ಪಿಎಂಇಂಡಿಯಾ
ಭಾರತ ಮಾತಾಕಿ ಜೈ, ಭಾರತ ಮಾತಾಕಿ ಜೈ ,
ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯಮಾನ್ಯರೇ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಗೋರಖಪುರದ ನನ್ನ ಪ್ರೀತಿಯ ಸಹೋದರ-ಸಹೋದರಿಯರೇ,
ಗೋರಖಪುರದಲ್ಲಿ ಗೊಬ್ಬರ ಕಾರ್ಖಾನೆ ಮತ್ತು ಎ ಐ ಐ ಎಂ ಎಸ್ ಇವುಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲ ಯುವಕರಿಗೆ ನಮಸ್ಕಾರಗಳು. ನಾನು ಮೊತ್ತಮೊದಲಿಗೆ ತಮ್ಮೆಲ್ಲರನ್ನು ಅಭಿನಂದಿಸಲು ಇಚ್ಛಿಸುತ್ತೇನೆ. ಇಪ್ಪತ್ತಾರು ವರ್ಷಗಳಿಂದ ಮುಚ್ಚಿರುವ ಕಾರ್ಖಾನೆ ನನ್ನಿಂದಾಗಿ ಪುನಃ ತೆರೆಯಲ್ಪಡುತ್ತಿದೆ ಎಂದು ಯಾರಾದರೂ ಹೇಳಿದರೆ, ಮೋದಿಯಿಂದಾಗಿ ಆಯಿತು ಎಂದು ಹೇಳಿದರೆ ಅದು ತಪ್ಪಾಗುತ್ತದೆ. ಇಪ್ಪತ್ತಾರು ವರ್ಷಗಳ ಬಳಿಕ ಈ ಕಾರ್ಖಾನೆ ಪ್ರಾರಂಭವಾಗುತ್ತಿದೆ. ಇದರ ಯಶಸ್ಸು ಯಾರಿಗಾದರೂ ಸಲ್ಲಬೇಕಾಗಿದೆಯಾದರೆ – ಅದು ನಿಮಗೆ. ಇದರ ಸಂಪೂರ್ಣ ಕೀರ್ತಿ ಜನತಾ ಜನಾರ್ದನನದೇ ಆಗಿದೆ. ತಾವು ನನ್ನನ್ನು ಉತ್ತರ ಪ್ರದೇಶದಿಂದ ಚುನಾಯಿಸಿ ಕಳುಹಿಸದಿದ್ದರೆ, ನೀವು ಭಾರತೀಯ ಜನತಾ ಪಾರ್ಟಿ ಮತ್ತು ಸಹಚರರನ್ನು ಉತ್ತರ ಪ್ರದೇಶದಲ್ಲಿ ಗೆಲ್ಲಿಸದಿರುತ್ತಿದ್ದರೆ, ಬಹುಶಃ ಈ ಇಪ್ಪತ್ತಾರು ವರ್ಷಗಳ ಕೆಲಸ ಇನ್ನೂ ಹಾಗೇಯೇ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿರುತ್ತಿತ್ತು. ಇವತ್ತಿನ ಈ ಕಾರ್ಯಕ್ರಮ ತಾವು ಜನರಿಗಾಗಿ ಕೆಲಸಮಾಡುವ ಸರಕಾರವೊಂದನ್ನು ಚುನಾಯಿಸಿ ದೆಹಲಿಗೆ ಕಳುಹಿಸಿದ್ದರಿಂದ ಸಾಧ್ಯವಾಗುತ್ತಿದೆ. ಆದ್ದರಿಂದ ಈ ಕೆಲಸವಾಗುತ್ತಿದೆ. ತಾವು ತಮ್ಮ ಹಿತವನ್ನು ಗಮನದಲ್ಲಿಟ್ಟುಕೊಂಡು ಸರಕಾರವನ್ನು ಚುನಾಯಿಸುತ್ತೀರಾದರೆ ಸರಕಾರವೂ ನಿಮಗಾಗಿ ಕೆಲಸ ಮಾಡಲು ಓಡಿಬರುತ್ತದೆ.
ನಾನು ಈ ವಿಷಯಕ್ಕಾಗಿ ತಮ್ಮನ್ನು ಅಭಿನಂದಿಸಬೇಕಾಗಿದೆ. ಇಡೀ ಉತ್ತರಪ್ರದೇಶದ ನೀವು ನಮಗೆ ಇಂತಹ ಬಲ ತುಂಬಿರದಿದ್ದರೆ ಹಿಂದೂಸ್ತಾನದಲ್ಲಿ ಮೂವತ್ತು ವರ್ಷಗಳನಂತರ ಇಂತಹ ಶಕ್ತಿಶಾಲೀ ಮತ್ತು ಸುಸ್ಥಿರ ಸರಕಾರ ರಚನೆಯಾಗುವುದು ಎಂದಿಗೂ ಸಾಧ್ಯವಿರಲಿಲ್ಲ; ಆದ್ದರಿಂದ ನಾನು ತಮಗೆ ಮತ್ತು ಉತ್ತರ ಪ್ರದೇಶಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ನಾನು ಉತ್ತರಪ್ರದೇಶಕ್ಕೆ ಮತ್ತು ವಿಶೇಷವಾಗಿ ಪೂರ್ವ ಉತ್ತರ ಪ್ರದೇಶಕ್ಕೆ ಮೂರನೆಯ ಕಾರಣವೊಂದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ – ನೀವು ಇಡೀ ಪೂರ್ವ ಉತ್ತರ ಪ್ರದೇಶದಿಂದ ನಮ್ಮ ನಡುವೆ ಅಂತಹ ಬುದ್ಧಿವಂತರೆನಿಸಿದ ಸಂಸದರನ್ನು ಚುನಾಯಿಸಿದ್ದೀರಿ; ಸದಾ ಜಾಗೃತರಾಗಿರುವರನ್ನು ಚುನಾಯಿಸಿದ್ದೀರಿ; ಕ್ರಿಯಾಶಿಲರಾದವರನ್ನು ಚುನಾಯಿಸಿದ್ದೀರಿ; ಇದರಿಂದಾಗಿ ಅವರೆಲ್ಲ ಹಗಲು ರಾತ್ರಿ ಎನ್ನದೆ ದೆಹಲಿಯಲ್ಲಿ ಬೀಡುಬಿಟ್ಟು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಾರೆ . ಈ ಬಗ್ಗೆ ನನ್ನೊಡನೆ ಜಗಳವನ್ನೂ ಆಡುತ್ತಾರೆ. ಇದಕ್ಕಾಗಿ ತಮಗೆ ಅಭಿನಂದನೆಗಳು. ಜನರು ನನ್ನನ್ನು ಕೇಳುತ್ತಾರೆ ‘ಮೋದಿಯವರೇ ನೀವು ಯಾವಾಗ ನಿದ್ರಿಸುತ್ತೀರಿ?’. ಅರೇ, ನೀವು ಇಂತಹ ಅದ್ಭುತ ಸಂಸದರನ್ನು ಕಳುಹಿಸಿದ್ದೀರಿ, ಅವರು ನನಗೆ ನಿದ್ರಿಸಲು ಬಿಡುತ್ತಾರೇನು? ಇವತ್ತು ಈ ಪ್ರದೇಶದಲ್ಲಿ ಆಗುತ್ತಿರುವ ಸಾಧನೆಗಳಿಗೆಲ್ಲ ಕೀರ್ತಿಭಾಜನರು ಯೋಗಿ ಆದಿತ್ಯನಾಥರಿಂದ ಹಿಡಿದು ಈ ಎಲ್ಲ ಎಂ ಪಿ ಗಳು , ಸ್ವಲ್ಪ ನಿಂತುಕೊಳ್ಳಿ, ಇದೇ ಸಂಸದರು ಹಗಲು-ರಾತ್ರಿ ಕೆಲಸ ಮಾಡಿದವರು, ಇವರಿಂದಾಗಿಯೇ ಒಂದರ ಮೇಲೊಂದರಂತೆ ಕೆಲಸಗಳು ಯಶಸ್ವಿಯಾಗುತ್ತಿರುವುದು. ನಾನು ಇವರೆಲ್ಲರನ್ನು ಅಭಿನಂದಿಸುತ್ತೇನೆ; ಅವರನ್ನು ಗೌರವಿಸುತ್ತೇನೆ ..
ಸೋದರ-ಸೋದರಿಯರೇ, ಭಾರತ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಎರಡು ಚಕ್ರಗಳ ಮೇಲೆ ಈ ಅಭಿವೃದ್ಧಿರಥವನ್ನು ನಾವು ಓಡಿಸಬೇಕು ಎಂಬುದು ಮೊದಲಿನಿಂದಲೂ ನನ್ನ ಅಭಿಪ್ರಾಯ. ಒಂದು ಚಕ್ರ ಪಶ್ಚಿಮ ಭಾರತವಾದರೆ ಇನ್ನೊಂದು ಪೂರ್ವ ಭಾರತದ್ದು. ಪೂರ್ವ ಭಾರತದ ಚಕ್ರ ದೃಢವಾಗದೇ ಪಶ್ಚಿಮ ಚಕ್ರವೊಂದೇ ಗಟ್ಟಿಯಾದರೆ, ಗುಜರಾತ್ ಇರಬಹುದು ಮಹಾರಾಷ್ಟ್ರ-ಕರ್ನಾಟಕ-ರಾಜಾಸ್ತಾನ-ಹರಿಯಾಣ-ಗೋವಾಗಳಿರಬಹುದು, ಭಾರತದ ಪಶ್ಚಿಮ ಭಾಗಗಳಾದ ಇವೇ ಗಟ್ಟಿಯಾಗಿದ್ದು, ಉತ್ತರ ಪ್ರದೇಶದ ಪೂರ್ವಭಾಗವನ್ನು ಬಿಡಿ, ದೇಶದ ಉಳಿದ ಪೂರ್ವ ಭಾಗಗಳಾದ ಬಿಹಾರ-ಪಶ್ಚಿಮ ಬಂಗಾಲ-ಒಡೀಶ-ಅಸ್ಸಾಮ್ ಈಶಾನ್ಯ ರಾಜ್ಯಗಳು ಇವೆಲ್ಲವನ್ನೊಳಗೊಂಡ, ಈ ಚಕ್ರ ಬಲಶಾಲಿಯಾಗದೆ ಉಳಿದರೆ ಭಾರತದ ಅಭಿವೃದ್ಧಿರಥ ಶೀಘ್ರ ಗತಿಯಲ್ಲಿ ಚಲಿಸಲಾರದು; ಆದ್ದರಿಂದ ಸೋದರ-ಸೋದರಿಯರೇ, ಹಿಂದೂಸ್ತಾನದ ಈ ಪೂರ್ವ ಭಾಗದ ಚಕ್ರ ಕೂಡ ಬಲಶಾಲಿಯಾಗುವಂತೆ ಮಾಡಲು ನನ್ನ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸುತ್ತಿದ್ದೇನೆ; ಪಶ್ಚಿಮ ಭಾಗದಂತೆ ಪೂರ್ವದ ಚಕ್ರ ಕೂಡ ಅಭಿವೃದ್ಧಿರಥವನ್ನು ತಡೆಯಿಲ್ಲದೆ ಮುಂದೆಳೆಯುವಂತಾಗಲು ಶ್ರಮವಹಿಸುತ್ತಿದ್ದೇನೆ ; ಆದ್ದರಿಂದ ಸೋದರ-ಸೋದರಿಯರೇ, ಪೂರ್ವ ಭಾರತ ಮುಂದುವರೆಯುವಂತಾಗಲು ನಾವು ಕ್ರಾಂತಿಕಾರೀ ರೀತಿಯಲ್ಲಿ ಮುಂದಡಿ ಇಡಬೇಕು.
