Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ


ಬೆಂಗಳೂರಿನ ನನ್ನ ಸಹೋದರ ಸಹೋದರಿಯರೆ, ನಿಮ್ಮೆಲ್ಲರಿಗೂ ನಮಸ್ಕಾರ! ಕರ್ನಾಟಕದ ರಾಜ್ಯಪಾಲರಾದ ಡಾ. ಸುಧಾ ಯಾದವ್ ಜಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿ, ರಾಜ್ಯ ಸರ್ಕಾರದ ಸಚಿವರಾದ ಕೃಷ್ಣ ಬೈರೇಗೌಡ ಜಿ, ಲೋಕಸಭೆಯ ನನ್ನ ಸಹೋದ್ಯೋಗಿ,  ಅದ್ಭುತ ಯುವ ನಾಯಕ ತೇಜಸ್ವಿ ಸೂರ್ಯ ಅವರನ್ನು ಬೆಂಗಳೂರಿನಿಂದ ಆಯ್ಕೆ ಮಾಡಿ ಕಳುಹಿಸಿರುವ ಸ್ಥಳೀಯ ಮತದಾರ ಪ್ರಭುಗಳೆ, ಇಲ್ಲಿ ಉಪಸ್ಥಿತರಿರುವ ಇತರೆ ಎಲ್ಲಾ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ,

ನಮ್ಮ ರಾಜ್ಯಪಾಲರಾದ ಸುಧಾ ಯಾದವ್ ಅವರೊಂದಿಗೆ ಒಂದೇ ವೇದಿಕೆ ಹಂಚಿಕೊಳ್ಳುವ ಅವಕಾಶ ನನಗೆ ಇದೇ ಮೊದಲ ಬಾರಿಗೆ ಸಿಕ್ಕಿದೆ. ಬಹುಶಃ ಕರ್ನಾಟಕದ ಜನರಿಗೆ ಅವರ ಬಗ್ಗೆ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲದಿರಬಹುದು. ಆದರೆ, ಅವರ ಜೀವನ ಪಯಣ ಕುರಿತು ನಾನು ಖಂಡಿತವಾಗಿಯೂ ಮಾತನಾಡಲು ಬಯಸುತ್ತೇನೆ. ರಾಷ್ಟ್ರ ಸೇವೆ ಎಂದರೇನು? ರಾಷ್ಟ್ರಕ್ಕೆ ಸಮರ್ಪಣಾ ಭಾವ ಎಂದರೇನು? ಇದನ್ನು ನಾವು ಸುಧಾ ಜಿ ಮತ್ತು ಅವರ ಕುಟುಂಬದ ಜೀವನ ಅನುಭವದಿಂದ ಕಲಿಯಬಹುದು. ಕಾರ್ಗಿಲ್ ಯುದ್ಧ ನಡೆಯುತ್ತಿದ್ದಾಗ, ಅವರ ಪತಿ ಯುದ್ಧದಲ್ಲಿ ಹುತಾತ್ಮರಾದರು. ಆ ಘಟನೆಯ ನಂತರವೂ, ತಮ್ಮ ಪತಿಯ ಸ್ಮರಣಾರ್ಥವಾಗಿ ‘ಭಾರತ ಮಾತೆ‘ಗೆ ಸೇವೆ ಸಲ್ಲಿಸುವ ತಮ್ಮ ಸಂಕಲ್ಪವನ್ನು ಅವರು ಮುಂದುವರಿಸಿದರು, ಇಂದಿಗೂ ಅವರು ಸೇವಾ ಮನೋಭಾವದಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸತ್ತಿನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ, ಅವರು ಅನೇಕ ಪ್ರಮುಖ ವಿಷಯಗಳಲ್ಲಿ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದರು. ಇಂದು ಕರ್ನಾಟಕ ನೆಲದಲ್ಲಿ ಅವರು ಇಲ್ಲಿನ ಜನರ ಸಂತೋಷ, ಶಾಂತಿ ಮತ್ತು ಸಮೃದ್ಧಿಗಾಗಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ನಾನು ಸುಧಾ ಜಿ ಅವರಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ.

