Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿಗಳ ಎನ್ ಸಿ ಸಿ ಪಥ ಸಂಚಲನ – ನವದೆಹಲಿ ; ಇಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಮಾಡಿದ ಭಾಷಣದ ಪೂರ್ಣ ಪಾಠ

ಪ್ರಧಾನ ಮಂತ್ರಿಗಳ  ಎನ್ ಸಿ ಸಿ  ಪಥ ಸಂಚಲನ –  ನವದೆಹಲಿ ;  ಇಲ್ಲಿ  ಮಾನ್ಯ  ಪ್ರಧಾನ ಮಂತ್ರಿಗಳು ಮಾಡಿದ   ಭಾಷಣದ ಪೂರ್ಣ ಪಾಠ

ಪ್ರಧಾನ ಮಂತ್ರಿಗಳ  ಎನ್ ಸಿ ಸಿ  ಪಥ ಸಂಚಲನ –  ನವದೆಹಲಿ ;  ಇಲ್ಲಿ  ಮಾನ್ಯ  ಪ್ರಧಾನ ಮಂತ್ರಿಗಳು ಮಾಡಿದ   ಭಾಷಣದ ಪೂರ್ಣ ಪಾಠ

ಪ್ರಧಾನ ಮಂತ್ರಿಗಳ  ಎನ್ ಸಿ ಸಿ  ಪಥ ಸಂಚಲನ –  ನವದೆಹಲಿ ;  ಇಲ್ಲಿ  ಮಾನ್ಯ  ಪ್ರಧಾನ ಮಂತ್ರಿಗಳು ಮಾಡಿದ   ಭಾಷಣದ ಪೂರ್ಣ ಪಾಠ


ದೇಶದ ಮೂಲೆ ಮೂಲೆಯಿಂದ ಬಂದಿರುವ ನನ್ನ ಯುವ ಸ್ನೇಹಿತರೇ,

ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಗಳಿಂದ ಬಂದ ಎನ್ ಸಿ ಸಿ ಕ್ಯಾಡೆಟ್ಟುಗಳು ಪ್ರಜಾಪ್ರಭುತ್ವವನ್ನು ಕುರಿತು ನಮ್ಮ ಶ್ರದ್ಧೆ, ಭಾರತದ ಏಕತೆಯನ್ನು ಕುರಿತು ನಮ್ಮ ಬದ್ಧತೆ, ವಿವಿಧತೆಯಲ್ಲಿ ಏಕತೆಯ ಸಾಮರ್ಥ್ಯದ ದರ್ಶನ ಇವುಗಳನ್ನು ಬಿಂಬಿಸುತ್ತಿದ್ದೀರಿ; ದೇಶ ಮತ್ತು ಪ್ರಪಂಚ ತಮ್ಮ ಮೂಲಕ ಇವುಗಳನ್ನು ಅನುಭವಿಸುತ್ತಿವೆ. ನಿಮಗೆಲ್ಲರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಅಲ್ಲದೆ ಭಾರತದ ಉತ್ತಮ ನಾಗರೀಕರಾಗಿ ಮುಂದಿನ ದಿನಗಳಲ್ಲಿ, ತಮ್ಮ ವೈಯಕ್ತಿಕ ಜೀವನದಲ್ಲಿಯೂ, ಸಾಮಾನ್ಯ ಜೀವನದಲ್ಲಿಯೂ ರಾಷ್ಟ್ರ ಜೀವನದಲ್ಲಿಯೂ ಇದೇ ರೀತಿಯ ಬದ್ಧತೆ ಮತ್ತು ಇಂತಹುದೇ ಅರ್ಪಣಾ ಭಾವದ ಆದರ್ಶಗಳನ್ನು ನೀವು ನೆಲೆಗೊಳಿಸುತ್ತಿರುತ್ತೀರಿ; ಅಷ್ಟೇ ಅಲ್ಲದೆ ಮಾನವೀಯ ಉಚ್ಚ ಆದರ್ಶಗಳನ್ನು ಕುರಿತಂತೆಯೂ ತಮ್ಮ ಬದ್ಧತೆ ಕಡಿಮೆ ಇರದು. ಇದೇ, ವಿಶ್ವದಲ್ಲಿ ಭಾರತದ ವಿಶಿಷ್ಟ ಗುರುತೊಂದನ್ನು ಎತ್ತಿ ತೋರುವ ಕಾರಣವಾಗಲು ಸಾಧ್ಯ.