ಭಾರತದಲ್ಲಿಎರಡನೆಯ ಕೃಷಿಕ್ರಾಂತಿ second ಎಲ್ಲಿಯಾದರೂ ಸಾಧ್ಯವಾಗುವುದಿದ್ದರೆ ಅದು ಪೂರ್ವಭಾರತದಲ್ಲಿ ಆಗುವುದಿದೆ. ಎರಡನೆಯ ಕೃಷಿಕ್ರಾಂತಿಯನ್ನು ಸಾಧ್ಯವಾಗಿಸಬೇಕಾದರೆ ನಮ್ಮ ರೈತನಿಗೆ ರಸಗೊಬ್ಬರ ಬೇಕು, . ಮನೆಯಲ್ಲಿದ್ದ ರಸಗೊಬ್ಬರ ಕಾರ್ಖಾನೆ ಮುಚ್ಚಿಕೊಂಡು, ನವಯುವಕರು ಉದ್ಯೋಗವಿಲ್ಲದೆ ಕುಳಿತಿದ್ದರಿಂದ ಅಭಿವೃದ್ಧಿ ನಿಂತುಹೋಗಿದ್ದರೆ, ದೆಹಲಿಯಲ್ಲಿ ಅಡಳಿತ ನಡೆಸುವ ಸರಕಾರ ವಿದೇಶಗಳಂದ ಗೊಬ್ಬರಕ್ಕಾಗಿ ಬೇಡಿಕೆ ಇಟ್ಟು, ವಿದೇಶಗಳಿಂದ ರಸಗೊಬ್ಬರ ತರಿಸುವುದೆ? ಇಂತಹ ತಪ್ಪನ್ನು ಸಾಮಾನ್ಯ ಮಾನವನಾದರೂ ಮಾಡುತ್ತಾನೆಯೆ? ಯಾರಾದರೂ ಹೀಗೆ ಮಾಡಲು ಸಾಧ್ಯವೇ? ನಿಮ್ಮ ಮನೆಯಲ್ಲಿ ತಿನ್ನುವ ಸಾಮಾನುಗಳು ಬೇಕಾದಷ್ಟಿದ್ದರೆ, ನೀವು ಹೊರಗಡೆಯಿಂದ ತಿಂಡಿ-ತಿನಿಸುಗಳನ್ನು ಯಾರಿಂದಲಾದರೂ ತರಿಸುವಿರೇನು? ಆದರೆ ದೆಹಲಿಯಲ್ಲಿ ಅಂತಹ ಸರಕಾರವಿತ್ತು: ಮನೆಯಲ್ಲಿ ಕಾರ್ಖಾನೆ ಮುಚ್ಚಿತ್ತು; ಗೊಬ್ಬರಗಳನ್ನು ಹೊರಗಡೆಯಿಂದ ತರಿಸುತ್ತಿದ್ದರು. ಈಗ ನಾವು ಯೋಚಿಸುತ್ತಿದ್ದೇವೆ: ರೈತರಿಗೆ ಬೇಕಾದಷ್ಟು ಯೂರಿಯಾ ಕೊಡೋಣ – ನಮ್ಮ ದೇಶದಲ್ಲಿ ಮುಚ್ಚಿ ಹೋದ ಕಾರ್ಖಾನೆಗಳನ್ನು ಮೊದಲು ಕ್ರಿಯಾಶೀಲಗೊಳಿಸೋಣ. ಇಡೀ ಪೂರ್ವಭಾರತದಲ್ಲಿ ಶಿಂದರಿ, ಬರೌನಿ, ಗೋರಖಪುರ – ಇಲ್ಲೆಲ್ಲ ರೈತರಿಗೆ ಇದೇ ರೀತಿ ಅನ್ಯಾಯವಾಗುತ್ತಿದೆ. ಆದ್ದರಿಂದ ಸೋದರ-ಸೋದರಿಯರೇ, ಈ ಕಾರ್ಖಾನೆ ಮಾತ್ರವಲ್ಲ; ನಾವು ಶಿಂದರಿ ಮತ್ತು ಬರೌನಿಯಲ್ಲಿರುವ ಕಾರ್ಖಾನೆಗಳನ್ನೂ ತೆರೆಸುತ್ತೇವೆ. ನಿಮಗೆ ನಾನು ಈ ಬಗ್ಗೆ ಆಶ್ವಾಸನೆ ನೀಡುತ್ತೇನೆ.
ಸೋದರ-ಸೋದರಿಯರೇ, ನಮ್ಮ ದೇಶದಲ್ಲಿ ಯಾವಾಗಲೂ ಯೂರಿಯಾದ ಕೊರತೆ . ನಾನು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಭಾರತ ಸರಕಾರಕ್ಕೆ ಪತ್ರಗಳನ್ನು ಬರೆಯತ್ತಲಿದ್ದೆ ಮತ್ತು ಅದರಲ್ಲಿ ಯಾವಾಲೂ ಒಂದು ದೂರು ಇರುತ್ತಿತ್ತು ನಮ್ಮ ರೈತರಿಗೆ ಯೂರಿಯಾ ಬೇಕು , ಯೂರಿಯಾ ಕೊಡಿ ಎಂದು; ಇದಕ್ಕೆ ದೆಹಲಿ ಸರಕಾರ ಉತ್ತರ ಕೊಡುತ್ತಿರಲಿಲ್ಲ. ನಾನು ಪ್ರಧಾನ ಮಂತ್ರಿಯಾದೆ. ಮೊದಲ ವರ್ಷ ನನಗೂ ಇದೇ ತರಹದ ಯೂರಿಯಾ ಕೊಡಿರಿ ಎಂಬ ವಕ್ಕಣೆಯ ಪತ್ರಗಳು ಬಂದವು; ಯೂರಿಯಾ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಸುದ್ದಿ ವಾರ್ತಾ ಪತ್ರಿಕೆಗಳಲ್ಲಿ ಬರುತ್ತಿತ್ತು. ರೈತ ಯೂರಿಯಾಕ್ಕಾಗಿ ಅಂಗಡಿಗಳ ಮುಂದೆ ಹನ್ನೆರಡು-ಹನ್ನೆರಡು, ಹದಿನೈದು-ಹದಿನೈದು ಘಂಟೆ ಸರದಿ ಸಾಲುಗಳಲ್ಲಿ ನಿಂತಿದ್ದಾನೆ; ಯೂರಿಯಾಕ್ಕಾಗಿ ರೈತ ಕಾಯುತ್ತಿದ್ದಾನೆ, ಪೋಲೀಸರು ಲಾಠೀ ಛಾರ್ಜ್ ಮಾಡುತ್ತಿದ್ದಾರೆ. ಆ ದಿನವನ್ನು ನೀವು ನೆನಪು ಮಾಡಿಕೊಳ್ಳಬೇಕು, ನೆನಪಾಗುತ್ತಿದೆಯಲ್ಲವೆ? ಹೀಗಾಗುತ್ತಿತ್ತಲ್ಲವೆ? ಸೋದರ-ಸೋದರಿಯರೇ, ಕಳೆದ ಎರಡು ವರ್ಷಗಳಲ್ಲಿ ಯಾವುದೇ ಮುಖ್ಯಮಂತ್ರಿಯಿಂದ ನನಗೆ ಇಂತಹ ಒಂದೇ ಒಂದು ಪತ್ರ ಬಂದಿಲ್ಲ, ಎಲ್ಲಿಯೂ ಲಾಠೀ ಛಾರ್ಜ್ ಆಗಿಲ್ಲ, ಎಲ್ಲಿಯೂ ಯೂರಿಯಾದ ಬ್ಲಾಕ್-ಮಾರ್ಕೆಟಿಂಗ್ ಆಗಲು ಬಿಟ್ಟಿಲ್ಲ.
