ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಮುಂಬೈ ಬೃಹತ್ ಮಹಾನಗರ ವಲಯ ಅಭಿವೃದ್ಧಿ ಪ್ರಾಧಿಕಾರ (ಎಂ.ಎಂ.ಆರ್.ಡಿ.ಎ.)ನ ಮೆಟ್ರೋ ಶೆಡ್ ಗಾಗಿ, ರಾಜ್ಯ ಸರ್ಕಾರಕ್ಕೆ ಸೇರಿದ ಮುಂಬೈನ ಗೊರಯಿನಲ್ಲಿನ 40 ಎಕರೆ ಭೂಮಿಯ ವಿನಿಮಯದೊಂದಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ)ಕ್ಕೆ ಸೇರಿದ ದಹಿಸಾರ್, ಆರ್.ಆರ್. ನಿಲ್ದಾಣದ ಭೂಮಿಯನ್ನು ವರ್ಗಾವಣೆ ಮಾಡಲು ತನ್ನ ಅನುಮೋದನೆ ನೀಡಿದೆ. ಈ ಭೂಮಿಯ ವಹಿವಾಟಿನಿಂದ ಎಂ.ಎಂ.ಆರ್.ಡಿ.ಎ.ಗೆ ಮುಂಬೈನಲ್ಲಿ ಮೆಟ್ರೋ ರೈಲು ಯೋಜನೆ ಪೂರ್ಣಗೊಳಿಸಲು ಅವಕಾಶ ನೀಡಲಿದೆ.
ಮಾದರಿ/ವಿಧಾನಗಳು:
ಈ ಪ್ರಸ್ತಾಪವನ್ನು ಪರಿಗಣಿಸುವಾಗ, ಸಂಪುಟವು ಈ ಕೆಳಕಂಡ ಮಾದರಿ/ವಿಧಾನಗಳಿಗೆ ಅನುಮೋದನೆ ನೀಡಿದೆ:
i. ಎಂ.ಎಂ.ಆರ್.ಡಿ.ಎ. 40 ಎಕರೆ ಭೂಮಿಯ ವ್ಯತ್ಯಾಸದ ಹಣವನ್ನು 2016-17ರ ಆಧಾರದಂತೆ ಮುದ್ರಾಂಕ ಶುಲ್ಕದ ಸಿದ್ಧ ಲೆಕ್ಕಪರಿಶೋಧನೆ ದರದ ಆಧಾರದ ಮೇಲೆ 472.70 ಕೋಟಿ ರೂ. ಅಥವಾ ಅಂತಿಮವಾಗಿ ಭೂಮಿಯನ್ನು ಹಸ್ತಾಂತರ ಮಾಡುವ ವೇಳೆ ಇರುವ ಸಿದ್ಧ ಲೆಕ್ಕಪರಿಶೋಧನೆ, ಯಾವುದು ಹೆಚ್ಚೋ ಆ ಹಣವನ್ನು ಪಾವತಿ ಮಾಡಬೇಕಿದೆ.
ii. ಎಂ.ಎಂ.ಆರ್.ಡಿ.ಎ. ಗೊರಯಿನಲ್ಲಿನ 40 ಎಕರೆ ಭೂಮಿಯನ್ನು ಎಲ್ಲ ವಿಷಯದಲ್ಲೂ ಭೂಮಿಯ ಚಕ್ಕುಬಂದಿ ಗುರುತಿಸಿ, ಮಟ್ಟಮಾಡಿದ ತರುವಾಯ ಹಸ್ತಾಂತರ ಮಾಡಲಿದೆ. ಎಂ.ಎಂ.ಆರ್.ಡಿ.ಎ. ಗೊರಯಿನಲ್ಲಿನ ಭೂಮಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು, ಕಂದಾಯ ನಕ್ಷೆಗಳನ್ನು ಎಎಐ ಹೆಸರಿಗೆ ಭೂ ಹಕ್ಕಿನ ದಾಖಲೆ ಮಾಡಿಸಿ ಹಸ್ತಾಂತರ ಮಾಡಬೇಕಾಗುತ್ತದೆ.