ಎನ್ ಸಿ ಸಿ ಕ್ಯಾಡೆಟ್ ಎಂದರೆ ಬರೀ ಸಮವಸ್ತ್ರವಲ್ಲ, ಬರೀ ಪೆರೇಡ್ ಅಲ್ಲ, ಬರೀ ಕ್ಯಾಂಪ್ ಅಲ್ಲ; ಎನ್ ಸಿ ಸಿ ಯಮೂಲಕ ಒಂದು ಸಾಮೂಹಿಕ ಆದರ್ಶ(sense of mission)ವೊಂದರ ಅಂಕುರಾರ್ಪಣೆಯಾಗುತ್ತದೆ. ಇದು ನಮ್ಮೊಳಗೆ ಬದುಕಿನ ಒಂದು ಉದ್ದೇಶದ ರೂಪಣೆ ಅದರ ಸಂಸ್ಕಾರ ಅದರಲ್ಲಿಯೂ ಸಾಮೂಹಿಕ ಸಂಸ್ಕಾರವನ್ನು ಪಡೆಯುವ ಒಂದು ಅವಧಿಯಾಗಿದೆ. ಎನ್ ಸಿ ಸಿಯಿಂದಾಗಿ ಶೈಕ್ಷಣಿಕ ಪದವಿಯನ್ನು ಪಡೆಯುವುದು ಮಾತ್ರವಲ್ಲದೆ ಭಾರತದ ವೈವಿಧ್ಯದ, ಭಾರತದ ಆಂತರಿಕ ಶಕ್ತಿಯ ಭಾರತದ ವಿರಾಟ್-ಸಾಮರ್ಥ್ಯದ ದರ್ಶನ ನಮಗಾಗುತ್ತದೆ. 1500ಕ್ಕೂ ಹೆಚ್ಚು ನುಡಿಗಳು, 100ಕ್ಕೂ ಹೆಚ್ಚು ಭಾಷೆಗಳು, ಪ್ರತಿ ಇಪ್ಪತ್ತು ಕಿಲೋಮೀಟರಿಗೊಂದು ಸಲ ಆಡುನುಡಿ ಬದಲಾಗುವುದು, ವೇಷಭೂಷಣಗಳು ಬೇರೆ ಬೇರೆ, ಆಹಾರ ರೂಢಿಗಳು ಬೇರೆ ಬೇರೆ ಇಷ್ಟೆಲ್ಲ ಆದರೂ ಏಕತೆಯ ಸೂತ್ರವೊಂದು ಜನರನ್ನು ಬಂಧಿಸುತ್ತದೆ; ಹಿಮಾಲಯದಲ್ಲಿ ನೋವಾದರೆ ಕನ್ಯಾಕುಮಾರಿಯಲ್ಲಿ ಕಣ್ಣೀರ ಧಾರೆ ಹರಿಯುತ್ತದೆ. ಇದೆಂತಹ ರಾಷ್ಟ್ರವೆಂದು ಲೋಕದ ಜನರು ಆಶ್ಚರ್ಯಚಕಿತರಾಗುತ್ತಾರೆ. ಈ ಭಾವವೇ ರಾಷ್ಟ್ರೀಯ ಏಕತೆಯ ಭಾವ. ದೇಶದ ಯಾವುದೇ ಮೂಲೆಯಲ್ಲಿ ಒಳ್ಳೆಯದಾಗಲಿ ದೇಶದ ನಾಗರೀಕರು ಖುಶಿ ಪಡದೆ ಇರುವುದಿಲ್ಲ. ದೇಶದ ಯಾವುದೇ ಮೂಲೆಯಲ್ಲಿ ಅಥವ ದೇಶದ ನಾಗರೀಕನೋರ್ವನಿಂದ ಏನಾದರೂ ಕೆಡುಕು ಸಂಭವಿಸಿದರೆ ನಮಗೆಲ್ಲರಿಗೂ ನಮ್ಮ ಕಣ್ಣ ಮುಂದೆಯೇ ಏನೋ ಆಯಿತು ಎಂಬಂತೆ ದುಃಖವಾಗುತ್ತದೆ. ದೇಶದ ಯಾವುದೇ ಮೂಲೆಯಲ್ಲಿ ಪ್ರಾಕೃತಿಕ ವಿಕೋಪಗಳಾದರೆ ದೇಶ ಅದನ್ನು ಏಕತೆಯ ಭಾವದಿಂದ ಹಂಚಿಕೊಳ್ಳುತ್ತದೆ; ನೋವನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತದೆ. ದೇಶದ ಮುಂದೆ ಯಾವುದೇ ಸವಾಲು ಇದ್ದರೂ ದೇಶದ ಒಂದೂಕಾಲು ಕೋಟಿ ಜನರು ಅದು ತಮ್ಮದೆಂದೇ ಭಾವಿಸುತ್ತಾರೆ. ತಮ್ಮ ಶೌರ್ಯ ಮತ್ತು ಪುರುಷ ಪ್ರಯತ್ನದಿಂದ ಅದನ್ನು ಪರಿಹರಿಸುವ ಭರಪೂರ ಪ್ರಯತ್ನ ಮಾಡಿದ್ದಾರೆ.

