Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎರಡನೇ ಡಬ್ಲ್ಯು ಎಚ್‌ ಒ ಜಾಗತಿಕ ಸಾಂಪ್ರದಾಯಿಕ ವೈದ್ಯ ಪದ್ಧತಿ ಶೃಂಗಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎರಡನೇ ಡಬ್ಲ್ಯು ಎಚ್‌ ಒ ಜಾಗತಿಕ ಸಾಂಪ್ರದಾಯಿಕ ವೈದ್ಯ ಪದ್ಧತಿ ಶೃಂಗಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಎರಡನೇ ಡಬ್ಲ್ಯು ಎಚ್ ಒ  ಜಾಗತಿಕ ಸಾಂಪ್ರದಾಯಿಕ ವೈದ್ಯ ಪದ್ಧತಿ ಶೃಂಗಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ ಮೂರು ದಿನಗಳಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವದಾದ್ಯಂತದ ತಜ್ಞರು ಗಂಭೀರ ಮತ್ತು ಅರ್ಥಪೂರ್ಣ ಚರ್ಚೆಗಳಲ್ಲಿ ತೊಡಗಿದ್ದಾರೆ ಎಂದು ಎತ್ತಿ ತೋರಿಸಿದರು. ಈ ಉದ್ದೇಶಕ್ಕಾಗಿ ಭಾರತವು ಒಂದು ಬಲಿಷ್ಠ ವೇದಿಕೆಯಾಗಿ ಸೇವೆ ಸಲ್ಲಿಸುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು ಮತ್ತು ಈ ಪ್ರಕ್ರಿಯೆಯಲ್ಲಿ ಡಬ್ಲ್ಯು ಎಚ್ ಒ  ದ ಸಕ್ರಿಯ ಪಾತ್ರವನ್ನು ಗಮನಿಸಿದರು. ಶೃಂಗಸಭೆಯ ಯಶಸ್ವಿ ಆಯೋಜನೆಗಾಗಿ ಅವರು ಡಬ್ಲ್ಯು ಎಚ್ ಒ , ಭಾರತ ಸರ್ಕಾರದ ಆಯುಷ್ ಸಚಿವಾಲಯ ಮತ್ತು ಉಪಸ್ಥಿತರಿದ್ದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

“ಜಾಮ್‌ನಗರದಲ್ಲಿ ಡಬ್ಲ್ಯು ಎಚ್ ಒ ಜಾಗತಿಕ ಸಾಂಪ್ರದಾಯಿಕ ವೈದ್ಯ ಪದ್ಧತಿ ಕೇಂದ್ರವನ್ನು ಸ್ಥಾಪಿಸಿರುವುದು ಭಾರತಕ್ಕೆ ಗೌರವ ಮತ್ತು ಹೆಮ್ಮೆಯ ವಿಷಯವಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು. 2022 ರಲ್ಲಿ ನಡೆದ ಮೊದಲ ಸಾಂಪ್ರದಾಯಿಕ ಔಷಧ ಶೃಂಗಸಭೆಯ ಸಂದರ್ಭದಲ್ಲಿ, ಜಗತ್ತು ಈ ಜವಾಬ್ದಾರಿಯನ್ನು ಬಹಳ ಆತ್ಮವಿಶ್ವಾಸದಿಂದ ಭಾರತಕ್ಕೆ ವಹಿಸಿಕೊಟ್ಟಿತ್ತು ಎಂಬುದನ್ನು ಅವರು ಸ್ಮರಿಸಿದರು. ಕೇಂದ್ರದ ಪ್ರತಿಷ್ಠೆ ಮತ್ತು ಪ್ರಭಾವವು ಜಾಗತಿಕವಾಗಿ ವಿಸ್ತರಿಸುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯವಾಗಿದ್ದು, ಈ ಶೃಂಗಸಭೆಯ ಯಶಸ್ಸೇ ಅದಕ್ಕೆ ದೊಡ್ಡ ಉದಾಹರಣೆಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ಈ ಶೃಂಗಸಭೆಯು ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ಪದ್ಧತಿಗಳ ಸಂಗಮಕ್ಕೆ ಸಾಕ್ಷಿಯಾಗುತ್ತಿದೆ ಮತ್ತು ಇಲ್ಲಿ ಹಲವಾರು ಹೊಸ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ, ಇವು ವೈದ್ಯಕೀಯ ವಿಜ್ಞಾನ ಮತ್ತು ಸಮಗ್ರ ಆರೋಗ್ಯದ ಭವಿಷ್ಯವನ್ನು ಬದಲಾಯಿಸಬಲ್ಲವು ಎಂದು ಅವರು ಹೇಳಿದರು. ಶೃಂಗಸಭೆಯು ವಿವಿಧ ದೇಶಗಳ ಆರೋಗ್ಯ ಸಚಿವರು ಮತ್ತು ಪ್ರತಿನಿಧಿಗಳ ನಡುವೆ ಸಂವಾದಕ್ಕೆ ಅನುಕೂಲ ಮಾಡಿಕೊಟ್ಟಿದೆ, ಇದು ಜಂಟಿ ಸಂಶೋಧನೆಯನ್ನು ಉತ್ತೇಜಿಸಲು, ನಿಯಮಾವಳಿಗಳನ್ನು ಸರಳಗೊಳಿಸಲು