Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಿಸೆಂಬರ್ 5,2016ರಂದು ನಡೆದ ಪೆಟ್ರೋಟೆಕ್ ಸಮಾವೇಶದಲ್ಲಿ ಪ್ರಧಾನಿ ಅವರು ಮಾಡಿದ ಭಾಷಣ

ಡಿಸೆಂಬರ್ 5,2016ರಂದು ನಡೆದ ಪೆಟ್ರೋಟೆಕ್ ಸಮಾವೇಶದಲ್ಲಿ ಪ್ರಧಾನಿ ಅವರು ಮಾಡಿದ ಭಾಷಣ

ಡಿಸೆಂಬರ್ 5,2016ರಂದು ನಡೆದ ಪೆಟ್ರೋಟೆಕ್ ಸಮಾವೇಶದಲ್ಲಿ ಪ್ರಧಾನಿ ಅವರು ಮಾಡಿದ ಭಾಷಣ

ಡಿಸೆಂಬರ್ 5,2016ರಂದು ನಡೆದ ಪೆಟ್ರೋಟೆಕ್ ಸಮಾವೇಶದಲ್ಲಿ ಪ್ರಧಾನಿ ಅವರು ಮಾಡಿದ ಭಾಷಣ


ನನ್ನ ಸಹೋದ್ಯೋಗಿ ಶ್ರೀ ಧಮೇಂದ್ರ ಪ್ರಧಾನ್ ಅವರೇ
ಹೊರ ದೇಶಗಳ ತೈಲ ಮತ್ತು ಅನಿಲ ಸಚಿವರೇ
ಹೈಡ್ರೋಕಾರ್ಬನ್ ಕ್ಷೇತ್ರದ ಸಿಇಒಗಳು ಮತ್ತು ತಜ್ಞರೇ
ಗಣ್ಯ ಅತಿಥಿಗಳೇ,ಮಹಿಳೆಯರೇ ಮತ್ತು ಮಹನೀಯರೇ,
 
ಇಂಧನ ಕ್ಷೇತ್ರವು ಆರ್ಥಿಕ ಪ್ರಗತಿಯ ಪ್ರಮುಖ ಚಾಲನ ಶಕ್ತಿ. ಪಿರಮಿಡ್‍ನ ತಳ ಭಾಗದಲ್ಲಿರುವ ಜನರಿಗೆ ಆರ್ಥಿಕ ಪ್ರಗತಿಯ ಫಲಗಳು ಲಭ್ಯವಾಗಲು, ಸುಸ್ಥಿರ, ಸ್ಥಿರ ಮತ್ತು ಸೂಕ್ತ ಬೆಲೆಯಲ್ಲಿ ಇಂಧನ ಅತ್ಯಗತ್ಯ. ಮುಂದಿನ ಹಲವು ವರ್ಷಗಳವರೆಗೆ ಹೈಡ್ರೋಕಾರ್ಬನ್(ಪಳೆಯುಳಿಕೆ ಇಂಧನ)ಗಳು ಇಂಧನದ ಬಹು ಮುಖ್ಯ ಇಂಧನ ಮೂಲವಾಗಿ ಉಳಿದುಕೊಳ್ಳಲಿವೆ. ಆದ್ದರಿಂದ, ಈ ಸಮಾವೇಶದ ವಿಷಯ “ಭವಿಷ್ಯದಲ್ಲಿ ಇಂಧನ-ಆಯ್ಕೆಗಳು ಮತ್ತು ಸವಾಲುಗಳು’ ಸಮಯೋಚಿತ ಹಾಗೂ ಸೂಕ್ತವಾದದ್ದಾಗಿದೆ.
 
