ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಸಾನಂದ್ ನಲ್ಲಿ ಕೇನ್ಸ್ ಟೆಕ್ನಾಲಜಿ ಸೆಮಿಕಂಡಕ್ಟರ್ ಘಟಕವನ್ನು ಉದ್ಘಾಟಿಸುವ ಮೂಲಕ ಉತ್ಪಾದನಾ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಫೆಬ್ರವರಿ 28ರಂದು ಮೈಕ್ರಾನ್ ಘಟಕದ ಉತ್ಪಾದನಾ ಆರಂಭದ ವೇಳೆ ತಾವು ಸಾನಂದ್ ನಲ್ಲಿದ್ದುದ್ದನ್ನು ಸ್ಮರಿಸಿದ ಅವರು, ಸರಿಯಾಗಿ ಒಂದು ತಿಂಗಳ ನಂತರ ಕೇನ್ಸ್ ಸಂಸ್ಥೆಯ ಈ ಮೈಲಿಗಲ್ಲಿಗೆ ಸಾಕ್ಷಿಯಾಗಲು ಮರಳಿ ಬಂದಿರುವುದು ಭಾರತದ ಸೆಮಿಕಂಡಕ್ಟರ್ ಪಯಣದ ವೇಗಕ್ಕೆ ಹಿಡಿದ ಕನ್ನಡಿ ಎಂದು ಬಣ್ಣಿಸಿದರು. “ಇದು ಕೇವಲ ಕಾಕತಾಳೀಯವಲ್ಲ; ಬದಲಾಗಿ ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯು ಎಂತಹ ಕ್ಷಿಪ್ರ ವೇಗದಲ್ಲಿ ವಿಕಸನಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ,” ಎಂದು ಶ್ರೀ ಮೋದಿ ಅವರು ಹರ್ಷ ವ್ಯಕ್ತಪಡಿಸಿದರು.
ಕೇನ್ಸ್ ಟೆಕ್ನಾಲಜಿಯ ನಾಯಕತ್ವ, ಗುಜರಾತ್ ಸರ್ಕಾರ ಮತ್ತು ಘಟಕದ ಎಲ್ಲಾ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಭಾರತೀಯ ಕಂಪನಿಯೊಂದು ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು. ಕೇನ್ಸ್ ಈಗ ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯ ಭಾಗವಾಗಿದೆ ಎಂದು ಹೇಳಿದ ಶ್ರೀ ಮೋದಿಯವರು, “ಇದೊಂದು ಅದ್ಭುತ ಆರಂಭ. ಮುಂಬರುವ ದಿನಗಳಲ್ಲಿ ಜಾಗತಿಕ ಸಹಯೋಗದೊಂದಿಗೆ ಅನೇಕ ಭಾರತೀಯ ಕಂಪನಿಗಳು ವಿಶ್ವಕ್ಕೆ ಬಲಿಷ್ಠವಾದ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯನ್ನು ಒದಗಿಸಲಿವೆ,” ಎಂದರು.
ಇಂದಿನ ಮೈಲಿಗಲ್ಲು ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಮಂತ್ರವನ್ನು ಸಾಕಾರಗೊಳಿಸಿದೆ ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು. ಈ ಘಟಕವು ಕ್ಯಾಲಿಫೋರ್ನಿಯಾ ಮೂಲದ ಕಂಪನಿಗೆ ‘ಇಂಟೆಲಿಜೆಂಟ್ ಪವರ್ ಮಾಡ್ಯೂಲ್’ ಗಳನ್ನು ಪೂರೈಸುತ್ತಿರುವುದು ಹಾಗೂ ಉತ್ಪಾದನೆಯ ಬಹುಪಾಲು ಈಗಾಗಲೇ ರಫ್ತಿಗಾಗಿ ಕಾಯ್ದಿರಿಸಲ್ಪಟ್ಟಿರುವುದನ್ನು ಗಮನಿಸಿದ ಅವರು, ಸಾನಂದ್ ಮತ್ತು ಸಿಲಿಕಾನ್ ವ್ಯಾಲಿ ನಡುವೆ ಹೊಸ ಸೇತುವೆ ನಿರ್ಮಾಣವಾಗಿದೆ ಎಂದು ಹೇಳಿದರು. “ಸಾನಂದ್ ನಲ್ಲಿ ತಯಾರಾದ ಮಾಡ್ಯೂಲ್ ಗಳು ಅಮೆರಿಕದ ಕಂಪನಿಗಳನ್ನು ತಲುಪಲಿವೆ ಮತ್ತು ಅಲ್ಲಿಂದ ಇಡೀ ವಿಶ್ವಕ್ಕೆ ಶಕ್ತಿಯನ್ನು ನೀಡಲಿವೆ,” ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಘಟಕದಲ್ಲಿ ತಯಾರಾಗುತ್ತಿರುವ ‘ಇಂಟೆಲಿಜೆಂಟ್ ಪವರ್ ಮಾಡ್ಯೂಲ್’ ಗಳ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇವು ಭಾರತ ಮತ್ತು ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆ ಹಾಗೂ ಭಾರೀ ಉದ್ಯಮವನ್ನು ಬಲಪಡಿಸಲಿವೆ ಎಂದು ಹೇಳಿದರು. ಇಂತಹ ಜಾಗತಿಕ ಪಾಲುದಾರಿಕೆಗಳನ್ನು ವಿಶ್ವದ ಉತ್ತಮ ಭವಿಷ್ಯಕ್ಕಾಗಿ ಅಡಿಪಾಯ ಎಂದು ಅವರು ಬಣ್ಣಿಸಿದರು. “ಇದು ಕೇವಲ ಒಂದು ಉತ್ಪನ್ನದ ಬಗ್ಗೆ ಅಲ್ಲ, ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ವಿಶ್ವಾಸಾರ್ಹ ಸೆಮಿಕಂಡಕ್ಟರ್ ಪೂರೈಕೆದಾರನಾಗಿ ಹೊರಹೊಮ್ಮುವ ವಿಷಯವಾಗಿದೆ” ಎಂದು ಪ್ರಧಾನಮಂತ್ರಿ ಮೋದಿ ಪ್ರತಿಪಾದಿಸಿದರು.
ಜಾಗತಿಕ ಸಾಂಕ್ರಾಮಿಕದಿಂದ ಹಿಡಿದು ಭೌಗೋಳಿಕ ರಾಜಕೀಯ ಸಂಘರ್ಷಗಳವರೆಗೆ ಈ ದಶಕವು ತಂದೊಡ್ಡಿರುವ ಸವಾಲುಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಜಾಗತಿಕ ಪೂರೈಕೆ ಸರಪಳಿಗಳು, ಅದರಲ್ಲೂ ವಿಶೇಷವಾಗಿ ಚಿಪ್ಗಳು, ಅಪರೂಪದ ಭೂಮಿಯ ಖನಿಜಗಳು ಮತ್ತು ಇಂಧನ ವಲಯಗಳು ಅತಿ ಹೆಚ್ಚು ಹಾನಿಗೊಳಗಾಗಿವೆ ಎಂದು ಅವಲೋಕಿಸಿದರು. ಈ ಪೂರೈಕೆ ಸರಪಳಿಗಳಲ್ಲಿನ ವ್ಯತ್ಯಯಗಳು ಇಡೀ ಮಾನವಕುಲದ ಪ್ರಗತಿಗೆ ಅಡ್ಡಿಯಾಗುತ್ತವೆ ಎಂದು ಒತ್ತಿಹೇಳಿದ ಶ್ರೀ ಮೋದಿಯವರು, “ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರವು ಈ ದಿಕ್ಕಿನಲ್ಲಿ ಮುನ್ನಡೆಯುವುದು ಇಡೀ ವಿಶ್ವದ ಅಭಿವೃದ್ಧಿಗೆ ಅತ್ಯಂತ ನಿರ್ಣಾಯಕವಾಗಿದೆ” ಎಂದು ಅಭಿಪ್ರಾಯಪಟ್ಟರು.
ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಹಬ್ ಮಾಡುವ ಸಂಕಲ್ಪವನ್ನು ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲೇ ತೆಗೆದುಕೊಳ್ಳಲಾಗಿತ್ತು ಎಂದು ಪ್ರಧಾನಮಂತ್ರಿ ನೆನಪಿಸಿಕೊಂಡರು, ಇದು 2021 ರಲ್ಲಿ ‘ಇಂಡಿಯಾ-ಸೆಮಿಕಂಡಕ್ಟರ್ ಮಿಷನ್’ ಆರಂಭಕ್ಕೆ ಕಾರಣವಾಯಿತು. ಸೆಮಿಕಂಡಕ್ಟರ್ ಗಳಲ್ಲಿನ ಸ್ವಾವಲಂಬನೆಯು ಎಐ (AI), ಎಲೆಕ್ಟ್ರಿಕ್ ವಾಹನಗಳು, ಸ್ವಚ್ಛ ಇಂಧನ, ರಕ್ಷಣೆ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿಯೂ ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತದೆ ಎಂದು ವಿವರಿಸಿದ ಪ್ರಧಾನಮಂತ್ರಿ ಮೋದಿಯವರು, “ಈ ಮಿಷನ್ ಕೇವಲ ಒಂದು ಕೈಗಾರಿಕಾ ನೀತಿಯಲ್ಲ, ಇದು ಭಾರತದ ಆತ್ಮವಿಶ್ವಾಸದ ಘೋಷಣೆಯಾಗಿದೆ” ಎಂದು ದೃಢವಾಗಿ ಹೇಳಿದರು.
ಈ ಮಿಷನ್ ನ ಪ್ರಗತಿಯನ್ನು ವಿವರಿಸುತ್ತಾ, ಆರು ರಾಜ್ಯಗಳಲ್ಲಿ 1,60,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 10 ಯೋಜನೆಗಳ ಕೆಲಸ ನಡೆಯುತ್ತಿದೆ ಮತ್ತು ಕೇನ್ಸ್ ಹಾಗೂ ಮೈಕ್ರಾನ್ ಯೋಜನೆಗಳು ಇದರ ಅವಿಭಾಜ್ಯ ಅಂಗಗಳಾಗಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಅವರು ಸ್ವದೇಶಿ ಧ್ರುವ 64 ಮೈಕ್ರೋಪ್ರೊಸೆಸರ್ ನ ಅಭಿವೃದ್ಧಿಯನ್ನು ಎತ್ತಿ ತೋರಿಸಿದರು, ಇದು 5G ಮೂಲಸೌಕರ್ಯ, ಆಟೋಮೋಟಿವ್ ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ ಯಾಂತ್ರೀಕರಣಕ್ಕಾಗಿ ಸುರಕ್ಷಿತ ಪ್ರೊಸೆಸರ್ ಪ್ಲಾಟ್ ಫಾರ್ಮ್ ಅನ್ನು ಒದಗಿಸುತ್ತದೆ. “ಸೆಮಿಕಂಡಕ್ಟರ್ ಮೌಲ್ಯ ಸರಪಳಿಯ ಪ್ರತಿಯೊಂದು ಹಂತದಲ್ಲೂ ವಿನ್ಯಾಸ ಮತ್ತು ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಭಾರತವು ನಿರ್ಮಿಸುತ್ತಿದೆ” ಎಂದು ಶ್ರೀ ಮೋದಿ ಅವರು ತಿಳಿಸಿದರು.
ಭಾರತದ ಸೆಮಿಕಂಡಕ್ಟರ್ ಮಹತ್ವಾಕಾಂಕ್ಷೆಯ ಮುಂದಿನ ಹಂತವನ್ನು ಘೋಷಿಸಿದ ಪ್ರಧಾನಮಂತ್ರಿಯವರು, ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಅನಾವರಣಗೊಳಿಸಲಾದ ‘ಇಂಡಿಯಾ-ಸೆಮಿಕಂಡಕ್ಟರ್ ಮಿಷನ್ 2.0’ ಕುರಿತು ಮಾತನಾಡಿದರು. ಸೆಮಿಕಂಡಕ್ಟರ್ ಉಪಕರಣಗಳು ಮತ್ತು ವಸ್ತುಗಳ ದೇಶೀಯ ಉತ್ಪಾದನೆಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಈ ಹೊಸ ಹಂತವು ಸಂಪೂರ್ಣ-ವ್ಯಾಪ್ತಿಯ ಭಾರತೀಯ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. “ದೇಶೀಯ ಮತ್ತು ಜಾಗತಿಕ ಪೂರೈಕೆ ಸರಪಳಿಗಳೆರಡರಲ್ಲೂ ನಾವು ದೊಡ್ಡ ಸಹಯೋಗಗಳನ್ನು ಹೊಂದಲು ಅನುವಾಗುವಂತೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದು ಈಗ ನಮ್ಮ ಪ್ರಯತ್ನವಾಗಿದೆ” ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು.
