ಎಲ್ಲರಿಗೂ ನಮಸ್ಕಾರ!
ಕರ್ನಾಟಕದ ರಾಜ್ಯಪಾಲರಾದ ಸುಧಾ ಯಾದವ್ ಜಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿ, ನನ್ನ ಸಂಪುಟ ಸಹೋದ್ಯೋಗಿ ನಿರ್ಮಲಾ ಸೀತಾರಾಮನ್ ಜಿ, ರಾಜ್ಯ ಸರ್ಕಾರದ ಸಚಿವರಾದ ಬಸವರಾಜ ರಾಯರೆಡ್ಡಿ ಜಿ, ಸಂಸತ್ತಿನ ನನ್ನ ಸಹೋದ್ಯೋಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜಿ, ಇಲ್ಲಿ ಉಪಸ್ಥಿತರಿರುವ ಎಲ್ಲಾ ವಿಜ್ಞಾನಿಗಳೆ, ಸಂಶೋಧಕರೆ, ಶಿಕ್ಷಕರೆ, ಇತರ ಗಣ್ಯರೆ ಮತ್ತು ಮೈಸೂರಿನ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,
ಮೊದಲನೆಯದಾಗಿ, ತಾಯಿ ಚಾಮುಂಡೇಶ್ವರಿಗೆ ನಾನು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಮತ್ತೊಮ್ಮೆ ಮೈಸೂರಿಗೆ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಕೆಲವೇ ತಿಂಗಳ ಹಿಂದೆ ‘ವಿವೇಕ ಸ್ಮಾರಕ’ ಉದ್ಘಾಟನೆಗಾಗಿ ನಾನು ನಿಮ್ಮ ಬಳಿಗೆ ಬಂದಿದ್ದೆ. ಇಂದು ‘ಕಾಸ್ಮೋಸ್'(ಬ್ರಹ್ಮಾಂಡ) ತಾರಾಲಯ(ಗುಮ್ಮಟ ತಾರಾಲಯ)ವನ್ನು ರಾಷ್ಟ್ರಕ್ಕೆ ಸಮರ್ಪಿಸಲು ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಈ ಎರಡೂ ಸಂದರ್ಭಗಳು ಭಾರತದ ಮೌಲ್ಯಗಳು ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಆಳವಾದ ಸಂದೇಶ ಸಾರುತ್ತವೆ. ‘ವಿವೇಕ ಸ್ಮಾರಕ’ವು ನಮ್ಮೊಳಗಿನ ನಮ್ಮನ್ನು ನೋಡಿಕೊಳ್ಳಲು ಮತ್ತು ಆಧ್ಯಾತ್ಮಿಕ ಜ್ಞಾನ ಪಡೆಯಲು ನಮಗೆ ಸ್ಫೂರ್ತಿ ನೀಡುತ್ತದೆ. ಮತ್ತೊಂದೆಡೆ, ‘ಕಾಸ್ಮೋಸ್’ ತಾರಾಲಯದಲ್ಲಿ ನಮ್ಮ ದೃಷ್ಟಿ ಆಗಸದತ್ತ ಹರಿಯುತ್ತದೆ. ಇದು ವಿಶಾಲವಾದ ಬ್ರಹ್ಮಾಂಡವನ್ನು ಅನ್ವೇಷಿಸಲು ಮತ್ತು ಅದರ ರಹಸ್ಯಗಳನ್ನು ಅರ್ಥ ಮಾಡಿಕೊಳ್ಳಲು ನಮಗೆ ಪ್ರೇರಣೆ ನೀಡುತ್ತದೆ. ಭಾರತದಲ್ಲಿ ಆಧ್ಯಾತ್ಮಿಕತೆ ಮತ್ತು ವಿಜ್ಞಾನದ ಪರಂಪರೆಗಳು ಹೇಗೆ ಸದಾ ಜತೆ ಜತೆಯಾಗಿ ಸಾಗಿ ಬಂದಿವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.
