Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೆದರ್ ಲ್ಯಾಂಡ್ ನ ಹೇಗ್ ನಲ್ಲಿ ಭಾರತೀಯ ಡಚ್ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ

ನೆದರ್ ಲ್ಯಾಂಡ್ ನ ಹೇಗ್ ನಲ್ಲಿ ಭಾರತೀಯ ಡಚ್ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ
 ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ

ನೆದರ್ ಲ್ಯಾಂಡ್ ನ ಹೇಗ್ ನಲ್ಲಿ ಭಾರತೀಯ ಡಚ್ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ
 ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ


ಕ ಹಾಲ್ ಬಾ? (ನೀವೆಲ್ಲರೂ ಹೇಗಿದ್ದೀರಿ?)

ನೆದರ್ ಲ್ಯಾಂಡ್ ನಲ್ಲಿ ಇರುವ ನನ್ನೆಲ್ಲಾ ಸೋದರ-ಸೋದರಿಯರೇ, ನನ್ನನ್ನು ಸ್ವಾಗತಿಸಿದ್ದಕ್ಕಾಗಿ ಮತ್ತು ಇಲ್ಲಿ ಹಾಜರಿರುವುದಕ್ಕಾಗಿ ಈ ಮಹಾನಗರದ ಮೇಯರ್ ಮತ್ತು ಉಪ ಮೇಯರ್ ಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಸುತ್ತಲೂ ನೀವು ಆಲಿಸುತ್ತಿರುವ ಈ ಪ್ರತಿಧ್ವನಿ…ನೀವು ಅನುಭವಿಸುತ್ತಿರುವ ಸಂತಸ ಮತ್ತು ನೀವು ಅನುಭವಿಸುತ್ತಿರುವ ಸಡಗರವನ್ನು ಭಾರತದಲ್ಲಿ ಟಿವಿ ಮೂಲಕ ವೀಕ್ಷಿಸುತ್ತಿರುವವರು ಅಚ್ಚರಿ ಪಡುತ್ತಾರೆ. ಇಂಥಾ ಸಣ್ಣ ಹೇಗ್ ನಗರದಲ್ಲಿ ಭಾರತೀಯ ಸಮುದಾಯ ಇಷ್ಟೊಂದು ಪ್ರಬಲವಾಗಿದೆಯೇ ಎಂದು ಆಶ್ಚರ್ಯ ಪಡುತ್ತಾರೆ. ನಾನು ವಿಶೇಷವಾಗಿ ಸುರಿನಾಮ್ ಜನರನ್ನು ಗೌರವಿಸಲು ಬಯಸುತ್ತೇನೆ. ಕೆಲವು ವರ್ಷಗಳ ಹಿಂದೆಯೇ ನನಗೆ ಸುರಿನಾಮ್ ಗೆ ಬರುವ ಅದೃಷ್ಟ ಸಿಕ್ಕಿತ್ತು.

ಸುರಿನಾಮ್ ನಲ್ಲಿ ಜೂನ್ ಐದರ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ವಿಶ್ವದ ಯಾವುದೇ ಮೂಲೆಯಲ್ಲಿ ವಾಸಿಸುವ ಭಾರತೀಯರೂ ಇದು ಸಂಭ್ರಮದ ದಿನ. ಸುರಿನಾಮ್ ನ ನನ್ನ ಸೋದರ-ಸೋದರಿಯರೂ ಕೂಡಾ. ಸಮಾರು 150 ವರ್ಷಗಳ ಹಿಂದೆ ಭಾರತೀಯರನ್ನು ಸುರಿನಾಮ್ ಅಥವಾ ಗಿನಿಯಾ ಇರಲಿ, ಮಾರಿಷಿಯಸ್ ಗಳಿಗೆ ಕಾರ್ಮಿಕರನ್ನಾಗಿ ಕರೆತರಲಾಗಿತ್ತು. ಅದಾಗಿ ಕನಿಷ್ಟ ನಾಲ್ಕು ತಲೆಮಾರುಗಳೇ ಕಳೆದು ಹೋಗಿವೆ. ಆದರೂ ಅವರು ಇನ್ನೂ ಭಾರತದ ಭಾಷೆ, ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ನಾನು ಹೃದಯತುಂಬಿ ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ಅತ್ಯಂತ ಗೌರವವನ್ನು ತೋರುತ್ತೇನೆ. ತವರು ನೆಲ ಭಾರತದತ್ತ ತಿರುಗಿ ನೋಡುವ ಒಂದು ಅವಕಾಶ ಸಿಗದೇ ಇದ್ದರೂ ನಾಲ್ಕು-ಐದು-ಆರನೇ ತಲೆಮಾರಿನವರೆಗೂ ಭಾರತದ ಸಂಸ್ಕೃತಿ-ಸಂಪ್ರದಾಯವನ್ನು ರಕ್ಷಣೆ ಮಾಡಿಕೊಂಡು ಬಂದಿರುವ ನಮ್ಮ ಪೂರ್ವಜರನ್ನು ನಾವು ಗೌರವಿಸಲೇಬೇಕು. ಒಂದೇ ತಲೆಮಾರಿಗೆ ಮೂಲಭೂತವಾಗಿ ಬದಲಾವಣೆ ಆಗದು. ಭಾಷೆ ಬದಲಾಗದು. ತಮ್ಮ ಮಗನಿಗೆ ಭಾರತೀಯ ಭಾಷೆ ಗೊತ್ತಿಲ್ಲ ಎನ್ನುವುದಕ್ಕೆ ಕೆಲವರು ಹೆಮ್ಮೆ ಪಡುವುದಿಲ್ಲ. ಆದರೆ ಇದು ನಿಮ್ಮ ಮೂಲದೊಂದಿಗೆ ನಿಮ್ಮನ್ನು ಇನ್ನಷ್ಟು ಸದೃಢ ಗೊಳಿಸಲು ಬಲ ನೀಡುತ್ತದೆ. ಇಬ್ಬರು ಹುಡುಗರು ತಮ್ಮ ಬಲವನ್ನು ಸಮರ್ಪಕವಾಗಿ ಬಳಸಿಕೊಂಡರೆ ಒಂದು ಕಬ್ಬಿಣದ ಗುಂಡನ್ನು ಅದರ ಜಾಗದಿಂದ ಅಲುಗಸಬಹುದು. ಆದರೆ ಮೂಲದಿಂದ ಒಂದು ಮರವನ್ನು ಅಲುಗಿಸುವುದು ಅಷ್ಟು ಸುಲಭವಲ್ಲ. ಅದು ಅಷ್ಟು ಸುಲಭಕ್ಕೆ ಚಲಿಸುವುದಿಲ್ಲ. ಏಕೆಂದರೆ ಅದು ಹಲವರಿಗೆ ಆಶ್ರಯ ನೀಡಿರುತ್ತದೆ. ಸುರಿನಾಮ್ ನ ನಮ್ಮ ಸೋದರ ಸೋದರಿಯರಿಂದ ಹೇಗೆ ನಮ್ಮ ಮೂಲದ ಜತೆ ಸಂಬಂಧ ಕಾಪಾಡಿಕೊಳ್ಳೇಕು ಮತ್ತು ಅದು ನಮಗೆ ಯಾವ ಮಟ್ಟದ ಶಕ್ತಿ ನೀಡುತ್ತದೆ ಎನ್ನುವುದನ್ನು ಕಲಿಯಬಹುದಾಗಿದೆ.

ಅದೇ ರೀತಿ ನಿಮ್ಮಲ್ಲಿ ಬಹುತೇಕರು ಭಾರತಕ್ಕೆ ಬಂದಿಲ್ಲ. ನಿಮ್ಮಲ್ಲಿ ಬಹುತೇಕರ ಪೂರ್ವಿಕರು ಭಾರತವನ್ನು ಬಿಟ್ಟು ಬಂದಿದ್ದಾರೆ. ಅವರು ಭಾರತದ ಯಾವ ಗ್ರಾಮದಿಂದ ಬಂದಿದ್ದಾರೆ ಎನ್ನುವುದೂ ನಿಮಗೆ ಗೊತ್ತಿಲ್ಲ. ಅವರ ಸಬಂಧಿಕರು ಯಾರು? ಹೀಗೆ ಸಾಕಷ್ಟು ವಿಚಾರಗಳನ್ನು ನೀವು ತಿಳಿದುಕೊಂಡಿಲ್ಲ. ಆದರೆ ಅವರ ಹೃದಯಗಳು ಇನ್ನೂ ಭಾರತಕ್ಕಾಗಿ ಮಿಡಿಯುತ್ತಿವೆ. ಅದರರ್ಥ ನೀವು ಸ್ವಯಂ ನಿರ್ಮಿತ ಮತ್ತು ಸ್ವಯಂ ಅವಲಂಬಿತರು. ನೀವು ಏನನ್ನೇ ಸಾಧಿಸಿದ್ದರೂ ಅದು ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಸಾಮರ್ಥ್ಯದಿಂದ ಮಾತ್ರ. ನಿಮ್ಮ ಹೃದಯದಲ್ಲಿ ನೀವು ಭಾರತಕ್ಕೆ ಋಣಿಯಾಗಿದ್ದೀರಿ. ಅದನ್ನು ಹೇಗಾದರೂ ನೀವು ವಾಪಸ್ ನೀಡಲು ಇಚ್ಚಿಸುತ್ತೀರಿ. ಇದಕ್ಕಿಂತಲೂ ದೊಡ್ಡದಾದ ಭಾವನೆ ಮತ್ತು ಭಕ್ತಿ ಇನ್ನೊಂದಿಲ್ಲ ಎಂದು ನಾನು ನಂಬಿಕೊಂಡಿದ್ದೇನೆ

