Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ-ಜೋರ್ಡಾನ್ ವ್ಯಾಪಾರ ವೇದಿಕೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಮತ್ತು ಘನತೆವೆತ್ತ ದೊರೆ ಅಬ್ದುಲ್ಲಾ II ಅವರ ಭಾಷಣ

ಭಾರತ-ಜೋರ್ಡಾನ್ ವ್ಯಾಪಾರ ವೇದಿಕೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಮತ್ತು ಘನತೆವೆತ್ತ ದೊರೆ ಅಬ್ದುಲ್ಲಾ II ಅವರ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಘನವೆತ್ತ ದೊರೆ ಅಬ್ದುಲ್ಲಾ II ಅವರು ಇಂದು ಅಮ್ಮನ್ ನಲ್ಲಿ ನಡೆದ ‘ಭಾರತ-ಜೋರ್ಡಾನ್ ವಾಣಿಜ್ಯ ವೇದಿಕೆ’ಯನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಯುವರಾಜ ಹುಸೇನ್ ಹಾಗೂ ಜೋರ್ಡಾನ್ ನ ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಸಚಿವರು ಕೂಡ ಭಾಗವಹಿಸಿದ್ದರು. ಉಭಯ ದೇಶಗಳ ನಡುವಿನ ಪರಸ್ಪರ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವ ಮಹತ್ವವನ್ನು ಇಬ್ಬರೂ ನಾಯಕರು ಗುರುತಿಸಿದರು. ಅಲ್ಲದೆ, ಇಲ್ಲಿರುವ ಸಾಮರ್ಥ್ಯ ಮತ್ತು ಅವಕಾಶಗಳನ್ನು ಬಳಸಿಕೊಂಡು ಅಭಿವೃದ್ಧಿ ಹಾಗೂ ಸಮೃದ್ಧಿಯನ್ನಾಗಿ ಪರಿವರ್ತಿಸಲು ಎರಡೂ ಕಡೆಯ ಉದ್ಯಮ ಮುಖಂಡರಿಗೆ ಅವರು ಕರೆ ನೀಡಿದರು. ಜೋರ್ಡಾನ್ನ ಮುಕ್ತ ವ್ಯಾಪಾರ ಒಪ್ಪಂದಗಳು ಮತ್ತು ಭಾರತದ ಆರ್ಥಿಕ ಶಕ್ತಿಯನ್ನು ಒಗ್ಗೂಡಿಸುವ ಮೂಲಕ, ದಕ್ಷಿಣ ಏಷ್ಯಾ ಮತ್ತು ಪಶ್ಚಿಮ ಏಷ್ಯಾ ನಡುವೆ ಹಾಗೂ ಅದರಾಚೆಗೂ ಒಂದು ಆರ್ಥಿಕ ಕಾರಿಡಾರ್ ಅನ್ನು ನಿರ್ಮಿಸಬಹುದು ಎಂದು ರಾಜರು ಅಭಿಪ್ರಾಯಪಟ್ಟರು.

ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಜೋರ್ಡಾನ್ ಮತ್ತು ಭಾರತವು ತಮ್ಮ ನಿಕಟ ನಾಗರಿಕತೆಯ ಸಂಬಂಧಗಳ ಬಲವಾದ ಅಡಿಪಾಯದ ಮೇಲೆ ನಿರ್ಮಿತವಾದ, ಚೈತನ್ಯದಾಯಕವಾದ ಸಮಕಾಲೀನ ಪಾಲುದಾರಿಕೆಯನ್ನು ಹೊಂದಿವೆ ಎಂದು ತಿಳಿಸಿದರು. ಮಾರುಕಟ್ಟೆಗಳು ಮತ್ತು ಪ್ರದೇಶಗಳನ್ನು ಬೆಸೆಯುವ ಸೇತುವೆಯಾಗಿ ಜೋರ್ಡಾನ್ ಹೊರಹೊಮ್ಮಲು ಕಾರಣವಾದ ಹಾಗೂ ವ್ಯಾಪಾರ ಮತ್ತು ಬೆಳವಣಿಗೆಯನ್ನು ಪೋಷಿಸುತ್ತಿರುವ ಘನವೆತ್ತ ರಾಜರ ನಾಯಕತ್ವವನ್ನು ಅವರು ಶ್ಲಾಘಿಸಿದರು. ಮುಂದಿನ 5 ವರ್ಷಗಳಲ್ಲಿ ಜೋರ್ಡಾನ್ ಜೊತೆಗಿನ ದ್ವಿಪಕ್ಷೀಯ ವ್ಯಾಪಾರವನ್ನು 5 ಬಿಲಿಯನ್ ಅಮೆರಿಕ ಡಾಲರ್ ಗೆ ಹೆಚ್ಚಿಸುವ ಪ್ರಸ್ತಾಪವನ್ನು ಪ್ರಧಾನಮಂತ್ರಿಯವರು ಮುಂದಿಟ್ಟರು. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿರುವ ಹಾಗೂ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತದ ಯಶಸ್ಸನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ಜೋರ್ಡಾನ್ ಮತ್ತು ಜಗತ್ತಿನಾದ್ಯಂತ ಇರುವ ತನ್ನ ಪಾಲುದಾರರಿಗೆ ಅಪಾರ ವ್ಯಾಪಾರ ಅವಕಾಶಗಳನ್ನು ನೀಡುತ್ತದೆ ಎಂದು ಹೇಳಿದರು. ಭಾರತದ 140 ಕೋಟಿ ಗ್ರಾಹಕರ ಮಾರುಕಟ್ಟೆ, ಬಲವಾದ ಉತ್ಪಾದನಾ ನೆಲೆ ಹಾಗೂ ಸ್ಥಿರ, ಪಾರದರ್ಶಕ ಮತ್ತು ಊಹಿಸಬಹುದಾದ ನೀತಿಗಳಿಂದ ಪ್ರಯೋಜನ ಪಡೆಯಲು ಭಾರತದೊಂದಿಗೆ ಕೈಜೋಡಿಸುವಂತೆ ಅವರು ಜೋರ್ಡಾನ್ ಕಂಪನಿಗಳಿಗೆ ಆಹ್ವಾನ ನೀಡಿದರು. ಜಗತ್ತಿಗೆ ವಿಶ್ವಾಸಾರ್ಹ ಪೂರೈಕೆ ಸರಪಳಿ ಪಾಲುದಾರರಾಗಲು ಉಭಯ ದೇಶಗಳು ಕೈಜೋಡಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ಇದೇ ವೇಳೆ, ಭಾರತೀಯ ಆರ್ಥಿಕತೆಯು ಶೇ. 8ಕ್ಕೂ ಹೆಚ್ಚು ದರದಲ್ಲಿ ಬೆಳೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, ಇದು ಉತ್ಪಾದಕತೆ ಆಧಾರಿತ ಆಡಳಿತ ಮತ್ತು ನಾವೀನ್ಯತೆ ಆಧಾರಿತ ನೀತಿಗಳ ಫಲಿತಾಂಶವಾಗಿದೆ ಎಂದು ಒತ್ತಿ ಹೇಳಿದರು.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಐಟಿ, ಫಿನ್ಟೆಕ್, ಹೆಲ್ತ್-ಟೆಕ್ ಮತ್ತು ಅಗ್ರಿ-ಟೆಕ್ ಕ್ಷೇತ್ರಗಳಲ್ಲಿ ಭಾರತ-ಜೋರ್ಡಾನ್ ನಡುವಿನ ವ್ಯಾಪಾರ ಸಹಯೋಗದ ಅವಕಾಶಗಳನ್ನು ಪ್ರಧಾನ ಮಂತ್ರಿಯವರು ಉಲ್ಲೇಖಿಸಿದರು ಹಾಗೂ ಈ ಕ್ಷೇತ್ರಗಳಲ್ಲಿ ಕೈಜೋಡಿಸಲು ಎರಡೂ ರಾಷ್ಟ್ರಗಳ ನವೋದ್ಯಮಿಗಳಿಗೆ ಆಹ್ವಾನ ನೀಡಿದರು. ಔಷಧ ಮತ್ತು ವೈದ್ಯಕೀಯ ಉಪಕರಣಗಳ ವಲಯದಲ್ಲಿ ಭಾರತದ ಸಾಮರ್ಥ್ಯ ಹಾಗೂ ಜೋರ್ಡಾನ್ ನ ಭೌಗೋಳಿಕ ಅನುಕೂಲವು ಒಂದಕ್ಕೊಂದು ಪೂರಕವಾಗಬಲ್ಲವು ಎಂದು ಅವರು ತಿಳಿಸಿದರು. ಅಲ್ಲದೆ, ಈ ಕ್ಷೇತ್ರಗಳಲ್ಲಿ ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾಕ್ಕೆ ಜೋರ್ಡಾನ್ ಅನ್ನು ವಿಶ್ವಾಸಾರ್ಹ ಕೇಂದ್ರವನ್ನಾಗಿ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು. ಕೃಷಿ, ಕೋಲ್ಡ್ ಚೈನ್, ಫುಡ್ ಪಾರ್ಕ್ ಗಳು, ರಸಗೊಬ್ಬರ, ಮೂಲಸೌಕರ್ಯ, ಆಟೋಮೊಬೈಲ್, ಹಸಿರು ಸಾರಿಗೆ ಹಾಗೂ ಪಾರಂಪರಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಎರಡೂ ಕಡೆಯವರಿಗೆ ಇರುವ ವ್ಯಾಪಾರ ಅವಕಾಶಗಳನ್ನು ಕೂಡ ಅವರು ಪ್ರಸ್ತಾಪಿಸಿದರು. ಇದೇ ವೇಳೆ ಭಾರತದ ಹಸಿರು ಉಪಕ್ರಮಗಳ ಕುರಿತು ಮಾತನಾಡಿದ ಪ್ರಧಾನ ಮಂತ್ರಿಯವರು, ನವೀಕರಿಸಬಹುದಾದ ಇಂಧನ, ಹಸಿರು ಹಣಕಾಸು ನೆರವು, ಉಪ್ಪು ನೀರನ್ನು ಸಿಹಿ ಮಾಡುವಿಕೆ ಮತ್ತು ನೀರಿನ ಮರುಬಳಕೆ ಕ್ಷೇತ್ರಗಳಲ್ಲಿ ಭಾರತ ಮತ್ತು ಜೋರ್ಡಾನ್ ನಡುವೆ ಹೆಚ್ಚಿನ ವ್ಯಾಪಾರ ಸಹಯೋಗ ಅಗತ್ಯ ಎಂದು ಸಲಹೆ ನೀಡಿದರು.