ಸ್ನೇಹಿತರೆ,
ನಮ್ಮ ಪೂರ್ವಜರು ಆಗಸವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರು ನಕ್ಷತ್ರಗಳು ಮತ್ತು ಗ್ರಹಗಳ ಚಲನೆಯನ್ನು ಅರ್ಥ ಮಾಡಿಕೊಂಡಿದ್ದರು, ಪಂಚಾಂಗಗಳನ್ನು ಸಿದ್ಧಪಡಿಸಿದ್ದರು. ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳ ಸಮಯವನ್ನು ನಿಖರವಾಗಿ ಲೆಕ್ಕಾಚಾರ ಮಾಡಿದ್ದರು. ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಮತ್ತು ನೀಲಕಂಠ ಸೋಮಯಾಜಿ ಅವರಂತಹ ಅನೇಕ ಶ್ರೇಷ್ಠ ಖಗೋಳಶಾಸ್ತ್ರಜ್ಞರು ಭಾರತದಲ್ಲಿದ್ದರು. ಇಂದು ಲಭ್ಯವಿರುವ ಅತ್ಯಾಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನಗಳು ಆ ಕಾಲದಲ್ಲಿ ಇರಲಿಲ್ಲ. ಆದರೂ ಅವರು ಮಹತ್ತರವಾದ ಆವಿಷ್ಕಾರಗಳನ್ನು ಕಂಡುಹಿಡಿದರು, ಅತ್ಯಂತ ಕಠಿಣವಾದ ಲೆಕ್ಕಾಚಾರಗಳನ್ನು ಸಹ ಯಶಸ್ವಿಯಾಗಿ ನಡೆಸಿದರು.
ಸ್ನೇಹಿತರೆ,
ಜ್ಞಾನಾರ್ಜನೆಯನ್ನು ಪ್ರೋತ್ಸಾಹಿಸುವ ಸಂಸ್ಥೆಗಳನ್ನು ಸ್ಥಾಪಿಸುವ ಪರಂಪರೆ ಮೈಸೂರಿಗಿದೆ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು. ಬೆಂಗಳೂರಿನಲ್ಲಿರುವ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್’ಗೆ ಅಡಿಪಾಯ ಹಾಕುವಲ್ಲಿಯೂ ಒಡೆಯರ್ ಕುಟುಂಬವು ಪ್ರಮುಖ ಪಾತ್ರ ವಹಿಸಿತ್ತು. ಈ ಸಂಸ್ಥೆಗಳು ಅನೇಕ ತಲೆಮಾರುಗಳ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಮುನ್ನಡೆಯಲು ಅವಕಾಶಗಳನ್ನು ಒದಗಿಸಿವೆ. ಇಂದು ಭಾರತವು ವಿಜ್ಞಾನ ಕ್ಷೇತ್ರದಲ್ಲಿ ಒಂದರ ನಂತರ ಒಂದರಂತೆ ಮೈಲಿಗಲ್ಲುಗಳನ್ನು ಸಾಧಿಸುತ್ತಿರುವಾಗ, ಮೈಸೂರು ಕೂಡ ಈ ಅತ್ಯಾಧುನಿಕ ‘ಕಾಸ್ಮೋಸ್ ಪ್ಲಾನೆಟೇರಿಯಂ'(ಗುಮ್ಮಟ ತಾರಾಲಯ) ಮೂಲಕ ಭಾರತದ ವೈಜ್ಞಾನಿಕ ಪಯಣದಲ್ಲಿ ಹೊಸ ಅಧ್ಯಾಯವೊಂದನ್ನು ಸೇರಿಸುತ್ತಿದೆ. ಇಂದು ಈ ಅತ್ಯಾಧುನಿಕ ‘ಕಾಸ್ಮೋಸ್ ಪ್ಲಾನೆಟೇರಿಯಂ’ ಅನ್ನು ದೇಶದ ಯುವಜನರಿಗೆ ಮತ್ತು ನಾಗರಿಕರಿಗೆ ಸಮರ್ಪಿಸಲಾಗುತ್ತಿದೆ. ಇದು ಭಾರತದ ಮೊದಲ ‘ಎಲ್ಇಡಿ ಡೋಮ್ ಪ್ಲಾನೆಟೇರಿಯಂ’ ಆಗಿದೆ. ನಾನೀಗಷ್ಟೇ ಇಲ್ಲಿ ಒಂದು ಪ್ರದರ್ಶನ ವೀಕ್ಷಿಸಿದೆ, ಇದೊಂದು ಅದ್ಭುತ ಅನುಭವವಾಗಿತ್ತು. ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್’, ಮೈಸೂರು ವಿಶ್ವವಿದ್ಯಾನಿಲಯ, ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಇದರ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ಇಡೀ ರಾಷ್ಟ್ರಕ್ಕೂ ನನ್ನ ಅಭಿನಂದನೆಗಳು.