ಇದು ನಮ್ಮ ದೇಶದ ದೊಡ್ಡ ಶಕ್ತಿ. ಯಾವ ದೇಶವೂ ರಾಜ ಮಹಾರಾಜರುಗಳಿಂದ ಆಗುವುದಿಲ್ಲ. ದೇಶವು ಶಾಸಕರುಗಳಿಂದ ಆಗುವುದಿಲ್ಲ; ಸರಕಾರಗಳಿಂದಾಗುವುದಿಲ್ಲ. ಸಾಮಾನ್ಯ ನಾಗರೀಕರಿಂದ, ಶಿಕ್ಷಕರಿಂದ, ರೈತರಿಂದ, ಕಾರ್ಮಿಕರಿಂದ, ವಿಜ್ಞಾನಿಗಳಿಂದ, ಜ್ಞಾನಿಗಳಿಂದ, ಆಚಾರ್ಯರಿಂದ, ಭಗವಂತನಿಂದ ದೇಶವು ದೇಶವಾಗುತ್ತದೆ. ರಾಷ್ಟ್ರದ ಈ ವಿರಾಟ್-ಸ್ವರೂಪವನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುವುದು ಒಂದು ಅಖಂಡ ತಪಸ್ಸೇ ಸರಿ. ಸಾವಿರಾರು ವರ್ಷಗಳಿಂದ ಅನೂಚಾನವಾಗಿ ಬಂದ ಈ ಪರಂಪರೆಯ ಒಂದು ಭಾಗ ನಾವಾಗಿದ್ದೇವೆ ಎಂಬುದು ನಮ್ಮ ಭಾಗ್ಯ. ಅದಕ್ಕೆ ಸ್ವಲ್ಪವಲ್ಲ ಸ್ವಲ್ಪ ನಮ್ಮ ಕೊಡುಗೆಯನ್ನು ಸೇರಿಸ ಬೇಕೆಂಬುದು ನಮ್ಮ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನುನಿರ್ವಹಿಸಲು ಬೇಕಾದ ಸಂಸ್ಕಾರ, ತರಬೇತಿ, ಅನುಭವ ಎನ್ ಸಿ ಸಿಯ ಮುಖಾಂತರ ನಿಮಗೆ ಲಭ್ಯವಾಗಿದೆ.

ಎನ್ ಸಿ ಸಿ ಕ್ಯಾಡೆಟ್ ಆಗಿ ಇಂತಹ ಸೆನ್ಸ್ ಆಫ್ ಮಿಶನ್ ಪಡೆದಿದ್ದೆನೆಂಬುದು ನನ್ನದೂ ಸೌಭಾಗ್ಯ. ಇದೇ ಅನುಭವಗಳು ನನ್ನಲ್ಲಿಯೂ ವಿಕಾಸವಾದುವು. ನಾನು ನಿಮ್ಮಷ್ಟು ಚುರುಕಿನವನಾಗಿರಲಿಲ್ಲ; ಅಷ್ಟೊಂದು ತೇಜಸ್ವಿಯೂ ಆಗಿರಲಿಲ್ಲ. ಆದ್ದರಿಂದ ದೆಹಲಿಯ ಪೆರೇಡಿನಲ್ಲಿ ಭಾಗವಹಿಸಲು ನಾನು ಆಯ್ಕೆಯಾಗಿರಲಿಲ್ಲ. ಆದರೂ ಈಗ ನಿಮ್ಮನ್ನು ನೋಡಿ ನನ್ನ ಬಾಲ್ಯದಲ್ಲಿದ್ದ ಶಕ್ತಿ, ಅನುಭೂತಿ, ಅನುಭವಗಳಿಗಿಂತ ಎಷ್ಟೋ ಹೆಚ್ಚು ನಿಮ್ಮಲ್ಲಿದೆ ಎಂಬುದನ್ನು ನೋಡಿ ನನಗೆ ಹೆಮ್ಮೆ ಎನಿಸುತ್ತದೆ; ಅನುಭವಿಸಿ ನನಗೆ ಮತ್ತೂ ಸಂತೋಷವೆನಿಸುತ್ತದೆ. ಇದರಿಂದ ಮುನ್ನುಗ್ಗುವ ಸಾಮರ್ಥ್ಯ ಕೂಡ ನನಗಿಂತ ನಿಮ್ಮಲ್ಲಿ ಅಧಿಕ ಎಂಬ ಭರವಸೆ ಹುಟ್ಟುತ್ತದೆ. ಈ ಯುವ ಶಕ್ತಿಯಲ್ಲಿ ದೇಶವನ್ನು ಮುಂದೆ ಕೊಂಡೊಯ್ಯುವ ಸಾಮರ್ಥ್ಯ ಕೂಡ ನನಗಿಂತ ಎಷ್ಟೋ ಪಾಲು ಅಧಿಕವೆಂಬುದನ್ನು ತಿಳಿದು ದೇಶದ ಉಜ್ವಲ ಭವಿಷ್ಯದ ಬಗ್ಗೆ ನಿಶ್ಚಿಂತನಾಗುತ್ತೇನೆ.

