ಪಿಎಂಇಂಡಿಯಾ

ಭಾರತಮಾತೆಗೆ ಜಯವಾಗಲಿ
ಭಾರತಮಾತೆಗೆ ಜಯವಾಗಲಿ
ಅಪಾರ ಸಂಖ್ಯೆಯಲ್ಲಿ ಆಗಮಿಸಿರುವ ನನ್ನ ಪ್ರೀತಿಯ ಸೋದರ ಮತ್ತು ಸೋದರಿಯರೆ,
ದಭೋಯಿಗೆ ಬಹಳ ಸಲ ಬಂದಿದ್ದೇನೆ. ಒಮ್ಮೆ ಬಸ್ಸಿನಲ್ಲಿ ಬರುತ್ತಿದ್ದೆ, ಮತ್ತೊಮ್ಮೆ ಸ್ಕೂಟರ್ ನಲ್ಲಿ ಬರುತ್ತಿದ್ದೆ. ಒಮ್ಮೆ ಕಾರ್ಯಕರ್ತರ ಮೀಟಿಂಗ್ ನಲ್ಲಿ ಭಾಗವಹಿಸುತ್ತಿದ್ದೆ, ಮತ್ತೊಮ್ಮೆ ಜನರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ. ನಿಮ್ಮ ಜೊತೆ ಎಷ್ಟೆಲ್ಲ ನೆನಪುಗಳು ಇವೆ. ಆದರೆ ದಭೋಯಿಯಲ್ಲಿ ಇಂತಹ ಅದ್ಭುತ ದೃಶ್ಯವನ್ನು ಹಿಂದೆಂದೂ ನೋಡಿರಲಿಲ್ಲ, ಈ ದೊಡ್ಡ ಜನಸಾಗರವು ತಾಯಿ ನರ್ಮದೆಯ ಭಕ್ತಿಗೆ ಜೀವಂತ ಉದಾಹರಣೆಯಾಗಿದೆ.
ಇಂದು ವಿಶ್ವಕರ್ಮ ಜಯಂತಿ. ಭಾರತದಲ್ಲಿ ಶತಮಾನಗಳಿಂದಲೂ ಕೈಗಳಿಂದ ಕೆಲಸ ಮಾಡುವ, ಬೆವರು ಹರಿಸಿ ಕೆಲಸ ಮಾಡುವ, ಕಷ್ಟಪಟ್ಟು ದುಡಿಯುವ, ನಿರ್ಮಾಣ ಕಾರ್ಯವನ್ನು ಮಾಡುವ,ತಂತ್ರಜ್ಞರು, ಇಂಜಿನಿಯರ್ ಗಳು, ಮೇಸ್ತ್ರಿಗಳು,ಮಣ್ಣಿನ ಕೆಲಸ ಮಾಡುವವರು,ಸುಣ್ಣಬಣ್ಣ ಮತ್ತು ಗಾರೆ ಕೆಲಸ ಮಾಡುವ, ಹೀಗೆ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ತೊಡಗಿರುವ ಎಲ್ಲರನ್ನೂ ಭಾರತದಲ್ಲಿ ವಿಶ್ವಕರ್ಮಿಗಳನ್ನಾಗಿ ನೋಡಲಾಗುತ್ತದೆ. ಇಂದು ಇಂತಹ ವಿಶ್ವಕರ್ಮ ಜಯಂತಿಯ ಹಬ್ಬವಾಗಿದೆ.ವಿಶ್ವಕರ್ಮಿಯ ಉಪಾಸಕರು,ಸರ್ದಾರ್ ಸರೋವರ ಜಲಾಶಯದ ನಿರ್ಮಾಣ ಕಾರ್ಯವನ್ನು ಮಾಡಿದ ಎಲ್ಲರನ್ನೂ ನೆನಪಿಸಿಕೊಳ್ಳುತ್ತಾ, ಅವರ ಕಠಿಣ ಶ್ರಮವನ್ನು ನೆನೆಯುತ್ತಾ ಭಾರತದ ಈ ಒಂದು ದೊಡ್ಡ ಜಲಾಶಯವನ್ನು ತಾಯಿ ಭಾರತಿಗೆ ಅರ್ಪಿಸುವ ಸೌಭಾಗ್ಯ ಈ ದಿನದಂದೇ ದೊರೆತಿರುವುದಕ್ಕಿಂತ ಉತ್ತಮ ಸಂಯೋಗ ಬೇರಾವುದಿಲ್ಲವೆಂದು ಭಾವಿಸುತ್ತೇನೆ.
ಸೋದರ ಸೋದರಿಯರೆ, ಇಂದು ನನ್ನ ಜನ್ಮದಿನದ ಅಂಗವಾಗಿ ಬಹಳ ಶುಭಾಶಯಗಳನ್ನು ಕೋರುತ್ತಿದ್ದೀರಿ. ಶುಭ ಕೋರಿದ ಎಲ್ಲರಿಗೂ, ಶುಭಾಶಯಗಳನ್ನು ಹೇಳಿದ ಎಲ್ಲರಿಗೂ ನಾನು ಹೃತ್ಪೂರ್ವಕವಾಗಿ ಬಹಳ ಬಹಳ ಆಭಾರಿಯಾಗಿದ್ದೇನೆ. ನನ್ನ ಜನ್ಮದಿನದಂದು ನೀವು ಹಲವು ಭಾವನೆಗಳನ್ನು ವ್ಯಕ್ತಪಡಿಸಿದ್ದೀರಿ. ಆ ಭಾವನೆಗಳಿಗೆ ಅನುಗುಣವಾಗಿ ನಾನು ಪರಿಶುದ್ಧನಾಗುವ ಮತ್ತು ಪ್ರತಿಕ್ಷಣವೂ ನಿಮಗಾಗಿ ಬದುಕುವ ಸಲುವಾಗಿ ನನ್ನ ಪರಿಶ್ರಮವನ್ನು ಉತ್ತುಂಗಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಕೊರತೆ ಮಾಡುವುದಿಲ್ಲ. ನಿಮ್ಮ ಕನಸುಗಳಿಗಾಗಿ ಬದುಕುತ್ತೇನೆ. ನಿಮ್ಮ ಕನಸುಗಳು ಸಾಕಾರವಾಗ ಬೇಕಾದರೆ ದೇಶದ ನೂರಾ ಇಪ್ಪತ್ತೈದು ಕೋಟಿ ಭಾರತೀಯರ ಶಕ್ತಿಯನ್ನು ಒಗ್ಗೂಡಿಸಿ ಒಂದು ನವಭಾರತದ, ಒಂದು New India ನಿರ್ಮಾಣ ಮಾಡಲು ಮುಂದಾಗಬೇಕಿದೆ.
ಒಬ್ಬ ಗಾಂಧೀಜಿ, ಕೃಶಕಾಯದ ಗಾಂಧೀಜಿ ಅವರಿಂದ ಸಾಬರಮತಿ ಆಶ್ರಮದಲ್ಲಿ ಸಾಧನೆ ಮಾಡುತ್ತಾ ಮಾಡುತ್ತಾ ಭಾರತೀಯರಿಗೆ ಸ್ವಾತಂತ್ರ್ಯ ಕೊಡಿಸಲು, ದೇಶವನ್ನು ಒಗ್ಗೂಡಿಸಲು ಸಾಧ್ಯವಾಗುವುದಾದರೆ, ತಾಯಿ ನರ್ಮದೆಯ ಆಶೀರ್ವಾದದಿಂದ, ಸಾಬರಮತಿಯ ಆಶೀರ್ವಾದದಿಂದ, ದೇಶದ ವೀರ ಪುರುಷರ ತ್ಯಾಗ, ತಪಸ್ಸುಗಳ ಆಶೀರ್ವಾದದಿಂದ ಈ ದೇಶದ ಮಹಾಪುರುಷರ ಸಾಧನೆಯ ಆಶೀರ್ವಾದದಿಂದ ನೂರಾ ಇಪ್ಪತ್ತೈದು ಕೋಟಿ ಭಾರತೀಯರು ಸ್ವಾತಂತ್ರ್ಯ ಬಂದು 75 ವರ್ಷಗಳಾಗುವಷ್ಟರಲ್ಲಿ ಒಂದು ನವಭಾರತವನ್ನು ನಿರ್ಮಿಸುವುದರಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.
ಸೋದರ, ಸೋದರಿಯರೆ, ಸರ್ದಾರ್ ಸರೋವರ ಜಲಾಶಯವು ಲೋಕಾರ್ಪಣೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಾರತದ ಉಕ್ಕಿನ ಪುರುಷ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಆತ್ಮ ಎಲ್ಲಿದ್ದರೂ ನಮ್ಮೆಲ್ಲರ ಮೇಲೆ ಆಶೀರ್ವಾದಗಳ ಮಳೆಯನ್ನೇ ಸುರಿಸುತ್ತಿರಬಹುದು. ದೂರದೃಷ್ಟಿ ಎಂದು ಯಾವುದಕ್ಕೆ ಹೇಳುತ್ತಾರೆ? 71 ವರ್ಷಗಳ ಹಿಂದೆ ಸ್ವಾತಂತ್ರ್ಯ ಬರುವುದಕ್ಕೆ ಮೊದಲು, ನಾನು ಜನಿಸುವ ಮೊದಲು, ನಮ್ಮಲ್ಲಿ ಹಲವರು ಜನಿಸುವುದಕ್ಕೆ ಮೊದಲು, ಸರ್ದಾರ್ ವಲ್ಲಭಭಾಯ್ ಪಟೇಲ್ ಸಾಹೇಬರು ಈ ಜಲಾಶಯ ನಿರ್ಮಾಣದ ಕನಸು ಕಂಡಿದ್ದರು.