ಇಂದು ಭಾರತವು ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ಈ ಬೆಳವಣಿಗೆಯನ್ನು ಕಾರ್ಯನೀತಿಗಳ ಸರಣಿಗಳ ಮೂಲಕ ಸರ್ಕಾರವು ಬೆಂಬಲಿಸಿದೆ. ನಮ್ಮ ಕಾರ್ಯನೀತಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ ಸ್ವಲ್ಪ ಕಾಲದಲ್ಲೇ ಮರೆತುಹೋಗುವ ತಲೆಬರಹಗಳ ಬದಲು, ದೇಶದ ದೀರ್ಘಕಾಲೀನ ಆರ್ಥಿಕ ಮತ್ತು ಸಾಮಾಜಿಕ ಸಮೃದ್ಧಿಯನ್ನು ಉತ್ತಮಗೊಳಿಸುವಿಕೆ ಯನ್ನು ಗುರಿಯಾಗಿಸಿಕೊಂಡಿವೆ. ಇಂಥ ಪ್ರಯತ್ನಗಳು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೂಲಕ ಫಲವನ್ನು ನೀಡುತ್ತಿವೆ.
ವೇಗದ ಬೆಳವಣಿಗೆಯಲ್ಲದೆ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಆರ್ಥಿಕತೆಯು ಹೆಚ್ಚು ಸ್ಥಿರವಾದದ್ದಾಗಿದೆ. ಜಾಗತಿಕ ಆರ್ಥಿಕತೆಯು ಅನಿರ್ದಿಷ್ಟ ಅನಿಶ್ಚಿತತೆಯನ್ನು ಎದುರಿಸುತ್ತಿದ್ದರೂ, ಭಾರತವು ಪುಟಿದೇಳುವ ತನ್ನ ಸಾರ್ಮಥ್ಯವನ್ನು ಪ್ರದರ್ಶಿಸಿದೆ. ನಮ್ಮ ಹಾಲಿ ಲೆಕ್ಕ ಶಿಲ್ಕು ಸ್ಥಿರವಾಗಿ ಉತ್ತಮಗೊಂಡಿದೆ ಮತ್ತು ಜೂನ್ ತ್ರೈಮಾಸಿಕದಲ್ಲಿ ದಶಕದಲ್ಲೇ ಕಡಿಮೆ ಪ್ರಮಾಣ ತಲುಪಿ ತ್ತು. 2015-16ರಲ್ಲಿ ದೇಶಕ್ಕೆ ಹೆಚ್ಚು ವಿದೇಶಿ ನೇರ ಬಂಡವಾಳ ಹರಿದು ಬಂದಿದ್ದು, ಇದೇ ಸಮಯದಲ್ಲಿ ಜಾಗತಿಕ ಎಫ್‍ಡಿಐ ಕುಸಿದಿದೆ. ಅಂತಾರಾಷ್ಟ್ರೀಯ ಇತ್ಯರ್ಥಗಳ ಬ್ಯಾಂಕ್(ಇಂಟರ್‍ನ್ಯಾಷನಲ್ ಸೆಟ್ಲ್‍ಮೆಂಟ್ ಬ್ಯಾಂಕ್) ಪ್ರಕಾರ, ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ, ಭಾರತವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಂಕಷ್ಟಕ್ಕೀಡಾಗುವ ಸಾಧ್ಯತೆ ಬಹಳ ಕಡಿಮೆ ಇದೆ. 
2040ರ ಹೊತ್ತಿಗೆ ಭಾರತದ ಆರ್ಥಿಕತೆಯು ಐದು ಪಟ್ಟು ಬೆಳೆಯುವ ನಿರೀಕ್ಷೆ ಇದೆ. ಅಂದಾಜುಗಳ ಪ್ರಕಾರ, 2013ರಿಂದ 2040ರ ಅವಧಿಯಲ್ಲಿ ಜಾಗತಿಕ ಇಂಧನ ಬೇಡಿಕೆಯಲ್ಲಿ ಭಾರತದ ಪಾಲು ಶೇ. 25 ಇರಲಿದೆ. ಭಾರತವು 2040ರಲ್ಲಿ ಇಡೀ ಯುರೋಪ್‍ಗಿಂತ ಹೆಚ್ಚು ತೈಲವನ್ನು ಬಳಸುವ ಸಾಧ್ಯತೆ ಇದೆ. ಪ್ರಸ್ತುತ ಉತ್ಪಾದನೆಯು ಜಿಡಿಪಿಯ ಶೇ.16ರಷ್ಟಿದ್ದು, 2022ರ ಹೊತ್ತಿಗೆ ಶೇ. 25ಕ್ಕೆ ಹೆಚ್ಚುವ ನಿರೀಕ್ಷೆಯನ್ನು ಇರಿಸಿಕೊಂಡಿದ್ದೇವೆ.
 
ಸಾಗಣೆ ಮೂಲಸೌಲಭ್ಯಗಳೂ ಹಲವು ಪಟ್ಟು ಹೆಚ್ಚುವ ನಿರೀಕ್ಷೆ ಇದೆ. ವಾಣಿಜ್ಯ ವಾಹನಗಳ ಸಂಖ್ಯೆ 13 ದಶಲಕ್ಷದಿಂದ 56 ದಶಲಕ್ಷಕ್ಕೆ ಹೆಚ್ಚುವ ನಿರೀಕ್ಷೆಯಿದೆ. ನಾಗರಿಕ ವಿಮಾನಯಾನ ಕ್ಷೇತ್ರ ದಲ್ಲಿ ಭಾರತವು ಜಗತ್ತಿನ ಎಂಟನೇ ದೊಡ್ಡ ಮಾರುಕಟ್ಟೆಯಾಗಿದ್ದು, 2034ರೊಳಗೆ ಮೂರನೇ ಸ್ಥಾನ ಗಳಿಸುವ ಸಾಧ್ಯತೆ ಇದೆ. ವಾಯುಯಾನ ಕ್ಷೇತ್ರದಲ್ಲಿನ ಬೆಳವಣಿಗೆಯಿಂದ 2040ರ ಹೊತ್ತಿಗೆ ವಿಮಾನ ಇಂಧನದ ಬೇಡಿಕೆ ನಾಲ್ಕು ಪಟ್ಟು ಹೆಚ್ಚುವ ನಿರೀಕ್ಷೆಯಿದೆ. ಇದೆಲ್ಲವೂ ಇಂಧನ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ.
 
ಸ್ನೇಹಿತರೇ,
ಭಾರತದ ಪ್ರಗತಿಯಲ್ಲಿ ಹೈಡ್ರೋಕಾರ್ಬನ್ ಪ್ರಮುಖ ಭಾಗವಾಗಿರುವುದು ಮುಂದುವರಿಯಲಿದೆ. ತೀವ್ರ ಬೆಳವಣಿಗೆಯ ಸಾಧ್ಯತೆಯು ಭಾರತದ ಇಂಧನ ಕ್ಷೇತ್ರದ ಮೇಲೆ ಭಾರಿ ಜವಾಬ್ದಾರಿಯನ್ನು ಹೊರಿಸಿದೆ. ಸಮಾವೇಶದಲ್ಲಿ ದೇಶ ಹಾಗೂ ಹೊರ ದೇಶದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ನನಗೆ ಸಂತೋಷ ಉಂಟುಮಾಡಿದೆ. ಪರಸ್ಪರರ ಅನುಭವ ಮತ್ತು ತಜ್ಞತೆಯ ಹಂಚಿಕೆಯಿಂದ ನಾವೆಲ್ಲರೂ ಲಾಭ ಪಡೆದುಕೊಳ್ಳುತ್ತೇವೆ ಎಂಬ ಖಾತ್ರಿ ನನಗಿದೆ. 
 