ಮತ್ತು ತರಬೇತಿ ಹಾಗೂ ಜ್ಞಾನ ಹಂಚಿಕೆಯನ್ನು ಮುನ್ನಡೆಸಲು ಹೊಸ ಮಾರ್ಗಗಳನ್ನು ತೆರೆದಿದೆ ಎಂದು ಅವರು ಒತ್ತಿ ಹೇಳಿದರು. ಇಂತಹ ಸಹಕಾರವು ಭವಿಷ್ಯದಲ್ಲಿ ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ಹೆಚ್ಚು ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ಶೃಂಗಸಭೆಯ ಅವಧಿಯಲ್ಲಿ ಹಲವಾರು ಪ್ರಮುಖ ವಿಷಯಗಳ ಕುರಿತು ಒಮ್ಮತಕ್ಕೆ ಬಂದಿರುವುದು ಜಾಗತಿಕ ಪಾಲುದಾರಿಕೆಯ ಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ ಶ್ರೀ ಮೋದಿಯವರು, ಸಂಶೋಧನೆಯನ್ನು ಬಲಪಡಿಸುವುದು, ಸಾಂಪ್ರದಾಯಿಕ ವೈದ್ಯ ಪದ್ಧತಿ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವುದು ಮತ್ತು ವಿಶ್ವಾದ್ಯಂತ ನಂಬಬಹುದಾದ ನಿಯಂತ್ರಕ ಚೌಕಟ್ಟುಗಳನ್ನು ರಚಿಸುವುದು ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ಹೆಚ್ಚು ಸಬಲೀಕರಣಗೊಳಿಸುತ್ತದೆ ಎಂದು ತಿಳಿಸಿದರು. ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಡಿಜಿಟಲ್ ಆರೋಗ್ಯ ತಂತ್ರಜ್ಞಾನ, ಎಐ-ಆಧಾರಿತ ಉಪಕರಣಗಳು, ಸಂಶೋಧನಾ ಆವಿಷ್ಕಾರಗಳು ಮತ್ತು ಆಧುನಿಕ ಕ್ಷೇಮ ಮೂಲಸೌಕರ್ಯಗಳು, ಸಂಪ್ರದಾಯ ಮತ್ತು ತಂತ್ರಜ್ಞಾನದ ನಡುವಿನ ಹೊಸ ಸಹಯೋಗವನ್ನು ಒಟ್ಟಾಗಿ ಪ್ರದರ್ಶಿಸಿದವು ಎಂದು ಅವರು ಹೇಳಿದರು. ಸಂಪ್ರದಾಯ ಮತ್ತು ತಂತ್ರಜ್ಞಾನ ಒಂದಾದಾಗ, ಜಾಗತಿಕ ಆರೋಗ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಸಾಮರ್ಥ್ಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ, ಆದ್ದರಿಂದ ಈ ಶೃಂಗಸಭೆಯ ಯಶಸ್ಸು ಜಾಗತಿಕ ದೃಷ್ಟಿಕೋನದಿಂದ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

“ಯೋಗವು ಸಾಂಪ್ರದಾಯಿಕ ವೈದ್ಯ ಪದ್ಧತಿಯ ಅವಿಭಾಜ್ಯ ಅಂಗವಾಗಿದೆ ಮತ್ತು ಇಡೀ ಜಗತ್ತಿಗೆ ಆರೋಗ್ಯ, ಸಮತೋಲನ ಮತ್ತು ಸಾಮರಸ್ಯದ ಹಾದಿಯನ್ನು ತೋರಿಸಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಪ್ರಯತ್ನಗಳು ಮತ್ತು 175ಕ್ಕೂ ಹೆಚ್ಚು ದೇಶಗಳ ಬೆಂಬಲದೊಂದಿಗೆ, ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿತು ಎಂಬುದನ್ನು ಅವರು ಸ್ಮರಿಸಿದರು. ಇತ್ತೀಚಿನ ವರ್ಷಗಳಲ್ಲಿ ಯೋಗವು ಪ್ರಪಂಚದ ಪ್ರತಿಯೊಂದು ಮೂಲೆಗೂ ತಲುಪಿದೆ ಎಂದು ಶ್ರೀ ಮೋದಿ ತಿಳಿಸಿದರು. ಯೋಗದ ಪ್ರಚಾರ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ಅವರು ಶ್ಲಾಘಿಸಿದರು. ಇಂದು ಗೌರವಾನ್ವಿತ ತೀರ್ಪುಗಾರರ ಸಮಿತಿಯು ಕಠಿಣ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿದ ಕೆಲವು ಗಣ್ಯ ವ್ಯಕ್ತಿಗಳಿಗೆ ‘ಪ್ರಧಾನಮಂತ್ರಿಯವರ ಪ್ರಶಸ್ತಿ’ಗಳನ್ನು ನೀಡಿ ಗೌರವಿಸಲಾಗಿದೆ ಎಂದು ಅವರು