ದೇಶವು ಸ್ವತಂತ್ರವಾಯಿತು. ಇಬ್ಬರು ಮಹಾಪುರುಷರು ಇನ್ನೂ ಕೆಲವು ವರ್ಷ ಬದುಕಿದ್ದಿದ್ದರೆ ಈ ಸರ್ದಾರ್ ಜಲಾಶಯವನ್ನು 60-70ರ ದಶಕದಲ್ಲಿ ನಿರ್ಮಿಸಿರುತ್ತಿದ್ದರು. ಪಶ್ಚಿಮದ ಎಲ್ಲ ರಾಜ್ಯಗಳು ಸುಜಲಾಂ, ಸುಫಲಾಂ ಆಗಿರುತ್ತಿದ್ದವು, ಹಸುರಿನಿಂದ ಕಂಗೊಳಿಸಿರುತ್ತಿದ್ದವು. ಭಾರತದ ಅರ್ಥ ಜಗತ್ತಿಗೆ ಒಂದು ಅದ್ಭುತ ಸಾಮರ್ಥ್ಯ ನೀಡುವ ಸೌಭಾಗ್ಯ ಪಶ್ಚಿಮದ ಈ ರಾಜ್ಯಗಳಿಗೆ ಸಿಕ್ಕಿರುತ್ತಿತ್ತು ಎಂದು ನಾನು ತುಂಬು ವಿಶ್ವಾಸದಿಂದ ಹೇಳಲು ಬಯಸುತ್ತೇನೆ. ಆ ಇಬ್ಬರು ಮಹಾಪುರುಷರಲ್ಲಿ ಸರ್ದಾರ್ ಪಟೇಲ್ ಅವರು ಒಬ್ಬರು. ಇವರು ನರ್ಮದಾ ನದಿಯ ಮಹಿಮೆಯನ್ನು, ಸಾಮರ್ಥ್ಯವನ್ನು, ಗುಜರಾತ್ ನ ಅವಶ್ಯಕತೆಯನ್ನು, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನದ ಜೀವನವನ್ನು ಒಬ್ಬ ತಾಯಿ ನರ್ಮದೆ ಹೇಗೆ ಬದಲಿಸಬಲ್ಲಳು ಎಂಬುದರ ಕನಸು ಕಂಡಿದ್ದರು, ದೂರದೃಷ್ಟಿಯಿಂದ ಆ ಯೋಜನೆಯ ಕಲ್ಪನೆ ಮಾಡಿದ್ದರು. ಮತ್ತೊಬ್ಬ ಮಹಾಪುರುಷರೆಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಭಾರತದಲ್ಲಿ ಜಲಕ್ರಾಂತಿಗಾಗಿ, ಜನಶಕ್ತಿಗಾಗಿ, ಜಲಮಾರ್ಗಗಳಿಗಾಗಿ, ಸಮುದ್ರ ಸಾಮರ್ಥ್ಯವನ್ನು ಬಳಸಿಕೊಳ್ಳುವುದಕ್ಕಾಗಿ ಮಂತ್ರಿ ಪರಿಷತ್ತಿನ ತಮ್ಮ ಅಲ್ಪಕಾಲದಲ್ಲೇ ಅದೆಷ್ಟು ಯೋಜನೆಗಳು, ಅದೆಷ್ಟು ಕಲ್ಪನೆಗಳನ್ನು ಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೊಂದಿದ್ದರು ಎಂಬ ವಿಷಯ ಅಂಬೇಡ್ಕರ್ ಅವರನ್ನು ಅಧ್ಯಯನ ಮಾಡಿದವರಿಗೆ ಗೊತ್ತು. ಬಹುಶಃ ಬಾಬಾ ಅಂಬೇಡ್ಕರ್ ಅವರು ಯೋಚಿಸಿದಷ್ಟು ಯಾವುದೇ ಒಂದು ಸರ್ಕಾರವು ಯೋಚಿಸಿರಲಿಕ್ಕಿಲ್ಲ.
ಈ ಇಬ್ಬರು ಮಹಾಪುರುಷರು ಇನ್ನಷ್ಟು ವರ್ಷ ಬದುಕಿದ್ದಿದ್ದರೆ ಅವರ ಸೇವೆಗಳ ಲಾಭ ಇನ್ನೂ ಹೆಚ್ಚು ವರ್ಷಗಳು ಸಿಗುತ್ತಿತ್ತು. ನನ್ನ ವ್ರೇತಿಯ ದೇಶಬಂಧುಗಳೆ, ಇಂದು ಒಂದೆಡೆ ಪ್ರವಾಹದಿಂದಾಗಿ ಕೆಲವು ಪ್ರದೇಶಗಳಿಗೆ ಅತ್ಯಧಿಕ ಹಾನಿಯಾಗುತ್ತಿದ್ದರೆ ಮತ್ತೊಂದೆಡೆ ಬರದಿಂದಾಗಿ ರೈತರು ಸಾವನ್ನಪ್ಪುತ್ತಿದ್ದಾರೆ, ಈ ಎಲ್ಲ ಸಮಸ್ಯೆಗಳಿಂದ ದೇಶವು ಹೊರಬರುತ್ತಿತ್ತು ಮತ್ತು ದೇಶವು ಪ್ರಗತಿಯ ಹೊಸ ಎತ್ತರಕ್ಕೇರುತ್ತಿತ್ತು. ಆದರೆ ನಾವು ಈ ಇಬ್ಬರು ಮಹಾಪುರುಷರನ್ನು ಬಹಳ ಹಿಂದೆಯೇ ಕಳೆದುಕೊಳ್ಳಬೇಕಾಯಿತು ಎಂಬುದು ನಮ್ಮ ದೌರ್ಭಾಗ್ಯ. ಇಂದು ಈ ಸರ್ದಾರ್ ಸರೋವರ ಜಲಾಶಯವನ್ನು ಭಾರತಕ್ಕೆ ಸಮರ್ಪಿಸಲಾಗುತ್ತಿದೆ, ನೂರಾ ಇಪ್ಪತ್ತೈದು ಕೋಟಿ ದೇಶಬಂಧುಗಳಿಗೆ ಸಮರ್ಪಿಸಲಾಗುತ್ತಿದೆ, ಮಹಾತ್ಮ ಗಾಂಧೀಜಿ ಮತ್ತು ಸರ್ದಾರ್ ಪಟೇಲ್ ಅವರ ನೆಲದಿಂದ ಸಮರ್ಪಿಸಲಾಗುತ್ತಿದೆ. ಗಾಯಕ್ ವಾಡ್ ಅವರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದಲ್ಲಿ ಹೊಸದೊಂದು ಬದಲಾವಣೆ ಕಂಡ ನೆಲದಿಂದ ಸಮರ್ಪಿಸಲಾಗುತ್ತಿದೆ. ಇದು ದೇಶದ ಹೊಸ ಶಕ್ತಿಯ ಸಂಕೇತವಾಗುತ್ತದೆ ಎಂಬ ವಿಶ್ವಾಸದೊಂದಿಗೆ ಈ ಇಬ್ಬರು ಮಹಾಪುರುಷರನ್ನು ಸ್ಮರಿಸುತ್ತಾ ಈ ಭವ್ಯ ಯೋಜನೆಯನ್ನು ನಿಮ್ಮೆಲ್ಲರ ಚರಣಗಳಿಗೆ ಅರ್ಪಿಸುತ್ತಿದ್ದೇನೆ. ದೇಶಬಂಧುಗಳಿಗೆ ಸಮರ್ಪಿಸುತ್ತಿದ್ದೇನೆ, ತಾಯಿ ಭಾರತಿಗೆ ಸಮರ್ಪಿಸುತ್ತಿದ್ದೇನೆ.
ಸೋದರ ಸೋದರಿಯರೆ, ಯೋಜನೆಗಳನ್ನು ಹಮ್ಮಿಕೊಳ್ಳುವುದು, ಯೋಜನೆಗಳನ್ನು ಪೂರ್ಣಗೊಳಿಸುವುದು ಬಹಳ ಸಹಜವಾಗಿದೆ. ಆದರೆ ಬಹುಶಃ ಭಾರತದಲ್ಲಿ ತಾಯಿ ನರ್ಮದೆ ಎಷ್ಟು ತೊಂದರೆಗಳನ್ನು ಸಹಿಸಬೇಕಾಯಿತು, ಈ ಯೋಜನೆಗೆ ಅದೆಷ್ಟು ಅಡಚಣೆಗಳಾದವು ಎಂದರೆ ಪ್ರಪಂಚದಲ್ಲಿ ಯಾವುದೇ ಶಕ್ತಿಯು ಇಷ್ಟೊಂದು ಅಡಚಣೆ ಉಂಟು ಮಾಡಿರಲಿಕ್ಕಿಲ್ಲ. ವಿಶ್ವ ಬ್ಯಾಂಕ್ ಸರ್ದಾರ್ ಜಲಾಶಯಕ್ಕೆ ಹಣ ಕೊಡುವುದಿಲ್ಲ ಎಂದು ನಿರ್ಧಾರ ಮಾಡಿತು. ಭಾರತದ ಪಾಲಿಗೆ ಸಾವಿರಾರು ಕೋಟಿ ರೂಪಾಯಿಗಳ ಇಷ್ಟೊಂದು ದೊಡ್ಡ ಯೋಜನೆಯು ಯಾವುದೇ ಆರ್ಧಿಕ ಸಹಾಯವಿಲ್ಲದೆ ಪೂರೈಸುವುದು ಸಾಧ್ಯವಿರಲಿಲ್ಲ. ಇಲ್ಲಸಲ್ಲದ ಪ್ರಚಾರಗಳಿಂದಾಗಿ ಈ ರೀತಿಯ ಸುಳ್ಳು ಸುದ್ದಿಗಳು ಹಬ್ಬಿದ್ದವು. ಸೋದರ ಸೋದರಿಯರೆ, ನಾವು ಸಹ World Bank, No World Bank, ನಾವು ಭಾರತದ ಬೆವರಿನಿಂದ ಸರ್ದಾರ್ ಸರೋವರ ಜಲಾಶಯವನ್ನು ನಿರ್ಮಿಸುತ್ತೇವೆ ಎಂದು ನಿರ್ಧರಿಸಿದೆವು, ಇಂದು ಇದನ್ನು ಸಾಧಿಸಿ ತೋರಿಸಿದ್ದೇವೆ.
ಪರಿಸರದ ಹೆಸರಿನಲ್ಲಿ ವಿಶ್ವ ಬ್ಯಾಂಕ್ ಸರ್ದಾರ್ ಸರೋವರ ಜಲಾಶಯದ ನಿರ್ಮಾಣಕ್ಕೆ ನೆರವು ನೀಡಲು ನಿರಾಕರಿಸಿತು. 2001ರಲ್ಲಿ ಕಛ್ ಭೂಕಂಪದ ಬಳಿಕ ಅದನ್ನು ಪುನರ್ ನಿರ್ಮಿಸುವಾಗ ಪರಿಸರ ಸ್ನೇಹಿಯಾಗಿ ಅಭಿವೃದ್ಧಿಗೊಳಿಸಲಾಯಿತು. ಇದೇ ವಿಶ್ವ ಬ್ಯಾಂಕ್ ಈ ಕಾರ್ಯಕ್ಕಾಗಿ ತಾನು ಕೊಡಮಾಡುವ ಪರಿಸರ ಪ್ರಶಸ್ತಿಯಾದ ಗ್ರೀನ್ ಅವಾರ್ಡ್ ಅನ್ನು ಗುಜರಾತ್ ಗೆ ಕೊಡಲೇ ಬೇಕಾಯಿತು.