ಹೈಡ್ರೋಕಾರ್ಬನ್ ಕ್ಷೇತ್ರದ ಬಗ್ಗೆ ನನ್ನ ನಿರೀಕ್ಷೆಗಳೇನಿವೆ ಮತ್ತು ಇಂಧನ ಸುರಕ್ಷೆಯನ್ನು ಸಾಧಿಸಲು ನಮ್ಮ ಪ್ರಯತ್ನಗಳು ಏನಿರಬೇಕು ಎಂಬ ಕುರಿತ ಕೆಲವು ಆಲೋಚನೆಗಳನ್ನು ಹಂಚಿಕೊಳ್ಳಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ.  ಇಂಧನ, ಅದರಲ್ಲೂ ನಿರ್ದಿಷ್ಟವಾಗಿ ಹೈಡ್ರೋಕಾರ್ಬನ್, ಭಾರತದ ಭವಿಷ್ಯ ಕುರಿತ ನನ್ನ ದರ್ಶನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಡ ಜನರಿಗೆ ಲಭ್ಯವಾಗುವಂಥ ಇಂಧನ ದೇಶಕ್ಕೆ ಬೇಕಿದೆ. ಇಂಧನ ಬಳಕೆಯಲ್ಲಿ ಕ್ಷಮತೆ ನಮಗೆ ಬೇಕಿದೆ. ಜವಾಬ್ದಾರಿಯುತ ಜಾಗತಿಕ ನಾಗರಿಕರಾಗಿ, ಹವಾಮಾನ ಬದಲಾವಣೆ, ಹೊಗೆಯುಗುಳುವಿಕೆಯ ತಡೆ ಮತ್ತು ಸುಸ್ಥಿರ ಭವಿಷ್ಯವನ್ನು ಖಾತ್ರಿಗೊಳಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ಜಾಗತಿಕ ಅನಿಶ್ಚಿತತೆಗಳನ್ನು ಪರಿಗಣಿಸಿದರೆ, ಭಾರತಕ್ಕೂ ಇಂಧನ ಸುರಕ್ಷೆ ಅಗತ್ಯವಿದೆ. ಆದ್ದರಿಂದ, ನನ್ನ ದರ್ಶನದ ಪ್ರಕಾರ, ಭಾರತದ ಇಂಧನ ಭವಿಷ್ಯವು ನಾಲ್ಕು ಸ್ತಂಭಗಳನ್ನು ಹೊಂದಿದೆ:
-ಇಂಧನ ಲಭ್ಯತೆ
-ಇಂಧನ ಕ್ಷಮತೆ
-ಇಂಧನ ಸುಸ್ಥಿರತೆ
-ಇಂಧನ ಸುರಕ್ಷೆ 
 
ಇಂಧನ ಲಭ್ಯತೆಯಿಂದ ಆರಂಭಿಸುತ್ತೇನೆ. ಭಾರತದ ಕೆಲ ಶ್ರೀಮಂತರು ಹೈಬ್ರಿಡ್ ಕಾರುಗಳನ್ನು ಖರೀದಿಸುತ್ತಿದ್ದರೆ, ದೇಶದ ಹೆಚ್ಚು ಸಂಖ್ಯೆಯ ಬಡವರು ಇಂದಿಗೂ ಅಡುಗೆಗೆ ಉರುವಲು ಖರೀದಿಸುತ್ತಿದ್ದಾರೆ. ಅಡುಗೆಗೆ ಸೌದೆ ಮತ್ತು ಇತರ ಜೈವಿಕ ವಸ್ತುಗಳ ಬಳಕೆಯು ಗ್ರಾಮೀಣ ಮಹಿಳೆಯರ ಆರೋಗ್ಯಕ್ಕೆ ಧಕ್ಕೆ ತರುತ್ತಿದೆ. ಜತೆಗೆ, ಅವರ ಉತ್ಪಾದಕತೆಯನ್ನು ಕುಗ್ಗಿಸುತ್ತಿದೆ. 
 
ಉಜ್ವಲಾ ಯೋಜನೆಯನ್ನು ನಾವು ಆರಂಭಿಸಿದ್ದು, ಈ ಮೂಲಕ ಐವತ್ತು ದಶಲಕ್ಷ ಕುಟುಂಬಗಳಿಗೆ ಅಡುಗೆ ಅನಿಲ ನೀಡಲು ನಿರ್ಧರಿಸಿದ್ದೇವೆ. ಈ ಕಾರ್ಯಕ್ರಮದಿಂದ ಒಂದೇ ಕ್ರಿಯೆಯಿಂದ  ಆರೋಗ್ಯ ಉತ್ತಮಗೊಳ್ಳಲಿದೆ, ಉತ್ಪಾದಕತೆ ಹೆಚ್ಚಲಿದೆ ಮತ್ತು ಹಾನಿಕರ ಹೊಗೆಯ ಉತ್ಪಾದನೆ ನಿಲ್ಲಲಿದೆ. ಸಂಪರ್ಕ ಕಲ್ಪಿಸಲು ತಗಲುವ ವೆಚ್ಚವನ್ನು ಸರ್ಕಾರ ಭರಿಸಲಿದೆ ಮತ್ತು ಅನಿಲ ವೆಚ್ಚವನ್ನು ಗ್ರಾಹಕ ನೀಡಲಿದ್ದಾನೆ. ಕೇವಲ ಏಳು ತಿಂಗಳಿನಲ್ಲಿ ಈ ಯೋಜನೆಯಡಿ ಹತ್ತು ದಶಲಕ್ಷ ಹೊಸ ಸಂಪರ್ಕಗಳನ್ನು ಕಲ್ಪಿಸಲಾಗಿದೆ. 
 
