ಗುಜರಾತಿನ ಅಹ್ಮದಾಬಾದಿನಲ್ಲಿ ಸಬರಮತಿ ಆಶ್ರಮದ ಶತಮಾನೋತ್ಸವ ಆಚರಣೆ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ ದ ಪಠ್ಯ
29 Jun, 2017
ದೇಶ, ವಿದೇಶಗಳಿಂದ ಬಂದು ಇಲ್ಲಿ ಹಾಜರಿರುವ ನನ್ನ ಪ್ರೀತಿಯ ಸಹೋದರ, ಸಹೋದರಿಯರೇ,
ಚರಿತ್ರೆಯನ್ನು ಮರೆತರೆ ಆಗುವ ವೆಚ್ಚವನ್ನು ನೀವು ತಿಳಿದುಕೊಳ್ಳಲು ಇಚ್ಚಿಸುವಿರಾದರೆ, ಏನು ಕಳೆದುಕೊಂಡಿದ್ದೇವೆ ಎಂಬುದರ ಮಹತ್ವವನ್ನು ತಿಳಿದುಕೊಳ್ಳಬೇಕು; ಯಾರಾದರೊಬ್ಬರು ಈ ವಿಷಯವನ್ನು ಅರ್ಥ ಮಾಡಿಕೊಳ್ಳಲು ಇಚ್ಚಿಸುವುದಾದರೆ, ಆಗ ನಾನು ಭಾವಿಸುತ್ತೇನೆ, ಅದನ್ನು ನಾವು ಶ್ರೀಮದ್ ರಾಜಚಂದ್ರ ಜೀ ಅವರ ವ್ಯಕ್ತಿತ್ವದಿಂದ ತಿಳಿದುಕೊಳ್ಳಬಹುದು. ನಾವು ಅವರನ್ನು ಮರೆತಿರುವುದರಿಂದ ಕಳೆದುಕೊಂಡಿರುವುದು ಎಷ್ಟು ಎಂಬುದು ನಮಗೆ ಆಗ ಅರ್ಥವಾಗಬಹುದು. ಇಂದು ಶ್ರೀಮದ್ ರಾಜಚಂದ್ರ ಜೀ ಅವರ 150 ನೇ ಪುಣ್ಯದಿನದ ಸಂದರ್ಭ . ಪೂಜ್ಯ ಬಾಪೂಜಿ ಅವರಿಂದ ಕವಿಶ್ರೀ ಎಂದು ಕರೆಯಲ್ಪಟ್ಟವರು ಅವರು. ಮತ್ತು ಇದು ನೂರಾರು ವರ್ಷಗಳ ಗುಲಾಮಗಿರಿಯಿಂದ ವಿಮೋಚನೆ ಪಡೆಯಲು ಅಂತಃಶಕ್ತಿಯನ್ನು ಜಾಗೃತಗೊಳಿಸಿದ ಈ ಪುಣ್ಯ ಭೂಮಿಯ ಸಬರಮತಿ ಆಶ್ರಮದ ಶತಮಾನೋತ್ಸವ ವರ್ಷ.
2017 ರ ವರ್ಷ ಹಲವು ಕಾರಣಗಳಿಂದಾಗಿ ಬಹು ಮುಖ್ಯವಾದುದು. ಮೊದಲ ಸತ್ಯಾಗ್ರಹದ ಶತಮಾನೋತ್ಸವದ ವರ್ಷವಿದು: ಈ ಸತ್ಯಾಗ್ರಹವನ್ನು 100 ವರ್ಷಗಳ ಹಿಂದೆ ಚಂಪಾರಣ್ ನಲ್ಲಿ ಆರಂಭಿಸಲಾಗಿತ್ತು. ಪೂಜ್ಯ ಬಾಪು ಅವರು ಆಫ್ರಿಕಾದಿಂದ 1915 ರಲ್ಲಿ ಭಾರತಕ್ಕೆ ಮರಳಿ ಬಂದರು ಮತ್ತು 2015 ರಲ್ಲಿ ಅದರ ಶತಮಾನೋತ್ಸವವಾಯಿತು. ಆಗ ಭಾರತ ಸರಕಾರ ಈ ಶತಮಾನೋತ್ಸವ ವರ್ಷವನ್ನು ಗುಜರಾತಿನಲ್ಲಿ ಮಾತ್ರವೇ ಆಚರಿಸಿತು. ಗಾಂಧಿನಗರದಲ್ಲಿ ಮಹಾತ್ಮಾ ದೇವಾಲಯದಲ್ಲಿ ವಿಶ್ವದ ವಿವಿಧೆಡೆ ಇರುವ ಭಾರತೀಯರನ್ನು ಆಹ್ವಾನಿಸಿ ಇದನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಮೂಲಕ ಗಾಂಧೀಜಿ ಅವರ ಸಂಪರ್ಕ ಹೊಂದಿದ್ದ ಹಲವು ಮಂದಿ ಗಾಂಧೀತತ್ವದ ಅನುಯಾಯಿಗಳು, ಶ್ರೀಮದ್ ರಾಜಚಂದ್ರ ಹೆಸರಿನ ಜತೆಗೂ ನಿಕಟ ಸಂಪರ್ಕ ಹೊಂದಿದ್ದವರು ಇದ್ದರು, ಅವರಿಗೆಲ್ಲ ಶ್ರೀಮದ್ ರಾಜಚಂದ್ರ ಅವರ ಹೆಸರು ಚಿರಪರಿಚಿತವಾಗಿತ್ತು. ಇಷ್ಟೆಲ್ಲದರ ನದುವೆಯೂ ಶ್ರೀಮದ್ ರಾಜಚಂದ್ರ ಅವರ ಹೆಸರು ಗೊತ್ತಿಲ್ಲದ ಒಂದು ತಲೆಮಾರು ಇದೆ. ಇದು ನಮ್ಮ ದೋಷ, ಇಂತಹ ದೊಡ್ಡ ಸಾಧಕ ವ್ಯಕ್ತಿಗಳ ಬಗ್ಗೆ ತಲೆಮಾರಿನಿಂದ ತಲೆಮಾರಿಗೆ ನೆನಪಿಸುವ ಕೆಲಸ ಮಾಡಬೇಕಿತ್ತು. ನಾವು ಆ ದಾರಿ ಬಿಟ್ಟೆವು, ಅದರಿಂದ ನಾವು ಅವರನ್ನು ಮರೆತು ಬಿಟ್ಟೆವು. ದೊಡ್ಡ ದೇಶದ ದೊಡ್ದ ವ್ಯಕ್ತಿಗಳನ್ನು, ಈ ದೇಶದ ಹೆಮ್ಮೆಯ ಪುತ್ರರನ್ನು ಸ್ಮರಿಸುವಂತಹ ನಿಟ್ಟಿನಲ್ಲಿ ನಮ್ಮ ಸರಕಾರ ಪ್ರಯತ್ನಗಳನ್ನು ಮಾಡಿದೆ. ನಮ್ಮ ದೇಶದ ದೊಡ್ದ ಪರಂಪರೆ ಮತ್ತು ದೇಶದ ಬೃಹತ್ ಇತಿಹಾಸವನ್ನು ನೆನಪಿಸಿಕೊಳ್ಳುವ ಮೂಲಕ ನಾವು ನಮ್ಮ ಇತಿಹಾಸದ ಬೇರುಗಳಿಗೆ ಅಂಟಿಕೊಳ್ಳುವಂತೆ ಮಾಡುವುದು ಮತ್ತು ಹೊಸ ಚರಿತ್ರೆ ನಿರ್ಮಿಸುವ ಉದ್ದೇಶದೊಂದಿಗೆ ಮುಂದೆ ಸಾಗುವುದು ನಮ್ಮ ಇರಾದೆಯಾಗಿದೆ.
ಸಬರಮತಿ ಆಶ್ರಮದ ಶತಮಾನೋತ್ಸವ. ಕೆಲವೊಮ್ಮೆ ನನಗೆ ಅನಿಸುತ್ತದೆ: ಇಂದಿನ ಜ್ವಲಂತ ಪರಿಸ್ಥಿತಿಯಲ್ಲಿ ಮಾನವೀಯತೆಯನ್ನು ಸಂತೈಸುವ ರೀತಿಯಲ್ಲಿ ಗಾಂಧೀಜಿಯವರನ್ನು ಜಗತ್ತಿಗೆ ಪರಿಚಯಿಸುವುದು ನಮಗೆ ಸಾಧ್ಯವಾಗಲಿಲ್ಲ ಎಂದು. ಇಷ್ಟಾದರೂ ಬಹಳ ತಡವೇನೂ ಆಗಿಲ್ಲ , ಕೆಲವೊಮ್ಮೆ ನಾನು ಅಂದುಕೊಳ್ಳುತ್ತೇನೆ, ನನಗೆ ಗೊತ್ತಿಲ್ಲ, ಆದರೂ ಒಬ್ಬ ವ್ಯಕ್ತಿಗೆ ಅವರ ಎಲ್ಲಾ ಆಶಯಗಳನ್ನು ಈಡೇರಿಸಲು ಸಾಧ್ಯವಾಗದು, ಆದಾಗ್ಯೂ ಆಶಯಗಳನ್ನು ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ. ಕೆಲವೊಮ್ಮೆ ನನಗನಿಸುತ್ತದೆ, ಮೊದಲನೇ ಮತ್ತು ಎರಡನೇ ಮಹಾಯುದ್ದದ ಹಿನ್ನೆಲೆಯಲ್ಲಿ ಶಾಂತಿ ಸ್ಥಾಪನೆಯ ಉದ್ದೇಶದೊಂದಿಗೆ ವಿಶ್ವಸಂಸ್ಥೆ ಸ್ಥಾಪನೆಯಾಯಿತು, ಆದರೆ ಗಾಂಧೀಜಿ ಅವರನ್ನು ಶಾಂತಿಯ ದೂತ ಎಂದು ಜನಮಾನಸದಲ್ಲಿ ಸ್ಥಾಪಿಸುವುದರಲ್ಲಿ ನಾವು ಯಶಸ್ವಿಯಾಗಿದ್ದೇವೆಯೇ, ಹಾಗಿದ್ದರೆ ವಿಶ್ವಸಂಸ್ಥೆಯ ಮೊದಲ ಮಹಾಪ್ರಧಾನ ಕಾರ್ಯದರ್ಶಿಗಳು ಯಾರೇ ಇರಲಿ, ಅವರು ಅಧಿಕಾರ ಸ್ವೀಕರಿಸಿದ ಬಳಿಕ ಭಾರತಕ್ಕೆ ಬರಬೇಕಿತ್ತು ಮತ್ತು ಹೃದಯಕುಂಜದಲ್ಲಿ ಕೆಲ ಕಾಲ ಕಳೆಯಬೇಕಿತ್ತು ಮತ್ತು ಬಾಪೂಜಿ ಬದುಕಿದ ಮತ್ತು ಪಟ್ಟುಬಿಡದೆ ದುಡಿದ ಸಬರಮತಿ ನದಿಯ ದಂಡೆಯಲ್ಲಿ ವಿಶ್ವಶಾಂತಿಗೆ ಸಂಬಂಧಿಸಿದಂತೆ ಸ್ವಲ್ಪ ಸ್ಪೂರ್ತಿಯನ್ನು ಪಡೆದುಕೊಂಡು ಮರಳಬೇಕಿತ್ತು. ಆದರೆ ನನಗೆ ನನ್ನ ಅಂತರಾತ್ಮ ಹೇಳುತ್ತಿದೆ- ಇದು ಇಂದು ಆಗದಿದ್ದರೂ, ಭವಿಷ್ಯದಲ್ಲಿ ಖಂಡಿತಾ ಆಗುತ್ತದೆ. ನಾವು ಆ ರೀತಿ ಯಲ್ಲಿ ನಮ್ಮ ದೇಶವನ್ನು ನೋಡಬೇಕು. ನಾವು ಆ ಶಕ್ತಿಯನ್ನು ಪರಿಭಾವಿಸಬೇಕು. ಮತ್ತು ಸತತವಾಗಿ ಈ ಹೆಮ್ಮೆಯೊಂದಿಗೆ ವಿಶ್ವಕ್ಕೆ ನಾವು ಅಂಟಿಕೊಳ್ಳುವ ಯತ್ನ ಮಾಡಬೇಕು.
