Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ನಲ್ಲಿ ನಡೆದ ಶಿಬಿರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ

ಗುಜರಾತ್ ನಲ್ಲಿ ನಡೆದ ಶಿಬಿರದಲ್ಲಿ ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ


ನನ್ನ ಪ್ರೀತಿಯ ದೇಶವಾಸಿಗಳೇ, ದೇವರು ಇಂಥದ್ದೊಂದು ಕುಟುಂಬವನ್ನು ಆಯ್ಕೆ ಮಾಡಿರಬಹುದು. ಆ ಕುಟುಂಬಗಳಿಗೆ ವಿಶೇಷ ಚೇತನ ಮಕ್ಕಳನ್ನು ಕಳಿಸಿರಲೂ ಬಹುದು. ದೇವರು ಈ ಕುಟುಂಬ ಅತ್ಯಂತ ಭಾವನಾತ್ಮಕವಾದುದು ಎಂಬುದರ ಬಗ್ಗೆ ದೇವರಿಗೂ ವಿಶ್ವಾಸ ಬಂದಿರಬೇಕು. ಅದು ಸುಸಂಸ್ಕೃತ ಕುಟುಂಬ ಅವರು ವಿಶೇಷ ಚೇತನ ಮಗುವನ್ನು ಬೆಳೆಸಿ ನಿಲ್ಲಿಸುತ್ತಾರೆ ಎನ್ನುವ ವಿಶ್ವಾಸ ದೇವರಿಗೂ ಮೂಡಿರಬಹುದು. ಈ ಕಾರಣಗಳಿಂದಾಗಿಯೇ ದೇವರು ಈ ಕುಟುಂಬಗಳನ್ನು ಆಯ್ಕೆ ಮಾಡಿಕೊಂಡಿದ್ದಾನೆ. ವಿಶೇಷ ಚೇತನ ಮಗುವು ಇಡೀ ಸಮಾಜದ ಜವಾಬ್ದಾರಿ, ಆ ಮಗುವು ಒಂದು ಕುಟುಂಬದಲ್ಲಿ ಜನಿಸಿರಬಹುದು ಅದು ಇಡೀ ದೇಶದ ಜವಾಬ್ದಾರಿ ಮತ್ತು ನಾವು ಆ ಜವಾಬ್ದಾರಿಯನ್ನು ಪೂರೈಸಲೇಬೇಕು. ನಾವು ಆ ರೀತಿಯ ಭಾವನಾತ್ಮಕ ಸೂಕ್ಷ್ಮತೆಯನ್ನು ಹೊಂದಿರಲೇಬೇಕು.
ನಾನು ಗುಜರಾತಿನಲ್ಲಿದ್ದ ಸಂದರ್ಭದಲ್ಲಿ ಇಂತಹ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದೆ . ರಾಜ್ ಕೋಟ್ ನಲ್ಲೇ ನನ್ನ ಸ್ನೇಹಿತರಾದ ಡಾ.ಪಿ.ವಿ.ದೋಶಿ ಅಂಥದ್ದೊಂದು ಶಾಲೆಯ ಒಡನಾಡಿಯಾಗಿದ್ದರು. ಈ ನೆಪದಲ್ಲಿ ನಾನು ನಿರಂತರವಾಗಿ ವಿಶೇಷ ಚೇತನ ಮಕ್ಕಳನ್ನು ಭೇಟಿ ಮಾಡುವ ಅವಕಾಶ ಪಡೆಯುತ್ತಿದೆ. ಅವರ ಜತೆ ವಿಶೇಷ ಚೇತನ ಮಕ್ಕಳ ಶಾಲೆಗೆ ಹೋಗುತ್ತಿದ್ದೆ. ಡಾ.ದೋಶಿ ಅತ್ಯಂತ ಸಮರ್ಪಣೀಯ ಮತ್ತು ಪ್ರೀತಿ ಪೂರ್ವಕವಾಗಿ ವಿಶೇಷ ಚೇತನ ಮಕ್ಕಳ ಜತೆ ನನ್ನನ್ನು ಜೋಡಿಸಿದ್ದರು. ಅವರ ಪುತ್ರಿಯೂ ಇದೇ ಸೇವೆಗೆ ತನ್ನನ್ನು ಸಮರ್ಪಣೆ ಮಾಡಿಕೊಂಡಿದ್ದರು. ರಾಜಕಾರಣಕ್ಕೆ ಪ್ರವೇಶ ಮಾಡುವ ಮುನ್ನವೇ ನನಗೆ ಈ ಅನುಭವ ಆಗಿತ್ತು. ನಾನಿನ್ನೂ ಆಗ ಯುವಕ. ಆಗಾಗ ಡಾ.ದೋಶಿ ಅವರ ಮನೆಗೆ ಭೇಟಿ ನೀಡುತ್ತಿದ್ದೆ. ಕೆಲವೊಮ್ಮೆ ಅವರೊಂದಿಗೂ ಹೋಗುತ್ತಿದ್ದೆ. ಹೀಗಾಗಿ ನನಗೆ ಅವರಲ್ಲಿದ್ದ ಗುಣ ಬೆಳೆದಿತ್ತು. ಅವರು ಹೊಂದಿದ್ದ ಭಾವನಾತ್ಮಕತೆ, ಅವರಲ್ಲಿದ್ದ ಜಾಗೃತಿಭಾವ ನನಗೆ ಬೋಧನೆಯಾಗಿತ್ತು. ನಾನು ಅಧಿಕಾರ ಪಡೆದಾಗ, ಜವಾಬ್ದಾರಿ ಹೊತ್ತುಕೊಂಡಾಗ ನಾನು ಯಾವ ಮಹತ್ತರವಾದ ತೀರ್ಮಾನ ಮಾಡಿದ್ದೆ ಎನ್ನುವುದನ್ನು ನೀವೇ ಕಂಡಿದ್ದೀರಿ. ಸಾಮಾನ್ಯವಾಗಿ ಒಬ್ಬ ಆರೋಗ್ಯವಂತ ಮಗು ಒಂದು ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ನೂರಕ್ಕೆ ಕನಿಷ್ಟ 35ರಷ್ಟು ಅಂಕಗಳನ್ನು ಪಡೆಯಬೇಕು. ಹೀಗಾಗಿ ನಾವು ವಿಶೇಷ ಚೇತನ ಮಗುವು ಕನಿಷ್ಟ 25 ಅಂಕಗಳನ್ನು ಪಡೆದರೆ ಉತ್ತೀರ್ಣನಾಗುವ ನಿಯಮವನ್ನು ತಂದೆವು. ಕಾರಣ ಸಾಮಾನ್ಯ ಮಗುವಿಗಿಂತಲೂ ವಿಶೇಷ ಚೇತನ ಮಗುವು ಓದಲು ಮೂರು ಪಟ್ಟು ಹೆಚ್ಚು ಶ್ರಮ ಹಾಕುತ್ತದೆ. ಬುಕ್ ಶೆಲ್ಫ್ ನಿಂದ ಒಂದು ಪುಸ್ತಕವನ್ನು ತಗೆದುಕೊಳ್ಳಲು ಮೂರು ಪಟ್ಟು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ವಿಶೇಷ ಚೇತನ ಮಗುವಿಗೆ ವಿಶೇಷವಾದ ಅವಕಾಶಗಳನ್ನು ನಾವು ಮಾಡಿಕೊಡಬೇಕಿದೆ. ನಾನು ಗುಜರಾತಿನಲ್ಲಿದ್ದ ಸಂದರ್ಭದಲ್ಲಿ ಇಂತಹ ಹಲವು ಮಹತ್ತರವಾದ ನಿರ್ಧಾರಗಳನ್ನು ಮಾಡಿದ್ದೆ.

