ್ಥ, ನಿಮ್ಮಲ್ಲಿ ಕೌಶಲ್ಯವಿದ್ದರೆ, ನಿಮಗೆ ಉದ್ಯೋಗಾವಕಾಶಗಳು ಖಂಡಿತವಾಗಿಯೂ ಇರುತ್ತವೆ. ಇಂದು ನಮಗೆ ಸೌರಶಕ್ತಿ ವಲಯದಲ್ಲಿ ಅಪಾರ ಸಂಖ್ಯೆಯ ನುರಿತ ಕಾರ್ಮಿಕರ ಅಗತ್ಯವಿದೆ. ಭಾರತದಲ್ಲಿ ಸಂಪೂರ್ಣವಾಗಿ ಹೊಸದಾದ ‘ಕ್ರೀಡಾ ಆರ್ಥಿಕತೆ’ ರೂಪುಗೊಳ್ಳುತ್ತಿದೆ. ನಮಗೆ ಕ್ರೀಡಾ ಉಪಕರಣಗಳು ಮತ್ತು ಕ್ರೀಡೆ ಹಾಗೂ ಫಿಟ್‌ನೆಸ್‌ಗೆ ಸಂಬಂಧಿಸಿದ ಇತರೆ ಅನೇಕ ಉತ್ಪನ್ನಗಳನ್ನು ತಯಾರಿಸುವವರ ಅಗತ್ಯವಿದೆ. ಸರಳವಾಗಿ ಹೇಳುವುದಾದರೆ, ನಿಮಗಾಗಿ ಇರುವ ಅವಕಾಶಗಳು ಆಕಾಶದಷ್ಟು ವಿಶಾಲವಾಗಿವೆ. ನಮ್ಮ ಯುವ ಜನರು ಈ ಅವಕಾಶಗಳ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು.

ಸ್ನೇಹಿತರೆ,

ಇಂದು ಭಾರತವು ಜಗತ್ತಿನ ‘ಕೌಶಲ್ಯ ರಾಜಧಾನಿ’ ಆಗುವತ್ತ ಸಾಗುತ್ತಿದೆ,  ಈ ದೂರದೃಷ್ಟಿಯ ಕೇಂದ್ರಬಿಂದು ನೀವೆಲ್ಲರೂ ಆಗಿದ್ದೀರಿ. ನಾನು ಕೇವಲ ಭಾರತದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ, ನಾನು ಜಗತ್ತಿನ ಬಗ್ಗೆ ಮಾತನಾಡುತ್ತಿದ್ದೇನೆ. ನಿಮ್ಮ ಕಾರಣದಿಂದಲೇ ನಾನು ಈ ಮಾತನ್ನು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ. ಅಲ್ಲದೆ, ಎಲ್ಲಾ ಯುವಜನರಿಗೆ ಮತ್ತು ಉತ್ತರ ಪ್ರದೇಶಕ್ಕೆ ನನ್ನ ಬಳಿ ಒಂದು ಒಳ್ಳೆಯ ಸುದ್ದಿಯಿದೆ. ಮುಂದಿನ ವರ್ಷ, ಅಂದರೆ 2027ರಲ್ಲಿ, ಭಾರತವು ‘ವರ್ಲ್ಡ್ ಸ್ಕಿಲ್ಸ್ ಏಷ್ಯಾ’ ಸ್ಪರ್ಧೆ ಆಯೋಜಿಸಲಿದೆ. ಏಷ್ಯಾದ್ಯಂತದ ಯುವ ಜನರು ಇಲ್ಲಿಗೆ ಆಗಮಿಸಲಿದ್ದಾರೆ. ಈ ಕಾರ್ಯಕ್ರಮವು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿದೆ. ಅನೇಕ ದೇಶಗಳ ಯುವ ಜನರನ್ನು ಉತ್ತರ ಪ್ರದೇಶವು ಆತಿಥ್ಯ ನೀಡಿ ಸ್ವಾಗತಿಸಲಿದೆ. ಇದಕ್ಕಾಗಿ ನಾನು ಉತ್ತರ ಪ್ರದೇಶಕ್ಕೆ ಮುಂಚಿತವಾಗಿಯೇ ಶುಭ ಹಾರೈಸುತ್ತೇನೆ.