ಎನ್ ಸಿ ಸಿ ಮತ್ತು ಅದರ ಕ್ಯಾಡೆಟ್ಟುಗಳು ಸ್ವಚ್ಛತಾ ಅಭಿಯಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ದೇಶದಲ್ಲಿ ಎಲ್ಲಿಗಾದರೂ ಹೋಗುವ ಅವಕಾಶ ಸಿಕ್ಕಿದಾಗಲೆಲ್ಲ ಎನ್ ಸಿ ಸಿ ಯೋಜನಾ ಬದ್ಧವಾಗಿ ಸ್ವಚ್ಛತಾ ಅಭಿಯಾನವನ್ನು ನಡೆಸಿದೆ. ಯಾವ ಸಂಘಟನೆಯಲ್ಲಿ 13 ಲಕ್ಷಕ್ಕಿಂತಲೂ ಹೆಚ್ಚು ಕ್ಯಾಡೆಟ್ಟುಗಳಿರುವರೋ ಮತ್ತು ಆ ಕ್ಯಾಡೆಟ್ಟುಗಳು ತಾವೇ ಸಂಘಟಿತರಾಗಿ ಸ್ವಚ್ಛತಾ ಆಂದೋಲನವನ್ನು ನಡೆಸುವರೋ ಅವರು ಇತರರಿಗೂ ಪ್ರೇರಣಾ ದಾಯಕರಾಗುವರು. ಒಬ್ಬ ನಾಗರೀಕನಾಗಿ ತನ್ನ ಜೀವನದಲ್ಲಿ, ತನ್ನ ಕುಟುಂಬದ ಜೀವನದಲ್ಲಿ,ತನ್ನ ಸುತ್ತಮುತ್ತ ಇರುವ ಪರಿಸರದಲ್ಲಿ, ತನ್ನ ಸ್ನೇಹಿತರಲ್ಲಿ, ಸ್ನೇಹಿತರ ಕುಟುಂಬಗಳಲ್ಲಿ,ಸ್ವಚ್ಛತೆ ಸ್ವಭಾವವಾಗುವಂತೆ ಮಾಡಲು ವೇಗೋತ್ಕರ್ಷಕವಾಗಿ ಪ್ರತಿಯೊಬ್ಬ ಕ್ಯಾಡೆಟ್ಟು ಕೆಲಸ ಮಾಡಲು ಸಾಧ್ಯ.

ಎನ್ ಸಿ ಸಿಯ ವ್ಯವಸ್ಥೆಗನುಸಾರವಾಗಿ ಸ್ವಚ್ಛತೆಯು ಒಂದು ಪ್ರೇರಕ ಕೆಲಸ. ಆದರೂ ಒಬ್ಬ ಕ್ಯಾಡೆಟ್ಟು ಒಬ್ಬ ನಾಗರೀಕನಾಗಿ ಸಮಾಜದಲ್ಲಿ ಸ್ವಚ್ಛತೆ ಸ್ವಭಾವವಾಗುವಂತೆ ಮಾಡಲು ಭಾರತದಲ್ಲಿ ಇದು ಚಾರಿತ್ರ್ಯದ ಭಾಗವಾಗುವಂತೆ ಮಾಡಲು ಮತ್ತು 2019ರಲ್ಲಿ ಮಹಾತ್ಮ ಗಾಂಧಿಯವರ 150ನೆಯ ವರ್ಷದ ಜಯಂತಿಯನ್ನು ಆಚರಿಸುವಾಗ ದೇಶದಲ್ಲಿ ಕಸಕೊಳೆಗಳ ಬಗ್ಗೆ ಭರಪೂರ ತಿರಸ್ಕಾರ, ಸ್ವಚ್ಛತೆಯ ಬಗ್ಗೆ ಪ್ರೀತಿಯುಂಟಾಗಿ ಸ್ವಚ್ಛತೆ ಪ್ರತಿ ನಾಗರೀಕನ ಜವಾಬ್ದಾರಿಯಾಗಲು ಮಾಡಬೇಕಾದ್ದು ಬಹಳವಿದೆ; ಪ್ರತಿಯೊಬ್ಬರೂ ಈ ಬಗ್ಗೆ ಕಾಳಜಿ ವಹಿಸುವ ಅಗತ್ಯವೂ ಇದೆ. ಎನ್ ಸಿ ಸಿಯ ಕ್ಯಾಡೆಟ್ಟುಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿದ್ದಾರೆ ಮತ್ತು ದೇಶದ ಮೂಲೆ ಮೂಲೆಗಳಲ್ಲಿ ಹರಡಿರುವ ಯುವಕರಿದ್ದಾರೆ. ದೇಶದಲ್ಲಿ ಇಂಧನವಿದೆ. ಉತ್ಸಾಹವಿದೆ. ಕುತೂಹಲವಿದೆ. ತರಬೇತಿ ಇದೆ. ಇವೆಲ್ಲದರಿಂದ ನವಯುವಕರು ದೊಡ್ಡ ಶಕ್ತಿಯಾಗಿ ಸ್ವಚ್ಛತಾ ಆಂದೋಲನವನ್ನು ಮುನ್ನಡೆಸಲು ಸಮರ್ಥರಾಗುತ್ತಾರೆ.