ಶ್ರೀಮದ್ ರಾಜಚಂದ್ರ ಜೀ ಬಗ್ಗೆ ಗುರುದೇವ್ ರಾಕೇಶ್ ಜೀ ಹೇಳುತ್ತಿದ್ದರು, ವಿಶ್ವದ ಪ್ರಖ್ಯಾತರು ಗಾಂಧೀಜಿ ಅವರನ್ನು ಭೇಟಿಯಾಗುತ್ತಿದ್ದರು. ಅವರ ಜತೆ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದರು. 6 ರಿಂದ 6.5 ಅಡಿ ಎತ್ತರದ ಜನರು, ಬಿಳಿಯರು, ಹೊಳೆಯುವ ಚರ್ಮದ ಜನರು ಅವರನ್ನು ಭೇಟಿಯಾಗುತ್ತಿದ್ದರು. ಇಷ್ಟಾಗಿಯೂ ಅವರಿಗೆ ಗಾಂಧೀಜಿ ಅವರ ಮನಸ್ಸಿನಲ್ಲಿ ತಮ್ಮ ಛಾಪನ್ನು ಮೂಡಿಸುವುದು ಸಾಧ್ಯವಾಗುತ್ತಿರಲಿಲ್ಲ ಮತ್ತು ಶ್ರೀಮದ್ ರಾಜಚಂದ್ರ ಜೀ , ಓರ್ವ ಸಾಮಾನ್ಯ ಸಪೂರ ದೇಹದ ವ್ಯಕ್ತಿ, ಸಾಧಾರಣ ಬದುಕು ನಡೆಸುತ್ತಿದ್ದ ಸಾಮಾನ್ಯ ವ್ಯಕ್ತಿತ್ವದ ವ್ಯಾಪಾರಿ, ತನ್ನ ಅಂಗಡಿಯಲ್ಲಿ ಸರಕುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿ, ಹೆಚ್ಚಿನ ವಯಸ್ಸಿನ ಅಂತರವಿಲ್ಲದ, ಬರೇ ಎರಡುವರೆ ವರ್ಷದ ಅಂತರ, ಇಂತಹ ವ್ಯಕ್ತಿತ್ವ ಗಾಂಧೀಜಿಯವರ ಇಡೀ ವ್ಯಕ್ತಿತ್ವವನ್ನು ಆವರಿಸಿಕೊಂಡಂತಹ ದೊಡ್ಡತನ ಯಾವುದು. ನಾನು ಶ್ರೀಮದ್ ರಾಜಚಂದ್ರ ಜೀ ಅವರ ಹುಟ್ಟೂರು ಬವಾನಿಯಕ್ಕೆ ಭೇಟಿ ನೀಡುವ ಅದೃಷ್ಟವಂತನಾಗಿದ್ದೆ. ಅದು ಪೂರ್ವಜರ ಊರು ಮತ್ತು ಆ ಸ್ಥಳವನ್ನು ಕಾಪಾಡಿಕೊಂಡು ಬಂದಿರುವ ಬಗ್ಗೆ ನಾನು ಅವರ ಕುಟುಂಬದ ಸದಸ್ಯರಿಗೆ ಕೃತಜ್ಞತೆ ಹೇಳಬಯಸುತ್ತೇನೆ. ಅಲ್ಲಿಗೆ ಭೇಟಿ ನೀಡಿದ ಬಳಿಕ ನಾನು ಶಿಕ್ಷಕರಿಗೆ, ಅವರು ಸೌರಾಷ್ಟ್ರಕ್ಕೆ ಹೋಗುವುದಿದ್ದರೆ ಅವರು ಬವಾನಿಯಾಕ್ಕೆ ಹೋಗಬೇಕು ಎಂದು ಹೇಳುತ್ತಿದ್ದೆ. ನಾವು ದೇವಾಲಯಗಳಿಗೆ ಭೇಟಿ ನೀಡಿದಾಗ ಬೇರೆ ರೀತಿಯ ಕಂಪನಗಳನ್ನು ಅನುಭವಿಸುತ್ತೇವೆ, ಅದು ಬೇರೆ ಅನುಭವ.ನಾನು ಅನುಭವಿಸಿದಂತಹದನ್ನು ನೀವೂ ಅನುಭವಿಸುತ್ತೀರಿ. ಬವಾನಿಯಾದಲ್ಲಿ ಶ್ರೀಮದ್ ರಾಜಚಂದ್ರ ಜೀ ಅವರಿಗೆ ಸ್ಮಾರಕವಿದೆ, ಅದು ದೇವಾಲಯವಲ್ಲ. ಆದರೆ ಆ ಪ್ರದೇಶಕ್ಕೆ ಭೇಟಿ ನೀಡಿದ ಕೂಡಲೇ ನಿಮಗೆ ಆಧ್ಯಾತ್ಮಿಕ ಜಾಗೃತಿಯ ಕಂಪನಗಳ ಅನುಭವ ಆಗುತ್ತದೆ.
ನಮ್ಮ ದೇಶದಲಿ ಹಲವು ವಿಷಯಗಳಲ್ಲಿ ಪಿ.ಎಚ್ ಡಿ.ಗಳು ನಡೆಸಲ್ಪಡುತ್ತವೆ, ಹಲವು ದೊಡ್ಡ ವ್ಯಕ್ತಿಗಳ/ವ್ಯಕ್ತಿತ್ವಗಳ ಕವನಗಳು, ಬರಹಗಳ ಬಗ್ಗೆ ಇದನ್ನು ನಡೆಸಲಾಗುತ್ತದೆ. ಆದರೆ ಶ್ರೀಮದ್ ರಾಜಚಂದ್ರ ಜೀ ಅವರ ೧೫೦ನೇ ವರ್ಷವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ನಮ್ಮ ದೇಶದ ವಿಶ್ವವಿದ್ಯಾಲಯಗಳು ಅದರಲ್ಲೂ ಗುಜರಾತ್ ವಿಶ್ವವಿದ್ಯಾಲಯ ಶ್ರೀಮದ್ ರಾಜಚಂದ್ರ ಜೀ ಅವರ ಬೋಧನೆ ಮತ್ತು ಬರಹಗಳ ಬಗ್ಗೆ ಯಾಕೆ ಪಿ.ಎಚ್.ಡಿ. ನಡೆಸಿಲ್ಲ ಎಂಬುದನ್ನು ನಾನು ತಿಳಿಯಲಿಚ್ಚಿಸುತ್ತೇನೆ. ಗಾಂಧೀಜಿ ಅವರ ಜೀವನ ಮತ್ತು ಇತರ ಎಲ್ಲಾ ಕಾರ್ಯಚಟುವಟಿಕೆಗಳ ಬಗ್ಗೆ ಶ್ರೀಮದ್ ರಾಜಚಂದ್ರ ಜೀ ಅವರು ಬರೆದಿರುವ ಪತ್ರಗಳ ಪ್ರಭಾವ ಏನು? ಮತ್ತು ನೋಡಿ, ಅಲ್ಲಿ ಅವರ ವಯಸ್ಸು ಮತ್ತು ಗಾಂಧಿಜೀ ಅವರ ವಯಸ್ಸಿನ ನಡುವೆ ದೊಡ್ಡ ಅಂತರ ಇರಲಿಲ್ಲ. ಶ್ರೀಮದ್ ರಾಜಚಂದ್ರ ಜೀ ಅವರು ಜೈನ ಸಂಪ್ರದಾಯದ ಅನುಸಾರ ಬೆಳೆದಿದ್ದರು, ಇದೆಲ್ಲದರ ಹೊರತಾಗಿ, ಗಾಂಧೀಜಿ ಅವರ ಸರಳತೆಯತ್ತ ನೋಡಿ, ಇದಲ್ಲದೆ ಅವರೊಬ್ಬ ಬ್ಯಾರಿಷ್ಟರ್, ಆಫ್ರಿಕಾದಲ್ಲಿ ಬೃಹತ್ ಚಳವಳಿಯನ್ನು ಯಶಸ್ವಿಯಾಗಿ ಸಂಘಟಿಸಿ ಭಾರತಕ್ಕೆ ಬಂದವರು, ಭಾರತದ ದೊಡ್ದ ದೊಡ್ಡ ರಾಜಕಾರಣಿಗಳು ಅವರನ್ನು ಭೇಟಿ ಮಾಡುತ್ತಿದ್ದರು. ಅವರು ತಮ್ಮ ಹೆಸರಿನ ಮಹತ್ವವನ್ನು ಅದಾಗಲೇ ಸ್ಥಾಪಿಸಿಕೊಂಡಿದ್ದರು. ಇದರ ಹೊರತಾಗಿಯೂ ಅವರು, ವಯಸ್ಸಿನ ವ್ಯತ್ಯಾಸ ಇಲ್ಲದಿದ್ದರೂ ಅವರು ತಮ್ಮದೇ ವಯೋಮಾನದ , ಸರಳ ಜೀವನ ನಡೆಸುತ್ತಿದ್ದ ವ್ಯಕ್ತಿಗೆ ಪತ್ರ ಬರೆದು ತಮ್ಮ ಆಂತರಿಕ ಪ್ರಶ್ನೆಗಳಿಗೆ ಶ್ರೀಮದ್ ರಾಜಚಂದ್ರ ಜೀ ಅವರಿಂದ ಉತ್ತರ ಪಡೆಯುತ್ತಿದ್ದರು. ಶ್ರೀಮದ್ ರಾಜಚಂದ್ರ ಜೀ ಅವರು ತಮ್ಮ ಅಧ್ಯಾತ್ಮಿಕ ಜ್ಞಾನದಿಂದ ಅವಕ್ಕೆ ಪತ್ರದಲ್ಲಿ ಉತ್ತರ ಕೊಡುತ್ತಿದ್ದರು. ಆ ಪತ್ರಗಳಿಂದ ಬಾಪೂಜಿ ಮತ್ತು ಶ್ರೀಮದ್ ರಾಜಚಂದ್ರ ಜೀ ಅವರ ಆ ಕಾಲವನ್ನು ತಿಳಿದುಕೊಳ್ಳಬಹುದು, ಗಾಂಧೀಜಿಯವರ ಯೋಚನೆ/ಚಿಂತನೆಗಳನ್ನು ತಿಳಿದುಕೊಳ್ಳಬಹುದು, ಅವರು ತಮ್ಮ ಅಂತಃಶಕ್ತಿಯ ಬಗ್ಗೆ ಎಷ್ಟು ಚಿಂತಿತರಾಗಿದ್ದರೆಂಬುದನ್ನು ತಿಳಿದುಕೊಳ್ಳಬಹುದು, ಸ್ವಾತಂತ್ರ್ಯ ಚಳವಳಿಯಂತಹ ದೊಡ್ಡ ಆಂದೋಲನದ ನೇತೃತ್ವ ವಹಿಸಿದ್ದ ವ್ಯಕ್ತಿ ಶ್ರೀಮದ್ ರಾಜಚಂದ್ರ ಜೀ ಅವರಲ್ಲಿ ಏನು ಮಾಡಬೇಕೆಂದು ಕೇಳುತ್ತಿದ್ದರು.
