Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಮೂರು ನೌಕಾ ಹಡಗುಗಳಾದ ಐಎನ್ಎಸ್ ದುನಗಿರಿ, ಐಎನ್ಎಸ್ ಸಂಶೋಧಕ್ ಮತ್ತು ಐಎನ್ಎಸ್ ಅಗ್ರೇ ಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರ್ಯಾರಂಭಗೊಳಿಸಿದರು

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಮೂರು ನೌಕಾ ಹಡಗುಗಳಾದ ಐಎನ್ಎಸ್ ದುನಗಿರಿ, ಐಎನ್ಎಸ್ ಸಂಶೋಧಕ್ ಮತ್ತು ಐಎನ್ಎಸ್ ಅಗ್ರೇ ಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರ್ಯಾರಂಭಗೊಳಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ದೇಶೀಯವಾಗಿ ವಿನ್ಯಾಸ ಮಾಡಿ ನಿರ್ಮಿಸಲಾದ ಮೂರು ನೌಕಾ ಹಡಗುಗಳಾದ ಐ.ಎನ್.ಎಸ್. ದುನಾಗಿರಿ, ಸುಧಾರಿತ ರಹಸ್ಯ ಯುದ್ಧ ನೌಕೆ ಅಂದರೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾದ ಹಾಗು ವೈರಿಯ ರಾಡಾರ್, ಸೋನಾರ್, ದೃಶ್ಯ ಮತ್ತು ಇನ್ಫ್ರಾರೆಡ್ ಚಕ್ಷುಗಳಿಗೆ ಸುಲಭದಲ್ಲಿ  ಗೋಚರಿಸದ ಮಧ್ಯಮ ಗಾತ್ರದ ನೌಕಾ ಯುದ್ದನೌಕೆ ಐ.ಎನ್.ಎಸ್. ಸಂಶೋಧಕ್ ಮತ್ತು ಜಲಾಂತರ್ಗಾಮಿ ನಿರೋಧಕ ಯುದ್ಧ ನೌಕೆ ಐ.ಎನ್.ಎಸ್. ಅಗ್ರೇ ಇವುಗಳನ್ನು ಕಾರ್ಯಾರಂಭಗೊಳಿಸಿದರು. ಈ ಸೇರ್ಪಡೆಗಳು ರಾಷ್ಟ್ರದ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ, ಕಡಲ ಕ್ಷೇತ್ರದ ಜಾಗೃತಿಯನ್ನು ಹೆಚ್ಚಿಸುತ್ತವೆ ಮತ್ತು ಭೌಗೋಳಿಕ ರಾಜಕೀಯ ಬೆದರಿಕೆಗಳ ವಿರುದ್ಧ ನಮ್ಮ ಕರಾವಳಿ ನೀರಿನ ಭದ್ರತೆಯನ್ನು ಬಲಪಡಿಸುತ್ತವೆ. ಎಲ್ಲಾ ಮೂರು ಹಡಗುಗಳನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದೆ ಮತ್ತು 200ಕ್ಕೂ ಹೆಚ್ಚು ಎಂಎಸ್ಎಂಇಗಳು ಸೇರಿದಂತೆ ಭಾರತೀಯ ಉದ್ಯಮದ ವ್ಯಾಪಕ ಭಾಗವಹಿಸುವಿಕೆಯೊಂದಿಗೆ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಎಂಜಿನಿಯರ್ಸ್ (ಜಿಆರ್‌ಎಸ್‌ಇ) ಕೋಲ್ಕತ್ತಾದಲ್ಲಿ ನಿರ್ಮಿಸಿದೆ. ಶೇಕಡಾ 75 ಕ್ಕಿಂತ ಹೆಚ್ಚು ಸ್ಥಳೀಯ ಸಾಮಗ್ರಿಗಳೊಂದಿಗೆ, ಈ ಹಡಗುಗಳು ಆತ್ಮನಿರ್ಭರತೆಗೆ ಭಾರತದ ಬದ್ಧತೆಗೆ ಸಾಕ್ಷಿಯಾಗಿವೆ.