Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತಿನ ಡೀಸಾದಲ್ಲಿ ಅಮೂಲ್ ಘಟಕಗಳನ್ನು ಉದ್ಘಾಟಿಸಿದ ಸಂರ್ಭದಲ್ಲಿ ರೈತರನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ

ಗುಜರಾತಿನ ಡೀಸಾದಲ್ಲಿ ಅಮೂಲ್ ಘಟಕಗಳನ್ನು ಉದ್ಘಾಟಿಸಿದ ಸಂರ್ಭದಲ್ಲಿ ರೈತರನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ


ವೇದಿಕೆಯ ಮೇಲೆ ವಿರಾಜಮಾನರಾಗಿರುವ ಎಲ್ಲ ಮಹನೀಯರೆ ಮತ್ತು ನನ್ನ ಪ್ರೀತಿಯ ಸೋದರ ಹಾಗೂ ಸೋದರಿಯರೆ,
ನಿಮ್ಮ ಪ್ರೀತಿಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ನಿಮಗೆ ಅನ್ನಿಸುತ್ತಿರಬಹುದು.

ಬನಾಸ್ ಕಾಂಠಾದ ರೈತರು ಹೇಗೆ ಕೆಲಸ ಮಾಡುತ್ತಾರೆ ಎಂದು ಇಡೀ ದೇಶಕ್ಕೆ ಗೊತ್ತಾಗಲಿ. ಮರುಭೂಮಿಯಲ್ಲೂ ಜೀವ ತುಂಬುವ ಶಕ್ತಿ ಇದೆ ಎಂದರೆ ಅದು ಬನಾಸ್ ಕಾಂಠಾದ ರೈತರಲ್ಲಿದೆ, ಉತ್ತರ ಗುಜರಾತಿನ ರೈತರಲ್ಲಿದೆ.  ತಮ್ಮ ಬೆವರು ಹರಿಸಿ ಜಮೀನಿಗೆ ಜೀವ ತುಂಬುತ್ತಾರೆ. ಪಾಕಿಸ್ತಾನದ ಗಡಿಯಲ್ಲಿರುವ ಈ ಬನಾಸ್ ಕಾಂಠಾ ಜಿಲ್ಲೆಯಲ್ಲಿ ನೀರಿಲ್ಲದೆ, ಮಳೆ ಇಲ್ಲದೆ ಮರುಭೂಮಿಯಲ್ಲಿರುವಂತೆ ಜೀವನ ಕಳೆಯುತ್ತಿರುವ ವ್ಯಕ್ತಿ ತನ್ನ ಶ್ರಮದಿಂದ ಪುರುಷಾರ್ಥದಿಂದ ತನ್ನ ಅದೃಷ್ಟವನ್ನು ಹೇಗೆ ಬದಲಿಸಿಕೊಳ್ಳಬಲ್ಲ, ಯಶಸ್ವಿಯಾಗಬಲ್ಲ ಎನ್ನುವುದಕ್ಕೆ ನೀವೆಲ್ಲ ಜೀವಂತ ಉದಾಹರಣೆಯಾಗಿದ್ದೀರಿ ಎಂಬುದು ಇಡೀ ದೇಶಕ್ಕೆ ಗೊತ್ತಾಗಬೇಕು.
ಸೋದರ ಸೋದರಿಯರೆ, 25-27 ವರ್ಷಗಳ ನಂತರ ಪ್ರಧಾನ ಮಂತ್ರಿಗಳು ಬನಾಸ್ ಕಾಂಠಾ ಜಿಲ್ಲೆಗೆ ಬಂದಿರುವುದು ಎಂದು ನನಗೆ ಗೊತ್ತಾಯಿತು.

ಸೋದರ¸ ಸೋದರಿಯರೆ, ನಾನಿಂದು ನಿಮ್ಮ ಮಧ್ಯ ಒಬ್ಬ ಪ್ರಧಾನ ಮಂತ್ರಿಯಾಗಿ ಬಂದಿಲ್ಲ.  ಈ ಮಣ್ಣಿನ ಸಂತಾನವಾಗಿ ಬಂದಿದ್ದೇನೆ.  ಈ ಮಣ್ಣು ನನ್ನನ್ನು ದೊಡ್ಡವನಾಗಿಸಿದೆ.  ನಾನು ಶ್ರದ್ಧಾಳು ಗಲಬಾಭಾಯ್ ಅವರ ತಪಸ್ಸಿಗೆ ನಮಿಸುವುದಕ್ಕೆಂದು ವಿಶೇಷವಾಗಿ ಬಂದಿದ್ದೇನೆ.  ಲಕ್ಷಾಂತರ ಪಶುಗಳ ಪರವಾಗಿ, ಲಕ್ಷಾಂತರ ಕುಟುಂಬಗಳ ಪರವಾಗಿ ಬನಾಸ್ ಕಾಂಠಾದ ಬಂಜರು ¨ಭೂಮಿಯ ಪರವಾಗಿ ನಾನು ಇಂದು ಗಲಬಾಭಾಯ್ ಅವರ ಜನ್ಮ ಶತಾಬ್ದಿಯ ಸಮಾರಂಭವನ್ನು ಉದ್ಘಾಟಿಸುತ್ತಾ ಅವರಿಗೆ ನೂರು ನೂರು ನಮನಗಳನ್ನು ಸಲ್ಲಿಸುತ್ತೇನೆ.  ಎಲ್ಲರ ಪರವಾಗಿ ನಮಿಸುತ್ತೇನೆ.

ಇಂದಿಗೆ 50 ವರ್ಷ ಮೊದಲು ಗಲಬಾಭಾಯ್ ಅವರಿಗೆ 50 ವರ್ಷ ವಯಸ್ಸಾಗಿತ್ತು.  ಅವರು ಎಂಟು ಸಣ್ಣ ಸಣ್ಣ ಹಾಲು ಮಂಡಲಗಳನ್ನು ಸ್ಥಾಪಿಸಿದರು.  ಈಗ ರೈತರ ಸಹಕಾರದಿಂದ, ಶ್ರಮದಿಂದ ಮತ್ತು ಶ್ರದ್ಧೆಯಿಂದ ಅದರಲ್ಲೂ ಬನಾಸ್ ಕಾಂಠಾದ, ಉತ್ತರ ಗುಜರಾತಿನ ನನ್ನ ತಾಯಂದಿರು, ಸೋದರಿಯರು ಪಶುಸಂಗೋಪನೆಯನ್ನು ತಮ್ಮ ಕುಟುಂಬದ ಸೇವೆಯ ಒಂದು ಅವಿಭಾಜ್ಯ ಅಂಗವಾಗಿ ಮಾಡಿಕೊಂಡರು.  

ಶ್ವೇತ ಕ್ರಾಂತಿಯ ಜನಕರಾದ ಶ್ರೀ ಗಲಬಾಭಾಯ್ ಅವರ ಜನ್ಮ ಶತಾಬ್ದಿ ಮತ್ತೊಂದು ಕಡೆ ಅವರ ಕೈಗಳಿಂದಲೇ ನೆಟ್ಟ ಸಸಿ ಅಂದರೆ ಎಂಟು ಮಂಡಲಗಳಿಂದ ಶುರುವಾದ ಸಸಿ ಇಂದು ಬನಾಸ್ ಡೈರಿಯ ರೂಪದಲ್ಲಿ ದೊಡ್ಡ ಆಲದ ಮರವಾಗಿ ಬೆಳೆದು ನಿಂತಿದೆ. ಸುವರ್ಣ ಜಯಂತಿಯನ್ನು ಆಚರಿಸಿಕೊಳ್ಳುತ್ತಿದೆ ಎನ್ನುವುದು ಒಂದು ಸುಯೋಗವಾಗಿದೆ.  ಈ 50 ವರ್ಷಗಳಲ್ಲಿ ಈ ಬನಾಸ್ ಡೈರಿಯನ್ನು ಮುನ್ನಡೆಸುತ್ತಾ, ಈ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಹಲವು ಅಧ್ಯಕ್ಷರು, ವ್ಯವಸ್ಥಾಪಕರು, ಕಾರ್ಮಿಕರ ಪಾತ್ರವಿದೆ.  ಈ 50 ವರ್ಷಗಳ ಪ್ರಯಾಣದಲ್ಲಿ ಡೈರಿಗಾಗಿ ದುಡಿದ ಮಹನೀಯರಿಗೆ ನಾನು ಬಹಳ ಬಹಳ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಅವರನ್ನು ಪ್ರಶಂಸಿಸುತ್ತೇನೆ.

ಸೋದರ ಸೋದರಿಯರೆ, ನೀವು ಮುಂಬೈಗೆ ಹೋಗಿ, ಸೂರತ್ ಗೆ ಹೋಗಿ, ಬೇರಾವುದೇ ಭಾಗಕ್ಕೆ ಹೋಗಿ ನೋಡಿದರೆ ಕಷ್ಟಗಳ ನಡುವೆಯೇ ಜೀವನ ಸಾಗಿಸಲು ಗುಜರಾತ್ ನಿಂದ ಬಂದವರಲ್ಲಿ ಕಫ್ ಮತ್ತು ಬನಾಸ್ ಕಾಂಠಾದ ರೈತರೇ ಹೆಚ್ಚು ಎಂದು ನಿಮಗೆ ಗೊತ್ತಾಗುತ್ತಿತ್ತು. ಇವರೆಲ್ಲ ತಮ್ಮ ಹಳ್ಳಿ, ತಾವಿದ್ದ ಪರಿಸರವನ್ನು ಬಿಟ್ಟು ಹೊಟ್ಟೆಪಾಡಿಗಾಗಿ ಎಲ್ಲಾದರೂ ಹೊರಗೆ ವಲಸೆ ಹೋಗುತ್ತಿದ್ದರು.  ಏಕೆಂದರೆ ಅಲ್ಲಿ ಯಾವುದೇ ರೀತಿಯ ನೈಸರ್ಗಿಕ ಸಂಪನ್ಮೂಲಗಳು ಇರಲಿಲ್ಲ. ಸೋದರ ಸೋದರಿಯರೆ, ಒಂದು ಸಲ ತಾಯಿ ನರ್ಮದೆ ಬಂದು ಈ ಬನಾಸ್ ನೆಲವನ್ನು ಮುಟ್ಟಿದರೆ ನನ್ನ ರೈತ ಮಣ್ಣನ್ನು ಚಿನ್ನವಾಗಿ ಬದಲಿಸಬಲ್ಲ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೆವು. ಇಂದು ತಾಯಿ ನರ್ಮದೆ ಬನಾಸ್ ಭೂಮಿಯನ್ನು, ಮರುಭೂಮಿಯಾಗಿರುವ ಈ ಮಣ್ಣನ್ನು ಚಿನ್ನದ ರೂಪದಲ್ಲಿ ಬದಲಿಸಿದ್ದಾಳೆ. 