ಹೇಳಿದರು. ಈ ಪ್ರಶಸ್ತಿ ಪುರಸ್ಕೃತರು ಯೋಗದ ಬಗ್ಗೆ ಹೊಂದಿರುವ ಸಮರ್ಪಣೆ, ಶಿಸ್ತು ಮತ್ತು ಆಜೀವ ಬದ್ಧತೆಯನ್ನು ಸಂಕೇತಿಸುತ್ತಾರೆ ಮತ್ತು ಅವರ ಜೀವನವು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ಪ್ರಶಸ್ತಿ ಪುರಸ್ಕೃತರಿಗೆ ಪ್ರಧಾನಮಂತ್ರಿಯವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಶೃಂಗಸಭೆಯ ಫಲಿತಾಂಶಗಳಿಗೆ ಶಾಶ್ವತ ರೂಪ ನೀಡಲು ಹಲವಾರು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದು ಸಂತೋಷದ ವಿಷಯ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಸಾಂಪ್ರದಾಯಿಕ ವೈದ್ಯ ಪದ್ಧತಿಗೆ ಸಂಬಂಧಿಸಿದ ವೈಜ್ಞಾನಿಕ ದತ್ತಾಂಶ ಮತ್ತು ನೀತಿ ದಾಖಲೆಗಳನ್ನು ಒಂದೇ ಸ್ಥಳದಲ್ಲಿ ಸಂರಕ್ಷಿಸುವ ಜಾಗತಿಕ ವೇದಿಕೆಯಾಗಿ ‘ಸಾಂಪ್ರದಾಯಿಕ ಔಷಧ ಜಾಗತಿಕ ಗ್ರಂಥಾಲಯ’ದ ಉದ್ಘಾಟನೆಯನ್ನು ಅವರು ಒತ್ತಿ ಹೇಳಿದರು. ಈ ಉಪಕ್ರಮವು ಉಪಯುಕ್ತ ಮಾಹಿತಿಯು ಪ್ರತಿಯೊಂದು ದೇಶಕ್ಕೂ ಸಮಾನವಾಗಿ ತಲುಪುವುದನ್ನು ಸುಲಭಗೊಳಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. ಭಾರತದ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ನಡೆದ ಮೊದಲ ಡಬ್ಲ್ಯು ಎಚ್‌ ಒ ಜಾಗತಿಕ ಶೃಂಗಸಭೆಯಲ್ಲಿ ಈ ಗ್ರಂಥಾಲಯದ ಬಗ್ಗೆ ಘೋಷಣೆ ಮಾಡಲಾಗಿತ್ತು ಮತ್ತು ಇಂದು ಆ ಬದ್ಧತೆಯು ಸಾಕಾರಗೊಂಡಿದೆ ಎಂದು ಅವರು ಸ್ಮರಿಸಿದರು.

ವಿವಿಧ ದೇಶಗಳ ಆರೋಗ್ಯ ಸಚಿವರು ಜಾಗತಿಕ ಪಾಲುದಾರಿಕೆಗೆ ಒಂದು ಅತ್ಯುತ್ತಮ ಉದಾಹರಣೆಯನ್ನು ನೀಡಿದ್ದಾರೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪಾಲುದಾರರಾಗಿ ಮಾನದಂಡಗಳು, ಸುರಕ್ಷತೆ ಮತ್ತು ಹೂಡಿಕೆಯಂತಹ ವಿಷಯಗಳ ಕುರಿತು ಚರ್ಚೆಗಳು ನಡೆದಿವೆ ಎಂದು ತಿಳಿಸಿದರು. ಈ ಸಂವಾದವು ‘ದೆಹಲಿ ಘೋಷಣೆ’ಗೆ ದಾರಿ ಮಾಡಿಕೊಟ್ಟಿದೆ ಮತ್ತು ಇದು ಮುಂಬರುವ ವರ್ಷಗಳಿಗೆ ಹಂಚಿಕೆಯ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು. ವಿವಿಧ ದೇಶಗಳ ಗಣ್ಯ ಸಚಿವರ ಈ ಜಂಟಿ ಪ್ರಯತ್ನವನ್ನು ಶ್ರೀ ಮೋದಿಯವರು ಶ್ಲಾಘಿಸಿದರು ಮತ್ತು ಅವರ ಸಹಕಾರಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಇಂದು ದೆಹಲಿಯಲ್ಲಿ ಡಬ್ಲ್ಯು ಎಚ್‌ ಒ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿಯನ್ನು ಉದ್ಘಾಟಿಸಲಾಗಿದೆ ಎಂದು ಶ್ರೀ ಮೋದಿಯವರು ತಿಳಿಸಿದರು ಮತ್ತು ಇದನ್ನು ಭಾರತದ ಕಡೆಯಿಂದ ಒಂದು ‘ವಿನಮ್ರ ಕೊಡುಗೆ’ ಎಂದು ಬಣ್ಣಿಸಿದರು. ಈ ಕಚೇರಿಯು ಸಂಶೋಧನೆ, ನಿಯಮಗಳು ಮತ್ತು ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸಲು ಜಾಗತಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಒತ್ತಿ ಹೇಳಿದರು.