ಮೊದಲನೆಯದಾಗಿ, ಬೆಂಗಳೂರಿನ ಅಧಿದೇವತೆ ಅಣ್ಣಮ್ಮ ದೇವಿ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ನಾನು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಈ ದಿನವು ಬೆಂಗಳೂರು ಮತ್ತು ಕರ್ನಾಟಕದ ಅಭಿವೃದ್ಧಿ ಪಯಣಕ್ಕೆ ಹೊಸ ಚಾಲನೆ ನೀಡಲಿದೆ. ಸಂಪರ್ಕ ವ್ಯವಸ್ಥೆ ಮತ್ತು ಇಂಧನ ಭದ್ರತೆಗೆ ಸಂಬಂಧಿಸಿದ 15,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಇಂದು ಇಲ್ಲಿ ಚಾಲನೆ ನೀಡಲಾಗುತ್ತಿದೆ. ಮೆಟ್ರೊ ಮತ್ತು ರೈಲ್ವೆಗೆ ಸಂಬಂಧಿಸಿದ ಯೋಜನೆಗಳಿಂದ ಹಿಡಿದು ಇಂಧನ ಭದ್ರತೆಯ ಉಪಕ್ರಮಗಳವರೆಗೆ, ಈ ಎಲ್ಲಾ ಯೋಜನೆಗಳು ಕರ್ನಾಟಕದ ಮೂಲಸೌಕರ್ಯಕ್ಕೆ ಹೊಸ ಬಲವನ್ನು ನೀಡಲಿವೆ.

ಸ್ನೇಹಿತರೆ,

ಯಾವುದೇ ದೇಶದ ಅಭಿವೃದ್ಧಿ ಪಯಣದಲ್ಲಿ ಮೂಲಸೌಕರ್ಯವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಸಂಪರ್ಕ ವ್ಯವಸ್ಥೆಯು ಪ್ರಗತಿ, ಉದ್ಯೋಗ ಮತ್ತು ಕೈಗಾರಿಕೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಅಭಿವೃದ್ಧಿಯ ಈ ಅವಕಾಶಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿದಾಗ, ಬಡತನದ ವಿರುದ್ಧದ ಹೋರಾಟವೂ ಇನ್ನಷ್ಟು ಬಲಗೊಳ್ಳುತ್ತದೆ. ಇದರ ಪರಿಣಾಮವಾಗಿ, ಇತ್ತೀಚಿನ ವರ್ಷಗಳಲ್ಲಿ ದೇಶದ ಸುಮಾರು 50 ಕೋಟಿ ನಾಗರಿಕರು ತೀವ್ರ ಬಡತನದಿಂದ ಹೊರಬಂದಿದ್ದಾರೆ. ಇಂದು ಆರಂಭಿಸಲಾಗುತ್ತಿರುವ ಯೋಜನೆಗಳು ಈ ಅಭಿವೃದ್ಧಿ ಪಯಣವನ್ನು ಮತ್ತಷ್ಟು ಮುನ್ನಡೆಸಲಿವೆ. ಇವು ‘ವಿಕಸಿತ ಕರ್ನಾಟಕ‘ ನಿರ್ಮಾಣಕ್ಕೆ ಹೊಸ ವೇಗ ನೀಡಲಿದ್ದು, ‘ವಿಕಸಿತ ಕರ್ನಾಟಕ‘ದ ಮೂಲಕ ‘ವಿಕಸಿತ ಭಾರತ‘ ನಿರ್ಮಾಣಕ್ಕೂ ಸಹಕಾರಿಯಾಗಲಿವೆ. ಇವು ‘ಟೆಕ್ ಸಿಟಿ‘(ತಂತ್ರಜ್ಞಾನ ನಗರಿ)ಯಾಗಿ ಬೆಂಗಳೂರಿಗಿರುವ ಗುರುತನ್ನು ಇನ್ನಷ್ಟು ಬಲಪಡಿಸಲಿವೆ. ಈ ಎಲ್ಲಾ ಯೋಜನೆಗಳಿಗಾಗಿ ಕರ್ನಾಟಕದ ಜನತೆಗೆ ನಾನು ನನ್ನ ಶುಭಾಶಯಗಳನ್ನು ಕೋರುತ್ತೇನೆ.

ಸ್ನೇಹಿತರೆ,

ಸ್ವಲ್ಪ ಸಮಯದ ಹಿಂದಷ್ಟೇ, ಬೆಂಗಳೂರು ಮೆಟ್ರೋದ ಹೊಸ ‘ಪಿಂಕ್ ಲೈನ್‘(ಗುಲಾಬಿ ಮಾರ್ಗ) ಅನ್ನು ಬೆಂಗಳೂರಿನ ಜನತೆಗೆ ಸಮರ್ಪಿಸಲಾಯಿತು. ಈ ಹೊಸ ಮೆಟ್ರೊ ಮಾರ್ಗದಿಂದಾಗಿ, ಐಐಎಂ–ಬೆಂಗಳೂರು ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಸಂಪರ್ಕ ವ್ಯವಸ್ಥೆ ಇನ್ನಷ್ಟು ಉತ್ತಮಗೊಳ್ಳಲಿದೆ. ಇದಲ್ಲದೆ, ಬೆಂಗಳೂರಿನ ಪ್ರಮುಖ ವ್ಯಾಪಾರ, ತಂತ್ರಜ್ಞಾನ ಮತ್ತು ವಾಣಿಜ್ಯ ಕೇಂದ್ರಗಳೆಂದು ಗುರುತಿಸಲ್ಪಟ್ಟ ಅನೇಕ ಪ್ರದೇಶಗಳು ಕೂಡ ಮೆಟ್ರೊ ಜಾಲದೊಂದಿಗೆ ಸಂಪರ್ಕಗೊಳ್ಳಲಿವೆ. ಇದರರ್ಥ, ಬೆಂಗಳೂರಿನ ಲಕ್ಷಾಂತರ ಜನರಿಗೆ ಪ್ರಯಾಣದಲ್ಲಿ ಹೆಚ್ಚಿನ ಅನುಕೂಲವಾಗುವುದಲ್ಲದೆ, ಅವರ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ.