ಸ್ನೇಹಿತರೆ,

ಇಂದು ಉತ್ತರ ಪ್ರದೇಶವು ದೇಶದ ಅಭಿವೃದ್ಧಿಗೆ ಚಾಲನೆ ನೀಡುತ್ತಿದೆ. ಒಂದು ಕಾಲದಲ್ಲಿ ಇಲ್ಲಿನ ಯುವ ಜನರಿಗೆ ಅವಕಾಶಗಳು ಬಹಳ ಸೀಮಿತವಾಗಿದ್ದವು. ಯೋಗಿ ಜಿ, ಮೌರ್ಯ ಜಿ, ಬ್ರಜೇಶ್ ಜಿ, ಪಂಕಜ್ ಚೌಧರಿ ಜಿ ಮತ್ತು ಇತರರ ನೇತೃತ್ವದಲ್ಲಿ ಹಾಗೂ ‘ಡಬಲ್ ಇಂಜಿನ್’ ಸರ್ಕಾರದ ಮೂಲಕ, ಈ ಪರಿಸ್ಥಿತಿಯು ಸಂಪೂರ್ಣವಾಗಿ ಬದಲಾಗಿದೆ. ಇಂದು ಉತ್ತರ ಪ್ರದೇಶದ ಜನರು ಹೆಮ್ಮೆಯಿಂದ ಹೇಳುತ್ತಾರೆ – ‘ಯುಪಿ ಒಂದು ಎಕ್ಸ್‌ಪ್ರೆಸ್‌ವೇ ರಾಜ್ಯವಾಗಿದೆ’. ಉತ್ತರ ಪ್ರದೇಶದಲ್ಲಿ ಹಲವಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಇಲ್ಲಿ ಪ್ರಮುಖ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರವಾಸೋದ್ಯಮವು ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿ ಬೃಹತ್ ಮೊಬೈಲ್ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಉತ್ತರ ಪ್ರದೇಶದಲ್ಲಿ ಸೆಮಿಕಂಡಕ್ಟರ್ ಘಟಕವೊಂದನ್ನು ನಿರ್ಮಿಸಲಾಗುತ್ತಿದೆ. ಅಷ್ಟೇ ಅಲ್ಲ, ‘ಆಪರೇಷನ್ ಸಿಂದೂರ್’ ಮೂಲಕ ಅಪಾರ ಗಮನ ಸೆಳೆದಿರುವ ಮತ್ತು ನಮ್ಮ ಶತ್ರುಗಳ ನಿದ್ದೆಗೆಡಿಸಿರುವ ‘ಬ್ರಹ್ಮೋಸ್’ ಕ್ಷಿಪಣಿಯನ್ನು ಕೂಡ ಉತ್ತರ ಪ್ರದೇಶದಲ್ಲೇ ತಯಾರಿಸಲಾಗುತ್ತಿದೆ. ಈ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳು ನಿಮ್ಮಂತಹ ಯುವ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ.