ಮುಂದಿನ ಐದು ವರ್ಷದಲ್ಲಿ ಹತ್ತು ದಶ ಲಕ್ಷ ಮನೆಗಳಿಗೆ ಕೊಳವೆಯಲ್ಲಿ ಸ್ವಾಭಾವಿಕ ಅನಿಲವನ್ನು ಪೂರೈಸಲು ಸರ್ಕಾರ ತೀರ್ಮಾನಿಸಿದೆ. ರಾಷ್ಟ್ರೀಯ ಅನಿಲ ಗ್ರಿಡ್ ಕಾರ್ಯಜಾಲದ ಪ್ರಸ್ತುತದ ಹದಿನೈದು ಸಾವಿರ ಕಿಮೀ ಕೊಳವೆ ಜಾಲವನ್ನು ಮೂವತ್ತು ಸಾವಿರ ಕಿಮೀಗೆ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಕನಿಷ್ಠ ಅಭಿವೃದ್ಧಿ ಹೊಂದಿರುವ ಪೂರ್ವ ಪ್ರಾಂತ್ಯಕ್ಕೆ ಅನಿಲ ಸಂಪರ್ಕ ಕಲ್ಪಿಸಲು ಕೊಳವೆಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಮಾರ್ಚ್ 2018ರೊಳಗೆ ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ದೆಸೆಯಲ್ಲಿ ಕೆಲಸ ಮಾಡುತ್ತಿದ್ದೇವೆ. 
 
ಇಂಧನ ಕ್ಷಮತೆ ವಿಷಯಕ್ಕೆ ಬರೋಣ. ದೇಶದ ವಾಣಿಜ್ಯ ಸಾರಿಗೆ ಕ್ಷೇತ್ರವು ವಕ್ರವಾಗಿದೆ. ಸರಕನ್ನು ಹೆಚ್ಚು ಪ್ರಮಾಣದಲ್ಲಿ ರಸ್ತೆ ಮೂಲಕ ಸಾಗಿಸಲಾಗುತ್ತಿದೆ. ಇಂಧನ ಕ್ಷಮತೆಯನ್ನು ಹೆಚ್ಚಿಸಲು, ನಮ್ಮ ಸರ್ಕಾರವು ರೈಲ್ವೆಗೆ ಅತ್ಯಂತ ಹೆಚ್ಚು ಪ್ರಾಶಸ್ತ್ಯ ನೀಡಿದೆ. 2014-15 ಮತ್ತು 2016-17ರ ನಡುವೆ ರೈಲ್ವೆಯಲ್ಲಿ ಸಾರ್ವಜನಿಕ ಬಂಡವಾಳ ಹೂಡಿಕೆಯನ್ನು ಶೇ.100ಕ್ಕೂ ಹೆಚ್ಚಿಸಲಾಗಿದೆ. ಸರಕು ಸಾಗಣೆಗೆಂದೇ ಮೀಸಲಾದ ಕಾರಿಡಾರ್‍ಗಳನ್ನು ಸಂಪೂರ್ಣಗೊಳಿಸುತ್ತಿದ್ದೇವೆ. ಮುಂಬೈಯಿಂದ ಅಹಮದಾಬಾದ್‍ಗೆ ಅತಿ ಹೆಚ್ಚು ವೇಗದ ರೈಲು ಕಾರಿಡಾರ್‍ನ್ನು ನಿರ್ಮಿಸುತ್ತಿದ್ದು, ಅದು ವಾಯುಯಾನಕ್ಕಿಂತ ಹೆಚ್ಚು ಇಂಧನ ಕ್ಷಮತೆಯುಳ್ಳದ್ದಾಗಿರಲಿದೆ. ಕರಾವಳಿ ಮತ್ತು ಒಳನಾಡಿನಲ್ಲಿ ಜಲಮಾರ್ಗಗಳಿಗೆ ಉತ್ತೇಜನ ನೀಡುತ್ತಿದ್ದೇವೆ. 
 
ಉದ್ದೇಶಿತ ಸಾಗರಮಾಲಾ ಯೋಜನೆಯು ಭಾರತದ ಇಡೀ ಕರಾವಳಿಯನ್ನು ಜೋಡಿಸಲಿದೆ. ದೊಡ್ಡ ನದಿಗಳಲ್ಲಿ ಹೊಸ ಒಳನಾಡು ಹಡಗು ಮಾರ್ಗಗಳನ್ನು ತೆರೆದಿದ್ದೇವೆ. ಈ ಹೆಜ್ಜೆಗಳು ಇಂಧನ ಕ್ಷಮತೆಯನ್ನು ಹೆಚ್ಚಿಸಲಿವೆ. ಬಹಳ ಕಾಲದಿಂದ ಕಾಯುತ್ತ ಇದ್ದ ರಾಷ್ಟ್ರೀಯ ಸರಕು ಮತ್ತು ಸೇವೆಗಳ ತೆರಿಗೆ ಕಾಯಿದೆಯನ್ನು ಅಂಗೀಕರಿಸಲಾಗಿದೆ. ರಾಜ್ಯಗಳ ಗಡಿಗಳಲ್ಲಿ ಭೌತಿಕ ಅಡೆತಡೆಗಳನ್ನು ನಿವಾರಿಸುವ ಮೂಲಕ ಜಿಎಸ್‍ಟಿಯು ದೂರ ಸಾಗಣೆಯ ವೇಗೋತ್ಕರ್ಷವಲ್ಲದೆ, ಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಲಿದೆ.
 
ಅಭಿವೃದ್ಧಿ ಹೊಂದುತ್ತಿರುವ ದೇಶಗಳ ತೈಲ ಸಚಿವರಿಗೆ ಬೆಲೆ ನಿಗದಿಯಲ್ಲಿನ ಸೂಕ್ಷ್ಮತೆಯ ಬಗ್ಗೆ ಗೊತ್ತಿದೆ. ಹೀಗಿದ್ದರೂ, ನಾವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಅನಿಯಂತ್ರಣಗೊಳಿಸಿ ದ್ದೇವೆ. ಅಡುಗೆ ಅನಿಲದ ಬೆಲೆಯನ್ನೂ ಮಾರುಕಟ್ಟೆ ನಿರ್ಧರಿಸಲಿದೆ. ಮಧ್ಯಮ ವರ್ಗದವರು ಮತ್ತು ದುರ್ಬಲರನ್ನು ರಕ್ಷಿಸಲು, 169 ದಶ ಲಕ್ಷ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸಬ್ಸಿಡಿಯನ್ನು ತುಂಬಲಾಗುತ್ತಿದೆ. ಇದರಿಂದ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿಯ ದುರುಪಯೋಗ ನಿಂತಿದ್ದು, ಅಪಾರ ಮೊತ್ತ ಉಳಿತಾಯವಾಗುತ್ತಿದೆ. ಈ ಕ್ರಮಗಳು ಇಂಧನ ಬಳಕೆಯ ಕ್ಷಮತೆಯನ್ನು ಹೆಚ್ಚಿಸಿವೆ.
 
ನನ್ನ ಪ್ರಕಾರ, ಇಂಧನ ಸುಸ್ಥಿರತೆಯು ಒಂದು ಪವಿತ್ರ ಕಾರ್ಯ. ಇದನ್ನು ಭಾರತ ಬದ್ಧತೆಯಿಂದ ಮಾಡುತ್ತಿದೆಯೇ ಹೊರತು ಒತ್ತಾಯದಿಂದ ಮಾಡುತ್ತಿಲ್ಲ. ಮುಂದಿನ ಹದಿನೈದು ವರ್ಷದಲ್ಲಿ 2005ಕ್ಕೆ ಹೋಲಿಸಿದರೆ, ಜಿಡಿಪಿಯ ಇಂಗಾಲ ತೀವ್ರತೆಯನ್ನು ಶೇ. 33 ರಷ್ಟು ಕಡಿಮೆಗೊಳಿಸುವ ಗುರಿಯನ್ನು ಹಾಕಿಕೊಂಡಿದ್ದು, ಮುಂಚೂಣಿಯಲ್ಲಿದೆ. ದೇಶವಾಸಿಗಳ ತಲಾವಾರು ಇಂಧನ ಬಳಕೆ ಪ್ರಮಾಣ ಕಡಿಮೆಯಿದ್ದರೂ, ನಾವು ಈ ಗುರಿ ಹಾಕಿಕೊಂಡಿದ್ದೇವೆ. 2030ರೊಳಗೆ ನಮಗೆ ಅಗತ್ಯವಿರುವ ವಿದ್ಯುತ್‍ನಲ್ಲಿ ಶೇ.40ರಷ್ಟನ್ನು ಪಳೆಯುಳಿಕೆ ಇಂಧನವಲ್ಲದ ಮೂಲಗಳಿಂದ ಉತ್ಪಾದಿಸಲು ಬದ್ಧರಾಗಿದ್ದೇವೆ. 2022ರೊಳಗೆ 175 ಗಿಗಾವ್ಯಾಟ್ ವಿದ್ಯುತ್‍ನ್ನು ಪುನರ್‍ಬಳಸಬಹುದಾದ ಮೂಲಗಳಿಂದ ಉತ್ಪಾದಿಸುವ ಗುರಿ ಹಾಕಿಕೊಂಡಿದ್ದೇವೆ. ನಮ್ಮ ಪ್ರಯತ್ನದಿಂದಾಗಿ, ಉತ್ಪಾದನೆ ಸಾಮಥ್ರ್ಯ ಹೆಚ್ಚಳಗೊಂಡಿದೆ ಹಾಗೂ ಪುನರ್‍ಬಳಕೆ ಇಂಧನಗಳ ದರ ಕುಸಿದಿದೆ. ಎಲ್‍ಇಡಿ ದೀಪಗಳ ಬಳಕೆಗೆ ನಾವು ಆದ್ಯತೆ ನೀಡಿದ್ದೇವೆ.
 
ಸಿಎನ್‍ಜಿ, ಎಲ್‍ಪಿಜಿ ಮತ್ತು ಜೈವಿಕ ಇಂಧನಗಳು ಸಾರಿಗೆ ಕ್ಷೇತ್ರದಲ್ಲಿ ಬಳಸಬಹುದಾದ ಶುದ್ಧ ಇಂಧನಗಳು. ಪಾಳು ಬಿದ್ದ ಭೂಮಿಯಿಂದ ಜೈವಿಕ ಡೀಸೆಲ್ ಉತ್ಪಾದಿಸಲು ನಾವು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದ್ದು, ಇದರಿಂದ ರೈತರಿಗೆ ಆರ್ಥಿಕ ಭದ್ರತೆ ಸಿಗಲಿದೆ. ದೇಶದ ಇಂಧನ ಸವಾಲನ್ನು ಎದುರಿಸಲು ಎರಡು ಮತ್ತು ಮೂರನೇ ಪೀಳಿಗೆಯ ಜೈವಿಕ ಇಂಧನಗಳು ಹಾಗೂ ಇಂಧನ ಕೋಶಗಳ ಸಂಶೋಧನೆ-ಅಭಿವೃದ್ಧಿ ಅಗತ್ಯವಿದೆ. 
 