ಆದರೆ ಸೋದರ-ಸೋದರಿಯರೇ, ಇಂದಿನ ರೈತನ ದುಸ್ಥಿತಿಯ ಬಗ್ಗೆ ಮಾತನ್ನು ಮುಂದುವರೆಸೋಣ; ವಿದ್ಯುತ್ತಿನ ಕೊರತೆಯಾಗುತ್ತದೆ, ಆರೋಪ ಯಾರ ಮೇಲೆ ಬರುತ್ತದೆ, ರೈತನ ಮೇಲೆ; ಯೂರಿಯಾದ ಕೊರತೆಯಾಗುತ್ತದೆ, ಆರೋಪ ಯಾರ ಮೇಲೆ, ರೈತನ ಮೇಲೆ; ವಾಸ್ತವವೆಂದರೆ ಯೂರಿಯಾ ರೈತರತನಕ ತಲುಪುತ್ತಲೇ ಇರಲಿಲ್ಲ. ಯೂರಿಯಾ ಕಾರ್ಖಾನೆಯಿಂದ ಹೊರಟು ರಾಸಾಯನಿಕಗಳ ಕಾರ್ಖಾನೆಗಳನ್ನು ಸೇರುತ್ತಿತ್ತು; ಪಾಪ, ರೈತ ಯೂರಿಯಾ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಇರುತ್ತಿದ್ದ, ಮತ್ತೆ ಸಬ್ಸಿಡಿ ಪೂರ್ತಿಯಾಗಿ ರಾಸಾಯನಿಕಗಳ ಕಾರ್ಖಾನೆಗಳ ಮಾಲಕರುಗಳಿಗೆ ಸಿಗುತ್ತಿತ್ತು, ಅದನ್ನು ಪಡೆಯುವುದು ರೈತರ ಅದೃಷ್ಟದಲ್ಲಿರಲಿಲ್ಲ. ನಾವು ಒಂದು ಉಪಾಯ ಕಂಡು ಹಿಡಿದೆವು. ನಾವು ಹೇಳಿದೆವು – ಯೂರಿಯಾಕ್ಕೆ ಬೇವು ಲೇಪನ ಮಾಡೋಣವೆಂದು. ಆಗ ಯೂರಿಯಾ ಯಾವುದೇ ರಾಸಾಯನಿಕ ಕಾರ್ಖಾನೆಗೆ ಉಪಯೋಗಕ್ಕೆ ಬರುವುದಿಲ್ಲ, ಯಾರೂ ಯೂರಿಯಾ-ಕಳ್ಳತನ ಮಾಡಲೂ ಸಾಧ್ಯವಿಲ್ಲ; ಒಂದೇ ಒಂದು ಗ್ರಾಮ್ ಯೂರಿಯಾ ಬೇರೆ ಕಡೆ ಹೋಗುವುದಿಲ್ಲ; ಯೂರಿಯಾ ಎಷ್ಟಿದ್ದರೂ ರೈತರ ಬೇಸಾಯದ ಕೆಲಸಕ್ಕೇ ಲಭ್ಯವಾಗುತ್ತದೆ. ಬೇಸಾಯದ ಕೆಲಸಕ್ಕೆ ಬರುತ್ತದೆ, ಮತ್ತಾವ ಕೆಲಸಕ್ಕೂ ಬರುವುದು ಸಾಧ್ಯವಿಲ್ಲ. ಈ ಕಾರಣದಿಂದ ಕಳ್ಳತನ ಹೋಯಿತು, ಭ್ರಷ್ಟಾಚಾರ ಹೋಯಿತು, ಅಪ್ರಾಮಾಣಿಕತೆ ಹೋಯಿತು, ರೈತರ ಹೆಸರಿನಲ್ಲಿ ಬರೆಯುತ್ತಿದ್ದ ಸುಳ್ಳು-ಬಿಲ್ಲುಗಳು, ಅವೂ ನಿಂತು ಹೋದವು. ಮತ್ತೆ ರೈತರಿಗೆ ಅಗತ್ಯಾನುಸಾರ ಯೂರಿಯಾ ಸಿಗಲು ಪ್ರಾರಂಭವಾಯಿತು. ಸೋದರ-ಸೋದರಿಯರೇ, ಮುಂದಿನ ವರ್ಷಗಳಲ್ಲಿ ವಿದೇಶಗಳಿಂದ ಯೂರಿಯಾವನ್ನು ತರಿಸದಂತೆ, ಸಾಧ್ಯವಾದರೆ ವಿದೇಶಗಳಲ್ಲಿ ಎಲ್ಲಿ ಗ್ಯಾಸ್ ಲಭ್ಯವಿದೆಯೋ ಅಂತಹ ಕಡೆಗಳಲ್ಲಿ ನಾವೇ ಯೂರಿಯಾ ತಯಾರಿಸುವಂತೆ ಮತ್ತು ಅಲ್ಲಿಂದ ಯೂರಿಯಾವನ್ನು ನಾವೇ ತೆಗೆದುಕೊಂಡು ಬರುವಂತೆ, ಸೂಕ್ತ ಯೂರಿಯಾ ಉತ್ಪಾದನಾ ತಂತ್ರಗಳನ್ನು= ರೂಪಿಸುವ ಪ್ರಯತ್ನವನ್ನು ಮಾಡುತ್ತೇವೆ.
ಸೋದರ-ಸೋದರಿಯರೇ, ನಮ್ಮ ದೇಶದಲ್ಲಿ ಟೊಮೇಟೊ ದರ ಏರಿತೆಂದರೆ ಇಪ್ಪತ್ತ ನಾಲ್ಕು ಘಂಟೆ ಸರಕಾರವನ್ನು ಟೀಕಿಸಲು ಸದಾ ಕಾಯ್ದುಕೊಂಡಿರುವ ಜನರಿದ್ದಾರೆ. ತರಕಾರಿಗಳ ದರ ಏರಿದರೂ ಇಪ್ಪತ್ತನಾಲ್ಕು ಘಂಟೆ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧರಿರುವ ಜನರಿದ್ದಾರೆ. ಆದರೆ ಅವರಿಗೆಂದೂ ಈ ರೈತರ ನೆನಪು ಬರುವುದಿಲ್ಲ. ಏನು ರೈತರಿಗೆ ಅವರ ಹಕ್ಕುಗಳು ಸಿಗಬೇಕೋ ಬೇಡವೋ? ರೈತ ಎಷ್ಟೊಂದು ಶ್ರಮ ಪಡುತ್ತಾನೆ ಅದರ ಲಾಭ ರೈತನಿಗೆ ಸಿಗಬೇಕೋ ಬೇಡವೋ? ಸೋದರ ಸೋದರಿಯರೇ ನಮ್ಮ ದೇಶದಲ್ಲಿ ಬೆಲೆ ಏರಿಕೆಯ ಚರ್ಚೆ ಬಹಳ ಸ್ವಾಭಾವಿಕವಾಗಿ ಆಗುತ್ತದೆ. ಆದರೆ ಈ ವಿಷಯದಲ್ಲಿ ಒಮ್ಮೆ ಮಹತ್ವಪೂರ್ಣ ತೀರ್ಮಾನಗಳನ್ನು ತೆಗೆದುಕೊಂಡಾಗ ಒಂದು ಮುಖ್ಯವಾದ ವಸ್ತುವಿನ ಬೆಲೆ ಕಡಿಮೆಯಾಯಿತೆಂದರೆ ಅಂತಹದನ್ನುನ್ನು ಮರೆತು ಬಿಡಲಾಗುತ್ತದೆ. ಇಲ್ಲಿ ಸೇರಿರುವವರಲ್ಲಿ ಎಷ್ಟು ಜನ ರೈತರಿದ್ದೀರೋ ಅವರಲ್ಲಿ ನಾನು ಸವಾಲು ಹಾಕುತ್ತೇನೆ, ಯಾರಾದರೂ ಕಳೆದ ಮೂವತ್ತು ವರ್ಷಗಳಲ್ಲಿ ರಸಗೊಬ್ಬರದ ದರ ಕಡಿಮೆಯಾಗಿದ್ದನ್ನು ಯಾವಗಲಾದರೂ ಕೇಳಿದ್ದೀರೋ? ಕೇಳಿದ್ದೀರಾ ಸೋದರರೆ? ಆಗಿಲ್ಲ ತಾನೆ? ಈಗ ಹಾಗಾಗುತ್ತಿದೆ . ತಾವು ದೆಹಲಿಯಲ್ಲಿ ಅಧಿಕಾರಕ್ಕೇರಿಸಿದವರಲ್ಲಿ ನಮ್ಮದು ಈ ರೀತಿಯ ಪ್ರಥಮ ಸರಕಾರ ಎಂದು ಹೇಳಲು ನನಗೆ ಸಂತೋಷವೆನಿಸುತ್ತದೆ; ನಮ್ಮ ಸರಕಾರದ ನೀತಿಗಳ ಕಾರಣವಾಗಿ, ನಮ್ಮ ದೇಶದಲ್ಲಿ ಭ್ರಷ್ಟಾಚಾರವನ್ನು ಕೊನೆಗೊಳಿಸುವ ನಿರಂತರ ಪ್ರಯತ್ನಗಳಿಂದಾಗಿ, ನಮ್ಮ ಸರಕಾರದಲ್ಲಿ ರೈತರ ಒಳಿತಿಗಾಗಿ ಹಗಲೂ ರಾತ್ರಿ ಚಿಂತನೆಯಾಗುತ್ತಿರುವ ಕಾರಣ, ನನ್ನ ರೈತಾಪಿ ಸೋದರರೇ, ಟಿ ಎಲ್ ಪಿ ಗೊಬ್ಬರದ ಬೆಲೆ ಪ್ರತಿಟನ್ನಿಗೆ ಎರಡುವರೆ ಸಾವಿರ ರೂಪಾಯಿ ಕಡಿಮೆ ಮಾಡುವಲ್ಲಿ ನಮ್ಮ ಸರಕಾರ ಯಶಸ್ವಿಯಾಗಿದೆ, ಇದರಿಂದಾಗಿ ರೈತ ಐವತ್ತು ಕೆ ಜಿ ಮೂಟೆಯನ್ನು ಕೊಳ್ಳುವಾಗ ಒಂದು ನೂರ ಇಪ್ಪತ್ತೈದು