Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಬೂಲ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ನವೀಕೃತ ಸ್ಟಾರ್ ಪ್ಯಾಲೇಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ಭಾಷಣ

ಕಾಬೂಲ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ನವೀಕೃತ ಸ್ಟಾರ್ ಪ್ಯಾಲೇಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ಭಾಷಣ


ಗೌರವಾನ್ವಿತ ರಾಷ್ಟ್ರಾಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಘನಿ

ವಿದೇಶಾಂಗ ಸಚಿವರಾದ ರಬ್ಬಾನಿ ಮತ್ತು ನನ್ನ ಪ್ರೀತಿಯ ಅಫ್ಘಾನ್ ಗೆಳೆಯರೇ, ಸೋದರಿಯರೇ ಮತ್ತು ಸೋದರರೇ

ನಿಮ್ಮೊಂದಿಗೆ ಮತ್ತೆ ಪಾಲ್ಗೊಳ್ಳುತ್ತಿರುವುದು ನಮಗೆ ಅತೀವ ಸಂತಸದ ವಿಷಯವಾಗಿದೆ. ಅಫ್ಘಾನಿಸ್ತಾನವು ಭಾರತದ ನೆರೆಯ ರಾಷ್ಟ್ರವಾಗಿದೆ. ನಮ್ಮ ಹೃದಯ ಮತ್ತು ಮನಸ್ಸುಗಳಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಅತ್ಯಂತ ಸಮೀಪದ ಗೆಳೆಯರಾಗಿವೆ.

ಇಂದು ನಾವು ನಮ್ಮ ಗೆಳೆತನದ ಮತ್ತೊಂದು ಸಾಧನೆಯನ್ನು ಸಂಭ್ರಮಿಸಲು ಮತ್ತೆ ಸೇರಿದ್ದೇವೆ. ನಮ್ಮ ಸಹಕಾರದ ಪ್ರಯಾಣದಲ್ಲಿ ಮತ್ತೊಂದು ಫಲಭರಿತ ಹೆಜ್ಜೆ ಇಡುತ್ತಿದ್ದೇವೆ.

ಗೌರವಾನ್ವಿತ ಘನಿಯವರೇ,

ಒಳ್ಳೆಯ ಗೆಳೆಯರ ಜೊತೆ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವುದಕ್ಕಿಂತ ಹೆಚ್ಚಿನ ಖುಷಿ ಬೇರೆ ಎಲ್ಲೂ ಸಿಗುವುದಿಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಇಂತಹ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಪಾಲ್ಗೊಳ್ಳುವ ಅವಕಾಶ ನಮ್ಮಿಬ್ಬರ ಪಾಲಿಗೆ ಒದಗಿ ಬಂದಿದೆ.

ಕಳೆದ ವರ್ಷದ ಡಿಸೆಂಬರ್, ಅಫ್ಘಾನ್ ಸಂಸತ್ತಿನ ಉದ್ಘಾಟನೆ ವೇಳೆ ನೀವು ಮತ್ತು ಅಫ್ಘಾನ್ ಗೆಳೆಯರು ನಮ್ಮ ಜೊತೆಗಿದ್ದರು. ಈ ಸಮಾರಂಭವು ನಮ್ಮ ಸಹಭಾಗಿತ್ವ, ಹಾಗೂ ಆಧುನಿಕ ಅಫ್ಘಾನಿಸ್ತಾನದ ನಿರ್ಮಾಣದಲ್ಲಿನ ನಮ್ಮ ಬದ್ಧತೆಯನ್ನು ಜಗತ್ತಿಗೆ ಪ್ರದರ್ಶಿಸಿದ್ದವು. ಕಳೆದ ಮೇ ತಿಂಗಳಿನಲ್ಲಿ ನಾವು ಭಾರತ-ಅಫ್ಘಾನಿಸ್ತಾನ-ಇರಾನ್ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದು ನಮ್ಮ ಗೆಳೆತನದ ಮತ್ತೊಂದು ಮೈಲುಗಲ್ಲಾಗಿದೆ.

