Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರಿಂದ ಅಕ್ಟೋಬರ್ 15 ರಂದು ಲಡಾಖ್‌ನಲ್ಲಿ ಸುಮಾರು 3,350 ಕೋಟಿ ರೂ. ಮೌಲ್ಯದ ಐದು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಲೋಕಾರ್ಪಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಅಕ್ಟೋಬರ್ 15 ರಂದು ಮಧ್ಯಾಹ್ನ 12:30 ರ ಸುಮಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಲಡಾಖ್‌ನಲ್ಲಿ ಸುಮಾರು 3,350 ಕೋಟಿ ರೂಪಾಯಿ ಮೌಲ್ಯದ ಐದು ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಐದು ಯೋಜನೆಗಳು ಸಂಪರ್ಕ ಬಲವರ್ಧನೆಗೊಳಿಸಲಿವೆ, ಇಂಧನ ಮೂಲಸೌಕರ್ಯವನ್ನು ಸುಧಾರಿಸುತ್ತವೆ, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುತ್ತವೆ ಮತ್ತು ಈ ಪ್ರದೇಶದಲ್ಲಿ ನೀರಿನ ಸುರಕ್ಷತೆಯನ್ನು ವೃದ್ಧಿಸುತ್ತವೆ.

ಪ್ರಧಾನಮಂತ್ರಿಯವರು ಲೇಹ್‌ನ ಕ್ರುಶೋಕ್ ಬಕುಲಾ ರಿಂಪೋಚಿ ವಿಮಾನ ನಿಲ್ದಾಣದಲ್ಲಿ 640 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಪ್ರಯಾಣಿಕರ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. 23,800 ಚದರ ಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿರುವ ಈ ಆಧುನಿಕ ಟರ್ಮಿನಲ್ ಅನ್ನು ವಾರ್ಷಿಕವಾಗಿ 35 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇಂಧನ ದಕ್ಷತೆಯನ್ನು ಹೆಚ್ಚಿಸಲು ಮತ್ತು ಅದರ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಭೂಶಾಖದ ಶಕ್ತಿಯನ್ನು ಸಂಯೋಜಿಸುವ ಈ ಸೌಲಭ್ಯವು ಲಡಾಖ್‌ನ ಪರಿಸರ ಸೂಕ್ಷ್ಮ ಪರಿಸರದಲ್ಲಿ ಸುಸ್ಥಿರ ಮೂಲಸೌಕರ್ಯದ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಲಡಾಖ್‌ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅಂಶಗಳೊಂದಿಗೆ ಆಧುನಿಕ ಪ್ರಯಾಣಿಕರ ಸೌಕರ್ಯಗಳನ್ನು ಸಂಯೋಜಿಸುವ ಟರ್ಮಿನಲ್, ಪ್ರಯಾಣಿಕರ ಅನುಕೂಲಗಳನ್ನು ಸುಧಾರಿಸುತ್ತದೆ ಮತ್ತು ದೇಶದ ಉಳಿದ ಭಾಗಗಳೊಂದಿಗೆ ವಾಯು ಸಂಪರ್ಕವನ್ನು ಬಲವರ್ಧನೆಗೊಳಿಸುತ್ತದೆ.