ಭವಿಷ್ಯಕ್ಕೆ ಸಜ್ಜಾದ ಕಾರ್ಯಪಡೆಯನ್ನು ನಿರ್ಮಿಸಲು ಭಾರತವು ನಡೆಸುತ್ತಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು ಮತ್ತು 85,000 ಕ್ಕೂ ಹೆಚ್ಚು ವಿನ್ಯಾಸ ವೃತ್ತಿಪರರಿಗೆ ತರಬೇತಿ ನೀಡುವ ಗುರಿಯನ್ನು ಶೀಘ್ರದಲ್ಲೇ ಸಾಧಿಸಲಾಗುವುದು ಎಂದು ತಿಳಿಸಿದರು. ಅವರು ‘ಚಿಪ್ಸ್ ಟು ಸ್ಟಾರ್ಟ್ಅಪ್’ ಕಾರ್ಯಕ್ರಮದ ಬಗ್ಗೆಯೂ ಮಾತನಾಡಿದರು, ಇದರ ಅಡಿಯಲ್ಲಿ ಸುಮಾರು 400 ವಿಶ್ವವಿದ್ಯಾಲಯಗಳು ಮತ್ತು ಸ್ಟಾರ್ಟ್ಅಪ್ಗಳಿಗೆ ಆಧುನಿಕ ವಿನ್ಯಾಸ ಪರಿಕರಗಳ ಪ್ರವೇಶವನ್ನು ನೀಡಲಾಗಿದೆ, ಇದರ ಪರಿಣಾಮವಾಗಿ 55 ಕ್ಕೂ ಹೆಚ್ಚು ಚಿಪ್ ಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ತಯಾರಿಸಲಾಗಿದೆ. “ತಂತ್ರಜ್ಞಾನ ಅಭಿವೃದ್ಧಿ ಮತ್ತು ನುರಿತ ಕಾರ್ಯಪಡೆ ಜೊತೆಜೊತೆಯಾಗಿ ಸಾಗಬೇಕು, ಭಾರತವು ಎರಡನ್ನೂ ಖಚಿತಪಡಿಸಿಕೊಳ್ಳುತ್ತಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಉದ್ಯಮದ ಅಂದಾಜುಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆಯು ಪ್ರಸ್ತುತ ಅಂದಾಜು 50 ಬಿಲಿಯನ್ ಡಾಲರ್ ಗಳಷ್ಟಿದ್ದು, ಈ ದಶಕದ ಅಂತ್ಯದ ವೇಳೆಗೆ 100 ಬಿಲಿಯನ್ ಡಾಲರ್ ಗಳನ್ನು ದಾಟುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಭಾರತದ ಸೆಮಿಕಂಡಕ್ಟರ್ ಸಂಕಲ್ಪದ ಬಗ್ಗೆ ಜಾಗತಿಕ ಹೂಡಿಕೆದಾರರಲ್ಲಿ ಕಂಡುಬರುತ್ತಿರುವ ಅಪಾರ ಉತ್ಸಾಹವನ್ನು ಗಮನಿಸಿದ ಪ್ರಧಾನಮಂತ್ರಿ ಮೋದಿ, “ನಮ್ಮ ಅಗತ್ಯಗಳಿಗಾಗಿ ಗರಿಷ್ಠ ಸಂಖ್ಯೆಯ ಚಿಪ್ ಗಳನ್ನು ಇಲ್ಲೇ ಭಾರತದಲ್ಲಿ ತಯಾರಿಸುವುದು ನಮ್ಮ ಗುರಿಯಾಗಿದೆ,” ಎಂದು ತಿಳಿಸಿದರು.