ನಾನು ಆಗಷ್ಟೇ ಗುಜರಾತಿನ ಮುಖ್ಯಮಂತ್ರಿಯಾಗಿದ್ದೆ.  ನನಗಿನ್ನೂ ಚೆನ್ನಾಗಿ ನೆನಪಿದೆ.  ಹಲವಾರು ಸವಾಲುಗಳು ನನ್ನ ಮುಂದಿದ್ದವು. ಈ ಮೋದಿ ಮುಖ್ಯಮಂತ್ರಿ! ಏನು ಮಾಡಬಲ್ಲ? ಈತ ಒಮ್ಮೆಯಾದರೂ ಹಳ್ಳಿಯ ಸರಪಂಚನೂ ಆಗಬಲ್ಲ.  ಒಮ್ಮೆಯೂ ಚುನಾವಣೆ ಎದುರಿಸಿಲ್ಲ.  ಈತನಿಗೆ ಏನು ಬರುತ್ತದೆ, ಹೀಗೆ ನನ್ನನ್ನು ಬಹಳ ಅಪಹಾಸ್ಯ ಮಾಡುತ್ತಿದ್ದರು.  

ಆ ಸಮಯದಲ್ಲಿ ನನ್ನ ಮೊದಲನೆಯ ಸಾರ್ವಜನಿಕ ಕಾರ್ಯಕ್ರಮ ಡೀಸಾದಲ್ಲಿ, ಇದೇ ಮಣ್ಣಿನಲ್ಲಿ, ಇದೇ ಮೈದಾನದಲ್ಲಿ ನಡೆದಿತ್ತು.  ಅದು ಲೋಕ ಕಲ್ಯಾಣ ಸಮ್ಮೇಳನವಾಗಿತ್ತು.  ಆ ದಿನ ನಾನು ನೋಡಿದ ಜನರಿಗಿಂತ ಹಲವು ಪಟ್ಟು ಜನರನ್ನು ನನ್ನ ಕಣ್ಣುಗಳಿಂದ ಈ ದಿನ ನೋಡುತ್ತಿದ್ದೇನೆ.

ಸೋದರ ಸೋದರಿಯರೆ, ಬನಾಸ್ ಕಾಂಠಾದ ರೈತರಿಗೆ ನನ್ನ ಮೇಲೆ ಬಹಳ ಸಿಟ್ಟಿತ್ತು.  ಕೆಲವೊಮ್ಮೆ ಅವರು ನನ್ನ ಪ್ರತಿಕೃತಿಯನ್ನು ಸುಡುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ.  ಆದರೂ ನಾನು ಧೈರ್ಯ ವಹಿಸಿ ಅವರ ಮುಂದೆ ಹೋಗುತ್ತಿದ್ದೆ.  ಬನಾಸ್ ಕಾಂಠಾದ ಅದೃಷ್ವವನ್ನು ಬದಲಿಸಬೇಕಾದರೆ ನಾವು ನೀರನ್ನು ಉಳಿಸಬೇಕು. ರೈತರಿಗೆ ವಿದ್ಯುತ್ ಗಿಂತ ನೀರಿನ ಅವಶ್ಯಕತೆ ಹೆಚ್ಚು ಎಂದು ನಾನು ಅವರಿಗೆ ಹೇಳುತ್ತಿದ್ದೆ.  ಕೋಪಿಸಿಕೊಳ್ಳುತ್ತಿದ್ದ ಅದೇ ರೈತರು, ಬನಾಸ್ ಕಾಂಠಾದ ರೈತರು ನನ್ನ ಮಾತನ್ನು ಚಾಚೂತಪ್ಪದೆ ಪಾಲಿಸಿದರು.  ಹನಿ ನೀರಾವರಿ, ತುಂತು ನೀರಾವರಿ ಅಳವಡಿಸಿಕೊಂಡು ಗುಜರಾತ್ ಅನ್ನು ಮೊದಲನೇ ಸ್ಥಾನಕ್ಕೆ ಏರಿಸಿದರು ಎಂಬುದು ನನ್ನ ಸೌಭಾಗ್ಯವಾಗಿದೆ. ನಾನು ಆ ಎಲ್ಲ ರೈತರಿಗೆ, ಇಂದು ಆ ಎಲ್ಲ ರೈತರಿಗೆ ತಲೆಬಾಗಿಸಿ ವಂದಿಸುತ್ತೇನೆ.  ಅವರು ತಮ್ಮ ಭಾಗ್ಯವನ್ನಷ್ಟೇ ಬದಲಿಸಿಲ್ಲ ಮುಂಬರುವ ಹಲವಾರು ಪೀಳಿಗೆಗಳ ಭಾಗ್ಯವನ್ನು ಸಹ ಬದಲಿಸಿದ್ದಾರೆ.  

2007 ಅಥವಾ 2008 ಇರಬಹುದು. ಹೀಗೆಯೇ ರೈತರಿಗಾಗಿ ಒಂದು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನಾನು ಬನಾಸ್ ಕಾಂಠಾಗೆ ಆಗಮಿಸಿದ್ದೆ. ನನ್ನ ಮಿತ್ರರಾದ ಶ್ರೀ ಗೇನಾ ದಿವ್ಯಾಂಗರು. ಅವರು ನನ್ನನ್ನು ಭೇಟಿಯಾಗಲು ಬಂದಿದ್ದರು. ಅವರಿಗೆ ಎಲ್ಲರಂತೆ ಸಲೀಸಾಗಿ ನಡೆದಾಡುವುದು ಕಷ್ಟ. ಏಕೆಂದರೆ ಅವರಿಗೆ ಕಣ್ಣು ಕಾಣಿಸುವುದಿಲ್ಲ. ಆದರೂ ಅವರು ದೊಡ್ಡ ಪ್ರಗತಿಪರ ರೈತರು. ಅವರು ದೊಡ್ಡ ದೊಡ್ಡ ದಾಳಿಂಬೆ ಹಣ್ಣುಗಳನ್ನು ತಂದಿದ್ದರು. ದಾಳಿಂಬೆ ಎಷ್ಟು ದೊಡ್ಡದಾಗಿತ್ತೆಂದರೆ ತೆಂಗಿನಕಾಯಿಗಿಂತಲೂ ದೊಡ್ಡದಾಗಿತ್ತು. ಇಂತಹ ಅದ್ಭುತ ಹೇಗೆ ಸಾಧ್ಯವಾಯಿತೆಂದು ಶ್ರೀ ಗೇನಾ ಅವರನ್ನು ನಾನು ಅಚ್ಚರಿಯಿಂದ ಕೇಳಿದೆ. ಅದಕ್ಕೆ ಅವರು ನನ್ನ ತೋಟ ನೋಡಲು ಇಡೀ ಜಿಲ್ಲೆಯ ಜನರು ಬರುತ್ತಾರೆ. ನೋಡುತ್ತಾ ಇರಿ, ದಾಳಿಂಬೆ ಬೇಸಾಯದಲ್ಲಿ ಬನಾಸ್ ಕಾಂಠಾ ಮುಂದೆ ಬರುತ್ತದೆ ಎಂದು ಹೇಳಿದರು. ಒಂದು ಹಳ್ಳಿಯಿಂದ ಬಂದ ಶ್ರೇ ಗೇನಾ ಅವರು ನಮ್ಮ ಹೆಮ್ಮೆಯಾಗಿದ್ದಾರೆ ಅಲ್ಲವೇ? ಶ್ರೀ ಗೇನಾ ಅವರು ಬಹುಶಃ ಇಲ್ಲಿಗೆ ಬಂದಿರಬಹುದು. ನಮ್ಮ ಶ್ರೀ ಗೇನಾ ಅವರೇ ಎಲ್ಲಿ ಕುಳಿತಿದ್ದೀರಿ? ಎಂತಹ ಅದ್ಭುತವನ್ನು ಸಾಧಿಸಿದ್ದೀರಿ. ಸೋದರ ಸೋದರಿಯರೆ, ಬನಾಸ್ ಕಾಂಠಾದಲ್ಲಿ ಒಬ್ಬರು ಇಬ್ಬರು ಮಾತ್ರ ಪ್ರಗತಿಪರ ರೈತರಾಗಿಲ್ಲ, ಒಂದು ಚಳುವಳಿಯಾಗಿ ಬೆಳೆದು ನಿಂತಿದ್ದು ತಮ್ಮ ಛಾಪು ಮೂಡಿಸಿದ್ದಾರೆ. ಇಂದಿಗೂ ಬನಾಸ್ ಕಾಂಠಾದ ರೈತರು ಪ್ರತಿ ಹೆಕ್ಟೇರಿಗೆ ಆಲೂಗಡ್ಡೆಯಲ್ಲಿ ಅಧಿಕ ಇಳುವರಿ ತೆಗೆಯುವ ದಾಖಲೆಯನ್ನು ಬೇರೆ ಯಾರಿಗೂ ಮುರಿಯಲು ಆಗಿಲ್ಲ. ಈ ಕೆಲಸವನ್ನು ಬನಾಸ್ ಕಾಂಠಾ ಮಾಡಿ ತೋರಿಸಿದೆ. ಇಂದು ಬನಾಸ್ ಕಾಂಠಾ ಆಲೂಗಡ್ಡೆ ಕೃಷಿಯಿಂದಲೂ ಗುರುತಿಸಿಕೊಳ್ಳುತ್ತಿದೆ.

ಸೋದರ ಸೋದರಿಯರೆ, ರೈತರಿಗೆ ಕೆಲವು ಸಂಗತಿಗಳು ವರದಾನವಾಗುತ್ತವೆ. ಗಲಬಾಭಾಯಿ ಅವರು ಹಾಲಿನ ಡೈರಿಯನ್ನು ಆರಂಭಿಸಿದ ಸಮಯದಲ್ಲಿ ನೀರು ಇರಲಿಲ್ಲ, ಮರುಭೂಮಿಯಾಗಿತ್ತು, 10 ವರ್ಷದಲ್ಲಿ ಏಳು ವರ್ಷ ಬರಗಾಲ ಇರುತ್ತಿತ್ತು. ಇಲ್ಲಿ ಜನರು ದೇವರ ಕೃಪೆಯನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿದ್ದರು. ಆತ್ಮಹತ್ಯೆಯ ದಾರಿ ತುಳಿಯುವುದೊಂದೇ ಅವರಿಗೆ ಉಳಿದಿತ್ತು. ಅವರು ಈ ಜಿಲ್ಲೆಯನ್ನು ಪಶು ಸಂಗೋಪನೆಯತ್ತ ತಿರುಗಿಸಿದರು. ಜನರು ಪಶು ಪಾಲನೆ ಮಾಡುತ್ತಾ ಮಾಡುತ್ತಾ ತಮ್ಮ ಕುಟುಂಬವನ್ನು ನಡೆಸಿದರು, ಮಕ್ಕಳನ್ನು ಸಹ ಓದಿಸಿದರು, ಜೀವನದಲ್ಲಿ ಮುಂದೆ ಬಂದರು.         