ಇಲ್ಲಿ ಎರಡು ಬಗೆಯ ಜನರಿದ್ದೀರಿ. ಒಂದೂವರೆ ಶತಮಾನಗಳ ಹಿಂದೆ ಭಾರತವನ್ನು ತೊರೆದು ಇಲ್ಲಿಗೆ ಬಂದು ಸುರಿನಾಮ್ ಗೆ ಸೇರಿಕೊಂಡವರು, ಎರಡನೇಯವರು ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಲ್ಯಾಂಡ್ ಆದವರು. ಇತ್ತೀಚೆಗೆ ವಿಮಾನದಲ್ಲಿ ಬಂದವರನ್ನು ನಾನು ಕೇಳಲು ಬಯಸುತ್ತೇನೆ, 150 ವರ್ಷಗಳ ಹಿಂದೆ ನೀವು ಅನುಭವಿಸುತ್ತಿದ್ದ ಅದೇ ಭಾರತೀಯತೆಯನ್ನು ಈಗಲೂ ಕಂಡಿದ್ದೀರಿ. ಅದನ್ನು ಸುರಿನೇಮ್ ಜನತೆ ಇನ್ನೂ ಕಾಪಾಡಿಕೊಂಡಿದ್ದಾರೆ.
ಆದ್ದರಿಂದ ಇಲ್ಲಿ ವಾಸಿಸುತ್ತಿರುವ ಜನರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಪಾಸ್ ಪೋರ್ಟ್ ನ ಬಣ್ಣ ಯಾವುದೇ ಇರಬಹುದು ಆದರೆ ನಿಮ್ಮ ರಕ್ತ ಸಂಬಂಧ ಬದಲಾಗುವುದಿಲ್ಲ. ನಾನು ನನ್ನ ಎಲ್ಲ ಭಾರತೀಯರಲ್ಲೂ ಮನವಿ ಮಾಡಿಕೊಳ್ಳುತ್ತೇನೆ ಪಾಸ್ ಪೋರ್ಟ್ ಬಣ್ಣದ ಮೇಲೆ ಸಂಬಂಧಗಳನ್ನು ಅಳೆಯಬೇಡಿ. ಪಾಸ್ ಪೋರ್ಟ್ ಬಣ್ಣ ಬೇರೆಯದ್ದೇ ಆಗಿರಬಹುದು ಆದರೆ ನಿಮ್ಮ ಪೂರ್ವಜರು ಮತ್ತು ನನ್ನ ಪೂರ್ವಜರು ಒಂದೇ. ಅವರು ಪೂಜಿಸುತ್ತಿದ್ದ ಅದೇ ಪುಣ್ಯ ಭೂಮಿಯನ್ನು ನಾನೂ ಪೂಜಿಸುತ್ತೇನೆ. ಈ ಜೀವನದಲ್ಲಿ ಆತನ ದುರಾದೃಷ್ಟ ಆತ ಭಾರತವನ್ನು ತ್ಯಜಿಸಬೇಕಾಯ್ತು. ನಾನು ಅದೃಷ್ಟವಂತ ನಾನಿನ್ನೂ ಭಾರತದ ಮೂಲ ನಂಟನ್ನು ಉಳಿಸಿಕೊಂಡಿದ್ದೇನೆ. ನಾನು ಸುರಿನಾಮ್ ನ ಜನರನ್ನು ತುಂಬು ಹೃದಯದಿಂದ ಆಲಂಗಿಸಿಕೊಳ್ಳಲು ಬಯಸುತ್ತೇನೆ ಮತ್ತು ನಮ್ಮವರಂತೆ ನಾವು ಬದುಕಬೇಕೆಂದು ಹಂಬಲಿಸುತ್ತೇನೆ. ನಮ್ಮ ನಡುವೆ ಯಾವುದೇ ಅಂತರವೂ ಬರಬಾರದು. ಇತ್ತೀಚೆಗೆ ಇಲ್ಲಿಗೆ ಬಂದ ಜನರು ಹಿಂದಿಯನ್ನು ಮಾತನಾಡಲು ಕಷ್ಟಪಡುತ್ತಿರಬಹುದು ಆದರೆ ಸುರಿನಾಮ್ ನ ಜನರು ಮಾತ್ರ ಹಿಂದಿ ಮಾತನಾಡುವಲ್ಲಿ ಯಾವುದೇ ಕಷ್ಟಪಡುತ್ತಿಲ್ಲ. ಈ ಸಾಮರ್ಥ್ಯವನ್ನು ನಾವು ಗುರುತಿಸಬೇಕಿದೆ.

ಇಡೀ ಯೂರೋಪ್ ನಲ್ಲಿ ನೆದರ್ ಲ್ಯಾಂಡ್ ಅತಿಹೆಚ್ಚು ಭಾರತೀಯರನ್ನು ಹೊಂದಿದ ದೊಡ್ಡ ದೇಶ ಎನಿಸಿಕೊಂಡಿದೆ. ಯೂರೋಪ್ ಅಷ್ಟೇ ಅಲ್ಲ ಕೆರೆಬಿಯನ್ ದೇಶಗಳನ್ನೂ ನಾವು ಗಣನೆಗೆ ತಗೆದುಕೊಳ್ಳಬೇಕು. ಈ ಪ್ರದೇಶದಲ್ಲಿ ಎಲ್ಲ ಭಾರತೀಯರನ್ನು ಸಂಪರ್ಕಿಸಲು ಹೇಗ್ ನಗರವನ್ನು ಶಕ್ತಿವರ್ಧಕ ಸ್ಥಳವನ್ನಾಗಿ ರೂಪುಗೊಳಿಸಬೇಕಿದೆ.

ಇವತ್ತಿನ ದಿನಗಳಲ್ಲಿ ಮೊಬೈಲ್ ಗಳ ಮೂಲಕ ತನ್ನ ಕುಟುಂಬದ ಎಲ್ಲರನ್ನೂ ಸಂಪರ್ಕಿಸುವ ಅವಕಾಶವನ್ನು ತಂತ್ರಜ್ಞಾನ ಕಲ್ಪಿಸಿದೆ. ಒಗ್ಗಟ್ಟಿನಲ್ಲಿ ಬಲವಿದೆ. ನಾನು ನಿನ್ನ ಬಲವನ್ನು ಕಣ್ಣು ತುಂಬಿಕೊಂಡಿದ್ದೇನೆ. ನನ್ನ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ನಿಗದಿಯಾಗತ್ತು. ನೀವು ತಯಾರಿ ನಡೆಸಲೂ ಸಾಕಷ್ಟು ಸಮಯ ಇರಲಿಲ್ಲ. ನಿಮಗೆ ಎರಡು ಅಥವಾ ಮೂರು ದಿನಗಳ ಹಿಂದೆ ಮಾಹಿತಿ ಸಿಕ್ಕಿತ್ತು. ಆದರೆ ಅಷ್ಟು ಸಮಯದಲ್ಲೇ ನೀವು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಸೇರಿಕೊಂಡಿದ್ದೀರಿ.

ಭಾರತ ಸರ್ಕಾರವನ್ನು ಪ್ರತಿನಿಧಿಸುವ ರಾಯಭಾರಿ ಇದ್ದಾರೆ . ಅವರನ್ನು ನಾವು ರಾಯಭಾರಿ ಎನ್ನುತ್ತೇವೆ . ಹಿಂದಿ ಭಾಷೆಯಲ್ಲಿ ರಾಯಭಾರಿಗಳನ್ನು ರಾಜ ದೂತರು ಎನ್ನುತ್ತಾರೆ. ಆದರೆ ಇಲ್ಲಿ ನೀವೆಲ್ಲರೂ ರಾಜದೂತರೇ ಅಂದರೆ ನಮ್ಮ ದೇಶದ ಪ್ರತಿನಿಧಿಗಳು.

ಪ್ರಪಂಚದ ಎಲ್ಲ ಮೂಲೆಯಲ್ಲಿ ಹರಡಿಕೊಂಡಿರುವ ಪ್ರತಿಯೊಬ್ಬನೂ ನಮ್ಮ ಪ್ರತಿನಿಧಿಯೇ. ನಮ್ಮ ದೇಶದ ಘನತೆ ಮತ್ತು ಹಿರಿಮೆಯನ್ನು ವಿಶ್ವವು ಅರ್ಥ ಮಾಡಿಕೊಳ್ಳುವಂತೆ ಆತ ಸಹಕರಿಸುತ್ತಾನೆ. ಇಡೀ ವಿಶ್ವ ಭಾರತ ಒಂದು ಅಪೂರ್ವ ದೇಶ ಎನ್ನುವುದನ್ನು ಅರ್ಥ ಮಾಡಿಕೊಂಡಿದೆ. ಭಾರತದಷ್ಟು ಹೆಮ್ಮೆಯ ನೆಲ ವಿಶ್ವದಲ್ಲಿ ಇನ್ನೊಂದಿಲ್ಲ ಎನ್ನುವುದನ್ನು ವಿಶ್ವ ದ ಎಲ್ಲ ಭಾಗವೂ ಅರಿತುಕೊಂಡಿದೆ. ಭಾರತದಲ್ಲಿ ಅತಿ ಸಣ್ಣ ಧರ್ಮ ಅಥವಾ ನಂಬಿಕೆಗಳಿದ್ದರೂ ಎಲ್ಲವನ್ನೂ ಪ್ರತಿನಿಧಿಸುತ್ತಾ ಭಾರತದ ಜನತೆ ಅದೆಷ್ಟು ಅನ್ಯೋನ್ಯತೆಯಿಂದ ಬದುಕುತ್ತಾರೆ ಎನ್ನುವುದನ್ನು ಕಂಡು ವಿಶ್ವದ ಜನತೆ ಅಚ್ಚರಿಗೊಂಡಿದ್ದಾರೆ.

ಭಾರತದಲ್ಲಿ 100ಕ್ಕೂ ಹೆಚ್ಚು ಭಾಷೆಗಳಿವೆ ಮತ್ತು 1700ಕ್ಕೂ ಹೆಚ್ಚು ಉಪ ಭಾಷೆಗಳಿವೆ ಎಂದು ವಿಶ್ವಕ್ಕೆ ತಿಳಿದಾಗ ವಿಶ್ವದ ಜನತೆ ಆಶ್ಚರ್ಯ ಪಟ್ಟಿದ್ದರು. ಯೂರೋಪ್ ರಾಷ್ಟ್ರಗಳ ಬದಲಾವಣೆಯಿಂದ ನಾವು ಭಾಷೆಯ ಸಮಸ್ಯೆಯನ್ನು ಎದುರಿಸುತ್ತೇವೆ. ನೀವು 100 ಭಾಷೆಗಳನ್ನು ಹೊಂದಿದ್ದೀರಿ. ಹೇಗೆ ನೀವೆಲ್ಲರೂ ಹೊಂದಿಕೊಂಡು ಬಾಳುತ್ತೀರಿ ಎಂದು ಹೇಳುತ್ತಾರೆ. ನಮ್ಮ ಮಾತೃಭೂಮಿ ಬಗ್ಗೆ ನಮಗಿರುವ ಪ್ರೀತಿ ನಮ್ಮನ್ನು ಒಂದಾಗಿ ಬಾಳುವಂತೆ ಮಾಡಿದೆ. ತ್ಯಾಗ ಮತ್ತು ತಪಸ್ಸಿನ ಮೇಲೆ ನಮ್ಮ ಪ್ರೀತಿಯಿದೆ. ಇತಿಹಾಸ, ಸಂಸ್ಕೃತಿ ಬಗ್ಗೆ ನಮಗೆ ಪ್ರೀತಿ ಇದೆ. ಹೀಗಾಗಿ ಪ್ರತಿಯೊಬ್ಬ ಭಾರತೀಯನೂ ನನ್ನ ದೇಶ ವಿವಿಧತೆಗಳಲ್ಲಿ ಏಕತೆಯನ್ನು ಹೊಂದಿರುವ ದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಯಾವ ವ್ಯಕ್ತಿ ವಿಶ್ವದಲ್ಲಿ ಅನುಭವಿಸುತ್ತಾನೋ ಅದನ್ನು ನನ್ನ ದೇಶದಲ್ಲಿ ನೀವು ಸಹಜವಾಗಿಯೇ ಅನುಭವಿಸುತ್ತೀರಿ.