ಸ್ನೇಹಿತರೆ,
ನಮ್ಮ ದೇಶದಲ್ಲಿ ಬಹಳ ಹಿಂದಿನಿಂದಲೂ ಒಂದು ಘೋಷಣೆಯಿದೆ – ‘ಜೈ ಜವಾನ್, ಜೈ ಕಿಸಾನ್’. ನಿರ್ಮಲಾ ಜಿ ಅವರು ತಮ್ಮ ಭಾಷಣದಲ್ಲಿ ಇದನ್ನೇ ಪ್ರಸ್ತಾಪಿಸಿದರು. ಅಟಲ್ ಜಿ ಅವರು ಇದಕ್ಕೆ ‘ಜೈ ವಿಜ್ಞಾನ್’ ಎಂದು ಸೇರಿಸಿದರು, ನಂತರ ನಾನು ‘ಜೈ ಅನುಸಂಧಾನ’ ಎಂಬುದನ್ನು ಸೇರಿಸಿದೆ. 21ನೇ ಶತಮಾನದ ಭಾರತವು ಇದೇ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಯುವ ಜನರು ಅತ್ಯುತ್ತಮ ಸಾಧನೆಗಳನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಮುಂಬೈನಲ್ಲಿ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದ ಅಂತಾರಾಷ್ಟ್ರೀಯ ಒಲಿಂಪಿಯಾಡ್ ಅನ್ನು ಭಾರತ ಆಯೋಜಿಸಿತ್ತು. ಇದರಲ್ಲಿ ನಮ್ಮ ಯುವಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಈ ವರ್ಷ, ಅದೇ ಒಲಿಂಪಿಯಾಡ್ನ ಮುಂದಿನ ಆವೃತ್ತಿಗಾಗಿ ಭಾರತದಿಂದ ಐವರು ವಿದ್ಯಾರ್ಥಿಗಳು ವಿಯೆಟ್ನಾಂಗೆ ತೆರಳಿದ್ದರು. ಅವರಲ್ಲಿ ನಾಲ್ವರು ಚಿನ್ನದ ಪದಕಗಳನ್ನು ಮತ್ತು ಒಬ್ಬರು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಇದು ಇಡೀ ದೇಶಕ್ಕೇ ಹೆಮ್ಮೆಯ ವಿಷಯವಾಗಿದೆ.
ಸ್ನೇಹಿತರೆ,
ನಮ್ಮ ಯುವ ವಿದ್ಯಾರ್ಥಿಗಳು ವಿಜ್ಞಾನದ ಇತರೆ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದ್ದಾರೆ. ಈ ವರ್ಷ ಅಂತಾರಾಷ್ಟ್ರೀಯ ಒಲಿಂಪಿಯಾಡ್ಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ದೊಡ್ಡ ಯಶಸ್ಸು ಸಾಧಿಸಿದ್ದಾರೆ. ಇದರಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದಂತಹ ವಿಷಯಗಳು ಸೇರಿವೆ. ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳು ಚಿನ್ನ ಅಥವಾ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಇದು ಭಾರತಕ್ಕೆ ಒಂದು ದಾಖಲೆಯ ಸಾಧನೆಯಾಗಿದೆ. ಇದರರ್ಥ, ನಮ್ಮ ಯುವ ಜನರಿಗೆ ಅವಕಾಶಗಳು ಸಿಕ್ಕಾಗ, ಕಲಿಯಲು ಅಗತ್ಯ ಸಂಪನ್ಮೂಲಗಳು ದೊರೆತಾಗ ಮತ್ತು ತಂತ್ರಜ್ಞಾನ, ಉಪಕರಣಗಳು ಹಾಗೂ ಸಂಸ್ಥೆಗಳ ಬೆಂಬಲ ಸಿಕ್ಕಾಗ, ಅವರು ದೊಡ್ಡ ಸಾಧನೆಗಳನ್ನು ಮಾಡುವ ಸಾಮರ್ಥ್ಯ ಪ್ರದರ್ಶಿಸುತ್ತಾರೆ. ಈ ‘ಕಾಸ್ಮೋಸ್ ಪ್ಲಾನೆಟೇರಿಯಂ'(ಬ್ರಹ್ಮಾಂಡ ವೀಕ್ಷಣಾಲಯ) ಕೂಡ ಅವರ ಕನಸುಗಳಿಗೆ ರೂಪ ನೀಡಲು ಬಹಳಷ್ಟು ಸಹಾಯ ಮಾಡಲಿದೆ.