ಗಡಿ ರಸ್ತೆಗಳ ಸಂಸ್ಥೆ (ಬಿ ಆರ್ ಒ) ನಿರ್ಮಿಸಿರುವ 298 ಕಿ.ಮೀ ಉದ್ದದ ನಿಮ್ಮು-ಪಡುಮ್-ದರ್ಚಾ ರಸ್ತೆಯನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಲೇಹ್‌ನಲ್ಲಿರುವ ನಿಮ್ಮುವನ್ನು ಹಿಮಾಚಲ ಪ್ರದೇಶದ ದರ್ಚಾದೊಂದಿಗೆ ದೂರದ ಝನ್ಸ್ಕಾರ್ ಕಣಿವೆಯ ಮೂಲಕ ಸಂಪರ್ಕಿಸುವ ಈ ರಸ್ತೆ, ಲಡಾಖ್‌ಗೆ ಪರ್ಯಾಯ ಸಂಪರ್ಕ ಕಾರಿಡಾರ್ ಅನ್ನು ಒದಗಿಸುತ್ತದೆ, ಇದು ಶ್ರೀನಗರ-ಲೇಹ್ ಮತ್ತು ಮನಾಲಿ-ಲೇಹ್ ಹೆದ್ದಾರಿಗಳಿಗೆ ಪೂರಕವಾಗಿದೆ. ಎತ್ತರದ ಶಿಂಕುನ್ ಲಾ ಪಾಸ್ ಸೇರಿದಂತೆ ಸವಾಲಿನ ಹಿಮಾಲಯನ್ ಭೂಪ್ರದೇಶವನ್ನು ಹಾದುಹೋಗುವ ಈ ರಸ್ತೆಯು ಗಮನಾರ್ಹ ಎಂಜಿನಿಯರಿಂಗ್ ಸಾಧನೆ ಗುರುತಿಸುತ್ತದೆ. ಕಾರ್ಯಾಚರಣೆಯ ಮೊಬಿಲಿಟಿಯನ್ನು ಹೆಚ್ಚಿಸುವಲ್ಲಿ ಮತ್ತು ಸಶಸ್ತ್ರ ಪಡೆಗಳಿಗೆ ಲಾಜಿಸ್ಟಿಕಲ್ (ಸಾಗಾಣೆ) ಬೆಂಬಲವನ್ನು ಬಲಪಡಿಸುವಲ್ಲಿ ಇದರ ಕಾರ್ಯತಂತ್ರದ ಪ್ರಾಮುಖ್ಯತೆ ಇದೆ. ಇದು ಆರೋಗ್ಯ ರಕ್ಷಣೆ, ಶಿಕ್ಷಣ, ಮಾರುಕಟ್ಟೆಗಳು ಮತ್ತು ಅಗತ್ಯ ಸೇವೆಗಳಿಗೆ ಲಭ್ಯತೆಯನ್ನು ಸುಧಾರಿಸುವ ಮೂಲಕ ಝನ್ಸ್ಕಾರ್ ನಿವಾಸಿಗಳಿಗೆ ಅನುಕೂಲಗಳನ್ನು ಒದಗಿಸುತ್ತದೆ.

ಇಂಧನ ಭದ್ರತೆಯನ್ನು ಬಲಪಡಿಸುವ ಮತ್ತು ಲಡಾಖ್‌ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಬಳಸಿಕೊಳ್ಳುವ ಪ್ರಯತ್ನಗಳ ಭಾಗವಾಗಿ, ಪ್ರಧಾನಮಂತ್ರಿ ಅವರು 9 ಮೆಗಾವ್ಯಾಟ್ ಸಾಮರ್ಥ್ಯದ ಹನು ಕಿರು ಜಲವಿದ್ಯುತ್ ಯೋಜನೆ ಮತ್ತು 66 ಕೆವಿ ಡಬಲ್-ಸರ್ಕ್ಯೂಟ್ ದಹ್-ಹನು-ಖಲ್ಟ್ಸಿ ಪ್ರಸರಣ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಯೋಜನೆಗಳು ವಿದ್ಯುತ್ ಪ್ರಸರಣಾ ಮೂಲಸೌಕರ್ಯವನ್ನು ಬಲಪಡಿಸುತ್ತವೆ ಮತ್ತು ಲಡಾಖ್‌ನ ವಿದ್ಯುತ್ ಜಾಲದ ವಿಶ್ವಾಸಾರ್ಹತೆಯನ್ನು ಸುಧಾರಿಸುತ್ತವೆ. ಈ ಪ್ರದೇಶದ ಜಲವಿದ್ಯುತ್ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮತ್ತು ಅದರ ಇಂಧನ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಅವು ಒಂದು ಪ್ರಮುಖ ಹೆಜ್ಜೆಯನ್ನು ಗುರುತಿಸುತ್ತವೆ.