ನಮ್ಮ ಹೊಸ ಜನಾಂಗ ಇದನ್ನೆಲ್ಲ ತಿಳಿದುಕೊಂಡಿಲ್ಲ. ಆದ್ದರಿಂದ ಸಬರಮತಿ ಆಶ್ರಮದ ಶತಮಾನೋತ್ಸವ ಆಚರಿಸುವಾಗ ಗುಜರಾತಿಗೆ ಪ್ರವಾಸ ಬರುವ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ನಾನು ನೀವು ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ. ಆದರೆ ನೀವು ಸಬರಮತಿ ಆಶ್ರಮದಲ್ಲಿ ಕೆಲಕಾಲ ಕಳೆಯಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿ ಮತ್ತು ಅವರನ್ನು ಬವಾನಿಯಾಕ್ಕೆ ಕರೆದು ಕೊಂಡು ಹೋಗಿ ನಮ್ಮ ದೇಶದಲ್ಲಿ ಇತ್ತೀಚಿನ ಸಮಯದಲ್ಲಿ ಎಂತಹ ದೊಡ್ಡ ವ್ಯಕ್ತಿಗಳು ಹುಟ್ಟಿದ್ದಾರೆ ಎಂಬುದನ್ನು ತೋರಿಸಿ. ಇದು ಪ್ರಾಚೀನ ಋಷಿ ಮುನಿಗಳ ಕಾಲದಲ್ಲಿ ನಡೆದುದಲ್ಲ. ಗುರುದೇವ್ ರಾಕೇಶ್ ಜೀ ಅವರು ಜ್ಞಾನ ಪಿಪಾಸುಗಳು, ಕೆಲಸ ಮಾಡುವವರು. ಅವರ ಚಿಂತನೆಗಳು ಶ್ರೀ ಲಾಲ್ ಚಂದ್ರಾ ಜೀ ಅವರಿಂದ ಪ್ರೇರಣೆ ಪಡೆದಂತಹವು ಮತ್ತು ಅವರ ಬದುಕು ಭಾರತದ ಅತ್ಯಂತ ದುರ್ಗಮ ಹಳ್ಳಿಗಳಲ್ಲಿ ಬದುಕುತ್ತಿರುವ ಜನರ ಸೇವೆಗೆ ಮುಡಿಪಾಗಿದೆ. ಅವರ ದೊಡ್ಡ ಸಂಖ್ಯೆಯ ಅನುಯಾಯಿಗಳು ಅವರ ಉಪದೇಶಗಳನ್ನು ಟೆಲಿವಿಷನ್ ಗಳ ಮೂಲಕ ವಿಶ್ವದಾದ್ಯಂತೆ ನೋಡುವುದನ್ನು ನಾನೂ ಕಂಡಿದ್ದೇನೆ.
ನಾನು ನೆದರ್ಲ್ಯಾಂಡಿನಿಂದ ಹಿಂತಿರುಗಿ ಬಂದಿದ್ದೇನಷ್ಟೇ, ಮೊನ್ನೆ ನಾನು ನೆದರ್ಲ್ಯಾಂಡಿನಲ್ಲಿದ್ದೆ. ನಾನು ಎರಡು ಹೊಸ ಸಂಗತಿಗಳ ಬಗ್ಗೆ ತಿಳಿದುಕೊಂಡೆ. ಮೊದಲನೇಯದ್ದು, ಭಾರತದ ಬಳಿಕ ರಸ್ತೆಗಳಿಗೆ ಗಾಂಧೀಜಿಯವರ ಹೆಸರನ್ನು ಇಟ್ಟ ದೇಶಗಳಲ್ಲಿ ನೆದರ್ಲ್ಯಾಂಡಿಗೆ ವಿಶ್ವದಲ್ಲಿ ಎರಡನೇ ಸ್ಥಾನ. ಇದೊಂದು ಹೊಸಾ ಅನುಭವ. ಎರಡನೇಯದಾಗಿ ಬೃಹತ್ ಸಂಖ್ಯೆಯಲ್ಲಿ ಅಲ್ಲಿ ಸೂರಿ ಹೆಸರಿನವರು ನೆಲೆಗೊಂಡಿದ್ದಾರೆ. ಅವರೆಲ್ಲ ಬಹು ಸಂಖ್ಯೆಯಲ್ಲಿ ಡಚ್ ರಾಷ್ಟ್ರೀಯರಾಗಿದ್ದಾರೆ. ಮತ್ತು ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ನೆಲೆ ನಿಂತ ಯುವ ಮಾಹಿತಿ ತಂತ್ರಜ್ಞರಿದ್ದಾರೆ. ಇವೆಲ್ಲದರ ನಡುವೆ ನನ್ನನ್ನು ಭೇಟಿಯಾದ ಡಜನ್ನಿನಷ್ಟು ಜನರು ಎರಡು ದಿನಗಳ ಬಳಿಕ ನಾನು ರಾಕೇಶ್ ಜೀ ಅವರನ್ನು ಭೇಟಿಯಾಗುತ್ತೇನೋ, ಇಲ್ಲವೋ ಎಂಬುದನ್ನು ವಿಚಾರಿಸಿದರು !. ಮತ್ತು ಅವರು ಇನ್ನೊಂದು ವಿಷಯವನ್ನೂ ಹೇಳಿದರು, ಅವರು ರಾಕೇಶ್ ಜೀ ಅವರ ಜತೆ ನಾನು ನಿಂತು ತೆಗೆಸಿಕೊಂಡ ಛಾಯಾಚಿತ್ರಗಳನ್ನು ಕಳುಹಿಸಿಕೊಡುವಂತೆ ಕೇಳಿದರು. ಇವೆಲ್ಲ ಸಾಮಾನ್ಯ ಸಂಗತಿಗಳಲ್ಲ. ಇವೆಲ್ಲವೂ ದೊಡ್ದ ಸಂಗತಿಗಳೇ. ನಾವು ಪೂಜ್ಯ ಬಾಪುವನ್ನು ನೆನಪಿಸಿಕೊಳ್ಳುವಾಗ, ಸಬರಮತಿ ಆಶ್ರಮ ನೆನಪಾಗುತ್ತದೆ, ಅವರು 12 ವರ್ಷ ಪಟ್ಟುಬಿಡದೆ ಕಠಿಣ ಸಾಧನೆ ನಡೆಸಿದರು. ಅವರ ದೃಢ ನಿರ್ಧಾರವನ್ನು ಗಮನಿಸಿ, ಅವರು ಪ್ರತಿಜ್ಞೆ ಮಾಡಿದರೆ ಸ್ವಾತಂತ್ರ್ಯ ಗಳಿಸದೆ ಹಿಂದೆ ಬರುವುದಕ್ಕೆ ಬದಲು ಸಾಯುವ ನಿರ್ಧಾರವನ್ನು ಗಟ್ಟಿ ಮಾಡುವಂತವರಾಗಿದ್ದರು. ಸಾಬರಮತಿ ಆಶ್ರಮವನ್ನು ಬಿಡುವಾಗ ಅವರ ನಿರ್ಧಾರ ಎಷ್ಟು ದೃಢವಾದುದಾಗಿರಬಹುದು?. ಸಬರಮತಿ ಆಶ್ರಮದಲ್ಲಿ ಅವರು 12 ವರ್ಷಗಳ ಕಾಲ ಸತತವಾಗಿ ಪಟ್ಟು ಬಿಡದೆ ಮಾಡಿದ ಸಾಧನೆ ಎಷ್ಟು ಶಕ್ತಿಶಾಲಿಯಾದುದಾಗಿರಬಹುದು. ಅವರು ಆಶ್ರಮದಿಂದ ಹೊರಟಾಗ ಅವರಿಗೆ ಬ್ರಿಟಿಷರನ್ನು ದೇಶದಿಂದ ಹೊರದೂಡುವ ಬಗ್ಗೆ ಬಲವಾದ ವಿಶ್ವಾಸವಿತ್ತು ಮತ್ತು ತನ್ನ ಜೀವಿತಾವಧಿಯಲ್ಲೇ ಭಾರತದ ಸ್ವಾತಂತ್ರ್ಯ ಸಾಧಿಸುವ ಭರವಸೆ ಇತ್ತು.