ಯುವಮನಸ್ಸು ಮತ್ತು ಅದರಲ್ಲೂ ಭಾರತೀಯ ಮನಸ್ಸು ತಂತ್ರಜ್ಞಾನವನ್ನು ಬಹುಬೇಗ ಹೊಂದಿಸಿಕಂಡು ಬಿಡುತ್ತದೆ. ಈ ದೇಶದಲ್ಲಿ 18 ವರ್ಷ ವಯಸ್ಸನ್ನು ಮೀರಿದ ಸುಮಾರು ಎಲ್ಲ ನಾಗರೀಕರ ಬಳಿ ಆಧಾರ್ ಕಾರ್ಡ್, ಆಧಾರ್ ಸಂಖ್ಯೆ, ಬಯೋ ಮೆಟ್ರಿಕ್ ರೀತಿಯಲ್ಲಿ ಅವರ ಗುರುತು ಇವೆಲ್ಲ ಇದ್ದು ಇದು ದೇಶದ ದೊಡ್ಡ ಸಂಪತ್ತೇ ಸರಿ.

ಈ ದಿನಗಳಲ್ಲಿ ಡಿಜಿಟಲ್ ಕರೆನ್ಸಿಯ ಕಡೆಗೆ ನಾವು ಹೇಗೆ ಹೋಗಬೇಕು ಇದರ ಒಂದು ದೊಡ್ಡ ಆಂದೋಲನ ನಡೆಯುತ್ತಿದೆ. ಎನ್ ಸಿ ಸಿ ಕ್ಯಾಡೆಟ್ಟುಗಳು ಅದನ್ನು ಮುನ್ನಡೆಸಿದ್ದಾರೆ. ನೋಟು, ನೋಟಿನ ಮುದ್ರಣ, ಮುದ್ರಣವಾದ ಮೇಲೆ ಹಳ್ಳಿಗಳಿಗೆ ಅದನ್ನು ತಲುಪಿಸುವುದು ಇವುಗಳಿಗೆ ಕೋಟ್ಯಂತರ ರುಪಾಯಿ ಖರ್ಚಾಗುತ್ತದೆ. ಒಂದೊಂದು ಎ ಟಿ ಎಮ್ಗಳನ್ನು ನಿರ್ವಹಿಸಲು ಐದೈದು ಜನ ಪೋಲೀಸಿನವರು ಬೇಕಾಗುತ್ತಾರೆ. ಡಿಜಿಟಲ್ ಅರ್ಥವ್ಯವಸ್ಥೆಯ ಕಡೆಗೆ ನಾವು ಚಲಿಸಿದರೆ ದೇಶದ ಎಷ್ಟೊಂದು ದುಡ್ಡನ್ನು ನಾವು ಉಳಿಸಬಹುದು ಮತ್ತು ಆ ದುಡ್ಡು ಬಡವರಿಗೆ ವಸತಿ ಕಲ್ಪಿಸಲು, ಶಿಕ್ಷಣ ನೀಡಲು ಆರೋಗ್ಯ ಸೌಭ್ಯಗಳನ್ನು ಕಲ್ಪಿಸಲು ಬಡವರ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಉಪಯೋಗಕ್ಕೆ ಬರುತ್ತದೆ. ನಮ್ಮ ಜೇಬಿನಿಂದ ಹಣ ಖರ್ಚು ಮಾಡದೆ, ನಮ್ಮದೇನನ್ನೂ ಕೊಡದೆ ದೇಶದಲ್ಲಿ ನಾವು ಡಿಜಿಟಲ್ ಅರ್ಥ ವ್ಯವಸ್ಥೆಯೆಡೆಗೆ ಕೊಡುಗೆ ನೀಡಬಲ್ಲೆವಾದರೆ ಎಷ್ಟು ಚೆನ್ನ. ಈ ಸಂಬಂಧ ಭೀಮ್ ಆಪ್ ಅನ್ನು ಉದಾಹರಿಸಬಹದು. ಬಾಬಾ ಸಾಹೆಬ್ ಅಂಬೇಡ್ಕರರನ್ನು ಸ್ಮರಿಸುತ್ತಾ ಭೀಮ್ ಆಪ್ ಅನ್ನು ನಿಮ್ಮ ಮೊಬೈಲಿನಲ್ಲಿ ಡೌನ್-ಲೋಡ್ ಮಾಡಿಕೊಂಡು ಅದರ ಮೂಲಕ ವ್ಯವಹಾರಗಳನ್ನು ಮಾಡುವ ಅಭ್ಯಾಸ ನೀವು ಮಾಡಿದರೆ, ನಿಮ್ಮ ಕುಟುಂಬ ದ ಪ್ರತಿಯೊಬ್ಬರೂ ಅದೇ ಅಭ್ಯಾಸ ಮಾಡಿದರೆ ನಿಮಗೆ ವಸ್ತುಗಳನ್ನು ಮಾರುವ ಅಂಗಡಿಕಾರನೂ ಅದೇ ಅಭ್ಯಾಸ ಮಾಡುವಂತೆ ಮಾಡಿದರೆ ಅದು ಎಷ್ಟು ದೊಡ್ಡ ದೇಶ ಸೇವೆಯಾಗುತ್ತದೆ ಎಂಬುದರ ಕಲ್ಪನೆ ನಿಮಗಿಲ್ಲ. ಹಿಂದೂಸ್ತಾನದ ಪ್ರತಿನಾಗರೀಕನೂ ಇದನ್ನು ಮಾಡಬಲ್ಲ.