ದೆಹಲಿ ಪ್ರವೇಶ ಮಾಡಿದ ನಂತರ ಇಂತಹ ಇನ್ನಷ್ಟು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನಗಳನ್ನು ಮಾಡಿದೆ. ವಿಶೇಷ ಚೇತನರನ್ನು ದಿವ್ಯಾಂಗರು ಎಂದು ಕರೆದ ಕೂಡಲೇ ನಮ್ಮೆಲ್ಲಾ ಜವಾಬ್ದಾರಿಗಳನ್ನು ಮುಗಿಸಿದಂತಲ್ಲ. ನೀವಿಲ್ಲಿ ನೋಡುತ್ತಿದ್ದೀರಿ ಈಕೆ ಕಿವುಡ ಮತ್ತು ಮೂಕ ಮಕ್ಕಳಿಗೆ ನನ್ನ ಮಾತುಗಳನ್ನು ತಲುಪಿಸಲು ಸಂಕೇತ ಭಾಷೆಯನ್ನು ಬಳಸುತ್ತಿದ್ದಾರೆ. ನನ್ನ ಭಾಷಣವನ್ನು ಅವರಿಗೆ ಸಂವಹಿಸುತ್ತಿದ್ದಾರೆ. ನಿಮಗೆ ಅಚ್ಚರಿ ಎನಿಸಬಹುದು ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ಭಾರತದ ಬೇರೆ ಬೇರೆ ರಾಜ್ಯಗಳು ತಮ್ಮದೇ ಭಾಷೆಯ ಪ್ರತ್ಯೇಕ ಸಂಕೇತ ಭಾಷೆಯನ್ನು ಹೊಂದಿವೆ. ಹೀಗಾಗಿ ತಮಿಳುನಾಡಿನ ವಿಶೇಷ ಚೇತನ ಮಗುವಿಗೆ ಗುಜರಾತಿನ ವಿಶೇಷ ಚೇತನ ಶಿಕ್ಷಕಿಯ ಜತೆ ಸಂವಹನ ಸಾಧ್ಯವಾಗುತ್ತಿಲ್ಲ. ಇಬ್ಬರೂ ಸಂಕೇತ ಭಾಷೆಯನ್ನೇ ಬಳಸುತ್ತಿದ್ದಾರೆ. ಆದರೆ ಅದರ ಸಂಕೇತಗಳು ಗುಜರಾತಿಗೇ ಬೇರೆ, ತಮಿಳು ಭಾಷೆಗೇ ಬೇರೆ. ಹೀಗಾಗಿ ವಿಶೇಷ ಚೇತನ ಮಕ್ಕಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋದಾಗ ಭಾಷಾಂತರ ಸಮಸ್ಯೆಯಿಂದ ಯಾವುದೇ ವಿಚಾರ ವಿಶೇಷ ಚೇತನರಿಗೆ ತಲುಪುತ್ತಿಲ್ಲ. ನಮ್ಮ ಸರ್ಕಾರ ಬಂದ ನಂತರ ನಾವು ಈ ಕೆಲಸ ಸುಲಭವೋ-ಕಠಿಣವೋ ಎಂದು ಆಲೋಚನೆಯನ್ನೇ ಮಾಡಲಿಲ್ಲ.
ದೇಶದ ಎಲ್ಲ ವಿಶೇಷ ಚೇತನ ಮಕ್ಕಳು ಒಂದೇ ಸಂಕೇತ ಭಾಷೆಯನ್ನು ಕಲಿಯಬೇಕು. ಅಂಥದ್ದೊಂದು ಅಂತಹ ಶಿಕ್ಷಕ ವರ್ಗವನ್ನು ತಯಾರು ಮಾಡಿ, ದೇಶದ ಉದ್ದಗಲಕ್ಕೂ ಎಲ್ಲ ವಿಶೇಷ ಚೇತನ ಮಕ್ಕಳಿಗೂ ಈ ಸಂಕೇತ ಭಾಷೆ ಅರ್ಥವಾಗಬೇಕು ಎನ್ನುವ ಕಾನೂನನ್ನು ತಂದೆವು. ನಮ್ಮ ಸರ್ಕಾರ ವಿಶೇಷ ಚೇತನರ ಬಗ್ಗೆ ಎಷ್ಟು ಸೂಕ್ಷ್ಮವಾಗಿದೆ ಮತ್ತು ಬದ್ಧತೆಯನ್ನು ತೋರುತ್ತಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ. ನಾವು ಇಲ್ಲಿಗೇ ನಿಲ್ಲಲಿಲ್ಲ. ನಮ್ಮ ದೇಶದ ಯಾವುದೇ ವಿಶೇಷ ಚೇತನ ವಿಶ್ವದ ಯಾವುದೇ ರಾಷ್ಟ್ರಕ್ಕೆ ಹೋಗಲಿ ಅಲ್ಲಿ ಸಂವಹನ ಮಾಡಲು ಸಾಧ್ಯವಾಗುವಂತಹ ಸಂಕೇತ ಭಾಷೆಯನ್ನು ನಾವು ಆಯ್ದುಕೊಂಡೆವು. ಇದು ಕೆಲವರಿಗೆ ಸಣ್ಣ ಸಂಗತಿಯೇ ಆಗಿರಬಹುದು. ಆದರೆ ಇದು ನಮ್ಮ ಸರ್ಕಾರ ಯಾವ ಮಟ್ಟದಲ್ಲಿ ಸೂಕ್ಷ್ಮ ಆಲೋಚನೆಗಳನ್ನು ಮಾಡುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಮಾತ್ರ.