ಅಫ್ಘಾನಿಸ್ತಾನದ ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಯಲ್ಲಿ ನಮ್ಮ ನಿಜವಾದ ಮತ್ತು ದೃಢವಾದ ಸಹಯೋಗವು ಈ ಜೂನ್ ತಿಂಗಳಿನಲ್ಲಿ ಅಫ್ಘಾನಿಸ್ತಾನ-ಭಾರತ ಗೆಳೆತನ ಡ್ಯಾಂ ಉದ್ಘಾಟನೆಯೊಂದಿಗೆ ಮತ್ತೆ ಜಗತ್ತಿಗೆ ಪ್ರದರ್ಶಿತವಾಗಿದೆ. ಸಲ್ಮಾ ಡ್ಯಾಂ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಹೆರಾತ್ ಪ್ರದೇಶದ ಆರ್ಥಿಕ ಮತ್ತು ಕೃಷಿ ಕ್ಷೇತ್ರಕ್ಕೆ ನೆರವಾಗಲಿದೆ. ಅಫ್ಘಾನಿಸ್ತಾನದ ಪೂರ್ಣ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ನಾವು ಇನ್ನಷ್ಟು ಸಹಕಾರ ನೀಡಲಿದ್ದೇವೆ.

ಗೌರವಾನ್ವಿತರೇ ,

ಇಂದಿನ ಅರಮನೆ ಉದ್ಘಾಟನೆಯು ತುಂಬಾ ವಿಭಿನ್ನವಾಗಿದೆ. ಅಲ್ಲದೆ, ನಮ್ಮ ಸಹಭಾಗಿತ್ವಕ್ಕೆ ಹೊಸ ದಿಗ್ದರ್ಶನ ನೀಡಲಿದೆ. ಯಾಕೆಂದರೆ, ಇದು ಅಫ್ಘಾನಿಸ್ಥಾನದ ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಲಿದೆ.

ಈ ಅರಮನೆಯು ನಿಮ್ಮ ಇತಿಹಾಸ ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಹಿಂಸೆಯ ನೆರಳಿನಲ್ಲಿ ನಲುಗಿದ್ದವರಿಗೆ, ಈ ಅರಮನೆಯು ನಿಮ್ಮ ಗತ ವೈಭವದ ಇತಿಹಾಸವನ್ನು ನೆನಪಿಸಿ ಸ್ಫೂರ್ತಿ ತುಂಬಲಿದೆ.

ನಮ್ಮ ಅಫ್ಘನ್ ನ ಸೋದರ, ಸೋದರಿಯರಿಗೆ ಇದು ಅಫ್ಘನ್ ಸಮಾಜದ ಸೌಂದರ್ಯ, ಸಮೃದ್ಧತೆ ಮತ್ತು ಅದ್ಧೂರಿತನದ ಪರಿಚಯ ಮಾಡಲಿದೆ.
ನಮ್ಮ ಸಹಭಾಗಿತ್ವದ ನೈಜತೆ ಏನೆಂದರೆ, ಇದು ನಮ್ಮ ಐತಿಹಾಸಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ನಾನು ಈ ಕಾರ್ಯವನ್ನು ಪೂರ್ತಿಗೊಳಿಸಿದ ಎಲ್ಲಾ ಕಲಾವಿದರ, ತಜ್ಞರ ಮತ್ತು ತಂತ್ರಜ್ಞರ, ಶ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