2019 ರಲ್ಲಿ ನಾವು ಪೂಜ್ಯ ಬಾಪು ಅವರ 150 ನೇ ವರ್ಷವನ್ನು ಆಚರಿಸಲಿದ್ದೇವೆ. ಅದನ್ನು ಈ ರೀತಿ ಆಚರಿಸಬೇಕೇ ?. ಇಲ್ಲ..ಪೂಜ್ಯ ಬಾಪು ಅವರ 150 ನೇ ವರ್ಷವನ್ನು ಸಾಮಾನ್ಯ ಮಾದರಿಯಲ್ಲಿ ಆಚರಿಸುವ ಹಕ್ಕು ಯಾವ ಭಾರತೀಯನಿಗೂ ಇಲ್ಲ. ಪೂಜ್ಯ ಬಾಪು ಅವರ 150 ನೇ ವರ್ಷ ಆಚರಣೆ ಎಂದರೆ ಗಾಂಧೀಜಿಯವರಂತೆ ವಚನ ತೆಗೆದುಕೊಳ್ಳುವುದು ಮತ್ತು ಆ ವಚನವನ್ನು ಯಾವುದೇ ರೀತಿಯಲ್ಲಾದರೂ ಈಡೇರಿಸುವುದು. ಬಾಪು ಅವರು ಹೋಲಿಕೆ ಮಾಡಲಾಗದಂತಹ ದೃಢ ನಿರ್ಧಾರವನ್ನು ಹೊಂದಿದ್ದರು. ನಾವು ಅಂತಹ ದೃಢ ನಿರ್ಧಾರವನ್ನು ಹೊಂದಿ ಮುನ್ನಡೆಯಬೇಕು. ಇಂದಿನಿಂದಲೇ ಆ ಕೈಂಕರ್ಯಕ್ಕೆ ಮುಂದಾಗಬೇಕು ಮತ್ತು ಇದರಿಂದಾಗಿ ನಾವು ಗಾಂಧಿ ಅವರ 150 ನೇ ವರ್ಷಾಚರಣೆ ಮಾಡುವಾಗ ಅಂತಹ ಸಂಗತಿಗಳನ್ನು ನಾವು ಸಾಧಿಸಿರಬೇಕು. ಅದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿರಬೇಕು. ನಾವು ಪೂಜ್ಯ ಬಾಪು ಅವರು ಕನಸು ಕಂಡ ರೀತಿಯಲ್ಲಿ ದೇಶವನ್ನು ನಿರ್ಮಿಸಲು ನಮ್ಮ ಕೊಡುಗೆಯನ್ನು ಸಲ್ಲಿಸಬಹುದು.ಭಾರತದ ಸ್ವಾತಂತ್ರ್ಯ ಸಂಗ್ರಾಮದ ರೇಖೆಗಳು ನಿರ್ಮಾಣಗೊಂಡ ಸ್ಥಳವಾದ ಸಬರಮತಿ ಆಶ್ರಮದಲ್ಲಿ ಪ್ರಮಾಣ ಮಾಡುವ ಮೂಲಕ ಬಾಪು ಕಂಡ ಕನಸಿನ ಭಾರತ ನಿರ್ಮಾಣಕ್ಕೆ ಕೈಜೋಡಿಸಬಹುದು.
ಸಬರಮತಿ ಆಶ್ರಮದ ಬಗ್ಗೆ ಏನೇ ವಿಷಯ ಚರ್ಚೆಯಾದಾಗಲೂ, ವರ್ಷವಿಡೀ ಪ್ರತೀ ದಿನವೂ ಅಲ್ಲಿಯ ಸ್ವಚ್ಚತೆಯ ಬಗ್ಗೆ ಚರ್ಚೆ ನಡೆಯುವುದು ವಾಡಿಕೆ. ಅವರು ಸ್ವಚ್ಚತೆಯ ಬಗ್ಗೆ ರಾಜಿ ಮಾಡಿಕೊಂಡವರೇ ಅಲ್ಲ. 2019 ರೊಳಗೆ ಸ್ವಚ್ಛತೆ ಪ್ರತೀ ಭಾರತೀಯರ ಸ್ವಭಾವವಾಗಬೇಕು/ ಅಭ್ಯಾಸವಾಗಬೇಕು. ನಮ್ಮ ಜೀವನದಲ್ಲಿ, ನಮ್ಮ ಗುಣ ನಡತೆಯಲ್ಲಿ ಸ್ವಚ್ಛತೆ ಗರಿಷ್ಟ ಆದ್ಯತೆಯಾಗಬೇಕು ಮತ್ತು ನಮ್ಮ ರಕ್ತ ನಾಳದಲ್ಲಿ ಅದಿರಬೇಕು. ನಮ್ಮ ಮನಸ್ಸಿನಲ್ಲಿಯೂ ಅದಿರಬೇಕು ಮತ್ತು ಪೂಜ್ಯ ಬಾಪುಗೆ ಇದಕ್ಕಿಂತ ದೊಡ್ಡ ಶ್ರದ್ಧಾಂಜಲಿ ಬೇರೆ ಇಲ್ಲ. ಬಾಪು ಅವರೇ ಹೇಳುತ್ತಿದ್ದರು -ಸ್ವಾತಂತ್ರ್ಯ ಮತ್ತು ಸ್ವಚ್ಛತೆ ನಡುವೆ ನನಗೆ ಆಯ್ಕೆಯ ಅವಕಾಶ ಇದ್ದರೆ, ಸ್ವಚ್ಚತೆ ನನ್ನ ಮೊದಲ ಆದ್ಯತೆ ಎಂದು. ಸ್ವಚ್ಛ ಭಾರತ, ಸ್ವಚ್ಛತೆ ಬಾಪುವಿಗೆ ಭಾರತದ ಸ್ವಾತಂತ್ರ್ಯಕ್ಕಿಂತ ಹೆಚ್ಚು ಮುಖ್ಯವಾಗಿತ್ತು. ಅದು ಅವರ ಕನಸಾಗಿತ್ತು. ನಾವು ಸ್ವಾತಂತ್ರ್ಯ ಗಳಿಸಿ 70 ವರ್ಷಗಳಾದವು ಮತ್ತು 2019 ರಲ್ಲಿ ನಾವು ಗಾಂಧೀಜಿ ಅವರ 150 ನೆ ವರ್ಷಾಚರಣೆ ಮಾಡಲಿದ್ದೇವೆ. ನಾವು ಸ್ವಚ್ಛತೆಗಾಗಿ ಏನಾದರೂ ಮಾಡಬಾರದೇಕೆ ?.
ಪೂಜ್ಯ ಬಾಪೂಜಿ ಅವರು ಈ ಭಕ್ತಿ ಗೀತೆ ಬಗ್ಗೆ ಬಹಳ ಇಷ್ಟಪಟ್ಟಿದ್ದರು- ” ವೈಷ್ಣವ್ ಜನ್ ತೋ ತಿನೆಕಹಿಯಾರೇ”, ನಾವು ಈ ಭಕ್ತಿ ಗೀತೆಯನ್ನು ಕೇಳಿದ್ದೇವಷ್ಟೇ. ಭಾರತದ ಪ್ರತೀ ವಿದ್ಯಾರ್ಥಿಗೂ ” ವೈಷ್ಣವ್ ಜನ್ ತೋ ತಿನೆಕಹಿಯಾರೇ ” ಬಗ್ಗೆ ಗೊತ್ತಿದೆ, ಪ್ರತೀ ನಾಗರಿಕರಿಗೂ ಅದರ ಬಗ್ಗೆ ಗೊತ್ತಿದೆ, ಪ್ರತೀಯೊಬ್ಬರೂ ಇದನ್ನು ಗಾಂಧೀಜಿ ಅವರು ಬಹಳ ಮೆಚ್ಚಿಕೊಂಡದ್ದರ ಬಗ್ಗೆ ಅರಿತಿದ್ದಾರೆ.. ಮತ್ತು ಅದರ ಶಕ್ತಿಯ ಬಗ್ಗೆ ನೋಡಿ, ಅದರ ಸರಳತೆಯ ಬಗ್ಗೆ ನೋಡಿ, ನೀವು 100 ಜನರನ್ನು ಕೇಳಿ, 100 ರಲ್ಲಿ 90 ಜನ ವೈಷ್ಣವ್ ಜನತೋ ತಿನೆಕಹಿಯಾರೇ ಹೇಳುತ್ತಾರೆ. ನೀವು ಇದನ್ನು ದೇಶದ ಯಾವ ಮೂಲೆಯಲ್ಲಾದರೂ ಪ್ರಯತ್ನಿಸಬಹುದು, 100 ರಲ್ಲಿ 90 ಮಂದಿ ಇದನ್ನು ಹೇಳುತ್ತಾರೆ. ಆಮೇಲೆ ನೀವು ಅವರಿಗೆ ಈ ಗೀತೆಯ ಭಾಷೆಯ ಬಗ್ಗೆ ಕೇಳಿ. ನಾನು ಅಧಿಕಾರವಾಣಿಯಿಂದ ಹೇಳಬಲ್ಲೆ, ಬರೇ ಹತ್ತು ಮಂದಿ ಕೂಡಾ ಗೀತೆಯ ಭಾಷೆ ಯಾವುದೆಂದು ಹೇಳಲಾರರು, ಯಾಕೆಂದರೆ ನಾವು ಆ ಹಾಡನ್ನು ಅಂತರ್ಗತ ಮಾಡಿಕೊಂಡಿದ್ದೇವೆ, ಭಾಷೆಯ ತಡೆ ಇಲ್ಲದಂತೆ. ” ವೈಷ್ಣವ್ ಜನ್ ತೋ ತಿನೆಕಹಿಯೇ ರೇ..” , ಈ ಗೀತೆ ನಮ್ಮದೇ ಅನಿಸಿಬಿಡುತ್ತದೆ. ಇದು ಯಶಸ್ಸು, ಯಾವುದೇ ವಿಭಜನೆ ಇಲ್ಲಿಲ್ಲ, ಎಲ್ಲಾ ವಿಭಜನೆಗಳೂ ಮಾಯವಾಗುತ್ತವೆ.