ರೂಪಾಯಿಗಳಷ್ಟು ಕಡಿಮೆ ಬೆಲೆ ನೀಡುತ್ತಾನೆ; ಈ ಕೆಲಸವನ್ನು ನಾವು ಮಾಡಿದ್ದೇವೆ. ರೈತರಿಗೆ ಎಂ ಓ ಪಿ ಬೇಕಾಗುತ್ತದೆ; ಅದರ ಬೆಲೆಯನ್ನು ಪ್ರತಿ ಟನ್ನಿಗೆ ಐದು ಸಾವಿರ ರೂಪಾಯಿ ಕಡಿಮೆ ಮಾಡಿ ತೋರಿಸಿದ್ದೇವೆ. ಸೋದರ-ಸೋದರಿಯರೇ ಐದು ಸಾವಿರ ರೂಪಾಯಿ ಕಡಿಮೆ ಅಂದರೆ, ರೈತ ಐವತ್ತು ಕೆ ಜಿ ಮೂಟೆಯನ್ನು ಕೊಳ್ಳುವಾಗ 250 ರೂಪಾಯಿಗಳವರೆಗೆ ಉಳಿತಾಯವಾಗುತ್ತದೆ. ಸೋದರ-ಸೋದರಿಯರೇ, ಮಿಶ್ರಿತ ಗೊಬ್ಬರವಾದ ಏನ್ ಪಿ ಕೆ ಯ ಬೆಲೆಯನ್ನು ನಾವು ಪ್ರತಿಟನ್ನಿಗೆ ಒಂದು ಸಾವಿರ ರೂಪಾಯಿಗಳಷ್ಟು ಕಡಿಮೆ ಮಾಡಿದ್ದೇವೆ; ಆದ್ದರಿಂದ ಈ ಗೊಬ್ಬರದ ಐವತ್ತು ಕಿಲೋದ ಒಂದು ಮೂಟೆಗೆ ಐವತ್ತು ರೂಪಾಯಿಗಳ ಉಳಿತಾಯವಾಗಲಿದೆ. ಇವೆಲ್ಲವನ್ನೂ ನೋಡಿದರೆ ಇದಕ್ಕಿಂತ ಮೊದಲು ರೈತನಿಗೆ ಅಗ್ಗವಾಗಿ ಗೊಬ್ಬರ ಸಿಗಲಿ ಎಂದು ಹಿಂದಿನ ಯಾವ ಸರಕಾರವೂ ಯಾವಾಗ ಕೂಡ ಯೋಚಿಸಿದ್ದಿಲ್ಲ ವೆಂಬುದು ಸ್ಪಷ್ಟವಾಗುತ್ತದೆ . ಈ ಸರಕಾರವೇ ಈ ದಿಕ್ಕಿನಲ್ಲಿ ಯೋಚಿಸುತ್ತಿರುವ ಮೊದಲ ಸರಕಾರ. ಸೋದರ-ಸೊದರಿಯರೇ, ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನ ಮಾಡಿದ್ದೇವೆ. ಒಂದು ಬಾರಿ ರೈತ ಈ ವಿಮೆಯನ್ನು ತೆಗೆದುಕೊಂಡರೆ ಅವನ ಯಾವುದೇ ಸಂಕಷ್ಟದ ಕ್ಷಣದಲ್ಲಿ ಈ ವಿಮೆ ಕೆಲಸಕ್ಕೆ ಬರುತ್ತದೆ. ಅವನ ಕುಟುಂಬ ವರ್ಷವಿಡೀ ನಿರಾತಂಕವಾಗಿ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಇಂತಹ ವ್ಯವಸ್ಥೆ ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಯಲ್ಲಿದೆ. ಮತ್ತು ಈ ಪ್ರಧಾನ ಮಂತ್ರಿ ಬೆಳೆ ವಿಮಾಯೋಜನೆಯಲ್ಲಿ ಅತಿಕಡಿಮೆ ಕಂತು ಮತ್ತು ಅತಿ ಹೆಚ್ಚು ಲಾಭ, ಇಂತಹ ಯೋಜನೆ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಬಂದಿದೆ. ಸೋದರರೇ ನಮ್ಮ ಕಬ್ಬು ಬೆಳೆಗಾರ ಕಷ್ಟದಲ್ಲಿದ್ದಾನೆ . ನಾನು ಪ್ರಧಾನ ಮಂತ್ರಿಯಾದಾಗ ಸಾವಿರಾರು ಕೋಟಿ ರೂಪಾಯಿಗಳಷ್ಟು ರೈತರಿಗೆ ಕೊಡಬೇಕಾದ ಹಿಂದಿನ ಬಾಕಿ ಇತ್ತು. ಎರಡು ವರ್ಷ ಬರಗಾಲವಿತ್ತು. ಕೃಷಿ ಕ್ಷೇತ್ರ ಹೀನಾಯಸ್ಥಿತಿಯಲ್ಲಿತ್ತು.ಇದರ ಪ್ರಭಾವ ಸರಕಾರದ ಮೇಲೂ ಬೀಳುತ್ತದೆ. ಇದರ ಹೊರತಾಗಿಯೂ ಒಂದರ ಮೇಲೊಂದರಂತೆ ನಾವು ಕ್ರಮಗಳನ್ನು ಕೈಗೊಂಡೆವು. ಇದರ ಪರಿಣಾಮವಾಗಿ, ನನ್ನ ಮಾತನ್ನು ಗಮನವಿಟ್ಟು ಕೇಳಿ, ನಾನು ಹೇಳುತ್ತಿದ್ದೇನೆ ಕೇಳಿ ಸೋದರರೇ, ಸಾವಿರಾರು ಕೋಟಿ ರೂಪಾಯಿ ಬಾಕಿಯಾಗಿತ್ತು; ಆ ಸಾವಿರಾರು ಕೋಟಿ ರೂಪಾಯಿಗಳ ಹಳೆ ಬಾಕಿಯಲ್ಲಿ ಈಗ ಕೇವಲ ನೂರ ಇಪ್ಪತ್ತು, ನೂರ ಎಪ್ಪತ್ತೈದು, ನೂರ ಎಂಬತ್ತು ಕೋಟಿಗಳು ಮಾತ್ರ ಉಳಿದಿವೆ. ಸಾವಿರಾರು ಕೋಟಿ ಬಾಕಿ ಎಲ್ಲಿ, ನೂರ ಎಪ್ಪತ್ತೈದು ಕೋಟಿ ಬಾಕಿ ಎಲ್ಲಿ? ಇಷ್ಟೇ ಅಲ್ಲ ಪ್ರಸ್ತುತ ವರ್ಷದ ಲೆಕ್ಕಾಚಾರದಲ್ಲಿ ಕೂಡ ಶೇ.93ರಷ್ಟು ಮೊತ್ತ ಪಾವತಿಯಾಗಿದೆ. ಭಾರತ ಸರಕಾರ ಇಷ್ಟು ಸಹಾಯ ಮಾಡುತ್ತಿರುವಾಗ ಉಳಿದ ಶೇ.7ರಷ್ಟನ್ನು ಏಕೆ ಪಾವತಿಮಾಡದೇ ಬಿಟ್ಟಿದ್ದೀರಿ ಅದನ್ನೂ ಕೂಡ ಪೂರ್ಣವಾಗಿ ಕೊಟ್ಟುಬಿಡಿರಿ, ಪ್ರತಿಶತ 100 ಪಾವತಿಯಾಗಲಿ ಎಂದು ನಾನು ಉತ್ತರ ಪ್ರದೇಶ ಸರಕಾರವನ್ನು ಆಗ್ರಹಿಸುತ್ತೇನೆ.
ಸೋದರ-ಸೋದರಿಯರೇ, ಸಕ್ಕರೆಯ ದರ ಕಡಿಮೆಯಾಗಲಿ, ಹೆಚ್ಚಾಗಲಿ, ಅದರ ಪರಿಣಾಮ ನೇರವಾಗಿ ನಮ್ಮ ರೈತರ ಮೇಲೆ ಬೀಳುತ್ತದೆ. ಇದನ್ನು ತಪ್ಪಿಸಲು ನಾವು ಸಕ್ಕರೆಯ ಜೊತೆಜೊತೆಗೇ ಇಥೆನಾಲ್-ದ ಕೆಲಸವನ್ನು ಶುರು ಮಾಡಿದೆವು. ಸಕ್ಕರೆಗಿಂತ ಮೊದಲು ಕಬ್ಬಿನಿಂದ ಇಥೆನಾಲ್ ತಯಾರಿಸಿರಿ, ಸರಕಾರ ಅದನ್ನು ಖರೀದಿಸುತ್ತದೆ ಮತ್ತು ಇದರಿಂದ ಸಕ್ಕರೆಯ ಬೆಲೆ ಕಡಿಮೆ ಅಥವ ಹೆಚ್ಚೇ ಅದರೂ ನಮ್ಮ ಕಬ್ಬು ಬೆಳೆಗಾರ ಸಂಕಷ್ಟಗಳಿಗೆ ಒಳಗಾಗ ಬೇಕಾಗುವುದಿಲ್ಲ. ಇಂತಹ ಶಾಶ್ವತ ವ್ಯವಸ್ಥೆಯನ್ನು ತರುವ ಕೆಲಸವನ್ನು ನಾವು ಮಾಡಿದ್ದೇವೆ ಮತ್ತು ಇದರಿಂದ ಪರಿಸರ ಸಂರಕ್ಷಣೆಯ ಕೆಲಸವೂ ಆಗಿದೆ. ನಮ್ಮ ವಾಹನಗಳಲ್ಲಿ, ಟ್ರ್ಯಾಕ್ಟರುಗಳಲ್ಲಿ ಇಥೆನಾಲಿನ ಉಪಯೋಗ ಮಾಡಬಹುದಾಗಿದೆ. ಸರಕಾರ ಇದಕ್ಕಾಗಿ ಅಧಿಕೃತವಾಗಿ ಅನುಮತಿ ನೀಡಿದೆ.