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಸಂದರ್ಭವು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಕಾಲಘಟ್ಟದಲ್ಲಿದೆ ಎಂದು ಹೇಳಿದರು. ಭಾರತದ ಬೌದ್ಧಿಕ, ಸಾಂಸ್ಕೃತಿಕ ಹಾಗು ರಾಷ್ಟ್ರೀಯ ಪುನರುಜ್ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮತ್ತು ಶತಮಾನಗಳಿಂದ ಕಡಲ ಮಾರ್ಗಗಳ ಮೂಲಕ ಭಾರತವನ್ನು ವಿಶ್ವದೊಂದಿಗೆ ಸಂಪರ್ಕಿಸಿದ ಐತಿಹಾಸಿಕ ಭೂಮಿ ಬಂಗಾಳಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. “ಈ ಕಾರ್ಯಕ್ರಮವು ಆತ್ಮನಿರ್ಭರ ಭಾರತ, ಸುರಕ್ಷಿತ ಭಾರತ ಮತ್ತು ಅಭಿವೃದ್ಧಿ ಹೊಂದಿದ ಭಾರತದತ್ತ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ” ಎಂದು ಶ್ರೀ ಮೋದಿ ಹೇಳಿದರು. ಜೂನ್ 21 ಅನ್ನು ಜಾಗತಿಕವಾಗಿ ವಿಶ್ವ ಹೈಡ್ರೋಗ್ರಫಿ ದಿನವನ್ನಾಗಿ ಆಚರಿಸಲಾಗುತ್ತದೆ ಎಂಬುದರತ್ತ ಅವರು ಗಮನಸೆಳೆದರು ಮತ್ತು ಭಾರತದ ಅತ್ಯಂತ ಸುಧಾರಿತ ಹೈಡ್ರೋಗ್ರಾಫಿಕ್ ಸಮೀಕ್ಷೆ ಹಡಗು ಐಎನ್ಎಸ್ ಸಂಶೋಧಕ್ ಅದೇ ದಿನ ಕಾರ್ಯಾರಂಭ ಮಾಡಿರುವುದು ಒಂದು ಗಮನಾರ್ಹ ಕಾಕತಾಳೀಯ ಎಂದು ಬಣ್ಣಿಸಿದರು. ಭಾರತೀಯ ನೌಕಾಪಡೆ, ವಿಜ್ಞಾನಿಗಳು, ಎಂಜಿನಿಯರ್ಗಳು, ಕಾರ್ಮಿಕರು ಮತ್ತು ದೇಶದ ಎಲ್ಲಾ ನಾಗರಿಕರನ್ನು ಅಭಿನಂದಿಸಿದ ಶ್ರೀ ಮೋದಿ, ಈ ಸಾಧನೆಯು ಭಾರತದ ಬೆಳೆಯುತ್ತಿರುವ ತಾಂತ್ರಿಕ ಮತ್ತು ಕಡಲ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. “ಬಲವಾದ ಕಡಲ ಸಾಮರ್ಥ್ಯವಿಲ್ಲದೆ ಯಾವುದೇ ರಾಷ್ಟ್ರವು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಿಲ್ಲ. ಅಭಿವೃದ್ಧಿ, ಭದ್ರತೆ ಮತ್ತು ಸಮೃದ್ಧಿ ಸಾಗರಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ವಿಶ್ವದ ಹೆಚ್ಚಿನ ವ್ಯಾಪಾರವು ಸಮುದ್ರ ಮಾರ್ಗಗಳ ಮೂಲಕ ಚಲಿಸುತ್ತದೆ, ಜೊತೆಗೆ ವಿಶಾಲವಾದ ಜಾಗತಿಕ ಡೇಟಾ ನೆಟ್ವರ್ಕ್ಗಳು ಸಾಗರಗಳ ಕೆಳಗೆ ಕಾರ್ಯನಿರ್ವಹಿಸುತ್ತವೆ” ಎಂದು ಆಧುನಿಕ ಜಗತ್ತಿನಲ್ಲಿ ಕಡಲ ಶಕ್ತಿಯ ಮಹತ್ವವನ್ನು ಒತ್ತಿಹೇಳುತ್ತ  ಶ್ರೀ ಮೋದಿ ಹೇಳಿದರು. ನಿರ್ಣಾಯಕ ಖನಿಜಗಳು, ಆಳ ಸಮುದ್ರ ಸಂಪನ್ಮೂಲಗಳು ಮತ್ತು ಭವಿಷ್ಯದ ಇಂಧನ ಮೂಲಗಳು ಕಡಲ ಕ್ಷೇತ್ರಕ್ಕೆ ಹೆಚ್ಚು ಸಂಪರ್ಕ ಹೊಂದಿವೆ ಎಂದು ಅವರು ಹೇಳಿದರು.ಆದ್ದರಿಂದ, ರಾಷ್ಟ್ರದ ಆರ್ಥಿಕ ಮತ್ತು ಕಾರ್ಯತಂತ್ರದ ಪ್ರಭಾವವು ಅದರ ಕಡಲ ವಲಯದ ಬಲದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ ಎಂದು ಅವರು ಹೇಳಿದರು.