ಸ್ನೇಹಿತರೆ,

ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ ಕುಮಾರ್ ಜಿ ಅವರ ಪುಣ್ಯತಿಥಿ ನಿನ್ನೆ ಇತ್ತು. ಅವರಿಗೆ ಈ ಪ್ರದೇಶದ ಮೇಲೆ ವಿಶೇಷವಾದ ಒಲವಿತ್ತು. ಇಂದಿನ ಈ ಮೆಟ್ರೊ ಮಾರ್ಗವನ್ನು ಕಂಡು, ಅವರ ಆತ್ಮವೂ ಖಂಡಿತವಾಗಿಯೂ ಸಂತೋಷಗೊಂಡಿರಬೇಕು. ಅವರಿಗೆ ನಾನು ನನ್ನ ಹೃದಯಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಬೆಂಗಳೂರು ಭಾರತದ ‘ಸಿಲಿಕಾನ್ ವ್ಯಾಲಿ‘ಯಾಗಿದೆ. ದೇಶದ ಒಟ್ಟು ಐಟಿ ರಫ್ತಿನಲ್ಲಿ ಬೆಂಗಳೂರಿನ ಪಾಲು 3ನೇ ಒಂದಕ್ಕಿಂತ ಹೆಚ್ಚು. ಈ ನಗರವು ಭಾರತದ ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾಶಕ್ತಿಯಾಗಿದೆ. ಆದ್ದರಿಂದ, ಇಡೀ ಬೆಂಗಳೂರು ಪ್ರದೇಶದ ತ್ವರಿತ ಅಭಿವೃದ್ಧಿ ಮತ್ತು ಆಧುನಿಕ ಸಾರ್ವಜನಿಕ ಸಾರಿಗೆಯ ವಿಸ್ತರಣೆಯು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಇದೇ ದೃಷ್ಟಿಕೋನದೊಂದಿಗೆ ಕೇಂದ್ರ ಸರ್ಕಾರವು ‘ನಮ್ಮ ಮೆಟ್ರೊ‘ ವಿಸ್ತರಣೆಗೆ ಬೆಂಬಲ ನೀಡುತ್ತಿದೆ. 2014ರಲ್ಲಿ ‘ನಮ್ಮ ಮೆಟ್ರೊ‘ ಕೇವಲ 17 ಕಿಲೋಮೀಟರ್ ಉದ್ದವಿತ್ತು. ಇಂದು ಇದರ ಒಟ್ಟು ಜಾಲವು 100 ಕಿಲೋಮೀಟರ್‌ಗಿಂತಲೂ ಹೆಚ್ಚು ವಿಸ್ತರಿಸಿದೆ. ನಾವು ನಿರಂತರವಾಗಿ ನೂರರ ಗಡಿಗಳನ್ನು ದಾಟುತ್ತಿದ್ದೇವೆ. ಶಿವಕುಮಾರ್ ಜಿ, ನಾನು ನಿಮಗೆ ಹೇಳುತ್ತಿದ್ದೆ. ಕೆಲವು ದಿನಗಳ ಹಿಂದೆ ಭಾರತವು ‘ಗ್ರ್ಯಾಂಡ್‌ಮಾಸ್ಟರ್ ಚೆಸ್‘ನಲ್ಲಿ ಶತಕ(100ರ ಗಡಿ) ತಲುಪಿದೆ ಎಂದು ನೀವು ಕೇಳಿರಬಹುದು. ಭಾರತದಲ್ಲಿ ಈಗ 100 ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳಿದ್ದಾರೆ, ಅವರೆಲ್ಲರೂ ಇದೇ ಅವಧಿಯಲ್ಲಿ ಹೊರಹೊಮ್ಮಿದ್ದಾರೆ.