ಸೋದರ ಸೋದರಿಯರೆ, ಇದೇ ಬನಾಸ್ ಕಾಂಠಾ, ಇದೇ ಗುಜರಾತ್ ಶ್ವೇತ ಕ್ರಾಂತಿಯ ಮುಂದಾಳತ್ವವನ್ನು ವಹಿಸಿತ್ತು. ಇಂದು ಬನಾಸ್ ಡೈರಿಯು ಶ್ವೇತ ಕ್ರಾಂತಿಯ ಜೊತೆಜೊತೆಗೆ ಸಿಹಿ ಕ್ರಾಂತಿ ಕಹಳೆಯನ್ನು ಸಹ ಊದಿದೆ. ಶ್ವೇತ ಕ್ರಾಂತಿ ನಡೆದ ಈ ಜಿಲ್ಲೆಯಲ್ಲಿ ಈಗ ಸಿಹಿ ಕ್ರಾಂತಿಯೂ ಆಗಲಿದೆ. ಸಿಹಿ ಅಂದರೆ ಮಧು ಕ್ರಾಂತಿ, ಜೇನುತುಪ್ಪ! ಬನಾಸ್ ಡೈರಿಯು ಹಾಲಿನ ವ್ಯವಸ್ಥೆಯನ್ನು ಮಾಡಿರುವಂತೆ ರೈತರಿಗೆ ಜೇನು ಸಾಕಾಣೆಯ ತರಬೇತಿಯನ್ನು ಸಹ ಆರಂಭಿಸಿದೆ. ಇಂದು ಆ ಜೇನುತುಪ್ಪದಿಂದ ಮೊದಲ ಪ್ಯಾಕೇಜಿಂಗ್ ಮಾಡಿ ಅವರು ಮಾರುಕಟ್ಟೆಗೆ ಬಿಟ್ಟಿದ್ದಾರೆ. ಗುಜರಾತಿನಲ್ಲಿ ಡೈರಿಯ ನೆಟ್ ವರ್ಕ್ ಸುಮಾರು ಎಲ್ಲ ಜಿಲ್ಲೆಗಳಲ್ಲೂ ಇದೆ. ಇಲ್ಲೆಲ್ಲ ರೈತರ ಸಮಿತಿಗಳನ್ನು ರಚಿಸಲಾಗಿದೆ. ಹಾಲಿನ ಜೊತೆಗೆ ರೈತರು ಹೊಲದಲ್ಲಿ ಜೇನು ಸಾಕಣೆಯನ್ನೂ ಮಾಡಬೇಕು. ಡೈರಿಗೆ ಹಾಲು ಹಾಕಲು ಹೋಗುವಂತೆ, ಜೇನು ತುಪ್ಪ ಕೊಡಲು ಸಹ ತೆಗೆದುಕೊಂಡು ಹೋಗುತ್ತಾರೆ. ಡೈರಿಯ ಗಾಡಿಗಳಲ್ಲಿ ಹಾಲು ಸಹ ಹೋಗಲಿದೆ, ಜೇನುತುಪ್ಪ ಸಹ ಹೋಗಲಿದೆ. ಹೆಚ್ಚುವರಿ ಲಾಭ ಬರುತ್ತದೆ. ಗುಜರಾತಿನ ಎಲ್ಲ ಡೈರಿಗಳು, ಎಲ್ಲ ರೈತರು ಈ ದಾರಿಯಲ್ಲಿ ಸಾಗಿ ಈಗಿರುವ ಶ್ವೇತ ಕ್ರಾಂತಿಯ ಜೊತೆಜೊತೆಗೆ ಸಿಹಿ ಕ್ರಾಂತಿಯನ್ನು ಸಹ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. 

ವಿಶ್ವದಲ್ಲಿ ಜೇನುತುಪ್ಪಕ್ಕೆ ಬೇಡಿಕೆ ಇದೆ, ಬಹು ದೊಡ್ಡ ಮಾರುಕಟ್ಟೆ ಇದೆ. ನಾವು ಜೇನು ಸಾಕಣೆಯಲ್ಲಿ ಮುಂದೆ ಬರಬೇಕು. ನರ್ಮದೆಯ ನೀರು ಬಂದಿದೆ. ನರ್ಮದೆಯ ಸಮೀಪದ ಪ್ರದೇಶಗಳಲ್ಲಂತೂ ಬಹಳ ದೊಡ್ಡ ಪ್ರಮಾಣದಲ್ಲಿ ಇದರ ಲಾಭ ದೊರಕುತ್ತದೆ. ಗೊಬ್ಬರ ಬಳಸುವ ವಿಧಾನಗಳನ್ನು ಬದಲಿಸಬೇಕಾಗುತ್ತದೆ. ಇದರಿಂದ ದೊಡ್ಡ ರೀತಿಯಲ್ಲಿ ಲಾಭ ಸಿಗುತ್ತದೆ. ಬನಾಸ್ ಕಾಂಠಾದ ರೈತರ ಮನಸ್ಸು ಬದಲಾಗಿದೆ, ಇದು ಸಹ ಬದಲಾಗುತ್ತದೆ ಎಂಬ ವಿಶ್ವಾಸ ನನಗಿದೆ.   ಇಂದು ಬನಾಸ್ ಡೈರಿಯು ಅಮುಲ್ ಬ್ರಾಂಡ್ ನಲ್ಲಿ ಚೀಸ್ ಉತ್ಪಾದನೆಯನ್ನು ಆರಂಭಿಸಿದೆ. ಗುಜರಾತಿನಲ್ಲಿ ಇರುವ ಡೈರಿಗಳೆಲ್ಲ ಚೀಸ್ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ವಿಶ್ವದ ಹಲವಾರು ರಾಷ್ಟ್ರಗಳು ಅಮುಲ್ ಬ್ರಾಂಡ್ ನ ಚೀಸ್ ಗೆ ಬೇಡಿಕೆ ಸಲ್ಲಿಸುತ್ತವೆ ಎಂಬುದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಎಷ್ಟೇ ಪ್ರಮಾಣದಲ್ಲಿ ಉತ್ಪತ್ತಿ ಮಾಡುತ್ತಿದ್ದರೂ ಕೊಳ್ಳುವ ಗ್ರಾಹಕರಿದ್ದಾರೆ. ಇಂದು ಬನಾಸ್ ಡೈರಿಯಲ್ಲಿ ಈ ಕೆಲಸ ನಡೆಯುತ್ತಿರುವುದಕ್ಕಾಗಿ ನಾನು ಅದಕ್ಕೆ ಸಂಬಂಧಿಸಿದವರನ್ನು ಅಭಿನಂದಿಸುತ್ತೇನೆ. ಬನಾಸ್ ಡೈರಿಯು ಒಂದು ದೊಡ್ಡ ಆರಂಭವನ್ನು ಮಾಡಿದೆ. ಕಾಂಕ್ರೇಚ್ ದೇಸಿ ಹಸುವಿನ ತಳಿಯ ಮೌಲ್ಯವೇನೆಂದು ನಮಗೆ ಗೊತ್ತು. ವೈಜ್ಞಾನಿಕ ಸಂಶೋಧನೆಗಳು ಸಹ ಗಿರ್ ತಳಿಯ ಹಸು, ಕಾಂಕ್ರೇಚ್ ಹಸುವಿನ ಮಹತ್ವವನ್ನು ಒಪ್ಪಿಕೊಂಡಿವೆ. ಕಾಂಕ್ರೇಚ್ ಹಸುವಿನಿಂದ ಸಿಗುವ ಹಾಲಿನಲ್ಲಿ ವಿಶೇಷ ಗುಣಗಳಿವೆ. 

ಈ ಹಾಲನ್ನು ಇಂದು ಮಾರುಕಟ್ಟೆಗೆ ಬಿಡಲಾಗಿದೆ. ಆರೋಗ್ಯದ ಕಾಳಜಿ ಇರುವ ಜನರು, ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಈ ಹಾಲು ತುಂಬಾ ಒಳ್ಳೆಯದು. ಕಾಂಕ್ರೇಚ್ ಹಸುವಿನ ಹಾಲು ಇದ್ದು ಮಾರುಕಟ್ಟೆಯಲ್ಲಿ ಇನ್ನು ಮುಂದೆ ಸಿಗುವುದರಿಂದ ಇಂತಹವರಿಗೆ ಇದರ ಸೇವನೆಯಿಂದ ಆರೋಗ್ಯ ಹೆಚ್ಚುತ್ತದೆ. ಇಂತಹ ಒಂದು ಭಗೀರಥ ಕಾರ್ಯವೂ ಇಂದು ಇಲ್ಲಿ ಆರಂಭವಾಗಿದೆ. ಇಲ್ಲಿ ಕಾಂಕ್ರೇಚ್ ತಳಿಯ ಹಸುಗಳ ಸಂಖ್ಯೆಯನ್ನು ಹೆಚ್ಚಿಸುವ, ತಳಿಯನ್ನು ಸುಧಾರಿಸುವ, ಅದರ ಸಾಮರ್ಥ್ಯವನ್ನು ಹೆಚ್ಚಿಸುವ, ಪ್ರತಿ ಹಸುವಿನ ಹಾಲಿನ ಉತ್ಪತ್ತಿ ಹೆಚ್ಚಿಸುವುದಕ್ಕಾಗಿ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿವೆ.  ಬನಾಸ್ ಡೈರಿಯು ಮತ್ತೊಂದು ಕೆಲಸ ಸಹ ಮಾಡಬೇಕು, ಮಾಡಬಲ್ಲದು. ಬನಾಸ್, ಸಾಂಭರ್ ಮತ್ತು ದುಗ್ಧ ಸಾಗರ್ ಈ ಮೂರೂ ಡೈರಿಗಳು ಸೇರಿ ಮಾಡಬಹುದು. ನಮ್ಮ ರೈತರು ತಾವು ಬೆಳೆಯುವ ಎರಡು ಬೆಳೆಗಳನ್ನು ಬಹಳ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ.

ಇಲ್ಲಿ ಹರಳನ್ನು ಹೆಚ್ಚಾಗಿ ಬೆಳೆಯುತ್ತಿದ್ದೇವೆ. ಶೇಕಡಾ 80ರಷ್ಟು ಹರಳನ್ನು ನಮ್ಮಲ್ಲಿ ಬೆಳೆಯಲಾಗುತ್ತಿದೆ. ಹರಳನ್ನು ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡಲಾಗುತ್ತಿದೆ. ವಿಶ್ವದ ಮಹತ್ವಪೂರ್ಣ ತಂತ್ರಜ್ಞಾನದಲ್ಲಿ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹರಳೆಣ್ಣೆಯಿಂದ ತಯಾರಿಸಿದ ವಸ್ತುಗಳು ಎಲ್ಲಕ್ಕಿಂತ ಹೆಚ್ಚು ಯಶಸ್ವಿಯಾಗಿವೆ. ಆದರೆ ನಾವು ಈ ಹರಳನ್ನು ತೀರಾ ಕಡಿಮೆ ಬೆಲೆಗೆ ಮಾರುತ್ತಿದ್ದೇವೆ. 

