Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಮಾಡಿದ ಭಾಷಣ ದ ಪಠ್ಯ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಮಾಡಿದ ಭಾಷಣ ದ ಪಠ್ಯ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಮಾಡಿದ ಭಾಷಣ ದ ಪಠ್ಯ 


ಪರಮ ಪೂಜ್ಯ ಶ್ರೀ ಶ್ರೀ ರವಿಶಂಕರ ಜೀ, ಎಲ್ಲಾ ಹಿರಿಯ ಗಣ್ಯರೆ,
 
ಭಾರತದ ಪವಿತ್ರ ಭೂಮಿಗೆ ನಾನು ತಮ್ಮೆಲ್ಲರನ್ನೂ ಹೃದಯಪೂರ್ವಕ ಸ್ವಾಗತ ಕೋರುತ್ತೇನೆ. ಭಾರತ ಅನೇಕ ವೈವಿಧ್ಯತೆಗಳಿಂದ ತುಂಬಿ ತುಳುಕುತ್ತಿದೆ. ವಿಶ್ವಕ್ಕೆ ನೀಡಲು ಭಾರತದ ಬಳಿ ಏನಿಲ್ಲ? ಪ್ರಪಂಚ ಕೇವಲ ಆರ್ಥಿಕ ಹಿತಾಸಕ್ತಿಗಳಿಂದ ಕೂಡಿದೆ ಎಂದು ಭಾವಿಸಬಾರದು, ವಿಶ್ವ ಮಾನವೀಯ ಮೌಲ್ಯಗಳಿಂದ ಕೂಡ ಒಂದುಗೂಡಬಹುದು ಹಾಗೂ ಒಂದುಗೂಡಿಸಬಹುದು ಮತ್ತು ಒಂದುಗೂಡಲೇಬೇಕಿದೆ.
 
ಭಾರತದ ಬಳಿ ಇಡೀ ವಿಶ್ವ ಅನ್ವೇಷಿಸುತ್ತಿರುವ ಸಾಂಸ್ಕೃತಿಕ ಪರಂಪರೆಯಿದೆ, ಸಾಂಸ್ಕೃತಿಕ ಅಡಿಪಾಯವಿದೆ. ನಾವು ವಿಶ್ವದ ಅನೇಕ ಆವಶ್ಯಕತೆಗಳನ್ನು ಯಾವುದಾದರೂ ರೂಪದಲ್ಲಿ ಕೆಲ ಮಟ್ಟಿಗಾದರೂ ಪೂರ್ಣಗೊಳಿಸಬಹುದಾಗಿದೆ. ನಮಗೆ ನಮ್ಮ ಮಹಾನ್ ಪರಂಪರೆಯ ಬಗ್ಗೆ ಹೆಮ್ಮೆಯುಂಟಾದಾಗ, ಅಭಿಮಾನವಾದಾಗ ಮಾತ್ರ ಇದು ಸಾಧ್ಯ.
ನಮಗೆ ನಾವೇ ಕೆಳಮಟ್ಟದಲ್ಲಿ ಯೋಚಿಸುತ್ತಿದ್ದರೆ, ನಾವೇ ನಮ್ಮೆಲ್ಲ ವಿಚಾರಗಳನ್ನೂ ದೂಷಿಸುತ್ತಿದ್ದರೆ ವಿಶ್ವ ನಮ್ಮೆಡೆಗೆ ಏಕೆ ನೋಡುತ್ತದೆ.
 
35 ವರ್ಷಗಳ ಕಡಿಮೆ ಅವಧಿಯ ಈ ಮಿಷನ್ ವಿಶ್ವದ 150ಕ್ಕೂ ಅಧಿಕ ದೇಶಗಳಲ್ಲಿ ಇದೇ ಸಾಮರ್ಥ್ಯದ ಭರವಸೆಯ ಮೇರೆಗೆ ಹರಡಿಕೊಂಡಿದೆ ಮತ್ತು ಆ ದೇಶಗಳನ್ನು ತನ್ನದಾಗಿಸಿ ಕೊಂಡಿದ್ದೇವೆ ಎಂಬ ಶ್ರೀಮಾನ್ ಶ್ರೀ ಶ್ರೀ ರವಿಶಂಕರ್ ಜೀ ಯವರ ಮಾತುಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆರ್ಟ್ ಆಫ್ ಲಿವಿಂಗ್ ನ ಮೂಲಕ ವಿಶ್ವದ ದೃಷ್ಟಿಯಲ್ಲಿ ಭಾರತಕ್ಕೆ ಒಂದು ವಿಶಿಷ್ಟ ಸ್ಥಾನವನ್ನು ನೀಡುವಲ್ಲಿ ಈ ಕಾರ್ಯ ಒಂದು ಮಹತ್ವದ ಕೊಡುಗೆಯನ್ನು ನೀಡಿದೆ.
ನಾನು ಕೆಲ ದಿನಗಳ ಹಿಂದೆ ಮಂಗೋಲಿಯಾ ಪ್ರವಾಸ ಕೈಗೊಂಡಿದ್ದೆ. ಅಲ್ಲಿನ ಒಂದು ಕ್ರೀಡಾಂಗಣದಲ್ಲಿ ಆರ್ಟ್ ಆಫ್ ಲಿವಿಂಗ್ ನ ಎಲ್ಲ ಬಂಧುಗಳೂ ಸೇರಿ ಸ್ವಾಗತ ಸಮಾರಂಭ ಏರ್ಪಡಿಸಿದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು. ಅವರಲ್ಲಿ ಭಾರತೀಯರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರು. ಸಂಪೂರ್ಣ ಕ್ರೀಡಾಂಗಣ ಮಂಗೋಲಿಯಾ ಪ್ರಜೆಗಳಿಂದ ತುಂಬಿತ್ತು. ಅವರುಗಳು ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಯಾವ ರೀತಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದ್ದರು ಎಂದರೆ ಅದು ಸ್ವತ: ಅತ್ಯಂತ ಪ್ರೇರಕವಾಗಿತ್ತು. ಎಲ್ಲಿ ಅಧಿಕಾರ ಮತ್ತು ಸಾರ್ವಭೌಮತ್ವದ ಪ್ರವೇಶವಿರುವುದಿಲ್ಲವೊ, ಅಂತಹ ಕಡೆ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸಾಧು ಶಕ್ತಿಯ ಪ್ರವೇಶ ಒಂದು ದೊಡ್ಡ ಪಾತ್ರ ವಹಿಸುತ್ತದೆ.
 