ಸ್ನೇಹಿತರೆ,
ಇಂದು ತಂತ್ರಜ್ಞಾನವು ಜಗತ್ತನ್ನು ಅತ್ಯಂತ ವೇಗವಾಗಿ ಬದಲಾಯಿಸುತ್ತಿದೆ. ಈ ಕ್ಷೇತ್ರದಲ್ಲಿ ನಿಧಾನ ಗತಿಯಲ್ಲಿ ಸಾಗುವ ಅಪಾಯವನ್ನು ಯಾವುದೇ ದೇಶವೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಳೆದ ದಶಕದಲ್ಲಿ, ಭಾರತವು ಖಗೋಳಶಾಸ್ತ್ರ, ಖಗೋಳ ಭೌತಶಾಸ್ತ್ರ ಮತ್ತು ಬಾಹ್ಯಾಕಾಶ ವಲಯದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ನಾವು ದೇಶದಲ್ಲಿ ಹೊಸ ದೂರದರ್ಶಕಗಳನ್ನು ಅಳವಡಿಸಿದ್ದೇವೆ. ಬಾಹ್ಯಾಕಾಶ ಪರಿಶೋಧನೆಯ ಹಲವು ಸವಾಲಿನ ಕ್ಷೇತ್ರಗಳಲ್ಲಿ ಇಂದು ಭಾರತವು ವಿಶ್ವದ ಕೆಲವೇ ಕೆಲವು ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ. ಚಂದ್ರಯಾನ-3ರ ಮೂಲಕ, ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಯನ್ನು ಭಾರತವು ಇಸ್ರೋ ಮೂಲಕ ಪಡೆದುಕೊಂಡಿದೆ. ‘ಆದಿತ್ಯ-ಎಲ್1’ ಮೂಲಕ ಭಾರತವು ಬಾಹ್ಯಾಕಾಶದಲ್ಲಿ ತನ್ನ ಮೊದಲ ಸೌರ ವೀಕ್ಷಣಾಲಯ ಹೊಂದಿದೆ. ಕಳೆದ ವರ್ಷವಷ್ಟೇ ಬಾಹ್ಯಾಕಾಶದಲ್ಲಿ ‘ಡಾಕಿಂಗ್’ (ಒಂದು ನೌಕೆಯನ್ನು ಇನ್ನೊಂದಕ್ಕೆ ಜೋಡಿಸುವುದು) ಮತ್ತು ‘ಅನ್ಡಾಕಿಂಗ್'(ಬೇರ್ಪಡಿಸುವುದು) ಸಾಮರ್ಥ್ಯ ಪ್ರದರ್ಶಿಸಿದ ವಿಶ್ವದ 4ನೇ ದೇಶವಾಗಿ ಭಾರತ ಹೊರಹೊಮ್ಮಿದೆ.
ಸ್ನೇಹಿತರೆ,
ಇದೇ ಅವಧಿಯಲ್ಲಿ, ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿ, ಅಲ್ಲಿ ಹಲವು ಹೊಸ ಪ್ರಯೋಗಗಳನ್ನು ನಡೆಸಿದರು. ಈ ಕಾರ್ಯಾಚರಣೆಯಿಂದ ಪಡೆದ ಅನುಭವವು, ನಮ್ಮದೇ ಆದ ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆ ‘ಗಗನಯಾನ’ಕ್ಕೂ ಉಪಯುಕ್ತವಾಗುತ್ತಿದೆ.