ಸ್ನೇಹಿತರೆ,

ದೆಹಲಿ–ಎನ್‌ಸಿಆರ್ ಮತ್ತು ಮುಂಬೈ ಮಹಾನಗರ ಪ್ರದೇಶದ ನಂತರ, 100 ಕಿಲೋಮೀಟರ್‌ಗಿಂತಲೂ ಹೆಚ್ಚು ಮೆಟ್ರೋ ಜಾಲ ಹೊಂದಿರುವ ದೇಶದ 3ನೇ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ‘ನಮ್ಮ ಮೆಟ್ರೋ‘ದ ಈ ಯಶಸ್ಸು ಕೇವಲ ಒಂದು ಯೋಜನೆಗೆ ಸೀಮಿತವಾಗಿಲ್ಲ. ಇದು ‘ಸುಲಭ ಜೀವನ‘ ಮತ್ತು ‘ಸುಲಭ ಪ್ರಯಾಣ‘ ಕುರಿತಂತೆ ದೇಶವು ಅಳವಡಿಸಿಕೊಂಡಿರುವ ಹೊಸ ದೃಷ್ಟಿಕೋನದ ಫಲಿತಾಂಶವಾಗಿದೆ. ಇದು ಮಧ್ಯಮ ವರ್ಗದ ಕುಟುಂಬಗಳ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ದೇಶಕ್ಕಿರುವ ಬದ್ಧತೆಯ ಪ್ರತಿಫಲವಾಗಿದೆ.

ಸ್ನೇಹಿತರೆ,

ಇಂದು ಭಾರತೀಯ ರೈಲ್ವೆಯು ಗುಲಾಮಗಿರಿಯ ಕಾಲದ ಹಳೆಯ ಮನಸ್ಥಿತಿಯನ್ನು ಹಿಂದಕ್ಕೆ ಬಿಟ್ಟು ಮುನ್ನಡೆಯುತ್ತಿದೆ. ದೇಶದ ರೈಲ್ವೆ ವ್ಯವಸ್ಥೆಯು ಈಗ ಒಂದು ಹೊಸ ಪರಂಪರೆ, ಹೊಸ ಇತಿಹಾಸ ಸೃಷ್ಟಿಸುತ್ತಿದೆ. ನಮ್ಮ ರೈಲು ನಿಲ್ದಾಣಗಳು, ರೈಲು ಇಂಜಿನ್‌ಗಳು ಮತ್ತು ಬೋಗಿಗಳು – ಹೀಗೆ ಎಲ್ಲವೂ ಈಗ ಭಾರತದದೇ ಆದ ಛಾಪು ಮತ್ತು ಗುರುತು ಹೊಂದಿವೆ. ‘ವಂದೇ ಭಾರತ್‘ ರೈಲುಗಳು ಮತ್ತು ‘ಅಮೃತ ಭಾರತ್‘ ನಿಲ್ದಾಣಗಳು ‘ವಿಕಸಿತ ಭಾರತ‘ದ ರೈಲ್ವೆ ಸೇವೆಗಳ ಒಂದು ಝಲಕ್ ಆಗಿವೆ. ಕರ್ನಾಟಕದಲ್ಲಿ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ಸೇರಿದಂತೆ 60ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಈಗ ‘ಅಮೃತ ಭಾರತ್‘ ನಿಲ್ದಾಣಗಳಾಗಿ ಮಾರ್ಪಟ್ಟಿವೆ. ಈ ನಿಲ್ದಾಣಗಳು ಸಂವೇದನಾಶೀಲತೆ ಮತ್ತು ಆಧುನಿಕತೆ – ಎರಡನ್ನೂ ಪ್ರತಿಬಿಂಬಿಸುತ್ತಿವೆ. ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಸೇರಿದಂತೆ ಪ್ರತಿಯೊಬ್ಬ ಪ್ರಯಾಣಿಕರಿಗೂ ಇಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹಿಂದೆ ಕೇವಲ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿದ್ದ ಸೌಲಭ್ಯಗಳನ್ನು, ರೈಲು ನಿಲ್ದಾಣಗಳಲ್ಲಿಯೂ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ.