ನಾವಿಂದು ಒಂದು ಕುಂಭ ಮೇಳದ ದರ್ಶನ ಮಾಡುತ್ತಿದ್ದೇವೆ. ಇದು ಕಲೆಯ ಕುಂಭಮೇಳ. ಭಾರತ ಕಲೆಯಿಂದ ಸಮೃದ್ಧವಾಗಿತ್ತು. ಇಲ್ಲಿ ಕಲೆ ಸಂಪೂರ್ಣ ಅಭಿವೃದ್ದಿಗೊಂಡಿತ್ತು. ಈ ಭೂಮಿಯ ಪ್ರತಿಕ್ಷಣದ ಸಂಗೀತ ಭಿನ್ನ ಭಿನ್ನವಾಗಿದೆ. ಮುಂಜಾವಿನ ಸಂಗೀತ ಬೇರೆಯದಾಗಿದ್ದರೆ ಸಂಜೆಯ ಸಂಗೀತವೇ ಬೇರೆ. ಆದುದರಿಂದ ಮಾರುಕಟ್ಟೆಯಲ್ಲಿ ಸಂಗೀತ ಪ್ರಪಂಚವನ್ನು ಹುಡುಕ ಹೊರಟರೆ, ಶರೀರವನ್ನು ಪ್ರಚೋದಿಸುವ ಸಂಗೀತವು ಮಾರುಕಟ್ಟೆಯನ್ನು ತುಂಬಿದೆ ಆದರೆ ಮನಸ್ಸನ್ನು ಪ್ರಚೋದಿಸುವ ಸಂಗೀತವು ಭಾರತದಲ್ಲಿ ತುಂಬಿದೆ. ಪ್ರಪಂಚ ಇಂದು ಮನಸ್ಸನ್ನು ಬೆಸೆಯಲು ಬಯಸುತ್ತಿದೆ. ಪ್ರಪಂಚದ ಮನಸ್ಸನ್ನು ಬೆಸೆಯುವುದೇ ಸಂಗೀತದ ಸಾಧನೆ.
 
ಕಲೆಯ ಮೂಲಕ ಯಾವುದೇ ದೇಶವನ್ನು ನೋಡಿದಾಗ, ಆ ದೇಶದ ಅಂತರ್ಗತ ಶಕ್ತಿಯ ಪರಿಚಯವಾಗುತ್ತದೆ. ಶತಮಾನಗಳ ಕಾಲ ಕಲೆ ಮತ್ತು ಕಲಾ ಸಾಧನೆಯನ್ನು ಮಾಡುತ್ತಿರುವ ಭಾರತದ ಜನತೆ ಇಂದು ವಿಶ್ವಕ್ಕೆ ಒಂದು ಅಮೂಲ್ಯ ಕೊಡುಗೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಕೃತಿ ನಿರ್ವಹಿಸಿದ ಮಾನದಂಡವೇ ಆರ್ಟ್ ಆಫ್ ಲಿವಿಂಗ್ (ಬದುಕುವ ಕಲೆ) ಆಗಿದೆ.  ಸೌಲಭ್ಯ ಮತ್ತು ಸರಳತೆಯಲ್ಲಿ ಜೀವಿಸಬಹುದು, ಆದರೆ ಅದರಲ್ಲಿ ಕಲೆ ಇರುವುದಿಲ್ಲ. ನಾವು ಯಾವುದಾದರೂ ಉದ್ದೇಶವನ್ನು ಇಟ್ಟುಕೊಂಡು ನಡೆಯುತ್ತೇವೆಯೋ, ಆಗ ನಮಗೆ ಆರ್ಟ್ ಆಫ್ ಲಿವಿಂಗ್ (ಬದುಕುವ ಕಲೆ) ಬೇಕಾಗುತ್ತದೆ. ನಾವು ನಮ್ಮ ಕನಸುಗಳನ್ನು ಇಟ್ಟುಕೊಂಡು ನಡೆಯಲು ಆರ್ಟ್ ಆಫ್ ಲಿವಿಂಗ್ ಬೇಕಾಗುತ್ತದೆ. ನಾವು ಸಂಕಟಗಳಿಂದ ಕೊರಗುತ್ತಿರುವಾಗ ಆರ್ಟ್ ಆಫ್ ಲಿವಿಂಗ್ ಬೇಕಾಗುತ್ತದೆ. ನಾವು ನಮಗಾಗಿಯಲ್ಲದೇ ಬೇರೆಯವರಿಗಾಗಿ ಬದುಕುವಾಗ ನಮಗೆ ಆರ್ಟ್ ಆಫ್ ಲಿವಿಂಗ್ ಬೇಕಾಗುತ್ತದೆ.ನಾವು ಸ್ವಯಂನಿಂದ ವಿಶ್ವದೆಡೆಗೆ ಚಲಿಸುವಾಗ ನಮಗೆ ಆರ್ಟ್ ಆಫ್ ಲಿವಿಂಗ್ ಬೇಕಾಗುತ್ತದೆ. ಯಾವಾಗ, ನಾನು ಎಂಬುದು ತೊರೆದು ನಾವು ಎಂಬುದರೆಡೆಗೆ ನಡೆಯುತ್ತೇವೆಯೊ ಆಗ ಆರ್ಟ್ ಆಫ್ ಲಿವಿಂಗ್ ಬೇಕಾಗುತ್ತದೆ.
 