ಆದ್ದರಿಂದ ಬನಾಸ್, ದುಗ್ಧ ಸಾಗರ್, ಸಾಂಭರ್ ಮೂರೂ ಡೈರಿಗಳು ಸೇರಿ ಒಂದು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಬೇಕು. ನಮ್ಮ ರೈತರು ಇಲ್ಲಿ ಬೆಳೆಯುವ ಕ್ಯಾಸ್ಟರ್ ಅಥವಾ ಹರಳಿನ ಮೌಲ್ಯವರ್ಧನೆ ಮಾಡುವುದು ಹೇಗೆ? ನಮ್ಮ ಈ ಬೆಲೆಬಾಳುವ ಸಂಪತ್ತು ನೀರಿನ ವ್ಯಾಪಾರದಂತೆ ಹೊರಗೆ ಹರಿಯುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.

ಮತ್ತೊಂದು ಬೆಳೆಯೆಂದರೆ ಇಸಬ್ ಗೋಲ್. ಈ ಇಸಬ್ ಗೋಲ್ ನಲ್ಲಿ ಬಹು ದೊಡ್ಡ ಶಕ್ತಿಯಿದೆ. ಇದರಲ್ಲೂ ಹೆಚ್ಚು ಮೌಲ್ಯವರ್ಧನೆ ಮಾಡಬಹುದು. ಶ್ರೀ ಕುರಿಯನ್ ಅವರು ಬದುಕಿದ್ದಾಗ ಇಸಬ್ ಗೋಲ್ ನ ಮೌಲ್ಯವರ್ಧನೆಯಲ್ಲಿ ಕೆಲಸ ಮಾಡುವಂತೆ ಮನವಿ ಮಾಡಿದ್ದೆ. ಅವರು ಕೆಲಸ ಪ್ರಾರಂಭಿಸಿ ಇಸಬ್ ಗೋಲ್ ಐಸ್ ಕ್ರೀಮ್ ತಯಾರಿಸಿದ್ದರು. ಈ ಐಸ್ ಕ್ರೀಮ್ ಗೆ ಅವರು ಇಸಬ್ ಕೂಲ್ ಎಂಬ ಹೆಸರು ಕೊಟ್ಟಿದ್ದರು. ಆ ಸಮಯದಲ್ಲಿ ಅವರು ಆನಂದ್ ನಲ್ಲಿ ಇದರ ಮೌಲ್ಯವರ್ಧನೆ ಮಾಡಿದ್ದರು. ಇಸಬ್ ಗೋಲ್ ಗೆ ಸಂಬಂಧಿಸಿದಂತೆ ನಾವು ವೈಜ್ಞಾನಿಕ ರೀತಿಯಲ್ಲಿ ಸಂಶೋಧನೆ ಮಾಡಿದರೆ ಬಹು ದೊಡ್ಡ ಬದಲಾವಣೆ ತರಲು ಸಾಧ್ಯ. ನಾವು ಇದನ್ನು ಮಾಡಬೇಕಿದೆ.

ಸೋದರ ಸೋದರಿಯರೆ, ಈಗ ಇಡೀ ದೇಶದಲ್ಲಿ ನೋಟುಗಳು ಏನಾಗುತ್ತವೆ ಎಂಬ ವಿಷಯವಾಗಿ ಚರ್ಚೆ ನಡೆಯುತ್ತಿದೆ. ನೀವೇ ಹೇಳಿ ನವೆಂಬರ್ ಎಂಟನೆಯ ತಾರೀಖಿಗೆ ಮೊದಲು 100  ರೂಪಾಯಿಗೆ ಬೆಲೆ ಇತ್ತೆ? 50ರ ನೋಟಿಗೆ ಬೆಲೆ ಇತ್ತೆ? 20ರ ನೋಟಿಗೆ ಯಾವ ಬೆಲೆ ಇತ್ತೆ? ಸಣ್ಣ ಮೊತ್ತದ ನೋಟನ್ನು ಕೇಳುವವರು ಇದ್ದರೆ? 

ಪ್ರತಿಯೊಬ್ಬರೂ ದೊಡ್ಡ ನೋಟುಗಳನ್ನು ಕೇಳುತ್ತಿದ್ದರು. ಸಾವಿರ, ಐನೂರು; ಸಾವಿರ, ಐನೂರು; ಸಾವಿರ, ಐನೂರು; ಎಂಟನೆಯ ತಾರೀಖಿನ ಬಳಿಕ ದೇಶದಲ್ಲಿ 100 ರೂಪಾಯಿಯ ನೋಟಿನ ಮೌಲ್ಯ ಹೇಗೆ ಹೆಚ್ಚಾಯಿತು, ಅದರ ಶಕ್ತಿ ಹೆಚ್ಚಿ ಅದಕ್ಕೆ ಪ್ರಾಣ ಬಂದಂತೆ ಆಯಿತು. ಸೋದರ ಸೋದರಿಯರೆ, ಎಂಟನೆಯ ದಿನಾಂಕಕ್ಕೆ ಮೊದಲು ದೊಡ್ಡ ದೊಡ್ಡ ನೋಟುಗಳನ್ನು ಕೇಳುತ್ತಿದ್ದರು. ಐನೂರು, ಸಾವಿರ ನೋಟುಗಳನ್ನೇ ಹೆಚ್ಚಾಗಿ ಎಣಿಸಲಾಗುತ್ತಿತ್ತು. 25, 50, 100 ರ ನೋಟುಗಳನ್ನು ಕೇಳುವವರೇ ಇರಲಿಲ್ಲ. ಸಣ್ಣ ನೋಟುಗಳತ್ತ ಯಾರೂ ನೋಡುತ್ತಿರಲಿಲ್ಲ. ಎಂಟನೆಯ ತಾರೀಖಿನ ನಂತರ ದೊಡ್ಡ ನೋಟುಗಳತ್ತ ನೋಡಲು ಯಾರೂ ತಯಾರಿರಲಿಲ್ಲ, ಎಲ್ಲರೂ ಸಣ್ಣ ನೋಟುಗಳನ್ನು ಪಡೆಯಲು ತಯಾರಾದರು. 

ಸೋದರ ಸೋದರಿಯರೆ, ದೊಡ್ಡ ನೋಟಿನ ಶಕ್ತಿ ಇಲ್ಲವಾಗಿ ಸಣ್ಣ ನೋಟಿಗೆ ಬಲ ಬಂದಿದೆ ಎನ್ನುವ ವ್ಯತ್ಯಾಸ ಕಾಣುತ್ತಿದೆ. ದೊಡ್ಡ ಜನರ ಮುಂದೆ ಸಣ್ಣ ಜನರ ಶಕ್ತಿ ಹೆಚ್ಚಿಸುವುದಕ್ಕಾಗಿ ಇಂತಹ ಬಹಳ ದೊಡ್ಡ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ. ನೂರು ರೂಪಾಯಿಯ ನೋಟಿಗೆ ಶಕ್ತಿ ಬಂದಂತೆ ದೇಶದ ಬಡವರು, ದೇಶದ ಸಾಮಾನ್ಯ ಮನುಷ್ಯರ ಶಕ್ತಿ ಹೆಚ್ಚಿಸಲು ನಾನು ಈ ಕೆಲಸ ಮಾಡಿದ್ದೇನೆ. ಸೋದರರೆ, ನೀವು ಏನಾದರೂ ಖರೀದಿಸಲು ಹೋದಾಗ ಬಿಲ್ ಅಸಲಿಯೊ ಅಥವಾ ನಕಲಿಯೊ ಎಂದು ನಿಮಗೆ ಗೊತ್ತಾಗುತ್ತದೆ. ಅಸಲಿ ಬಿಲ್ ಕೇಳಿದರೆ ಸಣ್ಣ ವ್ಯಾಪಾರಿ ಸಹ ಬಿಲ್ ಬೇಕಾದರೆ ಬೇರೆ ಅಂಗಡಿಗೆ ಹೋಗಿ ಎನ್ನುತ್ತಾನೆ. ನಗದು ರೂಪದಲ್ಲಿ ಹಣ ಸ್ವೀಕರಿಸುವ ವ್ಯವಸ್ಥೆಯೇ ನಡೆಯುತ್ತಿದೆ. ಮನೆ ಬೇಕೆಂದು ಕೇಳಿದರೆ ಆ ಮನೆಯಾತ ಚೆಕ್ ಮೂಲಕ ಇಷ್ಟು, ನಗದು ರೂಪದಲ್ಲಿ ಇಷ್ಟು ಎಂದು ಕೇಳುತ್ತಾನೆ. ಈಗ ಆ ಬಡವ ಹಣ ತರುವುದು ಎಲ್ಲಿಂದ?

ಸೋದರ ಸೋದರಿಯರೆ, ಖೋಟಾ ನೋಟುಗಳನ್ನು ಯಾವ ರೀತಿ ಮುದ್ರಿಸುತ್ತಾ ಚಲಾವಣೆಗೆ ತರುತ್ತಿದ್ದರೆಂದರೆ ಅದರಿಂದ ಅರ್ಥ ವ್ಯವಸ್ಥೆಯೇ ಅಲುಗಾಡುವಂತಾಯಿತು. ಸೋದರ ಸೋದರಿಯರೆ, ಭಯೋತ್ಪಾದಕರ ವಿರುದ್ಧ ನನ್ನ ಹೋರಾಟ ನಡೆಯುತ್ತಿದೆ. ಖೋಟಾ ನೋಟುಗಳಿಂದ ಉಗ್ರಗಾಮಿಗಳ ಬಲ ಹೆಚ್ಚುತ್ತದೆ. ಗಡಿಯಲ್ಲಿ ಏನಾಗುತ್ತಿದೆ ಎಂದು ಅದರ ನೆರೆಯಲ್ಲೇ ವಾಸಿಸುವ ಎಲ್ಲರಿಗೂ ಗೊತ್ತು. 
ಎಂತಹ ಸಂಕಟಗಳನ್ನು ನಾವು ಎದುರಿಸುತ್ತಿದ್ದೇವೆ ಎಂದು ಈ ಬನಾಸ್ ಕಾಂಠಾ, ಪಾಟನ್ ಜಿಲ್ಲೆಗಳ ಜನರಿಗೆ ಚೆನ್ನಾಗಿ ಗೊತ್ತು.