ಬದಲಾಗುತ್ತಿರುವ ಕಾಲದಲ್ಲಿ ಬದಲೀ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಟೆಕ್ನಾಲಜಿ ಡ್ರಿವನ್ ಸೊಸೈಟಿ ಆದರೆ, ವಿಶ್ವದಲ್ಲಿ ಭಾರತವು ಎಲ್ಲಿಯೂ ಹಿಂದುಳಿಯುವುದಿಲ್ಲ. ಯಾವ ದೇಶದಲ್ಲಿ ಶೇ 65 ಜನರು 35 ವರ್ಷದ ಕೆಳಗಿನವರಾಗಿದ್ದಾರೋ, ಡೆಮೊಗ್ರಾಫಿಕ್ ಡಿವಿಡೆಂಡಿನ ಹೆಸರಿನಲ್ಲಿ ಪ್ರಪಂಚದಲ್ಲಿ ಅವರು ಎದೆಯುಬ್ಬಿಸಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಾರೋ, ಇಂತಹ ದೇಶದ 800 ಮಿಲಿಯ ತರುಣರು ತಾವು ಅರ್ಥ ವ್ಯವಸ್ಥೆ ಯಲ್ಲಿ ದೊಡ್ಡ ಬದಲಾವಣೆ ತರಬೇಕು ಎಂದು ಒಂದೇ ಸಲ ಒಟ್ಟಿಗೆ ಕಾರ್ಯಕ್ಕಿಳಿದರೆ ಪ್ರಧಾನ ಮಂತ್ರಿಗಳಗಿಂತ ಹೆಚ್ಚು, ಅರ್ಥ ಮಂತ್ರಿಗಳಿಗಿಂತ ಹೆಚ್ಚು ಕೆಲಸವನ್ನು ಮಾಡಬಲ್ಲರು. ಎನ್ ಸಿ ಸಿ ಕೂಡ ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಅವರು ಈ ಕಾರ್ಯವನ್ನು ಪೂರ್ಣಗೊಳಿಸಿಯೇ ತೀರುತ್ತಾರೆಂಬ ವಿಶ್ವಾಸ ನನ್ನದು.