ಲಡಾಖ್‌ನ ಪ್ರಾಚೀನ ಪುರಾತತ್ವ ಪರಂಪರೆಯನ್ನು ಸಂರಕ್ಷಿಸುವ ಮಹತ್ವವನ್ನು ಗುರುತಿಸಿರುವ ಪ್ರಧಾನಮಂತ್ರಿ, ಲೇಹ್‌ನ ಸಿಂಧು ಘಾಟ್‌ನಲ್ಲಿ ಭಾರತದ ಮೊದಲ ಪೆಟ್ರೋಗ್ಲಿಫ್ ಸಂರಕ್ಷಣಾ ಪಾರ್ಕ್ ಅನ್ನು ಉದ್ಘಾಟಿಸಲಿದ್ದಾರೆ. ಲಡಾಖ್‌ನಲ್ಲಿ ವನ್ಯಜೀವಿಗಳ ಕೆತ್ತನೆಗಳು, ಮಾನವರ ಮೂರ್ತಿಗಳು ಮತ್ತು ಸಾವಿರಾರು ವರ್ಷಗಳ ಮಾನವ ಇತಿಹಾಸದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡುವ ಸಾಂಕೇತಿಕ ಪ್ರಾತಿನಿಧ್ಯಗಳನ್ನು ಒಳಗೊಂಡಿರುವ ನೂರಾರು ಇತಿಹಾಸಪೂರ್ವ ಶಿಲಾ ಕಲಾ ತಾಣಗಳಿವೆ. ಈ ಶಿಲಾಲಿಪಿಗಳು ಪ್ರದೇಶದ ಸಾಂಸ್ಕೃತಿಕ ಮತ್ತು ನಾಗರಿಕತೆಯ ಭೂತಕಾಲದ ಅಳಿಸಲಾಗದ ದಾಖಲೆಗಳಾಗಿವೆ. ಈ ದುರ್ಬಲ ಪುರಾತತ್ವ ಅವಶೇಷಗಳನ್ನು ರಕ್ಷಿಸಲು, ಸಾರ್ವಜನಿಕ ಜಾಗೃತಿ ಮೂಡಿಸಲು ಮತ್ತು ಜವಾಬ್ದಾರಿಯುತ ಪರಂಪರೆ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಸಂರಕ್ಷಣಾ ಉದ್ಯಾನವನವು ಮೀಸಲಾದ ಸ್ಥಳವನ್ನು ಒದಗಿಸುತ್ತದೆ.

ಮಿಷನ್ ಅಮೃತ ಸರೋವರದ ಉದ್ದೇಶಗಳಿಗೆ ಅನುಗುಣವಾಗಿ ಜಲ ಸಂರಕ್ಷಣೆಯ ಮೂಲಕ ಲಡಾಖ್‌ನ ವಿಶಿಷ್ಟ ಭೌಗೋಳಿಕ ಹಾಗೂ ಹವಾಮಾನ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ‘ಪ್ರಾಜೆಕ್ಟ್ ಹಿಮ್ ಸರೋವರ’ ಯೋಜನೆಯಡಿ 40 ಗ್ರಾಮಗಳಲ್ಲಿ ಅಭಿವೃದ್ಧಿಪಡಿಸಲಾದ 40 ಜಲಮೂಲಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಲಡಾಖ್‌ನಲ್ಲಿ ಕೃಷಿಯು ನೀರಿನ ಲಭ್ಯತೆ ಮತ್ತು ಬೇಡಿಕೆಯ ನಡುವೆ ಋತುಮಾನದ ಅಸಮತೋಲನವನ್ನು ಎದುರಿಸುತ್ತದೆ. ಹಿಮ ಕರಗುವಿಕೆ ಮತ್ತು ಹಿಮನದಿಯ ಹರಿವು ಇತರ ಅವಧಿಗಳಲ್ಲಿ ಗಣನೀಯ ಪ್ರಮಾಣದ ನೀರಿನ ಸಂಪನ್ಮೂಲಗಳನ್ನು ಒದಗಿಸಿದರೂ ಸಹ, ನಿರ್ಣಾಯಕ ಬಿತ್ತನೆ ಋತುವಿನಲ್ಲಿ ರೈತರು ಸಾಮಾನ್ಯವಾಗಿ ನೀರಿನ ಕೊರತೆಯನ್ನು ಅನುಭವಿಸುತ್ತಾರೆ. ಹಿಮ್ ಸರೋವರ್ ಯೋಜನೆಯು ನೀರು ಲಭ್ಯವಿದ್ದಾಗ ಅದನ್ನು ಸಂರಕ್ಷಿಸುವ ಮೂಲಕ ಮತ್ತು ಅಗತ್ಯವಿದ್ದಾಗ ಅದರ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಈ ಸವಾಲನ್ನು ಎದುರಿಸಲು ಪ್ರಯತ್ನಿಸುತ್ತದೆ, ಇದರಿಂದಾಗಿ ನೀರಾವರಿ ಬೆಂಬಲಿಸುವುದು, ಕೃಷಿ ಜೀವನೋಪಾಯವನ್ನು ಸುಸ್ಥಿರಗೊಳಿಸುವುದು ಮತ್ತು ಈ ಪ್ರದೇಶದಲ್ಲಿ ದೀರ್ಘಕಾಲೀನ ಜಲ ಭದ್ರತೆಯನ್ನು ಬಲಪಡಿಸಲಾಗುವುದು.

 

*****