ಸೋದರ ಸೋದರಿಯರೆ, ಖೋಟಾ ನೋಟುಗಳ ವ್ಯವಹಾರದಿಂದ ಭಾರತಕ್ಕೆ ಎಷ್ಟು ತೊಂದರೆಯಾಗಿದೆ ಎಂಬುದು ನಿಮಗೇ ಗೊತ್ತು. ಈಗ ನಮ್ಮ ಹೊರಗಿನ ಶತ್ರುಗಳಿಗೂ ತೊಂದರೆಯಾಗಿದೆ. ಏಕೆಂದರೆ ಅವರು ಈ ವ್ಯವಹಾರದಲ್ಲಿ ಶಾಮೀಲಾಗಿ ಹೊರಗಿನಿಂದಲೇ ನಮ್ಮ ದೇಶವನ್ನು ಎತ್ತಿ ಕಟ್ಟುತ್ತಿದ್ದರು. ನಕ್ಸಲೀಯರಾಗಿದ್ದ ಯುವಜನರೆಲ್ಲ ಶರಣಾಗತರಾಗಿ ಹಿಂತಿರುಗುತ್ತಿದ್ದಾರೆ. ಪ್ರತಿಯೊಬ್ಬರಿಗೂ ಮುಖ್ಯವಾಹಿನಿಗೆ ಹಿಂತಿರುಗಬೇಕು ಎಂದು ಅನಿಸತೊಡಗಿದೆ. ಉಗ್ರಗಾಮಿಗಳಿಗೆ ಬಲ ನೀಡುತ್ತಿದ್ದ ದಾರಿಗಳನ್ನು ಮುಚ್ಚುವಲ್ಲಿ ಯಶಸ್ವಿಯಾಗಿದ್ದೇವೆ. ಈ ಖೋಟಾ ನೋಟುಗಳ ವ್ಯವಹಾರಕ್ಕೆ ಮೃತ್ಯುಘಂಟೆ ಹೊಡೆಯಬೇಕೆಂದು ದೃಢ ನಿರ್ಧಾರ ಮಾಡಲಾಯಿತು. ಭ್ರಷ್ಟಾಚಾರದಿಂದಾಗಲಿ, ಕಪ್ಪು ಹಣದಿಂದಾಗಲಿ ತೊಂದರೆಯಾಗಿರಲಿಲ್ಲ. ಒಬ್ಬ ಭ್ರಷ್ಟಾಚಾರಿ ಮತ್ತೊಬ್ಬ ಭ್ರಷ್ಟಾಚಾರಿಗೆ ಏನಾದರೂ ಕೊಡಬೇಕಾಗುತ್ತಿತ್ತು. ಆದರೂ ಹೀಗೆ ಕೊಡುವ ಆ ಭ್ರಷ್ಟಾಚಾರಿಗೆ ದುಃಖವಾಗುತ್ತಿರಲಿಲ್ಲ. ಏನಿದ್ದರೂ ಈ ದೇಶದ ಪ್ರಾಮಾಣಿಕ ನಾಗರಿಕರು ದುಃಖಿಗಳಾಗಿದ್ದರು. ಈ ದೇಶದ ಪ್ರಾಮಾಣಿಕ ನಾಗರಿಕರು ತೊಂದರೆಗೊಳಗಾಗಿದ್ದರು. 70 ವರ್ಷಗಳವರೆಗೆ ಈ ಪ್ರಾಮಾಣಿಕ ಜನರನ್ನು ನೀವು ಲೂಟಿ ಮಾಡಿದಿರಿ, ಅವರಿಗೆ ತೊಂದರೆ ಕೊಟ್ಟಿರಿ, ಅವರ ಬದುಕನ್ನು ದುರ್ಭರವಾಗಿಸಿದಿರಿ. ಈಗ ಪ್ರಾಮಾಣಿಕ ಜನರ ಜೊತೆಗೆ ನಾನು ನಿಂತಿದ್ದೇನೆ. ನನ್ನ ದೇಶದ ಪ್ರಾಮಾಣಿಕ ಜನರು ಲಕ್ಷಾಂತರ ತೊಂದರೆಗಳನ್ನು ಅನುಭವಿಸಿದ ನಂತರವೂ ಸರ್ಕಾರದ ಈ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇಷ್ಟು ದೊಡ್ಡ ಕಾರ್ಯದಲ್ಲಿ ನನಗೆ ನೆರವು ನೀಡಿದ್ದಕ್ಕಾಗಿ ದೇಶದ 125 ಕೋಟಿ ನಾಗರಿಕರಿಗೆ ನಾನು ನೂರು ನೂರು ನಮನಗಳನ್ನು ಸಲ್ಲಿಸುತ್ತೇನೆ.  
    
ಸೋದರ ಸೋದರಿಯರೆ, ಈಗ ದೊಡ್ಡ ದೊಡ್ಡ ಬುದ್ಧಿಜೀವಿಗಳು ತಮ್ಮ ಭಾಷಣಗಳಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಂಡರಲ್ಲ, ಇದರಿಂದ ನಾವು ಬದುಕಿದ್ದಾಗಂತೂ ಯಾವುದೇ ಲಾಭವಾಗುವುದಿಲ್ಲ, ಸತ್ತ ನಂತರ ಲಾಭವಾಗಬಹುದು ಎಂದು ಹೇಳುತ್ತಾರೆ. 

ಸೋದರ ಸೋದರಿಯರೆ, ನಮ್ಮ ದೇಶದಲ್ಲಿ ಸಂತನೆಂದು ಘೋಷಿಸಿಕೊಂಡವರೊಬ್ಬರು “ಋಣಮ್ ಕೃತ್ಯಾ, ಘೃತಮ್ ಪೀವೆತ್” ಎಂದು ಹೇಳುತ್ತಿದ್ದರು. ಮರಣದ ನಂತರ ಏನಾಗುತ್ತದೆ ಎಂದು ಯಾರು ಬಲ್ಲರು. ಮಜ ಮಾಡಬೇಕೆಂದಿದ್ದರೆ ಬದುಕಿರುವಾಗಲೇ ಮಾಡಿ. ಏನನ್ನು ತಿನ್ನಬೇಕೋ ಎಲ್ಲ ತಿನ್ನಿ, ತುಪ್ಪ ಸೇವಿಸಬೇಕೆಂದರೆ ಸೇವಿಸಿ, ಆನಂದದಿಂದ ಜೀವಿಸಿ ಎಂದು ಹೇಳುತ್ತಿದ್ದರು. ಆದರೆ ಇಂತಹ ತತ್ವವನ್ನು ನಮ್ಮ ಭಾರತವು ಎಂದಿಗೂ ಸ್ವೀಕರಿಸಲಿಲ್ಲ. ಬಡ ತಂದೆತಾಯಿಯ ಬಳಿ ಹಣ ತುಂಬ ಕಡಿಮೆ ಇರುತ್ತದೆ. ಆದ್ದರಿಂದ ಈ ದಿನ ಸಾಯಂಕಾಲ ಪಲ್ಯ ಮಾಡುವುದು ಬೇಡ, ಸ್ವಲ್ಪ ಹಣ ಉಳಿಸಿದರೆ ನಾನು ಸತ್ತ ನಂತರ ನಮ್ಮ ಮಕ್ಕಳಿಗೆ ಯಾವುದಕ್ಕಾದರೂ ಆಗುತ್ತದೆ ಎಂದು ಆ ಬಡ ತಂದೆ ತಾಯಿ ತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ. ನಮ್ಮ ದೇಶ ಇರುವುದೇ ಹೀಗೆ. ಸಾವಿನ ಬಳಿಕ ನಮ್ಮ ಮುಂದಿನ ಪೀಳಿಗೆ ಸುಖವಾಗಿರಬೇಕು ಎಂದು ಯೋಚಿಸುವ ದೇಶ ನಮ್ಮದು. ನನ್ನ ದೇಶ ಸ್ವಾರ್ಥಿಗಳಿಂದ ತುಂಬಿದ ದೇಶವಲ್ಲ. ಕೇವಲ ತಮ್ಮ ಸುಖಕ್ಕಾಗಿ ಜೀವಿಸಬೇಕು ಎಂಬ ಚಿಂತನೆ ನನ್ನ ದೇಶದ್ದಲ್ಲ. ನನ್ನ ದೇಶದ ಚಿಂತನೆ ಮುಂದಿನ ಪೀಳಿಗೆಗಳ ಸುಖವನ್ನು ಬಯಸುತ್ತದೆ. ಇಂತಹ ಹೊಸ ಸ್ವಘೋಷಿತ ಸಂತರು “ಋಣಮ್ ಕೃತ್ಯಾ, ಘೃತಮ್ ಪೀವೆತ್” ಎಂಬಂತಹ ಮಾತುಗಳನ್ನು ಆಡುವುದಕ್ಕೆ ಮೊದಲು ಐವತ್ತು ಸಲ ಯೋಚಿಸಬೇಕು. 
     
ಸೋದರ ಸೋದರಿಯರೆ, ಸಂಸತ್ ಅಧಿವೇಶನ ನಡೆಯುತ್ತಿಲ್ಲ ಎನ್ನುವುದಕ್ಕಿಂತ ಅದನ್ನು ನಡೆಸಲು ಬಿಡುತ್ತಿಲ್ಲ ಎನ್ನುವುದನ್ನು ನೀವು ನೋಡಿದ್ದೀರಿ. ನಮ್ಮ ದೇಶದ ರಾಷ್ಟ್ರಪತಿಗಳಿಗೆ ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಅನುಭವವಿದೆ, ಆಡಳಿತ ನಡೆಸುವ ಶ್ರೇಷ್ಠ ವ್ಯಕ್ತಿಗಳ ನಡುವೆ ನಮ್ಮ ರಾಷ್ಟ್ರಪತಿ ಜೀವಿಸುತ್ತಿದ್ದಾರೆ. ಅವರು ಭಿನ್ನ ರಾಜಕೀಯ ವಿಚಾರಧಾರೆಗಳನ್ನು ಹೊಂದಿದವರಾಗಿದ್ದಾರೆ. ಆದರೆ ದೇಶದ ಸಂಸದರ ನಡವಳಿಕೆಯಿಂದ ಅವರು ಅದೆಷ್ಟು ಬೇಸತ್ತುರು, ದುಃಖಿಯಾದರು ಎಂದರೆ ಎರಡು ದಿನ ಮೊದಲು ಸಂಸದರನ್ನು ಸಾರ್ವಜನಿಕವಾಗಿ ಟೀಕಿಸಬೇಕಾಯಿತು. ವಿರೋಧ ಪಕ್ಷದ ಹೆಸರು ಹೇಳಿ ಟೀಕಿಸಬೇಕಾಯಿತು. ನಾವು ಚರ್ಚೆಗೆ ಸಿದ್ದರಿದ್ದೇವೆ ಎಂದು ಸರ್ಕಾರ ಹೇಳುತ್ತದೆ, ಪ್ರಧಾನ ಮಂತ್ರಿಗಳು ಮಾತನಾಡಲು ತಯಾರಾಗಿದ್ದಾರೆ ಎಂದು ಸರ್ಕಾರ ಹೇಳುತ್ತದೆ, ಪ್ರಧಾನ ಮಂತ್ರಿಗಳು ಸದನಕ್ಕೆ ಬಂದು ಹೇಳಿಕೆ ನೀಡಲು ಸಿದ್ಧರಿದ್ದಾರೆ ಎಂದು ಸರ್ಕಾರ ಹೇಳುತ್ತದೆ. ಆದರೆ ವಿರೋಧ ಪಕ್ಷಗಳು ಕೇಳಿಸಿಕೊಳ್ಳಲು ತಯಾರಾಗಿಲ್ಲದಿರುವುದರಿಂದ ಲೋಕಸಭೆಯಲ್ಲಿ ನನಗೆ ಮಾತನಾಡಲು ಬಿಡುವುದಿಲ್ಲ. ನಾನು ಜನರ ಸಭೆಯಲ್ಲಿ ಮಾತನಾಡುವ ದಾರಿಯನ್ನು ಆರಿಸಿಕೊಂಡಿದ್ದೇನೆ, ನನ್ನ ಸೋದರ ಸೋದರಿಯರೆ, ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಸಿಕ್ಕಿದ ದಿನ ನಾನು 125 ಕೋಟಿ ಜನರ ಧ್ವನಿಯನ್ನು ಅಲ್ಲಿ ತಲುಪಿಸುವ ಪ್ರಯತ್ನ ಮಾಡುತ್ತೇನೆ.      