ನಾನು ಯಾವುದೇ ದೇಶದ ನಾಯಕರನ್ನು ಭೇಟಿ ಮಾಡಿದಾಗಲೂ ನಾನು 1.25 ಬಿಲಿಯ ಜನರ ಸರ್ಕಾರದ ಪ್ರಧಾನಮಂತ್ರಿ ಎಂದು ಹೇಳಿಕೊಳ್ಳುತ್ತೇನೆ. ಅವರು ನನ್ನನ್ನು ಅತ್ಯಾಶ್ಚರ್ಯದಿಂದ ನೋಡುತ್ತಾರೆ. ನಾವು ನಮ್ಮ ಸಣ್ಣ ರಾಷ್ಟ್ರವನ್ನು ಮುನ್ನಡೆಸುವಾಗ ಸಾಕಷ್ಟು ಸವಾಲುಗಳನ್ನು ಎದುರಿಸುತ್ತೇವೆ. ನೀವು ಹೇಗೆ ಇದನ್ನೆಲ್ಲಾ ನಿಭಾಯಿಸುತ್ತೀರಿ ಎಂದು ಕೇಳುತ್ತಾರೆ. ನೀವು ನಿಮ್ಮ ದೇಶವನ್ನು ಮುನ್ನಡೆಸುತ್ತೀರಿ ಆದರೆ ಭಾರತದಲ್ಲಿ 1.25 ಬಿಲಿಯ ಜನರೂ ನಮ್ಮ ಸರ್ಕಾರವನ್ನು ಮುನ್ನಡೆಸುತ್ತಾರೆ ಎಂದು ಅವರಿಗೆ ಹೇಳುತ್ತೇನೆ. ಇದು ಪ್ರಜಾಪ್ರಭುತ್ವದ ಶಕ್ತಿ.

ಭಾರತದಲ್ಲಿ, ಅದರಲ್ಲೂ ನನಗೆ ಸರ್ಕಾರದಲ್ಲಿ ದೇಶ ಸೇವೆಯನ್ನು ಮಾಡಲು ಅವಕಾಶ ಸಿಕ್ಕ ನಂತರ, ಜನರ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ದೊಡ್ಡ ಮಟ್ಟದ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ದೇಶದ ಎಲ್ಲಾ ವಿಭಾಗಗಳಲ್ಲೂ ಜನರ ಪಾಲ್ಗೊಳ್ಳುವಿಕೆಗೆ ಆದ್ಯತೆಯನ್ನು ನೀಡಿದ್ದೇವೆ. ಸರ್ಕಾರವೇ ಎಲ್ಲವನ್ನೂ ಮಾಡುತ್ತದೆ ಎನ್ನುವ ಆಲೋಚನೆಯಿಂದ ಹೊರ ಬರುವಂತೆ ಮಾಡಿದ್ದೇವೆ. ಸರ್ಕಾರ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇದು ಸರ್ಕಾರಕ್ಕೆ ದೇವರು ಕೊಟ್ಟ ವಿವೇಕ. ಜನರ ಪಾಲ್ಗೊಳ್ಳುವಿಕೆ ಮೂಲಕ ದೇಶವನ್ನು ವೇಗವಾಗಿ ಅಭಿವೃದ್ಧಿ ಪಡಿಸುವುದಕ್ಕೆ ನಾವು ಸರ್ವ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

ಸರ್ಕಾರ ಶೌಚಾಲಯಗಳನ್ನು ನಿರ್ಮಿಸಲು ನಿರ್ಧರಿಸಿದರೆ ಜನರು ಬಯಲಿನಲ್ಲಿ ಶೌಚ ಮಾಡುವುದನ್ನು ನಿಲ್ಲಿಸುತ್ತಾರೆ. ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ನಾವು ಶೌಚಾಲಯಗಳನ್ನು ನಿರ್ಮಿಸಿದೆವು. ಇಂತಹ ಕಾರ್ಯಕ್ರಮಗಳು ಹಿಂದೆಯೂ ಇದ್ದವು. ಆದರೆ ಅವು ಸರ್ಕಾರದಿಂದ ನಡೆಯುತ್ತಿದ್ದವು. ಆದರೆ ಜನರು ಈ ಕಾರ್ಯಕ್ರಮ ಕೈಗೊಳ್ಳಲು ನಾವು ಪ್ರೇರೇಪಿಸಿದೆವು. ನನಗೆ ಸಂತೋಷವಾಗುತ್ತದೆ. ಶಾಲೆಗಳಲ್ಲಿ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ಒಂದೇ ವರ್ಷದಲ್ಲಿ ನಿರ್ಮಿಸಲಾಯ್ತು. ನನ್ನ ಈ ಮಾತಿನ ಅರ್ಥವೇನೆಂದರೆ ಹೊಸ ಸರ್ಕಾರ ತನ್ನ ಎಲ್ಲ ಕಾರ್ಯಕ್ರಮಗಳಲ್ಲೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಆದ್ಯತೆಯನ್ನು ನೀಡಿದೆ. ಮೊದಲು ಏನಾಗುತ್ತಿತ್ತು ಎಂದರೆ, ಪ್ರಜಾಪ್ರಭುತ್ವ ಎನ್ನುವುದು ಐದು ವರ್ಷಗಳಿಗೆ ಒಮ್ಮೆ ಇವಿಎಂ ಮೆಷಿನ್ ಗಳ ಬಟನ್ ಒತ್ತುವುದು. ಐದು ವರ್ಷಗಳಿಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸಿ ಅವರಿಗೆ ಇಷ್ಟ ಬಂದಂತೆ ಸರ್ಕಾರ ನಡೆಸುವ ಗುತ್ತಿಗೆಯನ್ನು ಅವರಿಗೆ ನೀಡಿದಂತೆ ಎಂದು ಅರ್ಥೈಸಿಕೊಳ್ಳಲಾಗುತ್ತಿತ್ತು. ನೀವು ಈ ಹತ್ತು ಕೆಲಸಗಳನ್ನು ಮಾಡಬೇಕು. ಇಲ್ಲದೇ ಹೋದರೆ ಮುಂದಿನ ಐದು ವರ್ಷಕ್ಕೆ ಹೊಸಬರನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಲಾಗುತ್ತಿತ್ತು. ಆದರೆ ಇದು ಪ್ರಜಾಪ್ರಭುತ್ವದ ಮೂಲ ಕಲ್ಪನೆಯಲ್ಲ. ಇದು ಪ್ರಜಾಪ್ರಭುತ್ವದ ಆಯಾಮಗಳನ್ನೇ ನಿಯಂತ್ರಿಸುತ್ತದೆ. ಜನ ಮತ ಹಾಕುತ್ತಾರೆ, ಸರ್ಕಾರ ಆಯ್ಕೆಗೊಳ್ಳುತ್ತವೆ. ಆದರೆ ಸರ್ಕಾರ ಜನರ ಪಾಲ್ಗೊಳ್ಳುವಿಕೆಯ ಮೂಲಕವೇ ನಡೆಯಬೇಕು.

ಯಾವತ್ತೇ ಪ್ರಕೃತಿ ವಿಕೋಪಗಳು ಬಂದಾಗ ನಾವು ಸರ್ಕಾರಿ ಆಡಳಿತ ಯಂತ್ರದ ಕೊರತೆಯನ್ನು ಕಾಣುತ್ತೇವೆ. ಆದರೆ ಜನತೆ, ಸಾರ್ವಜನಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಮುಂದೆ ಬಂದು ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರದ ಪೊಟ್ಟಣಗಳನ್ನು ಒದಗಿಸುತ್ತವೆ. ಎಲ್ಲರೂ ಕೈಜೋಡಿಸಿದರೆ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಬಹುಬೇಗ ನೆರವಿಗೆ ಧಾವಿಸಬಹುದು. ಏಕೆಂದರೆ ಇದು ಜನರ ಶಕ್ತಿ. ಹೀಗಾಗಿ ಎಲ್ಲ ಭಾಗಗಳಲ್ಲೂ ಜನರ ಪಾಲ್ಗೊಳ್ಳುವಿಕೆಯನ್ನು ಈ ಸರ್ಕಾರ ಉತ್ತೇಜಿಸುತ್ತಿದೆ. ಭಾರತ ಒಕ್ಕೂಟ ವ್ಯವಸ್ಥೆಯನ್ನು ಹೊಂದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತವೆ. ಒಕ್ಕೂಟ ವ್ಯವಸ್ಥೆಯನ್ನು ಪ್ರೋತ್ಸಾಹಿಸುವಲ್ಲಿ ನಮ್ಮ ಸರ್ಕಾರ ಒತ್ತು ಕೊಟ್ಟಿದೆ.

ಅಭಿವೃದ್ಧಿ ಜತೆಗೆ ಉತ್ತಮ ಆಡಳಿತವೂ ಹೊಂದಿಕೊಂಡರೆ ಮಾತ್ರ ಜನರ ನಿರೀಕ್ಷೆಗಳನ್ನು ಈಡೇರಿಸಬಹುದು ಎಂಬ ನಂಬಿಕೆ ನನ್ನದು. ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಹೊಂದಿಕೆಯಾದರೆ ಮಾತ್ರ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ಉತ್ತಮ ಬಸ್ ನಿಲ್ದಾಣ ನಿರ್ಮಿಸುವುದು ಅಭಿವೃದ್ಧಿ, ಆದರೆ ಬಸ್ ಗಳು ಸರಿಯಾದ ಸಮಯಕ್ಕೆ ಬಂದರೆ, ಬಸ್ಸುಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡರೆ, ಚಾಲಕ ಮತ್ತು ನಿರ್ವಾಹಕನ ನಡತೆ ಮತ್ತು ನಡವಳಿಕೆ ಸರಿ ಇದ್ದರೆ ಮಾತ್ರ ಉತ್ತಮ ಆಡಳಿತ ಎನಿಸಿಕೊಳ್ಳುತ್ತದೆ. ಆಗ ಮಾತ್ರ ಸಾಮಾನ್ಯ ಮನುಷ್ಯ ಸಂತೃಪ್ತಿ ಅನುಭವಿಸುತ್ತಾನೆ. ಹೌದು ಇದು ನನ್ನ ಸರ್ಕಾರ, ನನ್ನ ದೇಶ, ನನ್ನ ಸಂಪತ್ತು ಎನ್ನುವ ತೃಪ್ತಿ ಅವನಲ್ಲಿ ಮೂಡುತ್ತದೆ. ಈ ಸರ್ಕಾರ ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ದೇಶವನ್ನು ಮುನ್ನಡೆಸಲು ಇದರಿಂದ ಮಾತ್ರವೆ ಸಾಧ್ಯವಿದೆ.

