ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀ ವಾಣಿಜ್ಯ ಉತ್ತೇಜನಾ ಸಂಸ್ಥೆ (ಐಟಿಜೆಪಿಓ)ದಿಂದ 99 ವರ್ಷಗಳ ದೀರ್ಘಕಾಲೀನ ಗುತ್ತಿಗೆಯ ಆಧಾರದ ಮೇಲೆ ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯ ಮೂಲಕ ಪ್ರಗತಿ ಮೈದಾನದಲ್ಲಿ ಖಾಸಗಿ ವಲಯ ಸೇರಿದಂತೆ ಮೂರನೇ ವ್ಯಕ್ತಿಯಿಂದ ಹೊಟೆಲ್ ನಿರ್ಮಾಣ ಮತ್ತು ಸಂಚಾಲನೆಗಾಗಿ 3.70 ಎಕರೆ ಭೂಮಿಯ ನಗದೀಕರಣಕ್ಕೆ ತನ್ನ ಅನುಮೋದನೆ ನೀಡಿದೆ.
ಈ ಕ್ರಮ ಪ್ರಗತಿ ಮೈದಾನದ ಮರು ಅಭಿವೃದ್ಧಿ ಯೋಜನೆಯ ಪ್ರಥಮ ಹಂತದ ಅಂದರೆ, ಸಮಗ್ರ ವಸ್ತು ಪ್ರದರ್ಶನ ಮತ್ತು ಸಮಾವೇಶ ಕೇಂದ್ರ (ಐಇಸಿಸಿ) ಯೋಜನೆ ಭಾಗವಾಗಿದೆ. ಸಿಸಿಇಎ 2017ರ ಜನವರಿಯಲ್ಲಿ ಅಂದಾಜು 2254 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಿತ್ತು. ಐಇಸಿಸಿ ಯೋಜನೆಯು 7000 ಆಸನಗಳ ಸಾಮರ್ಥ್ಯದ ವಿಶ್ವದರ್ಜೆಯ ಅತ್ಯಾಧುನಿಕ ವಸ್ತುಪ್ರದರ್ಶನ ಸಹಿತ ಸಮಾವೇಶ ಕೇಂದ್ರ, ವಸ್ತುಪ್ರದರ್ಶನಕ್ಕಾಗಿ 1,00,000 ಚದರ ಮೀಟರ್ ಸ್ಥಳ ಮತ್ತು 4800 ವಾಹನಗಳಿಗೆ ನೆಲಮಾಳಿಗೆಯಲ್ಲಿ ನಿಲುಗಡೆ ವ್ಯವಸ್ಥೆಯ ನಿರ್ಮಾಣಕ್ಕೆ ಅವಕಾಶ ನೀಡುತ್ತದೆ. ಪ್ರಗತಿ ಮೈದಾನದ ಮತ್ತು ಸುತ್ತಮುತ್ತಲಿನ ಸಂಚಾರ ದಟ್ಟಣೆ ನಿವಾರಣೆಗೆ ಕೈಗೊಳ್ಳುವ ಕ್ರಮಗಳು ಈ ಪ್ರದೇಶದ ಸಂಚಾರ ದಟ್ಟಣೆ ನಿವಾರಣೆಗೆ ಸಹ ಕಾರಣವಾಗುತ್ತದೆ. ಜಮೀನಿನ ನಗದೀಕರಣದ ಮೂಲಕ ಎತ್ತುವಳಿ ಮಾಡಲಾಗುವ ನಿಧಿಯು ಐಇಸಿಸಿ ಯೋಜನೆಗೆ ಹಣಕಾಸು ನೆರವು ನೀಡುವ ಮಾರ್ಗಗಳಲ್ಲಿ ಒಂದಾಗಿದ್ದು, ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಾಣಿಜ್ಯ ಉತ್ತೇಜನಕ್ಕಾಗಿ ಶೃಂಗಮಟ್ಟದ ಸಭೆ ಮತ್ತು ವಸ್ತುಪ್ರದರ್ಶನ/ ಕಾರ್ಯಕ್ರಮ ಆಯೋಜಿಸಲು ಅತ್ಯಗತ್ಯವಾಗಿದೆ.
ಐಇಸಿಸಿಯ ಕಾರ್ಯಗಳು ಮತ್ತು ಸಂಚಾರ ದಟ್ಟಣೆಯ ನಿವಾರಣೆಯ ಪರಿಹಾರಗಳು ಭರದಿಂದ ಸಾಗಿವೆ. ಇಡೀ ಯೋಜನೆ 2019ರ ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳಲಿದೆ ಎಂದು ಐಟಿಪಿಓ ಹೇಳಿದೆ. ಐಇಸಿಸಿ ಯೋಜನೆಯು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗೆ ಲಾಭವಾಗಲಿದೆ ಮತ್ತು ಭಾರತದ ವಿದೇಶೀ ವಾಣಿಜ್ಯ ಹೆಚ್ಚಳಕ್ಕೂ ನೆರವಾಗಲಿದೆ.
*****
AKT/VBA