ಸೋದರ-ಸೋದರಿಯರೇ, ನಾವು ರೈತರಿಗೆ ಹೇಗೆ ಸಹಾಯ ಮಾಡಬಹುದು, ರೈತರ ಜೀವನ ಮಟ್ಟ ದಲ್ಲಿ ಹೇಗೆ ಬದಲಾವಣೆ ತರಬಹುದು? ಈ ಫರ್ಟಿಲೈಸರ್ ಕಾರ್ಖಾನೆಯನ್ನು ಕೆಲವರು ಒಂದು ಕಾರ್ಖಾನೆಯಷ್ಟೆ ಎನ್ನಬಹುದು; ಆದರೆ ಇದು ಒಂದು ಕಾರ್ಖಾನೆ ಮಾತ್ರವಲ್ಲ; ಇದು ರೈತರಿಗೆ ಕೇವಲ ಯೂರಿಯಾ ಉತ್ಪತ್ತಿ ಮಾಡಿಕೊಡುವ ವಿಷಯವಲ್ಲ. ಇದು ರೈತರ ಜೀವನದಲ್ಲಿ ದೊಡ್ಡ ಬದಲಾವಣೆ ತರಬಲ್ಲ ಸಂಸ್ಥೆ . ಬಹುದೊಡ್ಡ ಬದಲಾವಣೆ ಎಂದರೆ ಇಲ್ಲಿಯ ಆರ್ಥಿಕತೆ ಅನಿಲ ಆಧಾರಿತ ಆರ್ಥಿಕತೆ ಆಗುವುದು. ಜಗದೀಶಪುರ-ಹಾಲ್ದಿಯಾಗಳಲ್ಲಿರುವ ಪೈಪ್-ಲೈನಿನಿಂದ ಈಗ ಗೋರಖಪುರ ಮತ್ತು ಪೂರ್ವೀ ಉತ್ತರ-ಪ್ರದೇಶದ ಈ ಪ್ರದೇಶಕ್ಕೆ ಗ್ಯಾಸನ್ನು ತರುವುದು ಪ್ರಾರಂಭವಾಗಬಹುದು. ಈ ಕಾರ್ಖಾನೆ ಹೀಗೆ ಗ್ಯಾಸನ್ನು ಬಳಸಿ ಯೂರಿಯಾ ಉತ್ಪಾದನೆ ಮಾಡುತ್ತದೆ; ಅದರ ಖರ್ಚು ಕಡಿಮೆಯಾಗುತ್ತದೆ. ಆದರೆ ಈ ಗ್ಯಾಸು ಕಾರ್ಖಾನೆಗಾಗಿ ಮಾತ್ರ ಎಂದಿರುವುದಿಲ್ಲ.ಗೋರಖಪುರದ ಪ್ರತಿ ಮನೆಯಲ್ಲಿ, ಪೈಪ್-ಲೈನಿನಿಂದ ನೀರು ಬಂದಂತೆ, ಹೊಸದಾಗಿ ಹಾಕುವ ಪೈಪುಗಳಿಂದ ಅಡುಗೆ ಅನಿಲವೂ ಬರಲು ಪ್ರಾರಂಭವಾಗುತ್ತದೆ. ಈ ಇಡೀ ಪ್ರದೇಶದ ಮಾತೆಯರೇ ಮತ್ತು ಸೋದರಿಯರೇ ನನಗೆ ಆಶೀರ್ವಾದ ಮಾಡಿ, ನಾನು ನಿಮ್ಮ ಮನೆಮನೆಯ ಒಲೆಗಳಿಗೆ ಪೈಪ್-ಲೈನುಗಳ ಮುಖಾಂತರ ಅನಿಲ ತಲುಪಿಸುವ ಕನಸಿನೊಂದಿಗೆ ಕೆಲಸ ಮಾಡುತ್ತಿದ್ದೇನೆ. ವಿದ್ಯತ್ ಸಿಕ್ಕಿತು, ಗ್ಯಾಸ್ ಸಿಕ್ಕಿತು ಮತ್ತು ಕೆಲಸಕ್ಕೆ ಸಿದ್ಧರಿರುವ ನವತರುಣರು ಲಭ್ಯರಿದ್ದಾರೆ. ಹೀಗಿರುವಾಗ ಕೈಗಾರಿಕೆಗಳನ್ನು ಸ್ಥಾಪಿಸುವವರು ಸಾಲು ಸಾಲಾಗಿ ಮುಂದೆ ಬರುತ್ತಾರೆ.
ಇಡೀ ಉತ್ತರ ಪ್ರದೇಶದಲ್ಲಿ ಕೈಗಾರಿಕಾ ಕ್ರಾಂತಿಯೂ ಪ್ರಾರಂಭವಾಗುತ್ತಲಿದೆ. ಸೋದರ-ಸೋದರಿಯರೇ, ಇದು ಒಂದು ಕಾರ್ಖಾನೆಯ ಯೋಜನೆ ಮಾತ್ರವಲ್ಲ. ನಿಜವಾಗಿ ಈ ಶಿಲಾನ್ಯಾಸ ವಿಜಯಯಾತ್ರೆಯೊಂದರ ಪ್ರಾರಂಭೋತ್ಸವ. ಇದು ಬಡತನವನ್ನುಪರಾಜಿತಗೊಳಿಸುವ ವಿಜಯಯಾತ್ರೆ; ಇದು ನಿರುದ್ಯೋಗವನ್ನು ತೊಲಗಿಸುವ ವಿಜಯ ಯಾತ್ರೆ; ಇದು ವಿನಾಶವನ್ನು ತೊಡೆದು ವಿಕಾಸದ ಕಡೆಗೆ ಕರೆದೊಯ್ಯುವ ವಿಜಯ ಯಾತ್ರೆ; ಈ ವಿಜಯ ಯಾತ್ರೆ ಪ್ರತಿ ಕುಟುಂಬಕ್ಕೆ ಸುಖ-ಸಂತೋಷಗಳನ್ನು ತರುವ ವಿಜಯ ಯಾತ್ರೆಯ ಒಂದು ಸಣ್ಣ ಭಾಗ. ಇಂದು ಇಲ್ಲಿ ಅಂತಹ ವಿಜಯ ಯಾತ್ರೆಯ ಪ್ರಾರಂಭವಾಗಿದೆ. ಸೋದರ-ಸೋದರಿಯರೇ, ಗ್ಯಾಸ್ ಬಂದಾಗ ಎಂತೆಂತಹ ಬದಲಾವಣೆಗಳನ್ನು ತರುತ್ತದೆ ಎಂಬುದರ ಬಗ್ಗೆ ಅದರ ಸ್ಪಷ್ಟ ಅರಿವು ಇರುವವರು ಮುಂದಿನ ದಿನಗಳಲ್ಲಿ ಈ ಬರೆಯುತ್ತಾರೆ.
ನಾವು ಈ ದಿನ ಹಮ್ಮಿಕೊಂಡಿರುವ ಎರಡನೆಯ ಕಾರ್ಯಕ್ರಮವೆಂದರೆ ಎ ಐ ಐ ಎಂ ಎಸ್ ಸಂಸ್ಥೆಯ ಶಿಲಾನ್ಯಾಸ ಕಾರ್ಯಕ್ರಮ. ಸೋದರ-ಸೋದರಿಯರೇ ಆಸ್ಪತ್ರೆಗಳು ಎಷ್ಟೋ ಇವೆ; ಆದರೆ ಭಾರತದಲ್ಲಿ ಎ ಐ ಐ ಎಂ ಎಸ್ ಅನ್ನು ಒಂದು ಮಾನದಂಡವಾಗಿ ಗೌರವಿಸುತ್ತೇವೆ. ನನ್ನ ಉತ್ತರ ಪ್ರದೇಶದ ಅನಾರೋಗ್ಯ ಪೀಡಿತ ಸೋದರ-ಸೋದರಿಯರಿಗೆ ಇಂತಹ ಉತ್ತಮ ಸಂಸ್ಥೆಯಲ್ಲಿ ಶುಶ್ರೂಷೆ ಸಿಗಬೇಕೋ ಬೇಡವೋ? ಈ ಸ್ಥಳದಿಂದ, ದೂರ ದೂರವಿರುವ ಊರುಗಳಿಂದ ಜನರು ದೆಹಲಿಗೆ ಬರಬೇಕಾಗುತ್ತದೆ. ಅಂತಹವರಿಗೆ ಇಲ್ಲಿಯೇ ಚಿಕಿತ್ಸೆ ಸಿಗಬೇಕೋ ಇಲ್ಲವೋ ? ಸೋದರ-ಸೋದರಿಯರೇ, ಈ ಕಾರ್ಯಕ್ಕೆ ಒಂದು ಕೋಟಿಗೂ ಹೆಚ್ಚು ರೂಪಾಯಿಗಳ ಖರ್ಚಾಗುತ್ತದೆ. ಆದರೆ ೭೦೦ ಹಾಸಿಗೆಗಳ ಆಧುನಿಕದಲ್ಲಿ-ಆಧುನಿಕ ಎನಿಸುವಂತಹ ಆಸ್ಪತ್ರೆ ಇಲ್ಲಿ ನಿರ್ಮಾಣವಾಗುತ್ತದೆ. ನಾವೀಗಾಗಲೇ ಜೆ ಪಿ ನಡ್ಡಾ ಮತ್ತು ಅನುಪ್ರಿಯಾ ಅವರ ನೇತೃತ್ವದಲ್ಲಿಆರೋಗ್ಯ ಸೇವೆಗಳನ್ನು ವಿಸ್ತರಿಸುವ ದಿಕ್ಕಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಇವುಗಳಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಗೋರಖಪುರದಲ್ಲಿ ಎ ಎ ಐ ಐ ಎಂ ಎಸ್ ಸಂಸ್ಥೆಯ ಅನುಷ್ಠಾನವಾಗುತ್ತಿದೆ.
