Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರು ಬಾಬಾ ಬಾಂದಾ ಸಿಂಗ್ ಬಹದ್ದೂರ್ ಜಿ ಅವರು ಹುತಾತ್ಮರಾದ 300ನೇ ವರ್ಷಾಚರಣೆ ಸ್ಮಾರಕ ಸಮಾರಂಭದಲ್ಲಿ ಮಾಡಿದ ಭಾಷಣ ದ ಪಠ್ಯ

ಪ್ರಧಾನಮಂತ್ರಿ ಅವರು ಬಾಬಾ ಬಾಂದಾ ಸಿಂಗ್ ಬಹದ್ದೂರ್  ಜಿ  ಅವರು ಹುತಾತ್ಮರಾದ 300ನೇ ವರ್ಷಾಚರಣೆ ಸ್ಮಾರಕ ಸಮಾರಂಭದಲ್ಲಿ ಮಾಡಿದ ಭಾಷಣ ದ  ಪಠ್ಯ

ಪ್ರಧಾನಮಂತ್ರಿ ಅವರು ಬಾಬಾ ಬಾಂದಾ ಸಿಂಗ್ ಬಹದ್ದೂರ್  ಜಿ  ಅವರು ಹುತಾತ್ಮರಾದ 300ನೇ ವರ್ಷಾಚರಣೆ ಸ್ಮಾರಕ ಸಮಾರಂಭದಲ್ಲಿ ಮಾಡಿದ ಭಾಷಣ ದ  ಪಠ್ಯ


ಬಾಬಾ ಬಾಂದಾ ಸಿಂಗ್ ಬಹದ್ದೂರ್ ಅವರು ಹುತಾತ್ಮರಾಗಿ ಇಲ್ಲಿಗೆ ಸರಿಯಾಗಿ 300 ವರ್ಷಗಳಾಗುತ್ತಿದ್ದು, ಇದನ್ನು ಪಂಜಾಬ್ನಲ್ಲಿ ಮಾತ್ರವಲ್ಲದೆ, ಜಗತ್ತಿನಾದ್ಯಂತ ನಮ್ಮ ಭಾರತೀಯ ಸಹೋದರ-ಸಹೋದರಿಯರು ಇರುವೆಡೆಗಳಲ್ಲೆಲ್ಲ ತುಂಬಾ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಬಾಬಾ ಬಾಂದಾ ಸಿಂಗ್ ಅವರು ದೇಶದ ಹಿತಕ್ಕಾಗಿ ಪ್ರಾಣತ್ಯಾಗ ಮಾಡಿದ್ದನ್ನು ಸ್ಮರಿಸಿಕೊಂಡು ಅವರಿಗೆ ಶಿರಬಾಗಿ ನಮಿಸುತ್ತಿರುವ ಈ ಸಂದರ್ಭದಲ್ಲಿ, ಅಂಥ ಓರ್ವ ಸಿಖ್ ಧೀರನ ಬಗ್ಗೆ ನನ್ನ ಹೃದಯಾಂತರಾಳದ ಕೆಲವು ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತಿದ್ದೇನೆ. 
 
ನಾವು ಕೆಲವು ಕ್ಷಣಗಳ ಹಿಂದಷ್ಟೆ, ಕವಿ ರವೀಂದ್ರನಾಥ ಟ್ಯಾಗೋರರು ಬಾಬಾ ಬಾಂದಾ ಸಿಂಗ್ ಅವರ ತ್ಯಾಗ ಮತ್ತು ಹೋರಾಟಗಳ ರೋಮಾಂಚಕ ಜೀವನದ ಬಗ್ಗೆ ರಚಿಸಿರುವ ಸುಂದರವಾದ ಒಂದು ಕವಿತೆಯನ್ನು ಕೇಳಿದೆವು (ಟ್ಯಾಗೋರರು ಮೂಲತಃ ಬಂಗಾಳಿ ಭಾಷೆಯಲ್ಲಿ ರಚಿಸಿರುವ ಈ ಕವಿತೆಗೆ `ಬಾಂದಾ ಬೀರ್’ ಎನ್ನುವ ಶೀರ್ಷಿಕೆಯನ್ನು ಕೊಡಲಾಗಿದೆ). ಈ ಕವಿತೆಯು ಅಕ್ಷರಶಃ ಬಾಬಾ ಬಾಂದಾ ಸಿಂಗ್ ಅವರ ಆ ಯುಗಮಾನವನ್ನು ಪುನರ್ಸೃಷ್ಟಿಸಿದೆ. ಅವರು ನಿಜಕ್ಕೂ ಬಹುದೊಡ್ಡ ವ್ಯಕ್ತಿಯಾಗಿದ್ದು, ಅಜೇಯ ಸೇನಾನಿಯಾಗಿದ್ದರು ಎನ್ನುವ ಅಂಶ ದೇಶಭಕ್ತಿಯ ಭಾವನೆಯಿಂದ ತುಂಬಿರುವ ಈ ಮನೋವೇಧಕವಾದ ಕವಿತೆಯಿಂದ ನಮಗೆ ಸ್ಪಷ್ಟವಾಗುತ್ತದೆ. ಅವರು ಕೇವಲ ತಮ್ಮ ತ್ಯಾಗ ಮನೋಭಾವ, ಮುಂದಾಳ್ತನ, ಶೌರ್ಯ-ಪರಾಕ್ರಮಗಳಿಂದ ಮಾತ್ರವಲ್ಲ, ಸಾಮಾಜಿಕ ಸುಧಾರಣೆಗಳ ಮೂಲಕವೂ ಜನರನ್ನು ಅವರ ದುಃಖದುಮ್ಮಾನಗಳಿಂದ ಪಾರು ಮಾಡಬೇಕು ಎನ್ನುವ ಉದಾತ್ತ ಮನೋಭಾವದಿಂದಲೂ ಈ ಹಿರಿಮೆಗೆ ತಳಪಾಯ ಹಾಕಿದವರಾಗಿದ್ದಾರೆ. ಅಂಥ ಒಬ್ಬ ಮಹಾನ್ ವ್ಯಕ್ತಿಯಿಂದ ಮತ್ತಷ್ಟು ಸ್ಫೂರ್ತಿಯನ್ನು ಪಡೆದುಕೊಳ್ಳುವ ಸಲುವಾಗಿ ನಾವಿಂದು ಅವರು ಹುತಾತ್ಮರಾದ ನೆನಪಿನ 300ನೇ ವರ್ಷಾಚರಣೆಯನ್ನು ಹಮ್ಮಿಕೊಂಡಿದ್ದೇವೆ. ಇದರಲ್ಲಿ ಬಾಬಾ ಬಾಂದಾ ಸಿಂಗ್ ಅವರ ಬದುಕಿನಿಂದ ಅಮೂಲ್ಯವಾದುದನ್ನು ಕಲಿಯಬೇಕೆಂಬ ಮತ್ತು ಅದನ್ನೆಲ್ಲ ನಮ್ಮ ಅನುದಿನದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬ ಸದಾಶಯವೂ ಇದೆ. 
 