‘ಪ್ಯಾಕ್ಸ್ ಸಿಲಿಕಾ’ದಲ್ಲಿನ ಭಾರತದ ಸದಸ್ಯತ್ವ ಮತ್ತು ‘ರಾಷ್ಟ್ರೀಯ ಕ್ರಿಟಿಕಲ್ ಮಿನರಲ್ಸ್ ಮಿಷನ್’ ಚಾಲನೆ ಸೇರಿದಂತೆ, ಬಲಿಷ್ಠ ಕಚ್ಚಾ ವಸ್ತುಗಳ ಪೂರೈಕೆ ಸರಪಳಿಯನ್ನು ಭದ್ರಪಡಿಸಿಕೊಳ್ಳಲು ಭಾರತವು ನಡೆಸುತ್ತಿರುವ ಸಮಾನಾಂತರ ಪ್ರಯತ್ನಗಳ ಬಗ್ಗೆ ಪ್ರಧಾನಮಂತ್ರಿಯವರು ಮಾತನಾಡಿದರು. ಖನಿಜ ಮರುಬಳಕೆಗಾಗಿ 1,500 ಕೋಟಿ ರೂಪಾಯಿಗಳ ಯೋಜನೆ ಮತ್ತು ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳದಂತಹ ಕರಾವಳಿ ರಾಜ್ಯಗಳನ್ನು ಸಂಪರ್ಕಿಸುವ ‘ರೇರ್ ಅರ್ಥ್ ಕಾರಿಡಾರ್’ (ಅಪರೂಪದ ಭೂಮಿಯ ಖನಿಜಗಳ ಕಾರಿಡಾರ್) ಘೋಷಣೆಯನ್ನು ಅವರು ಉಲ್ಲೇಖಿಸಿದರು. “ಈ ಕೆಲಸವು 30-40 ವರ್ಷಗಳ ಹಿಂದೆಯೇ ಆರಂಭವಾಗಿದ್ದರೆ ಚೆನ್ನಾಗಿರುತ್ತಿತ್ತು, ಆದರೆ ಭಾರತವು ಈಗ ಇದನ್ನು ಮಿಷನ್ ಮೋಡ್ ನಲ್ಲಿ ನಿರ್ವಹಿಸುತ್ತಿದೆ” ಎಂದು ಶ್ರೀ ಮೋದಿಯವರು ಹೇಳಿದರು.
ಈ ದಶಕವನ್ನು ಭಾರತದ ‘ಟೆಕೇಡ್’ ((ತಂತ್ರಜ್ಞಾನದ ದಶಕ) ಎಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು, ಪ್ರಸ್ತುತ ಅವಧಿಯು ಕೇವಲ ಆರ್ಥಿಕ ಸ್ಪರ್ಧೆಯ ಬಗ್ಗೆ ಮಾತ್ರವಲ್ಲದೆ ಭವಿಷ್ಯದ ತಂತ್ರಜ್ಞಾನದ ಸ್ವರೂಪವನ್ನು ರೂಪಿಸುವ ಬಗ್ಗೆಯೂ ಆಗಿದೆ ಎಂದು ಹೇಳಿದರು. ಎಐ ಅಳವಡಿಕೆಯಲ್ಲಿ ಭಾರತದ ನಾಯಕತ್ವ, ಡಿಜಿಟಲ್ ಇಂಡಿಯಾ ಮತ್ತು ಫಿನ್ ಟೆಕ್ ನ ಯಶಸ್ಸು ಹಾಗೂ ಇತ್ತೀಚಿನ ‘ಎಐ ಇಂಪ್ಯಾಕ್ಟ್ ಸಮ್ಮಿಟ್’ ಇವೆಲ್ಲವೂ ತಂತ್ರಜ್ಞಾನದ ಮೇಲೆ ಭಾರತೀಯರು ಹೊಂದಿರುವ ನಂಬಿಕೆ ಮತ್ತು ಅದನ್ನು ಅಪ್ಪಿಕೊಂಡಿರುವುದಕ್ಕೆ ಪುರಾವೆಗಳಾಗಿವೆ ಎಂದು ಅವರು ಬೆಟ್ಟು ಮಾಡಿದರು. “ನಮ್ಮ ಸೆಮಿಕಂಡಕ್ಟರ್ ವಲಯದ ಬೆಳವಣಿಗೆಯಿಂದ ಭಾರತದ ಎಐ ಪರಿಸರ ವ್ಯವಸ್ಥೆಗೆ ಹೆಚ್ಚಿನ ಶಕ್ತಿ ಸಿಗಲಿದೆ,” ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು.