ಇದನ್ನು ನಿಮ್ಮ ಗಮನದಲ್ಲಿ ಇಟ್ಟುಕೊಳ್ಳಿ 1992ರಿಂದಲೂ ಸಮಾಜ ಕಲ್ಯಾಣ ಸಚಿವಾಲಯವು ವಿಶೇಷ ಚೇತನರಿಗೆ ಸವಲತ್ತುಗಳನ್ನು ನೀಡುವ ಚರ್ಚೆಯನ್ನು ಆರಂಭಿಸಿತ್ತು. 1992ರಲ್ಲಿ ವಿಶೇಷ ಚೇತನರಿಗೆ ಬಜೆಟ್ ಅನುದಾನ ನೀಡುವ ಪ್ರಕ್ರಿಯೆ ಆರಂಭವಾಗಿತ್ತು. ಸ್ವಾತಂತ್ರ್ಯ ಬಂದ ಅದೆಷ್ಟೋ ವರ್ಷಗಳ ನಂತರ ಈ ಕಾರ್ಯವನ್ನು ಮಾಡಲಾಯ್ತು. ನಿಮಗೆ ಅಚ್ಚರಿ ಎನಿಸಬಹುದು 1992ರಿಂದ 2013ರ ವರಗೆ ಅಂದರೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ವಿಶೇಷ ಚೇತನರಿಗಾಗಿ ಕೆಲವು ಸವಲತ್ತುಗಳನ್ನು ನೀಡಲು ಕೇವಲ 55 ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಸೋದರ ಸೋದರಿಯರೇ ಕೇವಲ 55 ಮಾತ್ರ. 2014-2017ರ ಮೂರು ವರ್ಷಗಳಲ್ಲಿ ವಿಶೇಷ ಚೇತನರಿಗಾಗಿ ನಮ್ಮ ಸರ್ಕಾರ 5,500 ಕಾರ್ಯಕ್ರಮಗಳನ್ನು ಮಾಡಿದೆ. ಐದು ಸಾವಿರದ ಐನೂರು ! . 25-30 ವರ್ಷದಲ್ಲಿ ಕೇವಲ 55 ಮತ್ತು ಮೂರು ವರ್ಷದಲ್ಲಿ 5,500 ಕಾರ್ಯಕ್ರಮಗಳು. ನಮ್ಮ ಸರ್ಕಾರದ ಭಾವನಾತ್ಮಕತೆ ಎಷ್ಟಿದೆ ಎನ್ನುವುದನ್ನು ಈ ಕೆಲಸವೇ ಪ್ರತಿಬಿಂಬಿಸುತ್ತದೆ.” ಸಬ್ ಕಾ ಸಾಥ್ ಸಬ್ ಕಾ ವಿಕಾಸ್ “(ಎಲ್ಲರ ಜತೆ, ಎಲ್ಲರ ಅಭಿವೃದ್ಧಿ) ನಮ್ಮ ಧ್ಯೇಯ. ಇದೇ ಸೂತ್ರವನ್ನು ನಮ್ಮ ಸರ್ಕಾರ ಆಡಳಿತದಲ್ಲಿ ಅನುಷ್ಠಾನ ಮಾಡುತ್ತಿದೆ.