ಸೋದರ ಸೋದರಿಯರೆ, ಭಾರತೀಯರು ಒಂದು ಸಲ ಸಂಕಲ್ಪ ಮಾಡಿದರೆಂದರೆ ವಿಶ್ವದ ಪ್ರತಿಯೊಂದು ಸವಾಲಿಗೂ ಪ್ರತಿ ಸವಾಲು ಒಡ್ಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದರ ಪರಿಣಾಮವೇ ಸರ್ದಾರ್ ಸರೋವರ ಜಲಾಶಯದ ನಿರ್ಮಾಣ ಕಾರ್ಯ. ಕೆಲವೊಮ್ಮೆ ನಮ್ಮ ದೇಶದಲ್ಲಿ ರಾಜ್ಯಗಳ ಶಕ್ತಿ, ರಾಜ್ಯಗಳ ಸವಾಲುಗಳ ಕುರಿತು ಬಹಳ ಚರ್ಚೆ ನಡೆಯುತ್ತಿರುತ್ತದೆ, ತುಲನಾತ್ಮಕ ಅಧ್ಯಯನ ನಡೆಯುತ್ತಿರುತ್ತದೆ. ಆದರೆ ಪಶ್ಚಿಮ ಭಾರತದ ಕೆಲವು ರಾಜ್ಯಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಹೆಚ್ಚು ಅಡಚಣೆಗಳು ಇದ್ದಿದ್ದು ನೀರಿನಿಂದಾಗಿ ಎಂಬುದನ್ನು ಸ್ವಾತಂತ್ರ್ಯ ಬಂದ ಬಳಿಕದ ಇತಿಹಾಸದಿಂದ ನೋಡಬಹುದು. ಜನರಾಗಲಿ, ಜಾನುವಾರುಗಳಾಗಲಿ ನೀರಿನ ಕೊರತೆಯಿಂದಾಗಿ ತಮ್ಮ ಹೊಲಗಳನ್ನು, ಹಳ್ಳಿಗಳನ್ನು ಬಿಟ್ಟು 200-200, 400-400 ಕಿಲೋಮೀಟರ್ ದೂರ ಹೋಗಬೇಕಾಗುತ್ತಿತ್ತು. ನೀರು ದೊರತ ಸ್ಥಳದಲ್ಲೇ ನಾಲ್ಕಾರು ತಿಂಗಳು ಕಳೆದು ಮಳೆಗಾಲದಲ್ಲಿ ಹಿಂತಿರುಗುತ್ತಿದ್ದರು. ಇಂತಹ ವೇದನೆ ತುಂಬಿದ ಜೀವನವನ್ನು ಯಾರಿಗಾದರೂ ಕಲ್ಪಸಿಕೊಳ್ಳಲು ಆಗುತ್ತದೆಯೇ? ನೀರಿಲ್ಲದೆ ಜೀವನ ಹೇಗೆ ಸಾದ್ಯ?
ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಗಡಿಭಾಗಕ್ಕೆ ಹೋಗುವುದು ನನ್ನ ಅಭ್ಯಾಸವಾಗಿತ್ತು. ಒಮ್ಮೆ ಬಿಎಸ್ ಎಫ್ ಯೋಧರ ಜೊತೆ ಕುಳಿತಿದ್ದೆ. ಅವರಿಗೆ ಕುಡಿಯುವ ನೀರನ್ನು ನೂರಾರು ಒಂಟೆಗಳು ಹೊತ್ತು ತರುತ್ತಿದ್ದವು. ಆಗ ಈ ಮರುಭೂಮಿಯಲ್ಲಿ ದೇಶದ ರಕ್ಷಣೆ ಮಾಡುವ ನಮ್ಮ ಸೈನಿಕರಿಗೆ ಕುಡಿಯುವ ನೀರು ಸಿಗುತ್ತಿತ್ತು. ಆ ನೋವನ್ನು ನಾನು ಚೆನ್ನಾಗಿ ಅನುಭವಿಸಿದೆ. ಸರ್ದಾರ್ ಸರೋವರ ಜಲಾಶಯದ ಕಾರ್ಯ ಮುಂದೆ ಸಾಗಿದಾಗ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ನೀರಿಲ್ಲದೆ ಮರುಭೂಮಿಯಲ್ಲಿ ದೇಶ ಕಾಯುತ್ತಾ ನಿಂತಿರುವ ಬಿಎಸ್ ಎಫ್ ಯೋಧರಿಗೆ ನರ್ಮದಾ ನದಿಯ ನೀರನ್ನು ತಲುಪಿಸಬೇಕೆಂಬ ಇಚ್ಛೆ ಮನಸ್ಸಿನಲ್ಲಿ ಮೂಡಿತು. 700 ಕಿಲೋಮೀಟರ್ ದೂರದವರೆಗೆ ಷೆಪ್ ಲೈನ್ ಅಳವಡಿಸಲಾಯಿತು. ಕೆಲವು ವರ್ಷಗಳಿಂದ, ದಶಕಗಳಿಂದ ಒಂಟೆಗಳು ನೀರನ್ನು ಹೊತ್ತು ತರುತ್ತಿದ್ದವು, ಆಗ ನನ್ನ ದೇಶದ ರಕ್ಷಣೆ ಮಾಡುವ ಯೋಧರು ನೀರು ಪಡೆಯುತ್ತಿದ್ದರು. ನಾನು ನರ್ಮದಾ ನೀರನ್ನು ಬಿಎಸ್ ಎಫ್ ಯೋಧರಿಗೆ ತಲುಪಿಸಿದ ದಿನ ಅವರ ಮುಖದಲ್ಲಿ ಅದೆಂತಹ ಖುಷಿ ಇತ್ತು. ಇದು ಇಂಜಿನಿಯರಿಂಗ್ ನ ಅದ್ಭುತವಾಗಿದೆ. ನಾವು ಇಲ್ಲಿಂದ ನೀರನ್ನೆತ್ತಿ 700 ಕಿಲೋಮೀಟರ್ ದೂರದವರೆಗೆ ನರ್ಮದಾ ನೀರನ್ನು ತಲುಪಿಸಿದೆವು. ಹೀಗೆ ನೀರನ್ನು ತಲುಪಿಸಲು ಕೆಲವೊಮ್ಮೆ 60 ಅಡಿ ಎತ್ತರಕ್ಕೆ ನೀರೆತ್ತುವುದು, ನಂತರ ಅದನ್ನು ಕೆಳಗಿಳಿಸುವುದು ಮಾಡಬೇಕಾಗುತ್ತಿತ್ತು.
ಸೋದರ ಸೋದರಿಯರೆ, ಇಡೀ ಸರ್ದಾರ್ ಸರೋವರ ಜಲಾಶಯವು ಇಂಜಿನಿಯರಿಂಗ್ ಕೌಶಲದ ಒಂದು ಅದ್ಭುತವಾಗಿದೆ. ನಾಲೆಗಳ ಮೂಲಕ ನೀರು ಒದಗಿಸುವ ಕಾರ್ಯವಾಗಿದೆ. ನಾನು ದೇಶದ ವಾಸ್ತುಶಿಲ್ಪಿ, ಇಂಜಿನಿಯರ್, ರಚನಾ ವಿನ್ಯಾಸ (structure design) ಮಾಡುವ ಸಿವಿಲ್ ಇಂಜಿನಿಯರ್, ಎಲೆಕ್ಟ್ರಿಕಲ್ ಇಂಜಿನಿಯರ್. ಈ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಇದನ್ನು ಒಂದು ಪ್ರಾಜೆಕ್ಟ್ ರೂಪದಲ್ಲಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇನೆ. ಇದರಿಂದ ಭವಿಷ್ಯದಲ್ಲಿ ನಿರ್ಮಾಣ ಕಾರ್ಯಗಳಿಗೆ ಹೊಸ ದಿಕ್ಕು ಮೂಡುತ್ತದೆ, ಅವಕಾಶ ದೊರಕುತ್ತದೆ.
ಸೋದರ ಸೋದರಿಯರೆ, ಇದು ಗುಜರಾತ್ ಮಾತ್ರವಲ್ಲದೆ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಗಳ ಕೋಟ್ಯಂತರ ರೈತರ ಅದೃಷ್ಟವನ್ನು ಬದಲಿಸುವ ಯೋಜನೆಯಾಗಿದೆ. ಗುಜರಾತ್ ಇದರ ನೇತೃತ್ವ ವಹಿಸಿತು. ಸೋದರ ಸೋದರಿಯರೆ, ವಿಶ್ವಾದ್ಯಂತ ನಮ್ಮನ್ನು ಕಟುವಾಗಿ ಟೀಕಿಸಿದರು, ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಹೊರಿಸಿದರು. ತಾಯಿ ನರ್ಮದೆಯ ಈ ಯೋಜನೆಗಳನ್ನು ತಡೆಯಲು ಎಲ್ಲ ಷಡ್ಯಂತ್ರಗಳು ನಡೆದವು. ಆದರೆ ಇದನ್ನು ರಾಜಕೀಯಗೊಳಿಸಲು ಬಿಡಬಾರದೆಂದು ನಾವು ತೀರ್ಮಾನಿಸಿದ್ದೆವು. ಇದು 21ನೆಯ ಶತಮಾನದ ಭಾವೀ ಪೀಳಿಗೆಯ ಭಾಗ್ಯವನ್ನು ನಿರ್ಣಯಿಸುವ ಯೋಜನೆಯಾಗಿದೆ. ಆದ್ದರಿಂದ ರಾಜಕೀಯದ ಜೊತೆಗೆ ಇದನ್ನು ಬೆರೆಸಲು ನಾವು ಬಿಡಲಿಲ್ಲ.
ಸೋದರ ಸೋದರಿಯರೆ, ನಾನು ಇಂದಿಗೂ ಇದನ್ನೇ ಪಾಲಿಸುತ್ತಾ ಬಂದಿದ್ದೇನೆ. ಅದೆಷ್ಟು ಸಂಕಷ್ಟಗಳು ಬಂದಿವೆ, ಯಾರು ಯಾರು ಸಂಕಷ್ಟಗಳನ್ನು ತಂದೊಡ್ಡಿದ್ದಾರೆ, ನಾನು ಎಲ್ಲವನ್ನು ಲೆಕ್ಕವಿಟ್ಟಿದ್ದೇನೆ. ಆದರೆ ನಾನು ಅಂತಹ ರಾಜಕೀಯ ಮಾಡಬೇಕಿಲ್ಲ, ನಾನು ಆ ದಾರಿಯಲ್ಲಿ ಹೋಗಬೇಕಿಲ್ಲ.