ಜಗತ್ತಿನಾದ್ಯಂತ ಗುಣಪಡಿಸುವ ಪಾಲುದಾರಿಕೆಯ ಮೇಲೆ ಭಾರತವು ಗಮನ ಹರಿಸುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ಮೋದಿಯವರು, ಎರಡು ಪ್ರಮುಖ ಸಹಯೋಗಗಳನ್ನು ಹಂಚಿಕೊಂಡರು. ಮೊದಲನೆಯದಾಗಿ, ದಕ್ಷಿಣ ಮತ್ತು ಆಗ್ನೇಯ ಏಷ್ಯಾವನ್ನು ಒಳಗೊಂಡಿರುವ BIMSTEC ದೇಶಗಳಿಗಾಗಿ ‘ಉತ್ಕೃಷ್ಟತಾ ಕೇಂದ್ರ’ವನ್ನು ಸ್ಥಾಪಿಸುವುದು ಮತ್ತು ಎರಡನೆಯದಾಗಿ, ವಿಜ್ಞಾನ, ಸಾಂಪ್ರದಾಯಿಕ ಪದ್ಧತಿಗಳು ಮತ್ತು ಆರೋಗ್ಯವನ್ನು ಸಂಯೋಜಿಸುವ ಗುರಿಯನ್ನು ಹೊಂದಿರುವ ಜಪಾನ್‌ ನೊಂದಿಗಿನ ಸಹಯೋಗವನ್ನು ಅವರು ಉಲ್ಲೇಖಿಸಿದರು.

ಈ ಶೃಂಗಸಭೆಯ ವಿಷಯವಾದ ‘ಸಮತೋಲನವನ್ನು ಮರುಸ್ಥಾಪಿಸುವುದು: ಆರೋಗ್ಯ ಮತ್ತು ಯೋಗಕ್ಷೇಮದ ವಿಜ್ಞಾನ ಮತ್ತು ಅಭ್ಯಾಸ’ ಎಂಬುದು ಸಮಗ್ರ ಆರೋಗ್ಯದ ಮೂಲಭೂತ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಆಯುರ್ವೇದವು ಸಮತೋಲನವನ್ನು ಆರೋಗ್ಯಕ್ಕೆ ಸಮೀಕರಿಸುತ್ತದೆ ಮತ್ತು ಯಾರ ದೇಹವು ಈ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆಯೋ ಅವರು ಮಾತ್ರ ನಿಜವಾಗಿಯೂ ಆರೋಗ್ಯವಂತರು ಎಂದು ಅವರು ಅಭಿಪ್ರಾಯಪಟ್ಟರು. ಇಂದು ಮಧುಮೇಹ, ಹೃದಯಾಘಾತ ಮತ್ತು ಖಿನ್ನತೆಯಿಂದ ಹಿಡಿದು ಕ್ಯಾನ್ಸರ್‌ ವರೆಗಿನ ಕಾಯಿಲೆಗಳಿಗೆ ಜೀವನಶೈಲಿ ಮತ್ತು ಅಸಮತೋಲನಗಳೇ ಮೂಲ ಕಾರಣಗಳಾಗಿವೆ ಎಂದು ಅವರು ಹೇಳಿದರು. ಇದರಲ್ಲಿ ಕೆಲಸ-ಜೀವನದ ಅಸಮತೋಲನ, ಆಹಾರದ ಅಸಮತೋಲನ, ನಿದ್ರೆಯ ಅಸಮತೋಲನ, ಕರುಳಿನ ಮೈಕ್ರೋಬಯೋಮ್ ಅಸಮತೋಲನ, ಕ್ಯಾಲೋರಿ ಅಸಮತೋಲನ ಮತ್ತು ಭಾವನಾತ್ಮಕ ಅಸಮತೋಲನಗಳು ಸೇರಿವೆ ಎಂದು ಅವರು ತಿಳಿಸಿದರು. ಈ ಅಸಮತೋಲನಗಳಿಂದಾಗಿ ಅನೇಕ ಜಾಗತಿಕ ಆರೋಗ್ಯ ಸವಾಲುಗಳು ಉದ್ಭವಿಸುತ್ತಿವೆ ಎಂಬುದನ್ನು ಅಧ್ಯಯನಗಳು ಮತ್ತು ದತ್ತಾಂಶಗಳು ದೃಢಪಡಿಸುತ್ತಿವೆ ಮತ್ತು ಆರೋಗ್ಯ ತಜ್ಞರು ಇದನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು. ‘ಸಮತೋಲನವನ್ನು ಮರುಸ್ಥಾಪಿಸುವುದು’ ಎಂಬುದು ಕೇವಲ ಜಾಗತಿಕ ಉದ್ದೇಶವಲ್ಲ, ಬದಲಿಗೆ ಅದು ಜಾಗತಿಕ ತುರ್ತು ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು ಮತ್ತು ಇದನ್ನು ಪರಿಹರಿಸಲು ವೇಗವಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದರು.

