Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಮುಖ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕಾಗಿ ದ್ವಿಪಕ್ಷೀಯ ಸಂಸ್ಥೆಗಳಿಂದ ರಾಜ್ಯ ಸರ್ಕಾರದ ಕಾಯಗಳು ಬಾಹ್ಯ ನೆರವು ಪಡೆದುಕೊಳ್ಳಲು ಅನುಮತಿ ನೀಡಲು ಕೇಂದ್ರ ಸಚಿವ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಮುಖ ಮೂಲ ಸೌಕರ್ಯ ಯೋಜನೆಗಳ ಅನುಷ್ಠಾನಕ್ಕಾಗಿ ಆರ್ಥಿಕವಾಗಿ ಸದೃಢವಾದ ರಾಜ್ಯ ಸರ್ಕಾರದ ಕಾಯಗಳಿಗೆ ನೇರವಾಗಿ ದ್ವಿಪಕ್ಷೀಯ ಓಡಿಎ (ಅಧಿಕೃತ ಅಭಿವೃದ್ಧಿ ನೆರವು)ಪಾಲುದಾರಿಕೆ ಪಡೆಯಲು ನೀತಿ ಮಾರ್ಗಸೂಚಿಗಳಿಗೆ ತನ್ನ ಅನುಮೋದನೆ ನೀಡಿದೆ. ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂ.ಎಂ.ಆರ್.ಡಿ.ಎ), ಒಂದು ಸರ್ಕಾರಿ ಕಾಯವಾಗಿದ್ದು, ಇದಕ್ಕೆ ಮುಂಬೈ ಟ್ರಾನ್ಸ್ ಹಾರ್ಬ್ ಲಿಂಕ್ (ಎಂ.ಟಿ.ಎಚ್.ಎಲ್.)ಯೋಜನೆಯ ಜಾರಿಗಾಗಿ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (ಜೆ.ಐ.ಸಿ.ಎ.)ಯಿಂದ ಅಧಿಕೃತ ಅಭಿವೃದ್ಧಿ ನೆರವು (ಓ.ಡಿ.ಎ.) ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮುಂಬೈ ಟ್ರಾನ್ಸ್ ಹಾರ್ಬಲ್ ಲಿಂಕ್ (ಎಂ.ಟಿ.ಎಚ್.ಎಲ್.) ಯೋಜನೆಯ ಅಂದಾಜು ವೆಚ್ಚ 17854 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಜೆಐಸಿಎ ಸಾಲದ ಭಾಗ ಅಂದಾಜು 15,109 ಕೋಟಿ ರೂಪಾಯಿಗಳಾಗಿರುತ್ತದೆ.

ಈ ಮಾರ್ಗಸೂಚಿಗಳು ಕೆಲವು ನಿರ್ದಿಷ್ಟ ಷರತ್ತುಗಳನ್ನು ಪೂರೈಸಿ ಮತ್ತು ನೇರವಾಗಿ ಹಣಕಾಸು ನೆರವು ಸಂಸ್ಥೆಗೆ ಆಯಾ ಸಾಲ ಪಡೆದ ಕಾಯಗಳು ಎಲ್ಲ ಸಾಲ ಮತ್ತು ಬಡ್ಡಿಯ ಮರುಪಾವತಿ ಮಾಡುವ ಷರತ್ತಿನೊಂದಿಗೆ ರಾಜ್ಯ ಸರ್ಕಾರಿ ಕಾಯಗಳಿಗೆ ನೇರವಾಗಿ ಬಾಹ್ಯ ದ್ವಿಪಕ್ಷೀಯ ಹಣಕಾಸು ಸಂಸ್ಥೆಗಳಿಂದ ನೆರವು ಪಡೆಯಲು ಅವಕಾಶ ಕಲ್ಪಿಸುತ್ತದೆ. ಸಂಬಂಧಿತ ರಾಜ್ಯ ಸರ್ಕಾರವು ಈ ಸಾಲಕ್ಕೆ ಖಾತ್ರಿ ಒದಗಿಸುತ್ತದೆ. ಭಾರತ ಸರ್ಕಾರ ಕೂಡ ಸಾಲಕ್ಕೆ ಕೌಂಟರ್ ಗ್ಯಾರಂಟಿ ಒದಗಿಸುತ್ತದೆ.