ಆಧ್ಯಾತ್ಮಿಕ ಸಂದೇಶ ನೀಡುವುದೇ ಜೀವನ ಕಾರ್ಯವಾಗಿದ್ದ ಗುಜರಾತಿನ ಸಾಧು ಸಂತರು ನರ್ಮದಾ ಜಲಾಶಯದ ಯೋಜನೆಯನ್ನು ವಿರೋಧಿಸಿದ್ದನ್ನು ನಾನು ನೋಡಿದ್ದೇನೆ. ಗುಜರಾತಿನ ಸಂತರು ಮುಂದೆ ಬಂದು ಹೋರಾಟದ ನೇತೃತ್ವ ವಹಿಸಿದರು, ಉಪವಾಸ ಕುಳಿತರು.ಇದಿಷ್ಟೇ ಅಲ್ಲ, ವಿಶ್ವಬ್ಯಾಂಕ್ ಸಹ ಹಣ ಕೊಡಲು ನಿರಾಕರಿಸಿತು. ಆಗ ಗುಜರಾತಿನ ದೇವಾಲಯಗಳು ಸಹ ಈ ಜಲಾಶಯ ನಿರ್ಮಿಸಲು ಹಣ ನೀಡಿದವು.ಹೀಗೆ ಸರ್ದಾರ್ ಜಲಾಶಯವನ್ನು ನಿರ್ಮಿಸಲಾಗಿದೆ. ಆದ್ದರಿಂದಲೇ ನಾವು ಇದನ್ನು ಯಾವುದೇ ಒಂದು ಪಕ್ಷದ,ಯಾವುದೇ ಒಂದು ಸರ್ಕಾರದ ಕಾರ್ಯಕ್ರಮವೆಂದು ಎಂದಿಗೂ ಭಾವಿಸಲಿಲ್ಲ.ಇದು ಕೋಟಿ ಕೋಟಿ ಜನರ ಕಾರ್ಯಕ್ರಮವಾಗಿದೆ, ನೀರಿಗಾಗಿ ಹಂಬಲಿಸಿದ ಜನರ ಸಂಕಲ್ಪದ ಕಾರ್ಯಕ್ರಮವಾಗಿದೆ ಮತ್ತು ಗುಜರಾತಿನ ಮಣ್ಣಿಗಾಗಿ,ನೀರಿಲ್ಲದೆ ಒಣಗಿದ ಮಣ್ಣಿಗಾಗಿ ಇರುವ ನೀರು ಇದು.
ಸೋದರ ಸೋದರಿಯರೆ, ಜೀವನದಲ್ಲಿ ಕೆಲವು ಕ್ಷಣಗಳು ವ್ಯಕ್ತಿಯನ್ನು ಬಹಳ ಭಾವುಕರನ್ನಾಗಿಸುತ್ತವೆ. ನನ್ನ ಜೀವನದಲ್ಲೂ ತಾಯಿ ನರ್ಮದೆಗಾಗಿ ಏನು ಬೇಕಾದರೂ ಮಾಡಬೇಕೆಂಬ ಭಾವುಕತೆ ತುಂಬಿಕೊಂಡಿದೆ.ಏಕೆಂದರೆ ನನ್ನ ಭೂಮಿತಾಯಿ,ಈ ಒಣ ಒಣ ಭೂಮಿತಾಯಿ ಹನಿ ಹನಿ ನೀರಿಗಾಗಿ ಹಂಬಲಿಸುತ್ತಿರುವ ಭೂಮಿತಾಯಿಗೆ ಆಕೆಯ ಮಗ ನರ್ಮದೆಯ ನೀರನ್ನು ನೀಡುತ್ತಾನೆ ಎಂದರೆ ಅದು ಆ ಮಗನ ಪಾಲಿಗೆ ಭಾವುಕ ಕ್ಷಣಗಳಲ್ಲದೆ ಬೇರೇನು ಆಗಿರಲು ಸಾಧ್ಯ? ನನ್ನ ರಾಜ್ಯದ ಕೋಟಿ ಕೋಟಿ ತಾಯಂದಿರು, ಅವರ ಜೊತೆಗೆ ಹೆಣ್ಣುಮಕ್ಕಳು ಓದುವುದನ್ನು ಬಿಟ್ಟು ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡು ಮೂರು ಮೂರು ಕಿಲೋಮೀಟರ್ ದೂರದಿಂದ ನೀರು ತರಲು ಹೋಗುತ್ತಿದ್ದರು.6 ವರ್ಷ, 8 ವರ್ಷ, 10 ವರ್ಷದ ಹೆಣ್ಣು ಮಗು ನೀರು ತರಲು ತನ್ನ ತಾಯಿಗೆ ನೆರವಾಗುತ್ತಿತ್ತು. ವಿದ್ಯಾಭ್ಯಾಸವನ್ನು ತೊರೆಯುತ್ತಿತ್ತು. ಒಬ್ಬ ಮಗನಿಂದಾಗಿ ತಾಯಿ ನರ್ಮದೆಯ ನೀರು ತಲುಪಿ ಅವರ ಸಂಕಷ್ಟಗಳಿಗೆ ಮುಕ್ತಿ ಸಿಗುತ್ತದೆ. ಹಾಗಾದರೆ ಈ ಕೋಟಿ ಕೋಟಿ ತಾಯಂದಿರ ಆಶೀರ್ವಾದವು ನನ್ನಂತಹ ಮಗನಿಗೆ ದೊರೆತರೆ ಜೀವನದಲ್ಲಿ ಇದಕ್ಕಿಂತ ದೊಡ್ಡ ಭಾವುಕ ಕ್ಷಣಗಳು ಇನ್ನು ಯಾವುದಿರುತ್ತವೆ?
ಮಾತು ಬಾರದ ಮುಗ್ಧ ಪಶುಗಳು ಮಾನವರ ಸೇವೆಯಲ್ಲೇ ತಮ್ಮ ಜೀವನವನ್ನು ಕಳೆಯುತ್ತವೆ. ಆ ಮುಗ್ಧ ಜೀವಿಗಳು ಕುಡಿಯುವ ನೀರಿಗಾಗಿ, ತಿನ್ನುವ ಹುಲ್ಲು, ಮೇವನ್ನು ಪಡೆಯಲು 200-200 ಕಿಲೋಮೀಟರ್ ದೂರ ನಡೆದೇ ಹೋಗಬೇಕಾಗಿತ್ತು. ಈಗ ನರ್ಮದೆಯ ನೀರು ತಲುಪುತ್ತದೆ, ಹಸಿರು ಮೇವು ಸಿಗುತ್ತದೆ, ಹಸಿರು ಮೇವನ್ನು ನನ್ನ ಆ ಪಶುಗಳು ತಿನ್ನುತ್ತವೆ, ಮುಗ್ಧ ಪಶುಗಳಿಗೆ ಕುಡಿಯಲು ನೀರು ದೊರಕುತ್ತದೆ. ಮುಗ್ಧ ಪಶುಗಳು ಸಹ ಆಶೀರ್ವಾದ ನೀಡುತ್ತವೆ. ಭಾರತಮಾತೆಯ ಮಗನಾದ ನನಗೆ ಈ ಕೋಟಿ ಕೋಟಿ ಪಶುಗಳ ಆಶೀರ್ವಾದವೂ ನನ್ನ ಪಾಲಿಗೆ ಎಲ್ಲಕ್ಕಿಂತ ಹೆಚ್ಚು ಭಾವುಕ ಕ್ಷಣಗಳಾಗುವುದು ಬಹಳ ಸಹಜವಾಗಿದೆ.
ಸೋದರ ಸೋದರಿಯರೆ, ಹುಟ್ಟುಹಬ್ಬವನ್ನು ಆರಿಸಿಕೊಳ್ಳುವ ಜನರ ಸಾಲಿಗೆ ಸೇರಿದವನಲ್ಲ ನಾನು.ಆದರೆ ನನ್ನ ಜನ್ಮದಿನದಂದೇ ವಿಶ್ವಕರ್ಮ ಜಯಂತಿ ಬಂದಿದೆ ಮತ್ತು ಕೋಟ್ಯಂತರ ಜನರ ಇಡೀ ಶತಮಾನದ ಭಾಗ್ಯವನ್ನು ಬರೆಯುತ್ತಿರುವ ಈ ಕ್ಷಣಗಳನ್ನು ನನಗೆ ಗುಜರಾತ್ ನೀಡಿದೆ.ಇಂತಹ ಕ್ಷಣಗಳು ಇಷ್ಟು ವರ್ಷಗಳ ನನ್ನ ಜೀವನದಲ್ಲಿ ಎಂದಿಗೂ ಬಂದಿರಲಿಲ್ಲ.
ಸೋದರ ಸೋದರಿಯರೆ, ಇದು ಪ್ರಗತಿಯ ಒಂದು ದೊಡ್ಡ ದ್ಯೋತಕವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಾಂಡ್ಲಾದಿಂದ ಕೊಹಿಮಾವರೆಗೆ ಎಂಟು ಮೀಟರ್ ಅಗಲದ ಸಿಮೆಂಟ್ ರಸ್ತೆಯನ್ನು ನಿರ್ಮಿಸಲು ಅಂದರೆ ಹಿಮಾಲಯದಿಂದ ಸಮುದ್ರದವರೆಗೆ, ಕಾಂಡ್ಲಾದಿಂದ ಕೊಹಿಮಾವರೆಗೆ ಎಂಟು ಮೀಟರ್ ಅಗಲದ ಸಿಮೆಂಟ್ ರಸ್ತೆಯನ್ನು ನಿರ್ಮಿಸುವ ಯೋಜನೆಗೆ ಒಟ್ಟು ಎಷ್ಟು ಸಿಮೆಂಟ್ ಬೇಕಾಗುತ್ತದೆ, ಎಷ್ಟು ಸಿಮೆಂಟ್ ಬಳಸಲಾಗಿದೆ ಎಂಬ ಅಧ್ಯಯನವನ್ನು ತಜ್ಞರು ಮಾಡುತ್ತಾರೆ. ಸೋದರ ಸೋದರಿಯರೆ, ಏನೂ ಮಾಡಲಿಕ್ಕಾಗದೆ? ಆದ್ದರಿಂದ ಈ ನರ್ಮದೆಯ ನೀರು ನೀರಲ್ಲ,ಇದು ಸ್ಪರ್ಶಮಣಿ. ಸ್ಪರ್ಶಮಣಿಯು ಕಬ್ಬಿಣವನ್ನು ಸ್ಪರ್ಶಿಸಿದರೂ ಅದು ಚಿನ್ನದ ರೂಪ ತಳೆಯುತ್ತದೆ. ಇದೇ ರೀತಿ ಸ್ಪರ್ಶಮಣಿಯ ರೂಪದಂತಿರುವ ತಾಯಿ ನರ್ಮದೆಯು ಈ ಮಣ್ಣಿನ ಯಾವುದೇ ಮೂಲೆಯನ್ನು ಸ್ಪರ್ಶಿಸಿದರೂ ಅದು ಚಿನ್ನವಾಗಬಲ್ಲದು. ಸೋದರ ಸೋದರಿಯರೆ, ಭಾರತದ ಸುವರ್ಣ ಭಾಗ್ಯವನ್ನು ಬರೆಯುವ ಕಾರ್ಯವು ಸ್ಪರ್ಶಮಣಿ ರೂಪದ ಈ ತಾಯಿ ನರ್ಮದೆಯ ಮೂಲಕ ಆಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ.