ಎನ್ ಸಿ ಸಿ ಕ್ಯಾಡೆಟ್ಟುಗಳು ದೇಶಭಕ್ತಿಯಿಂದ ತುಂಬಿರುವವರಾಗಿರುತ್ತಾರೆ. ಶಿಸ್ತು ಇವರ ವೈಶಿಷ್ಟ್ಯ. ಒಟ್ಟು ಸೇರಿ ಕೆಲಸ ಮಾಡುವುದು ಇವರ ಸ್ವಭಾವ. ಹೆಜ್ಜೆಗೆ ಹೆಜ್ಜೆ ಸೇರಿಸಿ ನಡೆಯುವುದು, ಭುಜಕ್ಕೆ ಭುಜ ಕೊಟ್ಟು ಕಾರ್ಯನಿರ್ವಹಿಸುವುದು ಹಾಗೆಯೇ ಒಟ್ಟೊಟ್ಟಿಗೆ ಸೇರಿ ಯೋಚಿಸುವುದು, ಯೋಚಿಸಿ ನಡೆಯುವುದು ನಡೆದು ಸಾಧಿಸುವುದು ಇವೆಲ್ಲ ಎನ್ ಸಿ ಸಿಯ ವಿಶೇಷತೆಗಳು. ಆದ್ದರಿಂದ ವಿಶ್ವವು ಭಯೋತ್ಪಾದನೆಯ ಸವಾಲುಗಳನ್ನು ಎದುರಿಸುತ್ತಿರುವಾಗ, ನಮ್ಮ ಯುವಕರು ಸಮಾಜವನ್ನು ಕುರಿತು ದೇಶವನ್ನು ಕುರಿತು ತಮ್ಮತನದ ಭಾವವನ್ನು ನಿರಂತರವಾಗಿ ಜಾಗೃತವಾಗಿಟ್ಟುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ‘ರಾಷ್ಟ್ರಮ್ ಜಾಗ್ರಯಾಮ ವಯಮ್’ ಎಂಬ ಪಡೆನುಡಿಯೇ ಇದೆ. ನಿರಂತರವಾಗಿ ಜಾಗರೂಕರಾಗಿದ್ದು ನಾವು ಈ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಇದಕ್ಕಾಗಿ ಸದಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಮ್ಮ ಆಚೀಚೆಯ ತರುಣರು ಎಲ್ಲಾದರೂ ತಪ್ಪು ದಾರಿಯಲ್ಲಿ ನಡೆಯುತ್ತಿಲ್ಲವಷ್ಟೆ. ನಡೆಯುತ್ತಿದ್ದರೆ ಅವರನ್ನು ತಡೆಯಬೇಕಾಗುತ್ತದೆ. ಜೀವನದಲ್ಲಿ ಅವರನ್ನು ನಾಶಮಾಡಬಲ್ಲ ಕೆಡುಕುಗಳೇನೂ ಬರುತ್ತಿಲ್ಲವಷ್ಟೆ. ಅವನ ಇಡೀ ಸಂಸಾರವನ್ನು ಹಾಳುಮಾಡಬಲ್ಲ ಮತ್ತು ಸಮಾಜಕ್ಕೆ ಅವನೊಂದು ಹೊರೆಯಾಗುವಂತಹ ಸನ್ನಿವೇಶ ನಿರ್ಮಾಣವಾಗಿಲ್ಲವಷ್ಟೆ. ನಾವು ಜಾಗೃತರಾಗಿದ್ದರೆ ನಮ್ಮ ಅತ್ತ ಇತ್ತ ಸುತ್ತಣ ಪರಿಸರವನ್ನು ತಮ್ಮ ಜೊತೆಗಾರರ ಪರಿಸರವನ್ನು ಅವರು ಎನ್ ಸಿ ಸಿಯಲ್ಲಿರಲಿ ಇಲ್ಲದಿರಲಿ ಅವರಿಗೂ ನಾವು, ನಾವು ಪಡೆದ ಸೆನ್ಸ್ ಆಫ್ ಮಿಶನ್ನನ್ನು, ಅಂದರೆ, ಜೀವನದ ಯಾವ ಗುರಿಯನ್ನು ನಾವು ತಿಳೀದಿದ್ದೇವೆಯೋ ಅದನ್ನು ಹೊಂದುವಂತೆ ಮಾಡಬಹುದು; ಅವರೂ ನಮ್ಮ ದಾರಿಯಲ್ಲಿ ನಡೆಯುವಂತಾಗಬಹುದು.