ಸೋದರ-ಸೋದರಿಯರೇ ನಾವು ಒಂದರ ಹಿಂದೆ ಒಂದು ವಿಶ್ವ ದಾಖಲೆಯನ್ನು ಬರೆಯುತ್ತಲೇ ಇದ್ದೇವೆ. ವಿಶೇಷ ಚೇತನ ಮಕ್ಕಳಿಗೆ ಸಹಾರ ನೀಡುವ ನಿಟ್ಟಿನಲ್ಲಿ ಒತ್ತು ನೀಡಿದ್ದೇವೆ. ಇವತ್ತು ಒಂದೇ ಚಾವಣಿಯ ಅಡಿಯಲ್ಲಿ 18,500 ವಿಶೇಷ ಚೇತನ ಮಕ್ಕಳಿಗೆ ನೆರವು ಮತ್ತು ಸಹಕಾರ ನೀಡುವ ವಿಶ್ವ ದಾಖಲೆ ಬರೆಯುತ್ತಿದ್ದೇವೆ. ವಿಶೇಷ ಚೇತನ ಮಕ್ಕಳ ಬಗ್ಗೆ ಆಸಕ್ತಿ ತೋರಿಸಿ ಈ ಕಾರ್ಯಕ್ರಮಕ್ಕಾಗಿ ಶ್ರಮಿಸಿದ ಗುಜರಾತ್ ಸರ್ಕಾರ, ರಾಜ್ ಕೋಟ್ ಅಧಿಕಾರಿ ವರ್ಗ ಮತ್ತು ಜತೆಗೂಡಿದ ಜನತೆಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ವಿಶೇಷ ಚೇತನರಿಗೆ ನಾನು ಸಾಕಷ್ಟು ನೆರವು ನೀಡುತ್ತಿದ್ದೇನೆ. ನಾನು ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತೇನೆ. ಸ್ನೇಹಿತರೇ, ವಿಶೇಷ ಚೇತನರ ಮುಖದಲ್ಲಿ ವಿಶ್ವಾಸ ಮತ್ತು ಸಂತಸ ಕಂಡಾಗ ನಮ್ಮ ಜೀವನದಲ್ಲಿ ಅದಕ್ಕಿಂತಲೂ ಸಾರ್ಥಕವನ್ನು ಇನ್ನೇನೂ ನೀಡಲಾರದು. ನನ್ನ ಸ್ನೇಹಿತ ಗೆಹ್ಲೋಟ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿ ನನಗೆ ಭಾಗಿಯಾಗುವಂತೆ ಮನವಿ ಮಾಡಿದ್ದರು. ವಿಶೇಷ ಚೇತನರಿಗಾಗಿ ನನ್ನ ಕಾರ್ಯಕ್ರಮಗಳನ್ನು ಹೊಂದಿಸಿಕೊಂಡು ಇಲ್ಲಿಗೆ ಬಂದಿದ್ದೇನೆ. ಸಮಾಜದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಾನು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡುತ್ತೇನೆ.

ಯಾರಾದರೂ ಸಾಮಾನ್ಯರು ರೈಲ್ವೆ ಬೋಗಿಯಲ್ಲಿ ಸಂಚರಿಸಬೇಕಾದರೆ, ಬಸ್ ಗಳಲ್ಲಿ ಪ್ರಯಾಣಿಸಬೇಕಾದರೆ ಅದು ಅವರಿಗೆ ಕಷ್ಟಕರವೇನೂ ಅಲ್ಲ. ಆದರೆ ವಿಶೇಷ ಚೇತನರಿಗೆ ಇದು ಸುಲಭವಲ್ಲ. ಹೀಗಾಗಿ ನಮ್ಮ ಸರ್ಕಾರ ಸುಲಭ ಯೋಜನೆಯನ್ನು ಆರಂಭಿಸಿದೆ. ವಿಶೇಷ ಚೇತನರಿಗೆ ಸೌಲಭ್ಯ ಕಲ್ಪಿಸಲು ಸಾಮಾನ್ಯ ಜನರು, ವಿಕಲಚೇತನರು ಹೆಚ್ಚು ಹೋಗಿ ಬರುವ ಸಾವಿರಾರು ಸರ್ಕಾರಿ ಕಚೇರಿಗಳನ್ನು ನಾವು ಗುರುತಿಸಿದೆವು. ರೈಲು ಇಳಿದು-ಹತ್ತಲು ವಿಶೇಷ ವ್ಯವಸ್ಥೆ ಅಭಿವೃದ್ಧಿ ಪಡಿಸಿದ್ದೇವೆ. ಯಾರಾದರೂ ರೈಲಿಗೋ, ಸರ್ಕಾರಿ ಕಚೇರಿಗೋ ತ್ರಿಚಕ್ರದಲ್ಲಿ ಬಂದರೆ ಅದು ಸಲೀಸಾಗಿ ರೈಲು ಬೋಗಿ, ಅಥವಾ ಸರ್ಕಾರಿ ಕಚೇರಿಗೆ ಸಾಗುವಂತಹ ವ್ಯವಸ್ಥೆಯನ್ನು ಮಾಡಿದ್ದೇವೆ.