ನಾನು ರಾಜಕೀಯಕ್ಕೆ ಬಹಳ ತಡವಾಗಿ ಬಂದೆ. ಇತ್ತೀಚಿನ ದಿನಗಳಲ್ಲಿ ರಾಕೇಶ್ ಭಾಯಿ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಧರ್ಮಪುರ ಪ್ರದೇಶದಲ್ಲಿ ನಾನೂ ಕೆಲಸ ಮಾಡುವ ಅದೃಷ್ಟ ಪಡೆದಿದ್ದೆ. ನಾನು ನನ್ನ ಯೌವ್ವನದ ಉತ್ತಮ ದಿನಗಳನ್ನು ಸಮಾಜ ಸೇವೆ ಮಾಡುತ್ತ, ಇಲ್ಲಿಯ ಬುಡಕಟ್ಟು ಜನರೊಂದಿಗೆ ಕಳೆಯುವ ಅದೃಷ್ಟವಂತನಾಗಿದ್ದೆ. ನಾನು ತಡವಾಗಿ ರಾಜಕೀಯ ಸೇರಿದೆ ಮತ್ತು ನಾನು ಈ ದಿಕ್ಕಿನಲ್ಲಿ ಹೋಗುವೆನೆಂದು ಎಂದೂ ಯೋಚಿಸಿರಲಿಲ್ಲ. ನಾನು ಸಂಘಟನೆಗಾಗಿ ಅರ್ಪಿಸಿಕೊಂಡಿದ್ದೆ ಮತ್ತು ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ತರಬೇತಿ ಕೊಡುವಾಗ ಅವರೊಂದಿಗೆ ಮಾತನಾಡುತ್ತಿದ್ದೆ. 400 ವರ್ಷಗಳ ಹಿಂದೆ ನರಸಿಂಗ್ ಮೆಹತಾ ಬರೆದುದನ್ನು ಹೇಳುತ್ತಿದ್ದೆ. ಇಂದು ಎಲ್ಲಾ ರಾಜಕೀಯ ನಾಯಕರು,ಎಲ್ಲಾ ಜನ ಪ್ರತಿನಿಧಿಗಳು ಒಂದು ಕೆಲಸ ಮಾಡಬೇಕು, ” ವೈಷ್ಣವ್ ಜನ್ ತೋ ತಿನೆ ಕಹಿಯೇ ರೇ ಜೋ ಪೀರ್ ಪರಾಯಿ ಜಾನೇ ರೇ ” ಯಲ್ಲಿ ಅವರು ” ವೈಷ್ಣವ್ ಜನ್ ” ತೆಗೆದು ಹಾಕಿ ಅಲ್ಲಿ ” ಲೋಕ್ ಪ್ರತಿನಿಧಿ ತೋ ತೀನೇ ರೇ ಕಹಿಯೇ ರೇ ಜೀ ಪೀರ್ ಪರಾಯೀ ಜಾನೇ ರೇ..”. ನೀವು ನೋಡಿ, ಯಾವ ರೀತಿಯ ಜನಪ್ರತಿನಿಧಿಗಳು ಭಾರತಕ್ಕೆ ಅವಶ್ಯ ಇದ್ದಾರೆ, ಯಾವ ರೀತಿಯ ಸಾರ್ವಜನಿಕ ಸೇವಕರು ಅಗತ್ಯ ಇದ್ದಾರೆ, ಈ ವೈಷ್ಣವಿ ಜನ್ ಭಕ್ತಿ ಗೀತೆಯ ಪ್ರತೀ ಸಾಲಿನಲ್ಲಿ ಒಂದು ಕ್ಷಣ ನೀವು ನಿಮ್ಮನ್ನು ಅಳವಡಿಸಿಕೊಳ್ಳಿ, ನಿಮಗೆ ಬೇರೆ ಯಾರಿಂದಲೂ ಮಾರ್ಗದರ್ಶನ ಅಗತ್ಯವಿಲ್ಲ. ನಿಮಗೆ ನಿಮ್ಮ ಗುರಿ ಸ್ಪಷ್ಟವಾಗುತ್ತದೆ, ಅಲ್ಲಿ ಗೊಂದಲ ಇರುವುದಿಲ್ಲ. ಆ ಗೀತೆಯ ಪ್ರತೀ ಶಬ್ದದಲ್ಲಿಯೂ ನಿಮ್ಮನ್ನು ನೀವು ಅಡಕಗೊಳಿಸಿಕೊಳ್ಳಬಹುದು. ಸಮಯದ ಅಭಾವದಿಂದ ನಾನಿಲ್ಲಿ ಅದನ್ನು ನಿಮಗೆ ವಿವರಿಸಲು ಹೋಗುವುದಿಲ್ಲ. ಆದರೆ ಆ ಶಕ್ತಿ ಆ ಗೀತೆಯಲ್ಲಿದೆ.
ಸಹೋದರರೇ ಮತ್ತು ಸಹೋದರಿಯರೇ, ಪೂಜ್ಯ ಬಾಪು ಅವರ ಹೆಸರನ್ನು ಸಂದ ರ್ಭೋಚಿತವಾಗಿ ಯಾವಾಗೆಲ್ಲ ಬಳಸಬೇಕು ಎಂಬುದು ನಮಗೆ ಗೊತ್ತು. ನಾವು ಈ ವಿಷಯಗಳನ್ನು ಹಲವು ವರ್ಷಗಳಿಂದ ಕಾಣುತ್ತಿದ್ದೇವೆ ಮತ್ತು ಅನುಕೂಲಕ್ಕೆ ತಕ್ಕಂತೆ ಅವರ ಹೆಸರನ್ನು ಮರೆಯುವ ಅಭ್ಯಾಸಕ್ಕೂ ನಾವು ಹೆಸರಾಗಿದ್ದೇವೆ. ಇಂದು ನಾನು ಸಬರಮತಿ ಆಶ್ರಮಕ್ಕೆ ಬಂದಾಗ ಶ್ರೀಮದ್ ರಾಜಚಂದ್ರ ಜೀ ಅವರ ಅನುಗ್ರಹದಿಂದ, ಅವರನ್ನು ನೆನಪಿಸಿಕೊಂಡು, ನಾವು ಅವರ ಬೋಧನೆಯ ಪ್ರತೀ ವಿಷಯವನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ನಾವು ಸಬರಮತಿ ಆಶ್ರಮದ ಶತಮಾನೋತ್ಸವ ವರ್ಷವನ್ನು ಆಚರಿಸುವಾಗ , ನಾನು ನನ್ನ ದೇಶವಾಸಿಗಳ ಜತೆ ಗಂಭೀರವಾದುದನ್ನು ಚರ್ಚಿಸಲು ಇಚ್ಚಿಸುತ್ತೇನೆ.ಈ ವಿಷಯಗಳನ್ನು ಚರ್ಚಿಸಲು ಇದಕ್ಕಿಂತ ಹೆಚ್ಚು ಪವಿತ್ರ ಸ್ಥಳ ಇರಲಾರದು. ಶ್ರೀಮದ್ ರಾಜಚಂದ್ರ ಜೀ ಅವರ 150 ನೇ ವರ್ಷಾಚರಣೆ ಮಾಡುವಾಗ , ಸಬರಮತಿ ಆಶ್ರಮದ ಶತಮಾನೋತ್ಸವ ಆಚರಿಸುವಾಗ, 2019 ರಲ್ಲಿ ಗಾಂಧೀಜಿಯವರ 150 ನೇ ವರ್ಷಾಚರಣೆ ಮಾಡುವಾಗ , ಅಲ್ಲಿ ನನ್ನ ಅಂತರಂಗದ ಭಾವನೆಗಳನ್ನು ಹಂಚಿಕೊಳ್ಳಲು ಅದಕ್ಕಿಂತ ಉತ್ತಮ ಅವಕಾಶ ಬೇರೊಂದಿರದು. ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ನಾನು ನನ್ನ ನೋವು ಮತ್ತು ಸಿಟ್ಟನ್ನು ವ್ಯಕ್ತಪಡಿಸಲು ಇಚ್ಚಿಸುತ್ತೇನೆ. ಇರುವೆಗಳಿಗೆ ಆಹಾರ ಹಾಕುವುದನ್ನು ನಂಬುವ ಈ ದೇಶದಲ್ಲಿ, ಬೀದಿ ನಾಯಿಗಳಿಗೆ ಆಹಾರ ಹಾಕುವ ಈ ದೇಶದಲ್ಲಿ, ಪ್ರತೀ ಮುಂಜಾನೆ ನದಿ ದಂಡೆಗಳಿಗೆ, ಕೆರೆಗಳಿಗೆ ಹೋಗಿ ಮೀನುಗಳಿಗೆ ಆಹಾರ ಹಾಕುವ ಸಂಪ್ರದಾಯ ಇರುವ ಈ ದೇಶದಲ್ಲಿ , ಇಂತಹ ಮೌಲ್ಯ ವ್ಯವಸ್ಥೆ ಮಾದರಿ ಇರುವ ದೇಶದಲ್ಲಿ, ಈ ರೀತಿಯ ಗುಣ ಇರುವ ದೇಶದಲ್ಲಿ , ಮಹಾತ್ಮಾ ಗಾಂಧಿಯಂತಹ ದೊಡ್ಡ ವ್ಯಕ್ತಿ ಅಹಿಂಸೆಯನ್ನು ಪಾಠವನ್ನು ಹೇಳಿಕೊಟ್ಟ ಈ ದೇಶದಲ್ಲಿ, ಈಗ ಈ ದೇಶಕ್ಕೆ ಏನಾಗಿದೆ?. ರೋಗಿಯೊಬ್ಬರನ್ನು ಉಳಿಸಲು ಆಸ್ಪತ್ರೆ ವಿಫಲವಾದರೆ, ಶಸ್ತ್ರಚಿಕಿತ್ಸೆ ವಿಫಲವಾದರೆ ಅಥವಾ ಔಷಧ ಕೆಲಸ ಮಾಡದೆ ಹೋದರೆ ಮತ್ತು ರೋಗಿ ಸತ್ತರೆ ಆಗ ರೋಗಿಯ ಸಂಬಂಧಿಕರು ವೈದ್ಯರನ್ನು ಕೊಲ್ಲುತ್ತಾರೆ, ಆಸ್ಪತ್ರೆಗಳನ್ನು ಸುಡುತ್ತಾರೆ. ಇದು ನನ್ನ ದೇಶವೇ ?.ಇದು ಪೂಜ್ಯ ಬಾಪುವಿನ ದೇಶವೇ?. ನಾವು ಏನು ಮಾಡುತ್ತಿದ್ದೇವೆ? ಮತ್ತು ಇಂತಹ ಸಂಗತಿಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ಅದೃಷ್ಟ ಎಂದರೆ ಅದೃಷ್ಟ. ಎರಡು ವಾಹನಗಳು ಎಲ್ಲಿಯಾದರು ಧಿಕ್ಕಿ ಹೊಡೆದರೆ ದುರಾದೃಷ್ಟವಶಾತ್ ಯಾರಾದರೊಬ್ಬರು ಸಾಯುತ್ತಾರೆ ಅಥವಾ ಯಾರಾದರು ಗಾಯಗೊಳ್ಳುತ್ತಾರೆ ಮತ್ತು ಜನರ ಗುಂಪು ಸೇರುತ್ತದೆ, ಬಲಿಪಶುಗಳ ಬಗ್ಗೆ ಅವರಿಗೆ ಗೊತ್ತಿಲ್ಲದಿದ್ದರೂ ಅವರು ವಾಹನಗಳನ್ನು ಸುಟ್ಟು ಹಾಕುತ್ತಾರೆ. ಇದು ನನ್ನ ದೇಶವೇ ?.