ಸ್ನೇಹಿತರೆ,
ನಮ್ಮ ಸರ್ಕಾರವು ಬಾಹ್ಯಾಕಾಶ ವಲಯವನ್ನು ಮುಕ್ತಗೊಳಿಸಿದೆ. ಇದು ಖಾಸಗಿ ವಲಯಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಭಾರತದ ಸ್ಟಾರ್ಟಪ್ಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಪಡೆದುಕೊಂಡವು. ಇಂದು ನಮ್ಮ ಯುವಜನರು ಸ್ವಂತ ರಾಕೆಟ್ಗಳನ್ನು ಉಡಾವಣೆ ಮಾಡುತ್ತಿದ್ದಾರೆ, ಉಪಗ್ರಹಗಳನ್ನು ಕಕ್ಷೆಗೆ ಸೇರಿಸುತ್ತಿದ್ದಾರೆ, ಬಾಹ್ಯಾಕಾಶ ವಲಯದಲ್ಲಿ ಹಿಂದೆಂದೂ ಭಾರತದಲ್ಲಿ ನಡೆಯದಿದ್ದ ಅನೇಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಇದು ‘ನವ ಭಾರತ’ದ ವೈಜ್ಞಾನಿಕ ದೃಷ್ಟಿಕೋನವಾಗಿದೆ. ಇಲ್ಲಿ ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸಲಾಗುತ್ತಿದೆ, ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ನಮ್ಮ ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.
ಸ್ನೇಹಿತರೆ,
ಭಾರತವು ಯಾವಾಗಲೂ ‘ಮಾನವೀಯತೆಗೆ ಮೊದಲ ಆದ್ಯತೆ’ ಎಂಬ ಮಂತ್ರದೊಂದಿಗೆ ಮುನ್ನಡೆದಿದೆ. ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳು ಮನುಕುಲದ ಕಲ್ಯಾಣಕ್ಕಾಗಿ ಮೀಸಲಾಗಿವೆ. ಉದಾಹರಣೆಗೆ, ಇಸ್ರೋ ನಮ್ಮ ಮೀನುಗಾರ ಸಹೋದರರಿಗಾಗಿ ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆ ಅಭಿವೃದ್ಧಿಪಡಿಸಿದೆ.
ಈ ವ್ಯವಸ್ಥೆಯ ಸಹಾಯದಿಂದ ರಿಸೀವರ್ಗಳನ್ನು ಅಳವಡಿಸಲಾದ ದೋಣಿಗಳು ಸಮುದ್ರದಲ್ಲಿರುವಾಗ, ಚಂಡಮಾರುತದಂತಹ ಪ್ರತಿಕೂಲ ಸಂದರ್ಭಗಳಲ್ಲಿ ಅಧಿಕಾರಿಗಳು ಅವರಿಗೆ ಸಮಯೋಚಿತ ಎಚ್ಚರಿಕೆಗಳನ್ನು ಕಳುಹಿಸಬಹುದು. ಅಲ್ಲದೆ, ಅವರು ಸುರಕ್ಷಿತವಾಗಿ ದಡಕ್ಕೆ ಮರಳುವುದನ್ನು ಸಹ ಗಮನಿಸಬಹುದು.
ಸ್ನೇಹಿತರೆ,
ನಿಮ್ಮಲ್ಲಿ ಅನೇಕರು ರೈಲುಗಳ ‘ಲೈವ್ ಲೊಕೇಶನ್’ ಪರಿಶೀಲಿಸುತ್ತಿರಬಹುದು. ರೈಲು ಎಲ್ಲಿಗೆ ತಲುಪಿದೆ, ನಿಲ್ದಾಣಕ್ಕೆ ಯಾವಾಗ ಬರಲಿದೆ ಎಂಬುದನ್ನು ಇದು ತಿಳಿಸುತ್ತದೆ. ಈ ಮಾಹಿತಿಯನ್ನು ಭಾರತೀಯ ರೈಲ್ವೆ ಮತ್ತು ಇಸ್ರೋ ಅಭಿವೃದ್ಧಿಪಡಿಸಿದ ‘ರಿಯಲ್-ಟೈಮ್ ಟ್ರೈನ್ ಟ್ರ್ಯಾಕಿಂಗ್ ಸಿಸ್ಟಮ್’ ಒದಗಿಸುತ್ತದೆ. ಅದೇ ರೀತಿ, ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ಯಲ್ಲೂ ಉಪಗ್ರಹ ದತ್ತಾಂಶವನ್ನು ಬಳಸಲಾಗುತ್ತದೆ. ಇದರ ಅಡಿ, ಕೃಷಿ ಕ್ಷೇತ್ರಗಳಿಂದ ಸಂಗ್ರಹಿಸಿದ ಮಾಹಿತಿಯೊಂದಿಗೆ ಉಪಗ್ರಹ ದತ್ತಾಂಶ ಸೇರಿಸಿ, ಬೆಳೆ ಇಳುವರಿಯನ್ನು ಅಂದಾಜಿಸಲಾಗುತ್ತದೆ. ಈ ಅಂದಾಜುಗಳ ಆಧಾರದ ಮೇಲೆ ರೈತರ ವಿಮಾ ಕ್ಲೈಮ್ಗಳನ್ನು ನಿರ್ಧರಿಸಲಾಗುತ್ತದೆ. ಇದರರ್ಥ, ಇಂದು ನಮ್ಮ ಉಪಗ್ರಹಗಳು ಬಾಹ್ಯಾಕಾಶದ ಎತ್ತರವನ್ನು ತಲುಪುತ್ತಿರುವ ಜತೆಗೆ, ಭೂಮಿಯ ಮೇಲಿನ ಜನರ ಜೀವನವನ್ನು ಸುಧಾರಿಸಲೂ ಬಳಕೆಯಾಗುತ್ತಿವೆ.