ಬಾಬಾ ಬಾಂದಾ ಸಿಂಗ್ ಬಹದ್ದೂರ್ ಅವರ ಅಚ್ಚಳಿಯದ ಪ್ರಭಾವವು ಕೇವಲ ಪಂಜಾಬಿಗಾಗಲಿ, ಉತ್ತರ ಭಾರತಕ್ಕಾಗಲಿ ಸೀಮಿತವಲ್ಲ. ಬದಲಿಗೆ, ಅವರ ಆದರ್ಶಪೂರ್ಣ ಮತ್ತು ಅನುಕರಣೀಯ ಜೀವನವು ಕಳೆದ ಮೂರು ಶತಮಾನಗಳಿಂದ ಭಾರತೀಯರೆಲ್ಲರ ಪಾಲಿಗೂ ಸ್ಫೂರ್ತಿದಾಯಕವಾಗಿದೆ. ಬಾಬಾ ಬಾಂದಾ ಸಿಂಗ್ ಅವರು ಧೀರೋದಾತ್ತ ಸಿಖ್ ಸೇನಾನಿಯಾಗಿದ್ದರಷ್ಟೆ ಅಲ್ಲ, ಅವರು ಅತ್ಯಂತ ಸಂವೇದನಾಶೀಲ ಮತ್ತು ಸ್ವಾರ್ಥರಹಿತ ಆಡಳಿತಗಾರರಾಗಿಯೂ ನಮ್ಮ ಚರಿತ್ರೆಯಲ್ಲಿ ತಮ್ಮ ಮುದ್ರೆಯನ್ನೊತ್ತಿದ್ದಾರೆ. ಅವರು ಪ್ರತಿಪಾದಿಸುತ್ತಿದ್ದ ಮಾನವೀಯ ಮೌಲ್ಯಗಳು ಎಂಥವೆಂಬುದನ್ನು ಗುರುದೇವ ಟ್ಯಾಗೋರರು ತಮ್ಮ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದು, ಆ ಅಂಶವೇ ಅವರನ್ನು ಒಬ್ಬ ಅನುಕರಣಯೋಗ್ಯ ವ್ಯಕ್ತಿಯನ್ನಾಗಿಯೂ ಇತರರಿಗೆ ಜೀವಮಾನದುದ್ದಕ್ಕೂ ಪ್ರೇರಣೆ ಪಡೆಯುವಂಥ ಸ್ಫೂರ್ತಿಸೆಲೆಯನ್ನಾಗಿಯೂ ಮಾಡಿದೆ. ಅವರು ತಮ್ಮ ಬದುಕಿನ ಬಹುಭಾಗವನ್ನು ಪ್ರತಿಕೂಲ ಪರಿಸ್ಥಿತಿ ಮತ್ತು ಯುದ್ಧದ ನೆರಳಿನಲ್ಲೇ ಕಳೆದರು. ಆದರೂ ಅವರು ಅರೆಘಳಿಗೆಯೂ ನ್ಯಾಯದ ಹಾದಿಯನ್ನು ಬಿಟ್ಟು ಹೋಗಲಿಲ್ಲ. ಇತಿಹಾಸದಲ್ಲಿ ಇಂಥ ಪರಾಕ್ರಮಿಗಳು ನಿಜಕ್ಕೂ ತುಂಬಾ ಅಪರೂಪ. 
 
ಬಾಂದಾ ಸಿಂಗ್ ಅವರು ತಮ್ಮ ಜೀವನದುದ್ದಕ್ಕೂ ಕೇವಲ ಖಡ್ಗವನ್ನು ಹಿಡಿದುಕೊಂಡಿದ್ದಂಥ ವ್ಯಕ್ತಿಯಲ್ಲ; ಬದಲಿಗೆ, ಅವರು ಅಲಗಿನ ಮೇಲೆ ಕೂತೇ ತಮ್ಮ ಬದುಕನ್ನೆಲ್ಲ ಸವೆಸಿದರು ಎನ್ನುವುದು ಸತ್ಯ. ಹೀಗಾಗಿಯೇ, ಅಂಥ ಪ್ರಕ್ಷುಬ್ಧ ಪರಿಸ್ಥಿತಿಯಲ್ಲೂ ಅವರು ತಮ್ಮ ಮಾರ್ಗದಿಂದಾಗಲಿ, ಗುರಿಗಳಿಂದಾಗಲಿ ಆಚೀಚೆಗೆ ಹೋಗಲಿಲ್ಲ. ಇಂಥವರು ನಮ್ಮ ಇತಿಹಾಸದಲ್ಲಿ ತೀರಾ ಅಪರೂಪ ಎನ್ನುವುದು ನನ್ನ ಅಭಿಪ್ರಾಯ.
 