ಅವರಿಗಾಗಿ ಶೌಚಾಲಯ ಸ್ಥಾಪಿಸಿದ್ದೇವೆ. ವಿಶೇಷ ಚೇತನರ ಸ್ನೇಹಿ ಶೌಚಾಲಯ ಇಲ್ಲದೇ ಹೋದರೆ ಅವರ ಪರಿಸ್ಥಿತಿಯನ್ನು ನೀವೇ ಊಹಿಸಿ. ನಾವು ಅಂತಹ ಪರಿಸ್ಥಿತಿಯನ್ನು ನೋಡದಿದ್ದರೆ, ಅನುಭವಿಸದಿದ್ದರೆ ಅದು ನಮಗೆ ಆ ಸಮಸ್ಯೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆತ ಕೊಂಚ ಹೊಂದಿಕೊಳ್ಳಬೇಕು ಎಂದೇ ನಾವೆಲ್ಲಾ ಭಾವಿಸುತ್ತೇವೆ. ಹಾಗಾಗ ಬಾರದು. ಅವರ ಸಮಸ್ಯೆಗಳನ್ನು ಅರಿತು ಮನೆ ಕಟ್ಟಬೇಕು, ನಮ್ಮ ಸಮಾಜವನ್ನು ನಿರ್ಮಿಸಬೇಕು. ಒಬ್ಬ ವಿಶೇಷ ಚೇತನ ಫ್ಲಾಟ್ ಏರಬೇಕಿದ್ದರೆ ಆತನಿಗೆ ಲಿಫ್ಟ್ ಅಗತ್ಯ ಇದ್ದೇ ಇದೆ. ಆತ ಶೌಚಾಲಯ ಬಳಸಬೇಕು ಎಂದು ಕೊಂಡರೆ ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಇರಬೇಕು. ಅಂಥದ್ದೊಂದು ಗುಣವನ್ನು ಸಮಾಜದಲ್ಲಿ ನಾವು ಬೆಳೆಸಬೇಕಿದೆ. ಇದಕ್ಕಾಗಿ ನಾವು ಸದಾ ನಾವು ಶ್ರಮಿಸಬೇಕು. ಇದರ ಫಲದಿಂದಲೇ ಇವತ್ತು ಇದೆಲ್ಲಾ ಸವಲತ್ತು ಅಭಿವೃದ್ಧಿ ಪಡಿಸಿರುವ ಸಾವಿರಾರು ಸ್ಥಳಗಳಿವೆ. ಮಾದರಿಗಳನ್ನು ಅಭಿವೃದ್ಧಿ ಪಡಿಸಿದ್ದು ಅನುಷ್ಠಾನ ಹಂತದಲ್ಲಿದೆ. ಎಲ್ಲ ಹೊಸ ಕಟ್ಟಡಗಳಲ್ಲೂ ವಿಶೇಷ ಚೇತನರಿಗೆ ಪ್ರತ್ಯೇಕ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸಿರಬೇಕು ಎನ್ನುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಈ ನಿಯಮಗಳನ್ನು ಅನ್ವಯಿಸಿಕೊಂಡಿದ್ದಕ್ಕೆ ಗುಜರಾತ್ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ಇದನ್ನು ಮುಂದುವರೆಸಿಕೊಂಡು ಹೋಗುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ವಿಶೇಷ ಚೇತನರ ಬಗ್ಗೆ ಸರ್ಕಾರಕ್ಕಿರುವ ವಿಶೇಷ ಕಾಳಜಿ ಮತ್ತು ಬದ್ಧತೆಯನ್ನು ಇಂತಹ ಕಾರ್ಯಕ್ರಮಗಳು ತೋರಿಸುತ್ತವೆ. ಯಾರು ಸೌಲಭ್ಯಗಳನ್ನು ಪಡೆಯಲು ಸರ್ಕಾರವನ್ನು ತಲುಪಲು ಸಾಧ್ಯವಿಲ್ಲವೋ ಅವರ ಬಳಿಗೇ ಸರ್ಕಾರ ಬರಬೇಕು. ಇಂತಹ ಪ್ರಯತ್ನದ ಫಲವಾಗಿಯೇ ಇವತ್ತು ಒಂದೇ ಚಾವಣಿಯ ಅಡಿಯಲ್ಲಿ 18500 ವಿಶೇಷ ಚೇತನರನ್ನು ಸೇರಿಸಲಾಗಿದೆ. ವಿಶೇಷ ಚೇತನರಿಗೆ ಈ ರೀತಿ ಶಿಬಿರಗಳನ್ನು ಆಯೋಜಿಸಿ, ನೆರವು ಕಲ್ಪಿಸುವುದರಿಂದ ಇನ್ನೊಂದಷ್ಟು ಪ್ರೋತ್ಸಾಹ ಸಿಗಲಿದೆ. ವಿಶೇಷ ಚೇತನರನ್ನು ಸದೃಢಗೊಳಿಸುವ ಪ್ರಯತ್ನ ಯಶ ಕಾಣಲಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಸಂಶೋಧನಾತ್ಮಕ ಸಂಸ್ಥೆಯು ಕೆಲಸ ಮಾಡುತ್ತಿದೆ.

ನಾನು ಸಂಸತ್ತಿನ ನನ್ನ ಕಚೇರಿಗೆ ಕರೆಸಿಕೊಂಡಿದ್ದ ಆ ಎಲ್ಲಾ ಹುಡುಗರು ಇವತ್ತು ಇಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಕೆಲವರಿಗೆ ಕೈಗಳೇ ಇರಲಿಲ್ಲ. ಅವರಿಗೆ ಕೃತಕ ಕೈಗಳನ್ನು ನೀಡಲಾಗಿತ್ತು. ಕೃತಕ ಕೈ ನೀಡಿದ್ದ ಬಾಲಕ ಅತ್ಯಂತ ಸುಂದರವಾಗಿ ಬರೆಯುತ್ತಿದುದನ್ನು ನಾನು ಕಂಡಿದ್ದೇನೆ. ಆತನ ಕೈ ಪ್ಲಾಸ್ಟಿಕ್ ನಿಂದ ಮಾಡಿದ್ದೇ ಆಗಿರಬಹುದು. ಆದರೆ ಆತ ನನಗಿಂತಲೂ ಸುಂದರವಾದ ಬರವಣಿಗೆಯನ್ನು ಬರೆಯುತ್ತಿದ್ದ. ಆತ ನೀರನ್ನು ಎತ್ತಿಕೊಂಡು ಬರಬಲ್ಲ. ಯಾರದೇ ಸಹಾಯವಿಲ್ಲದೇ ಟೀ ಕಪ್ ಹಿಡಿದು ಕುಡಿಯಬಲ್ಲ. ನಾನು ಇವತ್ತು ಆತನನ್ನು ಭೇಟಿಯಾದೆ. ನಾನು ಓಡಬಲ್ಲೆ ಎಂದು ಹೇಳಿದ. ಆತನ ಕಾಲಿಗೆ ನಾವು ಹೊಸ ಶಕ್ತಿ ನೀಡಿದೆವು ಎಂದು ಅವನು ಹೇಳುತ್ತಿದ್ದ. ಈಗ ಬೇಕಿದ್ದರೆ ಓಡಿ ಅದನ್ನು ಪ್ರದರ್ಶನ ಮಾಡಬಲ್ಲೆ ಎನ್ನುತ್ತಿದ್ದ. ನಾನು ಅದು ಅಗತ್ಯವಿಲ್ಲ ಎಂದು ಹೇಳಿದೆ. ಇದರ ಅರ್ಥ ಅವರಲ್ಲಿ ದೊಡ್ಡ ಮಟ್ಟದ ವಿಶ್ವಾಸ ಬೆಳೆದುನಿಂತಿದೆ. ಈ ಉದ್ದೇಶಕ್ಕಾಗಿ ಹೊಸಹೊಸ ಅವಿಷ್ಕಾರಗಳನ್ನು ಮಾಡುತ್ತಿದ್ದೇವೆ. ಈ ದಿಶೆಯಲ್ಲಿ ಸರ್ಕಾರಿ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದಕ್ಕಾಗಿ ಕೆಲವು ಯುವಕರು ಮುಂದೆ ಬರಬೇಕಿದೆ. ಹೊಸ ಉದ್ಯಮಗಳನ್ನು ಆರಂಭಿಸುವ ಯುವ ಸಮುದಾಯಕ್ಕೆ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ. ವಿಶೇಷ ಚೇತನರಿಗಾಗಿ ವಿಶ್ವದಲ್ಲಿ ನಡೆಯುತ್ತಿರುವ ಆವಿಷ್ಕಾರ ಗಳನ್ನು ಅವರು ಅಧ್ಯಯನ ಮಾಡಲಿ. ಅವರಿಗಾಗಿ ಯಾವ ಯಾವ ಹೊಸ ಆವಿಷ್ಕಾರಗಳು ಆಗಿವೆ ಎನ್ನುವುದನ್ನು ಪತ್ತೆ ಹಚ್ಚಲಿ. ಹೊಸ ಆವಿಷ್ಕಾರದ ಮೂಲಕ ವಿಶೇಷ ಚೇತನ ವ್ಯಕ್ತಿ ತನ್ನ ಜೀವನವನ್ನು ತಾನೇ ನಡೆಸಲು ಅಗತ್ಯವಾದುದನ್ನು ನಮ್ಮ ಯುವ ಸಮುದಾಯ ಹೊರತರಲಿ. ಅವರು ಜಗತ್ತಿನ ಹೊಸ ಸಂಶೋಧನೆಗಳನ್ನು ಅಧ್ಯಯನ ಮಾಡಿ ಹೊಸ ತನ್ನು ಹುಡುಕಲು ಸಾಧ್ಯವಿದೆ. ನೀವು ಎಂಜಿನಿರ್ಸ್ ಆಗಿದ್ದರೆ, ಸ್ಟಾರ್ಟ್ ಅಪ್ ಗಳ ಮೂಲಕ ಹೊಸದನ್ನು ಸಾಧಿಸಲು ಸಾಧ್ಯವಿದೆ. ಹೊಸ ಆವಿಷ್ಕಾರಗಳ ಮೂಲಕ ವಿಶೇಷ ಚೇತನರಿಗಾಗಿ ನೀವು ಸಂಶೋಧಿಸುವ ಉತ್ಪನ್ನಗಳಿಗೆ ಇವತ್ತು ಭಾರತದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆ ಇದೆ. ನಮ್ಮಲ್ಲಿ ಲಕ್ಷ ಲಕ್ಷ ವಿಶೇಷ ಚೇತನರಿದ್ದಾರೆ. ಅವರಿಗೆ ವಿಭಿನ್ನ ಬಗೆಯ ಉತ್ಪನ್ನಗಳು, ಸುಧಾರಿತ ವಸ್ತುಗಳು ಅಗತ್ಯವಿದೆ. ಉದ್ಯೋಗ ಸೃಷ್ಟಿಗೆ ಇವೂ ಕೂಡ ಪರಿಹಾರ ಮಾರ್ಗಗಳಾಗಿವೆ.

ಸ್ಟಾರ್ಟ್ ಅಪ್ ಕ್ಷೇತ್ರದ ಯುವ ಸಮುದಾಯವನ್ನು ನಾನು ಆಹ್ವಾನಿಸುತ್ತಿದ್ದೇನೆ . ಅವರು ಸಂಶೋಧನೆಗೆ ಒಡ್ಡಿಕೊಳ್ಳಬೇಕಿದೆ. ವಿಶೇಷ ಚೇತನರಿಗೆ ಹೊಸತನ್ನು ಅಭಿವೃದ್ಧಿ ಪಡಿಸಬೇಕಿದೆ. ವಿಶೇಷ ಚೇತನರ ಬದುಕಿನಲ್ಲಿ ಬದಲಾವಣೆ ತರುವ ಇಂತಹ ಹೊಸ ಅನ್ವೇಷಣೆಗಳಿಗೆ ಸರ್ಕಾರವೂ ಎಲ್ಲ ಅಗತ್ಯ ನೆರವುಗಳನ್ನು ನೀಡಲಿದೆ.

ಸೋದರ,ಸೋದರಿಯರೇ, ತಿಂಗಳಿಗೆ ಒಂದು ರೂಪಾಯಿ ಪ್ರೀಮಿಯಂನ ವಿಮೆ ಯೋಜನೆಯನ್ನು ನಾವು ಪರಿಚಯಿಸಿದ್ದೆವು. ಇವತ್ತು ನೀವು ಒಂದು ರೂಪಾಯಿಗೆ ಒಂದು ಕಪ್ ಕಾಫಿ ಖರೀದಿಸಲು ಸಾಧ್ಯವಿಲ್ಲ. ಅತಿ ಬಡತನದಲ್ಲಿರುವ ವಿಶೇಷ ಚೇತನರು ತಿಂಗಳಿಗೆ ಒಂದು ರೂಪಾಯಿ ಕಂತು ಪಾವತಿಸಿ ವಿಮೆ ಮಾಡಿಸಬಹುದು. ಆಕಸ್ಮಿಕವಾಗಿ ನಿಮ್ಮ ಕುಟುಂಬದಲ್ಲಿ, ವೈಯಕ್ತಿಕವಾಗಿ ಆಪತ್ತು ಬಂದೊದಗಿದಲ್ಲಿ ತತ್ ಕ್ಷಣವೇ ಆ ಕುಟುಂಬ 2 ಲಕ್ಷ ರೂಪಾಯಿಗಳ ಪರಿಹಾರವನ್ನು ಪಡೆಯಬಹುದು. ತಿಂಗಳಿಗೆ 1 ರೂಪಾಯಿ, ವರ್ಷಕ್ಕೆ 12 ರೂಪಾಯಿ ಪಾವತಿ ಮಾಡಿದರೆ ಎರಡು ಲಕ್ಷ ರೂಪಾಯಿಯ ವಿಮಾ ನೆರವು ಪಡೆಯಬಹುದು. ಇದು ವಿಶೇಷ ಚೇತನರು ತಮ್ಮ ಕಷ್ಟದ ಸಂದರ್ಭಗಳಿಂದ ಹೊರಬರಲು ಸಾಧ್ಯವಾಗಿಸಲಿದೆ. ಅದೇ ರೀತಿ ಇನ್ನೊಂದು 30 ದಿನಗಳಿಗೆ 30 ರೂಪಾಯಿಯ ವಿಮೆ ಯೋಜನೆಯಿದೆ.