ಎರಡು ವರ್ಷಗಳ ಹಿಂದೆ ನಮ್ಮ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಒಂದೇ ಸುದ್ದಿ ಕೇಳಿ ಬರುತ್ತಿತ್ತು. ಬೇಳೆ ಕಾಳುಗಳ ಬೆಲೆ ಏರಿಕೆಯ ಸುದ್ದಿಯನ್ನು ಟಿವಿಗಳು ಬಿತ್ತರಿಸುತ್ತಿದ್ದವು. ಬೇಳೆಕಾಳುಗಳು ತುಂಬಾ ದುಬಾರಿಯಾಗಿದ್ದವು. ಯಾರು ಎಲ್ಲೇ ಹೋದರೂ ಒಂದೇ ವಿಚಾರವನ್ನು ಚರ್ಚಿಸುತ್ತಿದ್ದರು. ಮೋದೀಜಿ ಬೇಳೆ ಕಾಳುಗಳ ದರ ಏಕೆ ಇಳಿಯುತ್ತಿಲ್ಲ ಹೇಳಿ ಎಂದು ಕೇಳುತ್ತಿದ್ದರು. ಯಾರು ಎಲ್ಲೇ ಹೋದರೂ ಇದೇ ಚರ್ಚೆಯಾಗುತ್ತಿತ್ತು.

ಈಗ ಬೇಳೆಕಾಳುಗಳ ಬೆಲೆ ಕಡಿಮೆಯಾಗಿದೆ. ಯಾರೂ ಇದು ಹೇಗೆ ಸಾಧ್ಯವಾಯಿತು ಎಂದು ಕೇಳುತ್ತಿಲ್ಲ. ನಾನು ನನ್ನ ದೇಶದ ಜನರಿಗೆ ಹೆಚ್ಚು ಬೇಳೆಕಾಳುಗಳನ್ನು ಬಿತ್ತನೆ ಮಾಡಲು ಮನವಿ ಮಾಡಿದ್ದೆ. ನಿಮಗೆ ಹೆಚ್ಚಿನ ಕೃಷಿ ಪ್ರದೇಶದ ಅಗತ್ಯ ಇಲ್ಲ. ಇತರೆ ಬೆಳೆಗಳ ನಡುವೆಯೇ ಕಾಳುಗಳನ್ನೂ ಬೆಳೆಯಿರಿ ಅದು ಹೆಚ್ಚು ಆದಾಯ ಎಂದು ಕೇಳಿಕೊಂಡಿದ್ದೆ. ನನ್ನ ದೇಶದ ರೈತಾಪಿ ಜನರು ಹೇರಳವಾಗಿ ಬೇಳೆಕಾಳುಗಳನ್ನು ಬೆಳೆದು ತೋರಿಸಿದರು. ಅದು ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಲು ಕಾರಣವಾಯಿತು. ಮಧ್ಯಮ ವರ್ಗದ ಜನರು ಹೆಚ್ಚು ಬೇಳೆಗಳನ್ನು ಸೇವಿಸಿದರೆ ಹೆಚ್ಚು ಪ್ರೋಟೀನ್ ಪಡೆಯುತ್ತಾರೆ. ಇದು ದೇಹದ ಬಲವನ್ನು ಹೆಚ್ಚಿಸುತ್ತದೆ. ದೇಹಕ್ಕೆ ಹಲವು ಪೌಷ್ಠಿಕಾಂಶಗಳು ಲಭಿಸುತ್ತವೆ. ಇದು ಸರ್ಕಾರಕ್ಕಿಂತಲೂ ಮಿಗಿಲಾದ ಕೆಲಸ. ಜನರ ಶಕ್ತಿಯು ಇಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿತ್ತು.

ಭಾರತದಲ್ಲಿ ಮಹಿಳೆಯರು ಗೃಹಿಣಿ ಮಾತ್ರ. ಅಂದರೆ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುವವರು ಎನ್ನುವ ನಂಬಿಕೆ ಇದೆ. ಅವರು ಅಡುಗೆ ಮನೆಯಲ್ಲಿ ಉಳಿಯುವುದನ್ನು ಬಿಟ್ಟು ಬೇರೆನನ್ನೂ ಮಾಡುವುದಿಲ್ಲ ಅನ್ನೋ ಮಾತಿದೆ. ಇದು ಅಕ್ಷರಷಃ ಮಿಥ್ಯೆ; ಆದರೆ ಸತ್ಯ ಬೇರೆಯೇ ಇದೆ. ಇವತ್ತಿಗೂ ಭಾರತದ ಪಶು ಸಂಗೋಪನೆ, ಡೈರಿ, ಹಾಲು ಎಲ್ಲವೂ ದೊಡ್ಡ ಮಟ್ಟದಲ್ಲಿ ಮಹಿಳೆಯರಿಂದಲೇ ನಿರ್ವಹಣೆಯಾಗುತ್ತಿದೆ. ಪುರುಷರದ್ದು ಇದರಲ್ಲಿ ಸಣ್ಣ ಮಟ್ಟದ ಪಾತ್ರವಿದೆ. ಕೃಷಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿದೆ. ದೈಹಿಕವಾಗಿ ಅವರು ಹೆಚ್ಚು ಶ್ರಮ ಹಾಕುತ್ತಾರೆ. ಆದರೆ ನಮ್ಮ ಸಾಮಾಜಿಕ ರಚನೆಯು ಅದನ್ನು ಹಣದ ಸ್ವರೂಪದಲ್ಲಿ ಅಳೆಯುತ್ತಿಲ್ಲ. ಅಂದರೆ ಇದರ ಅರ್ಥ ಮಹಿಳೆಯರು ಭಾರತದ ಆರ್ಥಿಕ ಅಭಿವೃದ್ಧಿಯ ಬೆಳವಣಿಗೆಯ ಯಾತ್ರೆಯಲ್ಲಿ ಪಾತ್ರ ವಹಿಸಿಲ್ಲ ಎಂದಲ್ಲ. ಮಹಿಳೆಯರು ತಮ್ಮದೇ ಪಾತ್ರ ವಹಿಸಿದ್ದಾರೆ. ಅವರೂ ಸಾಮರ್ಥ್ಯ ಹೊಂದಿದ್ದಾರೆ. ಈ ಕಾರಣಕ್ಕೆ ನಮ್ಮ ಸರ್ಕಾರ ಭಾರತದ ಜನ ಸಂಖ್ಯೆಯ ಅರ್ಧದಷ್ಟು ಇರುವ ಈ ಶಕ್ತಿಯನ್ನು ಭಾರತದ ಅಭಿವೃದ್ಧಿ ಯಾತ್ರೆಯ ಭಾಗವನ್ನಾಗಿ ಮಾಡಿಕೊಳ್ಳುತ್ತಿದೆ.

ಇದು ಕೇವಲ ಮಹಿಳಾ ಕಲ್ಯಾಣವಲ್ಲ, ಇದು ಮಹಿಳಾ ಮುಂದಾಳತ್ವದ ಅಭಿವೃದ್ಧಿ. ನಾವು ಪ್ರಧಾನಮಂತ್ರಿ ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಅಭಿಯಾನ ಆರಂಭಿಸಿದಾಗ ದೇಶದ ಶೇಕಡಾ 40ರಷ್ಟು ಜನತೆ ಬ್ಯಾಂಕ್ ಆವರಣಕ್ಕೂ ತಮ್ಮ ಹೆಜ್ಜೆಯನ್ನು ಇಟ್ಟಿರಲಿಲ್ಲ. ಅವರು ಸಾಮಾನ್ಯ ಆರ್ಥಿಕತೆಯ ಹೊರಗೇ ಉಳಿದಿದ್ದರು. ನಾವು ಬ್ಯಾಂಕ್ ಖಾತೆಗಳನ್ನು ತೆರೆಯುವ ಅಭಿಯಾನ ಆರಂಭಿಸಿದ ನಂತರ ತೆರೆಯಲಾದ ಖಾತೆಗಳ ಪೈಕಿ ಬಹುತೇಕ ಮಹಿಳೆಯರ ಖಾತೆಗಳು ಎನ್ನುವುದನ್ನು ಹೇಳುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ. ಮಹಿಳೆಯರು ನಾವೂ ಆರ್ಥಿಕ ವ್ಯವಸ್ಥೆಯ ಅಂಗ ಎನ್ನುವುದನ್ನು ಅನುಭವಿಸಲು ಮುಂದಾದರು.

ಇತ್ತೀಚೆಗೆ ನಾವು ಉದ್ದಿಮೆದಾರಿಕೆಯನ್ನು ಉತ್ತೇಜಿಸಲು ಮುದ್ರಾ ಯೋಜನೆಯನ್ನು ಆರಂಭಿಸಿದೆವು. ನಮ್ಮ ಯುವಕರು ಉದ್ಯೋಗಾಕಾಂಕ್ಷಿಗಳಾಗದೇ ಉದ್ಯೋಗದಾತರಾಗಬೇಕು ಎನ್ನುವುದು ನಮ್ಮಉದ್ದೇಶ ವಾಗಿತ್ತು ಸಣ್ಣ ವ್ಯವಹಾರ ಮಾಡುವಾಗಲೂ ಒಬ್ಬರು ಅಥವಾ ಇಬ್ಬರನ್ನು ಕೆಲಸಕ್ಕೆ ತಗೆದುಕೊಳ್ಳುತ್ತಾರೆ. ಅವರಿಗೆ ಉದ್ಯೋಗ ನೀಡುತ್ತಾರೆ. ಹೀಗಾಗಿ ಸಣ್ಣ ಉದ್ದಿಮೆಗಳನ್ನು ಉತ್ತೇಜಿಸಲು ಮುದ್ರಾ ಯೋಜನೆ ಎನ್ನುವ ಮಹತ್ತರವಾದ ಯೋಜನೆಯನ್ನು ಆರಂಭಮಾಡಿದೆವು.

ಈ ಮುದ್ರಾ ಯೋಜನೆ ಹೇಗಿದೆ ಎಂದರೆ ನಾಗರಿಕನೊಬ್ಬ ಬ್ಯಾಂಕಿಗೆ ಬಂದು ಅವನ ಎಲ್ಲ ಮಾಹಿತಿಗಳನ್ನು ನೀಡಿದರೆ ಯಾವುದೇ ಗ್ಯಾರೆಂಟಿ ಇಲ್ಲದೇ 50,000ದಿಂದ 10 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಬಹುದಾಗಿದೆ. ಈಗಾಗಲೇ ಏಳು ಕೋಟಿ ಜನರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಏಳು ಕೋಟಿ ಜನರಿಗೆ 3 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲವನ್ನು ಈ ಯೋಜನೆ ಅಡಿಯಲ್ಲಿ ವಿತರಿಸಲಾಗಿದೆ. ಕೆಲವರು 50 ಸಾವಿರ ರೂಪಾಯಿಗಳನ್ನು ಪಡೆದುಕೊಂಡಿದ್ದರೆ, ಇನ್ನೂ ಕೆಲವರು 55,000 ರೂಪಾಯಿ, ಮತ್ತೆ ಕೆಲವರು 80 ಸಾವಿರ ರೂಪಾಯಿ ಮತ್ತು ಹಲವರು 10 ಲಕ್ಷ ರೂಆಯಿಗಳ ಸಾಲವನ್ನು ಪಡೆದುಕೊಂಡಿದ್ದಾರೆ. ನೀವು ಒಂದು ಸಂಗತಿಯನ್ನು ಕೇಳಿದರೆ ಅತ್ಯಂತ ಸಂತಸ ಪಡುತ್ತೀರಿ. ಅದೇನೆಂದರೆ ಈ ಯೋಜನೆಯ ಲಾಭ ಪಡೆದುಕೊಂಡ ಜನರಲ್ಲಿ ಶೇಕಡಾ 70ಕ್ಕೂ ಹೆಚ್ಚು ಮಂದಿ ಮಹಿಳೆಯರು. ಇದು ಮಹಿಳಾ ಸಬಲೀಕರಣ ಮತ್ತು ನಾರಿ ಕೇಂದ್ರಿತ ಅಭಿವೃದ್ಧಿ.