ಸೋದರ ಸೋದರಿಯರೆ, ರೈತನಿಗೆ ಒಳಿತಾಗುತ್ತದೆ, ಕುಡಿಯುವ ನೀರು ಸಿಗುತ್ತದೆ, ಗುಜರಾತಿನಲ್ಲಿ ಆರ್ಥಿಕ ಕ್ರಾಂತಿ ಆಗಲಿದೆ. ನಮ್ಮ ಪಶ್ಚಿಮ ಭಾರತದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ, ಹಾಗೆಯೇ ಪೂರ್ವ ಭಾರತದ ಪ್ರಗತಿಗೆ ವಿದ್ಯುತ್ ಬೇಕು, ಅನಿಲ ಬೇಕು. ದೆಹಲಿಯಲ್ಲಿ ಸರ್ಕಾರವನ್ನು ರಚಿಸಿದ್ದೇವೆ, ಕೇಂದ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ನೀಡಿದ್ದೀರಿ. ಭಾರತದ ಸಮತೋಲನದ ಪ್ರಗತಿಗಾಗಿ ಪಶ್ಚಿಮಕ್ಕೆ ನೀರು, ಪೂರ್ವಕ್ಕೆ ವಿದ್ಯುತ್, ಅನಿಲ ಸಿಗಬೇಕು. ಆಗ ನೀವು ಪೂರ್ವ ಭಾರತವೂ ಪಶ್ಚಿಮ ಭಾರತದಂತೆ ಶಕ್ತಿಯುತವಾಗುತ್ತದೆ, ನನ್ನ ಭಾರತಮಾತೆಯ ಎರಡೂ ಭುಜಗಳು ಶಕ್ತಿಶಾಲಿಯಾಗುವಂತಹ ಯೋಜನೆಗಳನ್ನು ಕೈಗೆತ್ತಿಕೊಂಡು ಕಾರ್ಯರೂಪಕ್ಕೆ ತರಲಾಗುತ್ತಿದೆ.
ಸೋದರ ಸೋದರಿಯರೆ, ಈ ಸರ್ದಾರ್ ಜಲಾಶಯವು ಕೇವಲ ಒಂದು ರಾಜ್ಯಕ್ಕೆ ಸೇರಿದ್ದಲ್ಲ, ರಾಜಸ್ಥಾನಕ್ಕೆ ನೀರು ಕೊಟ್ಟೆವು. ಸರ್ದಾರ್ ಸರೋವರದಿಂದ ರಾಜಸ್ಥಾನಕ್ಕೆ ನೀರು ಕೊಟ್ಟೆವು. ಆಗಲೂ ವಸುಂಧರಾ ರಾಜೇ ಅವರು ಅಲ್ಲಿನ ಮುಖ್ಯಮಂತ್ರಿಯಾಗಿದ್ದರು. ಬೈರೊವತ್ ಶೆಖಾವತ್ ಉಪರಾಷ್ಟ್ರಪತಿಯಾಗಿದ್ದರು. ಜಸ್ವಂತ್ ಸಿನ್ಹಾ ಮತ್ತು ಬೈರೊವತ್ ಶಿಖಾವತ್ ನನ್ನನ್ನು ಭೇಟಿಯಾದದ್ದು ನನಗೆ ಚೆನ್ನಾಗಿ ನೆನಪಿದೆ. ಅಂದು ಅವರು ಬಹಳ ಭಾವುಕರಾಗಿದ್ದರು. ಅವರು ಮೋದಿಯವರೆ,ರಾಜಸ್ಥಾನಕ್ಕೆ ನೀರು ಕೊಡುವುದೆಂದರೇನು ಎಂದು ನಿಮಗೆ ಗೊತ್ತಿದೆಯೇ, ಸ್ವಲ್ಪ ಇತಿಹಾಸವನ್ನು ನೋಡಿ, ಕೇವಲ ಸ್ವಲ್ಪ ನೀರಿಗಾಗಿ ಶತಮಾನಗಳ ಹಿಂದೆ ರಾಜ್ಯಗಳ ಮಧ್ಯೆ ಕತ್ತಿ ಝಳಪಿಸಲಾಗುತ್ತಿತ್ತು,ಯುದ್ಧಗಳು ನಡೆಯುತ್ತಿದ್ದವು, ರಾಜ್ಯ ರಾಜ್ಯಗಳ ನಡುವೆ ಸೋಲು,ಗೆಲುವಿನ ಇತಿಹಾಸಗಳಿವೆ. ಅದೇ ನೀವು ಯಾವುದೇ ಸಂಘರ್ಷವಿಲ್ಲದೆ, ಯಾವುದೇ ಆತಂಕವಿಲ್ಲದೆ, ಯಾವುದೇ ಹೋರಾಟ ನಡೆಯದೆ ಸರ್ದಾರ್ ಜಲಾಶಯದಿಂದ ನರ್ಮದೆಯ ನೀರನ್ನು ರಾಜಸ್ಥಾನದ ಒಣಗಿದ ಭೂಮಿಗೆ ನೀಡಿದಿರಿ. ಪಾಕಿಸ್ತಾನದ ಗಡಿಯಲ್ಲಿರುವ ಬಾಡ್ಮೇರ್ ವರೆಗೂ ನೀರನ್ನು ಹರಿಸಿದ್ದೀರಿ ಅಲ್ಲವೇ? ಸೋದರ ಸೋದರಿಯರೆ, ನಾನು ಆ ಇಬ್ಬರು ಮುಖಂಡರ ಕಣ್ಣುಗಳಲ್ಲಿ ಅದೆಂತಹ ಭಾವನೆಗಳನ್ನು ನೋಡಿದ್ದೆ. ಪಕ್ಷಕ್ಕಿಂತ ದೇಶ ದೊಡ್ಡದು ಎಂದು ಭಾವಿಸುವ ಇಂತಹ ಜನರು ಆಡಳಿತ ನಡೆಸಲು ಅವಕಾಶ ಸಿಕ್ಕಿದಾಗಲೆಲ್ಲ ನರ್ಮದಾ ಯೋಜನೆಯಲ್ಲಿ ಪ್ರಗತಿ ತಂದಿದ್ದಾರೆ. ನರ್ಮದಾ ಯೋಜನೆಗೆ ಅಡಚಣೆಗಳು ಬಂದ ಆ ಸಮಯದಲ್ಲಿ ಪಕ್ಷಕ್ಕಿಂತ ದೇಶ ದೊಡ್ಡದು ಎಂದು ಭಾವಿಸಲಾಗಿದೆ.
ಇಂದು ಈ ಜಲಾಶಯದ ನಿರ್ಮಾಣ ಕಾರ್ಯ ಮುಗಿದಿದೆ. ನಾನು ಮಧ್ಯಪ್ರದೇಶದ ಜನತೆಗೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಆದರದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದು ಈ ಯೋಜನೆ ಪೂರ್ತಿಯಾಗಿರುವುದಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರದ ಜನತೆಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದು ಈ ಯೋಜನೆ ಪೂರ್ತಿಯಾಗಿರುವುದಕ್ಕೆ ನನ್ನ ಆದಿವಾಸಿ ಸೋದರ, ಸೋದರಿಯರಿಗೆ ಆದರದಿಂದ ನಮಿಸುತ್ತೇನೆ. ಇವರು ‘ಸರ್ವಜನ ಹಿತಾಯ್, ಸರ್ವಜನ ಸುಖಾಯ್’ ಎಂಬಂತೆ ತಮ್ಮದನ್ನು ಬಿಟ್ಟುಕೊಡಲು ಮುಂದೆ ಬಂದರು. ಮುಂಬರುವ ಸರ್ಕಾರಗಳು ಸಹ ಗೌರವ ಭಾವದಿಂದ ಅವರನ್ನು ನೋಡುತ್ತವೆ ಎಂದು ನನಗೆ ಸಂಪೂರ್ಣ ಭರವಸೆಯಿದೆ. ಆದಿವಾಸಿಗಳ ತ್ಯಾಗ, ಬಲಿದಾನಗಳಿಂದಾಗಿ ಇಂದು ಭಾರತಮಾತೆ, ಬಾಯಾರಿದ ಭಾರತಮಾತೆಯು ನರ್ಮದೆಯ ನೀರಿನಿಂದ ಹೂಗಳಿಂದ ಶೋಭಿತಳಾಗುತ್ತಾಳೆ, ಚಿಗುರುತ್ತಾಳೆ ಎಂದರೆ ಇದಕ್ಕಿಂತ ದೊಡ್ಡ ಸೌಭಾಗ್ಯ ಬೇರಾವುದಿದೆ? ಇದಕ್ಕಾಗಿ ನಾನು ನನ್ನ ಆದಿವಾಸಿ ಸೋದರ, ಸೋದರರಿಗೆ ನಮಿಸುತ್ತೇನೆ.
