Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮ್ಮ ಆಂಧ್ರಪ್ರದೇಶ ಭೇಟಿಯ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಆಂಧ್ರಪ್ರದೇಶ ಭೇಟಿಯ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ. ಶ್ರೀಶೈಲಂನಲ್ಲಿ, ಶ್ರೀ ಬ್ರಹ್ಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಶ್ರೀ ನರೇಂದ್ರ ಮೋದಿ ಅವರು ಶ್ರೀ ಶಿವಾಜಿ ಧ್ಯಾನ ಮಂದಿರ ಮತ್ತು ಶ್ರೀ ಶಿವಾಜಿ ದರ್ಬಾರ್ ಸಭಾಂಗಣಕ್ಕೆ ಭೇಟಿ ನೀಡಿದರು. ನಂತರ ಅವರು ಕರ್ನೂಲ್ ನಲ್ಲಿ ಸುಮಾರು 13,430 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಉದ್ಘಾಟಿಸಿದರು.

ಎಕ್ಸ್ ಖಾತೆಯ ಸರಣಿ ಪೋಸ್ಟ್ ಗಳಲ್ಲಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:

“ಶ್ರೀಶೈಲಂನ ಶ್ರೀ ಬ್ರಹ್ಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದೆ. ನನ್ನ ಸಹ ಭಾರತೀಯರ ಯೋಗಕ್ಷೇಮ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದೆ. ಎಲ್ಲರೂ ಸಂತೋಷ ಮತ್ತು ಸಮೃದ್ಧಿಯಿಂದ ಇರಲಿ.”

“ಶ್ರೀಶೈಲಂನಿಂದ ಇನ್ನೂ ಕೆಲವು ಇಣುಕುನೋಟಗಳು.”

“ಶ್ರೀಶೈಲಂನ ಶ್ರೀ ಶಿವಾಜಿ ಧ್ಯಾನ ಮಂದಿರ ಮತ್ತು ಶ್ರೀ ಶಿವಾಜಿ ದರ್ಬಾರ್ ಸಭಾಂಗಣಕ್ಕೆ ಹೋಗಿದ್ದೆ. ಮಹಾನ್ ಛತ್ರಪತಿ ಶಿವಾಜಿ ಮಹಾರಾಜರು 1677 ರಲ್ಲಿ ಶ್ರೀಶೈಲಂಗೆ ಬಂದು ಶ್ರೀಶೈಲಂ ಮಲ್ಲಿಕಾರ್ಜುನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಧ್ಯಾನ ಮಂದಿರವು ಅವರು ಧ್ಯಾನ ಮಾಡಿದ ಸ್ಥಳವಾಗಿದೆ ಮತ್ತು ಭ್ರಮರಾಂಬಾ ದೇವಿಯ ಆಶೀರ್ವಾದ ಪಡೆದರು.”

“ಶ್ರೀಶೈಲಂನಲ್ಲಿರುವುದು ಅಪಾರ ಸಂತೋಷದ ವಿಷಯವಾಗಿದೆ. ಈ ಪವಿತ್ರ ಸ್ಥಳದ ಪ್ರತಿಯೊಂದು ಭಾಗದಲ್ಲೂ ದೈವತ್ವವಿದೆ. ಆತ್ಮೀಯ ಸ್ವಾಗತಕ್ಕಾಗಿ ಇಲ್ಲಿನ ಜನರಿಗೆ ನಾನು ಕೃತಜ್ಞನಾಗಿದ್ದೇನೆ.

ಶ್ರೀ ಭ್ರಮಾರಾಂಬಿಕಾ ದೇವಿ ಮತ್ತು ಮಲ್ಲಿಕಾರ್ಜುನ ಸ್ವಾಮಿ ಅವರು ನಮ್ಮ ರಾಷ್ಟ್ರವನ್ನು ಯಾವಾಗಲೂ ಆಶೀರ್ವದಿಸಲಿ.”

“ವಿಕಸಿತ ಭಾರತ ಸಾಕಾರವಾಗಲು, ಆಂಧ್ರಪ್ರದೇಶವು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಆಂಧ್ರಪ್ರದೇಶದಲ್ಲಿ, ರಾಯಲಸೀಮಾ ಸಹ ಪ್ರವರ್ಧಮಾನಕ್ಕೆ ಬರುವುದು ಮುಖ್ಯ. ಚಂದ್ರಬಾಬು ನಾಯ್ಡು ಅವರ ನೇತೃತ್ವದ ಆಂಧ್ರಪ್ರದೇಶದ ಎನ್ ಡಿಎ ಸರ್ಕಾರ ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ.