21ನೇ ಶತಮಾನದಲ್ಲಿ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವ ಸವಾಲು ಮತ್ತಷ್ಟು ಹೆಚ್ಚಾಗಲಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿಯವರು, ಎಐ ಮತ್ತು ರೊಬೊಟಿಕ್ಸ್‌ ನೊಂದಿಗಿನ ಹೊಸ ತಾಂತ್ರಿಕ ಯುಗದ ಆಗಮನವು ಮಾನವ ಇತಿಹಾಸದಲ್ಲಿಯೇ ಅತಿ ದೊಡ್ಡ ರೂಪಾಂತರವನ್ನು ಪ್ರತಿನಿಧಿಸುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ಜೀವನ ವಿಧಾನವು ಅಭೂತಪೂರ್ವ ರೀತಿಯಲ್ಲಿ ಬದಲಾಗಲಿದೆ ಎಂದು ಹೇಳಿದರು. ಇಂತಹ ಹಠಾತ್ ಜೀವನಶೈಲಿ ಬದಲಾವಣೆಗಳು ಮತ್ತು ದೈಹಿಕ ಶ್ರಮವಿಲ್ಲದೆಯೇ ಸಿಗುವ ಸಂಪನ್ಮೂಲ ಹಾಗೂ ಸೌಲಭ್ಯಗಳ ಅನುಕೂಲಗಳು ಮಾನವನ ದೇಹಕ್ಕೆ ಅನಿರೀಕ್ಷಿತ ಸವಾಲುಗಳನ್ನು ಉಂಟುಮಾಡಲಿವೆ ಎಂಬ ಬಗ್ಗೆ ಜಾಗರೂಕರಾಗಿರಬೇಕು ಎಂದು ಅವರು ಒತ್ತಿ ಹೇಳಿದರು. ಸಾಂಪ್ರದಾಯಿಕ ಆರೋಗ್ಯ ರಕ್ಷಣೆಯು ಕೇವಲ ಪ್ರಸ್ತುತ ಅಗತ್ಯಗಳ ಮೇಲೆ ಮಾತ್ರ ಗಮನ ಹರಿಸಬಾರದು, ಬದಲಿಗೆ ಭವಿಷ್ಯದ ಜವಾಬ್ದಾರಿಗಳನ್ನೂ ಎದುರಿಸಬೇಕು, ಇದು ನಮ್ಮೆಲ್ಲರ ಹಂಚಿಕೆಯ ಹೊಣೆಗಾರಿಕೆಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಸಾಂಪ್ರದಾಯಿಕ ವೈದ್ಯ ಪದ್ಧತಿಯ ಬಗ್ಗೆ ಚರ್ಚಿಸುವಾಗ, ಸುರಕ್ಷತೆ ಮತ್ತು ಪುರಾವೆಗಳ ಬಗ್ಗೆ ಸಹಜವಾದ ಪ್ರಶ್ನೆ ಉದ್ಭವಿಸುತ್ತದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಭಾರತವು ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಈ ಶೃಂಗಸಭೆಯ ಅವಧಿಯಲ್ಲಿ ಅಶ್ವಗಂಧದ ಉದಾಹರಣೆಯನ್ನು ನೀಡಲಾಗಿದೆ ಎಂದು ಅವರು ಗಮನಿಸಿದರು. ಶತಮಾನಗಳಿಂದ ಭಾರತದ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಲ್ಲಿ ಅಶ್ವಗಂಧವನ್ನು ಬಳಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಕೋವಿಡ್-19 ಸಮಯದಲ್ಲಿ, ಇದರ ಜಾಗತಿಕ ಬೇಡಿಕೆಯು ತೀವ್ರವಾಗಿ ಹೆಚ್ಚಾಯಿತು ಮತ್ತು ಇದನ್ನು ಅನೇಕ ದೇಶಗಳಲ್ಲಿ ಬಳಸಲು ಪ್ರಾರಂಭಿಸಲಾಯಿತು ಎಂದು ಶ್ರೀ ಮೋದಿ ಹೇಳಿದರು. ಭಾರತವು ತನ್ನ ಸಂಶೋಧನೆ ಮತ್ತು ಪುರಾವೆ ಆಧಾರಿತ ಮೌಲ್ಯೀಕರಣದ ಮೂಲಕ ಅಶ್ವಗಂಧವನ್ನು ವಿಶ್ವಾಸಾರ್ಹ ರೀತಿಯಲ್ಲಿ ಮುನ್ನಡೆಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಈ ಶೃಂಗಸಭೆಯ ಸಂದರ್ಭದಲ್ಲಿ ಅಶ್ವಗಂಧದ ಕುರಿತು ವಿಶೇಷ ಜಾಗತಿಕ ಚರ್ಚೆಯನ್ನು ಆಯೋಜಿಸಲಾಗಿತ್ತು ಎಂದು ಅವರು ತಿಳಿಸಿದರು. ಅಂತರರಾಷ್ಟ್ರೀಯ ತಜ್ಞರು ಅದರ ಸುರಕ್ಷತೆ, ಗುಣಮಟ್ಟ ಮತ್ತು ಬಳಕೆಯ ಬಗ್ಗೆ ಆಳವಾಗಿ ಚರ್ಚಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಇಂತಹ ಕಾಲಪರೀಕ್ಷಿತ ಗಿಡಮೂಲಿಕೆಗಳನ್ನು ಜಾಗತಿಕ ಸಾರ್ವಜನಿಕ ಆರೋಗ್ಯದ ಭಾಗವಾಗಿಸಲು ಭಾರತವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಒಂದು ಕಾಲದಲ್ಲಿ ಸಾಂಪ್ರದಾಯಿಕ ವೈದ್ಯ ಪದ್ಧತಿಯು ಕೇವಲ ಕ್ಷೇಮ ಅಥವಾ ಜೀವನಶೈಲಿಗೆ ಮಾತ್ರ ಸೀಮಿತವಾಗಿದೆ ಎಂಬ ಗ್ರಹಿಕೆ ಇತ್ತು, ಆದರೆ ಇಂದು ಈ ಗ್ರಹಿಕೆ ವೇಗವಾಗಿ ಬದಲಾಗುತ್ತಿದೆ ಎಂದು ಹೇಳಿದ ಶ್ರೀ ಮೋದಿಯವರು, ಗಂಭೀರ ಸಂದರ್ಭಗಳಲ್ಲಿಯೂ ಸಾಂಪ್ರದಾಯಿಕ ವೈದ್ಯ ಪದ್ಧತಿಯು ಪರಿಣಾಮಕಾರಿ ಪಾತ್ರ ವಹಿಸಬಲ್ಲದು ಮತ್ತು ಭಾರತವು ಈ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿದೆ ಎಂದು ತಿಳಿಸಿದರು. ಆಯುಷ್ ಸಚಿವಾಲಯ ಮತ್ತು ಡಬ್ಲ್ಯು ಎಚ್‌ ಒ – ಸಾಂಪ್ರದಾಯಿಕ ವೈದ್ಯ ಪದ್ಧತಿ ಕೇಂದ್ರವು ಹೊಸ ಉಪಕ್ರಮವನ್ನು ಪ್ರಾರಂಭಿಸಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು. ಭಾರತದಲ್ಲಿ ಸಮಗ್ರ ಕ್ಯಾನ್ಸರ್ ಆರೈಕೆಯನ್ನು ಬಲಪಡಿಸಲು ಉಭಯ ಸಂಸ್ಥೆಗಳು ಜಂಟಿ ಪ್ರಯತ್ನವನ್ನು ಮಾಡಿವೆ ಎಂದು ಅವರು ಹೇಳಿದರು, ಇದರ ಅಡಿಯಲ್ಲಿ ಸಾಂಪ್ರದಾಯಿಕ ವೈದ್ಯ ಪದ್ಧತಿಗಳನ್ನು ಆಧುನಿಕ ಕ್ಯಾನ್ಸರ್ ಚಿಕಿತ್ಸೆಯೊಂದಿಗೆ ಸಂಯೋಜಿಸಲಾಗುತ್ತದೆ. ಈ ಉಪಕ್ರಮವು ಪುರಾವೆ ಆಧಾರಿತ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಸಹ ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ರಕ್ತಹೀನತೆ, ಸಂಧಿವಾತ ಮತ್ತು ಮಧುಮೇಹದಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಕುರಿತು ಭಾರತದ ಹಲವಾರು ಪ್ರಮುಖ ಸಂಸ್ಥೆಗಳು ಕ್ಲಿನಿಕಲ್ ಅಧ್ಯಯನಗಳನ್ನು ನಡೆಸುತ್ತಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತದ ಅನೇಕ ನವೋದ್ಯಮಗಳು ಸಹ ಈ ಕ್ಷೇತ್ರವನ್ನು ಪ್ರವೇಶಿಸಿದ್ದು, ಪ್ರಾಚೀನ ಸಂಪ್ರದಾಯದೊಂದಿಗೆ ಯುವಶಕ್ತಿಯು ಕೈಜೋಡಿಸಿದೆ ಎಂದು ಅವರು ತಿಳಿಸಿದರು. ಈ ಎಲ್ಲಾ ಪ್ರಯತ್ನಗಳ ಮೂಲಕ ಸಾಂಪ್ರದಾಯಿಕ ವೈದ್ಯ ಪದ್ಧತಿಯು ನೂತನ ಎತ್ತರಕ್ಕೆ ಏರುತ್ತಿರುವುದು ಗೋಚರಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಸಾಂಪ್ರದಾಯಿಕ ವೈದ್ಯ ಪದ್ಧತಿಯು ಇಂದು ಒಂದು ನಿರ್ಣಾಯಕ ತಿರುವಿನಲ್ಲಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಜಾಗತಿಕ ಜನಸಂಖ್ಯೆಯ ಬಹುದೊಡ್ಡ ಭಾಗವು ದೀರ್ಘಕಾಲದಿಂದ ಇದರ ಮೇಲೆ ಅವಲಂಬಿತವಾಗಿದೆ, ಆದರೂ ಸಾಂಪ್ರದಾಯಿಕ ವೈದ್ಯಕೀಯವು ಅಪಾರ ಸಾಮರ್ಥ್ಯವನ್ನು ಹೊಂದಿದ್ದರೂ ಅದಕ್ಕೆ ನಿಜವಾಗಿ ಸಲ್ಲಬೇಕಾದ ಸ್ಥಾನ ಇನ್ನೂ ಲಭಿಸಿಲ್ಲ ಎಂದು ಅವರು ಹೇಳಿದರು. ವಿಜ್ಞಾನದ ಮೂಲಕ ವಿಶ್ವಾಸವನ್ನು ಗೆಲ್ಲಬೇಕು ಮತ್ತು ಇದರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಅವರು ಒತ್ತಿ ಹೇಳಿದರು. ಈ ಜವಾಬ್ದಾರಿಯು ಯಾವುದೇ ಒಂದು ರಾಷ್ಟ್ರಕ್ಕೆ ಸೀಮಿತವಾಗಿಲ್ಲ, ಬದಲಿಗೆ ಇದು ನಮ್ಮೆಲ್ಲರ ಹಂಚಿಕೆಯ ಕರ್ತವ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು. ಈ ಶೃಂಗಸಭೆಯ ಕಳೆದ ಮೂರು ದಿನಗಳಲ್ಲಿ ಕಂಡುಬಂದ ಸಹಭಾಗಿತ್ವ, ಸಂವಾದ ಮತ್ತು ಬದ್ಧತೆಯು, ಜಗತ್ತು ಈ ದಿಕ್ಕಿನಲ್ಲಿ ಒಟ್ಟಾಗಿ ಮುನ್ನಡೆಯಲು ಸಿದ್ಧವಾಗಿದೆ ಎಂಬ ನಂಬಿಕೆಯನ್ನು ಗಾಢವಾಗಿಸಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ವಿಶ್ವಾಸ, ಗೌರವ ಮತ್ತು ಜವಾಬ್ದಾರಿಯೊಂದಿಗೆ ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ಮುನ್ನಡೆಸಲು ಸಂಕಲ್ಪ ಮಾಡುವಂತೆ ಅವರು ಎಲ್ಲರಿಗೂ ಕರೆ ನೀಡಿದರು ಮತ್ತು ಶೃಂಗಸಭೆಯ ಯಶಸ್ಸಿಗಾಗಿ ಮತ್ತೊಮ್ಮೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯು ಎಚ್‌ ಒ) ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಕೇಂದ್ರ ಸಚಿವರಾದ ಶ್ರೀ ಜೆ.ಪಿ. ನಡ್ಡಾ, ಶ್ರೀ ಪ್ರತಾಪರಾವ್ ಜಾಧವ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಎರಡನೇ ಡಬ್ಲ್ಯು ಎಚ್‌ ಒ ಜಾಗತಿಕ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಶೃಂಗಸಭೆಯು, ಜಾಗತಿಕ, ವಿಜ್ಞಾನ ಆಧಾರಿತ ಮತ್ತು ಜನಕೇಂದ್ರಿತ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಭಾರತದ ಬೆಳೆಯುತ್ತಿರುವ ನಾಯಕತ್ವ ಮತ್ತು ಪ್ರವರ್ತಕ ಉಪಕ್ರಮಗಳನ್ನು ಎತ್ತಿ ತೋರಿಸುತ್ತದೆ.

ಸಂಶೋಧನೆ, ಪ್ರಮಾಣೀಕರಣ ಮತ್ತು ಜಾಗತಿಕ ಸಹಯೋಗದ ಮೂಲಕ ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಭಾರತೀಯ ಜ್ಞಾನ ವ್ಯವಸ್ಥೆಯನ್ನು ಮುಖ್ಯವಾಹಿನಿಗೆ ತರಲು ಪ್ರಧಾನಮಂತ್ರಿಯವರು ನಿರಂತರವಾಗಿ ಒತ್ತು ನೀಡುತ್ತಿದ್ದಾರೆ. ಈ ದೃಷ್ಟಿಕೋನಕ್ಕೆ ಅನುಗುಣವಾಗಿ, ಕಾರ್ಯಕ್ರಮದ ಅವಧಿಯಲ್ಲಿ ಪ್ರಧಾನಮಂತ್ರಿಯವರು ಆಯುಷ್ ಕ್ಷೇತ್ರದ ಸಮಗ್ರ ಡಿಜಿಟಲ್ ಪೋರ್ಟಲ್ ಆಗಿರುವ ‘ಮೈ ಆಯುಷ್ ಇಂಟಿಗ್ರೇಟೆಡ್ ಸರ್ವಿಸಸ್ ಪೋರ್ಟಲ್’ (MAISP) ಸೇರಿದಂತೆ ಹಲವು ಮಹತ್ವದ ಆಯುಷ್ ಉಪಕ್ರಮಗಳನ್ನು ಪ್ರಾರಂಭಿಸಿದರು. ಅವರು ‘ಆಯುಷ್ ಮಾರ್ಕ್’ (Ayush Mark) ಅನ್ನು ಸಹ ಅನಾವರಣಗೊಳಿಸಿದರು, ಇದು ಆಯುಷ್ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟಕ್ಕಾಗಿ ಜಾಗತಿಕ ಮಾನದಂಡವಾಗಿ ರೂಪಿತಗೊಂಡಿದೆ.

ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಯೋಗ ತರಬೇತಿಯ ಕುರಿತಾದ ಡಬ್ಲ್ಯು ಎಚ್‌ ಒ ತಾಂತ್ರಿಕ ವರದಿ ಮತ್ತು “ಫ್ರಮ್ ರೂಟ್ಸ್ ಟು ಗ್ಲೋಬಲ್ ರೀಚ್: 11 ಇಯರ್ಸ್ ಆಫ್ ಟ್ರಾನ್ಸ್‌ಫರ್ಮೇಷನ್ ಇನ್ ಆಯುಷ್” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಭಾರತದ ಸಾಂಪ್ರದಾಯಿಕ ವೈದ್ಯ ಪರಂಪರೆಯ ಜಾಗತಿಕ ಅನುರಣನವನ್ನು ಸಂಕೇತಿಸುವ ಅಶ್ವಗಂಧದ ಸ್ಮರಣಾರ್ಥ ಅಂಚೆ ಚೀಟಿಯನ್ನು ಸಹ ಅವರು ಬಿಡುಗಡೆ ಮಾಡಿದರು.

