ಪಿಎಂಇಂಡಿಯಾ

ಅಮೆರಿಕದ ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್ಸನ್ ಅವರಿಂದು ಮಧ್ಯಾಹ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಸಕ್ತ ಹೊಂದಿರುವ ಹುದ್ದೆಯಲ್ಲಿ ಭಾರತಕ್ಕೆ ಪ್ರಥಮ ಭೇಟಿ ನೀಡಿರುವ ಸಚಿವ ಟಿಲ್ಲರ್ಸನ್ ಅವರನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು. ಈ ವರ್ಷದ ಜೂನ್ ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ನಡೆದ ಧನಾತ್ಮಕ ಮತ್ತು ದೂರಾಲೋಚನೆಯ ಮಾತುಕತೆಗಳ ನಂತರ ದ್ವಿಪಕ್ಷೀಯ ವ್ಯೂಹಾತ್ಮಕ ಪಾಲುದಾರಿಕೆಯು ಏರುಮುಖವಾಗಿ ಸಾಗುತ್ತಿರುವುದನ್ನು ಪ್ರಧಾನಮಂತ್ರಿ ಮೆಚ್ಚುಗೆಯೊಂದಿಗೆ ಉಲ್ಲೇಖಿಸಿದರು.
ದ್ವಿಪಕ್ಷೀಯ ಕಾರ್ಯಕ್ರಮಗಳ ಉದ್ದೇಶ, ವೇಗ ಮತ್ತು ವಿಷಯವನ್ನು ಬಲಪಡಿಸುವ ಮತ್ತು ಹೆಚ್ಚಿಸುವ ನಿಟ್ಟಿನಲ್ಲಿ ಮುಂದುವರಿಯುವ ಸಚಿವ ಟಿಲ್ಲರ್ಸ ನ್ ಅವರ ಸಂಕಲ್ಪವನ್ನು ಪ್ರಧಾನಿ ಹಂಚಿಕೊಂಡರು.
ಭಾರತ ಮತ್ತು ಅಮೆರಿಕದ ಬಲಗೊಂಡ ಪಾಲುದಾರಿಕೆಯು ಕೇವಲ ಈ ಎರಡು ದೇಶಗಳ ಪರಸ್ಪರ ಲಾಭಕ್ಕಾಗಿ ಅಷ್ಟೇ ಅಲ್ಲ, ಇದು ವಲಯದ ಮತ್ತು ಜಾಗತಿಕ ಸ್ಥಿರತೆ ಮತ್ತು ಪ್ರಗತಿಯ ಭವಿಷ್ಯದ ಮೇಲೆ ಗಣನೀಯ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಪ್ರತಿಪಾದಿಸಿದರು.
ಅಧ್ಯಕ್ಷ ಟ್ರಂಪ್ ಅವರ ಹೊಸ ದಕ್ಷಿಣ ಏಷ್ಯಾ ನೀತಿಯಲ್ಲಿ, ಆಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸುವ ಉದ್ದೇಶದಲ್ಲಿ, ಭಯೋತ್ಪಾದನೆ, ಭಯೋತ್ಪಾದನಾ ಮೂಲಸೌಕರ್ಯ, ಸುರಕ್ಷಿತ ತಾಣ ಒದಗಿಸುವುದು ಮತ್ತು ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ನಿರ್ಮೂಲನೆ ಮಾಡುವ ಗುರಿಗಳಲ್ಲಿ ಸಾಮ್ಯತೆಯನ್ನು ಪ್ರಧಾನಿಯವರು ಗುರುತಿಸಿದರು.
ಈ ನಿಟ್ಟಿನಲ್ಲಿ, ಸಚಿವ ಟಿಲ್ಲರ್ಸನ್ ಅವರು ಇತ್ತೀಚೆಗೆ ವಲಯದಲ್ಲಿ ತಾವು ಮಾಡಿದ ಪ್ರವಾಸದ ಬಗ್ಗೆ ಅಭಿಪ್ರಾಯಗಳನ್ನು ಪ್ರಧಾನಿಯವರೊಂದಿಗೆ ವಿನಿಮಯ ಮಾಡಿಕೊಂಡರು. ಭಯೋತ್ಪಾದನೆಯ ಎಲ್ಲ ಸ್ವರೂಪಗಳ ವಿರುದ್ಧ ಹೋರಾಟ ಮಾಡಲು ಸಮರ್ಥ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಪ್ರಾದೇಶಿಕ ಸ್ಥಿರತೆ ಮತ್ತು ಭದ್ರತೆ ಉತ್ತೇಜಿಸುವ ಕುರಿತು ಅವರು ಚರ್ಚಿಸಿದರು.
ಇದಕ್ಕೂ ಮುನ್ನ ಸಚಿವ ಟಿಲ್ಲರರ್ಸನ್ ಅವರು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರೊಂದಿಗೆ ಸವಿವರವಾಗಿ ಚರ್ಚಿಸಿದರು.
***
Mr. Rex Tillerson, U.S. Secretary of State met Prime Minister @narendramodi. @StateDept pic.twitter.com/vISIt6G8sq
— PMO India (@PMOIndia) October 25, 2017