21ನೇ ಶತಮಾನದ ಭಾರತವು ಬದಲಾವಣೆಗೆ ಕೇವಲ ಸಾಕ್ಷಿಯಾಗಿ ಉಳಿಯದೆ, ಅದರ ನೇತೃತ್ವ ವಹಿಸಲು ಸಂಕಲ್ಪ ಮಾಡಿದೆ ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. ಬಾಹ್ಯಾಕಾಶ ವಲಯವನ್ನು ಇನ್-ಸ್ಪೇಸ್ (IN-SPACe) ಮೂಲಕ ಖಾಸಗಿ ಸಂಸ್ಥೆಗಳಿಗೆ ಮುಕ್ತಗೊಳಿಸಿರುವುದು, ಪರಮಾಣು ವಲಯದಲ್ಲಿನ ಐತಿಹಾಸಿಕ ಶಾಂತಿ ಮಸೂದೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ನಲ್ಲಿ ಮಿಷನ್-ಮೋಡ್ ಹೂಡಿಕೆಯಂತಹ ಮೈಲಿಗಲ್ಲಾದ ನೀತಿ ನಿರ್ಧಾರಗಳನ್ನು ಪಟ್ಟಿ ಮಾಡಿದ ಅವರು, ಈ ಕ್ರಮಗಳು ಮುಂಬರುವ ದಶಕಗಳಲ್ಲಿ ತಂತ್ರಜ್ಞಾನ ಮತ್ತು ಇಂಧನ ಭದ್ರತೆಗೆ ಅಡಿಪಾಯ ಹಾಕಲಿವೆ ಎಂದರು. “ಭಾರತವು ಪ್ರತಿಯೊಂದು ನಿರ್ಣಾಯಕ ತಂತ್ರಜ್ಞಾನದಲ್ಲಿ ಅಭೂತಪೂರ್ವ ಹೂಡಿಕೆ ಮತ್ತು ಸುಧಾರಣೆಗಳನ್ನು ಮಾಡುತ್ತಿದೆ, ಇದು ವಿಶ್ವದಾದ್ಯಂತದ ಹೂಡಿಕೆದಾರರಿಗೆ ಒಂದು ದೊಡ್ಡ ಅವಕಾಶವಾಗಿದೆ,” ಎಂದು ಪ್ರಧಾನಮಂತ್ರಿ ಮೋದಿ ದೃಢಪಡಿಸಿದರು.
ಕೇನ್ಸ್ ಘಟಕದ ಉತ್ಪನ್ನಗಳು ‘ವಿಶ್ವದ ಕಾರ್ಖಾನೆ’ಯಾಗುವ ಭಾರತದ ಪಯಣವನ್ನು ಇನ್ನಷ್ಟು ಬಲಪಡಿಸಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ವ್ಯವಹಾರದ ಸುಲಭತೆ, ಉತ್ಪಾದನೆಯ ಸುಲಭತೆ ಮತ್ತು ಲಾಜಿಸ್ಟಿಕ್ಸ್ ಸುಲಭತೆಯನ್ನು ನಿರಂತರವಾಗಿ ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ಈ ಯೋಜನೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಅವರು ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು.
******
The inauguration of the Kaynes Semicon facility strengthens India’s push towards self-reliance. It marks an landmark step in building a robust semiconductor ecosystem. https://t.co/hJOo5srmOS
— Narendra Modi (@narendramodi) March 31, 2026
India is strengthening its role as a reliable semiconductor supplier in the global market. pic.twitter.com/V1IADEH44j
— PMO India (@PMOIndia) March 31, 2026
In 2021, India launched the India Semiconductor Mission.
— PMO India (@PMOIndia) March 31, 2026
This mission is not just an industrial policy but a declaration of India's confidence. pic.twitter.com/EaaBCdtbkS
Time to shape the future tech landscape. pic.twitter.com/v8TUNf5Lnh
— PMO India (@PMOIndia) March 31, 2026
The technology initiatives India is taking in this decade will strengthen its leadership in the decades to come. pic.twitter.com/KO0jlSgrtb
— PMO India (@PMOIndia) March 31, 2026
21st century India is not merely a witness to change, but is moving forward with the resolve to lead that change. pic.twitter.com/XRXteknrZV
— PMO India (@PMOIndia) March 31, 2026