Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೆನ್ಯಾದ ನೈರೋಬಿಯಲ್ಲಿ 15-19 ಡಿಸೆಂಬರ್ 2015ರಲ್ಲಿ ನಡೆದ ವಿಶ್ವ ವ್ಯಾಪಾರ ಸಂಸ್ಥೆಯ 10ನೇ ಸಚಿವರ ಸಮಾವೇಶದಲ್ಲಿ ಭಾರತ ತೆಗೆದುಕೊಂಡ ನಿಲುವಿಗೆ ಸಮ್ಮತಿ


ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಕೆನ್ಯಾದ ನೈರೋಬಿಯಲ್ಲಿ 15-19, ಡಿಸೆಂಬರ್ 2015ರಲ್ಲಿ ನಡೆದ ವಿಶ್ವ ವ್ಯಾಪಾರ ಸಂಸ್ಥೆಯ 10ನೇ ಸಚಿವರ ಸಮಾವೇಶದಲ್ಲಿ ಭಾರತ ತೆಗೆದುಕೊಂಡ ನಿಲುವಿಗೆ ಸಮ್ಮತಿ ಸೂಚಿಸಲಾಯಿತು.

ಹಿನ್ನೆಲೆ:

“ನೈರೋಬಿ ಪ್ಯಾಕೇಜ್” ಎಂದು ಕರೆಯಲ್ಪಟ್ಟ ಈ ಸಮಾವೇಶದ ಫಲಿತವು ಕನಿಷ್ಠ ಅಭಿವೃದ್ಧಿ ಹೊಂದಿದ ದೇಶ(ಎಲ್ಡಿಸಿ)ಗಳಿಗೆ ಸಂಬಂಧಿಸಿದ ಕೃಷಿ, ಹತ್ತಿ ಮತ್ತು ಇನ್ನಿತರ ವಿಷಯಗಳನ್ನು ಒಳಗೊಂಡ ಸಚಿವರುಗಳ ನಿರ್ಧಾರಗಳನ್ನು ಒಳಗೊಂಡಿದೆ. ಅಭಿವೃದ್ಧಿಶೀಲ ದೇಶಗಳಿಗೆ ಕೃಷಿ ವಿಶೇಷ ಸುರಕ್ಷತಾ ವ್ಯವಸ್ಥೆ(ಎಸ್ಎಸ್ಎಂ), ಆಹಾರ ಸುರಕ್ಷತೆ ಉದ್ದೇಶಕ್ಕಾಗಿ ಸಾರ್ವಜನಿಕ ಸಂಸ್ಥೆಗಳಿಂದ ಧಾನ್ಯ ಶೇಖರ ಣೆ, ರಫ್ತಾಗುವ ಆಹಾರ ಧಾನ್ಯಗಳಿಗೆ ಸಬ್ಸಿಡಿ ನಿಷೇಧಕ್ಕೆ ಬದ್ಧತೆ ಮತ್ತು ಹತ್ತಿಗೆ ಸಂಬಂಧಿಸಿದಂತೆ ಕ್ರಮಗಳನ್ನು ಇದು ಒಳಗೊಂಡಿದೆ. ಸೇವಾ ಕ್ಷೇತ್ರದಲ್ಲಿ ಎಲ್ಡಿಸಿಗಳಿಗೆ ರಿಯಾಯಿತಿ ಮತ್ತು ವ್ಯಾಪಾರ ಆಯ್ಕೆಗಳಿಂದ ಎಲ್ಡಿಸಿಗಳಿಗೆ ಲಾಭವಾಗುತ್ತದೆಯೇ ಎಂಬುದನ್ನು ನಿರ್ಧರಿಸಲು ಮಾನದಂಡಗಳನ್ನು ರೂಪಿಸುವ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಇದೇ ವೇಳೆ, ಸಚಿವರ ಘೋಷಣೆ ಯೊಂದನ್ನೂ ಅಂಗೀಕರಿಸಲಾಯಿತು.