ಸ್ನೇಹಿತರೇ,

ಇಂದು, ಭಾರತೀಯ ರೈಲ್ವೆಯು ಗುಲಾಮಗಿರಿಯ ಕಾಲದ ಹಳೆಯ ಮನಸ್ಥಿತಿಯನ್ನು ಹಿಂದಕ್ಕೆ ಹಾಕುತ್ತಿದೆ. ದೇಶದ ರೈಲ್ವೆಯು ಈಗ ಒಂದು ಹೊಸ ಪರಂಪರೆಯನ್ನು, ಹೊಸ ಇತಿಹಾಸವನ್ನು ಸೃಷ್ಟಿಸುತ್ತಿದೆ. ನಮ್ಮ ರೈಲು ನಿಲ್ದಾಣಗಳು, ರೈಲು ಎಂಜಿನ್‌ಗಳು ಮತ್ತು ರೈಲು ಬೋಗಿಗಳು – ಎಲ್ಲವೂ ಈಗ ಭಾರತದದೇ ಆದ ಛಾಪು ಮತ್ತು ಗುರುತನ್ನು ಹೊಂದಿವೆ. ‘ವಂದೇ ಭಾರತ್‘ ರೈಲುಗಳು ಮತ್ತು ‘ಅಮೃತ್ ಭಾರತ್‘ ನಿಲ್ದಾಣಗಳು ‘ವಿಕಸಿತ ಭಾರತ‘ದ ರೈಲ್ವೆ ಸೇವೆಗಳ ಒಂದು ಝಲಕ್ (ನೋಟ) ಆಗಿವೆ. ಕರ್ನಾಟಕದಲ್ಲಿ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳು ಸೇರಿದಂತೆ ಅರವತ್ತಕ್ಕೂ ಹೆಚ್ಚು ರೈಲು ನಿಲ್ದಾಣಗಳು ಈಗ ‘ಅಮೃತ್ ಭಾರತ್‘ ನಿಲ್ದಾಣಗಳಾಗಿ ಮಾರ್ಪಟ್ಟಿವೆ. ಈ ನಿಲ್ದಾಣಗಳು ಸಂವೇದನೆ ಮತ್ತು ಆಧುನಿಕತೆ ಎರಡನ್ನೂ ಪ್ರತಿಬಿಂಬಿಸುತ್ತವೆ. ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಸೇರಿದಂತೆ ಪ್ರತಿಯೊಬ್ಬ ಪ್ರಯಾಣಿಕರಿಗೂ ಇಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹಿಂದೆ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿದ್ದ ಸೌಲಭ್ಯಗಳನ್ನು, ಈಗ ರೈಲು ನಿಲ್ದಾಣಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೂ ಒದಗಿಸುವ ಪ್ರಯತ್ನ ನಡೆಯುತ್ತಿದೆ.

ಸ್ನೇಹಿತರೆ,

ಕಳೆದ 10-12 ವರ್ಷಗಳಲ್ಲಿ ಭಾರತದ ರೈಲ್ವೆ ಬಜೆಟ್ ಹಲವು ಪಟ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ, ತೇಜಸ್ವಿ ಜಿ ಅವರು ಈಗಷ್ಟೇ ಹೇಳಿದಂತೆ, ಕರ್ನಾಟಕದ ರೈಲ್ವೆ ಬಜೆಟ್ ಕೂಡ 9 ಪಟ್ಟು ಹೆಚ್ಚಾಗಿದೆ. ಇಂದು ಕರ್ನಾಟಕಕ್ಕೆ 4 ‘ಅಮೃತ್‘ ನಿಲ್ದಾಣಗಳು ಹಾಗೂ ಜೋಡಿ ರೈಲು ಮಾರ್ಗ ಅಭಿವೃದ್ಧಿ ಮತ್ತು ವಿದ್ಯುದೀಕರಣಕ್ಕೆ ಸಂಬಂಧಿಸಿದ 2 ಯೋಜನೆಗಳು ದೊರೆತಿವೆ. ಕೆಲವು ದಿನಗಳ ಹಿಂದಷ್ಟೇ ಕರ್ನಾಟಕಕ್ಕೆ ತನ್ನ ಮೊದಲ ‘ವಂದೇ ಭಾರತ್ ಸ್ಲೀಪರ್‘ ರೈಲು ಸಿಕ್ಕಿದೆ. ಇಂದು ಗೋವಾ ಸಂಪರ್ಕಿಸುವ ‘ವಂದೇ ಭಾರತ್‘ ರೈಲು ಕರ್ನಾಟಕಕ್ಕೆ ಲಭ್ಯವಾಗಿದೆ. ಈ ರೈಲಿನ ಮೂಲಕ, ಮಂಗಳೂರು ಮತ್ತು ಕರಾವಳಿ ಮಾರ್ಗದಾದ್ಯಂತ ಇರುವ ಜನರು ಸೇರಿದಂತೆ ಕರ್ನಾಟಕದ ಜನರಿಗೆ ಸೆಮಿ ಹೈಸ್ಪೀಡ್ ರೈಲಿನಲ್ಲಿ ಪ್ರಯಾಣಿಸುವ ಹೊಸ ಅನುಭವ ಸಿಗಲಿದೆ.