ಭಾರತವು ವಾಸ್ತವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ ಮತ್ತು ಅದಕ್ಕೆ ತಕ್ಕಂತೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ ಎಂದು ಶ್ರೀ ಮೋದಿ ಹೇಳಿದರು. “ಮೂರು ನೌಕಾ ವೇದಿಕೆಗಳ ಕಾರ್ಯಾರಂಭವು ದೇಶದ ಬೆಳೆಯುತ್ತಿರುವ ಸಾಮರ್ಥ್ಯ ಮತ್ತು ಕೌಶಲ್ಯಗಳಿಗೆ ಸಾಕ್ಷಿಯಾಗಿದೆ” ಎಂದು ಅವರು ಹೇಳಿದರು. ಐಎನ್ಎಸ್ ವಿಕ್ರಾಂತ್ ಕಾರ್ಯಾರಂಭವನ್ನು ಸ್ಮರಿಸಿದ ಅವರು, ಇದು ಭಾರತದ ಕಡಲ ಪ್ರಯಾಣದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಗುರುತಿಸಿದೆ ಮತ್ತು ಭಾರತದ ಬೆಳೆಯುತ್ತಿರುವ ನೌಕಾ ಶಕ್ತಿಯನ್ನು ಜಗತ್ತಿಗೆ ಘೋಷಿಸಿತು ಎಂದು ಹೇಳಿದರು. ಐಎನ್ಎಸ್ ವಿಕ್ರಾಂತ್ ನಿಂದ ಐಎನ್ಎಸ್ ಅಗ್ರೇ, ಐಎನ್ಎಸ್ ದುನಾಗಿರಿ ಮತ್ತು ಐಎನ್ಎಸ್ ಸಂಶೋಧಕ್ ಕಾರ್ಯಾರಂಭದವರೆಗಿನ ಪ್ರಯಾಣವು ಕೇವಲ ಹೊಸ ಯುದ್ಧನೌಕೆಗಳ ಕಥೆಯಲ್ಲ, ಆದರೆ ಭಾರತದ ಹೆಚ್ಚುತ್ತಿರುವ ಸ್ವಾವಲಂಬನೆಯ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದರು. “ಎಲ್ಲಾ ಮೂರು ಹಡಗುಗಳು ಸ್ಥಳೀಯ ವಿನ್ಯಾಸ, ಉತ್ಪಾದನೆ ಮತ್ತು ನಾವೀನ್ಯತೆಗೆ ಭಾರತದ ಬದ್ಧತೆಯನ್ನು ಸಂಕೇತಿಸುತ್ತವೆ. ಭಾರತದಲ್ಲಿ ವಿನ್ಯಾಸಗೊಳಿಸಲಾದ ಮತ್ತು ನಿರ್ಮಿಸಲಾದ ಹಡಗುಗಳು ಭಾರತೀಯ ಉದ್ಯಮಗಳ ಪ್ರತಿಭೆ, ಭಾರತೀಯ ಎಂಜಿನಿಯರ್ಗಳ ಪರಿಣತಿ ಮತ್ತು ಭಾರತೀಯ ಕಾರ್ಮಿಕರ ಕಠಿಣ ಪರಿಶ್ರಮವನ್ನು ಪ್ರದರ್ಶಿಸುತ್ತವೆ”, ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ರಕ್ಷಣಾ ಕ್ಷೇತ್ರದಲ್ಲಿ ಭಾರತವು ಕೇವಲ ಖರೀದಿದಾರನಾಗಿ ಉಳಿಯಲು ಬಯಸುವುದಿಲ್ಲ ಎಂದು ಶ್ರೀ ಮೋದಿ ಪ್ರತಿಪಾದಿಸಿದರು. “ರಾಷ್ಟ್ರದ ಮಿಲಿಟರಿಯ ಬಲವನ್ನು ಜಾಗತಿಕ ಮಾರುಕಟ್ಟೆಗಳ ಮೇಲಿನ ಅವಲಂಬನೆಯಿಂದ ಅಳೆಯಲಾಗುವುದಿಲ್ಲ, ಬದಲು ಸ್ವಾವಲಂಬಿಯಾಗುವ ಸಾಮರ್ಥ್ಯದಿಂದ ಅಳೆಯಬಹುದು. ಭಾರತವು ಉತ್ಪಾದಕ ಮತ್ತು ತಯಾರಕನಾಗಲು ಬಯಸುತ್ತದೆ, ಏಕೆಂದರೆ ಉತ್ಪಾದಿಸುವ ರಾಷ್ಟ್ರಗಳು ಜಾಗತಿಕ ವೇದಿಕೆಯಲ್ಲಿ ನಿರ್ಣಾಯಕ ಶಕ್ತಿಗಳಾಗುತ್ತವೆ” ಎಂದು ಅವರು ಹೇಳಿದರು. ಇತ್ತೀಚಿನ ಸಾಧನೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕಳೆದ ಕೆಲವು ವರ್ಷಗಳಲ್ಲಿ 40ಕ್ಕೂ ಹೆಚ್ಚು ದೇಶೀಯವಾಗಿ ನಿರ್ಮಿಸಲಾದ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಭಾರತೀಯ ನೌಕಾಪಡೆಗೆ ಸೇರಿಸಲಾಗಿದೆ ಎಂದರು. ಪ್ರತಿ ಕೆಲವು ವಾರಗಳಿಗೊಮ್ಮೆ ನೌಕಾಪಡೆಯು ಹೊಸ ಸಾಮರ್ಥ್ಯವನ್ನು ಪಡೆದುಕೊಂಡಿದೆ, ಪ್ರಸ್ತುತ 45 ಪ್ರಮುಖ ನೌಕಾ ವೇದಿಕೆಗಳು ನಿರ್ಮಾಣ ಹಂತದಲ್ಲಿವೆ ಎಂದು ಅವರು ಹೇಳಿದರು. ಈ ಅಂಕಿಅಂಶಗಳು ಕೇವಲ ಅಂಕಿಅಂಶಗಳಲ್ಲ, ಬದಲು ಭಾರತದ ಕೈಗಾರಿಕಾ ಸಾಮರ್ಥ್ಯ ಮತ್ತು ಭವಿಷ್ಯದ ಸಾಮರ್ಥ್ಯದ ಸೂಚಕಗಳಾಗಿವೆ ಎಂದು ಅವರು ಹೇಳಿದರು.