ಬಾಬಾ ಬಾಂದಾ ಸಿಂಗ್ ಬಹದ್ದೂರ್ ಅವರು ಆ ಕಾಲದ ಅಗತ್ಯವಾಗಿದ್ದ, ಅತ್ಯಂತ ಧೈರ್ಯಸಾಹಸಗಳಿಂದಲೂ ಪರಾಕ್ರಮದಿಂದಲೂ ಕೂಡಿದ್ದ ಕೆಲಸಗಳನ್ನು ಮಾಡಿದವರಾಗಿದ್ದಾರೆ. ಅವರು ಕವಿಗಳಾದ ರವೀಂದ್ರನಾಥ ಟ್ಯಾಗೋರರಿಗೂ ಸ್ಫೂರ್ತಿ ನೀಡಿದ್ದಾರೆ ಎನ್ನುವುದೇ ಇದಕ್ಕೊಂದು ಅಸಾಧಾರಣ ಉದಾಹರಣೆಯಾಗಿದೆ. ಜೀವನದಲ್ಲಿ ಎದುರಾಗುವ ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಧೃತಿಗೆಡದೆ ಮತ್ತು ಸ್ವಾಭಿಮಾನವನ್ನು ಬಿಟ್ಟುಕೊಡದೆ ನಾವು ಹೇಗೆ ಹೋರಾಡಬೇಕು ಎನ್ನುವುದಾದರೆ, ಟ್ಯಾಗೋರರು ಬಾಂದಾ ಸಿಂಗ್ ಅವರನ್ನು ಕುರಿತು ಬರೆದಿರುವ ಕವಿತೆಯಲ್ಲಿರುವ ಒಂದೊಂದು ಪದವೂ ನಮಗೆ ಆ ನಿಟ್ಟಿನಲ್ಲಿ ಸರಿಯಾದ ದಾರಿಯನ್ನು ತೋರಿಸುತ್ತವೆ. ಜತೆಗೆ, ನಾವೂ ಸಹ ಅಂಥ ಧೀರೋದಾತ್ತವಾದ ಜೀವನವನ್ನು ಸಾಗಿಸುವಂತೆ ಸದಾ ಸ್ಫೂರ್ತಿ ನೀಡುತ್ತದೆ. 
 
ಬಾಂದಾ ಬಹದ್ದೂರ್ ಸಿಂಗ್ ಅವರು ಜನಿಸಿದ 18ನೇ ಶತಮಾನದ ಕಾಲಘಟ್ಟದಲ್ಲಿ ನಮ್ಮ ಇಡೀ ದೇಶ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಕ್ಷುಬ್ಧ ಸ್ಥಿತಿಯಲ್ಲಿತ್ತು. ಇದು ಆಬಾಲವೃದ್ಧರಾದಿಯಾಗಿ ಎಲ್ಲರ ಮೇಲೂ ನೇರವಾಗಿ ತನ್ನದೇ ಆದ ಪರಿಣಾಮ ಬೀರುತ್ತಿದ್ದು, ಇದಕ್ಕೆ ಯಾವ ಪ್ರದೇಶವೂ ಹೊರತಾಗಿರಲಿಲ್ಲ. ಇದು ಚಿಕ್ಕ ಹುಡುಗನಾಗಿದ್ದ ಬಾಂದಾ ಬಹದ್ದೂರ್ ಅವರ ಮೇಲೂ ಸಹಜವಾಗಿಯೇ ಪ್ರಭಾವವನ್ನು ಬೀರಿತು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅವರು, ಕ್ರಮೇಣ ಇದನ್ನೆಲ್ಲ ತಮ್ಮ ವ್ಯಕ್ತಿತ್ವದ ಭಾಗವಾಗಿಸಿಕೊಂಡರು.
 
ಆದರೆ, ಕೆಲವೊಮ್ಮೆ ಅರೆಕ್ಷಣದ ಮಟ್ಟಿಗೆ ಉಂಟಾಗುವ ಆತ್ಮಸಾಕ್ಷಾತ್ಕಾರವು ಆ ಮನುಷ್ಯನ ಮುಂದಿನ ದಿಕ್ಕುದೆಸೆಗಳನ್ನೆಲ್ಲ ನಿರ್ಧರಿಸುತ್ತವೆ ಎಂಬ ಮಾತುಂಟು. ಬಾಂದಾ ಬಹದ್ದೂರ್ ಅವರ ಬದುಕಿನಲ್ಲೂ ಇಂಥದೇ ಘಟನೆಯೊಂದು ನಡೆಯಿತು. ಅದೇನೆಂದರೆ, ತಮ್ಮ ಹರೆಯದ ದಿನಗಳಲ್ಲಿ ಬೇಟೆಯ ಹವ್ಯಾಸವನ್ನು ಹೊಂದಿದ್ದ ಅವರು ಒಮ್ಮೆ ಹೆಣ್ಣು ಸಾರಂಗವೊಂದನ್ನು ಕೊಂದುಬಿಟ್ಟರು. ಎರಡು ಎಳೆಯ ಮರಿಗಳ ತಾಯಿಯಾಗಿದ್ದ ಆ ಸಾರಂಗವು ಆಗ ಒಡಲಿನಲ್ಲೊಂದು ಮರಿಯನ್ನು ಹೊತ್ತುಕೊಂಡಿತ್ತು. ಬಾಣದ ಏಟು ತಿಂದ ಆ ಸಾರಂಗ ಮತ್ತು ಆ ಎರಡೂ ಮರಿಗಳು ವಿಲವಿಲನೆ ಒದ್ದಾಡುತ್ತ ಪ್ರಾಣ ಬಿಟ್ಟಿದ್ದನ್ನು ಕಂಡು ಬಾಂದಾ ಬಹದ್ದೂರ್ ಅವರ ಹೃದಯ ವಿಹ್ವಲಗೊಂಡಿತಲ್ಲದೆ, ತಮ್ಮ ಕೃತ್ಯಕ್ಕಾಗಿ ಅವರು ತೀವ್ರ ಪಶ್ಚಾತ್ತಾಪ ಪಟ್ಟರು. ಇದರ ಫಲವಾಗಿ ಅವರ ಅಂತರಂಗದಲ್ಲಿ ವೈರಾಗ್ಯ ಭಾವನೆ ಹುಟ್ಟಿ, ಅವರು ವಿರಾಗಿಯಾದರು.
 