ಸ್ನೇಹಿತರೆ,
‘ಸಮಾಜಕ್ಕಾಗಿ ವಿಜ್ಞಾನ’ – ಇದೇ ನಮ್ಮ ದೃಷ್ಟಿಕೋನ. ನಾವು ದೇಶದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ನಿರಂತರವಾಗಿ ಉತ್ತೇಜಿಸುತ್ತಿದ್ದೇವೆ. ದೇಶಾದ್ಯಂತ ಇರುವ 10,000ಕ್ಕೂ ಹೆಚ್ಚು ‘ಅಟಲ್ ಟಿಂಕರಿಂಗ್ ಲ್ಯಾಬ್’ಗಳಿಂದ ಇದುವರೆಗೆ 1 ಕೋಟಿಗೂ ಹೆಚ್ಚಿನ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಈ ಪ್ರಯೋಗಾಲಯಗಳು ಮಕ್ಕಳಿಗೆ ತಮ್ಮ ಆಲೋಚನೆಗಳ ಮೇಲೆ ಕೆಲಸ ಮಾಡಲು, ಹೊಸ ಪ್ರಯೋಗಗಳನ್ನು ನಡೆಸಲು ಮತ್ತು ಹೊಸ ಆವಿಷ್ಕಾರಗಳನ್ನು ಮಾಡಲು ಅವಕಾಶಗಳನ್ನು ಒದಗಿಸುತ್ತವೆ.
ಸ್ನೇಹಿತರೆ,
ಸಂಶೋಧನೆ ಮುನ್ನಡೆಸಲು ನಮ್ಮ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ವಿಶ್ವದ ಅತ್ಯುತ್ತಮ ಸಂಶೋಧನಾ ಸಂಪನ್ಮೂಲಗಳು ಲಭ್ಯವಿರುವುದು ಅತ್ಯಗತ್ಯ. ಈ ಉದ್ದೇಶದಿಂದ, ನಾವು ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ’ ಯೋಜನೆ ಪ್ರಾರಂಭಿಸಿದ್ದೇವೆ. ಇದು ದೇಶದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಗೆ ವಿಶ್ವಾದ್ಯಂತದ ಪ್ರಮುಖ ವೈಜ್ಞಾನಿಕ ನಿಯತಕಾಲಿಕೆಗಳು ತಲುಪಲು ಬಹಳಷ್ಟು ಸಹಾಯ ಮಾಡುತ್ತಿದೆ. ನಾವು ‘ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ’ ಸ್ಥಾಪಿಸಿದ್ದೇವೆ. ಇದರ ಮೂಲಕ, ಹೆಚ್ಚಿನ ಸಂಖ್ಯೆಯ ವಿಶ್ವವಿದ್ಯಾಲಯಗಳು ಹೊಸ ಸಂಶೋಧನೆಗಳನ್ನು ಕೈಗೊಳ್ಳಲು ನಾವು ನೆರವಾಗುತ್ತಿದ್ದೇವೆ.