ನೈರೋಬಿ ಸಮಾವೇಶಕ್ಕೆ ಮುನ್ನವೇ, ದೋಹಾ ಸುತ್ತಿನ ವ್ಯಾಪಾರ ಸಂಧಾನಗಳ ಭವಿಷ್ಯವನ್ನು ಸಮಾವೇಶವು ನಿರ್ಧರಿಸಲಿದೆ ಎಂಬುದು ಸ್ಪಷ್ಟವಾಗಿತ್ತು. ಜಾಗತಿಕ ವ್ಯಾಪಾರ ವ್ಯವಸ್ಥೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಹೆಚ್ಚು ಒಳಗೊಳ್ಳಲು ದೋಹಾ ಶೃಂಗವು ಬಹಳ ಮುಖ್ಯವಾಗಿದ್ದರೂ, ಕೆಲವು ಅಭಿವೃದ್ಧಿ ಹೊಂದಿದ ದೇಶಗಳು ದೋಹಾ ಅಭಿವೃದ್ಧಿ ಕಾರ್ಯನೀತಿ(ದೋಹಾ ಡೆವಲಪ್ಮೆಂಟ್ ಅಜೆಂಡಾ, ಡಿಡಿಎ)ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ನೈರೋಬಿ ಸಮಾವೇಶದ ನಂತರವೂ ಡಿಡಿಎ ಮುಂದುವರಿಯಬೇಕು ಮತ್ತು ಡಿಡಿಎ ಅಂತ್ಯಗೊಳ್ಳುವವರೆಗೆ ಡಬ್ಲ್ಯುಟಿಒ ಕಾರ್ಯನೀತಿಯೊಳಗೆ ಹೊಸ ವಿಷಯಗಳನ್ನು ಸೇರ್ಪಡೆಗೊಳಿಸಬಾರದು ಎನ್ನುವುದು ಭಾರತದ ನಿಲುವು ಆಗಿತ್ತು. ದೋಹಾ ಸುತ್ತಿನ ಮಾತುಕತೆಗಳ ಭವಿಷ್ಯ ಕುರಿತು ಸದಸ್ಯ ರಾಷ್ಟ್ರಗಳು “ಬೇರೆಯದೇ ಆದ ದೃಷ್ಟಿಕೋನ’ ವನ್ನು ಹೊಂದಿವೆ ಎಂದು ನೈರೋಬಿ ಸಚಿವರ ಘೋಷಣೆ ಒಪ್ಪಿಕೊಂಡಿದೆ. ಆದರೆ, “ದೋಹಾದ ಉಳಿದ ವಿಷಯಗಳ ಕುರಿತ ಸಂಧಾನ ಪ್ರಕ್ರಿಯೆಯನ್ನು ಮುಂದುವರಿಸಲು ಎಲ್ಲ ಸದಸ್ಯರೂ ತಮ್ಮ ಬದ್ಧತೆಯನ್ನು ತೋರಿಸಬೇಕು’ ಎಂದು ಹೇಳಿದೆ.

ನೈರೋಬಿ ನಂತರದ ದೋಹಾ ಅಭಿವೃದ್ಧಿ ಕಾರ್ಯನೀತಿಯ ಮುಂದುವರಿಕೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಹೊಂದಿದ ದೇಶಗಳ ವಿರೋಧದ ಹಿನ್ನೆಲೆಯಲ್ಲಿ ಭಾರತವು ಸಂಧಾನ ನಡೆಸಿತು. ಬಾಲಿ ಸಚಿವ ಸಮಾವೇಶ ಹಾಗೂ ಸರ್ವ ಸದಸ್ಯರ ಮಂಡಳಿಯ ನಿರ್ಧಾರಗಳಿಗೆ ಅನುಗುಣವಾಗಿ, ಆಹಾರ ಸುರಕ್ಷತೆ ಉದ್ದೇಶಕ್ಕಾಗಿ ಸಾರ್ವಜನಿಕ ಸಂಸ್ಥೆಗಳು ಧಾನ್ಯ ಶೇಖರಣೆಗೆ ಸಮ್ಮತಿಯನ್ನು ಪಡೆಯಿತು. ಸದಸ್ಯ ರಾಷ್ಟ್ರಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಬದ್ಧತೆ ತೋರಿಸಬೇಕೆಂದು ಇದು ಹೇಳುತ್ತದೆ.