ಪ್ರಮುಖ ಮೂಲ ಸೌಕರ್ಯ ಯೋಜನೆಗಳು, ಸಾಮಾಜಿಕ ವಲಯದ ಯೋಜನೆಗಳು ಮತ್ತು ಸಾಂಸ್ಥಿಕ ಸಾಮರ್ಥ್ಯ ವರ್ಧನೆಯಲ್ಲಿ ಬಾಹ್ಯ ನೆರವು ಇಂದು ಬೆಂಬಲದ ಪಾತ್ರ ವಹಿಸುತ್ತಿದೆ. ಜಾಗತಿಕ ಆರ್ಥಿಕ ಚೌಕಟ್ಟಿನ ಅಡಿಯಲ್ಲಿ ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸುವ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಸ್ಪರ್ಧಾತ್ಮಕ ಶಕ್ತಿ ಗಳಿಸಿಕೊಳ್ಳುವ ಸಲುವಾಗಿ ಬಾಹ್ಯ ನೆರವು ಗಣನೀಯ ಪಾತ್ರವನ್ನು ವಹಿಸುತ್ತಿದೆ. ಪ್ರಸ್ತುತ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಬಾಹ್ಯ ಅಭಿವೃದ್ಧಿ ನೆರವಿನ ಮೂಲಗಳನ್ನು ಭಾರತ ಸರ್ಕಾರ (i) ಕೇಂದ್ರ ವಲಯದ ಯೋಜನೆ/ಕಾರ್ಯಕ್ರಮಗಳ; (ii) ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ ಯೋಜನೆಯ ಕಾರ್ಯಗತಕ್ಕೆ; ಮತ್ತು (iii) ರಾಜ್ಯ ಸರ್ಕಾರಗಳಿಂದ ಮತ್ತು/ಅಥವಾ ಸ್ಥಳೀಯ ಸಂಸ್ಥೆಗಳಿಂದ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಿಂದ ರಾಜ್ಯ  ವಲಯದ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪಡೆಯಲಾಗುತ್ತಿದೆ. ಹಾಲಿ ಇರುವ ಮಾರ್ಗಸೂಚಿಗಳು ರಾಜ್ಯ ಸರ್ಕಾರದ ಕಾಯಗಳಿಗೆ ಬಾಹ್ಯ ಸಂಸ್ಥೆಗಳಿಂದ ರಾಜ್ಯ ಸರ್ಕಾರಗಳು ನೇರವಾಗಿ ಸಾಲ ಪಡೆಯಲು ಅವಕಾಶ ನೀಡುವುದಿಲ್ಲ.
ಹಲವು ರಾಜ್ಯ ಸಂಸ್ಥೆಗಳು ರಾಷ್ಟ್ರೀಯ ಮಹತ್ವದ ಪ್ರಮುಖ ಮೂಲ ಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಈ ಯೋಜನೆಗಳು, ಕಾರ್ಯಸಾಧ್ಯ ಮತ್ತು ಶಕ್ತಿಯುತವಾದರೂ ಕೂಡ ಅದಕ್ಕೆ ದೊಡ್ಡ ಹಣಕಾಸಿನ ಅಗತ್ಯವಿದೆ ಮತ್ತು ಅಂಥ ಯೋಜನೆಗಳಿಗೆ ರಾಜ್ಯ ಸರ್ಕಾರಗಳು ಸಾಲ ಪಡೆಯಲು ಅವುಗಳ ಸಾಲ ಮಿತಿ ಮುಗಿದಿರುತ್ತದೆ. ಹೀಗಾಗಿ ಇತರ ವಲಯಗಳಲ್ಲಿ ಬಾಹ್ಯ ನೆರವಿನ ಅಗತ್ಯದೊಂದಿಗೆ ರಾಜೀ ಮಾಡಿಕೊಳ್ಳದೆ ದೇಶದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆಯನ್ನು ವೇಗಗೊಳಿಸುವ ಸಲುವಾಗಿ, ನೇರವಾಗಿ ರಾಜ್ಯ ಸರ್ಕಾರದ ಕಾಯಗಳೇ ದ್ವಿಪಕ್ಷೀಯ ಬಾಹ್ಯ ಸಂಸ್ಥೆಗಳಿಂದ ಆರ್ಥಿಕ ನೆರವು ಪಡೆಯಲು ಹಾಲಿ ಇರುವ ಮಾರ್ಗ ಸೂಚಿಗಳಲ್ಲಿ ಅವಕಾಶ ಕಲ್ಪಿಸುವುದನ್ನು ಪರಿಗಣಿಸುವ ಅಗತ್ಯ ಕಂಡು ಬಂದಿತ್ತು. ಕಾನೂನಿನ ಈ ಸಡಿಲಿಕೆಯು ಆರ್ಥಿಕವಾಗಿ ಸದೃಢವಾದ ರಾಜ್ಯ ಕಾಯಗಳಿಗೆ ಪ್ರಮುಖ ಮೂಲಸೌಕರ್ಯಯೋಜನೆಗಳಿಗೆ ರಾಜ್ಯದ ಬೊಕ್ಕಸಕ್ಕೆ ಹೊರೆ ಯಾಗದ ರೀತಿಯಲ್ಲಿ ನೇರವಾಗಿ ಸಾಲ ಪಡೆಯಲು ಮತ್ತು ಸಾಲವನ್ನು ಮರುಪಾವತಿ ಮಾಡಲು ಅವಕಾಶ ನೀಡುತ್ತದೆ.  ಈ ಮಾರ್ಗಸೂಚಿಗಳ ಅನುಮೋದನೆಯು ದೇಶದ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಸಮಗ್ರ ಪ್ರಗತಿಯನ್ನು ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
                                                                            ****

AKT/VBA/SH