ಸೋದರ-ಸೋದರಿಯರೇ, ನಾನು ಇಲ್ಲಿಗೆ ಚುನಾವಣಾ ಸಂದರ್ಭದಲ್ಲಿ ಬಂದಾಗ ನಾನು ನಿಮ್ಮ ಮುಂದೆ ಉಲ್ಲೇಖಿಸಿ ಹೇಳಿದ್ದೆ ‘ನಾನು ಮೆದುಳಿನ ಜ್ವರದ ಬಗ್ಗೆ ಕೇಳಿದ್ದೆ ಭಾರತದಲ್ಲಿ ಇದನ್ನು ಜಪಾನೀ ಜ್ವರ – ಜಪಾನೀ ಜ್ವರ ಎಂದು ಜನರು ಕರೆಯುತ್ತಾರೆ. ಎಷ್ಟೊಂದು ಹುಡುಗರು ಈ ಜ್ವರಕ್ಕೆ ಬಲಿಯಾಗಿದ್ದರು? ಇದರಿಂದ ಎಷ್ಟೊಂದು ಮಕ್ಕಳು ಜ್ವರದಿಂದ ದಿವ್ಯಾಂಗರಾಗಿಬಿಟ್ಟಿದ್ದರು? ಸೋದರ-ಸೋದರಿಯರೇ ನಾವು ಬಾಲ್ಯವನ್ನು ಹೀಗೆ ಸಾಯಲು ಬಿಡುವುದಿಲ್ಲ ಈ ಹೆಣ್ಣು ಮಕ್ಕಳನ್ನು ಹೀಗೆ ಮರಣಿಸಲು ಬಿಡುವುದಿಲ್ಲ’. ಆ ಸಮಯದಲ್ಲಿ ಮತ್ತೂ ನಾನು ಹೇಳಿದ್ದೆ ಬಿಹಾರದ ಈ ಪ್ರದೇಶದಲ್ಲಿ ಕಪ್ಪು ಜ್ವರದ ಪೀಡೆ ಹೆಚ್ಚಾಗಿತ್ತು. ನಾವು ಅದರ ಹಿಂದೆ ಬಿದ್ದೆವು. ಈ ಉರಿಯ ಕಾಟದಿಂದ ಜನರನ್ನು ಮುಕ್ತರನ್ನಾಗಿಸುವ ದಿಕ್ಕಿನಲ್ಲಿ ನಾವು ಶ್ರದ್ಧೆಯಿಂದ ಮುಂದುವರೆಯುತ್ತಿದ್ದೇವೆ. ಇವತ್ತು ಇಲ್ಲಿ ಎ ಐ ಐ ಎಂ ಎಸ್ ಶಿಲಾನ್ಯಾಸದ ಮುಖಾಂತರ ಹೊಸ ಪ್ರಯತ್ನದ ಪ್ರವರ್ತನೆಯಾಗಿದೆ . . ಮೆದುಳು ಜ್ವರದ ಪರಿಣಾಮವಾಗಿ ನಮ್ಮ ಎಷ್ಟೊಂದು ಮಕ್ಕಳ ಬದುಕು ಹಾಳಾಗಿ ಹೋಯಿತು. ಇಲ್ಲಿ ಆದ್ದರಿಂದ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ಅವಶ್ಯಕತೆ ಇದೆ: ಇಲ್ಲಿ ಯಾವ ತರಹದ ರೋಗಗಳಿವೆ ಎಂಬುದರ ಅಧ್ಯಯನ ಮಾಡಿ ಅವುಗಳ ಜಾಡನ್ನು ಹಿಡಿಯಬೇಕಾಗಿದೆ. ಈ ಸಂಸ್ಥೆಯಲ್ಲಿ ಅಭ್ಯಾಸ ಮಾಡಿ ಹೊರಬರುವ ವೈದ್ಯರು ಅಂತಹ ರೋಗಗಳ ತಜ್ಞರಾಗಬೇಕು. ಆಗ ಇಲ್ಲಿಯ ಅನಾರೋಗ್ಯ ಪೀಡಿತರಿಗೆ ಅವರ ಸಹಾಯ ದೊರಕುತ್ತದೆ.
ಸೋದರ-ಸೋದರಿಯರೇ, ಇಲ್ಲಿ ಅನುಷ್ಠಾನವಾಗುತ್ತಿರುವ ಸಂಸ್ಥೆಯ ಯೋಜನೆಯ ಪ್ರಾಜೆಕ್ಟ್ ಅನ್ನು ನಾನು ಇವತ್ತು ಬಹಳ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ನೋಡಿದೆ. ಈ ಸಮಾರಂಭಕ್ಕೆ ಬರುವುದಕ್ಕೆ ಮುಂಚೆ ನಾನು ಬೇರೆ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಂದಿದ್ದೇನೆ. ಒಂದರಲ್ಲಿ ಮಹಂತ ಅವೈದ್ಯನಾಥ ಜೀ ಅವರ ಪ್ರತಿಮೆಯ ಅನಾವರಣದ ಸೌಭಾಗ್ಯ ನನಗೆ ಸಿಕ್ಕಿತು. ಇನ್ನೊಂದು ಭಾರತ ಸರಕಾರದ ವತಿಯಿಂದ ಆಯೋಜಿಸಲಾದ ಶಿಲಾನ್ಯಾಸ ಕಾರ್ಯಕ್ರಮ. ಆ ಎರಡೂ ಕಾರ್ಯಕ್ರಮಗಳನಂತರ ಮೂರನೆಯ ಕಾರ್ಯಕ್ರಮಕ್ಕೆ ತಲುಪಿದ್ದೇನೆ. ಮತ್ತು ಈ ಮೂರನೆಯ ಕಾರ್ಯಕ್ರಮದಲ್ಲಿ ಅದರ ವಿಸ್ತಾರವಾದ ಚರ್ಚೆಯನ್ನು ನಿಮ್ಮ ಮುಂದೆ ಮಾಡುತ್ತಿದ್ದೇನೆ. ಸೋದರ-ಸೋದರಿಯರೇ, ಬಡವರಲ್ಲಿ ಬಡವರಿಗೆ ಉತ್ತಮವಾದ ಆರೋಗ್ಯ ಸೇವೆಗಳು ಲಭ್ಯವಾಗಲಿ ಎಂಬ ಉದ್ದೇಶದಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಇಲ್ಲಿ ವಿನಿಯೋಗಿಸಲಾಗಿದೆ. ಇದಕ್ಕಾಗಿ ನಾವು ಕೆಲಸಮಾಡಿದ್ದೇವೆ. ನಮ್ಮ ಆರೋಗ್ಯ ಮಂತ್ರಿಗಳಾದ ನಡ್ಡಾಜೀ ಅವರಿಗೆ, ಆರೋಗ್ಯ ಮಂತ್ರಿಗಳಾದ ಅನುಪ್ರಿಯಾಜೀ ಅವರಿಗೆ, ಅವರ ಎಲ್ಲ ಸಹೋದ್ಯೋಗಿಗಳಿಗೆ, ಸರಕಾರದ ಅಧಿಕಾರಿಗಳಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ಏಕೆಂದರೆ ಅವರು ಇಂದ್ರ ಧನುಷ್ ಯೋಜನೆಯನ್ನು ಪ್ರಾರಂಭಿಸಿದರು . ನಮಗೆ ಗೊತ್ತಿರುವಂತೆ ಮಕ್ಕಳಿಗೆ ರೋಗ ನಿರೋಧಕ ಔಷಧಿಗಳನ್ನು ನೀಡಲಾಗುತ್ತಿತ್ತು, ಆದರೆ ಯಾವ ಮಕ್ಕಳು ಔಷಧಿ ತೆಗೆದುಕೊಳ್ಳದೆ ಉಳಿದು ಹೋಗುತ್ತಿದ್ದರೋ ಅವರನ್ನು ಕೇಳುವವರೇ ಇರಲಿಲ್ಲ. ಇಂದ್ರಧನುಷ್ ಯೋಜನೆಯ ಮುಖಾಂತರ ನಡ್ಡಾಜೀ ಮತ್ತು ಅನುಪ್ರಿಯಾಜೀ ಅವರ ನೇತೃತ್ವದಲ್ಲಿ ಇಡೀ ದೇಶದಲ್ಲಿ ಲಸಿಕೆ ತೆಗೆದುಕೊಳ್ಳದೇ ಉಳಿದಿದ್ದ ಜನರಿಗೆ, ಅಂದರೆ ಉಳಿದ ಮಕ್ಕಳಿಗೆ, ಔಷಧಿ ತೆಗೆದುಕೊಳ್ಳದೆ ಇದ್ದ ಮಾತೆಯರಿಗೆ ಆ ಎಲ್ಲರಿಗೆ ರೋಗ ನಿರೋಧಕ ಲಸಿಕೆ ನೀಡುವ ಆಂದೋಲನವನ್ನು ನಡೆಸಿದರು. ಐವತ್ತು ಲಕ್ಷಕ್ಕೂ ಹೆಚ್ಚು ಅಂತಹ ಮಕ್ಕಳನ್ನು ಹುಡುಕಿ, ಹುಲ್ಲು ಝೋಪಡಿಗಳಿಗೂ ಹೋಗಿ, ಅಂತಹ ಮಕ್ಕಳು ಎಲ್ಲಿಯೇ ಸಿಗಲಿ ಅವರಿದ್ದಲ್ಲಿಗೆ ಹೋಗಿ, ಅವರನ್ನು ಉಳಿಸುವ ಭಗೀರಥ ಪ್ರಯತ್ನವನ್ನು ಮಾಡಿದರು. ಇಂತಹ ಬಹುದೊಡ್ಡ ಸೇವಾ ಯಜ್ಞ ಇವರಿಂದ ಆಯಿತು.