ತರುಣ ವಯಸ್ಸಿನ ರಾಜಕುಮಾರನೊಬ್ಬ ಕೊನೆಗೆ ಹೇಗೆ ಭಗವಾನ್ ಬುದ್ಧನಾದ ಎನ್ನುವ ಕತೆಯನ್ನು ನಾವೆಲ್ಲರೂ ಕೇಳಿದ್ದೇವೆ. ಒಂದಾನೊಂದು ಕಾಲದಲ್ಲಿ ಇಬ್ಬರು ಸೋದರ ಸಂಬಂಧಿಗಳು ಕಾಡಿಗೆ ಹೋಗಿದ್ದರು. ಆಗ ಅವರಲ್ಲೊಬ್ಬ ಅಲ್ಲಿ ಸ್ಚಚ್ಛಂದವಾಗಿ ಹಾರಾಡುತ್ತಿದ್ದ ಹಂಸವೊಂದಕ್ಕೆ ಬಾಣ ಬಿಟ್ಟು, ಅದನ್ನು ಕೊಂದು ಹಾಕಿದ. ಹೀಗೆ ಹಿಂಸೆಯ ಪಕ್ಷವನ್ನು ವಹಿಸಿದವನು ದೇವದತ್ತನಾಗಿದ್ದ. ಆದರೆ, ಅಲ್ಲಿದ್ದ ರಾಜಕುಮಾರ ಸಿದ್ದಾರ್ಥನು ಕರುಣೆ ಮತ್ತು ರಕ್ಷಣೆಯ ಪಕ್ಷವನ್ನು ವಹಿಸಿದ. ಬಳಿಕ, ಈ ಸಿದ್ದಾರ್ಥನೇ ಬುದ್ಧನೆಂದು ಜಗದ್ವಿಖ್ಯಾತನಾದ. ಬಾಂದಾ ಬಹದ್ದೂರ್ ಅವರ ಹೃದಯದಲ್ಲೂ ಮಹತ್ತರ ಪರಿವರ್ತನೆಯನ್ನು ಉಂಟುಮಾಡಿದ್ದು ಇಂಥದೇ ಒಂದು ಪುಟ್ಟ ಘಟನೆ! ಇದೇ ಮುಂದೆ ಅವರನ್ನು ಗುರು ಗೋವಿಂದ್ ಸಿಂಗ್ ಅವರ ಪದತಲಕ್ಕೆ ಕರೆದುಕೊಂಡು ಹೋಯಿತು. 
 
ನಾಂದೇಡ್ನಲ್ಲಿ ಗುರು ಗೋವಿಂದ್ ಸಿಂಗ್ ಅವರನ್ನು ಸಂಧಿಸಿದ ಬಾಂದಾ ಸಿಂಗ್ ಅವರು ಲೌಕಿಕ ಬದುಕಿಗೆ ಸಂಪೂರ್ಣವಾಗಿ ವಿದಾಯ ಹೇಳಿ, ತಮ್ಮ ಭೂತಕಾಲದ ಬದುಕನ್ನೆಲ್ಲ ಮರೆತರು. ಆಗ ಗುರು ಗೋವಿಂದ್ ಸಿಂಗ್ ಅವರು ಇವರಿಗೆ `ಬಾಂದಾ ಬಹದ್ದೂರ್’ ಎಂಬ ಪದವಿಯನ್ನು ದಯಪಾಲಿಸಿದರು. ಇದರೊಂದಿಗೆ ಬಾಂದಾ ಬಹದ್ದೂರ್ ಅವರ ಪೂರ್ವಾಶ್ರಮದ ಹೆಸರಾದ `ಮಾಧೋದಾಸ್’ ಎನ್ನುವುದು ಚರಿತ್ರೆಯ ಭಾಗವಾಗಿ ಹೋಯಿತು. ಗುರು ಗೋವಿಂದ್ ಸಿಂಗ್ ಅವರಿಂದ ಸ್ಫೂರ್ತಿಯನ್ನು ಪಡೆದ ತರುಣ ಬಾಂದಾ ಬಹದ್ದೂರ್, ವೀರಸೇನಾನಿಯಾಗುವ ಹಾದಿಯನ್ನು ತುಳಿದರು. ತಮ್ಮ ಗುರುಗಳು ಪ್ರತಿಪಾದಿಸುತ್ತಿದ್ದ ಮೌಲ್ಯಗಳನ್ನೆಲ್ಲ ಅವರು ಕಾಯಾ ವಾಚಾ ಮನಸಾ ಅಳವಡಿಸಿಕೊಂಡರು. ಬಾಂದಾ ಬಹದ್ದೂರ್ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ಗುರುಗಳಿಗೆ ಸಮರ್ಪಿಸಿಕೊಂಡಿದ್ದು ಭಾರತದಲ್ಲಿ ಯುಗಯುಗಗಳಿಂದ ಇರುವ ಗುರು-ಶಿಷ್ಯ ಪರಂಪರೆಗೆ ಒಂದು ಉಜ್ವಲ ಉದಾಹರಣೆಯಾಗಿದೆ ಎಂದು ನಾನು ಘಂಟಾಘೋಷವಾಗಿ ಹೇಳಬಲ್ಲೆ. ಗುರು ಗೋವಿಂದ್ ಸಿಂಗ್ ಅವರ ಶಿಷ್ಯರಾದ ಬಾಂದಾ ಬಹದ್ದೂರ್, ಸಮಾಜದ ಸಮಸ್ತರನ್ನೂ ಬೆಸೆದು, ಹೇಗೆ ಅದ್ಭುತವಾದ ಸಾಮಾಜಿಕ ಪರಿವರ್ತನೆಯನ್ನು ತಂದರು ಎನ್ನುವುದಕ್ಕೆ ಇತಿಹಾಸದ ಪುಟಗಳೇ ಸಾಕ್ಷಿಯಾಗಿವೆ. 
 