ಸೋದರ ಸೋದರಿಯರೆ, ಸರ್ದಾರ್ ಪಟೇಲ್ ಅವರು ಭಾರತವನ್ನು ನಿರ್ಮಿಸುವ ಒಂದು ಭಗೀರಥ ಕಾರ್ಯವನ್ನು ಮಾಡಿದರು. ಸರ್ದಾರ್ ಅವರು ಇಲ್ಲದಿದ್ದರೆ ದೇಶ ಹೇಗೆ ಛಿದ್ರಗೊಂಡಿರುತ್ತಿತ್ತು ಎಂಬುದನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆವು. ಕಾಶ್ಮೀರವನ್ನು ಬಿಟ್ಟು ಇಡೀ ಭಾರತವನ್ನು ಒಂದು ಗೂಡಿಸುವ ಕಾರ್ಯದ ಹೊಣೆ ಸರ್ದಾರ್ ಪಟೇಲ್ ಅವರ ಮೇಲಿತ್ತು, ಅದನ್ನು ಮಾಡಿ ತೋರಿಸಿದರು. ಇಂದು ನಾವು ಒಂದು ಶ್ರೇಷ್ಠ ಭಾರತದ ಕನಸಿನೊಂದಿಗೆ ಮುನ್ನಡೆಯುತ್ತಿದ್ದೇವೆ. ಆದರೆ ಸ್ವಾತಂತ್ರ್ಯದ ನಂತರ ಈ ಮಹಾಪುರುಷನನ್ನು ದೇಶವು ಯಾವ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿತ್ತೊ, ಯಾವ ರೀತಿಯಲ್ಲಿ ಈ ಮಹಾಪುರುಷನಿಂದ ದೇಶದ ಪೀಳಿಗೆಗೆ ಪ್ರೇರಣೆ ದೊರಕಬೇಕಿತ್ತೊ ಅದು ಯಾವ್ಯಾವುದೋ ಕಾರಣದಿಂದಾಗಿ ಸಾಧ್ಯವಾಗಲಿಲ್ಲ.
ಭಾರತದ ಮುಂದಿನ ಪೀಳಿಗೆಯವರಲ್ಲಿ ಸಹ ಸರ್ದಾರ್ ಪಟೇಲ್ ಅವರ ಹೆಸರು ಅಮರವಾಗಿರುವಂತೆ, ಅವರ ಕೆಲಸಗಳು ಅಮರವಾಗಿರುವಂತೆ ಮತ್ತು ಅವರ ಪ್ರೇರಣೆಗಳು ಅಮರವಾಗಿರುವಂತೆ ಮಾಡುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ. ಕೆಲವು ಸಂಕೇತಾತ್ಮಕ ವಸ್ತುಗಳು ಸಹ ಪ್ರೇರಣೆಗೆ ಕಾರಣವಾಗುತ್ತದೆ ಮತ್ತು ಆ ಕನಸನ್ನು ಸಾಕಾರಗೊಳಿಸುವುದು ಈ ಲೋಕದಲ್ಲಿ ನನಗೆ ಸಣ್ಣ ಕೆಲಸ ಎನಿಸುವುದಿಲ್ಲ ಎಂದು ನೀವು ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ. ಸೋದರರೆ, ನಾನು ಸಣ್ಣದನ್ನು ಯೋಚಿಸುವುದಿಲ್ಲ, ಸಣ್ಣತನದ ಕೆಲಸವನ್ನು ಮಾಡುವುದಿಲ್ಲ. ನೂರಾ ಇಪ್ಪತ್ತೈದು ಕೋಟಿ ಜನರು ನನ್ನ ಜೊತೆಗಿರುವಾಗ, ನೂರಾ ಇಪ್ಪತ್ತೈದು ಕೋಟಿ ಕನಸುಗಳು ಇರುವಾಗ ನನಗೆ ಸಣ್ಣ ಕನಸು ಕಾಣುವ ಹಕ್ಕು ಸಹ ಇಲ್ಲ. ಆದ್ದರಿಂದ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಕೊಂಡಾಗ ಇದು ವಿಶ್ವದಲ್ಲೇ ಅತ್ಯಂತ ಎತ್ತರದ ಪ್ರತಿಮೆಯಾಗಿರಬೇಕು ಎಂದು ನಾವು ಮನಸ್ಸಿನಲ್ಲಿ ನಿರ್ಧರಿಸಿದ್ದೆವು. ಒಟ್ಟು 190 ಮೀಟರ್ ಇರುತ್ತದೆ, ಇದರಲ್ಲಿ ಪ್ರತಿಮೆಯ ಎತ್ತರ 182 ಮೀಟರ್ ಇರುತ್ತದೆ. ಅಮೆರಿಕಾದಲ್ಲಿ ಇರುವ ಸ್ವಾತಂತ್ರ್ಯ ಪ್ರತಿಮೆಗಿಂತ (Liberty of Statue) ಸರ್ದಾರ್ ಪಟೇಲ್ ಅವರ ಏಕತೆಯ ಪ್ರತಿಮೆಯ ಹೆಸರಿನಲ್ಲಿ (Liberty of Unity) ಇದನ್ನು ಎರಡು ಪಟ್ಟು ಹೆಚ್ಚು ಎತ್ತರಕ್ಕೆ ನಿರ್ಮಿಸಲಾಗುತ್ತಿದೆ.
ವಿಶ್ವಾದ್ಯಂತ ಜನರು Statue of Liberty ನೋಡಲು ಹೋಗುತ್ತಾರೆ ಎಂದು ನೀವು ಕಲ್ಪನೆ ಮಾಡಿಕೊಳ್ಳಬಹುದು. ನಮ್ಮಲ್ಲಿ ದಕ್ಷಿಣ ಗುಜರಾತಿಗೆ ಹೋದರೆ ಸಾಪುತಾರ ಇದೆ, ಸೌರಾಷ್ಟ್ರಕ್ಕೆ ಹೋದರೆ ಗಿರ್ ಅಭಯಾರಣ್ಯದ ಸಿಂಹಗಳಿವೆ, ಕಛ್ ಗೆ ಹೋದರೆ ಸುಂದರ ಮರುಭೂಮಿಯಿದೆ, ಉತ್ತರಕ್ಕೆ ಹೋದರೆ ತಾಯಿ ಅಂಬೆ ಇದ್ದಾಳೆ, ಸ್ವಲ್ಪ ಮುಂದಕ್ಕೆ ಹೋದರೆ ಆಬು ಇದೆ. ಈ ನನ್ನ ಪ್ರದೇಶದಲ್ಲಿ ಪ್ರವಾಸೋದ್ಯಮದ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ಸೋದರ ಸೋದರಿಯರೆ, ಈ ಸರ್ದಾರ್ ಪಟೇಲ್ ಪ್ರತಿಮೆಯನ್ನು ನೋಡಲು ಪ್ರತಿದಿನ ಲಕ್ಷಾಂತರ ಜನರು ಇಲ್ಲಿಗೆ ಬರುವುದನ್ನು ನೀವು ನೋಡುವಿರಿ, ಇದು ಸಾವಿರಾರು ಹಳ್ಳಿಗಳ ಹೊಟ್ಟೆಬಟ್ಟೆಯ ಸಂಪಾದನೆಗೆ ಕಾರಣವಾಗುತ್ತದೆ ಎಂಬ ಈ ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ. ಈ ಕನಸುಗಳನ್ನು ನಾನು ಕಂಡಿದ್ದೇನೆ.
ಬೆರಳೆಣಿಕೆಯ ಜನರಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಬಿಟ್ಟಿತೇ ಎಂದು ಕೆಲವರಿಗೆ ಅನಿಸುತ್ತಿರುತ್ತದೆ. ಬೆರಳೆಣಿಕೆಯ ಜನರು ಬಲಿದಾನ ಮಾಡಿದರು ಎಂಬಂತಹ ಗೀತೆಗಳನ್ನು ಕೆಲವೇ ಜನರು ಹಾಡಿದರು. ದೇಶದ ಇತಿಹಾಸವನ್ನು ತಿರುಚಲಾಗಿದೆ. ದೇಶಕ್ಕಾಗಿ ಪ್ರಾಣ ನೀಡಿದವರನ್ನು ಸ್ಮರಿಸಿಕೊಳ್ಳುವುದಕ್ಕೆ ಕೆಲವರು ಹಿಂದೇಟು ಹಾಕುತ್ತಾರೆ. 1857ರಿಂದ 1947ರವರೆಗೆ ನನ್ನ ಆದಿವಾಸಿಗಳು ಪ್ರತಿಯೊಂದು ಆಡಳಿತದ ವಿರುದ್ಧ ಹೋರಾಟ ನಡೆಸಿದ್ದಾರೆ, ಬಲಿದಾನ ಮಾಡಿದ್ದಾರೆ. ಒಮ್ಮೆಗೇ ನೂರಾರು ಆದಿವಾಸಿಗಳನ್ನು ಈ ಬ್ರಿಟಿಷರು ನೇಣಿಗೇರಿಸುತ್ತಿದ್ದರು. ಆದರೆ ಇವರು ತಲೆಬಾಗುತ್ತಿರಲಿಲ್ಲ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಆದಿವಾಸಿಗಳು ಇರುವ ಭಾರತದ ಪ್ರತಿ ರಾಜ್ಯದಲ್ಲಿ ಅವರು ಬಲಿದಾನ ಮಾಡಲು ಎಂದಿಗೂ ಹಿಂದೆ ಬೀಳಲಿಲ್ಲ. ಹೋರಾಟವನ್ನು ಆರಂಭಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ನನ್ನ ಆದಿವಾಸಿ ಸೋದರರು ಕಾಡುಗಳಲ್ಲಿರಲಿ, ಬೆಟ್ಟಗುಡ್ಡಗಳಲ್ಲಿರಲಿ, ತೊಡುವುದಕ್ಕೆ ಬಟ್ಟೆ ಇರಲಿಲ್ಲ. ಆದರೆ ಭಾರತಮಾತೆಯ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡುವುದಕ್ಕೆ ಎಂದೂ ಹಿಂದೆ ಉಳಿದವರಲ್ಲ. ಅವರಿಗೆ ಗೌರವ ಸಿಗಬೇಕು, ಭಾವೀ ಪೀಳಿಗೆಗೆ ಅವರಿಂದ ಪ್ರೇರಣೆ ದೊರಕಬೇಕು. ಆದ್ದರಿಂದ ಭಾರತದಲ್ಲಿ 1857- 1947 ರವರೆಗೆ ಎಲ್ಲೆಲ್ಲಿ, ಯಾವಯಾವ ರಾಜ್ಯದಲ್ಲಿ ಆದಿವಾಸಿಗಳು ಸ್ವಾತಂತ್ರ್ಯ ಹೋರಾಟಕ್ಕಾಗಿ ಏನೇನು ಮಾಡಿದರೆಂಬುದನ್ನು ಸ್ಮರಿಸಿಕೊಳ್ಳುವುದಕ್ಕಾಗಿ ಒಂದು ವಸ್ತು ಸಂಗ್ರಹಾಲಯವನ್ನು ಪ್ರತಿಮೆ ಇರುವ ಸ್ಥಳಕ್ಕೆ ಸಮೀಪದಲ್ಲೇ ನಿರ್ಮಿಸಲು ಇಚ್ಛಿಸುತ್ತೇವೆ.