ಸ್ನೇಹಿತರೆ,

ಸಂಪರ್ಕ ವ್ಯವಸ್ಥೆಯ ಜತೆಗೆ ‘ವಿಕಸಿತ ಭಾರತ‘ ನಿರ್ಮಾಣದಲ್ಲಿ ಇಂಧನ ಭದ್ರತೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ಸುತ್ತಮುತ್ತ ನಡೆಯುತ್ತಿರುವ ಯುದ್ಧವು, ಇಂಧನ ಭದ್ರತೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದೆ. ಇದು ಭಾರತಕ್ಕೂ ಒಂದು ಸವಾಲಿನ ಸಮಯವಾಗಿತ್ತು. ಆದಾಗ್ಯೂ, ಕಳೆದ ದಶಕದಲ್ಲಿ ಇಂಧನ ಭದ್ರತೆಯ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು, ಈ ಬಿಕ್ಕಟ್ಟನ್ನು ಧೈರ್ಯದಿಂದ ಎದುರಿಸಲು ನಮಗೆ ಸಹಾಯ ಮಾಡಿವೆ. ನಾವು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. ಕಚ್ಚಾ ತೈಲ ಸಂಗ್ರಹಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಸೌರ, ಜಲ ಮತ್ತು ಪವನ ವಿದ್ಯುತ್ ಶಕ್ತಿ ಉತ್ಪಾದನಾ ಸಾಮರಥ್ಯವನ್ನು ವಿಸ್ತರಿಸಿದ್ದೇವೆ. ರೈಲ್ವೆಯಲ್ಲಿ ಸುಮಾರು ಶೇಕಡ 100ರಷ್ಟು ವಿದ್ಯುದೀಕರಣ ಸಾಧಿಸಿದ್ದೇವೆ. ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಿದ್ದೇವೆ. ಕರ್ನಾಟಕದಲ್ಲಿ ಇಂದು ಶಂಕುಸ್ಥಾಪನೆ ನೆರವೇರಿಸಲಾದ ಅಥವಾ ಉದ್ಘಾಟನೆಯಾದ 3 ಯೋಜನೆಗಳು ಭಾರತದ ಇಂಧನ ಭದ್ರತೆಗೆ ಹೊಸ ಬಲ ನೀಡಲಿವೆ. ಮಂಗಳೂರಿನ ಎಲ್‌ಪಿಜಿ ಯೋಜನೆಯು ದೇಶದ ಎಲ್‌ಪಿಜಿ ಸಂಗ್ರಹಣಾ ಸಾಮರ್ಥ್ಯವನ್ನು 80,000 ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಿಸಲಿದೆ. ದೇವನಗುಂದಿ ಮಾರ್ಕೆಟಿಂಗ್ ಟರ್ಮಿನಲ್ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನದ ಪೂರೈಕೆಯನ್ನು ಹೆಚ್ಚು ವ್ಯವಸ್ಥಿತ ಹಾಗೂ ವಿಶ್ವಾಸಾರ್ಹವಾಗಿಸಲಿದೆ. ಅದೇ ರೀತಿ, ಬೆಂಗಳೂರಿನ ಸಿಬಿಜಿ ಘಟಕವು ಪ್ರತಿದಿನ ಸುಮಾರು 13 ಟನ್ ಜೈವಿಕ ಅನಿಲ ಉತ್ಪಾದಿಸಲಿದೆ. ಇದು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವುದಲ್ಲದೆ, ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳಲು ವೆಚ್ಚವಾಗುವ ಹಣವನ್ನೂ ಉಳಿಸಲಿದೆ.

ಸ್ನೇಹಿತರೆ,

ಇಂಧನ ಭದ್ರತೆಯ ಒಂದು ಪ್ರಮುಖ ಅಂಶವೆಂದರೆ, ಅದು ವಿದ್ಯುತ್ ಉತ್ಪಾದನೆ. ಇಂದು ಭಾರತವು ಚಿಪ್‌ಗಳಿಂದ ಹಿಡಿದು ಹಡಗುಗಳವರೆಗೆ, ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ಕೇಂದ್ರಗಳಿಂದ ಹಿಡಿದು ಕ್ವಾಂಟಮ್ ಕಂಪ್ಯೂಟಿಂಗ್‌ವರೆಗೆ ಹೊಸ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರುವ ಗುರಿಯೊಂದಿಗೆ ಮುನ್ನಡೆಯುತ್ತಿದೆ. ಈ ಉದ್ದೇಶಕ್ಕಾಗಿ ದೇಶದಲ್ಲಿ ಸಾಕಷ್ಟು ವಿದ್ಯುತ್ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಂದು ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 300 ಗಿಗಾವ್ಯಾಟ್‌ಗಳನ್ನು ದಾಟಿದೆ. ಸ್ವಚ್ಛ ಇಂಧನ ಉತ್ಪಾದನೆ ಸಾಮರ್ಥ್ಯ ಸಾಧಿಸುವ ನಿಟ್ಟಿನಲ್ಲಿ, ಭಾರತವು ತನ್ನ ಪರಮಾಣು ವಿದ್ಯುತ್ ಸ್ಥಾವರಗಳ ಸಂಖ್ಯೆಯನ್ನೂ ಹೆಚ್ಚಿಸುತ್ತಿದೆ.