ಛತ್ರಪತಿ ಶಿವಾಜಿ ಮಹಾರಾಜರು ಮಾಳ್ವದ ಸೈನಿಕರನ್ನೆಲ್ಲ ಒಗ್ಗೂಡಿಸಿ, ಒಂದು ಬೃಹತ್ ಸೇನೆಯನ್ನೇ ಕಟ್ಟಿದ್ದು ನಮಗೆಲ್ಲ ಗೊತ್ತಿದೆ. ಬಾಂದಾ ಸಿಂಗ್ ಬಹದ್ದೂರ್ ಕೂಡ ಇದೇ ಬಗೆಯಲ್ಲಿ ಸಮಾಜದ ಎಲ್ಲಾ ಸಮುದಾಯಗಳ ಜನರನ್ನೂ ಒಗ್ಗೂಡಿಸಿ, ಅತ್ಯತ್ತಮ   ಸಂಘಟಕರಾಗಿ, ಒಂದು ಸೇನೆಯನ್ನು ಕಟ್ಟಿದವರೇ ಆಗಿದ್ದಾರೆ. ನಮ್ಮ ಅಂತರಾಳದಲ್ಲಿ ಕಾಣುವ ಕನಸುಗಳನ್ನೆಲ್ಲ ಒಗ್ಗಟ್ಟೆಂಬ ಮಂತ್ರದ ಮೂಲಕ ನನಸು ಮಾಡಿಕೊಳ್ಳಬಹುದು ಎನ್ನುವುದನ್ನು ಅವರು ತಮ್ಮ ಜೀವಮಾನದುದ್ದಕ್ಕೂ ತೋರಿಸಿದರು. ಆ ಕಾಲದಲ್ಲಿ ಅವರಿಗೆ ಅಗತ್ಯವಾದ ಹಣಕಾಸಾಗಲಿ, ರಾಜಾಧಿಕಾರವಾಗಲಿ, ಅಗತ್ಯ ಸಂಪನ್ಮೂಲಗಳಾಗಲಿ ಇರಲಿಲ್ಲ. ಸಂಘಟನಾ ಸಾಮರ್ಥ್ಯ ಮತ್ತು ಅವರೊಳಗಿದ್ದ ಅಪರಿಮಿತ ಉತ್ಸಾಹ ಮಾತ್ರ ಅವರಲ್ಲಿದ್ದ ಶಕ್ತಿಗಳಾಗಿದ್ದವು. ಅವರು ಯಾವ ಕೆಲಸವನ್ನೇ ಕೈಗೊಳ್ಳಲಿ, ಅದನ್ನು ಸಾಧಿಸದೆ ಬಿಡುತ್ತಿರಲಿಲ್ಲ. ಇದಕ್ಕಾಗಿ ಅವರು ತಮ್ಮನ್ನು ತಾವು ಹೃತ್ಪೂರ್ವಕವಾಗಿ ತೊಡಗಿಸಿಕೊಳ್ಳುತ್ತಿದ್ದರಲ್ಲದೆ, ಯಾವ ತ್ಯಾಗವನ್ನು ಬೇಕಾದರೂ ಮಾಡುತ್ತಿದ್ದರು. 
 
ಇಡೀ ಪಂಜಾಬಿನ ಇತಿಹಾಸದಲ್ಲೇ ಬಾಂದಾ ಸಿಂಗ್ ಬಹದ್ದೂರ್ ಅವರ ಆಳ್ವಿಕೆಯ ಅವಧಿಯಲ್ಲಿ ಮೊಟ್ಟಮೊದಲ ಬಾರಿಗೆ ಬಡರೈತರಿಗೆ ಕೂಡ ಆಸ್ತಿಯ ಹಕ್ಕನ್ನು ಕೊಡಲಾಯಿತು. `ಯಾರು ಬಿತ್ತುತ್ತಾರೋ, ಅವರೇ ಅದರ ಫಲವನ್ನೂ ಉಣ್ಣಬೇಕು,’ ಎನ್ನುವ ತತ್ವವನ್ನು ಅಳವಡಿಸಿಕೊಂಡಿದ್ದ ಅವರು, ರೈತರ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲು ಪಣ ತೊಟ್ಟರು. ಏಕೆಂದರೆ, ಈ ಮೂಲಕ ಮಾತ್ರ ಬಡವರನ್ನು ಮೇಲಕ್ಕೆತ್ತಬಹುದಲ್ಲದೆ, ಸಮಾಜದ ಸರ್ವತೋಮುಖ ಪ್ರಗತಿಯನ್ನು ಸಾಧಿಸಬಹುದು ಎನ್ನುವುದು ಅವರಿಗೆ ಗೊತ್ತಿತ್ತು. ಸಮಾಜವಾದಿ ಸಿದ್ಧಾಂತವನ್ನು ಪ್ರತಿಪಾದಿಸುವವರೆಲ್ಲ, ಬಾಂದಾ ಸಿಂಗ್ ಅವರ ಆಳ್ವಿಕೆಯ ಪ್ರತಿಯೊಂದು ನಿರ್ಧಾರಗಳನ್ನು ನೋಡಿದ್ದೇ ಆದಲ್ಲಿ ಶ್ರೀಸಾಮಾನ್ಯರ ಉದ್ಧಾರಕ್ಕೆ ಇಡಬೇಕಾದ ಹೆಜ್ಜೆಗಳೇನು ಎನ್ನುವುದು ಅವರಿಗೆ ಖಂಡಿತವಾಗಿಯೂ ಗೊತ್ತಾಗುತ್ತದೆ. ಅಲ್ಲದೆ, ಶ್ರೀಸಾಮಾನ್ಯರನ್ನು ಒಗ್ಗೂಡಿಸುವ ಮೂಲಕ ಅವರಲ್ಲಿ ಅಭಿವೃದ್ಧಿಯ ಕಿಚ್ಚನ್ನು ಹೊತ್ತಿಸಲೂಬಹುದು. ನಮ್ಮ ಸಮಾಜದ ಸರ್ವಾಂಗೀಣ ಪ್ರಗತಿಯನ್ನು ಸಾಧಿಸಲು ಬಡತನದ ಮೂಲೋತ್ಪಾಟನೆಯು ಎಷ್ಟೊಂದು ಅಗತ್ಯ ಎನ್ನುವುದನ್ನು ಅವರು ಚೆನ್ನಾಗಿ ಮನಗಂಡಿದ್ದರು. ಅಷ್ಟೇ ಅಲ್ಲ, ಸಮಾಜದ ಎಲ್ಲ ವರ್ಗಗಳ ಸಮಾನ ಅಭಿವೃದ್ಧಿಯನ್ನು ಸಾಧಿಸಲು ಎದುರಾದ ಅಡೆತಡೆಗಳನ್ನೆಲ್ಲ ಬಾಂದಾ ಬಹದ್ದೂರ್ ಅವರು ಯಶಸ್ವಿಯಾಗಿ ನಿವಾರಿಸಿಕೊಂಡರು. ಅವರ ಆಡಳಿತವು ಬಡವರ ಹಿತಾಸಕ್ತಿಗಳನ್ನು ಕಾಯುತ್ತಿತ್ತಲ್ಲದೆ, ಅಲ್ಪಸಂಖ್ಯಾತರಿಗೆ ಕೂಡ ಯಾವುದೇ ತರತಮವಿಲ್ಲದೆ ನ್ಯಾಯವನ್ನು ಒದಗಿಸುತ್ತಿತ್ತು. 
 