ಪ್ರಧಾನಮಂತ್ರಿಯವರು ದೆಹಲಿಯಲ್ಲಿ ಹೊಸ ಡಬ್ಲ್ಯು ಎಚ್‌ ಒ -ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿ ಸಂಕೀರ್ಣವನ್ನು ಉದ್ಘಾಟಿಸಿದರು, ಇದು ಡಬ್ಲ್ಯು ಎಚ್‌ ಒ ಭಾರತ ದೇಶದ ಕಚೇರಿಯನ್ನು ಸಹ ಒಳಗೊಂಡಿರಲಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಭಾರತದ ಪಾಲುದಾರಿಕೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ.

2021–2025 ನೇ ಸಾಲಿನ ಯೋಗದ ಪ್ರಚಾರ ಮತ್ತು ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆ’ಗಾಗಿ ಪ್ರಧಾನಮಂತ್ರಿಯವರ ಪ್ರಶಸ್ತಿ ಪುರಸ್ಕೃತರನ್ನು ಪ್ರಧಾನಮಂತ್ರಿಯವರು ಸನ್ಮಾನಿಸಿದರು; ಯೋಗದ ಬಗ್ಗೆ ಅವರ ಸುದೀರ್ಘ ಸಮರ್ಪಣೆ ಮತ್ತು ಅದರ ಜಾಗತಿಕ ಪ್ರಚಾರವನ್ನು ಈ ಮೂಲಕ ಗುರುತಿಸಲಾಯಿತು. ಈ ಪ್ರಶಸ್ತಿಗಳು ಯೋಗವನ್ನು ಸಮತೋಲನ, ಕ್ಷೇಮ ಮತ್ತು ಸಾಮರಸ್ಯದ ಸಾರ್ವಕಾಲಿಕ ಅಭ್ಯಾಸವಾಗಿ ಮರುಸ್ಥಾಪಿಸುತ್ತವೆ ಮತ್ತು ಆರೋಗ್ಯಕರ ಹಾಗೂ ಸದೃಢ ‘ನವ ಭಾರತ’ದ ನಿರ್ಮಾಣಕ್ಕೆ ಕೊಡುಗೆ ನೀಡುತ್ತವೆ.

ಪ್ರಧಾನಮಂತ್ರಿಯವರು ಸಾಂಪ್ರದಾಯಿಕ ವೈದ್ಯ ಪದ್ಧತಿ ಸಂಶೋಧನಾ ಕೇಂದ್ರ ಪ್ರದರ್ಶನಕ್ಕೂ ಭೇಟಿ ನೀಡಿದರು. ಇದು ಭಾರತ ಮತ್ತು ಪ್ರಪಂಚದಾದ್ಯಂತದ ಸಾಂಪ್ರದಾಯಿಕ ವೈದ್ಯ ಜ್ಞಾನ ವ್ಯವಸ್ಥೆಗಳ ವೈವಿಧ್ಯತೆ, ಆಳ ಮತ್ತು ಸಮಕಾಲೀನ ಪ್ರಸ್ತುತತೆಯನ್ನು ಪ್ರದರ್ಶಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರದ ಆಯುಷ್ ಸಚಿವಾಲಯವು ಜಂಟಿಯಾಗಿ ಆಯೋಜಿಸಿದ ಈ ಶೃಂಗಸಭೆಯು, 2025ರ ಡಿಸೆಂಬರ್ 17 ರಿಂದ 19 ರವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ “ಸಮತೋಲನವನ್ನು ಮರುಸ್ಥಾಪಿಸುವುದು: ಆರೋಗ್ಯ ಮತ್ತು ಯೋಗಕ್ಷೇಮದ ವಿಜ್ಞಾನ ಮತ್ತು ಅಭ್ಯಾಸ” ಎಂಬ ವಿಷಯದ ಅಡಿಯಲ್ಲಿ ನಡೆಯಿತು. ಈ ಶೃಂಗಸಭೆಯು ಸಮಾನ, ಸುಸ್ಥಿರ ಮತ್ತು ಪುರಾವೆ ಆಧಾರಿತ ಆರೋಗ್ಯ ವ್ಯವಸ್ಥೆಗಳನ್ನು ಮುನ್ನಡೆಸುವ ಕುರಿತು ಜಾಗತಿಕ ನಾಯಕರು, ನೀತಿ ನಿರೂಪಕರು, ವಿಜ್ಞಾನಿಗಳು, ವೈದ್ಯರು, ಸ್ಥಳೀಯ ಜ್ಞಾನದ ಹೊಂದಿರುವವರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳ ನಡುವೆ ತೀವ್ರ ಚರ್ಚೆಗಳಿಗೆ ಸಾಕ್ಷಿಯಾಯಿತು.

 

*****