Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಮುಖ ಮೂಲಸೌಕರ್ಯ ವಲಯಗಳ ಪ್ರಗತಿ ಪರಿಶೀಲಿಸಿದ ಪ್ರಧಾನಮಂತ್ರಿ

ಪ್ರಮುಖ ಮೂಲಸೌಕರ್ಯ ವಲಯಗಳ ಪ್ರಗತಿ ಪರಿಶೀಲಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಮುಖ ಮೂಲಸೌಕರ್ಯ ವಲಯಗಳ ಪ್ರಗತಿ ಪರಿಶೀಲನೆ ನಡೆಸಿದರು. ನೀತಿ ಆಯೋಗ ನೀಡಿದ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ, ರೈಲ್ವೆ ಮತ್ತು ಪುನರ್ ನವೀಕರಿಸಬಹುದಾದ ಇಂಧನ ಸೇರಿ ಹಲವು ಪ್ರಮುಖ ವಲಯಗಳಲ್ಲಿ ಗಣನೀಯ ಪ್ರಗತಿ ಆಗಿರುವುದನ್ನು ಗುರುತಿಸಲಾಯಿತು.

ಹೊಸ ಹಾಗೂ ನವೀಕರಿಸಬಹುದಾದ ಇಂಧನ ವಲಯದಲ್ಲಿ, ಸಂಚಯಿತ ಸ್ಥಾಪನೆಗಳ ಸಾಮರ್ಥ್ಯವು 44 ಗಿಗಾ ವ್ಯಾಟ್ಸ್ ಮೀರಿದೆ. ವಿವಿಧ ಅಂಶಗಳು ಮತ್ತು ಕೇಂದ್ರ ಮತ್ತು ರಾಜ್ಯ ನೀತಿಗಳಿಗೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಗುರಿ ಸಾಧನೆ ಮಾಡಲಾಗಿದೆ. ಮಾಳಿಗೆಗಳ ಮೇಲಿನ ವಿದ್ಯುತ್ ಉತ್ಪಾದನೆಯೂ ಸೇರಿದಂತೆ ಸೌರ ವಿದ್ಯುತ್ ಉತ್ಪಾದನೆಗೆ ಇನ್ನೂ ಹೆಚ್ಚಿನ ಉತ್ತೇಜನ ನೀಡವ ಕುರಿತಂತೆ ಕಾರ್ಯತಂತ್ರ ಮತ್ತು ಯೋಜನೆಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು.

ವೈಮಾನಿಕ ವಲಯದಲ್ಲಿ ಸುರಕ್ಷತೆ ಮತ್ತು ಸಂಪರ್ಕ ಸೇರಿದಂತೆ ಪ್ರಮುಖ ನೀತಿ ವಲಯಗಲ್ಲಿ ಆಗಿರುವ ಪ್ರಗತಿಯನ್ನು ಪ್ರಧಾನಮಂತ್ರಿಯವರು ಪರಾಮರ್ಶಿಸಿದರು. ಎಂಟು ಭಾರತೀಯ ವಿಮಾನ ನಿಲ್ದಾಣಗಳು ತಮ್ಮ ತಮ್ಮ ವಿಭಾಗಗಳಲ್ಲಿ ಜಾಗತಿಕವಾಗಿ 5 ಅಗ್ರ ವಿಮಾನ ನಿಲ್ದಾಣಗಳ ಪೈಕಿ ಶ್ರೇಣೀಕೃತವಾಗಿವೆ ಎಂಬ ಅಂಶವನ್ನು ಉಲ್ಲೇಖಿಸಲಾಯಿತು. ಪ್ರಾದೇಶಿಕ ಸಂಪರ್ಕ ಹೆಚ್ಚಳಕ್ಕೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಗ್ರಾಹಕರ ತೃಪ್ತಿಗಾಗಿ ಇನ್ನೂ ಹೆಚ್ಚಿನ ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು.

ಭಾರತೀಯ ರೈಲ್ವೆಯು ಪ್ರತಿನಿತ್ಯ 2.25 ಕೋಟಿ ಪ್ರಯಾಣಿಕರ ಸಂಚಾರದ ಗುರಿಯನ್ನು ಸಾಧಿಸಿದೆ. 240 ಮಾನವ ರಹಿತ ಕ್ರಾಸಿಂಗ್ ಗಳನ್ನು ಪ್ರಸಕ್ತ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ತೆಗೆದುಹಾಕಲಾಗಿದೆ. ಇನ್ನು ಇಂಧನ ವಲಯದಲ್ಲಿ 3.5 ಕೋಟಿ ಎಲ್.ಇ.ಡಿ. ಬಲ್ಬ್ ಇದೇ ಅವಧಿಯಲ್ಲಿ ವಿತರಿಸಲಾಗಿದೆ.

ಇನ್ನು ಬಂದರು ವಿಭಾಗದಲ್ಲಿ ಸರಾಸರಿ ಹಡಗಿನ ಸುತ್ತಾಡದ ಸಮಯದಲ್ಲಿ ಗಣನೀಯ ಪ್ರಮಾಣದ ಪ್ರಗತಿ ಆಗಿದೆ.

ಗ್ರಾಮೀಣ ವಸತಿ ವಲಯದಲ್ಲಿ 6 ಲಕ್ಷ ಮನೆಗಳ ಗುರಿಗೆ ಹೋಲಿಸಿದರೆ, ಪ್ರಸಕ್ತ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ 6.94 ಲಕ್ಷ ಗ್ರಾಮೀಣ ಮನೆಗಳನ್ನು ಪೂರ್ಣಗೊಳಿಸಲಾಗಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿ ಪ್ರಗತಿಯನ್ನು ಪರಿಶೀಲಿಸಿದ ಪ್ರಧಾನಮಂತ್ರಿಯವರು, ಪೆಟ್ರೋಲ್ ಎಥೆನಾಲ್ ಮಿಶ್ರಣದ ಹೆಚ್ಚಳಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಯಬಯಸಿದರು. ಎಫ್.ವೈ. 16ರಲ್ಲಿ 15 ಕೋಟಿಗೂ ಹೆಚ್ಚು ಕುಟುಂಬಗಳನ್ನು ನೇರ ಸೌಲಭ್ಯ ವರ್ಗಾವಣೆ ವ್ಯಾಪ್ತಿಗೆ ತರಲಾಗಿದೆ ಎಂದು ತಿಳಿಸಲಾಯಿತು.

ವಿವಿಧ ಮೂಲಸೌಕರ್ಯ ವಲಯದ , ನೀತಿ ಆಯೋಗ ಮತ್ತು ಪಿ.ಎಂ.ಓ.ದ ಉನ್ನತಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

AKT/SH