ಬಾಬಾ ಬಾಂದಾ ಸಿಂಗ್ ಬಹದ್ದೂರ್ ಅವರು ಅಸಾಧಾರಣವಾದ ಸೇನಾನಿಯಾಗಿದ್ದರು / ಹೋರಾಟಗಾರರಾಗಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.  ಆದರೆ, ಅವರು ಪ್ರಜಾಸತ್ತೆಯೆಡೆಗೆ ಹೊಂದಿದ್ದ ಬದ್ಧತೆ ಮತ್ತು ಶ್ರದ್ಧೆಗಳು ಇಂದಿಗೂ ಸ್ಫೂರ್ತಿದಾಯಕವಾದ ಉದಾಹರಣೆಗಳಾಗಿವೆ. ಅವರು ಎಂದಿಗೂ ಆಡಳಿತಾತ್ಮಕ ಅಧಿಕಾರವನ್ನೆಲ್ಲ ತಮ್ಮ ಹಿಡಿತದಲ್ಲಿ ಇಟ್ಟುಕೊಂಡವರಲ್ಲ. ಬದಲಿಗೆ, ಅವರು ತಮ್ಮನ್ನು ತಾವು ಆಡಳಿತ ವ್ಯವಸ್ಥೆಯ ಒಬ್ಬ ಭಾಗೀದಾರ ಎಂದು ಭಾವಿಸಿದ್ದರು. ಹೀಗಾಗಿಯೇ ಅವರು, ತಮ್ಮ ಹೆಸರಿನಲ್ಲಿ ನಾಣ್ಯಗಳನ್ನು ಟಂಕಿಸಲಿಲ್ಲ. ಬದಲಿಗೆ, ಸಿಖ್ಖರ ಮೊದಲನೇ ಧರ್ಮಗುರುಗಳಾದ ಶ್ರೀ ಗುರು ನಾನಕರು ಮತ್ತು ಹತ್ತನೇ ಧರ್ಮಗುರುಗಳಾದ ಶ್ರೀ ಗುರು ಗೋವಿಂದ್ ಸಿಂಗ್ ಅವರ ಹೆಸರು/ಮೊಹರಿನಲ್ಲಿ ಅವುಗಳನ್ನು ಹೊರತಂದರು. ಈ ಮೂಲಕ ಅವರು, ನಾಣ್ಯಗಳ ಮೇಲೆ ಅದುವರೆಗೂ ಇರುತ್ತಿದ್ದ ರಾಜ್ಯಾಧಿಕಾರದ ಮುದ್ರೆಗಳಿಗೆ ವಿದಾಯ ಹೇಳಿದರು. ಅವರು ಎಂದಿಗೂ ತಮ್ಮನ್ನು ತಾವು ದೊಡ್ಡ ಮನುಷ್ಯರೆಂಬಂತೆ ಬಿಂಬಿಸಿಕೊಂಡವರಾಗಲಿ/ ತಮಗೆ ತಾವೇ ಹಿರಿಮೆ-ಗರಿಮೆಗಳನ್ನು ಲಗತ್ತಿಸಿಕೊಂಡವರಾಗಲಿ ಅಲ್ಲ. ಆದರೆ, ಇವತ್ತಿನ ರಾಜಕಾರಣ ಇದಕ್ಕೆ ತದ್ವಿರುದ್ಧವಾಗಿದೆ. ಅವರಿಗೆ, ತಮ್ಮ ರಾಜ್ಯಾಧಿಕಾರವನ್ನು ಚಲಾಯಿಸುವ ಎಲ್ಲ ಹಕ್ಕುಗಳೂ ಇದ್ದವು. ಆದರೆ, ಅವರು ಎಂದಿಗೂ ಅವುಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲಿಲ್ಲ. ಇದು, ಆ ಕಾಲದಲ್ಲೇ ಅವರು ಪ್ರಜಾತಾಂತ್ರಿಕ ಮೌಲ್ಯಗಳೆಡೆಗೆ ಎಷ್ಟೊಂದು ಅಗಾಧವಾದ ಕಕ್ಕುಲಾತಿಯನ್ನು ಹೊಂದಿದ್ದರು ಎನ್ನುವುದನ್ನು ತೋರಿಸುತ್ತದೆ. 
 
ಬಾಂದಾ ಸಿಂಗ್ ಬಹದ್ದೂರ್ ಅವರು ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ವೈವಿಧ್ಯಗಳೆಡೆಗೂ ಅಪಾರ ಗೌರವವನ್ನು ಇಟ್ಟುಕೊಂಡಿದ್ದರು. ಅಮರಚೇತನರಾದ ಹುತಾತ್ಮರ ಕಥನಗಳೆಲ್ಲವೂ ಇತಿಹಾಸದ ಪ್ರತಿಯೊಂದು ಪುಟಗಳಲ್ಲೂ ಸರಿಯಾಗಿ ದಾಖಲಾಗಬೇಕೆಂದು ನಾನು ಒತ್ತಿ ಹೇಳುತ್ತೇನೆ. ಇಲ್ಲದಿದ್ದರೆ, ಬಾಬಾ ಬಾಂದಾ ಸಿಂಗ್ ಬಹದ್ದೂರ್ ಅವರಂಥ ಹುತಾತ್ಮರ ಉದಾಹರಣೆಗಳು ನಮಗೆ ಸಿಕ್ಕುವುದೇ ದುರ್ಲಭವಾಗಿ ಬಿಡುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಏಕಾಂಗಿಯಾಗಿದ್ದರು, ನಿಜ. ಆದರೆ, ಅವರ ಅಂತರಂಗವನ್ನು ಆವರಿಸಿಕೊಂಡಿದ್ದ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಮಹೋನ್ನತ ಭಾವನೆಗಳು ಅವರಿಗೆ ಅಗಾಧವಾದ ಶಕ್ತಿಯನ್ನು ತಂದುಕೊಟ್ಟಿದ್ದವು. ಹೀಗಾಗಿಯೇ ಅವರು ಯಾವುದೇ ಬಗೆಯ ಹಿಂಸೆಗಾಗಲಿ, ಭಯಾನಕವಾದ ಹತ್ಯೆಗಾಗಲಿ ಹೆದರುತ್ತಿರಲಿಲ್ಲ. ಬದಲಿಗೆ, ಅವೆಲ್ಲವನ್ನೂ ಅವರು ಪ್ರಚಂಡ ರ್ಧೈರ್ಯದಿಂದಲೂ ಮೌನದಿಂದಲೂ ಸಹಿಸಿಕೊಳ್ಳುತ್ತಿದ್ದರು. 
 