ಕಡಲ ಕ್ಷೇತ್ರದ ಅಪಾರ ಉದ್ಯೋಗ ಸೃಷ್ಟಿ ಸಾಮರ್ಥ್ಯವನ್ನು ಒತ್ತಿಹೇಳಿದ ಶ್ರೀ ಮೋದಿ, “ಸರ್ಕಾರವು ಕಡಲ ವಲಯವನ್ನು ಪ್ರತ್ಯೇಕ ಉದ್ಯಮವಾಗಿ ನೋಡುವುದಿಲ್ಲ, ಬದಲು ಅಭಿವೃದ್ಧಿ ಹೊಂದಿದ ಭಾರತಕ್ಕೆ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿ ನೋಡುತ್ತದೆ. ಆಧುನಿಕ ಹಡಗಿಗೆ ಹೆಚ್ಚಿನ ಪ್ರಮಾಣದ ಉಕ್ಕು, ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು ಮತ್ತು ಸಾವಿರಾರು ಘಟಕಗಳು ಬೇಕಾಗುತ್ತವೆ, ಇದು ವ್ಯಾಪಕವಾದ ಕೈಗಾರಿಕಾ ಪೂರೈಕೆ ಸರಪಳಿಗಳಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತದೆ”. ಮೂರು ನಿಯೋಜಿತ ಹಡಗುಗಳನ್ನು ಉಲ್ಲೇಖಿಸಿದ ಅವರು, 200ಕ್ಕೂ ಹೆಚ್ಚು ಎಂಎಸ್ಎಂಇಗಳು ಅವುಗಳ ನಿರ್ಮಾಣಕ್ಕೆ ಕೊಡುಗೆ ನೀಡಿವೆ, ದೇಶಾದ್ಯಂತ ಗಣನೀಯ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಯನ್ನು ಸೃಷ್ಟಿಸಿವೆ ಎಂದು ಹೇಳಿದರು.

ಭಾರತವು ಕಡಲ ಅಭಿವೃದ್ಧಿಯ ಮುಂದಿನ ಹಂತವನ್ನು ಪ್ರವೇಶಿಸುವ ಸಮಯ ಬಂದಿದೆ ಮತ್ತು ಸರ್ಕಾರವು ಹಡಗು ನಿರ್ಮಾಣ ಕ್ಷೇತ್ರಕ್ಕೆ ಹೊಸ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ ಮತ್ತು ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಇತ್ತೀಚಿನ ವರ್ಷಗಳಲ್ಲಿ ಹಲವಾರು ನೀತಿ ಸುಧಾರಣೆಗಳನ್ನು ಪರಿಚಯಿಸಿದೆ ಎಂದು ಶ್ರೀ ಮೋದಿ ಹೇಳಿದರು. “ಹಡಗು ವಲಯಕ್ಕೆ ಘೋಷಿಸಲಾದ 70,000 ಕೋಟಿ ರೂ.ಗಳ ಪ್ರೋತ್ಸಾಹಕ ಪ್ಯಾಕೇಜ್ ಕೇವಲ ಆರ್ಥಿಕ ಕ್ರಮವಲ್ಲ, ಅದು ಭಾರತದ ಕಡಲ ಭವಿಷ್ಯ ಮತ್ತು ಕೈಗಾರಿಕಾ ವಿಸ್ತರಣೆಯಲ್ಲಿ ಹೂಡಿಕೆಯಾಗಿದೆ. ಸಾಗರಮಾಲಾದಂತಹ ಉಪಕ್ರಮಗಳು ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ ಮತ್ತು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು, ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸಲು ಹಾಗು ಕರಾವಳಿ ಪ್ರದೇಶಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತಿವೆ” ಎಂದು ಅವರು ಹೇಳಿದರು.