ಇವತ್ತು ಎಲ್ಲೆಡೆ ಅಭಿವೃದ್ಧಿ ರಾಷ್ಟ್ರಗಳೆಂದು ಕರೆಸಿಕೊಳ್ಳುವ ದೇಶಗಳಲ್ಲೂ ಹೆರಿಗೆ ರಜೆಯು 12 ವಾರಗಳಿಷ್ಟಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ದುಡಿಯುತ್ತಿರುವ ಮಹಿಳೆಗೆ ಹೆರಿಗೆ ರಜೆಯು 12 ತಿಂಗಳಷ್ಟಿದೆ. ಭಾರತವು ಸಂಸತ್ತಿನಲ್ಲಿ ಕಾನೂನೊಂದನ್ನು ತಂದು ದುಡಿಯುವ ಮಹಿಳೆಗೆ 26 ತಿಂಗಳ ಹೆರಿಗೆ ರಜೆಯನ್ನು ನೀಡುತ್ತಿದ್ದೇವೆ. ನಾವು ದೇಶದ ಭವಿಷ್ಯವನ್ನು ಆಲೋಚಿಸುತ್ತಿದ್ದೇವೆ. ಆಕೆ ಕೆಲಸಕ್ಕೆ 6 ತಿಂಗಳು ಹಾಜರಾಗಿದ್ದರೆ ವೇತನ ಪಡೆಯುತ್ತಿದ್ದಳು ಎಂದು ಕೆಲವರು ಆಲೋಚಿಸಬಹುದು. ಆದರೆ ಇನ್ನೂ ಕೆಲವರು ಆಕೆ ಆರು ತಿಂಗಳ ಕಾಲ ದೇಶದ ಮುಂದಿನ ಭವಿಷ್ಯವಾಗಿರುವ ಮಗುವನ್ನು ಆರೈಕೆ ಮಾಡುತ್ತಾಳೆ ಎಂದು ಭಾವಿಸುತ್ತಾರೆ. ಇದು ಬಂಡವಾಳ. ಕೆಲಸದಿಂದ ದೂರವಿಟ್ಟು ಆರು ತಿಂಗಳ ಕಾಲ ವೇತನ ಕೊಡುತ್ತೇವೆ ಎಂದರೆ ಆಕೆಗೆ ಏನೋ ಅನುಕೂಲ ಮಾಡಿಕೊಡುತ್ತಿದ್ದೇವೆ ಎಂದಲ್ಲ. ನೀವು ಭವಿಷ್ಯವನ್ನು ನೋಡಿದರೆ ಆಕೆಯ ಮಗುವು ಆರಂಭದ ಆರು ತಿಂಗಳಲ್ಲಿ ಉತ್ತಮ ಆರೈಕೆಯನ್ನು ಪಡೆದುಕೊಳ್ಳುತ್ತದೆ. ಈ ಆರು ತಿಂಗಳು ನಮ್ಮ ಭವಿಷ್ಯ ವನ್ನು ಇನ್ನಷ್ಟು ಸುಭದ್ರಗೊಳಿಸುತ್ತದೆ. ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.
26ನೇ ಜನವರಿಯ ಗಣರಾಜ್ಯೋತ್ಸವಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಶ್ರೀ ಬರಾಕ್ ಒಬಾಮಾ ಅವರು ಅತಿಥಿಯಾಗಿ ಆಗಮಿಸಿದ್ದರು. ಆಗ ಅವರು ನಮ್ಮ ಮೂರು ಸೇನೆಗಳ ಗೌರವವಂದನೆಯನ್ನು ಸ್ವೀಕರಿಸಿದ್ದರು. ಭೂಸೇನೆ, ನೌಕಾ ಸೇನೆ ಮತ್ತು ವಾಯು ಸೇನೆ. ಈ ಮೂರೂ ಪಡೆಗಳನ್ನು ಮಹಿಳಾ ಬೆಟಾಲಿಯನ್ ಗಳು ಮುನ್ನಡೆಸಿದ್ದರು. ಮಹಿಳೆಯರು ಸೇನೆಯನ್ನು ಮುನ್ನಡೆಸಿದ್ದರು. ಅಮೆರಿಕ ಅಧ್ಯಕ್ಷರು ವೇದಿಕೆಯಿಂದ ಇಳಿದುಬಂದು ನನ್ನ ಜತೆ ಮಾತನಾಡುತ್ತಾ ಮೋದಿಜೀ ಭಾರತ ಇಂಥ ವಿಶಿಷ್ಟವಾದುದನ್ನೂ ಮಾಡುತ್ತದೆ ಎಂಬುದನ್ನು ನೋಡಿ ನನಗೆ ಆಶ್ಚರ್ಯವಾಯಿತು ಎಂದಿದ್ದರು.

ನಾನು ಅದಕ್ಕೆ ಪ್ರತಿಕ್ರಿಯೆ ನೀಡಿ, ಇದು ಆರಂಭ ಮಾತ್ರ ,ನಾಳೆವರೆಗೆ ಕಾಯಿರಿ. ಜನವರಿ 26ರಂದು ಪಥಸಂಚಲನ ನಡೆಯಲಿ. . ಮಹಿಳೆಯರು ಪಥಸಂಚನಲದ ಪಡೆಗಳನ್ನು ಮುನ್ನಡೆಸಿದರು ಎನ್ನುವ ದೊಡ್ಡ ಸುದ್ದಿ ಇಡೀ ವಿಶ್ವಕ್ಕೆ ಸಿಗುತ್ತದೆ. ನಮ್ಮ ದೇಶದ ಮಹಿಳೆಯರು ರಕ್ಷಣೆ ಕ್ಷೇತ್ರದಲ್ಲಿ ದೊಡ್ಡ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದ್ದೆ.

ನೀವು ದೆಹಲಿಗೆ ಹೋಗಿ ಅಥವಾ ದೇಶದ ಇನ್ನಾವುದೇ ರಾಜ್ಯಕ್ಕೆ ಹೋಗಿ ಆ ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿ ಶೇಕಡಾ 33ರಷ್ಟು ಹುದ್ದೆಗಳು ಮಹಿಳೆಯರಿಗೆ ಮೀಸಲಿರುತ್ತವೆ. ಈ ಸ್ವಾವಲಂಬಿ ಮಹಿಳೆಯರು ನಮ್ಮ ಭದ್ರತೆಯ ಹೊಣೆಯನ್ನು ಹೊತ್ತಿದ್ದಾರೆ. ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನೀವು ಆ ಮಹಿಳೆಯರು ಯುದ್ಧ ವಿಮಾನಗಳನ್ನು ಓಡಿಸುವುದನ್ನು ಕಂಡಿರಬಹುದು. ನಮ್ಮ ಮಹಿಳೆಯರು ಯುದ್ಧ ವಿಮಾನಗಳನ್ನು ಹಾರಿಸುತ್ತಾರೆ. ಇವತ್ತು ವಿಶ್ವದಲ್ಲಿ ಈ ವಿಚಾರ ಚರ್ಚೆಯಾಗುತ್ತಿದೆ.

ಇಡೀ ವಿಶ್ವದಲ್ಲಿ ಇವತ್ತು ಭಾರತವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ದೊಡ್ಡ ಹೆಸರು ಸಂಪಾದಿಸುತ್ತಿದೆ. ಕಳೆದ ವಾರದ ಹಿಂದೆಯಷ್ಟೇ 30 ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯ್ತು. ಇದಕ್ಕೂ ಮುನ್ನ ನಮ್ಮ ವಿಜ್ಞಾನಿಗಳು ಒಂದೇ ಬಾರಿಗೆ 104 ಉಪಗ್ರಹಗಳನ್ನು ಉಡಾಯಿಸಿ ವಿಶ್ವ ದಾಖಲೆಯನ್ನು ಮಾಡಿದ್ದರು. ಕಳೆದ ತಿಂಗಳು ಅತಿ ಭಾರದ ಉಪಗ್ರಹವನ್ನು ಉಡಾವಣೆ ಮಾಡಲಾಯ್ತು. ಅದರ ತೂಕವೆಷ್ಟು ಗೊತ್ತಾ? ಪತ್ರಿಕೆಗಳೇ ಬರೆದಿದ್ದಂತೆ ಹಲವು ಆನೆಗಳ ತೂಕಕ್ಕೆ ಈ ಉಪಗ್ರಹ ಸಮನಾಗಿತ್ತು. ಆ ಯೋಜನೆಯಲ್ಲಿ ಮೂವರು ಪ್ರಮುಖ ಮಹಿಳಾ ವಿಜ್ಞಾನಿಗಳು ಶ್ರಮಿಸಿದ್ದರು ಎನ್ನುವುದನ್ನು ತಿಳಿದರೆ ನೀವು ಸಂತಸಪಡುತ್ತೀರಿ. ನಮ್ಮ ದೇಶದ ತಾಯಂದಿರು ಮತ್ತು ಸೋದರಿಯರ ಶಕ್ತಿಯ ಬಗ್ಗೆ ಯಾರು ತಾನೆ ಹೆಮ್ಮೆ ಪಡಲಾರರು ನೀವೇ ಹೇಳಿ.