ಬಾಬಾ ಬಾಂದಾ ಸಿಂಗ್ ಬಹದ್ದೂರ್ ಅವರು ಹುತಾತ್ಮರಾಗಿ 300 ವರ್ಷಗಳಾಗುತ್ತಿರುವ ನೆನಪಿನ ಈ ಸಂದರ್ಭದಲ್ಲಿ ಆ ಅಸಾಧಾರಣ ಹೋರಾಟಗಾರರಿಗೆ ನಾನು ಸಾವಿರ ನಮನಗಳನ್ನು ಸಲ್ಲಿಸುತ್ತಿದ್ದೇನೆ! `ಶ್ರೀ ಗುರು ಗ್ರಂಥ ಸಾಹಿಬ್’ನಲ್ಲಿರುವ ಕಬೀರರ ವಾಣಿ ಹೀಗಿದೆ-
 
ಯಾರು ಬಡವರಿಗಾಗಿ ಹೋರಾಡುತ್ತಾನೋ ಅವನೇ ನಿಜವಾದ ಸೇನಾನಿ;
ತಮ್ಮನ್ನೇ ತುಂಡರಿಸಿದರೂ ಸರಿ, ಅವರು ರಣಾಂಗಣದಿಂದ ಓಡಿ ಹೋಗುವುದಿಲ್ಲ
 
(ಸುರ ಸೋ ಪಹ್ಚಾನಿಯೇ, ಜೋ ಲಡೇ ದೀನ್ ಕಿ ಹೆತ್ / ಪುರ್ಜಾ ಪುರ್ಜಾ ಕತ್ ಮರೇ ಕಭೂ ನಾ ಛೋಡೇ ಖೇತ್)
 
ಶ್ರೀ ಪ್ರಕಾಶ್ ಸಿಂಗ್ ಬಾದಲ್ ಅವರ ನೇತೃತ್ವದಲ್ಲಿ ಪಂಜಾಬ್ ಸರ್ಕಾರವು ಛಾಪರ್ ಚಿರಿಯ ಸಮರಾಂಗಣದಲ್ಲಿ ಬಾಂದಾ ಬಹದ್ದೂರ್ ಮತ್ತು ಅವರ ಸೇನೆಯಲ್ಲಿದ್ದು ಹುತಾತ್ಮರಾದ ನೂರಾರು ಯೋಧರ ಗೌರವಾರ್ಥವಾಗಿ 2010ರಲ್ಲಿ `ವಿಜಯ ಗೋಪುರ’ವನ್ನು (ಫತೇ ಬುರ್ಜ್) ನಿರ್ಮಿಸುವ ಮೂಲಕ ಸ್ಮರಣಾರ್ಹ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿರುವುದನ್ನು ನೋಡಿ ನನಗೆ ಅತೀವ ಸಂತೋಷವಾಗಿದೆ. ಈ `ವಿಜಯ ಗೋಪುರ’ವು ಪಂಜಾಬಿನ ತರುಣ ಮತ್ತು ಮುಂಬರುವ ಪೀಳಿಗೆಗಳಿಗಷ್ಟೆ ಅಲ್ಲ, ಇಡೀ ದೇಶದ ಯುವಜನರಿಗೆ ಅತ್ಯಂತ ದೊಡ್ಡ ಸ್ಫೂರ್ತಿಯ ಸೆಲೆಯಾಗಿದೆ. 
 
ಬಾಬಾ ಬಾಂದಾ ಸಿಂಗ್ ಬಹದ್ದೂರ್ ಅವರು ಹುತಾತ್ಮರಾದ 300ನೇ ವರ್ಷಾಚರಣೆಯ ನಿಮಿತ್ತ ಪಂಜಾಬ್ ಸರ್ಕಾರವು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಜತೆಗೂಡಿ ಇಡೀ ವರ್ಷ ಅನೇಕ ಕಾರ್ಯಕ್ರಮಗಳನ್ನು ನಡೆಸಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಇದರ ಅಂಗವಾಗಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿವೆ. ಇಂಥ ಧೀರಚೇತನರಾದ ಬಾಂದಾ ಸಿಂಗ್ ಬಹದ್ದೂರ್ ಅವರಿಗೆ ನನ್ನ ಪ್ರಣಾಮಗಳು ಮತ್ತು ಮುಂಬರುವ ಎಲ್ಲ ಕಾರ್ಯಕ್ರಮಗಳಿಗೂ ನನ್ನ ಶುಭ ಹಾರೈಕೆಗಳು!
 