ರಕ್ಷಣಾ ಕ್ಷೇತ್ರದಲ್ಲಿ ಭಾರತದ ಪರಿವರ್ತನೆಯನ್ನು ಪ್ರತಿಬಿಂಬಿಸಿದ ಶ್ರೀ ಮೋದಿ, ಭಾರತವು ವಿಶ್ವದ ಅತಿದೊಡ್ಡ ರಕ್ಷಣಾ ಆಮದುದಾರರಲ್ಲಿ ಒಂದಾಗಿ ಪರಿಗಣಿಸಲ್ಪಟ್ಟ ಸಮಯವಿತ್ತು, ಇದು ಕಾರ್ಯತಂತ್ರ ಮತ್ತು ಭದ್ರತಾ ಸವಾಲುಗಳನ್ನು ಸೃಷ್ಟಿಸಿತ್ತು ಎಂದು ಹೇಳಿದರು. 2014 ರಲ್ಲಿ ಸರ್ಕಾರ ರಚನೆಯಾದ ನಂತರ, ಪ್ರಮುಖ ನೀತಿ ಸುಧಾರಣೆಗಳು ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಬಲವಾದ ಒತ್ತು ನೀಡುವ ಮೂಲಕ ಪರಿಸ್ಥಿತಿಯನ್ನು ಬದಲಾಯಿಸಲು ದೃಢವಾದ ಪ್ರಯತ್ನಗಳನ್ನು ಮಾಡಲಾಯಿತು ಎಂದು ಅವರು ಹೇಳಿದರು.ಈ ಪ್ರಯತ್ನಗಳು ರಕ್ಷಣಾ ವಿನ್ಯಾಸ, ಉತ್ಪಾದನೆ ಮತ್ತು ರಫ್ತಿನಲ್ಲಿ ಹೊಸ ಅವಕಾಶಗಳನ್ನು ತೆರೆದಿವೆ. 2014 ರಲ್ಲಿ ಭಾರತದ ಒಟ್ಟು ರಕ್ಷಣಾ ಉತ್ಪಾದನೆಯು ಸುಮಾರು 40,000 ಕೋಟಿ ರೂ.ಗಳಷ್ಟಿತ್ತು, ಈಗ ಅದು ಸುಮಾರು 1.8 ಲಕ್ಷ ಕೋಟಿ ರೂ.ಗೆ ಏರಿದೆ, ಇದು ಬಲವಾದ, ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ರಕ್ಷಣಾ ಉದ್ಯಮವನ್ನು ನಿರ್ಮಿಸುವತ್ತ ಮಾಡಿದ ಗಮನಾರ್ಹ ಪ್ರಗತಿಯನ್ನು ಪ್ರದರ್ಶಿಸುತ್ತದೆ” ಎಂದು ಅವರು ಹೇಳಿದರು. ನೀತಿಗಳು ಸ್ಪಷ್ಟವಾಗಿದ್ದಾಗ, ದಿಕ್ಕು ಸರಿಯಾಗಿದ್ದಾಗ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಕಡೆಗೆ ಹಂಚಿಕೆಯ ಬದ್ಧತೆಯೊಂದಿಗೆ ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಿದಾಗ ಪರಿವರ್ತನಾತ್ಮಕ ಬದಲಾವಣೆ ಹೇಗೆ ಸಾಧ್ಯ ಎಂಬುದನ್ನು ಕಳೆದ ಹನ್ನೆರಡು ವರ್ಷಗಳಲ್ಲಿ ಸಾಧಿಸಿದ ಪ್ರಗತಿಯು ತೋರಿಸುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಭಾರತದ ಶ್ರೀಮಂತ ಕಡಲ ಪರಂಪರೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ದೇಶದ ಕಡಲ ಪರಂಪರೆಯ ಬಗ್ಗೆ ಚರ್ಚಿಸಿದಾಗಲೆಲ್ಲಾ ಪಶ್ಚಿಮ ಬಂಗಾಳದ ಹೆಸರು ಸ್ವಾಭಾವಿಕವಾಗಿ ನೆನಪಿಗೆ ಬರುತ್ತದೆ ಎಂದು ಹೇಳಿದರು. ವಿಶ್ವದೊಂದಿಗೆ ಭಾರತದ ಕಡಲ ಸಂಪರ್ಕದಲ್ಲಿ ಬಂಗಾಳವು ಐತಿಹಾಸಿಕವಾಗಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. ಹೂಗ್ಲಿ ನದಿಯ ನೀರು ಇತಿಹಾಸದ ಬದಲಾಗುತ್ತಿರುವ ಅಧ್ಯಾಯಗಳು, ವ್ಯಾಪಾರದ ಬೆಳವಣಿಗೆ ಮತ್ತು ಅಭಿವೃದ್ಧಿಯ ಹೊಸ ಪ್ರಯಾಣಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಈ ಬಂದರು ಬಂಗಾಳದ ಪುತ್ರ  ಮತ್ತು ಭಾರತದ ಮೊದಲ ಕೈಗಾರಿಕಾ ಸಚಿವ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹೆಸರನ್ನು ಹೊಂದಿದೆ, ಇದು ಸಂದರ್ಭವನ್ನು ಇನ್ನಷ್ಟು ಮಹತ್ವದ್ದಾಗಿಸಿದೆ ಎಂದು ಅವರು ಹೇಳಿದರು. “ಮುಂದಿನ ವರ್ಷಗಳಲ್ಲಿ ಪಶ್ಚಿಮ ಬಂಗಾಳವು ಭಾರತದ ನೀಲಿ ಆರ್ಥಿಕತೆ, ಕಡಲ ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಕರಾವಳಿ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಲು ಸಜ್ಜಾಗಿದೆ” ಎಂದು ಶ್ರೀ ಮೋದಿ ಹೇಳಿದರು.