ಇಂಧನ ಸುರಕ್ಷೆ ಕುರಿತು ಚರ್ಚಿಸೋಣ. ನಾವು ದೇಶಿ ಇಂಧನ ಮತ್ತು ತೈಲ ಉತ್ಪಾದಣೆಯನ್ನು ಹೆಚ್ಚಿಸಿ, ಆಮದಿನ ಅವಲಂಬನೆಯನ್ನು ಕಡಿಮೆ ಮಾಡಬೇಕಿದೆ. 2022ರೊಳಗೆ ಆಮದನ್ನು ಶೇ.10ರಷ್ಟು ಕಡಿತಗೊಳಿಸುವ ಗುರಿಯನ್ನು ವಿಧಿಸಿದ್ದೇನೆ. ತೈಲ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಗುರಿಯನ್ನು ಸಾಧಿಸಬೇಕಿದೆ.
 
ದೇಶಿ ಹೈಡ್ರೋಕಾರ್ಬನ್  ಉತ್ಪಾದನೆಯನ್ನು ಹೆಚ್ಚಿಸಲು ಬಲಿಷ್ಠವಾದ, ಹೂಡಿಕೆದಾರಸ್ನೇಹಿ ಕಾರ್ಯನೀತಿಗಳ ಚೌಕಟ್ಟನ್ನು ನಾವು ಹೊಂದಿದ್ದೇವೆ. ಎರಡು ದಶಕಗಳ ಹಿಂದೆ ಭಾರತವು ಹೊಸ ಅನ್ವೇಷಣೆ ಅನುಮತಿ ನೀತಿಯನ್ನು ಪರಿಚಯಿಸಿತು. ಇದರಿಂದ ಈ ಕ್ಷೇತ್ರದಲ್ಲಿ ಶೇ 100ರಷ್ಟು ಎಫ್‍ಡಿಐಗೆ ಅವಕಾಶವಿದ್ದು, ಖಾಸಗಿಯವರು ಹೂಡಿಕೆ ಮಾಡಲು ಅವಕಾಶವನ್ನು ಕಲ್ಪಿಸಿತು. ಆದರೆ, ದೇಶಿ ತೈಲ ಮತ್ತು ಅನಿಲ ಉತ್ಪಾದನೆ ಮೇಲೆ ಹಲವು ಅಡೆತಡೆಗಳು ಪರಿಣಾಮ ಬೀರಿದವು.
 
ಭಾರತವನ್ನು ಹೂಡಿಕೆದಾರ ಸ್ನೇಹಿಯಾಗಿಸಲು, ನಾವು ನೂತನ ಹೈಡ್ರೋಕಾರ್ಬನ್ ಅನ್ವೇಷಣೆ ಮತ್ತು ಉತ್ಪಾದನೆ ನೀತಿಯನ್ನು ರೂಪಿಸಿದ್ದೇವೆ. ಇದು ಶೇಲ್ ಇಂಧನ, ಅನಿಲ ಮತ್ತು ಮೀಥೇನ್ ಸೇರಿದಂತೆ ಎಲ್ಲ ವಿಧದ ಹೈಡ್ರೋಕಾರ್ಬನ್‍ಗಳ ಅನ್ವೇಷಣೆ ಮತ್ತು ಉತ್ಪಾದನೆಗೆ ಏಕರೂಪದ ಪರವಾನಗಿಯನ್ನು ನೀಡಲಿದೆ.
* ಮುಕ್ತ ಎಕರೆವಾರು ಕಾರ್ಯನೀತಿ- ಬಿಡ್ ಮಾಡುವಾತ ಎಷ್ಟು ಎಕರೆ ಪ್ರದೇಶ ಬೇಕೋ ಅಷ್ಟಕ್ಕೆ ಬಿಡ್ ಮಾಡಬಹುದು  
* ವಿವಾದಗಳನ್ನು ಕಡಿಮೆಗೊಳಿಸಲು ಲಾಭ ಹಂಚಿಕೆ ಬದಲು ಆದಾಯ ಹಂಚಿಕೆ ಮಾದರಿ
* ಉತ್ಪಾದಿಸಿದ ಕಚ್ಚಾ ತೈಲ ಮತ್ತು ಸ್ವಾಭಾವಿಕ ಅನಿಲದ ಮಾರುಕಟ್ಟೆ ಮತ್ತು ದರ ನಿರ್ಧರಿಸುವ ಸ್ವಾತಂತ್ರ್ಯ 
 
ಕಳೆದ ವರ್ಷ ನಾವು ನೂತನ ಉಪಾಂತ ಇಂಧನ ಅನ್ವೇಷಣೆ ಕ್ಷೇತ್ರಗಳ ಕಾರ್ಯನೀತಿಯನ್ನು ಘೋಷಿಸಿದ್ದೇವೆ. ಈ ಕಾರ್ಯನೀತಿಯಲ್ಲಿ 67 ಕ್ಷೇತ್ರಗಳನ್ನು ಹರಾಜಿಗೆ ಒಡ್ಡಲಾಯಿತು. ಈ 67 ಕ್ಷೇತ್ರಗಳು 89 ದಶಲಕ್ಷ ಮೆಟ್ರಿಕ್ ಟನ್ ತೈಲ ಮತ್ತು ತೈಲಕ್ಕೆ ಸಮನಾದ ಅನಿಲವನ್ನು ಹೊಂದಿವೆ ಎಂದು ಅಂದಾಜಿಸಲಾಗಿದೆ. ಅಂದಾಜಿನ ಪ್ರಕಾರ, ತೆಗೆಯಬಹುದಾದ ಕಾಯ್ದಿಟ್ಟ ಪ್ರಮಾಣ ಮೂವತ್ತು ದಶ ಲಕ್ಷ ಟನ್‍ಗಳು. ಹಲವಾರು ಜಾಗತಿಕ ಕಂಪನಿಗಳು ಹರಾಜಿನಲ್ಲಿ ಪಾಲ್ಗೊಂಡಿದ್ದು, ಉತ್ತೇಜಕರ ಪ್ರತಿಕ್ರಿಯೆ ಬಂದಿದೆ ಎಂದು ತಿಳಿದುಬಂದಿದೆ.   
 