ಒಂದು ವರ್ಷಕ್ಕೆ 360 ರೂಪಾಯಿಗಳಾಗುತ್ತದೆ. ಈ ವಿಮೆ ಯೋಜನೆಯಡಿ , ಯಾವುದಾದರೂ ವಿಪತ್ತು ಒದಗಿದಾಗಿ ಉತ್ತಮ ಮೊತ್ತ ಪರಿಹಾರ ರೂಪದಲ್ಲಿ ಸಿಗಲಿದೆ. ಈವರೆಗೆ 25 ಕೋಟಿ ಕುಟುಂಬಗಳ ಪೈಕಿ 13 ಕೋಟಿ ಕುಟುಂಬಗಳು ಈ ವಿಮೆ ಸೌಲಭ್ಯವನ್ನು ಪಡೆದುಕೊಂಡಿವೆ. ನಾನು ವಿಶೇಷ ಚೇತನ ಕುಟುಂಬಗ ಳಲ್ಲಿ ಮನವಿ ಮಾಡುತ್ತೇನೆ ಎಲ್ಲರೂ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಎಲ್ಲ ಕುಟುಂಬಗಳೂ ಈ ವಿಮೆಯ ಲಾಭ ಪಡೆದುಕೊಂಡರೆ ಒಳಿತು . ವಿಶೇಷವಾಗಿ ವಿಶೇಷ ಚೇತನ ಕುಟುಂಬಗಳಿಗೆ ಇದು ವರದಾನವಾಗಲಿದೆ. ವಿಕಲಚೇತಲ ವ್ಯಕ್ತಿಗಳು ಈ ವಿಮೆ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು. ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ನೀವು ಮುಂದೆ ಬರಬೇಕಿದೆ. ವರ್ಷಕ್ಕೆ 12 ರೂಪಾಯಿ ಟೋಕನ್ ಮುಂಗಡವಿದ್ದಂತೆ ನಿಮ್ಮ ದಿನ ಖರ್ಚಿಗೆ ಸಮವಾದುದು.

ಸೋದರ-ಸೋದರಿಯರೇ, ಬಡವರಿಗಾಗಿ ಭಾರತ ಸರ್ಕಾರ ಇಂತಹ ಅನೇಕ ಯೋಜನೆಗಳನ್ನು ತಂದಿದೆ. ನಾವು ಮಹಾನ್ ಕನಸು ಕಂಡಿದ್ದೇವೆ. 2022ಕ್ಕೆ ನಾವು ಸ್ವಾತಂತ್ರ್ಯಗೊಂಡು 75 ವರ್ಷ ತುಂಬಲಿದೆ. 70 ವರ್ಷ ತುಂಬಿದ್ದರೂ ಲಕ್ಷ-ಲಕ್ಷ ಜನರಿಗೆ ತಮ್ಮ ಸ್ವಂತ ಸೂರಿಲ್ಲ. ಸೋದರ-ಸೋದರಿಯರೇ 2022ಕ್ಕೆ ಪ್ರತಿ ಕುಟುಂಬಕ್ಕೂ ಸ್ವಂತ ಸೂರು ಕಲ್ಪಿಸುವ ಕನಸನ್ನು ನಾವು ಕಂಡಿದ್ದೇವೆ. ಶೌಚಾಲಯ, ವಿದ್ಯುತ್ ಸಂಪರ್ಕ, ನೀರಿನ ಕೊಳವೆ, ಹತ್ತಿರದಲ್ಲೇ ಶಾಲೆ ಮತ್ತು ಸಮೀಪದಲ್ಲೇ ಔಷಧಿ ವ್ಯವಸ್ಥೆ ಇರುವ ವ್ಯವಸ್ಥಿತ ಮನೆ ಕಟ್ಟಿಕೊಡುವುದು ನಮ್ಮ ಗುರಿ. ನನಗೆ ಗೊತ್ತು ಅತ್ಯಂತ ಕಷ್ಟದ ಗುರಿ. 70 ವರ್ಷಗಳಲ್ಲಿ ಸಾಧ್ಯವಾಗದಿರುವುದನ್ನು 5 ವರ್ಷಗಳಲ್ಲಿ ಸಾಧ್ಯ ಮಾಡುವುದು ಕಷ್ಟ ಎನ್ನುವುದು ನನಗೆ ಗೊತ್ತು. ನನ್ನ ಅರಿವಿನಲ್ಲಿ ಇದು ಇದೆ. ಆದರೆ ಸೋದರ-ಸೋದರಿಯರೇ 30 ವರ್ಷಗಳಲ್ಲಿ 55 ಶಿಬಿರಗಳು ನಡೆದಿವೆ.