ಸೋದರ ಸೋದರಿಯರೆ, ಮಹಾತ್ಮ ಗಾಂಧಿ ಜನಿಸಿದ ಈ ಮಣ್ಣಿನಿಂದ, ಸರ್ದಾರ್ ವಲ್ಲಭಬಾಯ್ ಪಟೇಲ್ ಜನಿಸಿದ ಈ ಮಣ್ಣಿನಿಂದ ನಾನು ವಿರೋಧ ಪಕ್ಷದವರೊಂದಿಗೆ ಸಾರ್ವಜನಿಕ ಮನವಿ ಮಾಡಿಕೊಳ್ಳುತ್ತೇನೆ. ಚುನಾವಣೆ ಬಂದಾಗ ನಾವು ಎಲ್ಲ ಪಕ್ಷಗಳು ಒಬ್ಬರು ಇನ್ನೊಬ್ಬರ ವಿರುದ್ಧ ಮಾತನಾಡುತ್ತೇವೆ, ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತೇವೆ, ಒಳ್ಳೆಯ ಮತ್ತು ಕೆಟ್ಟ ನೀತಿಗಳನ್ನು ಚರ್ಚಿಸುತ್ತೇವೆ, ಪ್ರತಿಯೊಂದು ರೀತಿಯಲ್ಲೂ ಎದುರಾಳಿಗಳನ್ನು ಹೊಡೆಯುತ್ತಿದ್ದೇವೇನೊ ಎಂಬಂತೆ ಎಲ್ಲ ಪಕ್ಷಗಳು ನಡೆದುಕೊಳ್ಳುತ್ತವೆ. ಆದರೆ ಎಲ್ಲ ಪಕ್ಷಗಳು ಒಂದು ಕೆಲಸವನ್ನು ಖಂಡಿತವಾಗಿ ಮಾಡುತ್ತವೆ, ಅದು ಯಾವುದು? ಮತದಾರರ ಪಟ್ಟಿಗಳನ್ನು ಸರಿ ಮಾಡುವುದು, ಅಧಿಕ ಜನರು ಮತದಾನದಲ್ಲಿ ಭಾಗವಹಿಸುವಂತೆ ಚಿಂತಿಸುವುದು ಮತ್ತು ಮತದಾರರಿಗೆ ಗುಂಡಿ ಅಥವಾ ಬಟನ್ ಒತ್ತುವುದು ಹೇಗೆ ಎಂದು ಕಲಿಸುವುದನ್ನು ಎಲ್ಲ ಪಕ್ಷಗಳೂ ಮಾಡುತ್ತವೆ. ಒಂದು ಕಡೆ ನೀತಿಗಳನ್ನು ವಿರೋಧಿಸುತ್ತಾರೆ, ಮತ್ತೊಂದೆಡೆ ಎದುರಾಳಿಯನ್ನು ಸೋಲಿಸಲು ತಮ್ಮೆಲ್ಲ ಶಕ್ತಿಯನ್ನು ಹಾಕುತ್ತಾರೆ. ಅದೇ ಇನ್ನೊಂದು ಕಡೆ ಎಲ್ಲರೂ ಮತದಾರರ ಪಟ್ಟಿಗಳತ್ತ ಗಮನ ಹರಿಸುತ್ತಾರೆ. ಎಲೆಕ್ಟ್ರಾನಿಕ್ ಮತ ಯಂತ್ರದ ಕಡೆ ಗಮನ ಕೊಡುತ್ತಾರೆ, ಹೆಚ್ಚು ಮತದಾರರು ಮತದಾನ ಮಾಡಲು ಬರಲಿ ಎನ್ನುವುದರತ್ತ ಗಮನ ಹರಿಸುತ್ತಾರೆ. ಏಕೆ? ಏಕೆಂದರೆ ಲೋಕೋದ್ಧಾರ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.  
    
ಐನೂರು ಮತ್ತು ಸಾವಿರದ ನೋಟುಗಳನ್ನು ಹಿಂಪಡೆದಿದ್ದರಿಂದ ಜನರ ಮನಸ್ಸು ಬದಲಾಗಿದೆ ಎಂದು ವಿರೋಧ ಪಕ್ಷಗಳಿಗೆ ಹೇಳುವ ಧೈರ್ಯವಿಲ್ಲ. ಕೆಲವು ಜನರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಮಾಡಿದ್ದು ಸರಿ, ಆದರೆ ಇನ್ನೂ ಒಂದು ವಾರ ತಡೆದಿದ್ದರೆ ಏನಾಗುತ್ತಿತ್ತು ಎಂದು ಹೇಳಿದರು. ಈ ಒಂದು ವಾರದಲ್ಲಿ ಯಾವ ಜಾದೂ ಮಾಡಲು ಸಾಧ್ಯ? ಈ ಒಂದು ವಾರ ತಡೆಯಬೇಕೆಂದು ಹೇಳುವುದರ ಉದ್ದೇಶವೇನು? ಆದರೆ ಎಲ್ಲ ಪಕ್ಷಗಳು ನಿರ್ಣಯವನ್ನು ಹಿಂಪಡೆಯಿರಿ ಎಂದು ಹೇಳುವುದಿಲ್ಲ. ಎಲ್ಲ ಪಕ್ಷಗಳು ಸರಿಯಾಗಿ ಜಾರಿಗೊಳಿಸಿ ಎಂದು ಹೇಳುತ್ತವೆ. ಚುನಾವಣೆಯಲ್ಲಿ ನಾವು ಒಬ್ಬರು ಮತ್ತೊಬ್ಬರನ್ನು ತೀವ್ರವಾಗಿ ವಿರೋಧಿಸುತ್ತೇವೆ. ಆದರೆ ಮತದಾನದ ಪ್ರಮಾಣ ಹೆಚ್ಚಿಸಲು ಶ್ರಮಿಸುತ್ತೇವೆ. ಮತದಾರರ ಪಟ್ಟಿ ಸರಿಪಡಿಸಲು ಶ್ರಮಿಸುತ್ತೇವೆ. ವಿದ್ಯುನ್ಮಾನ ಮತ ಯಂತ್ರದ ಮೂಲಕ ಮತದಾನ ಮಾಡುವುದು ಹೇಗೆ ಎಂದು ತರಬೇತಿ ನೀಡುತ್ತೇವೆ ಎಂಬುದನ್ನು ನಾನು ಎಲ್ಲ ಪಕ್ಷಗಳಿಗೂ ಹೇಳಲು ಬಯಸುತ್ತೇನೆ. ನೀವು ಮುಕ್ತವಾಗಿ ನನ್ನನ್ನು ವಿರೋಧಿಸಿ, ಟೀಕೆ ಮಾಡಿ ಆದರೆ ಜನರಿಗೆ ಬ್ಯಾಂಕಿಂಗ್ ವ್ಯವಹಾರ ಕಲಿಸಲು ಮುಂದಾಗಿ. ಎಲೆಕ್ಟ್ರಾನಿಕ್ ಪದ್ಧತಿ ಮೂಲಕ ಹಣ ತೆಗೆದುಕೊಳ್ಳುವುದು ಹೇಗೆ, ಪಡೆಯುವುದು ಹೇಗೆ ಎಂದು ಅವರಿಗೆ ಕಲಿಸಿಕೊಡಿ. ನಾವೆಲ್ಲರೂ ಸೇರಿ ದೇಶದ ಅದೃಷ್ಟವನ್ನು ಬದಲಿಸುವ ಒಂದು ಸದವಕಾಶ ದೊರೆತಿದೆ, ನಾವು ಅದನ್ನು ಬಳಸಿಕೊಳ್ಳೋಣ ಮತ್ತು ನೀವು ಸಹ ಪ್ರಯೋಜನ ಪಡೆಯಿರಿ.        

ಸೋದರರೆ, ನನ್ನ ವಿರೋಧ ಪಕ್ಷದವರು ಜನರನ್ನು ಈ ಕೆಲಸದಲ್ಲಿ ತೊಡಗಿಸಿ ರಾಜಕೀಯ ಲಾಭಗಳನ್ನು ಪಡೆದುಕೊಂಡರೆ, ದೇಶಕ್ಕೆ ಒಳಿತಾದರೆ ನನಗೆ ಅದರಿಂದ ಆನಂದವಾಗುತ್ತದೆ. ರಾಜಕೀಯಕ್ಕಿಂತ ಮೇಲಿನದು ರಾಷ್ಟ್ರನೀತಿ, ಪಕ್ಷಕ್ಕಿಂತ ದೇಶ ದೊಡ್ಡದು. ಸೋದರ ಸೋದರಿಯರೆ, ಬಡವರ ಬಗ್ಗೆ ಮಾತನಾಡುವುದು ಬೇರೆ, ಬಡವರಿಗಾಗಿ ನೀತಿಗಳನ್ನು ಮಾಡಿ ಕಠಿಣವಾಗಿ ಜಾರಿಗೊಳಿಸಲು ಸಮರ್ಪಣಾ ಮನೋಭಾವ ಬೇಕು. ಈ ಸಮರ್ಪಣಾ ಮನೋಭಾವದಿಂದ ಇಂದು ಈ ಸರ್ಕಾರವು ನಿಮ್ಮ ಸೇವೆಯಲ್ಲಿ ನಿರತವಾಗಿದೆ.  
    