ಅದೇ ರೀತಿ, ದೋಹಾ ಅಧ್ಯಾದೇಶದಲ್ಲಿ ಹೇಳಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳು ಕೃಷಿ ವಿಶೇಷ ಸುರಕ್ಷತಾ ವ್ಯವಸ್ಥೆ(ಎಸ್ಎಸ್ಎಂ)ಯನ್ನು ಹೊಂದುವ ಹಕ್ಕು ಹೊಂದಿವೆ ಎಂಬುದನ್ನು ಗುರುತಿಸಬೇಕೆಂಬ ಅತಿ ಮುಖ್ಯ ವಿಷಯಕ್ಕೆ ಸಂಬಂಧಿಸಿದಂತೆ ಭಾರತವು ಸಂಧಾನದ ಮೂಲಕ ನಿರ್ಧಾರವೊಂದಕ್ಕೆ ಒಪ್ಪಿಗೆ ಪಡೆಯಿತು. ಕೃಷಿ ವಿಶೇಷ ಸುರಕ್ಷತಾ ವ್ಯವಸ್ಥೆ ಸಮಿತಿಯ ವಿಶೇಷ ಅಧಿವೇಶನದಲ್ಲಿ ಈ ಕುರಿತು ಸದಸ್ಯರು ಸಂಧಾನವನ್ನು ಮುಂದುವರಿಸಬಹುದು. ಡಬ್ಲ್ಯುಟಿಒ ಸಾಮಾನ್ಯ ಸಭೆಯು ಈ ಸಂಧಾನಗಳ ಪ್ರಗತಿಯನ್ನು ನಿಯತವಾಗಿ ಪರಿಶೀಲಿಸಲಿದೆ. ದೋಹಾ ಸುತ್ತಿನ ಭವಿಷ್ಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಇದೊಂದು ಬಹು ಮುಖ್ಯ ನಿರ್ಧಾರವಾಗಿದೆ.

ಅಭಿವೃದ್ಧಿಶೀಲ ದೇಶಗಳಿಗೆ ವಿಶೇಷ ಹಾಗೂ ಭೇದಾತ್ಮಕ ವ್ಯವಹಾರ ರಿಯಾಯಿತಿಯನ್ನು ಅಂದರೆ, ಕೃಷಿ ಉತ್ಪನ್ನಗಳ ರಫ್ತಿಗೆ ಮಾರುಕಟ್ಟೆ ಸಬ್ಸಿಡಿ ನೀಡಿಕೆ ಮತ್ತು ಸಾಗಣೆಯನ್ನು ನಿರ್ಬಂಧಿಸಲು ಹೆಚ್ಚು ಕಾಲಾವಕಾಶ ನೀಡುವಿಕೆಯನ್ನು ಉಳಿಸಿಕೊಂಡು, ಕೃಷಿ ಉತ್ಪನ್ನಗಳ ರಫ್ತು ಸಬ್ಸಿಡಿಗಳನ್ನು ತೆಗೆದುಹಾಕಲು ಸದಸ್ಯರು ಸಮ್ಮತಿಸಿದರು. ಬೇರೆ ರಫ್ತು ಕಾರ್ಯನೀತಿಗಳನ್ನು ಛದ್ಮವೇಷದ ಸಬ್ಸಿಡಿಯಂತೆ ಬಳಸುವುದನ್ನು ತಡೆಯುವುದು ಕೂಡ ಸಚಿವರುಗಳ ನಿರ್ಧಾರಗಳಲ್ಲಿ ಸೇರಿದೆ. ಕೃಷಿ ಉತ್ಪನ್ನಗಳ ರಫ್ತುದಾರರಿಗೆ ಆರ್ಥಿಕ ಬೆಂಬಲಕ್ಕೆ ಮಿತಿ ಹೇರುವುದು, ಕೃಷಿ ಉತ್ಪನ್ನಗಳ ವಹಿವಾಟಿನಲ್ಲಿ ತೊಡಗುವ ರಾಜ್ಯದ ಸಂಸ್ಥೆಗಳ ನಿಯಮಗಳು ಮತ್ತು ಆಹಾರ ಅನುದಾನವು ದೇಶಿ ಉತ್ಪಾದನೆ ಮೇಲೆ ಋಣಾತ್ಮಕ ಪರಿಣಾಮ ಬೀರದಂತೆ ನೋಡಿಕೊಳ್ಳುವುದು- ಇದರಲ್ಲಿ ಸೇರಿದೆ. ಈ ನಿಯಮಗಳನ್ನು ಅಳವಡಿಸಿ ಕೊಳ್ಳಲು ಅಭಿವೃದ್ಧಿಶೀಲ ದೇಶಗಳಿಗೆ ಹೆಚ್ಚು ಕಾಲಾವಕಾಶ ನೀಡಲಾಗಿದೆ.