ಗೋರಕ್ಷಣೆಗೆ ಸಂಬಂಧಿಸಿ, ಗೋವುಗಳ ಆರಾಧನೆಗೆ ಸಂಬಂಧಿಸಿ ಮಹಾತ್ಮಾ ಗಾಂಧಿ ಮತ್ತು ವಿನೋಬಾ ಭಾವೆ ಅವರನ್ನು ಯಾರೂ ಮೀರಿಸಲಾರರು. ನಿಮಗೆ ಗೋರಕ್ಷಣೆ ಮಾಡಬೇಕಿದ್ದರೆ, ಗೋ ಸೇವೆ ಮಾಡಬೇಕಿದ್ದರೆ ನಮಗೆ ಗಾಂಧೀಜಿ ಮತ್ತು ವಿನೋಬಾ ಭಾವೆ ಈಗಾಗಲೇ ಉತ್ತಮ ದಾರಿ ತೋರಿಸಿದ್ದಾರೆ ಮತ್ತು ದೇಶ ಆ ಹಾದಿಯನ್ನು ಅನುಸರಿಸಬೇಕಾಗಿದೆ ಮತ್ತು ದೇಶದ ಹಿತಾಸಕ್ತಿ ಅದರಲ್ಲೇ ಅಡಗಿದೆ. ವಿನೋಬಾ ಜೀ ಅವರು ತಮ್ಮ ಇಡೀ ಜೀವನವನ್ನು ಗೋರಕ್ಷಣೆಗಾಗಿ ತ್ಯಾಗ ಮಾಡಿದರು. ನಾನು ಒಮ್ಮೆ ವಿನೋಬಾರನ್ನು ಭೇಟಿಯಾಗಲು ವಾರ್ಧಾಕ್ಕೆ ಹೋಗುವ ಸೌಭಾಗ್ಯ ಪಡೆದಿದ್ದೆ. ನಾನವರನ್ನು ಭೇಟಿಯಾಗಿದ್ದೆ, ನನ್ನ ಗೌರವಗಳನ್ನು ಸಲ್ಲಿಸಿದ್ದೆ ಮತ್ತು ಅಲ್ಲಿ ಕುಳಿತಿದ್ದೆ. ವಿನೋಬಾ ಜೀ ಅವರು ಬಹಳ ವಾಗ್ಮಿ . ಅಲ್ಲಿ ಕುಳಿತಿದ್ದ ನಾನು ನನ್ನನ್ನು ಪರಿಚಯಿಸಿಕೊಂಡೆ. ನಾನವರನ್ನು ನೋಡುತ್ತಿದ್ದೆ, ಮತ್ತು ಅವರು ನನಗೆ ಸಾಯಲು ಹೇಳಿದರು, ಸಾಯಲು ಹೇಳಿದರು. ವಿನೋಬಾ ಜೀ ನನಗೆ ಸಾಯಲು ಹೇಳಿದರೆಂದು ನಾನು ಆಶ್ಚರ್ಯಚಕಿತನಾದೆ. ನಾನಲ್ಲಿ ಮೌನಿಯಾಗಿ ಕುಳಿತೆ ಮತ್ತು ವಿನೋಬಾ ಜೀ ಸಮಾಧಾನ ಚಿತ್ತದಲ್ಲಿ ಹೇಳಿದರು- ಗೋವಿಗಾಗಿ ಸಾಯು, ಗೋ ತಾಯಿಗಾಗಿ ಸಾಯು. ನೀವು ಊಹಿಸಿಕೊಳ್ಳಬಹುದು, ವಿನೋಬಾ ಜೀ ತಮ್ಮ ಜೀವನದ ಕೊನೆಯವರೆಗೂ ಗೋರಕ್ಷಣೆಗಾಗಿ ಆಗಿನ ಸರಕಾರದ ವಿರುದ್ಧ ಹೋರಾಡಿದರು. ಗೋವುಗಳ ರಕ್ಷಣೆಗಾಗಿ ಉಪವಾಸ ಸತ್ಯಾಗ್ರಹ ಕುಳಿತರು. ಭಾರತದ ಸಂವಿಧಾನ ಕೂಡಾ ನಮಗೆ ಗೋ ರಕ್ಷಣೆ ಬಗ್ಗೆ ತಿಳಿಸುತ್ತದೆ. ಆದರೆ ಇದಕ್ಕಾಗಿ ನಮಗೆ ಯಾವುದೇ ವ್ಯಕ್ತಿಯನ್ನಾದರೂ ಕೊಲ್ಲುವ ಹಕ್ಕಿದೆಯೇ?, ಇದು ಗೋ ಭಕ್ತಿಯೇ ?. ಇದು ಗೋ ರಕ್ಷಣೆಯೇ ?. ಪೂಜ್ಯ ಬಾಪುಜಿಯವರು ತೋರಿದ ಮಾರ್ಗ ಇದಾಗಲಾರದು. ಇದು ವಿನೋಬಾ ಭಾವೆಯವರ ಜೀವನ ಸಂದೇಶ ಅಲ್ಲ. ಮತ್ತು ಆದ್ದರಿಂದ ಸಬರಮತಿ ಆಶ್ರಮದ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ, ಪೂಜ್ಯ ಶ್ರೀಮದ್ ರಾಜಚಂದ್ರ ಜೀ ಅವರ 150 ನೇ ವರ್ಷಾಚರಣೆ ಮಾಡುವ ಸಂದರ್ಭದಲ್ಲಿ, ಪ್ರತೀಯೊಬ್ಬ ಭಾರತೀಯನ ಮನಸ್ಸು ಮತ್ತು ಹೃದಯದಲ್ಲಿ ಅಹಿಂಸೆಯ ಮೂಲಭೂತ ಸಂಪ್ರದಾಯ, ಮೂಲಭೂತ ಮೌಲ್ಯಗಳು ನೆಲೆಗೊಂಡಿರಬೇಕು. ಇದು ನಮ್ಮ ಜೀವನದ ವಿಧಾನ. ನಾವು ಹೇಗೆ ನಮ್ಮ ನಿಯಂತ್ರಣ ತಪ್ಪಬಹುದು, ನಾವು ವೈದ್ಯರನ್ನು ಕೊಲೆಗೈಯುತ್ತಿದ್ದೇವೆ, ಅಕಸ್ಮಾತ್ ಏನಾದರೂ ಸಂಭವಿಸಿದರೆ ನಾವು ಚಾಲಕರನ್ನು ಕೊಲ್ಲುತ್ತಿದ್ದೇವೆ, ನಾವು ಗೋವಿನ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುತ್ತಿದ್ದೇವೆ.
ನಾನು ನನ್ನ ಬಾಲ್ಯ ಕಾಲದ ಒಂದು ಘಟನೆಯನ್ನು ಇನ್ನೂ ನೆನಪಿನಲ್ಲಿಟ್ಟುಕೊಂಡಿದ್ದೇನೆ. ಇದು ನನ್ನ ಬದುಕಿನ ನೈಜ ಘಟನೆ. ಮತ್ತು ಬಹುಷ ಇದೇ ಮೊದಲ ಬಾರಿಗೆ ನಾನಿದನ್ನು ಹಂಚಿಕೊಳ್ಳುತ್ತಿದ್ದೇನೆ. ಮೊದಲು ನನಗೆ ಬರೆಯುವ ಅಭ್ಯಾಸ ಇತ್ತು, ನಾನು ಬರೆಯುವಾಗ ಮತ್ತು ಆ ಬಳಿಕ ನಾನು ಈ ವಿಷಯದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದ್ದೆ. ಆದಾಗ್ಯೂ ನನಗೆ ಅದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇವೆಲ್ಲದರ ನಡುವೆಯೂ , ಇಂದು ನಾನು ಬಲವಾಗಿ ನಂಬುತ್ತೇನೆ, ಇದು ಅತ್ಯಂತ ಪವಿತ್ರ ಸ್ಥಳ, ಇಂತಹ ಪವಿತ್ರ ಸ್ಥಳದಲ್ಲಿ ಅಂತರಾತ್ಮದ ಭಾವನೆಗಳು ಸರಾಗವಾಗಿ, ನಿರಾಳವಾಗಿ ಹೊರಬರುತ್ತವೆ.