ಅದು ವಿಜ್ಞಾನ ಕ್ಷೇತ್ರವೇ ಆಗಿರಲಿ, ಅದು ಶಿಕ್ಷಣ ಕ್ಷೇತ್ರವೇ ಆಗಿರಲಿ, ಅಥವಾ ಆರೋಗ್ಯ ಕ್ಷೇತ್ರವೇ ಆಗಿರಲಿ, ಇತ್ತೀಚಿನ ದಿನಗಳಲ್ಲಿ ನೀವು ಎಲ್ಲೇ ಶಿಕ್ಷಕರ ಸಮ್ಮೇಳನವನ್ನು ಆಯೋಜಿಸಿ, ದೇಶದ ಯಾವುದೇ ರಾಜ್ಯಗಳಲ್ಲಿ ಏರ್ಪಡಿಸಿ ಅಲ್ಲೆಲ್ಲಾ ಒಂದೊಂದು ಮೂಲೆಯನ್ನು ಮಹಿಳಾ ಬೋಧಕಿಯರಿಗೆ ಮೀಸಲಿಡಬೇಕಾಗುತ್ತದೆ. ಇವತ್ತು ನಮ್ಮ ದೇಶದ ಶಿಕ್ಷಣ ಕ್ಷೇತ್ರವು ತಾಯಂದಿರು ಮತ್ತು ಸೋದರಿಯರಿಂದ ನಿರ್ವಹಿಸಲ್ಪಡುತ್ತಿದೆ. ಅದು ಕ್ರೀಡೆಯೇ ಇರಲಿ, ಶುಶ್ರೂಷಕಿಯರ ಕ್ಷೇತ್ರವಿರಲಿ, ಪ್ಯಾರಾ ಮೆಡಿಕಲ್ ಕ್ಷೇತ್ರವಾಗಲಿ, ವೈದ್ಯಕೀಯವೇ ಇರಲಿ ಆ ಕ್ಷೇತ್ರದಲ್ಲಿ ಮಹಿಳೆಯರು ದುಡಿಯುತ್ತಿರುವುದನ್ನು ಕಾಣುತ್ತೀರಿ. ನನ್ನ ಮಾತಿನ ಅರ್ಥ ಅಲ್ಲಿ ಮಹಿಳಾ ಶಕ್ತಿಯನ್ನು ನಾವು ಕಾಣುತ್ತೇವೆ. ಒಲಂಪಿಕ್ಸ್ ಕ್ರೀಡೆಯಲ್ಲಿ ನಮ್ಮ ಹೆಣ್ಣು ಮಕ್ಕಳು ಪದಕ ಗೆದ್ದು ತಂದರು. ಪದಕ ಗೆದ್ದು ತರು ಮೂಲಕ ದೇಶಕ್ಕೂ ಕೀರ್ತಿಯನ್ನು ತಂದುಕೊಟ್ಟರು. ಇದೊದೇ ಅಲ್ಲಾ ದೈಹಿಕ ವಿಕಲಚೇತನರ ಪ್ಯಾರಾ ಒಲಂಪಿಕ್ಸ್ ನಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸುವಂತೆ ನಮ್ಮ ಮಹಿಳೆಯರು ಸಾಧನೆ ಮಾಡಿದ್ದಾರೆ.

ದೆಹಲಿಯಲ್ಲಿರುವ ನಮ್ಮ ಸರ್ಕಾರ ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಹೇಗೆ ಸ್ವಾವಲಂಬಿ ಮಾಡಬೇಕು ಎಂದು ಮನಸ್ಸು ಮತ್ತು ಮೆದುಳಿನಲ್ಲಿ ಆಲೋಚನೆ ಮಾಡುತ್ತಿದೆ. ಅವರನ್ನು ಹೇಗೆ ಸ್ವಾವಲಂಬಿ ಮಾಡುವುದು. ಮಹಿಳಾ ಮುನ್ನಡೆಯ ಆರ್ಥಿಕತೆಯನ್ನು ಹೇಗೆ ಸಾಧಿಸುವುದು, ದೇಶದ ಆರ್ಥಿಕ ಬೆಳವಣಿಗೆಯ ಪಯಣದಲ್ಲಿ ಅವರನ್ನು ಹೇಗೆ ಸಮಾನ ಪಾಲುದಾರರನ್ನಾಗಿ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಪ್ರತಿನಿತ್ಯವೂ ಅಗತ್ಯ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಅದರ ಫಲಿತಾಂಶಗಳನ್ನು ಪಡೆದುಕೊಳ್ಳಲು ಶ್ರಮಿಸುತ್ತಿದ್ದೇವೆ. ನಮ್ಮ ದೇಶದ ಧ್ವಜವನ್ನು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಮಹಿಳೆಯರು ಮಹತ್ತರವಾದ ಪಾತ್ರ ವಹಿಸುತ್ತಿದ್ದಾರೆ.

ಯಾವುದೇ ದೇಶದ ಮುಂದಕ್ಕೆ ಸಾಗಬೇಕಿದ್ದರೆ ಅದು ಭವಿಷ್ಯದಲ್ಲಿ ಬಳಸಿದಕ್ಕಿಂತಲೂ ಹೆಚ್ಚು ಬಳಕೆಯನ್ನು ಸಾಧಿಸಬೇಕು. ಆದರೆ ಸಮಯ ನಮಗಾಗಿ ಹೆಚ್ಚು ಹೊತ್ತು ಕಾಯುವುದಿಲ್ಲ. ನಾವು ಈಗ ತಲುಪಿರುವ ಹಂತಕ್ಕೆ ಸಾಗಿ ಬಂದ ವೇಗ ಸಾಲುವುದಿಲ್ಲ. ದೇಶದ ಎಲ್ಲ ಜನರ ಹೃದಯದಲ್ಲಿರುವ ಗುರಿಯನ್ನು ಮುಟ್ಟಲೂ ಆಗುವುದಿಲ್ಲ. ನಾವು ನಮ್ಮ ವೇಗವನ್ನು ಕಡ್ಡಾಯವಾಗಿ ಹೆಚ್ಚಿಸಿಕೊಳ್ಳಲೇಬೇಕು. ಈ ಹಿಂದಿನ ಸರ್ಕಾರ ತನಗೆ ಸಂಬಂಧಿಸಿದ ಒಂದು ಅಥವಾ ಎರಡು ಯೋಜನೆಗಳನ್ನು ಪೂರೈಸಲು ಬಯಸುತ್ತಿತ್ತು. ಆದರೆ ಇಂದು ನಿರೀಕ್ಷೆಗಳು ಅಗಾಧವಾಗಿ ಹೆಚ್ಚಿವೆ. ಹೊಸ ಗುರಿಗಳನ್ನು ತಲುಪಲು ಪ್ರತಿದಿನವೂ ಸಾಲುತ್ತಿಲ್ಲ.

ದೇಶವನ್ನು ಮುನ್ನಡೆಸಲು ಇದಿಷ್ಟೇ ಸಾಲದು. ಅದೇ ಸಮಾನಾಂತರವಾಗಿ ದೇಶವನ್ನು ಆಧುನಿಕಗೊಳಿಸಬೇಕು. ನಾವು ಮುಂದೆ ಬರಬೇಕು ಹಾಗೂ ಆಧುನೀಕರಣಗೊಳ್ಳಬೇಕು ಕೂಡಾ. ಭಾರತದ 21ನೇ ಶತಮಾನವು ಜಾಗತಿಕ ಸಾಧನೆಗಳಿಗೆ ಅಂಟಿಕೂರಬೇಕಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತವು ಹಿಂದೆ ಬೀಳಬೇಕಿಲ್ಲ. ನಮ್ಮ ಮೂಲಸೌಕರ್ಯಗಳು ಜಾಗತಿಕ ಗುಣಮಟ್ಟಕ್ಕೆ ಸಮಾನವಾಗಿರಬೇಕು. ವಿಶ್ವದ ಮಟ್ಟಕ್ಕೆ ಬೆಳೆದು ನಿಲ್ಲುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ನಾವು ಈ ಸಂಕಲ್ಪವನ್ನು ಮುಂದಿಟ್ಟುಕೊಂಡು ಸಾಗಬೇಕಿದೆ.

ಇವತ್ತು ಆರೋಗ್ಯ ಅರಿವು ಮತ್ತು ನಿಸರ್ಗ ಕಾಳಜಿಯ ವಾತಾವರಣ ಬೆಳೆದಿದೆ. ಎಲ್ಲರೂ ನಾವು ಉಸಿರಾಡಿದರೆ ಶುದ್ಧ ಗಾಳಿಯನ್ನೇ ಉಸಿರಾಡಬೇಕು ಎಂದು ಬಯಸುತ್ತಾರೆ. ನಾವು ಕುಡಿದರೆ ಶುದ್ಧ ನೀರನ್ನೇ ಕುಡಿಯಬೇಕು ಎಂದು ಅಂದುಕೊಳ್ಳುತ್ತಾರೆ. ನಾವು ಸೇವಿಸಿದರೆ ಉತ್ತಮ ಗುಣಮಟ್ಟದ ಆಹಾರ ಸೇವಿಸಬೇಕು ಎಂದುಕೊಳ್ಳುತ್ತಿದ್ದಾರೆ. ಇಂಥ ಸಾಮಾನ್ಯ ಜಾಗೃತಿಯು ನಮ್ಮವರಲ್ಲಿ ಬೆಳೆದಿದೆ. ಇಂಧನ ಕ್ಷೇತ್ರದಲ್ಲಿ ಭಾರತವು ಮುನ್ನಡೆ ಸಾಧಿಸಿದೆ. 175 ಗಿಗಾ ವ್ಯಾಟ್ ಗಳ ನವೀಕರಿಸಬಹುದಾದ ಇಂಧನವನ್ನು ಬಳಸುವತ್ತ ಸಾಗುತ್ತಿದ್ದೇವೆ. ನಿಮಗೆ ಗಿಗಾವ್ಯಾಟ್ಸ್ ಎನ್ನುವುದು ಹೊಸದಿರಬಹುದು. ಏಕೆಂದರೆ ನಮ್ಮಂತಹ ದೇಶಗಳಲ್ಲಿ ಮೆಗಾವ್ಯಾಟ್ ಮೀರಿ ಆಲೋಚಿಸುವುದಿಲ್ಲ. ಮೆಗಾವ್ಯಾಟ್ ನಮ್ಮ ಅಂತಿಮ ಅಳತೆಗೋಲು. ನಾವು 175 ಗಿಗಾವ್ಯಾಟ್ ವಿದ್ಯುತ್ ಅನ್ನು ಪುನರ್ ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಪಡೆಯಲು ಗುರಿ ಹೊಂದಿದ್ದೇವೆ.

ನಮ್ಮ ಅಗತ್ಯವನ್ನು ನೀಗಿಸಿಕೊಳ್ಳುವಲ್ಲಿ ಸೌರ ವಿದ್ಯುತ್, ಪವನ ಶಕ್ತಿ , ಅಣು ವಿದ್ಯುತ್, ಜೈವಿಕ ಇಂಧನ ದಾರಿ ಮಾಡಿಕೊಟ್ಟಿವೆ. ಋಣಾತ್ಮಕ ಪರಿಣಾಮವನ್ನು ಬೀರುವ ದೊಡ್ಡ ಮಟ್ಟದ ಬದಲಾವಣೆ ಈ ಕ್ಷೇತ್ರದಲ್ಲಿ ಆಗುತ್ತಿದೆ. ಈ ನಿಟ್ಟಿನಲ್ಲಿ ನಾವು ಸಮರೋಪಾದಿ ಕೆಲಸವನ್ನು ಮಾಡುತ್ತಿದ್ದೇವೆ. ಇವತ್ತು ಪೈಪೋಟಿ ತೀಕ್ಷ್ಣ ಮಟ್ಟದಲ್ಲಿ ಆಗುತ್ತಿದೆ. ಕಲ್ಲಿದ್ದಿಲಿನಿಂದ ಉತ್ಪತ್ತಿ ಮಾಡುವ ವಿದ್ಯುತ್ತಿಗಿಂತಲೂ ಸೌರ ವಿದ್ಯುತ್ ಅಗ್ಗ ಎನಿಸಿಕೊಂಡಿದೆ. ಇಡೀ ವ್ಯವಸ್ಥೆ ಸೋಲಾರ್ ಇಂಧನದಿಂದ ಮುನ್ನಡೆದರೆ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ಅಂದಾಜಿಸಿಕೊಳ್ಳಿ. ಆರ್ಥಿಕತೆಯ ಮೇಲೆ ಇದರ ದೊಡ್ಡ ಮಟ್ಟದ ಪರಿಣಾಮ ಹೇಗೆ ಆಗಬಹುದು ಆಲೋಚಿಸಿ.

