Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗಿಡಮೂಲಿಕೆಗಳ ವಲಯದಲ್ಲಿ ಸಹಕಾರ ತತ್ವದ ಕುರಿತು ಭಾರತ ಮತ್ತು ಸಾವೊ ಟೋಮ್ ನಡುವಿನ ಒಪ್ಪಂದಕ್ಕೆ ಸಚಿವ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಗಿಡಮೂಲಿಕೆಗಳ ವಲಯದಲ್ಲಿ ಸಹಕಾರ ತತ್ವದ ಕುರಿತು ಭಾರತ ಮತ್ತು ಸಾವೊ ಟೋಮ್ ನಡುವೆ ಒಪ್ಪಂದಕ್ಕೆ ಘಟನೋತ್ತರ ಅನುಮೋದನೆ ನೀಡಲಾಯಿತು. ಈ ಒಡಂಬಡಿಕೆಗೆ 2018ರ ಮಾರ್ಚ್ 14ರಂದು ಸಹಿ ಹಾಕಲಾಯಿತು.

ಹಿನ್ನೆಲೆ:

15ಕ್ಕೂ ಹೆಚ್ಚು ಕೃಷಿ ಹವಾಮಾನ ವಲಯಗಳನ್ನು ಹೊಂದಿರುವ ಭಾರತ ಜೀವವೈವಿಧ್ಯತೆಯಲ್ಲಿ ಇಡೀ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದೆ. 17,000 ದಿಂದ 18,000ದಷ್ಟು ಗಿಡಮೂಲಿಕೆಗಳು ಇದ್ದು, ಅವುಗಳಲ್ಲಿ ಸುಮಾರು 7,000ಕ್ಕೂ ಅಧಿಕ ಮೂಲಿಕೆಗಳು ಔಷಧಕ್ಕಾಗಿ ಆಯುರ್ವೇದ, ಯುನಾನಿ, ಸಿದ್ದ ಮತ್ತು ಹೋಮಿಯೋಪತಿ (ಆಯುಷ್ ವೈದ್ಯ ಪದ್ಧತಿ)ಯಡಿ ಬಳಕೆ ಮಾಡಲಾಗುತ್ತಿದೆ.

ಸುಮಾರು 1,178 ಬಗೆಯ ವೈದ್ಯಕೀಯ ಸಸಿಗಳು ಅಥವಾ ಗಿಡಮೂಲಿಕೆಗಳು ವ್ಯಾಪಾರ ನಡೆಯುತ್ತಿದ್ದು ಅವುಗಳಲ್ಲಿ 242 ಪ್ರಬೇಧಗಳ ಗಿಡಮೂಲಿಕೆಗಳ ವಾರ್ಷಿಕ ಬಳಕೆ ಪ್ರಮಾಣ 100 ಮೆಟ್ರಿಕ್ ಟನ್ ಗೂ ಅಧಿಕವಾಗಿದೆ. ಗಿಡಮೂಲಿಕೆಗಳು ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹರ್ಬಲ್ ಉದ್ಯಮಕ್ಕೆ ಪ್ರಮುಖ ಮೂಲಸಂಪನ್ಮೂಲ ಅಷ್ಟೇ ಅಲ್ಲ, ಅದು ಭಾರತದ ಜನಸಂಖ್ಯೆಯ ಬಹುದೊಡ್ಡ ವರ್ಗಕ್ಕೆ ಜೀವನೋಪಾಯ ಮತ್ತು ಆರೋಗ್ಯ ಭದ್ರತೆಯನ್ನು ಒದಗಿಸುತ್ತಿದೆ.

ಜಾಗತಿಕ ಮಟ್ಟದಲ್ಲಿ ಸಾಂಪ್ರದಾಯಿಕ ಮತ್ತು ಪರ್ಯಾಯ ಆರೋಗ್ಯ ರಕ್ಷಣಾ ಪದ್ಧತಿಗಳಿಗೆ ಭಾರೀ ಬೇಡಿಕೆ ಇದೆ. ಇದರ ಪರಿಣಾಮ ವಿಶ್ವ ಹರ್ಬಲ್ ವ್ಯಾಪಾರ ಗಾತ್ರ 120 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟಿದ್ದು, ಅದು 2050ರ ವೇಳೆಗೆ 7 ಟ್ರಿಲಿಯನ್ ಅಮೆರಿಕನ್ ಡಾಲರ್ ತಲುಪುವ ನಿರೀಕ್ಷೆ ಇದೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ಗಿಡಮೂಲಿಕೆಗಳು ಅದರಲ್ಲೂ ವಿಶೇಷವಾಗಿ ಎರಡೂ ದೇಶಗಳಲ್ಲಿ ಸಮಾನ ಭೌಗೋಳಿಕ ಹವಾಮಾನದಲ್ಲಿ ಉಷ್ಣವಲಯದ ಪ್ರದೇಶದಲ್ಲಿ ಸಿಗುವ ಮೂಲಿಕೆಗಳಿಗೆ ಹೆಚ್ಚಿನ ಬೇಡಿಕೆ ಇದೆ.

ವೈದ್ಯಕೀಯ ಮತ್ತು ಗಿಡಮೂಲಿಕೆಗಳ ವಲಯದಲ್ಲಿ ಆಯುಷ್ ಪದ್ಧತಿಗಳ ಉತ್ತೇಜನ ಮತ್ತು ಪ್ರಚಾರದ ಅಗತ್ಯತೆಯನ್ನು ಗಮನದಲ್ಲಿರಿಸಿಕೊಂಡು ಸಾವೊ ಟೋಮ್ ಮತ್ತು ನಮ್ಮ ರಾಷ್ಟ್ರದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಮ್ಮ ನಿಗದಿತ ಒಪ್ಪಂದದ ಕರಡಿನಂತೆ ಗಿಡಮೂಲಿಕೆಗಳ ವಲಯದಲ್ಲಿ ದೇಶ-ದೇಶಗಳ ನಡುವೆ ಸಹಕಾರ ಸಾಧಿಸುವ ಅಗತ್ಯತೆ ಇದ್ದು, ಆದನ್ನು ಸಾವೊ ಟೋಮ್ ಗಣರಾಜ್ಯದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.