ಔಷಧ ಉತ್ಪಾದನೆ ಕ್ಷೇತ್ರದಲ್ಲಿ ಪೇಟೆಂಟ್ಗಳನ್ನು “ಸದಾ ಹೊಸದಾಗಿಸುವಿಕೆ'(ಎವರ್ಗ್ರೀನಿಂಗ್)ಯನ್ನು ತಡೆಯುವ ನಿಯಮವನ್ನು ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ನಿರ್ಧಾರವು ಜನರಿಕ್ ಔಷಧಗಳು ಲಭ್ಯವಾಗುವಂತೆ ಹಾಗೂ ಅವುಗಳ ಬೆಲೆಯನ್ನು ಕೈಗೆಟಕುವಂತೆ ಕಾಯ್ದುಕೊಳ್ಳಲು ನೆರವಾಗುತ್ತದೆ.

ಕನಿಷ್ಠ ಅಭಿವೃದ್ಧಿ ಹೊಂದಿದ ದೇಶ(ಎಲ್ಡಿಸಿ)ಗಳ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳು ಅಂದರೆ, ಉತ್ಪನ್ನಗಳ ಮೂಲ ಕುರಿತ ರಿಯಾಯಿತಿಗಳ ವರ್ಧನೆ ಹಾಗೂ ಎಲ್ಡಿಸಿ ಸೇವಾ ಪೂರೈಕೆದಾರರಿಗೆ ರಿಯಾಯಿತಿ ನೀಡುವಿಕೆಯನ್ನು ಭಾರತ ಬೆಂಬಲಿಸಿತು. ಈ ಕ್ಷೇತ್ರಗಳಲ್ಲಿ ಭಾರತವು ಎಲ್ಡಿಸಿಗಳಿಗೆ ಈಗಾಗಲೇ ಹಲವು ರಿಯಾಯಿತಿಗಳನ್ನು ನೀಡುತ್ತಿದೆ.

ನೈರೋಬಿಯಲ್ಲಿ ಮೀನುಗಾರಿಕೆ ಸಬ್ಸಿಡಿಗಳ ನಿಯಮಗಳನ್ನು ಕುರಿತ ಸಂಧಾನಗಳು ನಡೆದವು. ಈ ವಿಷಯದಲ್ಲಿ ಸ್ಪಷ್ಟತೆ ಇಲ್ಲದ ಕಾರಣ, ಭಾರತ ಮಾತ್ರವಲ್ಲದೆ ಹಲವು ದೇಶಗಳು ಈ ಬಗ್ಗೆ ಅಭ್ಯಂತರ ಇರಿಸಿಕೊಂಡಿವೆ. ಭಾರತದ ವಿಷಯದಲ್ಲೂ ಇದು ನಿಜ. ಈ ವಿಷಯ ಕುರಿತ ಸಂಧಾನದಲ್ಲಿ ಯಾವುದೇ ಫಲಿತಾಂಶ ಬರಲಿಲ್ಲ. ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ದೇಶಗಳನ್ನು ಒಳಗೊಂಡ 53 ಡಬ್ಲ್ಯುಟಿಒ ಸದಸ್ಯರ ಗುಂಪು, 201 ಮಾಹಿತಿ ತಂತ್ರಜ್ಞಾನ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕಲು ಕಾಲಮಿತಿಯನ್ನು ನಿಗದಿಪಡಿಸಲು ಸಮ್ಮತಿಸಿತು. ಎಲ್ಲ ಡಬ್ಲ್ಯುಟಿಒ ಸದಸ್ಯರಿಗೆ ಈ ಉತ್ಪನ್ನಗಳ ಮಾರುಕಟ್ಟೆಗೆ ಸುಂಕರಹಿತ ಪ್ರವೇಶ ಲಭ್ಯವಿದೆ. ಈ ಒಪ್ಪಂದಕ್ಕೆ ಸಹಿ ಹಾಕದಿದ್ದರೂ, ಇದರ ಲಾಭ ಭಾರತಕ್ಕೆ ಲಭ್ಯವಾಗಲಿದೆ.

***