ಭಾರತವು ಸದಾ ಸಾಗರಗಳನ್ನು ಸಹಕಾರ ಮತ್ತು ಸಂಪರ್ಕದ ಮಾಧ್ಯಮವಾಗಿ ನೋಡಿದೆ ಎಂದು ಶ್ರೀ ಮೋದಿ ಪುನರುಚ್ಚರಿಸಿದರು. “ಸಮೃದ್ಧಿಯನ್ನು ರಕ್ಷಿಸಲು ಭದ್ರತೆ ಅನಿವಾರ್ಯ, ಆದರೆ ಭವಿಷ್ಯವನ್ನು ನಿರ್ಮಿಸಲು ಸ್ವಾವಲಂಬನೆ ಅಗತ್ಯ. ಐಎನ್ಎಸ್ ಅಗ್ರೇ, ಐಎನ್ಎಸ್ ದುನಾಗಿರಿ ಮತ್ತು ಐಎನ್ಎಸ್ ಸಂಶೋಧಕ್ ಆದರ್ಶಗಳನ್ನು ಸಾಕಾರಗೊಳಿಸುತ್ತವೆ ಮತ್ತು ತನ್ನ ಸಾಮರ್ಥ್ಯಗಳ ಬಗ್ಗೆ ಹೆಚ್ಚು ಅರಿವು ಹೊಂದಿರುವ, ತನ್ನ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿರುವ ಮತ್ತು ಇಪ್ಪತ್ತೊಂದನೇ ಶತಮಾನದಲ್ಲಿ ಹೊಸ ಶಕ್ತಿ ಮತ್ತು ಉದ್ದೇಶದೊಂದಿಗೆ ಮುಂದುವರಿಯಲು ನಿರ್ಧರಿಸಿರುವ ರಾಷ್ಟ್ರವನ್ನು ಸಂಕೇತಿಸುತ್ತವೆ” ಎಂದು ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ  ಪ್ರಧಾನಮಂತ್ರಿಯವರು, ಈ ಸಾಧನೆಗಳಿಗೆ ಕೊಡುಗೆ ನೀಡಿದ ಭಾರತೀಯ ನೌಕಾಪಡೆಯ ಎಲ್ಲಾ ಸಿಬ್ಬಂದಿ, ವಿಜ್ಞಾನಿಗಳು, ಎಂಜಿನಿಯರ್ಗಳು, ಕಾರ್ಮಿಕರು ಮತ್ತು ಎಲ್ಲಾ ನಾಗರಿಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು ಮತ್ತು ಭಾರತದ ಕಡಲ ಹಾಗು ರಕ್ಷಣಾ ಕ್ಷೇತ್ರಗಳು ರಾಷ್ಟ್ರದ ಭದ್ರತೆ, ಸಮೃದ್ಧಿ ಮತ್ತು ಜಾಗತಿಕ ಸ್ಥಾನಮಾನವನ್ನು ಬಲಪಡಿಸುವುದನ್ನು ಮುಂದುವರಿಸುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

 

*****