ಸೋದರ ಸೋದರಿಯರೆ, ಈ ನಿರ್ಧಾರ ಸಾಮಾನ್ಯವಾದುದಲ್ಲ, ಬಹಳ ಕಷ್ಟದಿಂದ ತೆಗೆದುಕೊಂಡ ನಿರ್ಧಾರ, ಕಠಿಣ ನಿರ್ಧಾರವಾಗಿದೆ ಎಂದು ನಾನು ಮೊದಲ ದಿನದಿಂದಲೂ ಹೇಳುತ್ತಿದ್ದೇನೆ. ಬಹಳ ತೊಂದರೆಯಾಗುತ್ತದೆ, ಬಹಳ ಸಂಕಷ್ಟ ಬರುತ್ತದೆ, ಮೊದಲ 50 ದಿನಗಳಂತೂ ತೊಂದರೆ ಆಗಿಯೇ ಆಗುತ್ತದೆ. ಪ್ರತಿದಿನ ತೊಂದರೆಗಳು ಸ್ವಲ್ಪ ಹೆಚ್ಚಾಗಬಹುದು. ಆದರೆ 50 ದಿನಗಳು ಕಳೆದ ನಂತರ ಅದು ನಿಧಾನವಾಗಿ ಮೊದಲಿದ್ದಂತಹ ಸ್ಥಿತಿಯತ್ತ ಮುನ್ನಡೆಯುತ್ತದೆ. 50 ದಿನಗಳವರೆಗೆ ಈ ಕಷ್ಟಗಳು ಇರುತ್ತವೆ. 50 ದಿನಗಳ ನಂತರ ನಿಧಾನವಾಗಿ ನಿಮ್ಮ ಕಣ್ಣೆದುರೇ ಪರಿಸ್ಥಿತಿಗಳು ಸುಧಾರಿಸುತ್ತಿರುವುದು ಕಂಡು ಬರುತ್ತದೆ.      

ಸೋದರ ಸೋದರಿಯರೆ, ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಿಗೊಳಿಸಲು ಇದೊಂದು ಮಹತ್ವಪೂರ್ಣ ಹೆಜ್ಜೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರವು ಸತತವಾಗಿ ಕೆಲವು ಜನರ ಹಿಂದೆ ಬಿದ್ದಿರುವುದನ್ನು ನೀವು ನೋಡುತ್ತಿರುವಿರಿ. ಎಲ್ಲ ಕಡೆಗಳಲ್ಲೂ ಬ್ಯಾಂಕಿನವರು ಜೈಲಿಗೆ ಹೋಗುತ್ತಿದ್ದಾರೆ, ದೊಡ್ಡ ದೊಡ್ಡ ಮೊತ್ತದ ಸಾಲ ಪಡೆದು ಓಡಿ ಹೋಗಿದ್ದವರು ಸೆರೆವಾಸ ಅನುಭವಿಸುತ್ತಿದ್ದಾರೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 500 ಮತ್ತು 1000ರ ನೋಟುಗಳ ಚಲಾವಣೆ ನಿಲ್ಲಿಸುತ್ತಿದ್ದಾರೆ, ನಿಲ್ಲಿಸಲಿ ಬಿಡಿ. ನಾವು ಹಿಂಬಾಗಿಲಿನಿಂದ ಏನಾದರೂ ಮಾಡೋಣ ಎಂದು ಯೋಚಿಸಿದ್ದರು. ಆದರೆ ನಾನು ಹಿಂಬಾಗಿಲಿಗೂ ಕ್ಯಾಮರಾ ಇಟ್ಟಿದ್ದೇನೆಂದು ಅವರಿಗೆ ತಿಳಿದಿರಲಿಲ್ಲ. ಅವರೆಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ. ಯಾರೂ ಇಲ್ಲಿ   ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎರಡು ತಿಂಗಳು, ಮೂರು ತಿಂಗಳು, ಆರು ತಿಂಗಳು ಯಾರೆಲ್ಲ ನವೆಂಬರ್ ಎಂಟನೆಯ ತಾರೀಖಿನ ಬಳಿಕ ಪಾಪಗಳನ್ನು ಮಾಡಿದ್ದಾರೊ ಅವರು ಎಂತಹ ಪರಿಸ್ಥಿತಿಯಲ್ಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೋದರ ಸೋದರಿಯರೆ, ಅವರೆಲ್ಲರೂ ಶಿಕ್ಷೆ ಅನುಭವಿಸಲೇಬೇಕು. ದೇಶದ 125 ಕೋಟಿ ಜನರ ಕನಸನ್ನು ನುಚ್ಚುನೂರು ಮಾಡಿದ್ದಾರೆ. ಆ ಪಾಪದಿಂದ ಅವರು ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಭರವಸೆಯನ್ನು ನಾನು ದೇಶದ ಜನತೆಗೆ ನೀಡುತ್ತೇನೆ.       

ಸೋದರ ಸೋದರಿಯರೆ, ನೀವೆಲ್ಲರೂ ಕಷ್ಟಗಳನ್ನು ಎದುರಿಸಿದ್ದೀರಿ. ತೊಂದರೆ ಅನುಭವಿಸಿದ್ದೀರಿ, ಇನ್ನೂ ಎದುರಿಸಬೇಕಾಗಿದೆ. ದೇಶಕ್ಕಾಗಿ ನೀವು ಇದನ್ನು ಬೆಂಬಲಿಸುತ್ತಿದ್ದೀರಿ. ಪ್ರಾಮಾಣಿಕ ಜನರು ಸರತಿಯಲ್ಲಿ ನಿಂತಿದ್ದಾರೆ ಎಂದು ಕೆಲವು ಜನರು ಹೇಳುತ್ತಾರಲ್ಲವೇ? ಹೌದು, ಪ್ರಾಮಾಣಿಕ ಜನರು ತಮಗಾಗಿ ಸಾಲಿನಲ್ಲಿ ನಿಲ್ಲುವುದಿಲ್ಲ, ದೇಶಕ್ಕಾಗಿ ನಿಲ್ಲುತ್ತಾರೆ. ಸೋದರ ಸೋದರಿಯರೆ, ಅವರು ದೇಶಕ್ಕಾಗಿ ನಿಲ್ಲುತ್ತಾರೆ.  
    
ಸೋದರರೆ, ಈಗ ಕಾಲ ಬದಲಾಗಿದೆ. ಹಿಂದೆ ನಮ್ಮ ಅಜ್ಜ-ಅಜ್ಜಿಯನ್ನು ಕೇಳಿದರೆ ಅವರು ಒಂದು ಕಾಲದಲ್ಲಿ ಎತ್ತಿನ ಗಾಡಿಯ ಚಕ್ರದಷ್ಟು ದೊಡ್ಡ ಬೆಳ್ಳಿಯ ನಾಣ್ಯವನ್ನು ನಾವು ನೋಡಿದ್ದೇವೆ, ಉಪಯೋಗಿಸಿದ್ದೇವೆ ಎಂದು ಹೇಳುತ್ತಿದ್ದರು. ಸೋದರ ಸೋದರಿಯರೆ, ಆ ಬೆಳ್ಳಿಯ ನಾಣ್ಯ ಬದಲಾಗುತ್ತಾ ಬದಲಾಗುತ್ತಾ ಎಷ್ಟು ಲೋಹಗಳು ಬದಲಾದವು. ತಾಮ್ರ ಬಂತು, ನಂತರ ಬೇರೆಬೇರೆ ಲೋಹದ ನಾಣ್ಯಗಳು ಬಂದವು. ನಿಧಾನವಾಗಿ ನಾವು ಕಾಗದಕ್ಕೆ ಬದಲಾದೆವು. ಬೆಳ್ಳಿಯ ರೂಪಾಯಿ ಇದ್ದರೂ ಅದನ್ನು ಹಣವೆಂದೇ ಪರಿಗಣಿಸುತ್ತಿದ್ದೆವು. ಈಗ ಕಾಗದದ ಹಣ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಹಿಂದೆ ಬೆಳ್ಳಿ ರೂಪಾಯಿ ಇತ್ತು, ನಿಧಾನವಾಗಿ ಕಾಗದದ ರೂಪಾಯಿ ಬಂದಿತು. 
    
ಸೋದರ ಸೋದರಿಯರೆ, ಈಗಂತೂ ಕಾಲ ಬದಲಾಗಿದೆ. ಈಗಂತೂ ನಿಮ್ಮ ಮೊಬೈಲ್ ಫೋನ್ ಗೇ ನಿಮ್ಮ ಬ್ಯಾಂಕ್ ಬಂದಿದೆ. ನಿಮ್ಮ ಹಣದ ಚೀಲ ಸಹ ನಿಮ್ಮ ಮೊಬೈಲ್ ಫೋನ್ ನಲ್ಲಿದೆ. ನೀವು ಚಹಾ ಕುಡಿಯಲು ಹೋದಾಗ ಬಟನ್ ಒತ್ತಿದರೆ ಚಹಾ ಅಂಗಡಿಯವರಿಗೆ ಹಣ ತಲುಪುತ್ತದೆ. ರಸೀದಿ ಸಿಗುತ್ತದೆ. ಈ ಮಧ್ಯೆ ಜನರು ಚೆಕ್ ಕೊಡುತ್ತಿದ್ದರು. ಆದರೆ ಕೆಲವೊಮ್ಮೆ ಎರಡು ತಿಂಗಳ ನಂತರ ಚೆಕ್ ಬೌನ್ಸ್ ಆಗಿ ಹಿಂತಿರುಗಿ ಬರುತ್ತಿತ್ತು. ನಂತರ ನ್ಯಾಯಾಲಯದಲ್ಲಿ ದಾವೆ ಹಾಕಬೇಕಾಗಿತ್ತು. ಇಂತಹ ದಾವೆಗಳೇ ಹೆಚ್ಚಾಗಿ ನಡೆಯುತ್ತಿದ್ದವು. ನಾನು ಯುವ ಜನತೆಗೆ ಧನ್ಯವಾದ ತಿಳಿಸುತ್ತೇನೆ. ತಾವೆಲ್ಲರೂ ಸೇರಿ ಒಂದು ದೊಡ್ಡ ಜವಾಬ್ದಾರಿ ತೆಗೆದುಕೊಂಡಿದ್ದೀರಿ. ಅದಕ್ಕಾಗಿ ನಾನು ನಿಮಗೆಲ್ಲಾ ಶುಭಾಶಯಗಳನ್ನು ಹೇಳುತ್ತೇನೆ. ಬನಾಸ್ ಕಾಂಠಾ ಜಿಲ್ಲೆಯನ್ನು ನೀವೆಲ್ಲರೂ ಇ-ಪರ್ಸ್ ಗೆ ಸೇರಿಸಿರಿ. ಜನರನ್ನು ಇ-ಮೊಬೈಲ್ ಬ್ಯಾಂಕಿಂಗ್ ಗೆ ಸೇರಿಸುವ ಕಾರ್ಯದಲ್ಲಿ ನೀವೆಲ್ಲರೂ ಗೆಲ್ಲುತ್ತೀರಿ ಎಂಬ ನಂಬಿಕೆ ನನಗಿದೆ.       