ಇಂದು ನಮ್ಮ ದೇಶ ಗಲ್ಫ್ ರಾಷ್ಟ್ರಗಳಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಆಮದಿನಲ್ಲಿ ಎಷ್ಟರ ಮಟ್ಟಿಗೆ ಇಳಿತವನ್ನು ಕಾಣಬಹುದು. ನಮ್ಮ ದೇಶ ಎಷ್ಟರ ಮಟ್ಟಿಗೆ ಸ್ವಾವಲಂಬಿ ಆಗಬಹುದು. ಹೀಗಾಗಿಯೇ ಸೌರ ವಿದ್ಯುತ್ ಉತ್ಪಾದಿಸಲು ನಾವು ಹಾತೊರೆಯುತ್ತಿದ್ದೇವೆ. ಈ ಸೂರ್ಯನನ್ನು ನಾನು ಪ್ರಧಾನಿಯಾದ ನಂತರ ಅನ್ವೇಷಣೆ ಮಾಡಿದ್ದೇವೆಯೇ? ಅದು ಮೊದಲೇ ಇತ್ತೋ ಇಲ್ಲವೋ? ಅದು ಇತ್ತು. ನಾನು ಅದನ್ನು ಕಂಡೆ ಅವರು ಕಂಡಿರಲಿಲ್ಲ ಅಷ್ಟೇ. ನಮ್ಮವರ ಜೀವನವನ್ನು ಆಧುನೀಕರಣಗೊಳಿಸಲು ನಾವು ಕೈಗೊಂಡಿರುವ ಕ್ರಮಗಳಿವು.

ನಾನು ಪ್ರಧಾನಮಂತ್ರಿಯಾದ ಆರಂಭದಲ್ಲಿ ನಾನು ಕಲಿಯಲು ಮತ್ತು ಅರಿತುಕೊಳ್ಳಲು ಆರಂಭಿಸಿದೆ. ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಅಧಿಕಾರಿಗಳ ಜತೆ ಸಭೆ ಮಾಡುತ್ತಿದ್ದೆ, ವಿವರಣೆಗಳನ್ನು ಪಡೆದುಕೊಳ್ಳುತ್ತಿದ್ದೆ. ಒಂದು ದಿನ ವಿದ್ಯುತ್ ಇಲಾಖೆಯ ಜತೆ ಮಾತನಾಡುವಾಗ ಇನ್ನೂ ವಿದ್ಯುತ್ ತಲುಪದ ಪ್ರದೇಶ ಯಾವುದಾದರೂ ಇದೆಯಾ ಎಂದು ನಾನು ಪ್ರಶ್ನಿಸಿದ್ದೆ. ನಮ್ಮ ದೇಶ ಸ್ವಾತಂತ್ರ್ಯ ಪಡೆದು 70 ವರ್ಷಗಳು ಕಳೆಯುತ್ತಿರುವಾಗ ಈ ಪ್ರಶ್ನೆಯನ್ನು ಕೇಳಬಾರದಿತ್ತು. ಆದರೂ ನಾನು ವಿದ್ಯುತ್ ತಲುಪದ ಯಾವುದಾದರೂ ಪ್ರದೇಶ ಇದೆಯೇ ಎಂದು ಕೇಳಿದೆ. ಸಾರ್ ಇನ್ನೂ ವಿದ್ಯುತ್ ತಲುಪದ 18,000 ಹಳ್ಳಿಗಳಿವೆ ಎಂದು ಅವರು ಹೇಳಿದಾಗ ನನಗೆ ಆಶ್ಚರ್ಯವಾಯಿತು. ನೀವು ಹೇಳಿ 18ನೇ ಶತಮಾನಕ್ಕೂ 21ನೇ ಶತಮಾನಕ್ಕೂ ಏನಾದರೂ ವ್ಯತ್ಯಾಸ ಇದೆಯಾ ತಿಳಿಸಿ? 18ನೇ ಶತಮಾನದಲ್ಲಿ ಜನರು ವಿದ್ಯುತ್ ಇಲ್ಲದೇ ಕಾಲ ಕಳೆಯುತ್ತಿದ್ದರು. ಸೂರ್ಯ ಮತ್ತು ಚಂದ್ರನ ಬೆಳಕನ್ನೇ ಆಶ್ರಯ ಮಾಡಿಕೊಂಡಿದ್ದರು. ಸ್ವಾತಂತ್ರ್ಯ ಬಂದು 70 ವರ್ಷ ಕಳೆದ ನಂತರವೂ ನಮ್ಮ ದೇಶದ 18000 ಹಳ್ಳಿಗಳು 18ನೇ ಶತಮಾನದ ಜೀವನವನ್ನು ಸಾಗಿಸುತ್ತಿದ್ದವು.

ಆಧುನಿಕ ಭಾರತದ ಕನಸು ನಿಜಮಾಡುವ ಜವಾಬ್ದಾರಿಯನ್ನು ತೊಟ್ಟೆ. ನಿಮಗೆ ಎಷ್ಟು ಕಾಲ ಬೇಕು ಎಂದು ಕೇಳಿದೆ. ಅವರು ಇನ್ನೂ ಏಳು ವರ್ಷ ಬೇಕಾಗಬಹುದು ಎಂದರು. ಆ ಭಾವನೆ ನನಗೆ ನನ್ನನ್ನು ಅಚ್ಚರಿಗೊಳಿಸಿತು. ಅವರು ಅತ್ಯಂತ ವಿಶ್ವಾಸದಿಂದಲೇ ಏಳು ವರ್ಷ ಬೇಕು ಎಂದು ಹೇಳುತ್ತಿದ್ದರು. ನಾವು ಅದನ್ನು ಇನ್ನಷ್ಟು ಬೇಗ ಏಕೆ ಮಾಡಬಾರದು ಎಂದು ನಾನು ಅವರನ್ನು ಪ್ರಶ್ನಿಸಿದೆ. ಕೊನೆಯದಾಗಿ ಆಗಸ್ಟ್ 15ರಂದು ಕೆಂಪುಕೋಟೆಯಿಂದ ನಾನು ಭಾಷಣ ಮಾಡುವಾಗ ಇನ್ನೊಂದು ಸಾವಿರದಿನದಲ್ಲಿ ನಾವು 18,000 ಹಳ್ಳಿಗಳಿಗೆ ವಿದ್ಯುತ್ ನೀಡುತ್ತೇವೆ ಎಂದು ಘೋಷಿಸಿದೆ. ಸಾವಿರ ದಿನಗಳಿಗೂ ಮೊದಲೇ 13ರಿಂದ 14 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಸಿದ್ದೇವೆ. ಸೋದರ ಸೋದರಿಯರೇ ನಾನು ಆಧುನಿಕ ಭಾರತ ನಿರ್ಮಾಣ ಮಾಡಬೇಕೆಂದಿದ್ದೇನೆ. ಇನ್ನುಳಿದ ಹಳ್ಳಿಗಳನ್ನೂ ಶೀಘ್ರದಲ್ಲೇ ವಿದ್ಯುದೀಕರಣ ಮಾಡಲಾಗುತ್ತದೆ.

ಭಾರತದಲ್ಲಿ ಎರಡೂವರೆ ಲಕ್ಷ ಪಂಚಾಯಿತಿಗಳಿವೆ, ಆ ಪಂಚಾಯಿತಿಗಳಲ್ಲಿ 6 ಲಕ್ಷ ಗ್ರಾಮಗಳಿವೆ. ನೀವು ನನಗೆ ಹೇಳಿ ಯಾರಾದರೂ ಒಂದು ಗಂಟೆ ಮೊಬೈಲ್ ಇಲ್ಲದೇ ಇರಬಲ್ಲರೇ? ಇದು ಸಾಕಷ್ಟು ಸಮಸ್ಯೆಗಳನ್ನು ತರುತ್ತದೆ. ಇದು ನಿಮ್ಮ ಹಕ್ಕೆನಿಸಿದರೆ ಎಲ್ಲ ಮನುಷ್ಯನಿಗೂ ಇದು ಹಕ್ಕು. ಭಾರತದ ಎಲ್ಲ ಗ್ರಾಮವೂ ಈ ಹಕ್ಕನ್ನು ಹೊಂದಿದೆಯೋ ಇಲ್ಲವೋ? ಸೋದರ ಸೋದರಿಯರೇ ನಾವು ಡಿಜಿಟಲ್ ಇಂಡಿಯಾ ಅಭಿಯಾನವನ್ನು ಕೈಗೊಂಡಿದ್ದೇವೆ. ಎರಡೂವರೆ ಲಕ್ಷ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಫೈಬರ್ ಕೇಬಲ್ ಅಳವಡಿಸುವ ಕೆಲಸ ತೀವ್ರಗತಿಯಲ್ಲಿದೆ. ನಾವು ಮುಂದಿನ ದಿನಗಳಲ್ಲಿ ಈ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸುತ್ತೇವೆ. ಆ ಮೂಲಕ ಡಿಜಿಟಲ್ ವ್ಯವಸ್ಥೆಯನ್ನು ತರುವ ಪ್ರಯತ್ನ ನಡೆದಿದೆ. ಆಧುನಿಕ ಸುಧಾರಣಾ ತಂತ್ರಜ್ಞಾನಗಳು ಸೌಲಭ್ಯಗಳನ್ನು ರವಾನಿಸುತ್ತವೆ. ದೂರ ಸಂಪರ್ಕ ಶಿಕ್ಷಣವು ಇದರಿಂದ ಇನ್ನಷ್ಟು ಸುಲಭವಾಗಲಿದೆ. ಟೆಲಿ ಮೆಡಿಸನ್ ಸಾಧ್ಯವಾಗಲಿದೆ. ನಗರ ಪ್ರದೇಶಗಳಲ್ಲಿರುವ ಎಲ್ಲ ಸೌಲಭ್ಯಗಳು ಹಳ್ಳಿಗಳನ್ನೂ ತಲುಪಲಿವೆ. ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಭಾರತ ಮುನ್ನಡೆಯುತ್ತಿದೆ ಮತ್ತು ಆಧುನೀಕರಣಗೊಳ್ಳುತ್ತಿದೆ. ನಾವು ಆ ನಿಟ್ಟಿನಲ್ಲಿ ಆಲೋಚಿಸುತ್ತಿದ್ದೇವೆ ಮತ್ತು ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