iii. ಎಂ.ಎಂ.ಆರ್.ಡಿ.ಎ, ಎಎಐಗೆ 24 ಎಕರೆ ಭೂಮಿಯನ್ನು ಉಳಿಸಿ, 40 ಎಕರೆ ಭೂಮಿಯನ್ನು ಪ್ರತ್ಯೇಕಿಸಿ/ ಗುರುತಿಸಿಸಮೀಪದ ನಗರ ರಸ್ತೆಗೆ ಸ್ಪಷ್ಟ ಸಂಪರ್ಕ ಕಲ್ಪಿಸುತ್ತದೆ
iv. ಎಎಐ ಕೂಡ ದಹಿಸರ್ ನ ಕನಿಷ್ಠ 2000 ಚದರ ಮೀಟರ್ ಭೂಮಿಯನ್ನು ತಾತ್ಕಾಲಿಕ ಆಧಾರದಲ್ಲಿ ಮುಂಗಡವಾಗಿ ಹಸ್ತಾಂತರ ಮಾಡಲಿದೆ.
ಉದ್ಯೋಗಾವಕಾಶ ಸೃಷ್ಟಿಯ ಸಾಮರ್ಥ್ಯ:
ಹಾಲಿ ಪ್ರಸ್ತಾವನೆಯು, ತಾಂತ್ರಿಕ ತಜ್ಞರೊಂದಿಗೆ ಕುಶಲ, ಅರೆ ಕುಶಲ ಕಾರ್ಮಿಕರಿಗೂ ಉದ್ಯೋಗಾವಶಗಳನ್ನು ಸೃಷ್ಟಿಸುತ್ತದೆ ಅಲ್ಲದೆ, ಮೆಟ್ರೋ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ಉತ್ಪಾದನಾ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಮೆಟ್ರೋ ಕಾರ್ ಶೆಡ್ ಕಾರ್ಯಾಚರಣೆ ಆದ ಬಳಿಕ, ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಹಿನ್ನೆಲೆ:
ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ಒಟ್ಟಾರೆ ಸಾರ್ವಜನಿಕ ಸಾರಿಗೆಯ ಸಾಮರ್ಥ್ಯವನ್ನು ತ್ವರಿತಗೊಳಿಸಲು ಹಂತ ಹಂತಗಳಲ್ಲಿ ಮೆಟ್ರೋ ರೈಲು ಮಾಸ್ಟರ್ ಯೋಜನೆಯನ್ನು (146.50 ಕಿ.ಮೀ) ಅನುಷ್ಠಾನಗೊಳಿಸುತ್ತಿದೆ. ಇದಕ್ಕಾಗಿ ಅಂದರೆ ಮುಂಬೈ ಮೆಟ್ರೋ ಯೋಜನೆ ಅನುಷ್ಠಾನಕ್ಕಾಗಿ ಎಂ.ಎಂ.ಆರ್.ಡಿ.ಎ. ಅಡಿಯಲ್ಲಿ ಮುಂಬೈ ಮೆಟ್ರೋ ರೈಲು ನಿಗಮ (ಎಂ.ಎಂ.ಆರ್.ಸಿ.) ಎಂಬ ಹೆಸರಿನ ವಿಶೇಷ ಉದ್ದೇಶದ ವಾಹನ (ವಿಶೇಷ ಯೋಜನೆ) ರಚಿಸಲಾಗಿದೆ. ಎಂ.ಎಂ.ಆರ್.ಸಿ. ದಹಿಸರ್ (ಇ) ಯಿಂದ ಅಂದೇರಿ (ಇ) ಮೆಟ್ರೋ ಕಾರಿಡಾರ್ ನಲ್ಲಿ ಕಾರ್ ಶೆಡ್ ನಿರ್ಮಿಸಲು ಯೋಜಿಸಿದೆ. ಕಾರ್ ಶೆಡ್ ಗೆ ಗುರುತಿಸಲಾಗಿರುವ ಭೂಮಿಯ ಭಾಗವು ಅಂದರೆ 17.47 ಹೆಕ್ಟೇರ್ (ಸುಮಾರು 44 ಎಕರೆ) ಎಎಐಗೆ ಸೇರಿದ್ದಾಗಿದೆ. ಎ.ಎ.ಐ. ದಹಿಸರ್ ನಲ್ಲಿ ಒಟ್ಟಾರೆ 64 ಎಕರೆ ಭೂಮಿಯನ್ನು ಹೊಂದಿದ್ದು, ಅಲ್ಲಿ ದೂರ ಸಂವೇದಿ ಸಂಕೇತ ಸ್ವೀಕರಿಸುವ ಕೇಂದ್ರವಿದೆ. ಭೂಮಿಯ ಕೆಲ ಭಾಗವನ್ನು ಒತ್ತುವರಿ ಮಾಡಲಾಗಿದೆ.