ಖಾಸಗಿಯವರಿಗೆ ಈ ಕ್ಷೇತ್ರವನ್ನು ಮುಕ್ತಗೊಳಿಸಿರುವುದರಿಂದ, ಎಲ್ಲ ಹೂಡಿಕೆದಾರರಿಗೂ ಸಮಾನ ಅವಕಾಶ ನೀಡಿದಂತೆ ಆಗಿದೆ. ಇದರಿಂದ ಸ್ಪರ್ಧೆ ಹೆಚ್ಚಲಿದ್ದು, ನಮ್ಮ ಮಾರುಕಟ್ಟೆ ಕಂಪನಿಗಳ ಕ್ಷಮತೆ ಮತ್ತು ಪರಿಣಾಮಕತೆ ಅಧಿಕಗೊಳ್ಳಲಿದೆ. 
 
ನಮ್ಮ ಚಲನಶೀಲ ವಿದೇಶಾಂಗ ನೀತಿ ಮತ್ತು ಇಂಧನ ರಾಯಭಾರತ್ವದಿಂದ ನೆರೆಹೊರೆಯ ದೇಶಗಳೊಂದಿಗೆ ನಮ್ಮ ಸಂಬಂಧ ಬಲಗೊಂಡಿದೆ. ತೈಲ ಅನ್ವೇಷಣೆಗೆ ಸಂಬಂಧಿಸಿದಂತೆ, ನಮ್ಮ ತೈಲ ಮತ್ತು ಅನಿಲ ಕ್ಷೇತ್ರದ ಕಂಪನಿಗಳು ಈ ಅವಕಾಶವನ್ನು ಬಳಸಿಕೊಂಡು, ತಮ್ಮ ವಿದೇಶಿ ಸಹವರ್ತಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸ ಹೊಂದಿದ್ದೇನೆ. ರಷ್ಯಾ ಇತ್ತೀಚೆಗೆ 15 ದಶಲಕ್ಷ ಟನ್ ಹೈಡ್ರೋಕಾರ್ಬನ್ ಆಸ್ತಿಗೆ 5.6 ಶತ ಕೋಟಿ ಡಾಲರ್ ಹೂಡಿಕೆ ಮಾಡಿರುವುದು ಇಂಥ ಒಂದು ಪ್ರಯತ್ನ. ಭಾರತದ ಇಂಧನ ಕಂಪನಿಗಳು ಬಹುರಾಷ್ಟ್ರೀಯ ಕಂಪನಿಗಳಾಗಬೇಕಿದೆ: ಮತ್ತು ಭಾರತ-ಮಧ್ಯಪ್ರಾಚ್ಯ, ಭಾರತ-ಕೇಂದ್ರ ಏಷ್ಯಾ ಮತ್ತು ಭಾರತ-ದಕ್ಷಿಣ ಏಷ್ಯಾ ಇಂಧನ ಕಾರಿಡಾರ್ ದೆಸೆಯಲ್ಲಿ ಕೆಲಸ ಮಾಡಬೇಕಿದೆ.
 
ಮುಂದಿನ ಪೀಳಿಗೆಯ ಸ್ವಾಭಾವಿಕ ಪಳೆಯುಳಿಕೆ ಇಂಧನ-ಅಗ್ಗದ ಮತ್ತು ಹೆಚ್ಚು ಮಾಲಿನ್ಯ ಉಂಟುಮಾಡದ ಮೂಲ. ನಾವು ಅನಿಲ ಆಧರಿತ ಆರ್ಥಿಕತೆಯ ಕಡೆಗೆ ಸಾಗಲು ಆದ್ಯತೆ ನೀಡಿದ್ದೇವೆ. ಸ್ವಾಭಾವಿಕ ಅನಿಲದ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನದ ಜೊತೆಗೆ, ಹೆಚ್ಚುತ್ತಿರುವ ದೇಶಿ ಬೇಡಿಕೆಯನ್ನು ಪೂರೈಸಲು ಆಮದು ಮೂಲಸೌಕರ್ಯವನ್ನು ಸೃಷ್ಟಿಸುವ ಕೆಲಸ ಆಗಬೇಕಿದೆ. ದೇಶ ದಲ್ಲಿ ಪುನರ್‍ಬಳಕೆ ಇಂಧನದ ಉತ್ಪಾದನೆ ಹೆಚ್ಚಳವಾದಂತೆ, ಸ್ವಾಭಾವಿಕ ಅನಿಲವು ಸಮತೋಲದ ಮುಖ್ಯ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಸಮತೋಲ ಸಾಧಿಸುವಲ್ಲಿ ಮತ್ತು ವಿದ್ಯುತ್ ಬೇಡಿಕೆ ಪೂರೈಸುವಲ್ಲಿ, ಅನಿಲಾಧರಿತ ವಿದ್ಯುತ್‍ನ ಪಾತ್ರ ಬಹಳ ಮುಖ್ಯವಾದುದು.
 
ಸ್ನೇಹಿತರೇ, ಈ ದರ್ಶನವನ್ನು ಸಾಧಿಸಲು ಯೋಜನೆ ಮತ್ತು ಸಂಪನ್ಮೂಲ ನಿರ್ವಹಣೆಯಲ್ಲಿ ಕ್ಷಮತೆಯನ್ನು ಸಾಧಿಸಬೇಕು. ಸ್ಪರ್ಧಾತ್ಮಕವಾಗಿರಬೇಕೆಂದರೆ, ನಾವು ಈ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ಮಾಡಿಕೊಳ್ಳಬೇಕಿದೆ. ಇದು ನಮ್ಮ ಸಂಸ್ಕರಣೆ ಮತ್ತು ಶುದ್ಧೀಕರಣ ಕ್ಷಮತೆಯನ್ನು ಹೆಚ್ಚಿಸುವ ಜೊತೆಗೆ ಯೋಜನೆಗಳನ್ನು ನಿಗದಿಪಡಿಸಿದ ಕಾಲಕ್ಕೆ ಮುಗಿಸಲು ನೆರವಾಗಲಿದೆ. 
 