ಮೂಲಸೌಕರ್ಯ, ಆರೋಗ್ಯ, ಔಷಧ,  ರಸಗೊಬ್ಬರ, ಕೃಷಿ, ನವೀಕರಿಸಬಹುದಾದ ಇಂಧನ, ಜವಳಿ, ಲಾಜಿಸ್ಟಿಕ್ಸ್, ಆಟೋಮೊಬೈಲ್, ಇಂಧನ, ರಕ್ಷಣೆ ಮತ್ತು ಉತ್ಪಾದನಾ ಕ್ಷೇತ್ರಗಳ ಉಭಯ ದೇಶಗಳ ಉದ್ಯಮ ನಾಯಕರು ಈ ವೇದಿಕೆಯಲ್ಲಿ ಭಾಗವಹಿಸಿದ್ದರು. ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಉತ್ತೇಜಿಸಲು ಈಗಾಗಲೇ ತಿಳುವಳಿಕಾ ಒಪ್ಪಂದವನ್ನು (MoU) ಮಾಡಿಕೊಂಡಿರುವ ಎಫ್ ಐ ಸಿ ಸಿ ಐ  ಮತ್ತು ಜೋರ್ಡಾನ್ ವಾಣಿಜ್ಯ ಮಂಡಳಿಯ ಪ್ರತಿನಿಧಿಗಳು ಕೂಡ ಈ ನಿಯೋಗದಲ್ಲಿ ಒಳಗೊಂಡಿದ್ದರು.

 

*****