ಸ್ನೇಹಿತರೆ,

ಉತ್ತರ ಪ್ರದೇಶವು ಹಿಂದೆ ಹೇಗಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಕೆಲವು ದಿನಗಳ ಹಿಂದೆ ನಾನು ನನ್ನ ಸಂಸದೀಯ ಕ್ಷೇತ್ರವಾದ ಕಾಶಿಯಲ್ಲಿದ್ದೆ. ಅಲ್ಲಿ ಒಂದು ಕಾರ್ಖಾನೆಯ ಉದ್ಘಾಟನೆ ಸಂದರ್ಭದಲ್ಲಿ, ಯುವತಿಯೊಬ್ಬಳು ನನಗೆ ಹೀಗೆ ಹೇಳಿದಳು: “ನಾನು ಈಗ ರಾತ್ರಿ 11 ಗಂಟೆಯವರೆಗೆ ಕೆಲಸ ಮಾಡುತ್ತೇನೆ, ಸುರಕ್ಷಿತವಾಗಿ ಒಬ್ಬಳೇ ಮನೆಗೆ ಮರಳುತ್ತೇನೆ.” ಇದೇನೂ ಸಾಮಾನ್ಯ ವಿಷಯವಲ್ಲ. ಸೂರ್ಯಾಸ್ತದ ನಂತರ ಮನೆಯ ಹೆಣ್ಣು ಮಗಳು ಹೊರಗಿದ್ದರೆ ಏನರ್ಥ ಎಂಬುದು ಉತ್ತರ ಪ್ರದೇಶದ ಜನರಿಗೆ ಚೆನ್ನಾಗಿ ತಿಳಿದಿದೆ. ರಾತ್ರಿ 11 ಗಂಟೆಗೆ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ, ತಾನು ಒಬ್ಬಳೇ ಮನೆಗೆ ಹೋಗುವುದಾಗಿ ಆಕೆ ನನಗೆ ತಿಳಿಸಿದಳು. ಯೋಗಿ ಜಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ಇಂತಹ ಸುರಕ್ಷಿತ ವಾತಾವರಣ ನಿರ್ಮಿಸಿದೆ. ಭದ್ರತೆಯ ಭಾವನೆ ಮತ್ತು ಸಮೃದ್ಧಿಯ ಮೇಲಿನ ವಿಶ್ವಾಸವೇ ‘ವಿಕಸಿತ ಭಾರತ’ವನ್ನು ನಿರ್ಮಿಸುತ್ತದೆ. ಆದ್ದರಿಂದ, ದೇಶದ ಪ್ರತಿಯೊಬ್ಬ ಯುವಕ ಯುವತಿಯರಿಗೂ ನಾನು ಹೇಳುತ್ತೇನೆ – ನಿಮ್ಮ ಮುಂದೆ ವಿಶಾಲವಾದ ಆಕಾಶವೇ ಇದೆ. ದೊಡ್ಡ ಕನಸುಗಳನ್ನು ಕಾಣಿ. ನಿಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ನಿಮ್ಮ ಕನಸುಗಳನ್ನು ನನಸಾಗಿಸಲು ನಿಮ್ಮ ಸಂಪೂರ್ಣ ಶಕ್ತಿ ವಿನಿಯೋಗಿಸಿ. ಎಂದಿಗೂ ನೀವು ಒಬ್ಬಂಟಿ ಎಂದು ಭಾವಿಸಬೇಡಿ. ನೀವು ಒಬ್ಬಂಟಿ ಎಂದು ನಿಮಗೆ ಅನ್ನಿಸಿದಾಗಲೆಲ್ಲಾ, ನಾನು ನಿಮ್ಮೊಂದಿಗೆ ಇದ್ದೇನೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಈ ಆತ್ಮವಿಶ್ವಾಸದೊಂದಿಗೆ, ಜೀವನದ ಹೊಸ ಹಂತಕ್ಕೆ ಹೆಜ್ಜೆ ಇಡುತ್ತಿರುವ ನೀವೆಲ್ಲರೂ ನಿಮ್ಮ ಪೋಷಕರ ಕನಸುಗಳನ್ನು ನನಸಾಗಿಸಿ. ನೀವು ಗಳಿಸಿದ್ದನ್ನು ಸಮಾಜವನ್ನು ಬಲಪಡಿಸಲು ಅರ್ಪಿಸಿ. ನೀವು ಪ್ರಗತಿ ಹೊಂದುತ್ತೀರಿ, ರಾಷ್ಟ್ರವು ಪ್ರಗತಿ ಹೊಂದುತ್ತದೆ, ನಿಮ್ಮ ಕುಟುಂಬಗಳು ಹೆಮ್ಮೆಯಿಂದ ಬೀಗುತ್ತವೆ. ಈ ಸ್ಫೂರ್ತಿಯೊಂದಿಗೆ, ಈ ವಿಶೇಷ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದೀಗ, ದೇಶಾದ್ಯಂತ ಇರುವ ಐಟಿಐ ಕೇಂದ್ರಗಳಲ್ಲಿ ಅನೇಕ ಯುವಕ ಯುವತಿಯರು ಸೇರಿರುವುದನ್ನು ನಾನು ದೂರದರ್ಶನದಲ್ಲಿ ನೋಡಿದೆ. ಅವರೆಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಶುಭ ಹಾರೈಸುತ್ತೇನೆ.

ನನ್ನೊಂದಿಗೆ ಹೇಳಿ:

ಭಾರತ ಮಾತಾ ಕೀ ಜೈ!

ಭಾರತ ಮಾತಾ ಕೀ ಜೈ!

ಭಾರತ ಮಾತಾ ಕೀ ಜೈ!

ಭಾರತ ಮಾತಾ ಕೀ ಜೈ!

ತುಂಬು ಧನ್ಯವಾದಗಳು!

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****