ಸೋದರ ಸೋದರಿಯರೆ, ಕಾಗದದ ಕಾಲವೂ ಮುಗಿಯುತ್ತಾ ಬಂದಿದೆಯೆಂದು ನಮಗೆಲ್ಲಾ ತಿಳಿದಿದೆ. ಈಗ ನಿಮ್ಮ ಮೊಬೈಲ್ ಫೋನೇ ನಿಮ್ಮ ಬ್ಯಾಂಕ್ ಆಗಿದೆ. ಒಂದು ಸಲ ಬ್ಯಾಂಕಿಗೆ ಹಣ ಜಮೆಯಾದರೆ ನೀವು ಬ್ಯಾಂಕಿನಲ್ಲಿ ಸಾಲಾಗಿ ನಿಲ್ಲುವ ಅವಶ್ಯಕತೆಯಿಲ್ಲ. ನೀವು ಎಟಿಎಂ ಬಳಿ ಸಾಲಾಗಿ ನಿಲ್ಲುವ ಅವಶ್ಯಕತೆಯೂ ಇರುವುದಿಲ್ಲ. ನಿಮ್ಮ ಸಮಯ ಹಾಳು ಮಾಡಿಕೊಳ್ಳುವುದು ಬೇರೆ. ಪತ್ರಿಕೆಗಳಲ್ಲಿ ಜಾಹಿರಾತು ಬರುತ್ತದೆ, ಟಿವಿಯಲ್ಲಿ ಜಾಹಿರಾತು ಬರುತ್ತದೆ. ನಿಮ್ಮ ಹಣ ಬ್ಯಾಂಕಿನಲ್ಲಿದ್ದರೆ ನೀವು ನಿಮ್ಮ ಮೊಬೈಲ್ ಫೋನ್ ನಿಂದ ನಿಮಗೆ ಬೇಕಾದುದನ್ನು ಖರೀದಿಸಬಹುದು. ಚೆಕ್ ಬೌನ್ಸ್ ಆಗಬಹುದು. ಆದರೆ ಮೊಬೈಲ್ ಫೋನ್ ನಿಂದ ಹಣ ನೀಡಿದರೆ ಹಣ ಸಿಕ್ಕಿದೆ ಅಥವಾ ಹಣ ತಲುಪಿದೆ ಎಂದು ಎದುರಿಗೇ ರಸೀದಿ ಬರುತ್ತದೆ. ಬೌನ್ಸ್ ಆಗುತ್ತದೆ ಎನ್ನುವಂತೆಯೇ ಇಲ್ಲ. ಹಣ ತಲುಪಿದೆ ಎಂದು ಅಲ್ಲೇ ಎದುರಿಗೆ ತಿಳಿಯುತ್ತದೆ.      

ಸೋದರ ಸೋದರಿಯರೆ, ಭಾರತವು ವಿಶ್ವದಲ್ಲಿ ವೇಗವಾಗಿ ಪ್ರಗತಿ ಹೊಂದಲು ಬಯಸುತ್ತದೆ. ವೇಗವಾಗಿ ಬೆಳೆಯಬೇಕಾದರೆ ಈ ನೋಟುಗಳ ಕಂತೆಯ ರಾಶಿ, ಈ ನೋಟುಗಳ ಪರ್ವತ ಸಹ ನಮ್ಮ ಆರ್ಥಿಕತೆಯನ್ನು ಅದುಮುತ್ತದೆ. ಕಾಳ ಧನಿಕರು ಮತ್ತು ಭ್ರಷ್ಟಾಚಾರಿಗಳಿಗೆ ಅದು ಉಪಯೋಗಕ್ಕೆ ಬರುತ್ತದೆ. ಬಡವರ ಶಕ್ತಿ ಕಡಿಮೆಯಾಗುತ್ತದೆ. ಸಾವಿರದ ನೋಟಿಗೆ ಬೆಲೆ ಇದ್ದು, ನೂರರ ನೋಟಿಗೆ ಬೆಲೆ ಇರಲಿಲ್ಲ. ಇದೇ ರೀತಿ ಶ್ರೀಮಂತರಿಗೆ ಬೆಲೆ ಇದ್ದು ಬಡವರಿಗೆ ಇರಲಿಲ್ಲ. ಇಂದು ಬಡವರ ಶಕ್ತಿ ಹೆಚ್ಚಿದೆ. ಹಾಗೆಯೇ ನೂರರ ನೋಟಿಗೂ ಬೆಲೆ ಬಂದಿದೆ. ನೀವು ನಿಮ್ಮ ಇ-ಪರ್ಸ್ ಅನ್ನು ಮೊಬೈಲ್ ಗೆ ಅಳವಡಿಸಿಕೊಂಡರೆ ಬ್ಯಾಂಕಿನಲ್ಲಿ ಸಾಲು ನಿಲ್ಲುವದನ್ನು ತಪ್ಪಿಸಿ ಬ್ಯಾಂಕೇ ನಿಮ್ಮ ಮೊಬೈಲ್ ನಲ್ಲಿ ಸಾಲು ನಿಲ್ಲುವಂತೆ ಮಾಡಬಹುದು. ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ, ದೇಶದ ಜನರಲ್ಲಿ ಮನವಿ ಮಾಡುತ್ತೇನೆ, ನಾನು ಮಾಧ್ಯಮ ಮಿತ್ರರಲ್ಲಿ ವಿಶೇಷ ಪ್ರಾರ್ಥನೆ ಮಾಡಲು ಇಚ್ಛಿಸುತ್ತೇನೆ. ನನ್ನ ಬಗ್ಗೆ ವಿಮರ್ಶೆ ಮಾಡುವುದು ನಿಮ್ಮ ಹಕ್ಕು, ಖಂಡಿತಾ ಮಾಡಿ. ಸಾಲಿನಲ್ಲಿ ನಿಲ್ಲುವವರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ನೀವು ತೋರಿಸಿಕೊಳ್ಳುತ್ತಿದ್ದೀರಿ. ಅದರ ಜೊತೆಜೊತೆಗೆ ನೀವು ಈಗ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲವೆಂದು ತೋರಿಸಿ. ಬ್ಯಾಂಕ್ ನಿಮ್ಮ ಮೊಬೈಲ್ ಫೋನ್ ನಲ್ಲಿ ಸರತಿಯಲ್ಲಿ ಬಂದು ನಿಲ್ಲುತ್ತದೆ. ಬ್ಯಾಂಕ್ ಗಳು ನಮ್ಮಲ್ಲಿ ಈ ತಂತ್ರಜ್ಞಾನವಿದೆ, ಈ ವ್ಯವಸ್ಥೆ ಇದೆ, ನಮ್ಮಲ್ಲಿ ಹಣವಿಡಿ ಎಂದು ಕೇಳುವ ದಿನವೂ ಬರುತ್ತದೆ. 
    
ಸೋದರ ಸೋದರಿಯರೆ, ದೇಶವು ಈಗ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಖೋಟಾ ನೋಟುಗಳನ್ನು ಸಹಿಸುವುದಿಲ್ಲ. ಈಗ ಕಪ್ಪು ಹಣವನ್ನು ಸಹಿಸುವುದಿಲ್ಲ. ಬಡವರನ್ನು ಲೂಟಿ ಮಾಡುವ ಆಟ, ಮಧ್ಯಮ ವರ್ಗದವರನ್ನು ಶೋಷಣೆ ಮಾಡುವ ಆಟ ಈಗ ನಡೆಯುವುದಿಲ್ಲ. ಗುಜರಾತ್ ನ ನನ್ನ ಸೋದರ ಸೋದರಿಯರೆ, ಇದಕ್ಕಾಗಿ ನನಗೆ ನಿಮ್ಮ ಆಶೀರ್ವಾದ ಬೇಕು. ಎಲ್ಲರೂ ಎದ್ದು ನಿಂತು ಎರಡೂ ಕೈಗಳಿಂದ ಚಪ್ಪಾಳೆ ತಟ್ಟುತ್ತಾ ನನಗೆ ಆಶೀರ್ವಾದ ಮಾಡಿ. ಡೀಸಾ ದ ನನ್ನ ಸೋದರ ಸೋದರಿಯರೆ, ಆಶೀರ್ವಾದ ಮಾಡಿ. ಸಂಪೂರ್ಣ ಶಕ್ತಿ ತುಂಬಿ ಆಶೀರ್ವಾದ ಮಾಡಿ. 
    
ಭಾರತ ಮಾತೆಗೆ ಜಯವಾಗಲಿ  
ಭಾರತ ಮಾತೆಗೆ ಜಯವಾಗಲಿ 
ಭಾರತ ಮಾತೆಗೆ ಜಯವಾಗಲಿ 
    
ಈ ಹೋರಾಟ, ಈ ಹೋರಾಟ ಭಾರತವನ್ನು ಬದಲಿಸಲು, ಈ ಹೋರಾಟ ಭ್ರಷ್ಟಾಚಾರವನ್ನು ನಿರ್ಮೂಲ ಮಾಡಲು, ಈ ಹೋರಾಟ ಕಪ್ಪು ಹಣ ನಿರ್ನಾಮ ಮಾಡಲು, ಈ ಹೋರಾಟ ದೇಶವನ್ನು ಖೋಟಾ ನೋಟುಗಳಿಂದ ಮುಕ್ತಿಗೊಳಿಸಲು ಅದಕ್ಕಾಗಿ ಈ ಬನಾಸ್ ಮಣ್ಣು ನನಗೆ ಆಶೀರ್ವಾದ ಮಾಡಿದರೆ ನಾನು ನಿಮಗೆಲ್ಲಾ ಋಣಿಯಾಗಿರುತ್ತೇನೆ. ನಾನು ನಿಮ್ಮೆಲ್ಲರಿಗೂ ಆಭಾರಿಯಾಗಿದ್ದೇನೆ. ಮತ್ತೊಮ್ಮೆ ಹೇಳಿ  
    
ಭಾರತ ಮಾತೆಗೆ ಜಯವಾಗಲಿ  
ಭಾರತ ಮಾತೆಗೆ ಜಯವಾಗಲಿ 
ಭಾರತ ಮಾತೆಗೆ ಜಯವಾಗಲಿ 
ಬಹಳ ಬಹಳ ಧನ್ಯವಾದ!