ಗಣರಾಜ್ಯೋತ್ಸವ ಪೆರೇಡಿನಲ್ಲಿ ಇಷ್ಟು ದಿನ ನೀವು ಹಲವು ವಿಷಯಗಳನ್ನು ಕಲಿತಿದ್ದೀರಿ; ಅನೇಕ ಹೊಸ ಮಿತ್ರರನ್ನು ಸಂಪಾದಿಸಿದ್ದೀರಿ;ಭಾರತದ ಮೂಲೆಮೂಲೆಗಳನ್ನು ತಿಳಿಯುವ ಅವಕಾಶ ಲಭಿಸಿದೆ. ಎಂದೆಂದಿಗೂ ಹಸಿರೆನಿಸುವ ನೆನಪುಗಳೊಂದಿಗೆ ನೀವು ನಿಮ್ಮ ಮನೆಗಳಿಗೆ ಹಿಂದಿರುಗುವವರಿದ್ದೀರಿ. ನಿಮ್ಮಂತೆಯೇ ನಿಮ್ಮ ಶಾಲಾ ಕಾಲೇಜುಗಳ ಸ್ನೇಹಿತರು ನೀವು ಯಾವಾಗ ಬರುತ್ತೀರಿ, ನಿಮ್ಮೊಡನೆ ಅನುಭವಗಳನ್ನು ಯಾವಾಗ ಹಂಚಿಕೊಳ್ಳಬಹುದು ಎಂಬ ಕಾತರದಲ್ಲಿರುತ್ತಾರೆ. ನೀವುಗಳು ನಿಮ್ಮ ಫೋಟೋಗಳನ್ನು ಮೊಬೈಲುಗಳಿಂದ ಕಳುಹಿಸಿರಬಹುದು, ನಾನು ಪೆರೇಡಿನಲ್ಲಿ ಇಲ್ಲಿದ್ದೆ ಎಂಬ ಮಾಹಿತಿಯನ್ನು ಶೇರ್ ಮಾಡಿರಬಹುದು; ನಿಮ್ಮ ಸ್ನೇಹಿತರೂ ಪೆರೇಡನ್ನು ಬಹುಕುತೂಹಲದಿಂದ ವೀಕ್ಷಿಸಿರಬಹುದು; ಪೂರಾ ಪೆರೇಡು ಕಾಣಲಿ ಕಾಣದಿರಲಿ, ನಮ್ಮೂರಿನ ಹುಡುಗ ಕಾಣುತ್ತಿದ್ದಾನೋ ಇಲ್ಲವೋ ನಮ್ಮ ಶಾಲೆಯ ಹುಡುಗ ಎಲ್ಲಿದ್ದಾನೆ ಎಂಬುದನ್ನಂತೂ ನೋಡಿರುತ್ತಾರೆ. ಇಡೀ ಹಿಂದೂಸ್ತಾನದ ಪ್ರತಿಯೊಂದು ಮೂಲೆಯ ಪ್ರತಿಯೊಬ್ಬ ವ್ಯಕ್ತಿಯ ದೃಷ್ಟಿ ನಿಮ್ಮ ಮೇಲಿತ್ತು. ಇದು ಸಣ್ಣ ಗೌರವವೇನೂ ಅಲ್ಲ. ಇದು ಎಷ್ಟೊಂದು ಆನಂದದ ಕ್ಷಣವಾಗಿತ್ತು! ನೆನಪುಗಳ ಈ ಅಮೂಲ್ಯ ಸಂಪತ್ತನ್ನು ಹೊತ್ತು ನೀವು ಹೋಗುತ್ತಿದ್ದೀರಿ. ಇದನ್ನು ಕೈತಪ್ಪಿ ಹೋಗಲು ಎಂದೂ ಬಿಡದಿರಿ. ಕಳೆದು ಹೋಗಲು ಎಂದೂ ಬಿಡದಿರಿ. ಸಂರಕ್ಷಿಸಿ ಇಟ್ಟುಕೊಳ್ಳಿ ಮತ್ತು ಆಗಾಗ ಮೆಲುಕು ಹಾಕಲು ಪ್ರಯತ್ನಿಸಿ. ಇಂತಹ ಒಳ್ಳೆಯ ನೆನಪುಗಳನ್ನು ಮೆಲುಕು ಹಾಕಿದಷ್ಟೂ ಜೀವನವು ನಗುವಿನಿಂದ ಉಕ್ಕುವುದು. ಸ್ವಲ್ಪವೂ ಬಿಡದೆ ಸುವಾಸನೆ ನಿಮ್ಮೊಳಗಿನಿಂದ ಪ್ರಕಟವಾಗುತ್ತಿರುತ್ತದೆ. ಇದು ನಿಮ್ಮ ಆಸುಪಾಸಿನ ಪರಿಸರವನ್ನೆಲ್ಲ ರೋಮಾಂಚನಗೊಳಸುತ್ತಾ ಇರುತ್ತದೆ.

ನಿಮ್ಮೆಲ್ಲರಿಗೂ ನನ್ನ ಹೃದಯತುಂಬಿದ ಶುಭಾಶಯಗಳು. ಈ ದಿನ ಗೆದ್ದಿರುವ ಕ್ಯಾಡೆಟ್ಟುಗಳಿಗೂ ಹಾರ್ದಿಕ ಶುಭಾಶಯಗಳನ್ನು ನೀಡುತ್ತಿದ್ದೇನೆ; ಅಭಿನಂದಿಸುತ್ತಿದ್ದೇನೆ. ಎನ್ ಸಿ ಸಿಗೂ ತುಂಬು ಶುಭಾಶಯಗಳು. ಎಲ್ಲರಿಗೂ ಧನ್ಯವಾದಗಳು.

***