ಸೋದರ-ಸೋದರಿಯರೇ, ಅಭಿವೃದ್ಧಿಯ ಹೊಸ ಎತ್ತರಗಳನ್ನು ನಾವು ಸಾಧಿಸಬೇಕಾಗಿದೆ. ಆದರೆ ಆರೋಗ್ಯ ಕ್ಷೇತ್ರದಲ್ಲಿ ನಾನಿಂದು ಹೇಳ ಬೇಕಾಗಿದೆ: ಉತ್ತರ ಪ್ರದೇಶಕ್ಕಾಗಿ ಭಾರತ ಸರಕಾರ ತನ್ನ ಬಜೆಟ್ಟಿನಲ್ಲಿ ಏಳು ಸಾವಿರ ಕೋಟಿ ರೂಪಾಯಿಗಳನ್ನು ತೆಗೆದಿಟ್ಟಿದೆ. ಆರೋಗ್ಯಕ್ಕಾಗಿ ಏಳುಸಾವಿರ ಕೋಟಿ ರೂಪಾಯಿ ಸಾಮಾನ್ಯದ ಮೊತ್ತವಲ್ಲ. ಆದರೆ ದುಃಖದಿಂದ ನಾನಿಲ್ಲಿ ನೆನೆಯಬೇಕಾಗಿದೆ, ಈ ಕ್ಷಣದವರೆಗೆ ಈ ಮೊತ್ತ ಸಿದ್ಧವಾಗಿಯೇ ಇದೆ , ಅದು ಪೂರ್ಣವಾಗಿ ಖರ್ಚಾಗಿಲ್ಲ . ಅದರಲ್ಲೊಂದು ನಿಯಮವಿದೆ. ಹಣವನ್ನು ನೀವು ಖರ್ಚು ಮಾಡಿದಂತೆಲ್ಲ, ಅದರ ಲೆಕ್ಕಾಚಾರವನ್ನು ನೀಡಿದಂತೆಲ್ಲ ನಿಮಗೆ ಮತ್ತಷ್ಟು ಅನುದಾನ ಸಿಗುತ್ತಾ ಹೋಗುವುದು. ಇದುವರೆಗೆ ಉತ್ತರ ಪ್ರದೇಶ ಸರಕಾರಕ್ಕೆ ಈ ತನಕ 2850 ಕೋಟಿ ರೂಪಾಯಿಗಳನ್ನು ಮಾತ್ರ ಪಡೆಯುವುದು ಸಾಧ್ಯವಾಗಿದೆ. ಏಳು ಸಾವಿರ ಕೋಟಿ ರೂಪಾಯಿಗಳಲ್ಲಿ ಉಳಿದದ್ದು ಉಳಿದೇ ಇದೆ. ಏಕೆಂದರೆ ಅದನ್ನು ಪಡೆಯುವಷ್ಟು ಬಿಡುವಿಲ್ಲ. ಏಕೆಂದರೆ ಕೆಲಸ ಮಾಡಲು ಅವರಿಗೆ ಸಾಮರ್ಥ್ಯವಿಲ್ಲ. ಯಾವ ಸರಕಾರಕ್ಕೆ ತಮ್ಮ ಆರೋಗ್ಯಕ್ಕಾಗಿ ಕೆಲಸ ಮಾಡಲು ಸಾಧ್ಯವಾಗಿಲ್ಲವೋ, ಭಾರತ ಸರಕಾರ ಅವರಿಗೆ ಮತ್ತಷ್ಟು ಮೊತ್ತವನ್ನು ನೀಡಿದರೆ ಅದನ್ನೂ ತೆಗೆದುಕೊಂಡು ಕೆಲಸ ಅಲ್ಲಿಗೇ ನಿಂತು ಹೋದರೆ? ಆದ್ದರಿಂದ ಸೋದರರೇ, ಮೆದುಳಿನ ಕಾಯಿಲೆಯೇ ಇರಲಿ ಬೇರೆ ಯಾವ ತರಹದ ಕಾಯಿಲೆಯೇ ಇರಲಿ ನಿಮಗೆ ಆರೋಗ್ಯ ಸೇವೆಗಳು ದೊರಕುವುದು ಸಾಧ್ಯವಿಲ್ಲ. ಆದ್ದರಿಂದ ದೆಹಲಿಯಲ್ಲಿ ನೀವು ನಿಮಗಾಗಿ ಓಡೋಡಿ ಕೆಲಸ ಮಾಡುವಂತಹ ಸರಕಾರವನ್ನು ಕುಳ್ಳಿರಿಸಿದ್ದೀರಿ.
ಸೋದರ-ಸೋದರಿಯರೇ, ಇನ್ನೊಂದು ಕೆಲಸವನ್ನು ನಾನು ಮಾಡಬೇಕಾಗಿದೆ. ಪೂರ್ವ ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮದ ಬಹುದೊಡ್ಡ ಸಾಧ್ಯತೆ ಇದೆ ಎಂಬುದು ನನಗೆ ಗೊತ್ತು. ಕೃಷಿಕ್ರಾಂತಿಗೂ ಸಾಧ್ಯತೆಗಳಿವೆ. ಕೈಗಾರಿಕಾ ಕ್ರಾಂತಿಯ ಸಂಭಾವ್ಯತೆ ಗಳು ಕೂಡ ಇವೆ. ಭಗವಾನ್ ಬುದ್ಧನ ಭಕ್ತರು ವಿಶ್ವದಲ್ಲೆಲ್ಲ ಇದ್ದಾರೆ. ಅವರೆಲ್ಲ ಇಲ್ಲಿಗೆ ಬರಲು ಬಯಸುತ್ತಾರೆ. ಒಳ್ಳೆಯ ರಸ್ತೆಗಳಾಗಬೇಕು. ರೈಲಿನ ಸೌಲಭ್ಯಗಳು ಉತ್ತಮವಾಗಬೇಕು. ವೈಮಾನಿಕ ಸೇವೆಗಳು ಸಿಗುವಂತಾಗಬೇಕು. ನಾವು ವಿಮಾನ ಸೇವೆಗೆ ಸಂಬಂಧಿಸಿ ಹೊಸ ನೀತಿ ರೂಪಿಸಿದ್ದೇವೆ. ಇದರಿಂದ ಗೋರಖಪುರದಂತಹ ಸಣ್ಣಸಣ್ಣ ಪಟ್ಟಣಗಳಲ್ಲಿಯೂ ವಿಮಾನಗಳು ಬರುವ ಸಂಭವ ಹೆಚ್ಚಾಗುತ್ತಿದೆ. ಇದರಿಂದ ಪ್ರವಾಸೋದ್ಯಮದ ಸಾಧ್ಯತೆಗಳು ಹೆಚ್ಚಾಗುತ್ತವೆ. ರಸ್ತೆಗಳನ್ನು ನಿರ್ಮಿಸುವ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಸಾವಿರಾರು ಕೋಟಿ ರೂಪಾಯಿಗಳನ್ನು ರಸ್ತೆ ಕೆಲಸಗಳಿಗಾಗಿ ನಾವು ವಿನಿಯೋಗಿಸುತ್ತಿದ್ದೇವೆ. ಈ ಭಾಗದಲ್ಲಿ ಉತ್ತಮ ರಸ್ತೆಗಳಾದರೆ ಪ್ರವಾಸಿಗರು ಈ ಭಾಗದಲ್ಲಿ ಹೆಮ್ಮೆಯಿಂದ ಓಡಾಡಬಹುದು. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಬಡವರಲ್ಲಿ ಬಡವರಿಗೂ ದೈನಂದಿನ ಬದುಕು ಸುಲಭವಾಗುತ್ತದೆ. ತುಂಬ ಹಣವನ್ನು ಖರ್ಚು ಮಾಡುವ ಅಗತ್ಯವಿರುವುದಿಲ್ಲ. ಆಟೋರಿಕ್ಷಾದವನೂ ದುಡಿಯುತ್ತಾನೆ, ಟ್ಯಾಕ್ಸೀ ಇಟ್ಟುಕೊಂಡಿರುವವನು ದುಡಿಯುತ್ತಾನೆ. ಹೋಟೆಲುಗಳಿಗೂ ವ್ಯಾಪಾರವಾಗುತ್ತದೆ. ಟೀ ಮಾರುವವನು, ಬಿಸ್ಕತ್ತು ಮಾರುವವನು, ಹೂಹಣ್ಣು ಮಾರುವವನು, ಪ್ರಸಾದ ಮಾರುವವನು, ಆಟದ ಸಾಮಾನಿನ ವ್ಯಾಪಾರಿ ಇವರೆಲ್ಲರೂ ದುಡಿಯುತ್ತಾರೆ. ಇಂತಹ ಸಣ್ಣಸಣ್ಣ ಕಸುಬುದಾರ ರೆಲ್ಲರಿಗೂ ಆದಾಯ ಬರುತ್ತದೆ. ಆದ್ದರಿಂದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸೋದರ-ಸೋದರಿಯರೇ, ನಾವು ರಸ್ತೆ ನಿರ್ಮಾಣಕ್ಕೆ ದೊಡ್ಡ ರೀತಿಯಲ್ಲಿ ತೊಡಗಿದ್ದೇವೆ. ಸೋನಾಲಿಯಿಂದ ಗೋರಖಪುರದ ವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 570 ಕೋಟಿ ರೂಪಾಯಿಗಳು, ಇಂಡೋ ನೇಪಾಲೀ ಗಡಿಭಾಗದಲ್ಲಿ ರಾಜೌರಿತನಕ ರಸ್ತೆಗೆ 570 ಕೋಟಿ ರೂಪಾಯಿಗಳು, ಗೋರಖಪುರ ಚತುಷ್ಪಥ ರಸ್ತೆಗೆ 650 ಕೋಟಿ ರೂಪಾಯಿಗಳು – ಹೀಗೆ ಖರ್ಚು ಮಾಡುತ್ತಿದ್ದೇವೆ. ಸೋದರ-ಸೋದರಿಯರೇ, ಗ್ರಾಮೀಣ ರಸ್ತೆಗಳಿಗಾಗಿ ಬೇರೆಯೇ ಅನುದಾನವಿದೆ.
ಅಭಿವೃದ್ಧಿಯ ಈ ಎಲ್ಲ ಮಾತುಗಳು ರೈಲಿಗೆ ಸಂಬಂಧಿಸಿದಂತೆ ನಿಮ್ಮ ದೃಷ್ಟಿಗೆ ಗೋಚರವಾಗುತ್ತಿದೆ. ಎಷ್ಟು ಶೀಘ್ರಗತಿಯಲ್ಲಿ ಕೆಲಸಗಳಾಗುತ್ತಿವೆ ಎಂಬುದನ್ನು ನಿಮ್ಮ ಕಣ್ಣುಗಳಿಂದಲೇ ನೋಡಬಹುದು.