ಸೋದರ ಸೋದರಿಯರೇ ಇಂಥ ಅನೇಕ ಸಂಗತಿಗಳಿವೆ. ನೀವು ಭಾರತದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರಬಹುದು. ನೀವು ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ವಾಸಿಸುತ್ತಿದ್ದೀರಿ. ಸುರಿನಾಮ್ ನಿಂದ ಬಂದಿರಬಹುದು, ನೀವು ಡಚ್ ನಾಗರಿಕರಾಗಿರಬಹುದು. ನೀವು ಒಸಿಐ ಕಾರ್ಡ್ ಪಡೆಯಲು ಕಷ್ಟವೇನು? ನಿಮಗೆ ಈ ಸಂಪರ್ಕಗಳನ್ನು ಸ್ಥಾಪಿಸಿಕೊಳ್ಳಬೇಕೆಂದು ಅನಿಸುತ್ತಿಲ್ಲವೇ? ಇಷ್ಟೊಂದು ದೊಡ್ಡ ಮಟ್ಟದಲ್ಲಿ ಭಾರತೀಯ ಅನಿವಾಸಿಗಳಿದ್ದರೂ ಕೇವಲ ಶೇಕಡಾ 10 ರಷ್ಟು ಮಂದಿ ಒಸಿಐ ಕಾರ್ಡ್ ಹೊಂದಿರುವುದನ್ನು ಕೇಳಿ ನನಗೆ ಅಚ್ಚರಿಯಾಯಿತು. ಮುಂಬರುವ ಜನವರಿ 26ರೊಳಗಾಗಿ ಎಲ್ಲರೂ ತ್ವರಿತ ಗತಿಯಲ್ಲಿ ಈ ಕೆಲಸವನ್ನು ಮಾಡಿ ಮುಗಿಸುತ್ತೇವೆಂದು ನನಗೆ ಮಾತುಕೊಡಿ. ನೀವು ಈ ಕೆಲಸವನ್ನು ಮಾಡಿ . ನಾನು ನಮ್ಮ ರಾಯಭಾರ ಅಧಿಕಾರಿಗಳಿಗೂ ಸೂಚಿಸುತ್ತೇನೆ.

ಈ ಒಸಿಐ ಕಾರ್ಡ್ ಭಾರತದೊಂದಿಗಿನ ನಿಮ್ಮ ಹಳೆಯ ಸಂಬಂಧಕ್ಕೆ ಬೆಸುಗೆ ಹಾಕಲಿದೆ. ಇದು ಕರುಳಬಳ್ಳಿ ಸಂಬಂಧ. ಇದನ್ನು ನೀವು ಮರೆಯಬಾರದು. ನೀವು ಇದನ್ನು ನಿರ್ಲಕ್ಷ್ಯ ಮಾಡಬಾರದು. ದಯಮಾಡಿ ಏನು ಅಗತ್ಯವಿದೆಯೋ ಅದನ್ನು ಪಾವತಿಸಿ ಒಸಿಐ ಕಾರ್ಡ್ ಪಡೆದುಕೊಳ್ಳಿ.

ಎರಡು ದಿನಗಳ ಹಿಂದೆ ನಾನು ಪೋರ್ಚುಗಲ್ ನಲ್ಲಿದ್ದೆ, ಪೋರ್ಚುಗಲ್ ಪ್ರಧಾನ ಮಂತ್ರಿಗಳು ತಮ್ಮ ಒಸಿಐ ಕಾರ್ಡ್ ಅನ್ನು ಬಹಿರಂಗವಾಗಿಯೇ ಪ್ರದರ್ಶನ ಮಾಡಿದರು. ನಾನು ಒಸಿಐ ಕಾರ್ಡ್ ಹೊಂದಿದ್ದೇನೆ ಎನ್ನುವುದಕ್ಕೆ ನನಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದ್ದರು. ನಾನು ಮೂಲ ಭಾರತೀಯ ಮತ್ತು ಈಗ ಇಲ್ಲಿನ ಪ್ರಧಾನಮಂತ್ರಿ ಎಂದಿದ್ದರು. ಈ ಭಾವನೆ ಎಲ್ಲ ಭಾರತೀಯರಲ್ಲೂ ಇರಬೇಕು. ನಾನು ಯಾರನ್ನು ಎಲ್ಲೇ ಭೇಟಿ ಮಾಡಲಿ. ಅವರು ಕಾರ್ಡ್ ಹೊಂದಿದ್ದಾರೋ ಇಲ್ಲವೋ ಎನ್ನುವುದನ್ನು ಕೇಳುತ್ತೇನೆ. ಅವರು ಇಲ್ಲ ಎಂದರೆ ಅವರನ್ನು ಟೀಕಿಸುತ್ತೇನೆ. ಈ ಭಾವನೆ ಅಲ್ಲಿದೆ. ನಾನು ಅದನ್ನು ಇಷ್ಟ ಪಡುತ್ತೇನೆ. ನಾನು ನಮ್ಮ ರಾಯಭಾರಿಗಳನ್ನೂ ಕೇಳಿದೆ. ಹೊಸ ರಾಯಭಾರಿ ಬಂದ ನಂತರ ಒಂದು ದಿನಕ್ಕೆ ಎಷ್ಟು ಒಸಿಐ ಕಾರ್ಡ್ ಗಳನ್ನು ಮಾಡಲಾಗುತ್ತಿದೆ ಎಂದು ವಿಚಾರಿಸಿಕೊಳ್ಳುತ್ತಿದ್ದೇನೆ. ನಮ್ಮ ಕೆಲಸ ಮುಗಿಸಿ ನಿಮಗೆ ನಾವು ಸಹಾಯ ಮಾಡಬಹುದಾಗಿದೆ.

2015ರ ನಂತರ ಡಚ್ ಪಾಸ್ ಪೋರ್ಟ್ ಹೊಂದಿರುವವರಿಗೆ ಇ-ವಿಸಾ ವ್ಯವಸ್ಥೆ ಮಾಡಿದ್ದೇವೆ. ನೀವು ಅದರ ಲಾಭವನ್ನು ಪಡೆದುಕೊಳ್ಳಿ. ಮುಂದಿನ ದಿನಗಳಲ್ಲಿ ಡಚ್ ನಾಗರಿಕರಿಗೆ ಐದು ವರ್ಷಗಳ ವ್ಯವಹಾರಿಕ ವೀಸಾ ನೀಡುವ ಬಗ್ಗೆಯೂ ಭಾರತ ಸರ್ಕಾರ ಆಲೋಚನೆ ಮಾಡುತ್ತಿದೆ. ಐದು ವರ್ಷಗಳ ಬ್ಯುಸಿನೆಸ್ ಮತ್ತು ಪ್ರವಾಸಿ ವೀಸಾ ಡಚ್ ನಾಗರಿಕರನ್ನು ಭಾರತದೊಂದಿಗೆ ಜೋಡಿಸುವ ಪ್ರಮುಖ ಪ್ರಯತ್ನವಾಗಿದೆ.

ಭಾರತದೊಂದಿಗೆ ನಿರಂತರವಾಗಿ ಸಂಪರ್ಕ ಹೊಂದುವ ಪ್ರಯತ್ನ ಮುಂದುವರೆಸಿ ಎಂದು ನಿಮ್ಮೆಲ್ಲರನ್ನೂ ನಾನು ಮನವಿ ಮಾಡಿಕೊಳ್ಳುತ್ತೇನೆ. ನೀವು ನಿಮ್ಮ ದೇಶದೊಂದಿಗೆ ಸಂಪರ್ಕದಲ್ಲಿರಿ. ನಿಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಅದರ ಸಂಪ್ರದಾಯ ಉಳಿದುಕೊಳ್ಳುತ್ತದೆ. ಭಾರತದಲ್ಲಿ ಒಳ್ಳೆಯ ಸಂಗತಿಯನ್ನು ಕೇಳಲು ನೀವು ಉತ್ಸುಕರಾಗಿದ್ದೀರಿ. ನಿಮ್ಮ ಜೀವನ ಭಾರತೀಯಗೊಂಡಿದೆ. ಭಾರತಕ್ಕೆ ಇನ್ನಷ್ಟು ಸಾಮಿಪ್ಯವಾಗುವ ನಿಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತಿರಿ.

ನೀವು ನನ್ನನ್ನು ಸಂಪರ್ಕಿಸಲು ಬಯಸುತ್ತೀರಾ? ಭಾರತದ ಪ್ರಧಾನಿ ನಿಮ್ಮ ಜೇಬಿನಲ್ಲಿ ಇರಬೇಕೆಂದು ಬಯಸುತ್ತೀರಾ? ನೀವೇಕೆ ಮೌನವಾಗಿದ್ದೀರಿ? ಭಾರತದ ಪ್ರಧಾನಿ ನಿಮ್ಮ ಜೇಬಿನಲ್ಲಿದ್ದರೆ ಅದರಿಂದ ಹಾನಿ ಏನು? ನಿಮಗೆ ಹಾಗೆ ಸಾರಲು ಭಯವೇ, ಆ ಭಯವನ್ನು ಬಿಡಿ. ಭಾರತದ ಪ್ರಧಾನಿ ನನ್ನ ಜೇಬಿನಲ್ಲಿರಬೇಕು ಎಂಬುದನ್ನು ನೀವು ಬಯಸುವುದಿಲ್ಲೇ? ನಾನು ವಾರದ ಎಲ್ಲಾ ಕ್ಷಣವೂ ನಿಮ್ಮ ಜೇಬಿನಲ್ಲಿರುತ್ತೇನೆ. ನಿಮ್ಮ ಪ್ರತಿಯೊಬ್ಬರ ಹೃದಯದ ಬಡಿತವನ್ನು ನಾನು ಆಲಿಸಬಲ್ಲೆ. ನಮ್ಮ ಸಂಬಂಧ ಆ ಮಟ್ಟಿಗೆ ಆಪ್ಯಾಯವಾಗಿದೆ. ನನ್ನ ಮೇಲೆ ನಿಮಗೆ ಸಂಪೂರ್ಣ ಅಧಿಕಾರವಿದೆ. ನಿಮ್ಮ ಪಾಸ್ ಪೋರ್ಟ್ ನ ಬಣ್ಣದಿಂದ ಅದು ನಿರ್ಧಾರ ಆಗುವುದಿಲ್ಲ. ಯಾರು ತಮ್ಮ ಹೃದಯದಲ್ಲಿ ಭಾರತವನ್ನು ಇಟ್ಟುಕೊಂಡಿದ್ದಾರೋ ಅವರಿಗೆ ನನ್ನ ಜೀವನ ಸಮರ್ಪಿತವಾಗಿದೆ.

ಅತ್ಯಂತ ಅವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀವೆಲ್ಲರೂ ಇಲ್ಲಿಗೆ ಬಂದು ಸೇರಿದ್ದೀರಿ. ಈ ಆಹ್ಲಾದಕರ ನೆನಪಿನೊಂದಿಗೆ ನಿಮ್ಮೆಲ್ಲರಿಗೂ ನನ್ನ ಹೃದಯ ತುಂಬಿದ ಧನ್ಯವಾದಗಳು.

ನಮಸ್ಕಾರಗಳು…

***