ದೇಶದ ಮುಂದಿನ ಪೀಳಿಗೆಗೆ ನಮ್ಮ ಆದಿವಾಸಿಗಳ ಕುರಿತು ಗೌರವ ಇರಬೇಕು, ಅಭಿಮಾನ ಇರಬೇಕು. ತಾಯಿ ಭಾರತಿಗಾಗಿ ಪ್ರಾಣತೆತ್ತ ಆ ಪೂರ್ವಿಕರ ಬಗ್ಗೆ ಶ್ರದ್ಧೆಯ ಭಾವವಿರಬೇಕು. ಆದ್ದರಿಂದ ಭಾರತದ ಎಲ್ಲ ರಾಜ್ಯಗಳ ಆದಿವಾಸಿಗಳ ವೀರಗಾಥೆಯನ್ನು ಸಾರುವ ಒಂದು ಆಧುನಿಕ, ಡಿಜಿಟಲ್ ತಂತ್ರಜ್ಞಾನವುಳ್ಳ Virtual museum ಅನ್ನು ಇಲ್ಲಿ ನಿರ್ಮಿಸಬೇಕಾಗಿದೆ. ಇಂದು ಇದರ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ಗುಜರಾತಿನ ಮಣ್ಣಿನಿಂದ ನನಗೆ ದೊರೆತಿದೆ. ನಿಧಾನವಾಗಿ ಇದು ಭಾರತದ ಎಲ್ಲ ರಾಜ್ಯಗಳಲ್ಲೂ ಸ್ಥಾಪನೆಯಾಗಬಹುದು. ಇದನ್ನು ನನ್ನ ಜೀವನದ ದೊಡ್ಡ ಸೌಭಾಗ್ಯವೆಂದು ನಾನು ಭಾವಿಸುತ್ತೇನೆ ಮತ್ತು ನನ್ನ ಆ ವೀರ ಆದಿವಾಸಿಗಳಾದ ಬಿರ್ಸಾ ಮುಂಡಾ ಅವರಿಂದ ಹಿಡಿದು ನಮ್ಮ ಜಾಂಬುಘೋಡಾದ ನಾಯಕ ಸಮಾಜದವರೆಗಿನ ಪ್ರತಿಯೊಬ್ಬರಿಗೂ ಶ್ರದ್ಧೆ ಮತ್ತು ಗೌರವಗಳಿಂದ ನಮಿಸುತ್ತಾ ಈ ಶಂಕುಸ್ಥಾಪನೆ ನೆರವೇರಿಸುವ ಸೌಭಾಗ್ಯ ನನಗೆ ದೊರೆತಿದೆ. ಮುಂದಿನ ದಿನಗಳಲ್ಲಿ ಇದರ ಪ್ರಯೋಜನವೂ ದೊರಕುವುದು.
ಸರ್ದಾರ್ ಜಲಾಶಯವು ಜಲಕ್ರೀಡೆಗಳಿಗೆ, ಸಾಹಸ ಜಲಕ್ರೀಡೆಗಳಿಗೆ ಮತ್ತು ಮನರಂಜನೆಯ ದೊಡ್ಡ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಲಿದೆ. ನಿನ್ನೆಯವರೆಗೆ ಕಾಡು ಎನಿಸಿಕೊಂಡಿದ್ದ, ಹೊಟ್ಟೆಪಾಡಿಗಾಗಿ ಜನರು ಪಟ್ಟಣಗಳಿಗೆ ವಲಸೆ ಹೋಗಬೇಕಾಗಿದ್ದ ಇಲ್ಲಿನ ಜನರಿಗೆ ಮನೆಯ ಮುಂದೆಯೇ ಊಟ ಸಂಪಾದಿಸುವುದು ಸಾಧ್ಯವಾಗುತ್ತದೆ, ಈ ಕೆಲಸಗಳು ಆಗಲಿವೆ. ಬಡೋದರಾದಿಂದ ಹಿಡಿದು, ಭಡೂಚ್ ವರೆಗೆ ರಸ್ತೆ ನಿರ್ಮಾಣ, ರೈಲು ಮಾರ್ಗ ನಿರ್ಮಾಣ, ವೇಗವಾಗಿ ಚಲಿಸುವ ಗಾಡಿಗಳ ನಿರ್ಮಾಣವಾಗುತ್ತಿದೆ. ಇದರಿಂದ ಪ್ರವಾಸಿಗರು ಇಲ್ಲಿಗೆ ಬರಲು, ಸುಲಭವಾಗಿ ಬರಲು ಆಗುತ್ತದೆ ಮತ್ತು ಭಾರತದ ಒಂದು ಮಹತ್ವಪೂರ್ಣ ಪ್ರವಾಸೀ ತಾಣವಾಗುತ್ತದೆ. ಶತಮಾನಗಳ ಹಿಂದೆ ನಿರ್ಮಿಸಿದ ಆಗ್ರಾದ ಒಂದು ತಾಜ್ ಮಹಲ್, ಆಗ್ರಾದ ಒಂದು ತಾಜ್ ಮಹಲ್ ಅನ್ನೇ ಇಂದಿಗೂ ವಿಶ್ವಕ್ಕೆ ತೋರಿಸುತ್ತಿದ್ದೇವೆ. ಸೋದರರೆ, ಭಾರತದ ಪ್ರತಿಯೊಂದು ಮೂಲೆಯಲ್ಲಿ ಪ್ರಪಂಚಕ್ಕೆ ಕೊಡುವಂತಹ, ಪ್ರಪಂಚಕ್ಕೆ ತೋರಿಸುವಂತಹುದು ಬಹಳವಿದೆ. ಈ ಸರ್ದಾರ್ ಸರೋವರ ಜಲಾಶಯ, ಈ ಸರ್ದಾರ್ ಪಟೇಲ್ ಪ್ರತಿಮೆ, ಈ ಆದಿವಾಸಿಗಳ ಸಾಹಸಗಾಥೆಯನ್ನು ಹೇಳುವ ಮ್ಯೂಸಿಯಂ ದೇಶವಿದೇಶ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿದೆ.
ಇಂದು ಇಂತಹ ಮಹತ್ವಪೂರ್ಣ ಕಾರ್ಯಕ್ರಮದ ಶುಭಾರಂಭವಾಗುತ್ತಿದೆ. ಜಲಾಶಯವನ್ನು ಲೋಕಕ್ಕೆ ಸಮರ್ಪಿಸಲಾಗುತ್ತಿದೆ. ಇಂದು ಪಟೇಲ್ ಅವರ ಪ್ರತಿಮೆಯ ಕೆಲಸವನ್ನು ಸಹ ವಿವರವಾಗಿ ಗಮನಿಸಿದೆ. ಅದು ನಡೆಯುತ್ತಿರುವ ವೇಗ, ಅದಕ್ಕೆ ಬಳಸುತ್ತಿರುವ ತಂತ್ರಜ್ಞಾನವು ಕಲಿಯಬೇಕಾದ, ಅರಿಯಬೇಕಾದ ಸಂಗತಿಯಾಗಿದೆ.
ಇಂದು ದೇಶಬಂಧುಗಳಿಗೆ ಈ ಅಮೂಲ್ಯ ಉಡುಗೊರೆ ನೀಡಿದ್ದಕ್ಕೆ ನಾನು ನಿಜವಾಗಿಯೂ ತುಂಬಾ ಹೆಮ್ಮೆ ಮತ್ತು ಸಂತೋಷವನ್ನು ಅನುಭವಿಸಿದ್ದೇನೆ. ನಾನು ಮಧ್ಯಪ್ರದೇಶದ ಮುಖ್ಯಮಂತ್ರಿಗಳಿಗೆ ಮತ್ತೊಂದು ಕೆಲಸಕ್ಕಾಗಿ ಅಭಿನಂದಿಸುತ್ತೇನೆ. ತಾಯಿ ನರ್ಮದೆ ಬೆಟ್ಟಗಳಿಂದ ಹರಿದು ಬರುವುದಿಲ್ಲ, ಕಾಡುಗಳಿಂದ ಹರಿದು ಬರುತ್ತಾಳೆ. ಹಾಗಾಗಿ ನರ್ಮದಾ ನದಿ ಹರಿಯುವ ಕಾಡುಗಳ ಹಸಿರನ್ನು ಹಾಗೆಯೇ ಉಳಿಸಿಕೊಳ್ಳುವ ಅಭಿಯಾನವನ್ನು ಸಹ ಕೆಲವು ದಿನಗಳ ಹಿಂದೆ ಅವರು ಹಮ್ಮಿಕೊಂಡರು. ಕೋಟ್ಯಂತರ ವೃಕ್ಷಗಳನ್ನು ಬೆಳೆಸುವ ಅಭಿಯಾನ ನಡೆಸಿದರು. ಈ ಕೋಟ್ಯಂತರ ವೃಕ್ಷಗಳಿಂದಾಗಿ ಮುಂದಿನ ಶತಮಾನದವರೆಗೆ ನರ್ಮದಾ ನದಿಯಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಅವರು ಈ ಕಾರ್ಯವನ್ನು ಮಾಡಿದರು. ಮಧ್ಯಪ್ರದೇಶದ ಜನತೆಗೆ, ಮಧ್ಯಪ್ರದೇಶದ ಮುಖ್ಯಮಂತ್ರಿಗಳಿಗೆ ಈ ಪವಿತ್ರ ಕಾರ್ಯಕ್ಕಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನದಿ ಸಂರಕ್ಷಣೆಯ ಕಾರ್ಯವನ್ನು ಈ ರೀತಿಯಾಗಿ ಬಹುಶಃ ನಮ್ಮ ದೇಶದಲ್ಲಿ ಹಿಂದೆ ಮಾಡಿರಲಿಲ್ಲ. ನಮ್ಮ ದೇಶದ ಕೆಲವು ಸಂತರು, ಕೆಲವು ಸಂಸ್ಥೆಗಳು ನದಿ ಸಂರಕ್ಷಿಸುವ ಕೆಲಸದಲ್ಲಿ ತ್ಯಾಗ ತಪಸ್ಸುಗಳೊಂದಿಗೆ ತೊಡಗಿರುವುದನ್ನು ನಾನು ನೋಡಿದ್ದೇನೆ. ಪರಿಸರದ ಸಂರಕ್ಷಣೆಯ ಪ್ರಯತ್ನಗಳೂ ದೇಶದಲ್ಲಿ ನಡೆಯುತ್ತಿವೆ. ಈ ಪ್ರಯತ್ನಗಳು ಸಹ ಹಲವು ಹೃತ್ಪೂರ್ವಕ ಅಭಿನಂದನೆಗಳಿಗೆ ಪಾತ್ರವಾಗಿವೆ. ಆದ್ದರಿಂದ ಈ ಮಹತ್ವಪೂರ್ಣ ಕಾರ್ಯಗಳಿಗಾಗಿ ನಾನು ಅವರೆಲ್ಲರಿಗೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಸೋದರ ಸೋದರಿಯರೆ, ನಿನ್ನೆ ರಾತ್ರಿ ನಾನು ದೆಹಲಿಯಿಂದ ಹೊರಟಾಗ ಒಂದು ದುಃಖದ ಸಮಾಚಾರ ತಲುಪಿತು. ನಮ್ಮ ದೇಶದ ಒಬ್ಬ ವೀರ ಸೈನಿಕ, ವೀರ ಸೇನಾಧಿಪತಿ, ನಮ್ಮ ದೇಶದ ಮಾರ್ಷಲ್, 1965ರ ಯುದ್ಧದಲ್ಲಿ ಪರಾಕ್ರಮ ತೋರಿದ ಒಬ್ಬ ವೀರ ಯೋಧ ಶ್ರೀ ಅರ್ಜುನ್ ಸಿಂಗ್ ಅವರು ತಮ್ಮ 98ನೆಯ ವಯಸ್ಸಿನಲ್ಲಿ ನಿಧನರಾದರು. ಕೆಲವು ದಿನಗಳ ಹಿಂದೆಯೂ ಒಂದು ಕಾರ್ಯಕ್ರಮದಲ್ಲಿ ಅವರನ್ನು ಭೇಟಿಯಾದಾಗ ಸೇನಾ ಸಮವಸ್ತ್ರ ಧರಿಸಿ ಬಂದಿದ್ದರು, ಅವರು ವ್ಹೀಲ್ ಚೇರ್ ನಲ್ಲಿ ಬರುತ್ತಿದ್ದರು. ನೋಡಿದ ಕೂಡಲೇ ಎದ್ದು ನಿಂತು ಸಲ್ಯೂಟ್ ಹೊಡೆಯುತ್ತಿದ್ದರು. ಮಾರ್ಷಲ್, ನೀವು ಹೀಗೆಲ್ಲ ಎದ್ದು ನಿಲ್ಲಬಾರದು ಎಂದು ನಾನು ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೆ. ಆದರೆ ಶಿಸ್ತನ್ನೇ ತಮ್ಮ ಕಣಕಣದಲ್ಲಿ ಅಡಗಿಸಿಕೊಂಡ ಯೋಧರಾಗಿದ್ದ ಅವರು ಎದ್ದು ನಿಲ್ಲುವುದನ್ನು ಬಿಡುತ್ತಿರಲಿಲ್ಲ.