ಗೆಳೆಯರೇ,

ಅಫ್ಘಾನಿಸ್ತಾನವು ನಮ್ಮ ನೆಚ್ಚಿನ ಗೆಳೆಯನಾಗಿದೆ. ನಮ್ಮ ಸಮಾಜಗಳು, ಜನರು ಅತ್ಯಂತ ಹಳೆಯ ಸಂಬಂಧಗಳನ್ನು ಹೊಂದಿದ್ದಾರೆ. ಹೀಗಾಗಿ ನಿಮ್ಮ ದೇಶವನ್ನು ಬಾಹ್ಯಶಕ್ತಿಗಳು ಹಾಳುಗೆಡವಲು ಯತ್ನಿಸುತ್ತಿರುವುದನ್ನು ನೋಡಿದರೆ ಮನಸ್ಸಿಗೆ ತುಂಬಾ ದು:ಖವಾಗುತ್ತಿದೆ, ಹಿಂಸೆ ಮತ್ತು ಭಯೋತ್ಪಾದನೆಗೆ ತಕ್ಕ ಪ್ರತ್ಯುತ್ತರ ನೀಡಲೇಬೇಕಾಗಿದೆ.

ಅಫ್ಘಾನಿಸ್ತಾನದ ಜನರಿಗೆ ನಾನು ಒಂದು ಭರವಸೆ ನೀಡುತ್ತಿದ್ದೆನೆ. ಸಮೃದ್ಧ ಅಫ್ಘಾನಿಸ್ತಾನ ನಿರ್ಮಿಸುವ, ಶಾಂತಿ, ಸುಭದ್ರತೆ ಮತ್ತು ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ನಿಮ್ಮ ಗುರಿಯ ಜೊತೆಗೆ 1.25 ಶತಕೋಟಿ ಭಾರತೀಯರು ಜೊತೆಯಾಗಿ ನಿಲ್ಲಲಿದ್ದೇವೆ.

ಇವತ್ತಿನ ಸಮಾರಂಭವು ನಮ್ಮ ಸಹಯೋಗವನ್ನು ವಿಸ್ತರಿಸುವ ನಿಟ್ಟಿನಲ್ಲಿ ನೆರವಾಗಲಿದೆ. ನಾವು ಪ್ರತಿಯೊಬ್ಬ ಅಫ್ಘನ್ ಪ್ರಜೆ ಪ್ರಗತಿ ಹೊಂದುವುದನ್ನು ಬಯಸುತ್ತೇವೆ. ಆರ್ಥಿಕ ಪ್ರಗತಿಯಿಂದ ನಿಮ್ಮ ಸಮಾಜಕ್ಕೆ ಒಳಿತಾಗುವುದನ್ನು ಕಾಣಬಯಸುತ್ತೇವೆ. ಏನೇ ಸಂಕಷ್ಟ ಎದುರಾದರೂ ನಾವು ಅಫ್ಘನ್ ಜನರ ಜೊತೆಗೆ ನಿಲ್ಲಲಿದ್ದೇವೆ,

ಗೌರವಾನ್ವಿತರೇ,

ಕೊನೆಯದಾಗಿ, ಭಾರತ ರಾಯಭಾರ ಕಚೇರಿಯನ್ನು ಕಾಪಾಡಿದ ನಿಮ್ಮನ್ನು ಮತ್ತು ನಿಮ್ಮ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇವೆ. ಅದಕ್ಕಾಗಿ ನಮ್ಮ ಅಫ್ಘನ್ ಸಹೋದರರು ಮಾಡಿದ ಬಲಿದಾನವನ್ನು ನಾವು ಮರೆಯುವುದಿಲ್ಲ. ನಾನು ನಿಮಗೆಲ್ಲರಿಗೂ ಮತ್ತೊಮ್ಮೆ ಧನ್ಯವಾದ ಸಲ್ಲಿಸುತ್ತೇನೆ. ನಿಮ್ಮನ್ನು ಖುದ್ದಾಗಿ ಭೇಟಿ ಮಾಡುವ ಸಮಯಕ್ಕಾಗಿ ಕಾದಿರುತ್ತೇನೆ. ಎಂದಾದರೊಮ್ಮೆ ನವೀಕೃತ ಅರಮನೆಗೆ ಭೇಟಿ ನೀಡುವ ಅವಕಾಶ ನನಗೆ ಸಿಗಲಿದೆ.

ಧನ್ಯವಾದಗಳು,