ಸ್ನೇಹಿತರೆ,

ಕೇಂದ್ರ ಸರ್ಕಾರದ ಯೋಜನೆಗಳಿಂದಾಗಿ ಇಂದು ಭಾರತದ ನಾಗರಿಕರು ಕೇವಲ ವಿದ್ಯುತ್ ಗ್ರಾಹಕರಾಗಷ್ಟೇ ಅಲ್ಲದೆ, ವಿದ್ಯುತ್ ಉತ್ಪಾದಕರಾಗಿಯೂ ಬದಲಾಗುತ್ತಿದ್ದಾರೆ. ‘ಪ್ರಧಾನ ಮಂತ್ರಿ ಸೂರ್ಯ ಘರ್ ಮುಫತ್ ಬಿಜ್ಲಿ ಯೋಜನೆ‘ ಅಡಿ, ದೇಶಾದ್ಯಂತ 60 ಲಕ್ಷಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮನೆಗಳ ಚಾವಣಿಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಂಡಿವೆ. ಇದರಲ್ಲಿ ಕರ್ನಾಟಕದ 40,000ಕ್ಕೂ ಹೆಚ್ಚು ಕುಟುಂಬಗಳು ಸೇರಿವೆ. ಕೇಂದ್ರ ಸರ್ಕಾರವು ಪ್ರತಿ ಕುಟುಂಬಕ್ಕೆ ಸುಮಾರು 80,000 ರೂಪಾಯಿ ನೆರವು ನೀಡಿದೆ. ಅದೇ ರೀತಿ, ‘ಪ್ರಧಾನ ಮಂತ್ರಿ–ಕುಸುಮ್‘ ಯೋಜನೆಯ ಅಡಿ, ಕರ್ನಾಟಕದ ರೈತರಿಗಾಗಿ 8 ಲಕ್ಷಕ್ಕೂ ಹೆಚ್ಚು ಸೌರ ಪಂಪ್‌ಸೆಟ್‌ಗಳ ಮೂಲಕ ನೀರಾವರಿ ವ್ಯವಸ್ಥೆ ಮಾಡಲಾಗುತ್ತಿದೆ. ಇದರರ್ಥ, ಕರ್ನಾಟಕದ ಅನ್ನದಾತರು ಈಗ ಇಂಧನ ಪೂರೈಕೆದಾರರಾಗಿಯೂ ಬದಲಾಗುತ್ತಿದ್ದಾರೆ. ಈ ಯೋಜನೆಗಳು ವಿದ್ಯುತ್ ವೆಚ್ಚ ಕಡಿಮೆ ಮಾಡುವ ಜತೆಗೆ, ಆದಾಯ ಮತ್ತು ಉದ್ಯೋಗಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ.

ಸ್ನೇಹಿತರೆ,

ಒಂದು ದೇಶವು ನಿರ್ದಿಷ್ಟ ಧ್ಯೇಯದೊಂದಿಗೆ ಮುನ್ನಡೆದಾಗ, ಪ್ರತಿಯೊಬ್ಬ ನಾಗರಿಕನೂ ಅಭಿವೃದ್ಧಿಯ ಭಾಗವಾದಾಗ, ತೆರಿಗೆದಾರರ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಸರಿಯಾಗಿ ವಿನಿಯೋಗಿಸಿದಾಗ, ಅದರ ಫಲಿತಾಂಶಗಳು ಅತ್ಯಂತ ಉತ್ತೇಜಕ ಮತ್ತು ಅರ್ಥಪೂರ್ಣವಾಗಿರುತ್ತವೆ. 2014ರಲ್ಲಿ ನಾವು ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್‘ ಎಂಬ ಸಂಕಲ್ಪದೊಂದಿಗೆ ನಮ್ಮ ಕೆಲಸ ಆರಂಭಿಸಿದೆವು. ಇಂದು ಆ ಪ್ರಯತ್ನಗಳ ಫಲವಾಗಿ, ದೇಶದಲ್ಲಿ ಮಧ್ಯಮ ವರ್ಗವು ವಿಸ್ತರಿಸುತ್ತಿದ್ದು, ಒಂದು ಹೊಸ ‘ಆಕಾಂಕ್ಷಿತ ವರ್ಗ‘ ಉದಯಿಸುತ್ತಿದೆ. ಇದು ಸಮಾಜದ ಅಂತಹ ಒಂದು ವರ್ಗವಾಗಿದ್ದು, ಅವರ ಆಕಾಂಕ್ಷೆಗಳು ನಿರಂತರವಾಗಿ ಬೆಳೆಯುತ್ತಿವೆ. ಇವರು ತಮ್ಮ ಮನೆಗೆ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ಬಯಸುತ್ತಾರೆ. ತಮ್ಮ ಕುಟುಂಬಕ್ಕಾಗಿ ಸ್ಕೂಟರ್ ಅಥವಾ ಮೋಟಾರ್‌ಸೈಕಲ್ ಹೊಂದಲು ಬಯಸುತ್ತಾರೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಪೌಷ್ಟಿಕಾಂಶ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಇವರು ಬಯಸುತ್ತಾರೆ. ಇವರು ಪ್ರವಾಸೋದ್ಯಮದ ಮೇಲೆ ಖರ್ಚು ಮಾಡಲು ಮತ್ತು ಹೊಸ ಅನುಭವಗಳನ್ನು ಪಡೆಯಲು ಇಚ್ಛಿಸುತ್ತಾರೆ. ಇಂತಹ ಬೆಳೆಯುತ್ತಿರುವ ಆಕಾಂಕ್ಷೆಗಳು ದೇಶದಲ್ಲಿ ಹೊಸ ಬೇಡಿಕೆಯನ್ನು ಸೃಷ್ಟಿಸುತ್ತಿವೆ. ವಾಹನಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್ ವರೆಗೆ, ಹಾಗೂ ಪ್ರವಾಸೋದ್ಯಮದಿಂದ ಸೇವಾ ವಲಯದವರೆಗೆ, ಹೊಸ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಉದ್ಯೋಗಾವಕಾಶಗಳು ಹೊರಹೊಮ್ಮುತ್ತಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ನವ–ಮಧ್ಯಮ ವರ್ಗವು ಭಾರತದ ಆರ್ಥಿಕತೆಯ ಬೆಳವಣಿಗೆಗೆ ಪ್ರಮುಖ ಚಾಲನಾಶಕ್ತಿಯಾಗಿ ಪರಿಣಮಿಸುತ್ತಿದೆ. ಕರ್ನಾಟಕ ಮತ್ತು ಬೆಂಗಳೂರಿನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿರುವ ಈ ನವ–ಮಧ್ಯಮ ವರ್ಗದ ಹಿತಾಸಕ್ತಿಗಳು ಕೇಂದ್ರ ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿವೆ.