ಸೋದರರೇ ಮತ್ತು ಸೊದರಿಯರೇ ಮೂಲಸೌಲಭ್ಯಗಳಿಗೆ ನಾವು ಒತ್ತು ನೀಡುತ್ತಿದ್ದೇವೆ. ಇನ್ನೊಂದು ಮಹತ್ವಪೂರ್ಣ ಕೆಲಸದ ಬಗ್ಗೆ ಪೀಯೂಷ ಜೀಯವರು ನನಗೆ ಹೇಳುತ್ತಿದ್ದರು. ಸ್ವಾತಂತ್ರ್ಯ ಬಂದು 70 ವರ್ಷಗಳಾಗಲಿವೆ. ಇದೇ ಅಗಸ್ಟ್ 15ಕ್ಕೆ ದೇಶ ಸ್ವಾತಂತ್ರ್ಯದ 70 ವರ್ಷಗಳನ್ನು ಆಚರಿಸುತ್ತದೆ. ಆದರೆ ಸೋದರರೇ ಮತ್ತು ಸೋದರಿಯರೇ ಒಂದು ದಿನ ನಮ್ಮ ಸಾಧನೆಗಳ ಬಗ್ಗೆ ವಿಚಾರ ಮಾಡುತ್ತಿದ್ದೆ. 18,500 ಹಳ್ಳಿಗಳು ಸ್ವಾತಂತ್ರ್ಯ ಬಂದ ಎಪ್ಪತ್ತು ವರ್ಷಗಳನಂತರವೂ ಇನ್ನೂ ವಿದ್ಯುತ್ತಿನ ಕಂಬಗಳು ಅಲ್ಲಿಗೆ ತಲುಪಿಲ್ಲ. ಕೆಲವು ದಿನಗಳ ಮುಂಚೆ ನಾನು ಈ ಬಗ್ಗೆ ವಿಚಾರಿಸಿದೆ. ಅಧಿಕಾರಿಗಳು ಹೇಳಿದರು: ಸಾಹೇಬರೇ ಈ 18,500 ಹಳ್ಳಿಗಳಿಗೆ ವಿದ್ಯುತ್ ನೀಡಲು ವರ್ಷ ವರ್ಷಗಳೇ ಹಿಡಿಯುತ್ತವೆ. ನಾನು ಹೇಳಿದೆ: ಇವನು ಮೋದಿ. ಇವನು ಏಣಿಯನ್ನು ಹತ್ತುವುದಾದರೂ ಓಡಿಕೊಂಡು ಹತ್ತುತ್ತಾನೆ. ಈ ಕೆಲಸಕ್ಕೆ ವರ್ಷ ವರ್ಷಗಳು ಬೇಕು ಎಂದರೇನರ್ಥ? ನಾನೊಂದು ದಿನ ಕೆಂಫು ಕೋಟೆಯಿಂದ ಹೇಳಿ ಬಿಟ್ಟೆ, ಒಂದು ಸಾವಿರ ದಿನಗಳಲ್ಲಿ ಈ ಕೆಲಸವನ್ನು ಮಾಡಿ ಮುಗಿಸಬೇಕು ಕೇವಲ ಒಂದು ಸಾವಿರ ದಿನಗಳಲ್ಲಿ. ಅದಾಗಿ ಈಗ 340 ದಿನಗಳು ಕಳೆದಿವೆ. ಮುನ್ನೂರ ನಲವತ್ತು ದಿನಗಳಾಗಿವೆ ನನ್ನ ಸೋದರರೇ ಮತ್ತು ಸೋದರಿಯರೇ, ಇವತ್ತು ನಾನು ಹೆಮ್ಮೆಯಿಂದ ಹೇಳಬಲ್ಲೆ; 18452 ಹಳ್ಳಿಗಳಲ್ಲಿ 9033 ಹಳ್ಳಿಗಳಿಗೆ ವಿದ್ಯತ್ತನ್ನು ತಲುಪಿಸಿದ್ದಾಗಿದೆ.
ಸೋದರರೇ ಮತ್ತು ಸೋದರಿಯರೇ, ಉತ್ತರ ಪ್ರದೇಶದಲ್ಲಿ ಕೂಡ 1529 ಹಳ್ಳಿಗಳು ಹೀಗಿದ್ದವು ಅಲ್ಲಿಯ ಜನರು ಅನಿವಾರ್ಯವಾಗಿ 18ನೆಯ ಶತಮಾನದಲ್ಲಿದ್ದಂತೆ ಬದುಕುತ್ತಿದ್ದರು. ವಿದ್ಯುತ್ ಎಂದರೇನೆಂಬುದೇ ಆ ಹಳ್ಳಿಯ ಜನರಿಗೆ ಗೊತ್ತಿರಲಿಲ್ಲ. ಬಂಧುಗಳೇ. ಆ 1529 ಹಳ್ಳಿಗಳನ್ನು ಹುಡುಕಿ ಅವುಗಳಿಗೆ ವಿದ್ಯುತ್ತನ್ನು ತಲುಪಿಸಲು ಕಷ್ಟಪಟ್ಟಿದ್ದೇವೆ. ಇವತ್ತು ನಿಮಗೆ ಸಂತೋಷದಿಂದ ಹೇಳಬಲ್ಲೆ ಕೇವಲ 340 ದಿನಗಳಷ್ಟು ಕೆಲಸ ಮಾಡಿದ ಮೇಲೆ 275 ಹಳ್ಳಿಗಳು ಮಾತ್ರ ಈಗ ಉಳಿದಿವೆ. ಉಳಿದ ಹಳ್ಳಿಗಳ ವಿದ್ಯುತೀರಣವನ್ನು ಕೂಡ ಮಾಡಿ ಮುಗಿಸಲಾಗುವುದು.
ಸೋದರರೇ ಮತ್ತು ಸೋದರಿಯರೇ, ಉತ್ತರ ಪ್ರದೇಶವು ನನಗೆ ಎಷ್ಟೊಂದನ್ನು ಕೊಟ್ಟಿದೆ ಎಂದರೆ ಈ ಸಾಲ ತೀರಿಸಲು ನಾನು ಹಗಲು ರಾತ್ರಿ ತೊಡಗಿದ್ದೇನೆ; ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದೇನೆ.
ಸೋದರರೇ ಮತ್ತು ಸೋದರಿಯರೇ, ವಂಶ ಪಾರಂಪರ್ಯ ರಾಜಕಾರಣ ಬಹಳ ಹೆಚ್ಚಾಗಿ ಹೋಗಿದೆ. ಜಾತಿ ರಾಜಕರಣ, ನಮ್ಮವರು ಬೇರೆಯವರು ಎಂದು ವಿಂಗಡಿಸುವ ರಾಜಕೀಯ ಆಟ ಎಲ್ಲ ಬಹಳ ಹೆಚ್ಚಾಗಿವೆ. ಅವರವರು ತಮ್ಮ ಚೀಲಗಳನ್ನು ತುಂಬಿಕೊಂಡು ಹೋದುದನ್ನು ನಾವು ನೋಡಿದ್ದೇವೆ. ಆದರೆ ನಿಮ್ಮ ಚೀಲಗಳು ಭರ್ತಿಯಾದುವೇನು? ನವತರುಣರಿಗೆ ಒಳಿತಾಯಿತೇನು? ರೈತರ ಸಮಸ್ಯೆ ಪರಿಹಾರವಾದುವೇನು? ಸೋದರರೇ ಮತ್ತು ಸೋದರಿಯರೇ, ಈಗ ಸಮಯ ಬಂದಿದೆ. ನವಯುವಕರೇ ಯೋಚಿಸಿರಿ, ಈ ಜಾತಿವಾದದ ವಿಷ, ಈ ವಂಶವಾದದ ಆಟ, ಉತ್ತರ ಪ್ರದೇಶಕ್ಕೆ ಒಳ್ಳೆಯದನ್ನು ಮಾಡುವುದಿಲ್ಲ. ನಿಮ್ಮ ಒಳಿತನ್ನೂ ಸಾಧಿಸುವುದಿಲ್ಲ; ವಿಕಾಸವಾದ ಮಾತ್ರ ನಿಮ್ಮೆಲ್ಲರ ಒಳಿತನ್ನು ಸಾಧಿಸಬಲ್ಲುದು. ಅಭಿವೃದ್ಧಿಯ ರಾಜಕಾರಣ ಒಳ್ಳೆಯದನ್ನು ಮಾಡುತ್ತದೆ. ಮತ್ತು ಇದಕ್ಕಾಗಿ ಹೊಸಬನಾದ ನಾನು ನಿಮಗೆ ಅಭಿವೃದ್ಧಿಗೆ ಆಹ್ವಾನ ನೀಡಲು ಬಂದಿದ್ದೇನೆ. ಬನ್ನಿ ನೀವು ನನಗೆ ಆಶೀರ್ವಾದ ನೀಡಿದಂತೆ ಮುಂದಿನ ದಿನಗಳಲ್ಲಿ ಕೂಡ ಆಶೀರ್ವದಿಸಿ. ನಾನು ನಿಮ್ಮ ಕನಸುಗಳನ್ನು ಪೂರ್ಣಗೊಳಿಸಿಯೇ ತೀರುತ್ತೇನೆ. ಈ ಮಾತಿನ ಜೊತೆಗೆ ನಿಮಗೆ ತುಂಬು ಹೃದಯದ ಅಭಿನಂದನೆಗಳನ್ನು ಅರ್ಪಿಸುತ್ತೇನೆ.
ಹಾರ್ದಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
***
I am very happy that you have come to this public meeting in large numbers. I thank you all: PM @narendramodi https://t.co/PdWbVITQwf
— PMO India (@PMOIndia) July 22, 2016
If you think this fertiliser plant opened again, after 26 long years due to Modi then you are mistaken. Its due to people: PM @narendramodi
— PMO India (@PMOIndia) July 22, 2016
The people reposed faith in us and that is why this development work has been able to take place. You have elected a Govt. that works: PM
— PMO India (@PMOIndia) July 22, 2016
For the development of India, the development of eastern India is essential: PM @narendramodi in Gorakhpur https://t.co/PdWbVITQwf
— PMO India (@PMOIndia) July 22, 2016
The 2nd green revolution will take place in eastern India, including here in eastern Uttar Pradesh: PM @narendramodi in Gorakhpur
— PMO India (@PMOIndia) July 22, 2016
Why should fertiliser plants be shut & youth not have jobs. And to add to that fertiliser be imported from abroad. This isn't acceptable: PM
— PMO India (@PMOIndia) July 22, 2016
Neem coating of urea ensured corruption stops and farmers get the urea that they need: PM @narendramodi in Gorakhpur
— PMO India (@PMOIndia) July 22, 2016
The reopening of the fertiliser unit can ignite an industrial transformation in the state: PM @narendramodi
— PMO India (@PMOIndia) July 22, 2016
Resources have bee allocated so that people lead a healthy life in this region: PM @narendramodi in Gorakhpur
— PMO India (@PMOIndia) July 22, 2016
Eastern UP has great scope for tourism: PM @narendramodi in Gorakhpur
— PMO India (@PMOIndia) July 22, 2016
Under the new Civil Aviation Policy, regional connectivity has become a priority area and this will bring more tourists: PM @narendramodi
— PMO India (@PMOIndia) July 22, 2016