@ncbn”

“ಇತ್ತೀಚಿನ ವರ್ಷಗಳಲ್ಲಿ, ಆಂಧ್ರಪ್ರದೇಶವು ಇಂಧನ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಇಂದು ಉದ್ಘಾಟಿಸಲಾದ ಯೋಜನೆಗಳು ರಾಜ್ಯದ ಇಂಧನ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವುದಲ್ಲದೆ, ಈ ಕ್ಷೇತ್ರದಲ್ಲಿ ಭಾರತದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡುತ್ತವೆ.”

“ಆಂಧ್ರಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಭಾರತದ ಮೊದಲ ಕೃತಕ ಬುದ್ಧಿಮತ್ತೆ ಕೇಂದ್ರವು ಇಡೀ ಜಗತ್ತಿಗೆ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯು ವಿಶಾಖಪಟ್ಟಣಂಗೆ ಜಾಗತಿಕ ಕೃತಕ ಬುದ್ಧಿಮತ್ತೆ ಮತ್ತು ಸಂಪರ್ಕ ಕೇಂದ್ರವಾಗಿ ಹೊಸ ಗುರುತನ್ನು ನೀಡುತ್ತದೆ.”

“ಕರ್ನೂಲ್ ಅನ್ನು ಡ್ರೋನ್ ತಾಣವನ್ನಾಗಿ ಮಾಡಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿರುವುದು ನನಗೆ ಸಂತಸ ತಂದಿದೆ. ಈ ಪ್ರಯತ್ನವು ಭವಿಷ್ಯದ ತಂತ್ರಜ್ಞಾನಗಳಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಮತ್ತು ರಾಜ್ಯದಾದ್ಯಂತ ಅನೇಕ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತದೆ.”

“ರಾಜ್ಯಾದ್ಯಂತ ಯಶಸ್ವಿ ‘ಸೂಪರ್ ಜಿಎಸ್ ಟಿ, ಸೂಪರ್ ಸೇವಿಂಗ್ಸ್’ ಅಭಿಯಾನಕ್ಕಾಗಿ ಆಂಧ್ರಪ್ರದೇಶ ಸರ್ಕಾರಕ್ಕೆ, ವಿಶೇಷವಾಗಿ ಸಚಿವ ನಾರಾ ಲೋಕೇಶ್ ಗಾರು ಅವರಿಗೆ ಅಭಿನಂದನೆಗಳು. ನಾವಿನ್ಯಪೂರ್ಣ ಸ್ಪರ್ಧೆಗಳ ಮೂಲಕ, ಅವರು ಯುವಜನರಲ್ಲಿ ಜಿಎಸ್ ಟಿಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಮೂಡಿಸಲು ಸಾಧ್ಯವಾಯಿತು.

@naralokesh”

“ಬಿಹಾರದಲ್ಲಿ ಎನ್ ಡಿಎಯ ಭವಿಷ್ಯದ ಬಗ್ಗೆ ಉತ್ತಮ ಹಿಂದಿಯಲ್ಲಿ ಮಾತನಾಡುವ ಮೂಲಕ, ಚಂದ್ರಬಾಬು ನಾಯ್ಡು ಅವರು ಬಿಹಾರದಾದ್ಯಂತ ಹಲವಾರು ಎನ್ ಡಿಎ ಕಾರ್ಯಕರ್ತರ ಹೃದಯವನ್ನು ಗೆದ್ದಿರುವುದು ಮಾತ್ರವಲ್ಲದೆ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಬಗ್ಗೆ ಆಳವಾದ ಬದ್ಧತೆಯನ್ನು ತೋರಿಸಿದ್ದಾರೆ.

@ncbn”

“ಕರ್ನೂಲ್ ನಲ್ಲಿನ ಉತ್ಸಾಹ ಅಸಾಧಾರಣವಾಗಿತ್ತು! ಇಂದು ಉದ್ಘಾಟನೆಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರು ನಿಜವಾಗಿಯೂ ಸಂತೋಷಪಟ್ಟಿದ್ದಾರೆ.”

 

****