ಸ್ನೇಹಿತರೆ,
ಕಳೆದ ವರ್ಷ ನಮ್ಮ ದೇಶದ ಸಂಶೋಧಕರಿಗೆ ಸಾಕಷ್ಟು ಆರ್ಥಿಕ ನೆರವು ನಿರಂತರವಾಗಿ ಸಿಗುವಂತೆ ಮಾಡಲು ನಾವು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ‘ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆ’ ಆರಂಭಿಸಿದ್ದೇವೆ. ಇದು ಹೊಸ ತಂತ್ರಜ್ಞಾನಗಳನ್ನು ಪ್ರಯೋಗಾಲಯಗಳಿಂದ ಹೊರತಂದು, ಅವುಗಳನ್ನು ಪ್ರಾಯೋಗಿಕ ಬಳಕೆಗೆ ತರಲು ಸಹಾಯ ಮಾಡುತ್ತಿದೆ.
ಸ್ನೇಹಿತರೆ,
ಇಂದು ದೇಶದಲ್ಲಿ ವಿಜ್ಞಾನ ಮತ್ತು ಸಂಶೋಧನೆಗಾಗಿ ಬಲವಾದ ಪರಿಸರ ವ್ಯವಸ್ಥೆ ರೂಪುಗೊಳ್ಳುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಯುವ ಜನರಲ್ಲಿ ಕುತೂಹಲವಿರುವುದು ಬಹಳ ಮುಖ್ಯ. ಈ ಕುತೂಹಲವನ್ನು ಪೋಷಿಸುವಲ್ಲಿ ತಾರಾಲಯಗಳು ಮತ್ತು ವಿಜ್ಞಾನ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ‘ಕಾಸ್ಮೋಸ್’ನೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ನಾನು ಕೋರುತ್ತೇನೆ. ಇದರಿಂದ ಶಾಲೆ ಮತ್ತು ಕಾಲೇಜುಗಳು ತಮ್ಮ ಹೆಚ್ಚಿನ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆತರುವ ವ್ಯವಸ್ಥೆ ಮಾಡಬಹುದು. ಬ್ರಹ್ಮಾಂಡದ ಬಗ್ಗೆ ಕಲಿಯಲು ಇಲ್ಲಿಗೆ ಬರುವ ಮಕ್ಕಳು, ಮುಂದೊಂದು ದಿನ ಮತ್ತೆ ಇಲ್ಲಿಗೆ ಬಂದು, ತಾವು ಬ್ರಹ್ಮಾಂಡದ ಬಗ್ಗೆ ಕಂಡುಕೊಂಡ ಹೊಸ ವಿಷಯಗಳ ಕುರಿತು ನಮಗೆ ವಿವರಿಸಬಹುದು. ಅದೇ ಈ ‘ಕಾಸ್ಮೋಸ್ ತಾರಾಲಯ’ದ ಅತ್ಯಂತ ದೊಡ್ಡ ಸಾಧನೆಯಾಗುತ್ತದೆ. ಈ ವಿಶ್ವಾಸದೊಂದಿಗೆ, ನಿಮ್ಮ ಮುಂದಿನ ಪಯಣಕ್ಕೆ ನಾನು ಶುಭ ಹಾರೈಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
The new COSMOS Planetarium in Mysuru brings the wonders of the universe closer to young minds. https://t.co/AhdAkpkSGF
— Narendra Modi (@narendramodi) November 13, 2026
भारत में आर्यभट्ट, वराहमिहिर, भास्कराचार्य और नीलकंठ सोमयाजी जैसे अनेक महान astronomers हुए। आज जैसे advanced instruments और technology उस समय नहीं थे। इसके बावजूद उन्होंने बड़ी-बड़ी खोजें कीं, मुश्किल calculations किए: PM @narendramodi
— PMO India (@PMOIndia) November 13, 2026
आज जब भारत science के क्षेत्र में एक के बाद एक नई उपलब्धियां हासिल कर रहा है, तब इस अत्याधुनिक COSMOS Planetarium के रूप में मैसूरु भी भारत की scientific journey में एक नया chapter जोड़ रहा है: PM @narendramodi
— PMO India (@PMOIndia) November 13, 2026
हमारी सरकार ने space sector को open किया। इससे private sector के लिए नई संभावनाएं बनी हैं। भारत के startups को भी अपनी क्षमता दिखाने का अवसर मिला है: PM @narendramodi
— PMO India (@PMOIndia) November 13, 2026