ನಾನು ಸಣ್ಣ ಹುಡುಗನಾಗಿದ್ದಾಗ , ನನ್ನ ಮನೆ ಸಪೂರದ ಓಣಿಯಲ್ಲಿತ್ತು. ಒಂದರ ಪಕ್ಕ ಒಂದರಂತೆ ಮನೆಗಳನ್ನು ಕಟ್ಟಿದ್ದರು.ಆ ಕಾಲದಲ್ಲಿ ಅದು ಸಹಜವಾಗಿತ್ತು. ನಮ್ಮ ಮನೆಗೆ ಹತ್ತಿರದಲ್ಲಿಯೇ, ಇನ್ನೊಂದು ಬದಿಯಲ್ಲಿ ಗಾರೆ ಕೆಲಸದ ಕುಟುಂಬವೊಂದು ವಾಸಿಸುತ್ತಿತ್ತು. ಕಾರ್ಮಿಕರಂತೆ ಅವರ ದುಡಿಮೆ ಇತ್ತು. ಅವರ ಮದುವೆಯಾಗಿ ಹಲವು ವರ್ಷ ಕಳೆದರೂ ಅವರ ಕುಟುಂಬದಲ್ಲಿ ಮಕ್ಕಳಿರಲಿಲ್ಲ. ಈ ಕಾರಣಕ್ಕಾಗಿ ಆ ಕುಟುಂಬದಲ್ಲಿ ಸ್ವಲ್ಪ ಮಟ್ಟಿನ ಅಸಂತೋಷವೂ ಇತ್ತು. ಅವರು ಅತ್ಯಂತ ಧಾರ್ಮಿಕ ವ್ಯಕ್ತಿಗಳಾಗಿದ್ದರು. ಅತ್ಯಂತ ತಡವಾಗಿ ಅವರ ಕುಟುಂಬದಲ್ಲಿ ಒಂದು ಮಗುವಾಯಿತು. ಮತ್ತು ಅದು ಬೆಳೆಯತೊಡಗಿತು. ನೀವು ನೋಡಿ, ನಾವು ವಾಸ ಮಾಡುತ್ತಿದ್ದ ಬೀದಿ ತೀರಾ ಇಕ್ಕಟ್ಟಾದ ಸಪೂರವಾದ ಬೀದಿಯಾಗಿತ್ತು. ಗೋವುಗಳು ಕೂಡಾ ಕೆಲಮಟ್ಟಿನ ಶಿಸ್ತು ಪಾಲಿಸುತ್ತಿದ್ದವು. ತಮ್ಮ ಮನೆಗಳ ಬಳಿ ಗೋವುಗಳು ಹಾದು ಹೋಗುತ್ತಿದ್ದಾಗ ಜನರು ಕೂಡಾ ಏನಾದರು ತಿಂಡಿ ಕೊಡುತ್ತಿದ್ದರು. ಅಲ್ಲೊಂದು ದನ ನಮ್ಮ ವಾಸ್ತವ್ಯದ ಪ್ರದೇಶಕ್ಕೆ ಬರುತ್ತಿತ್ತು, ಮತ್ತು ಜನರು ಅದಕ್ಕೆ ಆಹಾರ ಕೊಡುತ್ತಿದ್ದರು. ಮಗು ಹುಟ್ಟಿದ ಮನೆಯವರೂ ಅದಕ್ಕೆ ತಿಂಡಿ ಕೊಡುತ್ತಿದ್ದರು. ಅದೊಂದು ದಿನ ಅಲ್ಲಿ ಇದ್ದಕ್ಕಿದ್ದಂತೆ ಗದ್ದಲ ಕಾಣಿಸಿಕೊಂಡಿತು. ಬಹುಷ ಯಾರೋ ಹುಡುಗರು ಪಟಾಕಿ ಸಿಡಿಸಿದ್ದರಿಂದ ಹಾಗಾಯಿತು. ಇಂದು ಅಲ್ಲೇನು ನಡೆಯಿತು ಎಂಬುದು ನನಗೆ ಸರಿಯಾಗಿ ನೆನಪಿಗೆ ಬರುತ್ತಿಲ್ಲ. ಆ ಗೋವು ಭಯ ಬಿದ್ದು ಓಡಲಾರಂಭಿಸಿತು. ಆಗ ಏನಾಯಿತೆಂದರೆ ಆ ಸಣ್ಣ ಮಗು ಬಹುಷ ಮೂರು, ನಾಲ್ಕು ಅಥವಾ ಐದು ವರ್ಷ ಇರಬೇಕು, ಅದರೊಂದಿಗೆ ಓಡಲಾರಂಭಿಸಿತು. ಆ ಮಗುವಿಗೆ ಯಾವ ಕಡೆ ಓಡಬೇಕು ಎಂಬುದು ಗೊತ್ತಾಗಲಿಲ್ಲ.ಮತ್ತು ಅದು ಆ ಗೋವಿನ ಕಾಲಿಗೆ ಸಿಲುಕಿ ಅಪ್ಪಚ್ಚಿಯಾಯಿತು. ಹಲವು ವರ್ಷಗಳ ಬಳಿಕ ಆ ಕುಟುಂಬದಲ್ಲಿ ಜನಿಸಿದ ಮಗು ಗೋವಿನ ಕಾಲಡಿಗೆ ಬಿದ್ದು ಸತ್ತು ಹೋಯಿತು. ನೀವು ಆ ಕುಟುಂಬದ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಬಹುದು. ಅವರಿಗೆ ಆ ದಿನಗಳು ಅತ್ಯಂತ ಯಾತನಾಮಯವಾಗಿದ್ದವು. ಆ ದಿನದ ಬಳಿಕ ಏನಾಯಿತು ಎಂಬುದನ್ನು ನಾನು ಮರೆಯಲಾರೆ. ಆ ಗೋವು ಆ ಮನೆಯ ಬಾಗಿಲಿನ ಬಳಿ ಬಂದು ನಿಲ್ಲುತ್ತಿತ್ತು. ಯಾವುದೇ ಕುಟುಂಬದಿಂದ ಅದು ತಿಂಡಿ ಸ್ವೀಕರಿಸುತ್ತಿರಲಿಲ್ಲ. ಆ ದುಃಖತಪ್ತ ಕುಟುಂಬ ನೀಡಿದ ಆಹಾರವನ್ನೂ ಅದು ತಿನ್ನುತ್ತಿರಲಿಲ್ಲ. ಆ ಗೋವು ಇಡೀ ದಿನ ಕಣ್ಣೀರು ಹಾಕುವುದನ್ನು ಮುಂದುವರೆಸಿತು. ಎರಡುದಿನ, ಐದು ದಿನ, ಮತ್ತೂ ಆ ಗೋವು ಏನನ್ನೂ ತಿನ್ನಲಿಲ್ಲ, ಕುಡಿಯಲಿಲ್ಲ. ತಮ್ಮ ಒಂದೇ ಮಗು ತೀರಿಕೊಂಡ ದುಃಖತಪ್ತ ಕುಟುಂಬ ಒಂದು ಕಡೆ, ಆ ಇಡೀ ಪ್ರದೇಶವೇ ದುಃಖದಿಂದ ಆವರಿಸಲ್ಪಟ್ಟಿತ್ತು. ಒಂದು ಕುಟುಂಬಕ್ಕಾಗಿ ಇಡೀ ಗ್ರಾಮ ಸಂತಾಪದಲ್ಲಿತ್ತು. ಆದರೆ ಆ ಗೋವು ತನ್ನ ಪಶ್ಚಾತ್ತಾಪದಲ್ಲಿ ಮುಳುಗಿತ್ತು. ಹಲವು ದಿನಗಳ ಕಾಲ ಅದು ಏನನ್ನೂ ಕುಡಿಯಲಿಲ್ಲ, ತಿನ್ನಲಿಲ್ಲ. ಅದರ ಕಣ್ಣಿನಲ್ಲಿಯ ನೀರು ಕೂಡಾ ಆರಿ ಹೋಯಿತು. ಇಡೀ ಆ ಪ್ರದೇಶದ ಜನರು, ಜತೆಗೆ ಆ ದುಃಖತಪ್ತ ಮನೆಯವರು ಕೂಡಾ ಬಹಳ ಪ್ರಯತ್ನ ಪಟ್ಟರು,ಅದರೆ ಆ ಗೋವು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ತನ್ನ ಕಾಲ ಕೆಳಗೆ ಅಪ್ಪಚ್ಚಿಯಾದ ಮಗುವಿನ ನೋವಿನಿಂದಾಗಿ ಆ ಗೋವು ತನ್ನ ಪ್ರಾಣ ತ್ಯಾಗ ಮಾಡಿತು. ನನ್ನ ಬಾಲ್ಯ ಕಾಲದಲ್ಲಿ ಗೋವೊಂದು ಮಗುವಿನ ಸಾವಿಗಾಗಿ ತನ್ನ ಪ್ರಾಣ ತ್ಯಾಗ ಮಾಡಿದ್ದನ್ನು ನಾನು ನೋಡಿದೆ. ಆ ದೃಶ್ಯ ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. ಇಂದು ಗೋವಿನ ಕಾರಣಕ್ಕಾಗಿ ಯಾರನ್ನಾದರೂ ಕೊಲ್ಲುತ್ತಾರೆಂಬುದು ನನಗೆ ಕೇಳಿ ಬಂದರೆ, ಕಾನೂನು ತನ್ನದೇ ಕ್ರಮ ತೆಗೆದುಕೊಳ್ಳುತ್ತದೆ, ಆ ವ್ಯಕ್ತಿ ಮುಗ್ದನೋ, ತಪ್ಪಿತಸ್ಥನೋ ಎಂಬುದನ್ನು ನಿರ್ಧರಿಸುತ್ತದೆ. ಯಾರೊಬ್ಬರಿಗೂ ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುವ ಹಕ್ಕು ಇಲ್ಲ.