ಸ್ನೇಹಿತರೆ,

ಮಧ್ಯಮ ವರ್ಗದವರ ಉಳಿತಾಯ ಹೆಚ್ಚಿಸಲು, ಅವರ ಕೈಯಲ್ಲಿ ಹೆಚ್ಚಿನ ಹಣ ಉಳಿಯುವಂತೆ ಮಾಡಲು ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ನಾವು ವಾರ್ಷಿಕ 12 ಲಕ್ಷ ರೂಪಾಯಿವರೆಗಿನ ಆದಾಯವನ್ನು ವರಮಾನ ತೆರಿಗೆಯಿಂದ ವಿನಾಯಿತಿ ನೀಡಿದ್ದೇವೆ. ಟಿಡಿಎಸ್ ನಿಯಮಗಳಲ್ಲಿ ಬದಲಾವಣೆ ತರುವ ಮೂಲಕ, ಹಿರಿಯ ನಾಗರಿಕರಿಗೆ ಮತ್ತು ಬಾಡಿಗೆ ಆದಾಯ ಪಡೆಯುವವರಿಗೆ ನಾವು ನೆಮ್ಮದಿ ಒದಗಿಸಿದ್ದೇವೆ. ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳ ಮೂಲಕ ದೈನಂದಿನ ಬಳಕೆಯ ವಸ್ತುಗಳನ್ನು ಅಗ್ಗವಾಗಿಸಿದ್ದೇವೆ. ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆಯ ಮೇಲಿನ ಜಿಎಸ್‌ಟಿ ತೆಗೆದುಹಾಕುವ ಮೂಲಕ, ವಿಮೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಿದ್ದೇವೆ.

ಸ್ನೇಹಿತರೆ,

ಮಧ್ಯಮ ವರ್ಗದವರ ಉಳಿತಾಯ ಹೆಚ್ಚಿಸುವುದು, ಅವರ ಖರೀದಿ ಸಾಮರ್ಥ್ಯ ಬಲಪಡಿಸುವುದು ಮತ್ತು ಅವರು ತಮ್ಮ ಕುಟುಂಬದ ಕನಸುಗಳನ್ನು ನನಸಾಗಿಸಿಕೊಳ್ಳಲು ಅನುವು ಮಾಡಿಕೊಡುವ ಜತೆಗೆ, ದೇಶದ ಆರ್ಥಿಕ ಪ್ರಗತಿಗೂ ಕೊಡುಗೆ ನೀಡುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ. ಇಂದು ಕರ್ನಾಟಕದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು, ಈ ಅಭಿವೃದ್ಧಿ ಪಯಣಕ್ಕೆ ಹೊಸ ಚೈತನ್ಯ ನೀಡಲಿದೆ. ಹೊಸ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು!

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****