ಭಾರತವು ಬೌದ್ಧಿಕ ಸಾಮಥ್ರ್ಯ ಮತ್ತು ಉದ್ಯಮಶೀಲತೆಯಲ್ಲಿ ಬೇರೆಯವರಿಗೆ ಸದಾ ಸ್ಫೂರ್ತಿದಾಯಕವಾಗಿದೆ. “ಮೇಕ್ ಇನ್ ಇಂಡಿಯಾ’,”ಸ್ಟಾರ್ಟ್ ಅಪ್ ಇಂಡಿಯಾ’ ಮತ್ತು “ಸ್ಟ್ಯಾಂಡ್ ಅಪ್ ಇಂಡಿಯಾ’ ದಂಥ ಉಪಕ್ರಮಗಳಿಂದಾಗಿ, ಯುವಜನರು ತೈಲ ಮತ್ತು ಅನಿಲ ಕ್ಷೇತ್ರವನ್ನು ಪ್ರವೇಶಿಸಲು ಆವಕಾಶಗಳಿದ್ದು, ಅವರು ತಮ್ಮ ನವೀನ ಆಲೋಚನೆಗಳನ್ನು ತರಲಿದ್ದಾರೆ ಎಂದು ನಾನು ದೃಢವಾಗಿ ನಂಬಿದ್ದೇನೆ. ಶುದ್ಧೀಕರಣ ತಂತ್ರಜ್ಞಾನದಲ್ಲಿ ಅಭಿವೃದ್ಧಿ, ನ್ಯಾನೋ ತಂತ್ರಜ್ಞಾನ, ವೇಗಾಪಕರ್ಷಕಗಳ ಅಭಿವೃದ್ಧಿ, ಜೈವಿಕ ಇಂಧನ ಮತ್ತು ಪರ್ಯಾಯ ಇಂಧನ ಕ್ಷೇತ್ರಗಳ ಕಡೆಗೆ ಗಮನ ಹರಿಸಬೇಕಿದೆ. ಇಂಡಿಯನ್ ಆಯಿಲ್ ಅಭಿವೃದ್ಧಿಪಡಿಸಿರುವ ಇಂಡ್‍ಮ್ಯಾಕ್ಸ್ ತಂತ್ರಜ್ಞಾನ ಯಶಸ್ವಿಯಾಗಿದ್ದು, ಈಗ ವಾಣಿಜ್ಯಿಕ ಅಭಿವೃದ್ಧಿ ಹಂತದಲ್ಲಿದೆ.
ಜಾಗತಿಕ ಹೈಡ್ರೋಕಾರ್ಬನ್ ಕಂಪನಿಗಳಿಗೆ ನನ್ನ ಸಂದೇಶವೇನೆಂದರೆ: ಭಾರತಕ್ಕೆ ನಿಮ್ಮನ್ನು ಸ್ವಾಗತಿಸುತ್ತಿದ್ದೇನೆ, ಇಲ್ಲಿ ಬಂದು ಉತ್ಪಾದಿಸಿ. ಇಲ್ಲಿನ ಪರಿಸರವನ್ನು ಉದ್ಯಮಸ್ನೇಹಿ ಮಾಡಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಜಾಗತಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ಈ ಕುರಿತ ನಮ್ಮ ಸ್ಥಾನ ಕೂಡ ಉತ್ತಮಗೊಳ್ಳುತ್ತಿದೆ. ನಮ್ಮ ಬದ್ಧತೆ ಬಲಿಷ್ಠವಾಗಿದ್ದು, ಕೆಂಪು ಪಟ್ಟಿ ಬದಲು ನಿಮ್ಮನ್ನು ಕೆಂಪುಹಾಸು ಸ್ವಾಗತಿಸಲಿದೆ.
 
ಸ್ನೇಹಿತರೇ,
ಒಂದೆಡೆ, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಮಗೆ ನಂಬಿಕಾರ್ಹ ಮತ್ತು ದುಬಾರಿಯಲ್ಲದ ಇಂಧನ ಮೂಲಗಳು ಬೇಕಿವೆ. ಇದರಲ್ಲಿ ಹೈಡ್ರೋಕಾರ್ಬನ್‍ಗಳು ಪ್ರಮುಖ ಪಾತ್ರ ವಹಿಸಲಿವೆ. ಇನ್ನೊಂದೆಡೆ, ನಾವು ಪರಿಸರದ ಬಗ್ಗೆ ಕಾಳಜಿ ವಹಿಸಬೇಕಿದೆ. ಇಂಧನವನ್ನು ಕ್ಷಮತೆಯಿಂದ ಮತ್ತು ಸುಸ್ಥಿರವಾಗಿ ಬಳಸುವ ಬಗ್ಗೆ ಹೊಸ ಆಲೋಚನೆಗಳನ್ನು ಇಲ್ಲಿ ನೆರೆದವರು ಕಂಡುಕೊಳ್ಳ ಲಿದ್ದಾರೆ ಎಂಬ ಖಾತ್ರಿ ನನಗಿದೆ.
 
ಸರ್ಕಾರ ಇದಕ್ಕೆ ಅಗತ್ಯವಾದ ಎಲ್ಲ ಬೆಂಬಲ ನೀಡಲಿದೆ. ಭಾರತದ ಇಂಧನ ಕ್ಷೇತ್ರದ ಪರಿವರ್ತನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.