ನಿನ್ನೆ ಅವರಿಗೆ ಹೃದಯಾಘಾತವೆಂದು ತಿಳಿದಾಗ ನಾನು ಅವರನ್ನು ನೋಡಲು ಆಸ್ಪತ್ರೆಗೆ ಧಾವಿಸಿದೆ. ಅದೇ ಆವೇಶವಿತ್ತು, ಅದೇ ಉತ್ಸಾಹವಿತ್ತಾದರೂ ದೇಹ ಸಹಕರಿಸುತ್ತಿರಲಿಲ್ಲ. ಆದರೆ ಕಣಕಣಗಳಲ್ಲಿ ತುಂಬಿದ್ದ ಅದೇ ಶಿಸ್ತು ಕಾಣುತ್ತಿತ್ತು. ಇಂತಹ ಒಬ್ಬ ವೀರ ಯೋಧ, ವೀರ ಸೈನಿಕನನ್ನು ನಾವು ಕಳೆದುಕೊಂಡಿದ್ದೇವೆ. ನಾನು ಅವರಿಗೆ ಆದರದಿಂದ ನಮಿಸುತ್ತೇನೆ. ಅವರಿಗೆ ಶ್ರದ್ಧಾಂಜಲಿ ನೀಡುತ್ತೇನೆ. ಅವರ ಪರಾಕ್ರಮವನ್ನು ನಮ್ಮ ದೇಶ ಎಂದೆಂದಿಗೂ ನೆನಪಿಟ್ಟುಕೊಳ್ಳುತ್ತದೆ. ಅವರ ತ್ಯಾಗವನ್ನು ಸ್ಮರಿಸುತ್ತದೆ, ತಾಯಿ ಭಾರತಿಗಾಗಿ ಅವರ ಸಮರ್ಪಣೆಯನ್ನು ನೆನಪಿಟ್ಟುಕೊಳ್ಳುತ್ತದೆ. ಮುಂದಿನ ಪೀಳಿಗೆಯವರು ಅವರಿಂದ ಪ್ರೇರಣೆ ಪಡೆದು ತಾಯಿ ಭಾರತಿಗಾಗಿ ಏನನ್ನಾದರೂ ಮಾಡುವ ಸಂಕಲ್ಪ ಕೈಗೊಳ್ಳುತ್ತಾರೆ ಮತ್ತು 2022ರಲ್ಲಿ ನವಭಾರತವನ್ನು ನಿರ್ಮಿಸುವ ದಿಸೆಯಲ್ಲಿ ಸಿದ್ಧಿ ಪಡೆದೇ ಪಡೆಯುತ್ತಾರೆ.
ಇದೇ ಭಾವನೆಯೊಂದಿಗೆ ನಾನು ಮತ್ತೊಮ್ಮೆ ಗುಜರಾತ್ ಸರ್ಕಾರವನ್ನು ಅಭಿನಂದಿಸುತ್ತೇನೆ, ಗುಜರಾತ್ ಜನತೆಯನ್ನು ಅಭಿನಂದಿಸುತ್ತೇನೆ. ಈ ಯೋಜನೆಗೆ ಸಹಕಾರ ನೀಡಿದ ಈ ನಾಲ್ಕೂ ಸರ್ಕಾರಗಳನ್ನು ಅಭಿನಂದಿಸುತ್ತೇನೆ. ಮನೆಮನೆಗೆ ವಿದ್ಯುತ್ ಕೊಡಲು ತಾಯಿ ನರ್ಮದೆಯೂ ಕೆಲಸಕ್ಕೆ ಬರುತ್ತಿದ್ದಾಳೆ, ಆಕೆ ಜಮೀನನ್ನು ಸಹ ಸುಜಲಾಂ, ಸುಫಲಾಂಗೊಳಿಸುತ್ತಾಳೆ, ನಮ್ಮ ಮನೆಗಳನ್ನೂ ಬೆಳಗಿಸುತ್ತಾಳೆ. ಇಂತಹ ತಾಯಿ ನರ್ಮದೆಗೆ ನಮಿಸುತ್ತಾ ನೀವು ಎರಡೂ ಮುಷ್ಠಿ ಬಿಗಿ ಹಿಡಿದುಕೊಂಡು ನಾನು ನರ್ಮದೆ ಎಂದು ಹೇಳಿದರೆ ನೀವು ಸರ್ವದೆ ಎಂದು ಹೇಳಿ. ಇಂದು ತಾಯಿ ನರ್ಮದೆಯೇ ಎಲ್ಲವೂ ಆಗಿದ್ದಾಳೆ.
ನರ್ಮದೆ – ಸರ್ವದೆ ಇನ್ನೂ ಜೋರಾಗಿ ಹೇಳಿ,
ನರ್ಮದೆ- ಸರ್ವದೆ
ನರ್ಮದೆ- ಸರ್ವದೆ
ನರ್ಮದೆ – ಸರ್ವದೆ
ಬಹಳ ಬಹಳ ಧನ್ಯವಾದಗಳು
ಅತುಲ್ ತಿವಾರಿ/ ಹಿಮಾಂಶು ಸಿನ್ಹಾ/ ನಿರ್ಮಲ್ ಶರ್ಮಾ
There is a Jan Sagar here in Dabhoi and this shows the respect people have for Maa Narmada: PM @narendramodi
— PMO India (@PMOIndia) September 17, 2017
I convey my greetings to everyone on Vishwakarma Jayanti and salute all those working hard to build our nation: PM @narendramodi
— PMO India (@PMOIndia) September 17, 2017
Today, on Vishwakarma Jayanti we dedicate to the nation the Sardar Sarovar Dam: PM @narendramodi at the public meeting in Dabhoi pic.twitter.com/UOmKDj4MNr
— PMO India (@PMOIndia) September 17, 2017
Let us leave no stone unturned in creating a 'New India' by 2022, when we mark 75 years of India's freedom: PM @narendramodi pic.twitter.com/NGR4hAyPKw
— PMO India (@PMOIndia) September 17, 2017
Sardar Patel would be happy today...imagine his vision that he envisioned this Dam to help farmers and citizens: PM @narendramodi
— PMO India (@PMOIndia) September 17, 2017
We specially remember two people today, Sardar Patel and Dr. Ambedkar, who as Minister gave great emphasis to irrigation & waterways: PM
— PMO India (@PMOIndia) September 17, 2017
Sardar Sarovar Dam faced so many obstacles. But, we were determined that the project will go on: PM @narendramodi
— PMO India (@PMOIndia) September 17, 2017
Lack of water resources has been a major factor in slowing the pace of development: PM @narendramodi
— PMO India (@PMOIndia) September 17, 2017
I still remember, as CM when I went to border areas I saw BSF Jawans do not have water. We brought Narmada waters to borders for Jawans: PM
— PMO India (@PMOIndia) September 17, 2017
The saints and seers of Gujarat have played a very big role in the making of the Sardar Sarovar Dam as well: PM @narendramodi
— PMO India (@PMOIndia) September 17, 2017
The waters of Maa Narmada will help several citizens and transform several lives: PM @narendramodi
— PMO India (@PMOIndia) September 17, 2017
The western part of India lacks adequate water supply, in the eastern part there is shortage of electricity & gas supply: PM @narendramodi
— PMO India (@PMOIndia) September 17, 2017
We are working to overcome these shortages so that both parts of India development and India scales new heights of development: PM
— PMO India (@PMOIndia) September 17, 2017
The 'Statue of Unity' will be a fitting tribute to Sardar Patel and will draw tourists from all over: PM @narendramodi
— PMO India (@PMOIndia) September 17, 2017
We remember our freedom fighters from the tribal communities who gave a strong fight to colonialism: PM @narendramodi
— PMO India (@PMOIndia) September 17, 2017