ಸಬರಮತಿ ಆಶ್ರಮದ ಶತಮಾನೋತ್ಸವ ವರ್ಷ ಆಚರಿಸುತ್ತಿರುವಾಗ, ಗೋ ರಕ್ಷಣೆಗೆ ತಮ್ಮ ಜೀವನವನ್ನು ಮುಡಿಪಾಗಿ ಇಟ್ಟ ಗಾಂಧೀಜಿ ಮತ್ತು ವಿನೋಬಾ ಜೀ ಅವರ ದೃಷ್ಟಾಂತಗಳು ಇರುವಾಗ, ನಾನು ನನ್ನ ದೇಶಕ್ಕೆ ಮನವಿ ಮಾಡಲು ಬಯಸುತ್ತೇನೆ ಏನೆಂದರೆ- ಹಿಂಸೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಅಲ್ಲ ಎಂಬುದಾಗಿ. ನಿಮ್ಮ ಕುಟುಂಬದ ಸದಸ್ಯನಿಗೆ ಸೇವೆ ಒದಗಿಸುತ್ತಿರುವ ವೈದ್ಯರಿಗೆ ಆ ವ್ಯಕ್ತಿಯ ಜೀವ ಉಳಿಸುವುದು ಸಾಧ್ಯವಾಗದಿದ್ದರೆ ಅದು ವೈದ್ಯರ ತಪ್ಪಲ್ಲ. ಆದಾಗ್ಯೂ ನೀವು ದೂರು ನೀಡಲು ಬಯಸಿದರೆ ಅಲ್ಲಿ ಕಾನೂನು ವ್ಯವಸ್ಥೆ ಇದೆ. ಕೆಲವೊಮ್ಮೆ ಹಾಗಾಗುವ ಸಾಧ್ಯತೆ ಇದೆ. ಒಂದು ವೇಳೆ ಮುಗ್ದ ಜೀವ ಸಾವಿಗೀಡಾದರೆ, ಅಂತಹ ಸಾಧ್ಯತೆಯೊಂದಿದೆ. ಆದ್ದರಿಂದ ಗಾಂಧೀಜಿಯ ಈ ನಾಡಿನಲ್ಲಿ ಸಮತೂಕದ ಜೀವನ ನಡೆಸುವುದು ಪ್ರತೀಯೊಬ್ಬರ ಕರ್ತವ್ಯ. ಇತರರ ಜವಾಬ್ದಾರಿಯ ಹೊರೆಯನ್ನು ನಾವು ಹಂಚಿಕೊಂಡಾಗ ಮಾತ್ರ ನಾವು ನಮ್ಮ ದೇಶವನ್ನು ಪೂಜ್ಯ ಬಾಪು ಅವರು ಕನಸು ಕಂಡ ರೀತಿಯಲ್ಲಿ ರೂಪಿಸಲು ಸಾಧ್ಯ. 2022 ರಲ್ಲಿ ಭಾರತವು ತನ್ನ ಸ್ವಾತಂತ್ರ್ಯೋತ್ಸವದ 75 ನೇ ವರ್ಷವನ್ನು ಪೂರ್ಣಗೊಳಿಸುತ್ತದೆ. ಭಾರತದ ಸ್ವಾತಂತ್ರ್ಯಕ್ಕೆ ಜೀವ ಕೊಟ್ಟ ಆ ದೊಡ್ಡ ಆತ್ಮಗಳು, ಕಾರಾಗೃಹದಲ್ಲಿ ತಮ್ಮ ಯೌವ್ವನ ಕಳೆದವರು, ಅವರಲ್ಲಿ ಕೆಲವರು ತಮ್ಮ ಜೀವನವನ್ನು ಅಂಡಮಾನ್ , ನಿಕೋಬಾರಿನ ಸೆಲ್ಯುಲಾರ್ ಕಾರಾಗೃಹದಲ್ಲಿ ಕಳೆದರು, ಕೆಲವರನ್ನು ಗಲ್ಲಿಗೇರಿಸಲಾಯಿತು, ಕೆಲವರು ಜೀವನ ಪೂರ್ತಿ ಹೋರಾಟ ಮಾಡಿದರು, ಅವರೆಲ್ಲರಿಗೂ ಒಂದು ಕನಸಿತ್ತು, ದೇಶದ ಸ್ವಾತಂತ್ರ್ಯವನ್ನು ಕಾಣುವ ಕನಸು, ಸಮೃದ್ಧ ದೇಶವನ್ನು ಕಾಣುವ ಕನಸು, ಈ ದೇಶದ ಕಡುಬಡವರ ಕಲ್ಯಾಣವನ್ನು ಕಾಣುವ ಕನಸು.
2022 ರಲ್ಲಿ ನಾವು ನಮ್ಮ ಸ್ವಾತಂತ್ರ್ಯದ 75ನೇ ವರ್ಷವನ್ನು ಪೂರ್ಣಗೊಳಿಸುತ್ತೇವೆ.ನಮಗೆ ಐದು ವರ್ಷಗಳ ಕಾಲಾವಕಾಶ ಇದೆ. ನಮ್ಮ ದೇಶದ 1.25 ಬಿಲಿಯ ಜನರು 2022 ರ ವೇಳೆಗೆ ದೇಶವನ್ನು ಈ ಹಂತಕ್ಕೆ ಕೊಂಡೊಯ್ಯಬೇಕು ಎಂದು ತೀರ್ಮಾನಿಸಿದರೆ, ಆಗ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸು ನನಸಾಗುತ್ತದೆ.
ಸಬರಮತಿ ಆಶ್ರಮದ ಮಣ್ಣಿನಲ್ಲಿ ಸ್ವತಂತ್ರ ಭಾರತದ ಕನಸು ಮೊಳೆಯಿತು, ಆ ದಿಕ್ಕಿನಲ್ಲಿ ದೇಶ ಸಾಗಿತು. ಆ ಕನಸಿನ ಹಾದಿಯಲ್ಲಿ ಅದು ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿತು. ನ್ಯಾಯಕ್ಕಾಗಿ ಅಹಿಂಸೆಯ ಎಲ್ಲಾ ಹಾದಿಗಳನ್ನು ಅನುಸರಿಸಿತು. ಕಾಯ್ದೆ ಭಂಗ ಚಳವಳಿಯ ಹಾದಿಯನ್ನೂ ಅನುಸರಿಸಲಾಯಿತು. 2022 ರಲ್ಲಿ ನಾವು ಸ್ವಾತಂತ್ರ್ಯದ 75ನೇ ವರ್ಷವನ್ನು ಪೂರ್ಣಗೊಳಿಸಲಿದ್ದೇವೆ. ಏನಾದರೂ ಮಾಡುವುದಾಗಿ ವಚನಗೈಯಲು ಇದು ಸಕಾಲ. ಏನಾದರೂ ಹೊಸದನ್ನು ಮಾಡುವುದಕ್ಕೆ, ನಮ್ಮ ಬದುಕನ್ನು ಸಮರ್ಪಿಸುವುದಕ್ಕೆ, ನಮ್ಮ ಬದುಕಿನ ಮೌಲ್ಯಯುತ 5 ವರ್ಷಗಳನ್ನು ಸಮರ್ಪಿಸುವುದಕ್ಕೆ, 2022 ರವರೆಗೆ ನಮ್ಮ ಸಮಯವನ್ನು ಕೊಡುವುದಕ್ಕೆ ಇದು ಸೂಕ್ತ ಕಾಲ. ಪ್ರತೀ ಭಾರತೀಯ ಒಂದೊಂದು ಹೆಜ್ಜೆ ಮುಂದೆ ಇಟ್ಟರೆ ಭಾರತ 1.25 ಬಿಲಿಯ ಹೆಜ್ಜೆ ಮುಂದೆ ಹೋಗುತ್ತದೆ. ಈ ಕನಸುಗಳೊಂದಿಗೆ ನಾವು ಮುಂದುವರಿಯಬೇಕಿದೆ.
ಶ್ರೀಮದ್ ರಾಜಚಂದ್ರ ಜೀ ಇಂತಹ ದೊಡ್ಡ ಆಧ್ಯಾತ್ಮಿಕ ಜಾಗೃತಿಯ ದಾರಿಯನ್ನು ತೋರಿಸಿದವರು, ಓರ್ವರ ಕರ್ತವ್ಯವನ್ನು ಹೇಗೆ ಮಾಡಬೇಕು ಎಂದು ತೋರಿಸಿದವರು, ಜ್ಞಾನದ/ವಿವೇಕದ ಹಾದಿಯನ್ನು ತೋರಿದವರು, ಅಂತಃಜಾಗೃತಿಯ ಹಾದಿಯನ್ನು ತೋರಿಸಿದವರು, ಮತ್ತು ಪೂಜ್ಯ ಬಾಪು ಕೂಡಾ ತಮ್ಮ ಜೀವನದಲ್ಲಿ ಶ್ರೀಮದ್ ರಾಜಚಂದ್ರ ಜೀ ಅವರು ತೋರಿದ ಹಾದಿಯಲ್ಲಿ ಸಾಗಿದವರು ಹಾಗು ಆ ಮೂಲಕ ತಮ್ಮ ಬದುಕಿನಲ್ಲಿ ಅದರ ಯಶಸ್ವೀ ಅನುಷ್ಠಾನ ವನ್ನು ತೋರಿದವರು. ನಿಮ್ಮೊಂದಿಗೆ ಸೇರಲು ನಾನು ಅದೃಷ್ಟ ಪಡೆದಿದ್ದೇನೆ. ಇಬ್ಬರೂ ಮಹಾತ್ಮರನ್ನು ನೆನೆಯುವ ಈ ಸಂದರ್ಭದಲ್ಲಿ ದೇಶ, ವಿದೇಶಗಳಿಂದ ಬಂದ ಬಹಳಷ್ಟು ಜನರನ್ನು ಭೇಟಿ ಮಾಡುವ ಅದೃಷ್ಟ ನನ್ನದಾಗಿದೆ. ನನಗೆ ರಾಕೇಶ್ ಜೀ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ನಾನು ಬಹಳ ಅದೃಷ್ಟವಂತ ಎಂದು ಭಾವಿಸುತ್ತೇನೆ.