ಈ ವರ್ಷವು ಕೋಟ್ಯಂತರ ಭಾರತೀಯರ ಪಾಲಿಗೆ ಸಂತೋಷದಾಯಕವಾಗಿದೆ. ಏಕೆಂದರೆ, ನಾವು ಈ ವರ್ಷವೇ
 ಶ್ರೀ ಗುರು ಗೋವಿಂದ್ ಸಿಂಗ್ ಅವರ 350ನೇ ಜನ್ಮದಿನವನ್ನು ದೇಶಾದ್ಯಂತ ಅಪಾರ ಶ್ರದ್ಧೆ-ಗೌರವಗಳಿಂದ ಆಚರಿಸಲಿದ್ದೇವೆ. ಇಷ್ಟೇ ಅಲ್ಲ, ಜಗತ್ತಿನ ಯಾವ್ಯಾವ ಭಾಗದಲ್ಲಿ ಭಾರತೀಯರಿದ್ದಾರೋ ಅಲ್ಲೆಲ್ಲ ಶ್ರೀ ಗುರು ಗೋವಿಂದ್ ಸಿಂಗ್ ಅವರ ಈ ಜನ್ಮ ದಿನವನ್ನು ಆಚರಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರವು 100 ಕೋಟಿ ರೂಪಾಯಿಗಳನ್ನು ಎತ್ತಿಟ್ಟಿದೆ. ಇದನ್ನು ಸ್ಮರಣಾರ್ಹ ರೀತಿಯಲ್ಲಿ ಆಚರಿಸಬೇಕೆಂಬ ಉದ್ದೇಶದಿಂದಲೇ, ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸುವ ಸಲುವಾಗಿ ಉನ್ನತ ಮಟ್ಟದ ರಾಷ್ಟ್ರೀಯ ಸಮಿತಿಯನ್ನೂ ರಚಿಸಲಾಗಿದೆ. 
 
ಹುತಾತ್ಮರನ್ನು ನೆನಪಿಸಿಕೊಳ್ಳುವ ಇಂಥ ಕಾರ್ಯಕ್ರಮಗಳು ಮುಂಬರುವ ಪೀಳಿಗೆಗಳನ್ನು ನಮ್ಮ ಬೇರುಗಳೊಂದಿಗೆ ಬೆಸೆಯುತ್ತವೆ ಎನ್ನುವ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ. ಯಾರು ಇತಿಹಾಸವನ್ನು ಮರೆಯುತ್ತಾರೋ ಅಂಥವರು ಎಂದಿಗೂ ಹೊಸ ಚರಿತ್ರೆಯನ್ನು ಸೃಷ್ಟಿಸಲಾರರು. ಬದಲಿಗೆ, ಯಾರು ಚರಿತ್ರೆಯೊಂದಿಗೆ ಸಂಬಂಧವನ್ನು ಹೊಂದಿರುತ್ತಾರೋ ಅಂಥವರಿಂದ ಮಾತ್ರ ಇದು ಸಾಧ್ಯ. ನಾವು 300ನೇ ವರ್ಷವನ್ನೇ ಆಚರಿಸಲಿ, 350ನೇ ವರ್ಷವನ್ನೇ ಆಚರಿಸಲಿ ಅಥವಾ ಬೇರೊಂದು ಶತಾಬ್ದಿಯನ್ನೇ ಆಚರಿಸಲಿ, ಅವೆಲ್ಲವೂ ನಮ್ಮನ್ನು ನಮ್ಮ ಗತವೈಭವದೊಂದಿಗೂ ಉಜ್ವಲವಾದ ಚಾರಿತ್ರಿಕ ಪರಂಪರೆಯೊಂದಿಗೂ ನಮ್ಮನ್ನು 
ಕೂಡಿಸಲಿದೆ. ಇವು ನಮ್ಮೆಲ್ಲರಿಗೂ ದಣಿವರಿಯದ ಶಕ್ತಿ, ಪ್ರಚಂಡವಾದ ಪ್ರೇರಣೆ ಮತ್ತು ಉದಾತ್ತವಾದ ಪ್ರಜ್ಞೆಯನ್ನು ದಯಪಾಲಿಸುತ್ತವೆ. ಈ ಮೂಲಕ ನಾವು ಯಾವ ಬಗೆಯ ಭವಿಷ್ಯದ ದಾರಿಯನ್ನು ಆರಿಸಿಕೊಳ್ಳಬೇಕೆಂಬ ಎಚ್ಚರವನ್ನು ಇಂಥ ಕಾರ್ಯಕ್ರಮಗಳು ಬೆಳೆಸುತ್ತವೆ. 
 
ಬಾಬಾ ಬಾಂದಾ ಸಿಂಗ್ ಬಹದ್ದೂರ್ ಅವರ ತ್ಯಾಗ-ಬಲಿದಾನಗಳು ಮತ್ತು ಅವರು ಅತ್ಯುತ್ತಮ ಆಡಳಿತಗಾರರಾಗಿ ಹಾಗೂ ಸಮಾಜ ಸುಧಾರಕರಾಗಿ ಮಾಡಿದ ಸಾಧನೆಗಳು ಜಗತ್ತಿನೆಲ್ಲೆಡೆ ಇಂದು ಅವರನ್ನು ಸ್ಮರಿಸಿಕೊಳ್ಳುತ್ತಿರುವವರನ್ನು ತಲುಪುತ್ತವೆ ಎನ್ನುವ ವಿಶ್ವಾಸ ನನಗಿದೆ. ಈ ದೇಶ ಮತ್ತು ಈ ಸಮಾಜದ ಸೇವೆಗೈಯಲು ಬೇಕಾದ ಸ್ಫೂರ್ತಿಯು ನಮಗೆ ಅವರ ಜೀವನ-ಸಾಧನೆಗಳಿಂದ ಸಿಗುತ್ತದೆ ಎನ್ನುವ ಭರವಸೆಯೊಂದಿಗೆ ನಾನು ಬಾಬಾ ಬಾಂದಾ ಸಿಂಗ್ ಅವರ ಪದತಲಗಳಿಗೆ ಗೌರವಪೂರ್ವಕವಾಗಿ ನಮಿಸುತ್ತಿದ್ದೇನೆ. ಈ ಬೃಹತ್ ಸಮಾರಂಭದಲ್ಲಿ ಭಾಗವಹಿಸುವ ಅವಕಾಶವನ್ನು ಕೊಟ್ಟಿದ್ದಕ್ಕಾಗಿ ಮತ್ತು ನೀವೆಲ್ಲರೂ ನನಗೆ ಇಷ್ಟೊಂದು ಗೌರವವನ್ನು ನೀಡಿರುವುದಕ್ಕಾಗಿ ನಾನು ನಿಮ್ಮೆಲ್ಲರಿಗೂ ಆಭಾರಿಯಾಗಿದ್ದೇನೆ. 
ವಹೇಗುರು ಜೀ ಕಾ ಖಾಲ್ಸಾ, ವಹೇಗುರು ಜೀ ಕೀ ಫತೇ! 
***