ನಾನು ಬ್ರಹ್ಮ (ಅಹಮ್ ಬ್ರಹ್ಮಾಸ್ಮಿ) ಎಂದು ಪ್ರಾರಂಭ ಮಾಡುವ ನಾವು ವಸುದೈವ ಕುಟುಂಬಕಮ್ (ವಿಶ್ವವೇ ಒಂದು ಕುಟುಂಬ) ಎಂದು ಸಾಗುವುದೇ ಆರ್ಟ್ ಆಫ್ ಲಿವಿಂಗ್. ಉಪನಿಷದ್ ನಿಂದ ಉಪಗ್ರಹಗಳವರೆಗೆ ಯಾತ್ರೆ ಮಾಡಿದ ಜನ ನಾವಾಗಿದ್ದೇವೆ. ಬದುಕುವ ಕಲೆ ನಮ್ಮ ಋಷಿಗಳು, ಮುನಿಗಳು, ಜ್ಞಾನಿಗಳು ಮತ್ತು ತಪಸ್ವಿಗಳ ಪರಂಪರೆಯಿಂದ ನಮಗೆ ದೊರೆತಿದೆ. ಸಂಕಟಗಳಿಂದ ತೊಳಲುತ್ತಿರುವ ಮನುಷ್ಯ, ವ್ಯಕ್ತಿಗತ ಜೀವನದಲ್ಲಿ ಅನೇಕ ತೊಂದರೆಗಳಿಂದ ಬಳಲುತ್ತಿರುವ ಮನುಷ್ಯ….ಭಾರತದ ಕೌಟುಂಬಿಕ ಸಮಸ್ಯೆ, ಕುಟುಂಬ.. ಇಂತಹ ನಮ್ಮ ಪರಂಪರೆಯನ್ನು ವಿಶ್ವ ಕಂಡಾಗ ಅದಕ್ಕೆ ಆಶ್ಚರ್ಯವಾಗುತ್ತದೆ. ನಾವು ಇಂತಹ ಕಲೆಯನ್ನು ಶತಮಾನಗಳಿಂದ ಕಲಿತಿದ್ದೇವೆ, ಆದರೆ ಅದರಲ್ಲಿ ಕೊರತೆ ಕಂಡುಬಂದರೆ, ಅದನ್ನು ಪುನ: ಸರಿಪಡಿಸುವ ಅವಶ್ಯಕತೆ ಇದೆ.
 
ಶ್ರೀ ಶ್ರೀ ರವಿಶಂಕರ್ ಜೀ ಅವರ ಮೂಲಕ ನಡೆಯುತ್ತಿರುವ ಈ ಕಾರ್ಯವನ್ನು ನಾನು ಅಭಿನಂದಿಸುತ್ತೇನೆ ಹಾಗೂ ಶುಭಾಶಯಗಳನ್ನು ಕೋರುತ್ತೇನೆ. ಈ ಭವ್ಯ ಸಮಾರಂಭದ ಮೂಲಕ ಭಾರತದ ಚಿತ್ರಣವನ್ನು ವಿಶ್ವಕ್ಕೆ ಮುಟ್ಟಿಸಿದ ಎಲ್ಲಾ ಕಲಾವಿದರಿಗೂ, ಎಲ್ಲಾ ಸಾಧಕರಿಗೂ, ಆರ್ಟ್ ಆಫ್ ಲಿವಿಂಗ್ ನ ಎಲ್ಲಾ ಕಾರ್ಯಕರ್ತರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.