ಆದರೆ ಮೂರು ವರ್ಷಗಳಲ್ಲಿ 5,500 ಶಿಬಿರಗಳು ನಡೆದಿವೆ. 70 ವರ್ಷಗಳಲ್ಲಿ ಸಾಧ್ಯವಾಗದೇ ಹೋದದ್ದು ಮುಂದಿನ
5 ವರ್ಷಗಳಲ್ಲಿ ಏಕೆ ಸಾಧ್ಯವಿಲ್ಲ. ನಾವು ಸಾಧನೆ ಮಾಡುವ ಸಂಕಲ್ಪ ಹೊಂದಿರಬೇಕು. ದೇಶಕ್ಕಾಗಿ ಬದುಕುವ ಉದ್ದೇಶ ಮತ್ತು ಆಶಾ ಭಾವನೆ ಇರಬೇಕು. ಸ್ನೇಹಿತರೆ ಆಗ ಮಾತ್ರ ಸ್ವಯಂ ಫಲಿತಾಂಶಗಳನ್ನು ಕಾಣಲು ಸಾಧ್ಯವಿದೆ. ಈ ಭಾವನೆಯಿಂದ ನಾವು ಮಹತ್ತರವಾದ ಕೆಲಸವನ್ನು ಮಾಡುತ್ತಿದ್ದೇವೆ.

ಬಡತನದಲ್ಲಿರುವ ಕುಟುಂಬಗಳಿಗೆ ಯಾವ ರೀತಿ ಲಾಭ ಒದಗಿಸುವುದು.? ಮಧ್ಯಮ ವರ್ಗದ ಕುಟುಂಬಗಳು ಸಾಕಷ್ಟು ಕನಸುಗಳನ್ನು ಕಟ್ಟಿ ಕೊಳ್ಳುತ್ತಾರೆ. ಬಡತನ ಅವರ ಆಸೆ-ಆಕಾಂಕ್ಷೆಗಳನ್ನು ಬದಲಿಸುತ್ತದೆ. ಹಸಿವಿನಿಂದ ನಮ್ಮ ದೇಶದ ಬಡವ ಹೊರಬರಬೇಕಿದೆ. ಆಗ ನಮ್ಮ ದೇಶದ ಸಾಮರ್ಥ್ಯ ತಿಳಿದುಬರಲಿದೆ. ಮಧ್ಯಮ ವರ್ಗದ ಜನರು ದೇಶವನ್ನು ಮೇಲು ಸ್ತರಕ್ಕೆ ಒಯ್ಯುವ ಅವಕಾಶಗಳನ್ನು ಹೊಂದಿದ್ದಾರೆ. ವಿಶ್ವದಲ್ಲಿ ಒಂದು ಶಕ್ತಿಯಾಗಿ ಭಾರತ ಹೊರಹೊಮ್ಮುತ್ತಿರುವುದಕ್ಕೆ ವಿಶ್ವವು ಅಚ್ಚರಿಗೊಂಡಿದೆ. ಅಭಿವೃದ್ಧಿ ದೃಷ್ಟಿಯಿಂದ ಇದು ಅತ್ಯುತ್ತಮ ಬೆಳವಣಿಗೆಯಾಗಿದೆ.

ರಾಜ್ ಕೋಟ್ ನ ನನ್ನ ಸೋದರ-ಸೋದರಿಯರೇ, ನೀವು ನನಗೆ ಸಾಕಷ್ಟು ವಿಚಾರಗಳನ್ನು ಕಲಿಸಿದ್ದೀರಿ. ಸಾಕಷ್ಟು ಸಂಗತಿಗಳನ್ನು ಕೊಡುಗೆಯಾಗಿ ನೀಡಿದ್ದೀರಿ. ಜೀವನದಲ್ಲಿ ನನ್ನ ದಾರಿ ಏನು ಎನ್ನುವುದನ್ನು ರಾಜ್ ಕೋಟ್ ಜನರು ನಿರ್ಧರಿಸಿದ್ದಿರಿ. ಇವತ್ತು ನನಗೆ ಇದಕ್ಕಿಂತಲೂ ದೊಡ್ಡ ಅದೃಷ್ಟ ಇನ್ನೊಂದಿಲ್ಲ. ಈ ನೆಲಕ್ಕೆ ಗೌರವ ಸಲ್ಲಿಸುವ ಅವಕಾಶ ನನಗೆ ಸಿಕ್ಕಿದೆ.

ನಿಮ್ಮ ಆಶೀರ್ವಾದ ಪಡೆಯುವ ಅವಕಾಶ ನನಗೆ ಸಿಕ್ಕಿದೆ. ವಿಶೇಷ ಚೇತನರ ಕುಟುಂಬಗಳಿಂದ ಆಶೀರ್ವಾದ ಸಿಕ್ಕಿರುವುದು ನನ್ನ ಜೀವನದ ಅತ್ಯಂತ ಸೌಭಾಗ್ಯದ ಸಂಗತಿ.

ನಾನು ಮತ್ತೊಮ್ಮೆ ಶ್ರೀ ಗೆಹ್ಲೋಟ್ ಜೀ, ಅವರ ಇಲಾಖೆ, ಇತರೆ ಇಲಾಖೆಗಳು ಮತ್ತು ಜತೆಗಿದ್ದವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಯಾವುದೇ ಇಲಾಖೆಯು ಈ ಮಟ್ಟದ ಚಟುವಟಿಕೆಯನ್ನು ಯಾವುದೇ ಇಲಾಖೆ ತೋರುತ್ತಿಲ್ಲ. ಶ್ರೀ ಗೆಹ್ಲೋಟ್ ಜೀಯವರು ತೋರುತ್ತಿರುವ ಚಟುವಟಿಕೆಯು ಪ್ರಶಂಸನೀಯವಾದುದು. 18 ಸಾವಿರ ವಿಶೇಷ ಚೇತನರನ್ನು ಇಲ್ಲಿ ಸಂಘಟಿಸಿರುವುದೇ ಅವರ ಪರಿಶ್ರಮವನ್ನು ತೋರಿಸುತ್ತದೆ.

ನಾನು ಮತ್ತೊಮ್ಮೆ ಈ ಪುಣ್ಯಭೂಮಿ, ಇಲ್ಲಿನ ಜನತೆಗೆ ವಂದಿಸುತ್ತೇನೆ. ನಿಮಗೆಲ್ಲರಿಗೂ ನನ್ನ ಪ್ರೀತಿಪೂರ್ವಕ ಧನ್ಯವಾದಗಳು.

******